Monday 16 July 2012

ಉಪವಾಸ - ಹಸಿವೆಯ ಹೆಸರಲ್ಲ

    ನೀರುಳ್ಳಿ, ಬೆಳ್ಳುಳ್ಳಿ, ಮೆಣಸು, ಟೊಮೆಟೊ, ಉಪ್ಪು, ಶುಂಠಿ, ನೀರು.. ಇವೆಲ್ಲವುಗಳ ಉಪಯೋಗ ಏನು ಅಂತ ಎಲ್ಲರಿಗೂ ಗೊತ್ತು. ಇವುಗಳಲ್ಲಿ ಒಂದು ವಸ್ತು ಕಾಣೆಯಾದರೂ ಪಲ್ಯದ ಸ್ಥಿತಿ ಹೇಗಿರುತ್ತದೆ ಅನ್ನುವುದೂ ಗೊತ್ತು. ಪಲ್ಯಕ್ಕೆ ಟೇಸ್ಟೇ ಇರುವುದಿಲ್ಲ. ಅಂದ ಹಾಗೆ, ಎಷ್ಟೋ ಮನೆಗಳ ಜಗಳಗಳಲ್ಲಿ ಉಪ್ಪು ಅನ್ನುವ ಬಿಡಿವಸ್ತು ಪ್ರಮುಖ ಪಾತ್ರ ವಹಿಸಿದ್ದಿಲ್ಲವೇ? ಪಲ್ಯ ಚೆನ್ನಾಗಿಲ್ಲವೆಂದು ಹೊಟೇಲಿನಿಂದ ಅರ್ಧದಲ್ಲೇ ಎದ್ದು ಹೋಗುವವರು ಎಷ್ಟು ಮಂದಿಯಿಲ್ಲ? ನಿಜವಾಗಿ ಪಲ್ಯವನ್ನು ಪಲ್ಯ ಆಗಿಸುವುದು, ಊಟವನ್ನೋ ಇನ್ನೇನನ್ನೋ ಆಸಕ್ತಿಯಿಂದ ಸೇವಿಸುವಂತೆ ಮಾಡುವುದು ಮೇಲಿನ ಕೆಲವು ಬಿಡಿವಸ್ತುಗಳು. ಅವಿಲ್ಲದಿದ್ದರೆ ಪಲ್ಯ  ಆಗುವುದೇ ಇಲ್ಲ.
      ನಿಜವಾಗಿ, ಉಪವಾಸಕ್ಕೂ ಪಲ್ಯಕ್ಕೂ ಒಂದು ಹಂತದ ವರೆಗೆ ಹೋಲಿಕೆಯಿದೆ. ಪಲ್ಯದಂತೆಯೇ ಉಪವಾಸವನ್ನು ರುಚಿಕರವಾಗಿಸುವುದಕ್ಕೂ ಹತ್ತಾರು ಬಿಡಿ ಸಂಗತಿಗಳನ್ನು ಬಳಸಬೇಕಾಗುತ್ತದೆ. ಉಪವಾಸ ನನಗಾಗಿದೆ ಮತ್ತು ಅದಕ್ಕೆ ಖುದ್ದಾಗಿ ನಾನೇ ಪ್ರತಿಫಲ ಕೊಡುತ್ತೇನೆ ಎಂದು ಅಲ್ಲಾಹನು ಹೇಳಿದ್ದಾನೆ. ಹೀಗಿರುವಾಗ ಪ್ರತಿಫಲ ಬಯಸುವಷ್ಟು ರುಚಿಕರ ಉಪವಾಸ ನಮ್ಮದಾಗಿರಬೇಕಲ್ಲವೇ? ರುಚಿಯೇ ಕೆಟ್ಟು ಹೋದ ಉಪವಾಸವನ್ನು ಅಲ್ಲಾಹನಿಗೆ ಅರ್ಪಿಸಿ, ಅವನಿಂದ ಪ್ರತಿಫಲ ಬಯಸುವುದಾದರೂ ಯಾವ ಮುಖದಲ್ಲಿ? ಹೊಟೇಲಿನವ ಕೆಟ್ಟ ಆಹಾರವನ್ನು ಒದಗಿಸಿದರೆ ನಾವು ದುಡ್ಡು ಕೊಡುತ್ತೇವಾ? ನಿಜವಾಗಿ, ಬೆಳಗ್ಗಿನಿಂದ ಸಂಜೆಯ ವರೆಗೆ ಹಸಿವೆಯಿಂದಿರುವುದು ಉಪವಾಸದ ಮಾನದಂಡ ಅಲ್ಲ. ಹಾಗಿರುತ್ತಿದ್ದರೆ, ಬಡತನದಿಂದಾಗಿ ಹಸಿವೆಯಿಂದಿರುವ ಜಗತ್ತಿನಾದ್ಯಂತದ ಕೋಟ್ಯಂತರ ಮಂದಿಯನ್ನು ಉಪವಾಸಿಗರು ಎಂದು ಪರಿಗಣಿಸಬೇಕಾಗುತ್ತಿತ್ತು. ಹೀಗಿರುವಾಗ ನಮ್ಮ ಹಸಿವೆಯನ್ನು 'ಉಪವಾಸ'ಗೊಳಿಸುವುದು ಹೇಗೆ? ಅದನ್ನು ರುಚಿಕರವಾಗಿ ಮಾರ್ಪಡಿಸುವುದು ಹೇಗೆ?
    ಸುಳ್ಳು, ಪರನಿಂದೆ, ವಂಚನೆ, ಅಪ್ರಾಮಾಣಿಕತೆ, ಸಿಟ್ಟು, ಅಸಹನೆ.. ಇವೆಲ್ಲ ಉಪವಾಸದ ರುಚಿಯನ್ನು ಕೆಡಿಸುತ್ತವೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಆದ್ದರಿಂದ ಇವಾವುದನ್ನೂ ಬಳಸದೆಯೇ ರುಚಿಕಟ್ಟಾದ `ಉಪವಾಸ’ವನ್ನು ಆಚರಿಸುವುದಕ್ಕೆ ನಮಗೆ ಸಾಧ್ಯವಾಗಬೇಕು. ಇಷ್ಟಕ್ಕೂ,  ರುಚಿಕರ ಪಲ್ಯವನ್ನು ನಿರಂತರ ಒಂದು ತಿಂಗಳು ತಯಾರಿಸಿದರೆ, ಆ ಬಳಿಕ ಕೆಟ್ಟ ಪಲ್ಯವನ್ನು ತಯಾರಿಸಲು ಯಾರಿಗಾದರೂ ಮನಸ್ಸು ಬಂದೀತೇ? ದುರಂತ ಏನೆಂದರೆ ಹೆಚ್ಚಿನ ಮಂದಿ ಉಪವಾಸದ ಬಗ್ಗೆ ಈ ರೀತಿಯಾಗಿ ಆಲೋಚಿಸುವುದೇ ಇಲ್ಲ. ಪಲ್ಯಕ್ಕೆ ಮೆಣಸು ತುಸು ಜಾಸ್ತಿಯಾದರೂ ಅಪಾರ ಸಿಟ್ಟಾಗುವ ಮಂದಿ, ಉಪವಾಸ ಆಚರಿಸಿಯೂ ಸುಳ್ಳು ಹೇಳಿದರೆ ಉಪವಾಸದ ಸ್ಥಿತಿಯೂ ಆ ಪಲ್ಯದಂತೆಯೇ ಎಂದು ಆಲೋಚಿಸುವುದಿಲ್ಲ. ಪ್ರತಿದಿನವೂ ಪಲ್ಯ ಅತ್ಯಂತ ರುಚಿಕರವಾಗಿರಬೇಕು ಎಂದು ಆಲೋಚಿಸುವ ನಾವು, ಬದುಕಿನ ಪ್ರತಿಕ್ಷಣವೂ ಸುಳ್ಳು, ವಂಚನೆ, ಅಸೂಯೆ, ಅಪ್ರಾಮಾಣಿಕತೆಗಳಿಲ್ಲದೇ ರುಚಿಕರವಾಗಿರಬೇಕೆಂದು ಅಲ್ಲಾಹನು ಬಯಸುತ್ತಾನೆನ್ನುವುದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಒಂದು ರೀತಿಯಲ್ಲಿ ನಿತ್ಯದ ಬದುಕಿನಲ್ಲಿ ಸಿಗುವಂಥ ಎಲ್ಲವೂ ರುಚಿಕರವಾಗಿರಬೇಕೆಂದು ನಾವು ಬಯಸುತ್ತೇವೆ. ಆದರೆ ಅಲ್ಲಾಹನು ನಮ್ಮಿಂದ ಅದನ್ನೇ ಬಯಸುತ್ತಾನೆ ಅನ್ನುವುದನ್ನು ಅರ್ಥೈಸಲು ವಿಫಲರಾಗುತ್ತೇವೆ.
         ರಮಝಾನ್ ಮತ್ತೆ ಬಂದಿರುವುದು ಇದನ್ನೇ ನೆನಪಿಸಲು.
ಒಂದು ವೇಳೆ ನಿತ್ಯದ ಬದುಕನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದರೆ, ಉಪವಾಸವನ್ನು ಮತ್ತು ಆ ಮೂಲಕ ಇಡೀ ಬದುಕನ್ನೇ ರುಚಿಕರಗೊಳಿಸುವುದಕ್ಕೆ ಪೂರಕವಾದ ಧಾರಾಳ ಪಾಠಗಳು ಸಿಗಬಲ್ಲುದು..

2 comments:

  1. ಸೂಪರ್ ಹೋಲಿಕೆ
    ಕುಕ್ಕಿಲಾ ಅವರೆ ಅಡಿಗೆಯ ವಿಚಾರವನ್ನು ತೆಗೆದುಕೊಂಡು ರಮಝಾನ ಮಾಸದ ಉಪವಾಸಕ್ಕೆ ನೀವು ನೀಡಿದ ಹೋಲಿಕೆ ಸೂಪರ್ ಆಗಿದೆ. ಸಾಮಾನ್ಯ ವಿಷಯಗಳ ನಾವು ಗಮನ ನೀಡುವುದಿಲ್ಲ. ಒಂದು ಚಿಕ್ಕ ತಪ್ಪು ಮುಂದೇ ದೊಡ್ಡ ದೊಡ್ಡ ನದಿಗಳಾಗಿ ತಪ್ಪುಗಳ ಸಾಗರವೇ ನಿರ್ಮಾಣವಾಗುತ್ತದೆ. ನಾವು ಯಾವುದು ಕೆಡುಕು ಅಲ್ಲ ಎಂದು ಭಾವಿಸಿ ಅದನ್ನು ಮಾಡುತ್ತೇವೆಯೋ ಅದೇ ಮುಂದೆ ದೊಡ್ಡ ತಪ್ಪು ಆಗುತ್ತದೆ. ನಿತ್ಯ ಬದುಕಿನಲ್ಲಿ ಘಟಿಸುವ ಘಟನೆಗಳು ಸುತ್ತ ಸಂಪಾದಕೀಯ ಹಣೆದಿದ್ದು ನಿಜಕ್ಕೂ ಸೂಪರ್ ಆಗಿದೆ.

    ReplyDelete