Monday, 29 October 2012

ಮಾಧ್ಯಮ ಮುಖವನ್ನು ಬಿಚ್ಚಿಟ್ಟ 14 ನಿಮಿಷಗಳ ಸಿ.ಡಿ.


       ಕಳೆದ ವಾರ ದೆಹಲಿಯಲ್ಲಿ 14 ನಿಮಿಷಗಳ ಕುಟುಕು ಕಾರ್ಯಾಚರಣೆಯ ಸಿಡಿಯೊಂದು ಬಿಡುಗಡೆಗೊಂಡಿತು. ಬಿಡುಗಡೆಗೊಳಿಸಿದ್ದು ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ನವೀನ್ ಜಿಂದಾಲ್. ಝೀ ನ್ಯೂಸ್ ಟಿ.ವಿ. ಚಾನೆಲ್‍ನ ಸಂಪಾದಕ ಸುಧೀರ್ ಚೌಧರಿ ಮತ್ತು ಝೀ ಬಿಸಿನೆಸ್ ನ್ಯೂಸ್‍ನ ಸಂಪಾದಕ ಸಮೀರ್ ಅಹ್ಲುವಾಲಿಯ ಇದರಲ್ಲಿ ಮುಖ್ಯ ಪಾತ್ರಧಾರಿಗಳು. ಕಲ್ಲಿದ್ದಲು ಹಗರಣದಲ್ಲಿ ಜಿಂದಾಲ್ ಕಂಪೆನಿ ಭಾಗಿಯಾಗಿರುವ ಬಗ್ಗೆ ಝೀ ಚಾನೆಲ್‍ಗಳಲ್ಲಿ ಧಾರಾಳ ಸುದ್ದಿಗಳು ಈ ಮೊದಲು ಪ್ರಸಾರ ಆಗಿದ್ದುವು. ಈಗಲೂ ಆಗುತ್ತಿವೆ. ವರ್ಷಕ್ಕೆ 25 ಕೋಟಿಯಂತೆ 4 ವರ್ಷಗಳಲ್ಲಿ 100 ಕೋಟಿ ರೂಪಾಯಿಗಳನ್ನು ಕೊಟ್ಟರೆ ಈ ಸುದ್ದಿಗಳ ಪ್ರಸಾರವನ್ನು ನಿಲ್ಲಿಸುವುದಾಗಿ ಚೌಧರಿ ಮತ್ತು ಅಹ್ಲುವಾಲಿಯಾಗಳು ಜಿಂದಾಲ್ ಅಧಿಕಾರಿಗಳಿಗೆ ಭರವಸೆ ಕೊಡುತ್ತಾರೆ. ಈ ಕುರಿತಂತೆ ಕಳೆದ ಸೆಪ್ಟೆಂಬರ್‍ನಲ್ಲಿ ವಿವಿಧ ಕೆಪೆ, ರೆಸ್ಟೋರೆಂಟ್‍ಗಳಲ್ಲಿ ಮಾತುಕತೆಗಳು ನಡೆಯುತ್ತವೆ. ಈ ಮಾತುಕತೆಗೆ ಪೂರಕ ವಾತಾವರಣವನ್ನು ನಿರ್ಮಿಸುವುದಕ್ಕಾಗಿ ಕಳೆದ ಕೆಲವು ದಿನಗಳಿಂದ ಹೇಗೆ ಸುದ್ದಿ ಪ್ರಸಾರವನ್ನು ಕಡಿಮೆಗೊಳಿಸುತ್ತಾ ಬರಲಾಗಿದೆ ಎಂಬ ವರದಿಯನ್ನು ಚೌಧರಿ ಅಧಿಕಾರಿಗಳ ಮುಂದಿಡುತ್ತಾನೆ. ಇಂಥ ವ್ಯವಹಾರಗಳನ್ನು ಝೀ ಮಾತ್ರ ಮಾಡುತ್ತಿಲ್ಲ, ಟೈಮ್ಸ್ ಆಫ್ ಇಂಡಿಯಾದ ದೆಹಲಿ ಆವೃತ್ತಿಯಾದ ದೆಹಲಿ ಟೈಮ್ಸ್, ಬಾಂಬೆ ಟೈಮ್ಸ್ ಗಳೆಲ್ಲಾ ಪಾವತಿ ಸುದ್ದಿಗಳಿಂದಲೇ ಬದುಕುತ್ತಿವೆ ಎಂದೂ ಆತ ವೀಡಿಯೋದಲ್ಲಿ ಸಮರ್ಥಿಸಿಕೊಳ್ಳುತ್ತಾನೆ..'
        ನಿಜವಾಗಿ, ನ್ಯೂಸ್ ಚಾನೆಲ್‍ಗಳೆಲ್ಲಾ ಕನಿಷ್ಠ 5 ನಿಮಿಷವಾದರೂ ತಮ್ಮ ಪ್ರಸಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಶೋಕ ಆಚರಿಸಬೇಕಾದಷ್ಟು ಗಂಭೀರ ಪ್ರಕರಣ ಇದು. ವಿಶೇಷ ಏನೆಂದರೆ, ಕುಟುಕು ಕಾರ್ಯಾಚರಣೆಗಳನ್ನು ಈ ವರೆಗೆ ಪ್ರಾಯೋಜಿಸುತ್ತಿದ್ದುದು ಮಾಧ್ಯಮಗಳೇ. ಕಾಳಿ ಮಠದ ಋಷಿಕುಮಾರ ಸ್ವಾಮಿಯ ಕಳ್ಳ ಮುಖವನ್ನು ಕುಟುಕು ಕಾರ್ಯಾಚರಣೆಯ ಮೂಲಕ ಇತ್ತೀಚೆಗೆ ಬಹಿರಂಗಗೊಳಿಸಿದ್ದೂ ಕನ್ನಡದ ಒಂದು ಟಿ.ವಿ. ಚಾನೆಲ್ಲೇ. ಆದರೆ ಇಲ್ಲಿ, ಕಂಪೆನಿಯೇ ಕುಟುಕು ಕಾರ್ಯಾಚರಣೆಗೆ ಇಳಿದಿದೆ. ಆ ಮುಖಾಂತರ ಟಿ.ವಿ. ಚಾನೆಲ್‍ಗಳ ಬ್ಲ್ಯಾಕ್‍ಮೇಲ್ ಪತ್ರಿಕೋದ್ಯಮವನ್ನು ಬಹಿರಂಗಪಡಿಸಿದೆ. ಸದ್ಯ ಝೀ ಚಾನೆಲ್‍ನ ಮೇಲೆ ಕ್ರಿಮಿನಲ್ ಕೇಸು ದಾಖಲಾಗಿದೆ. ಚೌಧರಿಯನ್ನು ಸಂಪಾದಕರುಗಳ ಸಂಘದಿಂದ ಉಚ್ಛಾಟಿಸಲಾಗಿದೆ. ಅಂದಹಾಗೆ, ಮಾಧ್ಯಮಗಳ ವಿಶ್ವಾಸಾರ್ಹತೆ ದಿನೇದಿನೇ ಕುಸಿಯುತ್ತಿರುವ ಈ ಹೊತ್ತಿನಲ್ಲಿ ಟಿ.ವಿ. ಚಾನೆಲ್‍ಗಳು ಈ ಪ್ರಕರಣಕ್ಕೆ ಕೊಡಬೇಕಾದ ಮಹತ್ವವಾದರೂ ಹೇಗಿರಬೇಕಿತ್ತು? ಗಡ್ಕರಿಯದ್ದೋ ವಾದ್ರಾರದ್ದೋ ಅಥವಾ ಇನ್ನಾರದ್ದೋ ಭ್ರಷ್ಟ ಮುಖವನ್ನು ಚರ್ಚಿಸುವುದಕ್ಕಿಂತ ಮೊದಲು ತಮ್ಮದೇ ಮುಖವನ್ನು ಚಂದಗೊಳಿಸುವುದು ಮಾಧ್ಯಮಗಳ ಅಗತ್ಯವೂ ಆಗಿತ್ತಲ್ಲವೇ? ನೀವು ವೀಕ್ಷಿಸುವ ಸುದ್ದಿ ಸ್ಪಾನ್ಸರ್ಡ್ ಅಲ್ಲ ಎಂದು ವೀಕ್ಷಕರನ್ನು ನಂಬಿಸುವ ಹೊಣೆಗಾರಿಕೆ ಇರುವುದು ಯಾರ ಮೇಲೆ? ಆದರೆ ಎಷ್ಟು ಚಾನೆಲ್‍ಗಳು ಇಂಥ ಪ್ರಯತ್ನ ಮಾಡಿವೆ? ಪ್ರಾಮಾಣಿಕತೆ, ಪಾರದರ್ಶಕತೆ.. ಮುಂತಾದ ಪದಗಳೆಲ್ಲ ರಾಜಕಾರಣಿಗಳಿಗೆ ಮಾತ್ರ ಸಂಬಂಧಿಸಿದ್ದಲ್ಲವಲ್ಲ. ಮಾಧ್ಯಮಗಳು ಈ ಪದಕ್ಕೆ ಮತ್ತು ಅವು ಧ್ವನಿಸುವ ಮೌಲ್ಯಗಳಿಗೆ ಬೆಲೆ ಕೊಡದಿದ್ದರೆ ಇತರರನ್ನು ದೂರುವ, ಪ್ರಶ್ನಿಸುವ ಅರ್ಹತೆಯಾದರೂ ಎಲ್ಲಿರುತ್ತದೆ? ಅದರಲ್ಲೂ ಋಷಿಕುಮಾರ ಸ್ವಾಮಿಯ ಬಗ್ಗೆ ಸತತ 3 ದಿನಗಳ ಕಾಲ ಲೈವ್  ಚರ್ಚೆಯನ್ನು ಹಮ್ಮಿ ಕೊಂಡ ಕನ್ನಡ ನ್ಯೂಸ್ ಚಾನೆಲ್‍ಗಳು ಝೀ ಪ್ರಕರಣದ ಕುರಿತಂತೆ ಬಹುತೇಕ ಚರ್ಚಿಸಿಯೇ ಇಲ್ಲ. ಇನ್ನಾರದ್ದೋ ದೌರ್ಬಲ್ಯಗಳಿಗೆ ಕ್ಯಾಮರಾ ಇಟ್ಟು ಅದನ್ನು ದಿನಗಟ್ಟಲೆ ಚರ್ಚಿಸುವ ಕನ್ನಡ ಚಾನೆಲ್‍ಗಳಿಗೆ ತಮ್ಮದೇ ದೌರ್ಬಲ್ಯಗಳು ಚರ್ಚೆಗೆ ಅನರ್ಹ ಅನ್ನಿಸಿಕೊಂಡದ್ದೇಕೆ?
       ಮಾಧ್ಯಮಗಳು ನೂರು ಶೇಕಡಾ ಪಾರದರ್ಶಕ ಆಗಿವೆ ಎಂದು ಸಾರ್ವಜನಿಕರು ಬಿಡಿ, ಪತ್ರಕರ್ತರೇ ಇವತ್ತು ನಂಬುವ ಸ್ಥಿತಿಯಲ್ಲಿಲ್ಲ. ಸುದ್ದಿಗಳ ವಿಶ್ವಾಸಾರ್ಹತೆ ಅಷ್ಟಂಶ ಕೆಟ್ಟು ಹೋಗಿವೆ. ಟಿ.ವಿ. ಚಾನೆಲ್‍ಗಳಂತೂ ತಮ್ಮ ವೀಕ್ಷಕ ವಲಯವನ್ನು ವಿಸ್ತರಿಸುವುದಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಹೇಸುತ್ತಿಲ್ಲ. ಪ್ರಕರಣವೊಂದು ಕೋರ್ಟು ಮೆಟ್ಟಲು ಹತ್ತುವುದಕ್ಕಿಂತ ಮೊದಲೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ತೀರ್ಪು ಕೊಡುವ ಕೆಲಸವನ್ನು ಅವು ಮಾಡುತ್ತಲೇ ಇವೆ. ಕನ್ನಡ ಚಾನೆಲ್‍ಗಳ ಮಟ್ಟಿಗೆ ಋಷಿಕುಮಾರ ಪ್ರಕರಣ ಇದಕ್ಕೆ ಇತ್ತೀಚಿನ ಉದಾಹರಣೆ. ಕುಟುಕು ಕಾರ್ಯಾಚರಣೆಯನ್ನು ಮುಂದಿಟ್ಟುಕೊಂಡು ಚಾನೆಲ್ ಒಂದು, ಎಲ್ಲರೆದುರೇ ಅವರನ್ನು ಪೀಠದಿಂದ ಕೆಳಗಿಳಿಸುತ್ತದೆ. ಆ ಬಳಿಕ ಅದನ್ನೇ ಮಹಾನ್ ಸಾಧನೆಯೆಂಬಂತೆ ಬಿಂಬಿಸುತ್ತದೆ. ಇಷ್ಟಕ್ಕೂ ಇಂಥ ಕಾರ್ಯಕ್ರಮಗಳು ಓರ್ವ ಋಷಿಕುಮಾರನಿಗೆ ಮಾತ್ರ ಸೀಮಿತವಾಗಬೇಕೆಂದೇನೂ ಇಲ್ಲವಲ್ಲ. ನಾಳೆ, ತಮಗಾಗದವರನ್ನು ಬೆದರಿಸಿಯೋ  ಮತ್ತುಬರಿಸಿಯೋ ಕ್ಯಾಮರಾದಲ್ಲಿ ಸೆರೆ ಹಿಡಿದು ಲೈವ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾನಹರಣ ಮಾಡುವುದಕ್ಕೂ ಇವು ಮುಂದಾಗಲಾರದೆಂದು ಹೇಗೆ ಹೇಳುವುದು? ಭಯೋತ್ಪಾದನೆಯ ಹೆಸರಲ್ಲಿ ಬೆಂಗಳೂರಿನಲ್ಲಿ ಇತ್ತೀಚೆಗೆ ಬಂಧಿತರಾದ ಯುವಕರ ಬಗ್ಗೆ ಕನ್ನಡ ಚಾನೆಲ್‍ಗಳು ನಡೆದುಕೊಂಡದ್ದಾದರೂ ಹೇಗೆ? ಅವು ಆ ಯುವಕರ ಬಗ್ಗೆ ಈಗಾಗಲೇ ತೀರ್ಪು ಕೊಟ್ಟಿಲ್ಲವೇ?
      ಮಾಧ್ಯಮಗಳು ತಾನೇ ತನಿಖೆ ನಡೆಸುವ ಮತ್ತು ತೀರ್ಪು ನೀಡುವ ಅಪಾಯಕಾರಿ ಪಾತ್ರವನ್ನು ನಿರ್ವಹಿಸುತ್ತಿರುವ ಈ ಹೊತ್ತಿನಲ್ಲಿಯೇ ಝೀ ಪ್ರಕರಣ ಬಯಲಿಗೆ ಬಂದಿದೆ. ಆ 14 ನಿಮಿಷಗಳ ಸಿ.ಡಿ.ಯಲ್ಲಿ ಮಾಧ್ಯಮಗಳು ಅವಲೋಕನ ನಡೆಸಿಕೊಳ್ಳುವುದಕ್ಕೆ ಧಾರಾಳ ವಿಷಯಗಳೂ ಇವೆ. ಸುಳ್ಳರು, ಭ್ರಷ್ಟರು, ಸೋಗಲಾಡಿಗಳೆಲ್ಲ ರಾಜಕೀಯದಲ್ಲಿ ಮಾತ್ರ ಇರುವುದಲ್ಲ, ಅವರು ಸುದ್ದಿ ಮನೆಯಲ್ಲೂ ಇದ್ದಾರೆ ಎಂಬುದನ್ನು ಆ ಸಿ.ಡಿ. ಬಲವಾಗಿ ಪ್ರತಿಪಾದಿಸುತ್ತಿದೆ. ಆದ್ದರಿಂದ ವೀಕ್ಷಕರಲ್ಲಿ ಭರವಸೆ ತುಂಬುವ ಹೊಣೆಗಾರಿಕೆಯನ್ನು ಚಾನೆಲ್‍ಗಳು ವಹಿಸಿಕೊಳ್ಳಲೇ ಬೇಕು. ತಮ್ಮನ್ನು ವಿಮರ್ಶೆಗೊಡ್ಡುವ ಅವಕಾಶದಿಂದ ಅವು ತಪ್ಪಿಸಿಕೊಳ್ಳಬಾರದು. ತಪ್ಪು ಮಾಧ್ಯಮಗಳಿಂದಾದರೂ ರಾಜಕಾರಣಿಗಳಿಂದಾದರೂ ತಪ್ಪು ತಪ್ಪೇ ಎಂದು ಸಾರಲು, ತಪ್ಪುಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಚಾನೆಲ್‍ಗಳು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವೀಕ್ಷಕರು ನ್ಯೂಸ್‍ಗಳಿಗೂ ಮನರಂಜನೆಯ ಸ್ಥಾನವನ್ನಷ್ಟೇ ಕೊಟ್ಟುಬಿಟ್ಟಾರು.

Monday, 15 October 2012

ಪತ್ರಿಕೆಗಳ ಗಮನಕ್ಕೆ: ಭಟ್ಕಳದಲ್ಲಿ ಬಂದ್ ಆಚರಿಸಲಾಗಿದೆ..

ಮಾಧ್ಯಮಗಳು ಕಪೋಲಕಲ್ಪಿತ ಸುಳ್ಳು ಸುದ್ದಿಯನ್ನು ಪ್ರಕಟಿಸಿದರೆ ಓದುಗರು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳವು ಕಳೆದ ವಾರ ಉತ್ತರ ನೀಡಿದೆ. ಅಕ್ಟೋಬರ್ 11ರಂದು ಭಟ್ಕಳದಲ್ಲಿ ಅಂಗಡಿ-ಮುಂಗಟ್ಟುಗಳು ತೆರೆದುಕೊಳ್ಳಲಿಲ್ಲ. ವಾಹನಗಳು ಓಡಾಡಲಿಲ್ಲ. ಭಟ್ಕಳದ ಕುರಿತಂತೆ ಸೆ. 2ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಖಂಡಿಸಿ ಜನರು ಬಂದ್ ಆಚರಿಸಿದರು. 'ಭಟ್ಕಳದ ಮಸೀದಿಗಳು ಭಯೋತ್ಪಾದನೆಯ ತಾಣಗಳಾಗಿದ್ದು, ಇಲ್ಲಿಂದಲೇ ಬಾಂಬುಗಳು, ಆರ್‍ಡಿಎಕ್ಸ್ ಗಳು ರವಾನೆಯಾಗುತ್ತಿವೆ. ಉತ್ತರ ಕನ್ನಡ ಜಿಲ್ಲೆ ಭಯೋತ್ಪಾದಕರ ಅಡಗುತಾಣವಾಗುತ್ತಿದೆ..' ಎಂಬ ಕನ್ನಡ ಪ್ರಭದ ವರದಿಯ ಬಗ್ಗೆ ಪರಾಂಬರಿಸಿ ನೋಡುವುದಕ್ಕಾಗಿ ಪತ್ರಕರ್ತರು, ಪೊಲೀಸ್ ಅಧಿಕಾರಿಗಳು ಮತ್ತು ಊರ ಗಣ್ಯರನ್ನೆಲ್ಲಾ ಮಸೀದಿಗಳಿಗೆ ಆಹ್ವಾನಿಸಲಾಯಿತು. ಭೇಟಿ ಕೊಟ್ಟ ಅವರೆಲ್ಲ ಸುದ್ದಿಯ ವಿರುದ್ಧ ಸಿಟ್ಟು ವ್ಯಕ್ತಪಡಿಸಿದರು.
    ನಿಜವಾಗಿ, ಅಕ್ಷರ ಭಯೋತ್ಪಾದನೆಯನ್ನು ಖಂಡಿಸಿ ಒಂದು ಪ್ರದೇಶದ ಜನತೆ ಬಂದ್ ಆಚರಿಸಿದ್ದು ಬಹುಶಃ ಈ ದೇಶದಲ್ಲಿ ಇದೇ ಮೊದಲು. ಸಾಮಾನ್ಯವಾಗಿ ಬಂದ್ ಆಗಬೇಕಾದರೆ ಒಂದೋ ತೈಲ ಬೆಲೆ ಏರಬೇಕು ಅಥವಾ ಕೋಮುಗಲಭೆಯಾಗಬೇಕು ಎಂಬ ಅಲಿಖಿತ ನಿಯಮ ಈ ದೇಶದಲ್ಲಿದೆ. ಆದರೆ ಭಟ್ಕಳದ ಮಂದಿ ಇದನ್ನು ಸುಳ್ಳು ಮಾಡಿದ್ದಾರೆ. ಜೀವಿಸುವ ಮತ್ತು ಹೊಟ್ಟೆ ತುಂಬಿಸಿಕೊಳ್ಳುವ ಹಕ್ಕು ಮನುಷ್ಯರಿಗೆ ಎಷ್ಟು ಇದೆಯೋ, ಗೌರವಯುತವಾಗಿ ಬದುಕುವ ಹಕ್ಕೂ ಅಷ್ಟೇ ಇದೆ ಎಂಬುದನ್ನವರು ಘೋಷಿಸಿದ್ದಾರೆ. ಇಷ್ಟಕ್ಕೂ, ಭಟ್ಕಳದ ಬಂದ್‍ನಲ್ಲಿ ಭಾಗವಹಿಸಿದ್ದು ಮುಸ್ಲಿಮರು ಮಾತ್ರ ಅಲ್ಲ. ಆ ಬಂದ್‍ಗೆ ಹಿಂದೂ-ಮುಸ್ಲಿಮ್ ಎಂಬ ಬೇಧವೂ ಇರಲಿಲ್ಲ. ಆದ್ದರಿಂದಲೇ ಈ ಬಂದ್ ಚರ್ಚೆಗೆ ಯೋಗ್ಯ ಅನ್ನಿಸುವುದು. ಅಂದಹಾಗೆ, ಮಾಧ್ಯಮಗಳಲ್ಲಿರುವವರೇನೂ ಅನ್ಯಗ್ರಹ ಜೀವಿಗಳು ಅಲ್ಲವಲ್ಲ. ಸುಳ್ಳು, ಮೋಸ, ವಂಚನೆ, ಪಕ್ಷಪಾತ, ದರೋಡೆ.. ಮುಂತಾದ ಪದಗಳಿಗೆಲ್ಲಾ ಪತ್ರಕರ್ತರ ಡಿಕ್ಷನರಿಯಲ್ಲಿ 'ಗೌರವಾರ್ಹ ಪದಗಳು' ಎಂಬ ಅರ್ಥ ಇರಲು ಸಾಧ್ಯವೂ ಇಲ್ಲ. ಪತ್ರಕರ್ತನೂ ಸಮಾಜ ಜೀವಿ. ಸಂಪಾದಕನಾಗಲಿ, ಪತ್ರಿಕೆಯನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಮಿಕನಾಗಲಿ, ಓದುಗನಾಗಲಿ.. ಎಲ್ಲರೂ ಸಮಾಜದ ಒಂದು ಭಾಗವೇ. ಸಮಾಜದ ಪ್ರತಿ ಆಗು-ಹೋಗುಗಳೊಂದಿಗೆ  ಅವರಿಗೂ  ಸಂಬಂಧ ಇರುತ್ತದೆ. ಒಂದು ರೀತಿಯಲ್ಲಿ ಓದುಗರಿಗಿಂತ ಹೆಚ್ಚಿನ ಹೊಣೆಗಾರಿಕೆ ಇರುವುದು ಮಾಧ್ಯಮದವರ ಮೇಲೆ. ಪತ್ರಿಕೆಯ ಮುಖಪುಟ ಬಿಡಿ, ಒಳಪುಟದಲ್ಲಿ ಪ್ರಕಟವಾಗುವ ಸಣ್ಣದೊಂದು ಸುದ್ದಿಗೂ ಒಂದು ಊರನ್ನೇ ಹೊತ್ತಿಸಿ ಬಿಡುವ ಸಾಮರ್ಥ್ಯ  ಇರುತ್ತದೆ. ಟಿ.ವಿ.ಯಲ್ಲಿ ಬಿತ್ತರವಾಗುವ ಬ್ರೇಕಿಂಗ್ ನ್ಯೂಸ್‍ಗೆ ಹಲವರ ಬದುಕನ್ನೇ ಕಿತ್ತುಕೊಳ್ಳುವುದಕ್ಕೂ ಸಾಧ್ಯವಿರುತ್ತದೆ. ಹೀಗಿರುವಾಗ ಮಾಧ್ಯಮಗಳು ವಹಿಸಬೇಕಾದ ಎಚ್ಚರವಾದರೂ ಎಂಥದ್ದು?
      ಪತ್ರಿಕೆಗಳ ವಿಶ್ವಾಸಾರ್ಹತೆ ಇವತ್ತು ಯಾವ ಮಟ್ಟಕ್ಕೆ ಕುಸಿದಿದೆ ಎಂದರೆ, ಓದುಗನೊಬ್ಬ ಒಂದು ಸುದ್ದಿಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಒಂದಕ್ಕಿಂತ ಹೆಚ್ಚು ಪತ್ರಿಕೆಗಳನ್ನು ಓದುವಷ್ಟು. ವಿಶೇಷ ಏನೆಂದರೆ ಕಳ್ಳ, ದರೋಡೆಕೋರ, ಅತ್ಯಾಚಾರಿಯೆಲ್ಲ ಒಂದು ಬಗೆಯ ಮುಚ್ಚುಮರೆಯೊಂದಿಗೆ ಸಮಾಜದಲ್ಲಿ ಬದುಕುತ್ತಿರುತ್ತಾರೆ. ತಾವು ಏನು ಮಾಡಿದ್ದೇವೋ ಅವೆಲ್ಲ ಗೌರವಾರ್ಹವಲ್ಲ ಎಂಬುದು ಅವರನ್ನು ಚುಚ್ಚುತ್ತಿರುತ್ತದೆ. ಆದರೆ ಪತ್ರಿಕೆಗಳಿಗೆ (ಪತ್ರಕರ್ತರಿಗೆ) ಇಂಥ ಪಾಪ ಪ್ರಜ್ಞೆಯೂ ಇಲ್ಲ. ಪತ್ರಿಕೆಯೊಂದು ಪರಮ ಸುಳ್ಳನ್ನು ಮುದ್ರಿಸಿದರೂ ಸುಭಗನಂತೆ ಫೋಸು ಕೊಡುವುದೇ ಹೆಚ್ಚು. ಇಂಥ ವೈರುಧ್ಯವನ್ನು ಸಮಾಜ ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು?ಸಮಾಜದ ಆರೋಗ್ಯವನ್ನು ಕೆಡಿಸಬಲ್ಲಂಥ  ಸುದ್ದಿಯನ್ನು ಪ್ರಕಟಿಸಿಯೂ ಕನಿಷ್ಠ ಕ್ಷಮೆ ಯಾಚಿಸುವ ಸವ್ ಜನ್ಯವೂ  ಇಲ್ಲ ಅಂದರೆ ಏನರ್ಥ? ನಿಜವಾಗಿ, ಸುಳ್ಳು ಹೇಳುವ ವ್ಯಕ್ತಿಗೂ ಸುಳ್ಳು ಬರೆಯುವ ಪತ್ರಿಕೆಗೂ ಯಾವ ವ್ಯತ್ಯಾಸವೂ ಇಲ್ಲ. ಕೋಮುವಾದಿ ವ್ಯಕ್ತಿಗೂ ಪತ್ರಿಕೆಗೂ ಖಂಡಿತ ಅಂತರವಿಲ್ಲ. ಒಂದು ವೇಳೆ ಸುಳ್ಳನಿಗೆ ಸಮಾಜದಲ್ಲಿ ಯಾವ ಸ್ಥಾನವಿದೆಯೋ ಅದೇ ಸ್ಥಾನವನ್ನು ಸುಳ್ಳು ಬರೆಯುವ ಪತ್ರಿಕೆಗಳಿಗೂ ಸಮಾಜ ನೀಡತೊಡಗಿದರೆ ಖಂಡಿತ ಅದು ತನ್ನನ್ನು ತಿದ್ದಿಕೊಳ್ಳುವುದಕ್ಕೆ ಸಾಧ್ಯವಿದೆ.
     ಅಂದಹಾಗೆ, ಪತ್ರಿಕೆಗಳಿಗೂ ಕೆಲವು ಹೊಣೆಗಾರಿಕೆಗಳಿವೆ. ಪ್ರತಿದಿನ ಹದಿನಾಲ್ಕೋ ಹದಿನೆಂಟೋ ಪುಟಗಳನ್ನು ತಯಾರಿಸುವ ಸಂಪಾದಕೀಯ ಬಳಗಕ್ಕೂ ಕೆಲವು ಜವಾಬ್ದಾರಿಗಳಿವೆ. ಪುಟಗಳನ್ನು ಅಕ್ಷರಗಳಿಂದ ತುಂಬಿಸುವುದಷ್ಟೇ ಪತ್ರಿಕೋದ್ಯಮ ಅಲ್ಲ. ಆ ಪ್ರತಿ ಅಕ್ಷರವೂ ಸಮಾಜದ ಆರೋಗ್ಯವನ್ನು ಕಾಪಾಡುವಷ್ಟು ಸತ್ಯ, ನ್ಯಾಯ ನಿಷ್ಠವೂ ಆಗಿರಬೇಕಾಗುತ್ತದೆ. ಎಲ್ಲೋ ಕಂಪ್ಯೂಟರಿನ ಮುಂದೆ ಕೂತು ಎಲೆಕ್ಟ್ರಿಕ್ ವಯರುಗಳನ್ನು ಜಿಲೆಟಿನ್ ಕಡ್ಡಿಗಳೆಂದೂ ಪಟಾಕಿಯನ್ನು ಬಾಂಬೆಂದೂ ಬರೆಯುವುದು ಸುಲಭ. ಮೂಲಗಳು ತಿಳಿಸಿವೆ ಎಂಬ ಎಂಟು ಅಕ್ಷರಗಳನ್ನು ಬಳಸಿ ಭಯೋ ತ್ಪಾದನೆಯ ಸ್ಕ್ರಿಪ್ಟ್ ರಚಿಸುವುದೇನೂ ಕಷ್ಟವಲ್ಲ.  ಆದರೆ, ಆ ಸುದ್ದಿ ಮಾಡುವ ಪರಿಣಾಮವೇನು ಸಣ್ಣದೇ? ಭಯೋತ್ಪಾದನೆಯ ಹೆಸರಲ್ಲಿ ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಕೆಲವು ಯುವಕರ ಬಂಧನವಾದಾಗ ಒಂದೆರಡು ಪತ್ರಿಕೆಗಳನ್ನು ಬಿಟ್ಟರೆ ಉಳಿದಂತೆ ಎಲ್ಲ ಕನ್ನಡ ಪತ್ರಿಕೆಗಳೂ ಧಾರಾಳ ಕತೆಗಳನ್ನು ಬರೆದಿದ್ದವು. ಅವರಲ್ಲಿ ಸಿಕ್ಕಿರುವುದು ಕೇವಲ ಎರಡೇ ಎರಡು ಬಂದೂಕುಗಳಾದರೂ, ಕೃಷ್ಣರಾಜ ಸಾಗರ ಅಣೆಕಟ್ಟು  ಸ್ಫೋಟ ಸಹಿತ ಹತ್ತಾರು ಭಯಾನಕ ವಿಧ್ವಂಸಕ ಕೃತ್ಯಗಳ ಪಟ್ಟಿಯನ್ನು ತಯಾರಿಸಿ ಅವು ಓದುಗರ ಮುಂದಿಟ್ಟಿದ್ದುವು. ಬಾಂಬು ಬಿಡಿ ಸಣ್ಣದೊಂದು ಗರ್ನಾಲನ್ನೂ ಸಂಗ್ರಹಿಸಿಡದ ಈ ಯುವಕರು ಕೃಷ್ಣರಾಜ ಸಾಗರವನ್ನು ಹೇಗೆ ಸ್ಫೋಟಿಸುತ್ತಾರೆ ಎಂಬ ಸಾಮಾನ್ಯ ಜ್ಞಾನವೂ ಕತೆ ಬರೆದ ಪತ್ರಕರ್ತರಿಗಿರಲಿಲ್ಲ. ಆದ್ದರಿಂದಲೇ ಭಟ್ಕಳದ ಬಂದ್ ಇಷ್ಟವಾಗುವುದು. ಅಲ್ಲಿನ ಓದುಗರು ಅಕ್ಷರ ಭಯೋತ್ಪಾದನೆಯ ವಿರುದ್ಧ ಹೊಸದೊಂದು ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ತಮ್ಮ ಪ್ರಸಾರ ಸಂಖ್ಯೆಯನ್ನೋ ಇನ್ನಾವುದನ್ನೋ ಗುರಿಯಿರಿಸಿಕೊಂಡು ಪರಮ ಸುಳ್ಳನ್ನು ಸುದ್ದಿಯ ಮುಖವಾಡದಲ್ಲಿ ಪ್ರಕಟಿಸುವ ಪತ್ರಿಕೆಗಳಿಗೆ ಅವರು ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಇಂಥ ಪ್ರತಿಭಟನೆಗಳು ಎಲ್ಲೆಡೆ ನಡೆಯಬೇಕು. ಜಾಗೃತ ಓದುಗರಿದ್ದಾಗ ಮಾತ್ರ ಮೌಲ್ಯ ನಿಷ್ಠ ಸುದ್ದಿಗಳು ಪ್ರಕಟವಾಗಲು ಸಾಧ್ಯ. ಆದ್ದರಿಂದ ಭಯೋತ್ಪಾದಕ ಪತ್ರಿಕೆಗಳನ್ನು ಕಂಬಿಯ ಹಿಂದಕ್ಕೆ ಕಳುಹಿಸುವ ಹೊಣೆಗಾರಿಕೆಯನ್ನು ಓದುಗರೇ ವಹಿಸಿಕೊಳ್ಳಲಿ.

Monday, 8 October 2012

ಪ್ರೀತಿಸುವ ಮಕ್ಕಳು ಮತ್ತು ಕರೆಂಟ್ ಕೊಡುವ ಹೆತ್ತವರು

ಈ ಸುದ್ದಿಗಳನ್ನು ಓದಿ
1. ಚಿಕ್ಕಮಗಳೂರಿನಲ್ಲಿ ಮೇಲ್ಜಾತಿಯ ಯುವತಿ ಮತ್ತು ಕೆಳಜಾತಿಯ ಯುವಕನ ನಡುವಿನ ಪ್ರೇಮ ಪ್ರಕರಣವು ಮೂವರನ್ನು ಬಲಿ ಪಡೆದಿದೆ.                                               - ಮಾಧ್ಯಮ ಸುದ್ದಿ: 2012 ಅಕ್ಟೋಬರ್ 5
2. ಪರಸ್ಪರ ಪ್ರೀತಿಸುತ್ತಿದ್ದ ದಿಲ್ಲಿಯ ಮೇಲ್ಜಾತಿಯ ಆಶಾ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಯೋಗೀಶ್‍ರನ್ನು ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ ಆಶಾಳ ಹೆತ್ತವರ ಸಹಿತ 5 ಮಂದಿಗೆ ದಿಲ್ಲಿ ಹೈಕೋರ್ಟು ಮರಣ ದಂಡನೆ ವಿಧಿಸಿದೆ.-
        - ಮಾಧ್ಯಮ ಸುದ್ದಿ: 2012, ಅಕ್ಟೋಬರ್ 6
3. ಸಾವಿರ ಗಂಡು ಮಕ್ಕಳಿಗೆ 831 ಹೆಣ್ಣು ಮಕ್ಕಳಷ್ಟೇ ಇರುವ ಹರ್ಯಾಣದಲ್ಲಿ ಕಳೆದ 28 ದಿನಗಳಲ್ಲಿ 9ನೇ ಅತ್ಯಾಚಾರ ಪ್ರಕರಣ ನಡೆದಿದೆ.                                                                                             -                ಮಾಧ್ಯಮ ಸುದ್ದಿ: 2012, ಅಕ್ಟೋಬರ್ 8
ಕಳೆದ ಒಂದು ವಾರದಲ್ಲಿ ನಡೆದ ನೂರಾರು ಅಪರಾಧ ಸುದ್ದಿಗಳಲ್ಲಿ ಇಲ್ಲಿರುವುದು ಮೂರು ಮಾತ್ರ. ಒಂದು ವೇಳೆ ಕಳೆದೊಂದು ವಾರದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾದ ಎಲ್ಲ ಸುದ್ದಿಗಳನ್ನೂ ಒಟ್ಟು ಸೇರಿಸಿ ಪರಿಶೀಲಿಸಿದರೆ ಅವುಗಳಲ್ಲಿ ಅಪರಾಧ ಸುದ್ದಿಗಳ ಸಂಖ್ಯೆಯೇ ಹೆಚ್ಚಿದ್ದೀತು. ನಿಜವಾಗಿ, ಹದಿಹರೆಯದ ಹೆಣ್ಣು ಮತ್ತು ಗಂಡು ಪರಸ್ಪರ ಪ್ರೀತಿಸುವುದಕ್ಕೆ ಪ್ರಚೋದನೆ ಕೊಡುವ ಯಾವುದಕ್ಕೂ ಈ ದೇಶದಲ್ಲಿ ನಿಷೇಧ ಇಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗುವ ವಾರದ ಕತೆ, ಕವಿತೆಗಳಲ್ಲಿ 'ಪ್ರೇಮ' ಇದ್ದೇ ಇರುತ್ತದೆ. ಹೆಣ್ಣು-ಗಂಡು ಪರಸ್ಪರ ಆಕರ್ಷಣೆಗೊಳ್ಳುವುದು, ಪರಾರಿಯಾಗಿಯೋ, ಊರಲ್ಲೇ ಇದ್ದುಕೊಂಡೋ ಮದುವೆಯಾಗುವುದು, ಬಳಿಕ ಆದರ್ಶ ದಂಪತಿಗಳಾಗುವುದೆಲ್ಲಾ ಕತೆ-ಕವನಗಳಲ್ಲಿ ಮಾಮೂಲು. ಇಲ್ಲಿ ಪ್ರಕಟವಾಗುವ ಸಾಕಷ್ಟು ಕಾದಂಬರಿಗಳು ವಸ್ತುವಾಗಿ ಆಯ್ಕೆ ಮಾಡಿಕೊಳ್ಳುವುದೇ ಹದಿ ಹರೆಯವನ್ನು. ಟಿ.ವಿ. ಧಾರಾವಾಹಿಗಳಂತೂ ಪ್ರೀತಿ-ಪ್ರೇಮಗಳ ಹೊರತು ಬದುಕುಳಿಯುವುದಕ್ಕೆ ಸಾಧ್ಯವೇ ಇಲ್ಲ ಎಂಬಂಥ ಸ್ಥಿತಿಗೆ ತಲುಪಿ ಬಿಟ್ಟಿವೆ. ಸಿನಿಮಾಗಳು  ತಯಾರಾಗುವುದೂ  ಪ್ರೇಮದ ಸುತ್ತಲೇ. ಸಿನಿಮಾ ತಯಾರಾಗುವುದಕ್ಕಿಂತ ಮೊದಲು ನಿರ್ಮಾಪಕ, ನಿರ್ದೇಶಕ, ನಟ-ನಟಿಯರೆಲ್ಲಾ ಪತ್ರಿಕಾಗೋಷ್ಠಿ ಕರೆಯುತ್ತಾರೆ. ಹೀರೋ ಮತ್ತು ಹೀರೋಯಿನ್ ತಂತಮ್ಮ ಪಾತ್ರಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಎಷ್ಟು ಪ್ರೇಮದ ಹಾಡು, ಎಷ್ಟು ವಿರಹದ ಹಾಡು, ಹೀರೋ ಮತ್ತು ಹೀರೋಯಿನ್ ಪರಸ್ಪರ ಪ್ರೇಮಿಗಳಾಗಿ ಕಾಣಿಸಿಕೊಳ್ಳುವ ರೊಮ್ಯಾಂಟಿಕ್ ಹಾಡುಗಳು ಹೇಗಿವೆ ಎಂಬುದನ್ನೆಲ್ಲಾ ಅವರು ವಿವರಿಸುತ್ತಾರೆ. ಇನ್ನು, ಕಾಲೇಜುಗಳ ಕ್ಯಾಂಪಸ್ಸುಗಳು ಹೇಗಿರುತ್ತವೆಯೆಂದರೆ, ಹದಿಹರೆಯವು ರೆಕ್ಕೆಗಳನ್ನು ಕಟ್ಟಿಕೊಂಡು ಹಾರಾಡುವುದಕ್ಕೆ ಧೈರ್ಯ ಮಾಡುವಷ್ಟು ಮುಕ್ತವಾಗಿರುತ್ತವೆ. ಪ್ರೀತಿ-ಪ್ರೇಮಕ್ಕೆ ನಿಷೇಧವಿದೆ ಎಂಬ ಬೋರ್ಡೇನೂ ಅಲ್ಲಿ ಇರುವುದೂ ಇಲ್ಲ. ಜಾತಿಗಳ ಬಗ್ಗೆ, ಪ್ರೀತಿ-ಪ್ರೇಮಗಳ ಬಗ್ಗೆ ಭಯಂಕರ ಕಟ್ಟುನಿಟ್ಟನ್ನು ಹೊಂದಿರುವ ಕುಟುಂಬದ ಮಕ್ಕಳಾಗಲಿ ಅಥವಾ ಈ ಬಗ್ಗೆ ಉದಾರ ನಿಲುವನ್ನು ಹೊಂದಿರುವ ಕುಟುಂಬದ ಮಕ್ಕಳಾಗಲಿ ಬೆಳೆಯುತ್ತಿರುವುದು ಇಂಥ ವಾತಾವರಣದಲ್ಲೇ. ಆ ಮಕ್ಕಳ ಮುಂದೆ ಶಿಸ್ತಿನ ಅಪ್ಪ ಇರುವಂತೆಯೇ, ಆತ ಯಾವುದನ್ನು ಅಶಿಸ್ತು ಅನ್ನುತ್ತಾನೋ ಅದನ್ನೇ ಆಧುನಿಕತೆ ಎಂದು ಕಲಿಸುವ ಪರಿಸರವೂ ಇರುತ್ತದೆ. ಜಾತಿಯನ್ನೇ ಪ್ರಬಲವಾಗಿ ಪ್ರತಿಪಾದಿಸುವ ತಂದೆಗೆ ಸಡ್ಡು ಹೊಡೆಯುವಂತೆ ಪ್ರೀತಿ-ಪ್ರೇಮದ ಎದುರು ದಯನೀಯವಾಗಿ ಸೋಲೊಪ್ಪುವ ಜಾತಿಯನ್ನು, ವಸ್ತುವಾಗಿಸಿಕೊಂಡು ಪ್ರದರ್ಶನವಾಗುವ ಸಿನಿಮಾಗಳೂ ಇರುತ್ತವೆ. ಹೀಗಿರುವಾಗ ಹದಿಹರೆಯ ಗೊಂದಲಕ್ಕೊಳಗಾಗುವುದನ್ನು ಹೇಗೆ ತಪ್ಪೂಂತ ಹೇಳುವುದು? ಒಂದು ಸಮಾಜ ಆರೋಗ್ಯಪೂರ್ಣ ಆಗಿರಬೇಕಾದರೆ ಆ ಸಮಾಜದ ಯಾವುದಾದರೊಂದು ಅಂಗ ಮಾತ್ರ ಆರೋಗ್ಯಪೂರ್ಣವಾಗಿದ್ದರೆ ಸಾಲುವುದಿಲ್ಲವಲ್ಲ. ನಳ್ಳಿಯಲ್ಲಿ ನೀರು ಬರಬೇಕಾದರೆ ನಳ್ಳಿ ಸಮರ್ಪಕವಾಗಿದ್ದರಷ್ಟೇ ಸಾಕೇ? ಟ್ಯಾಂಕ್‍ನಲ್ಲಿ ನೀರೂ ಇರಬೇಕಲ್ಲವೇ? ಆ ಟ್ಯಾಂಕ್‍ಗೆ ನೀರು ತುಂಬಿಸುವ ವ್ಯವಸ್ಥೆಯೂ ಆಗಬೇಕಲ್ಲವೇ? ಇನ್ನು, ನೀರು ಇದ್ದೂ ವಿದ್ಯುತ್ ಇಲ್ಲದಿದ್ದರೆ ಏನಾದೀತು? ಒಂದು ರೀತಿಯಲ್ಲಿ ಯುವ ಸಮೂಹ ನಮ್ಮದೇ ಸಮಾಜದ ಪ್ರತಿಬಿಂಬಗಳು. ಅನಾರೋಗ್ಯ ಪೀಡಿತ ಪರಿಸರವನ್ನು ಅವರ ಕೈಗಿತ್ತು, ಆರೋಗ್ಯಪೂರ್ಣ ಫಲಿತಾಂಶವನ್ನು ನಾವು ನಿರೀಕ್ಷಿಸುವುದಾದರೂ ಯಾಕೆ? ಜಾತಿಪದ್ಧತಿಯನ್ನು ಗೌರವ ಪೂರ್ವಕವಾಗಿ ಕಾಣುವ ಸ್ವಾಮೀಜಿಗಳು ನಮ್ಮ ನಡುವೆ ಇದ್ದಾರೆ. ಜಾತಿ ಪದ್ಧತಿಯ ಪ್ರಬಲ ಸಂಕೇತದಂತಿರುವ ಮಡೆ ಸ್ನಾನದಂಥ ಆಚರಣೆಗಳ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಸರಕಾರಕ್ಕೂ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಕೋರ್ಟು ಶಿಕ್ಷೆ ವಿಧಿಸುವುದರಿಂದ ಯಾವ ಸೂಚನೆ ರವಾನೆಯಾಗುತ್ತದೆ?
         ನಿಜವಾಗಿ, ಅಪರಾಧಗಳಲ್ಲಿ ಯಾರು ಪಾಲುಗೊಳ್ಳುತ್ತಾರೋ ಅವರಷ್ಟೇ ಆ ಅಪರಾಧಕ್ಕೆ ಕಾರಣ ಆಗಿರುವುದಲ್ಲ. ಅವರ ಹಿಂದೆ ಸಮಾಜ ಇರುತ್ತದೆ. ಆ ಸಮಾಜದ ಭಾಗವಾಗಿರುವ ಸಿನಿಮಾ, ಪತ್ರಿಕೆ, ಟಿ.ವಿ. ಮುಂತಾದುವುಗಳಿರುತ್ತವೆ. ದುರಂತ ಏನೆಂದರೆ, ಯಾವುದೋ ಒಂದು ಸಿನಿಮಾದಿಂದಲೋ ಕಾದಂಬರಿಯಿಂದಲೋ ಪ್ರಚೋದಿತಗೊಂಡು ಹೆಣ್ಣು-ಗಂಡು ಪರಸ್ಪರ ಪ್ರೀತಿಸುತ್ತಾರೆ. ಆದರೆ ಜಾತಿ ಸಂಪ್ರದಾಯವನ್ನು ಬಲವಾಗಿ ಆಚರಿಸಿಕೊಂಡು ಬರುವ ಹೆತ್ತವರು ಕುಪಿತಗೊಂಡು ಆ ಪ್ರೇಮವನ್ನು  ವಿದ್ಯುತ್ ಹರಿಸಿ ಸಾಯಿಸುತ್ತಾರೆ. ಆದರೆ ಕೋರ್ಟು ಶಿಕ್ಷೆ ವಿಧಿಸುವುದು ಆ ಹೆತ್ತವರಿಗೇ ಹೊರತು ಆ ಸಿನಿಮಾಕ್ಕೋ ಅಥವಾ ಜಾತಿಯ ಪ್ರತಿಪಾದಕರಿಗೋ ಅಲ್ಲ. ಅಂದಹಾಗೆ, ಮದ್ಯಪಾನ ಮಾಡುವುದು ಅಥವಾ ಮದ್ಯ ಮಾರಾಟ ಮಾಡುವುದೆಲ್ಲ ಈ ದೇಶದಲ್ಲಿ ಅಪರಾಧ ಅಲ್ಲ. ಆದರೆ ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ, ಅಮಲೇರಿ ಕೊಲೆ ಕೃತ್ಯದಲ್ಲಿ ಭಾಗಿಯಾದರೆ ಆತ ಅಪರಾಧಿ ಎನಿಸಿಕೊಳ್ಳುತ್ತಾನಲ್ಲದೆ ಕೋರ್ಟು ಆತನಿಗೆ ಶಿಕ್ಷೆ ವಿಧಿಸುತ್ತದೆ. ವಿಶೇಷ ಏನೆಂದರೆ, ಆತನನ್ನು ಅಪರಾಧಕ್ಕೆ ಪ್ರಚೋದಿಸಿದ್ದೇ ಮದ್ಯಪಾನ. ಹಾಗಿದ್ದೂ ಕೋರ್ಟು ಶಿಕ್ಷೆ ವಿಧಿಸುವಾಗ ಆತನನ್ನು ಮಾತ್ರ ಪರಿಗಣಿಸುತ್ತದೆಯೇ ಹೊರತು ಮದ್ಯ ಸರಬರಾಜು ಮಾಡಿದ ಸರಕಾರವನ್ನಲ್ಲ. ಇಂಥ ಗೊಂದಲಗಳುಳ್ಳ ಸಮಾಜದಲ್ಲಿ ಮರ್ಯಾದಾ ಹತ್ಯೆಗಳು, ಅತ್ಯಾಚಾರಗಳೆಲ್ಲ ಇಲ್ಲವಾಗುವುದು ಹೇಗೆ? ಸಮಾಜದ ಒಟ್ಟು ರಚನೆಯೇ ಗೊಂದಲಗಳ ಮೇಲಿದೆ. ಆದ್ದರಿಂದ ಮೊತ್ತಮೊದಲು ಈ ಗೊಂದಲಗಳ ನಿವಾರಣೆಯ ಕುರಿತಂತೆ ಸಾರ್ವಜನಿಕ ಚರ್ಚೆಗಳು ನಡೆಯಬೇಕು. ಅಂದಹಾಗೆ, ಅನಾರೋಗ್ಯಪೂರ್ಣ ಸಮಾಜವನ್ನು ಕಟ್ಟಿ, ಆರೋಗ್ಯಪೂರ್ಣ ಸುದ್ದಿಗಳನ್ನು ನಾವು ನಿರೀಕ್ಷಿಸುವುದಕ್ಕೆ ಯಾವ ಅರ್ಥವೂ ಇಲ್ಲ..

Monday, 1 October 2012

ಕಾವೇರಿಯನ್ನು ರಾಜಕಾರಣಿಗಳಿಂದ ಕಸಿದು ರೈತರಿಗೆ ಒಪ್ಪಿಸಿಬಿಡೋಣ

ರೈತ ಎಂಬ ಎರಡಕ್ಷರಕ್ಕೆ ಡಿಕ್ಷನರಿಯಲ್ಲಿರುವ ಅರ್ಥ ಬೇಸಾಯಗಾರ ಎಂದು. ಸಾಮಾನ್ಯವಾಗಿ ಯಾವುದೇ ಒಂದು ಪದಕ್ಕೆ ಡಿಕ್ಷನರಿಯಲ್ಲಿ ಒಂದಕ್ಕಿಂತ ಹೆಚ್ಚು ಅರ್ಥ, ವ್ಯಾಖ್ಯಾನಗಳಿರುತ್ತವೆ. ಆದರೆ ರೈತನಿಗೆ ಇಲ್ಲವೇ ಮನುಷ್ಯನಿಗೆ ಒಂದಕ್ಕಿಂತ ಹೆಚ್ಚು ಅರ್ಥಗಳೇ ಇಲ್ಲ. ಮನುಷ್ಯನನ್ನು ಮನುಜ ಎಂದಷ್ಟೇ ಡಿಕ್ಷನರಿ ವ್ಯಾಖ್ಯಾನಿಸುತ್ತದೆ. ಒಂದು ರೀತಿಯಲ್ಲಿ ಮನುಷ್ಯ ಎಂದ ಕೂಡಲೇ ಕಾಲುಗಳಿಂದ ನಡೆಯುವ, ಕೈಗಳಿಂದ ಕೆಲಸ ಮಾಡುವ, ಬುದ್ಧಿ-ಭಾವ ಇರುವ, ಬಟ್ಟೆ ಧರಿಸುವ.. ಒಂದು ಚಿತ್ರ ನಮ್ಮ ಕಣ್ಣ ಮುಂದೆ ಬರುವಂತೆಯೇ, ರೈತ ಎಂಬ ಪದವೂ, ಠಾಕು-ಠೀಕು ಇಲ್ಲದ, ನೇಗಿಲನ್ನೋ ಭತ್ತದ ಮೂಟೆಯನ್ನೋ ಹೊತ್ತು ನಡೆದಾಡುವ ಶ್ರಮಜೀವಿಗಳ ಗುಂಪೊಂದನ್ನು ಕಣ್ಣ ಮುಂದೆ ತರುತ್ತದೆ. ಹಸಿವು, ಬಾಯಾರಿಕೆ, ನೋವುಗಳ ವಿಷಯದಲ್ಲಿ ಭಾರತದ ಮನುಷ್ಯನಿಗೂ ಅಮೇರಿಕದ ಮನುಷ್ಯನಿಗೂ ನಡುವೆ ವ್ಯತ್ಯಾಸ ಇರಲು ಸಾಧ್ಯವಿಲ್ಲವಲ್ಲ. ಹಾಗೆಯೇ ಕರ್ನಾಟಕ ಮತ್ತು ತಮಿಳುನಾಡು ರೈತರ ಮಧ್ಯೆಯೂ ವ್ಯತ್ಯಾಸ ಇರಲು ಸಾಧ್ಯವಿಲ್ಲ. ಈ ರೈತರು ಬಳಸುತ್ತಿರುವ ನೀರಿನ ಮೂಲ ಒಂದೇ. ಭಾಷೆ ಭಿನ್ನ ಆದರೂ ದೇಶ ಒಂದೇ. ಗದ್ದೆಗಳಲ್ಲಿ ಬೆಳೆಯುತ್ತಿರುವುದೂ ಬಹುತೇಕ ಒಂದೇ. ಇಷ್ಟೆಲ್ಲ ಇದ್ದೂ ಕಾವೇರಿ ಎಂದ ಕೂಡಲೇ ಇವರೆಲ್ಲ 'ಅವರು', 'ಇವರು' ಆಗಿ ವಿಭಜನೆಗೊಳ್ಳುವುದೇಕೆ? ಈ ವಿಭಜನೆಗೂ ರಾಜಕೀಯಕ್ಕೂ ನಡುವೆ ಇರುವ ಸಂಬಂಧಗಳೇನು? ತಮಿಳುನಾಡು ಮತ್ತು ಕರ್ನಾಟಕದ ರೈತರು ಒಟ್ಟು ಸೇರಿ 2003ರಲ್ಲೇ ‘ಕಾವೇರಿ ಕುಟುಂಬ' ಎಂಬೊಂದು ತಂಡವನ್ನು ರಚಿಸಿಕೊಂಡಿದ್ದರು. ರೈತರು, ನೀರಾವರಿ ತಜ್ಞರೂ ಸೇರಿದಂತೆ 20ರಷ್ಟು ಸದಸ್ಯರಿರುವ ಆ ತಂಡ, ಉಭಯ ರಾಜ್ಯಗಳ ನೀರಾವರಿ ಪ್ರದೇಶಗಳಿಗೆ ಭೇಟಿ ನೀಡಿದೆ. ರೈತರ ಮಧ್ಯೆ ಮಾತುಕತೆಗಳನ್ನು ಏರ್ಪಡಿಸಿವೆ. ಶೀಘ್ರ ಸರಕಾರದ ಮುಂದೆ ವರದಿ ಇಡುವ ಸಾಧ್ಯತೆಯೂ ಇದೆ. ಆದರೆ 2002ರಲ್ಲಿ ಕಬಿನಿ ಜಲಾಶಯಕ್ಕೆ ಹಾರಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ ರಾಜಕೀಯ ಪಕ್ಷಗಳಾಗಲಿ ಅಥವಾ ತಮಿಳುನಾಡನ್ನು ನೀರು ಕೊಳ್ಳೆ ಹೊಡೆಯುವ ದರೋಡೆಕೋರನಂತೆ ಚಿತ್ರಿಸುವ ಇವತ್ತಿನ ರಾಜಕಾರಣಿಗಳಾಗಲಿ, ಈ ‘ಕಾವೇರಿ ಕುಟುಂಬದ' ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಕಳೆದ 9 ವರ್ಷಗಳಿಂದ ಈ ಕುಟುಂಬದ ಸದಸ್ಯರು ತಮ್ಮದೇ ಖರ್ಚಿನಲ್ಲಿ ಸಮೀಕ್ಷೆ ನಡೆಸಿದ್ದಾರೆ, ಮಾತುಕತೆ ಆಯೋಜಿಸಿದ್ದಾರೆ. ಒಂದು ವೇಳೆ ರಾಜಕಾರಣಿಗಳು 'ಕಾವೇರಿ ಕುಟುಂಬ'ಕ್ಕೆ ಸಂಪೂರ್ಣ ಬೆಂಬಲ ಸಾರಿರುತ್ತಿದ್ದರೆ, ಇವತ್ತು ಈ ಪರಿಸ್ಥಿತಿ ಬರುವ ಸಾಧ್ಯತೆ ಇತ್ತೇ? ಸುಪ್ರೀಮ್ ಕೋರ್ಟ್‍ನಲ್ಲಿ ಸರಕಾರ ಈ ವರೆಗೆ ಖರ್ಚು ಮಾಡಿರುವ ಮೊತ್ತದ ಸಣ್ಣದೊಂದು ಭಾಗವನ್ನು ಈ 'ಕುಟುಂಬಕ್ಕೆ' ರವಾನಿಸುತ್ತಿದ್ದರೆ ಇವತ್ತು 'ನೀರು' ಈ ಮಟ್ಟದಲ್ಲಿ ಸುದ್ದಿಗೊಳಗಾಗುತ್ತಿತ್ತೇ?
       ನಿಜವಾಗಿ, ನೀರು, ಮನುಷ್ಯರನ್ನು ತಮಿಳು, ಕನ್ನಡ, ಮರಾಠಿ.. ಎಂದೆಲ್ಲಾ ವಿಭಜಿಸುವುದೇ ಇಲ್ಲ. ಕಾವೇರಿ ನದಿಯು ಕರ್ನಾಟಕದ ರೈತರಿಗೆ ಗುಣಮಟ್ಟದ ನೀರನ್ನೂ ತಮಿಳುನಾಡು ರೈತರಿಗೆ ಕಳಪೆ ಮಟ್ಟದ ನೀರನ್ನೂ ಕೊಡುತ್ತಿರುವ ಬಗ್ಗೆ ಈ ವರೆಗೆ ಯಾರೂ ದೂರಿಕೊಂಡಿಲ್ಲ. ಇಷ್ಟಕ್ಕೂ, ಕರ್ನಾಟಕ ಮತ್ತು ತಮಿಳುನಾಡು ಎಂಬೆರಡು ರಾಜ್ಯಗಳಲ್ಲಿ ರೈತರು ಹಂಚಿಹೋಗದೇ ಇರುತ್ತಿದ್ದರೆ, ಕಾವೇರಿ ವಿವಾದವಾಗುತ್ತಿತ್ತೇ? ಇವು ಎರಡು ರಾಜ್ಯಗಲಾಗುವ  ಬದಲು ಒಂದೇ ರಾಜ್ಯವಾಗಿರುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಪ್ರತಿಭಟನೆಗಳಾಗುತ್ತಿದ್ದವೇ? ಕೋರ್ಟಿನಲ್ಲಿ ಮೊಕದ್ದಮೆ ದಾಖಲಾಗುತ್ತಿತ್ತೇ? ಅಂದರೆ, ಸದ್ಯದ ವಿವಾದ ಏನಿದೆಯೋ ಅದಕ್ಕೆ ನೀರು ನೆಪ ಮಾತ್ರ. ನಿಜವಾದ ಕಾರಣ ಎರಡು  ರಾಜ್ಯಗಳಲ್ಲಿ ರೈತರು ಹಂಚಿಹೋದದ್ದು. ಅಂದಹಾಗೆ, ಕಾವೇರಿ ನೀರನ್ನು ಬಳಸಿ ದಶಕಗಳ ಕಾಲ ಉತ್ತು-ಬಿತ್ತ ಕರ್ನಾಟಕದ ರೈತನೊಬ್ಬ ತಮಿಳುನಾಡಿಗೆ ವಲಸೆ ಹೋದನೆಂದಿಟ್ಟುಕೊಳ್ಳಿ. ಅಲ್ಲಿ ಆತನ ನಿಲುವು ಏನಿದ್ದೀತು? ಆತ ತಮಿಳುನಾಡಿನಲ್ಲಿ ನಿಂತು ಕರ್ನಾಟಕದ ರೈತರ ಪರ ಮಾತಾಡುವ ಸಾಧ್ಯತೆ ಇದೆಯೇ? ನ್ಯಾಯ ಕರ್ನಾಟಕದ ಪರ ಇದ್ದರೂ ಅದನ್ನು ಬಹಿರಂಗವಾಗಿ ಹೇಳಿ ಆತನಿಗೆ ದಕ್ಕಿಸಿಕೊಳ್ಳುವುದು ಇವತ್ತು ಸಾಧ್ಯವಾ? ಯಾಕೆಂದರೆ, ಒಟ್ಟು ಪರಿಸ್ಥಿತಿಯನ್ನು ರಾಜಕಾರಣಿಗಳು ಅಷ್ಟಂಶ ಕೆಡಿಸಿಬಿಟ್ಟಿದ್ದಾರೆ. ಒಟ್ಟು ವಿವಾದವೇ ಭಾವನಾತ್ಮಕವಾಗಿ ಬಿಟ್ಟಿದೆ. ಇಂಥ ಹೊತ್ತಲ್ಲಿ ಈ ವಿವಾದವನ್ನು ರಾಜಕಾರಣಿಗಳು ಪರಿಹರಿಸಬಲ್ಲರೆಂದು ಹೇಗೆ ನಿರೀಕ್ಷಿಸುವುದು? ಅವರಾಡುವ ಪ್ರತಿ ಪದವೂ ಓಟಿನ ಲೆಕ್ಕಾಚಾರದಲ್ಲೇ ಇರುತ್ತದೆ. ಒಂದು ವೇಳೆ ಸುಪ್ರೀಮ್ ಕೋರ್ಟು ಮುಂದೊಂದು ದಿನ ನೀಡುವ ತೀರ್ಪನ್ನು ಎರಡೂ ರಾಜ್ಯಗಳ ರೈತರು ಸ್ವಾಗತಿಸಿದರೂ ರಾಜಕಾರಣಿಗಳು ಸ್ವಾಗತಿಸುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಸ್ವಾಗತಿಸುವುದಕ್ಕಿಂತ ವಿರೋಧಿಸುವುದರಲ್ಲೇ ಅವರಿಗೆ ಅವಕಾಶಗಳು ಹೆಚ್ಚಿರುತ್ತವೆ.
      ನಿಜವಾಗಿ ಕಾವೇರಿಯ ನದಿ ನೀರನ್ನು ಕನ್ನಡಿಗರು ಇಲ್ಲವೇ ತಮಿಳರು ಸಂಶೋಧನೆಯಿಂದ ಸೃಷ್ಟಿಸಿಕೊಂಡದ್ದೇನೂ ಅಲ್ಲ. ಇಂತಿಂಥ ಪ್ರದೇಶದಲ್ಲಿ ಮಾತ್ರ ಹರಿಯಬೇಕು ಎಂದು ಯಾರಾದರೂ ಕೇಳಿಕೊಂಡಿದ್ದರಿಂದಾಗಿ ಅದು ಹರಿಯುತ್ತಲೂ ಇಲ್ಲ. ನಾಲ್ಕು ರಾಜ್ಯಗಳ ಲಕ್ಷಾಂತರ ಮಂದಿಯ ಪಾಲಿಗೆ ಇವತ್ತು ಈ ನೀರು ಜೀವನಾಡಿಯಾಗಿದ್ದರೆ ಅದರ ಹಿಂದೆ ಪ್ರಕೃತಿಯ ದೊಡ್ಡದೊಂದು ಸಂದೇಶ ಇದೆ. ಅದು ಸರ್ವರೂ ಸಮಾನರು ಎಂಬ ಸಂದೇಶ. ನೀರಿಗೆ ಇಲ್ಲದ ಅಸೂಯೆ, ದ್ವೇಷ, ಹೊಟ್ಟೆಕಿಚ್ಚುತನಗಳೆಲ್ಲ ಅದನ್ನು ಬಳಸುವ ಮನುಷ್ಯರಲ್ಲಿ ಇರಬಾರದು ಎಂಬ ಸಂದೇಶ. ಈ ಸಂದೇಶವನ್ನು ಮೊತ್ತಮೊದಲು ಅರ್ಥ ಮಾಡಿಕೊಳ್ಳಬೇಕಾದದ್ದು ರಾಜಕಾರಣಿಗಳು. ಒಂದು ವೇಳೆ ರಾಜಕಾರಣಿಗಳ ಬದಲು, ‘ಕಾವೇರಿ ಕುಟುಂಬದಂಥ’ ಗುಂಪುಗಳಿಗೆ ಮಾಧ್ಯಮಗಳಲ್ಲಿ ಪ್ರಚಾರ ಸಿಕ್ಕರೆ, ಅವರ ಹೇಳಿಕೆಗಳಿಗೆ ಬ್ರೇಕಿಂಗ್ ನ್ಯೂಸ್ ಆಗುವ ಭಾಗ್ಯ ದಕ್ಕಿದರೆ ಖಂಡಿತ ಇವತ್ತಿಗಿಂತ ಭಿನ್ನವಾದ ವಾತಾವರಣ ನಿರ್ಮಾಣವಾದೀತು. ರೈತರನ್ನು ರೈತರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಳ್ಳ ಬಲ್ಲವರಾದರೂ ಯಾರು? ಅಂದಹಾಗೆ, ಕಾವೇರಿ ಹೋರಾಟದ ನೊಗವನ್ನು ರಾಜಕಾರಣಿಗಳಿಂದ ಕಸಿದು ಉಭಯ ರಾಜ್ಯಗಳ ರೈತರಿಗೆ  ಕೊಟ್ಟುಬಿಟ್ಟರೆ ಸಾಕು, ಅರ್ಧ ಸಮಸ್ಯೆ ಪರಿಹಾರವಾದಂತೆ. ಆದ್ದರಿಂದ ಕಾವೇರಿ ವಿವಾದವನ್ನು ಮೊತ್ತಮೊದಲು ರಾಜಕೀಯ ಮುಕ್ತಗೊಳಿಸಿ ರೈತರ ಕೈಗೆ ಒಪ್ಪಿಸಿಬಿಡೋಣ. ಉಳುವ ರೈತನಿಗೆ ಹರಿವ ನೀರನ್ನು ಹಂಚಿಕೊಳ್ಳಲು ಖಂಡಿತ ಗೊತ್ತಿದೆ.