Tuesday 27 November 2012

ರೆಸ್ಟೋರೆಂಟ್ ಗಳೆಂಬ ಮನೆಯಲ್ಲಿ ಹೆತ್ತವರು ಮತ್ತು ಮಕ್ಕಳು


  ಈ ಪತ್ರಿಕಾ ಸುದ್ದಿಗಳನ್ನು ಓದಿ
1. ಪ್ರೀತಿಸಿದ ಯುವಕನ ಜೊತೆ ಮದುವೆಯಾಗುವುದಕ್ಕೆ ವಿರೋಧ ವ್ಯಕ್ತಪಡಿಸಿದ ವಿಧವೆಯಾದ ತನ್ನ ತಾಯಿಯನ್ನು ಪ್ರಿಯಕರನ ಜೊತೆ ಸೇರಿ ಮಗಳು ಕೊಂದು ಹಾಕಿದ ಘಟನೆ ರೋಹ್ಟಕ್‍ನಲ್ಲಿ ನಡೆದಿದೆ. ಯುವತಿಗೆ 16 ವರ್ಷ.                             - 2012 ನವೆಂಬರ್ 23
2. ಪತ್ನಿಯೊಂದಿಗೆ ಜಗಳವಾಡಿದ ಪತಿ, ತನ್ನ ಮೊವರು ಪುಟ್ಟ ಹೆಣ್ಣು ಮಕ್ಕಳನ್ನು ಗುಂಡಿಟ್ಟು ಕೊಂದಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಆರೋಪಿ ಮಾಜಿ ಯೋಧ.     - 2012 ನವೆಂಬರ್ 23
3. ಎಲ್‍ಕೆಜಿ ವಿದ್ಯಾರ್ಥಿಯಾಗಿರುವ 4 ವರ್ಷದ ಬಾಲಕನಿಗೆ ಆಂಧ್ರಪ್ರದೇಶದ ರಾಜಮುಂಡ್ರಿಯಲ್ಲಿ ಶಿಕ್ಷಕಿಯೊಬ್ಬಳು ಮೊತ್ರ ಕುಡಿಸಿದ ಘಟನೆ ನಡೆದಿದೆ.            - 2012 ನವೆಂಬರ್ 23
  ಕೇವಲ ಒಂದೇ ದಿನ ವರದಿಯಾದ ಘಟನೆಗಳಿವು. ಇಲ್ಲಿರುವ ಸುದ್ದಿಗಳಿಗೆ ವ್ಯಾಖ್ಯಾನದ ಅಗತ್ಯವಿಲ್ಲ. ರಾಜಕೀಯ, ಸಿನಿಮಾ ಅಥವಾ ಕ್ರೀಡಾ ಸುದ್ದಿಗಳನ್ನು ಓದಿದಂತೆ ಈ ಮೇಲಿನ ಸುದ್ದಿಗಳನ್ನು ಓದಿ ಮುಗಿಸುವುದಕ್ಕೆ ಸಾಧ್ಯವೂ ಆಗುತ್ತಿಲ್ಲ. ಅಷ್ಟಕ್ಕೂ, ಇಂಥ ಘಟನೆಗಳು ಇವತ್ತಿನ ದಿನಗಳಲ್ಲಿ ಯಾವಾಗಲಾದರೊಮ್ಮೆ ನಡೆಯುವ ಅಪರೂಪದ ಘಟನೆಗಳಾಗಿಯೇನೂ ಉಳಿದಿಲ್ಲವಲ್ಲವೇ? ದುರಂತ ಏನೆಂದರೆ, ಪರಿಸ್ಥಿತಿ ಈ ಮಟ್ಟದಲ್ಲಿದ್ದರೂ ಸಾರ್ವಜನಿಕ ಚರ್ಚೆಯಲ್ಲಿ ಇವು ಅಷ್ಟಾಗಿ ಪರಿಗಣಿತ ವಾಗುತ್ತಿಲ್ಲ ಅನ್ನುವುದು. ರಾಜಕೀಯ ಇಲ್ಲವೇ ಕೋಮು ವಿಷಯಗಳಿಗಾಗಿ ಇಲ್ಲಿ ಎಷ್ಟೆಷ್ಟು ವೇದಿಕೆಗಳು ನಿರ್ಮಾಣವಾಗುತ್ತಿವೆಯೋ ಅದರ 5 ಶೇಕಡದಷ್ಟು ವೇದಿಕೆಗಳೂ ಇಂಥ ವಿಷಯಗಳಿಗಾಗಿ ಸಿದ್ಧವಾಗುತ್ತಿಲ್ಲ ಅನ್ನುವುದು. ಒಂದು ರೀತಿಯಲ್ಲಿ, ಮನುಷ್ಯ ಸಂಬಂಧಗಳನ್ನು ಬೆಳೆಸುವಲ್ಲಿ, ಮೌಲ್ಯಗಳನ್ನು ಹೊಸ ತಲೆಮಾರಿಗೆ ವರ್ಗಾಯಿಸುವಲ್ಲಿ ಗಂಭೀರ ನಿರ್ಲಕ್ಷ್ಯವನ್ನು ತೋರುತ್ತಾ, ರಾಜಕೀಯದಂಥ ಜನಪ್ರಿಯ ಸುದ್ದಿಗಳ ಸುತ್ತ ಅಗತ್ಯಕ್ಕಿಂತಲೂ ಹೆಚ್ಚಾಗಿ ನಾವು ನಮ್ಮ ಗಮನವನ್ನು ಕೇಂದ್ರೀಕರಿಸುತ್ತಿದ್ದೇವೇನೋ ಎಂಬ ಅನುಮಾನ ಮೂಡುತ್ತಿದೆ.
  ಒಂದು ಮಗು, ತಾಯಿಯನ್ನು ಕೊಲೆ ಮಾಡುವುದು ಬಿಡಿ ಕನಿಷ್ಠ ಇತರರು ಆಕೆಯನ್ನು ಟೀಕಿಸುವುದನ್ನೂ ಇಷ್ಟಪಡುವುದಿಲ್ಲ. ತಾಯಿಯಂತೂ ತನ್ನೆಲ್ಲವನ್ನೂ ಮಗುವಿಗಾಗಿ ತ್ಯಾಗ ಮಾಡಲು ಸಿದ್ಧವಾಗುತ್ತಾಳೆ. ನಿಜವಾಗಿ, ರಾತ್ರಿಯ ಸಿಹಿ ನಿದ್ದೆಯ ಸಂದರ್ಭದಲ್ಲಿ ಅತ್ತು, ಕೂಗಿ ರಂಪಾಟ ನಡೆಸುವುದು ಮಕ್ಕಳೇ. ಮಗು ದೊಡ್ಡದಾಗುವ ವರೆಗೆ ತಾಯಿ ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೇ ಕಳೆದಿರುತ್ತಾಳೆ. ಮಗು ಮಾಡಿದ ಒಂದೆರಡನ್ನು ಅಸಂಖ್ಯ ಬಾರಿ ಸ್ವಚ್ಚ ಮಾಡಿರುತ್ತಾಳೆ. ಸಾಕಷ್ಟು ದುಡ್ಡು ಸುರಿದು ಮಾರುಕಟ್ಟೆಯಿಂದ ಖರೀದಿಸಿ ತಂದ ಬೆಲೆ ಬಾಳುವ ವಸ್ತುವನ್ನು ಮಗು ಒಡೆದು ಹಾಕುತ್ತದೆ. ಕಿಟಕಿಯ, ಶೋಕೇಸಿನ ಗಾಜು ಪುಡಿ ಮಾಡುತ್ತದೆ. ತಾಯಿ ಇಲ್ಲದ ಸಂದರ್ಭದಲ್ಲಿ ಗೋಡೆಯಲ್ಲಿಡೀ ಬಣ್ಣದ ಚಿತ್ತಾರ ಬಿಡಿಸಿರುತ್ತದೆ.. ಒಂದು ವೇಳೆ ಮಗುವನ್ನು ಕೊಲ್ಲುವ ಉದ್ದೇಶ ತಾಯಿಗಿದ್ದರೆ ಅದಕ್ಕಾಗಿ ನೂರಾರು ಕಾರಣಗಳು ಖಂಡಿತ ಮಗುವಿನಲ್ಲಿದೆ. ಆದರೆ ತಾಯಿ ಎಂದೂ ಅವನ್ನು 'ಕೊಲೆ'ಗಿರುವ ಕಾರಣವಾಗಿ ಪರಿಗಣಿಸುವುದೇ ಇಲ್ಲ. ಆದರೆ ಮಗು ಬೆಳೆಯುತ್ತಾ ಹೋದಂತೆ ತಾಯಿ ಮತ್ತು ಮಕ್ಕಳ ಮಧ್ಯೆ ಇರುವ ಈ ಭಾವನಾತ್ಮಕ ನೆಲೆಗಟ್ಟನ್ನು ಅಷ್ಟೇ ಭಾವ ಪೂರ್ಣವಾಗಿ ವ್ಯಕ್ತಪಡಿಸುವ ಸಂದರ್ಭಗಳು ಕಡಿಮೆಯಾಗುತ್ತಿವೆಯೇನೋ ಅನ್ನಿಸುತ್ತಿದೆ. ಇಂದಿನ ದಿನಗಳಲ್ಲಿ ಮನುಷ್ಯ ಸಂಬಂಧಕ್ಕಿಂತ ಹೆಚ್ಚು ಬೆಲೆಯಿರುವುದು ದುಡ್ಡಿಗೆ. ಉದ್ಯೋಗಗಳನ್ನು ಸೃಷ್ಟಿಸುತ್ತಿರುವ ಐಟಿ, ಬಿಟಿಗಳು ಯುವ ಸಮೂಹದಲ್ಲಿ ಒಂದು ಬಗೆಯ ಅಮಲನ್ನೂ ಉಂಟುಮಾಡುತ್ತಿವೆ. ರಕ್ತ ಸಂಬಂಧಗಳ ಆಚೆ ಭ್ರಾಮಕ ಜಗತ್ತಿನಲ್ಲಿ ಬದುಕುವ ಒಂದು ಪೀಳಿಗೆಗೆ ಅದು ಜನ್ಮ ಕೊಡುತ್ತಿದೆ. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಹೆತ್ತವರಿಗಿಂತ ಹೆಚ್ಚು ಗೊತ್ತಿರುವುದು ತನಗೇ ಎಂಬ ಹುಂಬ ಆಲೋಚನೆಗಳು ಯುವ ಸಮೊಹವನ್ನು ಸಲ್ಲದ ಕೃತ್ಯಗಳಿಗೆ ಕೈ ಹಾಕುವಂತೆ ಪ್ರಚೋದಿಸುತ್ತಿವೆ. ಅಂದಹಾಗೆ, ಇಲ್ಲಿ ಯುವ ಸಮೊಹವನ್ನಷ್ಟೇ ಆರೋಪಿ ಅನ್ನುವಂತಿಲ್ಲ. ಹೆತ್ತವರಿಗೂ ಶಿಕ್ಷಕರಿಗೂ ಮತ್ತು ಸಾಮಾಜಿಕ ವಾತಾವರಣಕ್ಕೂ ಇದರಲ್ಲಿ ಖಂಡಿತ ಪಾಲು ಇದೆ. ಕೆಲವೊಮ್ಮೆ ಹೆತ್ತವರು ತಮ್ಮ ಕರ್ತವ್ಯವನ್ನು ನಿಭಾಯಿಸದೇ ಇರುವುದೂ ಅದಕ್ಕೆ ಕಾರಣ ಆಗಿರುತ್ತದೆ. ಮೊತ್ರ ಕುಡಿಸುವಂಥ ಮನಸ್ಥಿತಿಯ ಶಿಕ್ಷಕರ ಮಧ್ಯೆ ಬೆಳೆಯುವ ಮಗು, ಆರೋಗ್ಯಪೂರ್ಣ ಆಲೋಚನೆಯನ್ನು ಹೊಂದಬೇಕು ಎಂದು ನಾವು ನಿರೀಕ್ಷಿಸುವುದಾದರೂ ಹೇಗೆ? ತನ್ನ ಮಡಿಲಲ್ಲೇ ಬೆಳೆದ ಮಕ್ಕಳನ್ನು ಓರ್ವ ಅಪ್ಪ ಕೊಲ್ಲುತ್ತಾನೆಂದಾದರೆ, ಆತನನ್ನು 'ಹೆತ್ತವರು' ಎಂಬ ಪಟ್ಟಿಯಲ್ಲಿ ಹೇಗೆ ಸೇರಿಸುವುದು? ಒಂದು ರೀತಿಯಲ್ಲಿ ಅಪ್ಪ, ಅಮ್ಮ ಮತ್ತು ಮಕ್ಕಳು ಯಾವ ವಾತಾವರಣದಲ್ಲಿ ಬೆಳೆಯಬೇಕೋ ಆ ವಾತಾವರಣ ದಿನೇ ದಿನೇ ಕ್ಷಯಿಸುತ್ತಾ ಹೋಗುತ್ತಿದೆ. ಮಕ್ಕಳು ಕೇಳಿದಷ್ಟು ಪಾಕೆಟ್ ಮನಿ ಕೊಡುವುದನ್ನೇ ಜವಾಬ್ದಾರಿ ಅಂದುಕೊಂಡಿರುವ ಹೆತ್ತವರು ಮತ್ತು ಅದನ್ನು ಖರ್ಚು ಮಾಡುವುದನ್ನೇ 'ಕರ್ತವ್ಯ' ಅಂದುಕೊಂಡಿರುವ ಮಕ್ಕಳ ಸಂಖ್ಯೆ ಹೆಚ್ಚಾಗತೊಡಗಿದೆ.
  ಏನೇ ಆಗಲಿ, ಒಂದು ಆರೋಗ್ಯಪೂರ್ಣ ಸಮಾಜದ ನಿರ್ಮಾಣವಾಗಬೇಕಾದರೆ ಮೊತ್ತಮೊದಲು ಆರೋಗ್ಯಪೂರ್ಣ ‘ಮನೆಯ’ ನಿರ್ಮಾಣವಾಗಬೇಕು. ಮೌಲ್ಯಗಳನ್ನು ಪಾಲಿಸುವ, ಹೆತ್ತವರು ಮತ್ತು ಮಕ್ಕಳ ನಡುವಿನ ಸಂಬಂಧದ ಪಾವಿತ್ರ್ಯವನ್ನು ಅರಿತಿರುವ ಮನೆ. ಹೆತ್ತವರು ಮತ್ತು ಮಕ್ಕಳು ಆಧ್ಯಾತ್ಮಿಕವಾಗಿ ತರಬೇತುಗೊಳ್ಳುತ್ತಿರುವ ಮನೆ. ಆದರೆ ಇವತ್ತಿನ ದಿನಗಳಲ್ಲಿ ಮನೆ ಎಂಬುದು ರೆಸ್ಟೋರೆಂಟ್‍ನ ಪಾತ್ರ ವಹಿಸುತ್ತಿದೆಯೇ ಹೊರತು ಮನೆಯ ಪಾತ್ರ ಅಲ್ಲ. ಆದ್ದರಿಂದಲೇ, ಮನೆಗಳಿಂದ ಬರಬಾರದ ಸುದ್ದಿಗಳು ಬರತೊಡಗಿವೆ. ಹೀಗಿರುವಾಗ, ಸಾರ್ವಜನಿಕವಾಗಿ ನಾವು ರಾಜಕೀಯವನ್ನೋ ಕ್ರೀಡೆಯನ್ನೋ ಗಂಭೀರ ಚರ್ಚೆಗೊಳಪಡಿಸುತ್ತಾ ಕೂತರೆ 'ಮನೆ' ಸುರಕ್ಷಿತವಾಗುವುದಾದರೂ ಹೇಗೆ? ನಿಜವಾಗಿ, ಇವತ್ತು ಹೆತ್ತವರು, ಮಕ್ಕಳು, ಕುಟುಂಬ.. ಮುಂತಾದ ವಿಷಯಗಳ ಸುತ್ತ ಹೆಚ್ಚು ಹೆಚ್ಚು ಚರ್ಚೆಗಳಾಗಬೇಕಾದ ಅಗತ್ಯ ಇದೆ. ಇಂದಿನ ಯುವ ಪೀಳಿಗೆಯು  ತಮ್ಮ ಹೆತ್ತವರ ಜೊತೆಗಿರುವ ಹಕ್ಕು-ಬಾಧ್ಯತೆಗಳನ್ನು ತಿಳಿಯುತ್ತಾ, ಆ ಬಗ್ಗೆ ಬದ್ಧತೆಯನ್ನು ಪ್ರಕಟಿಸುತ್ತಾ ಬೆಳೆಯಬೇಕಾದ ತುರ್ತಿದೆ. ಇಲ್ಲದಿದ್ದರೆ ಸಾಮಾಜಿಕ ನೆಲೆಗಟ್ಟೇ ಕುಸಿದು ಹೋದೀತು.

No comments:

Post a Comment