Monday, 3 December 2012

ದೇವನಾಗುವ ಮಾನವ ಮತ್ತು ಮಾನವನಲ್ಲದ ದೇವ


  ಮನುಷ್ಯ ಮತ್ತು ದೇವರ ನಡುವೆ ಇರುವ ವ್ಯತ್ಯಾಸ ಏನು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಮನುಷ್ಯನಿಗಿರುವಂತೆ ದೇವನಿಗೆ ದೌರ್ಬಲ್ಯಗಳು ಇರುವುದಿಲ್ಲ. ದೌರ್ಬಲ್ಯಗಳಿರುವವ ದೇವನಾಗಲು ಸಾಧ್ಯವೂ ಇಲ್ಲ. ತಿನ್ನುವ, ಕುಡಿಯುವ, ಅನಾರೋಗ್ಯಕ್ಕೆ ಒಳಗಾಗುವ, ನಿದ್ದೆ ಮಾಡುವ, ಪತ್ನಿ ಮಕ್ಕಳನ್ನು ಹೊಂದುವ, ಸಾಯುವ.. ಹೀಗೆ ಒಂದು ಮಿತಿಯೊಳಗೆ ಮನುಷ್ಯ ಬದುಕುತ್ತಿರುತ್ತಾನೆ. ಆದರೆ ದೇವ ಹಾಗಲ್ಲ. ಅವನಿಗೆ ನಿದ್ದೆಯಿಲ್ಲ. ಮಕ್ಕಳಿಲ್ಲ. ಕುಟುಂಬ ಇಲ್ಲ. ಆತ ತಿನ್ನುವುದಿಲ್ಲ. ಬದುಕಿಸುವ ಮತ್ತು ಸಾಯಿಸುವ ಸಾಮರ್ಥ್ಯ  ಆತನಿಗೆ ಇದೆ. ಆತ ಏಕೈಕ. ಕಾಲಜ್ಞಾನಿ.. ಹೀಗೆ ದೇವನ ಗುರುತು ಮನುಷ್ಯನಿಗಿಂತ ಭಿನ್ನವಾಗಿರುತ್ತದೆ; ಇರಬೇಕು ಕೂಡ. ದುರಂತ ಏನೆಂದರೆ, ಕೆಲವೊಮ್ಮೆ ಮನುಷ್ಯರ ವರ್ತನೆ ಎಷ್ಟು ಬಾಲಿಶ  ಆಗಿರುತ್ತದೆಂದರೆ, ಮನುಷ್ಯರನ್ನೇ ದೇವರಾಗಿಸಿ ಬಿಡುವಷ್ಟು. ದೇವನಿಗೆ ಸಾವಿಲ್ಲ ಎಂದು ಗೊತ್ತಿರುವ ಮನುಷ್ಯರೇ, ಮನುಷ್ಯನನ್ನು ದೇವನ ಸ್ಥಾನದಲ್ಲಿ ಕೂರಿಸಿ ಕೈ ಮುಗಿಯುವಷ್ಟು. ಸದ್ಯ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್‍ರು ದೇವನಾಗುವ ಸಿದ್ಧತೆಯಲ್ಲಿದ್ದಾರೆ.
  ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ನಾಗ್ಲಾಪಾಲಿಯಲ್ಲಿ ನ. 22ರಂದು ಮುಲಾಯಮ್‍ರ ದೇಗುಲಕ್ಕೆ ಶಿಲಾನ್ಯಾಸ ನಡೆದಿದೆ. ಮುಂದಿನ ವರ್ಷದ ಮಾರ್ಚ್ ಗೆ  ಪೂರ್ಣಗೊಳ್ಳಬಹುದೆಂದು ನಿರೀಕ್ಷಿಸಲಾಗಿರುವ ದೇಗುಲಕ್ಕೆ 11 ಲಕ್ಷ ರೂಪಾಯಿಯನ್ನು ಖರ್ಚು ಮಾಡಲಾಗುತ್ತಿದೆ.. ಈ ಸುದ್ದಿಗಿಂತ ಒಂದೆರಡು ವಾರಗಳ ಮೊದಲಷ್ಟೇ ಬಾಳಾ ಠಾಕ್ರೆ ಸಾವಿಗೀಡಾಗಿದ್ದರು. ಅವರ ಅಂತ್ಯ ಸಂಸ್ಕಾರ ನಡೆಸಿದ ಜಾಗ ಅಯೋಧ್ಯಯಷ್ಟೇ ಪವಿತ್ರ ಎಂದು ಅವರ ಮಗ ಘೋಷಿಸಿದ್ದರು. ಇವಷ್ಟೇ ಅಲ್ಲ, ಜಯಲಲಿತಾಗೆ, ನಟಿ ಖುಷ್ಬೂಗೆ.. ಈ ಹಿಂದೆ ದೇಗುಲ ನಿರ್ಮಾಣ ಆಗಿದೆ. ಅವರು ಮನುಷ್ಯರಂತೆ ವರ್ತಿಸಿದಾಗ, ಕಟ್ಟಿದ ಮಂದಿಯೇ ಅದನ್ನು ಒಡೆದದ್ದೂ ಇದೆ. ನಿಜವಾಗಿ, ದೇವನಾಗಲು ಹೊರಟ ಎಲ್ಲ ಮನುಷ್ಯರೂ ಈ ಜಗತ್ತಿನಲ್ಲಿ ತೀವ್ರ ವೈಫಲ್ಯಕ್ಕೆ ಒಳಗಾಗಿದ್ದಾರೆ. ಸಾಯಿಬಾಬ ಜೀವಂತ ಇದ್ದಾಗ, ಅನೇಕರ ಪಾಲಿಗೆ ದೇವರಾಗಿದ್ದರು. ಅವರ ವ್ಯಕ್ತಿತ್ವ, ಸಮಾಜ ಸೇವೆ, ಪವಾಡವನ್ನು ನೋಡಿದ ಇಲ್ಲವೇ ಆಲಿಸಿದ ಮಂದಿ ಸಾಯಿಬಾಬ ಮನುಷ್ಯರಲ್ಲ ಅಂತ ತೀರ್ಮಾನಿಸಿದರು. ಫೋಟೋ ಇಟ್ಟು ಪೂಜಿಸತೊಡಗಿದರು. ಆದರೆ ಯಾವಾಗ ಅವರು ಅನಾರೋಗ್ಯ ಪೀಡಿತರಾದರೋ ಅದೇ ಜನ ಆಸ್ಪತ್ರೆಯ ಹೊರಗೆ ನಿಂತು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸತೊಡಗಿದರು. ಒಂದು ರೀತಿಯಲ್ಲಿ, ಬಾಬಾ ದೇವ ಅಲ್ಲ ಅನ್ನುವುದನ್ನು ಅವರ ಪ್ರಾರ್ಥನೆಯೇ ಸಾಬೀತುಪಡಿಸುತ್ತಿತ್ತು. ಇಲ್ಲದಿದ್ದರೆ ಓರ್ವ ದೇವನಿಗೆ ಇನ್ನಾವುದೋ ದೇವನಲ್ಲಿ ಪ್ರಾರ್ಥಿಸುವುದಕ್ಕೆ ಅರ್ಥವಾದರೂ ಏನು? ಕೊನೆಗೆ ಬಾಬಾ ಸಾವಿಗೀಡಾದಾಗ ಅವರ ಬಗ್ಗೆ ಇದ್ದ 'ದೇವ' ಕಲ್ಪನೆಯ ಪ್ರಭಾವಳಿ ಇನ್ನಷ್ಟು ಚಿಕ್ಕದಾಯಿತು. ಅವರ ಖಾಸಗಿ ಕೋಣೆಯಲ್ಲಿ ಕೋಟಿಗಟ್ಟಲೆ ಸಂಪತ್ತು ಪತ್ತೆಯಾದಾಗ 'ದೇವ' ಮತ್ತೆ ಸಣ್ಣವನಾದ.
  ನಿಜವಾಗಿ, ಭ್ರಷ್ಟ ರಾಜಕಾರಣಿಗಳು ಈ ಸಮಾಜದ ಪಾಲಿಗೆ ಎಷ್ಟು ಅಪಾಯಕಾರಿಯೋ, ಅದಕ್ಕಿಂತಲೂ ಮನುಷ್ಯ ದೇವರುಗಳು ಅಪಾಯಕಾರಿಗಳಾಗಿದ್ದಾರೆ. ರಾಜಕಾರಣಿಗಳನ್ನು ಭ್ರಷ್ಟರು ಎಂದು ಕರೆಯುವುದಕ್ಕೆ, ಸಮಾಜದ ತೀರಾ ಕಟ್ಟಕಡೆಯ ವ್ಯಕ್ತಿಗೂ ಒಂದು ಹಂತದ ವರೆಗೆ ಸ್ವಾತಂತ್ರ್ಯ ಇದೆ. ಭ್ರಷ್ಟರನ್ನು ವೇದಿಕೆಯಲ್ಲಿ ನಿಂತು ತೀವ್ರವಾಗಿ ಟೀಕಿಸುವುದಕ್ಕೂ ಇಲ್ಲಿ ಅವಕಾಶ ಇದೆ. ಆದರೆ ಮನುಷ್ಯ ದೇವರುಗಳು ಹಾಗಲ್ಲ. ಅವರು ತಮ್ಮ ಸುತ್ತ ಒಂದು ಪ್ರಭಾವಳಿಯನ್ನು ಬೆಳೆಸಿಕೊಂಡಿರುತ್ತಾರೆ. ಪ್ರಶ್ನಿಸದೇ ಒಪ್ಪಿಕೊಳ್ಳುವಂಥ ಮುಗ್ಧ ಭಕ್ತಸಮೂಹವನ್ನು ಸೃಷ್ಟಿಸಿರುತ್ತಾರೆ. ಆದ್ದರಿಂದಲೇ ಕೆಲವರಿಗೆ ದೇವರಾಗಲು, ಕಾಲಿಗೆ ಬೀಳಿಸಿಕೊಳ್ಳಲು ವಿಪರೀತ ಆಸಕ್ತಿಯಿರುವುದು. ರಾಜಕಾರಣಿಗಳನ್ನೂ ಕಾಲಬುಡಕ್ಕೆ ಬರುವಂತೆ ಮಾಡುವ ಸಾಮರ್ಥ್ಯವಿರುವುದು ಮನುಷ್ಯ ದೇವರುಗಳಿಗೆ ಮಾತ್ರ. ಮುಲಾಯಂ ಸಿಂಗ್ ದೇವರಾಗುವುದರಿಂದ ಜನರಿಗೆ ಲಾಭ ಇದೆಯೋ ಇಲ್ಲವೋ ಆದರೆ ಅವರ ಪಕ್ಷಕ್ಕಂತೂ ಖಂಡಿತ ಲಾಭ ಇದೆ. ಅವರ ದೇಗುಲ, ಸಮಾಜವಾದಿ ಪಕ್ಷದ ಕಾರ್ಯಕರ್ತರ ಪ್ರತಿಜ್ಞಾ  ಸ್ಥಳವಾಗಿ ಮಾರ್ಪಡಲೂಬಹುದು. ಆದ್ದರಿಂದ ದೇವನ ನಿಜವಾದ ಪರಿಚಯ ಸಮಾಜಕ್ಕೆ ಆಗಬೇಕಾದ ಅಗತ್ಯ ಇದೆ. ಮನುಷ್ಯನಂತೆ ದೇವನಿಗೆ ಹಸಿವಾಗುತ್ತದೆಂದಾದರೆ ಅದು ದೇವನಾಗಲು ಸಾಧ್ಯವಿಲ್ಲ. ನಿದ್ದೆ ಮಾಡುವುದು ಮನುಷ್ಯನ ಸ್ವಭಾವ, ದುಡ್ಡು ಮಾಡುವುದೂ ಮನುಷ್ಯನ ಗುಣ. ಕಾಯಿಲೆ ಬಾಧಿಸುವುದು, ಸಾಯುವುದು, ನಾಳೆ ಏನಾಗುತ್ತದೆಂಬುದರ ಅರಿವಿರದಿರುವುದು.. ಎಲ್ಲವೂ ಮನುಷ್ಯನ ದೌರ್ಬಲ್ಯಗಳು. ಇವು ದೇವನಿಗೂ ಇದ್ದರೆ ಮತ್ತೆ ದೇವನ ಅಗತ್ಯವಾದರೂ ಏನಿರುತ್ತದೆ? ವಿಶೇಷ ಏನೆಂದರೆ, ಮುಲಾಯಮ್‍ರ ಸಹಿತ ನಮ್ಮ ನಡುವೆ ಯಾರೆಲ್ಲ ವಿಗ್ರಹಗಳಲ್ಲಿ ಇವತ್ತು ಬಂಧಿಸಲ್ಪಟ್ಟಿದ್ದಾರೋ ಅಥವಾ ದೇವನ ಫೋಸು ಕೊಟ್ಟು ಭಕ್ತ ಸಮೂಹವನ್ನು ಸೃಷ್ಟಿಸಿಕೊಂಡಿದ್ದಾರೋ ಅವರೆಲ್ಲರಿಗೂ ಈ ದೌರ್ಬಲ್ಯಗಳಿವೆ ಎಂಬುದು. ನಮ್ಮ ನಡುವೆ ಮನುಷ್ಯರಾಗಿ ಗುರುತಿಸಿಕೊಂಡು ಆ ಬಳಿಕ ದೇವರಾದವರೆಲ್ಲ ಆ ಪಟ್ಟಕ್ಕೆ ಏರಿದ ಬಳಿಕವೂ ಮೊದಲಿನ ಅಭ್ಯಾಸವನ್ನು ಬಿಟ್ಟಿದ್ದೇನೂ ಇಲ್ಲ. ಅವರು ದೇವರಾದ ಬಳಿಕವೂ ನಿದ್ದೆ ಮಾಡುತ್ತಾರೆ, ತಿನ್ನುತ್ತಾರೆ, ಕುಡಿಯುತ್ತಾರೆ.. ಇದುವೇ ಅವರು ದೇವರಲ್ಲ ಅನ್ನುವುದನ್ನು ಸಾಬೀತುಪಡಿಸುತ್ತದಲ್ಲವೇ?
  ದೇವನ ಫೋಸು ಕೊಟ್ಟು ಜನರನ್ನು ವಂಚಿಸುತ್ತಿರುವ ಕಪಟ ದೇವರುಗಳನ್ನೆಲ್ಲಾ ತಿರಸ್ಕರಿಸಿ, ಮನುಷ್ಯ ದೇವನಾಗಲು ಸಾಧ್ಯವಿಲ್ಲ ಎಂದು ಬಲವಾಗಿ ಘೋಷಿಸಬೇಕಾದ ಅಗತ್ಯ ಇವತ್ತು ಸಾಕಷ್ಟಿದೆ. ಯಾಕೆಂದರೆ ಧರ್ಮ ಇಲ್ಲವೇ ದೇವರ ಹೆಸರಲ್ಲಿ ಜನಸಾಮಾನ್ಯರನ್ನು ವಂಚಿಸುವಷ್ಟು ಸುಲಭದಲ್ಲಿ ಇನ್ನಾವುದರಿಂದಲೂ ವಂಚಿಸಲು ಸಾಧ್ಯವಿಲ್ಲ ಎಂಬುದು ದೇವರಾಗಬಯಸುವ ಎಲ್ಲರಿಗೂ ಗೊತ್ತು. ದೇವರ ಬಗ್ಗೆ ದುರ್ಬಲ ಕಲ್ಪನೆಗಳನ್ನು ಇಟ್ಟುಕೊಂಡ ಮಂದಿಯನ್ನು ಇಂಥವರು ಸುಲಭದಲ್ಲಿ ಬಲೆಗೆ ಬೀಳಿಸುತ್ತಲೂ ಇರುತ್ತಾರೆ. ಮುಲಾಯಮ್‍ಗೆ ದೇಗುಲ ನಿರ್ಮಾಣವಾಗುವುದರ ಹಿಂದೆ ಇಂಥದ್ದೊಂದು ಉದ್ದೇಶ ಇರಲೂಬಹುದು. ಇಂಥ ನಕಲಿಗಳನ್ನು ಸೋಲಿಸಬೇಕಾದರೆ ದೇವನ ಅಸಲಿ ರೂಪದ ಬಗ್ಗೆ ಗೊತ್ತಿರಬೇಕಾದುದು ಬಹಳ ಅಗತ್ಯ. ಆ ಅಸಲಿ ದೇವನನ್ನು ಪತ್ತೆ ಹಚ್ಚುವಲ್ಲಿ ಜನರು ಯಶಸ್ವಿಯಾದರೆ ಆ ಬಳಿಕ ದೇವಮಾನವರಿಗೆ ಭಕ್ತರಿರುವುದಕ್ಕೆ ಸಾಧ್ಯವೂ ಇಲ್ಲ..

4 comments:

 1. This comment has been removed by the author.

  ReplyDelete
 2. This comment has been removed by the author.

  ReplyDelete
 3. ಮನುಷ್ಯರನ್ನು ವೈಭವೀಕರಿಸುವದು ತಪ್ಪು ಎಂಬ ನಿಮ್ಮ ಮಾತನ್ನು ನಾನೂ ಒಪ್ಪುತ್ತೇನೆ. ಆದರೆ ವಿಷ್ಯ ಮತ್ತೆಲ್ಲಿಗೋ ಹೋದಂತೆ ಅನಿಸಿತು.
  "ಮನುಷ್ಯ ಮತ್ತು ದೇವರ ನಡುವೆ ಇರುವ ವ್ಯತ್ಯಾಸ ಏನು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು"
  ವ್ಯತ್ಯಾಸ ಏನು ಎನ್ನುವ ಮೊದಲು ದೇವರು ಇದ್ದಾನೆ ಎಂದು ಹೇಗೆ ಹೇಳುತ್ತೀರಿ? ದೇವರನ್ನು ನೋಡಿದವರಿದ್ದಾರೆಯೇ? ಒಂದು ವೇಳೆ ದೇವರು ಇದ್ದದ್ದು ನಿಜವಾದರೂ ಯಾರೋ ಧರ್ಮಗ್ರಂಥ/ಧರ್ಮಪ್ರಚಾರಕ ಹೇಳಿದಂತೆ ಮಾತ್ರ ದೇವರ ಅಸ್ತಿತ್ವ ಇದೆ ಎಂದು ಹೇಗೆ ನಂಬುತ್ತೀರಿ?

  "ಇಂಥ ನಕಲಿಗಳನ್ನು ಸೋಲಿಸಬೇಕಾದರೆ ದೇವನ ಅಸಲಿ ರೂಪದ ಬಗ್ಗೆ ಗೊತ್ತಿರಬೇಕಾದುದು ಬಹಳ ಅಗತ್ಯ. ಆ ಅಸಲಿ ದೇವನನ್ನು ಪತ್ತೆ ಹಚ್ಚುವಲ್ಲಿ ಜನರು ಯಶಸ್ವಿಯಾದರೆ ಆ ಬಳಿಕ ದೇವಮಾನವರಿಗೆ ಭಕ್ತರಿರುವುದಕ್ಕೆ ಸಾಧ್ಯವೂ ಇಲ್ಲ.."
  ಒಹ್ ನೀವು ಏನು ಹೇಳಕ್ಕೆ ಹೊರಟಿದ್ದೀರಾ ಅಂತ ಗೊತ್ತಾಯ್ತು ಬಿಡಿ. ದೇವನ ಅಸಲಿ ರೂಪದ ಬಗ್ಗೆ ಯಾರಿಗಾದರೂ ತಿಳಿದಿದೆಯೋ? ಹಾಗೆ ಒಬ್ಬನಿಗೆ ತಿಳಿದಿದ್ದರೆ ಅವನು ಯಾವುದೋ ತಲೆಹಿಡುಕ ಧರ್ಮಪ್ರಚಾರಕನಿಂದಲೋ ಅಥವಾ ದೇವರ ಸಂದೇಶ ಎಂದು ಕರೆಯಲ್ಪಡುವ ಹಳಸಲು ಧರ್ಮಗ್ರಂಥ ಗಳಿಂದ ತಿಳಿದುಕೊಂಡಿರುತ್ತಾನೆ..ದೇವರ ಅಸಲಿ ರೂಪದ ಬಗ್ಗೆ ತಿಳಿದುಕೊಳ್ಳಲು ಹೊರಡುವಾಗಲೇ ಧರ್ಮಾಂಧರು ಹುಟ್ಟಿಕೊಳ್ಳುತ್ತಾರೆ. ತಮ್ಮ ಧರ್ಮಗ್ರಂಥವೇ ಸತ್ಯ, ಉಳಿದವು ಅಸತ್ಯ ಎಂದು ಹೊಡೆದಾಡಲು ಶುರು ಮಾಡುತ್ತಾರೆ...

  ReplyDelete
 4. ದೇವರ ಹೆಸರಿನಲ್ಲಿ ಲೂಟಿ ಮಾಡುವ ನಕಲಿಗಳಿಗಿಂತಲೂ, ತಮ್ಮ ಧರ್ಮವೇ/ಧರ್ಮಗ್ರಂಥವೇ ಸತ್ಯ, ಎಲ್ಲಕ್ಕಿಂತಲೂ ಶ್ರೇಷ್ಠ ಎಂದು ಬಗೆಯುವ ಧರ್ಮಾಂಧರು ಪ್ರಸ್ತುತ ಜಾಗತಿಕ ಮಟ್ಟದ ಅಶಾಂತಿಗೆ ಕಾರಣರು ಎಂಬುದಂತೂ ಸತ್ಯ.
  ದೇವರ ಅಸಲಿ ರೂಪದ ಬಗ್ಗೆ ತಿಳಿದುಕೊಳ್ಳುವ ಮೊದಲು ದೇವರ ಅಸ್ತಿತ್ವದ ಸತ್ಯದ ಬಗ್ಗೆ ಮೊದಲು ತಿಳಿದುಕೊಳ್ಳುವದು ಸೂಕ್ತ. ಯಾವುದೋ ಧರ್ಮಗ್ರಂಥ, ಯಾವುದೋ ಧರ್ಮಪ್ರಚಾರಕ, ಇವರುಗಳು ಹೇಳಿದ್ದೆ ಸತ್ಯ ಎಂದು ಮುನ್ನಡೆಯುವ ಬದಲು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವ ಅಗತ್ಯ ಇದೆ.

  ReplyDelete