Wednesday 26 December 2012

ನಮ್ಮೆಲ್ಲರ ಆತ್ಮಸಾಕ್ಷಿಗೆ ಚುಚ್ಚಿ ಹೊರಟುಹೋದ ಉಪನ್ಯಾಸಕ


  ಅನೇಕ ಬಾರಿ, ಓರ್ವರ ಒಂದು ಗೆರೆಯ ಹೇಳಿಕೆ ನೂರಾರು ಪ್ರತಿಕ್ರಿಯೆಗಳಿಗೆ ಕಾರಣವಾಗುವುದಿದೆ. ದೇಶದಲ್ಲಿ ಪ್ರತಿದಿನ ಅನೇಕಾರು ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಒಂದು ಪ್ರಕರಣಕ್ಕೆ ಇತರೆಲ್ಲವುಗಳಿಗಿಂತ ಹೆಚ್ಚು ಪ್ರಚಾರ ಸಿಕ್ಕಿ, ಅಭೂತಪೂರ್ವ ಪ್ರತಿಭಟನೆಗೆ ಕಾರಣವಾಗುವುದಿದೆ. ಆತ್ಮಹತ್ಯೆಯೂ ಹಾಗೆಯೇ. ಪತ್ರಿಕೆಗಳ ತೀರಾ ಒಳಪುಟದಲ್ಲಿ ಸಣ್ಣದೊಂದು ಸುದ್ದಿಯಾಗಿ ಪ್ರಕಟವಾಗುವಷ್ಟು ಮಾಮೂಲು ಎನಿಸಿಬಿಟ್ಟಿರುವ ಆತ್ಮಹತ್ಯೆಯು, ಕೆಲವೊಮ್ಮೆ ತನ್ನ ವಿಶಿಷ್ಟತೆಯಿಂದಾಗಿ ಸಾರ್ವಜನಿಕ ಚರ್ಚೆಗೆ ಒಳಗಾಗುವುದಿದೆ. ಡಾ| ಯು.ಬಿ. ಅಶೋಕ್ ಕುಮಾರ್‍ರ ಆತ್ಮಹತ್ಯೆಯು ಇಂಥದ್ದೊಂದು ಚರ್ಚೆಗೆ ಅವಕಾಶ ಒದಗಿಸಿದೆ. ನಿಜವಾಗಿ, ಮೈಸೂರಿನ ಮಹಾರಾಜ ಸಂಜೆ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ಇವರ ಆತ್ಮಹತ್ಯೆಯು ಚರ್ಚೆಗೆ ಒಳಗಾಗಬೇಕಾದದ್ದು ಇವರು ಉಪನ್ಯಾಸಕರು ಎಂಬ ಕಾರಣಕ್ಕಾಗಿ ಖಂಡಿತ ಅಲ್ಲ. ಇವರ ಆತ್ಮಹತ್ಯೆಯಲ್ಲಿ ಒಂದು ವೈಶಿಷ್ಟ್ಯವಿದೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಮೊದಲು ಅದಕ್ಕೆ ಕಾರಣವನ್ನು ಬರೆದಿಟ್ಟು ಹೋಗಿದ್ದಾರೆ. ವ್ಯಾಪಕವಾಗುತ್ತಿರುವ ಭ್ರಷ್ಟಾಚಾರ, ಜಾತೀಯತೆ, ಅತ್ಯಾಚಾರ, ಕೆಟ್ಟ ರಾಜಕಾರಣಗಳನ್ನು ನೋಡಿ ಮನಸ್ಸಿಗೆ ಆಘಾತವಾಗಿದೆ ಎಂದಿದ್ದಾರೆ. ಮುಂದಿನ ಜನಾಂಗವನ್ನು ರೂಪಿಸಬೇಕಾದ ವಿಶ್ವ ವಿದ್ಯಾಲಯಗಳಲ್ಲೇ ಕುಲಪತಿಯಂಥ ಹುದ್ದೆಗಾಗಿ ಲಾಬಿ, ಭ್ರಷ್ಟತನ ನಡೆಯುತ್ತಿದೆ, ಹೀಗಿರುವಾಗ ಹೇಗೆ ನಾನು ಮಕ್ಕಳಿಗೆ ಮೌಲ್ಯವನ್ನು ಬೋಧಿಸಲಿ.. ಎಂದು ಪ್ರಶ್ನಿಸಿದ್ದಾರೆ.
  ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಖಂಡಿತ ಅಲ್ಲ. ಅದರಲ್ಲೂ ಉಪನ್ಯಾಸಕರೋರ್ವರು, ಆತ್ಮಹತ್ಯೆಯನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಆಘಾತಕಾರಿಯಾದದ್ದು. ಆದರೆ, ಓರ್ವ ಪ್ರಾಮಾಣಿಕ ವ್ಯಕ್ತಿಯ ಮೇಲೆ ಈ ದೇಶದ ಸದ್ಯದ ಬೆಳವಣಿಗೆಗಳು ಯಾವ ಬಗೆಯ ಪರಿಣಾಮ ಬೀರುತ್ತವೆಂಬುದಕ್ಕೆ ಈ ಆತ್ಮಹತ್ಯೆ ಒಂದು ಅತ್ಯುತ್ತಮ ಪುರಾವೆ. ಮೌಲ್ಯಗಳನ್ನು ಕಲಿಸಬೇಕಾದ, ಮೌಲ್ಯವಂತ ಪೀಳಿಗೆಯನ್ನು ತಯಾರಿಸಬೇಕಾದ ಶಿಕ್ಷಣ ಸಂಸ್ಥೆಗಳು ಮೌಲ್ಯರಹಿತ ಕಸುಬಿನಲ್ಲಿ ತೊಡಗಿ ಬಿಟ್ಟರೆ ಕೆಡುಕುರಹಿತ ಸಮಾಜ ನಿರ್ಮಾಣವಾಗುವುದಾದರೂ ಹೇಗೆ? ಸಮಾಜದಲ್ಲಿ ಇವತ್ತು ನೂರಾರು ಕೆಡುಕುಗಳಿವೆ. ಆ ಕೆಡುಕುಗಳಿಗೆಲ್ಲ ಕಾರಣವಾಗಿರುವುದು ಅನ್ಯಗೃಹದ ಜೀವಿಗಳೇನೂ ಅಲ್ಲ. ದುರಂತ ಏನೆಂದರೆ, ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕರಿಗೆ ಕಣ್ಣೀರು ಮಿಡಿದು ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗಲಿ ಎಂದು ನಾವು ಆಗ್ರಹಿಸುತ್ತೇವೆಯೇ ಹೊರತು ಭ್ರಷ್ಟಾಚಾರದ ಮೊಲಕ್ಕೆ ಮದ್ದರೆಯುವ ಬಗ್ಗೆ ಆಲೋಚಿಸುವುದೇ ಇಲ್ಲ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಆಗ್ರಹಿಸುತ್ತೇವೆ. ಪ್ರತಿಭಟನೆ ನಡೆಸುತ್ತೇವೆ. ಆದರೆ ಹೀಗೆ ಆಗ್ರಹಿಸುತ್ತಿರುವಾಗಲೂ ಅತ್ಯಾಚಾರದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇಷ್ಟಕ್ಕೂ ಅತ್ಯಾಚಾರಕ್ಕೆ ಮರಣ ದಂಡನೆಯಾಗಬೇಕು, ನಿಜ. ಆದರೆ ಕೇವಲ ಮರಣದಂಡನೆಯೊಂದೇ ಅತ್ಯಾಚಾರ ಪ್ರಕರಣಕ್ಕೆ ಕಡಿವಾಣ ಹಾಕೀತು ಅಂತ ಹೇಳಲು ಸಾಧ್ಯವೇ? ಅತ್ಯಾಚಾರಕ್ಕೆ ಯಾವುದು ಪ್ರಚೋದಕವಾಗುತ್ತದೋ ಅವುಗಳ ಬಗ್ಗೆ ಕಣ್ಣು ಮುಚ್ಚಿಕೊಳ್ಳುತ್ತಾ ಗಲ್ಲು ಶಿಕ್ಷೆಯ ಬಗ್ಗೆ ಮಾತಾಡುವುದು ಎಷ್ಟು ಪರಿಣಾಮಕಾರಿ? ನಮ್ಮ ಸಿನಿಮಾಗಳು, ಸಾಂಸ್ಕ್ರಿತಿಕ ಕಾರ್ಯಕ್ರಮಗಳು, ಮಾಧ್ಯಮಗಳು ಮತ್ತು ಆಧುನಿಕತೆಯ ಹೆಸರಲ್ಲಿ ಸಮರ್ಥಿಸಲಾಗುತ್ತಿರುವ ಮುಕ್ತ ಸಂಸ್ಕ್ರಿತಿಗಳೆಲ್ಲ ಕಲಿಸುವುದಾದರೂ ಏನನ್ನು? ಸಿನಿಮಾ ಪರದೆಯ ಮೇಲೆ ಹಿರೋಯಿನ್‍ಗಳ ಬಟ್ಟೆಯನ್ನು ಹೀರೋ ಎಲ್ಲರೆದುರೇ ಒಂದು ಹಂತದವರೆಗೆ ಬಿಚ್ಚುತ್ತಾನೆ ಅಥವಾ ಹಿರೋಯಿನ್‍ಳ ಬಟ್ಟೆಯೇ ಅಷ್ಟು ಕನಿಷ್ಠ ಮಟ್ಟದಲ್ಲಿರುತ್ತದೆ. ಅಲ್ಲದೆ ಜಾಹೀರಾತುಗಳಲ್ಲಿ ಬರುವ ಮಾಡೆಲ್‍ಗಳ ಭಂಗಿಯು ಒಂದು ಕುಟುಂಬದ ಎಲ್ಲರೂ ಒಟ್ಟಿಗೆ ಕೂತು ನೋಡುವಂತೆಯೂ ಇರುವುದಿಲ್ಲ. ಇಂತಹ ಸಿನಿಮಾ ಮತ್ತು ಜಾಹೀರಾತುಗಳನ್ನು ವೀಕ್ಷಿಸುವ ಸಾವಿರಾರು ಮಂದಿಯಲ್ಲಿ ಒಬ್ಬರೋ ಇಬ್ಬರೋ ನಕಾರಾತ್ಮಕ ಪ್ರಚೋದನೆಗೆ ಒಳಗಾಗಲಾರರೆಂದು ಹೇಗೆ ಹೇಳುವುದು? ಅಂದ ಹಾಗೆ, ಮದ್ಯಪಾನಕ್ಕೇನೂ ಈ ದೇಶದಲ್ಲಿ ನಿಷೇಧ ಇಲ್ಲವಲ್ಲ. ಒಂದು ಕಡೆ ಲೈಂಗಿಕ ಪ್ರಚೋದನೆಗೆ ಪೂರಕವಾದ ದೃಶ್ಯಗಳು, ಇನ್ನೊಂದು ಕಡೆ ಮನುಷ್ಯರನ್ನು ಭ್ರಮೆಯಲ್ಲಿ ತೇಲಿಸುವ ಮದ್ಯ.. ಇವೆರಡೂ ಒಟ್ಟಾದರೆ ಕೆಡುಕಲ್ಲದೇ ಒಳಿತು ಉಂಟಾಗಲು ಸಾಧ್ಯವೇ? ಕೆಡುಕುಗಳಿಗೆ ಪ್ರಚೋದಕವಾಗುವ ಯಾವೆಲ್ಲ ಪ್ರಕಾರಗಳಿವೆಯೋ ಅವುಗಳಿಗೆಲ್ಲ ಸಮಾಜದಲ್ಲಿ ಮುಕ್ತ ಸ್ವಾತಂತ್ರ್ಯವನ್ನು ನೀಡುತ್ತಾ, ಅದರಿಂದ ಜನರು ಪ್ರಚೋದಿತರಾಗಬಾರದೆಂದು ಬಯಸುವುದು ಎಷ್ಟು ಪ್ರಾಯೋಗಿಕವಾಗಬಹುದು? ಅಂದಹಾಗೆ, ಒಂದು ಊರಿನಲ್ಲಿ ಮಲೇರಿಯದ ಹಾವಳಿ ಇದ್ದರೆ, ಸರಕಾರ ಮಲೇರಿಯಾಕ್ಕೆ ಮದ್ದು ಸರಬರಾಜು ಮಾಡುವ ಕೆಲಸವನ್ನಷ್ಟೇ ಮಾಡುವುದಲ್ಲವಲ್ಲ. ಸೊಳ್ಳೆಗಳ ಮೇಲೆ ರಾಸಾಯನಿಕವನ್ನು ಸಿಂಪಡಿಸುವ ಕೆಲಸವನ್ನೂ ಮಾಡುತ್ತದಲ್ಲವೇ? ಗೆರಟೆ, ಟೈರುಗಳಲ್ಲಿ ನೀರು ನಿಂತು ಕ್ರಿಮಿಗಳು ಉತ್ಪಾದನೆಯಾಗದಂತೆ ನೋಡಿಕೊಳ್ಳಬೇಕೆಂಬ ಮುನ್ನೆಚ್ಚರಿಕೆಯನ್ನೂ ಕೊಡುತ್ತದಲ್ಲವೇ? ಹೀಗಿರುವಾಗ ಅತ್ಯಾಚಾರ ಇಲ್ಲವೇ ಭ್ರಷ್ಟಾಚಾರದಂಥ ಕೆಡುಕುಗಳ ನಿರ್ಮೂಲನವು ಬರೇ ಕಠಿಣ ಶಿಕ್ಷೆಯಿಂದ ಸಾಧ್ಯವಾಗಬಹುದೇ? ಅದಕ್ಕೆ ಪ್ರಚೋದಕವಾಗುವ ಮೂಲ ಅಂಶಗಳಿಗೆ ಕಡಿವಾಣ ಹಾಕದಿದ್ದರೆ, ರೋಗಕಾರಕ ಸೊಳ್ಳೆಗಳು ರೋಗವನ್ನು ಹಂಚುತ್ತಲೇ ಇರಲಾರದೇ?
  ಕಾನೂನು ಮತ್ತು ಪೊಲೀಸರ ಕಣ್ಣು ತಪ್ಪಿಸಿ ಬದುಕಲು ಮನುಷ್ಯನಿಗೆ ಖಂಡಿತ ಸಾಧ್ಯವಿದೆ. ಆದ್ದರಿಂದಲೇ ಭ್ರಷ್ಟ ಮತ್ತು ಅತ್ಯಾಚಾರಿ ಮನಸ್ಥಿತಿಯನ್ನು ಇಲ್ಲವಾಗಿಸಲು ದೇವವಿಶ್ವಾಸದ ಅಗತ್ಯ ಎದ್ದು ಕಾಣುವುದು. ತಾನು ಎಲ್ಲಿದ್ದರೂ ಯಾವ ಆಲೋಚನೆಯನ್ನೇ ಮಾಡಿದರೂ ಅದನ್ನು ದೇವನು ಅರಿಯುತ್ತಾನೆ ಎಂಬ ಪ್ರಜ್ಞೆ ಮತ್ತು ಭೂಮಿಯ ಕಾನೂನು ಶಿಕ್ಷಿಸದಿದ್ದರೂ ನಾಳೆ ದೇವನು ಖಂಡಿತ ಶಿಕ್ಷಿಸುತ್ತಾನೆ ಎಂಬ ಅರಿವು ಮನುಷ್ಯನಲ್ಲಿ ದೃಢವಾಗುತ್ತಾ ಹೋದಂತೆ ಅಪರಾಧ ಕೃತ್ಯಗಳು ಕಡಿಮೆಯಾಗುತ್ತಾ ಹೋಗುತ್ತವೆ. ಈ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್‍ರ ಆತ್ಮಹತ್ಯೆಯನ್ನು ಕೆಡುಕುಗಳ ವಿರುದ್ಧದ ಒಂದು ಪ್ರತಿಭಟನೆಯಾಗಿ ನಾವು ಪರಿಗಣಿಸಬೇಕು. ಅವರದ್ದು ತಪ್ಪು ಹೆಜ್ಜೆ ನಿಜ. ಆದರೆ ಅವರು ಎತ್ತಿದ ಪ್ರಶ್ನೆ ಅತ್ಯಂತ ಸಕಾಲಿಕವಾದದ್ದು. ಓರ್ವ ಪ್ರಾಮಾಣಿಕ ಉಪನ್ಯಾಸಕನಲ್ಲಿ ಉಂಟಾಗುವ ಮಾನಸಿಕ ಗೊಂದಲದ ಸಂಕೇತವಾಗಿ ಅವರ ಆತ್ಮಹತ್ಯೆಯನ್ನು ನಾವು ಪರಿಗಣಿಸಬೇಕಾಗಿದೆ. ಹಾಗೆಯೇ, ಅವರ ಆತ್ಮಹತ್ಯೆಯನ್ನು ಎದುರಿಟ್ಟುಕೊಂಡು ಅವರೆತ್ತಿದ ಕೆಡುಕುಗಳ ನಿರ್ಮೂಲನೆಯ ಬಗ್ಗೆ ಪ್ರಾಮಾಣಿಕ ಚರ್ಚೆ ನಡೆಸಬೇಕಾಗಿದೆ.

No comments:

Post a Comment