Monday, 31 December 2012

'ನಿರ್ಭಯ'ಳಿಗೆ ಸಲ್ಲಿಸುವ ಸಂತಾಪದಲ್ಲಿ ತೋಮರ್ ಗೂ ಪಾಲಿರಲಿ..


   ಸಾವು ಎಲ್ಲರ ಪಾಲಿಗೆ ಸಹಜವೇ ಆಗಿದ್ದರೂ ಕೆಲವು ಸಾವುಗಳು ಪ್ರತಿಭಟನೆಗೆ, ಇನ್ನೊಬ್ಬರ ಸಾವಿಗೆ ಕಾರಣವಾಗಿ ಸುದ್ದಿಗೊಳಗಾಗುವುದಿದೆ. ದೆಹಲಿಯಲ್ಲಿ ಅತ್ಯಾಚಾರಕ್ಕೀಡಾದ ಯುವತಿ ‘ನಿರ್ಭಯ’ (ಮಾಧ್ಯಮಗಳೇ ಕೊಟ್ಟ ಹೆಸರು) ಡಿ. 29ರಂದು ಸಾವಿಗೀಡಾಗುವುದಕ್ಕಿಂತ 3 ದಿನಗಳ ಮೊದಲೇ ಪ್ರತಿಭಟನಾಕಾರರ ಹಲ್ಲೆಯಿಂದ ಸುಭಾಶ್ಚಂದ್ರ ತೋಮರ್ ಎಂಬ ಪೊಲೀಸ್ ಕಾನ್‍ಸ್ಟೇಬಲ್ ಸಾವಿಗೀಡಾಗಿದ್ದರು. ಹೆಣ್ಣಾಗಿರುವುದೇ ನಿರ್ಭಯಳ ಅಪರಾಧವಾಗಿದ್ದರೆ ಕಾನೂನು ಪಾಲನೆಗೆ ಮುಂದಾದುದೇ ತೋಮರ್‍ರ ಅಪರಾಧವಾಗಿತ್ತು. ನಿರ್ಭಯಳಿಗೆ ತಂದೆ, ತಾಯಿ, ಸಹೋದರಿಯರಿರುವಂತೆಯೇ ತೋಮರ್‍ಗೂ ಪತ್ನಿ, ಮಕ್ಕಳು, ಕುಟುಂಬವಿದೆ. ಒಂದು ರೀತಿಯಲ್ಲಿ ಎರಡೂ ಕುಟುಂಬಗಳು ಸಮಾನ ನೋವಿಗೆ ಒಳಗಾಗಿವೆ. ಕಣ್ಣೀರು ಹರಿಸಿವೆ. ದುರಂತ ಏನೆಂದರೆ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಘೋಷಿಸುವವರ ಮಧ್ಯೆ ತೋಮರ್‍ರ ನೋವು ಎಲ್ಲೂ ಕಾಣಿಸುತ್ತಲೇ ಇಲ್ಲ. ನಿರ್ಭಯಳ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳು ತಪ್ಪನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಆದರೆ ತೋಮರ್‍ರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ತಪ್ಪನ್ನೂ ಒಪ್ಪಿಕೊಳ್ಳುತ್ತಿಲ್ಲ. ತೋಮರ್‍ರ ಸಾವನ್ನು ಸಹಜ ಸಾವೆಂದು ಬಿಂಬಿಸಲು ಅವರು ವಿವಿಧ ನೆಪಗಳನ್ನು ಹುಡುಕುತ್ತಿದ್ದಾರೆ.
  ನಿಜವಾಗಿ, ಪ್ರತಿಭಟನಾಕಾರರಲ್ಲಿ ಕೆಲವು ಮೂಲಭೂತ ಗುಣಗಳು ಇದ್ದಿರಲೇಬೇಕು. ಇಲ್ಲದಿದ್ದರೆ ಪ್ರತಿಭಟನಾಕಾರರ ಪ್ರಾಮಾಣಿಕತೆಯೇ ಪ್ರಶ್ನೆಗೀಡಾಗುತ್ತದೆ. ಇಷ್ಟಕ್ಕೂ ಒಂದು ಅತ್ಯಾಚಾರಕ್ಕೆ ಇನ್ನೊಂದು ಅತ್ಯಾಚಾರ ಪರಿಹಾರವಾಗುತ್ತದೆಯೇ? ಪೊಲೀಸರಲ್ಲಿ ಕೆಟ್ಟವರಿದ್ದಾರೆ ಎಂಬ ಮಾತ್ರಕ್ಕೇ ಎಲ್ಲ ಪೊಲೀಸರನ್ನೂ ಕೆಟ್ಟವರೆಂಬಂತೆ ನೋಡಬೇಕಾದ ಅಗತ್ಯವೂ ಇಲ್ಲವಲ್ಲವೇ? ಸದ್ಯದ ಪರಿಸ್ಥಿತಿ ಹೇಗಿದೆಯೆಂದರೆ, ಪ್ರತಿಭಟನೆಯ ವೇಳೆ ಪೊಲೀಸರು ಹಲ್ಲೆಗೋ ಸಾವಿಗೋ ಒಳಗಾದರೆ ಅದನ್ನು ಗಂಭೀರವಾಗಿ ಪರಿಗಣಿಸುವ ವಾತಾವರಣ ಮಾಧ್ಯಮಗಳಲ್ಲಾಗಲಿ, ಪ್ರತಿಭಟನಾಕಾರರಲ್ಲಾಗಲಿ ಕಾಣಿಸುತ್ತಲೇ ಇಲ್ಲ. ಅಂದಹಾಗೆ, ಎಲ್ಲೇ ಪ್ರತಿಭಟನೆ, ಧರಣಿ, ಕೋಮುಗಲಭೆ, ಏನೇ ಆಗಲಿ ಅಲ್ಲಿಗೆ ಮೊತ್ತಮೊದಲು ತಲುಪುವುದು ಸಾಮಾನ್ಯ ಪೊಲೀಸ್ ಪೇದೆಗಳು. ಆಕ್ರೋಶಿತ ಗುಂಪುಗಳ ಕಲ್ಲಿನೇಟಿಗೆ ಮೊದಲು ಗುರಿಯಾಗುವುದೂ ಅವರೇ. ಪೊಲೀಸ್ ಕಮೀಷನರೋ ಅಥವಾ ಇನ್ನಾರೋ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಾಗ ಆಕ್ರೋಶಿತ ಗುಂಪುಗಳ ಬತ್ತಳಿಕೆಯಲ್ಲಿರುವ ಕಲ್ಲುಗಳು ಖಾಲಿಯಾಗಿರುತ್ತವೆ. ಇಷ್ಟಾದರೂ ಪೊಲೀಸರು ಸಾರ್ವಜನಿಕರ ಅನುಕಂಪಕ್ಕೆ ಒಳಗಾಗುವುದು ಕಡಿಮೆ. ಇದಕ್ಕೆ ಕಾರಣವೂ ಇದೆ. ಈ ದೇಶದ ಅತ್ಯಂತ ಭ್ರಷ್ಟ ಇಲಾಖೆಯಲ್ಲಿ ಪೊಲೀಸ್ ಇಲಾಖೆಯೂ ಒಂದು. ಅತ್ಯಾಚಾರಕ್ಕೀಡಾದ ಯುವತಿ ದೂರು ಕೊಡಲು ಪೊಲೀಸ್ ಠಾಣೆಗೆ ಹೋದರೆ ಆಕೆಯನ್ನೇ ಅತ್ಯಾಚಾರಕ್ಕೊಳಪಡಿಸುವ ಕ್ರೂರಿಗಳೂ ಪೊಲೀಸ್ ಇಲಾಖೆಯಲ್ಲಿದ್ದಾರೆ. 100 ರೂಪಾಯಿ ಪಿಕ್ ಪಾಕೆಟ್ ಮಾಡಿ ಸಿಕ್ಕಿ ಬಿದ್ದವನನ್ನು ಠಾಣೆಯಲ್ಲೇ  ಕೊಲೆ ಮಾಡುವ ಪೊಲೀಸರಿದ್ದಾರೆ. ಕೋಮು ಗಲಭೆಯ ಸಂದರ್ಭದಲ್ಲಿ ನಿರ್ದಿಷ್ಟ ಕೋಮಿನ ಪಕ್ಷಪಾತಿಯಾಗಿ ಇಡೀ ಗಲಭೆಯ ಬಗ್ಗೆ ತಪ್ಪು ವರದಿ ಕೊಡುವ ಖಾಕಿ ಸಮವಸ್ತ್ರಧಾರಿಗಳಿದ್ದಾರೆ. ದುಡ್ಡು ಪಡಕೊಂಡು ನ್ಯಾಯವನ್ನೇ ನಿರಾಕರಿಸುವವರಿದ್ದಾರೆ. ಸಾಮಾನ್ಯ ಕೂಲಿ ಕಾರ್ಮಿಕನೊಬ್ಬ ಠಾಣೆಯನ್ನು ಹತ್ತಬೇಕಾದರೆ ಇನ್‍ಫ್ಲುಯೆನ್ಸ್ ಗೆ ಯಾರನ್ನಾದರೂ ಜೊತೆಗೆ ಠಾಣೆಗೆ ಕೊಂಡೊಯ್ಯಲೇಬೇಕು ಎಂಬ ವಾತಾವರಣವನ್ನು ನಿರ್ಮಿಸಿದವರಿದ್ದಾರೆ. ಆದರೂ ಎಲ್ಲ ಪೊಲೀಸರೂ ಹಾಗಲ್ಲವಲ್ಲ. ನಿರ್ಭಯಳ ಮೇಲೆ ಅತ್ಯಾಚಾರ ಮಾಡಿದವರನ್ನು ಮುಂದಿಟ್ಟುಕೊಂಡು ಎಲ್ಲ ಪುರುಷರೂ ಹೀಗೆಯೇ ಎಂದು ಹೇಳುವುದು ಹೇಗೆ ತಪ್ಪೋ ಹಾಗೆಯೇ ಇದೂ ಅಲ್ಲವೇ?
  ಅತ್ಯಾಚಾರದ ವಿರುದ್ಧ ದೇಶಾದ್ಯಂತ ಸಂಚಲನ ಮೂಡಿಸುವುದಕ್ಕೆ ನಿರ್ಭಯಳ ಸಾವು ಕಾರಣವಾದಂತೆಯೇ, ಪ್ರತಿಭಟನೆಗಳು ಹೇಗಿರಬೇಕು ಎಂಬ ಬಗ್ಗೆ ಒಂದೊಳ್ಳೆಯ ಚರ್ಚೆಗೆ ತೋಮರ್‍ರ ಸಾವೂ ನೆಪವಾಗಬೇಕು. ಪ್ರತಿಭಟನೆ ಅಂದರೆ, ಜನರ ಕೈಯಲ್ಲಿ ಕಲ್ಲು, ಸಲಾಕೆಗಳು ಇರಲೇಬೇಕೆಂದೇನೂ ಇಲ್ಲವಲ್ಲ. ಪ್ರತಿಭಟಿಸುವುದು ಯಾರ ವಿರುದ್ಧ ಮತ್ತು ಯಾವುದರ ವಿರುದ್ಧ ಎಂಬುದರ ಕುರಿತು ಸ್ಪಷ್ಟ ತಿಳುವಳಿಕೆ ಇರುವ ಮಂದಿ ಆಯುಧಗಳನ್ನು ಬಳಸುವುದಕ್ಕೆ ಸಾಧ್ಯವೂ ಇಲ್ಲ. ಹಾಗೆಯೇ, ತೋಮರ್‍ರ ಸಾವಿಗೆ ತಾವೆಷ್ಟು ಕಾರಣರು ಎಂಬ ಬಗ್ಗೆ ಪೊಲೀಸ್ ಇಲಾಖೆಯೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ತಮ್ಮನ್ನು ಜನರೇಕೆ ಅನುಮಾನದಿಂದ ನೋಡುತ್ತಾರೆ ಎಂಬುದಕ್ಕೆ ಅದು ಕಾರಣಗಳನ್ನು ಕಂಡುಕೊಳ್ಳಬೇಕು. ಇವತ್ತು ಯಾವುದೇ ಒಂದು ಪೊಲೀಸ್ ಠಾಣೆಗೆ, ತಾನು ನೂರಕ್ಕೆ ನೂರು ಪ್ರಾಮಾಣಿಕ ಎಂದು ಬೋರ್ಡು ತಗುಲಿಸಿಕೊಳ್ಳಲು ಸಾಧ್ಯವೇ? ಒಂದು ವೇಳೆ ಹಾಗೆ ಬೋರ್ಡು ಹಾಕಿದರೂ ಅದನ್ನು ಜನಸಾಮಾನ್ಯರು ನಂಬಿಯಾರೇ? ಇಂಥದ್ದೊಂದು ಕೆಟ್ಟ ಗುರುತಿನಿಂದ ಹೊರಬರಲು ಎಲ್ಲ ಠಾಣೆಗಳೂ ಸಿದ್ಧವಾಗಬೇಕಾದ ಅಗತ್ಯವಿದೆ. ಜನಸಾಮಾನ್ಯರು ಪೊಲೀಸರನ್ನು ಕಾಣುವಾಗ ಕಲ್ಲಿನ ಬದಲು ಹೂವನ್ನು ಎತ್ತಿಕೊಳ್ಳಬೇಕಾದರೆ ಹೂವಿನಂಥ ಮನಸ್ಸು ಮತ್ತು ವರ್ಚಸ್ಸು ಪೊಲೀಸರಿಗೂ ಇರಬೇಕಾಗುತ್ತದೆ. ಅಂಥ ವರ್ಚಸ್ಸನ್ನು ಪೊಲೀಸ್ ಇಲಾಖೆ ಸದ್ಯ ಕಳ ಕೊಂಡದ್ದರಿಂದಲೇ ತೋಮರ್‍ರಂಥ ಕಾನ್‍ಸ್ಟೇಬಲ್‍ಗಳ ಸಾವು ಜನರನ್ನು ತಲುಪಲು ವಿಫಲವಾಗಿರುವುದು. ಆದ್ದರಿಂದ ಪ್ರಾಮಾಣಿಕ ಪೊಲೀಸರು ತಮ್ಮ ಸಹೋದ್ಯೋಗಿಗಳ ಅಪ್ರಾಮಾಣಿಕತೆ, ಅನ್ಯಾಯ, ಕೋಮುವಾದಿ ಮನಸ್ಥಿತಿಯ ವಿರುದ್ಧ ಧ್ವನಿಯೆತ್ತುವ ಮೂಲಕ ಕಳೆದ ಹೋಗಿರುವ ಗೌರವವನ್ನು ಪೊಲೀಸ್ ಇಲಾಖೆಗೆ ಮರಳಿ ದೊರಕಿಸಲು ಪ್ರಯತ್ನಿಸಬೇಕಾಗಿದೆ. ನಿರ್ಭಯಳ ಜೀವ ಎಷ್ಟು ಅಮೂಲ್ಯವೋ ಅಷ್ಟೇ ತೋಮರ್‍ರ ಜೀವವೂ ಅಮೂಲ್ಯ ಎಂದು ಜನಸಾಮಾನ್ಯರೂ ಘೋಷಿಸುವಂಥ ವಾತಾವರಣವನ್ನು ತಮ್ಮ ವರ್ತನೆಯ ಮುಖಾಂತರ ಪೊಲೀಸರು ಸಾಬೀತುಪಡಿಸಬೇಕಾಗಿದೆ.
  ಏನೇ ಆಗಲಿ, ನಿರ್ಭಯ ಮತ್ತು ತೋಮರ್‍ರ ಸಾವು, ಈ ದೇಶ ಗಮನಹರಿಸಲೇಬೇಕಾದ ಎರಡು ಸಂಗತಿಗಳತ್ತ ಬೊಟ್ಟು ಮಾಡಿವೆ. ನಿರ್ಭಯಳ ಸಾವು ಅತ್ಯಾಚಾರಿಗಳ ವಿರುದ್ಧ ಪ್ರಬಲ ಕಾನೂನಿನ ರಚನೆಗೆ ಕಾರಣವಾಗುವಂತೆಯೇ ತೋಮರ್‍ರ ಸಾವು ಪೊಲೀಸ್ ಇಲಾಖೆಯ ಸುಧಾರಣೆಗೂ ಕಾರಣವಾಗಬೇಕು. ಹಾಗೆಯೇ ಪ್ರತಿಭಟನಾಕಾರರ ಮನಸ್ಥಿತಿಯ ಬದಲಾವಣೆಗೂ ಇದು ಹೇತುವಾಗಬೇಕು. ನಮಗೆ ನಿರ್ಭಯಳೂ ಬೇಕು, ತೋಮರ್‍ರೂ ಬೇಕು. ಯಾರೂ ಅನ್ಯಾಯವಾಗಿ ಸಾವಿಗೀಡಾಗಬಾರದು.

No comments:

Post a Comment