Monday 7 January 2013

'ನಿರ್ಭಯ' ತೆರೆದ ಬಾಗಿಲನ್ನು ಮುಚ್ಚದಿರೋಣ


ಹೆಣ್ಣು ಕಳೆದ ಮೊರ್ನಾಲ್ಕು  ವಾರಗಳಿಂದ ಮಾಧ್ಯಮಗಳ ಮುಖಪುಟದಲ್ಲಿದ್ದಾಳೆ. ಆಕೆಯನ್ನು ಕೇಂದ್ರೀಕರಿಸಿ ಪತ್ರಿಕೆಗಳಲ್ಲಿ ಸುದ್ದಿ ರಚನೆಯಾಗತೊಡಗಿವೆ. ರಾಜಕಾರಣಿಗಳು, ನ್ಯಾಯಾಧೀಶರು, ಟಿ.ವಿ. ಚಾನೆಲ್‍ಗಳು.. ಎಲ್ಲರೂ ಹೆಣ್ಣಿನ ಬಗ್ಗೆ ಮಾತಾಡತೊಡಗಿದ್ದಾರೆ. ಧರ್ಮಗಳಲ್ಲಿ ಹೆಣ್ಣಿನ ಸ್ಥಾನ-ಮಾನ, ಆಧುನಿಕ ಜಗತ್ತಿನಲ್ಲಿ ಹೆಣ್ಣು ಸಾಗುತ್ತಿರುವ ದಿಕ್ಕು, ಆಕೆಯ ಬಟ್ಟೆ, ವರ್ತನೆ, ಪಾಶ್ಚಾತ್ಯ ಸಂಸ್ಕ್ರಿತಿಯ ಸರಿ-ತಪ್ಪುಗಳು, ಸಡಿಲ ಕಾನೂನುಗಳು.. ಎಲ್ಲವೂ ಚರ್ಚೆಗೊಳಗಾಗುತ್ತಿವೆ. ನಿಜವಾಗಿ, ಹೆಣ್ಣು ಹೀಗೆ ದಿಢೀರ್ ಆಗಿ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಂಡದ್ದು ಪುಕ್ಕಟೆಯಾಗಿ ಅಲ್ಲ. ಪ್ರತಿ 20 ನಿಮಿಷಗಳಿಗೊಮ್ಮೆ ಅತ್ಯಾಚಾರಕ್ಕೆ ಒಳಗಾಗುತ್ತಾ, 'ಗಂಭೀರ ಸಮಸ್ಯೆಗಳ ಪಟ್ಟಿಯಲ್ಲಿ ತನ್ನನ್ನೂ ಸೇರಿಸಿಕೊಳ್ಳಿ..' ಎಂದು ದೀರ್ಘ ಸಮಯದಿಂದ ಹೆಣ್ಣು ಮೊರೆಯಿಡುತ್ತಿದ್ದಳು. ಸದ್ಯ ಆ 20 ನಿಮಿಷಗಳು 15 ನಿಮಿಷಗಳಾಗಿ ಬದಲಾಗಿವೆ. ಒಂದು ವೇಳೆ 'ನಿರ್ಭಯ'ಳ ಮೇಲಿನ ಅತ್ಯಾಚಾರವು ದೆಹಲಿ ಬಿಟ್ಟು ದೇಶದ ಇನ್ನಾವುದೋ ಭಾಗದಲ್ಲಿ ಆಗಿರುತ್ತಿದ್ದರೆ ಪತ್ರಿಕೆಗಳ ಮುಖಪುಟದಲ್ಲಿ ಅದಕ್ಕೆ ಜಾಗ ಸಿಗುವ ಸಾಧ್ಯತೆಯೇ ಇರಲಿಲ್ಲ. ಈ ಮಟ್ಟದ ಪ್ರತಿಭಟನೆಗಳಾಗಲಿ, ಕಾನೂನು ರಚನೆಯ ಪ್ರಯತ್ನಗಳಾಗಲೀ ಆಗುತ್ತಲೂ ಇರಲಿಲ್ಲ. ವಿಶೇಷ ಏನೆಂದರೆ, 'ನಿರ್ಭಯ' ಈಗ ಎಲ್ಲರನ್ನೂ ಎಚ್ಚರಗೊಳಿಸಿದ್ದಾಳೆ. ಹೆಣ್ಣು ಮತ್ತು ಗಂಡಿನ ನಡುವೆ ಇರುವ ವ್ಯತ್ಯಾಸ, ಇರಲೇಬೇಕಾದ ಅಂತರಗಳ ಬಗ್ಗೆ ಧೈರ್ಯದಿಂದ ಮಾತಾಡುವ ವಾತಾವರಣವನ್ನು ಸೃಷ್ಟಿ ಮಾಡಿದ್ದಾಳೆ. ಈ ಮೊದಲು ಹೆಣ್ಣಿನ ಉಡುಪನ್ನು ವಿಮರ್ಶಿಸುವುದನ್ನು ಮಹಿಳಾ ಆಯೋಗಗಳು ಮತ್ತು ಫೆಮಿನಿಸ್ಟ್ ಗಳು ಅಪರಾಧವೆಂಬಂತೆ ಪರಿಗಣಿಸುತ್ತಿದ್ದರು.  ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಹೆಣ್ಣಿನ ಪಾತ್ರವೂ ಇದೆ ಎಂಬ ಬರಹ, ಪತ್ರಗಳನ್ನು ಪ್ರಕಟಿಸುವ ಧೈರ್ಯವನ್ನು ಪತ್ರಿಕೆಗಳು ಮಾಡಿದ್ದೂ ಕಡಿಮೆ. ಹಾಗಂತ ಅಂಥ ಬರಹಗಳ ಬಗ್ಗೆ ಸಂಪಾದಕೀಯ ಮಂಡಳಿಗೆ ಸಹಮತ ಇಲ್ಲ ಎಂದಲ್ಲ. ಸುಮ್ಮನೆ ರಿಸ್ಕ್ ಯಾಕೆ, ಮಹಿಳಾ ವಿರೋಧಿಗಳೆಂಬ ಹಣೆಪಟ್ಟಿಯನ್ನು ಯಾಕೆ ಹಚ್ಚಿಕೊಳ್ಳಬೇಕು ಎಂಬ ‘ಸುರಕ್ಷಿತ’ ನಿಲುವಿಗೆ ಹೆಚ್ಚಿನ ಪತ್ರಿಕೆಗಳು ಅಂಟಿಕೊಂಡಿದ್ದವು. ಆದರೆ ಸದ್ಯ ಈ ಮಡಿವಂತಿಕೆಯನ್ನು 'ನಿರ್ಭಯ' ಮುರಿದು ಹಾಕುವಲ್ಲಿ ಯಶಸ್ವಿಯಾಗಿದ್ದಾಳೆ. ಮಹಿಳೆಯರೇ ಮಹಿಳೆಯರ ಜೀವನ ವಿಧಾನವನ್ನು ವಿಮರ್ಶಿಸುವ ಧೈರ್ಯವನ್ನು ತೋರುತ್ತಿದ್ದಾರೆ. 'ಲೈಂಗಿಕ ದೌರ್ಜನ್ಯಕ್ಕೆ ಪುರುಷರಷ್ಟೇ ಮಹಿಳೆಯರೂ ಜವಾಬ್ದಾರರು..' ಎಂದು ಛತ್ತೀಸ್‍ಗಢ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ವಿಭಾ ರಾವ್ ಅಭಿಪ್ರಾಯಪಟ್ಟಿದ್ದಾರೆ. ಹೆಣ್ಣಿನ ಉಡುಪು ಮತ್ತು ವರ್ತನೆಗಳು ಪುರುಷರಿಗೆ ತಪ್ಪು ಸಂದೇಶವನ್ನು ಕೊಡುವಂತಿರುತ್ತವೆ, ಹೆಣ್ಣು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ..' ಎಂದಿದ್ದಾರೆ. ಮಮತಾ ಬ್ಯಾನರ್ಜಿಯವರೂ ಇಂಥದ್ದೇ ಅರ್ಥ ಬರುವ ಮಾತಾಡಿದ್ದಾರೆ. ಪುದುಚೇರಿ ಸರಕಾರವಂತೂ ತನ್ನ ಶಿಕ್ಷಣ ನೀತಿಗಳಲ್ಲೇ ಬದಲಾವಣೆ ತರಲು ನಿರ್ಧರಿಸಿದೆ. ಹುಡುಗ ಮತ್ತು ಹುಡುಗಿಯರಿಗೆ ಬೇರೆ ಬೇರೆ ಶಾಲಾ ಬಸ್‍ಗಳನ್ನು ವ್ಯವಸ್ಥೆ ಮಾಡುವುದು; ಹೆಣ್ಣು ಮಕ್ಕಳು ಸಮವಸ್ತ್ರದ ಮೇಲೆ ಓವರ್ ಕೋಟನ್ನು (ಮೇಲು ಹೊದಿಕೆ) ಧರಿಸುವುದು; ಮೊಬೈಲನ್ನು ನಿರ್ಬಂಧಿಸುವುದು; ಹುಡುಗ, ಹುಡುಗಿಯರ ನಡುವಿನ ಸಂಪರ್ಕವನ್ನು ಸಾಕಷ್ಟು ಮಟ್ಟಿಗೆ ಕಡಿತಗೊಳಿಸುವುದು.. ಮುಂತಾದ ಸುಧಾರಣಾ ನೀತಿಗಳ ಜಾರಿಗಾಗಿ ಅದು ಗಂಭೀರ ಪ್ರಯತ್ನಕ್ಕಿಳಿದಿದೆ.
  ಒಂದು ರೀತಿಯಲ್ಲಿ ನಿರ್ಭಯಳ ಸಾವು ನಿರ್ಭಯ ಸಮಾಜವೊಂದರ ರಚನೆಯ ಬಗ್ಗೆ ಗಂಭೀರ ಚರ್ಚೆಯೊಂದನ್ನು ಹುಟ್ಟು ಹಾಕಲು ಯಶಸ್ವಿಯಾಗಿದೆ. ಇಷ್ಟಕ್ಕೂ ಹೆಣ್ಣಿಗೆ ಒಂದಷ್ಟು ಹಿತವಚನಗಳನ್ನು ಹೇಳುವುದು, ಪುರುಷರ ತಪ್ಪುಗಳನ್ನು ಖಂಡಿಸುತ್ತಲೇ ಹೆಣ್ಣಿನ ಅತಿರೇಕಗಳ ಬಗ್ಗೆಯೂ ಮಾತಾಡುವುದು ಯಾಕೆ ಪುರಾತನ ಅನ್ನಿಸಿಕೊಳ್ಳಬೇಕು? ಯಾವುದೇ ಒಂದು ಸಮಸ್ಯೆಯ ಬಗ್ಗೆ ಚರ್ಚಿಸುವಾಗ ಅದರ ಎರಡೂ ಮಗ್ಗುಲುಗಳನ್ನು ಚರ್ಚಿಸಬೇಕಾದುದು ಅಗತ್ಯವಲ್ಲವೇ? ಮತ್ತೇಕೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಒಂದು ಮಗ್ಗುಲು ಮಾತ್ರ ಚರ್ಚೆಗೊಳಗಾಗುವುದು? ಹೆಣ್ಣಿನ ಉಡುಪು, ಜೀವನ ವಿಧಾನ, ಸ್ವಚ್ಛಂದ ಬೆರೆಯುವಿಕೆಗಳನ್ನೆಲ್ಲ ವಿಮರ್ಶೆಗೊಡ್ಡುವುದು ಮಹಿಳಾ ವಿರೋಧಿಯೆಂದು ಯಾಕೆ ಗುರುತಿಸಿಕೊಳ್ಳಬೇಕು?  ವಿಮರ್ಶೆ, ಟೀಕೆಗಳಿಗೆ ಎಲ್ಲರೂ ಎಲ್ಲ ಕ್ಷೇತ್ರಗಳೂ ಮುಕ್ತವಾಗಿರುವುದೇ ಸುಧಾರಣೆಯ ದೃಷ್ಟಿಯಿಂದ ಹೆಚ್ಚು ಉತ್ತಮವಲ್ಲವೇ?
  ಆದ್ದರಿಂದಲೇ, ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಸದ್ಯ ಕಾಣಿಸಿಕೊಂಡಿರುವ ಚರ್ಚೆಗಳು ಹೆಚ್ಚು ಇಷ್ಟವಾಗುವುದು. ಈ ಮೊದಲು ಮಾಧ್ಯಮಗಳು ಹೆಣ್ಣನ್ನು ಸೌಂದರ್ಯದ ಕಾರಣಕ್ಕಾಗಿ ಮಾತ್ರ ಚರ್ಚೆಗೆತ್ತಿಕೊಳ್ಳುತ್ತಿದ್ದುವು. ಸೆಲೆಬ್ರಿಟಿಗಳಿಗಾಗಿ ಪ್ರತ್ಯೇಕ ಪುಟಗಳನ್ನು ಮೀಸಲಿಟ್ಟು, ಅಲ್ಲಿ ಅವರ ಕಾಲು, ಕೈ, ಮೊಗುಗಳನ್ನು ವರ್ಣಿಸುತ್ತಾ, ಅವರಿಗೆ ಯಾರ ಯಾರ ಜೊತೆ ಯಾವ್ಯಾವ ಬಗೆಯ ಅಫೇರ್‍ಗಳಿವೆ ಎಂಬುದನ್ನೆಲ್ಲಾ 'ಗಂಭೀರ' ಸುದ್ದಿಗಳಂತೆ ಪ್ರಕಟಿಸುತ್ತಿದ್ದುವು. ಒಂದು ವೇಳೆ ಪತ್ರಿಕೆಗಳ ಮುಖಪುಟದಲ್ಲಿ ಹೆಣ್ಣೊಬ್ಬಳು ಕಾಣಿಸಿಕೊಳ್ಳಬೇಕಾದರೆ ಒಂದೋ ಆಕೆ ಸೆಲೆಬ್ರಿಟಿಯಾಗಿರಬೇಕು ಇಲ್ಲವೇ ರಾಜಕಾರಣಿಯಾಗಿರಬೇಕು ಎಂಬಂಥ ವಾತಾವರಣವನ್ನು ಅವು ಸೃಷ್ಟಿಸಿದ್ದುವು. ಸೆಲೆಬ್ರಿಟಿಗಳು ಎಲ್ಲಾದರೂ ಸಿನಿಮಾ ಚಿತ್ರೀಕರಣಕ್ಕೆ ಹೋಗಿ ಅಲ್ಲಿ ಅಭಿಮಾನಿಯೊಬ್ಬ ಅಸಭ್ಯವಾಗಿ ವರ್ತಿಸಿದರೆ ಅದು ಮುಖಪುಟದಲ್ಲಿ ಸುದ್ದಿಯಾಗುತ್ತಿತ್ತೇ ಹೊರತು, ಸಾಮಾನ್ಯ ಹೆಣ್ಣು ಮಗಳೊಬ್ಬಳು ಅತ್ಯಾಚಾರಕ್ಕೀಡಾಗಿ ಸಾವಿಗೀಡಾದರೂ ಒಳಪುಟದಲ್ಲಿ ಒಂದು ಕಾಲಮ್‍ನ ಸುದ್ದಿಯಾಗಿ ಪ್ರಕಟವಾಗುತ್ತಿತ್ತು. ಹೆಣ್ಣೆಂದರೆ, ಅದು ಸಿನಿಮಾ ತಾರೆ ಮತ್ತು ಹೆಣ್ಣಿನ ಸಮಸ್ಯೆ ಎಂದರೆ ಅದು ಸಿನಿಮಾ ತಾರೆಯರ ಸಮಸ್ಯೆ ಎಂಬ ವಾತಾವರಣ ಇದ್ದುದರಿಂದಲೇ ಸಾಮಾನ್ಯ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, 'ನಿರ್ಭಯ'ಳ ಸಾವಿನ ವರೆಗೆ ಸುದ್ದಿಯಾಗದೇ ಸತ್ತು ಹೋಗುತ್ತಿದ್ದುದು. ಇದೀಗ ಪತ್ರಿಕೆಗಳ ಧೋರಣೆಯಲ್ಲಿ ಯಾವ ಮಟ್ಟದ ಬದಲಾವಣೆಯಾಗಿದೆಯೆಂದರೆ, 8ನೇ ತರಗತಿಯಿಂದ ಹೆಣ್ಣು ಮತ್ತು ಗಂಡು ಮಕ್ಕಳ ಶಿಕ್ಷಣ ಪ್ರತ್ಯೇಕವಾಗಿ ನಡೆಯಬೇಕು ಎಂದು ಅಭಿಪ್ರಾಯ ಪಡುವ 'ಪತ್ರ'ಗಳು ‘ದಿ ಹಿಂದೂ'ವಿನಂಥ ಪತ್ರಿಕೆಗಳಲ್ಲಿ ಪ್ರಕಟವಾಗುವಷ್ಟು. ಇದನ್ನು ಖಂಡಿತ ಸ್ವಾಗತಿಸಬೇಕು.
  ಏನೇ ಆಗಲಿ, 'ನಿರ್ಭಯ'ಳ ಸಾವು, ಸಾವಿಗೀಡಾಗಿರುವ ಮೌಲ್ಯಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಈ ವರೆಗೆ ಮಾತಾಡುವುದಕ್ಕೆ ಯಾರು ಮಡಿವಂತಿಕೆ ತೋರುತ್ತಿದ್ದರೋ ಅವರೆಲ್ಲ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವಷ್ಟು ಈ ಚರ್ಚಾವಲಯ ವಿಸ್ತಾರವಾಗುತ್ತಿದೆ. ಮಾಧ್ಯಮಗಳ ಧೋರಣೆಯಲ್ಲೂ ಒಂದು ಬಗೆಯ ಬದಲಾವಣೆ ಕಾಣಿಸುತ್ತಿದೆ. ಸಾಮಾನ್ಯ ಹೆಣ್ಣು ಮಗಳು ಪತ್ರಿಕೆಗಳ ಮುಖಪುಟದಲ್ಲಿ ಚರ್ಚೆಗೊಳಗಾಗುತ್ತಿದ್ದಾಳೆ. ಆಕೆಯ ಮೇಲಿನ ದೌರ್ಜನ್ಯಗಳು ಮುಖಪುಟದ ವಸ್ತುವಾಗುವಷ್ಟು ಮಹತ್ವಪೂರ್ಣ ಅನ್ನಿಸಿಕೊಳ್ಳುತ್ತಿವೆ. ಆಧುನಿಕ ಮಹಿಳೆಯರ ಬಗ್ಗೆ ಆಧುನಿಕ ಮಹಿಳೆಯರೇ ಮಾತಾಡುವಂಥ; ಹೆಣ್ಣಿನ ಬಟ್ಟೆ, ಸಂಸ್ಕ್ರಿತಿ, ಜೀವನ ಕ್ರಮಗಳ ಬಗ್ಗೆ ಚರ್ಚಿಸುವಂಥ ಮುಕ್ತ ವಾತಾವರಣ ಸೃಷ್ಟಿಯಾಗುತ್ತಿದೆ. ನಿಜವಾಗಿ, ನಿರ್ಭಯ ಸಮಾಜವೊಂದು ತಯಾರಾಗಬೇಕಾದರೆ ಇಂಥದ್ದೊಂದು ಮುಕ್ತ ಚರ್ಚೆ ನಡೆಯಬೇಕಾದುದು ಅತೀ ಅಗತ್ಯ. 'ನಿರ್ಭಯ'ಳ ಮೊಲಕ ತೆರೆದುಕೊಂಡ ಈ ಚರ್ಚೆಯ ಬಾಗಿಲು ಇನ್ನಷ್ಟು ದಿನ ತೆರೆದಿರಲಿ ಮತ್ತು ನಿರ್ಮಲ ಸಮಾಜವನ್ನು ಕಟ್ಟುವಲ್ಲಿ ಈ ಚರ್ಚೆಗಳು ಸಹಾಯಕವಾಗಲಿ.

1 comment:

  1. "ಹೆಣ್ಣಿನ ಉಡುಪು ಮತ್ತು ವರ್ತನೆಗಳು ಪುರುಷರಿಗೆ ತಪ್ಪು ಸಂದೇಶವನ್ನು ಕೊಡುವಂತಿರುತ್ತವೆ, ಹೆಣ್ಣು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ..' ಎಂದಿದ್ದಾರೆ. ಮಮತಾ ಬ್ಯಾನರ್ಜಿಯವರೂ ಇಂಥದ್ದೇ ಅರ್ಥ ಬರುವ ಮಾತಾಡಿದ್ದಾರೆ. ಪುದುಚೇರಿ ಸರಕಾರವಂತೂ ತನ್ನ ಶಿಕ್ಷಣ ನೀತಿಗಳಲ್ಲೇ ಬದಲಾವಣೆ ತರಲು ನಿರ್ಧರಿಸಿದೆ. ಹುಡುಗ ಮತ್ತು ಹುಡುಗಿಯರಿಗೆ ಬೇರೆ ಬೇರೆ ಶಾಲಾ ಬಸ್‍ಗಳನ್ನು ವ್ಯವಸ್ಥೆ ಮಾಡುವುದು; ಹೆಣ್ಣು ಮಕ್ಕಳು ಸಮವಸ್ತ್ರದ ಮೇಲೆ ಓವರ್ ಕೋಟನ್ನು (ಮೇಲು ಹೊದಿಕೆ) ಧರಿಸುವುದು; ಮೊಬೈಲನ್ನು ನಿರ್ಬಂಧಿಸುವುದು; ಹುಡುಗ, ಹುಡುಗಿಯರ ನಡುವಿನ ಸಂಪರ್ಕವನ್ನು ಸಾಕಷ್ಟು ಮಟ್ಟಿಗೆ ಕಡಿತಗೊಳಿಸುವುದು.. ಮುಂತಾದ ಸುಧಾರಣಾ ನೀತಿಗಳ ಜಾರಿಗಾಗಿ ಅದು ಗಂಭೀರ ಪ್ರಯತ್ನಕ್ಕಿಳಿದಿದೆ." These are REGRESSIVE and ANTI-WOMEN actions. What is required is GENDER EQUALITY, not furthering SUBJUGATION OF WOMEN.

    ReplyDelete