Wednesday, 16 January 2013

ನರಕದ ಟಿಕೇಟನ್ನು ಖರೀದಿಸುತ್ತಿರುವ ‘ಶಿಕ್ಷಿತ’ ಮಕ್ಕಳು..


   ದೆಹಲಿ ಅತ್ಯಾಚಾರ ಪ್ರಕರಣದ ಸುತ್ತ ಪತ್ರಿಕೆಗಳು ಗಂಭೀರ ಚರ್ಚೆಯಲ್ಲಿ ತೊಡಗಿರುವಾಗಲೇ ದೆಹಲಿಯಲ್ಲೊಂದು ಆಘಾತಕಾರೀ ಘಟನೆ ನಡೆದಿತ್ತು. ಸುದ್ದಿ ಮಾಧ್ಯಮಗಳ ಮಂದಿ ತಮ್ಮ ಕ್ಯಾಮರಾ ಮತ್ತು ಪೆನ್ನನ್ನು ‘ಅತ್ಯಾಚಾರದ' ಸುತ್ತಲೇ ಕೇಂದ್ರೀಕರಿಸಿದ್ದರಿಂದ ಆ ಘಟನೆ ಅಷ್ಟಾಗಿ ಸುದ್ದಿಯಾಗಲಿಲ್ಲ. ಉನ್ನತ ಶಿಕ್ಷಣ ಪಡೆದ ದೆಹಲಿಯ ಇಬ್ಬರು ಗಂಡು ಮಕ್ಕಳು ತಮ್ಮ ತಾಯಿಯನ್ನು ಬೀದಿಗಟ್ಟಿದ್ದರು. ವೃದ್ಧಾಪ್ಯದಲ್ಲಿ ತನಗೆ ಆಸರೆಯಾಗಬಹುದೆಂದು ನಂಬಿದ್ದ ಮಕ್ಕಳೇ ಹೊರಹಾಕಿದಾಗ, ಆ ತಾಯಿಯು ಹಿರಿಯ ನಾಗರಿಕರ ನ್ಯಾಯಾಧೀಕರಣವನ್ನು ಸಂಪರ್ಕಿಸಿದರು. ಇದೀಗ ಈ ನ್ಯಾಯಾಧೀಕರಣವು ಆ ಇಬ್ಬರೂ ‘ಸುಶಿಕ್ಷಿತ' ಮಕ್ಕಳನ್ನು ಕರೆದು ಛೀಮಾರಿ ಹಾಕಿದೆಯಲ್ಲದೇ ಇಬ್ಬರು ಮಕ್ಕಳೂ ಪ್ರತಿ ತಿಂಗಳು ತಲಾ 4 ಸಾವಿರ ರೂಪಾಯಿಯಂತೆ ತಾಯಿಗೆ ಕೊಡಬೇಕೆಂದೂ ಮಾತ್ರವಲ್ಲ, ತಾಯಿಗೆ ಮನೆಯಲ್ಲೇ ಆಸರೆ ಒದಗಿಸಬೇಕೆಂದೂ ನಿರ್ದೇಶನ ನೀಡಿದೆ..
  ಇಷ್ಟಕ್ಕೂ, ಇದೇನೂ ಒಂಟಿ ಪ್ರಕರಣ ಅಲ್ಲ. ಹೆಲ್ಪ್ ಏಜ್ ಇಂಡಿಯಾ ಎಂಬ ಸಂಸ್ಥೆ ಇತ್ತೀಚೆಗೆ ನಡೆಸಿದ ಸರ್ವೇಯ ಪ್ರಕಾರ, ಈ ದೇಶದಲ್ಲಿ ಶೇ. 31ರಷ್ಟು ಹಿರಿಯರು ತಮ್ಮ ಮನೆಯಲ್ಲೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹೆತ್ತವರನ್ನು ಪೀಡಿಸುವುದರಲ್ಲಿ ಅತ್ಯಂತ ಮುಂದಿರುವುದು ಗಂಡು ಮಕ್ಕಳೇ. ಇವರ ಸಂಖ್ಯೆ ಶೇ. 56. ದುರಂತ ಏನೆಂದರೆ, ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ಹೆತ್ತವರು ಭಾಗ್ಯಶಾಲಿಗಳು. ನಗರ ಪ್ರದೇಶದಲ್ಲಿ ವಾಸಿಸುವ, ಅತ್ಯಂತ ಸುಶಿಕ್ಷಿತ ಮಕ್ಕಳೇ ತಮ್ಮ ಹೆತ್ತವರನ್ನು ಪೀಡಿಸುತ್ತಿದ್ದಾರೆ. ಪತಿ, ಪತ್ನಿ, ಮಕ್ಕಳು ಎಂಬ ಆಧುನಿಕ ಜೀವನ ಶೈಲಿಗೆ ಅಂಟಿಕೊಂಡಿರುವ ಈ ಮಕ್ಕಳು ಹೆತ್ತವರನ್ನು ಒಂಟಿಯಾಗಿಸಿ ನಗರಗಳಲ್ಲಿ ವಾಸಿಸುತ್ತಿದ್ದಾರೆ.. ಎಂದೆಲ್ಲಾ ಸರ್ವೇ ಅಭಿಪ್ರಾಯ ಪಟ್ಟಿದೆ.
   ನಿಜವಾಗಿ, ಈ ದೇಶದಲ್ಲಿ ದುರ್ಬಲ ಮತ್ತು ರೋಗಪೀಡಿತರಾದ ಹೆತ್ತವರ ಸ್ಥಿತಿ ಹೇಗಿದೆ ಎಂಬುದನ್ನು ಕಂಡುಕೊಳ್ಳುವುದಕ್ಕೆ ಸರ್ವೇಯ ಅಗತ್ಯವೇನೂ ಇಲ್ಲ. ನಗರಗಳ ಬೀದಿ; ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವೃದ್ಧಾಶ್ರಮಗಳಿಗೆ ಒಮ್ಮೆ ಭೇಟಿ ಕೊಟ್ಟರೆ, ಹೆತ್ತವರಿಗೆ ಈ ದೇಶ ಕೊಡುತ್ತಿರುವ ಗೌರವ ಏನೆಂಬುದು ಗೊತ್ತಾಗುತ್ತದೆ. ಒಂದು ಕಡೆ ದೇಶ ವೈಜ್ಞಾನಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಲೇ ಇದೆ. ಹೆಚ್ಚೆಚ್ಚು ಶಾಲೆ, ಕಾಲೇಜುಗಳು ನಿರ್ಮಾಣವಾಗುತ್ತಿವೆ. ಟ್ಯಾಬ್ಲೆಟ್‍ನಂತಹ ಅಗ್ಗದ ಕಂಪ್ಯೂಟರ್‍ಗಳನ್ನು ಸರಕಾರವೇ ಮಕ್ಕಳಿಗೆ ಒದಗಿಸುವ ಮೂಲಕ, ಶೈಕ್ಷಣಿಕ ಕ್ರಾಂತಿಗೆ ಪ್ರಯತ್ನಿಸುತ್ತಿದೆ. ಇನ್ನೊಂದು ಕಡೆ, ಅದೇ ಆಧುನಿಕ ಮಕ್ಕಳ ಹೆತ್ತವರು ತುಸು ಪ್ರೀತಿ, ಕರುಣೆಗಾಗಿ ಕೋರ್ಟು ಮೆಟ್ಟಲು ಹತ್ತುತ್ತಿದ್ದಾರೆ. ಅಂದ ಹಾಗೆ, ಶಿಕ್ಷಿತರಾಗುವುದು ಅಭಿವೃದ್ಧಿಯ ಮಾನದಂಡ ಎಂದಾದರೆ, ಆ ಅಭಿವೃದ್ಧಿಯಲ್ಲಿ ಹೆತ್ತವರೇಕೆ ಪ್ರತಿದಿನ ಅಭದ್ರತೆ ಅನುಭವಿಸುತ್ತಿದ್ದಾರೆ? ಓರ್ವ ವ್ಯಕ್ತಿ ಉನ್ನತ ಶಿಕ್ಷಣ ಪೂರೈಸಿ ಎಂಜನಿಯರೋ, ಡಾಕ್ಟರೋ ಆದರೆ ಈ ದೇಶ ಆತನನ್ನು ಶಿಕ್ಷಿತ ಎಂದು ಗುರುತಿಸುತ್ತದೆ. ಆತನಿಗೊಂದು ವಿಶೇಷ ವರ್ಚಸ್ಸು, ಗೌರವಾದರ ದೊರೆಯುತ್ತದೆ. ಅದೇ ವೇಳೆ ಓರ್ವ 7ನೇ ಕ್ಲಾಸಿಗೇ ಕಲಿಕೆಯನ್ನು ಕೊನೆಗೊಳಿಸಿದರೆ ಆತನಿಗೆ ಈ ಎಂಜಿನಿಯರ್‍ನ ಮುಂದೆ ಯಾವ ಸ್ಥಾನ-ಮಾನವೂ ಇರುವುದಿಲ್ಲ. ಶಾಲೆ ಕಲಿಯದ ಪಶ್ಚಾತ್ತಾಪದಲ್ಲಿ ಪ್ರತಿಕ್ಷಣವೂ ನರಳುವಂತಹ ಸನ್ನಿವೇಶವೊಂದು ಆತನ ಮುಂದೆ ನಿರ್ಮಾಣವಾಗಿರುತ್ತದೆ. ಶೈಕ್ಷಣಿಕ ಅಭಿವೃದ್ಧಿಯ ಮಾನದಂಡದಂತೆ, ಡಾಕ್ಟರ್ ಬಹಳ ಸುಖೀ ಮತ್ತು ಆಧುನಿಕ ಮನುಷ್ಯ. ಕೃಷಿಯನ್ನೋ ಕೂಲಿಯನ್ನೋ ಕೆಲಸವಾಗಿ ಆಯ್ಕೆ ಮಾಡಿಕೊಂಡಿರುವ 7ನೇ ತರಗತಿಯ ಮನುಷ್ಯ ಈ ಅಭಿವೃದ್ಧಿಯ ಮಾನದಂಡದಂತೆ ಅತ್ಯಂತ ದುರ್ದೈವಿ. ಆತ ಯಾರ ಪಾಲಿಗೂ ಮಾದರಿ ಅಲ್ಲ.. ಬಹುಶಃ ಇಂಥದ್ದೊಂದು ಮಾನಸಿಕತೆ ಬಲವಾಗಿ ಬೇರೂರುತ್ತಿರುವ ಈ ಸಂದರ್ಭದಲ್ಲೇ ದೆಹಲಿಯ ಆ ತಾಯಿ ಮತ್ತು ಹೆಲ್ಪ್ ಏಜ್ ಇಂಡಿಯಾದ ಸರ್ವೇಯು ಇನ್ನೊಂದು ಸತ್ಯವನ್ನು ಬಹಿರಂಗಕ್ಕೆ ತಂದಿದೆ. ಆಧುನಿಕ ಶಿಕ್ಷಣವು ಸುಖೀಯಾಗಿಸುವುದು ಅದನ್ನು ಪಡೆದವರನ್ನೇ ಹೊರತು ಅವರನ್ನು ಅವಲಂಬಿಸಿದವರನ್ನು ಅಲ್ಲ ಅನ್ನುವ ಆಘಾತಕಾರಿ ಅಂಶವನ್ನು ಬೆಳಕಿಗೆ ತಂದಿದೆ. ಆದ್ದರಿಂದಲೇ ನಮ್ಮ ಶಿಕ್ಷಣ ಕ್ಷೇತ್ರ ಪುನರವಲೋಕನಕ್ಕೆ ತೆರೆದುಕೊಳ್ಳಬೇಕಾಗಿದೆ. ನಮ್ಮ ಶಿಕ್ಷಣದಲ್ಲಿ ಎಲ್ಲೋ ಒಂದು ಕಡೆ ದೋಷ ಇದೆ. ಈ ಶಿಕ್ಷಣಕ್ಕೆ ಹೆತ್ತವರನ್ನು ಗೌರವಿಸುವಂತಹ ವಾತಾವರಣ ಬೆಳೆಸಲು ಸಾಧ್ಯವಾಗುತ್ತಿಲ್ಲ. ಹೆಣ್ಣು ಮಕ್ಕಳನ್ನು ಸಹೋದರಿಯರಂತೆ ಕಾಣುವಲ್ಲೂ ಸೋಲುತ್ತಿದೆ.
   ಯಾವ ಹೆತ್ತವರೂ ತಮ್ಮ ಮಕ್ಕಳನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಇಷ್ಟಪಡುವುದಿಲ್ಲ. ತಮ್ಮ ಮಕ್ಕಳನ್ನು ಸಾರ್ವಜನಿಕವಾಗಿ ದೂರಿಕೊಳ್ಳುವುದೂ ಇಲ್ಲ. ಹೆತ್ತವರ ಈ ವಿಶಾಲ ಮನಸ್ಥಿತಿಯಿಂದಾಗಿಯೇ ಹೆಚ್ಚಿನ ಮಕ್ಕಳು ಇವತ್ತು ಸಮಾಜದಲ್ಲಿ ಮರ್ಯಾದೆಯನ್ನು ಉಳಿಸಿಕೊಂಡಿರುವುದು. ಒಂದು ವೇಳೆ ವೃದ್ಧ ಹೆತ್ತವರೇನಾದರೂ ಬಾಯಿ ತೆರೆದರೆ, ಜನರ ಮುಂದೆ ಸುಭಗರಂತೆ ಫೋಸು ಕೊಡುವ ಎಷ್ಟೋ ಮಕ್ಕಳ ಬಣ್ಣ ಖಂಡಿತ ಬಯಲಾದೀತು. ಆದ್ದರಿಂದ ಹೆತ್ತವರ ಈ ಹೃದಯ ವೈಶಾಲ್ಯತೆಗೆ ಆಧುನಿಕ ಶಿಕ್ಷಿತ ವರ್ಗ ಗೌರವ ನೀಡಬೇಕಾಗಿದೆ. ಮಕ್ಕಳು,  ಹೆತ್ತವರನ್ನು ಬೀದಿ ಪಾಲು ಮಾಡುವುದು ಬಿಡಿ, ‘ಛೆ' ಎಂಬ ಪದವನ್ನು ಕೂಡ ಪ್ರಯೋಗಿಸಬಾರದು (17:23) ಎಂದು ಪವಿತ್ರ ಕುರ್‍ಆನ್ ತಾಕೀತು ಮಾಡಿದೆ. ಓರ್ವರ ಸ್ವರ್ಗ ಇಲ್ಲವೇ ನರಕವನ್ನು ನಿರ್ಣಯಿಸುವುದು ಅವರ ಹೆತ್ತವರು ಎಂದಿದ್ದೂ ಇಸ್ಲಾಮ್. ಹೆತ್ತವರು ಮುನಿಸಿಕೊಂಡಿದ್ದರೆ ಎಷ್ಟೇ ನಮಾಝ್, ಹಜ್ಜ್ ನಿರ್ವಹಿಸಿದರೂ ಮಕ್ಕಳಿಗೆ ಸ್ವರ್ಗ ಸಿಗಲಾರದು ಎಂದಿದ್ದೂ ಇಸ್ಲಾಮೇ. ಪ್ರಸವದ ಸಂದರ್ಭದಲ್ಲಿ ತಾಯಿ ಅನುಭವಿಸಿದ ಒಂದು ಕ್ಷಣದ ನೋವಿಗೆ ಮಕ್ಕಳು ಜೀವನ ಪೂರ್ತಿ ಸೇವೆ ಮಾಡಿದರೂ ಸಾಟಿಯಾಗಲಾರದು ಎಂದು ಪ್ರವಾದಿ(ಸ) ಹೇಳಿದ್ದಾರೆ. ಒಂದು ರೀತಿಯಲ್ಲಿ, ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಮುಹಮ್ಮದ್‍ರು(ಸ) ಹೆತ್ತವರ ಸೇವೆಯನ್ನು ಸ್ವರ್ಗದ ಟಿಕೇಟು ಎಂದು ಮಾತ್ರವಲ್ಲ, ಶಿಕ್ಷಣದ ಮೂಲ ಪಾಠವಾಗಿ ಕಲಿಸಿದ್ದಾರೆ. ಹೆತ್ತವರನ್ನು ಬಸ್ ನಿಲ್ದಾಣದಲ್ಲಿ ತೊರೆದು ಬಿಡುವ, ಹೊರೆಯೆಂದು ಪರಿಗಣಿಸಿ ವೃದ್ಧಾಶ್ರಮಕ್ಕೆ ಅಟ್ಟುವವರನ್ನು ‘ನರಕ'ದ ಮನುಷ್ಯರೆಂಬ ಕಟು ಪಾಠವನ್ನು ಮೂಲಭೂತ ಶಿಕ್ಷಣವಾಗಿ ಕಲಿಸಿದ್ದಾರೆ. ಈ ಶಿಕ್ಷಣ ಇವತ್ತು ಸಾರ್ವತ್ರೀಕರಣಗೊಳ್ಳಬೇಕಾದ ಅಗತ್ಯ ಇದೆ. ಇಲ್ಲದಿದ್ದರೆ ಮುಂದೊಂದು ದಿನ ನ್ಯಾಯಾಲಯಗಳ ಕಟಕಟೆಯಲ್ಲಿ ಹೆತ್ತವರು ಮತ್ತು ಮಕ್ಕಳೇ ತುಂಬಿ ಹೋದಾರು.

No comments:

Post a Comment