Monday, 25 February 2013

ಅಕ್ಷರ ಭಯೋತ್ಪಾದಕರನ್ನು ವಿಳಾಸ ಸಮೇತ ಪತ್ತೆಹಚ್ಚಿದ ಪತ್ರಕರ್ತ

   ಮುತೀಉರ್ರಹ್ಮಾನ್ ಸಿದ್ದೀಖಿ

   ಮುತೀಉರ್ರಹ್ಮಾನ್ ಸಿದ್ದೀಖಿ ಎಂಬ ಯುವ ಪತ್ರಕರ್ತ ಕೇವಲ 6 ತಿಂಗಳ ಅವಧಿಯಲ್ಲಿ ಯಶಸ್ವಿ ಕಾರ್ಯಾಚರಣೆಯೊಂದನ್ನು ನಡೆಸಿ ಗಮನ ಸೆಳೆದಿದ್ದಾನೆ. ಆ ಮೂಲಕ ಮಾಧ್ಯಮ ಮತ್ತು ಪೊಲೀಸ್  ಇಲಾಖೆಯಲ್ಲಿರುವ ಕೆಲವು ಅಪಾಯಕಾರಿ ಭಯೋತ್ಪಾದಕರನ್ನು ಆತ ವಿಳಾಸ ಸಮೇತ ಬಹಿರಂಗಪಡಿಸಿದ್ದಾನೆ. ಇದಕ್ಕಾಗಿ ಆತ ಪೆನ್ನು ಬಳಸಿಲ್ಲ. ಭಾಷಣ ಮಾಡಿಲ್ಲ. 6 ತಿಂಗಳ ಕಾಲ ಜೈಲಲ್ಲಿ ಕೂರುವ ಮುಖಾಂತರ ತಣ್ಣಗೆ ಈ ಕಾರ್ಯಾಚರಣೆಯನ್ನು ನಡೆಸಿದ್ದಾನೆ. 2012 ಆಗಸ್ಟ್ 30ರಂದು ಬೆಂಗಳೂರಿನಲ್ಲಿ ಪೊಲೀಸರು ಪತ್ರಿಕಾಗೋಷ್ಠಿಯೊಂದನ್ನು ನಡೆಸಿದ್ದರು. ಒಂದಿಬ್ಬರು ಪತ್ರಕರ್ತರು ಮತ್ತು ರಾಜಕಾರಣಿಗಳ ಹತ್ಯೆ ನಡೆಸುವ ಭಾರೀ ಭಯೋತ್ಪಾದಕ ಸಂಚನ್ನು ತಾವು ವಿಫಲಗೊಳಿಸಿರುವುದಾಗಿ ಹೇಳಿಕೊಂಡಿದ್ದರು. ಬಂಧಿತ 15 ಮಂದಿಯಲ್ಲಿ ಇಬ್ಬರು ಇರಾನ್‍ಗೆ ಭೇಟಿ ಕೊಟ್ಟಿದ್ದು, ಆ ಬಳಿಕ ಪಾಕಿಸ್ತಾನಕ್ಕೆ ತೆರಳಿ ಐ.ಎಸ್.ಐ. ಏಜೆಂಟರೊಂದಿಗೆ ಮಾತುಕತೆ ನಡೆಸಿದ್ದನ್ನೂ ವಿವರಿಸಿದ್ದರು. ಅಲ್ಲದೇ 3 ತಿಂಗಳ ಸತತ ನಿಗಾದ ಬಳಿಕ ಈ 15 ಮಂದಿಯನ್ನು ಬಂಧಿಸಲಾಗಿದೆಯೆಂದೂ ಹೇಳಿಕೊಂಡಿದ್ದರು. ಅದರ ಮರುದಿನದಿಂದಲೇ ರಾಜ್ಯದಲ್ಲಿ ಅಕ್ಷರ ಭಯೋತ್ಪಾದನೆಗಳು ಪ್ರಾರಂಭವಾಗಿದ್ದುವು. ಬಂಧಿತ, ಡೆಕ್ಕನ್ ಹೆರಾಲ್ಡ್  ಪತ್ರಿಕೆಯ  ಪತ್ರಕರ್ತ ಮುತೀಉರ್ರಹ್ಮಾನ್ ಸಿದ್ದೀಕಿ ಇಡೀ ಭಯೋತ್ಪಾದಕ ಸಂಚಿನ ರೂವಾರಿ ಎಂದು ಕೆಲವು ಪತ್ರಿಕೆಗಳು ಬರೆದುವು. ಪತ್ರಕರ್ತನ ಸೋಗಿನಲ್ಲಿ ಆತ ಹೇಗೆ ವಿಧ್ವಂಸಕ ಕೃತ್ಯಕ್ಕೆ ಮಾಹಿತಿ ಸಂಗ್ರಹಿಸುತ್ತಿದ್ದ ಎಂದು ಅವು ತನಿಖಾ ವರದಿಯನ್ನು ಪ್ರಕಟಿಸಿದುವು. ಕೃಷ್ಣರಾಜ ಸಾಗರ ಅಣೆಕಟ್ಟನ್ನು ಸ್ಫೋಟಿಸುವ ಸಂಚಿನ ಹೊಣೆಯನ್ನೂ ಈ ಪತ್ರಕರ್ತನ ಮೇಲೆ ಹೊರಿಸಲಾಯಿತು. ಮಾಧ್ಯಮ ಭಯೋತ್ಪಾದನೆಯ ಪ್ರಭಾವ ಎಷ್ಟಿತ್ತೆಂದರೆ, ಸ್ವತಃ ಡೆಕ್ಕನ್ ಹೆರಾಲ್ಡ್ ಪತ್ರಿಕೆಯೇ ಒಂದು ಹಂತದ ವರೆಗೆ ತಬ್ಬಿಬ್ಬಾಯಿತು. ಮುತೀಉರ್ರಹ್ಮಾನ್‍ನ ಆ ವರೆಗಿನ ಪತ್ರಿಕಾ ವೃತ್ತಿಯಲ್ಲಿ ಅನುಮಾನಿತ ಅಂಶಗಳು ಕಂಡಿಲ್ಲವಾದರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದಕ್ಕೆ ಮತ್ತು ತನ್ನ ಪತ್ರಕರ್ತನನ್ನು ಸಮರ್ಥಿಸಿಕೊಳ್ಳುವುದಕ್ಕೆ ಅದು ಹಿಂದೇಟು ಹಾಕಿತು. ಆದರೆ ಮುತೀಉರ್ರಹ್ಮಾನ್ ತನ್ನ ಸಂಘಟನೆಯ ಸದಸ್ಯನೆಂದು ಎಸ್.ಐ.ಓ.(ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ)ನ ರಾಜ್ಯಾಧ್ಯಕ್ಷ ಅಶ್ಫಾಕ್ ಅಹ್ಮದ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಘೋಷಿಸಿದರು. ಮುತೀಉರ್ರಹ್ಮಾನ್ ಅಮಾಯಕ ಎಂದವರು ಸಾರಿದರು.
   ದುರಂತ ಏನೆಂದರೆ, ರಾಜ್ಯದ ಪತ್ರಕರ್ತ ಸಂಘಟನೆಗಳು ಮುತೀಉರ್ರಹ್ಮಾನ್‍ನ ಬಂಧನದ ಕುರಿತಂತೆ ಮೌನ ವಹಿಸಿದ್ದು. ಪತ್ರಕರ್ತ ನವೀನ್ ಸೂರಿಂಜೆಯ ಬಂಧನದ ಸಂದರ್ಭದಲ್ಲಿ ತೋರಿದ ಧೈರ್ಯವನ್ನು ಅವು ಮುತೀಉರ್ರಹ್ಮಾನ್‍ನ ಬಂಧನದ ಸಂದರ್ಭದಲ್ಲಿ ತೋರಿಸಲೇ ಇಲ್ಲ. ಪ್ರತಿಭಟನೆ ನಡೆಸಬೇಕಾಗಿದ್ದ  ಅನೇಕ ಪತ್ರಕರ್ತರು ಯಾರೋ ಹೆಣೆದ ಷಡ್ಯಂತ್ರದ ದಾಳವಾಗಿ ಬಿಟ್ಟರು. ಆತನ ಮೇಲೆ ಹೊರಿಸಲಾದ ಆರೋಪಗಳೆಲ್ಲ ನಿಜವಾಗಿರಬಹುದು ಎಂದು ನಂಬುವ ಸ್ಥಿತಿಗೆ ಅನೇಕ ಪತ್ರಕರ್ತರು ತಲುಪಿ ಬಿಟ್ಟಿದ್ದರು. ಇಷ್ಟಕ್ಕೂ, ಕೆಲವು ಪತ್ರಿಕೆಗಳು ಕಲ್ಪಿತ ಸುದ್ದಿಗಳನ್ನು ಆಕರ್ಷಕ ಹೆಡ್‍ಲೈನ್‍ನೊಂದಿಗೆ ಪ್ರತಿದಿನವೂ ಪ್ರಕಟಿಸುತ್ತಿರುವಾಗ ಗೊಂದಲ ಉಂಟಾಗದಿರುವುದಾದರೂ ಹೇಗೆ? ಹೆಚ್ಚಿನೆಲ್ಲ ಪತ್ರಿಕೆಗಳು ಮುತೀಉರ್ರಹ್ಮಾನ್‍ನನ್ನು ಭಯೋತ್ಪಾದಕನಂತೆ ಚಿತ್ರಿಸಿ ಸಂಪಾದಕೀಯ ಬರೆಯುವಾಗ, ಆತನ ಬಗ್ಗೆ ನಾಲ್ಕು ಕೊಂಡಾಟದ ವಾಕ್ಯ ಬರೆಯುವುದಕ್ಕೆ ಸಾಮಾನ್ಯ ಪತ್ರಕರ್ತನಿಗೆ ಧೈರ್ಯ ಎಲ್ಲಿಂದ ಬರಬೇಕು? ನಿಜವಾಗಿ, ಮಾಧ್ಯಮಗಳಲ್ಲಿರುವ ಒಂದು ವರ್ಗವು ಭಯೋತ್ಪಾದನೆಯ ಭೂತವನ್ನು ಹಬ್ಬಿಸಿ, ಇಡೀ ಕನ್ನಡ ಪತ್ರಿಕೋದ್ಯಮವನ್ನೇ ಕುಲಗೆಡಿಸಿಬಿಟ್ಟಿತ್ತು. ಪತ್ರಕರ್ತನ ಬಂಧನದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುವುದು ದೇಶದ್ರೋಹವಾದೀತೋ ಎಂದು ಪ್ರಮುಖ ಪತ್ರಕರ್ತರೂ  ಭಯಪಡುವಷ್ಟು ಈ ಭೂತ ಪ್ರಭಾವಶಾಲಿಯಾಗಿತ್ತು. ಆದ್ದರಿಂದಲೇ, ಮುತೀಉರ್ರಹ್ಮಾನ್‍ನ ಬಂಧನದ ವಿರುದ್ಧ ರಾಜ್ಯದಲ್ಲಿ ಪತ್ರಕರ್ತರಿಂದ ಒಂದೇ ಒಂದು ಪ್ರತಿಭಟನೆ ನಡೆಯಲಿಲ್ಲ. ಆತನ ಅಮಾಯಕತನವನ್ನು ಕನಿಷ್ಠ ಆತನ ಪತ್ರಕರ್ತ ಮಿತ್ರರು ಮತ್ತು ಸಂಪಾದಕರಿಗೂ ಘೋಷಿಸಲು ಸಾಧ್ಯವಾಗಲಿಲ್ಲ. ಇಷ್ಟಕ್ಕೂ, ಪತ್ರಕರ್ತರ ಸ್ಥಿತಿಯೇ ಹೀಗಾದರೆ ಇನ್ನು ಜನಸಾಮಾನ್ಯರ ಬಗ್ಗೆ ಹೇಳುವುದಾದರೂ ಏನನ್ನು? ಈ ಪತ್ರಕರ್ತರು ಮತ್ತು ಸಂಪಾದಕರು ಬರೆದ ಸುದ್ದಿಗಳನ್ನಲ್ಲವೇ ಅವರೂ ಓದುತ್ತಿರುವುದು? ಸುದ್ದಿಗಳೆಲ್ಲ ಮುತೀಉರ್ರಹ್ಮಾನ್‍ನನ್ನು ‘ಜಿಹಾದಿ ಪತ್ರಕರ್ತ' ಎಂದು ಕರೆಯುವಾಗ ಅವರು ಅದಕ್ಕಿಂತ ಭಿನ್ನವಾಗಿ ಆಲೋಚಿಸುವುದಕ್ಕೆ ಸಾಧ್ಯವಿದೆಯೇ?
   ಇದೀಗ ಮುತೀಉರ್ರಹ್ಮಾನ್‍ನ ಬಿಡುಗಡೆಗೆ ನ್ಯಾಯಾಲಯವೇ ಆದೇಶಿಸಿದೆ. ಆತನ ಮೇಲೆ ಯಾವೊಂದು ಆರೋಪವನ್ನೂ ಪೊಲೀಸರು ಹೊರಿಸಿಲ್ಲ. ವಿಷಾದ ಏನೆಂದರೆ, ಮುತೀಉರ್ರಹ್ಮಾನ್‍ನಿಗೆ ಖಳನಾಯಕನ ವೇಷ ತೊಡಿಸಿ, ಎರಡು ವಾರಗಳ ತನಕ ಮುಖಪುಟದಲ್ಲಿ ಕೂರಿಸಿದ ಪತ್ರಿಕೆಗಳು, ಆತನ ಬಿಡುಗಡೆಯ ಸುದ್ದಿಗೆ ಆ ಮಟ್ಟದ ಪ್ರಚಾರ ನೀಡದೇ ಇರುವುದು. ಆ ಕುರಿತಂತೆ ಸಂಪಾದಕೀಯ ಬರೆಯದೇ ಇರುವುದು. ಓರ್ವ ಅಮಾಯಕನನ್ನು ಭಯೋತ್ಪಾದಕನಂತೆ ಬಿಂಬಿಸಿದ ಪತ್ರಿಕೆಗಳು ಯಾಕಾಗಿ ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡವು? ಈ ದೇಶದಲ್ಲಿ ಭಯೋತ್ಪಾದನೆಯ ಆರೋಪ ಹೊತ್ತುಕೊಂಡ ವ್ಯಕ್ತಿಯೊಬ್ಬ ಎದುರಿಸಬೇಕಾದ ಸಮಸ್ಯೆಗಳು ಏನೆಂಬುದು ಮಾಧ್ಯಮ ಮಿತ್ರರಿಗೆ ಗೊತ್ತಿಲ್ಲವೇ? ಭಯೋತ್ಪಾದನೆಯೆಂಬುದು ಕಳ್ಳತನದ ಆರೋಪದಂತೆ ಅಲ್ಲವಲ್ಲ. ನ್ಯಾಯಾಲಯವು ಅಮಾಯಕನೆಂದು ಬಿಡುಗಡೆಗೊಳಿಸಿದರೂ ಸಮಾಜ ಅಪರಾಧಿಯಂತೆಯೇ ನೋಡುತ್ತದಲ್ಲವೇ? ಸರಕಾರಿ ಇಲಾಖೆ ಇಲ್ಲವೇ ಖಾಸಗಿ ಸಂಸ್ಥೆಗಳಲ್ಲೂ ಉದ್ಯೋಗ ಸಿಗುವುದು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗುತ್ತದಲ್ಲವೇ? ಇಂಥ ವಾತಾವರಣದಲ್ಲಿ, ಸಮಾಜವನ್ನು ತಿದ್ದಬೇಕಾದ ಮಾಧ್ಯಮಗಳೇಕೆ ಬೆನ್ನು ತಿರುಗಿಸುತ್ತವೆ? ಸಮಾಜವನ್ನು ತಪ್ಪು ದಾರಿಗೆಳೆಯುವುದಷ್ಟೇ ಮಾಧ್ಯಮಗಳ ಜವಾಬ್ದಾರಿಯೇ?
   ಏನೇ ಆಗಲಿ, ಮುತೀಉರ್ರಹ್ಮಾನ್ ಎಂಬ ಸಾಮಾನ್ಯ ಪತ್ರಕರ್ತನೋರ್ವ ಮಾಧ್ಯಮ ಕ್ಷೇತ್ರದಲ್ಲಿರುವ ಕೆಲವು ಭಯೋತ್ಪಾದಕರ ಪರಿಚಯವನ್ನು ಮಾಡಿಕೊಟ್ಟಿದ್ದಾನೆ. ಅವರು ಯಾವ್ಯಾವ ಪತ್ರಿಕೆಯಲ್ಲಿ, ಯಾವ್ಯಾವ ಸ್ಥಾನದಲ್ಲಿದ್ದಾರೆಂಬುದನ್ನೂ ಬಹಿರಂಗಕ್ಕೆ ತಂದಿದ್ದಾನೆ. ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‍ಗಳು ಸುದ್ದಿಯ ಹೆಸರಲ್ಲಿ ಹೇಗೆ ಅಪ್ಪಟ ಸುಳ್ಳುಗಳನ್ನು ಹೇಳಬಲ್ಲವು ಎಂಬುದಕ್ಕೂ ಕನ್ನಡಿ ಹಿಡಿದಿದ್ದಾನೆ. ಆದ್ದರಿಂದ, 6 ತಿಂಗಳು ಜೈಲಲ್ಲಿದ್ದರೂ ಪರವಾಗಿಲ್ಲ, ಶಾಶ್ವತವಾಗಿ ಜೈಲಲ್ಲೇ ಇರಬೇಕಾದವರ ಪಟ್ಟಿಯೊಂದನ್ನು ಸಮಾಜದ ಮುಂದಿಟ್ಟನಲ್ಲ, ಅದಕ್ಕಾಗಿ ಆತನಿಗೆ ಅಭಿನಂದನೆ ಸಲ್ಲಿಸಬೇಕು.

Monday, 18 February 2013

`ಪಿಸ್ಟೋರಿಯಸ್’ಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು...


   ಈ ಜಗತ್ತಿನಲ್ಲಿ ದಿನ ಬೆಳಗಾಗುವುದರೊಳಗೆ ರೋಲ್ ಮಾಡೆಲ್‍ಗಳು ಉದಯಿಸುವುದಿದೆ. ನೂರು ಮೀಟರ್ ಓಟವನ್ನು ವಿಶ್ವದಾಖಲೆಯ ಸಮಯದೊಂದಿಗೆ ಓಡಿ ಮುಗಿಸಿದರೆ; ಕಾರ್ ರೇಸ್, ಸೈಕ್ಲಿಂಗ್ ರೇಸ್‍ನಲ್ಲಿ ವಿಶ್ವದಾಖಲೆ ಮಾಡಿದರೆ; ಕ್ರಿಕೆಟ್ಟು, ಟೆನ್ನಿಸ್‍ನಲ್ಲಿ ಅಮೋಘ ಸಾಧನೆ ಮಾಡಿದರೆ.. ಕ್ರೀಡಾ ಪಟುಗಳು ಮಾಧ್ಯಮಗಳನ್ನಿಡೀ ತುಂಬಿಕೊಳ್ಳುತ್ತಾರೆ. ಬ್ರೇಕಿಂಗ್ ನ್ಯೂಸೂ ಅವರೇ. ಎಕ್ಸ್ ಕ್ಲೂಸಿವ್ ನ್ಯೂಸೂ ಅವರೇ. ಅವರ ಬದುಕು, ಹಿನ್ನೆಲೆ, ಶ್ರಮ ಇತ್ಯಾದಿಗಳೆಲ್ಲವೂ ಮಾಧ್ಯಮಗಳಲ್ಲಿ ಚರ್ಚೆಗೊಳಗಾಗುತ್ತವೆ. ಕ್ರೀಡಾಪಟುಗಳೆಲ್ಲ ಯುವ ಪ್ರಾಯದವರೇ ಆಗಿರುವುದರಿಂದ ಯುವ ಸಮೂಹವು ಸಹಜವಾಗಿ ಈ ಚರ್ಚೆಗಳಿಂದ ಆಕರ್ಷಿತಗೊಳ್ಳುತ್ತದೆ. ಕ್ರಮೇಣ ಅವರೊಳಗೆ ಈ ಕ್ರೀಡಾಪಟುಗಳು ಚಿಕ್ಕದೊಂದು ಗೂಡು ಕಟ್ಟತೊಡಗುತ್ತಾರೆ. ಅವರನ್ನು ರೋಲ್ ಮಾಡೆಲ್‍ಗಳಂತೆ ಪ್ರೀತಿಸತೊಡಗುತ್ತಾರೆ. ತಮ್ಮ ಪುಸ್ತಕದಲ್ಲಿ, ಟೀ ಶರ್ಟು, ಫೇಸ್‍ಬುಕ್‍ನಲ್ಲಿ.. ಇವರನ್ನು ತುಂಬಿಸಿಕೊಳ್ಳುತ್ತಾರೆ. ಅವರ ಪ್ರಾಯ, ದೇಶ, ಸಾಧನೆಗಳು, ಅವರಿಗಿರುವ ಸಂಬಂಧಗಳು.. ಹೀಗೆ ಸಕಲ ಮಾಹಿತಿಗಳನ್ನೂ ಸಂಗ್ರಹಿಸಿಟ್ಟುಕೊಳ್ಳುವ ಅಪ್ಪಟ ಫ್ಯಾನ್ ಕ್ಲಬ್‍ಗಳೂ ಇರುತ್ತವೆ. ಸೈಕ್ಲಿಂಗ್‍ನಲ್ಲಿ ನಿಬ್ಬೆರಗಾಗುವ ಸಾಧನೆ ಮಾಡಿದ ಅಮೇರಿಕದ ಆರ್ಮ್ ಸ್ಟ್ರಾಂಗ್ ನಿಂದ ಎಷ್ಟು ಮಂದಿ ಪ್ರಭಾವಿತವಾಗಿಲ್ಲ? ಕ್ಯಾನ್ಸರ್ ರೋಗಿಯಾಗಿದ್ದಾಗ ಅವರು ತೋರಿದ ಅಪಾರ ಆತ್ಮವಿಶ್ವಾಸ, ಕೆಚ್ಚೆದೆಯ ಬಗ್ಗೆ ಎಷ್ಟು ಬಾರಿ ಪತ್ರಿಕೆಗಳು ಬರೆದಿಲ್ಲ? ಅಂದ ಹಾಗೆ ಆತ ಕ್ಯಾನ್ಸರ್‍ನಿಂದ ಹೊರಬಂದು ಸೈಕ್ಲಿಂಗ್ ರೇಸ್‍ನಲ್ಲಿ ಎಲ್ಲ ದಾಖಲೆಗಳನ್ನೂ ಅಳಿಸಿ ಹಾಕಿದ್ದು ಸಣ್ಣ ಸಾಧನೆಯೇನೂ ಆಗಿರಲಿಲ್ಲ. ಆದರೆ ಆ ಸಾಧನೆಯ ಹಿಂದೆ ನಿಷೇಧಿತ ಔಷಧಿಗಳ (ಡ್ರಗ್ಸ್) ಪ್ರಭಾವವಿತ್ತು ಎಂಬುದನ್ನು ಆತ ಒಂದು ತಿಂಗಳ ಹಿಂದೆ ಬಹಿರಂಗವಾಗಿಯೇ ಒಪ್ಪಿಕೊಂಡ. ನಿಷೇಧಿತ ಔಷಧಗಳನ್ನು ಸೇವಿಸದೇ ತಾನು ಅಂಥ ಸಾಧನೆ ಮಾಡುವುದಕ್ಕೆ ಸಾಧ್ಯವೇ ಇರಲಿಲ್ಲ ಎಂದೂ ಹೇಳಿದ. ಇದೀಗ ಆಸ್ಕರ್ ಪಿಸ್ಟೋರಿಯಸ್ ಎಂಬ ‘ಬ್ಲೇಡ್ ರನ್ನರ್’ ತಪ್ಪು ಮಾಡಿ ಜೈಲು ಸೇರಿದ್ದಾನೆ.
  ಕಳೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಪಿಸ್ಟೋರಿಯಸ್ ಸಾಕಷ್ಟು ಸುದ್ದಿ ಮಾಡಿದ್ದ. ಎರಡೂ ಕಾಲುಗಳಿಲ್ಲದ ಈತ, ಕಾರ್ಬನ್ ಫೈಬರ್‍ನಿಂದ ತಯಾರಿಸಲಾದ ಕೃತಕ ಕಾಲುಗಳಿಂದ ಓಡಿ ಕಾಲುಳ್ಳವರನ್ನೂ ನಾಚಿಸಿದ್ದ. ಆತನ ಓಟ ಎಷ್ಟು ಆಕರ್ಷಣೀಯವೆಂದರೆ, ಕಾಲಿದ್ದವರೂ ಬೆರಗಾಗುವಷ್ಟು. ಆದ್ದರಿಂದಲೇ ನೂರು ಮೀಟರ್ ಓಟದ ವಿಶ್ವಚಾಂಪಿಯನ್ ಉಸೇನ್ ಬೋಲ್ಟ್ ನಂತೆಯೇ ಭಾರೀ ತಾರಾ ವರ್ಚಸ್ಸನ್ನು ಗಳಿಸಿಕೊಂಡ. ಬ್ಲೇಡ್‍ನಂತಹ ಕೃತಕ ಕಾಲುಗಳನ್ನು ಹೊಂದಿರುವುದರಿಂದ ‘ಬ್ಲೇಡ್ ರನ್ನರ್' ಅನ್ನುವ ಹೊಸ ಪದಪ್ರಯೋಗವೊಂದೂ ಆತನಿಗಾಗಿ ಹುಟ್ಟಿಕೊಂಡಿತು. ದಕ್ಷಿಣ ಆಫ್ರಿಕದಾದ್ಯಂತ ಆತನ ಬೃಹತ್ ಕಟೌಟ್‍ಗಳು, ಪ್ಲೆಕ್ಸ್ ಗಳೂ ಕಾಣಿಸಿಕೊಂಡವು. ಆತನ ಜೀವನೋತ್ಸಾಹ, ಆತ್ಮವಿಶ್ವಾಸಗಳೆಲ್ಲ ಭಾಷಣಗಳ ವಸ್ತುವಾಗಿ ಬಿಟ್ಟುವು. ಶಿಕ್ಷಕರು ಒಂದಲ್ಲ ಒಂದು ಸಂದರ್ಭದಲ್ಲಿ ಆತನನ್ನು ಉಲ್ಲೇಖಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಷ್ಟು ಆತ ಖ್ಯಾತನಾಗಿ ಬಿಟ್ಟಿದ್ದ. ಆದರೆ ಇದೀಗ ಆತ ಕೊಲೆ ಆರೋಪಿಯಾಗಿ ಜೈಲು ಸೇರಿದ್ದಾನೆ. ಅದರ ಜೊತೆಗೇ ಆತನ ಬದುಕಿನ ಇನ್ನೊಂದು ಮಗ್ಗುಲೂ ತೆರೆದುಕೊಳ್ಳತೊಡಗಿದೆ. ತನ್ನ ಪ್ರೇಯಸಿ ರೀವಾ ಸ್ಟಿನ್‍ಕ್ಯಾಂಪ್‍ಳನ್ನು ಕಳೆದವಾರ ಗುಂಡಿಟ್ಟು ಕೊಂದ ಈ ಬ್ಲೇಡ್ ರನ್ನರ್‍ನ ವಯಸ್ಸು ಬರೇ 26. ಈ ಸಣ್ಣ ಪ್ರಾಯದಲ್ಲೇ ಈತನ ಬದುಕಿನಲ್ಲಿ 6 ಹೆಣ್ಣು ಮಕ್ಕಳ ಪ್ರವೇಶವಾಗಿದೆ. ಓರ್ವಳನ್ನು ಕೊಂದಿದ್ದಾನೆ. ಉಳಿದವರನ್ನು ಕೈಬಿಟ್ಟಿದ್ದಾನೆ. ಆತನ ಸಿಟ್ಟಿನ ಬಗ್ಗೆ, ಈ ಹಿಂದೆ ಜೈಲು ಶಿಕ್ಷೆ ಅನುಭವಿಸಿರುವುದರ ಬಗ್ಗೆಯೆಲ್ಲಾ ಮಾಧ್ಯಮಗಳಲ್ಲಿ ಇದೀಗ ಸುದ್ದಿಗಳು ಬರತೊಡಗಿವೆ..
   ನಿಜವಾಗಿ ಇವತ್ತು ರೋಲ್ ಮಾಡೆಲ್‍ಗಳ ಭಾರೀ ಕೊರತೆಯಿದೆ. ರಾಜಕಾರಣಿಗಳಂತೂ ರೋಲ್ ಮಾಡೆಲ್‍ಗಳ ಪಟ್ಟಿಯಿಂದ ಈಗಾಗಲೇ ಹೊರಬಿದ್ದಿದ್ದಾರೆ. ಸತ್ಯ, ಪ್ರಾಮಾಣಿಕತೆ, ಮನುಷ್ಯತ್ವಕ್ಕೆಲ್ಲಾ ರಾಜಕಾರಣಿಗಳ ಪಟ್ಟಿಯಲ್ಲಿ ಮಾದರಿಗಳು ಸಿಗಲು ಸಾಧ್ಯವೇ ಇಲ್ಲ ಅನ್ನುವ ನಂಬಿಕೆ ಸಾರ್ವತ್ರಿಕವಾಗಿ ಬಿಟ್ಟಿದೆ. ಹೀಗಿರುವಾಗ ರಾಜಕಾರಣಿಗಳನ್ನು ಬಿಟ್ಟರೆ ಉಳಿದಂತೆ ಮಾಧ್ಯಮಗಳಲ್ಲಿ ಅತ್ಯಂತ ಸುದ್ದಿಯಲ್ಲಿರುವುದು ಒಂದೋ ಸಿನಿಮಾ ತಾರೆಯರು ಇಲ್ಲವೇ ಕ್ರೀಡಾಪಟುಗಳು. ಇವರಿಗಾಗಿ ಎಲ್ಲ ಪತ್ರಿಕೆಗಳು ಪ್ರತಿದಿನವೂ ಪುಟಗಳನ್ನು ಮೀಸಲಿಟ್ಟಿರುತ್ತವೆ. ಟಿ.ವಿ. ಚಾನೆಲ್‍ಗಳಲ್ಲೂ ಇವರಿಗಾಗಿ ಜಾಗ ಇರುತ್ತವೆ. ಇಂಥ ಹೊತ್ತಲ್ಲಿ, ಯುವ ಪೀಳಿಗೆಯು ಇವರನ್ನು ರೋಲ್ ಮಾಡೆಲ್ ಆಗಿ ಆಯ್ಕೆ ಮಾಡಿಕೊಳ್ಳದೇ ಇನ್ನಾರನ್ನು ಆಯ್ಕೆ ಮಾಡಿಕೊಳ್ಳಬೇಕು? ಇಷ್ಟಕ್ಕೂ, ಇಂಥ ಮಾದರಿಗಳು  ಪಿಸ್ಟೋರಿಯಸ್‍ನಂತೆ ತಲೆತಗ್ಗಿಸಿ ಕೂತರೆ ಅವರನ್ನು ರೋಲ್ ಮಾಡೆಲ್ ಆಗಿ ಆಯ್ಕೆ ಮಾಡಿಕೊಂಡಿರುವ ಯುವ ಸಮೂಹದ ಮೇಲೆ ಅದು ಎಂಥ ಪರಿಣಾಮ ಬೀರಬಹುದು? ತಮ್ಮ ಮಾದರಿ ವ್ಯಕ್ತಿ ವಂಚನೆಯ ಮೂಲಕ ವಿಶ್ವದಾಖಲೆ ಮಾಡಿದ್ದಾನೆ ಎಂದು ಗೊತ್ತಾದರೆ ಅದು ಯುವ ಪೀಳಿಗೆಯನ್ನು, ‘ಎಲ್ಲರೂ ಹೀಗೆಯೇ’ ಅನ್ನುವ ಭಾವಕ್ಕೆ ಕೊಂಡೊಯ್ಯದೇ? ವಂಚನೆ, ಅನೈತಿಕ ಬದುಕು, ಕುಡಿತ.. ಮುಂತಾದುವುಗಳನ್ನೆಲ್ಲ ಹಗುರವಾಗಿ ಪರಿಗಣಿಸಲು, ಅವುಗಳನ್ನು ತಪ್ಪುಗಳ ಪಟ್ಟಿಯಿಂದ ಹೊರ ಹಾಕಿ ಬಿಡಲು ಕಾರಣವಾಗದೇ? ಪ್ರಸಿದ್ಧಿ ಪಡೆಯಬೇಕಾದರೆ ಸರಿ-ತಪ್ಪುಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಬಾರದು ಎಂದು ಅವು ತೀರ್ಮಾನಿಸದೇ?
   ಯಾವುದೇ ಒಂದು ಪೀಳಿಗೆ ದೇಶದ ಪಾಲಿಗೆ ಪ್ರಯೋಜನಕಾರಿಯಾಗಬೇಕಾದರೆ ಅದು ಆಯ್ಕೆ ಮಾಡಿಕೊಳ್ಳುವ ಮಾದರಿ ವ್ಯಕ್ತಿತ್ವಗಳು ಎಲ್ಲ ರೀತಿಯಲ್ಲೂ ಮಾದರಿಗಳಾಗಿರಬೇಕಾದುದು ಬಹಳ ಅಗತ್ಯ. ತಪ್ಪು ವ್ಯಕ್ತಿತ್ವಗಳು ಯುವ ಸಮೂಹದ ಮಾದರಿ ಪಟ್ಟಿಯಲ್ಲಿ ಸೇರಿಕೊಂಡರೆ ತಪ್ಪು ವ್ಯಕ್ತಿತ್ವಗಳ ತಯಾರಿಗಷ್ಟೇ ಅದು ಪ್ರೇರಕವಾದೀತು. ದುರಂತ ಏನೆಂದರೆ, ಇಂದಿನ ಜಗತ್ತಿನಲ್ಲಿ ಪಿಸ್ಟೋರಿಯಸ್‍ನಂಥ ತಪ್ಪು ವ್ಯಕ್ತಿತ್ವಗಳೇ ಯುವ ಸಮೂಹಕ್ಕೆ ಮಾದರಿಗಳಾಗುತ್ತಿದ್ದಾರೆ ಅನ್ನುವುದು. ಆದ್ದರಿಂದ ಯುವ ಪೀಳಿಗೆಯನ್ನು ಅತ್ಯಂತ ಜಾಗರೂಕತೆಯಿಂದ ಬೆಳೆಸಬೇಕಾಗಿದೆ. ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾದ ಪ್ರಾಯದಲ್ಲಿ ಸಿನಿಮಾ, ಕ್ರೀಡೆ ಮತ್ತಿತರ ಕ್ಷೇತ್ರಗಳಲ್ಲಿರುವವರ ಮಿತಿಗಳ ಬಗ್ಗೆಯೂ ಅವರಿಗೆ ಮನವರಿಕೆ ಮಾಡಿಸಬೇಕಾಗಿದೆ. ಮಾಧ್ಯಮಗಳ ನಿರ್ದಿಷ್ಟ ಪುಟಗಳಲ್ಲಿ ಪ್ರತಿ ದಿನವೂ ಕಾಣಿಸಿಕೊಳ್ಳುವ ಮಾಡೆಲ್‍ಗಳು ಯಾವ ಸಂದರ್ಭದಲ್ಲೂ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಅವರಾಚೆಗಿನ ಚಾರಿತ್ರಿಕ ವ್ಯಕ್ತಿತ್ವಗಳನ್ನು ಮಾದರಿಯಾಗಿ ಯುವ ಸಮೂಹಕ್ಕೆ ಪರಿಚಯಿಸಬೇಕಾಗಿದೆ. ಇಲ್ಲದಿದ್ದರೆ ಯೌವನವನ್ನು ನಾಶಪಡಿಸಿಕೊಂಡ ಅನೇಕಾರು ಪಿಸ್ಟೋರಿಯಸ್‍ಗಳು ನಮ್ಮಲ್ಲೂ ಉದಯಿಸಿಯಾರು.

Monday, 11 February 2013

ನಮ್ಮ ನಮ್ಮ ತಲೆಗಳನ್ನು ರಕ್ಷಿಸಿಕೊಳ್ಳೋಣ

ಸರಬ್ಜಿತ್ ಸಿಂಗ್‍

   ಕಾಶ್ಮೀರಿಗಳನ್ನು ದೇಶದ್ರೋಹಿಗಳು, ಉಗ್ರವಾದಿಗಳೆಂದು ಕರೆಯುವುದಕ್ಕಾಗಿ ನೆಪಗಳನ್ನು ಹುಡುಕುತ್ತಾ ತಿರುಗಾಡುತ್ತಿರುವವರಿಗೆ ತೀವ್ರ ನಿರಾಶೆಯಾಗುವ ಸುದ್ದಿಯೊಂದು ಕಾಶ್ಮೀರದಿಂದ ಹೊರಬಿದ್ದಿದೆ. ‘ಅಫ್ಝಲ್ ಗುರುವಿಗೆ ನೇಣಾದುದನ್ನು ಪರಿಗಣಿಸಿ ಸರಬ್ಜಿತ್ ಸಿಂಗ್‍ಗೆ ನೇಣು ವಿಧಿಸಬಾರದು..' ಎಂದು ಜಮ್ಮು-ಕಾಶ್ಮೀರ್ ಲಿಬರೇಶನ್ ಫ್ರಂಟ್(ಜೆ.ಕೆ.ಎಲ್.ಎಫ್.)ನ ನಾಯಕ ಯಾಸಿನ್ ಮಲಿಕ್ ಪಾಕ್ ಸರಕಾರದೊಂದಿಗೆ ವಿನಂತಿಸಿದ್ದಾರೆ. ‘ಹಾಗೇನಾದರೂ ಮಾಡಿದರೆ, ಅದು ಒಂದು ಕೊಲೆ ಆಗಬಹುದೇ ಹೊರತು ಶಿಕ್ಷೆಯಲ್ಲ’ ಎಂದೂ ಅವರು ಹೇಳಿದ್ದಾರೆ. ಅಫ್ಝಲ್ ಗುರುವನ್ನು ನೇಣಿ ಗೇರಿಸಿದುದನ್ನು ಪ್ರತಿಭಟಿಸಿ 24 ಗಂಟೆ ಸತ್ಯಾಗ್ರಹ ನಡೆಸಿದ ಈ ವ್ಯಕ್ತಿಯಿಂದ ಇಂಥದ್ದೊಂದು ಹೇಳಿಕೆಯನ್ನು, 'ಲಡ್ಡು ತಿಂದು ಅಫ್ಝಲ್‍ನ ನೇಣಿಗೆ ಸಂತೋಷಪಟ್ಟ’ ಬಿಜೆಪಿ-ಸಂಘಪರಿವಾರವು ನಿರೀಕ್ಷಿಸಿರುವ ಸಾಧ್ಯತೆ ಖಂಡಿತ ಇಲ್ಲ.
   ನಿಜವಾಗಿ, ಅಫ್ಝಲ್ ಗುರುವಿಗೆ ಗಲ್ಲಾಗಿರುವುದರಿಂದ ಅತ್ಯಂತ ಆತಂಕಕ್ಕೆ ಒಳಗಾಗಿರುವುದು ಸರಬ್ಜಿತ್ ಸಿಂಗ್‍ನ ಕುಟುಂಬ. ಹರ್ಯಾಣದ ಈ ವ್ಯಕ್ತಿಗೆ ಪಾಕ್ ನ್ಯಾಯಾಲಯ ಈಗಾಗಲೇ ಮರಣ ದಂಡನೆ ವಿಧಿಸಿದೆ. ಪಾಕ್ ನೆಲದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಆರೋಪ ಸರಬ್ಜಿತ್‍ನ ಮೇಲಿದೆ. ಅಫ್ಝಲ್ ಗುರುವಿಗೆ ಗಲ್ಲಾಗಲಿ ಎಂದು ಈ ದೇಶದಲ್ಲಿ ಯಾವಾಗೆಲ್ಲ ಕೂಗು ಕೇಳಿ ಬರುತ್ತದೋ ಆವಾಗೆಲ್ಲಾ ಸರಬ್ಜಿತ್ ಕುಟುಂಬದಲ್ಲಿ ಭೀತಿ ಕಾಣಿಸಿಕೊಳ್ಳುತ್ತದೆ. ಯಾಕೆಂದರೆ, ಸರಬ್ಜಿತ್‍ನ ಗಲ್ಲು ಒಂದು ಹಂತದ ವರೆಗೆ ಅಫ್ಝಲ್ ಗುರುವಿನ ಗಲ್ಲಿನೊಂದಿಗೆ ತಳಕು ಹಾಕಿ ಕೊಂಡಿದೆ. ಅಫ್ಝಲ್‍ನನ್ನು ಭಾರತವು ನೇಣಿಗೇರಿಸಿದರೆ ಪಾಕಿಸ್ತಾನವು ಸರಬ್ಜಿತ್‍ನನ್ನು ನೇಣಿಗೇರಿಸಲಿದೆ ಎಂಬೊಂದು ಸುದ್ದಿಯು ಅನೇಕ ಬಾರಿ ಮಾಧ್ಯಮಗಳಲ್ಲಿ ಹರಿದಾಡಿದೆ. ಆ ಸುದ್ದಿಯನ್ನು ‘ವಿಳಾಸ ಇಲ್ಲದ ಸುದ್ದಿ' ಎಂದು ತಳ್ಳಿ ಹಾಕಿ ಬಿಡಬಹುದಾದರೂ ಆಳದಲ್ಲಿ, ‘ಇದ್ದರೂ ಇದ್ದೀತು' ಅನ್ನುವ ಅನುಮಾನ ಆ ಕುಟುಂಬ ದಲ್ಲಷ್ಟೇ ಅಲ್ಲ, ಜನಸಾಮಾನ್ಯರಲ್ಲೂ ಇದೆ. ಬಹುಶಃ ಸರಬ್ಜಿತ್ ಸಿಂಗ್ ಈ ವರೆಗೆ ಬದುಕುಳಿದಿರುವುದು ಅಫ್ಝಲ್ ಗುರುವಿನ ಕಾರಣದಿಂದಲೋ ಏನೋ. ಆದರೆ ‘ಲಡ್ಡು ತಿಂದು ಸಾವನ್ನು ಸಂಭ್ರಮಿಸುವ ವರ್ಗಕ್ಕೆ' ಇವೆಲ್ಲ ಮುಖ್ಯವಾಗುವ ಸಾಧ್ಯತೆಯೇ ಇಲ್ಲ. ಅಫ್ಝಲ್ ಗುರುವನ್ನು ಮುಂದಿಟ್ಟುಕೊಂಡು ಈ ವರ್ಗ ಈ ದೇಶದಲ್ಲಿ ಓಟು ಕೇಳಿದೆ. ಮುಸ್ಲಿಮರನ್ನು ದೇಶದ್ರೋಹಿಗಳೆಂದು ಚಿತ್ರಿಸುವುದಕ್ಕೆ ಗುರುವನ್ನು ಪರೋಕ್ಷವಾಗಿ ಬಳಸಿಕೊಂಡಿದೆ. ಮಾತ್ರವಲ್ಲ, ಕಸಬ್ ಮತ್ತು ಗುರು ಇನ್ನೂ ಜೀವಂತವಿರುತ್ತಿದ್ದರೆ, ಮುಂದಿನ ಚುನಾವಣೆಯಲ್ಲಿ ಅವರನ್ನು ದುರುಪಯೋಗಿಸುವ ಎಲ್ಲ ಸಾಧ್ಯತೆಯೂ ಇತ್ತು. ಈ ಅವಕಾಶವನ್ನು ಸದ್ಯ ಕಾಂಗ್ರೆಸ್ ಕಸಿದುಕೊಂಡಿರುವುದರಿಂದ ಈ ವರ್ಗವು ಇದೀಗ ಕಾಶ್ಮೀರದಲ್ಲಾಗುವ ಪ್ರತಿಭಟನೆಯನ್ನು ಭಾರೀ ಕುತೂಹಲದಿಂದ ವೀಕ್ಷಿಸುತ್ತಿದೆ. ಯಾಕೆಂದರೆ, ಮುಂದಿನ ಚುನಾವಣೆಯಲ್ಲಿ ದೇಶಭಕ್ತಿಯ ಭಾಷಣ ಬಿಗಿಯಲು ಒಂದಷ್ಟು ದೇಶದ್ರೋಹಿ ಕತೆಗಳ ಅಗತ್ಯವಿದೆ. ಒಂದು ವೇಳೆ ಸರಬ್ಜಿತ್‍ಗೆ ಗಲ್ಲಾಗಿ ಬಿಟ್ಟರೆ ಅದಕ್ಕಾಗಿ ಸಂಭ್ರಮಿಸುವ ಸಾಧ್ಯತೆಯಿರುವುದು ಈ ವರ್ಗ ಮಾತ್ರ. ಆ ಮೊಲಕ ಪಾಕಿಸ್ತಾನವನ್ನು ನಿಂದಿಸುವುದಕ್ಕೆ ಮತ್ತು ಸಾವನ್ನು ಓಟಾಗಿ ಪರಿವರ್ತಿಸುವುದಕ್ಕೆ ಅವಕಾಶವಿದೆಯಲ್ಲವೇ?
   ಅಂದಹಾಗೆ, ಕಸಬ್‍ನ ಬಳಿಕ ಇದೀಗ ಅಫ್ಝಲ್ ಗುರುವನ್ನು ನೇಣಿಗೇರಿಸುವ ಮೂಲಕ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಗೆ ಒಳ್ಳೆಯ ತಯಾರಿ ನಡೆಸಿದೆ. ಹತ್ಯಾಕಾಂಡದ ಆರೋಪಿಯೊಬ್ಬ ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತಗೊಳ್ಳುತ್ತಿರುವಾಗ ಕೆಲವೊಂದು ತಲೆಗಳನ್ನು ಉರುಳಿಸದೇ ಆತನನ್ನು ಎದುರಿಸುವುದಕ್ಕೆ ಸಾಧ್ಯವಾಗಲಾರದು ಎಂದು ಕಾಂಗ್ರೆಸ್ ಭಾವಿಸಿರುವಂತಿದೆ. ಆದ್ದರಿಂದಲೇ ರಾಹುಲ್ ಗಾಂಧಿಯ ಕೈಯಲ್ಲಿ ಎರಡು ತಲೆಗಳನ್ನು ಕೊಟ್ಟು ಮೋದಿಯನ್ನು ಎದುರಿಸುವುದಕ್ಕೆ ಸಜ್ಜಾಗಿ ನಿಲ್ಲಿಸಿದೆ. ಇಷ್ಟಕ್ಕೂ, ಅಫ್ಝಲ್ ಮತ್ತು ಕಸಬ್ ಎಂಬ ಪ್ರಭಾವಿ ಅಸ್ತ್ರಗಳನ್ನು ಕಳಕೊಂಡು ಕುಸಿದಿರುವ ಬಿಜೆಪಿ ಮುಂದಿನ ದಿನಗಳಲ್ಲಿ ರಾಮ ಮಂದಿರವನ್ನು ಆಯ್ಕೆ ಮಾಡಿಕೊಂಡರೆ ಕಾಂಗ್ರೆಸ್ ಇನ್ನೊಂದು ಹೆಜ್ಜೆ ಮುಂದಿಡಲೂ ಬಹುದು. ಬಿಜೆಪಿಗಿಂತ ಮೊದಲೇ ರಾಮಮಂದಿರಕ್ಕೆ ಅಡಿಗಲ್ಲನ್ನು ಹಾಕಿ ಬಿಜೆಪಿಯ ಬಾಯಿ ಮುಚ್ಚಿಸುವುದಕ್ಕೂ ಪ್ರಯತ್ನಿಸ ಬಹುದು. ಕಾಂಗ್ರೆಸ್‍ನ ಸದ್ಯದ ಧಾವಂತವನ್ನು ನೋಡಿದರೆ ಅದು ಯಾವುದಕ್ಕೂ ಹೇಸುವ ಸ್ಥಿತಿಯಲ್ಲಿಲ್ಲ. ಬಿಜೆಪಿಗೆ ಸದ್ಯ ಭ್ರಷ್ಟಾಚಾರದ ಬಗ್ಗೆ ಮಾತಾಡುವ ಅರ್ಹತೆಯಿಲ್ಲ ಅನ್ನುವುದು ಕಾಂಗ್ರೆಸ್‍ಗೆ ಗೊತ್ತು. ಅಭಿವೃದ್ಧಿಯ ಮಾತಾಡಿದರೆ ಜನ ನಂಬುವ ಸಾಧ್ಯತೆಯೂ ಇಲ್ಲ. ಆದ್ದರಿಂದ ಬಿಜೆಪಿ ಭಯೋತ್ಪಾದನೆ ಮತ್ತು ರಾಮಮಂದಿರವನ್ನು ಮುಂದಿಟ್ಟುಕೊಂಡೇ ಮುಂದಿನ ಚುನಾವಣೆಯನ್ನು ಎದುರಿಸಬೇಕಾಗುತ್ತದೆ. ಇಂಥ ಸ್ಥಿತಿಯಲ್ಲಿ ಬಿಜೆಪಿಯಿಂದ ಆ ಎರಡೂ ಅಸ್ತ್ರಗಳನ್ನು ಕಸಿದುಕೊಳ್ಳುವುದಕ್ಕೆ ಕಾಂಗ್ರೆಸ್ ತೀರ್ಮಾನಿಸಿರುವ ಸಾಧ್ಯತೆಯಿದೆ. ಅದರ ಭಾಗವಾಗಿಯೇ ಎರಡು ತಲೆಗಳನ್ನು ಉರುಳಿಸಲಾಗಿದೆ. ಒಂದು ವೇಳೆ ಬಿಜೆಪಿಯು ರಾಮಮಂದಿರದ ಬಗ್ಗೆ ಆಂದೋಲನ ನಡೆಸಿದರೆ ಆ ಅಸ್ತ್ರವನ್ನೂ ಕಸಿಯುವುದಕ್ಕೆ ತಂತ್ರ ರೂಪಿಸಬಹುದು.
   ದುರಂತ ಏನೆಂದರೆ, ಅಕ್ಕಿ, ಗೋಧಿ, ಸಕ್ಕರೆ ಸಹಿತ ದಿನ ನಿತ್ಯದ ಆಹಾರ ಪದಾರ್ಥಗಳು ಬೆಲೆ ಏರಿಸಿಕೊಂಡು ಜನಸಾಮಾನ್ಯರ ಕೊರಳು ಹಿಂಡುತ್ತಿರುವಾಗ ಈ ದೇಶದ ಪ್ರಮುಖ ಎರಡು ರಾಜಕೀಯ ಪಕ್ಷಗಳು ತಲೆಗಳನ್ನು ಉರುಳಿಸುವ ಲೆಕ್ಕಾಚಾರದಲ್ಲಿ ತೊಡಗಿವೆ ಅನ್ನುವುದು. ಒಂದು ಪಕ್ಷ ತಲೆ ಹಾರಿಸುವಾಗ ಇನ್ನೊಂದು ಪಕ್ಷ ಲಡ್ಡು ಹಂಚುತ್ತದೆ. ಇಂಥ ಪಕ್ಷಗಳು ಈ ದೇಶವನ್ನು ಎಲ್ಲಿಗೆ ಕೊಂಡೊಯ್ದಾವು? ತಲೆಗಳ ಹೊರತು ಜನರ ಮುಂದೆ ಹೇಳಿಕೊಳ್ಳುವುದಕ್ಕೆ ಅವುಗಳ ಬಳಿ ಬೇರೇನೂ ಇಲ್ಲ ಅನ್ನುವುದು ಏನನ್ನು ಸೂಚಿಸುತ್ತದೆ?
   ಏನೇ ಆಗಲಿ, ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದ ಮೋದಿಗೆ ಪ್ರತಿ ಸವಾಲು ಎಸೆಯಲು ಕಾಂಗ್ರೆಸ್ ಗರಿಷ್ಠ ಶ್ರಮಿಸುತ್ತಾ ಇದೆ. ಮೋದಿಯ ಕೈಯಲ್ಲಿರುವ 2 ಸಾವಿರ ತಲೆಗಳಿಗಿಂತ ಪ್ರಭಾವಶಾಲಿಯಾದ ಎರಡು ತಲೆಗಳನ್ನು ಅದು ಈಗಾಗಲೇ ತನ್ನ ಬತ್ತಳಿಕೆಯಲ್ಲಿ ಪೇರಿಸಿಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳಿಗೆ ಇನ್ನಷ್ಟು ತಲೆಗಳ ಅಗತ್ಯ ಬೀಳಲೂ ಬಹುದು. ಅಗತ್ಯ ಬಿದ್ದರೆ ಸರಬ್ಜಿತ್ ಸಿಂಗ್‍ನನ್ನು ಶೀಘ್ರ ಗಲ್ಲಿಗೇರಿಸುವಂತೆ ಒಳಗಿಂದೊಳಗೇ ಪಾಕ್‍ಗೆ ಒತ್ತಡ ಹೇರಲೂ ಬಹುದು. ಆದ್ದರಿಂದ ಓಟು ಮುಗಿಯುವ ವರೆಗೆ ನಮ್ಮ ನಮ್ಮ ತಲೆಗಳನ್ನು ಉರುಳದಂತೆ ಕಾಪಾಡಿಕೊಳ್ಳೋಣ.

Wednesday, 6 February 2013

‘ಪಾಶಿ’ಗೆ ಒಳಗಾಗುವ ಮಕ್ಕಳ ಮಧ್ಯೆ ನಾವು-ನೀವು?

ಸ್ನೇಹ

  ವಿದ್ಯಾರ್ಥಿ- ಯುವಸಮೂಹದ ಬಗ್ಗೆ ಈ ದೇಶದಲ್ಲಿ ದೊಡ್ಡದೊಂದು ನಿರೀಕ್ಷೆಯಿದೆ. ಹೆತ್ತವರು, ಶಿಕ್ಷಕರು, ಸಂಘಟನೆಗಳು, ರಾಜಕೀಯ ಪಕ್ಷಗಳು.. ಎಲ್ಲರೂ ಈ ವರ್ಗದ ಮೇಲೆ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ. ಭ್ರಷ್ಟಮುಕ್ತ, ಅತ್ಯಾಚಾರಮುಕ್ತ, ಕೆಡುಕು ಮುಕ್ತ ದೇಶವಾಗಿ ಭಾರತವನ್ನು ಕಟ್ಟಲು ಈ ಸಮೂಹಕ್ಕೆ ಸಾಧ್ಯವಾಗಲಿದೆ ಎಂಬ ನಂಬುಗೆಯನ್ನು ಆಗಾಗ ವ್ಯಕ್ತಪಡಿಸಲಾಗುತ್ತಿದೆ. ಆದರೆ ಇವೇ ಯುವ ಸಮೂಹ ಕೆಲವೊಮ್ಮೆ ಸುದ್ದಿ ಮಾಡುತ್ತಿರುವ ರೀತಿಯನ್ನು ನೋಡುವಾಗ ಆಘಾತವಾಗುತ್ತದೆ. ದೇಶ ಇಂಥವರ ಕೈಯಲ್ಲಿ ಸುರಕ್ಷಿತವಾಗಿ ಉಳಿಯ ಬಲ್ಲುದೇ ಅನ್ನುವ ಅನುಮಾನಗಳೂ ಕಾಡುತ್ತವೆ. 1. ಬೆಂಗಳೂರು ಸಮೀಪದ ರಾಮನಗರ ಜಿಲ್ಲೆಯ ಮೂವರು ಪಿಯುಸಿ ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯ ಸಮುದ್ರ ಕಿನಾರೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಯೇ ಈ ಸಾವಿಗೆ ಕಾರಣ. 2. ಹೈಸ್ಕೂಲ್ ಮಟ್ಟದಲ್ಲೇ ಮಾದಕ ಚಟವನ್ನು ಅಂಟಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸ್ನೇಹ ಎಂಬ ವಿಧ್ಯಾರ್ಥಿನಿ  ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಡ್ರಗ್ಸ್ ಗೆ ಹೆತ್ತವರು ದುಡ್ಡು ಕೊಡದಿರುವುದೇ ಆತ್ಮಹತ್ಯೆಗೆ ಕಾರಣ..
  ಕಳೆದ ವಾರದ ಹತ್ತಾರು ಸುದ್ದಿಗಳ ಮಧ್ಯೆ ಅತ್ಯಂತ ಆಳವಾಗಿ ಇರಿದ ಎರಡು ಸುದ್ದಿಗಳಿವು. ನಿಜವಾಗಿ, ಸಂಪಾದಕೀಯಕ್ಕೆ ಈ ಎರಡು ಸುದ್ದಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅಗತ್ಯವೇನೂ ಇರಲಿಲ್ಲ. ಒಂದೇ ದಿನ ನಡೆದ ಈ ಎರಡು ಘಟನೆಗಳು ಮಾಧ್ಯಮಗಳ ಮುಖಪುಟದಲ್ಲಿ ಪ್ರಕಟವಾಗಿಯೂ ಇರಲಿಲ್ಲ. ಆದರೆ ಸಾವಿಗೀಡಾದ ಈ ಮೂರು ಜೀವಗಳಿಗೆ 'ಮೂರು' ಎಂಬ ಗುರುತಿಗಿಂತ ಹೊರತಾದ ಮಗ್ಗುಲುಗಳಿವೆ. ಬದುಕಿನಲ್ಲಿ ಸಾಧನೆಗಳನ್ನೆಲ್ಲ ಮಾಡಿ ವೃದ್ಧಾಪ್ಯದಲ್ಲಿ ಸಾವಿಗೀಡಾಗುವ ಹಿರಿಯರಂಥಲ್ಲ ಈ ಮೂರು ಜೀವಗಳು. ನಿಜವಾಗಿ, ಪ್ರೇಮಕ್ಕೋ ಮಾದಕ ವ್ಯಸನಕ್ಕೋ ಬಲಿ ಬಿದ್ದು ಬದುಕನ್ನೇ ಕೊನೆಗೊಳಿಸುವ ದೊಡ್ಡದೊಂದು ಎಳೆಪ್ರಾಯದ ಗುಂಪು ನಮ್ಮ ಮಧ್ಯೆ ಇವೆ. ಅವು ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿ ಮಾಡುವುದಿಲ್ಲ. ರಾಜಕೀಯ ವೇದಿಕೆಗಳಲ್ಲಿ ಚರ್ಚೆಗೊಳಗಾಗುವುದಿಲ್ಲ. ಸಂಪಾದಕೀಯಕ್ಕೆ ವಸ್ತುವಾಗುವುದಿಲ್ಲ.. ಹೀಗೆ ಯಾರ ಗಮನಕ್ಕೂ ಬಾರದೇ ಕಳೆದು ಹೋಗುವ ಮಕ್ಕಳ ಬಗ್ಗೆ ಗಂಭೀರ ಚರ್ಚೆಯಾಗಬೇಕಾದ ಅಗತ್ಯ ಇದೆ. ಅಂದಹಾಗೆ, ತಮಗೆ ತಾವೇ ಪಾಶಿ ಕೊಟ್ಟುಕೊಳ್ಳಬೇಕಾದಂಥ ಯಾವ ತಪ್ಪನ್ನೂ ಯಾವ ಮಕ್ಕಳೂ ಮಾಡಿರುವುದಿಲ್ಲ. ಹೆತ್ತವರು ಮಕ್ಕಳಿಗೆ ಬುದ್ಧಿವಾದ ಹೇಳುವುದು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದೂ ಅಲ್ಲ. ಒಂದು ವೇಳೆ ತಮ್ಮ ಬುದ್ಧಿವಾದದಿಂದ ಮಕ್ಕಳು ಆತ್ಮಹತ್ಯೆಗೆ ಪ್ರಯತ್ನಿಸಿಯಾರು ಎಂಬ ಸಣ್ಣ ಅನುಮಾನ ಬಂದರೂ ಸಾಕು, ಯಾವ ಹೆತ್ತವರೂ ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳಲಾರರು. ಯಾಕೆಂದರೆ, ಎಳೆಪ್ರಾಯದ ಮಕ್ಕಳ ಸಾವು ಅತ್ಯಂತ ಹೆಚ್ಚು ಬಾಧಿಸುವುದು ಹೆತ್ತವರನ್ನು. ಅವರು ಮಕ್ಕಳ ಮೇಲೆ ದೊಡ್ಡದೊಂದು ಕನಸಿನ ಗೋಪುರವನ್ನೇ ಕಟ್ಟಿರುತ್ತಾರೆ. ತಮ್ಮ ಮಗು ಸಮಾಜದಲ್ಲಿ ಇಂತಿಂಥ ಪಾತ್ರವನ್ನು ನಿರ್ವಹಿಸಬೇಕು ಎಂದು ಆಸೆ ಪಟ್ಟಿರುತ್ತಾರೆ. ವೃದ್ಧಾಪ್ಯದಲ್ಲಿ ಆಸರೆಯಾಗಬಹುದು ಎಂದು ನಿರೀಕ್ಷಿಸಿರುತ್ತಾರೆ. ಹೀಗಿರುವಾಗ, ಬುದ್ಧಿವಾದವು ಮಗುವಿನ ಪ್ರಾಣವನ್ನೇ ಕಸಿದುಕೊಳ್ಳುವುದಾದರೆ ಯಾರು ತಾನೇ ಅಂಥ ಬುದ್ಧಿವಾದಕ್ಕೆ ಮುಂದಾದಾರು?
ರಾಜಕೀಯದ ಸುತ್ತ ಕೇಂದ್ರೀಕೃತಗೊಂಡಿರುವ ಮಾಧ್ಯಮ ಚರ್ಚೆಗಳು ಆಗಾಗ ಇಂಥ ಸಾವುಗಳ ಸುತ್ತವೂ ತಿರುಗಬೇಕಾದ ಅಗತ್ಯ ಇದೆ. ರಾಜಕೀಯವನ್ನು ಒಂದು ದಿನದ ಮಟ್ಟಿಗೆ ಬದಿಗಿರಿಸಿ, ಎಳೆಯರ ‘ಪಾಶಿ’ಗಳಿಗೆ ಮುಖಪುಟವನ್ನು ಮೀಸಲಿರಿಸಿದರೆ ಖಂಡಿತ ಓದುಗರ ಚರ್ಚಾವಸ್ತುವೇ ಬದಲಾಗುವುದಕ್ಕೆ ಸಾಧ್ಯವಿದೆ. ಇಷ್ಟಕ್ಕೂ, ದೆಹಲಿಯಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಮಾಧ್ಯಮಗಳು ವಾರಗಟ್ಟಲೆ ಮುಖಪುಟದಲ್ಲಿಟ್ಟು ಚರ್ಚಿಸಿದ್ದರಿಂದಲೇ ವ್ಯಾಪಕ ಪ್ರತಿಭಟನೆಗೆ, ವರ್ಮಾ ಆಯೋಗದ ನೇಮಕಕ್ಕೆ ಮತ್ತು ಅದರ ಶಿಫಾರಸ್ಸುಗಳಿಗೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡುವುದಕ್ಕೆ ಕಾರಣವಾಗಿದೆಯಲ್ಲವೇ? ಒಂದು ವೇಳೆ, ಆ ಘಟನೆಗೆ ಆ ಮಟ್ಟದಲ್ಲಿ ಮಾಧ್ಯಮ ಪ್ರಚಾರ ಸಿಗದೇ ಇರುತ್ತಿದ್ದರೆ, ಇಷ್ಟು ಶೀಘ್ರವಾಗಿ ಕಾನೂನೊಂದು ನಿರ್ಮಾಣವಾಗುವುದಕ್ಕೆ ಸಾಧ್ಯವಿತ್ತೇ?
  ಯುವಸಮೂಹವನ್ನು ದೇಶದ ಭವಿಷ್ಯ ಎಂದು ಕೊಂಡಾಡುವಾಗ ಈ ಸಮೂಹವನ್ನು ಜವಾಬ್ದಾರಿಯುತ ವರ್ಗವಾಗಿ ಬೆಳೆಸಬೇಕಾದ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕಾಗಿದೆ. ಮದ್ಯ, ಡ್ರಗ್ಸ್, ಪ್ರೀತಿ-ಪ್ರೇಮಗಳ ಸುಳಿಯಲ್ಲಿ ಈ ಸಮೂಹ ಕಳೆದುಹೋಗದಂತೆ ಜಾಗರೂಕತೆ ಪಾಲಿಸಬೇಕಾದ ತುರ್ತಿದೆ. ಕೆಡುಕು, ಅಶ್ಲೀಲತೆಗಳು, ಜಾಗತಿಕವಾಗಿ ವ್ಯಾಪಿಸಿಕೊಂಡಿರುವ ಸಂದರ್ಭ ಇದು. ಮಕ್ಕಳು ಕೆಡುವುದಕ್ಕೆ ನೂರಾರು ದಾರಿಗಳು ನಮ್ಮ ಸುತ್ತ-ಮುತ್ತಲೇ ತೆರೆದುಕೊಂಡಿರುವಾಗ ಅವುಗಳಿಂದ ತಪ್ಪಿಸಿ ಬೆಳೆಸುವ ಹೆತ್ತವರ ಹೊಣೆಗಾರಿಕೆ ಸಣ್ಣದೇನಲ್ಲ. ಇಂಥ ಸಂದರ್ಭಗಳಲ್ಲಿ ಹೆತ್ತವರು ಮತ್ತು ಶಿಕ್ಷಕರು ಸಂಯಮದಿಂದ ವರ್ತಿಸಬೇಕು. ಯಾಕೆಂದರೆ ಮಕ್ಕಳಿಗೆ ತಪ್ಪು ಮಾಡಲು ಗೊತ್ತಿರುತ್ತದೆಯೇ ಹೊರತು, ಎದುರಾಗುವ ಸವಾಲುಗಳಿಗೆ ಉತ್ತರಿಸುವುದು ಗೊತ್ತಿರುವುದಿಲ್ಲ. ಒಂದು ರೀತಿಯಲ್ಲಿ ಹೆತ್ತವರ ಶಿಕ್ಷೆಯ ಬಗ್ಗೆ ಹತ್ತು-ಹಲವು 'ಭಯ'ಗಳನ್ನು ಮನದಲ್ಲಿ ಪೋಷಿಸುತ್ತಾ ಅವು ಬದುಕುತ್ತವೆ. ಅಂಥ ಭಯಗಳನ್ನು ಇಮ್ಮಡಿಗೊಳಿಸುವ ರೂಪದಲ್ಲಿ ಹೆತ್ತವರ ವರ್ತನೆ ಇರಬಾರದು. ತಪ್ಪನ್ನು ತಿದ್ದಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು. ಪ್ರೀತಿಯಿಂದ ಮಾತಾಡಿಸಿ ಆಪ್ತತೆ ಬೆಳೆಸಿಕೊಳ್ಳಬೇಕು.
  ಏನೇ ಆಗಲಿ, ಸಮುದ್ರ ಕಿನಾರೆಯಲ್ಲೋ ಫ್ಯಾನಿನಲ್ಲೋ  ನೇತಾಡಿಕೊಂಡು ಕಳೆದು ಹೋಗಬೇಕಾದವರಲ್ಲ ನಮ್ಮ ಮಕ್ಕಳು. ಅವರು ಈ ಸಮಾಜದ ಮುತ್ತುಗಳು. ಅವರನ್ನು ಈ ದೇಶ ಅವಲಂಬಿಸಿಕೊಂಡಿದೆ. ಹೆತ್ತವರು, ಸಮಾಜ, ಸಂಘಟನೆಗಳು.. ಎಲ್ಲವೂ ಅವರ ಮೇಲೆ ಭರವಸೆ ಇಟ್ಟು ಬದುಕುತ್ತಿವೆ. ಆದ್ದರಿಂದ, ಯುವ ಸಮೂಹವನ್ನು ಜತನದಿಂದ ಕಾಪಾಡಬೇಕಾದ ಹೊಣೆಗಾರಿಕೆಯನ್ನು ಎಲ್ಲರೂ ಹೊತ್ತುಕೊಳ್ಳಬೇಕಿದೆ. ಹೆತ್ತವರಿಗೋ ಸಮಾಜಕ್ಕೋ ಹೆದರಿ ಪಾಶಿಗೆ ಮುಂದಾಗುವ ಮಕ್ಕಳಿಗೆ ಧೈರ್ಯ ತುಂಬಿ ತಿದ್ದಬೇಕಿದೆ. ‘ಸಾವು ಯಾವುದಕ್ಕೂ ಪರಿಹಾರ ಅಲ್ಲ..’ ಎಂಬ ಜಾಗೃತಿ ಪ್ರಜ್ಞೆಯನ್ನು ಯುವ ಪೀಳಿಗೆಯಲ್ಲಿ ತುಂಬಬೇಕಿದೆ.