Monday, 25 March 2013

ಹೋಳಿ ಆಚರಿಸುವ ವಿಧವೆಯರ ಮಧ್ಯೆ ಆ ಪ್ರವಾದಿ

ವೃಂದಾವನದ ಓರ್ವ ವಿಧವೆ
   ಮಥುರಾದ ವೃಂದಾವನದಲ್ಲಿರುವ ವಿಧವೆಯರು ಹೋಳಿ  ಆಚರಿಸಿದ ಸುದ್ದಿಯನ್ನು ಮಾಧ್ಯಮಗಳು ಭಾರೀ ಒತ್ತು ಕೊಟ್ಟು ಪ್ರಕಟಿಸಿವೆ. ದಿ ಹಿಂದೂವಿನಂಥ ಪ್ರಮುಖ ಪತ್ರಿಕೆಗಳು ಸುದ್ದಿಯನ್ನು ಪೋಟೋ ಸಹಿತ ಮುಖಪುಟದಲ್ಲೇ ಪ್ರಕಟಿಸಿವೆ. ನಿಜವಾಗಿ ಹೋಳಿಯಂಥ ಹಬ್ಬಗಳ ಆಚರಣೆಯು ಮಾಧ್ಯಮಗಳ ಮುಖಪುಟದಲ್ಲಿ ಸುದ್ದಿಯಾಗುವುದು ತೀರಾ ಕಡಿಮೆ. ಯಾಕೆಂದರೆ ಹಬ್ಬಾಚರಣೆ ತೀರ ಸಾಮಾನ್ಯ ಸುದ್ದಿ. ಅದು ಅಸಾಮಾನ್ಯವಾಗುವುದು ಯಾವಾಗ ಎಂದರೆ, ಆಚರಣೆಯ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸಬೇಕು. ಆದರೆ ವೃಂದಾವನದಲ್ಲಿ ಅಂಥದ್ದೇನೂ ಸಂಭವಿಸಿಲ್ಲ. ಮಹಿಳೆಯರು ಒಟ್ಟು ಸೇರಿ ತೀರಾ ಸಾಮಾನ್ಯವಾಗಿ ಹೋಳಿ ಆಚರಿಸಿದ್ದಾರೆ. ಬಣ್ಣ ಎರಚಿಕೊಂಡಿದ್ದಾರೆ. ಆದರೂ ಅದು ಬ್ರೇಕಿಂಗ್ ನ್ಯೂಸ್ ಆಗುತ್ತದೆಂದರೆ, ಅದರ ಸಂಪೂರ್ಣ ಹೊಣೆಯನ್ನು ಈ ನಾಗರಿಕ ಸಮಾಜ ಹೊತ್ತುಕೊಳ್ಳಬೇಕು. ಒಂದು ವೇಳೆ ಆ ಮಹಿಳೆಯರು ವಿಧವೆಯರು ಆಗದಿರುತ್ತಿದ್ದರೆ, ಅದು ಪತ್ರಿಕೆಗಳ ಮುಖಪುಟಕ್ಕೆ ಬರುತ್ತಿತ್ತೇ? ವಿಧವೆಯರನ್ನು ಅಮಂಗಲೆಯರು, ಸಂತೋಷಪಡುವುದಕ್ಕೆ ಅನರ್ಹರು ಎಂದು ತೀರ್ಪಿತ್ತು, ಅಪರಾಧಿಗಳಂತೆ ಜೀವನ ಪೂರ್ತಿ ಬಾಳುವುದಕ್ಕೆ ಪ್ರಚೋದನೆ ಕೊಟ್ಟವರಾದರೂ ಯಾರು? ವಿಧವೆ ಆಗುವುದು ಯಾಕೆ ಅಪರಾಧ ಅನ್ನಿಸಿಕೊಳ್ಳಬೇಕು? ಹಾಗಾದರೆ ವಿಧುರತನವೂ ಅಪರಾಧವೇ ಆಗಬೇಕಲ್ಲವೇ? ಆದರೆ ಈ ನಾಗರಿಕ ಸಮಾಜದಲ್ಲಿ ವಿಧವೆಯರಿಗೆ ವೃಂದಾವನ ಇರುವಂತೆ ವಿಧುರರಿಗೆ ಯಾವ ನಿರ್ದಿಷ್ಟ ಜಾಗವೂ ಇಲ್ಲ. ಅವರು ಮತ್ತೆ ಮದುವೆಯಾಗುತ್ತಾರೆ. ಸಂತೋಷ ಕೂಟಗಳಲ್ಲಿ ಭಾಗಿಯಾಗುತ್ತಾರೆ. ಅವರನ್ನು ಅಮಂಗಲ ಎಂದು ಯಾರೂ ಪರಿಗಣಿಸುವುದಿಲ್ಲ. ಹೀಗಿರುವಾಗ ಹೆಣ್ಣು ಮಾತ್ರ ಗಂಡನನ್ನು ಕೊಂದ ಪಾತಕಿಯಂತೆ ತಲೆ ತಗ್ಗಿಸಿ, ಯಾಕೆ ಪರಿತ್ಯಾಗಿ ಜೀವನ ನಡೆಸಬೇಕು? ಈ 21ನೇ ಶತಮಾನದಲ್ಲೂ ವಿಧವೆಯರು ಹಬ್ಬ ಆಚರಿಸುವುದು ಬ್ರೇಕಿಂಗ್ ನ್ಯೂಸ್ ಆಗುತ್ತದೆಂದರೆ ಅದರ ಅರ್ಥವೇನು? ಒಂದು ಕಡೆ ಮಹಿಳಾ ದೌರ್ಜನ್ಯದ ವಿರುದ್ಧ ತಿಂಗಳುಗಟ್ಟಲೆ ಪ್ರತಿಭಟನೆ ನಡೆಯುತ್ತದೆ. ದೌರ್ಜನ್ಯ ನಡೆಸುವವರನ್ನು ನೇಣಿಗೇರಿಸಬೇಕು ಎಂದು ಒತ್ತಾಯಿಸಲಾಗುತ್ತದೆ. ಇನ್ನೊಂದು ಕಡೆ ಅದೇ ಮಹಿಳೆಗೆ ಸಹಜ ಬದುಕಿನ ಸ್ವಾತಂತ್ರ್ಯವನ್ನೂ ನಿಷೇಧಿಸಲಾಗುತ್ತದೆ. ಇಷ್ಟಕ್ಕೂ ವೃಂದಾವನದಲ್ಲಿ ಇದೇ ಮೊದಲ ಬಾರಿ 800ರಷ್ಟು ವಿಧವೆಯರು ಹೋಳಿ ಆಚರಿಸಿದ್ದಾರೆ. 16-17 ವರ್ಷಗಳಲ್ಲೇ ವಿಧವೆಯರಾದ ಹೆಣ್ಣು ಮಕ್ಕಳು ಆ ಬಳಿಕ ಜೀವನಪೂರ್ತಿ ಶ್ರೀ ಕೃಷ್ಣನ ಜನ್ಮ ಸ್ಥಾನವಾದ ವೃಂದಾವನದ ಆಶ್ರಮಗಳಲ್ಲೇ ಭಜನೆ, ಭಿಕ್ಷೆ ಬೇಡುತ್ತಾ ಬದುಕುವ ಪರಿಸ್ಥಿತಿ ಇದೆ. ಇವರ ದಾರುಣ ಬದುಕಿನ ಕತೆಯನ್ನು ಕಳೆದ ವರ್ಷ ಆಲಿಸಿದ ಸುಪ್ರೀಮ್ ಕೋರ್ಟು ತಲೆ ತಗ್ಗಿಸಿತ್ತು. ಸಾವಿಗೀಡಾಗುವ ವಿಧವೆಯರನ್ನು ಅಂತ್ಯಸಂಸ್ಕಾರ ಮಾಡಲು ದುಡ್ಡು ಸಾಕಾಗದೇ ಮೃತದೇಹವನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಎಸೆಯುತ್ತಿರುವ ಪತ್ರಿಕಾ ವರದಿಯನ್ನು ಓದಿ ಕೋರ್ಟು ದಿಗಿಲುಗೊಂಡಿತ್ತು. ವಿಧುರರಿಗಿಲ್ಲದ ಕ್ರೂರ ಕಟ್ಟುಪಾಡುಗಳನ್ನು ಕೇವಲ ವಿಧವೆಯರಿಗೆ ಮಾತ್ರ ಅಳವಡಿಸಿ ಈ ಸಮಾಜ ತಣ್ಣಗೆ ಕೂತಿರುವಾಗಲೇ, ಹೋಳಿಯ ಮೂಲಕ ವಿಧವೆಯರೆಂಬ ನಿಷ್ಪಾಪಿ ಮಹಿಳೆಯರು ಮತ್ತೆ ಸುದ್ದಿಗೊಳಗಾಗಿದ್ದಾರೆ. ಅವರನ್ನು ಆ ಕಟು ಬಂಧನದಿಂದ ಹೊರತರುವ ಎನ್‍ಜಿಓಗಳ ಪ್ರಯತ್ನದ ಫಲ ಈ ಆಚರಣೆಯೆಂದು ಮಾಧ್ಯಮಗಳು ಹೇಳುತ್ತಿವೆ.
   ಇಷ್ಟಕ್ಕೂ, ಹೆಣ್ಣಿನ ಕುರಿತಂತೆ ಅನೇಕಾರು ಗೌರವಪೂರ್ಣ ಪದಗಳು, ಕೊಂಡಾಟದ ನುಡಿಮುತ್ತುಗಳು, ಕೌತುಕಪೂರ್ಣ ಕತೆಗಳು ಈ ದೇಶದಲ್ಲಿ ಧಾರಾಳ ಇವೆ. ದುರಂತ ಏನೆಂದರೆ, ಅವ್ಯಾವುವೂ ಪ್ರಾಯೋಗಿಕವಾಗಿ ಜಾರಿಯಲ್ಲಿಲ್ಲ ಅನ್ನುವುದು. ವೈಧವ್ಯ ಕೂಡ ಹಾಗೆಯೇ. ಗಂಡ ಮೃತಪಟ್ಟರೆ ಪತ್ನಿಯಾದವಳು ಆ ಬಳಿಕ ಜೀವನಪೂರ್ತಿ ಅಲಂಕಾರ ರಹಿತಳಾಗಿ, ಮರು ಮದುವೆಯಿಲ್ಲದೇ ಬಾಳಬೇಕು ಎಂಬ ನಿಯಮ ಸಮಾಜದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವರ್ಷದ ಹಿಂದೆ ವಿಧವೆಯರಿಂದಲೇ ವಿಗ್ರಹದ ತೇರು ಎಳೆಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯಿತು. ಇದೀಗ ‘ಹೋಳಿ' ಮೂಲಕ ಇನ್ನೊಂದು ಪ್ರಯತ್ನವನ್ನು ನಡೆಸಲಾಗಿದೆ.
   ನಿಜವಾಗಿ, ಓರ್ವ ಹೆಣ್ಣು ಮಗಳು ವಿಧವೆಯಾಗುವುದು ಅಪರಾಧವೋ, ಅಮಂಗಲವೋ ಖಂಡಿತ ಅಲ್ಲ. ಪ್ರಕೃತಿ ಸಹಜವಾದ ಸಾವು-ಬದುಕನ್ನು ಅಮಂಗಲ-ಮಂಗಲ ಎಂದು ವಿಭಜಿಸುವುದೇ ತಪ್ಪು. ಇಸ್ಲಾಮ್ ಇಂಥದ್ದೊಂದು ವಿಭಜನೆಯನ್ನೇ ತಿರಸ್ಕರಿಸುತ್ತದೆ. ವಿಧುರನಿಗೆ ಏನೆಲ್ಲ ಅವಕಾಶಗಳು ಇವೆಯೋ ಅವೆಲ್ಲವನ್ನೂ ವಿಧವೆಗೂ ಅದು ನೀಡುತ್ತದೆ. ವಿಧವೆ ಮಹಿಳೆಗೂ ಇತರ ಮಹಿಳೆಯರಂತೆ ಮರು ಮದುವೆಯಾಗುವ, ಅಲಂಕಾರ ಭೂಷಿತಳಾಗುವ, ಸಭೆ-ಸಮಾರಂಭಗಳಲ್ಲಿ ಭಾಗವಹಿಸುವ ಸಕಲ ಹಕ್ಕುಗಳನ್ನೂ ಅದು ನೀಡುತ್ತದೆ. ಆದ್ದರಿಂದಲೇ ಪ್ರವಾದಿ ಮುಹಮ್ಮದ್‍ರು(ಸ) ಮೊತ್ತಮೊದಲು ಮದುವೆಯಾದದ್ದೇ ತನಗಿಂತ 14 ವರ್ಷ ಹಿರಿಯಳಾದ, ಮೂರು ಮಕ್ಕಳ ತಾಯಿಯಾದ ವಿಧವೆಯನ್ನು. ಅವರು ಮದುವೆಯಾಗುವ ಸಂದರ್ಭದಲ್ಲಿ ಆ ಸಮಾಜ ವಿಧವೆಯರನ್ನು ಅಮಂಗಲೆ ಎಂದೇ ಪರಿಗಣಿಸುತ್ತಿತ್ತು. ಮದುವೆ ನಿಶ್ಚಿತಾರ್ಥಕ್ಕೋ ಗೃಹ ಪ್ರವೇಶಕ್ಕೋ ಅವಳು ಆಗಮಿಸುವುದನ್ನು ಅನಿಷ್ಠ ಎಂದು ಸಾರಿತ್ತು. ಪ್ರವಾದಿ ಮುಹಮ್ಮದರು(ಸ) ವಿಧವೆ ಖದೀಜರನ್ನು ವರಿಸುವ ಮೂಲಕ ಆ ಸಂಪ್ರದಾಯವನ್ನು ಮುರಿದರು. ಖದೀಜ ನಿಧನರಾಗುವ ವರೆಗೆ ಅವರು ಇನ್ನೊಂದು ಮದುವೆಯಾಗಲಿಲ್ಲ. ಪ್ರವಾದಿಯವರು 50 ವರ್ಷಗಳನ್ನು ದಾಟಿದ ಬಳಿಕ 10 ಮದುವೆಯಾದರಾದರೂ ಅವರಲ್ಲಿ ಒಂಬತ್ತು ಮಂದಿಯೂ ವಿಧವೆಯರಾಗಿದ್ದರು. ಅವರ ಪತ್ನಿಯರಲ್ಲಿ ಕನ್ಯೆಯಾಗಿದ್ದವರು ಒಬ್ಬರೇ. ಆ ಮೂಲಕ ಪ್ರವಾದಿ(ಸ) ಒಂದಿಡೀ ಸಮಾಜದ ಆಲೋಚನೆಯನ್ನೇ ಬದಲಿಸಿದರು. ಅಮಂಗಲೆಯರನ್ನು ಮಂಗಲೆಯರನ್ನಾಗಿಸಿದರು. ಯಾರಿಗಾದರೂ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ಆ ಮಕ್ಕಳನ್ನು ಮೌಲ್ಯವಂತರಾಗಿ ಬೆಳೆಸಿ, ವಿವಾಹ ಮಾಡಿ ಕೊಟ್ಟರೆ ಆ ಹೆತ್ತವರು ಸ್ವರ್ಗ ಪಡೆಯುತ್ತಾರೆ ಎಂದರು. ಹೆಣ್ಣಿನ ಸೇವೆ ಮಾಡಿದವರು ಸ್ವರ್ಗ ಪ್ರವೇಶಿಸುತ್ತಾರೆ ಅಂದರು. ಒಂದು ರೀತಿಯಲ್ಲಿ ಪ್ರವಾದಿ ಮುಹಮ್ಮದ್‍ರು(ಸ), ತೇರು ಎಳೆಸದೆಯೇ ‘ಹೋಳಿ' ಆಚರಿಸದೆಯೇ ವಿಧವೆಯರಿಗೆ ಗೌರವವನ್ನು ಮರಳಿ ದೊರಕಿಸಿಕೊಟ್ಟರು. ಮಹಿಳೆಯರನ್ನು ದೌರ್ಜನ್ಯದಿಂದ ಮುಕ್ತಗೊಳಿಸುವ ಹತ್ತು-ಹಲವು ‘ಕ್ರಾಂತಿ' ಮಾರ್ಗಗಳನ್ನು ಪರಿಚಯಿಸಿದರು. ಆಸ್ತಿಯಲ್ಲಿ ಹಕ್ಕನ್ನು ಒದಗಿಸಿಕೊಟ್ಟರು.
   ಆದ್ದರಿಂದ ಮಹಿಳೆಯರನ್ನು ಮತ್ತು ವಿಧವೆಯರನ್ನು ದೌರ್ಜನ್ಯ ಮುಕ್ತಗೊಳಿಸುವುದಕ್ಕಾಗಿ ಪ್ರವಾದಿ ಮುಹಮ್ಮದ್‍ರ(ಸ) ‘ಕ್ರಮಗಳು' ಪ್ರಸ್ತುತವೇ ಎಂಬ ಬಗ್ಗೆ ಈ ಸಮಾಜ ಅಧ್ಯಯನ ನಡೆಸಬೇಕಾದ ಅಗತ್ಯವಿದೆ. ಅಂದಹಾಗೆ, 14ನೇ ಶತಮಾನದಲ್ಲಿ ಅವರ ಆಲೋಚನೆಗಳು ಮಹಿಳೆಗೆ ಗೌರವ, ಸುರಕ್ಷಿತತೆಯನ್ನು ತಂದು ಕೊಟ್ಟಿದ್ದರೆ ಈ 21ನೇ ಶತಮಾನದಲ್ಲಿ ಯಾಕೆ ಅದು ಅನ್ಯ ಅನ್ನಿಸಿಕೊಳ್ಳಬೇಕು?

ಅತ್ಯಾಚಾರಕ್ಕೆ `ಸಹಮತದ ಸೆಕ್ಸ್’ ಪರಿಹಾರವಲ್ಲ


   ಕೇವಲ ಕಾನೂನೊಂದರಿಂದಲೇ ಸಮಾಜದಲ್ಲಿ ಮೌಲ್ಯ, ನೈತಿಕತೆಯನ್ನು ಜಾರಿಗೊಳಿಸಲು ಸಾಧ್ಯ ಎಂಬ ವಾದವನ್ನು ಯಾರೂ  ಮಂಡಿಸುತ್ತಿಲ್ಲ. ಕಾನೂನುಗಳಿಗೆ ಅದರದ್ದೇ ಆದ ಮಿತಿಗಳಿವೆ, ದೌರ್ಬಲ್ಯಗಳಿವೆ. ಆದರೆ ಜನರನ್ನು ಅಮೌಲ್ಯ, ಅನೈತಿಕತೆಯೆಡೆಗೆ ಸಾಗಿಸಲು ಕಾನೂನೇ ಪ್ರೋತ್ಸಾಹ ನೀಡುವಂತಿದ್ದರೆ ಏನು ಮಾಡಬೇಕು? ಅಪರಾಧವನ್ನು ತಡೆಯುವ ಉದ್ದೇಶದಿಂದಲೇ ಕಾನೂನಿನ ನಿಮಾರ್ಣವಾಗುತ್ತದೆ ಎಂದಾದರೆ, ಸಹಮತದ ಲೈಂಗಿಕ ಕ್ರಿಯೆಯ ವಯಸ್ಸನ್ನು ಇಳಿಸಿ, ಅನೈತಿಕತೆಯನ್ನು ಕಾನೂನುಬದ್ಧ ಗೊಳಿಸಲು ಕೇಂದ್ರ ಸರಕಾರ ಮುಂದಾಗಿರುವುದೇಕೆ? ವಿವಾಹಿತರಲ್ಲದ ಹೆಣ್ಣು-ಗಂಡು ಪರಸ್ಪರ ಲೈಂಗಿಕತೆಯಲ್ಲಿ ಏರ್ಪಡುವುದೇ ಅನೈತಿಕವಾಗಿರುವಾಗ, ಅದಕ್ಕೆ ವಯಸ್ಸನ್ನು ನಿಗದಿಪಡಿಸುವುದಾದರೂ ಎಷ್ಟು ಸರಿ? 16 ವಯಸ್ಸು ತುಂಬಿದ ಯುವಕ-ಯುವತಿಯರು ಪರಸ್ಪರ ಸಮ್ಮತಿಯಿಂದ ಲೈಂಗಿಕ ಕ್ರಿಯೆಯಲ್ಲಿ ಏರ್ಪಡುವುದು ಅಪರಾಧವಲ್ಲ ಎಂಬ ಕಾನೂನನ್ನು ತರಲು ಕೇಂದ್ರ ಸರಕಾರವು ಹೊರಟಿದೆ. ಒಂದು ಕಡೆ ಅತ್ಯಾಚಾರದ ಘಟನೆಗಳು ಪತ್ರಿಕೆಗಳ ಮುಖಪುಟದಿಂದ ಹಿಡಿದು ಕೊನೆಪುಟದ ವರೆಗೆ ತುಂಬಿಕೊಂಡಿರುವ ಸಂದರ್ಭ ಇದು. ಅತ್ಯಾಚಾರವನ್ನು ತಡೆಯುವುದಕ್ಕೆ ಪ್ರಬಲ ಕಾನೂನನ್ನು ಒತ್ತಾಯಿಸಿ ತಿಂಗಳುಗಟ್ಟಲೆ ಈ ದೇಶದಲ್ಲಿ ಪ್ರತಿಭಟನೆ ನಡೆದಿದೆ. ಇಂಥ ಸಂದರ್ಭದಲ್ಲಿ ‘ಸಹಮತದ ಸೆಕ್ಸ್’ (Consensual  Sex) ಎಂಬ ಮುದ್ದಿನ ಪದವನ್ನು ಬಳಸಿಕೊಂಡು ‘ಲೈಂಗಿಕ ದೌರ್ಜನ್ಯ’ವನ್ನು ಕಾನೂನು ಬದ್ಧಗೊಳಿಸಲು ಹೊರಟಿರುವುದೇಕೆ?
  ನಿಜವಾಗಿ, ಅತ್ಯಾಚಾರಕ್ಕೂ ಸಹಮತದ ಸೆಕ್ಸ್ ಎಂಬ ಲೈಂಗಿಕ ಕ್ರಿಯೆಗೂ ಭಾರೀ ಅಂತರವೇನೂ ಇಲ್ಲ. ಸಹಮತದ ಸೆಕ್ಸ್ ನಲ್ಲಿ ಭಾಗಿಯಾಗುವ ಯುವಕ ಮತ್ತು ಯುವತಿ ಪರಸ್ಪರ ಮುನಿಸಿಕೊಂಡರೆ, ಅದು ಅತ್ಯಾಚಾರ ಪ್ರಕರಣವಾಗಿ ಬದಲಾಗಿ ಬಿಡುತ್ತದೆ. ಯುವಕನ ಮೇಲೆ ಯುವತಿ ಅತ್ಯಾಚಾರದ ಕೇಸು ದಾಖಲಿಸಿ ಬಿಡುವುದಿದೆ. ಇಷ್ಟಕ್ಕೂ ಈ ದೇಶದಲ್ಲಿ ಇವತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣ ಏನು, ಸಹಮತದ ಸೆಕ್ಸ್ ನ ವಯಸ್ಸನ್ನು 18 ರಿಂದ 16ಕ್ಕೆ ಇಳಿಸದಿದ್ದುದೆ? ವಯಸ್ಸಿನ ಮಿತಿಯನ್ನು ಕಡಿಮೆಗೊಳಿಸಿದ ಕೂಡಲೇ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿ ಬಿಡಬಲ್ಲುದೇ? ಒಂದು ರೀತಿಯಲ್ಲಿ ಸಹಮತದ ಸೆಕ್ಸ್ ಗಿರುವ ಮಾನ್ಯತೆಯೇ ಈ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣವೆನ್ನಬಹುದು. ಯಾಕೆಂದರೆ, ಇವತ್ತು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿ ಯಾರೆಲ್ಲ ಬಂಧನಕ್ಕೆ ಒಳಪಡುತ್ತಿದ್ದಾರೋ ಅವರಲ್ಲಿ ಬಹುತೇಕರೂ ಬಡತನದ ಹಿನ್ನೆಲೆಯ, ತೀರಾ ಕಡಿಮೆ ವಿದ್ಯಾಭ್ಯಾಸ ಹೊಂದಿರುವ ಮತ್ತು ಕಠಿಣ ಶ್ರಮದ ಕೆಲಸಗಳನ್ನು ಮಾಡುತ್ತಿರುವ ಯುವಕರೇ ಹೆಚ್ಚು. ಇವರನ್ನು ಲೈಂಗಿಕವಾಗಿ ಪ್ರಚೋದಿಸುವುದಕ್ಕೆ ಈ ನಾಗರಿಕ ಸಮಾಜದಲ್ಲಿ ಏನೆಲ್ಲ ಬೇಕೋ ಅವೆಲ್ಲವೂ ಇವೆ. ಸಿನಿಮಾದಲ್ಲಿ ನಾಯಕಿಯನ್ನು ನಾಯಕನು ಕಾನೂನು ಬದ್ಧವಾಗಿ ಎಲ್ಲರೆದುರೇ ‘ಅತ್ಯಾಚಾರ’ ಮಾಡುತ್ತಾನೆ. ಸೆಕ್ಸ್ ಅಫೀಲ್ ಇಲ್ಲದ ಸಿನಿಮಾ ಕಟೌಟುಗಳು ಇವತ್ತು ಹುಡುಕಿದರೂ ಸಿಗುತ್ತಿಲ್ಲ. ಮೊಬೈಲ್‍ಗಳೂ ಅಷ್ಟೇ, ಖಾಸಗಿಯಾಗಿ ಸೆಕ್ಸನ್ನು ಅನುಭವಿಸುವುದಕ್ಕೆ ಬೇಕಾದುದೆಲ್ಲವನ್ನೂ ಒದಗಿಸಿ ಕೊಡುತ್ತಿವೆ. ಹೀಗಿರುವಾಗ, ಮೌಲ್ಯ, ನೈತಿಕತೆ ಮುಂತಾದುವುಗಳನ್ನು ಗೌರವಿಸದ ವ್ಯಕ್ತಿಯೊಬ್ಬ ಇಂಥವುಗಳಿಂದ ಪ್ರಚೋದಿತವಾಗುವುದಕ್ಕೆ ಸಾಧ್ಯವಿಲ್ಲವೇ? ಅಂದಹಾಗೆ, ಸಹಮತದ ಸೆಕ್ಸ್ ನಲ್ಲಿ ಏರ್ಪಡುವ ಅಂದರೆ ಇಂಥ ಬಡ, ಒರಟು ಮನುಷ್ಯರಿಗೆ ಅವಕಾಶಗಳು ತೀರಾ ಕಡಿಮೆ. ಲಿವಿಂಗ್ ಟುಗೆದರ್, ಪ್ರೀತಿ-ಪ್ರೇಮ ಮುಂತಾದುವುಗಳೆಲ್ಲ ಈ ವರ್ಗದ ಪಾಲಿಗೆ ಲಭ್ಯವಿರುವುದಿಲ್ಲ. ಹೀಗಿರುವಾಗ ಸಹಮತದ ಲೈಂಗಿಕತೆಯಲ್ಲಿ ತೊಡಗಿರುವ, ಬಾಯ್‍ಫ್ರೆಂಡ್-ಗರ್ಲ್ ಫ್ರೆಂಡ್ ಎಂದು ಸುತ್ತಾಡುವ, ಪ್ರೀತಿ-ಪ್ರೇಮದಲ್ಲಿ ಮುಳುಗಿರುವ ಯುವಕ-ಯುವತಿಯರು ಇವರಲ್ಲಿ ಅಸೂಯೆ ಹುಟ್ಟಿಸಲು ಸಾಧ್ಯವಿದೆ. ಆ ಅಸೂಯೆ, ಅಸಹನೆಯೇ ಇವರನ್ನು ಲೈಂಗಿಕ ಬಲಾತ್ಕಾರದೆಡೆಗೂ ಕೊಂಡೊಯ್ಯುತ್ತಿರಬಹುದು. ಇಲ್ಲದಿದ್ದರೆ, ಪತಿಯೊ, ಬಾಯ್ ಫ್ರೆಂಡೋ ಜೊತೆಗಿರುವಾಗಲೂ ಹೆಣ್ಣು ಅತ್ಯಾಚಾರಕ್ಕೆ ಒಳಗಾಗಲು ಕಾರಣವೇನು? ಅತ್ಯಾಚಾರಿಗಳನ್ನು ಆ ಬಗೆಯ ದುಸ್ಸಾಹಸಕ್ಕೆ ನೂಕುವ ಸಂಗತಿಗಳು ಯಾವುವು?
   ನಿಜವಾಗಿ, ಅನೈತಿಕ ಕ್ರಿಯೆಗೆ ಪ್ರಚೋದಕವಾಗುವ ಮಾರ್ಗಗಳನ್ನು ಮುಚ್ಚದೇ ಅತ್ಯಾಚಾರವನ್ನು ತಡೆಗಟ್ಟಲು ಖಂಡಿತ ಸಾಧ್ಯವಿಲ್ಲ. ಅತ್ಯಾಚಾರ ಎಂಬುದು ದಿಢೀರ್ ಆಗಿ ಉದ್ಭವವಾಗುವ ಒಂದು ಮನಸ್ಥಿತಿಯಲ್ಲ. ಹತ್ತು-ಹಲವು ಪ್ರಚೋದನೆಗಳ ಒಟ್ಟು ಮೊತ್ತವೇ ಅತ್ಯಾಚಾರ. ದುರಂತ ಏನೆಂದರೆ, ಇವತ್ತು ಈ ದೇಶದಲ್ಲಿ ಅತ್ಯಾಚಾರವನ್ನು ‘ಭೀಕರ ಪಾಪ’ ಎಂದು ಪರಿಗಣಿಸಲಾಗುತ್ತಿದೆಯೇ ಹೊರತು ಅದಕ್ಕೆ ಪ್ರಚೋದನೆ ಕೊಡುವ ವಿಷಯಗಳನ್ನಲ್ಲ. ಇದು ಹೇಗೆಂದರೆ, ರೋಗ ಉತ್ಪತ್ತಿ ಮಾಡುವ ಪರಿಸರ, ಸೊಳ್ಳೆಗಳನ್ನು ಹಾಗೆಯೇ ಬಿಟ್ಟು ರೋಗಕ್ಕೆ ಔಷಧಿ ಕೊಟ್ಟಂತೆ. ಹೀಗಾದರೆ ರೋಗಿಗಳ ಸಂಖ್ಯೆ ಹೆಚ್ಚಬಹುದೇ ಹೊರತು ರೋಗ ನಿರ್ಮೂಲನೆ ಸಾಧ್ಯವಿಲ್ಲ. ಆದ್ದರಿಂದ, ಸರಕಾರ ‘ಅತ್ಯಾಚಾರ’ವನ್ನು ಉತ್ಪತ್ತಿ ಮಾಡುವ ಪರಿಸರವನ್ನು ಸ್ವಚ್ಛಗೊಳಿಸಬೇಕಾಗಿದೆ. ವಿವಾಹರಹಿತ ಲೈಂಗಿಕ ಕ್ರಿಯೆಯನ್ನು ಕಾನೂನು ಬಾಹಿರವೆಂದು ಸಾರಬೇಕಾಗಿದೆ. ಅನೈತಿಕತೆಯನ್ನು ‘ಸಹಮತ’ವೆಂದೋ ‘ಅತ್ಯಾಚಾರ’ವೆಂದೋ ವಿಭಜಿಸುವುದೇ ದೊಡ್ಡ ಅಪರಾಧ. ಅತ್ಯಾಚಾರವನ್ನು ಹೇಗೆ ನಾವು ಕ್ರೌರ್ಯವೆಂದು ಪರಿಗಣಿಸುತ್ತೇವೋ ಹಾಗೆಯೇ ಸಹಮತದ ಹೆಸರಲ್ಲಿ ನಡೆಯುವ ಅನೈತಿಕತೆಯನ್ನೂ ಸಮಾಜ ವಿರೋಧಿಯಾಗಿ ಗುರುತಿಸಬೇಕಾಗಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಲೈಂಗಿಕ ಕ್ರಿಯೆಯ ಬಗ್ಗೆ ದೃಷ್ಟಿಕೋನಗಳೇನೇ ಇರಲಿ, ಸಮೃದ್ಧ ಧಾರ್ಮಿಕ ಮೌಲ್ಯಗಳಿರುವ ಈ ದೇಶಕ್ಕೆ ಅವನ್ನು ಖರೀದಿಸಿ ತರಬೇಕಾದ ಅಗತ್ಯವೇನೂ ಇಲ್ಲ. ಮೌಲ್ಯಗಳನ್ನು ಕೈಬಿಟ್ಟ ದೇಶಗಳೆಲ್ಲ ಇವತ್ತು ‘ಅತೃಪ್ತ’ ಯುವ ಸಮೂಹದ ಸಮಸ್ಯೆಯನ್ನು ಎದುರಿಸುತ್ತಿವೆ ಎಂಬುದನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕು.
   ಏನೇ ಆಗಲಿ, ಅನೈತಿಕತೆಯನ್ನು ಸಹಮತದ ಹೆಸರಲ್ಲಿ ನೈತಿಕಗೊಳಿಸುವುದರಿಂದ ಅಪರಾಧಗಳಷ್ಟೇ ಹೆಚ್ಚಾಗಬಹುದು. ಪವಿತ್ರ ಕುರ್‍ಆನ್, ವಿವಾಹರಹಿತ ಲೈಂಗಿಕ ಕ್ರಿಯೆಯನ್ನು ಘೋರ ಪಾಪವಾಗಿ ಪರಿಗಣಿಸಿದೆ (17:28). ಆದ್ದರಿಂದ ಅತ್ಯಾಚಾರಕ್ಕೆ ಪೂರಕವಾಗುವ ಎಲ್ಲ ಬಾಗಿಲುಗಳನ್ನು ಮುಚ್ಚುವುದೇ ನೈತಿಕ ಸಮಾಜವನ್ನು ಕಟ್ಟುವುದಕ್ಕಿರುವ ಸಭ್ಯ ಮಾರ್ಗ. ‘ಸಹಮತದ ಸೆಕ್ಸ್’ ಅದಕ್ಕೆ ಉತ್ತರವಲ್ಲ.

Wednesday, 13 March 2013

36ನೇ ಹೆಜ್ಜೆಯಲ್ಲಿ ಖುಷಿಪಡುವುದಕ್ಕೆ ಕೆಲವು ಕಾರಣಗಳು


   36ನೇ ವರ್ಷದ ಈ ಪ್ರಥಮ ಸಂಚಿಕೆಯನ್ನು ಸನ್ಮಾರ್ಗ ಅತೀವ ಖುಷಿಯಿಂದ ಓದುಗರ ಕೈಗಿಡುತ್ತಿದೆ. ಸನ್ಮಾರ್ಗಕ್ಕೆ 35 ವರ್ಷಗಳು ತುಂಬಿತು ಎಂಬ ಕಾರಣಕ್ಕಾಗಿ ಪತ್ರಿಕೆ ಖುಷಿಪಡುತ್ತಿಲ್ಲ. ವರ್ಷಗಳು ಮನುಷ್ಯರಿಗೂ, ಪ್ರಾಣಿಗಳಿಗೂ ಕಲ್ಲು-ಮರಗಳಿಗೂ ತುಂಬುತ್ತಲೇ ಇರುತ್ತವೆ. ವರ್ಷಗಳು ತುಂಬಿದಂತೆಲ್ಲಾ ಜೀವ ವಿರೋಧಿ, ಮನುಷ್ಯ ವಿರೋಧಿ ಸ್ವಭಾವವನ್ನು ಹೆಚ್ಚುಗೊಳಿಸುತ್ತಾ ಹೋಗುವ ಮನುಷ್ಯರು ಸಮಾಜದಲ್ಲಿ ಧಾರಾಳ ಇದ್ದಾರೆ. ಆದ್ದರಿಂದಲೇ ಸನ್ಮಾರ್ಗ ಪ್ರಾಯ ತುಂಬುವುದನ್ನೇ ಸಾಧನೆಯೆಂದು ಎಂದೂ ಹೇಳಿಕೊಂಡಿಲ್ಲ. ಪ್ರಾಯ ಸಂಭ್ರಮಾರ್ಹ ಆಗುವುದು ಸಾಧನೆಯಿಂದ. ಸನ್ಮಾರ್ಗ ತನ್ನ ಹುಟ್ಟಿನ ಮೊದಲಿನಿಂದಲೂ ಒಂದು ಖಚಿತ ಅಭಿಪ್ರಾಯದೊಂದಿಗೆ ಓದುಗರ ಜೊತೆ ಮಾತಾಡಿದೆ. ಫ್ಯಾಸಿಝಮ್‍ನ ಬಗ್ಗೆ, ಕೋಮುವಾದ, ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ ನಿರ್ಮೂಲನ, ಕೋಮು ಸೌಹಾರ್ದ, ಧರ್ಮ.. ಎಲ್ಲದರ ಬಗ್ಗೆಯೂ ಸನ್ಮಾರ್ಗ ಅತ್ಯಂತ ತಾರ್ಕಿಕವಾಗಿ ಮತ್ತು ಮೌಲ್ಯಯುತವಾಗಿ ತನ್ನ ಪುಟಗಳಲ್ಲಿ ಚರ್ಚಿಸಿದೆ. ಫ್ಯಾಸಿಝಮ್ ಮತ್ತು ಭ್ರಷ್ಟಾಚಾರದ ನಡುವೆ ಆಯ್ಕೆಯ ಸಂದರ್ಭ ಬಂದಾಗ ಫ್ಯಾಸಿಝಮ್ ಅನ್ನು ಅದು ಪ್ರಥಮ ಶತ್ರುವಾಗಿ ಪರಿಗಣಿಸಿದೆ. ಭಯೋತ್ಪಾದನೆ, ಜಿಹಾದ್..ಗಳ ಬಗ್ಗೆ ಸಮಾಜದಲ್ಲಿರುವ ಗೊಂದಲಗಳನ್ನು ನಿವಾರಿಸುವುದಕ್ಕಾಗಿ ಸನ್ಮಾರ್ಗ ಅನೇಕಾರು ಲೇಖನ, ಸಂಪಾದಕೀಯಗಳನ್ನು ಪ್ರಕಟಿಸಿದೆ. ನಿಜವಾಗಿ, ಕಳೆದ ನಾಲ್ಕೈದು ವರ್ಷಗಳಲ್ಲಿ ಸನ್ಮಾರ್ಗಕ್ಕೆ ದೊಡ್ಡದೊಂದು ಸವಾಲು ಎದುರಾಯಿತು. ಆ ವರೆಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರದ ರುಚಿ ಪಡೆದಿರದ ಫ್ಯಾಸಿಸ್ಟ್, ಕೋಮುವಾದಿ ವಿಚಾರಧಾರೆಗೆ ಈ ಸಂದರ್ಭದಲ್ಲಿ ಅದು ಲಭ್ಯವಾಯಿತು. ಸನ್ಮಾರ್ಗ ನಿರಂತರವಾಗಿ ಈ ವಿಚಾರಧಾರೆಯ ಅಪಾಯವನ್ನು ಓದುಗರ ಮುಂದಿಡುತ್ತಲೇ ಬಂದಿತು. ಫ್ಯಾಸಿಝಮ್ ವಿಚಾರಧಾರೆಯಿಂದ ಪ್ರಭಾವಿತವಾಗಿರುವ ಒಂದು ಸಚಿವ ಸಂಪುಟ, ಹೇಗೆ ತನ್ನ ಅಧಿಕಾರಿ ವರ್ಗವನ್ನು ಮತ್ತು ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆಯೂ ಎಚ್ಚರಿಸುತ್ತಾ ಬಂದಿತು. 6 ತಿಂಗಳ ಹಿಂದೆ ಮುತೀಉರ್ರಹ್ಮಾನ್ ಎಂಬ ಪತ್ರಕರ್ತನನ್ನು ಭಯೋತ್ಪಾದನೆಯ ನೆಪದಲ್ಲಿ ಬಂಧಿಸಿದಾಗ ಸನ್ಮಾರ್ಗ ಪ್ರಬಲವಾಗಿ ಪ್ರತಿಭಟಿಸಿದ್ದೂ ಇದೇ ಕಾರಣದಿಂದ. ಅದಕ್ಕಿಂತ ತುಸು ಸಮಯ ಮೊದಲು ಪ್ರವೀಣ್ ಸೂರಿಂಜೆ ಎಂಬ ಯುವ ಪತ್ರಕರ್ತರನ್ನೂ ಇದೇ ಮಾನಸಿಕತೆ ಜೈಲಿಗೆ ತಳ್ಳಿತ್ತು. ಫ್ಯಾಸಿಸ್ಟ್ ವಿಚಾರಧಾರೆಯ ಮಂದಿ ಹೆಣ್ಣು ಮಕ್ಕಳ ಮೇಲೆ ಮಾಡಿದ ದೌರ್ಜನ್ಯವನ್ನು (ಮಂಗಳೂರು ಹೋಮ್‍ಸ್ಟೇ ದಾಳಿ ಪ್ರಕರಣ) ಧೈರ್ಯದಿಂದ ವರದಿ ಮಾಡಿದ ತಪ್ಪಿಗೆ ಸೂರಿಂಜೆಯನ್ನು ಜೈಲಿಗೆ ಕಳುಹಿಸಲಾಯಿತು. ಸನ್ಮಾರ್ಗ ಈ ಎಲ್ಲ ಸಂದರ್ಭಗಳಲ್ಲೂ ತನ್ನ ತೀವ್ರ ಆಕ್ಷೇಪವನ್ನು ವ್ಯಕ್ತ ಪಡಿಸಿತು. ಮಾತ್ರವಲ್ಲ, ಈ ವಿಚಾರಧಾರೆಗೆ ಕನ್ನಡಿಗರನ್ನು ಪ್ರತಿನಿಧಿಸುವ ಮತ್ತು ಆಳುವ ಅರ್ಹತೆಯಿಲ್ಲ ಎಂದು ಪುಟಪುಟಗಳಲ್ಲೂ ಪ್ರತಿಪಾದಿಸುತ್ತಾ ಬಂದಿತು. ಭ್ರಷ್ಟಾಚಾರಕ್ಕಿಂತ ಈ ವಿಚಾರಧಾರೆ ಹೆಚ್ಚು ಅಪಾಯಕಾರಿಯಾಗಿರುವುದರಿಂದ ಜನರು ಈ ವಿಚಾರಧಾರೆಯನ್ನು ಅಧಿಕಾರದಿಂದ ಕಿತ್ತು ಹಾಕಬೇಕೆಂದು ನಿರಂತರ ಒತ್ತಾಯಿಸುತ್ತಲೇ ಬಂದಿತ್ತು. ಇದೀಗ ಸನ್ಮಾರ್ಗಕ್ಕೆ ಖುಷಿಪಡುವ ಸಂದರ್ಭ ಒದಗಿ ಬಂದಿದೆ. ತನ್ನ 36ನೇ ವರ್ಷದ ಈ ಪ್ರಥಮ ಸಂಚಿಕೆಯಲ್ಲೇ ಫ್ಯಾಸಿಸ್ಟ್ ವಿಚಾರ ಧಾರೆಗೆ ಚುನಾವಣೆಯಲ್ಲಿ ಸೋಲಾಗಿರುವ ಸುದ್ದಿಯನ್ನು ಹಂಚಿಕೊಳ್ಳುವಂತಾಗಿದೆ. ಸ್ಥಳೀಯ ಸಂಸ್ಥೆ ಗಳ ಚುನಾವಣೆಯಲ್ಲಿ ಜನರು ಈ ವಿಚಾರಧಾರೆಯಿಂದ ಕಳಚಿಕೊಳ್ಳಲು ನಿರ್ಧರಿಸಿರುವುದನ್ನು ಫಲಿತಾಂಶಗಳೇ ಸ್ಪಷ್ಟಪಡಿಸುತ್ತಿವೆ. ಈ ಫಲಿತಾಂಶದೊಂದಿಗೆ ಸನ್ಮಾರ್ಗದ 35 ವರ್ಷಗಳ ಲೇಖನಿ ಸಮರಕ್ಕೂ ಪಾಲು ಇದೆ ಎಂದೇ ಪತ್ರಿಕೆ ನಂಬುತ್ತದೆ.
   ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ಪರಸ್ಪರ ‘ದೋಸ್ತ್' ಆಗಿಬಿಟ್ಟರೆ ಅದರಿಂದಾಗಿ ದೊಡ್ಡ ಹಾನಿ ತಟ್ಟುವುದು ಓದುಗರಿಗೆ. ಓದುಗರು ಒಂದು ಪತ್ರಿಕೆಯನ್ನು ಓದುವುದು ಸತ್ಯ ಸುದ್ದಿಗಾಗಿ. ಆದರೆ ಕೆಲವೊಂದು ಪತ್ರಿಕೆಗಳು ಸತ್ಯವನ್ನು ಕೊಂದೇ ಇವತ್ತು ಬದುಕುತ್ತಿವೆ ಎಂಬುದೇನೂ ಗುಟ್ಟಾಗಿಲ್ಲ. ದುರಂತ ಏನೆಂದರೆ, ಓದುಗರಿಗೆ ಈ ಕೊಲೆಗಾರ ಪತ್ರಿಕೆಗಳನ್ನು ಗುರುತಿಸಲು ಸಾಧ್ಯವಾಗದೇ ಹೋಗಿರುವುದು. ಅಕ್ಷರ ಲೋಕವನ್ನು ಅವು ಎಷ್ಟು ಕಲುಷಿತಗೊಳಿಸಿಬಿಟ್ಟಿವೆ ಎಂದರೆ ಒಂದು ಸುದ್ದಿಯನ್ನು ಸತ್ಯವೋ ಸುಳ್ಳೋ ಎಂದು ತಿಳಿದುಕೊಳ್ಳುವುದಕ್ಕೆ ಒಂದಕ್ಕಿಂತ ಹೆಚ್ಚು ಪತ್ರಿಕೆಯನ್ನು ಓದಿ ಖಚಿತಪಡಿಸಿಕೊಳ್ಳಬೇಕಾದಂಥ ಪರಿಸ್ಥಿತಿ ಬಂದಿದೆ. ಕೋಮುವಾದಿಗಳು, ಮನುಷ್ಯ ವಿರೋಧಿಗಳೆಲ್ಲ ಅಕ್ಷರ ಜಗತ್ತಿನಲ್ಲಿರುವ ಈ ‘ಅಡ್ಡ ಕಸುಬಿನ' ಪತ್ರಿಕೋದ್ಯಮಿಗಳನ್ನು ಧಾರಾಳ ಬಳಸಿಕೊಳ್ಳುತ್ತಾರೆ. ತಮ್ಮ ವಿಚಾರಧಾರೆಯನ್ನು ಜನರ ಮೇಲೆ ಹೇರುವುದಕ್ಕಾಗಿ ಇವರ ಮೂಲಕ ಶ್ರಮಿಸುತ್ತಾರೆ. ಕನ್ನಡ ನಾಡಿನಲ್ಲಿ ಇಂಥ ಪ್ರಯತ್ನಗಳು ಧಾರಾಳ ನಡೆದಿವೆ. ಒಂದು ಧರ್ಮವನ್ನು ಮತ್ತು ಅದರ ವಿಚಾರಧಾರೆಯನ್ನು ‘ಶಂಕಿತ'ಗೊಳಿಸಲು ಅನೇಕ ಬಾರಿ ಪುಟಗಳನ್ನು ಮೀಸಲಿಟ್ಟ ಪತ್ರಿಕೆಗಳಿವೆ. ಆದರೆ ಸನ್ಮಾರ್ಗ ಈ ಎಲ್ಲ ಸಂದರ್ಭಗಳಲ್ಲಿ ತನ್ನ ಸಾಮರ್ಥ್ಯ ವನ್ನೂ ಮೀರಿ ನಿಜದ ಧ್ವನಿಯಾಗಿದೆ. ಅಸತ್ಯದ ಅಕ್ಷರಗಳು ಮತ್ತು ಅದರ ಹಿಂದಿರುವ ಫ್ಯಾಸಿಸ್ಟ್ ಆಲೋಚನೆಗಳ ಕುರಿತಂತೆ ಕನ್ನಡಿಗರನ್ನು ಎಚ್ಚರಿಸುತ್ತಾ ಬಂದಿದೆ. ಆದ್ದರಿಂದಲೇ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವನ್ನು ಸನ್ಮಾರ್ಗ ಸೈದ್ಧಾಂತಿಕ ಗೆಲುವೆಂದು ಪರಿಗಣಿಸುವುದು. ಸನ್ಮಾರ್ಗ ಯಾವೊಂದು ಪಕ್ಷದ ವೈರಿಯೂ ಅಲ್ಲ. ಅದು ಅಸತ್ಯದ, ಅನ್ಯಾಯದ, ಭ್ರಷ್ಟಾಚಾರದ, ಫ್ಯಾಸಿಝಮ್‍ನ, ಕೋಮುವಾದದ.. ವೈರಿ. ಇವು ಸಮಾಜದಲ್ಲಿ ಪ್ರಾಬಲ್ಯ ಸ್ಥಾಪಿಸುತ್ತಾ ಹೋದರೆ ಅಮೌಲ್ಯದ, ಮನುಷ್ಯ ವಿರೋಧಿಯಾದ ವ್ಯವಸ್ಥೆ ಖಂಡಿತ ಜಾರಿಗೆ ಬರುತ್ತದೆ. ಅದನ್ನು ತಪ್ಪಿಸಿ ಈ ಮಣ್ಣನ್ನು ಸರ್ವರೂ ಸ್ವಾಭಿಮಾನದಿಂದ ಬಾಳುವಂತೆ ಮಾಡುವ ಗುರಿಯೊಂದಿಗೆ ಸನ್ಮಾರ್ಗ ಕಳೆದ 35 ವರ್ಷಗಳಿಂದಲೂ ಪ್ರಕಟವಾಗುತ್ತಲೇ ಬಂದಿದೆ. 36ನೇ ವರ್ಷದ ಈ ಪ್ರಥಮ ಸಂಚಿಕೆಯಲ್ಲೂ ಅದರ ನಿಲುವು ಬದಲಾಗಿಲ್ಲ. ಆಗುವುದೂ ಇಲ್ಲ. ಪ್ರಾಯ ಎಷ್ಟೇ ತುಂಬಲಿ, ಸಂಚಿಕೆ ಎಷ್ಟೇ ಹೊರ ಬರಲಿ, ಹುಟ್ಟುವಾಗಿನ ಮೂಲತತ್ವಗಳನ್ನು ಕೈ ಬಿಡದೇ ಸಮಾಜವನ್ನು ತಿದ್ದುವ, ಅಗತ್ಯ ಸಂದರ್ಭಗಳಲ್ಲಿ ಮಾರ್ಗದರ್ಶನ ಮಾಡುವ ಮತ್ತು ಮುಲಾಜಿಲ್ಲದೇ ತಪ್ಪನ್ನು ತಪ್ಪೆಂದೂ ಸುಳ್ಳನ್ನು ಸುಳ್ಳೆಂದೂ ಹೇಳುವ ಸ್ವಾತಂತ್ರ್ಯವನ್ನು ಸನ್ಮಾರ್ಗ ಎಂದೂ ಯಾರಿಗೂ ಬಿಟ್ಟುಕೊಡುವುದಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದ ಅಭ್ಯರ್ಥಿಗಳ ಕುರಿತಂತೆ ಸನ್ಮಾರ್ಗದ ನಿಲುವೂ ಇದುವೇ.

Monday, 4 March 2013

ನರಭಕ್ಷಕ ತೋಳಗಳ ಹಿಂಡಿನಲ್ಲಿ ಮ್ಯಾನ್ನಿಂಗ್ ಎಂಬ ಜಿಂಕೆ ಮರಿ


   ಬ್ರಾಡ್ಲಿ ಮ್ಯಾನ್ನಿಂಗ್ ಅನ್ನುವ ಯೋಧನೊಬ್ಬ ಅಮೇರಿಕನ್ನರ ‘ಸಂಕಟ’ದ ಸಂಕೇತವಾಗಿ ಇವತ್ತು ಜಗತ್ತಿನ ಮುಂದಿದ್ದಾನೆ. ಮಾತ್ರವಲ್ಲ, ಜೀವನ ಪರ್ಯಂತ ಜೈಲಿನಲ್ಲೇ ಇರಬೇಕಾದ ಭೀತಿಯನ್ನೂ ಎದುರಿಸುತ್ತಿದ್ದಾನೆ. ಆತ ಮಾಡಿದ ಅಪರಾಧ ಏನೆಂದರೆ, ಅಮೇರಿಕದ ರಕ್ತದಾಹಿ ನೀತಿಯನ್ನು ಪ್ರಶ್ನಿಸಿದ್ದು. ಭಯೋತ್ಪಾದನಾ ವಿರೋಧಿ ಹೋರಾಟದ ನೆಪದಲ್ಲಿ ಅಮಾಯಕ ಜನರನ್ನು ಅಮೇರಿಕ ಹೇಗೆ ನಿರ್ಭಾವುಕವಾಗಿ ಸಾಯಿಸುತ್ತದೆ ಎಂದು ವಿವರಿಸಿದ್ದು. ಆ ಕುರಿತಾಗಿರುವ ದಾಖಲೆಗಳನ್ನು ಸೋರಿಕೆ ಮಾಡಿದ್ದು.
   ಕಳೆದ ವಾರ ಅಮೇರಿಕದ ಮಿಲಿಟರಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ 35 ಪುಟಗಳ ಹೇಳಿಕೆಯನ್ನು ನ್ಯಾಯಾಧೀಶರೆದುರು ಬ್ರಾಡ್ಲಿ ಮ್ಯಾನ್ನಿಂಗ್ ಓದಿದ್ದಾನೆ. 2007ರಲ್ಲಿ ಅಮೇರಿಕದ ಅಪಾಚೆ ಹೆಲಿಕಾಪ್ಟರೊಂದು ಇರಾಕ್‍ನ ಬಗ್ದಾದಿನಲ್ಲಿ ಜನರ ಮೇಲೆ ಬಾಂಬು ಸುರಿಸುತ್ತದೆ. ಅದರಲ್ಲಿ ರಾಯಿಟರ್ಸ್ ಸುದ್ದಿ ಸಂಸ್ಥೆಯ ಇಬ್ಬರು ಪತ್ರಕರ್ತರೂ ಸೇರಿ ಅನೇಕ ಅಮಾಯಕರು ಸಾವಿಗೀಡಾಗುತ್ತಾರೆ. ಅಮೇರಿಕದ ಗುಪ್ತಚರ ವಿಭಾಗದ ವಿಶ್ಲೇಷಣಾಧಿಕಾರಿಯಾಗಿ ಇರಾಕ್‍ನ ಬಗ್ದಾದ್‍ನಲ್ಲಿ ಕರ್ತವ್ಯದಲ್ಲಿದ್ದ ನನ್ನನ್ನು ಆ ರಕ್ತದೋಕುಳಿ ತೀವ್ರವಾಗಿ ಘಾಸಿಗೊಳಿಸಿತು (Sikkened) ಎಂದಾತ ಹೇಳಿದ್ದಾನೆ. ಜನರನ್ನು ಎಗ್ಗಿಲ್ಲದೇ ಕೊಲ್ಲುವ, ಹಿಡಿದು ಥಳಿಸುವ ಮತ್ತು ಗುರಿ ರಹಿತವಾಗಿ ಓಡುವ ಅಮೇರಿಕನ್ ಸೇನೆಯನ್ನು ನೋಡಿ ನಾನು ತೀವ್ರ ಹತಾಶೆಗೊಂಡಿದ್ದೆ. ಅಮೇರಿಕನ್ ನಾಗರಿಕರಿಗೆ ಈ ಯುದ್ಧದ ಶೈಲಿ ಮತ್ತು ಖರ್ಚು ಗೊತ್ತಾಗಲಿ, ಆ ಮುಖಾಂತರ ಅವರು ಆಕ್ರಮಣವನ್ನು ಪ್ರತಿಭಟಿಸಲಿ ಎಂಬ ಸದುದ್ದೇಶದಿಂದ ನಾನು ರಹಸ್ಯ ದಾಖಲೆಗಳನ್ನು ವಿಕಿಲೀಕ್ಸ್ ಗೆ 2010ರಲ್ಲಿ ಸೋರಿಕೆ ಮಾಡಿದೆ. ವೀಡಿಯೋಗಳನ್ನು ಹಸ್ತಾಂತರಿಸಿದೆ.. ಎಂದಾತ ಸ್ವಯಂ ಹೇಳಿಕೊಂಡಿದ್ದಾನೆ. (ದಿ ಹಿಂದೂ  02, 03, 2013)             
   ಆತನ ವಿಚಾರಣೆ ಮುಂದುವರಿಯುತ್ತಿದೆ.ಅದರ ಪಲಿತಾಂಶ ಏನೇ ಇರಲಿ, ಅಮೇರಿಕದ ಯುದ್ಧ ನೀತಿಯನ್ನು ಜಗತ್ತು ವಿಚಾರಣೆಗೆ ಒಳಪಡಿಸಲೇ ಬೇಕು ಎಂಬ ಒತ್ತಾಯವನ್ನು ಈ ಮೂಲಕ  ಬ್ರಾಡ್ ಮ್ಯಾನ್ನಿಂಗ್ ಪರೋಕ್ಷವಾಗಿ ಮಂಡಿಸಿದ್ದಾನೆ. ನಿಜವಾಗಿ, ಅಮೇರಿಕದ ‘ಯುದ್ಧನೀತಿ' ಪ್ರಶ್ನೆಗೊಳಗಾಗಿರುವುದು ಇದೇ ಮೊದಲಲ್ಲ. ಎರಡನೇ ವಿಶ್ವಯುದ್ಧದಿಂದಲೇ ಅಮೇರಿಕ ವಿವಾದಿತ ರಾಷ್ಟ್ರವಾಗಿದೆ. ತನಗೆ ಸರಿ ಕಾಣದ್ದನ್ನು ಬಲವಂತದಿಂದ ಸರಿಪಡಿಸುವ,ತನ್ನ ಮೂಗಿನ ನೇರಕ್ಕೇ ಸರಿ-ತಪ್ಪುಗಳನ್ನು ತೀರ್ಮಾನಿಸುವ ಚಾಳಿಯನ್ನು ಅದು ತೋರ್ಪಡಿಸುತ್ತಲೇ ಬಂದಿದೆ. ಅಫಘಾನ್ ಮತ್ತು ಇರಾಕ್‍ಗಳ ಮೇಲಿನ ದಾಳಿ ಈ ಮಾನಸಿಕತೆಯ ಮುಂದುವರಿಕೆಯಷ್ಟೇ. ಒಂದು ವೇಳೆ ಮ್ಯಾನ್ನಿಂಗ್‍ನಂಥವರು ಅಪರೂಪಕ್ಕೊಮ್ಮೆ ಅಮೇರಿಕದ ಕ್ರೌರ್ಯವನ್ನು ಬಿಚ್ಚಿಡದೇ ಹೋಗಿದ್ದರೆ, ಅಸಾಂಜೆಯಂಥ ಪತ್ರಕರ್ತರು ವಿಕಿಲೀಕ್ಸ್ ನ ಮುಖಾಂತರ ಅಮೇರಿಕದ ನಿಜ ಮುಖವನ್ನು ತೋರಿಸುವ ಧೈರ್ಯ ಮಾಡದೇ ಇರುತ್ತಿದ್ದರೆ ಏನಾಗುತ್ತಿತ್ತು? ಜಗತ್ತಿನ ಹೆಚ್ಚಿನ ಮಾಧ್ಯಮ ಕೇಂದ್ರಗಳು ಇವತ್ತು ಅಮೇರಿಕನ್ ಹಿತಾಸಕ್ತಿಗಳ ಹಿಡಿತದಲ್ಲಿವೆ. ಇವು ಸೆನ್ಸಾರ್ ಮಾಡಿ, ಒಪ್ಪಿಗೆ ಸೂಚಿಸಿದ ಸುದ್ದಿಗಳಷ್ಟೇ ಸುದ್ದಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದು. ಅವು ಹೇಗಿರುತ್ತವೆ ಎಂಬುದೂ ನಮಗೆ ಗೊತ್ತು. ಅಮೇರಿಕದ ಡ್ರೋನ್ ಕ್ಷಿಪಣಿಯೊಂದು ಅಫಘನ್ನಿನಲ್ಲಿ ನಡೆಯುವ ಮದುವೆ ಸಮಾರಂಭಕ್ಕೋ, ಅಂತ್ಯ ಸಂಸ್ಕಾರಕ್ಕೆ ಸೇರಿದ ಜನಸಂದಣಿಗೋ ಬಿದ್ದರೆ, ತಕ್ಷಣ ಆ ಡ್ರೋನನ್ನು ಸಮರ್ಥಿಸುವುದಕ್ಕೆ ವಿವಿಧ ನೆವನಗಳನ್ನು ಮಾಧ್ಯಮಗಳು ಹುಡುಕುತ್ತವೆ. ಅದರಲ್ಲಿ ಯಾವ ತಾಲಿಬಾನ್ ಮುಖಂಡ ಭಾಗವಹಿಸಿದ್ದ ಎಂಬ ವಿವರವುಳ್ಳ ಪತ್ರಿಕಾ ಹೇಳಿಕೆಯನ್ನು ಅಮೇರಿಕ ಬಿಡುಗಡೆಗೊಳಿಸುತ್ತದೆ. ಎಲ್ಲೋ ಬಂದೂಕು ಹಿಡಿದು, ಗಡ್ಡ-ಮುಂಡಾಸು ಧರಿಸಿ, ಕುರ್ತಾ-ಪೈಜಾಮ ತೊಟ್ಟ ಅಫಘಾನಿಯನ್ನು ತೋರಿಸಿ ಮಾಧ್ಯಮಗಳು ಆ ಸುದ್ದಿಯನ್ನು ಇನ್ನಷ್ಟು ಕಲುಷಿತಗೊಳಿಸಿ ಬಿಡುತ್ತವೆ. 'ಬಂದೂಕು, ಕೂದಲು, ಮುಂಡಾಸು, ಗಡ್ಡ, ಪೈಜಾಮ.. ಇವೆಲ್ಲ ಅಫಘಾನಿಯರ ಸಂಸ್ಕ್ರಿತಿ, ಅದು ಭಯೋತ್ಪಾದನೆಯ ಸಂಕೇತವಲ್ಲ' ಎಂದು ಜನರನ್ನು ತಿದ್ದುವ ಪ್ರಯತ್ನಗಳನ್ನು ಹೆಚ್ಚಿನ ಮಾಧ್ಯಮಗಳು ಮಾಡುವುದೂ ಇಲ್ಲ. ನಿಜವಾಗಿ, ಅಫಘನ್ನಿನ ಮೇಲೆ ದಾಳಿ ಮಾಡಿದ ಬಳಿಕ ಅಮೇರಿಕ ಮೊತ್ತಮೊದಲು ಮಾಡಿದ್ದೇ ಈ ತಿರುಚುವ ಕೆಲಸವನ್ನು. ಸಾಮಾನ್ಯ ಅಫಘಾನಿಯರ ವಿವಿಧ ಭಂಗಿಯ ಚಿತ್ರವನ್ನು ಬಿಡುಗಡೆಗೊಳಿಸಿ, ಇದು ‘ಭಯೋತ್ಪಾದಕ' ಅಂದಿತು. ಬುದ್ಧ ವಿಗ್ರಹಗಳು ಧ್ವಂಸಗೊಂಡ, ಯಾರದಾದರೂ ಕೈ-ಕಾಲು ಕತ್ತರಿಸಿದ ಸುದ್ದಿಗಳನ್ನಷ್ಟೇ ಅಫಘನ್ನಿನಿಂದ ಆಲಿಸುತ್ತಿದ್ದ ಜಗತ್ತು ಅಮೇರಿಕ ಬಿಡುಗಡೆಗೊಳಿಸುತ್ತಿರುವ ಈ ಹೊಸ ಮನುಷ್ಯ ಭಯೋತ್ಪಾದಕನೆಂದೇ ನಂಬಿಬಿಟ್ಟಿತು. ಆದ್ದರಿಂದ ಅಮೇರಿಕದ ಬಾಂಬುಗಳಿಗೆ ಅಫಘಾನಿಯರು ಬಲಿಯಾದಾಗಲೆಲ್ಲಾ ಭಯೋತ್ಪಾದಕರ ನಾಶವಾಯಿತು ಎಂದು ಜಗತ್ತು ಸಂಭ್ರಮಪಟ್ಟಿತು.
    ನಿಜವಾಗಿ, ಅಮೇರಿಕನ್ ಯೋಧರು ಗ್ವಾಂಟೆನಾಮೋದಲ್ಲಿ, ಅಫಘನ್ನಿನಲ್ಲಿ ನಡೆಸುತ್ತಿರುವ ಕ್ರೌರ್ಯದ ವೀಡಿಯೋಗಳನ್ನು ವಿಕಿಲೀಕ್ಸ್ ಗೆ ಹಸ್ತಾಂತರಿಸುವಾಗ ಬ್ರಾಡ್ಲಿ  ಮ್ಯಾನ್ನಿಂಗ್‍ಗೆ ತಾನೇನು ಮಾಡುತ್ತಿದ್ದೇನೆಂಬುದು ಚೆನ್ನಾಗಿ ಗೊತ್ತಿತ್ತು. ಅದರ ಪರಿಣಾಮ ಏನಾಗಬಹುದು ಎಂಬುದರ ಅರಿವೂ ಇತ್ತು. ಒಂದು ದೇಶ ಎಷ್ಟೇ ಅನ್ಯಾಯದಲ್ಲಿ ತೊಡಗಿರಲಿ, ಆ ದೇಶದ ಯೋಧನೊಬ್ಬ ಆ  ಅನ್ಯಾಯದ ದಾಖಲೆಗಳನ್ನು ಬಿಡುಗಡೆಗೊಳಿಸುವುದೆಂದರೆ, ದೇಶದ್ರೋಹವನ್ನು ಎಸಗಿದಂತೆ.ಅದಕ್ಕೆ ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆ ಸಿಗುವ ಸಾಧ್ಯತೆಯೇ ಹೆಚ್ಚು.  ಹೀಗಿದ್ದೂ, ಅಮೇರಿಕದ ಮುಖವನ್ನು ಬಹಿರಂಗಪಡಿಸಲು ಬ್ರಾಡ್ಲಿ  ಮ್ಯಾನ್ನಿಂಗ್  ಮುಂದಾದನೆಂದರೆ, ಅದು ಖಂಡಿತ ಸಣ್ಣ ಸಾಹಸವಲ್ಲ. ಅದನ್ನು ಅಮೇರಿಕ ದೇಶದ್ರೋಹತನ ಎಂದು ಪರಿಗಣಿಸಿದರೂ ಜಗತ್ತು ಹಾಗೆ ಪರಿಗಣಿಸಬೇಕಾದ ಅಗತ್ಯವೂ ಇಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜಲಿಯನ್ ವಾಲಾಬಾಗ್‍ನಲ್ಲಿ ಹತ್ಯಾಕಾಂಡ ನಡೆದಿತ್ತಲ್ಲವೇ? ಆ  ಹತ್ಯಾಕಾಂಡಕ್ಕೆ ಬ್ರಿಟಿಷ್ ಜನರಲ್  ಡಯರ್ ಆದೇಶ ಕೊಟ್ಟದ್ದಾದರೂ ಆ ಆದೇಶ ಜಾರಿಗೊಂಡದ್ದು ಬ್ರಿಟಿಷ್ ಇಲಾಖೆಯಲ್ಲಿದ್ದ ಭಾರತೀಯ ಪೊಲೀಸ ರಿಂದಲೇ ಎಂದು ಇತಿಹಾಸ ಹೇಳುತ್ತದೆ. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಭಾರತೀಯ ಪೊಲೀಸರೇ ಗುಂಡು ಹಾರಿಸಿದ್ದರು. ಸಾಮಾನ್ಯವಾಗಿ ವ್ಯವಸ್ಥೆಯ ಕ್ರೌರ್ಯವನ್ನು ಅದರ ಭಾಗವೇ ಆಗಿರುವ ಅಧಿಕಾರಿಗಳಾಗಲಿ, ಸೈನಿಕರಾಗಲಿ ಪ್ರಶ್ನಿಸುವುದೇ ಇಲ್ಲ. ಶಿಕ್ಷೆಗೆ ಹೆದರಿ ಅವರೆಲ್ಲಾ ಸುಮ್ಮನಾಗುತ್ತಾರೆ.
   ಏನೇ ಆಗಲಿ, ಬ್ರಾಡ್ಲಿ  ಮ್ಯಾನ್ನಿಂಗ್ ಎಂಬ ಯೋಧನೊಬ್ಬ ಅಮೇರಿಕದ ಕ್ರೌರ್ಯದ ಮುಖವನ್ನು ಎಲ್ಲ ಅಪಾಯಗಳ ಮಧ್ಯೆಯೂ ಜಗತ್ತಿನ ಮುಂದಿಡುವ ಧೈರ್ಯ ಪ್ರದರ್ಶಿಸಿದ್ದಾನೆ. ಅಮೇರಿಕ ಆತನನ್ನು ದೇಶದ್ರೋಹಿ ಎಂದು ಕರೆದರೂ ಅಫಘಾನ್, ಇರಾಕ್‍ನ ಮಂದಿ ಆತನನ್ನು ಮನುಷ್ಯಪ್ರೇಮಿ ಎಂದೇ ಕರೆದಾರು. ನರಭಕ್ಷಕ ತೋಳಗಳ ಹಿಂಡಿನಲ್ಲಿ ಕಾಣಿಸಿಕೊಂಡ ಈ ಜಿಂಕೆ ಮರಿಗಾಗಿ ಅವರು ಖಂಡಿತ ಹೆಮ್ಮೆ ಪಟ್ಟಾರು.