Monday 29 April 2013

ಅನಿವಾರ್ಯ ಸಂದರ್ಭಗಳಲ್ಲಿ ಸದ್ದು ಮಾಡುವ ‘ಇಟ್ಟಿಗೆಗಳು’


   ಪಾಕಿಸ್ತಾನದ  ಜಿನ್ನಾ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಮಲಗಿರುವ ಸರಬ್ಜಿತ್ ಸಿಂಗ್‍ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಕ್ಕೆ ಒಂದೊಳ್ಳೆಯ ರೂಪಕದಂತಿದ್ದಾನೆ. ಹಾಗೆಯೇ,  ಇಟ್ಟಿಗೆಯಿಂದ ಆತನ ತಲೆ ಒಡೆದ ಅಫ್ತಾಬ್ ಮತ್ತು ಮುದಸ್ಸರ್ ಎಂಬಿಬ್ಬರು ಕೈದಿಗಳು, ಪತಿಯನ್ನು ನೋಡಿ ಕಣ್ಣೀರಿಳಿಸುತ್ತಿರುವ ಪತ್ನಿ, ಮಕ್ಕಳು ಮತ್ತು ತುಟಿ ಸೇವೆ ಮಾಡುತ್ತಿರುವ ಎರಡೂ ಸರಕಾರಗಳು- ಇವರೆಲ್ಲ ಈ ರೂಪಕದ ವಿವಿಧ ಪಾತ್ರಗಳಂತೆ ಕಾಣಿಸುತ್ತಿದ್ದಾರೆ. ನಿಜವಾಗಿ ಅಫ್ತಾಬ್ ಮತ್ತು ಮುದಸ್ಸರ್ ಎಂಬುದು ಬರೇ ಎರಡು ಹೆಸರುಗಳಷ್ಟೇ ಅಲ್ಲ. ಅದೊಂದು ಮನಸ್ಥಿತಿ. ಅಂಥ ಮನ ಸ್ಥಿತಿಯ ಮಂದಿ ಉಭಯ ದೇಶಗಳಲ್ಲಿ ಧಾರಾಳ ಇದ್ದಾರೆ. ಅವರಲ್ಲಿ ವಿಚಿತ್ರವಾದ ಆವೇಶವೊಂದಿದೆ. ಅದೇನೆಂದರೆ, ತನ್ನ ದೇಶದ ಎಲ್ಲ ಸಮಸ್ಯೆಗಳಿಗೂ ಪಾಕಿಸ್ತಾನ ಅಥವಾ ಭಾರತವೇ ಕಾರಣ ಎಂಬುದು. ಭಾರತದಲ್ಲಿ ಎಲ್ಲಾದರೂ ಬಾಂಬ್ ಸ್ಫೋಟಿಸಿ ಬಿಟ್ಟರೆ ತಕ್ಷಣ ಈ ಮನಸ್ಥಿತಿಯ ಮಂದಿ ಪಾಕ್‍ನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಸ್ಫೋಟಕ್ಕೆ ಕಾರಣವೆಂದು ಪಾಕ್ ಮೂಲದ ವಿವಿಧ ಸಂಘಟನೆಗಳ ಹೆಸರನ್ನು ಮಾಧ್ಯಮಗಳ ಮೂಲಕ ತೇಲಿಬಿಡಲಾಗುತ್ತದೆ. ಮುದಸ್ಸರ್ ಮತ್ತು ಅಫ್ತಾಬ್‍ರು ಇಟ್ಟಿಗೆಗಳಿಂದ ಸರಬ್ಜಿತ್‍ನ ಮೇಲೆ ದಾಳಿ ಮಾಡಿದ್ದರೆ, ಈ ಮಂದಿ ಬಾಂಬ್‍ಗಳ ಮೂಲಕ ಪಾಕ್‍ನ ಮೇಲೆ ದಾಳಿ ಮಾಡಿ ಎಂದು ಒತ್ತಾಯಿಸುತ್ತಾರೆ. ಪಾಕ್‍ನ ಜೊತೆಗಿರುವ ಕ್ರೀಡಾ, ರಾಜಕೀಯ, ವ್ಯಾವಹಾರಿಕ ಸಂಬಂಧಗಳನ್ನು ರದ್ದುಪಡಿಸುವಂತೆ ಪ್ರತಿಭಟನೆಗಳು ಏರ್ಪಡುತ್ತವೆ. ಇಂಥದ್ದೇ ಅತಿರೇಕಗಳು  ಪಾಕ್‍ನಲ್ಲೂ ನಡೆಯುತ್ತವೆ. ಇಷ್ಟಕ್ಕೂ, ಇಟ್ಟಿಗೆಗಳನ್ನು ಹಿಡಿಯುವ, ಆವೇಶಗೊಳ್ಳುವ ಮಂದಿಗೆ ವಾಸ್ತವ ಪರಿಸ್ಥಿತಿಯ ಅರಿವಿದೆ ಎಂದಲ್ಲ. ಮುದಸ್ಸರ್ ಮತ್ತು ಅಫ್ತಾಬ್‍ನ ಮಟ್ಟಿಗೆ ಸರಬ್ಜಿತ್ ಸಿಂಗ್ ಓರ್ವ ಭಯೋತ್ಪಾದಕ. ಅಷ್ಟಕ್ಕೂ  ಅವರಿಬ್ಬರಿಗೆ ಸರಬ್ಜಿತ್‍ನ ಬಗ್ಗೆ, ಆತನ ಮೇಲಿರುವ ಆರೋಪಗಳ ಸತ್ಯಾಸತ್ಯತೆಯ ಬಗ್ಗೆ ಗೊತ್ತಿದೆ ಎಂದಲ್ಲ. ಅವರಿಬ್ಬರಿಗೆ ಮತ್ತು ಅಂಥ ಕೋಟ್ಯಂತರ ಮಂದಿಗೆ, ಸರಬ್ಜಿತ್‍ನನ್ನು ಭಯೋತ್ಪಾದಕ ಎಂದು ವ್ಯವಸ್ಥೆಯೇ ಪರಿಚಯಿಸಿಕೊಟ್ಟಿದೆ. ಆದರೆ, ಈ ವ್ಯವಸ್ಥೆ ಎಷ್ಟು ನಂಬಿಕೆಗೆ ಅರ್ಹ, ಇದರ ಹಿಂದೆ ರಾಜಕೀಯ ದುರುದ್ದೇಶಗಳು ಇದ್ದಿರಲಾರದೇ.. ಎಂಬುದನ್ನೆಲ್ಲ ಈ 'ಇಟ್ಟಿಗೆ'ಗಳು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. 'ಇಟ್ಟಿಗೆ'ಗಳ ಈ ದೌರ್ಬಲ್ಯವು ವ್ಯವಸ್ಥೆಗೂ ಚೆನ್ನಾಗಿ ಗೊತ್ತು. ಆದ್ದರಿಂದಲೇ ಸರಕಾರವೊಂದು ಇಕ್ಕಟ್ಟಿನಲ್ಲಿ ಸಿಲುಕಿದರೆ, ಹಗರಣಗಳಲ್ಲಿ ಸಿಲುಕಿಕೊಂಡರೆ ಉಭಯ ರಾಷ್ಟ್ರಗಳಲ್ಲಿ ಎಲ್ಲಾದರೂ ಬಾಂಬ್ ಸ್ಫೋಟಗೊಳ್ಳುವುದಿದೆ. ತಕ್ಷಣ ಉಭಯ ರಾಷ್ಟ್ರಗಳ ಗಡಿಯಲ್ಲಿ ಉದ್ವಿಘ್ನತೆ ಕಾಣಿಸಿಕೊಳ್ಳುತ್ತದೆ. ಗಡಿಯ ಎರಡೂ ಕಡೆ 'ಸರಬ್ಜಿತ್‍ಗಳ' ಬಂಧನವಾಗುತ್ತದೆ. ಆ ಬಳಿಕ ಹಗರಣಗಳು ಮಾಧ್ಯಮಗಳಿಂದ ಮಾಯವಾಗಿ ಸರಬ್ಜಿತ್‍ಗಳು ಚರ್ಚೆಗೆ ಒಳಗಾಗುತ್ತಾರೆ. ದುರಂತ ಏನೆಂದರೆ, ದೇಶಪ್ರೇಮವೆಂದರೆ ಇನ್ನೊಂದು ರಾಷ್ಟ್ರವನ್ನು ಮತ್ತು ಅಲ್ಲಿನ ಪ್ರಜೆಗಳನ್ನು ವಿರೋಧಿಸುವುದು ಎಂದೇ ನಂಬಿರುವ ಈ 'ಇಟ್ಟಿಗೆ'ಗಳಿಗೆ ಇವು ಅರ್ಥವಾಗುವುದಿಲ್ಲ. ಆದ್ದರಿಂದಲೇ ಭಾರತದ ಯಾವುದೇ ಒಂದು ನಗರದಲ್ಲಿ ಕಡ್ಲೆಪುರಿ ಮಾರಿ ಜೀವನ ಸಾಗಿಸುವ ಬಡ ಪಾಕಿಸ್ತಾನಿಯನ್ನೂ ಈ 'ಮಂದಿ' ಭಯೋತ್ಪಾದಕನಂತೆ ನೋಡುವುದು. ಲಷ್ಕರೆ ತ್ವಯ್ಯಿಬದ್ದೋ ಐಎಸ್‍ಐ ನದ್ದೋ  ಏಜೆಂಟ್ ಎಂದು ಹುಯಿಲೆಬ್ಬಿಸುವುದು. ಹೀಗೆ ದಿಕ್ಕು ತಪ್ಪಿದ ಮನಸ್ಥಿತಿಗೆ ಬಲಿಯಾಗಿ ಉಭಯ ದೇಶಗಳ ಜೈಲುಗಳಲ್ಲಿ ನೂರಾರು ಮಂದಿ ಇವತ್ತೂ ಕೊಳೆಯುತ್ತಿದ್ದಾರೆ. ಅಲ್ಲದೇ, ಅಂಥವರ ಮೇಲೆ ಆರೋಪ ಹೊರಿಸುವುದಕ್ಕೆ ಪೋಲೀಸರಿಗೂ ಕಷ್ಟವಿಲ್ಲ. ಕಡ್ಲೆಪುರಿ ಮಾರುತ್ತಾ ಈತ ಐಎಸ್‍ಐಗೆ ಕೆಲಸ ಮಾಡುತ್ತಿದ್ದ ಅಂದರೂ ನಂಬುವಂಥ ವಾತಾವರಣವನ್ನು ಉಭಯ ದೇಶಗಳಲ್ಲೂ ಇವತ್ತು ನಿರ್ಮಿಸಿ ಬಿಡಲಾಗಿದೆ. ಬಳಿಕ, ಜೈಲುಗಳಲ್ಲಿ ಅವರು ಸರಬ್ಜಿತ್‍ನಂತೆ ಕೋಮಾವಸ್ಥೆಯಲ್ಲಿ ಬದುಕಬೇಕಾಗುತ್ತದೆ. ಇಂಥ ಸ್ಥಿತಿಯಲ್ಲಿ ಅವರ ಪತ್ನಿ ಮಕ್ಕಳಾದರೂ ಏನು ಮಾಡಿಯಾರು? ಕಣ್ಣೀರಲ್ಲದೇ ಬೇರೆ ಯಾವ ಮಾರ್ಗಗಳು ಅವರ ಬಳಿಯಿರುತ್ತವೆ? ಭಾರತ ಮತ್ತು ಪಾಕ್‍ಗಳ ಜೈಲಲ್ಲಿರುವ ನೂರಾರು ಸರಬ್ಜಿತ್‍ಗಳ ಸದ್ಯದ ಪರಿಸ್ಥಿತಿ ಇದು. ಅಷ್ಟಕ್ಕೂ, ಅಕ್ಕಪಕ್ಕದ ಎರಡು ರಾಷ್ಟ್ರಗಳ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಸರಬ್ಜಿತ್‍ನಂಥವರು ಮತ್ತೆ ಮತ್ತೆ ಬಲಿಯಾಗುತ್ತಿರುವುದನ್ನು ನಾವು ಎಷ್ಟರ ವರೆಗೆ ಸಹಿಸಿಕೊಳ್ಳಬೇಕು? ಪಾಕ್ ಹೇಳುವಂತೆ, ಒಂದು ವೇಳೆ ಸರಬ್ಜಿತ್ ಅಲ್ಲಿ ಬಾಂಬ್ ಸ್ಫೋಟಿಸಿದ್ದರೂ ಅದು ಆತನದೇ ಆಯ್ಕೆಯಾಗಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಭಾರತೀಯ ವ್ಯವಸ್ಥೆ ಆತನನ್ನು ಆ ಕೃತ್ಯಕ್ಕೆ ದಾಳವಾಗಿ ಬಳಸಿಕೊಂಡಿತ್ತು. ತಮ್ಮ ರಾಜಕೀಯ ದುರುದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿ ವ್ಯವಸ್ಥೆ ಅಮಾಯಕರನ್ನು ಅಪರಾಧಿಗಳನ್ನಾಗಿ ಮಾರ್ಪಡಿಸುತ್ತಿವೆ ಎಂದಲ್ಲವೇ ಇದರರ್ಥ? ಇದು ಬರೇ ಸರಬ್ಜಿತ್‍ಗೆ ಮಾತ್ರ ಸೀಮಿತ ಅಲ್ಲ. ಕಸಬ್ ಕೂಡ ಇಂಥದ್ದೊಂದು ದುರುದ್ದೇಶದ ಬಲಿಪಶುವೇ? ಆದ್ದರಿಂದ ಸರಬ್ಜಿತ್‍ನ ಸದ್ಯದ ಕೋಮಾಸ್ಥಿತಿಗೆ ಆ ಇಬ್ಬರು ಕೈದಿಗಳಷ್ಟೇ ಕಾರಣ ಅನ್ನುವುದು ತಪ್ಪು. ಅವರು ಗೋಡೆಯೊಂದರ ಬರೇ ಎರಡು ಇಟ್ಟಿಗೆಗಳು ಮಾತ್ರ. ಇಂಥ ಸಾವಿರಾರು ಇಟ್ಟಿಗೆಗಳನ್ನು ಬಳಸಿ ವ್ಯವಸ್ಥೆಯು ಸುಳ್ಳಿನ ದೊಡ್ಡದೊಂದು ಬಂಗಲೆಯನ್ನೇ ಕಟ್ಟಿಬಿಟ್ಟಿದೆ. ಉಭಯ ರಾಷ್ಟ್ರಗಳ ಮಧ್ಯೆ ಸಂಬಂಧ ಬಿಗಡಾಯಿಸುವುದಕ್ಕೆ, ಸ್ಫೋಟ ಕೃತ್ಯ ಗಳನ್ನು ನಡೆಸುವುದಕ್ಕೆ, ಪ್ರತಿಭಟನೆ, ಮುರ್ದಾಬಾದ್ ಘೋಷಿಸುವುದಕ್ಕೆ.. ಸಿದ್ಧರಿರುವ ವ್ಯಕ್ತಿಗಳನ್ನು ಆ ಬಂಗಲೆಯೊಳಗೆ ತಯಾರಿಸಲಾಗುತ್ತದೆ. ಕೊನೆಗೆ ಬಂಗಲೆಯಿಂದ ಕೆಲವೊಂದು ‘ಇಟ್ಟಿಗೆಗಳು’ ಹೊರಬಿದ್ದು ಅನಿವಾರ್ಯ ಸಂದರ್ಭಗಳಲ್ಲಿ ಸದ್ದು ಮಾಡುತ್ತವೆ. ಆ ಸದ್ದು ಉಭಯ ರಾಷ್ಟ್ರಗಳ ಸಂಬಂಧವನ್ನು ಉದ್ವಿಘ್ನಗೊಳಿಸುತ್ತವೆ. ಕೊನೆಗೆ ಆ ಇಟ್ಟಿಗೆಗಳನ್ನು ಆ ರಾಷ್ಟ್ರ ಈ ರಾಷ್ಟ್ರಕ್ಕೆ ಎಸೆಯುವುದೂ ಈ ರಾಷ್ಟ್ರ ಆ ರಾಷ್ಟ್ರಕ್ಕೆ ಎಸೆಯುವುದೂ ನಡೆದು ಅಂತಿಮವಾಗಿ, ಇಟ್ಟಿಗೆಗಳು ಒಂಟಿಯಾಗಿ ಬಿಡುತ್ತವೆ. ಕೊನೆಗೆ ಯಾವುದೋ ಒಂದು ಹಂತದಲ್ಲಿ ಅವು ಕೋಮಾ ಸ್ಥಿತಿಗೆ ತಲುಪಿಬಿಡುತ್ತವೆ.  
   ಏನೇ ಆಗಲಿ, ಸರಬ್ಜಿತ್‍ನಂಥ ಸ್ಥಿತಿ ಇನ್ನಾರಿಗೂ ಬರದಂತೆ ಆಗಬೇಕಾದರೆ ಉಭಯ ದೇಶಗಳ ರಾಜಕೀಯ ಆಲೋಚನೆಗಳು ಶುದ್ಧವಾಗಬೇಕು. ಉದ್ವಿಘ್ನ ವಾತಾವರಣವನ್ನು ಸೃಷ್ಟಿಸಿ ಲಾಭ ದೋಚುವ ರಾಜಕೀಯವು ಅಂತ್ಯ ಕಾಣಬೇಕು. ಇಲ್ಲದಿದ್ದರೆ ಅಫ್ತಾಬ್, ಮುದಸ್ಸರ್‍ನಂಥ ಇಟ್ಟಿಗೆಗಳು, ಸರಬ್ಜಿತ್‍ನಂಥ ಕೈದಿಗಳು ಮತ್ತು ಕಣ್ಣೀರಿಳಿಸುವ ಪತ್ನಿ, ಮಕ್ಕಳು ಸದಾ ಸೃಷ್ಟಿಯಾಗುತ್ತಲೇ ಇರುತ್ತಾರೆ.

Wednesday 24 April 2013

ಅಡ್ವಾಣಿ, ಸುಷ್ಮಾ, ರಾಹುಲ್‍ಗೆ ಮತ ಮಾರದಿರೋಣ


   ಗಗನಚುಂಬಿ ಕಟ್ಟಡಗಳು, ಮೆಟ್ರೋ ರೈಲು, ಆಧುನಿಕ ವಿಮಾನ ಯಾನ ಸೌಲಭ್ಯಗಳು, ಅಣ್ವಸ್ತ್ರಗಳಿರುವ; ಬಾಹ್ಯಾಕಾಶ ಯಾನಕ್ಕೆ ಸಿದ್ಧತೆ ನಡೆಸಿರುವ, ಮಾಹಿತಿ ತಂತ್ರಜ್ಞಾನದಲ್ಲಿ ಅಗ್ರ ಸ್ಥಾನದಲ್ಲಿರುವ ಮತ್ತು ಜಗತ್ತಿಗೇ ಸಡ್ಡು ಹೊಡೆಯುವಷ್ಟು ಶ್ರೀಮಂತರಿರುವ ದೇಶವೊಂದರಲ್ಲಿ 1 ರೂ.ಗೆ 30 ಕೆ.ಜಿ. ಅಕ್ಕಿ, 24 ಗಂಟೆ ನಿರಂತರ ವಿದ್ಯುತ್, ಶಾಲೆಗಳಿಗೆ ಇಂಟರ್‍ನೆಟ್ ಸವ್ಳಭ್ಯ, ದ್ವಿಪಥ ರಸ್ತೆ.. ಮುಂತಾದ ಭರವಸೆಗಳನ್ನು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಾಗಿ ಜನರ ಮುಂದಿಡುತ್ತದೆಂದರೆ ಏನರ್ಥ, ಇದು ಅಸಂಬದ್ಧವಲ್ಲವೇ.. ಎಂಬೆಲ್ಲ ಅನುಮಾನ ಮೂಡುವುದು ಸಹಜ. ನಿಜವಾಗಿ, ಈ ದೇಶದ ರಾಜಕೀಯ ಪಕ್ಷಗಳಿಗೆ ಜನರ ನಾಡಿ-ಮಿಡಿತಗಳು ಚೆನ್ನಾಗಿ ಗೊತ್ತು. ಗಗನಚುಂಬಿ ಕಟ್ಟಡಗಳ ಆಚೆ, ಚತುಷ್ಪಥ ರಸ್ತೆಗಳ ಅಕ್ಕ-ಪಕ್ಕ, ಐಟಿ-ಬಿಟಿ ಅಬ್ಬರಗಳ ತುಸು ದೂರ ಕೋಟ್ಯಂತರ ಕಡು ಬಡವರಿದ್ದಾರೆ ಎಂಬುದೂ ಗೊತ್ತು. ಅವುಗಳು ಹೊರಡಿಸುವ  ಚುನಾವಣಾ ಪ್ರಣಾಳಿಕೆಗಳೇ ಇದನ್ನು ಸಾಬೀತುಪಡಿಸುತ್ತವೆ. ಹಾಗಿದ್ದ ಮೇಲೆ ಯಾಕೆ ಕೊಳೆಗೇರಿಗಳು ಅಭಿವೃದ್ಧಿ ಯಾಗುತ್ತಿಲ್ಲ? 40 ಕೋಟಿ ಕಡು ಬಡವರ (ವಿಶ್ವಬ್ಯಾಂಕ್ ವರದಿ) ಸಂಖ್ಯೆಯಲ್ಲಿ ವರ್ಷಂಪ್ರತಿ ಯಾಕೆ ಏರಿಕೆಯಾಗುತ್ತಿದೆ?
   ಒಂದು ದೇಶದ ಅಭಿವೃದ್ಧಿಗೆ ಅಲ್ಲಿನ ರಾಜಕೀಯ ಪಕ್ಷಗಳ ನಿಲುವು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಅವು ದೇಶದ ಸಮಸ್ಯೆಗಳನ್ನು ಹೇಗೆ ಮತ್ತು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿವೆ ಎಂಬುದರ ಆಧಾರದಲ್ಲಿ ಅಭಿವೃದ್ಧಿಯ ನಿರ್ಧಾರವಾಗುತ್ತದೆ. ಈ ನಿಟ್ಟಿನಲ್ಲಿ ಹೇಳುವುದಾದರೆ, ಈ ದೇಶದ ರಾಜಕೀಯ ಪಕ್ಷಗಳು ಪಾಸ್ ಆಗಿವೆ. ಈ ದೇಶದಲ್ಲಿ ಎಷ್ಟು ಕಡು ಬಡವರಿದ್ದಾರೆ, ವಿದ್ಯುತ್, ರಸ್ತೆ, ನೀರು, ಶಾಲೆ, ಆಸ್ಪತ್ರೆ, ಶೌಚಾಲಯ.. ಇಲ್ಲದ ಎಷ್ಟು ಹಳ್ಳಿಗಳಿವೆ ಎಂಬುದನ್ನೆಲ್ಲ   ಅವುಗಳ ಪ್ರಣಾಳಿಕೆಗಳು ಚೆನ್ನಾಗಿಯೇ ವಿವರಿಸುತ್ತವೆ. ಆದ್ದರಿಂದ ಈ ಪ್ರದೇಶಗಳು 5 ವರ್ಷಗಳ ಆಡಳಿತದ ಬಳಿಕವೂ ಅಭಿವೃದ್ಧಿ ಹೊಂದಿಲ್ಲ ಎಂದಾದರೆ ಅದರರ್ಥ, ಅಲ್ಲಿನ ಜನ ಪ್ರತಿನಿಧಿಗಳಿಗೆ ಆ ಬಗ್ಗೆ ಅರಿವಿಲ್ಲ ಎಂದಲ್ಲ, ಅವರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ ಎಂದರ್ಥ. ಹೀಗಿರುವಾಗ ಇಂಥ ಜನಪ್ರತಿನಿಧಿಗಳಿಗೆ ಇಲ್ಲವೇ ಪಕ್ಷಕ್ಕೆ ನಾವು ಯಾಕೆ ಮತ್ತೆ ಓಟು ಹಾಕಬೇಕು ಎಂದು ಮತ ಚಲಾಯಿಸುವ ಮುನ್ನ ಪ್ರತಿಯೊಬ್ಬರೂ ಸ್ವಯಂ ಪ್ರಶ್ನಿಸಿಕೊಳ್ಳಬೇಕು.
   ಪ್ರಜಾಪ್ರಭುತ್ವಕ್ಕೆ ಈ ದೇಶದ ಸಂವಿಧಾನ ಕೊಡುವ ವ್ಯಾಖ್ಯಾನಗಳೇನೇ ಇರಲಿ, ಹೆಂಡಕ್ಕೆ, ಸೀರೆಗೆ, ಅಕ್ಕಿಗೆ, ಕೋಮು ಆಧಾರಿತ ರಾಜಕೀಯ ಸಿದ್ಧಾಂತಕ್ಕೆ ಓಟು ಸಿಗುವ ವರೆಗೆ ಪ್ರಜಾಪ್ರಭುತ್ವವು ಅಪಹಾಸ್ಯಕ್ಕೆ ಒಳಗಾಗುತ್ತಲೇ ಇರುತ್ತದೆ. ಒಂದು ಓಟು ಒಂದು ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸುವಷ್ಟು ತೂಕಭರಿತವಾಗುವುದು, ಆ ಓಟು ಹಾಕುವ ವ್ಯಕ್ತಿ ಪ್ರಜ್ಞಾವಂತನಾಗಿರುವಾಗ ಮಾತ್ರ. ಸದ್ಯ ಈ ದೇಶದಲ್ಲಿ ಇಂಥದ್ದೊಂದು ಪ್ರಜ್ಞಾವಂತ ಮತದಾರ ವರ್ಗ ಎಷ್ಟು ಶೇಕಡಾ ಇದೆ ಎಂಬುದು ಎಲ್ಲ ರಾಜಕೀಯ ಪಕ್ಷಗಳಿಗೂ ಗೊತ್ತು. ಆದ್ದರಿಂದಲೇ ರಮ್ಯ, ರಕ್ಷಿತಾ, ದರ್ಶನ್ ರಂಥ ಸಿನಿಮಾ ತಾರೆಯರು ಚುನಾವಣಾ ಪ್ರಚಾರಕ್ಕೆ ಇಳಿದಿರುವುದು. ತಮ್ಮ  ಎಲ್ಲ ವೈಫಲ್ಯಗಳನ್ನೂ ಕೆಲವು ತಾರೆಯರು ಮುಚ್ಚಿ ಬಿಡುತ್ತಾರೆ ಎಂಬ ನಂಬುಗೆ ರಾಜಕೀಯ ಪಕ್ಷಗಳಲ್ಲಿ ಈಗಲೂ ಇವೆ. ಅಷ್ಟಕ್ಕೂ ಅಡ್ವಾಣಿ, ಸುಶ್ಮಾ ಸ್ವರಾಜ್, ರಾಜನಾಥ್ ಸಿಂಗ್‍ರಂಥ ನಾಯಕರು ದೆಹಲಿಯಿಂದ ರಾಜ್ಯಕ್ಕೆ ಬಂದಿರುವುದರ ಉದ್ದೇಶವಾದರೂ ಏನು? ಅವರನ್ನು ನೋಡಿ ರಾಜ್ಯದ ಮತದಾರರು ಬಿಜೆಪಿ ದುರಾಡಳಿತವನ್ನು ಮರೆಯಲಿ ಎಂದೇ ಅಲ್ಲವೇ? ಹಾಗಂತ, ಕಳೆದ 5 ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳ ಮೂಲಕ ವಿಫಲ ಆಡಳಿತವನ್ನು ನಡೆಸಿದ ನಾಯಕರು ಯಾರೂ ದೆಹಲಿಯವರಲ್ಲವಲ್ಲ. ಯಡಿಯೂರಪ್ಪ, ಹಾಲಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ಧನ ರೆಡ್ಡಿ.. ಮುಂತಾದ ಹತ್ತು-ಹಲವು ಭ್ರಷ್ಟ ನಾಯಕರು  ಕನ್ನಡಿಗರಾಗಿದ್ದರಲ್ಲವೇ?  5 ವರ್ಷಗಳ ಹಿಂದೆ ಅವರನ್ನೆಲ್ಲ ರಾಜ್ಯ ವಿಧಾನಸಭೆಗೆ ಮತದಾರರು ಆರಿಸಿ ಕಳುಹಿಸಿದ್ದು ಅಡ್ವಾಣಿಯನ್ನೋ ರಾಜನಾಥ್‍ರನ್ನೋ ನೋಡಿಯೂ ಅಲ್ಲವಲ್ಲ. ಹೀಗಿರುವಾಗ, ಈಗ ಮತದಾರರ ಮುಂದೆ ಮಾತಾಡಬೇಕಾದದ್ದು ಯಾರು, ರಾಜ್ಯ ನಾಯಕರಲ್ಲವೇ? ಆದರೆ  ಅವರು ಹಾಗೆ ಮಾಡದೆ ದೆಹಲಿಯಿಂದ ನಾಯಕರನ್ನು ಆಮದು ಮಾಡಿಕೊಳ್ಳುತ್ತಾರೆಂದರೆ, ಅದರರ್ಥ, ಜನರನ್ನು ಎದುರಿಸುವ ಧೈರ್ಯ ಇಲ್ಲ ಎಂದೇ ಅಲ್ಲವೇ? ತಮ್ಮ ವೈಫಲ್ಯವನ್ನು ಅಡ್ವಾಣಿಯ ಬಲದಿಂದಲೋ ಸುಷ್ಮಾರ ಮಾತಿನಿಂದಲೋ ಅಡಗಿಸಿಡಬಹುದು ಎಂಬ ನಂಬಿಕೆಯಿಂದಲ್ಲವೇ? ನಿಜವಾಗಿ, ಬಿಜೆಪಿ ಎಂದಲ್ಲ, ಯಾವ ಪಕ್ಷವೂ ಸ್ಥಳೀಯ ಅಭ್ಯರ್ಥಿಗಳ ಮೂಲಕವೇ ಓಟು ಕೇಳಬೇಕು. ಯಾರ್ಯಾರದ್ದೋ ವರ್ಚಸ್ಸು, ಮಾತಿನ ಬಲ, ವ್ಯಕ್ತಿತ್ವವನ್ನು ಪ್ರದರ್ಶಿಸಿ ಮತ ಯಾಚಿಸುವುದು ಒಂದು ರೀತಿಯಲ್ಲಿ ಜನರನ್ನು ವಂಚಿಸಿದಂತೆ. ಒಂದು ಪ್ರದೇಶದ ಸಮಸ್ಯೆ, ಸಂಕಟಗಳು ಚೆನ್ನಾಗಿ ಗೊತ್ತಿರುವುದು ಆಯಾ ಪ್ರದೇಶದ ಅಭ್ಯರ್ಥಿಗೇ ಹೊರತು ಆಮದಿತ ನಾಯಕರಿಗಲ್ಲ.  ದೆಹಲಿಯಿಂದ ಬರುವ ಸೋನಿಯಾಗೆ, ರಾಹುಲ್‍ಗೆ ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಎಷ್ಟು ಶಾಲೆ, ಆಸ್ಪತ್ರೆ, ಶೌಚಾಲಯಗಳಿವೆ ಎಂಬುದು ಗೊತ್ತಿರುತ್ತದೆಯೇ? ಅವರು ನಾಲ್ಕು ಮರುಳು ಮಾತುಗಳನ್ನು ಆಡಿ, ಕೈ ಎತ್ತಿ ಹೊರಟು ಹೋಗುತ್ತಾರೆ. ನಿಜವಾಗಿ, ಇಂಥ ಆಮದು ನಾಯಕರಿಗೆ ಜನರು ಮರುಳಾಗುವುದರಿಂದಲೇ, ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುವುದು. ಅತ್ಯಂತ ಅನರ್ಹ ಅಭ್ಯರ್ಥಿ ಕೂಡ ಗೆದ್ದ ಬರುವುದು. ಆದ್ದರಿಂದ ಈ ಬಾರಿಯ ಚುನಾವಣೆಯು ಆಮದು ನಾಯಕರ ವರ್ಚಸ್ಸಿನಲ್ಲಿ ಕೊಚ್ಚಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಮತದಾರರು ಹೊತ್ತುಕೊಳ್ಳಬೇಕಾಗಿದೆ. ತನ್ನ ಪ್ರಾಮಾಣಿಕತೆ, ಜನಪರ ಕಾಳಜಿ, ಮೌಲ್ಯ ಬದ್ಧತೆಯನ್ನು ಆಧಾರವಾಗಿಸಿಯೇ ಓರ್ವ ಅಭ್ಯರ್ಥಿ ಓಟು ಕೇಳಬೇಕೇ ಹೊರತು ಅಡ್ವಾಣಿಯನ್ನೋ ಮೋದಿಯನ್ನೋ ರಾಹುಲ್‍ರನ್ನೋ ತೋರಿಸಿ ಅಲ್ಲ. ಅವರಿಂದ ಕ್ಷೇತ್ರದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವೂ ಇಲ್ಲ. ಆದ್ದರಿಂದ ರಾಜ್ಯದ ಮತದಾರರು ಈ ಬಾರಿ ಪಕ್ವ ನಿರ್ಧಾರವನ್ನು ತಳೆಯ ಬೇಕಾಗಿದೆ. ಭ್ರಷ್ಟಾಚಾರ, ಕೋಮುವಾದ, ಜಾತಿವಾದ, ಅನೈತಿಕತೆಗಳ ವಕ್ತಾರರನ್ನು ಮುಲಾಜಿಲ್ಲದೇ ಸೋಲಿಸಬೇಕಾಗಿದೆ. ಈ ರಾಜ್ಯಕ್ಕೆ ಇವತ್ತು ಬೇಕಾಗಿರುವುದು ಜಾತಿ, ಕೋಮುಗಳ ಆಧಾರದಲ್ಲಿ ಆಡಳಿತ ನಡೆಸದ, ಬಡವರು-ದುರ್ಬಲರನ್ನು ಅವರ ಧರ್ಮ ನೋಡದೇ ಮೇಲೆತ್ತಲು ಯತ್ನಿಸುವ ಪ್ರಾಮಾಣಿಕ ಜನಪ್ರತಿನಿಧಿಗಳು. ಕಳೆದ 5 ವರ್ಷಗಳು ಈ ನಿಟ್ಟಿನಲ್ಲಿ ಸಂಪೂರ್ಣ ವೈಫಲ್ಯವನ್ನು ಕಂಡಿವೆ. ಮುಂದಿನ 5 ವರ್ಷಗಳು ಹಾಗಾಗದಂತೆ ಎಚ್ಚರಿಕೆ ವಹಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ.

Tuesday 16 April 2013

ಕುಸುಮ ಎಂಬ ತಾಯಿಯೂ ಐವರು ಮಕ್ಕಳೂ


ಹೆಸರು: ಕುಸುಮ
ಪ್ರಾಯ: 80
ವಾಸ್ತವ್ಯ: ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ಇನ್ನಾ ಬಸ್‍ಸ್ಟ್ಯಾಂಡ್‍ನಲ್ಲಿ..
   ವಿಧವೆಯಾಗಿರುವ ಕುಸುಮರಿಗೆ ಐವರು ಪುತ್ರರು ಮತ್ತು ಓರ್ವ ಪುತ್ರಿಯಿದ್ದಾರೆ. ಹಿರಿಯ ಪುತ್ರ ತಕ್ಕಮಟ್ಟಿನ ಶ್ರೀಮಂತರಾಗಿದ್ದು, ಉಳಿದವರು ದುಡಿಯುತ್ತಿದ್ದಾರೆ. ಮಕ್ಕಳೊಂದಿಗೆ ಸರದಿಯಂತೆ ಬದುಕುತ್ತಿದ್ದ ಈ ತಾಯಿ ಇತ್ತೀಚೆಗೆ ಜಾರಿ ಬಿದ್ದು ಸೊಂಟ ಮುರಿದುಕೊಂಡಿದ್ದಾರೆ. ನಡೆಯಲು ಕಷ್ಟಪಡುವಂತಾಗಿದೆ. ಹೀಗಿರುತ್ತಾ, ಮಕ್ಕಳು ಈ ತಾಯಿಯನ್ನು ಅಟೋ ರಿಕ್ಷಾದಲ್ಲಿ ಕೂರಿಸಿ ಬಸ್ ಸ್ಟ್ಯಾಂಡ್‍ನ ಬಳಿ ಇಳಿಸಿ ಹೋಗಿದ್ದಾರೆ. ಶೌಚಕ್ಕೆ ಹೋಗಲಾಗದೇ, ಊಟದ ವ್ಯವಸ್ಥೆಯಿಲ್ಲದೇ ಈ ತಾಯಿ ಕಣ್ಣೀರಿಳಿಸುತ್ತಿದ್ದಾರೆ..
    ಜೆಡಿಎಸ್ ಮತ್ತು ಕೆಜೆಪಿ ಪಕ್ಷಗಳ ಚುನಾವಣಾ ಪ್ರಣಾಳಿಕೆಯನ್ನು ಮುಖಪುಟದಲ್ಲಿ ತುಂಬಿಕೊಂಡು ಬಂದ ಎಪ್ರಿಲ್ 14ರ ಪತ್ರಿಕೆಯಲ್ಲಿ ಕಾಣಿಸಿಕೊಂಡ ಸುದ್ದಿ ಇದು. ಸುದ್ದಿಯನ್ನು ಓದುವಾಗ ಎದೆ ಭಾರವಾಗುತ್ತದೆ. ವೃದ್ಧ ತಂದೆ-ತಾಯಿಗೆ ಪ್ರತಿ ತಿಂಗಳು 15 ಸಾವಿರ ರೂಪಾಯಿ ಮಾಸಾಶನ ನೀಡುವಂತೆ ದೆಹಲಿ ಹೈಕೋರ್ಟು ಪುತ್ರನಿಗೆ ಆದೇಶಿಸಿದ್ದು ಇದಕ್ಕಿಂತ ಮೂರು ದಿನಗಳ ಮೊದಲಷ್ಟೇ ವರದಿಯಾಗಿತ್ತು. ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ ಅಂತ ಒಂದು ಕೋರ್ಟು ಆದೇಶಿಸುವಷ್ಟು ಕೌಟುಂಬಿಕ ಮೌಲ್ಯಗಳು ಪತನವಾಗಿವೆ ಎಂದರೆ, ಉಳಿದಂತೆ ಹೇಳುವುದಕ್ಕಾದರೂ ಏನಿದೆ? ಮಕ್ಕಳು ಮತ್ತು ಹೆತ್ತವರ ನಡುವಿನ ಸಂಬಂಧಗಳ ಪಾವಿತ್ರ್ಯತೆಯು ದಿನೇ ದಿನೇ ಕುಸಿಯುತ್ತಿರುವುದಕ್ಕೆ ಏನು ಕಾರಣ? ಆಧುನಿಕತೆಯೇ, ವೈಜ್ಞಾನಿಕ ಪ್ರಗತಿಯೇ ಅಥವಾ ಧಾರ್ಮಿಕ ಮೌಲ್ಯಗಳ ನಿರ್ಲಕ್ಷ್ಯವೇ?
   ಹೆತ್ತವರನ್ನು ಹತ್ತು-ಹಲವು ಬಗೆಯಲ್ಲಿ ವರ್ಣಿಸುವ, ಗೌರವಿಸುವ ದೇಶ ಇದು. ಆದರೂ ಪ್ರತಿದಿನ ಅವರ ಸಂಕಷ್ಟದ ಸುದ್ದಿಗಳು ಹೆಚ್ಚುತ್ತಲೇ ಇವೆ. ನಿಜವಾಗಿ, ಹೆತ್ತವರು ಎಂಬ ನಾಲ್ಕಕ್ಷರಕ್ಕೆ, ‘ಹುಟ್ಟಿಸಿದವರು’ ಎಂಬ ಏಕ ಮಾತ್ರ ಅರ್ಥವಷ್ಟೇ ಇರುವುದಲ್ಲ. ಅದರರ್ಥ ತುಂಬಾ ವಿಶಾಲವಾದದ್ದು. ಹುಟ್ಟಿದಂದಿನಿಂದ ಹಿಡಿದು ದೊಡ್ಡವರಾಗುವ ತನಕ ಹೆತ್ತವರನ್ನು ಬಿಟ್ಟು ಬೇರೊಂದು ಜಗತ್ತು ಮಗುವಿಗಿರುವುದಿಲ್ಲ. ಈ ಭೂಮಿಗೆ ಬರುವುದಕ್ಕಿಂತ ಮೊದಲು ಮಗು ತಾಯಿಯ ಹೊಟ್ಟೆ ಯನ್ನು ಮನೆ ಮಾಡಿಕೊಂಡಿರುತ್ತದೆ. ಆ ಸಂದರ್ಭದಲ್ಲಿ ಮಗುವಿಗೆ ಸ್ವಸಾಮರ್ಥ್ಯವಿರುವುದಿಲ್ಲ. ಅದು ಕುಸುಮರಷ್ಟೇ ದುರ್ಬಲ. ಒಂದು ವೇಳೆ, ತಾಯಿ ಮನಸ್ಸು ಮಾಡಿದರೆ ಯಾವ ಕ್ಷಣದಲ್ಲಿ ಬೇಕಾದರೂ ಆ ಮನೆಯಿಂದ ಅದನ್ನು ಹೊರಗಟ್ಟುವುದಕ್ಕೆ ಸಾಧ್ಯವಿದೆ. ಆದರೆ ಮಗುವನ್ನು ತಾಯಿ ಹೊಟ್ಟೆಯೆಂಬ ತನ್ನ ಮನೆಯಲ್ಲೇ  ಉಳಿಸಿಕೊಳ್ಳುವುದಲ್ಲದೇ ಅದಕ್ಕಾಗಿ ಹತ್ತು-ಹಲವು ಸಂಕಷ್ಟಗಳನ್ನು ಅನುಭವಿಸುತ್ತಾಳೆ. ದೈಹಿಕ, ಮಾನಸಿಕ ಏರುಪೇರುಗಳು ಅವಳಲ್ಲಿ ಉಂಟಾಗುತ್ತವೆ. ತಿನ್ನಲಾಗದೇ, ವಾಂತಿ ಮಾಡುತ್ತಾ, ನಿತ್ರಾಣವನ್ನು ಸಹಿಸುತ್ತಾ ಒಂಬತ್ತು ತಿಂಗಳ ಕಾಲ ಮಗುವನ್ನು ಮನೆಯಲ್ಲಿಟ್ಟು ಪೋಷಿಸುತ್ತಾಳೆ. ಇಷ್ಟಕ್ಕೂ, ತನ್ನೆಲ್ಲಾ ಸಮಸ್ಯೆಗಳಿಗೆ ತನ್ನ ಮನೆ ಸೇರಿರುವ ಈ ಮಗುವೇ ಕಾರಣ ಎಂದು ಸಿಟ್ಟಾಗಿ, ಮಗುವನ್ನು ಮನೆಯಿಂದ ಹೊರದಬ್ಬಲು ತಾಯಿ ತೀರ್ಮಾನಿಸಿರುತ್ತಿದ್ದರೆ ಏನಾಗುತ್ತಿತ್ತು? ಕುಸುಮರ ಐವರು ಗಂಡು ಮಕ್ಕಳಗೆ ಈ ಜಗತ್ತನ್ನು ನೋಡುವ ಭಾಗ್ಯ ಸಿಗುತ್ತಿತ್ತೇ? ಆದರೆ ಯಾವ ತಾಯಿಯೂ ತನ್ನ ಮನೆ ಸೇರಿರುವ ಶಿಶುವನ್ನು ಸಂಕಷ್ಟ ಎಂದು ಪರಿಗಣಿಸುವುದೇ ಇಲ್ಲ. ಇನ್ನು, ಮನೆಯಿಂದ ಭೂಮಿಗೆ ಬಂದ ಶಿಶುವನ್ನು ತಾಯಿ ನೋಡುವುದೂ ಅಕ್ಕರೆಯಿಂದಲೇ. ಬಿದ್ದ ಮಗುವನ್ನು ಎಬ್ಬಿಸುವುದು, ಗಾಯಕ್ಕೆ ಚಿಕಿತ್ಸೆ ಮಾಡಿಸುವುದು, ತಾವು ಉಣ್ಣದೇ ಮಗುವಿಗೆ ಉಣಿಸುವುದು.. ಹೀಗೆ ಹೆತ್ತವರು ಎಂಬ ಎರಡು ಜೀವಗಳು ಒಂದು ಮಗುವಿನ ಬದುಕಿನಲ್ಲಿ ದೊಡ್ಡದೊಂದು ತ್ಯಾಗವನ್ನು ಮಾಡಿರುತ್ತವೆ. ಆದ್ದರಿಂದಲೇ ಪವಿತ್ರ ಕುರ್‍ಆನ್, ‘ತಾಯಿಯು ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ನಿಮ್ಮನ್ನು ತನ್ನ ಗರ್ಭದಲ್ಲಿರಿಸಿದಳು. ಆದ್ದರಿಂದ ಆಕೆಗೆ ಕೃತಜ್ಞತೆ ಸಲ್ಲಿಸಿ ಎಂದು ಮಕ್ಕಳೊಂದಿಗೆ ಹೇಳಿದ್ದು. ಹೆತ್ತವರ ಹಕ್ಕುಗಳನ್ನು ತಿಳಿದುಕೊಳ್ಳಿ (31:14) ಎಂದು ಆದೇಶಿಸಿದ್ದು. ವೃದ್ಧರಾಗಿರುವ ಹೆತ್ತವರನ್ನು ಬಸ್ ಸ್ಟ್ಯಾಂಡ್‍ಗಳಲ್ಲಿ ಬಿಟ್ಟು ಬಿಡುವುದು ಬಿಡಿ, ‘ಛೆ’ ಎಂಬ ಪದವನ್ನು ಕೂಡ ಅವರ ವಿರುದ್ಧ ಬಳಸಬಾರದು (17: 23) ಎಂದು ತಾಕೀತು ಮಾಡಿದ್ದು. ಹೆತ್ತವರ ಸಿಟ್ಟಿಗೆ, ಅವರ ಕಣ್ಣೀರಿಗೆ ಕಾರಣವಾಗುವ ಮಕ್ಕಳು ಅವರು ಎಷ್ಟೇ ದೊಡ್ಡ ಧರ್ಮಿಷ್ಟರಾಗಿದ್ದರೂ ನಮಾಝ್, ಉಪವಾಸ, ಹಜ್ಜ್ ಮಾಡುವ ಮುಲ್ಲಾ ಆಗಿದ್ದರೂ ಸ್ವರ್ಗ ಪ್ರವೇಶಿಸುವುದಿಲ್ಲ ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದು.
   ಭ್ರಷ್ಟಾಚಾರ, ಅತ್ಯಾಚಾರ, ಅಶ್ಲೀಲತೆಗಳ ಕುರಿತಂತೆ ಸಾಕಷ್ಟು ಚರ್ಚೆಗಳಾಗುತ್ತಿರುವ ಸಂದರ್ಭ ಇವತ್ತಿನದು. ಭ್ರಷ್ಟಾಚಾರ, ಅತ್ಯಾಚಾರಕ್ಕೆಲ್ಲ ಪ್ರಬಲ ಕಾನೂನುಗಳ ರಚನೆಯು ಬಿರುಸುಗೊಂಡ ದಿನಗಳಿವು. ಆದರೂ ಭ್ರಷ್ಟಾಚಾರದ ನಿರ್ಮೂಲನೆಯ ಬಗ್ಗೆ ಸಾರ್ವಜನಿಕರಲ್ಲಿ ಯಾವ ನಿರೀಕ್ಷೆಯೂ ಕಾಣಿಸುತ್ತಿಲ್ಲ. ಅತ್ಯಾಚಾರ ಪ್ರಕರಣಗಳಲ್ಲಿ ಇಳಿಕೆಯೂ ಆಗುತ್ತಿಲ್ಲ. ಒಂದು ರೀತಿಯಲ್ಲಿ, ಕಾನೂನುಗಳೂ ಅಪರಾಧಗಳೂ ಹೆಚ್ಚುತ್ತಿರುವ ಈ ಕಾಲದಲ್ಲಿ, ಹೆತ್ತವರೂ ಸಮಸ್ಯೆಯ ಭಾಗವಾಗುತ್ತಿದ್ದಾರೆ. ಮಕ್ಕಳು, ಮೊಮ್ಮಕ್ಕಳ ಜೊತೆ ತಮ್ಮ ದಿನವನ್ನು ಕಳೆಯಬೇಕಾಗಿದ್ದ ವೃದ್ಧ ಹೆತ್ತವರು ಬಸ್ ಸ್ಟ್ಯಾಂಡ್ ಗಳಲ್ಲೋ ಬೀದಿ, ಆಶ್ರಮಗಳಲ್ಲೋ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ, ಈ ಬಗ್ಗೆ ಸಾರ್ವಜನಿಕವಾಗಿ ಗಂಭೀರ ಚರ್ಚೆಯೊಂದು ನಡೆಯಬೇಕಾಗಿದೆ. ವೃದ್ಧರಿಗೆ ಮಾಸಾಶನವನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿ ರಾಜಕೀಯ ಪಕ್ಷಗಳು ತೆಪ್ಪಗಾಗುವಂತೆ ನಾವು ವೃದ್ಧರನ್ನು ಬಸ್‍ಸ್ಟ್ಯಾಂಡ್‍ಗಳಲ್ಲಿ ನೋಡಿ ಸುಮ್ಮನಾಗಬಾರದು. ಸಭೆ, ವಿಚಾರಗೋಷ್ಠಿ, ಸಂವಾದಗಳನ್ನು ಏರ್ಪಡಿಸಿ, ಹೆತ್ತವರಿಗೂ ಮತ್ತು ಆಧ್ಯಾತ್ಮಿಕತೆಗೂ ನಡುವೆ ಇರುವ ಸಂಬಂಧ, ಅವರ ತ್ಯಾಗ-ಪರಿಶ್ರಮಗಳು ಸಾರ್ವಜನಿಕ ಚರ್ಚೆಯಾಗುವಂತೆ ನೋಡಿಕೊಳ್ಳಬೇಕು. ಇಷ್ಟಕ್ಕೂ, ಹೆತ್ತವರನ್ನು ಆದರಿಸುವಂತೆ ಮಾಡಲು ಕೋರ್ಟಿನ ಆದೇಶದಿಂದ ಸಾಧ್ಯವೇ? ಮಕ್ಕಳು ಹೆತ್ತವರನ್ನು ಆರೈಕೆ ಮಾಡಬೇಕಾದದ್ದು ಮನಸಂತೃಪ್ತಿಯಿಂದ. ಇವರನ್ನು ಆರೈಕೆ ಮಾಡಿದರೆ ತನಗೆ ಸ್ವರ್ಗ ಸಿಗುತ್ತದೆ ಎಂಬ ಆಧ್ಯಾತ್ಮಿಕ ಪ್ರಜ್ಞೆಯಿಂದ. ಅವರು ಕಣ್ಣೀರಾದರೆ ತನಗೆ ನರಕ ಶತಃಸಿದ್ಧ ಎಂಬ ಭೀತಿಯಿಂದ. ಈ ಆಧ್ಯಾತ್ಮಿಕ ಪ್ರಜ್ಞೆ ಸಮಾಜದಲ್ಲಿ ಬೆಳೆದು ಬರದ ಹೊರತು ಹೆತ್ತವರು ನೆಮ್ಮದಿಯಾಗಿರಲು ಸಾಧ್ಯವಿಲ್ಲ.

Monday 8 April 2013

ಪಾಸಿಟಿವ್ ಸುದ್ದಿಗಳ ಪ್ರಾಬಲ್ಯಕ್ಕೆ ಪೂಜಾ ನೆಪವಾಗಲಿ

ಪೂಜಾ

   ಜಗತ್ತಿನ ಯಾವ ಭಾಗದಲ್ಲೂ ನಡೆಯಬಹುದಾದ, ತೀರಾ ಸಾಮಾನ್ಯ ಘಟನೆಯೊಂದು ಕಳೆದ ವಾರ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿ ಪ್ರಕಟವಾಯಿತು. ರಾಜಸ್ಥಾನದ ಬಿಕಾನೇರ್‍ನ ಪೂಜಾ ಎಂಬ 6ರ ಹೆಣ್ಣು ಮಗಳು ಪಾಕಿಸ್ತಾನದ ಗಡಿ ದಾಟಿದ್ದಳು. ಮನೆಯ ತುಸು ದೂರದಲ್ಲಿರುವ ಗಡಿಯ ಬಗ್ಗೆ, ಅದಕ್ಕೂ ದೇಶ ವಿಭಜನೆಗೂ ನಡುವೆ ಇರುವ ಸಂಬಂಧದ ಬಗ್ಗೆ ಆ ಹೆಣ್ಣು ಮಗುವಿಗೆ ಗೊತ್ತಿರುವ ಸಾಧ್ಯತೆಗಳು ತೀರಾ ಕಡಿಮೆ. ದೊಡ್ಡವರು ಸೇರಿ ಭೂಮಿಗೆ ಎಳೆದಿರುವ ಆ ಗೆರೆಗೆ ಆ ಮಗು, ತನ್ನ ಮನೆಯ ಸುತ್ತ ಹಾಕುವ ಬೇಲಿಯಷ್ಟೇ ಮಹತ್ವ ಕೊಟ್ಟಿರುವ ಸಾಧ್ಯತೆಯೂ ಇದೆ. ತಕ್ಷಣ ಭಾರತದ ಗಡಿ ರಕ್ಷಣಾ ಪಡೆಯ ಅಧಿಕಾರಿಗಳು ಪಾಕ್ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ಕೇವಲ ಎರಡೇ ದಿನಗಳಲ್ಲಿ ಪೂಜಾಳನ್ನು ಪತ್ತೆ ಹಚ್ಚಿ ಅವರು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ನಿಜವಾಗಿ, ಇದೊಂದು ಅಪರೂಪದ ಘಟನೆ. ಯಾಕೆಂದರೆ, ಹೀಗೆ ಗೊತ್ತಿಲ್ಲದೇ ಗಡಿ ದಾಟಿದ ಅನೇಕಾರು ಮಂದಿ ಉಭಯ ದೇಶಗಳ ಜೈಲುಗಳಲ್ಲಿ ಈಗಲೂ ಕೊಳೆಯುತ್ತಿದ್ದಾರೆ. ಅವರ ಅಪರಾಧ ಏನೆಂದರೆ, ಗಡಿ ಭಾಗದಲ್ಲಿ ಬದುಕುತ್ತಿರುವುದು ಮತ್ತು ತೀರಾ ಬಡವರಾಗಿರುವುದು. ಆಡು, ಕುರಿ, ದನಗಳನ್ನು ಮೇಯಿಸುತ್ತಾ ಗಡಿ ದಾಟಿ ಬಿಟ್ಟರೆ ಆ ಬಳಿಕ ವರ್ಷಗಟ್ಟಲೆ ಅವರ ಪತ್ತೆಯೇ ಇರುವುದಿಲ್ಲ. ಹೆಚ್ಚಿನ ಘಟನೆಗಳಲ್ಲಿ ಅಧಿಕಾರಿಗಳು ಅಂಥವರ ಮೇಲೆ ಗೂಢಚರ್ಯೆಯ ಆರೋಪವನ್ನು ಹೊರಿಸಿರುತ್ತಾರೆ. ಅಷ್ಟಕ್ಕೂ ಇಂಥ ಕುಟುಂಬಗಳೆಲ್ಲ ಮಾಧ್ಯಮಗಳು ಮತ್ತು ಮಾನವ ಹಕ್ಕು ಹೋರಾಟಗಾರರು ಸದಾ ಸುಳಿದಾಡುತ್ತಿರುವ ದೇಶದ ಪ್ರಮುಖ ನಗರಗಳಲ್ಲಿ ಬದುಕುತ್ತಿಲ್ಲವಲ್ಲ. ಹೀಗೆ ರಾಜಕೀಯ ದುರುದ್ದೇಶಗಳಿಗಾಗಿ ದೇಶವನ್ನು ವಿಭಜಿಸಿ ಅದರ ಫಲವನ್ನು ಈಗಲೂ ಕೊಯ್ಯುತ್ತಿರುವವರ ಮಧ್ಯೆ, ಯಾವ ದುರುದ್ದೇಶವೂ ಇಲ್ಲದೇ ಗಡಿ ದಾಟುವ ಬಡವರು ದೇಶವಿರೋಧಿಗಳಾಗಿ ಜೈಲು ಸೇರಬೇಕಾಗುತ್ತದೆ. ಇಂಥ ಹೊತ್ತಲ್ಲಿ ಪೂಜಾಳ ಪ್ರಕರಣ ಖಂಡಿತ ಬ್ರೇಕಿಂಗ್ ನ್ಯೂಸ್ ಆಗುವಷ್ಟು ತೂಕದ್ದು, ಮಹತ್ವದ್ದು.
   ದುರಂತ ಏನೆಂದರೆ, ಮಾಧ್ಯಮಗಳಲ್ಲಿ ಅಥವಾ ಇನ್ನಿತರ ಸಭೆ, ಸೆಮಿನಾರ್‍ಗಳಲ್ಲಿ ಇಂಥ ಪಾಸಿಟಿವ್ ಸುದ್ದಿಗಳಿಗೆ ಜಾಗ ಸಿಗುತ್ತಿಲ್ಲ ಅನ್ನುವುದು. ಗುಜರಾತ್ ಹತ್ಯಾಕಾಂಡದಿಂದಾಗಿ ಊರು ತೊರೆದವರು ಬಳಿಕ ಊರಿಗೆ ಮರಳಿದಾಗ ಅವರನ್ನು  ಉರಿದು ಹೋದ ಮನೆಯ ಅವಶೇಷಗಳು ಸ್ವಾಗತಿಸಿತ್ತು. ಪ್ರೀತಿಯಿಂದ ಬೆಳೆಸಿದ್ದ ಕೈತೋಟಗಳು, ಕೃಷಿ ಬೆಳೆಗಳು ನಾಶವಾಗಿದ್ದುವು. ಬಾವಿಗಳನ್ನು ಕಸ ಕಡ್ಡಿಗಳಿಂದ ತುಂಬಲಾಗಿತ್ತು. ಅಲ್ಲದೇ, ಈ ಎಲ್ಲ ಅನಾಹುತಗಳಿಗೆ ಕಾರಣವಾದವರು ಪಕ್ಕದ ಮನೆಯಲ್ಲೇ ಇದ್ದರು. ಈಗ ಮತ್ತೆ ಅವರು ಎದುರು-ಬದುರಾಗುವ ಸನ್ನಿವೇಶ ನಿರ್ಮಾಣವಾದಾಗ, ಮತ್ತೆ ದ್ವೇಷವನ್ನು ಮುಂದುವರಿಸುವುದಕ್ಕೆ ಹೆಚ್ಚಿನ ಕುಟುಂಬಗಳು ಇಷ್ಟಪಡಲಿಲ್ಲ. ಹಿಂದೂಗಳ ಮನೆ ನಿರ್ಮಾಣದಲ್ಲಿ ಮುಸ್ಲಿಮರು ಕೈ ಜೋಡಿಸಿದರು. ಮುಸ್ಲಿಮರು ನೆಲೆ ಕಂಡುಕೊಳ್ಳಲು ಹಿಂದೂಗಳೂ ಸಹಕರಿಸಿದರು. ನಿನ್ನೆ ಬೆಂಕಿಯಿಟ್ಟವನನ್ನು ಇವತ್ತು ಕ್ಷಮಿಸಲು ಸಂತ್ರಸ್ತರು ಮನಸ್ಸು ಮಾಡಿದರು. ಇಂಥ ಘಟನೆಗಳು ಗುಜರಾತ್‍ನಲ್ಲಿ ಧಾರಾಳ ನಡೆದಿವೆಯೆಂದು ಕಳೆದ ವಾರ, ‘ರಿಕಾನ್ಸಿಲಿಯೇಶನ್ ಬೈ ಶೇರ್‍ಡ್ ಕೇರಿಂಗ್’ ಎಂಬ ಲೇಖನದಲ್ಲಿ ಹರ್ಷ ಮಂದರ್ ಬರೆದಿದ್ದರು. ಹಿಂದೂ-ಮುಸ್ಲಿಮ್ ಸಂತ್ರಸ್ತರೇ ಹೆಚ್ಚಿರುವ, ಅಮನ್ ಪಥಿಕ್ ಮತ್ತು ನ್ಯಾಯ್ ಪಥಿಕ್ ಎಂಬ ತಂಡಗಳು ಇಂಥ ಪ್ರಯತ್ನಗಳನ್ನು ಸಾಕಷ್ಟು ನಡೆಸಿವೆ ಎಂದು, ಗುಜರಾತ್ ಹತ್ಯಾಕಾಂಡದಲ್ಲಿ ಮೋದಿಯ ಪಾತ್ರವನ್ನು ಖಂಡಿಸಿ ಸರಕಾರಿ ಹುದ್ದೆಯನ್ನು ತೊರೆದಿರುವ ಮಂದರ್, ದಿ ಹಿಂದೂವಿನಲ್ಲಿ ಉಲ್ಲೇಖಿಸಿದ್ದರು.
   ಆದರೆ ಇಂಥ ಪಾಸಿಟಿವ್ ಸಂಗತಿಗಳು ಸುದ್ದಿಯೇ ಆಗುತ್ತಿಲ್ಲ. ಮೋದಿಯ ಅಸಭ್ಯ ಭಾಷೆ ಮತ್ತು ಆಕ್ರಮಣಕಾರಿ ನಿಲುವುಗಳಿಗೆ ಮಾಧ್ಯಮಗಳಲ್ಲಿ ಸಿಗುವಷ್ಟು ಕವರೇಜು ಸಭ್ಯ ಭಾಷೆಯ ಭಾಷಣಗಳಿಗೆ ಸಿಗುತ್ತಿಲ್ಲ. ಒಂದು ವೇಳೆ ರಾಜಕಾರಣಿಗಳ ಕೊಳಕು ಭಾಷೆ ಮತ್ತು ವಿಚಾರಗಳು ಸಾರ್ವಜನಿಕವಾಗಿ ಅಮುಖ್ಯ ಅನ್ನಿಸಿಕೊಂಡರೆ ಏನಾಗಬಹುದು? ನಮ್ಮ ಸೆಮಿನಾರ್‍ಗಳು, ಸಂವಾದ ಕೂಟಗಳಲ್ಲೆಲ್ಲ ನೆಗೆಟಿವ್ ಸಂಗತಿಗಳಿಗೆ ಮಹತ್ವ ಲಭಿಸದೇ ಹೋದರೆ ಏನು ಸಂಭವಿಸಬಹುದು? ಭ್ರಷ್ಟಾಚಾರಿಗಳ ಪಟ್ಟಿಯನ್ನು ಹೇಳುತ್ತಾ ಹೋಗುವುದಕ್ಕಿಂತ ಶುದ್ಧಾಚಾರಿಗಳ ವಿವರವನ್ನು ಮತ್ತು ಅವರ ಮಾದರಿ ಬದುಕನ್ನು ಮಂಡಿಸುತ್ತಾ ಹೋಗುವುದರಲ್ಲಿ ಇರುವ ವ್ಯತ್ಯಾಸವನ್ನೇಕೆ ನಾವು ಪರಿಗಣಿಸುತ್ತಿಲ್ಲ? ಅಂದಹಾಗೆ, ಇದರರ್ಥ ಸಮಾಜದಲ್ಲಿರುವ ಕೆಡುಕುಗಳನ್ನು ಉಲ್ಲೇಖಿಸಬಾರದೆಂದಲ್ಲ. ಆದರೆ ಕೆಡುಕುಗಳೇ ಮುಖ್ಯವಾಗಿ, ಭರವಸೆಯೇ ಸತ್ತು ಹೋಗುವಷ್ಟು ಅವು ಆವರಿಸಿಕೊಳ್ಳಬಾರದಲ್ಲ.
   ಈ ದೇಶದಲ್ಲಿ ಪೂಜಾಳಂಥ ಪ್ರಕರಣಗಳು ಧಾರಾಳ ನಡೆಯುತ್ತಿವೆ. ತಪ್ಪು ಮಾಡುತ್ತಾ ಮತ್ತು ಪರಸ್ಪರ ಕ್ಷಮಿಸಿಕೊಳ್ಳುತ್ತಾ ಬದುಕನ್ನು ಸಂತಸದಿಂದ ಕಳೆಯುತ್ತಿರುವ ಅಸಂಖ್ಯ ಮಂದಿ ಈ ದೇಶದಲ್ಲಿದ್ದಾರೆ. ಅವರಿಗೆ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ, ಸುಖ-ದುಃಖಗಳನ್ನು ವಿನಿಮಯಿಸಿಕೊಳ್ಳುವುದಕ್ಕೆ ಅವರ ಧರ್ಮಗಳು ಅಡ್ಡಿಯಾಗುತ್ತಿಲ್ಲ. ಆದರೆ ರಾಜಕೀಯ ದುರುದ್ದೇಶಗಳನ್ನು ಇರಿಸಿಕೊಂಡ ಮಂದಿ ಇಂಥವರ ಮಧ್ಯೆ ಜಾತಿ-ಧರ್ಮದ ಆಧಾರದಲ್ಲಿ ವಿಭಜನೆಯನ್ನು ಬಯಸುತ್ತಿದ್ದಾರೆ. ಚುನಾವಣೆ ಹತ್ತಿರ ಬಂದಂತೆಯೇ ಈ ವಿಭಜನೆಯ ಪ್ರಯತ್ನಗಳು ಇನ್ನಷ್ಟು ಹೆಚ್ಚಾಗುತ್ತವೆ. ಭಾಷೆಯಲ್ಲಿ ನಂಜು ಕಾಣಿಸಿಕೊಳ್ಳುತ್ತದೆ. ಮಾಧ್ಯಮಗಳು ಇದಕ್ಕೆ ಮಹತ್ವ ಕೊಟ್ಟು ಪ್ರಕಟಿಸುವಾಗ, ಆ ನಂಜು ಸುಲಭದಲ್ಲಿ ಸಾರ್ವಜನಿಕವಾಗಿ ಪಸರಿಸಿಬಿಡುತ್ತದೆ. ನಂಜಿಲ್ಲದವರ ಎದೆಗೂ ಕೆಲವೊಮ್ಮೆ ನಂಜು ಅಂಟಿ ಬಿಡುತ್ತದೆ. ಆದ್ದರಿಂದ, ಪೂಜಾಳಂಥ ಘಟನೆಗಳಿಗೆ ಮಾಧ್ಯಮಗಳಲ್ಲಿ ಹೆಚ್ಚೆಚ್ಚು ಪ್ರಾಮುಖ್ಯತೆ ಲಭಿಸಬೇಕು. ತನ್ನನ್ನು ತೀವ್ರವಾಗಿ ಹಿಂಸಿಸಿ, ಊರಿನಿಂದಲೇ ವಲಸೆ ಹೋಗುವಂತೆ ಮಾಡಿದ್ದ ಮಕ್ಕಾದ ಜನತೆಯ ಮೇಲೆ ಪ್ರವಾದಿ ಮುಹಮ್ಮದ್‍ರು(ಸ) ಪ್ರಾಬಲ್ಯ ಪಡೆದಾಗ, ಅವರನ್ನೆಲ್ಲ ಕ್ಷಮಿಸಿದ್ದರು. ಅವರ ಬಗ್ಗೆ ಪಾಸಿಟಿವ್ ಆಗಿ ಆಲೋಚಿಸಿದ್ದರು. ಆದ್ದರಿಂದಲೇ, ‘ಪೂಜಾ ಘಟನೆ’ ಮುಖ್ಯವಾಗುತ್ತದೆ. ಇಂಥ ಸುದ್ದಿಗಳು ಮಾಧ್ಯಮಗಳಲ್ಲಿ ಹೆಚ್ಚೆಚ್ಚು ಪ್ರಕಟಗೊಂಡರೆ ಜನರ ನಡುವಿನ ಸಂಬಂಧಗಳು ಹೆಚ್ಚೆಚ್ಚು ಬಲಗೊಳ್ಳುತ್ತಾ ಹೋಗುತ್ತದೆ. ಪಾಕಿಸ್ತಾನದ ಹೆಸರಲ್ಲಿ, ದೇಶಭಕ್ತಿಯ ನೆಪದಲ್ಲಿ ಜನರನ್ನು ವಿಭಜಿಸುವವರಿಗೆ ಸೋಲು ಎದುರಾಗುತ್ತಾ ಹೋಗುತ್ತದೆ.
   ಪೂಜಾಳಂಥ ಘಟನೆಗಳು ಈ ದೇಶದಲ್ಲಿ ಹೆಚ್ಚೆಚ್ಚು ನಡೆಯಲಿ ಮತ್ತು ಅವುಗಳು ಸಮಾಜದಲ್ಲಿ ಸುದ್ದಿಗೀಡಾಗಲಿ ಎಂದೇ ಹಾರೈಸೋಣ.

Tuesday 2 April 2013

ಅಟೆನ್‍ಬರೋಗೆ ತೆರೆದ ವೃದ್ಧಾಶ್ರಮದ ಬಾಗಿಲು


   ಹಾಲಿವುಡ್‍ನ ಖ್ಯಾತ ಚಿತ್ರ ನಿರ್ದೇಶಕ, ನಟ ರಿಚರ್ಡ್ ಅಟೆನ್ ಬರೊ ತನ್ನ 89ನೇ ಇಳಿ ವಯಸ್ಸಿನಲ್ಲಿ ವೃದ್ಧಾಶ್ರಮ ಸೇರಿಕೊಂಡಿದ್ದಾರೆ. ಮರೆವಿನ ಕಾಯಿಲೆಗೆ ತುತ್ತಾಗಿರುವ ಅವರ ಪತ್ನಿ, ನಟಿ ಶೀಲಾ ಸಿಮ್ ಈಗಾಗಲೇ ವೃದ್ಧಾಶ್ರಮದಲ್ಲಿದ್ದಾರೆ. ಹಾಗಂತ ಈ ಪ್ರಸಿದ್ಧ ದಂಪತಿಗಳಿಗೆ ಮಕ್ಕಳು ಇಲ್ಲ ಎಂದಲ್ಲ. ಸಿನಿಮಾ ನಿರ್ದೇಶಕನಾಗಿರುವ ಮಗ ಮೈಕೆಲ್ ಮತ್ತು ನಟನೆಯಲ್ಲಿ ಬ್ಯುಸಿಯಾಗಿರುವ ಮಗಳು ಚಾರ್ಲೆಟ್ ಇದ್ದಾರೆ. ಆದರೆ ಹೃದ್ರೋಗಿಯಾಗಿರುವ, ಗಾಲಿ ಕುರ್ಚಿಯಲ್ಲಿ ಚಲಿಸುವ ಈ ಅಪ್ಪನನ್ನು ನೋಡಿಕೊಳ್ಳಲು ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ತನ್ನ ಮನೆ, ಎಸ್ಟೇಟು, ಕಲಾಕೃತಿಗಳನ್ನು ಮಾರಿ, ಪತ್ನಿ ಆಶ್ರಯ ಪಡಕೊಂಡಿರುವ ಲಂಡನ್ನಿನ ವೃದ್ಧಾಶ್ರಮವನ್ನು ಅಟೆನ್‍ಬರೋ ಸೇರಿಕೊಂಡಿದ್ದಾರೆ.
   ನಿಜವಾಗಿ, ಅಟೆನ್‍ಬರೋರ ಸ್ಥಾನದಲ್ಲಿ ಮೈಕೆಲೊ, ಫ್ರಾನ್ಸಿಸ್ಸೋ, ಕೆರ್ರಿಯೋ.. ಇರುತ್ತಿದ್ದರೆ ಅದು ಸುದ್ದಿಯಾಗುವ ಸಾಧ್ಯತೆಯೇ ಇರಲಿಲ್ಲ. ಆದರೆ ಇಲ್ಲಿ ವೃದ್ಧಾಶ್ರಮ ಸೇರಿಕೊಂಡಿರುವುದು ಪ್ರಸಿದ್ಧ ವ್ಯಕ್ತಿ. 1983ರಲ್ಲಿ ಇವರು ನಿರ್ದೇಶಿಸಿದ ‘ಗಾಂಧಿ' ಚಿತ್ರಕ್ಕೆ 8 ಆಸ್ಕರ್ ಪ್ರಶಸ್ತಿಗಳು ಬಂದಿವೆ. 50 ವರ್ಷಗಳಷ್ಟು ದೀರ್ಘ ಅವಧಿಯ ವರೆಗೆ ಹಾಲಿವುಡ್ಡನ್ನು ಆಳಿದ್ದಲ್ಲದೇ, ಯಂಗ್ ವಿನ್ಸ್‍ಟನ್, ವಾಟ್ ಎ ಲವ್ಲಿ ವಾರ್, ಚಾಪ್ಲಿನ್.. ಮುಂತಾಗಿ ಅನೇಕಾರು ಸಿನಿಮಾಗಳನ್ನು ಅಟೆನ್‍ಬರೋ ನಿರ್ದೇಶಿಸಿದ್ದರು. ನಟಿಸಿದ್ದರು. ಅಂಥ ವ್ಯಕ್ತಿಯೊಬ್ಬ ಬದುಕಿನ ಮುಸ್ಸಂಜೆಯಲ್ಲಿ ಎಲ್ಲವನ್ನೂ ಮಾರಿ ಗಾಲಿಕುರ್ಚಿಯಲ್ಲಿ ವೃದ್ಧಾಶ್ರಮ ಸೇರಿರುವುದು ಸಣ್ಣ ಸಂಗತಿಯಲ್ಲ. ಅವರು ಮನಸ್ಸು ಮಾಡಿದ್ದರೆ ಲಂಡನ್ನಿನ ಮನೆಯಲ್ಲೇ ಇರಬಹುದಿತ್ತು. ಸೇವೆಗೆ ಆಳುಗಳನ್ನು ನೇಮಿಸಿಕೊಳ್ಳಬಹುದಿತ್ತು. ತಾನು ನಿರ್ದೇಶಿಸಿದ ಸಿನಿಮಾಗಳನ್ನೋ ಮಗಳು ಚಾರ್ಲೆಟ್‍ಳ ನಟನೆಯನ್ನೋ ವೀಕ್ಷಿಸುತ್ತಾ ಮನೆಯಲ್ಲೇ ಕಾಲ ಕಳೆಯಬಹುದಿತ್ತು. ಆದರೂ ಅವರು ಆಸ್ತಿಯನ್ನೆಲ್ಲಾ ಮಾರಿ ವೃದ್ಧಾಶ್ರಮ ಸೇರಿಕೊಂಡಿದ್ದಾರೆಂದರೆ ಇವುಗಳಾಚೆಗಿನ ಇನ್ನಾವುದನ್ನೋ ಅವರು ಬಯಸುತ್ತಿದ್ದಾರೆ ಎಂದೇ ಅರ್ಥ. ಹಿರಿಪ್ರಾಯ ಯಾವಾಗಲೂ ಒಡನಾಡಿಗಳನ್ನು ಬಯಸುತ್ತದೆ. ತನ್ನವರು ತನ್ನ ಸುತ್ತ ಇರಬೇಕೆಂದು ಆಸೆ ಪಡುತ್ತದೆ. ಬಾಲ್ಯ, ಯೌವನ, ವೃದ್ಧಾಪ್ಯ.. ಎಲ್ಲವನ್ನೂ ತನ್ನವರೊಂದಿಗೆ ಹಂಚಿಕೊಳ್ಳುತ್ತಾ ದಿನಗಳೆಯುವ ಒಂದು ವಾತಾವರಣಕ್ಕಾಗಿ ತವಕಪಡುತ್ತದೆ. ಒಂದು ಕಾಲದಲ್ಲಿ ಪತ್ನಿ, ಮಕ್ಕಳು, ಉದ್ಯೋಗ ಅದು - ಇದು ಎಂದು ದಿನದ 24 ಗಂಟೆಯೂ ಬ್ಯುಸಿಯಾಗಿದ್ದ ವ್ಯಕ್ತಿ, ಇದೀಗ ದಿನದ 24 ಗಂಟೆಯೂ ಫ್ರೀಯಾಗಿರುವ ವ್ಯಕ್ತಿಯಾಗಿ ಬದಲಾಗಿರುವಾಗ, ತನ್ನ ಮಕ್ಕಳು, ಮರಿ ಮಕ್ಕಳು, ಆತ್ಮೀಯರ ಒಡನಾಟವನ್ನು ಬಯಸುವುದು ಸಹಜ. ಮಗಳು ಬಂದು ಅಪ್ಪನ ಸೇವೆ ಮಾಡುವುದಕ್ಕೂ ಆಳು ಸೇವೆ ಮಾಡುವುದಕ್ಕೂ ಪದಗಳಲ್ಲಿ ವಿವರಿಸಲಾಗದ ಅಂತರ ಇರುತ್ತದೆ. ತಮ್ಮ ಬೆಳವಣಿಗೆಯ ಒಂದು ಹಂತದ ವರೆಗೆ ಹೆತ್ತವರ ಆತ್ಮೀಯ ಒಡನಾಟ ಮಕ್ಕಳೊಂದಿಗಿರುತ್ತದೆ. ಅಪ್ಪ ತನ್ನ ಮಕ್ಕಳೊಂದಿಗೆ ಮಕ್ಕಳಾದ ಎಷ್ಟೋ ಸಂದರ್ಭಗಳಿರುತ್ತವೆ. ಅಪ್ಪ ಮಕ್ಕಳನ್ನು ಮಾರುಕಟ್ಟೆಗೆ ಕೊಂಡು ಹೋಗಿರುತ್ತಾರೆ. ಆಟದ ವಸ್ತುಗಳನ್ನು ಖರೀದಿಸಿ ಕೊಟ್ಟಿರುತ್ತಾರೆ. ಒಂದು ರೀತಿಯಲ್ಲಿ ಹೆತ್ತವರು ಮತ್ತು ಮಕ್ಕಳ ಸಂಬಂಧದಲ್ಲಿ ಹೇಳಿಕೊಳ್ಳಲಾಗದ ಏನೇನೋ ಇವೆ. ಮಗನದ್ದೋ ಮಗಳದ್ದೋ  ಮುಖ ಕಂಡ ಕೂಡಲೇ ಆಸ್ಪತ್ರೆಯ ಮಂಚದಲ್ಲಿ ಅಸಾಧ್ಯ ಸಂಕಟದಿಂದ ನರಳುತ್ತಿದ್ದರೂ ಅಪ್ಪನ ಮುಖ ಅರಳುತ್ತದೆ. ಅಮ್ಮನ ನಿಸ್ತೇಜ ಕಣ್ಣು ತೆರೆದುಕೊಳ್ಳುತ್ತದೆ. ಕೈಗಳು ಚಲಿಸುತ್ತವೆ. ಮಕ್ಕಳು ಹೆತ್ತವರಲ್ಲಿ ಧೈರ್ಯ ತುಂಬುತ್ತಾರೆ. ಬಾಯಿಗೆ ಪ್ರೀತಿಯಿಂದ ತುತ್ತಿಡುತ್ತಾರೆ. ಇವು ಆಳಿನಿಂದ ಆಗುವ ಮಾತೇ? ಆಳನ್ನು ನೋಡುವಾಗ ವೃದ್ಧ ಜೀವಗಳಿಗೆ ಮಗನನ್ನೋ ಮಗಳನ್ನೋ ನೋಡಿದ ಅನುಭವವಾಗಬಲ್ಲುದೇ? ಮಕ್ಕಳು ತಮ್ಮ ಹೆತ್ತವರನ್ನು ಸ್ಪರ್ಶಿಸುವಾಗ ಆಗುವ ಅನುಭವಕ್ಕೂ ಆಳಿನ ಅನುಭವಕ್ಕೂ ವ್ಯತ್ಯಾಸ ಇದೆಯಲ್ಲವೇ? ಬಹುಶಃ ವೃದ್ಧಾಶ್ರಮ ಸೇರಿಕೊಳ್ಳುವ ಅಟೆನ್‍ಬರೋರ ನಿರ್ಧಾರಕ್ಕೆ ಇವೆಲ್ಲ ಕಾರಣವಾಗಿರುವ ಸಾಧ್ಯತೆಯಿದೆ. ಆಳುಗಳನ್ನಿಟ್ಟುಕೊಂಡು ವೃದ್ಧಾಪ್ಯದ ಸಂಕಟಗಳನ್ನು ಒಂಟಿಯಾಗಿ ಅನುಭವಿಸುವುದಕ್ಕಿಂತ ವೃದ್ಧಾಶ್ರಮದ ವೃದ್ಧರ ಜೊತೆ ಭಾವನೆಗಳನ್ನು ಹಂಚಿಕೊಳ್ಳುತ್ತಾ ಬದುಕು ಮುಗಿಸಲು ಅವರು ಯೋಚಿಸಿರಬಹುದು.
   ನಿಜವಾಗಿ, ಮೌಲ್ಯವನ್ನು ನಿರ್ಲಕ್ಷಿಸುತ್ತಿರುವ ಆಧುನಿಕ ಪೀಳಿಗೆಯ ಮನಸ್ಥಿತಿಯನ್ನು ತರಾಟೆಗೆತ್ತಿ ಕೊಳ್ಳುವ ಸಂಕೇತವಾಗಿ ಅಟೆನ್‍ಬರೋರರನ್ನು ನಾವು ಪರಿಗಣಿಸಬೇಕಾಗಿದೆ. ಅವರು ಒಂಟಿಯಲ್ಲ. ಈ ಜಗತ್ತಿನಲ್ಲಿ ಹೆಸರು, ವಿಳಾಸ ಗೊತ್ತಿಲ್ಲದ ಎಷ್ಟೋ ಅಟೆನ್‍ಬರೋಗಳು ವೃದ್ಧಾಶ್ರಮಗಳಲ್ಲಿ, ಬಸ್ಸು, ರೈಲು ನಿಲ್ದಾಣಗಳಲ್ಲಿ, ಬೀದಿಗಳಲ್ಲಿ ನಿತ್ಯ ಕಾಣಸಿಗುತ್ತಾರೆ. ಅವರ ತಪ್ಪು ಏನೆಂದರೆ, ವೃದ್ಧರಾಗಿರುವುದು. ಇಂಥ ವೃದ್ಧರ ಕುರಿತಾದ ಚರ್ಚೆಯೊಂದಕ್ಕೆ ಅಟೆನ್‍ಬರೋ ಪ್ರಚೋದನೆ ಕೊಟ್ಟಿದ್ದಾರೆ.
ಆದ್ದರಿಂದ, ಬೆಳೆದ ಮಕ್ಕಳು ವೃದ್ಧ ಹೆತ್ತವರನ್ನು ನಿರ್ಲಕ್ಷಿಸುವುದಕ್ಕೆ ಆಧುನಿಕ ಜೀವನ ಕ್ರಮಗಳು ಕಾರಣವೋ ಅಥವಾ ಹೆತ್ತವರು ಕಾರಣವೋ ಎಂಬ ಬಗ್ಗೆ ಗಂಭೀರ ಚರ್ಚೆಯೊಂದು ನಡೆಯಬೇಕಾಗಿದೆ. ಇಸ್ಲಾಮ್, ಹೆತ್ತವರು ಮಕ್ಕಳ ಪಾಲಿನ ಸ್ವರ್ಗ ಅಥವಾ ನರಕವಾಗಿದ್ದಾರೆ ಎಂದು ಪ್ರತಿಪಾದಿಸುತ್ತದೆ. ವೃದ್ಧರಾದ ಹೆತ್ತವರು ಮನೆಯಲ್ಲಿದ್ದೂ ಯಾರಿಗಾದರೂ ಸ್ವರ್ಗ ಸಿಗುವುದಿಲ್ಲ ಎಂದಾದರೆ ಅವರು ಮಹಾ ನತದೃಷ್ಟರು ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. ಹೆತ್ತವರ ಸೇವೆ ಮಾಡುವುದು ಬರೇ ಅವರ ಸೇವೆಯಷ್ಟೇ ಅಲ್ಲ, ಅದು ಸ್ವರ್ಗದ ಕೀಲಿಕೈಯೂ ಹೌದು ಎಂಬುದು ಇಸ್ಲಾಮಿನ ನಿಲುವು. ಆದ್ದರಿಂದಲೇ ವೃದ್ಧ ಹೆತ್ತವರನ್ನು ಆಶ್ರಮಕ್ಕೆ ಅಟ್ಟುವುದು ಬಿಡಿ, ‘ಛೆ' ಎಂಬ ಪದವನ್ನು ಕೂಡ ಅವರ ವಿರುದ್ಧ ಬಳಸಬಾರದು ಎಂದು ಕುರ್‍ಆನ್ (17: 23) ಆಜ್ಞಾಪಿಸಿರುವುದು. ಓರ್ವ ಎಷ್ಟೇ ದೊಡ್ಡ ನಮಾಝಿಗ, ಉಪವಾಸಿಗ, ಹಜ್ಜ್ ಕರ್ಮ ನಿರ್ವಹಿಸಿದವನಾದರೂ ತಂದೆ-ತಾಯಿಯ ಸಿಟ್ಟಿಗೆ ಪಾತ್ರನಾಗಿದ್ದರೆ, ಆತನ ಆ ಕರ್ಮಗಳೆಲ್ಲ ನಿಷ್ಫಲ ಎಂಬ ಉಗ್ರ ತಾಕೀತು ಕೊಟ್ಟಿರುವುದು ಇಸ್ಲಾಮ್ ಮಾತ್ರ. ಬಹುಶಃ ಮುಸ್ಲಿಮ್ ರಾಷ್ಟ್ರಗಳಲ್ಲಿ ವೃದ್ಧಾಶ್ರಮಗಳು ಇಲ್ಲದೇ ಇರುವುದಕ್ಕೆ ಕಾರಣ, ಹೆತ್ತವರಿಗೆ ಇಸ್ಲಾಮ್ ಕೊಟ್ಟಿರುವ ಈ ಮಹತ್ವ ಎಂದೇ ಹೇಳಬೇಕಾಗಿದೆ.
     ಏನೇ ಆಗಲಿ, ಅಟೆನ್‍ಬರೋರನ್ನು ನೆಪವಾಗಿಟ್ಟುಕೊಂಡಾದರೂ ಈ ಸಮಾಜದಲ್ಲಿ ‘ಹೆತ್ತವರು' ಚರ್ಚೆಗೊಳಗಾಗಬೇಕಾಗಿದೆ. ಮಾತ್ರವಲ್ಲ, ಅವರು ಮಕ್ಕಳ ಪಾಲಿನ ಸ್ವರ್ಗ ಮತ್ತು ಅನುಗ್ರಹ ಎಂಬ ಆಧ್ಯಾತ್ಮಿಕ ಪ್ರಜ್ಞೆಯನ್ನು ಬೆಳೆಸಬೇಕಾಗಿದೆ. ಇಲ್ಲದಿದ್ದರೆ ವೃದ್ಧಾಪ್ಯವನ್ನು ಭಯಪಡುವ ತಲೆಮಾರು ಬೆಳೆದುಬಂದೀತು.