Monday, 13 May 2013

ಧೋನಿ, ತೆಂಡುಲ್ಕರ್‍ಗಳನ್ನು ಬೆತ್ತಲೆಗೊಳಿಸಿದ ಎಳಸು ಕ್ರಿಕೆಟಿಗ

   ಚಿಯರ್‍ ಗರ್ಲ್ಸ್ ಗಳು; ಬೌಂಡರಿ, ಸಿಕ್ಸರ್‍ಗಳು; ಧೋನಿ, ಕೋಹ್ಲಿಗಳೇ ಸುದ್ದಿ ಮಾಡುತ್ತಿರುವ ಐಪಿಎಲ್ ಕ್ರಿಕೆಟ್‍ಗೆ ಪರ್ವೇಝ್ ರಸೂಲ್ ಅನ್ನುವ ಅಪರಿಚಿತ ಯುವಕನೊಬ್ಬ ಪುಟ್ಟದೊಂದು ತಿರುವು ಕೊಟ್ಟಿದ್ದಾನೆ. ಸಮಾಜದ ಬಗ್ಗೆ ಕಳಕಳಿಯುಳ್ಳ ಯಾರಿಗೆ ಆಗಲಿ, ಈ ತಿರುವು ಬಹಳ ಮಹತ್ವಪೂರ್ಣವಾದದ್ದು. ಮುಂದಿನ ದಿನಗಳಲ್ಲಿ ಗಂಭೀರ ಚರ್ಚೆಯೊಂದರ ಹುಟ್ಟಿಗೆ ಕಾರಣವಾಗುವಷ್ಟು ಪ್ರಭಾವಶಾಲಿಯಾದದ್ದು. ಇಷ್ಟಕ್ಕೂ; ತೆಂಡುಲ್ಕರ್, ಸೆಹ್ವಾಗ್‍ರಂತೆ ಈತನೂ ಓರ್ವ ಕ್ರಿಕೆಟಿಗನೇ. ಆದರೆ, ಅವರಂತೆ ಕ್ರಿಕೆಟಿಗಾಗಿ ಮೌಲ್ಯವನ್ನು ಕೈ ಬಿಡಲು ತಾನು ಸಿದ್ಧವಿಲ್ಲ ಎಂದು ಘೋಷಿಸಿದ್ದಾನೆ. ಐಪಿಎಲ್ ಅಂಕಪಟ್ಟಿಯಲ್ಲಿ ತಳಮಟ್ಟದಲ್ಲಿರುವ ಪುಣೆ ವಾರಿಯರ್ಸ್ ತಂಡದ ಸದಸ್ಯನಾಗಿರುವ ಈತ, ‘ಮದ್ಯ ಕಂಪೆನಿಯ ಲೋಗೋ (ಚಿಹ್ನೆ) ಉಳ್ಳ ಜೆರ್ಸಿ(ಟೀಶರ್ಟ್)ಯನ್ನು ಧರಿಸಿ ಆಡಲಾರೆ, ಅದು ನನ್ನ ಧರ್ಮಕ್ಕೆ ವಿರುದ್ಧ’ ಅಂದಿದ್ದಾನೆ. ಮಾತ್ರವಲ್ಲ, ಲೋಗೋ ಗೋಚರಿಸದಂತೆ ಅದರ ಮೇಲೆ  ಪಟ್ಟಿಯನ್ನು ಅಂಟಿಸಿಯೇ ಮೈದಾನಕ್ಕೆ ಇಳಿದಿದ್ದಾನೆ. ಒಂದು ರೀತಿಯಲ್ಲಿ, ಇದು ಧೋನಿ, ಕೋಹ್ಲಿ, ತೆಂಡುಲ್ಕರ್‍ಗಳಿಗೆ ಈ ಎಳಸು ಕ್ರಿಕೆಟಿಗ ಕೊಟ್ಟ ಕಪಾಲಮೋಕ್ಷವೂ ಹೌದು.
   ಐಪಿಎಲ್‍ನ ಸುತ್ತ ಈಗಾಗಲೇ ಧಾರಾಳ ಚರ್ಚೆಗಳು ನಡೆದಿವೆ. ನವಜೋತ್ ಸಿಂಗ್ ಸಿದ್ದುರ ಮಂಗಚೇಷ್ಟೆಗಳು; ಗವಾಸ್ಕರ್, ಜಡೇಜಾರ ಗಿಲೀಟಿನ ಮಾತುಗಳು ಅತಿ ಅನ್ನಿಸುವಷ್ಟು ಟಿ.ವಿ.ಗಳಲ್ಲಿ ತುಂಬಿಕೊಂಡಿವೆ. ಆದರೆ ಇವರಾರೂ ಐಪಿಎಲ್ ಅನ್ನು ಆಳುವ ಮದ್ಯದ ಬಗ್ಗೆ, ಹರಿದಾಡುವ ದುಡ್ಡಿನ ಬಗ್ಗೆ ಈ ವರೆಗೂ ಮಾತಾಡಿಲ್ಲ. ಬಿಸಿಸಿಐಗೆ ಎದುರಾಗಿ ಐಸಿಎಲ್ ಅನ್ನು ಹುಟ್ಟು ಹಾಕಿ ಬಂಡಾಯ ಸಾರಿದ್ದ ಕಪಿಲ್ ದೇವ್‍ರಂಥ ಸ್ವಾಭಿಮಾನಿಯೇ ಇವತ್ತು ಕಾಂಚಾಣದೆದುರು ಕುಣಿಯುತ್ತಿ ದ್ದಾರೆ. ಇಂಥ ಹೊತ್ತಲ್ಲಿ ಸಚಿನ್, ಧೋನಿ, ಕೋಹ್ಲಿಗೆ ಹೋಲಿಸಿದರೆ ಏನೇನೂ ಅಲ್ಲದ, ಅವರ ಒಂದು ಶೇಕಡಾದಷ್ಟೂ 'ಬೆಲೆ' ಬಾಳದ ಯುವ ಕ್ರಿಕೆಟಿಗನೊಬ್ಬ ಕ್ರಿಕೆಟ್‍ನಲ್ಲೂ ಮೌಲ್ಯದ ಬಗ್ಗೆ ಮಾತಾಡುವುದೆಂದರೆ ಅದೇಕೆ ಸಣ್ಣ ಸಂಗತಿಯಾಗಬೇಕು? ಪುಣೆ ವಾರಿಯರ್ಸ್ ತಂಡ ರಸೂಲ್ ನನ್ನು ಖರೀದಿಸಿದ್ದು ಕೆಲವು ಲಕ್ಷಗಳಿಗೆ. ‘ಧೋನಿಗಳಿಗೆ’ ಹೋಲಿಸಿದರೆ ಈ ದುಡ್ಡು ತೀರಾ ಜುಜುಬಿ. ಅಷ್ಟಕ್ಕೂ, ಧೋನಿಯಂತೆ ರಸೂಲ್ ಪುಣೆ ವಾರಿಯರ್ಸ್ ನ  ಅನಿವಾರ್ಯ ಆಟಗಾರನೇನೂ ಅಲ್ಲ. ಆತ ಈ ವರೆಗೆ ಆಡಿದ್ದೇ ಒಂದು ಪಂದ್ಯ. (ಈವರೆಗೆ ಆಡಿಸದೇ ಇರುವುದಕ್ಕೆ ಆತನ ಮದ್ಯ ತಕರಾರು ಕಾರಣವಾಗಿರಬಹುದೇನೋ) ತಂಡದ ನಿಯಮ, ಉದ್ದೇಶ, ಒಪ್ಪಂದಗಳ ಬಗ್ಗೆ ತಕರಾರು ಎತ್ತಿ ದಕ್ಕಿಸಿಕೊಳ್ಳುವಷ್ಟು ಪ್ರಭಾವಶಾಲಿ ಆಟಗಾರನೂ ಆತನಲ್ಲ. ಆದರೂ ಆತ ತಂಡದ ಧೋರಣೆಯ ವಿರುದ್ಧ ಮಾತನಾಡಿದ್ದಾನೆಂದರೆ, ಅದನ್ನು ಅಭಿನಂದಿಸಲೇಬೇಕು. ನಿಜವಾಗಿ, ಇನ್ನೂ ಅಂತಾರಾಷ್ಟ್ರೀಯ ಮಟ್ಟದ ಪಂದ್ಯವನ್ನಾಡದ ಕ್ರಿಕೆಟಿಗನೊಬ್ಬ ಜಾಹೀರಾತುದಾರರ ವಿರುದ್ಧ ಮಾತಾಡುವುದೆಂದರೆ ಕೆರಿಯರ್‍ಗೇ ಧಕ್ಕೆ ತಂದಂತೆ. ಮದ್ಯ ಎಂಬುದು ಇವತ್ತು ಈ ದೇಶದ ಎಲ್ಲ ಕ್ಷೇತ್ರವನ್ನೂ ಆಳುವಷ್ಟು ಪ್ರಭಾವಶಾಲಿಯಾಗಿದೆ. ಬಿಸಿಸಿಐಯ ಪ್ರಮುಖ ಆದಾಯ ಮೂಲವೇ ಮದ್ಯದ ದುಡ್ಡು. ಐಪಿಎಲ್ ಅಂತೂ ಮದ್ಯದ ಜಾಹೀರಾತಿನಿಂದಲೇ ಬದುಕುತ್ತಿದೆ. ಹೀಗಿರುವಾಗ ಈಗಷ್ಟೇ ಕಣ್ಣು ಬಿಡುತ್ತಿರುವ ಕಾಶ್ಮೀರಿ ಕ್ರಿಕೆಟಿಗನೊಬ್ಬ 'ಮದ್ಯ'ದ ವಿರುದ್ಧ ಮಾತಾಡಿದರೆ ಆತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬಲ್ಲನೇ? ಆತನ ಬೌಲಿಂಗ್ ಶೈಲಿಯನ್ನೋ ಫಾರ್ಮನ್ನೋ ನೆಪವಾಗಿಸಿ ರಾಷ್ಟ್ರೀಯ ತಂಡದಿಂದ ದೂರ ಇಡಲು ಮದ್ಯ ಕಂಪೆನಿಗಳು ಸಂಚು ನಡೆಸಲಾರವೇ?
   ನಿಜವಾಗಿ, 'ಧರ್ಮ ಮನೆಯಲ್ಲಿರಲಿ' ಎಂದು ಪ್ರತಿಪಾದಿಸುವ ಸರ್ವರನ್ನೂ ರಸೂಲ್ ತನ್ನ ನಿಲುವಿನ ಮುಖಾಂತರ ತರಾಟೆಗೆ ಎತ್ತಿಕೊಂಡಿದ್ದಾನೆ. ಸಚಿನ್, ಧೋನಿಗಳೆಲ್ಲ ತಮ್ಮ ಧರ್ಮವನ್ನು ಮನೆಯಲ್ಲಿಟ್ಟಿರುವುದರಿಂದಲೇ ಅವರಿಗೆ ಮದ್ಯವನ್ನು ಪ್ರಚಾರ ಮಾಡಲು ಸಾಧ್ಯವಾಗುತ್ತಿರುವುದು. ಅಂದಹಾಗೆ, ಇವತ್ತು ಅತ್ಯಾಚಾರ, ಭ್ರಷ್ಟಾಚಾರ, ಹಿಂಸೆ, ಮೋಸಗಳೆಲ್ಲ ನಡೆಯುತ್ತಿರುವುದಕ್ಕೆ ಧರ್ಮ ವನ್ನು ಮನೆಯಲ್ಲಿಟ್ಟಿರುವುದೇ ಕಾರಣವಲ್ಲವೇ? ಒಂದು ವೇಳೆ ರಸೂಲ್ ತನ್ನ ಧರ್ಮವನ್ನು ಮನೆಯಲ್ಲೇ ಬಿಟ್ಟು ಬರುತ್ತಿದ್ದರೆ, ಆತನಿಗೆ ಮದ್ಯದ ವಿರುದ್ಧ ಮಾತೆತ್ತಲು ಸಾಧ್ಯವಿತ್ತೇ? ಧೋನಿ, ತೆಂಡುಲ್ಕರ್‍ಗಳೆಲ್ಲ ಇವತ್ತು ಮದ್ಯದ ವಿರುದ್ಧ ಮಾತಾಡದಂಥ ಸ್ಥಿತಿಯಲ್ಲಿರುವುದು, ಅವರು 'ಧರ್ಮ' ವನ್ನು ಮನೆಯಲ್ಲಿಟ್ಟು ಬಂದುದೇ ತಾನೇ. ಧರ್ಮವನ್ನು ಮನೆಯಲ್ಲಿ ಕಳಚಿಡದೇ ತನ್ನ ಜೊತೆಗೇ ಒಯ್ದ ರಸೂಲ್ ಎಂಬ ಮರಿ ಕ್ರಿಕೆಟಿಗನನ್ನು ಅವನ ಧರ್ಮವು ಮದ್ಯದ ವಿರುದ್ಧ; ತನ್ನ ಕೆರಿಯರ್, ದುಡ್ಡು, ಭವಿಷ್ಯವನ್ನು ಲೆಕ್ಕಿಸದೆಯೇ ಮಾತಾಡುವಂತೆ ಪ್ರಚೋದಿಸುವಾಗ, ಧರ್ಮವನ್ನು ಮನೆಯಲ್ಲಿಟ್ಟು ಬಂದ ಕೋಹ್ಲಿ, ತೆಂಡುಲ್ಕರ್‍ಗಳನ್ನು ಮದ್ಯ ಬಾಯಿ ಕಟ್ಟಿಸುತ್ತದೆ. ಇವೆರಡೂ ರವಾನಿಸುವ ಸಂದೇಶವಾದರೂ ಏನು? ಧರ್ಮವನ್ನು ಜೊತೆಗೊಯ್ದ ವ್ಯಕ್ತಿ ಕೆಡುಕಿನ ವಿರುದ್ಧ ಮುಲಾಜಿಲ್ಲದೇ ಮಾತಾಡುತ್ತಾನೆ ಎಂದಲ್ಲವೇ? ಇಷ್ಟಕ್ಕೂ ಈ ಕ್ರಿಕೆಟಿಗರಿಗೆ 'ಮದ್ಯ'ದಿಂದಾಗುವ ಹಾನಿಯ ಬಗ್ಗೆ ಗೊತ್ತಿಲ್ಲ ಎಂದಲ್ಲ. ಈ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಮದ್ಯಕ್ಕೆ ಪ್ರಮುಖ ಪಾತ್ರ ಇದೆ. ಆದರೆ, ಧರ್ಮ, ಮೌಲ್ಯಗಳನ್ನು ಕಟ್ಟಿಕೊಂಡು ತಾನೇಕೆ ದುಡ್ಡು ಕಳಕೊಳ್ಳಬೇಕು ಎಂಬ 'ಅಧರ್ಮ' ಅವರನ್ನೆಲ್ಲಾ ಕಟ್ಟಿಹಾಕುತ್ತಿದೆ. ಇಂಥ ಸಂದರ್ಭದಲ್ಲಿ ಜುಜುಬಿ ಕ್ರಿಕೆಟಿಗನೊಬ್ಬ ಧರ್ಮ ಕ್ಕಿಂತ ಕ್ರಿಕೆಟ್ ದೊಡ್ಡದಲ್ಲ ಎಂದು ಸಾರಿದ್ದು ಯಾಕೆ ಸಾರ್ವಜನಿಕ ಚರ್ಚೆಗೆ ಅಡಿಗಲ್ಲು ಹಾಕಬಾರದು? ಒಂದು ವೇಳೆ ರಸೂಲ್‍ನಂತೆ ತೆಂಡುಲ್ಕರೋ ಧೋನಿಯೋ ತಮ್ಮ ಧರ್ಮವನ್ನು ತಮ್ಮ ಜೊತೆಗೂ ಆಟದ ಮೈದಾನಕ್ಕೂ ತರುತ್ತಿದ್ದರೆ ಏನಾಗುತ್ತಿತ್ತು? ಮದ್ಯದ ವಿರುದ್ಧ ರಾಷ್ಟ್ರಮಟ್ಟದಲ್ಲೇ ಒಂದು ಚಳವಳಿ ಏರ್ಪಡುವುದಕ್ಕೆ ಕಾರಣವಾಗುತ್ತಿರಲಿಲ್ಲವೇ?
   ಪರ್ವೇಝ್ ರಸೂಲ್‍ನ ನಿಲುವು ಆತನ ಕೆರಿಯರ್‍ಗೆ ತೊಡಕಾಗುತ್ತದೋ ಇಲ್ಲವೋ, ಆದರೆ ಆತ ದುಡ್ಡಿಗಾಗಿ ಧರ್ಮವನ್ನು ಕೈಬಿಟ್ಟ ತೆಂಡುಲ್ಕರ್, ಝಹೀರ್‍ಗಳನ್ನೆಲ್ಲಾ ಸಾರ್ವಜನಿಕವಾಗಿ ಬೆತ್ತಲೆ ಗೊಳಿಸಿದ್ದಾನೆ. ಧರ್ಮವು ಜೊತೆಗಿದ್ದರೆ ಕೆಡುಕಿನ ವಿರುದ್ಧ ಮಾತಾಡುವುದಕ್ಕೆ ಧೈರ್ಯ ಬರುತ್ತದೆ ಎಂಬ ಸಂದೇಶ ರವಾನಿಸಿದ್ದಾನೆ. ಐಪಿಎಲ್‍ನಲ್ಲಿ ರನ್‍ಗಳ ರಾಶಿಯನ್ನೇ ಹರಿಸುತ್ತಿರುವ ಮತ್ತು ಟಿ.ವಿ.ಯಲ್ಲಿ ವಿದೂಷಕರಂತೆ ಆಡುತ್ತಿರುವ ಎಲ್ಲರೂ ರಸೂಲ್‍ನನ್ನು ಮಾದರಿಯಾಗಿ ಆಯ್ಕೆ ಮಾಡಬೇಕು. ಆಡಿದ ಪಂದ್ಯ ಒಂದೇ ಒಂದು ಆಗಿದ್ದರೂ ಒಂದುನೂರು ಪಂದ್ಯ ಆಡಿದವರಲ್ಲೂ ಇಲ್ಲದ ಮೌಲ್ಯವನ್ನು ಆತ ಪ್ರದರ್ಶಿಸಿದ್ದಾನೆ. ರಸೂಲ್‍ನಿಗೆ ಅಭಿನಂದನೆಗಳು.

5 comments:

 1. ಸಸ್ಯಹಾರಿಗಳಿಗೆ ಮಾಂಸಾಹಾರಿಗಳು ರಕ್ಕಸರ ಹಾಗೆ ಕಾಣುತ್ತಾರೆ ಅಂತ ಅವರೇ ಸರಿ ಅನ್ನೋದು ಮೂರ್ಖತನ.. ಆಹಾರ ಪದ್ಧತಿ ಅವರವರ ಆಯ್ಕೆಗೆ ಬಿಟ್ಟಿದ್ದು...

  ಮಧ್ಯವೂ ಹಾಗೆ.. ನಾವು ಕುಡಿಯೋಲ್ಲ - ಅದು ಉತ್ತಮ.... ಆದರೆ ಮಧ್ಯ ಕುಡಿಯೋರೆಲ್ಲ ಕೆಟ್ಟೊರು ಅನ್ನೋದು ಅಸ್ಟೆ ಮೂರ್ಖತನ

  ReplyDelete
 2. its not towards society, its towards muslim n islam... dont push ur islamic ideas into society ..

  ReplyDelete
 3. Alcohol is the mother of all evil... If you say people who drink Alcohol are not bad, think again. ALCOHOL is BAD...

  ReplyDelete
 4. ಹಾಗಾದ್ರೆ ನಿಮ್ಮ ಪ್ರಕಾರ, ಪಾಕಿಸ್ತಾನ್ ಕ್ರಿಕೆಟ್ ನಲ್ಲಿ ನಡೆಯುತ್ತಿರುವ ಧರ್ಮದ ಹೆಸರಿನ ಕಟ್ಟುಪಾಡುಗಳು, ಯೂಸುಫ್ ಯೊಹಾನನ ಮತ್ತಿತರ ಆಟಗಾರರ ಮೇಲೆ ಬಲವಂತವಾಗಿ ಹೇರಲಾದ ಧರ್ಮ ಪರಿವರ್ತನೆ ಕೂಡ ಸಮರ್ಥನೀಯವೇ!? ಎತ್ತಣದಿಂದೆತ್ತ ಸಂಬದವಯ್ಯಾ!? ನೀವು ಏನು ಹೇಳಲು ಹೊರಟಿದ್ದೀರಿ ಎನ್ನುವುದರ ಪೂರ್ತಿ ಕಲ್ಪನೆ ಇದೆಯೇ ಅಥವಾ ಇದು ಪೆನ್ನಿನಲ್ಲಿ ಇಂಕ್ ಇದೆ ಎಂದು ಸುಮ್ಮನೇ ಗೀಚಲು ಶುರು ಮಾಡಿ ಆಮೇಲೆ ಎಲ್ಲಿಗೋ ತಲುಪುವ ಪ್ರಯತ್ನವೇ!?

  ReplyDelete