Monday 20 May 2013

ಮಾರ್ಗ ಮಧ್ಯೆ ಸಾವಿಗೀಡಾಗುವ ‘ಶಂಕಿತರು’?

ಖಾಲಿದ್ ಮುಜಾಹಿದ್
    ಭಯೋತ್ಪಾದಕರ ಬಗ್ಗೆ; ಅವರ ಉಡುಪು, ಅಡಗುತಾಣ, ಸಂಚುಗಳ ಕುರಿತಂತೆ ಖಾಲಿದ್ ಮುಜಾಹಿದ್ ಮತ್ತು ಲಿಯಾಕತ್ ಷಾ ಎಂಬಿಬ್ಬರು ವ್ಯಕ್ತಿಗಳು ಈ ದೇಶದ ಮುಂದೆ ಕೆಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ,  ಈ ಪ್ರಯತ್ನದಲ್ಲಿ ಖಾಲಿದ್ ಮೃತಪಟ್ಟು ಲಿಯಾಕತ್  ಷಾ ಸುರಕ್ಷಿತವಾಗಿ ಮನೆ ತಲುಪಿದ್ದಾನೆ. ಪ್ರಕರಣ ಎಷ್ಟು ಗಂಭೀರವಾದುದೆಂದರೆ, ಮೇ 20ರಂದು ದಿ ಹಿಂದೂ ಇವರ ಮೇಲೆ ಸಂಪಾದಕೀಯ ಬರೆದಿದೆ. ಉತ್ತರ ಪ್ರದೇಶ ಸರಕಾರವು ಖಾಲಿದ್‍ನ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿಕೊಟ್ಟಿದೆ. ಪೊಲೀಸರು ಮತ್ತು ಹಿರಿಯ ಅಧಿಕಾರಿಗಳ ಸಹಿತ 42 ಮಂದಿಯ ವಿರುದ್ಧ, ಕೊಲೆ, ಕೊಲೆ ಸಂಚುಗಳ ಆರೋಪ ಪಟ್ಟಿಯನ್ನು (FIR) ದಾಖಲಿಸಲಾಗಿದೆ.
   2007ರಲ್ಲಿ ಉತ್ತರ ಪ್ರದೇಶದ ಗೋರಖ್‍ಪುರ್, ಲಕ್ನೋ, ಫೈಝಾಬಾದ್ ಕೋರ್ಟ್ ಆವರಣದಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದಿದ್ದುವು. 2007 ಡಿಸೆಂಬರ್ 20ರಂದು ಉತ್ತರ ಪ್ರದೇಶದ ವಿಶೇಷ ಪೊಲೀಸ್ ದಳದ ಅಧಿಕಾರಿಗಳು ಖಾಲಿದ್ ಮುಜಾಹಿದ್‍ನನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿ, ಬರಬಂಕಿ ರೈಲ್ವೆ ನಿಲ್ದಾಣದ ಬಳಿ ಸ್ಫೋಟಕಗಳೊಂದಿಗೆ ಈತನನ್ನು ಬಂಧಿಸಿರುವುದಾಗಿ ಹೇಳಿಕೊಂಡಿದ್ದರು. ಆದರೆ ಖಾಲಿದ್‍ನ ಕುಟುಂಬ ಆರಂಭದಿಂದಲೂ ಇದನ್ನು ಕಟ್ಟುಕತೆ ಅಂದಿತ್ತು. ಖಾಲಿದ್ ಒಳಸಂಚಿಗೆ ಬಲಿಯಾಗಿದ್ದಾನೆ ಎಂದು ವಾದಿಸಿತ್ತು. ಆದ್ದರಿಂದಲೇ, ಮಾಯಾವತಿಯವರ ಸರಕಾರವು ಪ್ರಕರಣವನ್ನು ತನಿಖಿಸುವುದಕ್ಕಾಗಿ ನಿಮೇಶ್ ಆಯೋಗವನ್ನು ರಚಿಸಿತ್ತು. ಅದು, ಖಾಲಿದ್‍ನ ಮೇಲೆ ಹೊರಿಸಲಾಗಿರುವ ಆರೋಪಗಳು ಸುಳ್ಳಾಗಿದ್ದು, ಆತನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ ಎಂದು ಬಲವಾಗಿ ವಾದಿಸಿತು. ಇದನ್ನನುಸರಿಸಿಯೇ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್‍ರು, ಖಾಲಿದ್‍ನನ್ನು ಆರೋಪಮುಕ್ತಗೊಳಿಸಿ ಬಿಡುಗಡೆಗೊಳಿಸುವಂತೆ ಫೈಝಾಬಾದ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಮೇ 10ರಂದು ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿತ್ತು. ಇದರ ವಿರುದ್ಧ ಹೈಕೋರ್ಟ್ ಮೆಟ್ಟಲೇರಲು ಸರಕಾರ ತೀರ್ಮಾನಿಸಿರುವಂತೆಯೇ, ಮೊನ್ನೆ  ಮೇ 18ರಂದು ಫೈಝಾಬಾದ್ ನ್ಯಾಯಾಲಯದಿಂದ ಲಕ್ನೋ ಜೈಲಿಗೆ ಪೊಲೀಸರ ಜೊತೆ ಸಾಗುವಾಗ ದಾರಿ ಮಧ್ಯೆ ಆತ ಮೃತಪಟ್ಟಿದ್ದಾನೆ.
   ಭಯೋತ್ಪಾದನೆಯು ಈ ದೇಶದಲ್ಲಿ ಅಸಂಖ್ಯ ಬಾರಿ ಚರ್ಚೆಗೊಳಗಾಗಿದೆ. 10 ವರ್ಷಗಳ ಹಿಂದೆ ಈ ಚರ್ಚೆಯ ಧಾಟಿ, ಆರೋಪಗಳ ಗುರಿ ಹೇಗಿತ್ತೋ ಹಾಗೆ ಇವತ್ತಿಲ್ಲ. ಅಷ್ಟಕ್ಕೂ, ಇದಕ್ಕೆ ಸ್ಫೋಟ ಪ್ರಕರಣಗಳಲ್ಲಿ ಆಗಿರುವ ವ್ಯತ್ಯಾಸ ಕಾರಣ ಅಲ್ಲ. 10 ವರ್ಷಗಳ ಹಿಂದೆ ಭಯೋತ್ಪಾದನಾ ಕೃತ್ಯಕ್ಕೆ (ನಿಜವಾಗಿ ಬಾಂಬ್ ಸ್ಫೋಟವೊಂದೇ ಭಯೋತ್ಪಾದನೆ ಅಲ್ಲ) ಯಾವೆಲ್ಲ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತೋ ಬಹುತೇಕ ಅವುಗಳನ್ನೇ ಇವತ್ತೂ ಬಳಸಲಾಗುತ್ತಿದೆ. ಅವತ್ತೂ ಶಂಕಿತರಾಗಿ ಪ್ರದರ್ಶನಗೊಳ್ಳುತ್ತಿದ್ದುದು ಮನುಷ್ಯರೇ. ಇವತ್ತೂ ಮನುಷ್ಯರೇ. ಆದರೆ ಬರಬರುತ್ತಾ, ಬಾಂಬ್ ಸ್ಫೋಟಗಳು ಅನುಮಾನ ತರಿಸತೊಡಗಿದುವು. ಮುಸ್ಲಿಮ್ ಹೆಸರುಳ್ಳ, ಗಡ್ಡ, ಟೋಪಿ, ಪೈಜಾಮ ಧರಿಸಿದ ವ್ಯಕ್ತಿಗಳಿಗೆ ಮಾತ್ರ ಬಾಂಬ್ ಸ್ಫೋಟಿಸಲು ಸಾಧ್ಯ ಎಂದು ಬಲವಾಗಿ ನಂಬಿದ್ದ ಮುಗ್ಧ ಭಾರತೀಯರನ್ನು ಸಾಧ್ವಿಗಳು, ಪುರೋಹಿತ್‍ಗಳು ಬೆಚ್ಚಿ ಬೀಳಿಸಿದರು. ಆ ಬಳಿಕ ಭಡ್ತಿಗಾಗಿ, ಪರಮ ವೀರ ಚಕ್ರಕ್ಕಾಗಿ ಪೊಲೀಸರು ಹೇಗೆ ನಕಲಿ ಭಯೋತ್ಪಾದಕರನ್ನು ಸೃಷ್ಟಿಸುತ್ತಾರೆ ಅನ್ನುವುದು ಇಶ್ರತ್ ಜಹಾನ್ ಘಟನೆಯ ಸಹಿತ ಕೆಲವಾರು ಪ್ರಕರಣಗಳು ಮನದಟ್ಟು ಮಾಡಿದುವು. ಖಾಲಿದ್ ಮುಜಾಹಿದ್‍ನ ಸುತ್ತ ಹಬ್ಬಿರುವುದೂ ಇಂಥ ಅನುಮಾನಗಳೇ. ರಾಜ್ಯ ಸರಕಾರ ಹೈಕೋರ್ಟ್ ಮೆಟ್ಟಲೇರಿ ಆತನನ್ನು ಬಿಡುಗಡೆಗೊಳಿಸಿಕೊಂಡರೆ ಮುಂದೆ ಆತ ಪೊಲೀಸ್ ಭಯೋತ್ಪಾದನೆಗೆ  ಪ್ರಬಲ ಸಾಕ್ಷಿಯಾಗಬಹುದು ಎಂಬುದನ್ನು ಮನಗಂಡೇ ಆತನನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲದಿದ್ದರೆ, ಆರೋಗ್ಯವಂಥ ಯುವಕನೊಬ್ಬ ಕೋರ್ಟು ಮತ್ತು ಜೈಲಿನ ನಡುವಿನ ಹಾದಿಯ ಮಧ್ಯೆ ಸಾವಿಗೀಡಾಗುವುದೆಂದರೇನು? ಕಳೆದ ಮಾರ್ಚ್ 20ರಂದು ನೇಪಾಳದ ಗಡಿಯಿಂದ ಲಿಯಾಕತ್ ಷಾನನ್ನು ಬಂಧಿಸಿದ ದೆಹಲಿ ಪೊಲೀಸರು ಹೇಳಿದ್ದೂ ಭಯೋತ್ಪಾದಕ ಕಥೆಯನ್ನೇ ಅಲ್ಲವೇ? ಹೋಳಿಯ ಸಂದರ್ಭದಲ್ಲಿ ರಾಜಧಾನಿಯಲ್ಲಿ ಬಾಂಬ್ ಸ್ಫೋಟಿಸಲು ಆತ ಸಂಚು ನಡೆಸಿದ್ದ ಎಂಬ ದೆಹಲಿ ಪೊಲೀಸರ ಆರೋಪ ನಿಜವೇ ಆಗಿದ್ದರೆ, ಕೇಂದ್ರ ತನಿಖಾ ತಂಡ ಆತನನ್ನು ನಿರ್ದೋಷಿ ಎಂದದ್ದೇಕೆ? ಜಾಮೀನಿನಲ್ಲಿ ಕೋರ್ಟು ಕಳೆದ ವಾರ ಬಿಡುಗಡೆಗೊಳಿಸಿದ್ದೇಕೆ? ಅಂದಹಾಗೆ, ಆತ ಕಾಶ್ಮೀರದ ಪ್ರತ್ಯೇಕತಾ ಹೋರಾಟಗಾರ ಎಂಬುದು ನಿಜ. ಕಳೆದ 15 ವರ್ಷಗಳಿಂದ ಆತ ಇದ್ದದ್ದೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ. ಆದರೆ, ಶರಣಾಗತ ಹೋರಾಟಗಾರರಿಗೆ ಕ್ಷಮೆ ಮತ್ತು ಪುನರ್ವಸತಿ ನೀಡಲಾಗುತ್ತದೆಂಬ ಕಾಶ್ಮೀರಿ ಸರಕಾರದ ವಾಗ್ದಾನವನ್ನು ನಂಬಿ, ಪತ್ನಿ-ಮಕ್ಕಳೊಂದಿಗೆ ಭಾರತಕ್ಕೆ ಬರುತ್ತಿದ್ದಾಗ ಈತನನ್ನು ಅಪಹರಿಸಿದ ದೆಹಲಿ ಪೊಲೀಸರು, ಬಳಿಕ ಸುಳ್ಳು ಕತೆ ಸೃಷ್ಟಿಸಿದ್ದರು ಎಂಬುದನ್ನಲ್ಲವೇ ಆತನ ಬಿಡುಗಡೆ ಸಾಬೀತುಪಡಿಸುತ್ತಿರುವುದು?
   ನಿಜವಾಗಿ, ಭಯೋತ್ಪಾದಕರ ಕುರಿತಂತೆ ನಡೆಸಲಾಗುವ ಸಿದ್ಧ ಮಾದರಿಯ (Stereo Typed ) ಚರ್ಚೆಗೆ ತಿರುವು ಕೊಟ್ಟ ಇತ್ತೀಚಿನ ಎರಡು ಸಂಕೇತಗಳಾಗಿ ಖಾಲಿದ್ ಮತ್ತು ಲಿಯಾಕತ್‍ರನ್ನು ಸ್ಮರಿಸಿಕೊಳ್ಳಬೇಕಾಗಿದೆ. ಒಂದು ವೇಳೆ, ಲಿಯಾಕತ್‍ನ ಪ್ರಕರಣವನ್ನು ದೆಹಲಿ ಪೊಲೀಸರ ಕೈಯಿಂದ ಕಿತ್ತು ಕೇಂದ್ರೀಯ ತನಿಖಾ ದಳಕ್ಕೆ ಕೇಂದ್ರ ಸರಕಾರವು ವಹಿಸದೇ ಇರುತ್ತಿದ್ದರೆ, ಒಂದು ದಿನ ಆತನೂ ಮಾರ್ಗ ಮಧ್ಯದಲ್ಲಿ ಸಾವಿಗೀಡಾಗುವ ಸರ್ವ ಸಾಧ್ಯತೆಯೂ ಇತ್ತು. ಇಲ್ಲದಿದ್ದರೆ, ನಾಗರಾಜ ಜಂಬಗಿ ಯಂತೆ, ಸಿದ್ದಿಕಿಯಂತೆ ಸಹಕೈದಿಗಳಿಂದ ಹಲ್ಲೆಗೀಡಾಗಿ ಜೈಲಿನಲ್ಲೇ ಕೊನೆಯುಸಿರೆಳೆಯುವುದಕ್ಕೂ ಸಾಧ್ಯವಿತ್ತು.  ಈ ಹಿನ್ನೆಲೆಯಲ್ಲಿ ಖಾಲಿದ್ ಎಂಬ ಶಂಕಿತನ ಸುತ್ತ ಹುಟ್ಟಿಕೊಂಡಿರುವ ಅನುಮಾನಗಳ ಪರದೆಯನ್ನು ಸರಿಸಲೇಬೇಕಾಗಿದೆ. ಆತನ ಸಾವು; ವ್ಯವಸ್ಥೆಯ ಭಯೋತ್ಪಾದನೆಯು ಬಹಿರಂಗಗೊಳ್ಳುವುದಕ್ಕೆ ಹೇತುವಾಗಬೇಕಾಗಿದೆ. ಶಂಕಿತ ಹಣೆಪಟ್ಟಿಯನ್ನು ಹಚ್ಚಿಕೊಂಡು ವಿಚಾರಣೆಯೂ ಇಲ್ಲದೇ ಜೈಲಿನಲ್ಲಿ ಕೊಳೆಯುತ್ತಿರುವ ಅಮಾಯಕರ ಕುರಿತಂತೆ ಗಂಭೀರ ಚರ್ಚೆಗೆ, ಅವರನ್ನು ಆಕಸ್ಮಿಕ ಸಾವಿನಿಂದ ತಡೆಯುವುದಕ್ಕೆ ಖಾಲಿದ್‍ನ ಸಾವು ಎಚ್ಚರಿಕೆಯಾಗಿ ಬಳಕೆಯಾಗಬೇಕಾಗಿದೆ. ನಿಜವಾಗಿ, ಓರ್ವ 'ಶಂಕಿತ'ನ ಸಾವು ನೂರಾರು ಶಂಕಿತರ ಮುಗ್ಧತೆಯನ್ನು ಸಾಬೀತುಪಡಿಸುವುದಕ್ಕೆ ನೆರವಾಗುವುದಾದರೆ ಮತ್ತು ಅವರನ್ನು ಶಂಕಿತಗೊಳಿಸಿದ ನಿಜವಾದ ಭಯೋತ್ಪಾದಕರ ಮುಖವನ್ನು ಈ ದೇಶಕ್ಕೆ ಪರಿಚಯಿಸುವುದಾದರೆ ಖಾಲಿದ್ ಸಾವಿನಲ್ಲೂ ಗೆದ್ದಿದ್ದಾನೆ ಎಂದೇ ಹೇಳಬೇಕು.

No comments:

Post a Comment