Tuesday, 23 July 2013

ಬಾಂಬ್ ಹುಡುಕುವ ನಾವು ಮತ್ತು ಪ್ರತಿಭಟಿಸುವ ಅವರು

   ಕಾಶ್ಮೀರವನ್ನು ಭಾರತದ ಭಾಗವೆಂದು ಸಾಧಿಸಿ ತೋರಿಸುವುದಕ್ಕಾಗಿ ಐತಿಹಾಸಿಕ ದಾಖಲೆ, ಅಂಕಿ-ಅಂಶಗಳನ್ನು ಈ ದೇಶದಲ್ಲಿ ಧಾರಾಳ ಪ್ರಮಾಣದಲ್ಲಿ ಮಂಡಿಸಲಾಗಿದೆ. ಕಾಶ್ಮೀರಿಗಳ ಕುರಿತಂತೆ, ಅವರ ನೋವು, ಸಂಕಟಗಳ ಕುರಿತಂತೆ ಚರ್ಚಿಸಿದುದಕ್ಕಿಂತ ಹೆಚ್ಚು, ಕಾಶ್ಮೀರ ಎಂಬ ಕಲ್ಲು-ಮಣ್ಣಿನ ಭೂಮಿಯ ಬಗ್ಗೆ ಅತೀವ ಕಾಳಜಿಯಿಂದ ಮಾತಾಡಿದವರೂ ಇಲ್ಲಿದ್ದಾರೆ. ಅವರಿಗೆ ಕಾಶ್ಮೀರ ಬೇಕೇ ಹೊರತು ಕಾಶ್ಮೀರಿಗಳಲ್ಲ. ಕಾಶ್ಮೀರಿಗಳೆಲ್ಲ ಒಂದೋ ಉಗ್ರವಾದಿಗಳು ಇಲ್ಲವೇ ಅವರ ಬೆಂಬಲಿಗರು ಎಂಬ ಧಾಟಿಯಲ್ಲೇ ಅವರು ಮಾತಾಡುತ್ತಾರೆ. ಕಾಶ್ಮೀರಿಗಳು ಪ್ರತಿಭಟಿಸಿದರೆ ಈ ಮಂದಿ ಪ್ರತಿಭಟನಾಕಾರರನ್ನೇ ಟೀಕಿಸುತ್ತಾರೆ. ಸದ್ಯ ಕಾಶ್ಮೀರದಲ್ಲಿ ಕಾಣಿಸಿಕೊಂಡಿರುವ ಪ್ರತಿಭಟನೆಯ ಬಗ್ಗೆಯೂ ದೇಶದ ಒಂದು ವರ್ಗ ಇಂಥ ನಕಾರಾತ್ಮಕ ಧಾಟಿಯಲ್ಲೇ ಮಾತಾಡುತ್ತಿದೆ.
   ದಿ ಹಿಂದೂ ಪತ್ರಿಕೆಯಲ್ಲಿ ಜೂನ್ 30ರಂದು ‘ನೈಟ್ ಆಫ್ ಹಾರರ್’ ಎಂಬೊಂದು ಲೇಖನವನ್ನು ಹರ್ಷಮಂದರ್ ಬರೆದಿದ್ದರು. ಕಾಶ್ಮೀರಿಗಳನ್ನು ಭಯೋತ್ಪಾದಕರಂತೆ ಮತ್ತು ಅಲ್ಲಿಯ ಭದ್ರತಾ ಪಡೆಗಳನ್ನು ನೂರು ಶೇಕಡಾ ಸಭ್ಯರಂತೆ ಬಿಂಬಿಸುವವರೆಲ್ಲ ಒಮ್ಮೆ ಆ ಲೇಖನವನ್ನು ಓದಬೇಕು. 1991 ಫೆಬ್ರವರಿ 23ರ ರಾತ್ರಿ ಕುಪ್ವಾರ ಜಿಲ್ಲೆಯ ಕುನನ್ ಪೋಶ್‍ಪೋರಾ ಗ್ರಾಮಕ್ಕೆ ಸೇನೆ ನುಗ್ಗುತ್ತದೆ. ಭಯೋತ್ಪಾದಕರು ಅಡಗಿಕೊಂಡಿದ್ದಾರೆಂಬ ನೆಪವೊಡ್ಡಿ ಮನೆ ಮನೆ ತಪಾಸಿಸುತ್ತದೆ. ಮಕ್ಕಳ ಎದುರೇ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತದೆ. ಪುರುಷರನ್ನು ಭೀಕರ ಹಿಂಸೆಗೆ ಗುರಿಪಡಿಸುತ್ತದೆ. ಎಲ್ಲಿಯವರೆಗೆಂದರೆ ಆ ಗ್ರಾಮದ ಮಹಿಳೆಯರು ಎರಡ್ಮೂರು ದಿನಗಳ ವರೆಗೆ ದೂರು ಕೊಡುವುದಕ್ಕೂ ಹಿಂಜರಿಯುತ್ತಾರೆ. ಕೊನೆಗೆ ರಾಜ್ಯ ಮಾನವ ಹಕ್ಕು ಆಯೋಗವು ಸಂತ್ರಸ್ತರ ದೂರನ್ನು ಆಲಿಸಲು ಮುಂದಾಗುತ್ತದಲ್ಲದೇ 2011 ಅಕ್ಟೋಬರ್ 16ರಂದು ವರದಿಯನ್ನು ಮಂಡಿಸುತ್ತದೆ. ಯೋಧರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವುದಾಗಿ ಅದು ದಾಖಲೆ ಸಮೇತ ಸಾಬೀತುಪಡಿಸುತ್ತದೆ. ಆದ್ದರಿಂದ ಸಂತ್ರಸ್ತ ಮಹಿಳೆಯರಿಗೆ 3 ಲಕ್ಷ ಪರಿಹಾರ ನೀಡಬೇಕು ಮತ್ತು ಯೋಧರ ವಿರುದ್ಧ ಹೂಡಲಾಗಿರುವ ಕ್ರಿಮಿನಲ್ ಮೊಕದ್ದಮೆಯ ತನಿಖೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸುತ್ತದೆ. ಹಿರಿಯ ಪತ್ರಕರ್ತೆ ಸೀಮಾ ಮುಸ್ತಫಾ, ಜಾನ್ ದಯಾಳ್, ಸೆಹ್ಬಾ ಫಾರೂಖಿ, ಇ.ಎನ್. ರಾಮ್ ಮೋಹನ್, ಬಾಲಚಂದ್ರ, ಮುಹಮ್ಮದ್ ಸಲೀಮ್.. ಮತ್ತಿತರ ಮಾನವ ಹಕ್ಕು ಕಾರ್ಯಕರ್ತರು 2013 ಜೂನ್‍ನಲ್ಲಿ ಈ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಮಾತುಗಳನ್ನು ಆಲಿಸಿದ್ದರು. ಘಟನೆ ನಡೆದು 22 ವರ್ಷಗಳಾಗಿದ್ದರೂ ಸಂತ್ರಸ್ತ ಮಹಿಳೆಯರು ಅಂದಿನ ಭೀತಿಯಿಂದ ಹೊರಬಂದಿಲ್ಲ ಎಂದೂ ಹೇಳಿದ್ದರು. ನಿಜವಾಗಿ, ಕಾಶ್ಮೀರದಲ್ಲಿ ಈಗ ಉದ್ಭವಿಸಿರುವ ಆತಂಕಕಾರಿ ಪರಿಸ್ಥಿತಿಯನ್ನು ಇಂಥ ಹಿನ್ನೆಲೆಗಳ ಜೊತೆಗಿಟ್ಟು ನೋಡಬೇಕಾದ ಅಗತ್ಯ ಇದೆ. 2009ರಲ್ಲಿ ಬೆಂಗಳೂರಿನಲ್ಲಿ ಸಿ.ಕೆ. ನಾಯ್ಡು ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿತ್ತು. ಕಾಶ್ಮೀರ ತಂಡವನ್ನು ಪ್ರತಿನಿಧಿಸಿದ್ದ ಪರ್ವೇಝ್ ರಸೂಲ್ ಎಂಬ ಯುವ ಕ್ರಿಕೆಟಿಗನನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡರು. ಆತ ತನ್ನ ಬ್ಯಾಗ್‍ನಲ್ಲಿ ಬ್ಯಾಟು, ಪ್ಯಾಡು, ಬಾಲ್‍ಗಳ ಬದಲು ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದಾನೆ ಎಂಬುದಾಗಿ ಪೊಲೀಸರು ಅನುಮಾನಿಸಿದ್ದರು. ಆ ಯುವಕ ಇವತ್ತು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾನೆ. ಅಷ್ಟಕ್ಕೂ, ಓರ್ವ ಕ್ರಿಕೆಟಿಗನ ಮೇಲೆಯೇ ಪೊಲೀಸರ ನಡವಳಿಕೆ ಈ ಮಟ್ಟದಲ್ಲಿದೆಯೆಂದ ಮೇಲೆ ಸಾಮಾನ್ಯ ಯುವಕರನ್ನು ಭದ್ರತಾ ಪಡೆಗಳು ಹೇಗೆ ನಡೆಸಿಕೊಂಡಾವು? ಕಾಶ್ಮೀರಿಗಳ ಪ್ರತಿಭಟನೆ, ಕಲ್ಲೆಸೆತಗಳನ್ನು ಟೀಕಿಸುವವರೆಲ್ಲ ಅದರ ಇನ್ನೊಂದು ಮುಖವನ್ನು ಎಷ್ಟರ ಮಟ್ಟಿಗೆ ಅರ್ಥೈಸಲು ಪ್ರಯತ್ನಿಸಿದ್ದಾರೆ? ಕಾಶ್ಮೀರವು ಭಾರತದ ಭಾಗವಾಗುವುದಕ್ಕಿಂತ ಮೊದಲು ಕಾಶ್ಮೀರಿಗಳನ್ನು ಭಾರತದ ಭಾಗವಾಗುವಂತೆ ಮಾಡುವುದಕ್ಕೆ ಸರ್ಕಾರಗಳು, ಭದ್ರತಾ ಪಡೆಗಳು ಯಾವ ಮಟ್ಟದಲ್ಲಿ ಶ್ರಮಿಸಿವೆ? ಕಾಶ್ಮೀರ ಅಂದರೆ ಬರೇ ಪ್ರವಾಸಿಗರನ್ನು ಸೆಳೆಯುವ, ಆಪಲ್ ಬೆಳೆಯುವ ಭೂಮಿಯಷ್ಟೇ ಅಲ್ಲವಲ್ಲ. ಕಾಶ್ಮೀರ ಭಾರತದ ಭಾಗವಾಗುವುದೆಂದರೆ ಕಾಶ್ಮೀರಿಗಳೂ ಭಾರತದ ಭಾಗವಾಗುವುದೆಂದರ್ಥ. ಆದರೆ ಇಂಥದ್ದೊಂದು ಇನ್‍ಕ್ಲೂಸಿವ್ ಧೋರಣೆಯನ್ನು ತಳೆಯಲು ನಮಗೆ ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ? ಕಾಶ್ಮೀರದ ಪ್ರತ್ಯೇಕತಾ ಹೋರಾಟದ ಬಗ್ಗೆ, ಪಂಡಿತರ ವಲಸೆಯ ಕುರಿತು ಸರಿ-ತಪ್ಪುಗಳ ಚರ್ಚೆ ನಡೆಸುವುದು ಸುಲಭ. ಕಾಶ್ಮೀರಿಗಳ ಮೇಲಿನ ದೌರ್ಜನ್ಯವನ್ನು ಎತ್ತಿ ಹೇಳಿದಾಗಲೆಲ್ಲ, ಪಂಡಿತರ ಸ್ಥಿತಿಯನ್ನು ಉಲ್ಲೇಖಿಸಿ ಎದುರುತ್ತರ ಕೊಡುವುದು ಈ ದೇಶದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ನಿಜವಾಗಿ, ಇಂಥ ಜಿದ್ದಾಜಿದ್ದಿಗಳೇ ಕಾಶ್ಮೀರವನ್ನು ಇವತ್ತು ಈ ಹಂತಕ್ಕೆ ತಲುಪಿಸಿರುವುದು. ಪ್ರತ್ಯೇಕತಾ ಹೋರಾಟ, ಅದಕ್ಕೆ ಬೆಂಬಲವಾಗಿ ನಿಂತ ವಿದೇಶಿ ಶಕ್ತಿಗಳು, ಅದರಿಂದಾಗಿ ಕಣಿವೆಯಲ್ಲಾದ ರಕ್ತಪಾತಗಳು ಮತ್ತು ಜಗ್ಮೋಹನ್ ಎಂಬ ರಾಜ್ಯಪಾಲರ ಪಕ್ಷಪಾತಿ ನಿಲುವುಗಳು.. ಎಲ್ಲವೂ ಚರಿತ್ರೆಗೆ ಸೇರಿ ಹೋಗಿವೆ. ಇವತ್ತು ಕಾಶ್ಮೀರವನ್ನು ಪ್ರತಿ ನಿಧಿಸುತ್ತಿರುವುದು ಒಂದಾನೊಂದು ಕಾಲದ ಮಂದಿಯಲ್ಲ. ಯುವ ಸಮೂಹ. ಅವರನ್ನು ವಿಶ್ವಾಸದಿಂದ ನಡೆಸಿಕೊಳ್ಳುವ ಬದಲು ಪ್ರತ್ಯೇಕತಾವಾದಿಗಳಂತೆ ನಡೆಸಿಕೊಂಡರೆ ಕಣಿವೆ ಶಾಂತವಾಗುವುದಾದರೂ ಹೇಗೆ? ಕಾಶ್ಮೀರದಲ್ಲಿ ಮಾನವ ಹಕ್ಕುಗಳಿಗೆ ಭಾರೀ ತೂಕವೇನೂ ಇಲ್ಲ. ಹಕ್ಕುಗಳ ಬಗ್ಗೆ ತೀವ್ರ ನಿರಾಶೆಗೊಂಡ ಒಂದು ದೊಡ್ಡ ಸಮೂಹವೇ ಅಲ್ಲಿ ನಿರ್ಮಾಣವಾಗಿದೆ. ಕಾಶ್ಮೀರವು ಇವತ್ತು ಮಾಧ್ಯಮಗಳಲ್ಲಿ ಸುದ್ದಿಯಾಗಬೇಕಾದರೆ ನಾಲ್ಕೈದು ಮಂದಿಯ ಸಾವಾದರೂ ಸಂಭವಿಸಬೇಕು ಎಂಬಂಥ ವಾತಾವರಣವಿದೆ. ಇಂಥ ಸ್ಥಿತಿಯಲ್ಲಿ ಕಾಶ್ಮೀರವನ್ನು ಭಾರತದ ಭಾಗ ಎಂದು ಡಂಗುರ ಸಾರುವುದರಿಂದ ಏನು ಲಾಭವಿದೆ? ಕಾಶ್ಮೀರಿಗಳನ್ನು ವಿಶ್ವಾಸದಿಂದ ನಡೆಸಿಕೊಳ್ಳದ ಹೊರತು ಅವರನ್ನು ಭಾಗವಾಗಿಸುವುದಾದರೂ ಹೇಗೆ?
   ಕಾಶ್ಮೀರದ ಯುವ ಸಮೂಹದ ಆಗ್ರಹಗಳಿಗೆ ಕಿವಿಯಾಗುವ ಮತ್ತು ಅವರಲ್ಲಿ ಭರವಸೆ ತುಂಬುವ ಕೆಲಸ ತೀವ್ರಗತಿಯಲ್ಲಿ ನಡೆಯಬೇಕಿದೆ. ಕಾಶ್ಮೀರಿಗಳೆಂದರೆ ಭಯೋತ್ಪಾದಕರಲ್ಲ, ನಮ್ಮ ಸಹೋದರರು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕಿದೆ. ಕ್ರಿಕೆಟ್ ಆಟಗಾರನ ಬ್ಯಾಗ್‍ನಲ್ಲಿ ಬಾಂಬು ಹುಡುಕುವ, ಪ್ರತಿ ಮನೆಯಲ್ಲೂ ಭಯೋತ್ಪಾದಕನನ್ನು ಕಾಣುವ, ಕಾಶ್ಮೀರ ಎಂಬ ಭೂಮಿಯನ್ನು ಮಾತ್ರ ಪ್ರೀತಿಸುವ ನಮ್ಮ ಸಣ್ಣ ಮನಸನ್ನೂ ತುಸು ವಿಶಾಲಗೊಳಿಸಬೇಕಿದೆ.

Monday, 15 July 2013

ಮನುಷ್ಯರಾಗಿರುವುದಷ್ಟೇ ಅರ್ಹತೆಯಲ್ಲ..

   ಓರ್ವ ಪ್ರಧಾನಿ ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳು ಏನೆಲ್ಲ ಎಂಬ ಚರ್ಚೆಯು ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿಯ ಒಂದು ವರ್ಗ ಬಿಂಬಿಸಿದಂದಿನಿಂದಲೇ ಆರಂಭವಾಗಿದೆ. ಮಾತ್ರವಲ್ಲ, ಆ ಚರ್ಚೆಯಲ್ಲಿ ಮೋದಿ ಮತ್ತೆ ಮತ್ತೆ ತನ್ನ ಅನರ್ಹತೆಯನ್ನು ಸಾರುತ್ತಲೂ ಇದ್ದಾರೆ. ಅವರೊಳಗೆ ಒಂದು ಬಗೆಯ ಗೊಂದಲ ಇದೆ. ತನ್ನ ಅಭಿಮಾನಿ ವಲಯವನ್ನೂ ಮೀರಿ ಗುರುತಿಸಿಕೊಳ್ಳುವ ಹಂಬಲ ಕೆಲವೊಮ್ಮೆ ಅವರ ಮಾತಿನಲ್ಲಿ ಕಾಣಿಸಿಕೊಂಡರೆ ಇನ್ನೂ ಕೆಲವೊಮ್ಮೆ, ಎಲ್ಲಿ ತನ್ನ ಅಭಿಮಾನಿ ವಲಯ ಮುನಿಸಿಕೊಳ್ಳುವುದೋ ಎಂಬ ಭೀತಿ ಕಾಣಿಸುತ್ತದೆ. ಸದ್ಭಾವನಾ ಯಾತ್ರೆ, 2002ರ ಗುಜರಾತ್ ನರಮೇಧಕ್ಕೆ ವಿಷಾದ, ನಾಯಿಮರಿ, ಹಿಂದೂ ರಾಷ್ಟ್ರವಾದಿ.. ಇವೆಲ್ಲ ಅವರೊಳಗಿನ ಗೊಂದಲಕ್ಕೆ ಪುರಾವೆಗಳು. 120 ಕೋಟಿ ಭಾರತೀಯರಿಗೆ ನಾಯಕತ್ವ ನೀಡಬೇಕಾದ ವ್ಯಕ್ತಿಯೊಬ್ಬರಿಗೆ ಇರಬೇಕಾದ ಮೊಟ್ಟಮೊದಲ ಅರ್ಹತೆ ಏನೆಂದರೆ, ಈ ದೇಶ ಮತ್ತು ಇಲ್ಲಿರುವ ಜನರ ಕುರಿತಂತೆ ಗೊಂದಲರಹಿತ ನಿಲುವು. ಈ ದೇಶದಲ್ಲಿರುವುದು ಮೋದಿಯ ಅಭಿಮಾನಿಗಳು ಮಾತ್ರ ಅಲ್ಲ. ಅವರನ್ನು ಅನುಮಾನಿಸುವ, ಭೀತಿಯಿಂದ ನೋಡುವ, ಖಂಡಿಸುವ ಮಂದಿ ಕೂಡ ಧಾರಾಳ ಇದ್ದಾರೆ. ಅವರೆಲ್ಲರನ್ನೂ ಸಮಚಿತ್ತದಿಂದ ನಿಭಾಯಿಸುವ ಹೊಣೆಗಾರಿಕೆ ನಾಯಕನ ಮೇಲಿರುತ್ತದೆ. ಮೋದಿಗೆ ಇದು ಸಾಧ್ಯವಾಗಿದೆಯೇ? ಈ ದೇಶದ 20 ಕೋಟಿಯಷ್ಟಿರುವ ದೊಡ್ಡದೊಂದು ಜನಸಮೂಹವನ್ನು ಕಾರಿನ ಚಕ್ರದಡಿಗೆ ಸಿಲುಕುವ ಬಡಪಾಯಿ ನಾಯಿಮರಿಗೆ ಅವರು ಹೋಲಿಸುತ್ತಾರೆ. ಗುಜರಾತ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಅವರಾಡಿದ ಈ ಮಾತಿನಿಂದ ರವಾನೆಯಾಗುವ ಸೂಚನೆಯಾದರೂ ಏನು? ನಾಯಿ ಮರಿಯನ್ನು ಯಾವ ಚಾಲಕ ಕೂಡ ಉದ್ದೇಶಪೂರ್ವಕವಾಗಿ ಚಕ್ರದಡಿ ಸಿಲುಕಿಸುವುದಿಲ್ಲ. ಅನೇಕ ಬಾರಿ ಪ್ರಾಣಿಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ಚಾಲಕನೇ ಅಪಾಯಕ್ಕೆ ಸಿಲುಕುವುದಿದೆ. ಆದರೆ ಗುಜರಾತ್ ಹತ್ಯಾಕಾಂಡದಲ್ಲಿ ಮೋದಿ ನಿರ್ವಹಿಸಿದ ಪಾತ್ರ ಈ ರೀತಿಯದ್ದೇ? ಉದ್ದೇಶಪೂರ್ವಕ ಪಾತ್ರ ಇದ್ದಿರಲಿಲ್ಲವೇ? ಅಂಥದ್ದೊಂದು ಹತ್ಯಾಕಾಂಡದ ಉದ್ದೇಶದಿಂದಲೇ ಅವರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಮೊದಲೇ ಆಯಕಟ್ಟಿನ ಜಾಗಕ್ಕೆ ನೇಮಿಸಿರುವುದು ಸುಳ್ಳೇ? ಗುಜರಾತ್‍ನ ಹತ್ತಾರು ಪೊಲೀಸ್ ಅಧಿಕಾರಿಗಳು ಹತ್ಯಾಕಾಂಡದ ಆರೋಪ ಹೊತ್ತು ತಿರುಗುತ್ತಿರುವುದು ಏನನ್ನು ಸೂಚಿಸುತ್ತದೆ? ಇವೆಲ್ಲ ಮೋದಿಯ ಗಮನಕ್ಕೆ ಬಂದೇ ಇಲ್ಲ ಅನ್ನುವುದಾದರೆ ಅಂಥ ನಾಯಕನೊಬ್ಬ ಈ ದೇಶವನ್ನು ಮುನ್ನಡೆಸುವುದಾದರೂ ಹೇಗೆ? ಕೇವಲ 6 ಕೋಟಿ ಜನಸಂಖ್ಯೆ ಇರುವ ರಾಜ್ಯವೊಂದರ ಆಡಳಿತ ವ್ಯವಸ್ಥೆ, ಅಧಿಕಾರಿ ವರ್ಗಗಳ ಮೇಲೆ ನಿಯಂತ್ರಣ ಇಡಲಾಗದ ವ್ಯಕ್ತಿ 120 ಕೋಟಿ ಜನಸಂಖ್ಯೆ ಇರುವ ರಾಷ್ಟ್ರವೊಂದರ ಮೇಲೆ ಹೇಗೆ ತಾನೇ ನಿಯಂತ್ರಣ ಇಟ್ಟುಕೊಳ್ಳಬಲ್ಲ? ಗುಜರಾತ್ ಹತ್ಯಾಕಾಂಡದಲ್ಲಿ ತಾನು ನಿಷ್ಕಳಂಕ ಅಂತ ಮೋದಿ ಹೇಳುತ್ತಲೇ ಬಂದಿದ್ದಾರೆ. ಆದ್ದರಿಂದಲೇ ತಾನು ಕ್ಷಮೆ ಯಾಚಿಸಲ್ಲ ಎಂದೂ ಹೇಳುತ್ತಿದ್ದಾರೆ. ಹಾಗಾದರೆ, 1984ರ ಸಿಕ್ಖ್ ಹತ್ಯಾಕಾಂಡದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೆ? ಸೋನಿಯಾ ಕಾಂಗ್ರೆಸ್‍ನ ನಾಯಕಿಯಾಗಿದ್ದರೆ? ಆದರೂ ಅವರು ಕ್ಷಮೆ ಯಾಚಿಸಿಲ್ಲವೇ? ಎಲ್ಲೋ ಒಂದು ಕಡೆ ರೈಲು ಅಪಘಾತಕ್ಕೀಡಾದಾಗ, ಲಾಲ್ ಬಹದ್ದೂರ್ ಶಾಸ್ತ್ರಿಯವರು ರೈಲ್ವೆ ಖಾತೆಗೆ ರಾಜೀನಾಮೆ ನೀಡಿದರಲ್ಲ, ಯಾಕೆ? ಅವರೇನು ಅಪಘಾತಕ್ಕೀಡಾದ ರೈಲಿನ ಚಾಲಕರಾಗಿದ್ದರೆ? ಕಲ್ಲಿದ್ದಲು ಹಗರಣ, ಟೆಲಿಕಾಂ, ಕಾಮನ್ವೆಲ್ತ್ ಹಗರಣದ ಹೊಣೆ ಹೊತ್ತುಕೊಂಡು ಪ್ರಧಾನಿ ಮನಮೋಹನ್ ಸಿಂಗ್‍ರು ರಾಜೀನಾಮೆ ಕೊಡಬೇಕೆಂದು ಬಿಜೆಪಿ ಹಲವು ಬಾರಿ ಆಗ್ರಹಿಸಿದೆ. ಉತ್ತರಾಖಂಡದ ಪ್ರವಾಹ ನಿರ್ವಹಣೆಯಲ್ಲಿ ಅಲ್ಲಿನ ಕಾಂಗ್ರೆಸ್ ಮುಖ್ಯಮಂತ್ರಿ ಬಹುಗುಣ ವಿಫಲರಾಗಿದ್ದಾರೆಂದು ಆರೋಪಿಸಿ ಇದೇ ಬಿಜೆಪಿ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಇಲ್ಲೆಲ್ಲಾ ಪರಿಗಣನೆಗೆ ಬರುವ ನಿಯಮ ಮೋದಿ ವಿಷಯದಲ್ಲಿ ಮಾತ್ರ ಅಳವಡಿಕೆ ಆಗುತ್ತಿಲ್ಲವೇಕೆ?
   ನಿಜವಾಗಿ, ಮೋದಿ ಈಗಾಗಲೇ ಒಂದು ನಿರ್ದಿಷ್ಟ ಇಮೇಜನ್ನು ಬೆಳೆಸಿಕೊಂಡಿದ್ದಾರೆ. ಒಂದು ವೇಳೆ ಗುಜರಾತ್ ಹತ್ಯಾಕಾಂಡಕ್ಕಾಗಿ ಕ್ಷಮೆ ಯಾಚಿಸಿದರೆ, ಆ ಇಮೇಜ್‍ಗೆ ಧಕ್ಕೆ ಬರಬಹುದೆಂಬ ಭೀತಿ ಅವರಲ್ಲಿ ಮತ್ತು ಅವರನ್ನು ಉಬ್ಬಿಸುತ್ತಿರುವವರಲ್ಲಿ ಇದೆ. ಬಾಬರಿ ಮಸೀದಿಯ ಧ್ವಂಸಕ್ಕೆ ವಿಷಾದಿಸಿದ ಮತ್ತು ಜಿನ್ನಾರನ್ನು ಹೊಗಳಿದ ಅಡ್ವಾಣಿಯಂತೆ ತಾನೂ ಕಳೆದುಹೋಗುವೆನೆಂಬ ಭಯ ಅವರನ್ನು ಕಾಡುತ್ತಿದೆ. ಆದ್ದರಿಂದಲೇ ಕ್ಷಮೆ ಯಾಚನೆಯ ವಿಚಾರ ಪ್ರಸ್ತಾಪವಾದಾಗಲೆಲ್ಲ ಅವರು ನಾಯಿ ಮರಿಯಂಥ ಕತೆಯನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಸರ್ವರನ್ನೂ ಮೆಚ್ಚಿಸಿಕೊಳ್ಳುವುದಕ್ಕಾಗಿ ಸದ್ಭಾವನಾ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಮತ್ತೊಮ್ಮೆ ತಾನು ಹಿಂದೂ ರಾಷ್ಟ್ರವಾದಿ ಅನ್ನುತ್ತಾರೆ. ಒಂದು ರೀತಿಯಲ್ಲಿ ಅವರನ್ನು ಅಸ್ತಿತ್ವ ಭಯ ಕಾಡುತ್ತಿದೆ. ಅಷ್ಟಕ್ಕೂ, ಮುಸ್ಲಿಮ್ ರಾಷ್ಟ್ರವಾದಿ, ಕ್ರೈಸ್ತ ರಾಷ್ಟ್ರವಾದಿ, ಸಿಕ್ಖ್ ರಾಷ್ಟ್ರವಾದಿ.. ಎಂದೆಲ್ಲಾ ರಾಷ್ಟ್ರವಾದದಲ್ಲಿ ವಿಭಜನೆಯಿದೆಯೇ? ನಾಳೆ, ರಾಜ್ಯದ ಆರೋಗ್ಯ ಮಂತ್ರಿ ಯು.ಟಿ. ಕಾದರ್ ಅವರು,  ತಾನು ಮುಸ್ಲಿಮ್ ರಾಷ್ಟ್ರವಾದಿ ಅಂದರೆ ಬಿಜೆಪಿ ಏನಂದೀತು? ಗೃಹ ಸಚಿವ ಜಾರ್ಜ್‍ ರು,  ತಾನು ಕ್ರೈಸ್ತ ರಾಷ್ಟ್ರವಾದಿ ಅಂದರೆ ಇದೇ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾರದೇ? ಹಿಂದೂ ರಾಷ್ಟ್ರವಾದವನ್ನು ಮುಂದಿಡುವ ಮೋದಿಯಂತೆಯೇ ದಲಿತ್ ರಾಷ್ಟ್ರದ, ಸಿಕ್ಖ್ ರಾಷ್ಟ್ರದ ವಾದವನ್ನು ಮುಂದಿಡುವವರು ತಯಾರಾಗಬಹುದಲ್ಲವೇ? ಮೋದಿಗೆ ಇರುವಷ್ಟೇ ಹಕ್ಕು, ಅರ್ಹತೆ, ಸ್ವಾತಂತ್ರ್ಯ ಈ ದೇಶದ ಇತರೆಲ್ಲ ಪ್ರಜೆಗಳಿಗೂ ಇದೆಯಲ್ಲವೇ? ಅವರಂತೆಯೇ ಇತರರೂ ಮಾತಾಡಲು, ಹಕ್ಕು ಪ್ರತಿಪಾದಿಸಲು ಪ್ರಾರಂಭಿಸಿದರೆ ಈ ದೇಶ ಎತ್ತ ಸಾಗೀತು?
   ಮೋದಿಯ ಮಾತು, ಆವೇಶ, ಹಾವಭಾವ, ಆಂಗಿಕ ಸನ್ನೆಗಳೆಲ್ಲ ಅವರೊಳಗೆ ಓರ್ವ ಅಪಾಯಕಾರಿ ಖಳನಾಯಕ ಇರುವುದನ್ನು ಚೆನ್ನಾಗಿ ಬಿಂಬಿಸುತ್ತದೆ. ಆ ಖಳನಾಯಕನೇ 2002ರ ಹತ್ಯಾ ಕಾಂಡದ ಸಂದರ್ಭದಲ್ಲಿ ಗುಜರಾತ್‍ಗೆ ನೇತೃತ್ವ ನೀಡಿದ್ದು. ಅಂಥ ವ್ಯಕ್ತಿಯೊಬ್ಬ ಈ ದೇಶಕ್ಕೆ ನೇತೃತ್ವ ಕೊಡಲು ಯಾವ ರೀತಿಯಿಂದಲೂ ಸೂಕ್ತರಲ್ಲ. 120 ಕೋಟಿ ಭಾರತೀಯರನ್ನು ಸಮಾನವಾಗಿ ಕಾಣುವ ಮತ್ತು ನಾಯಿ ಮರಿಗಳಂತೆ ಕಾಣದಿರುವ ಆರೋಗ್ಯಪೂರ್ಣ ಮನಸ್ಸು ಆ ನಾಯಕನಿಗಿರಬೇಕು. ಬರೇ ಮನುಷ್ಯರಾಗಿರುವುದಷ್ಟೇ ಪ್ರಧಾನಿ ಹುದ್ದೆಗಿರುವ ಅರ್ಹತೆಯಲ್ಲ. ಎಲ್ಲ ಅಂಗಗಳೂ ಸ್ವಸ್ಥ ಮತ್ತು ನಿರ್ಮಲವಾಗಿರಬೇಕಾದುದೂ  ಅಗತ್ಯ. ಆದರೆ ಮೋದಿ ಬರೇ ಮನುಷ್ಯರಷ್ಟೇ ಆಗಿದ್ದಾರೆ. ಉಳಿದ ಯಾವ ಅರ್ಹತೆಗಳೂ ಅವರಲ್ಲಿ ಕಾಣಿಸುತ್ತಿಲ್ಲ.

Monday, 8 July 2013

ಬುದ್ಧಗಯಾದ ಬಾಂಬ್!

   ಯಾವುದೇ ಒಂದು ಬಾಂಬ್ ಸ್ಫೋಟವನ್ನು ಖಂಡಿಸುವುದಕ್ಕೆ- ಸ್ಫೋಟ ನಡೆದ ಜಾಗ, ಸಾವಿಗೀಡಾದವರ ಸಂಖ್ಯೆ, ಅವರ ಧರ್ಮಗಳನ್ನು ಪರಿಗಣಿಸುವುದು ಮನುಷ್ಯ ವಿರೋಧಿ ಕ್ರಮ ಎಂದು ಬಲವಾಗಿ ಸಾರುತ್ತಲೇ ನಾವೆಲ್ಲ ಬುದ್ಧಗಯಾದ ಬಾಂಬ್ ಸ್ಫೋಟವನ್ನು ಖಂಡಿಸಬೇಕಾಗಿದೆ. ಬಾಂಬಿಟ್ಟವರು ಯಾವ ಸಂಘಟನೆಗೇ ಸೇರಿರಲಿ ಮತ್ತು ಅವರ ಹೆಸರ ಏನೇ ಆಗಿರಲಿ, ನಾವು ಖಂಡನೆಗೆ ಬಳಸುವ ಭಾಷೆ, ಹೇಳುವ ಧಾಟಿ ಮತ್ತು ಮಾಡುವ ಪ್ರತಿಭಟನೆಗಳಲ್ಲಿ ಯಾವ ರಾಜಿಯನ್ನೂ ಮಾಡದಿರೋಣ. ಈ ಹಿಂದೆ ಮಾಲೆಗಾಂವ್, ಮಕ್ಕಾ ಮಸೀದಿ, ಸಂಜೋತಾ ಎಕ್ಸ್‍ಪ್ರೆಸ್ ಸ್ಫೋಟಗಳ ಸಂದರ್ಭದಲ್ಲಿ ಮಾಧ್ಯಮಗಳು ಅತಿ ಗಂಭೀರ ತಪ್ಪುಗಳನ್ನು ಎಸಗಿದ್ದುವು. ಸ್ಫೋಟಿಸಿದವರು ಪತ್ರಿಕಾ ಕಚೇರಿಗಳಲ್ಲೇ ಅವಿತು ಕೂತಿದ್ದಾರೋ ಎಂದು ಓದುಗರು ಅನುಮಾನಿಸುವಷ್ಟು ಖಚಿತವಾಗಿ ಆರೋಪಿಗಳ ಹೆಸರನ್ನೂ ಸಂಘಟನೆಯನ್ನೂ ಅವು ಹೆಸರಿಸಿದ್ದುವು. ಮಾಧ್ಯಮಗಳು ಮಾಡಿದ ಈ ಪ್ರಮಾದ ಸಮಾಜದ ಮೇಲೆ ಯಾವ ಮಟ್ಟಿನ ಅಡ್ಡ ಪರಿಣಾಮ ಬೀರಿತೆಂದರೆ, ಒಂದು ಸಮುದಾಯವನ್ನೇ ಟೆರರಿಸ್ಟ್ ಗಳಾಗಿ ಕಾಣುವಷ್ಟು. ಅನೇಕಾರು ಯುವಕರು ಹಲವು ವರ್ಷಗಳ ವರೆಗೆ ಅನ್ಯಾಯವಾಗಿ ಜೈಲಲ್ಲಿ ಕೊಳೆಯುವಷ್ಟು. ಆದರೆ ಆ ಬಳಿಕ ಅಸೀಮಾನಂದ, ಸ್ವಾಮಿ ದಯಾನಂದ, ಸಾಧ್ವಿ ಪ್ರಜ್ಞಾ ಸಿಂಗ್, ಕರ್ನಲ್ ಪುರೋಹಿತರೆಲ್ಲ ಮಾಧ್ಯಮಗಳ ಈ ಪ್ರಮಾದವನ್ನು ಬಹಿರಂಗಕ್ಕೆ ತಂದರೂ ನಿರೀಕ್ಷಿತ ಮಟ್ಟದಲ್ಲಿ ಮಾಧ್ಯಮಗಳು ಆತ್ಮಾವಲೋಕನಕ್ಕೆ ಇಳಿದದ್ದು ಕಡಿಮೆ. ಆದ್ದರಿಂದಲೇ ಬುದ್ಧಗಯಾ ಸ್ಫೋಟದ ಕುರಿತಂತೆ ಮಾಧ್ಯಮಗಳು ಮಾಡಿರುವ ಪ್ರಥಮ ವರದಿ ಮತ್ತು ವಿಶ್ಲೇಷಣೆಯ ಬಗ್ಗೆ ವಿಷಾದ ಮೂಡುವುದು.
   ಬಾಂಬ್ ಸ್ಫೋಟಕ್ಕೆ ಈಡಾದ ಮಹಾಬೋಧಿ ಮಂದಿರವಷ್ಟೇ ಬುದ್ಧಗಯಾದಲ್ಲಿ ಇರುವುದಲ್ಲ. ಅದು 12 ಎಕ್ರೆ ಪ್ರದೇಶಗಳ ವಿಶಾಲ ಆವರಣ. ಬೌದ್ಧರ ಇನ್ನೂ ಐದಾರು ಮಂದಿರಗಳು ಈ ಬುದ್ಧಗಯಾ ಆವರಣದಲ್ಲಿವೆ. ಅಕ್ಟೋಬರ್ ಮತ್ತು ಮಾರ್ಚ್ ಗಳ ಮಧ್ಯೆ ಲಕ್ಷಾಂತರ ಮಂದಿ ಈ ಮಂದಿರಗಳಿಗೆ ಭೇಟಿ ಕೊಡುತ್ತಾರೆ. ಬೋಧಿವೃಕ್ಷದ ಬಳಿ ಮಹಾಬೋಧಿ ಮಂದಿರವನ್ನು ರಾಜ ಅಶೋಕ ಕಟ್ಟಿದ್ದರೂ ಬೌದ್ಧ ಧರ್ಮದ ವಿರುದ್ಧ ಶಂಕರಾಚಾರ್ಯರ ನೇತೃತ್ವದಲ್ಲಿ ನಡೆದ ಆಂದೋಲನದಿಂದಾಗಿ ಅದು ಪಾಳು ಬಿದ್ದಿತು. ಬೌದ್ಧರು ಚೆಲ್ಲಾಪಿಲ್ಲಿಯಾದರು. 1861ರಲ್ಲಿ ಬ್ರಿಟಿಷ್ ಪುರಾತತ್ವ ಇಲಾಖೆಯು ಮಹಾಬೋಧಿ ಆವರಣದಲ್ಲಿ ನಡೆಸಿದ ಉತ್ಖನನದ ಬಳಿಕ ಮಂದಿರ ಮತ್ತೆ ಚಲಾವಣೆಗೆ ಬಂತು. ಆದರೆ ಬೌದ್ಧ ನಿರ್ಮೂಲನ ಚಳವಳಿಯಿಂದ ಪ್ರಭಾವಿತರಾದ ಕೆಲವರು ಈ ಬೌದ್ಧ ಮಂದಿರ ಆವರಣದಲ್ಲಿ ಶಿವ ದೇವಾಲಯವನ್ನು ಸ್ಥಾಪಿಸಿದರು. 1949ರಲ್ಲಿ ಬಿಹಾರ ಸರಕಾರವು ಬುದ್ಧಗಯಾ ಟೆಂಪಲ್ ಕಾಯ್ದೆಯನ್ನು ಜಾರಿಗೆ ತಂದು ಮಂದಿರದ ಆವರಣವನ್ನು ವಶಕ್ಕೆ ತೆಗೆದುಕೊಂಡಾಗ ಹಿಂದೂಗಳು ತಗಾದೆ ತೆಗೆದಿದ್ದರು. ಮಂದಿರ ವ್ಯವಹಾರದಲ್ಲಿ ತಮಗೂ ಹಕ್ಕಿದೆಯೆಂದು ವಾದಿಸಿದ್ದರು. ಆದ್ದರಿಂದ ಸರಕಾರವು ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ 5 ಮಂದಿ ಹಿಂದೂಗಳು ಮತ್ತು 4 ಮಂದಿ ಬೌದ್ಧರನ್ನೊಳಗೊಂಡ ಸಮಿತಿಯನ್ನು ರಚಿಸಿ ಬುದ್ಧಗಯಾ ಆವರಣದ ವ್ಯವಹಾರವನ್ನು ಅದರ ಕೈಗೆ ಒಪ್ಪಿಸಿತು. ಆದರೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗವು ಮಂದಿರ ಆವರಣದ ನಿರ್ವಹಣೆಯ ಹೊಣೆಯನ್ನು ಬೌದ್ಧರಿಗೆ ನೀಡಬೇಕೆಂದು ಶಿಫಾರಸು ಮಾಡಿತು. ಇದನ್ನು ಹಿಂದೂಗಳು ವಿರೋಧಿಸಿದರು. ಬೌದ್ಧರು ಬೆಂಬಲಿಸಿದರು. ಈ ವಿವಾದ ಇನ್ನೂ ಬಗೆಹರಿದಿಲ್ಲ.
   ನಿಜವಾಗಿ, ಬುದ್ಧಗಯಾದ ಬಾಂಬ್ ಸ್ಫೋಟವನ್ನು ಯಾರು ನಡೆಸಿರಬಹುದು ಎಂದು ಖಚಿತವಾಗಿ ಹೇಳುವುದಕ್ಕಿಂತ ಮೊದಲು ಇಂಥ ಸಾಧ್ಯತೆಗಳ ಸುತ್ತವೂ ಗಮನ ಹರಿಸಬೇಕಿದೆ. ಉಗ್ರರು ಬಾಂಬ್ ಸ್ಫೋಟಿಸಿದ್ದು ಬೆಳಗ್ಗಿನ ಪ್ರಾರ್ಥನೆ ಮುಗಿದು ಸುಮಾರು ನೂರರಷ್ಟಿದ್ದ ಭಕ್ತರು ಬಹುತೇಕ ಚದುರಿದ ಬಳಿಕ. ಹಾಗಾದರೆ ಉಗ್ರರ ಉದ್ದೇಶವೇನು? ಮಾಧ್ಯಮಗಳು ಹೇಳುವಂತೆ, ರೋಹಿಂಗ್ಯನ್ ಮುಸ್ಲಿಮರ ಮೇಲಿನ ದಾಳಿಗೆ ಪ್ರತೀಕಾರವಾಗಿ ಈ ಸ್ಫೋಟ ನಡೆದಿದೆಯೆಂದಾದರೆ ಅಕ್ಟೋಬರ್ ಮತ್ತು ಮಾರ್ಚ್ ತಿಂಗಳುಗಳ  ಮಧ್ಯೆ ಸ್ಫೋಟ ನಡೆಯಬೇಕಿತ್ತು. ಯಾಕೆಂದರೆ ಬೌದ್ಧರು ಸಾವಿರಾರು ಸಂಖ್ಯೆಯಲ್ಲಿ ಸೇರುವುದು ಈ ತಿಂಗಳಲ್ಲೇ. ಹೀಗಿರುವಾಗ ಈ ಬಾಂಬುಗಳಿಗೆ ರೋಹಿಂಗ್ಯನ್ ಬಣ್ಣವನ್ನು ಬಳಿದು, ಹಿಂದೂ-ಬೌದ್ಧಮಯಗೊಳಿಸುವುದಾದರೂ ಏಕೆ? ರೋಹಿಂಗ್ಯನ್ ಹೊರತಾದ ಇತರ ಸಾಧ್ಯತೆಗಳ ಬಗ್ಗೆಯೇಕೆ ಮಾಧ್ಯಮಗಳು ಚರ್ಚಿಸುತ್ತಿಲ್ಲ? ಅಂದಹಾಗೆ, ಮಾಧ್ಯಮಗಳು ಹೇಳುತ್ತಿರುವ ಇಂಡಿಯನ್ ಮುಜಾಹಿದೀನ್ ಅಂತೂ ಮನುಷ್ಯರನ್ನು ಕೊಲ್ಲುವಲ್ಲಿ ಸಾಕಷ್ಟು ಅನುಭವ ಇರುವ ಸಂಘಟನೆಯಾಗಿ ಈ ದೇಶದಲ್ಲಿ ಗುರುತಿಸಿಕೊಂಡಿದೆ. ಅಂಥ ಚತುರ ಸಂಘಟನೆಯೊಂದು ಬುದ್ಧಗಯಾದಲ್ಲಿ ಯಾರಿಗೂ ತೊಂದರೆ ಉಂಟು ಮಾಡಲಾರದ ಬಾಂಬು ಸ್ಫೋಟವೊಂದನ್ನು ನಡೆಸಿದೆಯೆಂದು ನಂಬುವುದಾದರೂ ಹೇಗೆ? ಅದು ಮನುಷ್ಯರ ಬಗ್ಗೆ ಈ ಮಟ್ಟದ ಕರುಣೆಯನ್ನು ಯಾವಾಗಿನಿಂದ ಬೆಳೆಸಿಕೊಂಡಿದೆ?
   ಒಂದು ರೀತಿಯಲ್ಲಿ, ಇಂಡಿಯನ್ ಮುಜಾಹಿದೀನ್ ಎಂಬ- ಹೆಸರು, ವಿಳಾಸ ಗೊತ್ತಿಲ್ಲದ ಸಂಘಟನೆಯ ಮೇಲೆ ಈ ವರೆಗೆ ಇರುವ ಆರೋಪಗಳಿಗೆ ಹೋಲಿಸಿದರೆ ಬುದ್ಧಗಯಾದಲ್ಲಿ ನಡೆದ ಸ್ಪೋಟ ಯಾವ ರೀತಿಯಲ್ಲೂ  ತಾಳೆಯಾಗುತ್ತಿಲ್ಲ. ಸ್ಫೋಟದ ಸಮಯ ಮತ್ತು ಹಾನಿಯನ್ನು ಪರಿಗಣಿಸಿದರೆ ಈ ಬಾಂಬುಗಳಿಗೆ ಮಾಧ್ಯಮಗಳು ಹೇಳದಂಥ ಇನ್ನಾವುದೋ ಉದ್ದೇಶ ಇರುವಂತಿದೆ. ಆದರೆ ಅದನ್ನು ಪತ್ತೆ ಹಚ್ಚುವುದಕ್ಕೆ ಇಲ್ಲಿನ ರಾಜಕೀಯ ಪಕ್ಷಗಳು ತನಿಖಾ ಸಂಸ್ಥೆಗಳಿಗೆ ಎಷ್ಟಂಶ ಸ್ವಾತಂತ್ರ್ಯವನ್ನು ಕೊಡಬಲ್ಲವು? ಬಿಜೆಪಿ ಈಗಾಗಲೇ ಬಿಹಾರ್ ಬಂದ್ ನಡೆಸಿದೆ. ನಿತೀಶ್ ಕುಮಾರ್‍ರ ವೈಫಲ್ಯಕ್ಕೆ ಪುರಾವೆಯಾಗಿ ಈ ಸ್ಫೋಟವನ್ನು ಬಿಂಬಿಸಲು ಅವರ ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ. ಇಂಥ ಹೊತ್ತಲ್ಲಿ ಬುದ್ಧಗಯಾವನ್ನು ಬೆದರಿಸಿದ ನಿಜವಾದ ಅಪರಾಧಿಗಳು ಶಿಕ್ಷೆಗೊಳಪಟ್ಟಾರೆಂದು ಹೇಗೆ ನಂಬುವುದು? ವಿರೋಧಿಗಳ ಬಾಯಿ ಮುಚ್ಚಿಸಬೇಕಾದರೆ ನಿತೀಶ್ ಕುಮಾರ್‍ರಿಗೆ ತಕ್ಷಣ ಕೆಲವು ಭಯೋತ್ಪಾದಕರ ಅಗತ್ಯವಿದೆ. ಬಿಜೆಪಿಗಂತೂ ಆ ಭಯೋತ್ಪಾದಕರು ಮುಸ್ಲಿಮರೇ ಆಗಿರಬೇಕೆಂಬ ಹಠವಿದೆ. ಈ ಹಠ ಮತ್ತು ಅಗತ್ಯಗಳ ನಡುವೆ ನಿಜವಾದ ಉಗ್ರರು ತಪ್ಪಿಸಿಕೊಳ್ಳುವ ಸಾಧ್ಯತೆ ಖಂಡಿತ ಇದೆ. ಯಾರನ್ನಾದರೂ ಎನ್‍ಕೌಂಟರ್‍ನಲ್ಲಿ ಸಾಯಿಸಿ ಅವರಿಗೆ ಬುದ್ಧಗಯಾದ ಬಾಂಬನ್ನು ಅಂಟಿಸಿಬಿಡುವುದಕ್ಕೂ ಅವಕಾಶ ಇದೆ. ಆದ್ದರಿಂದ ರಾಜಕೀಯ ಲಾಭ-ನಷ್ಟಗಳಿಗೆ ಸಿಲುಕದೇ ಬುದ್ಧಗಯಾ ತನಿಖೆಗೆ ಒಳಪಡಲಿ. ಅಪರಾಧಿಗಳು ತಮ್ಮ ‘ಧರ್ಮ'ದ ಕಾರಣಕ್ಕಾಗಿ ಯಾರ ಕೃಪೆಗೂ ಒಳಗಾಗದಿರಲಿ.