Monday, 26 August 2013

ಮನ ಕದಡುವ ಮನರಂಜನೆ ಮತ್ತು ಅತ್ಯಾಚಾರ

   ಅತ್ಯಾಚಾರ ಪ್ರಕರಣಗಳನ್ನು ಪ್ರಮುಖ ಟಿ.ವಿ. ಮತ್ತು ಪತ್ರಿಕೆಗಳು ಗಂಭೀರ ಚರ್ಚೆಗೆ ಎತ್ತಿಕೊಳ್ಳ ಬೇಕಾದರೆ ಅತ್ಯಾಚಾರಕ್ಕೀಡಾದವರು ‘ಉನ್ನತ ವಲಯಕ್ಕೆ’ ಸೇರಬೇಕಾದುದು ಕಡ್ಡಾಯವೇ ಎಂಬ ಪ್ರಶ್ನೆಯು ದೆಹಲಿಯ ‘ನಿರ್ಭಯ' ಪ್ರಕರಣದ ಜೊತೆಜೊತೆಗೇ ಹುಟ್ಟಿಕೊಂಡಿದ್ದರೂ ಅತ್ಯಾಚಾರವೆಂಬ ಕ್ರೌರ್ಯವನ್ನು ಚರ್ಚೆಗೆತ್ತಿಕೊಳ್ಳುವುದನ್ನೇ ತಡೆಯುವಷ್ಟು ಇಂಥ ಪ್ರಶ್ನೆಗಳು ಮಹತ್ವಪೂರ್ಣ ಆಗಬಾರದು. ದೆಹಲಿಯಲ್ಲಿ ‘ನಿರ್ಭಯ'ಳ ಮೇಲೆ ನಡೆದ ಅತ್ಯಾಚಾರ ಘಟನೆಯು ದೇಶದಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಮಾಧ್ಯಮಗಳು ವಾರಗಟ್ಟಲೆ ಚರ್ಚಿಸಿದುವು. ಪ್ರಕರಣದ ವಿರುದ್ಧ ಈ ದೇಶದಲ್ಲಿ ಕಾಣಿಸಿಕೊಂಡ ಆಕ್ರೋಶ ಎಷ್ಟು ಪ್ರಬಲವಾಗಿತ್ತೆಂದರೆ ಸರಕಾರ ಹೊಸ ಕಾನೂನನ್ನೇ ರೂಪಿಸಲು ಮುಂದಾಯಿತು. 'ನಿರ್ಭಯ' ನಿಧಿಯನ್ನು ಸ್ಥಾಪಿಸಿತು. ಹಾಗಂತ, ಅತ್ಯಾಚಾರವನ್ನು ತಡೆಗಟ್ಟುವುದಕ್ಕೆ ಇಂಥ ಕ್ರಮಗಳು ಸಂಪೂರ್ಣ ಯಶಸ್ವಿಯಾದವು ಎಂದಲ್ಲ. ಆ ಬಳಿಕವೂ ಪ್ರತಿನಿತ್ಯ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇದ್ದುವು. ಆದರೆ, ಹೀಗೆ ಅತ್ಯಾಚಾರಕ್ಕೀಡಾಗುವ ಯುವತಿಯರು 'ನಿರ್ಭಯ'ಳಂತೆ 'ಉನ್ನತ ವಲಯದಲ್ಲಿ' ಗುರುತಿಸಿಕೊಳ್ಳದ ಮತ್ತು ದೆಹಲಿ, ಮುಂಬೈ, ಕೊಲ್ಕತ್ತಾ.. ಮುಂತಾದ ಮಹಾ ನಗರಗಳಲ್ಲಿ ವಾಸಿಸದವರಾಗಿದ್ದುದರಿಂದಲೋ ಏನೋ ಮಾಧ್ಯಮಗಳ ಅವಕೃಪೆಗಳು ಒಳಗಾದರು. ಸಾರ್ವಜನಿಕವಾಗಿ ಒಂದು ಬಗೆಯ ಅಸಹನೆ, ಅನುಮಾನ ಸೃಷ್ಟಿಯಾದದ್ದೇ ಇಲ್ಲಿ. ಅತ್ಯಾಚಾರಕ್ಕೀಡಾದವರ ಹುದ್ದೆ, ಕಲಿಕೆ, ವಾಸಸ್ಥಳವನ್ನು ನೋಡಿಕೊಂಡು ಘಟನೆಯನ್ನು ಗಂಭೀರ ಅಥವಾ ಸಾಮಾನ್ಯ ಎಂದು ವಿಭಜಿಸುವುದು ಸರಿಯೇ, ಅತ್ಯಾಚಾರ ಎಲ್ಲಿ ನಡೆದರೂ, ಯಾರ ಮೇಲೆ ನಡೆದರೂ ಗಂಭೀರವೇ. ಮತ್ತೇಕೆ ಮಾಧ್ಯಮಗಳು ಅತ್ಯಾಚಾರ ಪ್ರಕರಣಗಳನ್ನು ಚರ್ಚೆಗೊಳಪಡಿಸುವಾಗ ಈ ಸೂಕ್ಷ್ಮ ತೆಯನ್ನು ಪಾಲಿಸುತ್ತಿಲ್ಲ.. ಎಂದು ಮುಂತಾಗಿ ಅನೇಕಾರು ಪ್ರಶ್ನೆಗಳು ಸಾರ್ವಜನಿಕವಾಗಿ ಕೇಳಿ ಬಂದುವು. ಇದೀಗ ಮುಂಬೈಯಲ್ಲಿ ಪತ್ರಕರ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಮಾಧ್ಯಮಗಳು ಅದಕ್ಕೆ ಕೊಟ್ಟ ಮಹತ್ವವು ಇಂಥ ಪ್ರಶ್ನೆಗಳಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದೆ.
   ಅತ್ಯಾಚಾರ ಎಂಬ ನಾಲ್ಕಕ್ಷ ರಕ್ಕೆ ಓರ್ವ ಹೆಣ್ಣು ಮಗಳ ಇಡೀ ಬದುಕಿನೊಂದಿಗೆ ಸಂಬಂಧ ಇದೆ. ಅತ್ಯಾಚಾರಿಗಳು ತಪ್ಪಿಸಿಕೊಳ್ಳುವಷ್ಟು ಸುಲಭವಾಗಿ ಓರ್ವ ಹೆಣ್ಣು ಮಗಳು ಆ ಆಘಾತದ ಗಾಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದೈಹಿಕ ಗಾಯ ಒಂದೆಡೆಯಾದರೆ ಮಾನಸಿಕ ಗಾಯ ಇನ್ನೊಂದೆಡೆ. ಬದುಕನ್ನು ಮತ್ತೆ ಮೊದಲಿನಂತೆ ಅನುಭವಿಸಲು ಹೊರಡುವಾಗ ಹತ್ತು-ಹಲವು ಸಮಸ್ಯೆಗಳು ಆಕೆಗೆ ಎದುರಾಗುತ್ತವೆ. ಅತ್ಯಾಚಾರಿಗಳ ಕಡೆಯಿಂದ ಬೆದರಿಕೆ, ಒತ್ತಡಗಳು ಬರುತ್ತವೆ. ಸಮಾಜ ವಿಚಿತ್ರವಾಗಿ ನೋಡುವುದಕ್ಕೂ ಅವಕಾಶ ಒದಗುತ್ತದೆ. ಬಹುಶಃ ಹೆಸರನ್ನು ಗೌಪ್ಯವಾಗಿಟ್ಟುಕೊಂಡು ಘಟನೆಯನ್ನು ಮಾತ್ರ ಬಹಿರಂಗಪಡಿಸುವ ಅಪರೂಪದ ಪ್ರಕರಣಗಳಲ್ಲಿ ಅತ್ಯಾಚಾರವೂ ಒಂದು. ಯಾಕೆ ಹೀಗೆ ಅಂದರೆ, ಅತ್ಯಾಚಾರ ಎಂಬುದು ಕೇವಲ ಒಂದು ಅಪರಾಧವಷ್ಟೇ ಅಲ್ಲ, ಅದರೊಂದಿಗೆ ಹೆಣ್ಣಿನ ಗೌರವ, ಮಾನ, ಪ್ರತಿಷ್ಠೆ.. ಎಲ್ಲವೂ ಒಳಗೊಂಡಿದೆ. ನಿಜವಾಗಿ, ‘ನಿರ್ಭಯ' ಪ್ರಕರಣದ ಬಳಿಕ ದೇಶದಲ್ಲಿ ಕಾಣಿಸಿಕೊಂಡ ಪ್ರತಿಭಟನೆ, ಆಕ್ರೋಶವನ್ನು ಪರಿಗಣಿಸಿದರೆ, ಖಂಡಿತ ಅತ್ಯಾಚಾರ ಪ್ರಕರಣಗಳಲ್ಲಿ ಭಾರೀ ಕುಸಿತ ಉಂಟಾಗಬೇಕಿತ್ತು. ಅತ್ಯಾಚಾರಿಗಳನ್ನು ಕಠಿಣವಾಗಿ ದಂಡಿಸುವ ಕಾಯ್ದೆಯನ್ನು ನೋಡಿಯಾದರೂ ಅತ್ಯಾಚಾರಿ ಮನಸ್ಥಿತಿಯ ಮಂದಿಯಲ್ಲಿ ಭೀತಿ ಮೂಡಬೇಕಿತ್ತು. ಆದರೆ ಇಂಥ ಸುಳಿವುಗಳೇನೂ ಕಾಣಿಸುತ್ತಿಲ್ಲ. ಪತ್ರಕರ್ತೆಯ ಮೇಲೆ ಅತ್ಯಾಚಾರ ನಡೆದ ಮರುದಿನವೇ ಜಾರ್ಖಂಡ್‍ನಲ್ಲಿ ಮಹಿಳಾ ಪೊಲೀಸ್ ಪೇದೆಯ ಮೇಲೆ ಅತ್ಯಾಚಾರವಾಗಿದೆ. ಇವೆಲ್ಲ ಕೊಡುವ ಸಂದೇಶವೇನು? ಶಿಕ್ಷೆಯ ಭೀತಿ ಸಮಾಜದಿಂದ ಹೊರಟು ಹೋಗಿದೆ ಎಂಬುದನ್ನೇ ಅಲ್ಲವೇ?
   ನಿಜವಾಗಿ, ಅತ್ಯಾಚಾರ ಪ್ರಕರಣಗಳನ್ನು ಗಂಭೀರ ಚರ್ಚಾ ವಸ್ತುವಾಗಿ ಎತ್ತಿಕೊಳ್ಳುವ ಮಾಧ್ಯಮಗಳಲ್ಲಿ ಹೆಣ್ಣು ಭಾರೀ ಗೌರವಯುತವಾಗಿಯೇನೂ ಕಾಣಿಸಿಕೊಳ್ಳುತ್ತಿಲ್ಲ. ಆಕೆಯ ಉಡುಪು, ವರ್ತನೆ, ಆಂಗಿಕ ಭಾಷೆ.. ಎಲ್ಲವೂ ಸಭ್ಯತನದ ಮೇರೆಯೊಳಗಿದೆ ಎಂದು ಧೈರ್ಯದಿಂದ ಹೇಳುವ ವಾತಾವರಣವೂ ಇಲ್ಲ. ಮನರಂಜನೆಯ ಹೆಸರಲ್ಲಿ ಸಿನಿಮಾಗಳನ್ನು ಸಮರ್ಥಿಸಿಕೊಳ್ಳುವುದು ಸುಲಭ. ಹಾಗಂತ ವೀಕ್ಷಕರು ಕೇವಲ ಮನರಂಜನೆಯಾಗಿಯಷ್ಟೇ ಸಿನಿಮಾ, ಟಿ.ವಿ. ಕಾರ್ಯಕ್ರಮಗಳನ್ನು ಪರಿಗಣಿಸಬೇಕೆಂದಿಲ್ಲವಲ್ಲ. ಎಲ್ಲರೂ ಒಂದು ದೃಶ್ಯವನ್ನು ಒಂದೇ ಬಗೆಯಲ್ಲಿ ಅನುಭವಿಸುತ್ತಾರಾ? ಬೇರೆ ಬೇರೆ ವೀಕ್ಷಕರ ಮೇಲೆ ಅದು ಭಿನ್ನ ಭಿನ್ನ ಪ್ರಭಾವಗಳನ್ನು ಬೀರುವುದಕ್ಕೂ  ಅವಕಾಶ ಇದೆಯಲ್ಲವೇ? ವೀಕ್ಷಕನು ಬೆಳೆದು ಬಂದ ಪರಿಸರ, ಸಂಸ್ಕøತಿ ,ಜ್ಞಾನವನ್ನು ಹೊಂದಿಕೊಂಡು ಒಂದು ದೃಶ್ಯವೋ ಒಂದು ಡಯಲಾಗೋ ವ್ಯಾಖ್ಯಾನವನ್ನು ಪಡೆಯುತ್ತದೆ. ಹೀಗಿರುವಾಗ, ಸಿನಿಮಾ ಕ್ಷೇತ್ರವೂ ಸೇರಿದಂತೆ ಮಾಧ್ಯಮ ರಂಗವು ತನ್ನ ಕಾರ್ಯಕ್ರಮಗಳನ್ನು ಕೇವಲ ಮನರಂಜನೆಯೆಂದು ಸಮರ್ಥಿಸಿಕೊಳ್ಳುತ್ತಾ ಲೈಂಗಿಕ ದೌರ್ಜನ್ಯಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳುವುದನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳಬಹುದು?
   ಆಧುನಿಕ ಜೀವನ ಶೈಲಿಯು ಸ್ವಚ್ಛಂದತೆಯನ್ನು ಹೆಚ್ಚೆಚ್ಚು ಪ್ರೋತ್ಸಾಹಿಸುತ್ತಿದೆ. ಈ ಹಿಂದೆ ಯಾವುದೆಲ್ಲ ಕಪ್ಪು ಪಟ್ಟಿಯಲ್ಲಿದ್ದುವೋ ಅವೆಲ್ಲ ನಿಧಾನಕ್ಕೆ ಬಿಳಿ ಪಟ್ಟಿಯಲ್ಲಿ ಜಾಗ ಪಡಕೊಳ್ಳುತ್ತಿದೆ. ಮದ್ಯಪಾನವು ಇವತ್ತು ವ್ಯಕ್ತಿಯ ಸ್ಥಾನಮಾನವನ್ನು ಹೇಳುವ ಮಾನದಂಡವಾಗಿ ಪರಿವರ್ತನೆಯಾಗಿದೆ. ನೈತಿಕತೆ, ಪ್ರಾಮಾಣಿಕತೆ ಮುಂತಾದ ಪದಗಳಿಗಿದ್ದ ‘ತೂಕ' ಕಡಿಮೆಯಾಗುತ್ತಿದೆ. ಬದುಕನ್ನು ಅನುಭವಿಸುವ, ನಿಯಂತ್ರಣಗಳನ್ನೆಲ್ಲ ದಾಟಿ ಬದುಕುವ ಮುಕ್ತ ಜೀವನ ಕ್ರಮಗಳು ಆಧುನಿಕ ತಲೆಮಾರನ್ನು ತೀವ್ರವಾಗಿ ಆಕರ್ಷಿಸುತ್ತಿವೆ. ಇಂಥ ಹೊತ್ತಲ್ಲಿ, ಉನ್ನತ ಶಿಕ್ಷಣ ಪಡೆಯದ, ಗೆಳತಿಯರನ್ನು ಹೊಂದಲು ವಿಫಲವಾದ ಸಾಮಾನ್ಯ ವರ್ಗದಲ್ಲಿ ಅಸಹನೆ ಮಡುಗಟ್ಟುವುದಕ್ಕೆ ಅವಕಾಶ ಇದೆ. ತಮಗೆ ಅಸಾಧ್ಯವಾದದ್ದನ್ನು ಇತರರು ಅನುಭವಿಸುತ್ತಿದ್ದಾರೆಂಬ ಅಸೂಯೆಯು ಅಂತಿಮವಾಗಿ ಅವರನ್ನು ತಪ್ಪು ಕೃತ್ಯಕ್ಕೆ ಪ್ರೇರೇಪಿಸುತ್ತಿರಲಾರದು ಎಂದು ಹೇಳಲು ಸಾಧ್ಯವಿಲ್ಲ. ಬಹುಶಃ ಮದ್ಯಪಾನವು ಇಂಥ ಅಪಾಯಕಾರಿ ಸಾಹಸಕ್ಕೆ ಧೈರ್ಯ ಕೊಡುತ್ತಿರಲೂ ಬಹುದು.
   ಅತ್ಯಾಚಾರ ರಹಿತ ಸಮಾಜವೊಂದನ್ನು ಕಟ್ಟಬೇಕಾದರೆ ಮೊಟ್ಟಮೊದಲು ಅತ್ಯಾಚಾರಕ್ಕೆ ಪ್ರಚೋ
ದಕವಾಗುವ ಸರ್ವ ಚಟುವಟಿಕೆಗಳನ್ನೂ ನಿಯಂತ್ರಿಸಬೇಕಾದ ಅಗತ್ಯವಿದೆ. ಮನುಷ್ಯನನ್ನು ಅಮಲಲ್ಲಿ ತೇಲಿಸುವ ಮದ್ಯಪಾನಕ್ಕೆ ಸಂಪೂರ್ಣ ನಿಷೇಧ ವಿಧಿಸಬೇಕಾಗಿದೆ. ಅತ್ಯಾಚಾರ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸುವುದಕ್ಕಾಗಿ ಪ್ರತ್ಯೇಕ ನ್ಯಾಯ ಮಂಡಳಿಗಳನ್ನು ಸ್ಥಾಪಿಸಿ, ಪ್ರತಿದಿನ ವಿಚಾರಣೆ ನಡೆಯುವಂತೆ ಮತ್ತು ಅತಿ ಶೀಘ್ರವಾಗಿ ತನಿಖೆ, ಆರೋಪ ಪಟ್ಟಿ, ಸಾಕ್ಷಿಗಳ ವಿಚಾರಣೆ ನಡೆಸಿ, ಅಂತಿಮ ತೀರ್ಪು ನೀಡುವಂತೆ ನೋಡಿಕೊಳ್ಳಬೇಕಾಗಿದೆ. ಯಾಕೆಂದರೆ ಅತ್ಯಾಚಾರವೆಂಬುದು ಕಳ್ಳತನ, ಕೊಲೆಯಂತೆ ಖಂಡಿತ ಅಲ್ಲ. ಒಂದು ಸಮಾಜದ ಆರೋಗ್ಯವನ್ನು ಅಳೆಯುವ ಮಾನದಂಡವೇ ಅಲ್ಲಿಯ ಮಹಿಳೆಯರು. ಅವರ ಆರೋಗ್ಯ ಅಪಾಯಕಾರಿ ಮಟ್ಟದಲ್ಲಿದ್ದರೆ ಆ ಸಮಾಜ ಪತನದ ಹಾದಿಯಲ್ಲಿದೆಯೆಂದೇ ಅರ್ಥ. ಆದ್ದರಿಂದ ಮಹಿಳೆಯರನ್ನು ರಕ್ಷಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ.

Tuesday, 20 August 2013

ಪ್ರಜಾತಂತ್ರವಾದಿಗಳ ಮುಖವಾಡವನ್ನು ಕಳಚಿಟ್ಟ ಬ್ರದರ್‍ಹುಡ್

   ಪ್ರಜಾತಂತ್ರದ ಬಗ್ಗೆ ಭಾರೀ ಕಾಳಜಿ ವ್ಯಕ್ತಪಡಿಸಿ ಆಗಾಗ ಹೇಳಿಕೆಗಳನ್ನು ಕೊಡುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳ ಕಪಟ ಮುಖವನ್ನು ಈಜಿಪ್ಟ್ ನ ಮುಸ್ಲಿಮ್ ಬ್ರದರ್‍ಹುಡ್ ಮತ್ತೊಮ್ಮೆ ತೆರೆದಿಟ್ಟಿದೆ. ಈ ಮುಖ ಎಷ್ಟು ಅಪಾಯಕಾರಿಯಾದದ್ದೆಂದರೆ ಅದಕ್ಕೆ ಪಾಪ ಭಾವನೆಯೂ ಇಲ್ಲ, ನಾಚಿಕೆಯೂ ಇಲ್ಲ. ಚೀನಾದಲ್ಲಿ, ಮ್ಯಾನ್ಮಾರ್, ಸಿರಿಯಾಗಳಲ್ಲಿ ನಡೆದ ಪ್ರಜಾ ಚಳವಳಿಗಳನ್ನು ಬೆಂಬಲಿಸಿದ್ದು ಅಮೇರಿಕವೇ. ಉತ್ತರ ಕೊರಿಯದ ಕಮ್ಯುನಿಸ್ಟ್ ಸೇನಾಡಳಿತವನ್ನು ಕಿತ್ತು ಹಾಕುವುದಕ್ಕಾಗಿ ನಿರ್ಬಂಧಗಳನ್ನು ಹೇರುತ್ತಿರುವುದೂ ಅಮೇರಿಕವೇ. ಇಂಥ ರಾಷ್ಟ್ರವೊಂದು ಈಜಿಪ್ಟ್ ಸೇನಾಡಳಿತವನ್ನು ಬೆಂಬಲಿಸುವ ಧಾಟಿಯಲ್ಲಿ ಮಾತಾಡುತ್ತಿರುವುದಕ್ಕೆ ಏನೆನ್ನಬೇಕು? ಈಜಿಪ್ಟ್ ಗೆ ತಾನು ಪ್ರತಿ ವರ್ಷ ಕೊಡುತ್ತಿರುವ 1.3 ಬಿಲಿಯನ್ ಡಾಲರ್ ಸೇನಾ ನೆರವನ್ನು ಕಡಿತಗೊಳಿಸಿದರೆ ಅದನ್ನು ಸೌದಿ ಅರೇಬಿಯ ಮತ್ತು ಯುಎಇ ತುಂಬುವ ಸಾಧ್ಯತೆ ಇರುವುದರಿಂದ ತಾನು ನೆರವು ಕಡಿತಗೊಳಿಸಲಾರೆ (ದಿ ಹಿಂದೂ, ಆಗಸ್ಟ್ 17) ಎಂದಿರುವುದನ್ನು ಏನೆಂದು ವ್ಯಾಖ್ಯಾನಿಸಬೇಕು? ಅಮೇರಿಕ ಇಷ್ಟೊಂದು ದುರ್ಬಲವಾದದ್ದು ಯಾವಾಗಿನಿಂದ?
   ಇರಾನ್‍ನ ಅಣು ಯೋಜನೆಯನ್ನು ಪ್ರತಿಭಟಿಸಿ ಅಮೇರಿಕ ಹತ್ತಾರು ಬಾರಿ ಮಾತಾಡಿದೆ. ಪ್ರಾದೇಶಿಕ ಭದ್ರತೆಗೆ ಇರಾನ್‍ನ ಅಣು ಯೋಜನೆ ಎಷ್ಟು ದೊಡ್ಡ ಅಪಾಯವೆಂಬುದನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅದು ವಿವರಿಸುತ್ತಲೇ ಬಂದಿದೆ. ಅದರ ಮೇಲೆ ಹಲವು ಸುತ್ತಿನ ನಿರ್ಬಂಧಗಳನ್ನೂ ಈಗಾಗಲೇ ಹೊರಿಸಿದೆ. ಅಷ್ಟೇ ಅಲ್ಲ, ಇರಾನ್‍ನೊಂದಿಗೆ ಯಾರೂ ಸಂಬಂಧ ಬೆಳೆಸಬಾರದೆಂದೂ ವಿಶ್ವ ರಾಷ್ಟ್ರಗಳಿಗೆ ತಾಕೀತು ಮಾಡಿದೆ. ಇಷ್ಟೊಂದು ಸಾಮರ್ಥ್ಯ  ಇರುವ ಅಮೇರಿಕವು ಸೌದಿ ಅರೇಬಿಯದ ಮುಂದೆ ಈ ಮಟ್ಟದಲ್ಲಿ ತಲೆ ತಗ್ಗಿಸುತ್ತಿರುವುದಕ್ಕೆ ಕಾರಣವೇನು? ಇರಾನ್‍ನ ಅಣು ಯೋಜನೆಯು ವಲಯದ ಭದ್ರತೆಗೆ ಅಪಾಯಕಾರಿ ಎಂದಾದರೆ, ಈಜಿಪ್ಟ್ ಸೇನಾಡಳಿತವನ್ನು ಬೆಂಬಲಿಸುವ ಸೌದಿ ಅರೇಬಿಯವು ವಲಯದ ಪ್ರಜಾ ಚಳವಳಿಗಳಿಗೆ  ಅಪಾಯಕಾರಿಯೇ ಅಲ್ಲವೇ? ಇರಾನ್‍ನ ವಿರುದ್ಧ ಕಠಿಣ ನಿಲುವು ತಳೆದಂತೆಯೇ ಸೌದಿಯ ವಿರುದ್ಧವೂ ತಳೆಯಲು ಅಮೇರಿಕಕ್ಕೆ ಏನು ತೊಂದರೆಯಿದೆ?
   ನಿಜವಾಗಿ, ಅಮೇರಿಕವು ಈಜಿಪ್ಟ್ ಗೆ ಒದಗಿಸುತ್ತಿರುವ ನೆರವಿಗೂ ಸೌದಿ ಮತ್ತು ಯುಎಇ ಒದಗಿಸುತ್ತಿರುವ ನೆರವಿಗೂ ತುಂಬಾ ವ್ಯತ್ಯಾಸವಿದೆ. ಅಮೇರಿಕದ ನೆರವು ನೇರವಾಗಿ ತಲುಪುವುದು ಮಿಲಿಟರಿ ಚಟುವಟಿಕೆಗಳಿಗೆ. ಈಜಿಪ್ಟ್ ಸೇನೆಯು ಇವತ್ತು ಪ್ರತಿಭಟನೆಯನ್ನು ಬುಲ್ಡೋಜರ್ ಹರಿಸಿ ದಮನಿಸಿದ್ದರೆ, ಆ ಬುಲ್ಡೋಜರನ್ನು ಒದಗಿಸಿದ್ದು ಅಮೇರಿಕ. ಸೇನಾ ಸಮವಸ್ತ್ರ, ಆಯುಧಗಳು, ಮದ್ದುಗುಂಡುಗಳು ಎಲ್ಲವೂ ಆಮದಾಗಿರುವುದು ಅಮೇರಿಕದಿಂದಲೇ. ಆದರೆ ಸೌದಿ ಅಥವಾ ಯುಎಇಯ ನೆರವು ನೇರವಾಗಿ ಮಿಲಿಟರಿಗೆ ಸಂಬಂಧಿಸಿದ್ದಲ್ಲ. ಮಿಲಿಟರಿಗೆ ಬಳಸಿಕೊಳ್ಳುವ ಅವಕಾಶ ಇದ್ದರೂ ಈಜಿಪ್ಟ್ ನ ಆರ್ಥಿಕ ಬೇಡಿಕೆಯನ್ನು ಪೂರೈಸುವುದಕ್ಕೆ ಇದನ್ನು ನೀಡುತ್ತಿರುವುದಾಗಿ ಅವು ಬಿಂಬಿಸಿಕೊಳ್ಳುತ್ತಿವೆ. ಅದೇನೇ ಇದ್ದರೂ, ಒಂದು ಪ್ರಜಾತಂತ್ರ ಸರಕಾರವನ್ನು ಪದಚ್ಯುತಗೊಳಿಸಿದ ಅಪರಾಧವನ್ನು ಸೇನೆ ಹೊತ್ತು ಕೊಂಡಿರುವಾಗ ಅದಕ್ಕೆ ಬೆಂಬಲವಾಗಿ ನಿಲ್ಲುವುದನ್ನು ಜಗತ್ತೇಕೆ ಪ್ರಶ್ನಿಸುತ್ತಿಲ್ಲ? ಐದಾರು ತಿಂಗಳುಗಳ ಹಿಂದೆ ಮಾಲಿ ಎಂಬ ಪುಟ್ಟ ರಾಷ್ಟ್ರದ ಪ್ರಜಾ ಸರಕಾರವನ್ನು ಬಂಡುಕೋರರು ಬುಡಮೇಲುಗೊಳಿಸಿದಾಗ, ಫ್ರಾನ್ಸ್ ನೆರವಿಗೆ ಧಾವಿಸಿತ್ತು. ಸೇನಾ ಕಾರ್ಯಾಚರಣೆಯನ್ನು ನಡೆಸಿ ಬಂಡುಕೋರರನ್ನು ಹೊರ ದಬ್ಬಿತ್ತು. ಮ್ಯಾನ್ಮಾರ್‍ನ ಸೇನಾ ಆಡಳಿತದ ವಿರುದ್ಧ ಅಮೇರಿಕವು ಕೆಲವು ನಿರ್ಬಂಧಗಳನ್ನು ಹೇರಿ ಪ್ರಜಾತಂತ್ರಕ್ಕೆ ಮರಳುವಂತೆ ಒತ್ತಡ ಹಾಕಿತ್ತು. ಇಲ್ಲೆಲ್ಲಾ ಅನ್ವಯವಾಗುವ ನೀತಿಯು ಈಜಿಪ್ಟ್ ನ ವಿಷಯದಲ್ಲಿ ಮಾತ್ರ ಯಾಕೆ ಅಳವಡಿಕೆಯಾಗುತ್ತಿಲ್ಲ?
    ನಿಜವಾಗಿ, ಅಮೇರಿಕ ಬಯಸುವುದು ಪ್ರಜಾತಂತ್ರವನ್ನಲ್ಲ. ತನ್ನ ಹಿತಾಸಕ್ತಿಗೆ ಅನುಕೂಲವಾಗುವ ಸರಕಾರಗಳನ್ನು. ಬ್ರದರ್‍ಹುಡ್ ಅಧಿಕಾರದಲ್ಲಿ ಮುಂದುವರಿದರೆ ತನ್ನ ಮಿತ್ರ ರಾಷ್ಟ್ರ ಇಸ್ರೇಲ್ ಮತ್ತು ಗಲ್ಫ್ ದೊರೆಗಳಿಗೆ ಅಪಾಯ ಎದುರಾಗಬಹುದು ಎಂದು ಅಮೇರಿಕ ಭಯ ಪಡುತ್ತಿದೆ. ಆದ್ದರಿಂದಲೇ ಬ್ರದರ್‍ಹುಡ್ ಮತ್ತು ಅಂತಾರಾಷ್ಟ್ರೀಯ ಮಧ್ಯಸ್ಥಿಕೆದಾರರ ಮಧ್ಯೆ ಸಂಧಾನ ಮಾತುಕತೆ ಯಶಸ್ವಿಯಾಗಿದ್ದರೂ ಸೇನೆ ಅದನ್ನು ತಿರಸ್ಕರಿಸಿ ಬುಲ್ಡೋಜರ್ ಹರಿಸಿತು ಎಂದು ದಿ ಹಿಂದೂ (ಆಗಸ್ಟ್ 17, 2013) ಸಂಪಾದಕೀಯ ಬರೆದಿರುವುದು. ಮಾತ್ರವಲ್ಲ, ಸೇನಾ ದೌರ್ಜನ್ಯವನ್ನು ಖಂಡಿಸಿ ಉಪಾಧ್ಯಕ್ಷ ಮುಹಮ್ಮದ್ ಅಲ್ ಬರ್ದಾಯಿ ರಾಜಿನಾಮೆ ಕೊಟ್ಟು ಹೊರಬಂದರೂ ಅವರ ನ್ಯಾಶನಲ್ ಸಾಲ್ವೇಶನ್ ಫ್ರಂಟ್ ಪಕ್ಷವು ಸೇನೆಯನ್ನು ಈಗಲೂ ಬೆಂಬಲಿಸುತ್ತಿರುವುದು. ಒಂದು ವೇಳೆ, ಪ್ರಜಾತಂತ್ರದ ಪರ ಅಮೇರಿಕದ ನಿಲುವು ಪ್ರಾಮಾಣಿಕವೇ ಆಗಿರುತ್ತಿದ್ದರೆ ಅದು ಮೊಟ್ಟಮೊದಲು ಸೌದಿ ದೊರೆತನದ ವಿರುದ್ಧ ಮಾತಾಡಬೇಕಿತ್ತು. ಮಾತ್ರವಲ್ಲ, ಈಜಿಪ್ಟ್ ನ ಸೇನಾ ಪಡೆಯನ್ನು ಬೆಂಬಲಿಸಬಾರದೆಂದೂ ತಾಕೀತು ಮಾಡಬೇಕಿತ್ತು. ಆದರೆ ಅಮೇರಿಕ ಇವಾವುದನ್ನೂ ಮಾಡಿಲ್ಲ.
   ಈಜಿಪ್ಟ್ ನ ಬೆಳವಣಿಗೆಯು ಒಂದು ರೀತಿಯಲ್ಲಿ ಅರಬ್ ಜಗತ್ತಿನ ತಲ್ಲಣಗಳನ್ನು ಬಹಿರಂಗಕ್ಕೆ ತಂದಿದೆ. ಬ್ರದರ್‍ಹುಡ್‍ನ ರಾಜಕೀಯ ಗೆಲುವು ತಮ್ಮ ದೊರೆತನದ ಅವಸಾನಕ್ಕೆ ಕಾರಣವಾದೀತೆಂಬ ಭೀತಿಯಿಂದ ಅವು ನಡುಗುತ್ತಿವೆ. ಅರಬ್ ದೊರೆತನಕ್ಕೆ ಅಪಾಯ ಎದುರಾಗುವುದೆಂದರೆ ಅದು ತಮ್ಮ ಹಿತಾಸಕ್ತಿಗೆ ಎದುರಾಗುವ ಅಪಾಯವೂ ಹೌದೆಂಬುದಾಗಿ ಅಮೇರಿಕ ಭಾವಿಸಿಕೊಂಡಿದೆ. ಆದ್ದರಿಂದ ಅರಬ್ ವಲಯದಲ್ಲಿ ಪ್ರಜಾತಂತ್ರ ಗಟ್ಟಿಯಾಗಬಾರದೆಂದು ಅವರೆಲ್ಲ ತೀರ್ಮಾನಿಸಿದ್ದಾರೆ. ಈ ಕಾರಣದಿಂದಲೇ ಟುನೀಶ್ಯಾ, ಟರ್ಕಿ, ಲಿಬಿಯಗಳ ಚುನಾಯಿತ ಸರಕಾರಗಳ ವಿರುದ್ಧ ಬಂಡಾಯ ಕಾಣಿಸಿಕೊಂಡಿರುವುದು. ತಾವೇ ಪ್ರತಿಭಟನೆಯನ್ನು ಆಯೋಜಿಸಿ ಅದರ ನೆಪದಲ್ಲಿ ಚುನಾಯಿತ ಸರಕಾರಗಳನ್ನು ಉರುಳಿಸುವ ನಾಟಕವನ್ನು ಈ ಮಂದಿ ಹೆಣೆದಿದ್ದಾರೆ. ಅದರ ಪ್ರಥಮ ಬಲಿಪಶು ಮುಸ್ಲಿಮ್ ಬ್ರದರ್‍ಹುಡ್. ದಶಕಗಳ ಹಿಂದೆ ಅಲ್ಜೀರಿಯಾದಲ್ಲಿ ಇಸ್ಲಾಮಿಕ್ ಸಾಲ್ವೇಶನ್ ಫ್ರಂಟ್ ಪಕ್ಷವು  ಚುನಾವಣೆಯಲ್ಲಿ ಭಾರೀ ಗೆಲುವು ದಾಖಲಿಸಿದ್ದರೂ ಸೇನೆಯು ಬಲವಂತದಿಂದ ಅಧಿಕಾರ ಕಿತ್ತುಕೊಂಡು ಮತ್ತೆಂದೂ ತಲೆ ಎತ್ತದಂತೆ ಮಾಡಿರುವ ಹಾಗೆಯೇ ಈಜಿಪ್ಟ್ ನಲ್ಲೂ ಮತ್ತು ಇತರೆಡೆಗಳಲ್ಲೂ ಮಾಡುವ ಹುನ್ನಾರವನ್ನು ಅವು ರೂಪಿಸಿವೆ. ಒಮ್ಮೆ ಅಧಿಕಾರವನ್ನು ಕೊಟ್ಟಂತೆ ಮಾಡಿ, ಆ ಬಳಿಕ ವಿವಿಧ ಆರೋಪಗಳ ಮುಖಾಂತರ ಕಸಿದುಕೊಂಡು, ಶಾಶ್ವತವಾಗಿ ದಮನಿಸುವುದು ಅವರ ಉದ್ದೇಶ. ಈಜಿಪ್ಟ್ ಬೆಳವಣಿಗೆ ಸೂಚಿಸುತ್ತಿರುವುದು ಇದನ್ನೇ.

Monday, 12 August 2013

ನಾಪತ್ತೆಯಾಗುವ ಪಾಂಡೆ ಮತ್ತು ಗುಜರಾತ್ ಮಾದರಿ


   ‘ನಾಪತ್ತೆ’ ಆಗುವವರಿಗೆ ಗುಜರಾತ್ ರಾಜ್ಯವು ಎಷ್ಟೊಂದು ಸುರಕ್ಷಿತ ತಾಣ ಎಂಬುದನ್ನು ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಪಿ.ಪಿ. ಪಾಂಡೆಯವರು ಕಳೆದ ಎರಡ್ಮೂರು ತಿಂಗಳಿನಿಂದ ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಇಶ್ರತ್ ಜಹಾನ್ ಎನ್‍ಕೌಂಟರ್ ಪ್ರಕರಣದಲ್ಲಿ ಅವರ ವಿರುದ್ಧ ಸಿಬಿಐಯು ಆರೋಪ ಪಟ್ಟಿ ಸಲ್ಲಿಸಿದ ಕೂಡಲೇ ಅವರು ನಾಪತ್ತೆಯಾಗಿದ್ದರು. ಮೊನ್ನೆ ಮೊನ್ನೆಯಂತೆ ಸ್ಟ್ರೆಚರ್‍ನಲ್ಲಿ ಮಲಗಿಕೊಂಡು ದಿಢೀರ್ ಆಗಿ ಸಿಬಿಐ ನ್ಯಾಯಾಲಯದಲ್ಲಿ ಹಾಜರಾದರು. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಆದರೆ ಅರ್ಜಿ ತಿರಸ್ಕøತಗೊಂಡ ಕೂಡಲೇ ಆಸ್ಪತ್ರೆಯಿಂದ ಅವರು ಪುನಃ ನಾಪತ್ತೆಯಾಗಿದ್ದಾರೆ. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕನೊಬ್ಬನಿಗೆ ಗುಜರಾತ್‍ನಲ್ಲಿ ಇಷ್ಟೊಂದು ದೀರ್ಘ ಅವಧಿವರೆಗೆ ತಲೆಮರೆಸಿಕೊಂಡು ಬದುಕಲು ಸಾಧ್ಯ ಎಂದಾದರೆ ‘ಮೋದಿ ಮಾದರಿಯ' ಅರ್ಥವಾದರೂ ಏನು? ಆ ಮಾದರಿಯಲ್ಲಿ ಏನೆಲ್ಲ, ಯಾವುದೆಲ್ಲ ಒಳಗೊಂಡಿದೆ? ಇಶ್ರತ್ ಜಹಾನ್‍ಳನ್ನು ರಾತೋರಾತ್ರಿ ಪತ್ತೆ ಹಚ್ಚಿ ಎನ್‍ಕೌಂಟರ್ ಮಾಡುವಷ್ಟು ನಿಪುಣರಾಗಿರುವ ಗುಜರಾತ್ ಪೊಲೀಸರಿಗೆ, ಪಾಂಡೆಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲವೆಂದರೆ ಏನರ್ಥ? ಇಷ್ಟಕ್ಕೂ, ಇಶ್ರತ್‍ ಜಹಾನ್, ಪ್ರಾಣೇಶ್ ಪಿಳ್ಳೆ ಎಂಬವರೆಲ್ಲ ಪಾಂಡೆಯಂತೆ  ಪರಿಚಿತರಲ್ಲವಲ್ಲ. ಅವರೆಲ್ಲ ತೀರಾ ಸಾಮಾನ್ಯರಲ್ಲಿ ಸಾಮಾನ್ಯರು. ನಾಪತ್ತೆಯಾಗಿರುವರೆಂದು ಹೇಳಿ ಅವರ ಪೋಟೋವನ್ನು ರೈಲು, ಬಸ್ಸು ನಿಲ್ದಾಣಗಳಲ್ಲಿ ತೂಗು ಹಾಕಲಾಗಿಲ್ಲ. ಪತ್ರಿಕೆಗಳಲ್ಲಿ ಅವರ ಪೋಟೋ ಪ್ರಕಟ ಆಗಿಲ್ಲ. ಹಾಗಿದ್ದರೂ ಅವರನ್ನು ಪತ್ತೆ ಹಚ್ಚುವ ಸಾಮರ್ಥ್ಯ  ಗುಜರಾತ್ ಪೊಲೀಸ್ ಇಲಾಖೆಗೆ ಇದೆಯೆಂದ ಮೇಲೆ, ಗುಜರಾತ್‍ನಾದ್ಯಂತ ಸಣ್ಣ ಮಕ್ಕಳಿಗೂ ಮುಖ ಪರಿಚಯ ಇರುವ ಪಾಂಡೆ ಯಾಕೆ ಪತ್ತೆಯಾಗುತ್ತಿಲ್ಲ? ಮೋದಿಯವರು ಮಾದರಿ ಎಂದು ಹೇಳುತ್ತಾರಲ್ಲ, ಯಾವುದನ್ನು? ಈ ಪೊಲೀಸ್ ಇಲಾಖೆಯನ್ನೇ? ಇಂಥದ್ದೊಂದು ಅದಕ್ಷ  ಇಲಾಖೆಯನ್ನು ಕಟ್ಟಿ ಬೆಳೆಸಿರುವ ಮೋದಿಯವರು ಒಂದು ವೇಳೆ ಪ್ರಧಾನಿಯಾದರೆ ಈ ದೇಶದ ಪೊಲೀಸ್ ಇಲಾಖೆಗಳ ಸ್ಥಿತಿ ಏನಾದೀತು? ಕ್ರಿಮಿನಲ್‍ಗಳು, ಕೊಲೆ ಆರೋಪಿಗಳೆಲ್ಲ ನಾಪತ್ತೆಯಾಗುತ್ತಾ, ಸಾಮಾನ್ಯರು ಎನ್‍ಕೌಂಟರ್‍ಗೆ ಒಳಗಾಗುವ ವಾತಾವರಣ ಸೃಷ್ಟಿಯಾಗದೇ? ಒಂದು ನಾಪತ್ತೆ ಪ್ರಕರಣವನ್ನೇ ನಿಭಾಯಿಸಲಾಗದ ಮೋದಿಯವರು ಈ ವಿಶಾಲ ದೇಶವನ್ನು ಹೇಗೆ ತಾನೇ ಮುನ್ನಡೆಸಿಯಾರು?  
   ನಿಜವಾಗಿ, ಬಿಜೆಪಿ ಈ ದೇಶದಲ್ಲಿ ಹತ್ತಾರು ಪ್ರತಿಭಟನೆಗಳನ್ನು ನಡೆಸಿದೆ. ದೆಹಲಿ ಅತ್ಯಾಚಾರದಿಂದ ಹಿಡಿದು ಉಡುಪಿ ಅತ್ಯಾಚಾರದ ವರೆಗೆ ಧರಣಿ, ರಾಲಿಗಳನ್ನು ನಡೆಸಿದೆ. ಅಕ್ರಮ ಗೋಸಾಗಾಟಗಾರರನ್ನು ಬಂಧಿಸುವಂತೆ ಅದು ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ. ಅಂದಹಾಗೆ, ಇಂಥ ಅಪರಿಚಿತ ಅಪರಾಧಿಗಳ ವಿರುದ್ಧ ಬಿಜೆಪಿ ಕಾರ್ಯಕರ್ತರಲ್ಲಿ ಈ ಮಟ್ಟದ ಆಕ್ರೋಶ ಇರುವುದನ್ನು ತಪ್ಪು ಅನ್ನಬೇಕಿಲ್ಲ. ಅಪರಾಧಿಗಳು ಯಾರೇ ಆಗಿದ್ದರೂ ಅವರನ್ನು ಪತ್ತೆ ಹಚ್ಚುವಂತೆ ಒತ್ತಾಯಿಸುವುದು ಪ್ರತಿಯೋರ್ವ ಪ್ರಜೆಯ ಹಕ್ಕು. ದೇಶವು ಕ್ರಿಮಿನಲ್‍ಗಳ, ಕಳ್ಳಕಾಕರ, ಅತ್ಯಾಚಾರಿ ಗಳ ಪಾಲಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಯಾರು ಪ್ರದರ್ಶಿಸಿದರೂ ಅದು ಶ್ಲಾಘನೀಯವೇ. ಆದರೆ, ಬಿಜೆಪಿ ಕಾರ್ಯಕರ್ತರ ಈ ನ್ಯಾಯ ಪ್ರಜ್ಞೆಯು ಪಾಂಡೆಯ ವಿಚಾರದಲ್ಲಿ ಮಾತ್ರ ಯಾಕೆ ನಾಪತ್ತೆಯಾಗಿದೆ? ದೆಹಲಿಯಲ್ಲಿ ಅತ್ಯಾಚಾರಕ್ಕೆ ಈಡಾದ ಯುವತಿಯಂತೆಯೇ ಇಶ್ರತ್ ಕೂಡಾ ಓರ್ವ ಹೆಣ್ಣು. ಆಕೆ ಅಪರಾಧಿ ಎಂದು ಈವರೆಗೂ ಸಾಬೀತಾಗಿಲ್ಲ. ಆ ಇಡೀ ಎನ್‍ಕೌಂಟರ್ ಪ್ರಕರಣವೇ ನಕಲಿ ಎಂದು ಬಹುತೇಕ ಇವತ್ತು ಖಚಿತವಾಗಿಬಿಟ್ಟಿದೆ. ಹೀಗಿರುವಾಗ ಯುವತಿಯನ್ನು ಕೊಂದ ಆರೋಪಿಯನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿ ಯಾಕೆ ಅದು ಪ್ರತಿಭಟನೆ ಮಾಡುತ್ತಿಲ್ಲ? ಒಂದು ವೇಳೆ, ಪಾಂಡೆಯಂತೆ ಆರೋಪ ಹೊತ್ತುಕೊಂಡ ಅಧಿಕಾರಿಯೊಬ್ಬ ಬಿಹಾರದಲ್ಲೋ ದೆಹಲಿಯಲ್ಲೋ ನಾಪತ್ತೆಯಾಗುತ್ತಿದ್ದರೆ ಮೋದಿಯವರ ಕುಹುಕ ನುಡಿಗಳು ಹೇಗಿರುತ್ತಿತ್ತು? ಅದನ್ನು  ಯುಪಿಎಯ ವೈಫಲ್ಯಕ್ಕೆ ಪುರಾವೆಯಾಗಿ  ಅವರು ಉಲ್ಲೇಖಿಸುತ್ತಿರಲಿಲ್ಲವೇ? ದೇಶದೊಳಗೇ ಇರುವ ಅಧಿಕಾರಿಯನ್ನು ಪತ್ತೆ ಹಚ್ಚದವರು ಇನ್ನು ದಾವೂದ್ ಇಬ್ರಾಹೀಮ್‍ನನ್ನು ಪತ್ತೆ ಹಚ್ಚುತ್ತಾರಾ ಎಂದು ಪ್ರಶ್ನಿಸುತ್ತಿರಲಿಲ್ಲವೇ?
   ಪಾಂಡೆಯವರ ನಾಪತ್ತೆ ಪ್ರಕರಣವನ್ನು ಯಾವುದೋ ಓರ್ವ ಕಿಸೆಗಳ್ಳನ ನಾಪತ್ತೆಯಂತೆ ಪರಿಗಣಿಸಲು ಖಂಡಿತ ಸಾಧ್ಯವಿಲ್ಲ. ಹಿರಿಯ ಅಧಿಕಾರಿಯಾಗಿರುವ ಅವರು ನಾಪತ್ತೆಯಾಗುತ್ತಾರೆಂಬುದೇ ದೊಡ್ಡ ವಿಡಂಬನೆ. ನಡೆಯಲು ಸಾಧ್ಯವಿಲ್ಲದಷ್ಟು ಹೃದಯ ಬೇನೆಯಿರುವ ಓರ್ವ ವ್ಯಕ್ತಿ ನಾಪತ್ತೆಯಾಗುವುದು ಮತ್ತು ಅವರನ್ನು ಪತ್ತೆ ಹಚ್ಚುವಲ್ಲಿ ಒಂದಿಡೀ ವ್ಯವಸ್ಥೆ  ವೈಫಲ್ಯ ಅನುಭವಿಸುವುದೆಲ್ಲ ಗುಜರಾತ್ ಮಾದರಿ ಯಾಕೆ ಭಯಾನಕ ಅನ್ನುವುದಕ್ಕೆ ಉದಾಹರಣೆಯಾಗಿದೆ. ಅಲ್ಲಿ ಮೋದಿಗೆ ನಿಷ್ಠೆ ವ್ಯಕ್ತಪಡಿಸುವ ವ್ಯಕ್ತಿ ಸ್ಟ್ರೆಚರ್‍ನಲ್ಲಿ ಮಲಗಿದ್ದರೂ ನಾಪತ್ತೆಯಾಗುತ್ತಾನೆ. ನಿಜವಾಗಿ ಈ ಮಾದರಿಗೆ ಹೋಲಿಸಿದರೆ ಕರ್ನಾಟಕ ಮಾದರಿ ಎಷ್ಟೋ ಪಾಲು ಉತ್ತಮ. ಮೂಡಬಿದಿರೆಯ ಜೈನ ಬಸದಿಯಿಂದ ಆಭರಣಗಳನ್ನು ಹೊತ್ತೊಯ್ದ ಅಂತಾರಾಷ್ಟ್ರೀಯ ಕಳ್ಳನನ್ನು ಆಂಧ್ರ ಪ್ರದೇಶದಿಂದ ಪತ್ತೆ ಹಚ್ಚಿ ಕರೆ ತರಲು ರಾಜ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪಾಂಡೆಗೆ ಹೋಲಿಸಿದರೆ ಈ ಕಳ್ಳ ತೀರಾ ಅಪರಿಚಿತ. ಆತ ಪ್ರತಿ ಸಂದರ್ಭದಲ್ಲೂ ವೇಷ ಬದಲಿಸುತ್ತಿದ್ದ. ತನ್ನ ಗುರುತು ಪತ್ತೆಯಾಗದಂತೆ ಜಾಗರೂಕತೆ ಪಾಲಿಸುತ್ತಿದ್ದ. ಇಷ್ಟೆಲ್ಲಾ ಅಡೆತಡೆಗಳಿದ್ದೂ ರಾಜ್ಯ ಪೊಲೀಸರು ಓರ್ವ ನಿಪುಣ ಕಳ್ಳನನ್ನು ಎರಡು ವಾರಗಳೊಳಗೆ ಬಂಧಿಸಿ ತರುತ್ತಾರೆಂದರೆ ಯಾಕೆ ಈ ಇಲಾಖೆ ಮೋದಿಯ ಪಾಲಿಗೆ ಮಾದರಿ ಆಗಬಾರದು?
   ಮೋದಿ ಈ ದೇಶದ ಮುಂದೆ ಯಾವ ಮಾದರಿಯನ್ನು ಇವತ್ತು ಪ್ರತಿಪಾದಿಸುತ್ತಿದ್ದಾರೋ ಅದರ ಇನ್ನೊಂದು ಮುಖವಾಗಿ ಪಾಂಡೆ ನಮ್ಮ ಮುಂದಿದ್ದಾರೆ. ಗುಜರಾತ್ ಮಾದರಿಯಲ್ಲಿ ಪಾಂಡೆಯಂಥವರು ಬಂಧನಕ್ಕೆ ಒಳಗಾಗುವುದಿಲ್ಲ ಎಂಬುದಷ್ಟೇ ಈ ಪ್ರಕರಣ ಸಾರುವುದಲ್ಲ ಬದಲು ಇಶ್ರತ್‍ಳಂಥ ಬಲಿಗಳು ಈ ಮಾದರಿಗೆ ಸದಾ ಅಗತ್ಯವಿರುತ್ತದೆ ಎಂಬುದನ್ನೂ ಇದು ಹೇಳುತ್ತದೆ. ಆದ್ದರಿಂದಲೇ, ಪಾಂಡೆ ನಾಪತ್ತೆಯನ್ನು ಕೇವಲ ಓರ್ವ ಅಧಿಕಾರಿಯ ನಾಪತ್ತೆ ಪ್ರಕರಣವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆ ನಾಪತ್ತೆಯ ಜೊತೆ ವ್ಯವಸ್ಥೆಗೂ ಪಾಲಿದೆ. ಈ ವಾಸ್ತವವನ್ನು ಅರಿತುಕೊಂಡರೆ ಗುಜರಾತ್ ಮಾದರಿ ಯಾವ ಕಾರಣಕ್ಕೆ ಈ ದೇಶದ ಪಾಲಿಗೆ ಮಾರಕ ಎಂಬುದು ಗೊತ್ತಾಗುತ್ತದೆ. ಈ ಮಾದರಿಯು ಪಾಂಡೆಯಂಥವರ ಅಡ್ಡೆಯಾಗಬಹುದೇ ಹೊರತು ಜನಸಾಮಾನ್ಯರ ಕನಸಿನ ರಾಷ್ಟ್ರವಾಗದು.


Monday, 5 August 2013

ಗೋವನ್ನು ಹಿಂದೂ ಮುಸ್ಲಿಮ್ ಎಂದು ವಿಭಜಿಸದಿರೋಣ

    ಗೋವಿನ ಸುತ್ತ ಈ ದೇಶದಲ್ಲಿ ಅತಿ ಅನ್ನಬಹುದಾದಷ್ಟು ಬಾರಿ ಚರ್ಚೆಗಳು ನಡೆದಿವೆ. ಗೋವನ್ನು ಆರಾಧ್ಯವಾಗಿ ಪರಿಗಣಿಸುವವರು ಇರುವಂತೆಯೇ ಆಹಾರವಾಗಿ ಪರಿಗಣಿಸುವವರೂ ಈ ದೇಶದಲ್ಲಿ ಧಾರಾಳ ಇದ್ದಾರೆ. ಹಾಗಂತ ಈ ಭಿನ್ನ ದೃಷ್ಟಿಕೋನಗಳನ್ನು ಸಮಾಜಘಾತುಕರು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸುವುದನ್ನು ಯಾರೂ ಯಾವ ಕಾರಣಕ್ಕೂ ಬೆಂಬಲಿಸಬಾರದು. ಗೋವನ್ನು ಆರಾಧಿಸುವವರನ್ನು ಅವಮಾನಿಸುವುದಕ್ಕಾಗಿ ಯಾರಾದರೂ ಗೋಮಾಂಸ ಸೇವಿಸುತ್ತಾರಾದರೆ ಅಥವಾ ಜಾನುವಾರುಗಳ ಹತ್ಯೆ ನಡೆಸುತ್ತಾರಾದರೆ, ಅವರನ್ನು ಬಲವಾಗಿ ಖಂಡಿಸುವುದಕ್ಕೆ ನಮಗೆ ಸಾಧ್ಯವಾಗಬೇಕು. ಯಾಕೆಂದರೆ ಇನ್ನೊಬ್ಬರ ಆರಾಧ್ಯರನ್ನು ಅವಮಾನಿಸುವುದನ್ನು ಪವಿತ್ರ ಕುರ್‍ಆನ್ ಕಾನೂನುಬಾಹಿರವೆಂದು ಸಾರುತ್ತದೆ. (6:17)
   ರಾಜ್ಯ ಬಿಜೆಪಿ ಸರಕಾರವು 2010ರಲ್ಲಿ ಗೋ ಸಂರಕ್ಷಣಾ ಕಾಯ್ದೆಯನ್ನು ರೂಪಿಸಿದಾಗ ರಾಜ್ಯದಲ್ಲಿ ಪರ-ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗಿದ್ದುವು. ಗೋವು, ಕರು, ಎತ್ತು, ಎಮ್ಮೆ, ಕೋಣಗಳನ್ನು ಹತ್ಯೆ ಮಾಡುವುದು 1 ಲಕ್ಷ ರೂ. ದಂಡಕ್ಕೆ ಮತ್ತು 7 ವರ್ಷ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧವೆಂದು ಕಾಯ್ದೆಯಲ್ಲಿ ಉಲ್ಲೇಖಿಸಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾದುವು. ಬಳಕೆಗೆ ಯೋಗ್ಯವಲ್ಲದ ಎತ್ತು, ಕೋಣಗಳನ್ನು ಮತ್ತು ಬಂಜೆಯಾಗಿರುವ ಗೋವು, ಎಮ್ಮೆಗಳನ್ನು ರೈತರು ಏನು ಮಾಡಬೇಕು ಎಂದು ಅನೇಕರು ಪ್ರಶ್ನಿಸಿದರು. ಒಂದು ಹಸು ಅಥವಾ ಎಮ್ಮೆಯ ಆಯುಷ್ಯ ಸಾಮಾನ್ಯವಾಗಿ 25 ವರ್ಷ ಆಗಿದ್ದರೂ ಅದು ಹಾಲು ಕೊಡುವುದು 15 ವರ್ಷಗಳ ವರೆಗೆ ಮಾತ್ರ. ಉಳಿದ 10 ವರ್ಷಗಳ ವರೆಗೆ ಓರ್ವ ರೈತ ಅದನ್ನು ಸಾಕಬೇಕಾದರೆ ಸಾಕಷ್ಟು ದುಡ್ಡಿನ ಅಗತ್ಯ ಇದೆ. ಉಳುಮೆಗೆ ಯೋಗ್ಯವಲ್ಲದ ಎತ್ತು, ಕೋಣದ ಸ್ಥಿತಿಯೂ ಹೀಗೆಯೇ. ಅವುಗಳನ್ನು ಮಾರದೇ ಹೊಸತನ್ನು ಖರೀದಿಸುವುದಕ್ಕೆ ರೈತ ಎಲ್ಲಿಂದ ದುಡ್ಡು ಹೊಂದಿಸಬೇಕು? ಆದ್ದರಿಂದ ಸರಕಾರವು ಮುದಿ ಜಾನುವಾರುಗಳನ್ನು ಖರೀದಿಸುವುದಕ್ಕೆ ವ್ಯವಸ್ಥೆ ಮಾಡದೆ ಮತ್ತು ಮೇವು, ಹಿಂಡಿಗಾಗಿ ಬಜೆಟ್‍ ಅನ್ನು ರೂಪಿಸದೇ ಕೇವಲ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವುದು ತಪ್ಪು ಎಂದು ಅನೇಕರು ವಾದಿಸಿದರು. ಹೀಗಿರುತ್ತಾ, ಹಿಂದಿನ 1964 ರ ಕಾಯ್ದೆಯನ್ನೇ ಈಗಿನ ಕಾಂಗ್ರೆಸ್ ಸರಕಾರವು ಊರ್ಜಿತಗೊಳಿಸಿತು. ಹಾಗಂತ ಈ ನಿರ್ಧಾರದ ವಿರುದ್ಧ ಪ್ರತಿಭಟನೆಗಳು ನಡೆದಿಲ್ಲ ಎಂದಲ್ಲ. ನಡೆದಿದೆ. ಆದರೆ ಈ ಪರ ಮತ್ತು ವಿರುದ್ಧ ನಿಲುವುಗಳನ್ನು ಗೌರವಿಸಬೇಕೇ ಹೊರತು ಒಂದನ್ನು ದೇಶಪ್ರೇಮಿಯೆಂದೂ ಇನ್ನೊಂದನ್ನು ದೇಶದ್ರೋಹಿಯೆಂದೂ ವಿಭಜಿಸುವುದು ಖಂಡಿತ ತಪ್ಪು.
   ಆದರೆ ಇತ್ತಿತ್ತಲಾಗಿ ಗೋ ಕಳ್ಳತನ ಎಂಬ ಶೀರ್ಷಿಕೆಯಲ್ಲಿ ಹೆಚ್ಚೆಚ್ಚು ಸುದ್ದಿಗಳು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ನಿಜವಾಗಿ, ಗೋವನ್ನು ಕದಿಯುವವರಿಗೂ ಅದನ್ನು ಆಹಾರವಾಗಿಯೂ ಪರಿಗಣಿಸುವವರಿಗೆ ವ್ಯತ್ಯಾಸವಿದೆ. ಕದಿಯುವುದು ಯಾವ ವಸ್ತುವನ್ನೇ ಆದರೂ ಅಪರಾಧವೇ. ಕೇವಲ ಗೋವು ಎಂದಲ್ಲ, ಅಕ್ರಮವಾಗಿ ಜಾನು ವಾರುಗಳನ್ನು ಸಾಗಾಟ ಮಾಡುವುದು, ಮಾಂಸ ಮಾಡುವುದನ್ನು ಯಾವ ನಿಟ್ಟಿನಲ್ಲೂ ಸಮರ್ಥಿಸಿ ಕೊಳ್ಳಲು ಸಾಧ್ಯವಿಲ್ಲ. ಹಾಲು ಕೊಡುವ ಆಕಳನ್ನು ಮತ್ತು ಕರುವನ್ನು ಮಾಂಸಕ್ಕಾಗಿ ಉಪಯೋಗಿಸುವುದನ್ನು ಇಸ್ಲಾಂ ಬಲವಾಗಿ ವಿರೋಧಿಸುತ್ತದೆ. ಅಂಥವರು  ಯಾರೇ ಆಗಿರಲಿ, ಯಾವ ಧರ್ಮಕ್ಕೇ ಸೇರಿರಲಿ, ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲೇಬೇಕು.
   ಸಾರ್ವಜನಿಕವಾಗಿ ಇವತ್ತು ಒಂದು ಬಗೆಯ ಪೂರ್ವಗ್ರಹವಿದೆ. ಗೋ ಕಳ್ಳತನ ಅಥವಾ ಅಕ್ರಮ ಸಾಗಾಟಕ್ಕೆ ಮುಸ್ಲಿಮ್ ಸಮುದಾಯದ ಬೆಂಬಲವಿದೆ ಎಂದು ನಂಬಿಕೊಂಡವರು ಸಮಾಜದಲ್ಲಿದ್ದಾರೆ. ಅಕ್ರಮ ಕಸಾಯಿಖಾನೆಗಳ ಬಗ್ಗೆಯೂ ಇಂಥದ್ದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರಿದ್ದಾರೆ. ನಿಜವಾಗಿ, ಕದಿಯುವುದು ಗೋವನ್ನಾದರೂ ಇನ್ನೇನನ್ನೇ ಆದರೂ ಅದು ಕಳ್ಳತನವೇ. ಗೋವನ್ನು ಕದ್ದರೆ ಅದನ್ನು ಬೆಂಬಲಿಸುವುದು, ಅಡಿಕೆ ಕದ್ದರೆ ವಿರೋಧಿಸುವುದನ್ನು ಯಾರಿಂದಲೂ ಸಮರ್ಥಿಸಿ ಕೊಳ್ಳಲು ಸಾಧ್ಯವಿಲ್ಲ. ಇತರೆಲ್ಲ ವಸ್ತುಗಳ ಅಕ್ರಮ ಸಾಗಾಟ ಹೇಗೆ ತಪ್ಪೋ ಹಾಗೆಯೇ ಅಕ್ರಮ ಗೋಸಾಗಾಟವೂ. ದುರಂತ ಏನೆಂದರೆ, ಗೋವಿಗೆ ಸಂಬಂಧಿಸಿದ ಯಾವುದೇ ಚರ್ಚೆಯನ್ನು ಇವತ್ತು ಮುಸ್ಲಿಮ್ vs ಹಿಂದೂ ಎಂದು ವಿಭಜಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಗೋಹತ್ಯೆ ನಿಷೇಧಕ್ಕೆ ಮುಸ್ಲಿಮರೇ ಅಡ್ಡಗಾಲಾಗಿದ್ದಾರೆ ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ನಿಜವಾಗಿ, ಗೋವು ಮುಸ್ಲಿಮರ ಅನಿವಾರ್ಯ ಆಹಾರವೇನೂ ಅಲ್ಲ. ಅದನ್ನು ತಿನ್ನದಿದ್ದರೆ ಮುಸ್ಲಿಮರ ವಿಶ್ವಾಸಕ್ಕೆ ಯಾವ ರೀತಿಯ ಧಕ್ಕೆಯೂ ತಗಲುವುದಿಲ್ಲ. ಅಲ್ಲದೇ, ಅದನ್ನು ಈ ದೇಶಕ್ಕೆ ಆಹಾರವಾಗಿ ಪರಿಚಯಿಸಿದ್ದೂ ಮುಸ್ಲಿಮರಲ್ಲ. ಹೌದು, ಎಂದಾಗಿದ್ದರೆ ಅದನ್ನು ತಿನ್ನುವವರು ಕೇವಲ ಮುಸ್ಲಿಮರಷ್ಟೇ ಆಗಿರಬೇಕಿತ್ತಲ್ಲವೇ? ಈ ದೇಶದಲ್ಲಿ ಗೋ ಮಾಂಸ ಇವತ್ತು ಆಹಾರವಾಗಿ ಉಳಿದುಕೊಂಡಿದ್ದರೆ ಅದಕ್ಕೆ ಕಾರಣ ಮುಸ್ಲಿಮರಲ್ಲ, ಬಹುಸಂಖ್ಯಾತರೇ. ಅವರ ಬೇಡಿಕೆಯಿಂದಾಗಿಯೇ ಅದು ಈ ವರೆಗೆ ಆಹಾರವಾಗಿ ಉಳಿದುಕೊಂಡಿದೆ. ಒಂದುವೇಳೆ,  ಗೋಮಾಂಸ ಕೇವಲ ಮುಸ್ಲಿಮರ ಆಹಾರವಷ್ಟೇ ಆಗಿರುತ್ತಿದ್ದರೆ ಈ ದೇಶದಲ್ಲಿ ಎಂದೋ ಅದು ನಿಷೇದಕ್ಕೆ ಒಳಗಾಗುತ್ತಿತ್ತು.  ಅಷ್ಟೇ ಅಲ್ಲ, ಈ ದೇಶದಲ್ಲಿ ಇವತ್ತು 3500ಕ್ಕಿಂತಲೂ ಅಧಿಕ ವಧಾಗ್ರಹಗಳಿವೆ. ಅವನ್ನು ಸ್ಥಾಪಿಸಿದ್ದು, ಅದಕ್ಕೆ ಪರವಾನಿಗೆ ಕೊಟ್ಟದ್ದೆಲ್ಲ ಮುಸ್ಲಿಮರು ಅಲ್ಲವಲ್ಲ. ಇವತ್ತು ಮಾಂಸ ರಫ್ತಿನಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಹಾಗೆಯೇ, 1998ರಿಂದಲೇ ಹಾಲುತ್ಪಾದನೆಯಲ್ಲೂ ಭಾರತ ಪ್ರಥಮ ಸ್ಥಾನದಲ್ಲಿದೆ. ಜೊತೆಗೇ, 2016-17ರ ಅವಧಿಯಲ್ಲಿ 150 ಮಿಲಿಯನ್ ಟನ್‍ಗಳಷ್ಟು ಹಾಲುತ್ಪಾದನೆಯ ಗುರಿಯನ್ನು ಕೇಂದ್ರ ಸರಕಾರ ಇಟ್ಟುಕೊಂಡಿದ್ದು ಮೇವಿಗಾಗಿ 2,242 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಜೊತೆಗೇ ಮಿಲಿಯಾಂತರ ಜಾನುವಾರುಗಳ ಸೃಷ್ಟಿಗೂ ಯೋಜನೆಯನ್ನು ರೂಪಿಸಿದೆ. (ದಿ ಹಿಂದೂ- ಅನುಷಾ ನಾರಾಯಣ್- 2013, ಮೇ 5) ಹೀಗಿರುತ್ತಾ, ಗೋವನ್ನು ಮುಸ್ಲಿಮ್ ಇಶ್ಶೂವಾಗಿ ಬಿಂಬಿಸುವುದಕ್ಕೆ ಏನೆನ್ನಬೇಕು?
   ಗೋವು ಗೌರವಾರ್ಹವಾಗಿ ಮತ್ತು ಆಹಾರವಾಗಿ ಈ ದೇಶದಲ್ಲಿ ಅನಾದಿ ಕಾಲದಿಂದಲೂ ಬಳಕೆಯಲ್ಲಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಆದ್ದರಿಂದ ಗೋ ಹತ್ಯೆಯನ್ನು ಮುಸ್ಲಿಮೀಕರಣ ಮಾಡಬೇಕಾದ ಅಗತ್ಯವಿಲ್ಲ. 1998ರಲ್ಲಿ ಕೇಂದ್ರದಲ್ಲಿ ಎನ್.ಡಿ.ಎ. ಸರಕಾರ ಅಧಿಕಾರದಲ್ಲಿದ್ದಾಗಲೇ ಮಾಂಸ ರಫ್ತಿನಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನವನ್ನು ಗಳಿಸಿಕೊಂಡದ್ದು. ಮಾಂಸ ರಫ್ತಿನಿಂದ ಈ ದೇಶ ದೊಡ್ಡ ಪ್ರಮಾಣದಲ್ಲೇ ಆದಾಯವನ್ನು ಗಳಿಸುತ್ತಿದೆ. ಈ ಸತ್ಯವನ್ನು ಅಡಗಿಸಿಟ್ಟು ಮುಸ್ಲಿಮ್ vs ಹಿಂದೂ ಎಂಬಂತೆ ಗೋವನ್ನು ವಿಭಜಿಸುವುದು ತಪ್ಪು. ಗೋ ಕಳ್ಳತನ ಅಥವಾ ಅಕ್ರಮ ಸಾಗಾಟವನ್ನು ಯಾರೇ ಮಾಡಿದರೂ ಅದು ಕಾನೂನುಬಾಹಿರವೇ. ಅದನ್ನು ಖಂಡಿಸೋಣ. ಆದರೆ ಗೋವನ್ನು ಹಿಂದೂ-ಮುಸ್ಲಿಮ್ ಆಗಿ ವರ್ಗೀಕರಿಸುವುದು ಬೇಡ.