Tuesday, 20 August 2013

ಪ್ರಜಾತಂತ್ರವಾದಿಗಳ ಮುಖವಾಡವನ್ನು ಕಳಚಿಟ್ಟ ಬ್ರದರ್‍ಹುಡ್

   ಪ್ರಜಾತಂತ್ರದ ಬಗ್ಗೆ ಭಾರೀ ಕಾಳಜಿ ವ್ಯಕ್ತಪಡಿಸಿ ಆಗಾಗ ಹೇಳಿಕೆಗಳನ್ನು ಕೊಡುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳ ಕಪಟ ಮುಖವನ್ನು ಈಜಿಪ್ಟ್ ನ ಮುಸ್ಲಿಮ್ ಬ್ರದರ್‍ಹುಡ್ ಮತ್ತೊಮ್ಮೆ ತೆರೆದಿಟ್ಟಿದೆ. ಈ ಮುಖ ಎಷ್ಟು ಅಪಾಯಕಾರಿಯಾದದ್ದೆಂದರೆ ಅದಕ್ಕೆ ಪಾಪ ಭಾವನೆಯೂ ಇಲ್ಲ, ನಾಚಿಕೆಯೂ ಇಲ್ಲ. ಚೀನಾದಲ್ಲಿ, ಮ್ಯಾನ್ಮಾರ್, ಸಿರಿಯಾಗಳಲ್ಲಿ ನಡೆದ ಪ್ರಜಾ ಚಳವಳಿಗಳನ್ನು ಬೆಂಬಲಿಸಿದ್ದು ಅಮೇರಿಕವೇ. ಉತ್ತರ ಕೊರಿಯದ ಕಮ್ಯುನಿಸ್ಟ್ ಸೇನಾಡಳಿತವನ್ನು ಕಿತ್ತು ಹಾಕುವುದಕ್ಕಾಗಿ ನಿರ್ಬಂಧಗಳನ್ನು ಹೇರುತ್ತಿರುವುದೂ ಅಮೇರಿಕವೇ. ಇಂಥ ರಾಷ್ಟ್ರವೊಂದು ಈಜಿಪ್ಟ್ ಸೇನಾಡಳಿತವನ್ನು ಬೆಂಬಲಿಸುವ ಧಾಟಿಯಲ್ಲಿ ಮಾತಾಡುತ್ತಿರುವುದಕ್ಕೆ ಏನೆನ್ನಬೇಕು? ಈಜಿಪ್ಟ್ ಗೆ ತಾನು ಪ್ರತಿ ವರ್ಷ ಕೊಡುತ್ತಿರುವ 1.3 ಬಿಲಿಯನ್ ಡಾಲರ್ ಸೇನಾ ನೆರವನ್ನು ಕಡಿತಗೊಳಿಸಿದರೆ ಅದನ್ನು ಸೌದಿ ಅರೇಬಿಯ ಮತ್ತು ಯುಎಇ ತುಂಬುವ ಸಾಧ್ಯತೆ ಇರುವುದರಿಂದ ತಾನು ನೆರವು ಕಡಿತಗೊಳಿಸಲಾರೆ (ದಿ ಹಿಂದೂ, ಆಗಸ್ಟ್ 17) ಎಂದಿರುವುದನ್ನು ಏನೆಂದು ವ್ಯಾಖ್ಯಾನಿಸಬೇಕು? ಅಮೇರಿಕ ಇಷ್ಟೊಂದು ದುರ್ಬಲವಾದದ್ದು ಯಾವಾಗಿನಿಂದ?
   ಇರಾನ್‍ನ ಅಣು ಯೋಜನೆಯನ್ನು ಪ್ರತಿಭಟಿಸಿ ಅಮೇರಿಕ ಹತ್ತಾರು ಬಾರಿ ಮಾತಾಡಿದೆ. ಪ್ರಾದೇಶಿಕ ಭದ್ರತೆಗೆ ಇರಾನ್‍ನ ಅಣು ಯೋಜನೆ ಎಷ್ಟು ದೊಡ್ಡ ಅಪಾಯವೆಂಬುದನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅದು ವಿವರಿಸುತ್ತಲೇ ಬಂದಿದೆ. ಅದರ ಮೇಲೆ ಹಲವು ಸುತ್ತಿನ ನಿರ್ಬಂಧಗಳನ್ನೂ ಈಗಾಗಲೇ ಹೊರಿಸಿದೆ. ಅಷ್ಟೇ ಅಲ್ಲ, ಇರಾನ್‍ನೊಂದಿಗೆ ಯಾರೂ ಸಂಬಂಧ ಬೆಳೆಸಬಾರದೆಂದೂ ವಿಶ್ವ ರಾಷ್ಟ್ರಗಳಿಗೆ ತಾಕೀತು ಮಾಡಿದೆ. ಇಷ್ಟೊಂದು ಸಾಮರ್ಥ್ಯ  ಇರುವ ಅಮೇರಿಕವು ಸೌದಿ ಅರೇಬಿಯದ ಮುಂದೆ ಈ ಮಟ್ಟದಲ್ಲಿ ತಲೆ ತಗ್ಗಿಸುತ್ತಿರುವುದಕ್ಕೆ ಕಾರಣವೇನು? ಇರಾನ್‍ನ ಅಣು ಯೋಜನೆಯು ವಲಯದ ಭದ್ರತೆಗೆ ಅಪಾಯಕಾರಿ ಎಂದಾದರೆ, ಈಜಿಪ್ಟ್ ಸೇನಾಡಳಿತವನ್ನು ಬೆಂಬಲಿಸುವ ಸೌದಿ ಅರೇಬಿಯವು ವಲಯದ ಪ್ರಜಾ ಚಳವಳಿಗಳಿಗೆ  ಅಪಾಯಕಾರಿಯೇ ಅಲ್ಲವೇ? ಇರಾನ್‍ನ ವಿರುದ್ಧ ಕಠಿಣ ನಿಲುವು ತಳೆದಂತೆಯೇ ಸೌದಿಯ ವಿರುದ್ಧವೂ ತಳೆಯಲು ಅಮೇರಿಕಕ್ಕೆ ಏನು ತೊಂದರೆಯಿದೆ?
   ನಿಜವಾಗಿ, ಅಮೇರಿಕವು ಈಜಿಪ್ಟ್ ಗೆ ಒದಗಿಸುತ್ತಿರುವ ನೆರವಿಗೂ ಸೌದಿ ಮತ್ತು ಯುಎಇ ಒದಗಿಸುತ್ತಿರುವ ನೆರವಿಗೂ ತುಂಬಾ ವ್ಯತ್ಯಾಸವಿದೆ. ಅಮೇರಿಕದ ನೆರವು ನೇರವಾಗಿ ತಲುಪುವುದು ಮಿಲಿಟರಿ ಚಟುವಟಿಕೆಗಳಿಗೆ. ಈಜಿಪ್ಟ್ ಸೇನೆಯು ಇವತ್ತು ಪ್ರತಿಭಟನೆಯನ್ನು ಬುಲ್ಡೋಜರ್ ಹರಿಸಿ ದಮನಿಸಿದ್ದರೆ, ಆ ಬುಲ್ಡೋಜರನ್ನು ಒದಗಿಸಿದ್ದು ಅಮೇರಿಕ. ಸೇನಾ ಸಮವಸ್ತ್ರ, ಆಯುಧಗಳು, ಮದ್ದುಗುಂಡುಗಳು ಎಲ್ಲವೂ ಆಮದಾಗಿರುವುದು ಅಮೇರಿಕದಿಂದಲೇ. ಆದರೆ ಸೌದಿ ಅಥವಾ ಯುಎಇಯ ನೆರವು ನೇರವಾಗಿ ಮಿಲಿಟರಿಗೆ ಸಂಬಂಧಿಸಿದ್ದಲ್ಲ. ಮಿಲಿಟರಿಗೆ ಬಳಸಿಕೊಳ್ಳುವ ಅವಕಾಶ ಇದ್ದರೂ ಈಜಿಪ್ಟ್ ನ ಆರ್ಥಿಕ ಬೇಡಿಕೆಯನ್ನು ಪೂರೈಸುವುದಕ್ಕೆ ಇದನ್ನು ನೀಡುತ್ತಿರುವುದಾಗಿ ಅವು ಬಿಂಬಿಸಿಕೊಳ್ಳುತ್ತಿವೆ. ಅದೇನೇ ಇದ್ದರೂ, ಒಂದು ಪ್ರಜಾತಂತ್ರ ಸರಕಾರವನ್ನು ಪದಚ್ಯುತಗೊಳಿಸಿದ ಅಪರಾಧವನ್ನು ಸೇನೆ ಹೊತ್ತು ಕೊಂಡಿರುವಾಗ ಅದಕ್ಕೆ ಬೆಂಬಲವಾಗಿ ನಿಲ್ಲುವುದನ್ನು ಜಗತ್ತೇಕೆ ಪ್ರಶ್ನಿಸುತ್ತಿಲ್ಲ? ಐದಾರು ತಿಂಗಳುಗಳ ಹಿಂದೆ ಮಾಲಿ ಎಂಬ ಪುಟ್ಟ ರಾಷ್ಟ್ರದ ಪ್ರಜಾ ಸರಕಾರವನ್ನು ಬಂಡುಕೋರರು ಬುಡಮೇಲುಗೊಳಿಸಿದಾಗ, ಫ್ರಾನ್ಸ್ ನೆರವಿಗೆ ಧಾವಿಸಿತ್ತು. ಸೇನಾ ಕಾರ್ಯಾಚರಣೆಯನ್ನು ನಡೆಸಿ ಬಂಡುಕೋರರನ್ನು ಹೊರ ದಬ್ಬಿತ್ತು. ಮ್ಯಾನ್ಮಾರ್‍ನ ಸೇನಾ ಆಡಳಿತದ ವಿರುದ್ಧ ಅಮೇರಿಕವು ಕೆಲವು ನಿರ್ಬಂಧಗಳನ್ನು ಹೇರಿ ಪ್ರಜಾತಂತ್ರಕ್ಕೆ ಮರಳುವಂತೆ ಒತ್ತಡ ಹಾಕಿತ್ತು. ಇಲ್ಲೆಲ್ಲಾ ಅನ್ವಯವಾಗುವ ನೀತಿಯು ಈಜಿಪ್ಟ್ ನ ವಿಷಯದಲ್ಲಿ ಮಾತ್ರ ಯಾಕೆ ಅಳವಡಿಕೆಯಾಗುತ್ತಿಲ್ಲ?
    ನಿಜವಾಗಿ, ಅಮೇರಿಕ ಬಯಸುವುದು ಪ್ರಜಾತಂತ್ರವನ್ನಲ್ಲ. ತನ್ನ ಹಿತಾಸಕ್ತಿಗೆ ಅನುಕೂಲವಾಗುವ ಸರಕಾರಗಳನ್ನು. ಬ್ರದರ್‍ಹುಡ್ ಅಧಿಕಾರದಲ್ಲಿ ಮುಂದುವರಿದರೆ ತನ್ನ ಮಿತ್ರ ರಾಷ್ಟ್ರ ಇಸ್ರೇಲ್ ಮತ್ತು ಗಲ್ಫ್ ದೊರೆಗಳಿಗೆ ಅಪಾಯ ಎದುರಾಗಬಹುದು ಎಂದು ಅಮೇರಿಕ ಭಯ ಪಡುತ್ತಿದೆ. ಆದ್ದರಿಂದಲೇ ಬ್ರದರ್‍ಹುಡ್ ಮತ್ತು ಅಂತಾರಾಷ್ಟ್ರೀಯ ಮಧ್ಯಸ್ಥಿಕೆದಾರರ ಮಧ್ಯೆ ಸಂಧಾನ ಮಾತುಕತೆ ಯಶಸ್ವಿಯಾಗಿದ್ದರೂ ಸೇನೆ ಅದನ್ನು ತಿರಸ್ಕರಿಸಿ ಬುಲ್ಡೋಜರ್ ಹರಿಸಿತು ಎಂದು ದಿ ಹಿಂದೂ (ಆಗಸ್ಟ್ 17, 2013) ಸಂಪಾದಕೀಯ ಬರೆದಿರುವುದು. ಮಾತ್ರವಲ್ಲ, ಸೇನಾ ದೌರ್ಜನ್ಯವನ್ನು ಖಂಡಿಸಿ ಉಪಾಧ್ಯಕ್ಷ ಮುಹಮ್ಮದ್ ಅಲ್ ಬರ್ದಾಯಿ ರಾಜಿನಾಮೆ ಕೊಟ್ಟು ಹೊರಬಂದರೂ ಅವರ ನ್ಯಾಶನಲ್ ಸಾಲ್ವೇಶನ್ ಫ್ರಂಟ್ ಪಕ್ಷವು ಸೇನೆಯನ್ನು ಈಗಲೂ ಬೆಂಬಲಿಸುತ್ತಿರುವುದು. ಒಂದು ವೇಳೆ, ಪ್ರಜಾತಂತ್ರದ ಪರ ಅಮೇರಿಕದ ನಿಲುವು ಪ್ರಾಮಾಣಿಕವೇ ಆಗಿರುತ್ತಿದ್ದರೆ ಅದು ಮೊಟ್ಟಮೊದಲು ಸೌದಿ ದೊರೆತನದ ವಿರುದ್ಧ ಮಾತಾಡಬೇಕಿತ್ತು. ಮಾತ್ರವಲ್ಲ, ಈಜಿಪ್ಟ್ ನ ಸೇನಾ ಪಡೆಯನ್ನು ಬೆಂಬಲಿಸಬಾರದೆಂದೂ ತಾಕೀತು ಮಾಡಬೇಕಿತ್ತು. ಆದರೆ ಅಮೇರಿಕ ಇವಾವುದನ್ನೂ ಮಾಡಿಲ್ಲ.
   ಈಜಿಪ್ಟ್ ನ ಬೆಳವಣಿಗೆಯು ಒಂದು ರೀತಿಯಲ್ಲಿ ಅರಬ್ ಜಗತ್ತಿನ ತಲ್ಲಣಗಳನ್ನು ಬಹಿರಂಗಕ್ಕೆ ತಂದಿದೆ. ಬ್ರದರ್‍ಹುಡ್‍ನ ರಾಜಕೀಯ ಗೆಲುವು ತಮ್ಮ ದೊರೆತನದ ಅವಸಾನಕ್ಕೆ ಕಾರಣವಾದೀತೆಂಬ ಭೀತಿಯಿಂದ ಅವು ನಡುಗುತ್ತಿವೆ. ಅರಬ್ ದೊರೆತನಕ್ಕೆ ಅಪಾಯ ಎದುರಾಗುವುದೆಂದರೆ ಅದು ತಮ್ಮ ಹಿತಾಸಕ್ತಿಗೆ ಎದುರಾಗುವ ಅಪಾಯವೂ ಹೌದೆಂಬುದಾಗಿ ಅಮೇರಿಕ ಭಾವಿಸಿಕೊಂಡಿದೆ. ಆದ್ದರಿಂದ ಅರಬ್ ವಲಯದಲ್ಲಿ ಪ್ರಜಾತಂತ್ರ ಗಟ್ಟಿಯಾಗಬಾರದೆಂದು ಅವರೆಲ್ಲ ತೀರ್ಮಾನಿಸಿದ್ದಾರೆ. ಈ ಕಾರಣದಿಂದಲೇ ಟುನೀಶ್ಯಾ, ಟರ್ಕಿ, ಲಿಬಿಯಗಳ ಚುನಾಯಿತ ಸರಕಾರಗಳ ವಿರುದ್ಧ ಬಂಡಾಯ ಕಾಣಿಸಿಕೊಂಡಿರುವುದು. ತಾವೇ ಪ್ರತಿಭಟನೆಯನ್ನು ಆಯೋಜಿಸಿ ಅದರ ನೆಪದಲ್ಲಿ ಚುನಾಯಿತ ಸರಕಾರಗಳನ್ನು ಉರುಳಿಸುವ ನಾಟಕವನ್ನು ಈ ಮಂದಿ ಹೆಣೆದಿದ್ದಾರೆ. ಅದರ ಪ್ರಥಮ ಬಲಿಪಶು ಮುಸ್ಲಿಮ್ ಬ್ರದರ್‍ಹುಡ್. ದಶಕಗಳ ಹಿಂದೆ ಅಲ್ಜೀರಿಯಾದಲ್ಲಿ ಇಸ್ಲಾಮಿಕ್ ಸಾಲ್ವೇಶನ್ ಫ್ರಂಟ್ ಪಕ್ಷವು  ಚುನಾವಣೆಯಲ್ಲಿ ಭಾರೀ ಗೆಲುವು ದಾಖಲಿಸಿದ್ದರೂ ಸೇನೆಯು ಬಲವಂತದಿಂದ ಅಧಿಕಾರ ಕಿತ್ತುಕೊಂಡು ಮತ್ತೆಂದೂ ತಲೆ ಎತ್ತದಂತೆ ಮಾಡಿರುವ ಹಾಗೆಯೇ ಈಜಿಪ್ಟ್ ನಲ್ಲೂ ಮತ್ತು ಇತರೆಡೆಗಳಲ್ಲೂ ಮಾಡುವ ಹುನ್ನಾರವನ್ನು ಅವು ರೂಪಿಸಿವೆ. ಒಮ್ಮೆ ಅಧಿಕಾರವನ್ನು ಕೊಟ್ಟಂತೆ ಮಾಡಿ, ಆ ಬಳಿಕ ವಿವಿಧ ಆರೋಪಗಳ ಮುಖಾಂತರ ಕಸಿದುಕೊಂಡು, ಶಾಶ್ವತವಾಗಿ ದಮನಿಸುವುದು ಅವರ ಉದ್ದೇಶ. ಈಜಿಪ್ಟ್ ಬೆಳವಣಿಗೆ ಸೂಚಿಸುತ್ತಿರುವುದು ಇದನ್ನೇ.

No comments:

Post a Comment