Thursday 26 September 2013

ಪದ್ಮಲತಾರನ್ನು ಪ್ರೀತಿಸುವ ಚಂದ್ರಶೇಖರ್ ಗಳು ಹೆಚ್ಚಾಗಲಿ

‘ಪತಿ-ಪತ್ನಿ’ ಎಂಬ ಪದಗುಚ್ಛದಲ್ಲಿ ಇರುವ ಅಕ್ಷರಗಳು ನಾಲ್ಕೇ ಆದರೂ ಅದು ಪ್ರತಿನಿಧಿಸುವ ಮೌಲ್ಯಗಳು 4 ಸಾವಿರ ಅಕ್ಷರಗಳನ್ನೂ ವಿೂರಿಸುವಂಥದ್ದು. ಯುವಕನೋರ್ವ ಪತಿ ಆಗುವುದು ಮತ್ತು ಯುವತಿ ಪತ್ನಿ ಆಗುವುದೆಲ್ಲ ಸಿನಿಮಾವೊಂದರ ಪಾತ್ರದಷ್ಟು ಸರಳ ಅಲ್ಲ. ಅದೊಂದು ಕರಾರು. ಸಿನಿಮಾದ ಅವಧಿಯೇ ಎರಡೋ ಮೂರೋ ಗಂಟೆಗಳು. ಆ ಅವಧಿಗಷ್ಟೇ ಪತಿ-ಪತ್ನಿ ಪಾತ್ರಧಾರಿಗಳು ತಮ್ಮನ್ನು ಸಿದ್ಧಪಡಿಸಿಕೊಂಡಿರುತ್ತಾರೆ. ಅವಧಿ ಮುಗಿದ ಬಳಿಕ ಅವರು ಅದಾಗಿರುವುದಿಲ್ಲ. ಸಿನಿಮಾದಲ್ಲಿ ‘ಮೇಡ್ ಫಾರ್ ಈಚ್ ಅದರ್’ ಎಂಬಂತೆ ಕಂಡಿದ್ದರೂ ಹೊರಗೆ ಅವರು ಜಗಳಾಡಬಹುದು. ಪರಸ್ಪರರ ಕಾಲೆಳೆಯಬಹುದು. ಒಬ್ಬರ ಬೆಳವಣಿಗೆಯನ್ನು ತಡೆಯಲು ಇನ್ನೊಬ್ಬರು ಪ್ರಯತ್ನಿಸಬಹುದು. ಅಲ್ಲದೇ, ಸಿನಿಮಾದಲ್ಲಿ ಪತಿ-ಪತ್ನಿಯಾಗಿ ಅಭಿನಯಿಸಿದ ಹೀರೋ ಹೀರೋಯಿನ್‍ಗಳು ನಿಜ ಬದುಕಿನಲ್ಲೂ ಅದಾಗಲು ತೀರ್ಮಾನಿಸಿ, ಕೊನೆಗೆ ಸಂಬಂಧವನ್ನೇ ಮುರಿದುಕೊಂಡ ಸುದ್ದಿಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಯಾಕೆಂದರೆ, ದಾಂಪತ್ಯ ಎಂಬುದು ಸಿನಿಮಾದಂತೆ ಅಲ್ಲ. ಅದರಲ್ಲಿ ಕೆಲವು ಮೌಲ್ಯಗಳಿವೆ. ಆ ಮೌಲ್ಯಗಳೆಲ್ಲ ಅವಧಿ ರಹಿತವಾದದ್ದು. ಆದರೆ, ಪತಿ-ಪತ್ನಿಯರಾಗಲು ಯಾವಾಗ ಸೌಂದರ್ಯ ಮಾನದಂಡ ಆಗುತ್ತದೋ ಆಗ ನಿಜ ಬದುಕು ಕೂಡಾ ಸಿನಿಮಾ ಆಗುತ್ತದೆ. ಸಿನಿಮಾದಂತೆ ನಿರ್ದಿಷ್ಟ ಅವಧಿವರೆಗೆ ಮಾತ್ರ ಅದು ಬಾಳುತ್ತದೆ. ಕಳೆದ ವಾರ ಸುಪ್ರೀಮ್ ಕೋರ್ಟಿನ ಮುಂದೆ ಬಂದ ಪ್ರಕರಣವೊಂದು ದಾಂಪತ್ಯದ ಪಾವಿತ್ರ್ಯತೆಯ ಕುರಿತಂತೆ ಹತ್ತು-ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಓರ್ವರು ತನ್ನ ಪತ್ನಿಯನ್ನು ಯಾವೆಲ್ಲ ಕಾರಣಕ್ಕಾಗಿ ಪ್ರೀತಿಸಬೇಕು ಅಥವಾ ಕೈಬಿಡಬೇಕು ಎಂಬೆಲ್ಲ ಪ್ರಶ್ನೆಗಳಿಗೆ ಅವಕಾಶ ಒದಗಿಸಿದೆ.
 ಆಂಧ್ರ ಪ್ರದೇಶದ ಕಾಕಿನಾಡದ ಡಾ| ಕೊಲ್ಲಂ ಚಂದ್ರಶೇಖರ್ ಎಂಬವರು ತಮ್ಮ ಪತ್ನಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಸ್ಕಿಝೋಪ್ರೇನಿಯಾ (ಮಾನಸಿಕ ಕಾಯಿಲೆ) ರೋಗದಿಂದ ಪತ್ನಿ ಕೊಲ್ಲಂ ಪದ್ಮಲತಾ ಬಳಲುತ್ತಿದ್ದು, ಅವರಿಂದ ತನಗೆ ವಿಚ್ಛೇದನ ಕೊಡಿಸಿ ಅಂದಿದ್ದರು. ನಿಜವಾಗಿ ಸ್ಕಿಝೋಪ್ರೇನಿಯಾ ಎಂಬುದು ಗುಣವಾಗದ ಕಾಯಿಲೆ ಅಲ್ಲ. ‘ಒಂದು ಮಗು ಇರುವ ನೀವು ಈ ಕಾರಣವನ್ನು ಮುಂದಿಟ್ಟು ವಿಚ್ಛೇದನ ಕೋರುತ್ತೀರಲ್ಲ, ನಿಮ್ಮ ಮನಃಸಾಕ್ಷಿ ಒಪ್ಪುತ್ತಾ..?’ ಅಂತ ನ್ಯಾಯಮೂರ್ತಿ ಸಿಂಘ್ವಿ ಮತ್ತು ಗೋಪಾಲ ಗೌಡರನ್ನೊಳಗೊಂಡ ನ್ಯಾಯಪೀಠ ಕಳೆದವಾರಅವರನ್ನು ಪ್ರಶ್ನಿಸಿತು.
 ನಿಜವಾಗಿ, ದಾಂಪತ್ಯವೆಂಬುದು ಒಂದು ರೋಗಕ್ಕೆ ಕುಸಿದು ಬೀಳುವಷ್ಟು ದುರ್ಬಲ ಆಗಬಾರದು. ಜಗತ್ತಿನಲ್ಲಿ ಎರಡು ಅಪರಿಚಿತ ಕುಟುಂಬಗಳು ತಮ್ಮ ಮಕ್ಕಳ ಕಾರಣಕ್ಕಾಗಿ ಹತ್ತಿರ ಆಗುವುದು ಮತ್ತು ಬಿಟ್ಟಿರಲಾರದಂಥ ವಿಶ್ವಾಸ ಬೆಳೆಸಿಕೊಳ್ಳುವುದಕ್ಕೆ ಅವಕಾಶ ಇದ್ದರೆ ಅದು ದಾಂಪತ್ಯದಲ್ಲಿ ಮಾತ್ರ. ಅದು ಕುಟುಂಬದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ತಮಗೆ ಸಂಬಂಧವೇ ಇಲ್ಲದವರನ್ನು ಆಪ್ತರನ್ನಾಗಿ ಮಾರ್ಪಡಿಸುತ್ತದೆ. ಹೀಗಿರುವಾಗ, ಇಂಥ ಸಂಬಂಧವೊಂದನ್ನು ಬೆಳೆಸುವುದಕ್ಕೆ ಮಾನದಂಡವಾಗಬೇಕಾದದ್ದು ಯಾವುದು? ಸೌಂದರ್ಯವೋ, ಸಂಪತ್ತೋ, ಹುದ್ದೆಯೋ? ‘ಚಾರಿತ್ರ್ಯವೇ ಈ ಸಂಬಂಧದ ಮಾನದಂಡ ಆಗಿರಲಿ’ ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. ದುರಂತ ಏನೆಂದರೆ, ಚಾರಿತ್ರ್ಯದ ಹೊರತಾದ ಎಲ್ಲವೂ ಇವತ್ತು ದಾಂಪತ್ಯ ಸಂಬಂಧ ಕುದುರಿಸುವುದಕ್ಕೆ ಮಾನದಂಡ ಆಗುತ್ತಿದೆ. ಹೆಣ್ಣಿನ ಸೌಂದರ್ಯ, ದುಡ್ಡು, ಹುದ್ದೆಯನ್ನು ನೋಡಿಕೊಂಡು ಪ್ರಪೋಸಲ್  ಕಳುಹಿಸುವ ಮತ್ತು ಒಪ್ಪಿಕೊಳ್ಳುವ ಸಂದರ್ಭಗಳೇ ಅಧಿಕವಾಗುತ್ತಿವೆ. ಇಂಥ ವಾತಾವರಣದಲ್ಲಿ ಪದ್ಮಲತಾ ‘ಅನಗತ್ಯ’ ಆಗುವುದರಲ್ಲಿ ಅಚ್ಚರಿ ಏನಿದೆ?
 ಅಂದಹಾಗೆ, ಚಂದ್ರಶೇಖರ್ ಎಂಬುದು ಓರ್ವ ವ್ಯಕ್ತಿಯ ಹೆಸರಲ್ಲ. ಅದೊಂದು ಮನಸ್ಥಿತಿ. ಆಧುನಿಕ ಜೀವನ ಕ್ರಮಗಳು ಇಂಥ ಅಸಂಖ್ಯ ಚಂದ್ರಶೇಖರ್‍ರನ್ನು ಪ್ರತಿನಿತ್ಯ ಬೆಳೆಸುತ್ತಿವೆ. ಅವರು ಎಲ್ಲೆಲ್ಲೋ ಬೆಳೆಯುತ್ತಿಲ್ಲ. ನಮ್ಮ ನಮ್ಮ ಮನೆಯಲ್ಲಿ, ನೆರೆಯಲ್ಲಿ, ಪಕ್ಕದಲ್ಲೇ ಬೆಳೆಯುತ್ತಿದ್ದಾರೆ. ಅವರ ಪಾಲಿಗೆ ಪದ್ಮಲತಾ ಒಂದು ಸೌಂದರ್ಯ ಮಾತ್ರ. ಸೌಂದರ್ಯ ಇಲ್ಲದ ಪದ್ಮಲತಾರನ್ನು ಇಷ್ಟಪಡುವುದಕ್ಕೆ ಈ ಜಗತ್ತು ಅವರಿಗೆ ಇವತ್ತು ಕಲಿಸಿಕೊಡುತ್ತಿಲ್ಲ. ಸಿನಿಮಾ, ಟಿ.ವಿ. ಜಾಹೀರಾತುಗಳಲ್ಲಿ ಬರುವ ಹೆಣ್ಣು ಮಕ್ಕಳಿಗೆ ಆಧುನಿಕ ಜಗತ್ತು ಕೆಲವು ವಿಶೇಷ ಅರ್ಹತೆಗಳನ್ನು ನಿಗದಿಪಡಿಸಿದೆ. ನಿರ್ದಿಷ್ಟ ಚರ್ಮ, ಕಣ್ಣು, ನಗು, ಸುತ್ತಳತೆಯನ್ನು ಸೌಂದರ್ಯದ ಮಾನದಂಡವಾಗಿ ಮತ್ತು ಪುರುಷ ಇಷ್ಟಪಡುವುದಕ್ಕೆ ಬೇಕಾದ ಅರ್ಹತೆಗಳಾಗಿ ಹೇಳಿಕೊಟ್ಟು, ಇವು ಹೊಂದಿರುವ ಹೆಣ್ಣು ಮಾತ್ರ ಬದುಕನ್ನು ನೆಮ್ಮದಿಯಾಗಿಡಬಹುದು ಎಂಬ ಭ್ರಮೆಯನ್ನು ಹರಡುತ್ತಿದೆ. ಈ ಭ್ರಮೆಯ ಹಿಂದೆ ಅಸಂಖ್ಯ ‘ಚಂದ್ರಶೇಖರ್’ಗಳು ಇವತ್ತು ಸುತ್ತುತ್ತಿದ್ದಾರೆ. ಒಂದು ಕಡೆ ಸೌಂದರ್ಯವನ್ನು ಆರಾಧಿಸುತ್ತಿರುವ ಜಗತ್ತು, ಇನ್ನೊಂದು ಕಡೆ ಸ್ವಚ್ಛಂದತೆಯನ್ನು ಬದುಕಿನ ಸಹಜ ಭಾಗವಾಗಿ ಪ್ರತಿಪಾದಿಸುತ್ತಿರುವ ಮಾಧ್ಯಮಗಳು-ಇವೆರಡರ ಮಧ್ಯೆ 'ಚಂದ್ರಶೇಖರ್‍ಗಳು' ಹೇಗೇಗೋ ಬದುಕುತ್ತಿದ್ದಾರೆ. ಅತ್ಯಾಚಾರಗಳು, ಲೈಂಗಿಕ ಪೀಡನೆಗಳು, ವಿಚ್ಛೇದನಗಳ ಹಿಂದೆ ಈ ಮನಸ್ಥಿತಿಯ ಪ್ರಭಾವ ಧಾರಾಳ ಇದೆ. ಇಲ್ಲದಿದ್ದರೆ, ತನ್ನ ಹಾಸಿಗೆಯನ್ನು ಹಂಚಿಕೊಳ್ಳುವ, ತನಗಾಗಿ ಕಾಯುವ; ಮಕ್ಕಳ ಪಾಲನೆ, ಮನೆ ನಿರ್ವಹಣೆಯೆಂದೆಲ್ಲಾ ದಣಿವರಿಯದೇ ಕೆಲಸ ಮಾಡುವ ಪತ್ನಿಯನ್ನು ಕಾಯಿಲೆಯ ಕಾರಣಕ್ಕಾಗಿ ಕೈ ಬಿಡುವುದೆಂದರೇನು? ಕಾಯಿಲೆ ಎಂಬುದು ಅರ್ಜಿ ಹಾಕಿ ಪಡಕೊಳ್ಳುವಂಥದ್ದಲ್ಲವಲ್ಲ. ಯಾರನ್ನೂ ಯಾವ ಸಂದರ್ಭದಲ್ಲೂ ಕಾಯಿಲೆ ಕಾಡಬಹುದು. ಹಾಗಂತ ಕಾಯಿಲೆಗೆ ಮದ್ದು ಮಾಡದೇ ಸಂಗಾತಿಯನ್ನೇ ಕೈ ಬಿಡುವುದು ಯಾವ ಮನಸ್ಥಿತಿ?
   ಪತಿ-ಪತ್ನಿ ಪರಸ್ಪರ ಉಡುಪಾಗಿದ್ದಾರೆ ಎಂದು  ಸಾರಿದ ಪವಿತ್ರ ಕುರ್‍ಆನ್ (2: 187), ವಿಚ್ಚೇದನವು ದೇವನಿಗೆ ಅತ್ಯಂತ ಅಪ್ರಿಯವಾಗಿದೆ ಎಂದೂ  ಹೇಳಿದೆ.  ಉಡುಪಿಗೆ ನಮ್ಮ ದೇಹದೊಂದಿಗೆ ಎಷ್ಟು ಹತ್ತಿರದ ಬಾಂಧವ್ಯ ಇದೆಯೋ ಅಷ್ಟೇ ನಿಕಟ ಸಂಬಂಧ ದಂಪತಿಗಳ ಮಧ್ಯೆ ಇರಬೇಕು. ಉಡುಪಿನಲ್ಲಿ ಪುಟ್ಟ ಕೊಳೆ ಆದರೆ ನಾವು ಅದನ್ನು ತೊಳೆಯಲು ಪ್ರಯತ್ನಿಸುತ್ತೇವೆಯೇ ಹೊರತು ಹರಿಯಲಲ್ಲ. ರೋಗ ಎಂಬುದು ಇಂಥದ್ದೇ ಒಂದು ಕೊಳೆ. ಅದನ್ನು ತೊಳೆದರೆ ಬಟ್ಟೆ ಇನ್ನಷ್ಟು ಶುಭ್ರವಾಗುತ್ತದೆ. ಅಲ್ಲದೇ, ಸೌಂದರ್ಯ, ದುಡ್ಡು, ಸುತ್ತಳತೆಗಳೆಂಬ ಅನೇಕಾರು ಆಧುನಿಕ ಕೊಳೆಗಳೂ ಎಲ್ಲರ ಮನಸ್ಸಿನೊಳಗೂ ಇವತ್ತು ಸೇರಿಕೊಳ್ಳುತ್ತಿವೆ. ಅವುಗಳನ್ನು ತೊಳೆದು ಮನಸ್ಸನ್ನು ಶುಭ್ರಗೊಳಿಸಿದರೆ ವರದಕ್ಷಿಣೆ ತರದ ಹೆಣ್ಣೂ ಇಷ್ಟವಾಗಬಲ್ಲಳು. ಕಾಯಿಲೆ ಪೀಡಿತ ಪದ್ಮಲತಾರೂ ‘ಅಗತ್ಯವಾಗಿ’ ಕಾಣಿಸಬಲ್ಲರು. ಆದ್ದರಿಂದ 'ಚಂದ್ರಶೇಖರ್‍ಗಳ' ಸಂಖ್ಯೆ ಹೆಚ್ಚಳಗೊಳ್ಳದಂತೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಕಾಯಿಲೆ ಇಲ್ಲದ ಪದ್ಮಲತಾರಿಗಿಂತ ಕಾಯಿಲೆ ಪೀಡಿತ ಪದ್ಮಲತಾರನ್ನು ಹೆಚ್ಚು ಪ್ರೀತಿಸುವ, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವ ಪತಿಯಂದಿರನ್ನು ಸಮಾಜದಲ್ಲಿ ತಯಾರಿಸಬೇಕಾಗಿದೆ. ಇಲ್ಲದಿದ್ದರೆ ದಾಂಪತ್ಯ ಎಂಬುದು 'ರುಚಿ' ಇರುವ ವರೆಗೆ ಮಾತ್ರ ಚಾಲ್ತಿಯಲ್ಲಿರುವ ಮಾರುಕಟ್ಟೆ ವಸ್ತುವಾಗಿ ಮಾರ್ಪಟ್ಟೀತು.

Monday 23 September 2013

ಕಾಂಕ್ರೀಟು ಕಟ್ಟಡಗಳಿಂದ ಹೊರಬೀಳುತ್ತಿರುವ ಬ್ರೇಕಿಂಗ್ ನ್ಯೂಸ್ ಗಳು

   ಯುವತಿ ನಾಪತ್ತೆ, ಯುವಕ ಆತ್ಮಹತ್ಯೆ, ನವವಿವಾಹಿತೆ ಪರಾರಿ, ಪತ್ನಿಯ ಕೊಲೆ, ಬೀದಿ ಪಾಲಾದ ಹೆತ್ತವರು.. ಮುಂತಾದ ಶೀರ್ಷಿಕೆಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳ ದೌರ್ಬಲ್ಯ ಏನೆಂದರೆ, ಇಂಥವರಿಗೆ ನರೇಂದ್ರ ಮೋದಿ, ಕರೀನಾ ಕಪೂರ್, ತೆಂಡುಲ್ಕರ್, ವಿಜಯ್.. ಮುಂತಾದ ಹೆಸರುಗಳಿಲ್ಲ ಅನ್ನುವುದು. ನರೇಂದ್ರ ಮೋದಿ ಕೈ ಬೀಸಿದರೂ ಮಾಧ್ಯಮಗಳು ಮುಖಪುಟದಲ್ಲಿ ಬರೆಯುತ್ತವೆ. ಪತ್ನಿಯೊಂದಿಗೆ ವಿಜಯ್ ಜಗಳಾಡಿದುದನ್ನು ವಾರಗಟ್ಟಲೆ ಟಿ.ವಿ. ಮಾಧ್ಯಮಗಳು ಚರ್ಚಿಸುತ್ತವೆ. ದೇವೇಗೌಡರ ನಿದ್ದೆ, ಯಡಿಯೂರಪ್ಪರ ಜಾಗಿಂಗ್, ಸೆಲೆಬ್ರಿಟಿಗಳ ಗಾಸಿಪ್‍ಗಳನ್ನೆಲ್ಲ ಮಾಧ್ಯಮಗಳು ಮುಖಪುಟದಲ್ಲಿಟ್ಟು ಗೌರವಿಸುತ್ತವೆ. ಹಾಗಂತ, ಈ ನಿದ್ದೆ, ಜಾಗಿಂಗ್, ಕೈ ಬೀಸುವಿಕೆಗಿಂತ ‘ಆತ್ಮಹತ್ಯೆ’ಯು ಕಡಿಮೆ ಮಹತ್ವದ್ದು ಎಂದಲ್ಲ. ಆದರೆ ಆತ್ಮಹತ್ಯೆ ಎಂಬುದು ಮಾಮೂಲಿ ಘಟನೆಯಾಗಿರುವಾಗ ಅದನ್ನು ಪ್ರತಿದಿನ ಪತ್ರಿಕೆಗಳು ಮುಖಪುಟದಲ್ಲಿಟ್ಟು ಕೊಟ್ಟರೆ ಏನು ಆಕರ್ಷಣೆಯಿದೆ, ಕೌಟುಂಬಿಕ ನೆಲೆಗಟ್ಟು ಕುಸಿದು ಹೋಗಿರುವ ಇಂದಿನ ದಿನಗಳಲ್ಲಿ ಯುವತಿ ಪರಾರಿಯಾಗಿರುವುದನ್ನು ಬ್ರೇಕಿಂಗ್ ನ್ಯೂಸ್ ಆಗಿಸಿದರೆ ಯಾರು ಓದುತ್ತಾರೆ.. ಅನ್ನುವ ವಾತಾವರಣವು ಮಾಧ್ಯಮ ಕಚೇರಿಗಳಿಂದ ಹಿಡಿದು ಸಾರ್ವಜನಿಕವಾಗಿಯೂ ನೆಲೆಗೊಂಡಿದೆ.
   ಇವತ್ತು, ನರೇಂದ್ರ ಮೋದಿಯವರು ಪ್ರಧಾನಿ ಪದಕ್ಕೆ ಅರ್ಹರೋ ಅಲ್ಲವೋ ಅನ್ನುವ ಚರ್ಚೆಯೊಂದು ದೇಶಾದ್ಯಂತ ಚಾಲ್ತಿಯಲ್ಲಿದೆ. ಅವರ ಭಾಷಣ, ಭಾಷೆ, ಮ್ಯಾನರಿಸಂ.. ಎಲ್ಲವೂ ಸುದ್ದಿ ಮಾಧ್ಯಮಗಳ ಪ್ರಮುಖ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ‘ನನಗೆ ದೇಶ ಪ್ರಥಮ’ ಎಂದು ಹೇಳುವ ನರೇಂದ್ರ ಮೋದಿ ಮತ್ತು ಅವರ ದೇಶದಲ್ಲಿ ಟಾಟಾ, ಬಿರ್ಲಾ, ಅಂಬಾನಿ, ಅದಾನಿ ಮುಂತಾದ ಬೃಹತ್ ಕಾರ್ಪೊರೇಟ್‍ಗಳಿಗೆ ಮಾತ್ರ ಜಾಗ ಇರುತ್ತದೆ ಎಂದು ಹೇಳುವ ವಿರೋಧಿಗಳು ಮಾಧ್ಯಮಗಳನ್ನಿಡೀ ಆವರಿಸಿಕೊಂಡಿದ್ದಾರೆ. ಮೋದಿ ಎಂದಲ್ಲ, ಮಾಧ್ಯಮಗಳ ಮುಖಪುಟದಲ್ಲೋ ಪ್ರಮುಖ ಪುಟಗಳಲ್ಲೋ ಪ್ರಕಟವಾಗುವ ಎಷ್ಟು ಸುದ್ದಿಗಳು ಸಾಮಾಜಿಕ ನೆಲೆಗಟ್ಟನ್ನು ಪ್ರತಿನಿಧಿಸುತ್ತವೆ? ನೈತಿಕತೆಯ ಬಗ್ಗೆ, ಕುಸಿಯುತ್ತಿರುವ ಕೌಟುಂಬಿಕ ಪಾವಿತ್ರ್ಯತೆಯ ಬಗ್ಗೆ ಚರ್ಚಿಸುವುದಕ್ಕೆ ಮಾಧ್ಯಮಗಳು ಎಷ್ಟಂಶ ಉತ್ಸುಕವಾಗಿವೆ? ಅಷ್ಟಕ್ಕೂ, ಅಭಿವೃದ್ಧಿ ಎಂದರೆ, ರೂಪಾಯಿಯ ಮೌಲ್ಯ ಹೆಚ್ಚಾಗುವುದು, ರಸ್ತೆಗಳೆಲ್ಲಾ ಕಾಂಕ್ರೀಟೀಕರಣಗೊಳ್ಳುವುದು, ಬೃಹತ್ ಕಟ್ಟಡಗಳು ತಲೆ ಎತ್ತುವುದಷ್ಟೇ ಅಲ್ಲವಲ್ಲ. ಆ ಕಟ್ಟಡಗಳ ತುಂಬ ಅಭದ್ರ ಕುಟುಂಬಗಳು ವಾಸಿಸುತ್ತಿದ್ದರೆ, ಆ ಕಟ್ಟಡಗಳಿಗಾಗಿ ಹೆಮ್ಮೆ ಪಡುವುದಾದರೂ ಹೇಗೆ? ಕಾಂಕ್ರೀಟು ರಸ್ತೆಗಳಿಗಾಗಿ ಒಂದು ದೇಶ ಹೆಮ್ಮೆ ಪಡಬೇಕಾದರೆ ಆ ರಸ್ತೆಯಲ್ಲಿ ಸಾಗುವವರ ನೈತಿಕ ಆಲೋಚನೆಗಳು ಅಷ್ಟೇ ಪಾರದರ್ಶಕವಿರಬೇಕಲ್ಲವೇ? ಸದ್ಯದ ದಿನಗಳು ಹೇಗಿವೆ ಎಂದರೆ, ದೇಶವನ್ನು ಮುನ್ನಡೆಸುವವರು ಮತ್ತು ಅದರ ಕನಸು ಕಾಣುವವರೆಲ್ಲ ಜನಸಾಮಾನ್ಯರಿಗೆ ಅರ್ಥವಾಗದ ಭಾಷೆಯಲ್ಲಿ ಮಾತಾಡುತ್ತಿದ್ದಾರೆ. ಅವರ ಮಾತುಗಳು ಸಮಾಜದ ಮೂಲ ಸಂರಚನೆಯನ್ನು ಪ್ರತಿನಿಧಿಸುವುದೇ ಇಲ್ಲ. ರೂಪಾಯಿ ಅಪಮೌಲ್ಯ, ಹಗರಣ, ಪಾಕಿಸ್ತಾನ, ಅದೂ-ಇದೂಗಳ ಸುತ್ತವೇ ರಾಜಕಾರಣಿಗಳು ಸುತ್ತುತ್ತಿದ್ದಾರೆ. ಮಾಧ್ಯಮಗಳು ಅದನ್ನೇ ಪ್ರತಿದಿನ ಮೆಲ್ಲುತ್ತಿವೆ. ಹಾಗಂತ, ಇವು ಗಂಭೀರ ಸಮಸ್ಯೆಗಳು ಅಲ್ಲ ಎಂದಲ್ಲ. ಆದರೆ ಸಮಾಜದ ತಳಮಟ್ಟದ ಸಮಸ್ಯೆಗಳಿಗೆ ನಮ್ಮ ಚರ್ಚೆಯಲ್ಲಿ ಯಾವ ಪಾತ್ರವೂ ಸಿಗದೇ ಹೋದರೆ, ಬಲಿಷ್ಠ ಭಾರತವನ್ನು ಕಟ್ಟುವುದಾದರೂ ಹೇಗೆ? ಯಾವ ದೇಶದಲ್ಲಿ ಕೌಟುಂಬಿಕ ವಾತಾವರಣ ಚೆನ್ನಾಗಿರುವುದಿಲ್ಲವೋ ಆ ದೇಶದಲ್ಲಿ ಎಷ್ಟೇ ಬಲಿಷ್ಠ ಕಟ್ಟಡಗಳು ನಿರ್ಮಾಣಗೊಂಡರೂ ಯಾವ ಪ್ರಯೋಜನವೂ ಇಲ್ಲ. ನಿಜವಾಗಿ, ಕಟ್ಟಡವನ್ನು ಬಲಿಷ್ಠಗೊಳಿಸುವುದು ಅದರೊಳಗೆ ವಾಸಿಸುವ ಕುಟುಂಬಗಳು. ಸಿಮೆಂಟು, ಹೊೈಗೆ, ಕಲ್ಲು, ಕಬ್ಬಿಣ.. ಮುಂತಾದುವುಗಳೆಲ್ಲ ಒಂದು ಕಟ್ಟಡವನ್ನು ಬಲಿಷ್ಠಗೊಳಿಸಬಲ್ಲುದೇ ಹೊರತು ಕುಟುಂಬಗಳನ್ನಲ್ಲ ಅಥವಾ ಜನರ ಆಲೋಚನೆಗಳನ್ನಲ್ಲ. ಇವತ್ತು ಪ್ರತಿದಿನವೂ ಹೊಸ ಹೊಸ ವಿಚಾರಗಳ ಬಗ್ಗೆ ಸಂಶೋಧನೆಗಳಾಗುತ್ತಿವೆ. 10 ವರ್ಷಗಳ ಹಿಂದೆ ಒಂದು ಸೇತುವೆಯನ್ನು ಕಟ್ಟಲು ಎಷ್ಟು ಸಮಯ ಮತ್ತು ಶ್ರಮ ವ್ಯಯಿಸಲಾಗುತ್ತಿತ್ತೋ ಅಷ್ಟು ಶ್ರಮ ಮತ್ತು ಸಮಯ ಇವತ್ತು ವ್ಯಯಿಸಬೇಕಿಲ್ಲ. 20 ಮಂದಿ ಮಾಡುವ ಕೆಲಸವನ್ನು ಇವತ್ತು ಒಂದು ಮೆಷೀನು ಮಾಡುತ್ತದೆ. ಕೇವಲ ಸೇತುವೆ ಎಂದಲ್ಲ, ಎಲ್ಲ ಕ್ಷೇತ್ರಗಳಲ್ಲೂ ಮಾರ್ಪಾಟುಗಳಾಗಿವೆ. ದುರಂತ ಏನೆಂದರೆ, ಈ ಆಧುನಿಕತೆಯ ಬಗ್ಗೆ ಚರ್ಚೆಗಳಾಗುವಷ್ಟು ಇವು ನಮ್ಮ ಆಲೋಚನೆ, ಜೀವನ ವಿಧಾನದ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ಚರ್ಚೆಗಳೇ ಆಗುತ್ತಿಲ್ಲ.
   ನಿಜವಾಗಿ, ರಾಜಕಾರಣಿಗಳು ಎತ್ತಿಕೊಂಡಿರುವ ವಿಷಯಗಳ ಸುತ್ತ ಮಾತ್ರ ಇವತ್ತು ಚರ್ಚೆ ನಡೆಯಬೇಕಾದ್ದಲ್ಲ. ರೂಪಾಯಿ ಅಪಮೌಲ್ಯಕ್ಕಿಂತಲೂ ವೇಗವಾಗಿ ದೇಶದ ನೈತಿಕ ನೆಲೆಗಟ್ಟು ಕುಸಿಯುತ್ತಿದೆ. ಆಧುನಿಕ ಜೀವನ ಕ್ರಮಗಳು ಪ್ರತಿ ಮನೆಯ ಮೇಲೂ ದಾಳಿ ಮಾಡುತ್ತಿವೆ. ವಿಚ್ಛೇದನ ಕೋರಿ ಸಲ್ಲಿಕೆಯಾಗುವ ದೂರುಗಳಲ್ಲಿ ವರ್ಷಂಪ್ರತಿ ಹೆಚ್ಚಳವಾಗುತ್ತಿದೆ. ಪರಾರಿಯಾಗುವ ಹೆಣ್ಮಕ್ಕಳು, ಆತ್ಮಹತ್ಯೆ ಮಾಡಿಕೊಳ್ಳುವ ಯುವಕರು, ಬೀದಿಪಾಲಾಗುವ ಹಿರಿಯರ ಸಂಖ್ಯೆ ದಿನೇದಿನೇ ಹೆಚ್ಚಾಗು ತ್ತಿದೆ. ಆದ್ದರಿಂದ ಪತ್ರಿಕೆಗಳ ತೀರಾ ಒಳಪುಟಗಳಲ್ಲಿ ಒಂದು ಕಾಲಮ್‍ನಲ್ಲಿ ಪ್ರತಿದಿನ ಕಾಣಿಸಿಕೊಳ್ಳುವ ಈ ಪ್ರಕರಣಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ವಾರದ ಏಳೂ ದಿನಗಳನ್ನು ರಾಜಕಾರಣಿಗಳಿಗೆ ವಿೂಸಲಿಡುವ ಬದಲು ಒಂದು ದಿನವನ್ನಾದರೂ ಪತ್ರಿಕೆಗಳು ತಮ್ಮ ಮುಖಪುಟವನ್ನು ಇಂಥ ಸುದ್ದಿಗಳಿಗೆ ವಿೂಸಲಿಡಬೇಕು. ಯಾಕೆಂದರೆ, ಮಾಧ್ಯಮ ಏನನ್ನು ಚರ್ಚಿಸುತ್ತದೋ ಅದನ್ನೇ ಸಮಾಜವೂ ಚರ್ಚಿಸುತ್ತದೆ. ಯಾವುದನ್ನು ಗಂಭೀರ ಸಮಸ್ಯೆ ಅನ್ನುತ್ತದೋ ಜನತೆಯೂ ಅದನ್ನೇ ಒಪ್ಪುತ್ತದೆ. ಆದ್ದರಿಂದಲೇ ಹೊಟೇಲು, ಗೂಡಂಗಡಿಗಳಲ್ಲಿ ಕುಳಿತ ಮಂದಿ ಪಕ್ಕದಲ್ಲಿ ನಡೆದ ಆತ್ಮಹತ್ಯೆಯ ಬದಲು ದೂರದ ಮೋದಿ, ಶಾರುಖ್ ಖಾನ್‍ಗಳ ಬಗ್ಗೆ ಚರ್ಚಿಸುವುದು.
   ಒಂದು ಸಮಾಜದ ಆರೋಗ್ಯವು ಆ ಸಮಾಜ ಕೌಟುಂಬಿಕ ವಾತಾವರಣವನ್ನು ಅವಲಂಬಿಸಿಕೊಂಡಿದೆ. ಕೊಲೆ, ಅತ್ಯಾಚಾರ, ಆತ್ಮಹತ್ಯೆ, ಪರಾರಿ..ಗಳು ಒಂದು ಸಮಾಜದಲ್ಲಿ ಮಾಮೂಲಿಯಾಗುತ್ತಿದೆಯೆಂದರೆ, ಆ ದೇಶ ದುರ್ಬಲವಾಗುತ್ತಿದೆ ಎಂದೇ ಅರ್ಥ. ಅಂಥ ದೇಶದಲ್ಲಿ ಮೋದಿ ಪ್ರಧಾನಿಯಾದರೂ ರಾಹುಲ್ ಪ್ರಧಾನಿಯಾದರೂ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ಕೌಟುಂಬಿಕ ಭದ್ರತೆ, ನೈತಿಕ ಮೌಲ್ಯಗಳನ್ನು ಪಾಲಿಸುವ ಒಂದು ಸಮಾಜವನ್ನು ಕಟ್ಟುವಲ್ಲಿ ಗಂಭೀರ ಚರ್ಚೆ ನಡೆಯಬೇಕಿದೆ. ಭ್ರಷ್ಟಾಚಾರ ಮುಕ್ತ ಭಾರತದಂತೆಯೇ ಅನೈತಿಕ ಮುಕ್ತ ಭಾರತದ ಘೋಷಣೆಯೂ ನಡೆಯಬೇಕಿದೆ. ಇಲ್ಲದಿದ್ದರೆ ಕಾಂಕ್ರೀಟು ಕಟ್ಟಡ ಮತ್ತು ರಸ್ತೆಗಳಲ್ಲಿ ಮಾತ್ರ ಭಾರತ ಬಲಿಷ್ಠವಾದೀತು, ನೈತಿಕವಾಗಿ ಅಲ್ಲ.

Monday 9 September 2013

ಸ್ವಾಮಿನಿಷ್ಠೆಯನ್ನು ಪ್ರತಿಭಟಿಸಿ ಹೊರಟುಹೋದ ರಾಕಸ್ ಮಿಶ್

ರಾಕಸ್ ಮಿಶ್
   ರಾಕಸ್ ಮಿಶ್ (Rochus Misch) ಎಂಬವರ ಸಾವಿನ ಸುದ್ದಿಯನ್ನು ಕಳೆದ ವಾರ ಎಲ್ಲ ಪತ್ರಿಕೆಗಳೂ ಪ್ರಕಟಿಸಿದ್ದುವು. ಹಾಗಂತ, 96 ವರ್ಷದ ಈ ವ್ಯಕ್ತಿ ಯಾವುದಾದರೂ ಬೃಹತ್ ಕಂಪೆನಿಯ ಮುಖ್ಯಸ್ಥರೋ ರಾಷ್ಟ್ರವೊಂದರ ಅಧ್ಯಕ್ಷರೋ ಆಗಿರಲಿಲ್ಲ. ಜರ್ಮನಿಯ ಅಡಾಲ್ಫ್ ಹಿಟ್ಲರನ ಅಂಗರಕ್ಷಕರಾಗಿದ್ದರು ಎಂಬುದನ್ನು ಬಿಟ್ಟರೆ ಈ ವ್ಯಕ್ತಿಗೆ ಬೇರೆ ಯಾವ ವಿಶೇಷತೆಯೂ ಇರಲಿಲ್ಲ. 1945 ಎಪ್ರಿಲ್ 30ರಂದು ಸೇನಾ ನೆಲೆಯೊಂದರಲ್ಲಿ ಹಿಟ್ಲರ್ ಮತ್ತು ಆತನ ಪತ್ನಿ ಈವಾ ಬ್ರೌನ್‍ರು ಆತ್ಮಹತ್ಯೆ ಮಾಡಿಕೊಳ್ಳುವಾಗ ಮಿಶ್ ಹತ್ತಿರವೇ ಇದ್ದರು. ಹಿಟ್ಲರನ ಆಪ್ತ ಮಂತ್ರಿ ಗೋಬೆಲ್ ಮತ್ತು ಪತ್ನಿ ಮಗ್ದಾರು ತಮ್ಮ 6 ಮಕ್ಕಳಿಗೆ ವಿಷವುಣಿಸಿ 1945 ಮೇ ಒಂದರಂದು ಆತ್ಮಹತ್ಯೆ ಗೈದಾಗಲೂ ಮಿಶ್ ಜೊತೆಗಿದ್ದರು. ಬಳಿಕ ಅವರು ಸೇನಾ ನೆಲೆಯಿಂದ ತಪ್ಪಿಕೊಂಡು ಹೊರ ಬಂದರು. ರಶ್ಯನ್ ಸೇನೆಯಿಂದ ಬಂಧನಕ್ಕೀಡಾಗಿ 9 ವರ್ಷ ಸೆರೆಮನೆ ವಾಸ ಅನುಭವಿಸಿದರು. ಬಹುಶಃ ಮೊನ್ನೆ, ಮಿಶ್‍ರ ಸಾವನ್ನು ಮತ್ತು ಅವರನ್ನು ಸುತ್ತಿಕೊಂಡಿರುವ ಈ ಎಲ್ಲ ಸಂಗತಿಗಳನ್ನು ಅತ್ಯಂತ ಆಸಕ್ತಿಯಿಂದ ಓದಿರುವವರಲ್ಲಿ ಮುಂಬೈಯ ತಿಲೋಜ ಜೈಲಿನಲ್ಲಿರುವ ವಂಜಾರ, ದಿನೇಶ್ ಕುಮಾರ್, ಎನ್.ಕೆ. ಅವಿೂನ್.. ಮುಂತಾದವರೂ ಇರಬಹುದು. ಮಾತ್ರವಲ್ಲ, ತಮ್ಮ ಜೈಲು ವಾಸಕ್ಕಿರುವ ಕಾರಣಗಳ ಜೊತೆ ಹಿಟ್ಲರ್, ಮಿಶ್‍ರನ್ನು ಇಟ್ಟು ಹೋಲಿಸಿ ನೋಡಿರಲೂ ಬಹುದು.
   ನಿಜವಾಗಿ, ವಂಜಾರ ಮತ್ತು ಅವರ ತಂಡಕ್ಕೂ ರಾಕಸ್ ಮಿಶ್‍ರಿಗೂ ಖಂಡಿತ ಕೆಲವು ವ್ಯತ್ಯಾಸಗಳಿವೆ. ವಂಜಾರ ಮತ್ತು ತಂಡವನ್ನು ಈ ದೇಶದ ನ್ಯಾಯಾಲಯ ಈ ವರೆಗೂ ಅಪರಾಧಿ ಎಂದು ಘೋಷಿಸಿಲ್ಲ. ಅಮಾಯಕರನ್ನು ಹತ್ಯೆ ಮಾಡುವಂತೆ ಅವರಿಗೆ ಯಾರು ಆದೇಶಿಸಿದ್ದರೋ ಅವರ ಅಪರಾಧವೂ ಸಾಬೀತಾಗಿಲ್ಲ. ಆದರೆ, ಇವರೆಲ್ಲ ಅಪರಾಧಿಗಳಾಗಿ ಘೋಷಣೆಗೀಡಾಗುವ ಸಾಧ್ಯತೆಗಳು ದಿನೇ ದಿನೇ ಹೆಚ್ಚಾಗುತ್ತಿವೆ ಎಂಬುದರಿಂದಲೇ ಮಿಶ್ ಮುಖ್ಯವಾಗುತ್ತಾರೆ. ಅಷ್ಟಕ್ಕೂ, ಎರಡನೇ ಜಾಗತಿಕ ಸಮರದಲ್ಲಿ ಹಿಟ್ಲರ್ ಜಯ ಗಳಿಸುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಮಿಶ್ ಜೈಲಿಗೆ ಹೋಗುತ್ತಿದ್ದರೇ? ಗೋಬೆಲ್, ಮಗ್ದಾ, ಈವಾ ಮುಂತಾದವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೇ? ಹಿಟ್ಲರನ ಮೇಲೆ ಸಾವಿರಾರು ಯಹೂದಿಯರನ್ನು ಹತ್ಯೆ ಮಾಡಿರುವ ಆರೋಪ ಇದೆ. ಒಂದು ವೇಳೆ, ಆತ ಯುದ್ಧದಲ್ಲಿ ಜಯಿಸಿರುತ್ತಿದ್ದರೆ, ಸಾವಿಗೀಡಾದವರನ್ನೆಲ್ಲ ಭಯೋತ್ಪಾದಕರೆಂದೋ ದೇಶದ್ರೋಹಿಗಳೆಂದೋ ಘೋಷಿಸಿ ಬಿಡುವ ಸಾಧ್ಯತೆ ಖಂಡಿತ ಇತ್ತು. ಅಧಿಕಾರವು ಎಲ್ಲ ಕ್ರೌರ್ಯಗಳನ್ನೂ ಕಾಲದ ಅನಿವಾರ್ಯತೆಗಳಾಗಿ ಮಾರ್ಪಡಿಸಿ ಬಿಡುತ್ತದೆ. ದೇಶದ್ರೋಹಿ ಅಥವಾ ದೇಶ ಪ್ರೇಮದ ವ್ಯಾಖ್ಯಾನಗಳು ಅಧಿಕಾರಸ್ಥರನ್ನು ಹೊಂದಿಕೊಂಡು ಬದಲಾಗುತ್ತಿರುತ್ತದೆ. ಓರ್ವ ಸಾಮಾನ್ಯ ವ್ಯಕ್ತಿಯನ್ನು ಭಯೋತ್ಪಾದಕನೆಂದು ಬಿಂಬಿಸುವ ಮತ್ತು ಹತ್ಯೆ ಮಾಡುವ ಕೆಲಸವು ಓರ್ವ ಪ್ರಧಾನಿಗೋ ಮುಖ್ಯಮಂತ್ರಿಗೋ ಕಷ್ಟದ್ದಲ್ಲ. ಯಾಕೆಂದರೆ ಒಂದಿಡೀ ವ್ಯವಸ್ಥೆಯೇ ಅವರ ಅಧೀನದಲ್ಲಿರುತ್ತದೆ. ಅವರು ಕೆಲವು ನಂಬಿಗಸ್ಥ ಅಧಿಕಾರಿಗಳ ಮೂಲಕ ಆಡನ್ನು ನಾಯಿಯನ್ನಾಗಿಯೂ ನಾಯಿಯನ್ನು ಆಡನ್ನಾಗಿಯೂ ಪರಿವರ್ತಿಸಬಲ್ಲರು. ಈ ದೇಶದಲ್ಲಿ ನಡೆದ ಅನೇಕಾರು ಹತ್ಯಾ ಕಾಂಡಗಳ ಸುತ್ತ ಇಂಥದ್ದೊಂದು ಅನುಮಾನ ಇದ್ದೇ ಇದೆ. ಗುಜರಾತ್ ಹತ್ಯಾಕಾಂಡ ಮತ್ತು ಎನ್‍ಕೌಂಟರ್‍ಗಳು ಅವುಗಳಲ್ಲಿ ಒಂದು ಎಂದಷ್ಟೇ ಹೇಳಬಹುದಾಗಿದೆ. ಒಂದು ವೇಳೆ, ಗುಜರಾತನ್ನು ಆಳುತ್ತಿರುವ ಪಕ್ಷವೇ ಇವತ್ತು ಕೇಂದ್ರದಲ್ಲಿಯೂ ಅಧಿಕಾರದಲ್ಲಿರುತ್ತಿದ್ದರೆ ವಂಜಾರ ಮತ್ತು ತಂಡ ಜೈಲಿಗೆ ಹೋಗುವ ಸಾಧ್ಯತೆ ಇತ್ತೇ ಎಂಬ ಪ್ರಶ್ನೆ ಈ ದೇಶದ ಅಸಂಖ್ಯ ಮಂದಿಯನ್ನು ಇವತ್ತು ಕಾಡುತ್ತಿರಬಹುದು. ಮೋದಿ ಪ್ರಧಾನಿಯಾದರೆ ಗುಜರಾತ್  ಹತ್ಯಾಕಾಂಡದ ತನಿಖೆ ಯಾವ ಸ್ಥಿತಿಗೆ ಮುಟ್ಟಬಹುದು ಎಂಬ ಕುತೂಹಲವೂ ಇರಬಹುದು. ಒಂದು ರೀತಿಯಲ್ಲಿ, ಈ ದೇಶದಲ್ಲಿ ಬೆಳಕಿಗೆ ಬರುವ ಹತ್ಯಾಕಾಂಡಗಳಿಗೂ ರಾಜಕೀಯಕ್ಕೂ ಸಂಬಂಧ ಇದೆ. ಆಡಳಿತ ಪಕ್ಷ  ಬದಲಾಗುವಾಗ ಅದರ ಕ್ರೌರ್ಯಗಳೂ ಬಯಲಾಗತೊಡಗುತ್ತದೆ. ಮಾತ್ರವಲ್ಲ, ಕಾನೂನನ್ನು ಕಡೆಗಣಿಸಿ ಅವರ ಬಂಟರಂತೆ ಕೆಲಸ ಮಾಡಿದ ಅಧಿಕಾರಿಗಳ ಮುಖವೂ ಬಹಿರಂಗವಾಗುತ್ತದೆ.
   ಹಿಟ್ಲರನ ಜೊತೆಗಿದ್ದ ರಾಕಸ್ ಮಿಶ್‍ರು ಹತ್ಯಾಕಾಂಡದಲ್ಲೇನೂ ಭಾಗಿಯಾಗಿರಲಿಲ್ಲ. ಆದರೆ ಹಿಟ್ಲರನ ನಿಲುವನ್ನು, ಗೋಬೆಲ್‍ನ ತಂತ್ರವನ್ನು ಬೆಂಬಲಿಸುವಂಥ ಮನಸ್ಥಿತಿಯನ್ನು ಅವರು ಬೆಳೆಸಿಕೊಂಡಿದ್ದರು. ತನ್ನನ್ನು ಈ ಮಂದಿ ಕಾಪಾಡುತ್ತಾರೆ ಎಂಬ ಹುಂಬ ಧೈರ್ಯ ಅವರಲ್ಲಿತ್ತು. ವಂಜಾರ ಮತ್ತು ಅವರ 'ಎನ್‍ಕೌಂಟರ್' ತಂಡದ ಮನಸ್ಥಿತಿ ಬಹುತೇಕ ಹೀಗೆಯೇ ಇತ್ತು ಎಂಬುದನ್ನು 'ವಂಜಾರ' ಪತ್ರವೇ ಸ್ಪಷ್ಟಪಡಿಸುತ್ತದೆ. ಈ ತಂಡ ಮಿಶ್‍ಗಿಂತ ಸಾಕಷ್ಟು ಪಳಗಿತ್ತು. ತನ್ನ ನಾಯಕನಿಗಾಗಿ ಯಾವ ಮಟ್ಟಕ್ಕೆ ಹೋಗಲೂ ಅದು ಸಿದ್ಧವಿತ್ತು. ಸಂವಿಧಾನವನ್ನು ಉಲ್ಲಂಘಿಸಿ ಮಾಡುವ ಈ ಕಾರ್ಯದಲ್ಲಿ ನಾಯಕ ತಮ್ಮನ್ನು ರಕ್ಷಿಸುತ್ತಾನೆ ಎಂದು ಅದು ನಂಬಿತ್ತು. ಇದೀಗ ಈ ತಂಡ ಕುಪಿತಗೊಂಡಿದೆ. ನಾಯಕ ತಮ್ಮನ್ನು ರಕ್ಷಿಸುತ್ತಿಲ್ಲ ಎಂದು ಸಿಟ್ಟಾಗಿದೆ. ಈ ಸಂದರ್ಭದಲ್ಲೇ ಮಿಶ್ ಸಾವಿಗೀಡಾಗಿರುವುದು ಕಾಕತಾಳೀಯವಾಗಿದ್ದರೂ ಖಂಡಿತ ಆ ಸಾವಿನಲ್ಲಿ ದೊಡ್ಡದೊಂದು ಪಾಠವಿದೆ. ನಿಜವಾಗಿ, ರಾಕಸ್ ಮಿಶ್‍ನ ಬಗ್ಗೆ ನಾವು ಆಸಕ್ತಿ ತಾಳಬೇಕಾದದ್ದು ಆತನ ಸ್ವಾಮಿನಿಷ್ಠೆಯ ಪಾತ್ರಕ್ಕಾಗಿ. ಈ ದೇಶದಲ್ಲಿ ಮಿಶ್‍ನಂತೆ ಸ್ವಾಮಿನಿಷ್ಠೆಯೊಂದಿಗೆ ಕೆಲಸ ಮಾಡುವ ಅಧಿಕಾರಿಗಳು ಧಾರಾಳ ಇದ್ದಾರೆ. ಅವರಿಗೆ ಸಂವಿಧಾನಕ್ಕಿಂತ ಅಧಿಕಾರಸ್ಥರ ಆದೇಶವೇ ಮೇಲು. ಅವರಿಗಾಗಿ ಯಾರನ್ನು ಬೇಕಾದರೂ ಭಯೋತ್ಪಾದಕರಾಗಿಸಲು, ಆರೋಪ ಹೊರಿಸಿ ಜೈಲಿಗಟ್ಟಲು ಅವರು ಸಿದ್ಧರು. ವಂಜಾರ ಮತ್ತು ತಂಡವು ಈಗಾಗಲೇ ಇದನ್ನು ಒಪ್ಪಿಕೊಂಡಿದೆ. ಮಾತ್ರವಲ್ಲ, ನಾಯಕರನ್ನು ನಂಬಿ ಕಾನೂನನ್ನು ಉಲ್ಲಂಘಿಸಬೇಡಿ ಎಂದೂ ಅದು ಎಲ್ಲ ಅಧಿಕಾರಿಗಳಿಗೂ ಪರೋಕ್ಷವಾಗಿ ಮನವಿ ಮಾಡಿದೆ. ಆ ಮನವಿಯ ಬೆನ್ನಿಗೇ, 'ಇನ್ನು ನಾನು ಇಲ್ಲಿರಲಾರೆ' ಎಂದು ಘೋಷಿಸಿ ರಾಕಸ್ ಮಿಶ್  ಹೊರಟು ಹೋಗಿದ್ದಾರೆ.
ವಂಜಾರ

ಸರ್ವಾಧಿಕಾರಿಯಾಗಿದ್ದ  ಹಿಟ್ಲರ್ ನ ಕಾಲದಲ್ಲಿ ತಾನು ತೋರಿದ ಸ್ವಾಮಿನಿಷ್ಟೆಯನ್ನು ಈ ಪ್ರಜಾತಂತ್ರ ಯುಗದಲ್ಲೂ ಕೆಲವರು ಮುಂದುವರಿಸಿರುವುದಕ್ಕೆ ಅವರು ವ್ಯಕ್ತಪಡಿಸಿದ ಪ್ರತಿಭಟನೆಯೆಂದೇ ಈ ಸಾವನ್ನು ನಾವು  ಪರಿಗಣಿಸಬೇಕಾಗಿದೆ. ಮಾತ್ರವಲ್ಲ, ಅವರ ಸಾವು ಸ್ವಾಮಿನಿಷ್ಠೆಯ ಬದಲು ಸಂವಿಧಾನ ನಿಷ್ಠೆಯನ್ನು ಆಯ್ಕೆ ಮಾಡಿಕೊಳ್ಳಲು ನಮ್ಮ ಅಧಿಕಾರಿಗಳಿಗೆ ಪ್ರೇರಕವಾಗಬೇಕಾಗಿದೆ.

Monday 2 September 2013

‘ನಿರ್ಭಯ’ಳ ಮೇಲೆ ಮತ್ತೊಮ್ಮೆ ಅತ್ಯಾಚಾರ?

   ಅತ್ಯಾಚಾರಕ್ಕೆ ಪ್ರೇರಕವಾಗುವ ಅಂಶಗಳ ಬಗ್ಗೆ ಸಮಾಜದಲ್ಲಿ ಭಿನ್ನಾಭಿಪ್ರಾಯಗಳೇನೇ ಇರಲಿ, ಅತ್ಯಾಚಾರಿಗೆ ಯಾವ ಶಿಕ್ಷೆ ಕೊಡಬೇಕು ಎಂಬ ಬಗ್ಗೆ ಈ ದೇಶದಲ್ಲಿ ಬಹುತೇಕ ಒಮ್ಮತ ಇದೆ. ನೇಣಿಗಿಂತ ಕಡಿಮೆಯದಾದ ಶಿಕ್ಷೆಯನ್ನು ಯಾರೂ ಇವತ್ತು ಪ್ರತಿಪಾದಿಸುತ್ತಿಲ್ಲ. ಇಂಥ ಹೊತ್ತಲ್ಲಿ, ದೆಹಲಿಯ ನಿರ್ಭಯಳ ಮೇಲಿನ ಅತ್ಯಾಚಾರ ಮತ್ತು ಹತ್ಯೆಯಲ್ಲಿ ಭಾಗಿಯಾದ ಆರೋಪಿ ಮನೋಜ್ ನಿಗೆ ನ್ಯಾಯಮಂಡಳಿಯು 3 ವರ್ಷಗಳ ಶಿಕ್ಷೆಯನ್ನು ಘೋಷಿಸಿದೆ. ನಿಜವಾಗಿ, ಇದು ಸಂತ್ರಸ್ತ ಕುಟುಂಬವನ್ನು ಮಾತ್ರವಲ್ಲ, ಈ ಬರ್ಬರ ಘಟನೆಯ ವಿರುದ್ಧ ಸಿಡಿದು ನಿಂತ ಎಲ್ಲರನ್ನೂ ಆಘಾತಕ್ಕೆ ಒಳಪಡಿಸಿದೆ. ಆರೋಪಿ ಅಪ್ರಾಪ್ತನಾಗಿದ್ದು, ಇದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.
   ಒಂದು ರೀತಿಯಲ್ಲಿ, ಈ ತೀರ್ಪು ನಿರ್ಭಯಳ ಮೇಲೆ ಮತ್ತೊಮ್ಮೆ ಎಸಗಲಾದ ಅತ್ಯಾಚಾರ. ಓರ್ವ ವ್ಯಕ್ತಿಗೆ ಅತ್ಯಾಚಾರ ಎಸಗುವ ಮತ್ತು ಬರ್ಬರವಾಗಿ ವರ್ತಿಸುವ ಸಾಮರ್ಥ್ಯ ಇದೆಯೆಂದಾದರೆ ಆತನನ್ನು ಅಪ್ರಾಪ್ತ ಎಂದು ಯಾಕೆ ಪರಿಗಣಿಸಬೇಕು? ಅಪ್ರಾಪ್ತಕ್ಕೆ ಇರುವ ಮಾನದಂಡ ಏನು? ಪ್ರಾಪ್ತ ವಯಸ್ಕ ಎಸಗುವ ಕ್ರೌರ್ಯಗಳನ್ನೇ ಓರ್ವ ಅಪ್ರಾಪ್ತನೂ ಎಸಗಬಲ್ಲನೆಂದಾದರೆ ಅವರನ್ನು ಪ್ರಾಪ್ತ ಮತ್ತು ಅಪ್ರಾಪ್ತ ಎಂದು ಯಾಕೆ ವಿಭಜಿಸಬೇಕು? ನಿರ್ಭಯಳ ಜೊತೆ ಅತ್ಯಂತ ಬರ್ಬರವಾಗಿ ವರ್ತಿಸಿದ್ದು ಈ ಅಪ್ರಾಪ್ತನೇ ಎಂದು ವರದಿಗಳು ಹೇಳಿವೆ. ಆದರೆ ಸದ್ಯ ಆತ ಜೈಲಿನ ಬದಲು ಸುಧಾರಣಾ ಕೇಂದ್ರದಲ್ಲಿ ದಿನ ಕಳೆಯುತ್ತಿದ್ದಾನೆ. ಟಿ.ವಿ., ಆಟಿಕೆಗಳು ಮುಂತಾದ ಸೌಲಭ್ಯಗಳನ್ನು ಆತನಿಗೆ ಒದಗಿಸಲಾಗಿದೆ. ಅಪ್ರಾಪ್ತನಾಗಿರುವುದರಿಂದ ಜೈಲು ಎಂಬುದು ಆತನ ಪಾಲಿಗೆ ಪುನರ್ ವಸತಿ ಕೇಂದ್ರವಾಗಿ ಮಾರ್ಪಟ್ಟಿದೆ. ಕ್ರೌರ್ಯದಲ್ಲಿ ಪ್ರಾಪ್ತರನ್ನೂ ವಿೂರಿಸುವಂತೆ ವರ್ತಿಸಿದ್ದರೂ ಜುಜುಬಿ ಶಿಕ್ಷೆ ಪಡಕೊಂಡು ಪಾರಾಗಬಹುದಾದ ಇಂಥ ಕಾನೂನುಗಳು ಯಾಕೆ ಇನ್ನೂ ಜೀವಂತವಿವೆ? ನಿಜವಾಗಿ, ಓರ್ವನು ಪ್ರಾಪ್ತನೋ ಅಪ್ರಾಪ್ತನೋ ಎಂಬುದನ್ನು ನಿರ್ಧರಿಸುವುದಕ್ಕಿರುವ ಅತ್ಯುತ್ತಮ ಮಾನದಂಡ ಏನೆಂದರೆ, ಅದು ಆತನ ವರ್ತನೆ. ಶಾಲಾ ಮಕ್ಕಳು ಪೆನ್ಸಿಲೋ ಪೆನ್ನೋ, ಸ್ಕೇಲೋ ಕದಿಯಬಹುದು. ಟಿಫಿನ್ ಬಾಕ್ಸ್ ನಿಂದ ಕದ್ದು ಏನಾದರೂ ತಿನ್ನಬಹುದು. ಮಕ್ಕಳ ಪ್ರಾಯವನ್ನು ಹೊಂದಿಕೊಂಡು ಇವೆಲ್ಲ ಸಹಜ ಅನ್ನಿಸಿಕೊಳ್ಳುತ್ತದೆ. ಹಾಗಂತ, 20 ವರ್ಷದ ಯುವಕನೊಬ್ಬ ತನ್ನ ಸಹಪಾಠಿಯ ಪೆನ್ನು ಕದಿಯುವುದು, ಟಿಫಿನ್ ಬಾಕ್ಸ್ ನಿಂದ ಕದ್ದು ತಿನ್ನುವುದು ಸಾಧ್ಯವಿಲ್ಲ. ಯಾಕೆಂದರೆ, ಆ ಪ್ರಾಯದಲ್ಲಿ ಅದು ತೀರಾ ಅಸಹಜ. ಬಾಲ್ಯಕ್ಕೂ ಯೌವನಕ್ಕೂ ವ್ಯತ್ಯಾಸ ಇದೆ. ಮಧ್ಯ ವಯಸ್ಕರಿಗೂ ಹಿರಿಯರಿಗೂ ವ್ಯತ್ಯಾಸ ಇದೆ. ಹಿರಿಯರಾಡುವ ಅನುಭವದ ಮಾತುಗಳನ್ನು ಯುವಕರಿಂದ ನಿರೀಕ್ಷಿಸುವುದು ಖಂಡಿತ ತಪ್ಪು. ಮಧ್ಯ ವಯಸ್ಕರ ಆಲೋಚನಾ ವಿಧಾನವನ್ನು ಮಕ್ಕಳಲ್ಲಿ ಹುಡುಕುವುದು ತೀರಾ ಬಾಲಿಶತನ. 25 ವರ್ಷದ ಯುವತಿಯೊಬ್ಬಳು ಪೆನ್ಸಿಲ್ ಕದ್ದಿದ್ದಾಳೆ ಎಂದು ಯಾರಾದರೂ ಆರೋಪಿಸಿದರೆ, ಸಹಜವಾಗಿ, ಕದ್ದವಳ ಆರೋಗ್ಯದ ಬಗ್ಗೆ ಚರ್ಚೆಯಾಗಬಹುದೇ ಹೊರತು ಕಳ್ಳತನದ ಬಗ್ಗೆಯಲ್ಲ. ಯಾಕೆಂದರೆ, ಪೆನ್ಸಿಲ್ ಕದಿಯುವುದು ಆ ವಯಸ್ಸಿಗೆ ಸಂಬಂಧಿಸಿ ತೀರಾ ಅಸಹಜ. ಈ ಕಾರಣದಿಂದಲೇ ದೆಹಲಿ ಅತ್ಯಾಚಾರದ ಆರೋಪಿಯ ಅಪ್ರಾಪ್ತತನವನ್ನು ಚರ್ಚೆಗೆ ಒಳಪಡಿಸಬೇಕಾಗಿದೆ. ಅಂದಹಾಗೆ,  18 ವರ್ಷಕ್ಕಿಂತ ಮೊದಲು ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಸಾಧ್ಯವಿಲ್ಲ ಎಂದೇನೂ ಸಾಬೀತಾಗಿಲ್ಲವಲ್ಲ. 18 ವರ್ಷಕ್ಕಿಂತ ಕೆಳಗಿನ ಅಸಂಖ್ಯ ಮಂದಿ ಇವತ್ತು ಈ ದೇಶದಲ್ಲಿ ಕಾನೂನನ್ನು ವಂಚಿಸಿ ಮದುವೆಯಾಗುತ್ತಿದ್ದಾರೆ. ಮಕ್ಕಳೂ ಆಗುತ್ತಿವೆ. ವಿಜ್ಞಾನವು ಸಾಕಷ್ಟು ಬೆಳೆದಿರುವ ಇಂದಿನ ದಿನಗಳಲ್ಲಿ ಮಕ್ಕಳು ತಮ್ಮ ವಯಸ್ಸಿಗಿಂತಲೂ ಪ್ರೌಢವಾಗಿ ವರ್ತಿಸುವುದಕ್ಕೆ ಪ್ರಚೋದಕವಾಗುವಂಥವು ಧಾರಾಳ ಇವೆ. ಇಂಟರ್‍ನೆಟ್‍ನಲ್ಲಿ ಒಂದು ಗುಂಡಿ ಅದುಮಿದರೆ ಪ್ರಾಪ್ತರು-ಅಪ್ರಾಪ್ತರು ಎಂಬ ಬೇಧವಿಲ್ಲದೇ ಎಲ್ಲರೆದುರು ಎಲ್ಲವೂ ತೆರೆದುಕೊಳ್ಳುತ್ತದೆ. ಅಪ್ರಬುದ್ಧರನ್ನು ಪ್ರಬುದ್ಧ ಮಾಡುವಷ್ಟು ವಿಷಯಗಳ ಖಜಾನೆಯೇ ಅದರೊಳಗಿದೆ. ಅಲ್ಲದೇ, ಇಂದಿನ ಯುವಪೀಳಿಗೆಯನ್ನು ಇವುಗಳಿಂದ ತಡೆದು ನಿಲ್ಲಿಸುವುದಕ್ಕೆ ಯಾವ ವ್ಯವಸ್ಥೆಯೂ ನಮ್ಮ ಬಳಿ ಇಲ್ಲ. ಹೀಗಿರುವಾಗ, 18 ವರ್ಷದ ಒಳಗಿನವರನ್ನು ಸಾರಾಸಗಟು ಅಪ್ರಾಪ್ತರೆಂದು ಮುದ್ರೆ ಒತ್ತಿ ಬಿಡುವುದು ಎಷ್ಟು ಸರಿಯೆನಿಸಬಹುದು? ಅಷ್ಟಕ್ಕೂ, ‘ನಿರ್ಭಯ’ ಪ್ರಕರಣದಲ್ಲಿ ಈ ಅಪ್ರಾಪ್ತನ ಮೇಲಿನ ಆರೋಪ ಸಾಬೀತಾಗಿದೆ. ಆತ ಕಾನೂನಿನ ಪ್ರಕಾರ ಅಪ್ರಾಪ್ತನಾಗಿದ್ದರೂ ದೈಹಿಕವಾಗಿ ಮತ್ತು ಲೈಂಗಿಕವಾಗಿ ಪ್ರಾಪ್ತನೇ ಆಗಿದ್ದ.  ಪ್ರಾಪ್ತರಲ್ಲಿ ಮೂಡಬಹುದಾದ ಎಲ್ಲ ಲೈಂಗಿಕ ಭಾವನೆಗಳೂ ಆತನಲ್ಲೂ ಮೂಡಿದ್ದುವು. ಅಲ್ಲದೇ, 17 ವರ್ಷದ ಯುವಕನೊಬ್ಬ ಅತ್ಯಾಚಾರ ಎಸಗಿದ ಎಂಬ ಸುದ್ದಿ ಇವತ್ತು ಸಮಾಜದಲ್ಲಿ ಅಚ್ಚರಿಯ ಸಂಗತಿಯಾಗಿಯೇನೂ ಉಳಿದಿಲ್ಲ. ಆ ಪ್ರಾಯದಲ್ಲಿ ಅಂಥದ್ದೊಂದು ಕ್ರೌರ್ಯ ಸಾಧ್ಯ ಎಂದು ಸಮಾಜವೇ ಇವತ್ತು ಒಪ್ಪಿಕೊಂಡಿದೆ. ಹೀಗಿರುವಾಗ, 18 ವರ್ಷ ಎಂಬ ಕಾನೂನಿನ ಮಿತಿಯನ್ನು ಬಲವಾಗಿ ಹಿಡಿದುಕೊಂಡು ನ್ಯಾಯ ತೀರ್ಮಾನ ಮಾಡುವ ವಾತಾವರಣವನ್ನು ಇನ್ನೂ ಯಾಕೆ ನಾವು ಮುಂದುವರಿಸಬೇಕು? ಪ್ರಾಪ್ತ ವಯಸ್ಸಿನ ಮಿತಿ ಹದಿನೆಂಟೇ ಇದ್ದರೂ ಅಪರೂಪದ ಪ್ರಕರಣಗಳಲ್ಲಿ ವಿವೇಚನಾಧಿಕಾರವನ್ನು ಬಳಸಿಕೊಂಡು ತೀರ್ಪು ನೀಡುವ ಅವಕಾಶವನ್ನು ನ್ಯಾಯಾಧೀಶರಿಗೆ ಕೊಡಬಹುದಲ್ಲವೇ?
   ಜಗತ್ತು ಇವತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಆಧುನಿಕ ಸೌಲಭ್ಯಗಳು ಯುವಪೀಳಿಗೆಯನ್ನು ಅತಿವೇಗವಾಗಿ ಪ್ರೌಢಗೊಳಿಸುತ್ತಿವೆ. ಇಂಥ ಹೊತ್ತಲ್ಲಿ, ಪ್ರಾಪ್ತ ಮತ್ತು ಅಪ್ರಾಪ್ತತೆಯನ್ನು ವಿಭಜಿಸುವುದು ಸುಲಭವಲ್ಲ. 25 ವರ್ಷಗಳ ಹಿಂದೆ 25 ವರ್ಷ ಪ್ರಾಯದ ಮಂದಿ ಹೇಗೆ ಆಲೋಚಿಸುತ್ತಿ ದ್ದರೋ ಹಾಗೆ ಇವತ್ತು 18 ವರ್ಷದ ಮಂದಿಯೇ ಆಲೋಚಿಸುತ್ತಾರೆ. ಕೆಲವೊಮ್ಮೆ ಅವರಿಗಿಂತಲೂ ಪ್ರೌಢವಾಗಿ ಅಥವಾ ಕ್ರೂರವಾಗಿ ವರ್ತಿಸುವಷ್ಟೂ ಬೆಳೆದಿರುತ್ತಾರೆ. ಆದ್ದರಿಂದ 18 ಎಂಬ ರೇಖೆಯೊಂದನ್ನು ಎಳೆದು ಎಲ್ಲ ಅಪರಾಧಗಳನ್ನೂ ಅದರ ಮೇಲೆ ಅಥವಾ ಕೆಳಗೆ ಎಂದು ವಿಂಗಡಿಸು
ವುದು ಅನೇಕ ಬಾರಿ ಹಾಸ್ಯಾಸ್ಪದವಾಗಿ ಬಿಡುತ್ತದೆ. ಬರ್ಬರ ಕ್ರೌರ್ಯವನ್ನು ಎಸಗಿದವರು ಕೂಡ ಕೆಲವೊಮ್ಮೆ ಇದರ ಲಾಭ ಪಡೆದು ಒಟ್ಟು ಕಾನೂನನ್ನೇ ನಗೆಪಾಟಲು ಮಾಡಿಬಿಡುತ್ತಾರೆ. ಮಾತ್ರವಲ್ಲ, ಸಂತ್ರಸ್ತರು ನ್ಯಾಯಾಂಗದ ಮೇಲೆಯೇ ವಿಶ್ವಾಸವನ್ನು ಕಳಕೊಂಡು ಬಿಡುವಷ್ಟು ಅದು ಅತಿರೇಕವಾಗಿ ಬಿಡುತ್ತದೆ. ‘ನಿರ್ಭಯ' ಪ್ರಕರಣದಲ್ಲಿ ಸಾಬೀತಾಗಿರುವುದು ಇದುವೇ.