Monday 7 October 2013

ನಮ್ಮ ಮುಖವಾಡದ ಬದುಕಿಗೆ ಕೀಟನಾಶಕ ಎಸೆದ ದಂಪತಿಗಳು..

   ಲಿಂಗಪ್ಪ ಗೌಡ ಮತ್ತು ತಿಮ್ಮಕ್ಕ ಎಂಬೆರಡು ಹೆಸರುಗಳು ಮೋದಿ, ರಾಹುಲ್, ಲಾಲೂ, ಸೋನಿಯಾ.. ಮುಂತಾದ ಹೆಸರುಗಳ ಮುಂದೆ ಏನೇನೂ ಅಲ್ಲ ಎಂಬ ಏಕೈಕ ಕಾರಣಕ್ಕಾಗಿ ಈ ಇಬ್ಬರ ದೂರುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಲಿಂಗಪ್ಪರದು ಸರಿಸುಮಾರು ಮೋದಿಯ ವಯಸ್ಸು - 65. ತಿಮ್ಮಕ್ಕರದು ಸೋನಿಯಾರ ವಯಸ್ಸು - 60. ಈ ಎರಡು ಸಾಮ್ಯತೆಗಳನ್ನು ಬಿಟ್ಟರೆ ಉಳಿದಂತೆ ಮೋದಿ ಮತ್ತು ಸೋನಿಯಾರೊಂದಿಗೆ ಹೋಲಿಸಿಕೊಳ್ಳುವುದಕ್ಕೆ ಈ ಇಬ್ಬರಲ್ಲಿ ಯಾವುದೂ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್‍ರ ಊರಾದ ಸುಳ್ಯದಲ್ಲಿ ವಾಸಿಸುತ್ತಿರುವ ಈ ದಂಪತಿಗಳಿಗೆ ಮಕ್ಕಳಿಲ್ಲ. ಇವರನ್ನು ಯಾವ ಕುಟುಂಬಗಳು ಆರೈಕೆ ಮಾಡಬೇಕಿತ್ತೋ, ಅವೇ ತಿರಸ್ಕರಿಸಿವೆ. ದೊಡ್ಡಿಯಲ್ಲಿ ಕೂಡಿಟ್ಟು, ಉಪವಾಸ ಕೂರಿಸಿವೆ. ಕೊನೆಗೆ ನೆರೆಯವರೊಂದಿಗೆ ಸಾಲ ಪಡೆದು ಕೀಟನಾಶಕ ಖರೀದಿಸಿ ತಂದು, ಸೇವಿಸಿ ಈ ಹಿರಿ ಜೀವಗಳು ಕಳೆದ ವಾರ ಆತ್ಮಹತ್ಯೆಗೆ ಯತ್ನಿಸಿವೆ.
   ನಿಜವಾಗಿ, ಲಿಂಗಪ್ಪ ಮತ್ತು ತಿಮ್ಮಕ್ಕರನ್ನು ಇಬ್ಬರು ವ್ಯಕ್ತಿಗಳಾಗಿಯಷ್ಟೇ ನಾವು ಪರಿಗಣಿಸಬೇಕಾದ್ದಲ್ಲ. ಇವರು ಅಸಂಖ್ಯ ವ್ಯಕ್ತಿಗಳ ಎರಡು ಜೀವಂತ ಪ್ರತಿನಿಧಿಗಳು ಮಾತ್ರ. ಇವರ ದೌರ್ಬಲ್ಯ ಯಾವುದೆಂದರೆ ಪ್ರಾಯ. ಹಾಗಂತ, ಪ್ರಾಯ ಎಂಬುದು ಕೆಲವೇ ಕೆಲವು ನಿರ್ದಿಷ್ಟ ಜಾತಿ, ಧರ್ಮ, ಭಾಷೆಯ ಮಂದಿಯನ್ನು ಹುಡುಕಿಕೊಂಡು ಬರುವ ಕಾಯಿಲೆ ಏನಲ್ಲ. ಮುಪ್ಪು ಎಂಬುದು ಬದುಕಿನ ಸಹಜ ಪ್ರಕ್ರಿಯೆ. ವೃದ್ಧರಿಗೆ ಹಿಂಸೆ ಕೊಡುವವರು ಒಂದು ಕಾಲದಲ್ಲಿ ಖಂಡಿತ ವೃದ್ಧಾಪ್ಯಕ್ಕೆ ತಲುಪುತ್ತಾರೆ. ಇವು ಅವರಿಗೂ ಗೊತ್ತು. ಹಾಗಿದ್ದೂ ನಮ್ಮ ನಡುವಿನ ಈ ‘ಅನುಭವಿಗಳನ್ನು' ಆತ್ಮಹತ್ಯೆಗೆ ಪ್ರಚೋದಿಸುವಷ್ಟು ನಾವು ಕ್ರೂರರಾಗುತ್ತೇವಲ್ಲ, ಯಾಕೆ? ಯಾವುದು ನಮ್ಮನ್ನು ಇಂಥ ವರ್ತನೆಗೆ ಪ್ರೇರೇಪಿಸುತ್ತಿವೆ? ಆಧುನಿಕತೆಯೇ, ಓದೇ, ಜೀವನ ಕ್ರಮಗಳೇ..? ಇಷ್ಟಕ್ಕೂ, ಲಿಂಗಪ್ಪರನ್ನೋ ತಿಮ್ಮಕ್ಕರನ್ನೋ ಎತ್ತಿಕೊಂಡು ಗಂಭೀರ ಚರ್ಚೆಯೊಂದು ಆರಂಭವಾಗುವಂತಹ ವಾತಾವರಣ ನಮ್ಮ ಸುತ್ತ-ಮುತ್ತ ಇವತ್ತು ಕಾಣಿಸುತ್ತಾ ಇಲ್ಲ. ಯಾಕೆಂದರೆ, ವೃದ್ಧರಿಗೆ ಪ್ರತಿಭಟನೆ ಮಾಡುವಷ್ಟು ಆರೋಗ್ಯ ಇಲ್ಲ. ಪತ್ರಿಕಾಗೋಷ್ಠಿ ಕರೆಯುವ ಸಾಮರ್ಥ್ಯ  ಇಲ್ಲ. ತಮ್ಮಂತೆ ಸಂಕಟಪಡುವ ವೃದ್ಧರನ್ನೆಲ್ಲಾ ಒಟ್ಟು ಸೇರಿಸುವ ಸಂಪರ್ಕ ಜಾಲವೂ ಅವರಲ್ಲಿಲ್ಲ. ಒಂದು ವೇಳೆ, ಇಂಥ ಸಾಮರ್ಥ್ಯ ಬಂದರೂ ಅವರು ಪ್ರತಿಭಟಿಸುವುದಾದರೂ ಯಾರ ವಿರುದ್ಧ? ಮಕ್ಕಳು ಎಷ್ಟೇ ಹಿಂಸೆ ಕೊಟ್ಟರೂ ಅವರನ್ನು ಸಾರ್ವಜನಿಕವಾಗಿ ದೂರಿಕೊಳ್ಳುವುದಕ್ಕೆ ಯಾವ ಹೆತ್ತವರು ಇಷ್ಟಪಡುತ್ತಾರೆ? ತಮ್ಮ ಮಕ್ಕಳು ಸಮಾಜದಲ್ಲಿ ಸದಾ ಘನತೆಯಿಂದ ಬಾಳಬೇಕೆಂಬುದನ್ನು ಬಯಸಿಯೇ ಅವರು ಹಗಲಿರುಳು ದುಡಿದಿರುತ್ತಾರಲ್ಲವೇ? ಇಂಥವರು ವೃದ್ಧಾಪ್ಯಕ್ಕೆ ತಲುಪಿದ ಕೂಡಲೇ ನಮಗೆ ‘ಅನಗತ್ಯ'ವಾಗಿ ಕಾಣಿಸುವುದು ಯಾವ ಮನಸ್ಥಿತಿ? ‘ನಿರ್ಭಯ'ಳ ಪರವಾಗಿ ವಾರಗಟ್ಟಲೆ ಪ್ರತಿಭಟನೆ ಮಾಡುವ ನಾವು ಲಿಂಗಪ್ಪರನ್ನು ಸೃಷ್ಟಿಸುವ ಮನಸ್ಥಿತಿಯ ವಿರುದ್ಧವೇಕೆ ಗಂಭೀರವಾಗಿ ಧ್ವನಿಯೆತ್ತುತ್ತಿಲ್ಲ? ನಿಜವಾಗಿ, ಅತ್ಯಾಚಾರದ ವಿರುದ್ಧ ವೇದಿಕೆಯೇರಿಯೋ ಪತ್ರಿಕೆಗಳಲ್ಲಿ ಬರೆದೋ ಆಕ್ರೋಶ ವ್ಯಕ್ತಪಡಿಸುವುದು ಸುಲಭ. ಅತ್ಯಾಚಾರವೆಂಬುದು ಇವತ್ತು ಪಾರ್ಲಿಮೆಂಟಿನಿಂದ ಹಿಡಿದು ಕ್ಲಾಸ್‍ರೂಮ್‍ಗಳ ವರೆಗೆ ಭಾರೀ ಬೆಲೆಬಾಳುವ ವಿಷಯ. ದೇಶದ ಯಾವುದಾದರೊಂದು ಮೂಲೆಯಲ್ಲಿ ಅದರ ವಿರುದ್ಧ ಪ್ರತಿದಿನವೆಂಬಂತೆ ಪ್ರತಿಭಟನೆಗಳಾಗುತ್ತಲೇ ಇವೆ. ಆದರೆ ಔಷಧಗಳಿಂದ ದಿನದೂಡುತ್ತಿರುವ ಮತ್ತು ದೈಹಿಕ ಆಕರ್ಷಣೆ ಕಳಕೊಂಡಿರುವ ಒಂದು ಬೃಹತ್ ವರ್ಗ ಅತ್ಯಾಚಾರಕ್ಕೆ (ಆಚಾರವನ್ನು ವಿೂರಿದ ನಡವಳಿಕೆ) ಒಳಗಾಗುತ್ತಿದ್ದರೂ ಅವರನ್ನು ರಾಜಕೀಯ ವಾಗಿಯೋ ಶೈಕ್ಷಣಿಕವಾಗಿಯೋ ಯಾರೂ ಪ್ರತಿನಿಧಿಸುತ್ತಿಲ್ಲ. ಅವರ ಸಂಕಟಗಳು ಮನೆಯ ನಾಲ್ಕು ಗೋಡೆಗಳಿಂದ ಹೊರಗೆ ಒಂದು ಇಶ್ಶೂವಾಗಿ ಗುರುತಿಸಿಕೊಳ್ಳುತ್ತಲೂ ಇಲ್ಲ. ಅವರು ಲಿಂಗಪ್ಪರಂತೆ ಏನಾದರೂ ಎಡವಟ್ಟು ಮಾಡಿಕೊಂಡರೂ ಅದು ಆಯಾ ಊರಿನ ಒಂದು ದಿನದ ಸುದ್ದಿಯಾಗಿ ಬಿಡುತ್ತದೆಯೇ ಹೊರತು ಸರ್ವ ಊರಿನ ಬಹುದಿನಗಳ ಇಶ್ಶೂವಾಗಿ ಬದಲಾಗುವುದಿಲ್ಲ.
   ಹಿರಿಯರನ್ನು ಆತ್ಮಹತ್ಯೆಗೆ ದೂಡುವಷ್ಟು ಒಂದು ಸಮಾಜದಲ್ಲಿ ನೈತಿಕ ಮೌಲ್ಯ ಕುಸಿದಿದೆಯೆಂಬುದು ಖಂಡಿತ ಆಘಾತಕಾರಿಯಾದದ್ದು. ಹಿರಿಯರು ಯುವ ಸಮೂಹದಂತೆ ಅಲ್ಲ. ಅವರಲ್ಲಿ ಅನುಭವದ ಕಣಜವೇ ಇರುತ್ತದೆ. ಆದ್ದರಿಂದಲೇ, ಪುಟ್ಟದೊಂದು ಸಮಸ್ಯೆ ಎದುರಾದರೂ ಹಿಂದು-ಮುಂದು ನೋಡದೇ ಆತ್ಮಹತ್ಯೆಗೆ ಯತ್ನಿಸುವ ಯುವ ಸಮೂಹದೊಂದಿಗೆ ಲಿಂಗಪ್ಪರ ಆತ್ಮಹತ್ಯೆಯನ್ನು ಹೋಲಿಸುವಂತಿಲ್ಲ. ನಿಜವಾಗಿ, ಹಿರಿಯರ ಜಗತ್ತಿನಿಂದ ಬರುವ ದೂರುಗಳು ಹೆಚ್ಚು ತೂಕದ್ದಾಗಿ ಕಾಣಿಸುವುದು ಈ ಕಾರಣದಿಂದಲೇ. ಅತ್ಯಾಚಾರಕ್ಕೆ ಕಾರಣವಾಗಿರುವ ವಿವಿಧ ಮಗ್ಗುಲುಗಳ ಬಗ್ಗೆ ನಾವು ಹೇಗೆ ಚರ್ಚಿಸುತ್ತೇವೆಯೋ ಅದೇ ರೀತಿಯಲ್ಲಿ ಹಿರಿಯರ ಸಮಸ್ಯೆಗಳು ಮತ್ತು ಅದರ ಪರಿಹಾರಗಳ ಸುತ್ತ ಚರ್ಚಿಸುವ ಅಗತ್ಯ ಇದೆ. ಹಿರಿಯರೆಂದರೆ, ಕೀಟನಾಶ ಸೇವಿಸಿಯೋ ಭಿಕ್ಷೆ ಬೇಡಿಯೋ ಗಮನ ಸೆಳೆಯಬೇಕಾದ ವ್ಯಕ್ತಿತ್ವಗಳಲ್ಲ. ಅವರು ಮನೆಯ ಕಿರೀಟಗಳು. ಆ ಕಿರೀಟಗಳನ್ನು ಅನಗತ್ಯವೆಂದು ಸಾರಿ ಬೀದಿಗೆ ಅಟ್ಟುವವರು ನಿಜವಾಗಿ ಕಿರೀಟದ ಮಹತ್ವ ಅರಿಯದವರಾಗಿದ್ದಾರೆ. ಅಂಥವರಿಗೆ ಹಿರಿಯರೆಂಬ ಕಿರೀಟದ ಮೌಲ್ಯವನ್ನು ಮತ್ತೆ ಮತ್ತೆ ಮನವರಿಕೆ ಮಾಡಿಸುತ್ತಲೇ ಇರಬೇಕಾದ ಹೊಣೆಗಾರಿಕೆ-ಅತ್ಯಾಚಾರ, ಮೋದಿ, ರಾಹುಲ್, ಲಾಲೂ.. ಎಂದೆಲ್ಲಾ ದಿನವಿಡೀ ಸಮಯ ಕಳೆಯವ ನಮ್ಮೆಲ್ಲರ ಮೇಲಿದೆ. ವೃದ್ಧರಾದ ಹೆತ್ತವರ ಬಗ್ಗೆ ಛೆ ಎಂಬ ಪದ ಕೂಡ ಬಳಸಬಾರದು ಎಂದು ಪವಿತ್ರ ಕುರ್‍ಆನ್ (17:23) ಎಚ್ಚರಿಸಿದೆ. ಹೆತ್ತವರ ಕೋಪಕ್ಕೆ ಗುರಿಯಾದ ಮಕ್ಕಳು ಎಷ್ಟೇ ಧರ್ಮಿಷ್ಟರಾಗಿದ್ದರೂ ಸ್ವರ್ಗ ಪ್ರವೇಶಿಸುವುದಿಲ್ಲ' ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. 
   ವೃದ್ಧಾಶ್ರಮಗಳು ಜನಪ್ರಿಯತೆ ಗಳಿಸುತ್ತಿರುವ ಇಂದಿನ ದಿನಗಳಲ್ಲಿ ಹಿರಿಯರು ದಿನೇ ದಿನೇ ಗೌರವ ಕಳಕೊಳ್ಳತೊಡಗಿದ್ದಾರೆ. ಅವರನ್ನು ‘ಭಾರ'ವಾಗಿ ನೋಡುವ ಆಧುನಿಕ ಪೀಳಿಗೆಗಳು ಬೆಳೆದು ಬರುತ್ತಿವೆ. ಇಂಥ ಹೊತ್ತಲ್ಲಿ, ಲಿಂಗಪ್ಪ ಮತ್ತು ತಿಮ್ಮಕ್ಕ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಆತ್ಮಹತ್ಯೆಯನ್ನು ಇಬ್ಬರು ಕೈಲಾಗದವರ ದಡ್ಡ ಪ್ರಯತ್ನ ಎಂದು ನಾವು ತಳ್ಳಿ ಹಾಕದೇ ನಮ್ಮ ಮೌಲ್ಯ ವಿರೋಧಿ ಮುಖವಾಡದ ಬದುಕಿಗೆ ಅವರು ಸಲ್ಲಿಸಿದ ಪ್ರತಿಭಟನೆ ಎಂದೇ ಪರಿಗಣಿಸಬೇಕಾಗಿದೆ. ಮಾತ್ರವಲ್ಲ, ನಮ್ಮ ನಮ್ಮ ಮನೆಯಲ್ಲಿರುವ ಹಿರಿಯರನ್ನು ಗೌರವಿಸಿ, ಆರೈಕೆ ಮಾಡುವ ಮೂಲಕ ಈ ಪ್ರತಿಭಟನೆಗೆ ಉತ್ತರವನ್ನು ನೀಡಬೇಕಾಗಿದೆ.

No comments:

Post a Comment