Monday 25 November 2013

ಅಮಲೇರಿಸುವ ಮದ್ಯವೂ ಹೆಜ್ಜೆ ತಪ್ಪುವ ‘ತರುಣ’ರೂ

    ತೆಹಲ್ಕಾದ ತರುಣ್ ತೇಜ್‍ಪಾಲ್ ಇವತ್ತು ಮಾಧ್ಯಮಗಳನ್ನಿಡೀ ತುಂಬಿಕೊಂಡಿದ್ದಾರೆ. ಪತ್ರಕರ್ತರು ಅವರ ಮನೆಯ ಗೋಡೆಗೆ ಕ್ಯಾಮರಾಗಳನ್ನಿಟ್ಟು ಕಾಯುತ್ತಿದ್ದಾರೆ. ಅವರ ಬಾಲ್ಯ, ಯೌವನ, ಪತ್ರಿಕೋದ್ಯಮದಲ್ಲಿ ಅವರು ನಡೆಸಿದ ವಿನೂತನ ಪ್ರಯೋಗಗಳೆಲ್ಲ ಮಾಧ್ಯಮಗಳಲ್ಲಿ ವಿಸ್ತೃತವಾಗಿ ಚರ್ಚೆಗೆ ಒಳಪಡುತ್ತಿವೆ. ಆದರೆ, ಹೆಣ್ಣನ್ನು ಲೈಂಗಿಕ ದೌರ್ಜನ್ಯದಿಂದ ಮುಕ್ತಗೊಳಿಸುವುದಕ್ಕೆ ಈ ಚರ್ಚೆಗಳು ಎಷ್ಟರ ಮಟ್ಟಿಗೆ ನೆರವಾಗಬಲ್ಲುದು? ಯಾಕೆಂದರೆ, ‘ಮದ್ಯದ ಅಮಲಿನಲ್ಲಿ ನಾನು ಹೆಜ್ಜೆ ತಪ್ಪಿದೆ..' ಎಂದು ತೇಜ್‍ಪಾಲ್‍ರೇ ಹೇಳಿದ್ದಾರೆ. ಹಾಗಂತ, ಮದ್ಯದಿಂದಾಗಿ ಹೀಗೆ ಹೆಜ್ಜೆ ತಪ್ಪುವವರಲ್ಲಿ ತೇಜ್‍ಪಾಲ್ ಮೊದಲಿಗರೇನೂ ಅಲ್ಲ. ಕೊನೆಯವರಾಗುವ ಸಾಧ್ಯತೆಯೂ ಇಲ್ಲ. ಈ ದೇಶದಲ್ಲಿ ಪ್ರತಿದಿನ ಅಸಂಖ್ಯ ಮಂದಿ ಮದ್ಯದಿಂದಾಗಿ ಹೆಜ್ಜೆ ತಪ್ಪುತ್ತಿದ್ದಾರೆ. ಮಾತ್ರವಲ್ಲ, ಈ ತಪ್ಪಿದ ಹೆಜ್ಜೆಗಳಿಗೆ ಸಾವಿರಾರು ಹೆಣ್ಣು ಮಕ್ಕಳು ನಿತ್ಯ ಬಲಿಯಾಗುತ್ತಲೂ ಇದ್ದಾರೆ. ಹೀಗಿರುವಾಗ, ನಮ್ಮ ಚರ್ಚೆಯ ಕೇಂದ್ರ ಬಿಂದುವಾದರೂ ಯಾರಾಗಿರಬೇಕು; ತೇಜ್‍ಪಾಲೋ, ಮದ್ಯವೋ? ಯಾಕೆ ಯಾರೂ ಮದ್ಯದ ಬಗ್ಗೆ ಮಾತನ್ನೇ ಆಡುತ್ತಿಲ್ಲ? ಓರ್ವ ವ್ಯಕ್ತಿಯನ್ನು ಭೀಕರ ಅಪರಾಧ ಎಸಗುವಂತೆ ಮದ್ಯವು ಪ್ರೇರೇಪಿಸುತ್ತದೆಂದಾದರೆ ನಾವು ಮೊತ್ತಮೊದಲು ಶಿಕ್ಷೆಗೆ ಒಳ ಪಡಿಸಬೇಕಾದದ್ದು ಯಾರನ್ನು, ತೇಜ್‍ಪಾಲ್‍ರನ್ನೋ? ಒಂದು ಕ್ರೌರ್ಯದ ಪ್ರಮುಖ ರೂವಾರಿಯನ್ನು (ಮದ್ಯ) ಪ್ರೀತಿಸುತ್ತಾ ಅದರಿಂದ ಪ್ರಚೋದಿತರಾದವರನ್ನು ಗಂಭೀರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸುವುದು ಯಾವ ನೀತಿ, ಯಾವ ಬಗೆಯ ಪ್ರಾಮಾಣಿಕತೆ?
   ಮದ್ಯಕ್ಕೂ ಲೈಂಗಿಕ ದೌರ್ಜನ್ಯಗಳಿಗೂ ಬಲವಾದ ನಂಟಿದೆ. ದೆಹಲಿಯ ನಿರ್ಭಯಳಿಂದ ಹಿಡಿದು ಉಡುಪಿಯ ನಿರ್ಭಯಳ ವರೆಗೆ ಈ ದೇಶದಲ್ಲಿ ಎಷ್ಟೆಲ್ಲ ಲೈಂಗಿಕ ದೌರ್ಜನ್ಯಗಳು ಬೆಳಕಿಗೆ ಬಂದಿವೆಯೋ ಅವೆಲ್ಲವುಗಳ ಜೊತೆ ಮದ್ಯಕ್ಕೆ ಸಂಬಂಧ ಇದೆ. ಒಂದು ಕಡೆ ಮಹಿಳೆಯರ ಸುರಕ್ಷಿತತೆ, ಸಬಲೀಕರಣದ ಬಗ್ಗೆ ನಾವೆಲ್ಲ ಭಾರೀ ಉತ್ಸಾಹದಿಂದ ಮಾತಾಡುತ್ತೇವೆ. ಮಾಧ್ಯಮಗಳು ಅಸಂಖ್ಯ ಪುಟಗಳನ್ನು ಇದಕ್ಕಾಗಿ ಖರ್ಚು ಮಾಡುತ್ತಿವೆ. ದೆಹಲಿಯಲ್ಲಿ ನಿರ್ಭಯಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಈ ದೇಶ ಒಂದಾಗಿ ಪ್ರತಿಭಟಿಸಿತ್ತು. ವಿದ್ಯಾರ್ಥಿಗಳಿಂದ ಹಿಡಿದು ಪತ್ರಕರ್ತರ ವರೆಗೆ ಎಲ್ಲರೂ ಅತ್ಯಾಚಾರ ಮುಕ್ತ ಭಾರತದ ಬಗ್ಗೆ ಮಾತಾಡಿದರು. ದುರಂತ ಏನೆಂದರೆ, ನಿರ್ಭಯಳ ಮೇಲೆ ಅತ್ಯಾಚಾರ ಎಸಗಿದವರು ಪಾನಮತ್ತರಾಗಿದ್ದರು ಎಂಬುದು ಗೊತ್ತಿದ್ದು ಕೂಡ ಯಾರೂ ಪಾನ ನಿಷೇಧಕ್ಕೆ ಒತ್ತಾಯಿಸಿಯೇ ಇಲ್ಲ! ಯಾಕೆ ಹೀಗೆ? ಮದ್ಯ ಸೇವಿಸುವುದರಿಂದ ಹೆಜ್ಜೆ ತಪ್ಪುತ್ತದೆ ಮತ್ತು ಅದು ಮಾಡಬಾರದ ಕೃತ್ಯಗಳನ್ನು ಮಾಡುವಂತೆ ಪ್ರಚೋದಿಸುತ್ತದೆ ಎಂಬುದು ಕುಡಿಯುವವನಿಗೂ ಗೊತ್ತು, ಕುಡಿಸುವವನಿಗೂ ಗೊತ್ತು. ಹೀಗಿದ್ದೂ, ಮದ್ಯದ ಬಗ್ಗೆ ಮಾತಾಡದೇ ಅದು ಮಾಡಿಸುವ ಕ್ರೌರ್ಯಗಳ ಕುರಿತು ಮಾತ್ರ ಅಪಾರ ಆಕ್ರೋಶ ವ್ಯಕ್ತಪಡಿಸುವುದೇಕೆ?
   ಈ ದೇಶದಲ್ಲಿ ಕೋಟ್ಯಂತರ ಗುಡಿಸಲುಗಳು ಇವತ್ತು ಅತ್ಯಂತ ಆತಂಕದಲ್ಲಿ ದಿನದೂಡುತ್ತಿವೆ. ‘ಈ ದಿನ ಸಂಜೆಯಾಗದಿರಲಿ..’ ಎಂದು ಆಸೆಪಡುವ ಕೋಟ್ಯಂತರ ತಾಯಿ, ಮಕ್ಕಳು ಅಂಥ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಸಂಜೆಯಾಗುವಾಗ ಗಂಡ ಕುಡಿದು ಬರುತ್ತಾನೆ. ಪತ್ನಿ, ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾನೆ. ಮನೆಯಲ್ಲಿರುವವರ ಹೊಟ್ಟೆಗೆ ಏನನ್ನೂ ಕೊಡದೇ ತನ್ನ ಹೊಟ್ಟೆಯನ್ನು ಮದ್ಯದಿಂದ ತುಂಬಿಸಿಕೊಂಡು ಬರುವ ಅಸಂಖ್ಯ ಯಜಮಾನರಿಂದ ಈ ದೇಶದ ಕೋಟ್ಯಂತರ ಗುಡಿಸಲುಗಳು ತುಂಬಿ ಹೋಗಿವೆ. ಆ ಗುಡಿಸಲುಗಳಿಗೆ ಬಾಯಿ ಇಲ್ಲ. ಪ್ರತಿಭಟಿಸುವ ಸಾಮರ್ಥ್ಯ  ಇಲ್ಲ. ಪೇಟೆಯ ನಿರ್ಭಯರಂತೆ ಮಾತಾಡುವ ಕಲೆ ಗೊತ್ತಿಲ್ಲ. ಒಂದು ವೇಳೆ ಇಂಥ ಗುಡಿಸಲುಗಳಿಗೆ ಮಾತಾಡುವ ಸಾಮರ್ಥ್ಯಇರುತ್ತಿದ್ದರೆ, ಅಸಂಖ್ಯ ತೇಜ್‍ಪಾಲ್‍ರ ಕತೆಗಳನ್ನು ಅವು ಸಾರಿ ಸಾರಿ ಹೇಳುತ್ತಿದ್ದುವು. ನಮ್ಮ ಪೊಲೀಸ್ ಠಾಣೆಗಳು ಕೇಸು ದಾಖಲಿಸಿ ದಾಖಲಿಸಿ ಸುಸ್ತಾಗುತ್ತಿದ್ದುವು. ಹೀಗಿರುವಾಗ, ತೇಜ್‍ಪಾಲ್‍ರನ್ನು ಜೈಲಿಗಟ್ಟುವುದರಿಂದ ಇಂಥ ಗುಡಿಸಲುಗಳ ಸಂಕಟಗಳು ಕೊನೆಯಾಗಬಲ್ಲುದೇ? ಹಾಗಂತ, ತೇಜ್‍ಪಾಲ್‍ರನ್ನು ಸಮರ್ಥಿಸುವುದು ಇಲ್ಲಿನ ಉದ್ದೇಶವಲ್ಲ. ಆದರೂ ತೇಜ್‍ಪಾಲ್ ಯಾರೆಂದೇ ಗೊತ್ತಿಲ್ಲದ ಆದರೆ ಮದ್ಯದಂಗಡಿಗಳು ಎಲ್ಲಿವೆಯೆಂದು ಖಚಿತವಾಗಿ ಗೊತ್ತಿರುವ ಮಂದಿ ಈ ದೇಶದಲ್ಲಿ ಅಸಂಖ್ಯ ಇದ್ದಾರಲ್ಲ, ಅವರೇಕೆ ನಮ್ಮ ಗಂಭೀರ ಚರ್ಚೆಯ ವ್ಯಾಪ್ತಿಗೆ ಒಳಪಡುತ್ತಿಲ್ಲ? ಅವರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿರುವ ತಾಯಿ, ಮಕ್ಕಳ ಬಗ್ಗೆಯೇಕೆ ನಾವು ಕಾಳಜಿ ತೋರುತ್ತಿಲ್ಲ?
   ನಿಜವಾಗಿ, ನಾವು ಇವತ್ತು ಗಂಭೀರ ಚರ್ಚೆಗೆ ಒಳಪಡಿಸಬೇಕಾದದ್ದು ಲೈಂಗಿಕ ದೌರ್ಜನ್ಯ ಎಸಗಿದ ತೇಜ್‍ಪಾಲ್‍ರನ್ನಲ್ಲ. ಅವರನ್ನು ಈ ಕೃತ್ಯಕ್ಕೆ ಪ್ರಚೋದಿಸಿದ ಮದ್ಯವನ್ನು. ಇವತ್ತು ಹೊಟ್ಟೆ ತುಂಬಿದವರ ಖಯಾಲಿಗಾಗಿ ಏರ್ಪಾಟಾಗುವ ಕಾರ್ಯಕ್ರಮಗಳಲ್ಲಿ ಮದ್ಯಕ್ಕೆ ಪ್ರಮುಖ ಸ್ಥಾನವಿದೆ. ಅಂಥ ಕಡೆ ತೇಜ್‍ಪಾಲ್‍ರಂಥ ಧಾರಾಳ ಮಂದಿ ಹೆಜ್ಜೆ ತಪ್ಪುತ್ತಿರುತ್ತಾರೆ. ಅವು ಕೆಲವೊಮ್ಮೆ ಸುದ್ದಿಯಾಗುವುದನ್ನು ಬಿಟ್ಟರೆ ಉಳಿದಂತೆ ಹೆಚ್ಚಿನವು ತಪ್ಪಿದ ಹೆಜ್ಜೆಗಳನ್ನು ಸಹಿಸಿಕೊಂಡು ಸುಮ್ಮ ನಾಗುತ್ತವೆ. ಆದ್ದರಿಂದ ತೇಜ್‍ಪಾಲ್‍ರನ್ನು ಶಿಕ್ಷಿಸುವುದರಿಂದ ಹೆಣ್ಣು ಮಕ್ಕಳು ಸುರಕ್ಷಿತರಾಗುತ್ತಾರೆ ಎಂದು ಖಂಡಿತ ಹೇಳುವಂತಿಲ್ಲ. ದೆಹಲಿಯ ನಿರ್ಭಯಳ ಮೇಲೆ ಅತ್ಯಾಚಾರ ಎಸಗಿದವರು ಗಲ್ಲು ಶಿಕ್ಷೆಯ ಜಾರಿಯನ್ನು ಎದುರು ನೋಡುತ್ತಿದ್ದರೂ ಈ ದೇಶದಲ್ಲಿ ಅತ್ಯಾಚಾರ ಪ್ರಕರಣಗಳಿಗೇನೂ ಕಡಿವಾಣ ಬಿದ್ದಿಲ್ಲವಲ್ಲವೇ? ಅತ್ಯಾಚಾರಕ್ಕೆ ಗಲ್ಲು ಶಿಕ್ಷೆಯಿದೆ ಎಂದು ಗೊತ್ತಿದ್ದೂ ಒಂದು ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಅನ್ನುವುದು ಏನನ್ನು ಸೂಚಿಸುತ್ತದೆ? ಶಿಕ್ಷೆಯನ್ನು ಪ್ರೀತಿಸುವ ಸಮಾಜವೊಂದು ಇರಲು ಸಾಧ್ಯವೇ? ಇಲ್ಲ ಎಂದಾದರೆ, ಮತ್ತೆ ಮತ್ತೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದೇಕೆ? ಹೆಜ್ಜೆ ತಪ್ಪಿಸುವ ಮದ್ಯದ ಹೊರತಾಗಿ ಬೇರೆ ಯಾವ ಕಾರಣಗಳನ್ನು ನಾವು ಇದಕ್ಕೆ ಕೊಡಬಲ್ಲೆವು?
   ಆದ್ದರಿಂದ, ತೇಜ್‍ಪಾಲ್ ಪ್ರಕರಣವು ನಮ್ಮ ಚರ್ಚೆಯ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಒಂದು ನೆಪವಾಗಬೇಕಾಗಿದೆ. ಹೆಜ್ಜೆ ತಪ್ಪಿಸುವ ಮದ್ಯವು ನಮ್ಮ ಚರ್ಚೆಯ ವ್ಯಾಪ್ತಿಗೆ ಒಳಪಟ್ಟರೆ ಅದಕ್ಕಾಗಿ ಈ ದೇಶದ ಕೋಟ್ಯಂತರ ಗುಡಿಸಲುಗಳು ಸಂತಸಪಟ್ಟಾವು. ಒಂದು ರೀತಿಯಲ್ಲಿ, ಮದ್ಯವನ್ನು ಹೊರಗಿಟ್ಟು ಲೈಂಗಿಕ ದೌರ್ಜನ್ಯವನ್ನು ಚರ್ಚಿಸುವುದು ಅನಾಪೆsಲಿಸ್ ಸೊಳ್ಳೆಗಳನ್ನು ಹೊರಗಿಟ್ಟು ಮಲೇರಿಯಾ ರೋಗದ ಬಗ್ಗೆ ಚರ್ಚಿಸಿದಂತೆ. ಅದರಿಂದ ಯಾವ ಪ್ರಯೋಜನವೂ ಇಲ್ಲ.

Monday 18 November 2013

ರನ್ನುಗಳ ರಾಶಿಯಲ್ಲಿ ಚರ್ಚೆಯಾಗದೇ ಉಳಿದ ಬಾಲ್ಯ

    ಕ್ರಿಕೆಟ್‍ಗೆ ವಿದಾಯ ಕೋರಿದ ಸಚಿನ್ ತೆಂಡುಲ್ಕರ್‍ರ ಸುತ್ತ ಟಿ.ವಿ. ಚಾನೆಲ್‍ಗಳು ಗಂಭೀರ ಚರ್ಚೆಯಲ್ಲಿ ಮುಳುಗಿದ್ದಾಗಲೇ ಅತ್ತ ಹೈದರಾಬಾದ್‍ನಲ್ಲಿ, ‘ಚಿಲ್ಡ್ರನ್ ಇನ್ ಮೀಡಿಯಾ: ರೈಟ್ಸ್ ಆಫ್ ಚೈಲ್ಡ್ ಆರ್ಟಿಸ್ಟ್' ಎಂಬ ವಿಷಯದ ಮೇಲೆ ಗೋಷ್ಠಿಯೊಂದು ನಡೆಯುತ್ತಿತ್ತು. ಗೋಷ್ಠಿಯ ಕೇಂದ್ರೀಯ ವಿಷಯದಲ್ಲಿ ಸಚಿನ್ ಇಲ್ಲದೇ ಇದ್ದರೂ ಸಚಿನ್ ಅಲ್ಲಿ ಪ್ರಸ್ತಾಪವಾದರು. ವಿಶ್ವನಾಥನ್ ಆನಂದ್ ಚರ್ಚೆಗೊಳಪಟ್ಟರು. ಖ್ಯಾತ ಚಿಂತಕ ಅಮೋಲ್ ಪಾಲೇಕರ್, ಬಬಿತಾ ಶರ್ಮಾ ಮತ್ತು ಡಾಕ್ಯುಮೆಂಟರಿ ನಿರ್ದೇಶಕಿ ಉಮಾ ಮಗಳ್... ಮುಂತಾದವರಿದ್ದ ಚರ್ಚೆಯು ಎಷ್ಟು ಆಸಕ್ತಿಕರವಾಗಿತ್ತೆಂದರೆ, ಸಚಿನ್‍ರ ಪ್ರಭಾವಳಿಯಲ್ಲಿ ಮಾಧ್ಯಮಗಳು ಹೇಗೆ ಬಹುಮುಖ್ಯ ವಿಚಾರವನ್ನು ಮರೆತುಬಿಟ್ಟಿವೆ ಎಂಬುದನ್ನು ಅವರು ಬಿಚ್ಚಿಟ್ಟರು. ಸಚಿನ್‍ರ ಶಿಕ್ಷಣ, ರಿಯಾಲಿಟಿ ಶೋಗಳಲ್ಲಿ ಬೊಂಬೆಗಳಂತೆ ಕಾಣುವ ಮಕ್ಕಳ ಮನಃಸ್ಥಿತಿ, ಸಿನಿಮಾದಲ್ಲಿರುವ ಬಾಲ ನಟರ ಮೇಲಿನ ಒತ್ತಡಗಳು.. ಎಲ್ಲವನ್ನೂ ಈ ಗೋಷ್ಠಿ ಅತ್ಯಂತ ಆಳವಾಗಿ ಚರ್ಚಿಸಿತು. ಒಂದು ವೇಳೆ; ರವಿಶಾಸ್ತ್ರಿ, ಗಂಗೂಲಿ, ಕಪಿಲ್, ಗವಾಸ್ಕರ್.. ಮುಂತಾದವರನ್ನು ಕೂರಿಸಿಕೊಂಡು ಟಿ.ವಿ. ಚಾನೆಲ್‍ಗಳು ‘ಸಚಿನ್ ವಿದಾಯ'ವನ್ನು ಚರ್ಚಿಸುವುದಕ್ಕಿಂತ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿರುತ್ತಿದ್ದರೆ, ಈ ದೇಶದ ಕೋಟ್ಯಂತರ ಮಕ್ಕಳು ಖಂಡಿತ ಸಂತಸಪಡುತ್ತಿದ್ದುವು.
   ಕ್ರಿಕೆಟ್‍ನಲ್ಲಿ ಸಚಿನ್ ರಾಶಿ ರಾಶಿ ರನ್ನುಗಳನ್ನು ಸಂಗ್ರಹಿಸಿರಬಹುದು. ಆದರೆ, ರನ್ನುಗಳ ಈ ಭರಾಟೆಯಲ್ಲಿ ಅವರಿಗೆ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಲೂ ಸಾಧ್ಯವಾಗಿಲ್ಲ. 19 ವರ್ಷದವರಿಗಿರುವ ಕ್ರಿಕೆಟ್ ತಂಡದ ನಾಯಕನಾಗಿದ್ದ ಉನ್ಮುಕ್ತ್ ಚಂದ್‍ಗೆ ಪಿಯು ಓದುವುದಕ್ಕೂ ಸಾಧ್ಯವಾಗುತ್ತಿಲ್ಲ. ಇನ್ನು, ಟಿ.ವಿ. ಚಾನೆಲ್‍ಗಳಲ್ಲಿ ಪ್ರದರ್ಶನದ ಬೊಂಬೆಗಳಾಗುತ್ತಿರುವ ಮಕ್ಕಳನ್ನು ನೋಡುವಾಗಲಂತೂ ದಿಗಿಲಾಗುತ್ತದೆ. ತಮ್ಮದಲ್ಲದ ಮಾತು, ವಯಸ್ಸನ್ನೂ ಮೀರಿದ ಪ್ರೌಢತೆ, ನಗು, ಹಾವ-ಭಾವಗಳನ್ನು ಆ ಮಕ್ಕಳು ಪ್ರದರ್ಶಿಸುತ್ತಿರುವುದು ಯಾರ ಒತ್ತಡದಿಂದ? ಯಾವುದೇ ಒಂದು ಮಗುವಿನ ವರ್ತನೆಗೂ ವಯಸ್ಸಿಗೂ ಖಂಡಿತ ಸಂಬಂಧವಿರುತ್ತದೆ. ನಿಜವಾಗಿ, 5 ವರ್ಷದ ಮಗು ಸಚಿನ್‍ನಂತೆ ಬ್ಯಾಟು ಬೀಸಬೇಕು ಎಂದು ಬಯಸುವುದು ಖಂಡಿತ ತಪ್ಪು. 10 ವರ್ಷದ ಹುಡುಗನಿಂದ ಮನ್‍ಮೋಹನ್ ಸಿಂಗ್‍ರ ಆರ್ಥಿಕ ನಡೆಗಳ ಬಗ್ಗೆ ವ್ಯಾಖ್ಯಾನವನ್ನು ಬಯಸುವುದಕ್ಕೆ ಯಾವ ಅರ್ಥವೂ ಇಲ್ಲ. ಪಿ.ಟಿ. ಉಷಾರ ಟ್ರ್ಯಾಕ್ ದಾಖಲೆಯನ್ನು ಪುಟಾಣಿಯೊಂದು ಅಳಿಸಿ ಹಾಕಬೇಕೆಂದು ಯಾರೂ ಬಯಸುತ್ತಿಲ್ಲ. ಯಾಕೆಂದರೆ, ಮಗು ಮಗುವೇ. ದೊಡ್ಡವರು ದೊಡ್ಡವರೇ. ಆದರೆ ನಾವೆಲ್ಲ ಸೇರಿಕೊಂಡು ಪುಟಾಣಿಗಳಿಂದ ಈ ‘ಮಗು’ತನವನ್ನು ಕಸಿದುಕೊಳ್ಳುತ್ತಿದ್ದೇವೆಯೇ ಎಂದು ಗಂಭೀರವಾಗಿ ಆಲೋಚಿಸಬೇಕಾಗಿದೆ. ಸಿನಿಮಾದಲ್ಲಿ ನಟಿಸುವ ಮಗುವನ್ನೇ ಎತ್ತಿಕೊಳ್ಳಿ. ಅದರ ಮುಂದೆ ಡಯಲಾಗ್‍ನ ಸಿದ್ಧ ಮಾದರಿಯೊಂದು ಇರುತ್ತದೆ. ಹಿರಿಯ ನಟರಂತೆ ಮಗುವಿಗೆ ಡಯಲಾಗನ್ನು ಹೇಳಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅದು ಮನನ ಮಾಡಲೇಬೇಕು. ಹೀಗೆ ಮನನ ಮಾಡಿದ್ದನ್ನು ಒಂದೇ ಬಾರಿ ಹೇಳಿ ಮುಗಿಸುವಂತಿಲ್ಲ. ಹೇಳುವ ರೀತಿ, ಆಂಗಿಕ ಅಭಿನಯ, ಭಾವಾಭಿವ್ಯಕ್ತತೆ.. ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಹೀಗೆ, ಮತ್ತೆ ಮತ್ತೆ ಅಭಿನಯಿಸಬೇಕಾದ ಮತ್ತು ನಿರ್ದೇಶಕರಿಂದಲೋ ಸಹ ನಟರಿಂದಲೋ ಬೈಸಿಕೊಳ್ಳಬೇಕಾದ ಒತ್ತಡದಲ್ಲಿ ಮಗು ಸಿಲುಕುತ್ತದೆ. ಎಲ್ಲೋ ತಮ್ಮದಲ್ಲದ ಊರಿನಲ್ಲಿ ಅಭಿನಯಕ್ಕಾಗಿ ಕಾಯುತ್ತಾ, ಮತ್ತೆ ಮತ್ತೆ ಅಭಿನಯಿಸುತ್ತಾ ಬೆಳೆಯುವ ಮಗುವಿನ ಮನಃಸ್ಥಿತಿ ಹೇಗಿರಬಹುದು? ಅದು ಎದುರಿಸುವ ಒತ್ತಡಗಳ ಪ್ರಮಾಣ ಎಷ್ಟಿರಬಹುದು?
   ಟಿ.ವಿ.ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಕ್ಕಳ ಪರಿಸ್ಥಿತಿಯಂತೂ ಇದಕ್ಕಿಂತಲೂ ಭೀಕರ. ಅವುಗಳ ಬಾಲ್ಯವನ್ನು ತಮ್ಮ ಜನಪ್ರಿಯತೆಗಾಗಿ ಚಾನೆಲ್‍ಗಳು ಕಸಿದುಕೊಳ್ಳುತ್ತವೆ. ಒಂದು ಮಗು ಹಾಡುವುದು ಬೇರೆ, ಆ ಹಾಡಿಗಾಗಿ ದಿನ, ವಾರಗಟ್ಟಲೆ ಒತ್ತಡಕ್ಕೆ ಸಿಲುಕಿಸುವುದು ಬೇರೆ. ಕೇವಲ ಇವಷ್ಟೇ ಅಲ್ಲ- ವೇದಿಕೆಯಲ್ಲಿ ಹೇಗೆಲ್ಲ ಮಾತಾಡಬೇಕು, ದೊಡ್ಡವರೊಂದಿಗೆ ಹೇಗೆ ಕಿಚಾಯಿಸಬೇಕು, ಎಲ್ಲರ ಗಮನ ಕೇಂದ್ರವಾಗಲು ಹೇಗೆ ಆಂಗಿಕ ಅಭಿನಯ ಮಾಡಬೇಕು.. ಎಲ್ಲವನ್ನೂ ಮಗು ದೊಡ್ಡವರಿಂದ ಹೇಳಿಸಿಕೊಳ್ಳುತ್ತದೆ. ಇದರ ಮಧ್ಯೆ ಹೆತ್ತವರು ಕ್ಷಣಕ್ಷಣಕ್ಕೂ ಮಗುವಿಗೆ ತನ್ನ ಜವಾಬ್ದಾರಿಯನ್ನು ನೆನಪಿಸುತ್ತಿರುತ್ತಾರೆ. ಹೀಗೆ, ತನ್ನ ವಯಸ್ಸಿನ ಮಕ್ಕಳ ಜೊತೆ ಸ್ವಚ್ಛಂದವಾಗಿ ಬಾಲ್ಯವನ್ನು ಕಳೆಯಬೇಕಾದ ಮಕ್ಕಳನ್ನು ಜಗಮಗಿಸುವ ವೇದಿಕೆಯಲ್ಲಿ, ಹಿರಿಯರೊಂದಿಗೆ ಮಾತುಕತೆಗೆ ಇಳಿಸಲಾಗುತ್ತದೆ. ಒಂದು ರೀತಿಯಲ್ಲಿ, ಇದು ಪ್ರಾಣಿಯನ್ನು ಕಸಾಯಿಖಾನೆಗೆ ಒಯ್ದಂತೆ. ಕಸಾಯಿಖಾನೆಯು ಪ್ರಾಣಿಯ ಆಯ್ಕೆ ಅಲ್ಲ. ಅದು ಆ ಪ್ರಾಣಿಯ ಮಾಲಿಕ ಮತ್ತು ಖರೀದಿದಾರರ ಆಯ್ಕೆ. ಅದು ಅವರ ಆಣತಿಯಂತೆ ವರ್ತಿಸಬೇಕಾಗುತ್ತದೆಯೇ ಹೊರತು ತನ್ನತನವನ್ನಲ್ಲ. ಟಿ.ವಿ. ಚಾನೆಲ್‍ಗಳು, ಚಿತ್ರರಂಗ ಮತ್ತು ಮಕ್ಕಳ ಹೆತ್ತವರು ಇವತ್ತು ಮಾಡುತ್ತಿರುವುದು ಇದನ್ನೇ. ಮಕ್ಕಳನ್ನು ಅವರ ಹೆತ್ತವರಿಂದ ಖರೀದಿಸಿ ಶೋಗಳೆಂಬ ಕಸಾಯಿಖಾನೆಗೆ ಚಾನೆಲ್‍ಗಳು ಮತ್ತು ಚಿತ್ರರಂಗವು ಯೋಗ್ಯಗೊಳಿಸುತ್ತವೆ. ಮಕ್ಕಳು ‘ಕಸಾಯಿ’ಗೆ ಸಂಪೂರ್ಣ ಯೋಗ್ಯವೆಂದು ಮನವರಿಕೆಯಾದ ಬಳಿಕ ವೇದಿಕೆಯೆಂಬ ಕಸಾಯಿಖಾನೆಯಲ್ಲಿ ತಂದು ನಿಲ್ಲಿಸುತ್ತದೆ. ಪ್ರೇಕ್ಷಕರೆಂಬ ಖರೀದಿದಾರರು ಆ ಕಸಾಯಿಖಾನೆಯ ಸುತ್ತ ನೆರೆದಿರುತ್ತಾರೆಂಬುದು ಇವುಗಳಿಗೆ ಚೆನ್ನಾಗಿ ಗೊತ್ತು. ಹೀಗೆ ಹೆತ್ತವರನ್ನು ಮರುಳುಗೊಳಿಸಿ ಟಿ.ವಿ. ಚಾನೆಲ್‍ಗಳು ಮಕ್ಕಳನ್ನು ಬಲಿಪ್ರಾಣಿಯಂತೆ ಬಳಸಿ ಬಿಸಾಕುತ್ತಿವೆ. ಆ ಬಳಿಕ ಆ ಮಕ್ಕಳ ಭವಿಷ್ಯ ಏನಾಗಿದೆ, ಅವು ರಿಯಾಲಿಟಿ ಶೋಗಳ ಒತ್ತಡಗಳಿಂದ ಹೇಗೆ ಹೊರಬಂದಿವೆ, ಟಿ.ವಿ.ಗಳಲ್ಲಿ ಪ್ರದರ್ಶಿಸಿದ ಪ್ರತಿಭೆಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಂಡಿವೆ.. ಎಂಬುದನ್ನೆಲ್ಲಾ ಶೋ ಮುಗಿದ ಬಳಿಕ ಯಾರೂ ಕೆದಕುವುದಿಲ್ಲವಾದ್ದರಿಂದ ಅದೊಂದು ಚರ್ಚಿಸಲೇ ಬೇಕಾದ ಇಶ್ಶೂವಾಗಿಯೂ ಗುರುತಿಸಿಕೊಳ್ಳುವುದಿಲ್ಲ. ಆದ್ದರಿಂದ,  
   ಸಚಿನ್ ತೆಂಡುಲ್ಕರ್‍ರ ವಿದಾಯವು ಈ ನಿಟ್ಟಿನಲ್ಲಿ ಚರ್ಚೆಯೊಂದಕ್ಕೆ ಕಾರಣವಾಗಬೇಕಾಗಿದೆ. ಕ್ರಿಕೆಟ್‍ನ ಉನ್ನತ ಮೆಟ್ಟಲನ್ನು ಹತ್ತಿದರೂ ಹೈಸ್ಕೂಲ್ ಮೆಟ್ಟಲನ್ನೂ ಹತ್ತದ ಅವರು, ಪುಟ್ಟ ಮಕ್ಕಳಿಗೆ ‘ಬಾಲ್ಯ'ವನ್ನು ಒದಗಿಸುವಂತೆ ಒತ್ತಾಯಿಸುವುದಕ್ಕೆ ಪ್ರೇರಕವಾಗಬೇಕಾಗಿದೆ. ಹೆತ್ತವರ ವಿಪರೀತ ಕನಸಿಗೆ ಮಕ್ಕಳ ಬಾಲ್ಯ ಕಮರಿ ಹೋಗದಂತೆ ಎಚ್ಚರಿಕೆಯ ಸಂದೇಶವನ್ನು ಸಚಿನ್ ಬದುಕು ರವಾನಿಸಬೇಕಾಗಿದೆ.

Monday 11 November 2013

ಯಾವುದು ನಂಬಿಕೆ, ಯಾವುದೆಲ್ಲ ಮೂಢನಂಬಿಕೆ?

    ಯಾವುದು ನಂಬಿಕೆ, ಯಾವುದೆಲ್ಲ ಮೂಢನಂಬಿಕೆ ಎಂದು ವಿಭಜಿಸುವುದಕ್ಕೆ ನಮ್ಮಲ್ಲಿರುವ ಮಾನದಂಡಗಳು ಯಾವುವು? ವಿಚಾರವಾದಿಗಳಿಗೆ ಮೂಢನಂಬಿಕೆಯಂತೆ ಕಾಣುವ ಆಚರಣೆಯೊಂದು ಆಸ್ತಿಕರಿಗೆ ನಂಬಿಕೆಯಾಗಿ ಕಾಣಬಹುದು. ಆಸ್ತಿಕರಿಗೆ ನಿಂದನೆಯಂತೆ ಕಾಣುವ ವಿಷಯವೊಂದು ನಾಸ್ತಿಕರಿಗೆ ಬಂಡಾಯ ಪ್ರವೃತ್ತಿಯಂತೆ ಗೋಚರಿಸಬಹುದು. ನಂಬಿಕೆಗೂ ಮೂಢನಂಬಿಕೆಗೂ ನಡುವೆ ಸಮಾಜ ಎಳೆದಿರುವ ಗೆರೆ ಬಹಳ ತೆಳುವಾದದ್ದು. ಒಂದು ಧರ್ಮ ನಂಬಿಕೆಯಾಗಿ ಒಪ್ಪಿಕೊಂಡಿರುವುದನ್ನು ಇನ್ನೊಂದು ಧರ್ಮ ಹಾಗೆಯೇ ಒಪ್ಪಿಕೊಳ್ಳಬೇಕೆಂದಿಲ್ಲ. ಇಸ್ಲಾಮ್ ಏಕದೇವವಾದವನ್ನು ಪ್ರತಿ ಪಾದಿಸುತ್ತದೆ. ವಿಗ್ರಹ ಆರಾಧನೆಯು ಇಸ್ಲಾಮಿನ ಮಟ್ಟಿಗೆ ಅನ್ಯವಾದದ್ದು. ಒಂದು ರೀತಿಯಲ್ಲಿ ಮೂಢ ಆರಾಧನೆ. ಸುನ್ನತಿ ಕರ್ಮವನ್ನು ಮುಸ್ಲಿಮರು ಬಹಳ ಶ್ರದ್ಧೆಯಿಂದ ಪಾಲಿಸುತ್ತಾರೆ. ಮುಸ್ಲಿಮೇತರರ ಮಟ್ಟಿಗೆ ಅದು ಅತಿರೇಕ ಮತ್ತು ಮೂಢ ಆಚರಣೆಯಾಗಿ ಕಾಣಬಹುದು. ಇವು ಒಂದೆರಡು ಉದಾಹರಣೆಗಳಷ್ಟೇ. ಇಂಥವುಗಳ ಪಟ್ಟಿ ಸಾಕಷ್ಟು ಉದ್ದವಿದೆ. ಹೀಗಿರುವಾಗ, ಸಿದ್ಧರಾಮಯ್ಯರು ಜಾರಿಗೆ ತರಲು ಹೊರಟಿರುವ ಮೂಢನಂಬಿಕೆ ತಡೆ ಮಸೂದೆಯನ್ನು ಒಂದೇ ಏಟಿಗೆ ಸ್ವಾಗತಾರ್ಹವೆಂತಲೋ ಖಂಡನಾರ್ಹವೆಂತಲೋ ಷರಾ ಬರೆದು ಬಿಡುವುದು ತಪ್ಪಾಗಬಹುದು. ಮುಖ್ಯವಾಗಿ, ಮಸೂದೆಯ ಅಂಶಗಳು ಇನ್ನೂ ಸಾರ್ವಜನಿಕವಾಗಿ ಬಿಡುಗಡೆಗೊಂಡಿಲ್ಲ. ಅದರಲ್ಲಿ ಏನೇನಿವೆ, ಯಾವುದನ್ನೆಲ್ಲ ಮೂಢನಂಬಿಕೆಯಾಗಿ ಪಟ್ಟಿ ಮಾಡಲಾಗಿದೆ, ಹಿಂದೂ ಧರ್ಮವನ್ನು ಮಾತ್ರ ಕೇಂದ್ರೀಕರಿಸಿ ಕರಡು ಪ್ರತಿಯನ್ನು ರಚಿಸಲಾಗಿದೆಯೇ.. ಮುಂತಾದ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆಯಬೇಕಾದರೆ ಮಸೂದೆಯು ಸಾರ್ವಜನಿಕವಾಗಿ ಬಹಿರಂಗಗೊಳ್ಳಬೇಕು. ದುರಂತ ಏನೆಂದರೆ, ಕೆಲವು ನಿರ್ದಿಷ್ಟ ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳು ಕರಡು ಪ್ರತಿಯ ವಿರುದ್ಧ ಸಮರವನ್ನೇ ಸಾರಿಬಿಟ್ಟಿವೆ. ಮಸೂದೆಯನ್ನು ‘ಹಿಂದೂ ವಿರೋಧಿ' ಎಂಬಲ್ಲಿ ವರೆಗೆ ಅವು ತಂದು ಮುಟ್ಟಿಸಿವೆ. ‘ಮೂಢನಂಬಿಕೆ ವಿರೋಧಿ ಮಸೂದೆ’ಯನ್ನು ನಂಬಿಕೆ ವಿರೋಧಿ ಮಸೂದೆಯೆಂಬಂತೆ ತಪ್ಪಾಗಿ ಬಿಂಬಿಸುವ ಪ್ರಯತ್ನದಲ್ಲಿ ಅವು ತಮ್ಮನ್ನು 24 ಗಂಟೆಯೂ ತೊಡಗಿಸಿಕೊಂಡಿವೆ. ಇಷ್ಟಕ್ಕೂ, ಮಸೂದೆಯ ರಚನಾ ಮಂಡಳಿಯಲ್ಲಿ ಇರುವವರನ್ನು ನೋಡಿಕೊಂಡು ಒಟ್ಟು ಸಮೂದೆಯ ಭವಿಷ್ಯವನ್ನೇ ನಿರ್ಧರಿಸುವುದಕ್ಕೆ ಏನೆನ್ನಬೇಕು? ಮಸೂದೆಯೊಂದು ಸ್ವೀಕಾರಾರ್ಹವೋ ಅಲ್ಲವೋ ಎಂಬುದನ್ನು ನಿರ್ಧರಿಸುವುದಕ್ಕೆ ಮಸೂದೆಯಲ್ಲಿ ಅಡಕವಾಗಿರುವ ಅಂಶಗಳು ಮಾನದಂಡವಾಗಬೇಕೇ ಹೊರತು ಅದನ್ನು ರಚಿಸಿದವರು ಅಲ್ಲವಲ್ಲ. ಸದ್ಯ ಈ ಮಸೂದೆಯನ್ನು ವಿರೋಧಿಸುತ್ತಿರುವ ನಿರ್ದಿಷ್ಟ ವರ್ಗವೊಂದರ ಭಾಷೆ, ವಾದ ಮಂಡನೆ, ಆಕ್ರೋಶದ ಧಾಟಿಯನ್ನು ನೋಡುವಾಗ ಅವರ ಉದ್ದೇಶ ಶುದ್ಧಿಯ ಬಗ್ಗೆಯೇ  ಅನುಮಾನ ಉಂಟಾಗುತ್ತದೆ.
   ಹಾಗಂತ, ಎಲ್ಲ ಧರ್ಮಗಳೂ ವಿರೋಧಿಸುವ ಅನೇಕ ಮೂಢನಂಬಿಕೆಗಳು ಸಮಾಜದಲ್ಲಿವೆ. ಅವು ಧರ್ಮದ ಮೂಲದಿಂದ ಹುಟ್ಟಿಕೊಂಡದ್ದಲ್ಲ. ಧರ್ಮಕ್ಕೂ ಅವುಗಳಿಗೂ ಸಂಬಂಧವೂ ಇರುವುದಿಲ್ಲ. ಆದರೆ, ಅವು ಸಮಾಜದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆಯೆಂದರೆ, ಧರ್ಮವನ್ನೂ ಮೀರಿ ಅವು ವರ್ಚಸ್ಸು ಬೆಳೆಸಿಕೊಂಡಿವೆ. ಮಸೀದಿ, ದೇವಾಲಯ, ಚರ್ಚುಗಳಲ್ಲಿ ಸೇರುವುದಕ್ಕಿಂತ ಅಧಿಕ ಮಂದಿ ಇವತ್ತು ಇಂಥ ಮೂಢನಂಬಿಕೆಗಳ ಸುತ್ತ ನೆರೆಯುವುದಿದೆ. ಅಲ್ಲಿ ಶೋಷಣೆಯೂ ನಡೆಯುತ್ತದೆ. ಅತ್ಯಾಚಾರ, ವಂಚನೆಯೂ ನಡೆಯುತ್ತದೆ. ಒಂದು ಸರಕಾರ ತರುವ ಕಾನೂನು ಇಂಥ ಧರ್ಮ ವಿರೋಧಿ ನಂಬಿಕೆಗಳ ವಿರುದ್ಧವೇ ಆಗಿದ್ದರೆ ಅದನ್ನು ಸ್ವಾಗತಿಸಲೇಬೇಕು. ಆದರೆ ಅದಕ್ಕಿಂತಲೂ ಮೊದಲು, ಕಾನೂನಿಗಿಂತ ಹೊರತಾದ ಜಾಗೃತಿ ಕಾರ್ಯಕ್ರಮಗಳ ಮೂಲಕ ಇವನ್ನು ಅಳಿಸಬಹುದೇ ಎಂದು ಯೋಚಿಸುವುದೂ ಬಹಳ ಅಗತ್ಯ. ಯಾಕೆಂದರೆ, ನಂಬಿಕೆಗಳೆಂಬುದು ಕ್ರಿಮಿನಲ್ ಕೃತ್ಯಗಳಂತೆ ಅಲ್ಲ. ಕಳ್ಳತನ, ಅತ್ಯಾಚಾರ, ಕೊಲೆ ಮುಂತಾದುವುಗಳ ಜೊತೆ ವ್ಯವಹರಿಸು ವಂತೆ ಸಾಮಾಜಿಕ ನಂಬಿಕೆಗಳೊಂದಿಗೆ ವ್ಯವಹರಿಸುವುದು ತಪ್ಪು. ನಿರ್ದಿಷ್ಟ ನಂಬಿಕೆಯೊಂದು ಧರ್ಮ ವಿರೋಧಿಯೇ ಆಗಿದ್ದರೂ ಅದನ್ನು ಆಚರಿಸುವವರು ಆ ಬಗ್ಗೆ ಗಾಢ ಅಭಿಮಾನವನ್ನು ಹೊಂದಿರುತ್ತಾರೆ. ತಮ್ಮ ನಂಬಿಕೆಯಲ್ಲಿ ದೃಢ ವಿಶ್ವಾಸವನ್ನು ಇಟ್ಟಿರುತ್ತಾರೆ. ಅವರನ್ನು ತಿದ್ದುವುದಕ್ಕೆ ಲಾಠಿ, ಖಾಕಿಯನ್ನು ಬಳಸುವುದರಿಂದ ಸಂಘರ್ಷದ ವಾತಾವರಣವನ್ನು ಹುಟ್ಟು ಹಾಕಿದಂತಾಗುತ್ತದೆಯೇ ಹೊರತು, ಅವರನ್ನು ತಿದ್ದಿದಂತಲ್ಲ. ನಂಬಿಕೆಗೂ ಕ್ರಿಮಿನಲ್ ಕೃತ್ಯಕ್ಕೂ ನಡುವೆ ಇರುವ ಈ ವ್ಯತ್ಯಾಸ ವನ್ನು ವ್ಯವಸ್ಥೆ ಗಂಭೀರವಾಗಿ ಪರಿಗಣಿಸಬೇಕು. ಆದ್ದರಿಂದಲೇ, ಕಾನೂನು ಜಾರಿಗಿಂತಲೂ ಮೊದಲು ವ್ಯವಸ್ಥಿತ ಮತ್ತು ಪರಿಣಾಮಕಾರಿ ಜಾಗೃತಿ ಕಾರ್ಯಕ್ರಮವೊಂದನ್ನು ಸರಕಾರ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸುವುದು. ಯಾಕೆಂದರೆ,      ಸಮಾಜ ಈ ವಂಚಕರನ್ನು ಮುಗ್ಧವಾಗಿ ಅನುಸರಿಸುತ್ತಿದೆ. ಅವರು ಹೇಳಿದಷ್ಟು ದುಡ್ಡು, ಹರಕೆ.. ಇನ್ನಿತರ ವಸ್ತುಗಳನ್ನು ಉದಾರವಾಗಿ ನೀಡುತ್ತಿದೆ. ಹೀಗಿರುವಾಗ, ಸರಕಾರವೇ, ‘ಮೂಢನಂಬಿಕೆ ವಿರೋಧಿ' ಅಭಿಯಾನವನ್ನು ಆರಂಭಿಸಿದರೆ ಒಳಿತಲ್ಲವೇ? ಯಾವುದೆಲ್ಲ ಮೂಢನಂಬಿಕೆ, ಧರ್ಮಕ್ಕೂ ಅದಕ್ಕೂ ಸಂಬಂಧಗಳೇನು, ಬೂದಿ ಬಾಬಾಗಳಿಗೆ ಧಾರ್ಮಿಕವಾಗಿ ಏನು ಸ್ಥಾನಮಾನವಿದೆ, ಧರ್ಮಗಳ ನಿಜವಾದ ಸಾರವೇನು.. ಎಂಬಿತ್ಯಾದಿ ವಿಷಯಗಳ ಸುತ್ತ ಎಲ್ಲ ಧರ್ಮದ ಪ್ರತಿನಿಧಿಗಳನ್ನು ಸೇರಿಸಿ ಸಮಾಜ ಶುದ್ಧಿ ಕಾರ್ಯಕ್ರಮವನ್ನು ಹಮ್ಮಿ ಕೊಂಡರೆ ಮೂಢನಂಬಿಕೆಯ ಜೊತೆ ಗುರುತಿಸಿಕೊಂಡ ಮುಗ್ಧರಲ್ಲಿ ದೊಡ್ಡದೊಂದು ವರ್ಗ ಆ ಬಗ್ಗೆ ಜಿಗುಪ್ಸೆ ತಾಳುವ ಸಾಧ್ಯತೆ ಇದೆ. ಅನೇಕ ಕಡೆ ಭಕ್ತರೇ ವಂಚಕರ ವಿರುದ್ಧ ಬಂಡೇಳಲೂ ಬಹುದು. ಇಂಥ ಪ್ರಯತ್ನಗಳು ವ್ಯಾಪಕ ಮಟ್ಟದಲ್ಲಿ ನಡೆದ ಬಳಿಕ ಕಾನೂನು ಜಾರಿಯ ಬಗ್ಗೆ ಚರ್ಚೆ, ಸಂವಾದಗಳು ನಡೆದರೆ ಅವು ಹೆಚ್ಚು ಅರ್ಥಪೂರ್ಣವಾಗುವುದಕ್ಕೆ ಅವಕಾಶಗಳಿವೆ.
   ಏನೇ ಆಗಲಿ, ಸಾಕಷ್ಟು ಅರ್ಥವ್ಯಾಪ್ತಿಯಿರುವ ನಂಬಿಕೆ-ಮೂಢನಂಬಿಕೆ ಎಂಬ ವಿಷಯಗಳ ಸುತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹುಟ್ಟು ಹಾಕಿರುವ ಚರ್ಚೆಯನ್ನು ಒಂದೇ ಏಟಿಗೆ ಧರ್ಮವಿರೋಧಿ ಎಂಬ ಹಣೆಪಟ್ಟಿ ಹಚ್ಚಿ ತಿರಸ್ಕರಿಸಬೇಕಿಲ್ಲ. ಸಮಾಜದಲ್ಲಿರುವ ಮತ್ತು ಸಕಲ ಧರ್ಮಗಳೂ ವಿರೋಧಿಸುವ ಮೂಢನಂಬಿಕೆಗಳ ಪಟ್ಟಿ ಮಾಡುವುದಕ್ಕೆ ಮತ್ತು ಅವುಗಳಿಂದಾಗುವ ಹಾನಿಯನ್ನು ತಿಳಿದುಕೊಳ್ಳುವುದಕ್ಕೆ ಈ ಚರ್ಚೆ ಖಂಡಿತ ಉಪಯುಕ್ತವಾಗಬಹುದು. ಅಂಥದ್ದೊಂದು ಚರ್ಚೆಗೆ ಸಿದ್ಧರಾಮಯ್ಯರ ಕರಡು ಮಸೂದೆ ಪ್ರೇರಕವಾಗಲಿ ಎಂದು ಹಾರೈಸೋಣ.