Wednesday, 29 January 2014

ಹುಲಿ, ಗೋವು, ಭಯೋತ್ಪಾದನೆ ಮತ್ತು ದಲಿತರು

 2000ದಲ್ಲಿ ನಡೆದ ದಲಿತ ಹತ್ಯಾಕಾಂಡದಲ್ಲಿ
ಕುಟುಂಬದ ನಾಲ್ವರನ್ನು ಕಳಕೊಂಡ
 ಗೋಪಿನಾಥನ್

  1. ಪಶ್ಚಿಮ ಬಂಗಾಲದ ಬೀರ್ಭಮ್ ಜಿಲ್ಲೆ, 2. ಕರ್ನಾಟಕದ ಕೋಲಾರ ಜಿಲ್ಲೆ , 3. ಸುಪ್ರೀಮ್ ಕೋರ್ಟು.. ಇವು ಮೂರೂ ಕಳೆದ ವಾರ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಗಮನ ಸೆಳೆದುವು. ಮನುಷ್ಯರ ಪ್ರಾಣ, ಘನತೆಯ ಬಗ್ಗೆ ಸುಪ್ರೀಮ್ ಕೋರ್ಟು ಅತೀವ ಕಾಳಜಿಯನ್ನು ವ್ಯಕ್ತಪಡಿಸಿ, ಮರಣ ದಂಡನೆಯನ್ನು ಜೀವಾವಧಿಗೆ ಇಳಿಸಲು ತೀರ್ಮಾನಿಸಿದಾಗ ಮೇಲಿನೆರಡು ಜಿಲ್ಲೆಗಳು ಅದನ್ನು ಅಪಹಾಸ್ಯಗೊಳಿಸುವಂತೆ ವರ್ತಿಸಿದುವು. ಒಂದು ವೇಳೆ ಸಮಾನತೆ, ಮಾನವ ಘನತೆ, ದಲಿತ ಸಬಲೀಕರಣ.. ಮುಂತಾದುವುಗಳ ಬಗ್ಗೆ ಮಾಧ್ಯಮಗಳು ವ್ಯಕ್ತಪಡಿಸುತ್ತಿರುವ ಕಾಳಜಿ ಪ್ರಾಮಾಣಿಕವೇ ಆಗಿರುತ್ತಿದ್ದರೆ, ಮಿಕ್ಕೆಲ್ಲ ಸುದ್ದಿಗಳನ್ನು ತುಸು ಬದಿಗಿರಿಸಿ ಈ ಬಗ್ಗೆ ನಿರಂತರ ಸಾರ್ವಜನಿಕ ಜಾಗೃತಿಯನ್ನು ಮೂಡಿಸುವುದಕ್ಕೆ ಈ ಎರಡು ಪ್ರಕರಣಗಳು ಅರ್ಹವಾಗಿದ್ದುವು.
 ಬೀರ್ಭಮ್ ಜಿಲ್ಲೆಯ ಸುಬಲ್‍ಪುರ್ ಗ್ರಾಮದ ಬುಡಕಟ್ಟು ಜನಾಂಗದ ಯುವತಿಯೊಬ್ಬಳು ಅನ್ಯಜಾತಿಯ ಯುವಕನನ್ನು ಪ್ರೀತಿಸಿದಳು. ಈ ಪ್ರೀತಿಯನ್ನು ಗಂಭೀರ ಅಪರಾಧವೆಂದು ಪರಿಗಣಿಸಿದ ಖಾಪ್ ಪಂಚಾಯತ್, ಯುವಕನಿಗೆ ದಂಡ ವಿಧಿಸಿ ಬಿಟ್ಟು ಬಿಟ್ಟಿತಲ್ಲದೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಆದೇಶಿಸಿತು. ಒಂದು ರಾತ್ರಿಯಿಡೀ ಯುವತಿಯನ್ನು ಲೈಂಗಿಕವಾಗಿ ಹಿಂಸಿಸಲಾಯಿತು. ಕೋಲಾರ ಜಿಲ್ಲೆಯ ನಂಗಲಿ ಬಳಿಯ ಕಗ್ಗನ ಹಳ್ಳಿಯಲ್ಲಂತೂ ದಲಿತ ಕುಟುಂಬಗಳಿಗೆ ಮೇಲ್ವರ್ಗವು ಸಾಮೂಹಿಕ ಬಹಿಷ್ಕಾರವನ್ನು ಹೇರಿದೆ. ಹೊಟೇಲು, ಅಂಗಡಿಗಳು ಈ ಕುಟುಂಬಗಳೊಂದಿಗೆ ವ್ಯವಹರಿಸದಂತೆ ಧ್ವನಿವರ್ಧಕಗಳಲ್ಲಿ ಎಚ್ಚರಿಸಲಾಗಿದೆ. ಉಲ್ಲಂಘಿಸಿದವರಿಗೆ ನಿರ್ದಿಷ್ಟ ಪ್ರಮಾಣದ ದಂಡವನ್ನು ಘೋಷಿಸಲಾಗಿದೆ. ಊರ ಕೊಳವೆ ಬಾವಿಯಿಂದ ದಲಿತರು ನೀರು ಬಳಸದಂತೆ ತಡೆಯಲಾಗಿದೆ. ಸಂಕ್ರಾಂತಿ ಹಬ್ಬವನ್ನು ಮೇಲ್ವರ್ಗಕ್ಕಿಂತ ಮೊದಲೇ ಆಚರಿಸಿದುದು ಇದಕ್ಕೆ ಕಾರಣ ಎಂದು ದಲಿತರು ಹೇಳುತ್ತಿದ್ದಾರೆ..
 ಇಲ್ಲಿ ಗೋಹತ್ಯೆ ವಿರೋಧಿ ರಾಲಿಗಳನ್ನು ಏರ್ಪಡಿಸಿ ಆಗಾಗ ಜನರ ಗಮನ ಸೆಳೆಯುವ ಪ್ರಯತ್ನಗಳು ನಡೆಯುತ್ತಿರುತ್ತವೆ. ಭಿನ್ನ ಧರ್ಮದ ಯುವಕ-ಯುವತಿಯರು ಪರಸ್ಪರ ಮಾತಾಡುವುದನ್ನು ತಡೆಯಲು, ಅವರನ್ನು ಪತ್ತೆ ಹಚ್ಚಿ ಥಳಿಸಲು ಇಲ್ಲಿ ತಂಡಗಳೇ ರಚನೆಯಾಗಿವೆ. ‘ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಮಾಡಿರುವುದೇ ಭಯೋತ್ಪಾದನೆ ಉಂಟಾಗಲು ಕಾರಣ..’ ಎಂದು ಪೇಜಾವರ ಶ್ರೀಗಳೇ ಹೇಳುತ್ತಿದ್ದಾರೆ. ‘ಸಾಧು ಪ್ರಾಣಿಯಾದ ಗೋವನ್ನು ಒಂದು ವೇಳೆ ರಾಷ್ಟ್ರ ಪ್ರಾಣಿಯಾಗಿ ಮಾಡಿರುತ್ತಿದ್ದರೆ ದೇಶ ಉಗ್ರವಾದದಿಂದ ಮುಕ್ತವಾಗಿರುತ್ತಿತ್ತು..’ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಉರುಳು ಸೇವೆ ನಡೆಯುತ್ತಿದೆ. ಪಂಕ್ತಿ ಬೇಧ ಜಾರಿಯಲ್ಲಿದೆ. ದಲಿತ ವರ್ಗವನ್ನು ಪ್ರತಿನಿಧಿಸುತ್ತಿರುವ ಅಂಬೇಡ್ಕರ್‍ರ ನೇತೃತ್ವದಲ್ಲಿ ರಚನೆಯಾದ ಸಂವಿಧಾನಕ್ಕೆ 67 ವರ್ಷಗಳು ತುಂಬಿದ ಈ ಹೊತ್ತಲ್ಲಿ ಕಾಣುತ್ತಿರುವ ವೈರುಧ್ಯಗಳಿವು. ಹುಟ್ಟಿನ ಆಧಾರದಲ್ಲಿ ಒಂದು ದೊಡ್ಡ ಸಮೂಹವನ್ನು ಭಯದ ಕೂಪಕ್ಕೆ ತಳ್ಳುವುದನ್ನು ಏನೆಂದು ಕರೆಯಬೇಕು? ಬಹಿಷ್ಕಾರದ ಭೀತಿಯಲ್ಲಿ ಬದುಕುವ ಒಂದು ಸಮೂಹದ ಪಾಲಿಗೆ ಯಾವುದು ಭಯೋತ್ಪಾದನೆಯಾಗಿರಬಹುದು? ಬಾಂಬು, ಬಂದೂಕುಗಳನ್ನು ಈ ವರೆಗೂ ನೋಡಿರದ ಈ ದೇಶದ ಅಸಂಖ್ಯ ಗ್ರಾಮಗಳ ಕೋಟ್ಯಂತರ ದಲಿತರು ಭಯೋತ್ಪಾದನೆಗೆ ಕೊಡುವ ವ್ಯಾಖ್ಯಾನ ಏನಿರಬಹುದು?
 ನಾವೆಲ್ಲ ಭಯೋತ್ಪಾದನೆಗೆ ಒಂದು ಸೀಮಿತ ಅರ್ಥವನ್ನು ಕೊಟ್ಟಿದ್ದೇವೆ. ಆ ಅರ್ಥದಂತೆ ಬಾಂಬು, ಬಂದೂಕುಗಳು ಮಾತ್ರ ಭಯೋತ್ಪಾದನೆಯ ಚೌಕಟ್ಟಿನೊಳಗೆ ಬರುತ್ತದೆ. ಮಾಧ್ಯಮಗಳ ಮುಖಪುಟದಲ್ಲಿ ಇಂಥ ಪ್ರಕರಣಗಳಿಗೆ ದಪ್ಪಕ್ಷರದ ಹೆಡ್‍ಲೈನ್‍ಗಳೂ ಸಿಗುತ್ತವೆ. ಅವು ತಪ್ಪು ಎಂದಲ್ಲ. ಮನುಷ್ಯರನ್ನು ಕೊಲ್ಲುವ, ಅವರನ್ನು ಭೀತಿಯಲ್ಲಿ ಕೆಡಹುವ ಯಾವ ಕೃತ್ಯಗಳೇ ಆಗಲಿ ಅದು ಖಂಡನಾರ್ಹ ಮತ್ತು ಅಂಥ ಪ್ರಕರಣಗಳು ಮಾಧ್ಯಮಗಳ ಮುಖಪುಟದಲ್ಲಿ ಪ್ರಮುಖ ಸುದ್ದಿಯಾಗಿ ಕಾಣಿಸಿಕೊಳ್ಳಬೇಕಾದದ್ದು ಅತ್ಯಂತ ಅಗತ್ಯ. ಆದರೆ, ಭಯೋತ್ಪಾದನೆಯ ವ್ಯಾಖ್ಯಾನವನ್ನು ನಾವು ಅಷ್ಟಕ್ಕೇ ಸೀಮಿತಗೊಳಿಸಿದರೆ ಸಾಕೇ? ಬಾಂಬು ಭಯೋತ್ಪಾದನೆಯ ವಿರುದ್ಧ ಜನರಲ್ಲಿ ಒಂದು ಬಗೆಯ ಪ್ರಜ್ಞೆಯನ್ನು ಬೆಳೆಸಲು ಸಾಧ್ಯವಾಗಿರುವಂತೆಯೇ ಹುಟ್ಟಿನ ಆಧಾರದಲ್ಲಿ ನಡೆಸಲಾಗುವ ಭಯೋತ್ಪಾದನೆಯ ಬಗ್ಗೆಯೂ ಸಮಾಜವನ್ನು ಜಾಗೃತಗೊಳಿಸುವ ಅಗತ್ಯವಿಲ್ಲವೇ? ನಮ್ಮಂತೆ ಕಣ್ಣು, ಕೈ, ಕಾಲು, ಕಿವಿ, ಮೂಗನ್ನು ಹೊಂದಿರುವ ಒಂದು ದೊಡ್ಡ ಸಮೂಹವನ್ನು ಬಹಿಷ್ಕಾರಕ್ಕೆ ಒಳಪಡಿಸುವುದನ್ನೇಕೆ ನಾವು ಬಾಂಬು ಭಯೋತ್ಪಾದನೆಯಷ್ಟೇ ಗಂಭೀರ ಪ್ರಕರಣವಾಗಿ ಪರಿಗಣಿಸುತ್ತಿಲ್ಲ? ಈ ಭಯೋತ್ಪಾದನೆಗೆ ಯಾವ ಪ್ರಾಣಿ ಕಾರಣ? ರಾಜ್ಯದಲ್ಲಿ ಮುಖ್ಯವಾಗಿ ನಮ್ಮ ಕರಾವಳಿ ಪ್ರದೇಶದಲ್ಲಿ ಜಾನುವಾರುಗಳನ್ನು ಕಸಾಯಿಖಾನೆಗೆ ತಲುಪದಂತೆ ಬಲವಂತದಿಂದ ತಡೆಯುವ ಪ್ರಯತ್ನಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಜಾನುವಾರುಗಳನ್ನು ಕೊಂಡೊಯ್ಯುವ ವಾಹನಗಳನ್ನು ಅಡ್ಡಗಟ್ಟಿ ಅದರಲ್ಲಿರುವವರನ್ನು ಥಳಿಸುವ ಪ್ರಕರಣಗಳು ನಡೆಯುತ್ತಿರುತ್ತವೆ. ಹೆಣ್ಣು-ಗಂಡು ಪರಸ್ಪರ ಮಾತಾಡುವುದನ್ನು ತಡೆಯುವುದಕ್ಕೆ ಇಲ್ಲಿ ತಂಡಗಳು ಕಾರ್ಯಾಚರಿಸುತ್ತಿವೆ. ಮಾತ್ರವಲ್ಲ, ತಮ್ಮೆಲ್ಲ ಕೃತ್ಯಗಳನ್ನು ಧರ್ಮರಕ್ಷಣೆ ಎಂದು ಅವು ಸಮರ್ಥಿಸಿಕೊಳ್ಳುತ್ತಲೂ ಇವೆ. ಹೋಮ್‍ಸ್ಟೇ, ಪಬ್ ದಾಳಿ, ಹಾಜಬ್ಬ ಬೆತ್ತಲೆ ಪ್ರಕರಣಗಳನ್ನೆಲ್ಲ ಧರ್ಮರಕ್ಷಣೆಯ ಹೆಸರಲ್ಲಿಯೇ ಇಲ್ಲಿ ಸಮರ್ಥಿಸಿಕೊಳ್ಳಲಾಗಿದೆ. ಅಷ್ಟಕ್ಕೂ, ಯುವತಿಯರು ಮತ್ತು ಜಾನುವಾರುಗಳ ಮೇಲೆ ತೋರುತ್ತಿರುವ ಈ ಮಟ್ಟದ ಪ್ರೀತಿಯ ಸಣ್ಣದೊಂದು ಅಂಶವನ್ನಾದರೂ ದಲಿತರ ಮೇಲೆ ತೋರುತ್ತಿದ್ದರೆ, ಈ ದೇಶದ ಪರಿಸ್ಥಿತಿ ಹೇಗಿರುತ್ತಿತ್ತು? ನಿಜವಾಗಿ, ಕೋಲಾರದ ನಂಗಲಿ ಗ್ರಾಮ ಕೇವಲ ಒಂದು ಉದಾಹರಣೆ ಅಷ್ಟೇ. ಇಂಥ ಪ್ರಕರಣಗಳು ಈ ದೇಶದಲ್ಲಿ ಆಗಾಗ ನಡೆಯುತ್ತಲೇ ಇವೆ. ಆದರೆ, ಧರ್ಮರಕ್ಷಣೆಯ ಹೆಸರಲ್ಲಿ ಜಾನುವಾರುಗಳನ್ನು ತಡೆಯುವ ಮತ್ತು ಯುವಕರನ್ನು ಥಳಿಸುವ ತಂಡಗಳು, ದಲಿತರನ್ನು ಬಹಿಷ್ಕರಿಸಿದವರನ್ನು ಥಳಿಸಿದ ಪ್ರಕರಣ ಈವರೆಗೂ ನಡೆದಿಲ್ಲ. ಯಾಕೆ ಹೀಗೆ? ಹೆಣ್ಣು-ಗಂಡು ಮಾತಾಡುವುದು ಒಂದು ಸಮೂಹವನ್ನೇ ಬಹಿಷ್ಕಾರಕ್ಕೆ ಒಳಪಡಿಸುವುದಕ್ಕಿಂತಲೂ ಭೀಕರ ಅಪರಾಧವೇ? ಅಥವಾ ದಲಿತರು ಧರ್ಮದ ಚೌಕಟ್ಟಿನೊಳಗೆ ಬರುವುದಿಲ್ಲವೇ? ಬಹಿಷ್ಕಾರದಂಥ ಭಯೋತ್ಪಾದನಾ ಕೃತ್ಯಗಳ ಕುರಿತಂತೆ ಥಳಿಸುವ ತಂಡಗಳು ತೋರುತ್ತಿರುವ ಮೌನ ಪ್ರತಿಕ್ರಿಯೆಯನ್ನು ನೋಡಿದರೆ, ಈ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತವೆ. ನಿಜವಾಗಿ, ಹೆಣ್ಣು-ಗಂಡು ಮಾತುಕತೆ, ಜಾನುವಾರು ಹತ್ಯೆ.. ಮುಂತಾದುವುಗಳಿಗಿಂತಲೂ ದಲಿತ ಬಹಿಷ್ಕಾರದಂಥ ಪ್ರಕರಣಗಳು ಅತೀ ಗಂಭೀರವಾದುದು. ಇಂಥ ಕೃತ್ಯಗಳು ಧರ್ಮದ  ನಿಜ ಸ್ವರೂಪವನ್ನೇ ಪ್ರಶ್ನಿಸುತ್ತವೆ. ಮನುಷ್ಯರು ಎಲ್ಲ ಪ್ರಾಣಿಗಳಿಗಿಂತಲೂ ಮಿಗಿಲು ಎಂದು ನಾವು ಒಪ್ಪುವುದಾದರೆ ಮೊಟ್ಟಮೊದಲು ಹುಟ್ಟಿನ ಆಧಾರದಲ್ಲಿ ಆಗುವ ಭಯೋತ್ಪಾದನೆಯ ಬಗ್ಗೆ ಪ್ರಬಲ ಪ್ರತಿಭಟನೆಯನ್ನು ಸಲ್ಲಿಸಬೇಕಾಗುತ್ತದೆ. ಬಹಿಷ್ಕøತರ ಬೆಂಬಲಕ್ಕೆ ಧಾವಿಸಬೇಕಾಗುತ್ತದೆ. ಆ ಮೂಲಕ ಮನುಷ್ಯರೆಲ್ಲ ಸಮಾನ ಎಂದು ಸಾರಬೇಕಾಗುತ್ತದೆ. ಆದರೆ, ಜಾನುವಾರುಗಳ ಬಗ್ಗೆ ಮತ್ತು ಹೆಣ್ಣು-ಗಂಡು ಮಾತುಕತೆಯ ಬಗ್ಗೆ ಒಂದು ವರ್ಗದಿಂದ ವ್ಯಕ್ತವಾಗುತ್ತಿರುವ ಕಾಳಜಿಯು ದಲಿತರ ಬಗ್ಗೆ ಕಾಣಿಸುತ್ತಿಲ್ಲ. ನಿಜವಾಗಿ, ಧರ್ಮವನ್ನು ಪ್ರೀತಿಸುವುದೆಂದರೆ ಧರ್ಮದ ಹೆಸರಲ್ಲಿ ಅಸ್ತಿತ್ವದಲ್ಲಿರುವ ಅನಾಚಾರಗಳನ್ನು ವಿರೋಧಿಸುವುದು. ಅವುಗಳ ನಿರ್ಮೂಲನೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದು. ಮಾತ್ರವಲ್ಲ, ನಿಷ್ಠಾವಂತ ಧರ್ಮಾನುಯಾಯಿಯಾಗಿ ಜೀವಿಸುವುದು. ಆದರೆ, ಇವತ್ತು ಇನ್ನೊಂದು ಧರ್ಮವನ್ನು ಮತ್ತು ಅದರ ಆಚರಣೆಗಳನ್ನು ಗೇಲಿ ಮಾಡುವುದೇ ಧರ್ಮಪ್ರೀತಿ ಆಗಿಬಿಟ್ಟಿದೆ. ದಲಿತ ಬಹಿಷ್ಕಾರದಂಥ ಮನುಷ್ಯ ವಿರೋಧಿ ಕೃತ್ಯಗಳನ್ನು ತಡೆಯುವ ಅಥವಾ ಅದನ್ನು ಪ್ರತಿಭಟಿಸುವ ಬಗ್ಗೆ ಇಲ್ಲದ ಉತ್ಸಾಹ ಹೆಣ್ಣು-ಗಂಡನ್ನು ಥಳಿಸುವಲ್ಲಿ, ಜಾನುವಾರುಗಳ ವಾಹನವನ್ನು ತಡೆದು ಹಲ್ಲೆಗೈಯುವಲ್ಲಿ ಕಾಣಿಸುತ್ತಿದೆ. ಪ್ರಾಣಿಗೆ ಇರುವ ಮಹತ್ವದ ಒಂದಂಶವನ್ನೂ ಮನುಷ್ಯರಿಗೆ ಕೊಡದೆಯೂ ಧರ್ಮಪ್ರೇಮಿಗಳಾಗಿ ಗುರುತಿಸಿಕೊಳ್ಳುವುದಕ್ಕೆ ಇವತ್ತು ಸಾಧ್ಯವಾಗುತ್ತಿದೆ. ಬಹುಶಃ ನಂಗಲಿ ಮತ್ತು ಸಬಲ್‍ಪುರದ ಘಟನೆಗಳು ಇಂಥ ಧರ್ಮಪ್ರೇಮವನ್ನು ಇವತ್ತು ಬಹಿರಂಗವಾಗಿಯೇ ಪ್ರಶ್ನಿಸುತ್ತಿದೆ. ದಲಿತರನ್ನು ಮನುಷ್ಯರಾಗಿ ಒಪ್ಪಲೂ ಸಿದ್ಧವಿಲ್ಲದ ಸಾಮಾಜಿಕ ಮನಸ್ಥಿತಿಗೆ ಎಲ್ಲರೆದುರೇ ಛೀಮಾರಿ ಹಾಕುತ್ತಿದೆ. ಹುಲಿಯನ್ನೂ ಗೋವನ್ನೂ ತುಲನೆ ಮಾಡಿ ಚರ್ಚಿಸುವುದಕ್ಕಿಂತ ಮೊದಲು ಮನುಷ್ಯರನ್ನು ಮನುಷ್ಯರಿಗೆ ತುಲನೆ ಮಾಡಿ ಚರ್ಚಿಸಿ ಎಂದು ಕರೆ ಕೊಡುತ್ತಿದೆ.

Wednesday, 22 January 2014

ಗಗನಕ್ಕೆ ಹಾರುವ ರಾಕೆಟ್ ಗಳೂ, ನಿದ್ದೆಗೆ ಜಾರುವ ಸುನಂದಾರೂ

ಈ ಸುದ್ದಿಗಳನ್ನು ಓದಿ
  1. ಕೇಂದ್ರ ಮಂತ್ರಿ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅಸಹಜ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಪಾಕಿಸ್ತಾನದ ಪತ್ರಕರ್ತೆಯೊಂದಿಗೆ ತರೂರ್ ಅವರಿಗಿರುವ ಗೆಳೆತನವನ್ನು ಪುಷ್ಕರ್ ಪ್ರಶ್ನಿಸಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಮರುದಿನವೇ ಅವರ ಸಾವು ಸಂಭವಿಸಿದೆ.
  2. ಕುಡುಕರು ಮತ್ತು ವರದಕ್ಷಿಣೆ ಬಯಸುವವರ ವಿವಾಹ ನಡೆಸಿ ಕೊಡುವುದಿಲ್ಲವೆಂದು ಜಾರ್ಖಂಡ್, ಬಿಹಾರ ಮತ್ತು ಒಡಿಸ್ಸಾಗಳಲ್ಲಿ ಮುಸ್ಲಿಮರ ಚಟುವಟಿಕೆಗಳನ್ನು ನಿಯಂತ್ರಿಸುವ ಇಮಾರತೆ ಶರಿಯಾ ಎಂಬ ವಿದ್ವಾಂಸರ ಮಂಡಳಿಯು ಘೋಷಿಸಿದೆ.
  3. ದೆಹಲಿಯಲ್ಲಿ ಡೆನ್ಮಾರ್ಕ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ..
  ಕಳೆದ ಒಂದೇ ವಾರದಲ್ಲಿ ಪ್ರಕಟವಾದ ಈ ಮೂರು ಸುದ್ದಿಗಳನ್ನು ಬರೇ ವಾರ್ತೆಗಳಾಗಿಯಷ್ಟೇ ನಾವು ಪರಿಗಣಿಸಬೇಕಿಲ್ಲ. ಹಾಗೆ ಪರಿಗಣಿಸುವುದಕ್ಕೆ ನಮ್ಮ ಸುತ್ತಮುತ್ತಲಿನ ವಾತಾವರಣ ಅನುಮತಿಸುತ್ತಲೂ ಇಲ್ಲ. ಅಂದಹಾಗೆ, ಜನವರಿ 5ರಂದು ಶ್ರೀಹರಿ ಕೋಟಾದಿಂದ ಜಿಎಸ್‍ಎಲ್‍ವಿ-ಡಿ5 ರಾಕೆಟ್ ಯಶಸ್ವಿಯಾಗಿ ಗಗನಕ್ಕೆ ಹಾರಿದುದನ್ನು ಮಾಧ್ಯಮಗಳು ಪ್ರಮುಖ ಸುದ್ದಿಯಾಗಿಸಿ ಸಂಭ್ರಮಿಸಿದುವು. ಕ್ರಯೋಜನಿಕ್ ತಂತ್ರಜ್ಞಾನದಲ್ಲೂ ಭಾರತ ಸ್ವಾವಲಂಬಿಯಾಗಿರುವುದಕ್ಕೆ ದೇಶ ಹರ್ಷಪಟ್ಟಿತು. ವೈಜ್ಞಾನಿಕ ಕ್ಷೇತ್ರದಲ್ಲಿ ಈ ದೇಶ ವಿಶ್ವದ ಪ್ರಮುಖ 5 ರಾಷ್ಟ್ರಗಳಲ್ಲಿ ಒಂದಾಗಿರುವುದಕ್ಕಾಗಿ ವಿಜ್ಞಾನಿ ಸಮೂಹವನ್ನು ಕೊಂಡಾಡಲಾಯಿತು. ಇಷ್ಟಕ್ಕೂ ಕೇವಲ ರಾಕೆಟ್ ಉಡ್ಡಯನವೊಂದೇ ಅಲ್ಲ, ಇನ್ಫೋಸಿಸ್, ವಿಪ್ರೋಗಳಂಥ ಬೃಹತ್ ಕಂಪೆನಿಗಳು ವರ್ಷಂಪ್ರತಿ ಸಾಧಿಸುತ್ತಿರುವ ನಿವ್ವಳ ಲಾಭದ ಬಗ್ಗೆ ಮಾಧ್ಯಮಗಳಲ್ಲಿ ಕೊಂಡಾಟದ ಪದಗಳು ಪ್ರಕಟವಾಗುತ್ತಲೇ ಇವೆ. ಪೋಲಿಯೋ ಮುಕ್ತ ಭಾರತಕ್ಕಾಗಿ ಪ್ರಶಂಸೆಯ ಸುರಿಮಳೆಗಳು ಹರಿದು ಬರುತ್ತಿವೆ. ಭವಿಷ್ಯದಲ್ಲಿ ಭಾರತವು ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಮೂಡಿ ಬರಲಿದೆ ಎಂಬ ರೋಮಾಂಚನಕಾರಿ ಭವಿಷ್ಯಗಳನ್ನು ಹೇಳಲಾಗುತ್ತಿದೆ. ಇವಕ್ಕೆ ಪೂರಕವಾಗಿ ಚತುಷ್ಪಥ ರಸ್ತೆಗಳು, ಮಾಲ್‍ಗಳು, ಗಗನಚುಂಬಿ ಕಟ್ಟಡಗಳ ನಿರ್ಮಾಣವು ಬಿರುಸಿನಿಂದ ನಡೆಯುತ್ತಿವೆ. ಆದರೆ ಈ ಎಲ್ಲ ಸಮಭ್ರಮಗಳ ಇನ್ನೊಂದು ಮಗ್ಗುಲು ಅತ್ಯಂತ ದಾರುಣವಾದದ್ದು ಅನ್ನುವುದನ್ನು ಸುನಂದಾ, ಇಮಾರತೆ ಶರಿಯಾ ಅಥವಾ ಡೆನ್ಮಾರ್ಕ್‍ ನ  ಮಹಿಳೆ ಸಾರುತ್ತಿದ್ದಾರೆ. ಗುಂಡಿಗಳಿಲ್ಲದ ರಸ್ತೆಗಳು ನಿರ್ಮಾಣವಾಗುವುದಕ್ಕಿಂತಲೂ ವೇಗವಾಗಿ ದೇಹವಿಡೀ ಗಾಯಗಳೆಂಬ ಗುಂಡಿಗಳಿಂದ ಜರ್ಝರಿತರಾಗುವ ಹೆಣ್ಣು ಮಕ್ಕಳು ತಯಾರಾಗುತ್ತಿದ್ದಾರೆ. ಕ್ರಯೋಜನಿಕ್ ತಂತ್ರಜ್ಞಾನದ ಖುಷಿಯನ್ನು ಅನುಭವಿಸಲೂ ಸಾಧ್ಯವಾಗದಷ್ಟು ಅಗಾಧ ಪ್ರಮಾಣದಲ್ಲಿ ಕೌಟುಂಬಿಕ ವಾತಾವರಣಗಳು ಛಿದ್ರವಾಗುತ್ತಿವೆ. ಒಂದು ರಾಕೆಟ್ ಆಕಾಶಕ್ಕೆ ಹಾರುವಾಗ, ಅಸಂಖ್ಯ ಸುನಂದಾರು ಭೂಮಿಯೊಳಗೆ ಸೇರುತ್ತಿದ್ದಾರೆ. ಕ್ರಯೋಜನಿಕ್ ತಂತ್ರಜ್ಞಾನದಲ್ಲಿ ನಾವು ಸ್ವಾವಲಂಬನೆ ಹೊಂದಿದಂತೆಯೇ ವರದಕ್ಷಿಣೆ ಎಂಬ ಅತಿ ಹೀನ ಪದ್ಧತಿಯಲ್ಲೂ ಸ್ವಾವಲಂಬನೆ ಸಾಧಿಸಿದ್ದೇವೆ. ಪೋಲಿಯೋ ವೈಕಲ್ಯದಿಂದ ನಾವು ಮುಕ್ತ ಆಗಿರಬಹುದು. ಆದರೆ ಹೆಣ್ಣು ಮಕ್ಕಳನ್ನು ಮಾನಸಿಕವಾಗಿ ಎಂದೆಂದೂ ವೈಕಲ್ಯಕ್ಕೆ ದೂಡುವ 'ಅತ್ಯಾಚಾರ'ವೆಂಬ ವೈಕಲ್ಯವನ್ನು ನಾವು ಸಂಶೋಧಿಸಿ ಇಟ್ಟುಕೊಂಡಿದ್ದೇವೆ.
   ನಿಜವಾಗಿ, ಮೇಲೆ ಉಲ್ಲೇಖಿಸಲಾದ ಮೂರೂ ಪ್ರಕರಣಗಳಲ್ಲಿ ಒಂದು ಸಮಾನ ಬಿಂದುವಿದೆ. ಅದುವೇ ನೈತಿಕತೆ. ಕೌಟುಂಬಿಕ ಸಂಬಂಧಗಳು ಬಿರುಕು ಬಿಡುತ್ತಿರುವ, ಸಾಮಾಜಿಕ ನಿಯಮಗಳು ಸಡಿಲಗೊಳ್ಳುತ್ತಿರುವ ಮತ್ತು ಧಾರ್ಮಿಕ ಮೌಲ್ಯಗಳು ಪ್ರಾಶಸ್ತ್ಯ ಕಳೆದುಕೊಳ್ಳುತ್ತಿರುವ ಸೂಚನೆಗಳನ್ನು ಪ್ರತಿದಿನದ ಬೆಳವಣಿಗೆಗಳು ಮತ್ತೆ ಮತ್ತೆ ಸಾರಿ ಹೇಳುತ್ತಿವೆ. ಅಂದಹಾಗೆ, ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್, ಆಮ್ ಆದ್ಮಿ.. ಸಹಿತ ರಾಜಕೀಯ ಪಕ್ಷಗಳ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರಬಹುದಾದರೂ ನೈತಿಕ ವಿಷಯದಲ್ಲಿ ಭಿನ್ನತೆಗಳಿರುವ ಸಾಧ್ಯತೆ ಇಲ್ಲ. ಕುಟುಂಬ, ಪತಿ-ಪತ್ನಿ, ಮಕ್ಕಳು ಮತ್ತು ಅಲ್ಲಿ ಪಾಲನೆಯಾಗಬೇಕಾದ ಮೌಲ್ಯಗಳ ವಿಷಯದಲ್ಲಿ ರಾಜಕಾರಣಿಗೂ ಸಾಮಾನ್ಯನಿಗೂ ನಡುವೆ ವ್ಯತ್ಯಾಸ ಇರುವುದಿಲ್ಲ. ಸಾಮಾನ್ಯನೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನು ಹೇಗೆ ಪ್ರೀತಿಸುತ್ತಾನೋ ಹಾಗೂ ಪತ್ನಿ ಮತ್ತು ಮಕ್ಕಳು ತನ್ನನ್ನು ಎಷ್ಟು ಪ್ರೀತಿಸಬೇಕೆಂದು ಆಸೆ ಪಡುತ್ತಾನೋ ಅಂಥದ್ದೇ ಆಸೆ ಮತ್ತು ನಿರೀಕ್ಷೆ ರಾಜಕಾರಣಿಯಲ್ಲೂ ಇರುತ್ತದೆ. ಕಾಲೇಜಿಗೆ ಹೋದ ತನ್ನ ಮಗಳ ಸುರಕ್ಷಿತತೆಯ ಬಗ್ಗೆ ಸಾಮಾನ್ಯ ಹೆತ್ತವರು ನಿತ್ಯ ಅನುಭವಿಸುವ ಒತ್ತಡದಷ್ಟು ಅಲ್ಲದಿದ್ದರೂ ಒಂದು ಹಂತದ ವರೆಗೆ ರಾಜಕಾರಣಿ ಹೆತ್ತವರೂ ಅನುಭವಿಸುತ್ತಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಈ ಹಿಂದೆ ಇಂಥದ್ದೇ ಆಂತಕವನ್ನು ವ್ಯಕ್ತಪಡಿಸಿದ್ದರು. ಆಧುನಿಕ ಸಂಸ್ಕøತಿಯ ಥಳಕು-ಬಳುಕಿನಲ್ಲಿ ಎಲ್ಲಿ ತನ್ನ ಮಕ್ಕಳು ಹೆಜ್ಜೆ ತಪ್ಪುತ್ತಾರೋ ಅನ್ನುವ ಭೀತಿ ಮಧ್ಯಮ ವರ್ಗದ ಕುಟುಂಬಗಳಲ್ಲಿ ಮಾತ್ರ ಇರುವುದಲ್ಲ, ರಾಜಕಾರಣಿಗಳಂಥ ಶ್ರೀಮಂತ ಕುಟುಂಬಗಳಲ್ಲೂ ಇರುತ್ತದೆ. ಹಾಗಿದ್ದೂ, ನೈತಿಕತೆಯೇ ಈ ದೇಶದ ಅತಿದೊಡ್ಡ ಸಮಸ್ಯೆಯಾಗಿ ಇವತ್ತು ಗುರುತಿಸಿಕೊಳ್ಳುತ್ತಿರುವುದಕ್ಕೆ ಕಾರಣ ಏನು? ಧರ್ಮವನ್ನು ಅತೀ ಹೆಚ್ಚು ಅನುಸರಿಸುವವರುಳ್ಳ ದೇಶವೊಂದು ಧರ್ಮಬಾಹಿರ ಕೃತ್ಯಗಳಲ್ಲಿ ಹೆಚ್ಚೆಚ್ಚು ಸುದ್ದಿಯಾಗುತ್ತಿರುವುದು ಯಾವುದರ ಸೂಚನೆ? ವರದಕ್ಷಿಣೆ ಮತ್ತು ಮದ್ಯಪಾನವು ಮುಸ್ಲಿಮರ ಪಾಲಿಗೆ ಧಾರ್ಮಿಕವಾಗಿಯೇ ನಿಷಿದ್ಧ. ಪ್ರವಾದಿ ಮುಹಮ್ಮದ್ ಮತ್ತು ಪವಿತ್ರ ಕುರ್‍ಆನಿನ ಅನುಯಾಯಿ ಎಂದು ಗುರುತಿಸಿಕೊಳ್ಳುವ ಮತ್ತು ಮುಸ್ಲಿಮರ ಹೆಸರಿಟ್ಟ ವ್ಯಕ್ತಿ ಈ ನಿಯಮವನ್ನು ಪಾಲಿಸುವುದು ಕಡ್ಡಾಯ. ಮುಸ್ಲಿಮ್ ಕುಡುಕರು, ಮುಸ್ಲಿಮ್ ವರದಕ್ಷಿಣೆಕೋರರು ಎಂಬ ಪದಗಳೇ ಇಸ್ಲಾಮಿಗೆ ಅನ್ಯ. ಆದರೆ ಇವತ್ತು ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಇವುಗಳ ವಿರುದ್ಧವೇ ಮುಸ್ಲಿಮ್ ವಿದ್ವಾಂಸರು ಫತ್ವಾ ಹೊರಡಿಸಬೇಕಾದ ಸ್ಥಿತಿ ಬಂದಿದೆ. ಅಷ್ಟಕ್ಕೂ, ಸುನಂದ ಅವರ ಅಸಹಜ ಸಾವು ಮುಂದಿನ ದಿನಗಳಲ್ಲಿ ಸಹಜ ಸಾವಾಗಿಯೋ ಆತ್ಮಹತ್ಯೆಯಾಗಿಯೋ ಗುರುತಿಸಿಕೊಳ್ಳಬಹುದು. ಈ ಸಾವಿನಲ್ಲಿ ತರೂರ್ ನಿರಪರಾಧಿ ಎಂದೂ ಘೋಷಿತವಾಗಬಹುದು. ಯಾಕೆಂದರೆ, ಸುನಂದ ಅನುಭವಿಸಿದ ಮಾನಸಿಕ ಒತ್ತಡವನ್ನು ದಾಖಲಿಸುವುದಕ್ಕೆ ನಮ್ಮಲ್ಲಿ ಯಾವುದೇ ತಂತ್ರಜ್ಞಾನಗಳು ಇಲ್ಲವಲ್ಲ. ಅಲ್ಲದೇ ಕೋರ್ಟು ದೈಹಿಕ ಗಾಯಗಳನ್ನು ಪರಿಗಣಿಸುತ್ತದೆಯೇ ಹೊರತು ಮಾನಸಿಕ ಗಾಯಗಳನ್ನು ಅಲ್ಲವಲ್ಲ. ಹಾಗಂತ, ಇದು ಓರ್ವ ಸುನಂದರ ಸಮಸ್ಯೆ ಮಾತ್ರವೇ ಅಲ್ಲ. ಈ ದೇಶದಲ್ಲಿ ಅಸಂಖ್ಯಾ ಕುಟುಂಬಗಳು ಅನುಭವಿಸುತ್ತಿರುವ ಸಮಸ್ಯೆಯ ಒಂದು ಮುಖವಷ್ಟೇ ಆಕೆ. ಪತಿಗೆ ಪತ್ನಿಯ ಮೇಲೆ ಮತ್ತು ಪತ್ನಿಗೆ ಪತಿಯ ಮೇಲೆ ಪರಸ್ಪರ ಪ್ರೀತಿಗಿಂತ ಅನುಮಾನಗಳೇ ಹೆಚ್ಚುತ್ತಿರುತ್ತಿರುವ ದಿನಗಳಿವು. ಮದುವೆ, ವಿಚ್ಛೇದನ, ವಿವಾಹೇತರ ಸಂಬಂಧ.. ಮುಂತಾದುವುಗಳೆಲ್ಲ 'ಸಹಜ' ಅನ್ನುವಷ್ಟರ ಮಟ್ಟಿಗೆ ಇವತ್ತು ಮಾಮೂಲು ಆಗತೊಡಗಿವೆ. ಇಂಥದ್ದೊಂದು ಸ್ಥಿತಿಯಲ್ಲಿ ನಾವು ಕೇವಲ ರಾಕೆಟ್ಟು, ಪೋಲಿಯೋ ಮುಕ್ತ ಭಾರತವನ್ನು ಕಲ್ಪಿಸಿಕೊಂಡು ಖುಷಿಪಟ್ಟರೆ ಏನು ಪ್ರಯೋಜನವಿದೆ? ಈ ಎಲ್ಲ ಖುಷಿಯನ್ನೂ ಮುಂದೊಂದು ದಿನ ವಿಷಾದವಾಗಿ ಪರಿವರ್ತಿಸಿಬಿಡಬಲ್ಲ ಸಮಸ್ಯೆಯ ಕುರಿತು ನಾವು ಎಷ್ಟಂಶ ಗಂಭೀರವಾಗಿದ್ದೇವೆ?
   ನೈತಿಕ ಮೌಲ್ಯಗಳು ಪಾತಾಳ ಕಂಡಿರುವ ದೇಶವೊಂದು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಪ್ರಯೋಜನವಿಲ್ಲ. ಒಂದು ದೇಶದ ಭವಿಷ್ಯವು ಆ ದೇಶದ ಸಾಮಾಜಿಕ ಅಭಿರುಚಿಗಳನ್ನು ಹೊಂದಿಕೊಂಡಿದೆ. ನೈತಿಕತೆಗೆ ಯಾವ ಬೆಲೆಯನ್ನೂ ಕೊಡದ ಸಮಾಜವೊಂದು ನೆಮ್ಮದಿಯ ದೇಶ ನಿರ್ಮಾಣಕ್ಕೆ ಯಾವ ಕೊಡುಗೆಯನ್ನೂ ಕೊಡಲಾರದು. ನೆಮ್ಮದಿಗೂ ಪ್ರಗತಿಗೂ ನಡುವೆ ದೊಡ್ಡ ವ್ಯತ್ಯಾಸ ಇದೆ. ಒಂದು ಕುಟುಂಬ ಅಥವಾ ದೇಶ ಸಂಪದ್ಭರಿತವಾಗಿದೆಯೆಂದ ಮಾತ್ರಕ್ಕೆ ಆ ಕುಟುಂಬ ನೆಮ್ಮದಿಯಿಂದಿದೆ ಎಂದರ್ಥವೂ ಅಲ್ಲ. ನೆಮ್ಮದಿ ಬರೇ ಶ್ರೀಮಂತಿಕೆಯನ್ನು ಹೊಂದಿಕೊಂಡಿಲ್ಲ. ಅದು ಆ ಕುಟುಂಬ ಪಾಲಿಸುತ್ತಿರುವ ಮೌಲ್ಯಗಳನ್ನು ಹೊಂದಿಕೊಂಡಿದೆ. ಈ ದೇಶ ಸದ್ಯ ನೆಮ್ಮದಿಯಿಲ್ಲದ ಶ್ರೀಮಂತಿಕೆಯೆಡೆಗೆ ಧಾವಿಸುತ್ತಿದೆಯೇನೋ ಎಂದು ಅನುಮಾನಿಸುವುದಕ್ಕೆ ಪ್ರತಿನಿತ್ಯ ಉದಾಹರಣೆಗಳು ಸಿಗುತ್ತಲೇ ಇವೆ. ಸುನಂದಾ ಪುಷ್ಕರ್, ಡೆನ್ಮಾರ್ಕ್ ಮಹಿಳೆ ಮತ್ತು ಇಮಾರತೆ ಶರಿಯಾಗಳು ಇದನ್ನು ಮತ್ತೊಮ್ಮೆ ದೃಢಪಡಿಸಿವೆ.

Wednesday, 15 January 2014

ಮುಂಜಿ, ಬುರ್ಖಾ ಮತ್ತು ರಾಜಕೀಯ ಭ್ರಮೆ

    ಒಂದು ದೇಶದ ಪಾಲಿಗೆ ಚುನಾವಣೆಯೊಂದು ಅತಿ ಮಹತ್ವದ ಮತ್ತು ಬಹುನಿರೀಕ್ಷೆಯ ವಿಷಯವಾಗಬೇಕಾದದ್ದು ಯಾವ ಕಾರಣದಿಂದ? ನಾವು ಬಯಸಿದರೂ ಬಯಸದಿದ್ದರೂ 5 ವರ್ಷಕ್ಕೊಮ್ಮೆ ಚುನಾವಣೆ ಬಂದೇ ಬರುತ್ತದೆ. ಮತದಾನದ ದಿನದಂದು ಸರಕಾರಿ ರಜೆಯನ್ನು ಘೋಷಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗುವಂತೆ ನೋಡಿಕೊಳ್ಳಲಾಗುತ್ತದೆ. ಮತದಾರರಿಗೆ ಸುಲಭವಾಗುವಂತೆ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತದಲ್ಲದೇ ಮನೆ ಮನೆಗೆ ತೆರಳಿ 'ಮತದಾರ ಚೀಟಿ'ಯನ್ನೂ ವಿತರಿಸಲಾಗುತ್ತದೆ. ಹಾಗಂತ, ಓರ್ವ ಮತದಾರ ಮತದಾನವನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಇವೆಲ್ಲ ಪ್ರಮುಖ ಕಾರಣಗಳಾಗಬೇಕೇ ಅಥವಾ ಆ ಚುನಾವಣೆಯಲ್ಲಿ ಚರ್ಚೆಗೀಡಾಗುವ ವಿಷಯಗಳು; ಅಭ್ಯರ್ಥಿ, ಪಕ್ಷ, ಪ್ರಣಾಳಿಕೆಗಳು ಮುಖ್ಯವಾಗಬೇಕೇ? ಇಂಥದ್ದೊಂದು ಅನುಮಾನ ಪ್ರತಿ ಚುನಾವಣೆಗಳ ಸಂದರ್ಭದಲ್ಲೂ ಮತದಾರರಿಗೆ ಎದುರಾಗುತ್ತಲೇ ಇರುತ್ತವೆ.
   ದೇರಳಕಟ್ಟೆ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯ ಮತದಾರರ ಮುಂದೆ ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟು ಹಾಕಿದೆ. ರೌಡಿಗಳ ಪಟ್ಟಿಯಲ್ಲಿರುವ ಕೆಲವು ಕ್ರಿಮಿನಲ್‍ಗಳು ಮಾಡಿರುವ ಖಂಡನೀಯ ಕೃತ್ಯವೊಂದನ್ನು ಎತ್ತಿಕೊಂಡು ಮುಸ್ಲಿಮರನ್ನು ನಿಂದಿಸುವ, ಅವರ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಪ್ರಯೋಗಿಸುವ ಘಟನೆಗಳು ಇಲ್ಲಿ ನಡೆಯುತ್ತಿವೆ. ಮುಸ್ಲಿಮರ ಮುಂಜಿ ಕರ್ಮವನ್ನು, ಬುರ್ಖಾವನ್ನು ಬಹಿರಂಗ ವೇದಿಕೆಗಳಲ್ಲಿ ಹೀಯಾಳಿಸಲಾಗುತ್ತಿದೆ. ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಎಲ್ಲ ಸಂದರ್ಭಗಳಲ್ಲಿ ಬಿಜೆಪಿಯ ನಾಯಕರು ಮತ್ತು ಜನಪ್ರತಿನಿಧಿಗಳು ಇಂಥ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತ್ಯಕ್ಷ  ಬೆಂಬಲವನ್ನೂ ಸಾರುತ್ತಿದ್ದಾರೆ. ನಿಜವಾಗಿ, ಚುನಾವಣೆಯಲ್ಲಿ ಗೆಲ್ಲಬೇಕಾದರೆ ಮುಸ್ಲಿಮರನ್ನು ನಿಂದಿಸಬೇಕು ಅನ್ನುವ ಭ್ರಮೆಯು ದಕ್ಷಿಣ ಕನ್ನಡದ ಬಿಜೆಪಿಯಲ್ಲಿ ಮತ್ತು ಅದರ ಬೆಂಬಲಿಗರಲ್ಲಿ ಮಾತ್ರ ಇರುವುದಲ್ಲ. ಅದೊಂದು ರಾಷ್ಟ್ರ ಮಟ್ಟದ ಭ್ರಮೆ. ಆ ಭ್ರಮೆ ಚುನಾವಣೆ ಹತ್ತಿರ ಬರುತ್ತಲೇ ಜಾಗೃತವಾಗುತ್ತದೆ. ಆಗ ಪ್ರತಿಯೊಂದು ಅಪರಾಧ ಕೃತ್ಯವನ್ನೂ ಹಿಂದೂ-ಮುಸ್ಲಿಮ್ ಎಂದು ವಿಭಜಿಸಲಾಗುತ್ತದೆ. 2002ರ ಗುಜರಾತ್ ಹತ್ಯಾಕಾಂಡದ ಬಳಿಕ ನಡೆದ ಚುನಾವಣೆಯ ಸಂದರ್ಭದಲ್ಲಿ ಮೆಹ್ಸಾನದಲ್ಲಿ ನಡೆದ ಸಭೆಯಲ್ಲಿ ಮೋದಿ ಭಾಷಣ ಆರಂಭಿಸಿದ್ದೇ, 'ಅಲೀಗಳು, ಮಲೀಗಳು, ಜಮಾಲಿಗಳು  ಮತ್ತು ಅವರ ಶಿಶು ಉತ್ಪಾದನಾ ಕಂಪೆನಿಗಳು..' (ದಿ ಹಿಂದೂ, 2013 ಡಿಸೆಂಬರ್ 31) ಎಂದೇ. ಉತ್ತರ ಪ್ರದೇಶದ ಮುಝಫ್ಫರ್ ನಗರದ ಗಲಭೆಯ ಆರೋಪಿಗಳಾಗಿರುವ ಬಿಜೆಪಿ ಶಾಸಕರಾದ ಸಂಗೀತ್ ಸೋಮ್, ಸುರೇಶ್ ರಾಣಾ, ಕನ್ವರ್ ಸೋಮ್ ಮತ್ತು ಇತರ 34 ಮಂದಿಯನ್ನು, ‘ಬಿಜೆಪಿ ರಾಜ್ಯ ಮಾನವ ಹಕ್ಕು ಘಟಕವು’ ಸನ್ಮಾನಿಸಿತ್ತು. ಸನ್ಮಾನದ ಎರಡು ದಿನಗಳ ಬಳಿಕ ಮೋದಿಯವರ ರಾಲಿಯಲ್ಲೂ ಈ ಶಾಸಕರನ್ನು ಬಹಿರಂಗವಾಗಿಯೇ ಸನ್ಮಾನಿಸಲಾಯಿತು. ಅಲ್ಲದೇ, ಮುಝಫ್ಫರ್ ನಗರದ ಗಲಭೆಯ ಬಗ್ಗೆ ಈ ವರೆಗೆ ಯಾವೊಂದು ಮಾತನ್ನೂ ಆಡಿಲ್ಲದ ಮೋದಿ, ಕೇಂದ್ರ ಸರಕಾರ ತರಲುದ್ದೇಶಿಸಿರುವ ಕೋಮುಗಲಭೆ ತಡೆ ವಿಧೇಯಕದ ವಿರುದ್ಧ ತೀವ್ರ ಪ್ರತಿಭಟನೆಯನ್ನು ಸಲ್ಲಿಸಿ ಕಳೆದ ತಿಂಗಳು ಪ್ರಧಾನಿಗೆ ಪತ್ರ (ದಿ ಹಿಂದೂ, 2013 ಡಿಸೆಂಬರ್ 27) ಬರೆದಿದ್ದರು. ಇವೆಲ್ಲ ಏನು? ಮುಸ್ಲಿಮರ ಕುರಿತಂತೆ ಅದು ಹೊಂದಿರುವ ದ್ವೇಷದ ಅಭಿಪ್ರಾಯಕ್ಕೆ ಸ್ಪಷ್ಟ ಪುರಾವೆಗಳಲ್ಲವೇ? ಒಂದು ದೇಶದ ಪ್ರಜೆಗಳ ಬಗ್ಗೆ ಈ ಮಟ್ಟದ ಅಭಿಪ್ರಾಯವಿರುವ ಪಕ್ಷವೊಂದು ದೇಶವನ್ನಾಳುವುದನ್ನು ಹೇಗೆ ಸಹಿಸಿಕೊಳ್ಳುವುದು?
   ನಿಜವಾಗಿ, ಧರ್ಮಕ್ಕೂ ಅಪರಾಧಕ್ಕೂ ಸಂಬಂಧವೇ ಇಲ್ಲ. ಆರೋಪಿಗಳ ಹೆಸರುಗಳು ಏನೇ ಆಗಿರಲಿ, ಅವರು ಬರೇ ಆರೋಪಿಗಳೇ ಹೊರತು ಯಾವ ಧರ್ಮದ ಪ್ರತಿನಿಧಿಗಳೂ ಅಲ್ಲ, ಆಗಬಾರದು ಕೂಡಾ. ಅಷ್ಟಕ್ಕೂ, ಮುಸ್ಲಿಮರನ್ನು ನಿಂದಿಸುವವರಿಗೆ, ಮುಸ್ಲಿಮ್ ದ್ವೇಷದ ಕಾರ್ಯಾಚರಣೆಗಳಲ್ಲಿ ಪಾಲುಗೊಂಡವರನ್ನು ಸನ್ಮಾನಿಸುವವರಿಗೆ ಇವೆಲ್ಲ ಗೊತ್ತಿಲ್ಲ ಎಂದಲ್ಲ, ಗೊತ್ತಿದೆ. ಹಾಗಿದ್ದೂ, ಅವರು ಮತ್ತೆ ಮತ್ತೆ ಯಾಕೆ ತಪ್ಪು ಮಾಡುತ್ತಿದ್ದಾರೆಂದರೆ, ಜನರ ಮುಂದಿಡುವುದಕ್ಕೆ ಅವರಲ್ಲಿ ಬೇರೆ ಯಾವುದೇ ಜನಪರ ಇಶ್ಶೂ ಇಲ್ಲ. ಅಲ್ಲದಿದ್ದರೆ, ದೇರಳಕಟ್ಟೆ ಪ್ರಕರಣವನ್ನು ಮುಂದಿಟ್ಟುಕೊಂಡು ಮುಸ್ಲಿಮರನ್ನು ಮತ್ತು ಅವರ ಆರಾಧನಾ ಕ್ರಮಗಳನ್ನು ನಿಂದಿಸುತ್ತಿರುವುದಾದರೂ ಯಾಕೆ? ಅಪರಾಧ ಕೃತ್ಯಗಳ ಹೊಣೆಯನ್ನು ಬಿಜೆಪಿ ಯಾಕೆ ಧರ್ಮದ ಮೇಲೆ ಹೊರಿಸುತ್ತಿದೆ? ಒಂದು ವೇಳೆ ಅಪರಾಧಗಳಿಗೆ ಧರ್ಮವೇ ಹೊಣೆ ಎಂದಾದರೆ, ಅದು ಮೊಟ್ಟಮೊದಲು ಹಿಂದೂ ಧರ್ಮವನ್ನೇ ದ್ವೇಷಿಸಬೇಕಾಗುತ್ತದೆ. ಯಾಕೆಂದರೆ, ಈ ದೇಶದಲ್ಲಿ ಪ್ರತಿನಿತ್ಯ ಹಿಂದೂ-ಮುಸ್ಲಿಮ್-ಜೈನ ಎಂಬ ಬೇಧವಿಲ್ಲದೇ ಎಲ್ಲ ಧರ್ಮಗಳ ಅನುಯಾಯಿಗಳೂ ಅಪರಾಧ ಕೃತ್ಯಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ಇವರಲ್ಲಿ ಮುಸ್ಲಿಮರನ್ನು ಮಾತ್ರ ಹೆಕ್ಕಿಕೊಂಡು ಅವರ ಅಪರಾಧವನ್ನು ಮಾತ್ರ ಅತಿ ಗಂಭೀರವೆಂಬಂತೆ ಬಿಜೆಪಿ ಬಿಂಬಿಸುತ್ತಿರುವುದೇಕೆ? ಪ್ರೀತಿ, ಪ್ರೇಮ, ಪ್ರಣಯ, ಮೋಸ, ವಂಚನೆಗಳೆಲ್ಲ ಯಾವುದಾದರೊಂದು ಧರ್ಮದೊಂದಿಗೆ ಗುರುತಿಸಿಕೊಂಡವರಲ್ಲಿ ಮಾತ್ರ ಇರುವುದಲ್ಲವಲ್ಲ. ಈ ದೇಶಧ ಶೈಕ್ಷಣಿಕ ವ್ಯವಸ್ಥೆ, ಉದ್ಯೋಗ ರಂಗ, ಮಾರುಕಟ್ಟೆ, ಸಾಂಸ್ಕøತಿಕ ಕ್ಷೇತ್ರಗಳೆಲ್ಲ ಹಿಂದೂ-ಮುಸ್ಲಿಮ್ ಎಂದಾಗಲಿ ಹೆಣ್ಣು-ಗಂಡು ಎಂದಾಗಲಿ ವಿಭಜನೆಗೊಂಡಿಲ್ಲ. ಎಲ್ಲರೂ ಮುಕ್ತವಾಗಿ ಬೆರೆಯುವ ವಾತಾವರಣ ಇಲ್ಲಿದೆ. ಇಂಥ ಸಂದರ್ಭದಲ್ಲಿ ಹಿಂದೂ ಹುಡುಗಿ ಮುಸ್ಲಿಮ್ ಹುಡುಗನನ್ನು ಪ್ರೀತಿಸುವುದು ಅಥವಾ ಮುಸ್ಲಿಮ್ ಹುಡುಗಿ ಹಿಂದೂ ಹುಡುಗನ ಬಗ್ಗೆ ಆಕರ್ಷಿತಳಾಗುವುದು ಅದ್ಭುತವೇನೂ ಅಲ್ಲ. ಅದಕ್ಕೆ ಪಿತೂರಿ, ಷಡ್ಯಂತ್ರಗಳ ಅಗತ್ಯವೂ ಇಲ್ಲ. ಈ ದೇಶದ ಸಾಮಾಜಿಕ, ಶೈಕ್ಷಣಿಕ ವಾತಾವರಣವು ಹೆಣ್ಣು-ಗಂಡು ಪರಸ್ಪರ ಮಾತಾಡುವಷ್ಟು, ಬೆರೆಯುವಷ್ಟು ಮುಕ್ತವಾಗಿರುವಾಗ ವಯೋಸಹಜ ಆಕರ್ಷಣೆಗೆ ಧರ್ಮದ ಲೇಪ ಕೊಡಬೇಕಾದ ಅಗತ್ಯವೂ ಇಲ್ಲ. ಆದರೆ ಬಿಜೆಪಿ ಮತ್ತು ಅದರ ಬೆಂಬಲಿಗರು ಈ ಸಹಜ ಪ್ರಕ್ರಿಯೆಗಳಿಗೆ ಅಸಹಜ ರೂಪವನ್ನು ಕೊಡಲು ಪ್ರಯತ್ನಿಸುತ್ತಿದ್ದಾರೆ. ಈ ರಾಜ್ಯದಲ್ಲಿ ನಾಪತ್ತೆಯಾದ ಹೆಣ್ಣು ಮಕ್ಕಳ ಪಟ್ಟಿಯನ್ನು ಎತ್ತಿ ಹೇಳಿ, ಹೆತ್ತವರನ್ನು ಭೀತಿಗೆ ಒಳಪಡಿಸುತ್ತಿದ್ದಾರೆ. ಲವ್ ಜಿಹಾದ್.. ಮುಂತಾದ ಪದಗಳನ್ನು ಹರಿಯ ಬಿಡುತ್ತಿದ್ದಾರೆ. ನಿಜವಾಗಿ, ಹೆಣ್ಣು ಮಕ್ಕಳನ್ನು ಪ್ರೀತಿಯ ಬಲೆಗೆ ಒಡ್ಡಿ, ಅವರನ್ನು ಮತಾಂತರಗೊಳಿಸಿ, ಮುಸ್ಲಿಮರ ಸಂಖ್ಯೆಯನ್ನು ಹೆಚ್ಚುಗೊಳಿಸಲು ಆದೇಶವನ್ನು ಇಸ್ಲಾಮ್ ಎಂದೂ ನೀಡಿಲ್ಲ. ಧರ್ಮ ಅನ್ನುವುದು ಹೇಗಾದರೂ ಮಾಡಿ ಸಂಖ್ಯೆಯನ್ನು ಹೆಚ್ಚುಗೊಳಿಸುವ ಉದ್ದೇಶದಿಂದ ಅಸ್ತಿತ್ವದಲ್ಲಿ ಇರುವುದಲ್ಲ. ಮೋಸ, ವಂಚನೆಯಿಂದ ಯಾವ ಧರ್ಮವನ್ನೇ ಆಗಲಿ ಬಲಾಢ್ಯಗೊಳಿಸಲು ಸಾಧ್ಯವೇ? ಅಂಥದ್ದೊಂದು ಕಲ್ಪನೆಯನ್ನು ಇಸ್ಲಾಮ್ ಎಂದೂ ಪ್ರಸ್ತುತಪಡಿಸಿಯೇ ಇಲ್ಲ. ಆದರೆ, ಬಿಜೆಪಿ ಮತ್ತು ಬೆಂಬಲಿಗರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಮತ್ತೆ ಮತ್ತೆ ಸುಳ್ಳನ್ನು ಪ್ರಚಾರ ಮಾಡುತ್ತಲೇ ಇದ್ದಾರೆ. ಮುಸ್ಲಿಮರನ್ನು ನಿಂದಿಸುವುದಕ್ಕೆ ಅಪರಾಧ ಕೃತ್ಯಗಳನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುತ್ತಿದ್ದಾರೆ. ಜನರ ಮಧ್ಯೆ ಭಾವನಾತ್ಮಕ ಗಡಿಗಳನ್ನು ನಿರ್ಮಿಸುತ್ತಿದ್ದಾರೆ.
   ಏನೇ ಆಗಲಿ, ಈ ದೇಶದ ಚುನಾವಣೆಗಳು ಬ್ಲ್ಯಾಕ್‍ಮೇಲ್ ರಾಜಕೀಯಕ್ಕಿಂತ ಹೊರತಾದ ಕಾರಣಕ್ಕಾಗಿ ಚರ್ಚೆಯಲ್ಲಿರಬೇಕು. ಮುಸ್ಲಿಮರನ್ನು ನಿಂದಿಸುವುದರಿಂದ ಓಟು ಸಿಗುತ್ತದೆ ಎಂಬ ನಂಬುಗೆಯನ್ನು ಮತದಾರರು ಯಾವ ಕಾರಣಕ್ಕೂ ಬೆಂಬಲಿಸಬಾರದು. ಚುನಾವಣೆಗಳು ಜನಪರ ಇಶ್ಶೂಗಳ ಆಧಾರದಲ್ಲಿ ನಡೆಯಲಿ. ಉತ್ತಮ ಪ್ರಣಾಳಿಕೆ, ಉತ್ತಮ ಅಭ್ಯರ್ಥಿ
ಗಳು, ಮನುಷ್ಯ ಪ್ರೇಮಿ ವಿಚಾರಧಾರೆಗಳನ್ನು ಬೆಂಬಲಿಸುವ ರಾಜಕೀಯ ಮುತ್ಸದ್ದಿತನವು ಮತದಾರರಲ್ಲಿ ಬೆಳೆದು ಬರಲಿ. ಅಪರಾಧ ಕೃತ್ಯಗಳನ್ನು ಕೇವಲ ಅಪರಾಧ ಕೃತ್ಯಗಳಾಗಿಯೇ ನೋಡುವ ಮತ್ತು ಧರ್ಮವನ್ನು ಧರ್ಮವಾಗಿಯೇ ನೋಡುವ ವಾತಾವರಣ ದೇಶದೆಲ್ಲೆಡೆ ಕಾಣಿಸಿಕೊಳ್ಳಲಿ.

Wednesday, 1 January 2014

ಮೋದಿ ಎಂಬ ಗುಳ್ಳೆಯನ್ನು ಒಡೆದು ಹಾಕಿದ ಯಡಿಯೂರಪ್ಪ

    1. ಅರವಿಂದ್ ಕೇಜ್ರಿವಾಲ್
 2. ಯಡಿಯೂರಪ್ಪ
 ದೆಹಲಿ ಮತ್ತು ಬೆಂಗಳೂರಿನಲ್ಲಿ ಸದ್ಯ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ ಎರಡು ಹೆಸರುಗಳಿವು. ಈ ಹೆಸರುಗಳ ನಡುವೆ ಇರುವ ಸಮಾನ ಅಂಶ ಏನೆಂದರೆ, ವರ್ಷದ ಹಿಂದೆ ಇವರಿಬ್ಬರೂ ಹೊಸ ಪಕ್ಷವನ್ನು ಕಟ್ಟಿದರು. ಸಮಾನ ಅಂಶ ಬಹುತೇಕ ಇಲ್ಲಿಗೇ ಕೊನೆಗೊಳ್ಳುತ್ತದೆ. ಆದರೆ ವಿರುದ್ಧ ಅಂಶಗಳಂತೂ ಹತ್ತಾರು ಇವೆ. ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸುವುದೇ ಕೇಜ್ರಿವಾಲ್ ಪಕ್ಷದ ಮೂಲ ತಳಹದಿ. ಯಡಿಯೂರಪ್ಪರಾದರೋ ಭ್ರಷ್ಟಾಚಾರದ ಆರೋಪವನ್ನು ಹೊತ್ತುಕೊಂಡೇ ಪಕ್ಷ  ಕಟ್ಟಿದರು. ಜೈಲು ಸೇರಿದರು. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ‘ಆಪರೇಶನ್ ಕಮಲ’ ನಡೆಸಿದರು. ದುಡ್ಡಿಗಾಗಿ ಬಳ್ಳಾರಿಯನ್ನೇ ಮಾರಿದರು. ಮಠ, ಮಂದಿರಗಳನ್ನು ಕೊಂಡುಕೊಂಡರು. ಇಲ್ಲೆಲ್ಲಾ ಕೇಜ್ರಿವಾಲ್ ಸಂಪೂರ್ಣ ತದ್ವಿರುದ್ಧ. ಅಧಿಕಾರಕ್ಕಾಗಿ ‘ಆಪರೇಶನ್’ ನಡೆಸಬೇಕಾದ ಸನ್ನಿವೇಶ ಸೃಷ್ಟಿಯಾಗಿದ್ದರೂ ಕೇಜ್ರಿವಾಲ್ ಅಂಥದ್ದೊಂದು ಪ್ರಯತ್ನವನ್ನೇ ಮಾಡಲಿಲ್ಲ. ಕಾಂಗ್ರೆಸ್ ಪಕ್ಷವು ಬೆಂಬಲ ನೀಡಲು ಮುಂದೆ ಬಂದಾಗಲೂ 18 ಷರತ್ತುಗಳನ್ನು ಒಡ್ಡಿದರು. ನಿಜವಾಗಿ ಷರತ್ತುಗಳನ್ನು ಒಡ್ಡಬೇಕಾಗಿದ್ದುದು ಕಾಂಗ್ರೆಸ್. ಯಾಕೆಂದರೆ, ಅದರ ಬೆಂಬಲವೇ ನಿರ್ಣಾಯಕ. ಸರಕಾರವನ್ನು ಬೀಳಿಸುವ ಅಥವಾ ಉಳಿಸುವ ಸಾಮರ್ಥ್ಯ  ಆ ಬೆಂಬಲಕ್ಕಿದೆ. ಆದರೆ, ಕೇಜ್ರಿವಾಲ್‍ರು ಈ ಸಾಂಪ್ರದಾಯಿಕ ರಾಜಕೀಯವನ್ನೇ ತಿರಸ್ಕರಿಸಿದರು. ಅಧಿಕಾರಕ್ಕಾಗಿ ಮೌಲ್ಯಗಳೊಂದಿಗೆ ರಾಜಿಯಾಗಲಾರೆ ಎಂದು ದಿಟ್ಟವಾಗಿ ಸಾರಿದರು. ದೆಹಲಿಯ ಮಂದಿ ಕೇಜ್ರಿವಾಲರಲ್ಲಿ ಇವತ್ತು ನಂಬಿಕೆ ಇಟ್ಟಿರುವುದಕ್ಕೆ ಅವರ ಇಂಥ ನಿಷ್ಠುರ ನಡೆಗಳೇ ಕಾರಣ. ಒಂದು ವೇಳೆ, ಯಡಿಯೂರಪ್ಪರ ಬಗ್ಗೆ ಈ ರಾಜ್ಯದ ಮಂದಿಗೆ ನಂಬಿಕೆ ಇದ್ದದ್ದೇ ಆಗಿದ್ದರೆ ಅವರ ಕೆಜೆಪಿಯನ್ನು ಅವರು ಪರ್ಯಾಯವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಆಮ್ ಆದ್ಮಿ ಪರ್ಯಾಯವಾದಂತೆ ಕರ್ನಾಟಕದಲ್ಲೂ ಕೆಜೆಪಿ ಪರ್ಯಾಯವಾಗಬಹುದಿತ್ತು. ಅಲ್ಲದೇ, ಕೇಜ್ರಿವಾಲ್‍ಗೆ ಇಲ್ಲದ ಹಲವಾರು ಅನುಕೂಲಗಳೂ ಯಡಿಯೂರಪ್ಪರಿಗಿದ್ದುವು. ಅವರು ಮಾಜಿ ಮುಖ್ಯಮಂತ್ರಿ. ಅವರ ಜೊತೆಗೆ ಮಾಜಿ ಮಂತ್ರಿಗಳೂ ಇದ್ದರು. ಕಾರ್ಯಕರ್ತರ ಪಡೆಯೂ ಇತ್ತು. ಇಷ್ಟೆಲ್ಲ ಇದ್ದೂ ರಾಜ್ಯದ ಮಂದಿ ಅವರ ಮೇಲೆ ಭರವಸೆ ಇಡದೇ ಇದ್ದುದಕ್ಕೆ ಕಾರಣ ಏನು? ಭ್ರಷ್ಟಾಚಾರಿ ಎಂಬ ಹಣೆಪಟ್ಟಿಯ ಹೊರತಾದ ಬೇರೆ ಯಾವ ಕಾರಣಗಳನ್ನು ಇದಕ್ಕೆ ಕೊಡಬಹುದು? ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಏನೇ ಸಮರ್ಥನೆ ಕೊಡಲಿ, ಈ ರಾಜ್ಯದ ಮಂದಿ ಯಡಿಯೂರಪ್ಪರಲ್ಲಿ ಓರ್ವ ಭ್ರಷ್ಟನನ್ನು ಕಂಡಿದ್ದಾರೆ. ಆ 'ಭ್ರಷ್ಟ'ನನ್ನು ಈ ರಾಜ್ಯದ ಮಂದಿ ಎಷ್ಟರ ಮಟ್ಟಿಗೆ ದ್ವೇಷಿಸಿದರೆಂದರೆ, ಅವರಿಗೆ ಎರಡಂಕಿಯ ಶಾಸಕರನ್ನೂ ಕೊಡಲಿಲ್ಲ. ಮಠ, ಮಂದಿರಗಳು ಬಹುತೇಕ ಯಡಿಯೂರಪ್ಪರ ಪರ ನಿಂತರೂ ಜನ ತಿರಸ್ಕರಿಸಿದರು. ಇಂಥ ಯಡಿಯೂರಪ್ಪರನ್ನು ಬಿಜೆಪಿ ಸೇರಿಸಿಕೊಳ್ಳುತ್ತಿದೆಯೆನ್ನುವುದು ಯಾವುದರ ಸೂಚನೆ? ಈ ಮೂಲಕ ಅದು ಈ ದೇಶದ ಮತದಾರರಿಗೆ ಯಾವ ಸಂದೇಶವನ್ನು ರವಾನಿಸಲು ಬಯಸುತ್ತಿದೆ? ಅಧಿಕಾರಕ್ಕಾಗಿ ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಳ್ಳಲೂ ಸಿದ್ಧ ಎಂಬ ಬಿಜೆಪಿಯ ಈ ನಿಲುವು ಮೋದಿಗೆ ಸಮ್ಮತವೇ? ‘ಮೋದಿಯನ್ನು ಪ್ರಧಾನಿ ಮಾಡುವುದಕ್ಕಾಗಿ ನಾನು ಬಿಜೆಪಿ ಸೇರುತ್ತಿದ್ದೇನೆ..’ ಅನ್ನುವ ಯಡಿಯೂರಪ್ಪ ಮತ್ತು ಕೇಂದ್ರ ಸರಕಾರದ ಭ್ರಷ್ಟಾಚಾರವನ್ನು ಖಂಡಿಸುತ್ತಾ ತಿರುಗುತ್ತಿರುವ ಮೋದಿ; ಯಾಕೆ ಈ ವೈರುಧ್ಯ? ತನ್ನ ಪಕ್ಷಕ್ಕೆ ಭ್ರಷ್ಟಾಚಾರಿಯನ್ನು ಆಹ್ವಾನಿಸುತ್ತಲೇ ಕೇಂದ್ರ ಸರಕಾರವನ್ನು ಖಂಡಿಸುವ ಮೋದಿಯವರು ಯಾರನ್ನು ವಂಚಿಸುತ್ತಿದ್ದಾರೆ?
 ಒಂದು ಪಕ್ಷದ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿ ಭ್ರಷ್ಟಾಚಾರಿಯಾಗುವುದಕ್ಕೂ ಭ್ರಷ್ಟಾಚಾರಿಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವುದಕ್ಕೂ ವ್ಯತ್ಯಾಸ ಇದೆ. ಲಕ್ಷಾಂತರ ಮಂದಿ ಕಾರ್ಯಕರ್ತರಿರುವ ಪಕ್ಷವೊಂದರಲ್ಲಿ ಎಲ್ಲರೂ ಪಕ್ಷದ ನೀತಿ, ಸಿದ್ಧಾಂತ, ಧೋರಣೆಗಳಿಗೆ ನೂರು ಶೇಕಡಾ ಬದ್ಧರಾಗಿ ಬದುಕುತ್ತಾರೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಪಕ್ಷದ ಧೋರಣೆಗಳಿಗೆ ವ್ಯತಿರಿಕ್ತವಾಗಿ ಓರ್ವ ಭ್ರಷ್ಟಾಚಾರಿಯಾಗಬಲ್ಲ. ಕೊಲೆಗಾರ, ಅತ್ಯಾಚಾರಿ.. ಏನೇನೋ ಆಗಬಲ್ಲ. ಆದರೆ ಪಕ್ಷಕ್ಕೆ ಇದು ಗೊತ್ತಾದ ಕೂಡಲೇ ಆತನನ್ನು ಪಕ್ಷದಿಂದ ಉಚ್ಛಾಟಿಸುವ ನಿಷ್ಠುರತೆಯನ್ನು ಪಕ್ಷ ಪ್ರದರ್ಶಿಸಬೇಕು. ಪಕ್ಷಕ್ಕೆ ಸಿದ್ಧಾಂತ ಮುಖ್ಯವೇ ಹೊರತು ವ್ಯಕ್ತಿಯಲ್ಲ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಸುವ  ವಿಧಾನ ಇದು. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಿಜೆಪಿಯು ಆ ಮೂಲಕ ಅವರ ಮೇಲಿನ ಭ್ರಷ್ಟಾಚಾರದ ಆರೋಪವನ್ನು ಒಂದು ಹಂತದವರೆಗೆ ಒಪ್ಪಿಕೊಂಡಿದೆ. ಯಡಿಯೂರಪ್ಪ ಕೆಜೆಪಿ ಕಟ್ಟಿದ ಬಳಿಕ ಬಿಜೆಪಿ ವರ್ತಿಸಿದ ರೀತಿಯನ್ನು ನೋಡಿದರೆ ಇದನ್ನು ಖಚಿತವಾಗಿ ಹೇಳಬಹುದು. ಮಾತ್ರವಲ್ಲ, ಆ ಆರೋಪದಿಂದ ಯಡಿಯೂರಪ್ಪ ಇನ್ನೂ ಮುಕ್ತರಾಗಿಲ್ಲ. ಹೀಗಿರುತ್ತಾ, ಅವರನ್ನು ಪಕ್ಷಕ್ಕೆ ಮತ್ತೆ ಸೇರ್ಪಡೆಗೊಳಿಸಿರುವುದಕ್ಕೆ ಬಿಜೆಪಿ ಯಾವ ಸಮರ್ಥನೆಯನ್ನು ಕೊಡಬಲ್ಲದು? ಬಿಜೆಪಿಗೆ ಅಂಥದ್ದೊಂದು ವ್ಯಕ್ತಿಯ ಅಗತ್ಯ ಏನಿತ್ತು? ಇವತ್ತು ಈ ದೇಶದಲ್ಲಿ ಭ್ರಷ್ಟಾಚಾರವನ್ನು ವಿರೋಧಿಸುವ ಕೋಟ್ಯಂತರ ಮಂದಿಯಿದ್ದಾರೆ. ವಿಶ್ವ ಪ್ರಸಿದ್ಧ ಆಪಲ್  ಕಂಪೆನಿಯಲ್ಲಿ ಒಂದು ಕೋಟಿ ರೂಪಾಯಿ ಸಂಬಳದ ಉದ್ಯೋಗವನ್ನು ಕೈ ಬಿಟ್ಟು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಮೊಮ್ಮಗ ಆದರ್ಶ್ ಶಾಸ್ತ್ರಿಯವರು ಅಮ್ ಆದ್ಮಿ ಪಕ್ಷವನ್ನು ಸೇರಲು ಮುಂದಾಗಿರುವುದಕ್ಕೆ ಭ್ರಷ್ಟಾಚಾರ ವಿರೋಧಿ ಆಕ್ರೋಶವೇ ಕಾರಣ. ಇಂಥ ಅಸಂಖ್ಯಾತ ಯುವಕ-ಯುವತಿಯರು ಇವತ್ತು ಹೊಸತೊಂದು ಭಾರತದ ಕನಸು ಕಾಣುತ್ತಿದ್ದಾರೆ. ಈ ಕನಸಿಗೆ ಮೋದಿ ಹೇಗೆ ನಾಯಕತ್ವ ನೀಡಬಲ್ಲರು? ಭ್ರಷ್ಟಾಚಾರಕ್ಕಾಗಿ 6 ಕೋಟಿ ಕನ್ನಡಿಗರೇ ತಿರಸ್ಕರಿಸಿದ ವ್ಯಕ್ತಿಯನ್ನು ಮೋದಿ ತನ್ನ ಗೆಲುವಿಗಾಗಿ ಆಶ್ರಯಿಸುತ್ತಾರೆಂದರೆ, ಅವರು ಕಟ್ಟುವ ಭಾರತವಾದರೂ ಯಾವುದು? ಆ ಭಾರತದಲ್ಲಿ ಭ್ರಷ್ಟಾಚಾರಕ್ಕೆ ಮತ್ತು ಭ್ರಷ್ಟಾಚಾರಿಗಳಿಗೆ ಯಾವ ಶಿಕ್ಷೆ ಇದ್ದೀತು?
 ಒಂದು ಪಕ್ಷ ಒಂದು ದೇಶವನ್ನು ಆಳುವುದಕ್ಕೆ ಅರ್ಹತೆ ಪಡೆಯಬೇಕಾದದ್ದು ಆ ಪಕ್ಷದಲ್ಲಿರುವ ದುಡ್ಡು, ನಾಯಕರುಗಳ ಸಂಖ್ಯೆ ಅಥವಾ ಆ ಪಕ್ಷಕ್ಕೆ ಆಗಿರುವ ವಯಸ್ಸಿನ ಆಧಾರದಲ್ಲಿ ಆಗಿರಬಾರದು. ಅದು ಆ ಪಕ್ಷದ ಧೋರಣೆಯನ್ನು ಹೊಂದಿಕೊಂಡಿರಬೇಕು. ಪಕ್ಷದ ನಾಯಕರು ತಪ್ಪನ್ನೆಸಗಿದಾಗ ಕೈಗೊಳ್ಳುವ ನಿಲುವುಗಳೇನು ಎಂಬುದನ್ನು ನೋಡಿಕೊಂಡಿರಬೇಕು. ವ್ಯಕ್ತಿ ಮತ್ತು ಸಿದ್ಧಾಂತದ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ ಅದು ಏನನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಆಧರಿಸಿರಬೇಕು. ಕಾಂಗ್ರೆಸ್ ಪಕ್ಷಕ್ಕೆ 125 ವರ್ಷಗಳಾಗಿವೆ ಎಂಬ ಏಕೈಕ ಕಾರಣಕ್ಕಾಗಿ ರಾಹುಲ್ ಗಾಂಧಿ ಪ್ರಧಾನಿಯಾಗುವುನ್ನು ಯಾರೂ ಒಪ್ಪುವುದಿಲ್ಲ, ಒಪ್ಪಬಾರದು. ನರೇಂದ್ರ ಮೋದಿಯವರು ಗುಜರಾತ್‍ನಲ್ಲಿ ಸತತ 3ನೇ ಬಾರಿ ಜನಾದೇಶ ಪಡೆದಿದ್ದಾರೆ ಎಂಬುದು ಕೂಡ ಅವರ ಪ್ರಧಾನಿ ಅಭ್ಯರ್ಥಿತನಕ್ಕೆ ಮಾನದಂಡ ಆಗುವುದಿಲ್ಲ, ಆಗಬಾರದು ಕೂಡ. ನಿರ್ಣಾಯಕ ಸಂದರ್ಭಗಳಲ್ಲಿ ಈ ಇಬ್ಬರ ಧೋರಣೆಗಳು ಏನೇನು ಎಂಬುದೇ ಇವರಿಬ್ಬರಲ್ಲಿ ಯಾರು ಉತ್ತಮ ಎಂದು ನಿರ್ಣಯಿಸುವುದಕ್ಕೆ ಸರಿಯಾದ ಮಾನದಂಡ. ರಾಹುಲ್ ಗಾಂಧಿ ಈ ನಿಟ್ಟಿನಲ್ಲಿ ನರೇಂದ್ರ ಮೋದಿಗಿಂತ ಮುಂದಿದ್ದಾರೆ. ಭ್ರಷ್ಟ ಸಂಸದರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದೆಂಬ ಸುಪ್ರೀಮ್ ಕೋರ್ಟಿನ ತೀರ್ಪಿನ ವಿರುದ್ಧ ಕೇಂದ್ರ ಸರಕಾರವು ಹೊರಡಿಸಿದ ಆಧ್ಯಾದೇಶವನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಎಲ್ಲರೆದುರೇ ಖಂಡಿಸಿದ್ದಾರೆ. ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಕಳುಹಿಸಲಾದ ಆ ಆಧ್ಯಾದೇಶವನ್ನು `ಕಸದ ಬುಟ್ಟಿಗೆ ಹಾಕಿ' ಎಂದು ನೇರವಾಗಿ ಹೇಳಿದ್ದಾರೆ. ಇದೀಗ, ಆದರ್ಶ್ ಸೊಸೈಟಿ ಹಗರಣದ ಕುರಿತಾದ ವರದಿಗೆ ಸಂಬಂಧಿಸಿಯೂ ಮಹಾರಾಷ್ಟ್ರದ ಕಾಂಗ್ರೆಸ್ ಸರಕಾರದ ನಿಲುವನ್ನು ಅವರು ಬಲವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಒಳಗೊಂಡಿರುವರೆನ್ನಲಾದ ಈ ಹಗರಣದ ವರದಿಯನ್ನು ತಿರಸ್ಕರಿಸುವ ಸರಕಾರದ ನಿರ್ಧಾರ ತಪ್ಪೆಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಂತ, ಕಾಂಗ್ರೆಸ್ ಭ್ರಷ್ಟಮುಕ್ತವಾಗಿದೆ ಎಂದು ಇದರರ್ಥವಲ್ಲ. ಆದರೆ, ನಿರ್ಣಾಯಕ ಸಂದರ್ಭಗಳಲ್ಲಿ ಮುಲಾಜಿಲ್ಲದೇ ನಿಲುವು ವ್ಯಕ್ತಪಡಿಸುವ ಮತ್ತು ಭ್ರಷ್ಟಾಚಾರದೊಂದಿಗೆ ರಾಜಿಯಾಗದೇ ಇರುವ ಛಾತಿಯನ್ನು ರಾಹುಲ್ ಗಾಂಧಿ ತೋರಿಸಿದ್ದಾರೆ. ಇವರಿಗೆ ಹೋಲಿಸಿದರೆ ಮೋದಿ ತೀರಾ ಹಿಂದಿದ್ದಾರೆ. ಭ್ರಷ್ಟಾಚಾರ, ಜಾತ್ಯತೀತತೆ, ಗೋಧ್ರಾ ಹತ್ಯಾಕಾಂಡ.. ಸಹಿತ ಪ್ರತಿಯೊಂದರ ಬಗ್ಗೆಯೂ ಅವರಲ್ಲಿ ಆಳವಾದ ದ್ವಂದ್ವವಿದೆ. 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗೋಧ್ರಾ ಹತ್ಯಾಕಾಂಡದ ಬಗ್ಗೆ ಅವರು ತೋಡಿಕೊಂಡ ವ್ಯಾಕುಲತೆಯಲ್ಲೂ ಇದು ಎದ್ದು ಕಾಣುತ್ತದೆ. ನಿಜವಾಗಿ, ಇತರ ಪಕ್ಷಗಳನ್ನು ಮತ್ತು ಅದರ ತಪ್ಪುಗಳನ್ನು ಹೆಕ್ಕಿ ಹೆಕ್ಕಿ ಟೀಕೆಗೆ ಒಳಪಡಿಸುವುದು ಸುಲಭ. ಆದರೆ ತನ್ನದೇ ಪಕ್ಷದ ತಪ್ಪುಗಳನ್ನು ಪ್ರಶ್ನಿಸುವುದು ಕಷ್ಟ. ಮೋದಿ ಈ ವರೆಗೆ ಬಿಜೆಪಿಯ ಆಂತರಿಕ ಭ್ರಷ್ಟತನದ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಸ್ವಿಸ್ ಬ್ಯಾಂಕ್, ಕಾಮನ್‍ವೆಲ್ತ್ ಅಥವಾ 2ಜಿ ಹಗರಣಗಳ ಬಗ್ಗೆ ಅವರು ಮಾತಾಡುವ ಧಾಟಿ, ಆವೇಶವನ್ನು ನೋಡಿದರೆ ಅವರು ಯಡಿಯೂರಪ್ಪರನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಆದರೆ ತನ್ನ ವಿರೋಧ ಏನಿದ್ದರೂ ಅದು ಕಾಂಗ್ರೆಸ್‍ನ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಅಲ್ಲ ಎಂಬುದನ್ನು ಯಡಿಯೂರಪ್ಪ ಪ್ರಕರಣದ ಮೂಲಕ ಅವರು ಸಾಬೀತುಪಡಿಸುತ್ತಿದ್ದಾರೆ.
   ಏನೇ ಆಗಲಿ, ಮೋದಿಯ ಸುತ್ತ ಬಿಜೆಪಿ ಮತ್ತು ಮಾಧ್ಯಮವು ಹರಡಿಬಿಟ್ಟಿರುವ ಭರವಸೆಯ ಗುಳ್ಳೆಯನ್ನು ಯಡಿಯೂರಪ್ಪ ಒಡೆದು ಹಾಕಿದ್ದಾರೆ. ನಿರ್ಣಾಯಕ ಸಂದರ್ಭಗಳಲ್ಲಿ ಮೋದಿ ಎಷ್ಟು ದುರ್ಬಲರು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಇಂಥ ನಾಯಕ ಈ ದೇಶವನ್ನು ಮುನ್ನಡೆಸಲು ಎಷ್ಟು ಸಮರ್ಥ ಎಂಬ ಬಹುಮುಖ್ಯ ಪ್ರಶ್ನೆಯನ್ನೂ ಅವರು ಜನರ ಮುಂದಿಟ್ಟಿದ್ದಾರೆ. ಈ ಕಾರಣಕ್ಕಾಗಿ ನಾವು ಯಡಿಯೂರಪ್ಪರನ್ನು ಅಭಿನಂದಿಸಬೇಕು.