Wednesday 26 February 2014

'ಮತ್ತು' ಬರಿಸುವ ಚಹಾ ಮತ್ತು ಓಟು

   ಚಾಯ್ ಪೆ ಚರ್ಚಾ, ರಾಗಾ ಹಾಲು, ಮೆಹೆಂದಿ ಲಗಾವೋ... ಮುಂತಾದ ಹೊಸ ಹೊಸ ಪದಗುಚ್ಛಗಳು ಮಾಧ್ಯಮಗಳಲ್ಲಿ ಇವತ್ತು ಹೆಚ್ಚೆಚ್ಚು ಸುದ್ದಿ ಮಾಡುತ್ತಿವೆ. ಹೊಟೇಲು, ಬಸ್ಸು ನಿಲ್ದಾಣ, ಅಲ್ಲಿ-ಇಲ್ಲಿ ಇವು ತಮಾಷೆ ಮತ್ತು ಬಿಸಿಬಿಸಿ ಚರ್ಚೆಗೂ ಒಳಗಾಗುತ್ತಿದೆ. ಚಹಾ ಮಾರಾಟ ಮಾಡಿ ಬೆಳೆದ ಮೋದಿಯವರನ್ನು ಕಾಂಗ್ರೆಸ್‍ನ ಮಣಿಶಂಕರ್ ಅಯ್ಯರ್ ವ್ಯಂಗ್ಯವಾಡಿದ್ದೇ ಚಾಯ್ ಪೆ ಚರ್ಚಾ ಪದಗುಚ್ಛ ಹುಟ್ಟಿಕೊಳ್ಳಲು ಕಾರಣ. ಅಯ್ಯರ್‍ರ ವ್ಯಂಗ್ಯವನ್ನೇ ನೆಪವಾಗಿಟ್ಟುಕೊಂಡು ಈ ದೇಶದ 300 ನಗರಗಳ 1000 ಕೇಂದ್ರಗಳಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸುವ ಯೋಜನೆಯನ್ನು ಮೋದಿ ಹಮ್ಮಿಕೊಂಡರು. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಮಾಡಲಾಗುವ ಈ ಸಂವಾದಕ್ಕೆ ಸ್ವತಃ ಮೋದಿಯೇ ಚಾಲನೆ ಕೊಟ್ಟರು. ಇದರ ಬೆನ್ನಿಗೇ ರಾಗಾ (ರಾಹುಲ್ ಗಾಂಧಿ) ಹಾಲು ಹುಟ್ಟಿಕೊಂಡಿತು. ಚಹಾವು ಆರೋಗ್ಯಕ್ಕೆ ಹಾನಿಕರವಾಗಿದ್ದು ಅದಕ್ಕಿಂತ ಹಾಲು ಉತ್ತಮ ಎಂದು ಹೇಳುತ್ತಾ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ರಾಗಾ ಹಾಲು ಮಾರಾಟ ಆರಂಭಿಸಿದರು. ಆ ಬಳಿಕ ಮೆಹಂದಿ ಲಗಾವೋ (ಮೆಹಂದಿ ಹಚ್ಚಿ) ಎಂಬ ಅಭಿಯಾನವನ್ನು ಜಾರ್ಖಂಡ್‍ನ ಬಿಜೆಪಿ ಮಹಿಳಾ ವಿಭಾಗವು ಹಮ್ಮಿಕೊಂಡಿತು. ಪ್ರತಿ ಮನೆಗೂ ಭೇಟಿ ಕೊಟ್ಟು ಮಹಿಳೆಯರ ಕೈಗಳಿಗೆ ಮೆಹಂದಿಯಲ್ಲಿ ತಾವರೆಯನ್ನು ಬಿಡಿಸುವ ಅಭಿಯಾನ ಇದು. ಇದೀಗ ಬಿಹಾರದಲ್ಲಿ ಲಾಲೂ ದುಕಾನ್ (ಅಂಗಡಿ) ಪ್ರಾರಂಭವಾಗಿದೆ. ಅಷ್ಟಕ್ಕೂ ಇಂಥ ಅಭಿಯಾನಗಳು ಇಲ್ಲಿಗೇ ಕೊನೆಗೊಳ್ಳುವ ಸಾಧ್ಯತೆ ಇಲ್ಲ. ಎದುರಾಳಿಗಳು ಹೊರಿಸುವ ಆರೋಪಗಳ ಗುಣಮಟ್ಟವನ್ನು ಹೊಂದಿಕೊಂಡು ಹೊಸಹೊಸ ಪದಗುಚ್ಛಗಳು ಮುಂದಿನ ದಿನಗಳಲ್ಲಿ ಹುಟ್ಟಿಕೊಳ್ಳುವ ಸಾಧ್ಯತೆಯೂ ಇದೆ.
 ನಿಜವಾಗಿ, ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ಹೊಸತೇನೂ ಅಲ್ಲ. ಅಲ್ಲದೆ, ಈ ಸಂದರ್ಭದಲ್ಲಿ ಮಾಡಲಾಗುವ ಆರೋಪಗಳನ್ನು ಜನರು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ವೇದಿಕೆಯಲ್ಲಿ ಹುಟ್ಟಿಕೊಂಡು ವೇದಿಕೆಯಲ್ಲೇ ಸಾವಿಗೀಡಾಗುವ ಇಂಥ ಆರೋಪಗಳು ಆ ದಿನದ ಮನರಂಜನೆಯಾಗಿ ಗುರುತಿಗೀಡಾಗುವುದೇ ಹೆಚ್ಚು. ಆದರೆ ಚಾಯ್ ಪೇ ಚರ್ಚಾ ಎಂಬ ಪದಗುಚ್ಛ ಮತ್ತು ಅದು ಚುನಾವಣಾ ಕಾರ್ಯತಂತ್ರವಾಗಿ ಬದಲಾಗಿರುವುದನ್ನು ನೋಡಿದರೆ, ಅಚ್ಚರಿ ಮತ್ತು ಆಘಾತವಾಗುತ್ತದೆ. ಯಾಕೆಂದರೆ, ಚುನಾವಣೆಗಳು ನಡೆಯಬೇಕಾದದ್ದು ಇಶ್ಶೂಗಳ ಆಧಾರದ ಮೇಲೆಯೇ ಹೊರತು ಗಿಮಿಕ್‍ಗಳ ಮೇಲಲ್ಲ. ಜನರ ಗಮನವನ್ನು ಸೆಳೆಯುವುದಕ್ಕಾಗಿ ರಾಜಕೀಯ ಪಕ್ಷಗಳು ಚಹಾ, ಕಾಫಿ, ಹಾಲು, ಮೆಹಂದಿಗಳ ಮೊರೆ ಹೋಗಲು ಪ್ರಾರಂಭಿಸಿದರೆ, ಅದರ ಪರಿಣಾಮ ಏನಾದೀತು? ಅದು ಯಾವ ಫಲಿತಾಂಶಕ್ಕೆ ಕಾರಣವಾದೀತು? ಈ ದೇಶ ಇವತ್ತು ಎದುರಿಸುತ್ತಿರುವುದು ಚಹಾದ್ದೋ ಹಾಲಿನದ್ದೋ ಸಮಸ್ಯೆಯನ್ನು ಅಲ್ಲವಲ್ಲ. ಭ್ರಷ್ಟಾಚಾರ, ಮಂದ ಪ್ರಗತಿ, ಕೋಮುವಾದ, ಭಯೋತ್ಪಾದನೆ, ಔದ್ಯೋಗಿಕ ಸಮಸ್ಯೆಗಳಿಂದ ಸುತ್ತುವರಿದಿರುವ ದೇಶವೊಂದರಲ್ಲಿ ಹಾಲು ಚುನಾವಣಾ ಇಶ್ಶೂ ಆಗುವುದಕ್ಕೆ ಏನೆನ್ನಬೇಕು? ಮೆಹಂದಿಯ ಮೂಲಕ ಅಧಿಕಾರ ಪಡೆಯಲು ಪ್ರಯತ್ನಿಸುವುದನ್ನು ಹೇಗೆ ಸಮರ್ಥಿಸಿಕೊಳ್ಳಬಹುದು? ಚುನಾವಣೆಯು ಒಂದು ದೇಶದ ಪಾಲಿಗೆ ಮಹತ್ವಪೂರ್ಣ ಆಗಬೇಕಾದದ್ದು ಅಲ್ಲಿ ಚರ್ಚೆಗೀಡಾಗುವ ಇಶ್ಶೂಗಳು ಏನೇನು ಎಂಬುದರ ಆಧಾರದ ಮೇಲೆ. ಕೋಮುವಾದ ಯಾವುದೇ ದೇಶದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮತೋಲನವನ್ನೇ ಕೆಡಿಸಿಬಿಡುತ್ತದೆ. ಒಂದು ದೇಶದ ಪ್ರಗತಿಯನ್ನು ತಡೆಗಟ್ಟಬೇಕಾದರೆ ಕೋಮುಗಲಭೆ ಮತ್ತು ಭ್ರಷ್ಟಾಚಾರವನ್ನು ಆ ದೇಶದಲ್ಲಿ ಪೋಷಿಸಿದರೆ ಧಾರಾಳ ಸಾಕು. ಜೊತೆಗೇ ಬೆಲೆಯೇರಿಕೆ, ನಿರುದ್ಯೋಗ, ಅಸಮಾನತೆ, ಭಯೋತ್ಪಾದನೆಗಳು.. ಒಂದು ದೇಶದ ಜನರ ಜೀವನ ಪ್ರೀತಿಯನ್ನೇ ಕಸಿದುಕೊಳ್ಳುತ್ತವೆ. ಇಂಥ ಸ್ಥಿತಿಯಲ್ಲಿ, ಜನರು ರಾಜಕೀಯ ಪಕ್ಷಗಳಿಂದ ಜವಾಬ್ದಾರಿಯುತ ನಿಲುವನ್ನು ಬಯಸುತ್ತಾರೆ. ಇಂಥ ಸಮಸ್ಯೆಗಳಿಂದ ದೇಶವನ್ನು ಮುಕ್ತಗೊಳಿಸುವುದಕ್ಕೆ ಪ್ರಮುಖ ರಾಜಕೀಯ ಪಕ್ಷಗಳು ಯಾವ ಪರಿಹಾರ ಮಾರ್ಗವನ್ನು ಸೂಚಿಸುತ್ತವೆ ಎಂದು ನಿರೀಕ್ಷೆಯಿಂದ ಕಾಯುತ್ತಾರೆ. ಈ ಎಲ್ಲ ವಿಷಯಗಳ ಮೇಲೆ ರಾಜಕೀಯ ಪಕ್ಷಗಳು ಒಂದೊಳ್ಳೆಯ ಚರ್ಚೆಯನ್ನು ತಮ್ಮ ಚುನಾವಣಾ ವೇದಿಕೆಗಳ ಮೂಲಕ ನಡೆಸುವುದನ್ನು ಅವರು ಕಾಯುತ್ತಿರುತ್ತಾರೆ. ಅಮೇರಿಕದಲ್ಲಿ ಅಧ್ಯಕ್ಷ  ಸ್ಥಾನದ ಅಭ್ಯರ್ಥಿಗಳ ಮಧ್ಯೆ ನೇರ ಟಿ.ವಿ. ಚರ್ಚೆಗಳು ನಡೆಯುತ್ತವೆ. ಆ ದೇಶದ ಪ್ರಮುಖ ಸಮಸ್ಯೆಗಳ ಕುರಿತಂತೆ ಅವರು ನಡೆಸುವ ಸಂವಾದವನ್ನು ಮತದಾರರು ಆಸಕ್ತಿಯಿಂದ ವೀಕ್ಷಿಸಿ, ಯಾರು ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಯೋಗ್ಯರು ಎಂದು ತೀರ್ಮಾನಿಸುತ್ತಾರೆ. ಹಾಗಂತ, ಈ ದೇಶವು ಅಮೇರಿಕನ್ ಮಾದರಿಗಿಂತ ಭಿನ್ನ ಮಾದರಿಯನ್ನು ಆಯ್ಕೆ ಮಾಡಿಕೊಂಡಿದೆ, ನಿಜ. ಆದರೆ ಅದರರ್ಥ ಜನರಿಗೆ ಯಾವ ಲಾಭವನ್ನೂ ನೀಡದ ಚಹಾವೋ ಕಾಫಿಯೋ ಚರ್ಚೆಗೀಡಾಗಬೇಕು ಎಂದಲ್ಲವಲ್ಲ. ಚಾಯ್ ಪೆ ಚರ್ಚಾ ಅಭಿಯಾನದಿಂದ ನಮಗೆ ಮೋದಿಯ ಆರ್ಥಿಕ ನಿಲುವನ್ನೋ ವಿದೇಶಾಂಗ ನೀತಿಯನ್ನೋ ತಿಳಿಯಲು ಸಾಧ್ಯವೇ? ಎಲ್ಲೋ ಕುಳಿತ ಮೋದಿಯೊಂದಿಗೆ ಸಾರ್ವಜನಿಕರು ಚಾಯ್ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಾತಾಡುವುದು ಬರೇ ಕ್ರೇಜ್‍ಗಾಗಿ. ಅಲ್ಲಿ ದೇಶದ ಪ್ರಮುಖ ಇಶ್ಶೂಗಳಾಗಲಿ, ಪ್ರಗತಿಯ ಸಂಗತಿಗಳಾಗಲಿ ಗಂಭೀರ ಚರ್ಚೆಗೆ ಒಳಗಾಗಲು ಸಾಧ್ಯವೇ ಇಲ್ಲ. ತಾವರೆಯ ಮೆಹಂದಿ ಹಚ್ಚಿಕೊಂಡ ಮಹಿಳೆಯರು ಮೋದಿಗೆ ಓಟು ಹಾಕಲು ತೀರ್ಮಾನಿಸಿದರೆ ಅದಕ್ಕೆ ಆ ಕ್ಷಣದ ಪುಳಕ ಕಾರಣವೇ ಹೊರತು ಮೋದಿಯ ಯೋಗ್ಯತೆ ಅಲ್ಲ. ಹಾಲಿನಲ್ಲಿ ಓಟು ಹುಡುಕುತ್ತಿರುವ ರಾಹುಲ್ ಗಾಂಧಿಯ ಸ್ಥಿತಿಯೂ ಹೀಗೆಯೇ.
 ಅಸೋಸಿಯೇಟೆಡ್ ಪ್ರೆಸ್ (A P) ಕಳೆದ ವಾರ ಒಂದು ಸುದ್ದಿಯನ್ನು ಭಾರೀ ಮಹತ್ವ ಕೊಟ್ಟು ಪ್ರಕಟಿಸಿತ್ತು. ಇರಾನಿನ ನೂತನ ಅಧ್ಯಕ್ಷ  ಹಸನ್ ರೂಹಾನಿಯವರು ಕಳೆದ ವಾರ ತಮ್ಮ ಸಚಿವ ಸಂಪುಟದ ಮೊದಲ ಸಭೆ ನಡೆಸಿದರು. ಅದರಲ್ಲಿ ಅವರು ವಿಶ್ವದಲ್ಲಿಯೇ ಅತಿದೊಡ್ಡ ಅರೋಮಿಹ್ ಸರೋವರವನ್ನು ಉಳಿಸಿಕೊಳ್ಳುವ ಬಗ್ಗೆ ನಿರ್ಣಯವನ್ನು ಕೈಗೊಂಡರು. ಸರೋವರವು ಮತ್ತೆ ಹಿಂದಿನ ವೈಭವಕ್ಕೆ ಮರಳುವುದಕ್ಕಾಗಿ ತಜ್ಞರು ನೀಡಿದ ಸಲಹೆಗಳನ್ನು ಸಂಪುಟದ ಮುಂದಿಟ್ಟು ಅನುಮೋದಿಸಿಕೊಂಡರು. ವಾತಾವರಣದ ಏರುಪೇರು, ನದಿಗಳ ತಪ್ಪು ಬಳಕೆ, ತಪ್ಪು ನೀರಾವರಿಯಿಂದಾಗಿ ಸರೋವರದ 80% ಭಾಗ ಬಂಜರಾಗಿರುವುದನ್ನು ಅವರು ಸಂಪುಟದ ಮುಂದಿಟ್ಟರು. ನಿಜವಾಗಿ, ತನ್ನ ಪರಮಾಣು ವಿವಾದವನ್ನು ಸರಿಪಡಿಸಿಕೊಳ್ಳುವಂತೆ ಜಾಗತಿಕ ರಾಷ್ಟ್ರಗಳು ಒತ್ತಡ ಹಾಕುತ್ತಿರುವ ಸಂದರ್ಭದಲ್ಲಿ ಅದಕ್ಕಿಂತ ತನ್ನ ಜೀವದ್ರವವಾದ ಸರೋವರವನ್ನು ಉಳಿಸಿಕೊಳ್ಳುವುದಕ್ಕೆ ರೂಹಾನಿ ಆದ್ಯತೆ ಕೊಟ್ಟಿರುವುದನ್ನು ಅಸೋಸಿಯೇಟೆಡ್ ಪ್ರೆಸ್ ವಿಶೇಷ ಒತ್ತು ಕೊಟ್ಟು ಉಲ್ಲೇಖಿಸಿತ್ತು. ಒಂದು ರೀತಿಯಲ್ಲಿ, ಓರ್ವ ಪ್ರಬುದ್ಧ ಮತ್ತು ದೂರದೃಷ್ಟಿಯುಳ್ಳ ನಾಯಕ ತೆಗೆದುಕೊಳ್ಳಬಹುದಾದ ನಿರ್ಧಾರ ಇದು. ಒಂದು ವೇಳೆ ಪರಮಾಣು ವಿವಾದದ ಕುರಿತಂತೆ ಭಾವನಾತ್ಮಕ ನಿರ್ಣಯವೊಂದನ್ನು ಸಂಪುಟ ಸಭೆಯಲ್ಲಿ ರೂಹಾನಿ ಅಂಗೀಕರಿಸಿದ್ದಿದ್ದರೆ ಇರಾನಿನ ನಾಗರಿಕರು ಮೆಚ್ಚಿಕೊಳ್ಳುವುದಕ್ಕೆ ಸಾಧ್ಯವಿತ್ತು. ರಾಜಕೀಯವಾಗಿ ಲಾಭ ತಂದುಕೊಡುವುದಕ್ಕೂ ಅವಕಾಶವಿತ್ತು. ಆದರೆ ರೂಹಾನಿ ತಾತ್ಕಾಲಿಕ ಲಾಭವನ್ನೋ ಗಿಮಿಕ್ ನೀತಿಯನ್ನೋ ಆಯ್ಕೆ ಮಾಡಿಕೊಳ್ಳಲಿಲ್ಲ.
   ಏನೇ ಆಗಲಿ, ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಮೇಲೆ ಚುನಾವಣೆಗಳು ನಡೆಯಬೇಕೇ ಹೊರತು ಚಹಾ, ಕಾಫಿ, ಹಾಲು, ಮೆಹಂದಿಗಳ ಮೇಲೆ ಅಲ್ಲ. ಇವು ದೇಶದ ನಿಜವಾದ ವಿಷಯಗಳನ್ನು ಮರೆಸುವುದಕ್ಕೆ ರಾಜಕೀಯ ಪಕ್ಷಗಳು ಹೊರತಂದಿರುವ ನಕಲಿ ವಿಷಯಗಳು. ನಾವು ಇವುಗಳ ಆಕರ್ಷಣೆಯಿಂದ ಹೊರಬಂದು ಪ್ರಬುದ್ಧತೆಯನ್ನು ಮೆರೆಯಬೇಕಾಗಿದೆ. ಇಲ್ಲದಿದ್ದರೆ ನಾಳೆ `ಮತ್ತು' ಬರಿಸುವ ಚಹಾವನ್ನೋ ಹಾಲನ್ನೋ ಕೊಟ್ಟು ಅವರು ಓಟು ಕಸಿದುಕೊಂಡಾರು.

Wednesday 19 February 2014

  ನಾಲ್ಕು ದಿನ ಸುದ್ದಿಗೀಡಾಗಿ ಮರೆತು ಹೋಗುವ ಕರೀಮ್ ಖಾನ್‍ಗಳು

   ಡ್ರೋನ್ ದಾಳಿಯಲ್ಲಿ ಮಗ ಝೆನುಲ್ಲಾ ಮತ್ತು ತಮ್ಮ ಆಸಿಫ್ ಇಕ್ಬಾಲ್‍ನನ್ನು ಕಳಕೊಂಡಿರುವ ಪಾಕಿಸ್ತಾನ ಕರೀಮ್ ಖಾನ್ ಎನ್ನುವ ವ್ಯಕ್ತಿ, ಫೆ. 15ರಂದು ವಿದೇಶಕ್ಕೆ ತೆರಳಬೇಕಿತ್ತು. ಅಲ್ಲಿ ಬ್ರಿಟನ್, ಡಚ್, ಜರ್ಮನಿಯ ಪಾರ್ಲಿಮೆಂಟ್ ಸದಸ್ಯರನ್ನು ಭೇಟಿಯಾಗಿ ಡ್ರೋನ್ ಕುರಿತಾದ ತನ್ನ ಅನುಭವವನ್ನು ಹಂಚಿಕೊಳ್ಳಬೇಕಿತ್ತು. ಅದಕ್ಕಾಗಿ ವೇದಿಕೆಯೂ ಸಿದ್ಧವಾಗಿತ್ತು. ಆದರೆ ಫೆ. 5ರಂದು ಅವರನ್ನು ಅಪಹರಿಸಲಾಗುತ್ತದೆ. ಡ್ರೋನ್ ದಾಳಿಯ ವಿರುದ್ಧ ಪಾಕಿಸ್ತಾನದ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದ ಮತ್ತು ಡ್ರೋನ್ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ಅವರ ಅಪಹರಣವು ಪಾಕ್‍ನಲ್ಲಿ ತೀವ್ರ ಕುತೂಹಲ ಕೆರಳಿಸುತ್ತದೆ. ಪಾಕ್‍ನ ಮಾನವ ಹಕ್ಕುಗಳ ಸಂಸ್ಥೆಯು ಲಾಹೋರ್ ಹೈಕೋರ್ಟ್‍ನಲ್ಲಿ ಈ ಬಗ್ಗೆ ದಾವೆ ಹೂಡುತ್ತದೆ. ಕರೀಮ್ ಖಾನ್‍ರನ್ನು ಪತ್ತೆ ಹಚ್ಚುವಂತೆ ನವಾಝ್ ಷರೀಫ್ ಸರಕಾರದ ಮೇಲೆ ಯುರೋಪಿಯನ್ ಯೂನಿಯನ್‍ನ ಹಲವು ಪಾರ್ಲಿಮೆಂಟ್ ಸದಸ್ಯರು ಒತ್ತಡ ಹಾಕುತ್ತಾರೆ. ಒಂದು ವಾರದೊಳಗೆ ಅವರನ್ನು ಕೋರ್ಟಿನಲ್ಲಿ ಹಾಜರುಗೊಳಿಸುವಂತೆ ಪೊಲೀಸರಿಗೆ ಕೋರ್ಟು ಆದೇಶಿಸುತ್ತದೆ. ಕೊನೆಗೂ ಫೆ. 14ರಂದು ಕರೀಮ್ ಖಾನ್ ಬಿಡುಗಡೆಗಳ್ಳುತ್ತಾರೆ. ಪೊಲೀಸ್ ಸಮವಸ್ತ್ರದಲ್ಲಿದ್ದವರು ತನ್ನನ್ನು ಅಪಹರಿಸಿದ್ದು ಮತ್ತು ಯುರೋಪಿನ ಸಂಸತ್ ಸದಸ್ಯರ ಮುಂದೆ ತಾನು ಹೇಳಲಿರುವ ವಿಷಯಗಳ ಬಗ್ಗೆ ವಿಚಾರಿಸಿದ್ದು.. ಎಲ್ಲವನ್ನೂ ಹೇಳಿಕೊಳ್ಳುತ್ತಾರೆ.
 ನಿಜವಾಗಿ, ಕರೀಮ್ ಖಾನ್ ಅನ್ನುವ ಹೆಸರನ್ನು ನಾವು ಪಾಕಿಸ್ತಾನಕ್ಕೆ ಮಾತ್ರ ಸೀಮಿತಗೊಳಿಸಿ ನೋಡಬೇಕಾದ ಅಗತ್ಯ ಇಲ್ಲ. ಜಗತ್ತಿನ ಯಾವ ದೇಶದಲ್ಲೂ ನಡೆಯಬಹುದಾದ ಘಟನೆ ಇದು. ಮಾಹಿತಿ ಹಕ್ಕು ಕಾರ್ಯಕರ್ತರು ನಮ್ಮ ದೇಶದಲ್ಲಿ ಪಡುತ್ತಿರುವ ಪಾಡು ಮತ್ತು ಎದುರಿಸುತ್ತಿರುವ ಸವಾಲುಗಳನ್ನೊಮ್ಮೆ ಕಲ್ಪಿಸಿಕೊಳ್ಳಿ. ಕೆಲವರು ಕಾರ್ಯಕರ್ತರು ಈಗಾಗಲೇ ಹತ್ಯೆಗೀಡಾಗಿದ್ದಾರೆ. ಅನೇಕಾರು ಮಂದಿ ಜೀವ ಬೆದರಿಕೆಗೆ ಒಳಗಾಗಿದ್ದಾರೆ. ಮರಳು ಮಾಫಿಯಾ, ತೈಲ ಮಾಫಿಯಾದಂಥ ಹೊಸ ಹೊಸ ಪದಗುಚ್ಛಗಳನ್ನು ನಾವು ಆಗಾಗ ಆಲಿಸುತ್ತಿರುತ್ತೇವೆ. ಬಲಾಢ್ಯ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಎದುರಾಗಬಹುದಾದ ಅಪಾಯಗಳು ಇವು. ಅನೇಕ ಬಾರಿ ಅಪಘಾತಗಳು ನಿಜವಾಗಿ ಅಪಘಾತಗಳೇ ಆಗಿರುವುದಿಲ್ಲ. ಹೊರನೋಟಕ್ಕೆ ಸಹಜ ಸಾವಿನಂತೆ ಕಾಣುವ ಸಾವು ಸಹಜ ಸಾವೇ ಆಗಿರುವುದಿಲ್ಲ. ಎಲ್ಲದರ ಹಿಂದೆಯೂ ಕಾಣದ ಕೈಗಳು ಕೆಲಸ ಮಾಡಿರುತ್ತವೆ. ಕರೀಮ್ ಖಾನ್‍ರ ಪ್ರಕರಣವನ್ನೇ ಎತ್ತಿಕೊಳ್ಳಿ. ಡ್ರೋನ್‍ನ ವಿರುದ್ಧ ಪ್ರಬಲ ದನಿಯಲ್ಲಿ ಮಾತಾಡುತ್ತಲೇ ನವಾಝ್ ಷರೀಫ್ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಡ್ರೋನ್, ಭಯೋತ್ಪಾದನೆಯನ್ನು ನಾಶ ಮಾಡುವುದರ ಬದಲು ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿತ್ತು. ಒಂದು ರೀತಿಯಲ್ಲಿ, ಪಾಕಿಸ್ತಾನದಲ್ಲಿ ಆಗಾಗ ಸ್ಫೋಟಗೊಳ್ಳುವ ಬಾಂಬುಗಳ ಬಗ್ಗೆ ಮಾಧ್ಯಮಗಳಲ್ಲಿ ಯಾವ ಬಗೆಯ ಚರ್ಚೆಯಾಗುತ್ತದೋ ಅದರ ಅರ್ಧ ಭಾಗದಷ್ಟೂ ಡ್ರೋನ್‍ನ ಬಗ್ಗೆ ಮತ್ತು ಅದು ಉಂಟು ಮಾಡುವ ನಾಶದ ಬಗ್ಗೆ ಚರ್ಚೆಯಾಗುತ್ತಿಲ್ಲ. ಕಳೆದೈದು ವರ್ಷಗಳಲ್ಲಿ ಅಮೇರಿಕ ಹಾರಿಸಿದ ಡ್ರೋನ್ ಗಳಿಗೆ ಸಾವಿಗೀಡಾದ ಅಮಾಯಕ ನಾಗರಿಕರ ಸಂಖ್ಯೆಯನ್ನು ನೋಡಿದರೂ ಸಾಕು, ಕರೀಮ್ ಖಾನ್ ಯಾಕೆ ಅಪಹರಣಗೊಳ್ಳುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಬಾಂಬ್ ಸ್ಫೋಟಗಳನ್ನು ಮನುಷ್ಯ ವಿರೋಧಿಯಾಗಿಯೂ ಡ್ರೋನ್ ದಾಳಿಯನ್ನು ಭಯೋತ್ಪಾದನಾ ವಿರೋಧಿಯಾಗಿಯೂ ಬಿಂಬಿಸುವಲ್ಲಿ ಯಶಸ್ವಿಯಾಗಿರುವ ಬಲಾಢ್ಯ ಶಕ್ತಿಗಳು, ಕರೀಮ್ ಖಾನ್‍ರಂಥವರನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ರಿಲಯನ್ಸ್ ವಿರುದ್ಧ ಮಾತಾಡಿರುವುದಕ್ಕೆ ತಾನು ಅಧಿಕಾರ ಕಳಕೊಳ್ಳಬೇಕಾಯಿತು ಎಂದು ಅರವಿಂದ್ ಕೇಜ್ರಿವಾಲ್ ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
 ಒಂದು ವೇಳೆ, ಬ್ರಿಟನ್‍ನ ಮಾಜಿ ರಕ್ಷಣಾ ಸಚಿವ ಟೋಮ್ ವಾಟ್ಸನ್ ಸಹಿತ ಜರ್ಮನಿ, ಡಚ್ ಇನ್ನಿತರ ಯುರೋಪಿಯನ್ ರಾಷ್ಟ್ರಗಳ ಪ್ರಮುಖ ಸಂಸದರು ಕರೀಮ್ ಖಾನ್‍ರ ಪರ ದನಿ ಎತ್ತದೇ ಇರುತ್ತಿದ್ದರೆ ಆ ವ್ಯಕ್ತಿಯ ಸ್ಥಿತಿ ಏನಾಗುತ್ತಿತ್ತು? ಹಾಗಂತ, ಪ್ರಕರಣ ಪಾಕಿಸ್ತಾನದಲ್ಲಿ ನಡೆದಿದೆಯೆಂದು ನಾವು ಸುಮ್ಮನಿರಬೇಕಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳ ಜನವಿರೋಧಿ ಯೋಜನೆ ಗಳ ವಿರುದ್ಧ ನಮ್ಮ ದೇಶದಲ್ಲಿ ನಡೆದಿರುವ ಪ್ರತಿಭಟನೆಗಳನ್ನು ನಾವು ಅವಲೋಕನಕ್ಕೆ ಒಳಪಡಿಸುವುದಾದರೆ ಪಾಕ್‍ನ ಕರೀಮ್ ಖಾನ್ ನಮ್ಮವರೂ ಆಗಿಬಿಡುತ್ತಾರೆ. ಅಲ್ಲಿ ಕರೀಮ್ ಖಾನ್‍ರನ್ನು ಅಪಹರಿಸಿದಂತೆ ಇಲ್ಲಿ ಪ್ರತಿಭಟನೆಗಳನ್ನೇ ಬಗ್ಗುಬಡಿಯಲಾಗಿದೆ ಅಥವಾ ದಿಕ್ಕು ತಪ್ಪಿಸಲಾಗಿದೆ. ಭೋಪಾಲ್ ಅನಿಲ ದುರಂತದಿಂದ ಹಿಡಿದು ಇತ್ತೀಚಿನ ವಿಶೇಷ ಆರ್ಥಿಕ ವಲಯದವರೆಗೆ ಹೆಚ್ಚಿನ ಹೋರಾಟಗಳೆಲ್ಲ ವೈಫಲ್ಯಗಳಲ್ಲೇ ಅಂತ್ಯ ಕಂಡಿವೆ. ಕುಡಂಕುಲಂ ಅಣು ಯೋಜನೆಯ ವಿರುದ್ಧ ನಡೆದ ಹೋರಾಟವನ್ನು ವ್ಯವಸ್ಥೆ ಹೇಗೆ ಬಗ್ಗುಬಡಿಯಿತೆಂಬುದು ನಮಗೆ ಗೊತ್ತು. ಆ ಹೋರಾಟದ ನೇತೃತ್ವ ವಹಿಸಿದವರಿಗೆ ವಿದೇಶಿ ನೆರವಿನ ಆರೋಪವನ್ನು ಹೊರಿಸಿ ಪ್ರತಿಭಟನೆಯನ್ನೇ ಹತ್ತಿಕ್ಕಲಾಯಿತು. ನಿಜವಾಗಿ, ಬಲಾಢ್ಯ ಶಕ್ತಿಗಳು ಯಾವುದೇ ಯೋಜನೆಯ ನೀಲನಕ್ಷೆ ಮಾಡುವಾಗಲೇ ಅದರ ವಿರುದ್ಧ ನಡೆಯಬಹುದಾದ ಪ್ರತಿಭಟನೆ ಮತ್ತು ಹತ್ತಿಕ್ಕಬಹುದಾದ ಉಪಾಯಗಳನ್ನು ಲೆಕ್ಕ ಹಾಕಿರುತ್ತವೆ. ಎಷ್ಟು ವರ್ಷಗಳ ವರೆಗೆ ಪ್ರತಿಭಟನೆ ನಡೆಯಬಹುದು ಮತ್ತು ಅದಕ್ಕಾಗಿ ಮಾಡಿ ಕೊಳ್ಳಬೇಕಾದ ತಯಾರಿಗಳ ಬಗ್ಗೆಯೂ ಯೋಜನೆ ಹಾಕಿಕೊಂಡಿರುತ್ತವೆ. ಹೀಗೆ ಜನಪರ ಹೋರಾಟಗಳನ್ನು ಹಂತ ಹಂತವಾಗಿ ದುರ್ಬಲಗೊಳಿಸುತ್ತಾ ಅವು ಸಾಗುತ್ತವೆ. ರಾಜೀವ್ ಗಾಂಧಿಯವರ ಕಾಲದಲ್ಲಿ ಸಹಿ ಹಾಕಲಾದ ಕುಡಂಕುಲಂ ಯೋಜನೆ ಸಾಗಿ ಬಂದ ದಾರಿಯೇ ಇದನ್ನು ಸ್ಪಷ್ಟಪಡಿಸಬಲ್ಲುದು.  
   ಏನೇ ಆಗಲಿ, ಬಲಾಢ್ಯ ಶಕ್ತಿಗಳ ವಿರುದ್ಧ ದನಿ ಎತ್ತಿದರೆ ಏನಾಗಬಹುದು ಅನ್ನುವುದಕ್ಕೆ ಕರೀಮ್ ಖಾನ್ ಒಂದು ಉತ್ತಮ ಉದಾಹರಣೆ. ಇದು ಪಾಕಿಸ್ತಾನದಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ವಿವಿಧ ದೇಶಗಳಲ್ಲಿ ವಿವಿಧ ರೀತಿಯಲ್ಲಿ ಇಂಥ ಕರೀಮ್ ಖಾನ್‍ಗಳು ಸೃಷ್ಟಿಯಾಗುತ್ತಲೇ ಇದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತರಾಗಿ, ಮರಳು ಮಾಫಿಯಾವನ್ನು ಎದುರಿಸುವವರಾಗಿ, ಜನಪರ ಹೋರಾಟಗಾರರಾಗಿ ಅವರು ಕಾಣಿಸಿಕೊಳ್ಳುತ್ತಿರುತ್ತಾರೆ. ಒಂದು ದಿನ ಅವರು ಕರೀಮ್ ಖಾನ್‍ರಂತೆ ಅಪಹರಣಕ್ಕೋ ಹತ್ಯೆಗೋ ಈಡಾಗುತ್ತಾರೆ. ನಾಲ್ಕು ದಿನ ಇಡೀ ಪ್ರಕರಣ ಸುದ್ದಿಗೀಡಾಗುತ್ತದೆ. ಬಳಿಕ ಸದ್ದಿಲ್ಲದೇ ಸರಿದು ಹೋಗುತ್ತದೆ. ನಿಜವಾಗಿ, ಕರೀಮ್ ಖಾನ್ ಅಂಥದ್ದೊಂದು ಸಾಧ್ಯತೆಯನ್ನು ಮತ್ತೊಮ್ಮೆ ನೆನಪಿಸಿದರು ಅಷ್ಟೇ.

Wednesday 12 February 2014

ಬಾವಿಕಟ್ಟೆಯಲ್ಲಿ ಕುಳಿತು ಓದುವ ಮಗು

    1. ಈಜಲು ತೆರಳಿದ ವಿದ್ಯಾರ್ಥಿ ನಾಪತ್ತೆ.
 2. ಬಾವಿಗೆ ಪಂಪ್ ಅಳವಡಿಸುವ ಸಂದರ್ಭ ಬಾವಿಗೆ ಬಿದ್ದು ಕಾರ್ಮಿಕ ಸಾವು.
 3. ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಮೃತ್ಯು.
 4. ವಾಹನ ಅಪಘಾತದಲ್ಲಿ ಮೃತಪಟ್ಟ ಮಕ್ಕಳು..
 ಇಂಥ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರತಿನಿತ್ಯ ವರದಿಯಾಗುತ್ತಲೇ ಇರುತ್ತವೆ. ಮಾತ್ರವಲ್ಲ, ಇಂಥ ಸುದ್ದಿಗಳನ್ನು ಪ್ರಕಟಿಸಲಿಕ್ಕೆಂದೇ ಪತ್ರಿಕೆಗಳು ಪ್ರತ್ಯೇಕ ಪುಟಗಳನ್ನೂ ಮೀಸಲಿಟ್ಟಿರುತ್ತವೆ. ಇಂಥ ಪುಟಗಳಲ್ಲಿ ಒಂದು ದಿನ ಕಾಣಿಸಿಕೊಂಡು ಆ ಬಳಿಕ ಶಾಶ್ವತವಾಗಿ ಕಣ್ಮರೆಯಾಗುವ ಇಂಥ ಜೀವಗಳು ಸಾರ್ವಜನಿಕ ಚರ್ಚೆಗೆ ಒಳಗಾಗುವುದು ತೀರಾ ಕಡಿಮೆ. ನಾವು ಪತ್ರಿಕೆಗಳನ್ನು ಎತ್ತಿಕೊಂಡರೆ ಅಥವಾ ಟಿ.ವಿ. ಚಾನೆಲ್‍ಗಳನ್ನು ತಿರುಗಿಸಿದರೆ ಅಲ್ಲೆಲ್ಲಾ ಕೇಜ್ರಿವಾಲ್, ಮೋದಿ, ರಾಹುಲ್‍ಗಳೇ ತುಂಬಿರುತ್ತಾರೆ. ಅವರ ಭಾಷಣಗಳು, ಆ ಭಾಷಣಗಳ ಮೇಲಿನ ಚಾವಡಿ ಚರ್ಚೆಗಳು ಮತ್ತು ವಿಶ್ಲೇಷನಾತ್ಮಕ ಬರಹಗಳು ಅವನ್ನು ಆಕ್ರಮಿಸಿಕೊಂಡಿರುತ್ತವೆ. ನರೇಂದ್ರ ಮೋದಿಯ ಯೋಗ್ಯತೆ ಏನೆಂಬುದನ್ನು ಹೇಳುವುದು ರಾಹುಲ್ ಗಾಂಧಿ. ರಾಹುಲ್ ಗಾಂಧಿ ಎಷ್ಟು ಅಪಕ್ವ ಎಂದು ಬಣ್ಣಿಸುವುದು ನರೇಂದ್ರ ಮೋದಿ. ಕೇಜ್ರಿವಾಲ್ ಯಾಕೆ ಅಸೂಕ್ತ ಎಂದು ವಿವರಿಸುವುದು ಅರುಣ್ ಜೇಟ್ಲಿ.. ಹೀಗೆ ತಮ್ಮನ್ನು ಬಿಟ್ಟು ಇತರೆಲ್ಲರ ಯೋಗ್ಯತೆ, ಅರ್ಹತೆಗಳನ್ನು ಪಟ್ಟಿ ಮಾಡುತ್ತಾ ತಿರುಗುತ್ತಿರುವ ಈ ಮಂದಿ, ಮಾಧ್ಯಮಗಳ ಮುಖಪುಟದಲ್ಲಿ ಸದಾ ಠಿಕಾಣಿ ಹೂಡಿರುತ್ತಾರೆ. ಈ ಕಾರಣದಿಂದಲೋ ಏನೋ ನಮ್ಮ ಚರ್ಚೆಗಳೂ ಇವರ ಸುತ್ತಲೇ ಸುತ್ತುತ್ತಿರುತ್ತವೆ. ಪ್ರತಿದಿನ ಮೂರೋ ನಾಲ್ಕೋ ರೂಪಾಯಿಯನ್ನು ತೆತ್ತು ಖರೀದಿಸುವ ಪತ್ರಿಕೆಯೊಂದು ನಮ್ಮ ಇಡೀ ದಿನದ ಚರ್ಚಾ ವಿಷಯವನ್ನು ನಿರ್ಧರಿಸಿಬಿಡುತ್ತದೆ ಅಂದರೆ ಏನೆನ್ನಬೇಕು? ದಿನದ 24 ಗಂಟೆಗಳಲ್ಲಿ ಹೆಚ್ಚಿನ ಸಮಯವನ್ನು ನಾವು ರಾಜಕೀಯ ಮಾತುಕತೆಗಳಿಗಾಗಿಯೇ ಮೀಸಲಿಟ್ಟಿರುವುದಕ್ಕೆ ಮಾಧ್ಯಮಗಳ ಹೊರತು ಬೇರೆ ಯಾವುದು ಕಾರಣ ಆಗಿರಬಹುದು? ಅಷ್ಟಕ್ಕೂ, ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಸಿನಿಮಾ ತಾರೆಯರನ್ನು ಕುತೂಹಲದ ವರ್ಗವಾಗಿ ಬಿಂಬಿಸಿದ್ದು ಯಾರು? ಈ ವರ್ಗದಲ್ಲಿ ಯಾರು, ಏನು ಮಾತಾಡಿ ಸುದ್ದಿಯಾಗುತ್ತದಲ್ಲ ಮತ್ತು ಅದನ್ನು ಓದುವುದಕ್ಕೆ ಜನಸಾಮಾನ್ಯರು ಆಸಕ್ತಿ ತೋರುತ್ತಾರಲ್ಲ, ಯಾಕೆ? ಇವರ ಸುತ್ತ ಇಂಥದ್ದೊಂದು ಪ್ರಭಾವಳಿಯನ್ನು ಯಾರು ಹುಟ್ಟು ಹಾಕಿದ್ದಾರೆ? ಒಂದು ವೇಳೆ, ಈ ಮೂರು ವರ್ಗಕ್ಕೆ ಸಂಬಂಧಿಸಿದ ಸುದ್ದಿಯನ್ನು ಪತ್ರಿಕೆಗಳಿಂದ ತೆಗೆದು ಹಾಕಿದರೆ, ಪತ್ರಿಕೆಗಳ ಬಹುತೇಕ ಎಲ್ಲ ಪುಟಗಳೂ ಖಾಲಿಯಾಗಿ ಕಾಣಿಸಬಹುದು. ಹಾಗಂತ, ಮಾಧ್ಯಮಗಳು ಜನಸಾಮಾನ್ಯರನ್ನು ಸಂಪೂರ್ಣ ನಿರ್ಲಕ್ಷಿಸಿವೆ ಎಂದಲ್ಲ. ಆ ಮಂದಿಯ ಸುತ್ತ ಅಂಥದ್ದೊಂದು ಕುತೂಹಲ ಸಾರ್ವಜನಿಕವಾಗಿಯೇ ಇವತ್ತು ಹುಟ್ಟಿಕೊಂಡು ಬಿಟ್ಟಿದೆ. ಇಂಥದ್ದೊಂದು ಕ್ರೇಜ್ ಅನ್ನು ಅವರ ಸುತ್ತ ಯಾರು ಹರಡಿ ಬಿಟ್ಟರೋ, ಯಾವಾಗ ಅದರ ಆರಂಭ ಆಯಿತೋ ಗೊತ್ತಿಲ್ಲ. ಆದರೆ ಇವತ್ತು ಅವರು ನಮ್ಮ ಚರ್ಚೆಯ ಅನಿವಾರ್ಯ ಭಾಗವಾಗಿ ಬಿಟ್ಟಿದ್ದಾರೆ. ಅವರು ಆಡಿದ ಮಾತಿಗೆ, ನೋಡಿದ ನೋಟಕ್ಕೆ, ನಡೆದ ದಾರಿಗೆ ನೂರು ಅರ್ಥಗಳನ್ನು ಕಲ್ಪಿಸಿ ವಿಶ್ಲೇಷಿಸಬೇಕಾದ ಅನಿವಾರ್ಯತೆಗೆ ಮಾಧ್ಯಮಗಳು ತಲುಪಿಬಿಟ್ಟಿವೆ. ಇವುಗಳ ನಡುವೆ, ನಿಜವಾಗಿಯೂ ಚರ್ಚಿಸಲೇಬೇಕಾದ ಜನಸಾಮಾನ್ಯರ ನೂರಾರು ಸಂಗತಿಗಳು ಚರ್ಚೆಗೆ ಒಳಗಾಗದೆಯೇ ಸತ್ತು ಹೋಗುತ್ತಿವೆ. ಅವು ಮೋದಿ, ರಾಹುಲ್, ಕೇಜ್ರಿವಾಲ್‍ರ ಆರೋಪ-ಪ್ರತ್ಯಾರೋಪಗಳಿಗಿಂತ ಮಹತ್ವಪೂರ್ಣ ಸಂಗತಿಗಳಾಗಿದ್ದರೂ ಮಾಧ್ಯಮಗಳು ಜನಸಾಮಾನ್ಯರನ್ನು ಮುಖಪುಟಕ್ಕೆ ಪರಿಗಣಿಸುವುದಿಲ್ಲ. ಮಾಧ್ಯಮಗಳು ಯಾವುದಕ್ಕೆ ಮಹತ್ವ ಕೊಡುವುದಿಲ್ಲವೋ ಅವಕ್ಕೆ ಓದುಗರೂ ಮಹತ್ವ ಕೊಡುವುದಿಲ್ಲವಾದ್ದರಿಂದ ಸಹಜವಾಗಿ ಜನಸಾಮಾನ್ಯರಿಗೆ ಸಂಬಂಧಿಸಿದ ಸುದ್ದಿಗಳು ಅವರ ಕುಟುಂಬ ಮತ್ತು ಆಯಾ ಪ್ರದೇಶಕ್ಕಷ್ಟೇ ಸೀಮಿತವಾಗಿ ಬಿಡುತ್ತದೆ. ಆ ಮೂಲಕ ಒಂದಿಡೀ ಸಮಾಜವನ್ನು ಜಾಗೃತಗೊಳಿಸಬಲ್ಲಂಥ ಅವಕಾಶವೂ ಕೈತಪ್ಪಿ ಹೋಗುತ್ತದೆ. ಮೊನ್ನೆ ಸಾವಿಗೀಡಾದ ವಿದ್ಯಾರ್ಥಿನಿಯೋರ್ವಳು ಮಾಧ್ಯಮಗಳ ಇಂಥ ಧೋರಣೆಯನ್ನು ಮತ್ತೊಮ್ಮೆ ಪ್ರಶ್ನೆಗೀಡು ಮಾಡಿದ್ದಾಳೆ.
 ಬಾವಿಕಟ್ಟೆಯಲ್ಲಿ ಕೂತು ಪರೀಕ್ಷೆಗೆ ಓದುತ್ತಿದ್ದ ಉಡುಪಿಯ ಉದ್ಯಾವರ ಸಮೀಪದ ಬೋಳಾರಗುಡ್ಡೆಯ ಸನಾ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ತಾಯಿ ಚಹಾ ಕುಡಿಯಲೆಂದು ಕರೆಯುತ್ತಾರೆ. ಆಕೆ ಬಾವಿಕಟ್ಟೆಗೆ ಹಾಕಿರುವ ಹಗ್ಗದ ಮೇಲೆ ಬಲ ಹಾಕಿ ಮೇಲೇಳಲು ಪ್ರಯತ್ನಿಸುತ್ತಾಳೆ. ಆದರೆ ಆಯ ತಪ್ಪಿದ ಆಕೆ ಬಾವಿಗೆ ಬಿದ್ದು ಸಾವಿಗೀಡಾಗಿದ್ದಾಳೆ.
 ನಿಜವಾಗಿ, ಇಂಥ ಅನಿರೀಕ್ಷಿತ ಸಾವುಗಳು ಇವತ್ತು ಯಾವುದಾದರೊಂದು ಪ್ರದೇಶಕ್ಕೆ ಸೀಮಿತವಾಗಿ ಉಳಿದಿಲ್ಲ. ಪತ್ರಿಕೆಗಳ ಒಳಪುಟಗಳನ್ನು ನೋಡಿದರೆ ನಮ್ಮನ್ನು ಒಂದು ಕ್ಷಣ ಆಘಾತಕ್ಕೆ ಒಳಪಡಿಸುವ, ‘ಛೆ' ಎಂಬ ಉದ್ಗಾರಕ್ಕೆ ಬಲವಂತಪಡಿಸುವ ಸುದ್ದಿಗಳು ಹತ್ತಾರು ಇರುತ್ತವೆ. ಆದರೆ ಅವುಗಳು ಪತ್ರಿಕೆಗಳ ಒಳಪುಟಗಳಲ್ಲಿ ಪ್ರಕಟ ಆಗುವುದರಿಂದ ಓದುಗರ ಗಮನವನ್ನು ಸೆಳೆಯುವುದಕ್ಕೆ ಯಶಸ್ವಿಯಾಗುತ್ತಿಲ್ಲ. ಅಲ್ಲದೇ ಒಳಪುಟಗಳೆಂದರೆ ಮುಖಪುಟಗಳಂತೆ ಅಲ್ಲವಲ್ಲ. ಅದು ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುತ್ತಿರುತ್ತದೆ. ಒಂದು ವೇಳೆ ಸನಾ ನಮ್ಮ ಮಾಧ್ಯಮಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್ ಆಗಿರುತ್ತಿದ್ದರೆ ಸಾರ್ವಜನಿಕರನ್ನು ಅದು ಹೇಗೆ ತಟ್ಟುತ್ತಿತ್ತು? ಯಾವ ಬಗೆಯ ಚರ್ಚೆಗೆ ಅದು ಕಾರಣವಾಗುತ್ತಿತ್ತು? ತನ್ನ ಮಗು ತನ್ನ ಕಣ್ಣೆದುರೇ ಬಾವಿಗೆ ಬೀಳುವುದನ್ನು ಓರ್ವ ತಾಯಿ ಹೇಗೆ ಸಹಿಸಬಲ್ಲಳು ಎಂಬ ಭಾವನಾತ್ಮಕ ವಿಷಯವಷ್ಟೇ ಅಲ್ಲಿ  ಚರ್ಚೆಗೆ ಒಳಗಾಗುತ್ತಿದ್ದುದಲ್ಲ. ಮಗುವನ್ನು ಆ ಸ್ಥಿತಿಗೆ ದೂಡಿದ ಪರೀಕ್ಷೆ ಮತ್ತು ಅದರ ಒತ್ತಡಗಳೂ ಚರ್ಚೆಗೊಳಗಾಗುತ್ತಿತ್ತಲ್ಲವೇ? ಪರೀಕ್ಷೆ ಯಾವಾಗಲೂ ವಿದ್ಯಾರ್ಥಿಗಳನ್ನು ಒತ್ತಡಕ್ಕೆ ಸಿಲುಕಿಸಿರುತ್ತದೆ. ಆ ಸಂದರ್ಭದಲ್ಲಿ ಅವರ ಮನಸು, ದೇಹ ಸಹಜ ಆಗಿರುವುದಿಲ್ಲ. ಹಾಗಂತ, ಇಂದಿನ ದಿನಗಳಲ್ಲಿ ಪರೀಕ್ಷೆ ಎಂದರೆ ಬರೇ ಪಾಸು-ಫೇಲು ಮಾತ್ರ ಅಲ್ಲವಲ್ಲ. ಶಿಕ್ಷಕರು ಮತ್ತು ಮನೆಯವರ ಒತ್ತಡ, ಗೆಳೆಯರ ನಡುವಿನ ಸ್ಪರ್ಧೆ.. ಹೀಗೆ ಎಲ್ಲವೂ ಒಟ್ಟಾಗಿರುವ ವಾತಾವರಣವದು. ಒಂದು ರೀತಿಯಲ್ಲಿ, ವಿದ್ಯಾರ್ಥಿಗಳು ಒತ್ತಡ ಎಂಬ ಪ್ರೆಶರ್ ಕುಕ್ಕರ್‍ನಲ್ಲಿ ಕುಳಿತಿರುತ್ತಾರೆ. ಹೆಚ್ಚು ಅಂಕ ಪಡೆಯಬೇಕು, ಇಷ್ಟು ಅಂಕ ಪಡೆದರೆ ಇಂತಿಂಥ ಕಾಲೇಜಿನಲ್ಲಿ ಇಂತಿಂಥ ಕೋರ್ಸ್‍ಗೆ ಸೇರ್ಪಡೆ ಆಗಬಹುದು ಎಂಬೆಲ್ಲ ಲೆಕ್ಕಾಚಾರಗಳನ್ನು ಹಾಕಿರುತ್ತಾರೆ. ಅದಕ್ಕೆ ಪೂರಕವಾಗಿ ಹೆತ್ತವರು ಆಗಾಗ ತಮ್ಮ ಕುಟುಂಬದಲ್ಲಿ ಉನ್ನತ ಉದ್ಯೋಗದಲ್ಲಿರುವ ಬುದ್ಧಿವಂತ ಮಕ್ಕಳ ಕತೆಗಳನ್ನು ಹೇಳುತ್ತಿರುತ್ತಾರೆ. ಹೀಗೆ ತಮ್ಮ ಹೆತ್ತವರದ್ದೋ ಶಿಕ್ಷಕರದ್ದೋ ಗುರಿಗಳನ್ನು ಪೂರ್ತಿ ಮಾಡುವುದಕ್ಕಾಗಿ ಕನಸುಗಳೊಂದಿಗೆ ಬದುಕುವ ಮಕ್ಕಳು ಪರೀಕ್ಷೆ ತಯಾರಿಯ ಸಂದರ್ಭದಲ್ಲಂತೂ ವಿಪರೀತ ಒತ್ತಡಕ್ಕೆ ಒಳಗಾಗುತ್ತಾರೆ. ಈ ಒತ್ತಡದಲ್ಲಿ ತಾವು ಪರೀಕ್ಷೆಗೆ ತಯಾರಿ ನಡೆಸುವುದಕ್ಕಾಗಿ ಆಯ್ಕೆ ಮಾಡಿಕೊಳ್ಳುವ ಸ್ಥಳ, ಆಹಾರ, ಬಟ್ಟೆಗಳ ಬಗ್ಗೆಯೂ ಅವರು ಗಂಭೀರವಾಗಿರುವುದಿಲ್ಲ. ಆದ್ದರಿಂದಲೇ ಕೆಲವೊಮ್ಮೆ ಆಘಾತಕಾರಿ ಘಟನೆಗಳು ನಡೆದು ಬಿಡುತ್ತವೆ. ಸನಾ ಅದರ ಒಂದು ಉದಾಹರಣೆ ಅಷ್ಟೇ.
   ಮಕ್ಕಳು ಯಾವುದೇ ಹೆತ್ತವರ ಪಾಲಿಗೆ ದೊಡ್ಡದೊಂದು ಭರವಸೆಯಾಗಿದ್ದಾರೆ. ಅಂಥ ಮಕ್ಕಳನ್ನು ಕಣ್ಣೆದುರೇ ಕಳಕೊಳ್ಳುವುದು ಯಾವ ಹೆತ್ತವರಿಗೇ ಆಗಲಿ ಸಹಿಸಲಸಾಧ್ಯವಾದ ನೋವು ಕೊಡಬಲ್ಲುದು. ಆದರೆ ಅದರಾಚೆಗೆ ಇನ್ನೊಂದು ಗಂಭೀರ ಸಂಗತಿಯಿದೆ. ಅದೇನೆಂದರೆ, ಪರೀಕ್ಷಾ ತಯಾರಿಯ ವೇಳೆ ಮಕ್ಕಳ ಬಗ್ಗೆ ಪೋಷಕರು ಗಂಭೀರ ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು  ಎಂಬುದು. ಅವರ ಚಟುವಟಿಕೆಯನ್ನು ಹೆತ್ತವರು ಗಮನಿಸುತ್ತಿರಬೇಕು. ಒತ್ತಡ ರಹಿತ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಬೇಕು. ಪರೀಕ್ಷೆಯಲ್ಲಿ ಮಗು ಇವತ್ತು ಫೇಲ್ ಆದರೆ ನಾಳೆ ಪಾಸ್ ಆಗಬಹುದು. ಆದರೆ ಮಗುವನ್ನೇ ಕಳಕೊಂಡರೆ ಆ ಅವಕಾಶವೇ ಇರುವುದಿಲ್ಲವಲ್ಲ.

Wednesday 5 February 2014

ಪ್ರಧಾನಿ ಅಂಬಾನಿ, ಮುಖ್ಯಮಂತ್ರಿ ಮೂರ್ತಿ?

    ಮನ್‍ಮೋಹನ್ ಸಿಂಗ್, ಮೋದಿ, ಕೇಜ್ರಿವಾಲ್, ಮನೋಹರ್ ಪಾರಿಕ್ಕರ್.. ಎಂಬೆಲ್ಲ ಹೆಸರುಗಳನ್ನು ನಾರಾಯಣ ಮೂರ್ತಿ, ಅಝೀಮ್ ಪ್ರೇಮ್‍ಜಿ, ಮುಖೇಶ್ ಅಂಬಾನಿ, ಇಂದ್ರಾ ನೂಯಿ.. ಮುಂತಾದ ಹೆಸರುಗಳ ಜೊತೆ ಇಟ್ಟು ಈ ದೇಶದ ಮಂದಿ ಎಂದೂ ನೋಡುವುದಿಲ್ಲ. ಇದಕ್ಕೆ ಕಾರಣ- ಅಂಬಾನಿ, ಪ್ರೇಮ್‍ಜಿಗಳ ಮೇಲಿನ ದ್ವೇಷ ಅಲ್ಲ ಅಥವಾ ಮೋದಿ, ಕೇಜ್ರಿವಾಲ್, ಪಾರಿಕ್ಕರ್‍ಗಳು ಇವರಿಗಿಂತ ಹೆಚ್ಚು ಪ್ರತಿಭಾವಂತರು ಎಂದೂ ಅಲ್ಲ. ನಿಜವಾಗಿ, ರಾಜಕೀಯ ನಾಯಕರಿಗಿಂತ ಭಿನ್ನವಾದ ಒಂದು ಮುಖ ಟಾಟಾ, ಬಿರ್ಲಾದಂತಹ ಬೃಹತ್ ಕಂಪೆನಿಗಳ ಒಡೆಯರಿಗೆ ಇರುತ್ತದೆ. ಅವರು ಜನರಿಗೆ ನೇರವಾಗಿ ಉತ್ತರದಾಯಿಗಳಲ್ಲ. ಅವರನ್ನು ಜನರು ಚುನಾಯಿಸಿರುವುದಿಲ್ಲ. ರಿಲಯನ್ಸ್ ಕಂಪೆನಿಗೆ ಮುಖೇಶ್ ಅಂಬಾನಿ ರಾಜೀನಾಮೆ ನೀಡಬೇಕು ಎಂದೋ ವಿಪ್ರೊ  ಕಂಪೆನಿಯ ನಿರ್ಣಾಯಕ ಹುದ್ದೆಯಲ್ಲಿ ತಮ್ಮ ಮಗನನ್ನು ಕುಳ್ಳಿರಿಸಿ ಅಝೀಮ್ ಪ್ರೇಮ್‍ಜಿ ತಪ್ಪು ಮಾಡಿದ್ದಾರೆ ಎಂದೋ ಹೇಳಿಕೊಂಡು ಇಲ್ಲಿ ಯಾರೂ ಪ್ರತಿಭಟನೆ ನಡೆಸುವುದಿಲ್ಲ. ಎಲ್ಲ ಕಂಪೆನಿಗಳು ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಿ ತಮ್ಮ ಅಧ್ಯಕ್ಷರನ್ನು ನೇಮಿಸಿಕೊಳ್ಳಬೇಕು ಎಂದೂ ಒತ್ತಾಯಿಸುವುದಿಲ್ಲ. ಅಧ್ಯಕ್ಷರುಗಳ ಮೇಲೆ ಭ್ರಷ್ಟಾಚಾರವನ್ನು ಆರೋಪಿಸಿ ಅಣ್ಣಾ ಹಜಾರೆಯೋ ಹಿರೇಮಠರೋ ಧರಣಿ-ಪ್ರತಿಭಟನೆ ಹಮ್ಮಿಕೊಳ್ಳುವುದಿಲ್ಲ. ಯಾಕೆಂದರೆ, ಅವರು ಜನಪ್ರತಿನಿಧಿಗಳಲ್ಲ. ಮನಮೋಹನ್ ಸಿಂಗ್ ಅಥವಾ ಮೋದಿಯವರು ಹೇಗೆ ಜನರಿಗೆ ಉತ್ತರದಾಯಿಗಳೋ ಹಾಗೆ ಇವರಲ್ಲ. ಕೇಜ್ರಿವಾಲ್ ಒಂದು ಸುತ್ತೋಲೆ ಹೊರಡಿಸಿದರೆ ದೆಹಲಿಯ ಎಲ್ಲ ಅಧಿಕಾರಿಗಳೂ ಅದಕ್ಕೆ ಸ್ಪಂದಿಸುತ್ತಾರೆ. ವಿದ್ಯುತ್ ದರವನ್ನು ಇಳಿಸಿ ಆದೇಶ ಕೊಟ್ಟರೆ ಅಥವಾ ಉಚಿತ ನೀರಿನ ಆಜ್ಞೆ ಕೊಟ್ಟರೆ ಇಡೀ ರಾಜ್ಯ ಅದನ್ನು ಅನುಸರಿಸುತ್ತದೆ. ಮಾತ್ರವಲ್ಲ, ಅವರ ಈ ನಡೆಯನ್ನು ಪ್ರಶ್ನಿಸುವ, ಬೆಂಬಲಿಸುವ ಎರಡೂ ಅವಕಾಶಗಳನ್ನು ಜನರು ಬಳಸಿಕೊಳ್ಳುತ್ತಾರೆ. ಆದರೆ, ಅಂಬಾನಿಗೆ ಅಂಥದ್ದೊಂದು ಅವಕಾಶವೇ ಇರುವುದಿಲ್ಲ. ಅವರು ಸುತ್ತೋಲೆ ಹೊರಡಿಸಿದರೆ ಅದು ಕಂಪೆನಿಗೆ ಮಾತ್ರ ಸೀಮಿತವಾಗಿರುತ್ತದೆ. ಅವರ ಕಂಪೆನಿಯ ಲಾಭ-ನಷ್ಟಗಳು ಜನಸಾಮಾನ್ಯರ ಮೇಲೆ ಪ್ರಭಾವವನ್ನೂ ಬೀರುವುದಿಲ್ಲ. ಇಂಥ ಹತ್ತಾರು ವ್ಯತ್ಯಾಸಗಳು ಇರುವುದರಿಂದಲೇ ರಾಜಕಾರಣಿಗಳು ಜನರಿಗೆ ಹೆಚ್ಚು ಹತ್ತಿರವಾಗುತ್ತಾರೆ. ಕಂಪೆನಿಯೊಂದು ಓರ್ವ ವ್ಯಕ್ತಿಯ ಸೊತ್ತಾದರೆ ಸರಕಾರವು ಎಲ್ಲ ಜನರ ಸೊತ್ತು ಎಂಬ ನಂಬಿಕೆ ಪ್ರಜಾತಂತ್ರ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಆದರೆ ದೆಹಲಿಯಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳು ಈ ನಂಬುಗೆಯು ಸುಳ್ಳು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ನಿರೂಪಿಸುತ್ತಿದೆ.
 ಅರವಿಂದ್ ಕೇಜ್ರಿವಾಲ್‍ರು ದೆಹಲಿಯ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕೂಡಲೇ ವಿದ್ಯುತ್ ದರವನ್ನು ಅರ್ಧಕ್ಕೆ ಇಳಿಸಿದರು. ಮಾತ್ರವಲ್ಲ, ದೆಹಲಿಗೆ ವಿದ್ಯುತ್ ಪೂರೈಸುತ್ತಿರುವ ರಿಲಯನ್ಸ್ ವಿದ್ಯುತ್ ಕಂಪೆನಿಯ ಲೆಕ್ಕಪರಿಶೋಧನೆಗೆ ಆದೇಶ ನೀಡಿದರು. ಇದೀಗ ರಿಲಯನ್ಸ್ ಕಂಪೆನಿಯು ಸರಕಾರವನ್ನೇ ಬೆದರಿಸುವ ತಂತ್ರಕ್ಕಿಳಿದಿದೆ. ದೆಹಲಿಯನ್ನು ಪ್ರತಿದಿನ 10 ಗಂಟೆಗಳ ಕಾಲ ಕತ್ತಲಲ್ಲಿಡುವ ಬೆದರಿಕೆ ಹಾಕಿದೆ. ನಿಜವಾಗಿ, ಖಾಸಗಿ ಕಂಪೆನಿಗಳು ಹೇಗೆ ಸರಕಾರಗಳನ್ನು ಮುಷ್ಠಿಯಲ್ಲಿಟ್ಟುಕೊಳ್ಳುತ್ತವೆ ಅನ್ನುವುದಕ್ಕೆ ಉದಾಹರಣೆ ಇದು. ಒಂದು ಕಡೆ, ಖಾಸಗೀಕರಣದ ಕಡೆಗೆ ಸರಕಾರ ಇನ್ನಿಲ್ಲದ ಒಲವನ್ನು ವ್ಯಕ್ತಪಡಿಸುತ್ತಿದೆ. ನೀರು, ವಿದ್ಯುತ್, ವಿಮೆ.. ಮುಂತಾದ ಎಲ್ಲವನ್ನೂ ಖಾಸಗಿಯವರಿಗೆ ಬಿಟ್ಟು ಕೊಡಲು ಅಪಾರ ಉಮೇದು ತೋರಿಸುತ್ತಿದೆ. ಮಾತ್ರವಲ್ಲ, ಅದನ್ನು ಜನಪರ ನಿಲುವು ಎಂದೇ ಸಮರ್ಥಿಸುತ್ತಿದೆ. ಇಂಥ ಹೊತ್ತಲ್ಲೇ  ರಿಲಯನ್ಸ್ ತನ್ನ ಜನವಿರೋಧಿ ಮುಖವನ್ನು ಬಹಿರಂಗಪಡಿಸಿದೆ. ಅಂದ ಹಾಗೆ, ಖಾಸಗಿ ಕಂಪೆನಿಗಳು ಜನರ ಬವಣೆಗಳನ್ನು ಪರಿಗಣಿಸಬೇಕಿಲ್ಲ. ಯಾಕೆಂದರೆ, ಅದರ ಅಳಿವು-ಉಳಿವು ಜನರ ಓಟನ್ನು ಹೊಂದಿಕೊಂಡಿಲ್ಲವಲ್ಲ. ಈ ದೇಶದ ಪ್ರಮುಖ ಖಾತೆಗಳನ್ನು ಅದರಲ್ಲೂ ಹಣಕಾಸು, ಇಂಧನ, ಟೆಲಿಕಾಂ, ಕೃಷಿ, ಪರಿಸರ ಮುಂತಾದ ಖಾತೆಗಳನ್ನು ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸುವುದು ಪ್ರಧಾನಿ ಅಲ್ಲ, ಖಾಸಗಿ ಕಂಪೆನಿಗಳು ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಜಯಂತಿ ನಟರಾಜನ್‍ರಿಂದ ಪರಿಸರ ಖಾತೆಯನ್ನು ಕಸಿದು ವೀರಪ್ಪ ಮೊಯಿಲಿಯವರಿಗೆ ನೀಡಲಾಯಿತು. ಪರಿಸರ ವಿರೋಧಿ ಎಂಬ ಕಾರಣಕ್ಕಾಗಿ ಜಯಂತಿ ನಟರಾಜನ್ ಅನುಮತಿ ನೀಡದೇ ಇದ್ದ ಐದಾರು ಬಹುಕೋಟಿ ಯೋಜನೆಗಳಿಗೆ ಮೊಯಿಲಿಯವರು ಕೇವಲ ಒಂದೇ ತಿಂಗಳೊಳಗೆ ಅನುಮತಿ ನೀಡಿಬಿಟ್ಟರು. ಟೆಲಿಕಾಂ ಖಾತೆಯನ್ನು ಯಾರಿಗೆ ನೀಡಬೇಕೆಂಬ ವಿಷಯದಲ್ಲಿ ಖಾಸಗಿ ಕಂಪೆನಿಗಳು ಎಷ್ಟು ಮುತುವರ್ಜಿ ವಹಿಸುತ್ತವೆ ಅನ್ನುವುದನ್ನು ನೀರಾ ರಾಡಿಯ ಹಗರಣ ಬೆಳಕಿಗೆ ತಂದಿದೆ. ಈ ದೇಶದಲ್ಲಿ ಪೆಟ್ರೋಲಿಯಂ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಹೂಡಿರುವ ಮುಖೇಶ್ ಮತ್ತು ಅನಿಲ್ ಅಂಬಾನಿಗಳು ಆ ಖಾತೆಯ ಬಗ್ಗೆ ಇನ್ನಿಲ್ಲದ ಆಸಕ್ತಿ ಹೊಂದಿರುವುದು ಎಲ್ಲರಿಗೂ ಗೊತ್ತು. ರಿಲಯನ್ಸನ ಮಾತನ್ನು ಕೇಳದ ಸಚಿವರು ಹೆಚ್ಚು ಸಮಯ ಇಂಧನ ಖಾತೆಯಲ್ಲಿ ಉಳಿಯುವುದಿಲ್ಲ ಎಂಬುದಕ್ಕೆ ಮುರಳಿ ದೇವೋರಂಥ ಹಲವು ಉದಾಹರಣೆಗಳಿವೆ. ‘ಖಾಸಗಿ ಕಂಪೆನಿಗಳಿಂದ ತನಗೆ ಜೀವ ಬೆದರಿಕೆ ಇದೆ..’ ಎಂಬುದಾಗಿ ಕೆಲವು ಸಮಯಗಳ ಹಿಂದೆ ಇಂಧನ ಸಚಿವ ವೀರಪ್ಪ ಮೊಯಿಲಿಯವರೇ ಹೇಳಿದ್ದರು. ಈ ಹಿಂದೆ ಹಣಕಾಸು ಸಚಿವರಾಗಿದ್ದ ಪ್ರಣವ್ ಮುಖರ್ಜಿ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿ ಚಿದಂಬರಮ್‍ಗೆ ಹಣಕಾಸು ಖಾತೆಯನ್ನು ನೀಡಿರುವುದರ ಹಿಂದೆಯೂ ಪ್ರಮುಖ ಬಹುರಾಷ್ಟ್ರೀಯ ಮೊಬೈಲ್ ಕಂಪೆನಿಯೊಂದರ ಕೈವಾಡವಿದೆ ಎಂದು  ಹೇಳಲಾಗುತ್ತಿದೆ.
   ಪ್ರಜೆಗಳೇ ಆಡಳಿತ ನಡೆಸುವ ಒಂದು ಅದ್ಭುತ ವ್ಯವಸ್ಥೆಯೆಂದು ಪ್ರಜಾತಂತ್ರವನ್ನು ನಾವು ಕೊಂಡಾಡುತ್ತಿರುವಾಗಲೂ ಈ ವ್ಯವಸ್ಥೆಯನ್ನು ಖಾಸಗಿ ಕಂಪೆನಿಗಳು ಹೇಗೆ ಹೈಜಾಕ್ ಮಾಡಬಲ್ಲವು ಅನ್ನುವುದಕ್ಕೆ ದಿನೇ ದಿನೇ ಪುರಾವೆಗಳು ಸಿಗುತ್ತಲೇ ಇವೆ. ಇವತ್ತು ವಿದ್ಯುತ್‍ನ ಬಗ್ಗೆ, ಪೆಟ್ರೋಲ್-ಡೀಸೆಲ್, ಗ್ಯಾಸ್‍ನ ಬೆಲೆ ನಿಗದಿಪಡಿಸುವ ಕುರಿತಂತೆ ಒಂದು ಸರಕಾರ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳದಂಥ ಪರಿಸ್ಥಿತಿಯಿದೆ. ಇಷ್ಟು ಬೆಲೆ ನಿಗದಿಪಡಿಸಿ ಎಂದು ಖಾಸಗಿ ಕಂಪೆನಿಗಳು ಸರಕಾರಕ್ಕೆ ಆದೇಶಿಸುತ್ತಿವೆ. ಜನರು ಈ ಬಗ್ಗೆ ಕೆರಳದಂತೆ ಮಾಡಬೇಕಾದ ಉಪಾಯಗಳನ್ನೂ ಅವು ಹೇಳಿಕೊಡುತ್ತವೆ. ಮಾತ್ರವಲ್ಲ, ಪ್ರತಿವರ್ಷ ಪ್ರಮುಖ ರಾಜಕೀಯ ಪಕ್ಷಗಳಿಗೆ ಅವು ಕೋಟ್ಯಂತರ ರೂಪಾಯಿ ದೇಣಿಗೆಯನ್ನೂ ನೀಡುತ್ತಿವೆ. ಹೀಗಿರುವಾಗ ಅವು ತಮ್ಮ ದೇಣಿಗೆಗೆ ಸೂಕ್ತ ಪ್ರತಿಫಲವನ್ನು ಬಯಸದೇ ಇರುವುದಕ್ಕೆ ಸಾಧ್ಯವಿದೆಯೇ? ಹೀಗೆ ರಾಜಕೀಯ ಪಕ್ಷಗಳು ಮತ್ತು ಬೃಹತ್ ಕಂಪೆನಿಗಳು ಒಂದು ಬಗೆಯ ಒಳ ಒಪ್ಪಂದವನ್ನು ಮಾಡಿಕೊಂಡು ಮತದಾರರಿಗೆ ಮೋಸ ಮಾಡುತ್ತಿವೆ. ದೆಹಲಿಯಲ್ಲಿ ನಡೆದಿರುವುದೂ ಇದೇ. ಕೇಜ್ರಿವಾಲ್ ಇದನ್ನು ಪ್ರಶ್ನಿಸಿದ್ದಾರೆ. ತಕ್ಷಣ ರಿಲಯನ್ಸ್ ಕಂಪೆನಿಯು ಅವರನ್ನು ಕತ್ತಲಲ್ಲಿಡುವ ಬೆದರಿಕೆ ಹಾಕಿದೆ. ಈ ಮುಖಾಂತರ ಈ ದೇಶದಲ್ಲಿ ಆಡಳಿತ ನಡೆಸುತ್ತಿರುವುದು ಮುಖ್ಯಮಂತ್ರಿಯೋ ಪ್ರಧಾನಿಯೋ ಅಲ್ಲ, ಖಾಸಗಿ ಕಂಪೆನಿಗಳು ಎಂಬುದನ್ನು ಅದು ಪರೋಕ್ಷವಾಗಿ ಸಾರಿಬಿಟ್ಟಿದೆ. ಆದ್ದರಿಂದ ಈ ಪ್ರಕರಣವನ್ನು ನಾವೆಲ್ಲ ಗಂಭೀರವಾಗಿ ಪರಿಗಣಿಸಬೇಕು. ಖಾಸಗಿ ಕಂಪೆನಿಗಳಿಗೆ ಮಣಿಯುವುದಿಲ್ಲವೆಂಬ ಬಗ್ಗೆ ಮುಂದಿನ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಂದ ಭರವಸೆಯನ್ನು ಪಡೆದುಕೊಳ್ಳಬೇಕು. ತಮ್ಮ ಬದ್ಧತೆ ಕಂಪೆನಿಗಲ್ಲ, ಜನರಿಗೆ ಎಂಬುದನ್ನು ಎಲ್ಲ ಪಕ್ಷಗಳೂ ಸಾರುವಂತೆ ಒತ್ತಡ ಹೇರಬೇಕು. ಇಲ್ಲದಿದ್ದರೆ ರಾಜಕೀಯ ಪಕ್ಷಗಳು ಮುಂದೊಂದು ದಿನ, ಚುನಾವಣೆಯಲ್ಲೇ ಸ್ಪರ್ಧಿಸದ ಅಂಬಾನಿಯನ್ನೋ ಟಾಟಾರನ್ನೋ ತಂದು ಪ್ರಧಾನಿ ಕುರ್ಚಿಯಲ್ಲಿ ಕೂರಿಸಿಯಾವು.