Wednesday, 5 February 2014

ಪ್ರಧಾನಿ ಅಂಬಾನಿ, ಮುಖ್ಯಮಂತ್ರಿ ಮೂರ್ತಿ?

    ಮನ್‍ಮೋಹನ್ ಸಿಂಗ್, ಮೋದಿ, ಕೇಜ್ರಿವಾಲ್, ಮನೋಹರ್ ಪಾರಿಕ್ಕರ್.. ಎಂಬೆಲ್ಲ ಹೆಸರುಗಳನ್ನು ನಾರಾಯಣ ಮೂರ್ತಿ, ಅಝೀಮ್ ಪ್ರೇಮ್‍ಜಿ, ಮುಖೇಶ್ ಅಂಬಾನಿ, ಇಂದ್ರಾ ನೂಯಿ.. ಮುಂತಾದ ಹೆಸರುಗಳ ಜೊತೆ ಇಟ್ಟು ಈ ದೇಶದ ಮಂದಿ ಎಂದೂ ನೋಡುವುದಿಲ್ಲ. ಇದಕ್ಕೆ ಕಾರಣ- ಅಂಬಾನಿ, ಪ್ರೇಮ್‍ಜಿಗಳ ಮೇಲಿನ ದ್ವೇಷ ಅಲ್ಲ ಅಥವಾ ಮೋದಿ, ಕೇಜ್ರಿವಾಲ್, ಪಾರಿಕ್ಕರ್‍ಗಳು ಇವರಿಗಿಂತ ಹೆಚ್ಚು ಪ್ರತಿಭಾವಂತರು ಎಂದೂ ಅಲ್ಲ. ನಿಜವಾಗಿ, ರಾಜಕೀಯ ನಾಯಕರಿಗಿಂತ ಭಿನ್ನವಾದ ಒಂದು ಮುಖ ಟಾಟಾ, ಬಿರ್ಲಾದಂತಹ ಬೃಹತ್ ಕಂಪೆನಿಗಳ ಒಡೆಯರಿಗೆ ಇರುತ್ತದೆ. ಅವರು ಜನರಿಗೆ ನೇರವಾಗಿ ಉತ್ತರದಾಯಿಗಳಲ್ಲ. ಅವರನ್ನು ಜನರು ಚುನಾಯಿಸಿರುವುದಿಲ್ಲ. ರಿಲಯನ್ಸ್ ಕಂಪೆನಿಗೆ ಮುಖೇಶ್ ಅಂಬಾನಿ ರಾಜೀನಾಮೆ ನೀಡಬೇಕು ಎಂದೋ ವಿಪ್ರೊ  ಕಂಪೆನಿಯ ನಿರ್ಣಾಯಕ ಹುದ್ದೆಯಲ್ಲಿ ತಮ್ಮ ಮಗನನ್ನು ಕುಳ್ಳಿರಿಸಿ ಅಝೀಮ್ ಪ್ರೇಮ್‍ಜಿ ತಪ್ಪು ಮಾಡಿದ್ದಾರೆ ಎಂದೋ ಹೇಳಿಕೊಂಡು ಇಲ್ಲಿ ಯಾರೂ ಪ್ರತಿಭಟನೆ ನಡೆಸುವುದಿಲ್ಲ. ಎಲ್ಲ ಕಂಪೆನಿಗಳು ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಿ ತಮ್ಮ ಅಧ್ಯಕ್ಷರನ್ನು ನೇಮಿಸಿಕೊಳ್ಳಬೇಕು ಎಂದೂ ಒತ್ತಾಯಿಸುವುದಿಲ್ಲ. ಅಧ್ಯಕ್ಷರುಗಳ ಮೇಲೆ ಭ್ರಷ್ಟಾಚಾರವನ್ನು ಆರೋಪಿಸಿ ಅಣ್ಣಾ ಹಜಾರೆಯೋ ಹಿರೇಮಠರೋ ಧರಣಿ-ಪ್ರತಿಭಟನೆ ಹಮ್ಮಿಕೊಳ್ಳುವುದಿಲ್ಲ. ಯಾಕೆಂದರೆ, ಅವರು ಜನಪ್ರತಿನಿಧಿಗಳಲ್ಲ. ಮನಮೋಹನ್ ಸಿಂಗ್ ಅಥವಾ ಮೋದಿಯವರು ಹೇಗೆ ಜನರಿಗೆ ಉತ್ತರದಾಯಿಗಳೋ ಹಾಗೆ ಇವರಲ್ಲ. ಕೇಜ್ರಿವಾಲ್ ಒಂದು ಸುತ್ತೋಲೆ ಹೊರಡಿಸಿದರೆ ದೆಹಲಿಯ ಎಲ್ಲ ಅಧಿಕಾರಿಗಳೂ ಅದಕ್ಕೆ ಸ್ಪಂದಿಸುತ್ತಾರೆ. ವಿದ್ಯುತ್ ದರವನ್ನು ಇಳಿಸಿ ಆದೇಶ ಕೊಟ್ಟರೆ ಅಥವಾ ಉಚಿತ ನೀರಿನ ಆಜ್ಞೆ ಕೊಟ್ಟರೆ ಇಡೀ ರಾಜ್ಯ ಅದನ್ನು ಅನುಸರಿಸುತ್ತದೆ. ಮಾತ್ರವಲ್ಲ, ಅವರ ಈ ನಡೆಯನ್ನು ಪ್ರಶ್ನಿಸುವ, ಬೆಂಬಲಿಸುವ ಎರಡೂ ಅವಕಾಶಗಳನ್ನು ಜನರು ಬಳಸಿಕೊಳ್ಳುತ್ತಾರೆ. ಆದರೆ, ಅಂಬಾನಿಗೆ ಅಂಥದ್ದೊಂದು ಅವಕಾಶವೇ ಇರುವುದಿಲ್ಲ. ಅವರು ಸುತ್ತೋಲೆ ಹೊರಡಿಸಿದರೆ ಅದು ಕಂಪೆನಿಗೆ ಮಾತ್ರ ಸೀಮಿತವಾಗಿರುತ್ತದೆ. ಅವರ ಕಂಪೆನಿಯ ಲಾಭ-ನಷ್ಟಗಳು ಜನಸಾಮಾನ್ಯರ ಮೇಲೆ ಪ್ರಭಾವವನ್ನೂ ಬೀರುವುದಿಲ್ಲ. ಇಂಥ ಹತ್ತಾರು ವ್ಯತ್ಯಾಸಗಳು ಇರುವುದರಿಂದಲೇ ರಾಜಕಾರಣಿಗಳು ಜನರಿಗೆ ಹೆಚ್ಚು ಹತ್ತಿರವಾಗುತ್ತಾರೆ. ಕಂಪೆನಿಯೊಂದು ಓರ್ವ ವ್ಯಕ್ತಿಯ ಸೊತ್ತಾದರೆ ಸರಕಾರವು ಎಲ್ಲ ಜನರ ಸೊತ್ತು ಎಂಬ ನಂಬಿಕೆ ಪ್ರಜಾತಂತ್ರ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಆದರೆ ದೆಹಲಿಯಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳು ಈ ನಂಬುಗೆಯು ಸುಳ್ಳು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ನಿರೂಪಿಸುತ್ತಿದೆ.
 ಅರವಿಂದ್ ಕೇಜ್ರಿವಾಲ್‍ರು ದೆಹಲಿಯ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕೂಡಲೇ ವಿದ್ಯುತ್ ದರವನ್ನು ಅರ್ಧಕ್ಕೆ ಇಳಿಸಿದರು. ಮಾತ್ರವಲ್ಲ, ದೆಹಲಿಗೆ ವಿದ್ಯುತ್ ಪೂರೈಸುತ್ತಿರುವ ರಿಲಯನ್ಸ್ ವಿದ್ಯುತ್ ಕಂಪೆನಿಯ ಲೆಕ್ಕಪರಿಶೋಧನೆಗೆ ಆದೇಶ ನೀಡಿದರು. ಇದೀಗ ರಿಲಯನ್ಸ್ ಕಂಪೆನಿಯು ಸರಕಾರವನ್ನೇ ಬೆದರಿಸುವ ತಂತ್ರಕ್ಕಿಳಿದಿದೆ. ದೆಹಲಿಯನ್ನು ಪ್ರತಿದಿನ 10 ಗಂಟೆಗಳ ಕಾಲ ಕತ್ತಲಲ್ಲಿಡುವ ಬೆದರಿಕೆ ಹಾಕಿದೆ. ನಿಜವಾಗಿ, ಖಾಸಗಿ ಕಂಪೆನಿಗಳು ಹೇಗೆ ಸರಕಾರಗಳನ್ನು ಮುಷ್ಠಿಯಲ್ಲಿಟ್ಟುಕೊಳ್ಳುತ್ತವೆ ಅನ್ನುವುದಕ್ಕೆ ಉದಾಹರಣೆ ಇದು. ಒಂದು ಕಡೆ, ಖಾಸಗೀಕರಣದ ಕಡೆಗೆ ಸರಕಾರ ಇನ್ನಿಲ್ಲದ ಒಲವನ್ನು ವ್ಯಕ್ತಪಡಿಸುತ್ತಿದೆ. ನೀರು, ವಿದ್ಯುತ್, ವಿಮೆ.. ಮುಂತಾದ ಎಲ್ಲವನ್ನೂ ಖಾಸಗಿಯವರಿಗೆ ಬಿಟ್ಟು ಕೊಡಲು ಅಪಾರ ಉಮೇದು ತೋರಿಸುತ್ತಿದೆ. ಮಾತ್ರವಲ್ಲ, ಅದನ್ನು ಜನಪರ ನಿಲುವು ಎಂದೇ ಸಮರ್ಥಿಸುತ್ತಿದೆ. ಇಂಥ ಹೊತ್ತಲ್ಲೇ  ರಿಲಯನ್ಸ್ ತನ್ನ ಜನವಿರೋಧಿ ಮುಖವನ್ನು ಬಹಿರಂಗಪಡಿಸಿದೆ. ಅಂದ ಹಾಗೆ, ಖಾಸಗಿ ಕಂಪೆನಿಗಳು ಜನರ ಬವಣೆಗಳನ್ನು ಪರಿಗಣಿಸಬೇಕಿಲ್ಲ. ಯಾಕೆಂದರೆ, ಅದರ ಅಳಿವು-ಉಳಿವು ಜನರ ಓಟನ್ನು ಹೊಂದಿಕೊಂಡಿಲ್ಲವಲ್ಲ. ಈ ದೇಶದ ಪ್ರಮುಖ ಖಾತೆಗಳನ್ನು ಅದರಲ್ಲೂ ಹಣಕಾಸು, ಇಂಧನ, ಟೆಲಿಕಾಂ, ಕೃಷಿ, ಪರಿಸರ ಮುಂತಾದ ಖಾತೆಗಳನ್ನು ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸುವುದು ಪ್ರಧಾನಿ ಅಲ್ಲ, ಖಾಸಗಿ ಕಂಪೆನಿಗಳು ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಜಯಂತಿ ನಟರಾಜನ್‍ರಿಂದ ಪರಿಸರ ಖಾತೆಯನ್ನು ಕಸಿದು ವೀರಪ್ಪ ಮೊಯಿಲಿಯವರಿಗೆ ನೀಡಲಾಯಿತು. ಪರಿಸರ ವಿರೋಧಿ ಎಂಬ ಕಾರಣಕ್ಕಾಗಿ ಜಯಂತಿ ನಟರಾಜನ್ ಅನುಮತಿ ನೀಡದೇ ಇದ್ದ ಐದಾರು ಬಹುಕೋಟಿ ಯೋಜನೆಗಳಿಗೆ ಮೊಯಿಲಿಯವರು ಕೇವಲ ಒಂದೇ ತಿಂಗಳೊಳಗೆ ಅನುಮತಿ ನೀಡಿಬಿಟ್ಟರು. ಟೆಲಿಕಾಂ ಖಾತೆಯನ್ನು ಯಾರಿಗೆ ನೀಡಬೇಕೆಂಬ ವಿಷಯದಲ್ಲಿ ಖಾಸಗಿ ಕಂಪೆನಿಗಳು ಎಷ್ಟು ಮುತುವರ್ಜಿ ವಹಿಸುತ್ತವೆ ಅನ್ನುವುದನ್ನು ನೀರಾ ರಾಡಿಯ ಹಗರಣ ಬೆಳಕಿಗೆ ತಂದಿದೆ. ಈ ದೇಶದಲ್ಲಿ ಪೆಟ್ರೋಲಿಯಂ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಹೂಡಿರುವ ಮುಖೇಶ್ ಮತ್ತು ಅನಿಲ್ ಅಂಬಾನಿಗಳು ಆ ಖಾತೆಯ ಬಗ್ಗೆ ಇನ್ನಿಲ್ಲದ ಆಸಕ್ತಿ ಹೊಂದಿರುವುದು ಎಲ್ಲರಿಗೂ ಗೊತ್ತು. ರಿಲಯನ್ಸನ ಮಾತನ್ನು ಕೇಳದ ಸಚಿವರು ಹೆಚ್ಚು ಸಮಯ ಇಂಧನ ಖಾತೆಯಲ್ಲಿ ಉಳಿಯುವುದಿಲ್ಲ ಎಂಬುದಕ್ಕೆ ಮುರಳಿ ದೇವೋರಂಥ ಹಲವು ಉದಾಹರಣೆಗಳಿವೆ. ‘ಖಾಸಗಿ ಕಂಪೆನಿಗಳಿಂದ ತನಗೆ ಜೀವ ಬೆದರಿಕೆ ಇದೆ..’ ಎಂಬುದಾಗಿ ಕೆಲವು ಸಮಯಗಳ ಹಿಂದೆ ಇಂಧನ ಸಚಿವ ವೀರಪ್ಪ ಮೊಯಿಲಿಯವರೇ ಹೇಳಿದ್ದರು. ಈ ಹಿಂದೆ ಹಣಕಾಸು ಸಚಿವರಾಗಿದ್ದ ಪ್ರಣವ್ ಮುಖರ್ಜಿ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿ ಚಿದಂಬರಮ್‍ಗೆ ಹಣಕಾಸು ಖಾತೆಯನ್ನು ನೀಡಿರುವುದರ ಹಿಂದೆಯೂ ಪ್ರಮುಖ ಬಹುರಾಷ್ಟ್ರೀಯ ಮೊಬೈಲ್ ಕಂಪೆನಿಯೊಂದರ ಕೈವಾಡವಿದೆ ಎಂದು  ಹೇಳಲಾಗುತ್ತಿದೆ.
   ಪ್ರಜೆಗಳೇ ಆಡಳಿತ ನಡೆಸುವ ಒಂದು ಅದ್ಭುತ ವ್ಯವಸ್ಥೆಯೆಂದು ಪ್ರಜಾತಂತ್ರವನ್ನು ನಾವು ಕೊಂಡಾಡುತ್ತಿರುವಾಗಲೂ ಈ ವ್ಯವಸ್ಥೆಯನ್ನು ಖಾಸಗಿ ಕಂಪೆನಿಗಳು ಹೇಗೆ ಹೈಜಾಕ್ ಮಾಡಬಲ್ಲವು ಅನ್ನುವುದಕ್ಕೆ ದಿನೇ ದಿನೇ ಪುರಾವೆಗಳು ಸಿಗುತ್ತಲೇ ಇವೆ. ಇವತ್ತು ವಿದ್ಯುತ್‍ನ ಬಗ್ಗೆ, ಪೆಟ್ರೋಲ್-ಡೀಸೆಲ್, ಗ್ಯಾಸ್‍ನ ಬೆಲೆ ನಿಗದಿಪಡಿಸುವ ಕುರಿತಂತೆ ಒಂದು ಸರಕಾರ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳದಂಥ ಪರಿಸ್ಥಿತಿಯಿದೆ. ಇಷ್ಟು ಬೆಲೆ ನಿಗದಿಪಡಿಸಿ ಎಂದು ಖಾಸಗಿ ಕಂಪೆನಿಗಳು ಸರಕಾರಕ್ಕೆ ಆದೇಶಿಸುತ್ತಿವೆ. ಜನರು ಈ ಬಗ್ಗೆ ಕೆರಳದಂತೆ ಮಾಡಬೇಕಾದ ಉಪಾಯಗಳನ್ನೂ ಅವು ಹೇಳಿಕೊಡುತ್ತವೆ. ಮಾತ್ರವಲ್ಲ, ಪ್ರತಿವರ್ಷ ಪ್ರಮುಖ ರಾಜಕೀಯ ಪಕ್ಷಗಳಿಗೆ ಅವು ಕೋಟ್ಯಂತರ ರೂಪಾಯಿ ದೇಣಿಗೆಯನ್ನೂ ನೀಡುತ್ತಿವೆ. ಹೀಗಿರುವಾಗ ಅವು ತಮ್ಮ ದೇಣಿಗೆಗೆ ಸೂಕ್ತ ಪ್ರತಿಫಲವನ್ನು ಬಯಸದೇ ಇರುವುದಕ್ಕೆ ಸಾಧ್ಯವಿದೆಯೇ? ಹೀಗೆ ರಾಜಕೀಯ ಪಕ್ಷಗಳು ಮತ್ತು ಬೃಹತ್ ಕಂಪೆನಿಗಳು ಒಂದು ಬಗೆಯ ಒಳ ಒಪ್ಪಂದವನ್ನು ಮಾಡಿಕೊಂಡು ಮತದಾರರಿಗೆ ಮೋಸ ಮಾಡುತ್ತಿವೆ. ದೆಹಲಿಯಲ್ಲಿ ನಡೆದಿರುವುದೂ ಇದೇ. ಕೇಜ್ರಿವಾಲ್ ಇದನ್ನು ಪ್ರಶ್ನಿಸಿದ್ದಾರೆ. ತಕ್ಷಣ ರಿಲಯನ್ಸ್ ಕಂಪೆನಿಯು ಅವರನ್ನು ಕತ್ತಲಲ್ಲಿಡುವ ಬೆದರಿಕೆ ಹಾಕಿದೆ. ಈ ಮುಖಾಂತರ ಈ ದೇಶದಲ್ಲಿ ಆಡಳಿತ ನಡೆಸುತ್ತಿರುವುದು ಮುಖ್ಯಮಂತ್ರಿಯೋ ಪ್ರಧಾನಿಯೋ ಅಲ್ಲ, ಖಾಸಗಿ ಕಂಪೆನಿಗಳು ಎಂಬುದನ್ನು ಅದು ಪರೋಕ್ಷವಾಗಿ ಸಾರಿಬಿಟ್ಟಿದೆ. ಆದ್ದರಿಂದ ಈ ಪ್ರಕರಣವನ್ನು ನಾವೆಲ್ಲ ಗಂಭೀರವಾಗಿ ಪರಿಗಣಿಸಬೇಕು. ಖಾಸಗಿ ಕಂಪೆನಿಗಳಿಗೆ ಮಣಿಯುವುದಿಲ್ಲವೆಂಬ ಬಗ್ಗೆ ಮುಂದಿನ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಂದ ಭರವಸೆಯನ್ನು ಪಡೆದುಕೊಳ್ಳಬೇಕು. ತಮ್ಮ ಬದ್ಧತೆ ಕಂಪೆನಿಗಲ್ಲ, ಜನರಿಗೆ ಎಂಬುದನ್ನು ಎಲ್ಲ ಪಕ್ಷಗಳೂ ಸಾರುವಂತೆ ಒತ್ತಡ ಹೇರಬೇಕು. ಇಲ್ಲದಿದ್ದರೆ ರಾಜಕೀಯ ಪಕ್ಷಗಳು ಮುಂದೊಂದು ದಿನ, ಚುನಾವಣೆಯಲ್ಲೇ ಸ್ಪರ್ಧಿಸದ ಅಂಬಾನಿಯನ್ನೋ ಟಾಟಾರನ್ನೋ ತಂದು ಪ್ರಧಾನಿ ಕುರ್ಚಿಯಲ್ಲಿ ಕೂರಿಸಿಯಾವು.

No comments:

Post a Comment