Wednesday 12 February 2014

ಬಾವಿಕಟ್ಟೆಯಲ್ಲಿ ಕುಳಿತು ಓದುವ ಮಗು

    1. ಈಜಲು ತೆರಳಿದ ವಿದ್ಯಾರ್ಥಿ ನಾಪತ್ತೆ.
 2. ಬಾವಿಗೆ ಪಂಪ್ ಅಳವಡಿಸುವ ಸಂದರ್ಭ ಬಾವಿಗೆ ಬಿದ್ದು ಕಾರ್ಮಿಕ ಸಾವು.
 3. ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಮೃತ್ಯು.
 4. ವಾಹನ ಅಪಘಾತದಲ್ಲಿ ಮೃತಪಟ್ಟ ಮಕ್ಕಳು..
 ಇಂಥ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರತಿನಿತ್ಯ ವರದಿಯಾಗುತ್ತಲೇ ಇರುತ್ತವೆ. ಮಾತ್ರವಲ್ಲ, ಇಂಥ ಸುದ್ದಿಗಳನ್ನು ಪ್ರಕಟಿಸಲಿಕ್ಕೆಂದೇ ಪತ್ರಿಕೆಗಳು ಪ್ರತ್ಯೇಕ ಪುಟಗಳನ್ನೂ ಮೀಸಲಿಟ್ಟಿರುತ್ತವೆ. ಇಂಥ ಪುಟಗಳಲ್ಲಿ ಒಂದು ದಿನ ಕಾಣಿಸಿಕೊಂಡು ಆ ಬಳಿಕ ಶಾಶ್ವತವಾಗಿ ಕಣ್ಮರೆಯಾಗುವ ಇಂಥ ಜೀವಗಳು ಸಾರ್ವಜನಿಕ ಚರ್ಚೆಗೆ ಒಳಗಾಗುವುದು ತೀರಾ ಕಡಿಮೆ. ನಾವು ಪತ್ರಿಕೆಗಳನ್ನು ಎತ್ತಿಕೊಂಡರೆ ಅಥವಾ ಟಿ.ವಿ. ಚಾನೆಲ್‍ಗಳನ್ನು ತಿರುಗಿಸಿದರೆ ಅಲ್ಲೆಲ್ಲಾ ಕೇಜ್ರಿವಾಲ್, ಮೋದಿ, ರಾಹುಲ್‍ಗಳೇ ತುಂಬಿರುತ್ತಾರೆ. ಅವರ ಭಾಷಣಗಳು, ಆ ಭಾಷಣಗಳ ಮೇಲಿನ ಚಾವಡಿ ಚರ್ಚೆಗಳು ಮತ್ತು ವಿಶ್ಲೇಷನಾತ್ಮಕ ಬರಹಗಳು ಅವನ್ನು ಆಕ್ರಮಿಸಿಕೊಂಡಿರುತ್ತವೆ. ನರೇಂದ್ರ ಮೋದಿಯ ಯೋಗ್ಯತೆ ಏನೆಂಬುದನ್ನು ಹೇಳುವುದು ರಾಹುಲ್ ಗಾಂಧಿ. ರಾಹುಲ್ ಗಾಂಧಿ ಎಷ್ಟು ಅಪಕ್ವ ಎಂದು ಬಣ್ಣಿಸುವುದು ನರೇಂದ್ರ ಮೋದಿ. ಕೇಜ್ರಿವಾಲ್ ಯಾಕೆ ಅಸೂಕ್ತ ಎಂದು ವಿವರಿಸುವುದು ಅರುಣ್ ಜೇಟ್ಲಿ.. ಹೀಗೆ ತಮ್ಮನ್ನು ಬಿಟ್ಟು ಇತರೆಲ್ಲರ ಯೋಗ್ಯತೆ, ಅರ್ಹತೆಗಳನ್ನು ಪಟ್ಟಿ ಮಾಡುತ್ತಾ ತಿರುಗುತ್ತಿರುವ ಈ ಮಂದಿ, ಮಾಧ್ಯಮಗಳ ಮುಖಪುಟದಲ್ಲಿ ಸದಾ ಠಿಕಾಣಿ ಹೂಡಿರುತ್ತಾರೆ. ಈ ಕಾರಣದಿಂದಲೋ ಏನೋ ನಮ್ಮ ಚರ್ಚೆಗಳೂ ಇವರ ಸುತ್ತಲೇ ಸುತ್ತುತ್ತಿರುತ್ತವೆ. ಪ್ರತಿದಿನ ಮೂರೋ ನಾಲ್ಕೋ ರೂಪಾಯಿಯನ್ನು ತೆತ್ತು ಖರೀದಿಸುವ ಪತ್ರಿಕೆಯೊಂದು ನಮ್ಮ ಇಡೀ ದಿನದ ಚರ್ಚಾ ವಿಷಯವನ್ನು ನಿರ್ಧರಿಸಿಬಿಡುತ್ತದೆ ಅಂದರೆ ಏನೆನ್ನಬೇಕು? ದಿನದ 24 ಗಂಟೆಗಳಲ್ಲಿ ಹೆಚ್ಚಿನ ಸಮಯವನ್ನು ನಾವು ರಾಜಕೀಯ ಮಾತುಕತೆಗಳಿಗಾಗಿಯೇ ಮೀಸಲಿಟ್ಟಿರುವುದಕ್ಕೆ ಮಾಧ್ಯಮಗಳ ಹೊರತು ಬೇರೆ ಯಾವುದು ಕಾರಣ ಆಗಿರಬಹುದು? ಅಷ್ಟಕ್ಕೂ, ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಸಿನಿಮಾ ತಾರೆಯರನ್ನು ಕುತೂಹಲದ ವರ್ಗವಾಗಿ ಬಿಂಬಿಸಿದ್ದು ಯಾರು? ಈ ವರ್ಗದಲ್ಲಿ ಯಾರು, ಏನು ಮಾತಾಡಿ ಸುದ್ದಿಯಾಗುತ್ತದಲ್ಲ ಮತ್ತು ಅದನ್ನು ಓದುವುದಕ್ಕೆ ಜನಸಾಮಾನ್ಯರು ಆಸಕ್ತಿ ತೋರುತ್ತಾರಲ್ಲ, ಯಾಕೆ? ಇವರ ಸುತ್ತ ಇಂಥದ್ದೊಂದು ಪ್ರಭಾವಳಿಯನ್ನು ಯಾರು ಹುಟ್ಟು ಹಾಕಿದ್ದಾರೆ? ಒಂದು ವೇಳೆ, ಈ ಮೂರು ವರ್ಗಕ್ಕೆ ಸಂಬಂಧಿಸಿದ ಸುದ್ದಿಯನ್ನು ಪತ್ರಿಕೆಗಳಿಂದ ತೆಗೆದು ಹಾಕಿದರೆ, ಪತ್ರಿಕೆಗಳ ಬಹುತೇಕ ಎಲ್ಲ ಪುಟಗಳೂ ಖಾಲಿಯಾಗಿ ಕಾಣಿಸಬಹುದು. ಹಾಗಂತ, ಮಾಧ್ಯಮಗಳು ಜನಸಾಮಾನ್ಯರನ್ನು ಸಂಪೂರ್ಣ ನಿರ್ಲಕ್ಷಿಸಿವೆ ಎಂದಲ್ಲ. ಆ ಮಂದಿಯ ಸುತ್ತ ಅಂಥದ್ದೊಂದು ಕುತೂಹಲ ಸಾರ್ವಜನಿಕವಾಗಿಯೇ ಇವತ್ತು ಹುಟ್ಟಿಕೊಂಡು ಬಿಟ್ಟಿದೆ. ಇಂಥದ್ದೊಂದು ಕ್ರೇಜ್ ಅನ್ನು ಅವರ ಸುತ್ತ ಯಾರು ಹರಡಿ ಬಿಟ್ಟರೋ, ಯಾವಾಗ ಅದರ ಆರಂಭ ಆಯಿತೋ ಗೊತ್ತಿಲ್ಲ. ಆದರೆ ಇವತ್ತು ಅವರು ನಮ್ಮ ಚರ್ಚೆಯ ಅನಿವಾರ್ಯ ಭಾಗವಾಗಿ ಬಿಟ್ಟಿದ್ದಾರೆ. ಅವರು ಆಡಿದ ಮಾತಿಗೆ, ನೋಡಿದ ನೋಟಕ್ಕೆ, ನಡೆದ ದಾರಿಗೆ ನೂರು ಅರ್ಥಗಳನ್ನು ಕಲ್ಪಿಸಿ ವಿಶ್ಲೇಷಿಸಬೇಕಾದ ಅನಿವಾರ್ಯತೆಗೆ ಮಾಧ್ಯಮಗಳು ತಲುಪಿಬಿಟ್ಟಿವೆ. ಇವುಗಳ ನಡುವೆ, ನಿಜವಾಗಿಯೂ ಚರ್ಚಿಸಲೇಬೇಕಾದ ಜನಸಾಮಾನ್ಯರ ನೂರಾರು ಸಂಗತಿಗಳು ಚರ್ಚೆಗೆ ಒಳಗಾಗದೆಯೇ ಸತ್ತು ಹೋಗುತ್ತಿವೆ. ಅವು ಮೋದಿ, ರಾಹುಲ್, ಕೇಜ್ರಿವಾಲ್‍ರ ಆರೋಪ-ಪ್ರತ್ಯಾರೋಪಗಳಿಗಿಂತ ಮಹತ್ವಪೂರ್ಣ ಸಂಗತಿಗಳಾಗಿದ್ದರೂ ಮಾಧ್ಯಮಗಳು ಜನಸಾಮಾನ್ಯರನ್ನು ಮುಖಪುಟಕ್ಕೆ ಪರಿಗಣಿಸುವುದಿಲ್ಲ. ಮಾಧ್ಯಮಗಳು ಯಾವುದಕ್ಕೆ ಮಹತ್ವ ಕೊಡುವುದಿಲ್ಲವೋ ಅವಕ್ಕೆ ಓದುಗರೂ ಮಹತ್ವ ಕೊಡುವುದಿಲ್ಲವಾದ್ದರಿಂದ ಸಹಜವಾಗಿ ಜನಸಾಮಾನ್ಯರಿಗೆ ಸಂಬಂಧಿಸಿದ ಸುದ್ದಿಗಳು ಅವರ ಕುಟುಂಬ ಮತ್ತು ಆಯಾ ಪ್ರದೇಶಕ್ಕಷ್ಟೇ ಸೀಮಿತವಾಗಿ ಬಿಡುತ್ತದೆ. ಆ ಮೂಲಕ ಒಂದಿಡೀ ಸಮಾಜವನ್ನು ಜಾಗೃತಗೊಳಿಸಬಲ್ಲಂಥ ಅವಕಾಶವೂ ಕೈತಪ್ಪಿ ಹೋಗುತ್ತದೆ. ಮೊನ್ನೆ ಸಾವಿಗೀಡಾದ ವಿದ್ಯಾರ್ಥಿನಿಯೋರ್ವಳು ಮಾಧ್ಯಮಗಳ ಇಂಥ ಧೋರಣೆಯನ್ನು ಮತ್ತೊಮ್ಮೆ ಪ್ರಶ್ನೆಗೀಡು ಮಾಡಿದ್ದಾಳೆ.
 ಬಾವಿಕಟ್ಟೆಯಲ್ಲಿ ಕೂತು ಪರೀಕ್ಷೆಗೆ ಓದುತ್ತಿದ್ದ ಉಡುಪಿಯ ಉದ್ಯಾವರ ಸಮೀಪದ ಬೋಳಾರಗುಡ್ಡೆಯ ಸನಾ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ತಾಯಿ ಚಹಾ ಕುಡಿಯಲೆಂದು ಕರೆಯುತ್ತಾರೆ. ಆಕೆ ಬಾವಿಕಟ್ಟೆಗೆ ಹಾಕಿರುವ ಹಗ್ಗದ ಮೇಲೆ ಬಲ ಹಾಕಿ ಮೇಲೇಳಲು ಪ್ರಯತ್ನಿಸುತ್ತಾಳೆ. ಆದರೆ ಆಯ ತಪ್ಪಿದ ಆಕೆ ಬಾವಿಗೆ ಬಿದ್ದು ಸಾವಿಗೀಡಾಗಿದ್ದಾಳೆ.
 ನಿಜವಾಗಿ, ಇಂಥ ಅನಿರೀಕ್ಷಿತ ಸಾವುಗಳು ಇವತ್ತು ಯಾವುದಾದರೊಂದು ಪ್ರದೇಶಕ್ಕೆ ಸೀಮಿತವಾಗಿ ಉಳಿದಿಲ್ಲ. ಪತ್ರಿಕೆಗಳ ಒಳಪುಟಗಳನ್ನು ನೋಡಿದರೆ ನಮ್ಮನ್ನು ಒಂದು ಕ್ಷಣ ಆಘಾತಕ್ಕೆ ಒಳಪಡಿಸುವ, ‘ಛೆ' ಎಂಬ ಉದ್ಗಾರಕ್ಕೆ ಬಲವಂತಪಡಿಸುವ ಸುದ್ದಿಗಳು ಹತ್ತಾರು ಇರುತ್ತವೆ. ಆದರೆ ಅವುಗಳು ಪತ್ರಿಕೆಗಳ ಒಳಪುಟಗಳಲ್ಲಿ ಪ್ರಕಟ ಆಗುವುದರಿಂದ ಓದುಗರ ಗಮನವನ್ನು ಸೆಳೆಯುವುದಕ್ಕೆ ಯಶಸ್ವಿಯಾಗುತ್ತಿಲ್ಲ. ಅಲ್ಲದೇ ಒಳಪುಟಗಳೆಂದರೆ ಮುಖಪುಟಗಳಂತೆ ಅಲ್ಲವಲ್ಲ. ಅದು ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುತ್ತಿರುತ್ತದೆ. ಒಂದು ವೇಳೆ ಸನಾ ನಮ್ಮ ಮಾಧ್ಯಮಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್ ಆಗಿರುತ್ತಿದ್ದರೆ ಸಾರ್ವಜನಿಕರನ್ನು ಅದು ಹೇಗೆ ತಟ್ಟುತ್ತಿತ್ತು? ಯಾವ ಬಗೆಯ ಚರ್ಚೆಗೆ ಅದು ಕಾರಣವಾಗುತ್ತಿತ್ತು? ತನ್ನ ಮಗು ತನ್ನ ಕಣ್ಣೆದುರೇ ಬಾವಿಗೆ ಬೀಳುವುದನ್ನು ಓರ್ವ ತಾಯಿ ಹೇಗೆ ಸಹಿಸಬಲ್ಲಳು ಎಂಬ ಭಾವನಾತ್ಮಕ ವಿಷಯವಷ್ಟೇ ಅಲ್ಲಿ  ಚರ್ಚೆಗೆ ಒಳಗಾಗುತ್ತಿದ್ದುದಲ್ಲ. ಮಗುವನ್ನು ಆ ಸ್ಥಿತಿಗೆ ದೂಡಿದ ಪರೀಕ್ಷೆ ಮತ್ತು ಅದರ ಒತ್ತಡಗಳೂ ಚರ್ಚೆಗೊಳಗಾಗುತ್ತಿತ್ತಲ್ಲವೇ? ಪರೀಕ್ಷೆ ಯಾವಾಗಲೂ ವಿದ್ಯಾರ್ಥಿಗಳನ್ನು ಒತ್ತಡಕ್ಕೆ ಸಿಲುಕಿಸಿರುತ್ತದೆ. ಆ ಸಂದರ್ಭದಲ್ಲಿ ಅವರ ಮನಸು, ದೇಹ ಸಹಜ ಆಗಿರುವುದಿಲ್ಲ. ಹಾಗಂತ, ಇಂದಿನ ದಿನಗಳಲ್ಲಿ ಪರೀಕ್ಷೆ ಎಂದರೆ ಬರೇ ಪಾಸು-ಫೇಲು ಮಾತ್ರ ಅಲ್ಲವಲ್ಲ. ಶಿಕ್ಷಕರು ಮತ್ತು ಮನೆಯವರ ಒತ್ತಡ, ಗೆಳೆಯರ ನಡುವಿನ ಸ್ಪರ್ಧೆ.. ಹೀಗೆ ಎಲ್ಲವೂ ಒಟ್ಟಾಗಿರುವ ವಾತಾವರಣವದು. ಒಂದು ರೀತಿಯಲ್ಲಿ, ವಿದ್ಯಾರ್ಥಿಗಳು ಒತ್ತಡ ಎಂಬ ಪ್ರೆಶರ್ ಕುಕ್ಕರ್‍ನಲ್ಲಿ ಕುಳಿತಿರುತ್ತಾರೆ. ಹೆಚ್ಚು ಅಂಕ ಪಡೆಯಬೇಕು, ಇಷ್ಟು ಅಂಕ ಪಡೆದರೆ ಇಂತಿಂಥ ಕಾಲೇಜಿನಲ್ಲಿ ಇಂತಿಂಥ ಕೋರ್ಸ್‍ಗೆ ಸೇರ್ಪಡೆ ಆಗಬಹುದು ಎಂಬೆಲ್ಲ ಲೆಕ್ಕಾಚಾರಗಳನ್ನು ಹಾಕಿರುತ್ತಾರೆ. ಅದಕ್ಕೆ ಪೂರಕವಾಗಿ ಹೆತ್ತವರು ಆಗಾಗ ತಮ್ಮ ಕುಟುಂಬದಲ್ಲಿ ಉನ್ನತ ಉದ್ಯೋಗದಲ್ಲಿರುವ ಬುದ್ಧಿವಂತ ಮಕ್ಕಳ ಕತೆಗಳನ್ನು ಹೇಳುತ್ತಿರುತ್ತಾರೆ. ಹೀಗೆ ತಮ್ಮ ಹೆತ್ತವರದ್ದೋ ಶಿಕ್ಷಕರದ್ದೋ ಗುರಿಗಳನ್ನು ಪೂರ್ತಿ ಮಾಡುವುದಕ್ಕಾಗಿ ಕನಸುಗಳೊಂದಿಗೆ ಬದುಕುವ ಮಕ್ಕಳು ಪರೀಕ್ಷೆ ತಯಾರಿಯ ಸಂದರ್ಭದಲ್ಲಂತೂ ವಿಪರೀತ ಒತ್ತಡಕ್ಕೆ ಒಳಗಾಗುತ್ತಾರೆ. ಈ ಒತ್ತಡದಲ್ಲಿ ತಾವು ಪರೀಕ್ಷೆಗೆ ತಯಾರಿ ನಡೆಸುವುದಕ್ಕಾಗಿ ಆಯ್ಕೆ ಮಾಡಿಕೊಳ್ಳುವ ಸ್ಥಳ, ಆಹಾರ, ಬಟ್ಟೆಗಳ ಬಗ್ಗೆಯೂ ಅವರು ಗಂಭೀರವಾಗಿರುವುದಿಲ್ಲ. ಆದ್ದರಿಂದಲೇ ಕೆಲವೊಮ್ಮೆ ಆಘಾತಕಾರಿ ಘಟನೆಗಳು ನಡೆದು ಬಿಡುತ್ತವೆ. ಸನಾ ಅದರ ಒಂದು ಉದಾಹರಣೆ ಅಷ್ಟೇ.
   ಮಕ್ಕಳು ಯಾವುದೇ ಹೆತ್ತವರ ಪಾಲಿಗೆ ದೊಡ್ಡದೊಂದು ಭರವಸೆಯಾಗಿದ್ದಾರೆ. ಅಂಥ ಮಕ್ಕಳನ್ನು ಕಣ್ಣೆದುರೇ ಕಳಕೊಳ್ಳುವುದು ಯಾವ ಹೆತ್ತವರಿಗೇ ಆಗಲಿ ಸಹಿಸಲಸಾಧ್ಯವಾದ ನೋವು ಕೊಡಬಲ್ಲುದು. ಆದರೆ ಅದರಾಚೆಗೆ ಇನ್ನೊಂದು ಗಂಭೀರ ಸಂಗತಿಯಿದೆ. ಅದೇನೆಂದರೆ, ಪರೀಕ್ಷಾ ತಯಾರಿಯ ವೇಳೆ ಮಕ್ಕಳ ಬಗ್ಗೆ ಪೋಷಕರು ಗಂಭೀರ ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು  ಎಂಬುದು. ಅವರ ಚಟುವಟಿಕೆಯನ್ನು ಹೆತ್ತವರು ಗಮನಿಸುತ್ತಿರಬೇಕು. ಒತ್ತಡ ರಹಿತ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಬೇಕು. ಪರೀಕ್ಷೆಯಲ್ಲಿ ಮಗು ಇವತ್ತು ಫೇಲ್ ಆದರೆ ನಾಳೆ ಪಾಸ್ ಆಗಬಹುದು. ಆದರೆ ಮಗುವನ್ನೇ ಕಳಕೊಂಡರೆ ಆ ಅವಕಾಶವೇ ಇರುವುದಿಲ್ಲವಲ್ಲ.

No comments:

Post a Comment