Wednesday 30 April 2014

ದೇವೀಶ್ರೀಯ ಜ್ಯೋತಿಷ್ಯಕ್ಕೆ ಕ್ಷಿಪಣಿ ಹಾರಿಸಿದ ವಿಜ್ಞಾನಿಗಳು

    ಕಳೆದ ಆದಿತ್ಯವಾರ (ಎಪ್ರಿಲ್ 27)ದಂದು ಪತ್ರಿಕೆಗಳಲ್ಲಿ ಎರಡು ಪ್ರಮುಖ ಸುದ್ದಿಗಳು ಪ್ರಕಟವಾದುವು. ಬಹುತೇಕ ಎಲ್ಲ ಪತ್ರಿಕೆಗಳೂ ಈ ಎರಡೂ ಸುದ್ದಿಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದಲ್ಲದೇ, ಓದುಗರ ಗಮನ ಸೆಳೆಯಬಲ್ಲ ಪುಟಗಳಲ್ಲಿ ಅವನ್ನು ಮುದ್ರಿಸಿದ್ದುವು. ದೇವಿಶ್ರೀ ಎಂಬ ಬೆಂಗಳೂರಿನ ಸ್ವಾಮಿಯೋರ್ವರು, ‘ಜ್ಯೋತಿಷ್ಯ' ಕೇಳಿ ಬರುವ ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿರುವ ಪ್ರಕರಣ ಇವುಗಳಲ್ಲಿ ಒಂದಾದರೆ; ಆಕಾಶ್ ಮಾದರಿಯ ಪೈಲಟ್ ರಹಿತ ಎರಡು ಕ್ಷಿಪಣಿಗಳನ್ನು ಈ ದೇಶ ಯಶಸ್ವಿಯಾಗಿ ಪರೀಕ್ಷಿಸಿದ್ದು ಇನ್ನೊಂದು. ಒಂದು ಸುದ್ದಿ ವಿಜ್ಞಾನಕ್ಕೆ ಸಂಬಂಧಿಸಿದ್ದಾದರೆ ಇನ್ನೊಂದು ಜ್ಯೋತಿಷ್ಯಕ್ಕೆ ಸಂಬಂಧಿಸಿದ್ದು. ಖುಷಿಯ ಸಂಗತಿ ಏನೆಂದರೆ, ಜ್ಯೋತಿಷಿ ನಾಪತ್ತೆಯಾಗಿದ್ದಾನೆ. ಆದರೆ ಕ್ಷಿಪಣಿ ಪರೀಕ್ಷೆಯು ಯಶಸ್ವಿಯಾಗಿದೆ. ಕ್ಷಿಪಣಿ ನಿರ್ಮಾಣ ಕಾರ್ಯದ ನಿರ್ದೇಶಕರಾದ ಚಂದ್ರಮೌಳಿಯವರು ಪತ್ರಿಕಾಗೋಷ್ಠಿಯಲ್ಲಿ ಒಟ್ಟು ಕಾರ್ಯ ಯೋಜನೆಯ ಬಗ್ಗೆ ಹೆಮ್ಮೆಯಿಂದ ವಿವರಿಸುತ್ತಿದ್ದರೆ, ಅತ್ತ ಪೊಲೀಸ್ ಅಧಿಕಾರಿಗಳು ದೇವಿಶ್ರೀಯ ವಂಚನೆಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಅವಿನಾಶ್ ಚಂದರ್ ಸೇರಿದಂತೆ ಹಲವು ಪ್ರಮುಖರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತಿರುವ ಹೊತ್ತಲ್ಲೇ ಅಸಂಖ್ಯ ಮಂದಿ ದೇವಿಶ್ರೀಗೆ ಹಿಡಿಶಾಪ ಹಾಕುತ್ತಿದ್ದರು. ಒಂದು ವೇಳೆ ಆತ ಕೈಗೆ ಸಿಕ್ಕರೆ ಸಾಯಿಸಿಬಿಡುವಷ್ಟು ಆಕ್ರೋಶ ಪ್ರತಿಭಟನಾಕಾರರಲ್ಲಿತ್ತು.
 ಕೆಲವು ತಿಂಗಳುಗಳ ಹಿಂದೆ ರಾಜ್ಯದಲ್ಲಿ ಮೂಢನಂಬಿಕೆಯ ಸುತ್ತ ಗಂಭೀರ ಚರ್ಚೆ ನಡೆದಿತ್ತು. ಯಾವುದು ನಂಬಿಕೆ ಮತ್ತು ಯಾವುದು ಮೂಢನಂಬಿಕೆ ಎನ್ನುವ ಬಗ್ಗೆ ಪತ್ರಿಕೆ ಮತ್ತು ಟಿವಿ ಚಾನೆಲ್‍ಗಳಲ್ಲಿ ಅನೇಕರು ತಮ್ಮ ವಾದವನ್ನು ಮಂಡಿಸಿದ್ದರು. ಸರಕಾರವು ತರಲುದ್ದೇಶಿಸಿರುವ ‘ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ'ಯನ್ನು ಸಾರಾಸಗಟು ಖಂಡಿಸಿ, ಈ ಕಾಯ್ದೆಯು ನಿರ್ದಿಷ್ಟ ಧರ್ಮವೊಂದರ ಮೇಲೆ ಮಾಡುವ ಸವಾರಿಯಾಗುತ್ತದೆಂದು ಹಲವರು ವಾದಿಸಿದ್ದರು. ಆ ಸಂದರ್ಭಗಳಲ್ಲೆಲ್ಲಾ ಜ್ಯೋತಿಷ್ಯದ ಪ್ರಸ್ತಾಪ ಆಗುತ್ತಲೇ ಇತ್ತು. ಸಮಾಜದ ಒಂದು ದೊಡ್ಡ ಗುಂಪು ಜ್ಯೋತಿಷ್ಯವನ್ನು ಪ್ರಬಲವಾಗಿ ವಿರೋಧಿಸುತ್ತಿರುವುದರ ಹೊರತಾಗಿಯೂ ಅದು ಜನಪ್ರಿಯವಾಗಿದ್ದರೆ ಅದಕ್ಕೆ ಟಿ.ವಿ. ಚಾನೆಲ್‍ಗಳೇ ಕಾರಣ ಎಂದು ಆರೋಪಿಸಿದವರು ಧಾರಾಳ ಮಂದಿ ಇದ್ದರು. ಇವತ್ತು ಬಹುತೇಕ ಎಲ್ಲ ಕನ್ನಡ ಚಾನೆಲ್‍ಗಳೂ ಬೆಳಗ್ಗೆ ಜ್ಯೋತಿಷ್ಯ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತವೆ. ‘ಗೂಬೆ ಅನಿಷ್ಟ, ಗೂಬೆ ಹೊಕ್ಕ ಮನೆ ತೊರೆಯಬೇಕು’ ಎಂದು ಒಂದು ಚಾನೆಲ್‍ನಲ್ಲಿ ಜ್ಯೋತಿಷಿಯೋರ್ವ ಹೇಳಿದರೆ, ‘ಬೆಳಗ್ಗೆ ಎದ್ದ ತಕ್ಷಣ ಗೂಬೆಯ ಮುಖ ನೋಡುವುದರಿಂದ ಶುಭವಾಗುತ್ತದೆ' ಎಂದು ಇನ್ನೊಂದು ಚಾನೆಲ್‍ನಲ್ಲಿ ಇನ್ನೋರ್ವ ಜ್ಯೋತಿಷಿ ಹೇಳುತ್ತಾನೆ. ಮನೆಯ ಬಾಗಿಲು ಯಾವ ಕಡೆಗಿದ್ದರೆ ಶುಭ, ಯಾವ ಕಡೆಗಿದ್ದರೆ ಸಾವು ಬರುತ್ತದೆ, ಪತಿ-ಪತ್ನಿ ವಿರಸಕ್ಕೆ ಯಾವ ಕುಂಡಲಿ ಕಾರಣ, ಅತ್ತೆಯನ್ನು ಪಳಗಿಸುವುದಕ್ಕೆ ಏನು ತಂತ್ರ, ಗಂಡನನ್ನು ಒಲಿಸಿಕೊಳ್ಳುವುದಕ್ಕೆ ಯಾವ ಹರಕೆ.. ಎಂಬುದನ್ನೆಲ್ಲಾ ಚಾನೆಲ್‍ನ ಜ್ಯೋತಿಷಿಗಳು ಎಷ್ಟು ನಿರ್ಲಜ್ಜೆಯಿಂದ ಹೇಳುತ್ತಾರೆಂದರೆ ಒಂದು ವೇಳೆ ಅದೇ ಮಾತನ್ನು ಸಾಮಾನ್ಯ ವ್ಯಕ್ತಿಯೊಬ್ಬ ವೇದಿಕೆಯೇರಿ ಹೇಳಿದರೆ, ಆತನ ಮೇಲೆ ಸಾರ್ವಜನಿಕ ಶಾಂತಿಯನ್ನು ಕದಡಿದ ಆರೋಪದಲ್ಲಿ ಪೊಲೀಸರು ಮೊಕದ್ದಮೆ ಹೂಡಬಹುದು. ದುರಂತ ಏನೆಂದರೆ, ದೇವಿಶ್ರೀ ಕೂಡ ಒಂದು ಕನ್ನಡ ಚಾನೆಲ್‍ನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ!
 ಅಂಧಶ್ರದ್ಧೆಗಳನ್ನು ಸಮಾಜದಿಂದ ಒದ್ದೋಡಿಸಲು ಪ್ರಭಾವಿ ಪಾತ್ರವನ್ನು ನಿರ್ವಹಿಸಬಹುದಾದ ಮಾಧ್ಯಮಗಳೇ ಜ್ಯೋತಿಷಿಗಳಿಗೆ ವೇದಿಕೆ ಕೊಡುವಾಗ ತಪ್ಪಿತಸ್ಥನಾಗಿ ನಾವು ಕೇವಲ ದೇವಿಶ್ರೀಯನ್ನು ಮಾತ್ರ ಯಾಕೆ ನೋಡಬೇಕು? ಇಂಥವರಿಗೆ ವೇದಿಕೆ ಒದಗಿಸುವ ಮಾಧ್ಯಮಗಳನ್ನೂ  ಯಾಕೆ ಈ ಪಟ್ಟಿಗೆ ಸೇರಿಸಬಾರದು? ಇಷ್ಟಕ್ಕೂ ಜ್ಯೋತಿಷ್ಯ ಎಷ್ಟರ ಮಟ್ಟಿಗೆ ಧರ್ಮಬದ್ಧ? ಹುಲು ಮಾನವ ಇನ್ನೋರ್ವ ಮಾನವನ ಭವಿಷ್ಯವನ್ನು ಹೇಳುವುದಕ್ಕೆ ಸಮರ್ಥನಾಗುವುದು ಹೇಗೆ? ಅದಕ್ಕಿರುವ ಆಧಾರಗಳೇನು? ಓರ್ವನನ್ನು ಅಸಲಿ ಜ್ಯೋತಿಷಿ ಎಂದು ಪರಿಗಣಿಸುವುದಕ್ಕೆ ಯಾವುದು ಮಾನದಂಡ? ಅಸಲಿ ಮತ್ತು ನಕಲಿಗಳನ್ನು ವಿಭಜಿಸುವುದಕ್ಕೆ ಏನಿವೆ ಮಾನದಂಡಗಳು? ಜ್ಯೋತಿಷಿಗೆ ಭವಿಷ್ಯದ ಆಗು-ಹೋಗುಗಳ ಬಗ್ಗೆ ಸ್ಪಷ್ಟ ಜ್ಞಾನ ಇರುತ್ತದೆಂದಾದರೆ ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಈಗಾಗಲೇ ಘೋಷಿಸಿ ಬಿಡಬಹುದಲ್ಲವೇ? ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಮತ್ತು ಯಾರ್ಯಾರು ಎಲ್ಲೆಲ್ಲಿ ಗೆಲ್ಲುತ್ತಾರೆ ಎಂದು ಹೇಳಬಹುದಲ್ಲವೇ? ಪಾರ್ಲಿಮೆಂಟ್ ಆಕ್ರಮಣ, ಕಾರ್ಗಿಲ್ ಸಂಘರ್ಷ, ಮುಂಬೈ ದಾಳಿಯಂಥ ಗಂಭೀರ ಪ್ರಕರಣಗಳು ನಡೆದಾಗ ನಮ್ಮ ಜ್ಯೋತಿಷಿಗಳೆಲ್ಲ ಯಾಕೆ ಅದನ್ನು ಮುಂಚಿತವಾಗಿ ಕಂಡುಕೊಂಡು ದೇಶವನ್ನು ಎಚ್ಚರಿಸಲಿಲ್ಲ? ದೇಶದ ಮೇಲೆ ಆಗಬಹುದಾದ ಆಕ್ರಮಣವನ್ನು ತಿಳಿದೂ ಸತ್ಯ ಮುಚ್ಚಿಡುವುದು ದೇಶದ್ರೋಹವಲ್ಲವೇ? ಒಂದು ವೇಳೆ, ಈ ಮಂದಿ ಕಾರ್ಗಿಲ್ ಆಕ್ರಮಣದ ಬಗ್ಗೆ ಮೊದಲೇ ತಿಳಿಸಿರುತ್ತಿದ್ದರೆ ನೂರಾರು ಯೋಧರ ಪ್ರಾಣ ಉಳಿಯುತ್ತಿತ್ತು. ಮುಂಬೈ ದಾಳಿಗೆ ಬಲಿಯಾದ 150ರಷ್ಟು ನಾಗರಿಕರು ಬದುಕಿ ಉಳಿಯುತ್ತಿದ್ದರು. ಕಳೆದ ವಾರ ಜಾತಿ ಭೂತಕ್ಕೆ ಬಲಿಯಾದ ಮಂಡ್ಯದ ಶಿಲ್ಪಾ ನಾಯಕ್ ಎಂಬ ಯುವತಿಯನ್ನು ಉಳಿಸಿಕೊಳ್ಳಬಹುದಿತ್ತು. ಜ್ಯೋತಿಷ್ಯದ ಪರ ವಾದಿಸುವವರೆಲ್ಲ ಯಾಕೆ ಇಂಥ ಸಂದರ್ಭಗಳಲ್ಲಿ ಮೌನವಿರುತ್ತಾರೆ? ಅಷ್ಟೇ ಅಲ್ಲ, ಜ್ಯೋತಿಷ್ಯದಲ್ಲಿ ತೊಡಗಿಸಿಕೊಂಡವರಲ್ಲಿ ಬಹುತೇಕ ಎಲ್ಲರೂ ಪುರುಷರೇ. ಅಲ್ಲದೇ, ಜ್ಯೋತಿಷಿಗಳ ದುರ್ಬಳಕೆಗೆ ಒಳಗಾಗುವವರಲ್ಲಿ ಹೆಚ್ಚಿನವರೂ ಮಹಿಳೆಯರೇ. ಏನಿವೆಲ್ಲ? ಜ್ಯೋತಿಷ್ಯ ಧರ್ಮಬದ್ಧ ಕಾರ್ಯ ಎಂದಾದರೆ, ಯಾಕೆ ಈ ಕ್ಷೇತ್ರದಲ್ಲಿ ಈ ಮಟ್ಟದ ಅಸಮಾನತೆಗಳಿವೆ? ಮಹಿಳೆಯರು ಜ್ಯೋತಿಷ್ಯ ಹೇಳುವುದಕ್ಕೆ ಧರ್ಮದಲ್ಲಿ ತೊಡಕುಗಳಿವೆಯೇ? ಇಲ್ಲ ಎಂದಾದರೆ ಯಾಕೆ ಈ ಕ್ಷೇತ್ರದಲ್ಲಿ ಪುರುಷರೇ ತುಂಬಿಕೊಂಡಿದ್ದಾರೆ? ನಿಜವಾಗಿ, ಧರ್ಮಕ್ಕೂ ಜ್ಯೋತಿಷ್ಯಕ್ಕೂ ಸಂಬಂಧವೇ ಇಲ್ಲ ಎಂಬುದಕ್ಕೆ ಈ ಅಸಮಾನತೆಗಳೇ ಅತಿ ಪ್ರಬಲ ಪುರಾವೆ. ಮಹಿಳೆಯರನ್ನು ಮತ್ತು ಮುಗ್ಧ ಪುರುಷರನ್ನು ವಂಚಿಸುವುದಕ್ಕಾಗಿಯೇ ಇದನ್ನು ಹುಟ್ಟು ಹಾಕಲಾಗಿದೆ. ಯಾವಾಗೆಲ್ಲ ಇದರ ವಿರುದ್ಧ ಧ್ವನಿಗಳೇಳುತ್ತವೋ ಆಗೆಲ್ಲ ಇದಕ್ಕೆ ಧಾರ್ಮಿಕ ವೇಶವನ್ನು ತೊಡಿಸಲಾಗುತ್ತದೆ.
   ಆಕಾಶ್  ಕ್ಷಿಪಣಿಯ ಯಶಸ್ವಿ ಉಡಾವಣೆ ಮತ್ತು ಜ್ಯೋತಿಷಿ ದೇವಿಶ್ರೀಯ ನಿಗೂಢ ಪರಾರಿಯು ಜ್ಯೋತಿಷ್ಯದ ಪೊಳ್ಳುತನವನ್ನೂ ವಿಜ್ಞಾನದ ಗೆಲುವನ್ನೂ ಸಾರಿ ಹೇಳಿದೆ. ಅಂದಹಾಗೆ, ಇದು ಈ ಹಿಂದೆ ಮೂಢನಂಬಿಕೆಯ ಸುತ್ತ  ರಾಜ್ಯದಲ್ಲಿ ನಡೆದ ಗಂಭೀರ ಚರ್ಚೆಯ ಬಳಿಕ ಎದುರಾದ ಮೊದಲ ಮುಖಾಮುಖಿ. ವಿಜ್ಞಾನಿಗಳ ಕ್ಷಿಪಣಿ ಮತ್ತು ದೇವಿಶ್ರೀಯ ಜ್ಯೋತಿಷ್ಯದ ನಡುವಿನ ಈ ಮುಖಾಮುಖಿಯಲ್ಲಿ ಜ್ಯೋತಿಷ್ಯವು ದಯನೀಯ ಸೋಲನ್ನು ಒಪ್ಪಿಕೊಂಡಿದೆ. ಜ್ಯೋತಿಷ್ಯವನ್ನು ಪವಿತ್ರವೆಂದು ನಂಬುವವರಿಗೆಲ್ಲ ಈ ಸೋಲು ಪಾಠವಾಗಬೇಕು. ವಿಜ್ಞಾನವು ಶ್ರಮವಾದರೆ ಜ್ಯೋತಿಷ್ಯವು ಅದರ ವಿರುದ್ಧ ಪದ. ಈ ವಿರುದ್ಧ ಪದವನ್ನೇ ವೈಭವೀಕರಿಸಿ ಹೊಟ್ಟೆ ತುಂಬಿಸಿಕೊಳ್ಳುವವರನ್ನು ಪ್ರಶ್ನಿಸುವುದಕ್ಕೆ ದೇವಿಶ್ರೀ ಪ್ರಕರಣವನ್ನು ಜನರು ನೆಪವಾಗಿ ಬಳಸಿಕೊಳ್ಳಬೇಕು. ಈ ದೇಶಕ್ಕೆ ಅಗತ್ಯ ಇರುವುದು ಚಂದ್ರಮೌಳಿಯಂಥ ವಿಜ್ಞಾನಿಗಳೇ ಹೊರತು ಗೂಬೆಯನ್ನೋ ಬಾಗಿಲನ್ನೋ ಶಕುನ-ಅಪಶಕುನಗಳ ಪಟ್ಟಿಯಲ್ಲಿಟ್ಟು ಬೆದರಿಸುವ ಜ್ಯೋತಿಷಿಗಳಲ್ಲ ಎಂದು ಸಾರಿ ಹೇಳಬೇಕು. ಆಕಾಶ್ ಕ್ಷಿಪಣಿಗಾಗಿ ಬೆವರು ಸುರಿಸಿದ ವಿಜ್ಞಾನಿಗಳನ್ನು ಅಭಿನಂದಿಸುತ್ತಲೇ ಮೂಢನಂಬಿಕೆಗೆ ಸಡ್ಡು ಹೊಡೆಯುವ ಇಂಥ ಸಂದರ್ಭಗಳನ್ನು ವಿಜ್ಞಾನ ಕ್ಷೇತ್ರ ಮತ್ತೆ ಮತ್ತೆ ಸೃಷ್ಟಿಸುತ್ತಲೇ ಇರಲಿ ಎಂದೂ ಹಾರೈಸಬೇಕಾಗಿದೆ.

Wednesday 23 April 2014

ಕಬೀರ್ ನಿಗೆ ಗುಂಡಿಕ್ಕಿದ ಮನುಷ್ಯ ವಿರೋಧಿಗಳ ಪರಮ ಸುಳ್ಳುಗಳು

   ಕಾಡಿನಿಂದ ನಾಡಿಗೆ ಬಂದು ಭೀತಿ ಹುಟ್ಟಿಸುವ ಹುಲಿಯನ್ನೋ ಚಿರತೆಯನ್ನೋ ಜೀವಂತ ಹಿಡಿಯುವುದಕ್ಕೆ ವಿವಿಧ ರೀತಿಯ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುವ ಇಂದಿನ ದಿನಗಳಲ್ಲಿ; ಮನುಷ್ಯರ ಮೇಲೆ ಕನಿಷ್ಠ ಈ ಮಟ್ಟದ ಸೌಜನ್ಯವನ್ನು ತೋರುಲೂ ನಮ್ಮ ವ್ಯವಸ್ಥೆಗೆ ಸಾಧ್ಯವಾಗುವುದಿಲ್ಲವೆಂದರೆ, ಏನೆನ್ನಬೇಕು? ಕಬೀರ್; ನರಹಂತಕ ಹುಲಿಯೋ ಚಿರತೆಯೋ ಆಗಿರಲಿಲ್ಲ. ನಕ್ಸಲ್ ನಿಗ್ರಹ ಪಡೆಯ ಮೇಲೆ ಎರಗಿ ಹತ್ಯೆ ಮಾಡಬಲ್ಲಂತಹ ಕೋರೆ ಹಲ್ಲುಗಳೋ, ಉಗುರುಗಳೋ ಅಥವಾ ಆಯುಧಗಳೋ ಆತನಲ್ಲಿರಲಿಲ್ಲ. ಆತನ ಮೇಲೆ ಭಯೋತ್ಪಾದನೆಯ ಯಾವ ಆರೋಪಗಳೂ ಇರಲಿಲ್ಲ. ಮನುಷ್ಯರೆಂಬ ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆಗೂ ಕಬೀರ್‍ನಿಗೂ ನಡುವೆ ಇದ್ದ ವ್ಯತ್ಯಾಸ ಅಂದರೆ, ಆತ ಜಾನುವಾರುಗಳ ಜೊತೆಗಿದ್ದ. ಇವರು ಬಂದೂಕುಗಳ ಜೊತೆಗಿದ್ದರು. ಜಾನುವಾರುಗಳ ಜೊತೆಗಿರುವುದು ಓರ್ವ ವ್ಯಕ್ತಿಯ ಹತ್ಯೆಗೆ ಕಾರಣವಾಗುವಷ್ಟು ಭೀಕರ ಅಪರಾಧವೇ? ಅದು ಅಕ್ರಮ ಜಾನುವಾರು ಸಾಗಾಟ ಎಂದೇ ಇಟ್ಟುಕೊಳ್ಳೋಣ. ಆದರೆ ಅದಕ್ಕಿರುವ ಶಿಕ್ಷೆ ಯಾವುದು? ಅದನ್ನು ಜಾರಿ ಮಾಡಬೇಕಾದವರು ಯಾರು? ಅಷ್ಟಕ್ಕೂ, ನಿರಾಯುಧನಾದ ಓರ್ವ ಯುವಕನನ್ನು ಗುಂಡಿಟ್ಟು ಕೊಲ್ಲುವಷ್ಟು ನಕ್ಸಲ್ ನಿಗ್ರಹ ಪಡೆಯಲ್ಲಿರುವವರ ಮನಸ್ಸು ದ್ವೇಷಮಯವಾಗಿದೆಯೆಂದರೆ, ಇನ್ನು ಅಯುಧಧಾರಿಗಳಾದ ನಕ್ಸಲರನ್ನು ಇವರು ಹೇಗೆ ನಡೆಸಿಕೊಂಡಾರು?
 ಮುಸ್ಲಿಮರನ್ನು ಬೆತ್ತಲೆಗೊಳಿಸಲು, ಹಲ್ಲೆ ನಡೆಸಲು ಮತ್ತು ಹಿಂದೂ ವಿರೋಧಿಗಳಂತೆ ಬಿಂಬಿಸಲು ಜಾನುವಾರುಗಳು ಕರಾವಳಿ ಭಾಗದಲ್ಲಿ ಅಸಂಖ್ಯ ಬಾರಿ ಬಳಕೆಯಾಗಿವೆ. ಈ ದೇಶದಲ್ಲಿ ಬಾಂಬ್ ಭಯೋತ್ಪಾದನೆಯು ಗಂಭೀರ ಚರ್ಚೆಗೆ ಒಳಪಟ್ಟ ಆಸುಪಾಸಿನಲ್ಲೇ ಕರಾವಳಿ ಭಾಗದಲ್ಲಿ ಸ್ಫೋಟಗೊಂಡ ಬಾಂಬ್ ಇದು. ಸುಮಾರು 10 ವರ್ಷಗಳ ಹಿಂದೆ ಉಡುಪಿ ಬಳಿಯ ಹಾಜಬ್ಬ ಮತ್ತು ಹಸನಬ್ಬ ಎಂಬ ಅಪ್ಪ-ಮಗನನ್ನು ಬೆತ್ತಲೆಗೊಳಿಸುವ ಮೂಲಕ ಈ ಬಾಂಬನ್ನು ಅದ್ದೂರಿಯಾಗಿ ಸ್ಫೋಟಿಸಲಾಯಿತು. ಆ ಸ್ಫೋಟ ಎಷ್ಟು ಕ್ರೂರವಾಗಿತ್ತೆಂದರೆ, ಅಪ್ಪ ಮತ್ತು ಮಗ ಬೆತ್ತಲೆಯಾಗಿ ಮೈದಾನಕ್ಕೆ ಸುತ್ತು ಬರುವಷ್ಟು ಮತ್ತು ನೆರೆದ ಜನರು ಅದನ್ನು ಕ್ರೀಡೆಯಂತೆ ವೀಕ್ಷಿಸುವಷ್ಟು. ಆ ಬಳಿಕ, ‘ಅಕ್ರಮ ಗೋಸಾಗಾಟ ಮತ್ತು ಹಲ್ಲೆ’ ಎಂಬ ಶೀರ್ಷಿಕೆಯಲ್ಲಿ ನೂರಾರು ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಇಲ್ಲಿಯ ವಿಶೇಷತೆ ಏನೆಂದರೆ, ಈ ಸುದ್ದಿಗಳ ಕಣ್ಣು, ಕಿವಿ, ಕೈ, ಬಾಯಿ, ಕಾಲು, ಮೂಗು ಎಲ್ಲವೂ ಮುಸ್ಲಿಮರದ್ದೇ ಆಗಿರುವುದು. `ಅಕ್ರಮ ಗೋ ಸಾಗಾಟ' ಎಂಬ ಶೀರ್ಷಿಕೆ ಕಂಡ ಕೂಡಲೇ ಅಪರಾಧಿ ಯಾರು ಎಂದು ತೀರ್ಮಾನವಾಗಿ ಬಿಡುತ್ತದೆ. `ಅಕ್ರಮ' ಎಂಬ ಪದ ಶೀರ್ಷಿಕೆಯಲ್ಲೇ ಇರುವುದರಿಂದ, ‘ಶಿಕ್ಷೆ ಆಗಲೇ ಬೇಕು’ ಎಂಬ ಸಂದೇಶವನ್ನು ಆ ಸುದ್ದಿ ರವಾನಿಸಿ ಬಿಡುತ್ತದೆ. ಆದ್ದರಿಂದಲೇ, ಶಿಕ್ಷೆ ನೀಡುವವರು ಗೌರವಾರ್ಹರಾಗಿ ಮತ್ತು ಶಿಕ್ಷೆಗೀಡಾಗುವವರು ಅಕ್ರಮಿಗಳಾಗಿ ಗುರುತಿಗೀಡಾಗುತ್ತಾರೆ. ಅಂದಹಾಗೆ, ಜಾನುವಾರು ಸಾಗಾಟವು ಅಕ್ರಮವೋ ಸಕ್ರಮವೋ ಎಂಬುದನ್ನು ತೀರ್ಮಾನಿಸುವುದು ಪೊಲೀಸರೋ ಅಥವಾ ಇಲ್ಲಿನ ಕಾನೂನು ವ್ಯವಸ್ಥೆಯೋ ಅಲ್ಲ. ಸ್ವಘೋಷಿತ ಜಾನುವಾರು ರಕ್ಷಕರು ಸ್ಥಳದಲ್ಲೇ ಅದನ್ನು ತೀರ್ಮಾನಿಸುತ್ತಾರೆ. ಆ ತೀರ್ಮಾನವು ಅತ್ಯಂತ ಗೌರವಾರ್ಹ ಪದಗಳೊಂದಿಗೆ ಸುದ್ದಿಯಾಗಿ ಪ್ರಕಟವಾಗುತ್ತದೆ. ಜಾನುವಾರು ಸಾಗಾಟವು ‘ಅಕ್ರಮ’ ಎಂದು ತೀರ್ಮಾನವಾದ ಬಳಿಕ ಹಲ್ಲೆ `ಸಕ್ರಮ'ವಾಗಬೇಕಾದದ್ದು ಸಹಜವಾಗಿ ಬಿಡುತ್ತದೆ. ಹೀಗೆ, ಸರಕಾರವೇ ಪರವಾನಿಗೆ ಕೊಟ್ಟ ಕಸಾಯಿಖಾನೆಗೆ ಸಾಗಿಸಲಾಗುವ ಜಾನುವಾರುಗಳು ಕರುಣಾಮಯಿ ರೂಪವನ್ನು ಪಡೆದು ಸಾಗಿಸುವವರು ಕ್ರೂರಿಗಳಾಗಿ ಹಲ್ಲೆಗೆ, ಬೆತ್ತಲೆಗೆ ಒಳಗಾಗಿ ಬಿಡುತ್ತಾರೆ. ಜಾನುವಾರುಗಳನ್ನು ಸಾಕುವವರು ಹಿಂದೂಗಳು ಮಾತ್ರ ಮತ್ತು ಅದನ್ನು ಕಡಿದು ತಿನ್ನುವವರು ಮುಸ್ಲಿಮರು ಮಾತ್ರ ಎಂಬ ಹಸಿ ಸುಳ್ಳಿಗೆ ಮರುಳಾದವರು ಇಲ್ಲಿ ಇರುವಂತೆಯೇ, ಹಿಂದೂಗಳನ್ನು ಅವಮಾನಿಸುವುದಕ್ಕಾಗಿಯೇ ಮುಸ್ಲಿಮರು ಜಾನುವಾರು ಮಾಂಸವನ್ನು ತಿನ್ನುತ್ತಾರೆ ಎಂಬ ಪರಮ ಸುಳ್ಳನ್ನೂ ನಂಬಿದವರಿದ್ದಾರೆ. ಅಷ್ಟಕ್ಕೂ, ಆಹಾರ ಸೇವಿಸುವುದು ಯಾರನ್ನಾದರೂ ಅವಮಾನಿಸುವುದಕ್ಕೆ ಎಂದಾದರೆ, ಇಲ್ಲಿ ಅವಮಾನಕ್ಕೆ ಒಳಗಾಗದ ಧರ್ಮವಾದರೂ ಯಾವುದಿದ್ದೀತು? ಆದರೆ, ಮುಸ್ಲಿಮರನ್ನು ಹಿಂದೂ ವಿರೋಧಿಗಳಂತೆ ಬಿಂಬಿಸುವ ಮೂಲಕ ರಾಜಕೀಯ ಲಾಭ ಪಡಕೊಳ್ಳುವುದಕ್ಕಾಗಿ ಒಂದು ವರ್ಗವು ಹಬ್ಬಿಸಿರುವ ಈ ಸುದ್ದಿಯು ಹಾಜಬ್ಬ-ಹಸನಬ್ಬ ಪ್ರಕರಣದಿಂದ ಹಿಡಿದು ಕಬೀರ್ ಪ್ರಕರಣದವರೆಗೆ ಸುಳ್ಳಾಗುತ್ತಲೇ ಬಂದಿದೆ. ಹಾಜಬ್ಬರ ಜಾನುವಾರು ಸಾಗಾಟ ಪ್ರಕರಣದಲ್ಲಿಯೂ ಹಿಂದೂ ಸಹೋದರರು ಭಾಗಿಯಾಗಿದ್ದರು. ಕಬೀರ್ ಪ್ರಕರಣದಲ್ಲಿ ವಾಹನದ ಚಾಲಕ ಪ್ರಮೋದ್ ಎಂಬವನಾಗಿದ್ದ. ನಿಜವಾಗಿ, ಸಾಮಾನ್ಯ ಮಂದಿ ಜಾನುವಾರು ಸಾಗಾಟವನ್ನು ಒಂದು ವ್ಯಾಪಾರವಾಗಿ ಪರಿಗಣಿಸಿದ್ದಾರೆಯೇ ಹೊರತು ಹಿಂದೂ-ಮುಸ್ಲಿಮ್ ಆಗಿ ಅಲ್ಲ. ಆದರೆ, ಈ ಕಟು ಸತ್ಯವನ್ನು ಮುಚ್ಚಿಟ್ಟು ಇಡೀ ಪ್ರಕರಣಕ್ಕೆ ಕೋಮು ಬಣ್ಣವನ್ನು ಹಚ್ಚುವಲ್ಲಿ ಒಂದು ಗುಂಪು ತೀವ್ರವಾಗಿ ಶ್ರಮಿಸುತ್ತಿದೆ. 10 ವರ್ಷಗಳ ಹಿಂದೆ ಇದೇ ಕಾರಣಕ್ಕಾಗಿ ಹಾಜಬ್ಬ ಬೆತ್ತಲೆಯಾಗಿದ್ದರೆ ಇದೀಗ ಅದರ ದಶಮಾನೋತ್ಸವ ಎಂಬಂತೆ ಕಬೀರ್‍ನ ಹತ್ಯೆ ನಡೆದಿದೆ.
 ನಿಜ, ಪೊಲೀಸರೂ ಮನುಷ್ಯರೇ. ಉತ್ಪ್ರೇಕ್ಷಿತ ಸುಳ್ಳುಗಳು ಮತ್ತು ಕೋಮುವಾದಿ ವಿಚಾರಧಾರೆಗಳು ನಿರಂತರ ಪ್ರಚಾರದಲ್ಲಿರುವಾಗ ಅವರು ಕಣ್ಣು-ಕಿವಿ ಮುಚ್ಚಿಕೊಂಡು ಇರಬಲ್ಲರೆಂದು ಹೇಳುವಂತಿಲ್ಲ. ಕೆಲವೊಮ್ಮೆ ಇಂಥ ವಿಚಾರಧಾರೆಗಳು ಅವರ ಮೇಲೂ ಪ್ರಭಾವ ಬೀರಬಹುದು. ಕೆಲವೊಮ್ಮೆ ಇಂಥ ವಿಚಾರಧಾರೆಗಳನ್ನು ಹರಡುತ್ತಿರುವವರೇ ಪೊಲೀಸ್ ಇಲಾಖೆಗೆ ಸೇರಿಕೊಳ್ಳಬಹುದು. ಇವು ಏನೇ ಆಗಿದ್ದರೂ ಇಂಥ ಬೆಳವಣಿಗೆಗಳು ಸಮಾಜದ ಪಾಲಿಗೆ ಅಪಾಯಕಾರಿಯೇ. ಕಬೀರ್ ಪ್ರಕರಣ ಮುಸ್ಲಿಮ್ ಸಮಾಜದ ಅನುಮಾನಗಳಿಗೆ ಮತ್ತೊಮ್ಮೆ ಬಲ ನೀಡಿದೆ. ಜಾನುವಾರು ಸಾಗಾಟ, ನೈತಿಕ ಪೊಲೀಸ್‍ಗಿರಿ, ಕೋಮುಗಲಭೆ.. ಮುಂತಾದ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ ನಡಕೊಳ್ಳುತ್ತಿರುವ ರೀತಿಯ ಬಗ್ಗೆ ಸಮಾಜದಲ್ಲಿದ್ದ ಅನುಮಾನವನ್ನು ಕಬೀರ್ ಪ್ರಕರಣವು ಬಲಪಡಿಸಿದೆ. 2-3 ವರ್ಷಗಳ ಹಿಂದೆ ನೌಶಾದ್ ಕಾಸಿಮ್‍ಜಿ ಎಂಬ ಯುವ ನ್ಯಾಯವಾದಿಯ ಹತ್ಯೆ ನಡೆದಾಗಲೂ ಇಂಥ ಅನುಮಾನ ದಟ್ಟವಾಗಿತ್ತು. ಆ ಹತ್ಯೆಯ ಹಿಂದೆ ವ್ಯವಸ್ಥೆಯ ಕೈವಾಡವಿದೆ ಎಂಬ ಸಂಶಯವನ್ನು ಅಸಂಖ್ಯ ಮಂದಿ ವ್ಯಕ್ತಪಡಿಸಿದ್ದರು. ಆ ಕುರಿತಾದ ತನಿಖೆ ಎಲ್ಲಿಗೆ ಮುಟ್ಟಿದೆ ಎಂಬುದೇ ಇವತ್ತು ತಿಳಿದಿಲ್ಲ. ಇಂತಹ ಹೊತ್ತಲ್ಲೇ ಕಬೀರ್‍ನ ಹತ್ಯೆ ನಡೆದಿದೆ. ಅದ್ದರಿಂದ ಈ ಪ್ರಕರಣವು ಇನ್ನೊಂದು ಕಾಸಿಮ್‍ಜಿ ಪ್ರಕರಣವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿರುವಂತೆಯೇ ಸರಕಾರದ ಮೇಲೆಯೂ ಇದೆ. ‘ಮುಖ್ಯಮಂತ್ರಿ ಯಡಿಯೂರಪ್ಪ ಎಂಬ ಜಾಗದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂಬ ಬದಲಾವಣೆಯಷ್ಟೇ ಆಗಿದೆ, ವ್ಯತ್ಯಾಸವೇನೂ ಇಲ್ಲ..’ ಎಂದು ಜನರು ಆಡಿಕೊಳ್ಳುವಂತಹ ಹಂತಕ್ಕೆ ತಲುಪುತ್ತಿದ್ದಾರೆ. ವ್ಯವಸ್ಥೆಯೊಳಗಿನ ಮತ್ತು ಹೊರಗಿನ ಮನುಷ್ಯ ವಿರೋಧಿಗಳ ಬಗ್ಗೆ ಸಿದ್ಧರಾಮಯ್ಯ ಸರಕಾರ ಇನ್ನೂ ಮೃದುಧೋರಣೆಯನ್ನೇ ಅನುಸರಿಸಿದರೆ ಅದು ಸಾರುವ ಸಂದೇಶ ಮತ್ತು ಬೀರುವ ಪರಿಣಾಮ ಅತ್ಯಂತ ದುರಂತಮಯವಾದೀತು.
   ಏನೇ, ಆಗಲಿ, ಹತ್ಯೆಗೊಳಗಾಗುವ ಮೂಲಕ ಕರಾವಳಿ ಭಾಗದಲ್ಲಿ ಕಾರ್ಯಾಚರಣೆಯಲ್ಲಿರುವ ದಬ್ಬಾಳಿಕೆಯೊಂದನ್ನು ಕಬೀರ್ ಮತ್ತೊಮ್ಮೆ ಚರ್ಚೆಗೆ ತಂದಿದ್ದಾನೆ. ಈ ಚರ್ಚೆ ಇಲ್ಲಿಗೇ ಕೊನೆಗೊಳ್ಳಬಾರದು. ಅಕ್ರಮ ಜಾನುವಾರು ಸಾಗಾಟದಲ್ಲಿ ತೊಡಗಿರುವವರ ಮೇಲೆ ವ್ಯವಸ್ಥೆಯು ಕಠಿಣ ಕಾನೂನು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸುತ್ತಲೇ ಕಬೀರ್ ಎತ್ತಿರುವ ಚರ್ಚೆಯನ್ನು ಜೀವಂತವಾಗಿಡಬೇಕಾಗಿದೆ. ಮುಸ್ಲಿಮ್ ಮತ್ತು ಹಿಂದೂಗಳನ್ನು ವಿಭಜಿಸುವ ಸುಳ್ಳಿನ ವಕ್ತಾರರನ್ನು ಸೋಲಿಸಲು ಕಬೀರ್‍ನ ಪ್ರಾಣತ್ಯಾಗಕ್ಕೆ ಸಾಧ್ಯವಾದರೆ, ಈ  ಒಂದು ಪ್ರಾಣತ್ಯಾಗವನ್ನು ಬಲಿದಾನವೆಂದೇ ಪರಿಗಣಿಸಿ ನಾವೆಲ್ಲ ಅಭಿಮಾನ ಪಟ್ಟುಕೊಳ್ಳಬಹುದಾಗಿದೆ.

Wednesday 16 April 2014

ಮೋದಿ ಮಾದರಿಯನ್ನು ಪ್ರಶ್ನಿಸಿದ ಜಶೋದಾಬೆನ್

   `ಕುಟುಂಬ' ಎಂಬ ಮೂರಕ್ಷರದ ಮನೆಯೊಳಗೆ ಪತಿ ಮತ್ತು ಪತ್ನಿ ಹೀರೊ-ಹೀರೋಯಿನ್ ಆಗಿರುತ್ತಾರೆ. ದುಃಖದ ಮತ್ತು ಸುಃಖದ ಅಸಂಖ್ಯ ಸಂದರ್ಭಗಳನ್ನು ಅವರು ಪರಸ್ಪರ ಹಂಚಿಕೊಂಡಿರುತ್ತಾರೆ. ಅದೆಷ್ಟೋ ಬಾರಿ ಅವರು ಭಾವುಕರಾಗಿರಬಹುದು. ಸಿಟ್ಟಾಗಿರಬಹುದು. ಆನಂದದ ಕ್ಷಣಗಳನ್ನು ಕಳೆದಿರಬಹುದು. ಎಲ್ಲೋ ಏನೋ ಆಗಿರುವ ಓರ್ವ ಯುವಕ ಮತ್ತು ಯುವತಿಯನ್ನು ಮದುವೆ ಒಟ್ಟುಗೂಡಿಸುತ್ತದೆ. ಆ ವರೆಗೆ ಅಪರಿಚಿತರಾಗಿದ್ದ ಅವರಿಬ್ಬರೂ ಮದುವೆಯ ಬಳಿಕ ಎಷ್ಟು ನಿಕಟರಾಗಿ ಬಿಡುತ್ತಾರೆಂದರೆ ಒಬ್ಬರ ನೋವನ್ನು ಇನ್ನೊಬ್ಬರು ಅನುಭವಿಸುತ್ತಾರೆ. ಪರಸ್ಪರ ಬಿಟ್ಟಿರಲಾರದ ಅನ್ಯೋನ್ಯತೆಯ ಸಂಬಂಧವೊಂದು ಅವರ ನಡುವೆ ಸ್ಥಾಪಿತಗೊಂಡಿರುತ್ತದೆ. ಪತ್ನಿಯನ್ನು ಅಭದ್ರತೆಯ ಭಾವ ಕಾಡದಂತೆ ನೋಡಿಕೊಳ್ಳುವ ಹೊಣೆಗಾರಿಕೆ ತನ್ನದೆಂದು ಭಾವಿಸುವ ಪತಿಯ ಹಾಗೆಯೇ, ಪತಿಯ ಕ್ಷೇಮಕ್ಕಾಗಿ ಎಲ್ಲವನ್ನೂ ಧಾರೆಯೆರೆಯುವುದು ತನ್ನ ಕರ್ತವ್ಯವೆಂದು ಪತ್ನಿ ಭಾವಿಸುತ್ತಾಳೆ. ಇಂಥದ್ದೊಂದು ಭಾವುಕ ಸಂಬಂಧ ಪತಿ ಮತ್ತು ಪತ್ನಿಯ ಮಧ್ಯೆ ಇರುವುದರಿಂದಲೇ, ವಿಚ್ಛೇದನವನ್ನು ಈ ಸಮಾಜ ಇಷ್ಟ ಪಡದೇ ಇರುವುದು. ಯಾವುದಾದರೊಂದು ಜೋಡಿ ವಿಚ್ಛೇದನಕ್ಕೆ ಮುಂದಾಗಿದೆ ಎಂದು ಗೊತ್ತಾದರೆ, ತಕ್ಷಣ ಅಲ್ಲಿ ಮೌನ ಆವರಿಸುತ್ತದೆ. ಛೆ, ಹೀಗಾಗಬಾರದಿತ್ತು ಎಂಬ ಉದ್ಗಾರವೊಂದು ಆ ಜೋಡಿಯ ಗುರುತು-ಪರಿಚಯ ಇಲ್ಲದವರಿಂದಲೂ ಹೊರಡುತ್ತದೆ. ಆದರೆ ಜೋಡಿಯೊಂದು ತಮ್ಮ ದಾಂಪತ್ಯ ಜೀವನದ ನಲ್ವತ್ತೋ ಐವತ್ತೋ ವರ್ಷಕ್ಕೆ ಕಾಲಿಟ್ಟರೆ, ಅದಕ್ಕಾಗಿ ಸಂಭ್ರಮಪಡಲಾಗುತ್ತದೆ. ಅಂಥ ಜೋಡಿಗಳ ಭಾವನೆಗಳಿಗೆ ಮಾಧ್ಯಮಗಳು ಜೀವ ಕೊಡುತ್ತವೆ. ಇವತ್ತು ಮದುವೆಯಾಗಿ ನಾಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ವಿಧಾನವನ್ನು ಯಾವ ಸಮಾಜವೂ ಮಾದರಿಯೆಂದು ಪರಿಗಣಿಸುವುದಿಲ್ಲ. ದುರಂತ ಏನೆಂದರೆ, ಗುಜರಾತ್‍ನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಅವರ ಅಭಿಮಾನಿಗಳು ಈ ತಪ್ಪು ಕ್ರಮವನ್ನೇ ಮಾದರಿ ಎಂದು ಇವತ್ತು ಸಮರ್ಥಿಸುತ್ತಿದ್ದಾರೆ. ಮದುವೆಯಾದ ಮೂರೇ ತಿಂಗಳೊಳಗೆ ಮೋದಿಯವರು ತನ್ನ ಪತ್ನಿಯನ್ನು ತ್ಯಜಿಸಿದ್ದು ದೇಶಸೇವೆಗಾಗಿ ಎಂದವರು ವಾದಿಸುತ್ತಿದ್ದಾರೆ. ದೇಶಸೇವೆ ಮಾಡಬೇಕೆಂದರೆ, ತನ್ನನ್ನೇ ನಂಬಿ ಬಂದ ಒಂಟಿ ಹೆಣ್ಣನ್ನು ತ್ಯಜಿಸಬೇಕಾದ ಅಗತ್ಯ ಇದೆಯೇ? ಪತಿ ಎಂಬ ನೆಲೆಯಲ್ಲಿ ಇರುವ ಹೊಣೆಗಾರಿಕೆಯನ್ನು ನಿರ್ವಹಿಸುತ್ತಲೇ `ದೇಶ ಸೇವೆ' ಮಾಡುವುದಲ್ಲವೇ ಅತ್ಯಂತ ಯೋಗ್ಯ ಮತ್ತು ಮಾದರಿಯಾಗಬೇಕಾದದ್ದು? ದೇಶ ಸೇವೆಯೆಂಬುದು ಪತ್ನಿಗೆ ಕೈ ಕೊಡಬೇಕಾದಷ್ಟು ಭೀಕರ ಸಂಗತಿಯೇ? ಇಂಥ `ದೇಶಸೇವೆ' ಎಂಥ ಭಾರತವನ್ನು ನಿರ್ಮಾಣ ಮಾಡೀತು?
 ತನಗೊಬ್ಬಳು ಪತ್ನಿಯಿದ್ದಾಳೆ ಎಂದು 45 ವರ್ಷಗಳ ಬಳಿಕ ಇದೇ ಮೊದಲ ಬಾರಿ ಮೋದಿ ಒಪ್ಪಿಕೊಂಡದ್ದನ್ನು ಯಾಕೆ ಚರ್ಚೆಗೆ ಎತ್ತಿಕೊಳ್ಳಬೇಕಾಯಿತೆಂದರೆ, ಅವರು ಪ್ರಧಾನಿ ಅಭ್ಯರ್ಥಿ ಎಂಬುದರಿಂದ ಮತ್ತು ‘ತಾನು ಮಾದರಿ ದೇಶವನ್ನು ನಿರ್ಮಿಸುತ್ತೇನೆ’ ಎಂದು ವಾದಿಸುತ್ತಿರುವುದರಿಂದ. ದೇಶ ಅಂದರೆ ಗೋವು, ಗುಜರಾತ್‍ನ ಹುಲಿ, ರಸ್ತೆಗಳಷ್ಟೇ ಅಲ್ಲವಲ್ಲ. ಕುಟುಂಬ ಅದರ ಬಹುಮುಖ್ಯ ಭಾಗ ತಾನೇ. ಆದರೆ ಮೋದಿ ಈ ಅತ್ಯಮೂಲ್ಯ ಭಾಗದ ಬಗ್ಗೆಯೇ ತೀರಾ ಉಡಾಫೆಯ ನಿಲುವನ್ನು ತಾಳಿದ್ದಾರೆ. ದೇಶ ಸೇವೆಯ ನೆಪದಲ್ಲಿ ಓರ್ವ ಹೆಣ್ಣಿನ ಭಾವನೆಗಳನ್ನು ಕ್ಷುಲ್ಲಕಗೊಳಿಸಿದ್ದಾರೆ. 45 ವರ್ಷಗಳ ಹಿಂದೆ ಮೋದಿಯವರನ್ನು ಮದುವೆಯಾಗುವಾಗ ಜಶೋದಾಬೆನ್‍ಗೆ 17 ವರ್ಷ. ಇಂದಿನಂತೆ ಟಿ.ವಿ., ಇಂಟರ್‍ನೆಟ್ ಮುಂತಾದ ಆಧುನಿಕ ಸೌಲಭ್ಯಗಳಿಲ್ಲದ ಆ ಕಾಲದಲ್ಲಿ ಜಶೋದಾಬೆನ್ ನಿಜವಾಗಿಯೂ ಅಪ್ರಾಪ್ತೆ. ಪತಿ-ಪತ್ನಿ ಸಂಬಂಧದ ಬಗ್ಗೆ, ಮದುವೆಯ ಪಾವಿತ್ರ್ಯದ ಕುರಿತಂತೆ ಅವರಿವರಿಂದ ತಿಳಿದಿರುವುದರ ಹೊರತಾಗಿ ಹೆಚ್ಚಿನದೇನನ್ನೂ ಆ ಪ್ರಾಯದಲ್ಲಿ ಅವರು ಅರಿತುಕೊಂಡಿರುವ ಸಾಧ್ಯತೆ ಇಲ್ಲ. ಅದಾಗಲೇ ಮದುವೆಯಾಗಿರುವ ತನ್ನ ಗೆಳತಿಯರನ್ನು ನೋಡಿ ಜಶೋದಾಬೆನ್ ಹಲವಾರು ಕನಸುಗಳನ್ನು ಕಂಡಿರಬಹುದು. ಗೆಳತಿಯರು ತವರು ಮನೆಗೊಮ್ಮೆ- ಪತಿ ಮನೆಗೊಮ್ಮೆ ಬಂದು ಹೋಗುತ್ತಿರುವುದು, ಪತಿಯ ಜೊತೆ ತಿರುಗಾಡುವುದು, ಮಕ್ಕಳೊಂದಿಗೆ ಆಡುವುದು... ಎಲ್ಲವನ್ನೂ ನೋಡಿರಬಹುದು. ಅವರೊಂದಿಗೆ ಕೌಟುಂಬಿಕ ಬದುಕಿನ ಬಗ್ಗೆ ವಿಚಾರ ವಿನಿಮಯ ಮಾಡಿರಬಹುದು. ನರೇಂದ್ರ ಮೋದಿಯವರೊಂದಿಗೆ ವಿವಾಹ ನಿಶ್ಚಿತಗೊಂಡಾಗ ಜಶೋದಾ ತನ್ನ ಗೆಳತಿಯರಂಥ ಒಂದು ಸುಂದರ ಕುಟುಂಬ ಜೀವನದ ಕನಸು ಕಂಡಿರಬಹುದು. ತನ್ನ ಪತಿಯಾದ ಮೋದಿಯರೊಂದಿಗೆ ಸುತ್ತಾಡುವ, ಮಕ್ಕಳನ್ನು ಹೊಂದುವ ಕುರಿತಂತೆ ನೀಲ ನಕ್ಷೆ ರೂಪಿಸಿರಬಹುದು. ಸಾಮಾನ್ಯವಾಗಿ, ಕೌಟುಂಬಿಕ ಜೀವನದ ಬಗ್ಗೆ ಪುರುಷನಿಗಿಂತ ಹೆಚ್ಚು ಗಂಭೀರವಾಗಿರುವುದು ಮಹಿಳೆಯೇ. ಪತಿಯೊಂದಿಗೆ ಎಷ್ಟೇ ಮುನಿಸಿದ್ದರೂ ಹೊರಗೆ ಆಕೆ ನಗು ನಗುತ್ತಲೇ ಇರುತ್ತಾಳೆ. ಕೌಟುಂಬಿಕ ಜೀವನದ ಯಾವ ಸಮಸ್ಯೆಗಳೂ ಮನೆಯ ನಾಲ್ಕು ಗೋಡೆ ದಾಟದಂತೆ ಎಚ್ಚರ ವಹಿಸುತ್ತಾಳೆ.  ಪತಿಯ ದೌರ್ಬಲ್ಯಗಳನ್ನು ತವರು ಮನೆಯಿಂದಲೂ ಮುಚ್ಚಿಡುತ್ತಾಳೆ. ಹೀಗಿರುವಾಗ, 45 ವರ್ಷಗಳ ಹಿಂದೆ ನರೇಂದ್ರ ಮೋದಿ ಎಂಬ ಪತಿಯ ಸುತ್ತ ಜಶೋದಾಬೆನ್ ಇಂಥದ್ದೊಂದು ರಮ್ಯ ಕನಸನ್ನು ಕಟ್ಟಿರಲಾರರು ಎಂದು ಹೇಳುವುದಕ್ಕೆ  ಯಾವ ಆಧಾರವೂ ಇಲ್ಲ. ಅದರೆ, ಕಳೆದ 45 ವರ್ಷಗಳಲ್ಲಿ ಮೋದಿ ತನ್ನ ಪತ್ನಿಯನ್ನು ಒಮ್ಮೆಯೂ ಸಂಪರ್ಕಿಸಿಲ್ಲ. ಕ್ಷೇಮ ಸಮಾಚಾರ ವಿಚಾರಿಸಿಲ್ಲ. ಮಾತ್ರವಲ್ಲ, 45 ವರ್ಷಗಳ ಬಳಿಕ ಇದೀಗ, ‘ತನಗೋರ್ವ ಪತ್ನಿ ಇದ್ದಾಳೆ’ ಎಂದು ಅನಿವಾರ್ಯವಾಗಿ ಒಪ್ಪಿಕೊಳ್ಳುವಾಗಲೂ ಅವರಲ್ಲಿ ಯಾವ ಪಾಪಭಾವವೂ ಇಣುಕುತ್ತಿಲ್ಲ. ದೇಶಸೇವೆಯು ಓರ್ವ ವ್ಯಕ್ತಿಯನ್ನು ಈ ಮಟ್ಟಕ್ಕೆ ಮುಟ್ಟಿಸುತ್ತದೆಂದರೆ ಅಂಥ ಸೇವೆಯು ಎಂಥ ಕುಟುಂಬವನ್ನು ನಿರ್ಮಿಸೀತು? ನಿಜವಾಗಿ, ಮೋದಿ ಮೊಟ್ಟಮೊದಲು ಜಶೋದಾಬೆನ್‍ರ ಕ್ಷಮೆಯಾಚಿಸಬೇಕಿತ್ತು. 45 ವರ್ಷಗಳಲ್ಲಿ ಒಮ್ಮೆಯೂ ಸಂಪರ್ಕಿಸದ ತಪ್ಪಿಗಾಗಿ, ಪಶ್ಚಾತ್ತಾಪ ಪಡಬೇಕಿತ್ತು. ನಾಮಪತ್ರ ಸಲ್ಲಿಸುವಾಗ ಪತ್ನಿಯನ್ನು ಜೊತೆ ಸೇರಿಸಿ ಪತಿ ಧರ್ಮವನ್ನು ಪಾಲಿಸಬೇಕಿತ್ತು. ಪತ್ನಿಯನ್ನು ತ್ಯಜಿಸಿ ದೇಶಸೇವೆ ಮಾಡುವ ತನ್ನ ನಿರ್ಧಾರ ಪತ್ನಿಗೆ ಮಾಡಿದ ದ್ರೋಹ ಮತ್ತು ತಪ್ಪು ಮಾದರಿ ಎಂದು ಘೋಷಿಸಬೇಕಿತ್ತು. 17 ವರ್ಷದ ಅಪ್ರಾಪ್ತೆ ಪತ್ನಿಯ ಕಣ್ಣೀರಿಗೆ ಕಾರಣವಾದ ತನ್ನನ್ನು ಮನ್ನಿಸುವಂತೆ ದೇಶದ ನಾಗರಿಕರೊಂದಿಗೆ ವಿನಂತಿಸಬೇಕಿತ್ತು. ಆದರೆ ಇವಾವುದನ್ನೂ ಮಾಡದ ಮೋದಿ, ಬದಲು ತನ್ನನ್ನೇ ಸಮರ್ಥಿಸಿಕೊಂಡಿದ್ದಾರೆ. ಕಳೆದ 45 ವರ್ಷಗಳಿಂದ ಅತ್ತ ಪತ್ನಿಯೂ ಅಲ್ಲದ ಇತ್ತ ವಿಚ್ಛೇದಿತೆಯೂ ಅಲ್ಲದ ಸ್ಥಿತಿಯಲ್ಲಿ ಬದುಕಿದ ಹೆಣ್ಣು ಮಗಳ ಮಾನಸಿಕ ಹೊಯ್ದಾಟವನ್ನು ತಿಳಿಯದ ವ್ಯಕ್ತಿಯಂತೆ ವರ್ತಿಸಿದ್ದಾರೆ. ‘ತನಗೋರ್ವ ಪತ್ನಿಯಿದ್ದಾಳೆ ಮತ್ತು ಆಕೆಯ ಆಸ್ತಿ ವಿವರ ಗೊತ್ತಿಲ್ಲ..’ ಎಂದು ನಾಮಪತ್ರದಲ್ಲಿ ಉಲ್ಲೇಖಿಸುವ ಪತಿಯನ್ನೊಮ್ಮೆ ಊಹಿಸಿ. ಅವರ ಬಗ್ಗೆ ಪತ್ನಿಯಾದವಳ ಆಂತರಿಕ ಅಭಿಪ್ರಾಯ ಏನಿರಬಹುದು? ಒಂದು ವೇಳೆ ಮದುವೆಯದ ಮೂರೇ ತಿಂಗಳೊಳಗೆ ಮೋದಿಯನ್ನು ತ್ಯಜಿಸಿ ಜಶೋದಾ ಹೊರಟು ಹೋಗಿರುತ್ತಿದ್ದರೆ ಮೋದಿಯ ನಿರ್ಧಾರ ಏನಿರುತ್ತಿತ್ತು?  
   ನಿಜವಾಗಿ, ಓರ್ವ ವ್ಯಕ್ತಿಯ ಸರಿಯಾದ ಪರೀಕ್ಷೆ ನಡೆಯುವುದೇ ಕೌಟುಂಬಿಕ ಜೀವನದಲ್ಲಿ. ಮನೆಯ ಹೊರಗೆ ಮುಖವಾಡಗಳಿಂದ ಬದುಕಬಹುದು, ಆದರೆ ಮನೆಯ ಒಳಗಲ್ಲ. ಪತ್ನಿ-ಮಕ್ಕಳ ಮುಂದೆ ಮುಖವಾಡಗಳು ಪ್ರಯೋಜನಕ್ಕೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಜಶೋದಾಬೆನ್‍ರನ್ನು ನಾವು ಅಭಿನಂದಿಸಬೇಕಾಗಿದೆ. ‘ಮೋದಿ ಪರಿಹಾರ’ ಎಂಬ ಜಾಹೀರಾತು ದೇಶದ ಎಲ್ಲೆಡೆ ಕಾಣಿಸುತ್ತಿರುವಾಗ, ಅ ಪರಿಹಾರ ಎಷ್ಟು ಕ್ರೂರ ಮತ್ತು ನಿರ್ಭಾವುಕ ಎಂಬುದನ್ನು ಆಕೆ ತನ್ನ 45 ವರ್ಷಗಳ ಒಂಟಿ ಬದುಕಿನ ಮೂಲಕ ಸಾರಿ ಹೇಳಿದ್ದಾರೆ. ಮೋದಿಯನ್ನು `ಮಾದರಿ' ಅನ್ನುವವರಿಗೆ ಜಶೋದಾಬೆನ್ ಎಚ್ಚರಿಕೆಯಾಗಲಿ.

Thursday 3 April 2014

ದುರಂತ ಸುದ್ದಿಗಳ ಪಟ್ಟಿಯಲ್ಲಿ ಮಕ್ಕಳು ಕಾಣಿಸಿಕೊಳ್ಳದಿರಲಿ


   ಒಂದು ಕಾಲದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷÀಕರಿಗೆ ಮಾತ್ರ ಸೀಮಿತವಾಗಿದ್ದ ಪರೀಕ್ಷೆಯು ಇವತ್ತು ತನ್ನ ವ್ಯಾಪ್ತಿಯನ್ನು ಸಾಕಷ್ಟು ವಿಸ್ತರಿಸಿಕೊಂಡಿದೆ. ಈ ವ್ಯಾಪ್ತಿಯೊಳಗೆ ಹೆತ್ತವರು, ಸರಕಾರ, ಸಿನಿಮಾ ನಿರ್ಮಾಪಕರು... ಮುಂತಾದವರೆಲ್ಲ ಸೇರಿಕೊಂಡಿದ್ದಾರೆ. ಪರೀಕ್ಷೆ ಹತ್ತಿರವಾಗುತ್ತಿರುವಂತೆಯೇ ಮಕ್ಕಳಷ್ಟೇ ಗಂಭೀರವಾಗಿ ಹೆತ್ತವರೂ ಸಿದ್ಧಗೊಳ್ಳುತ್ತಾರೆ. ಮನೆಯಲ್ಲಿ ಟಿ.ವಿ. ನೋಡುವ, ಊಟ ಮಾಡುವ, ಮದುವೆ-ಮುಂಜಿ ಮುಂತಾದ ಕಾರ್ಯಕ್ರಮಗಳಿಗೆ ಹೋಗುವ ಬಗ್ಗೆ ವೇಳಾಪಟ್ಟಿ ತಯಾರಾಗುತ್ತದೆ. ಮಕ್ಕಳ ಪರೀಕ್ಷಾ ತಯಾರಿಗೆ ತೊಂದರೆಯಾಗದಂತೆ ಇವೆಲ್ಲಕ್ಕೂ ಜಾಗರೂಕತೆಯಿಂದ ಸಮಯ ಹೊಂದಿಸಲಾಗುತ್ತದೆ. ಆವರೆಗೆ ಬಿಝಿಯಾಗಿದ್ದ ಅಪ್ಪ ಬಿಡುವು ಮಾಡಿಕೊಳ್ಳುತ್ತಾನೆ. ತಾಯಿಯೇ ಮಾರುಕಟ್ಟೆಗೆ ಹೋಗುತ್ತಾಳೆ. ಸಮಯ ಸಮಯಕ್ಕೆ ಮಕ್ಕಳಿಗೆ ಕುಳಿತಲ್ಲಿಗೇ ಆಹಾರ ಸರಬರಾಜು ಮಾಡುವಲ್ಲಿ ಕಾಳಜಿ ವಹಿಸಲಾಗುತ್ತದೆ. ಇನ್ನು, ಈ ಸಮಯದಲ್ಲಿ ಸಿನಿಮಾಗಳು ಬಿಡುಗಡೆಯಾಗುವುದು ಕಡಿಮೆ. ಸರಕಾರವಂತೂ ವಿದ್ಯಾರ್ಥಿಗಳ ಬಗ್ಗೆ ವಿಪರೀತ ಕಾಳಜಿಯನ್ನು ವ್ಯಕ್ತಪಡಿಸುತ್ತದೆ. ರೈತರಿಗೆ ಕೊಡದ ವಿದ್ಯುತನ್ನು ವಿದ್ಯಾರ್ಥಿಗಳಿಗೆ ಕೊಡುವಷ್ಟು ಅದು ಉದಾರಿಯಾಗಿ ಬಿಡುತ್ತದೆ. ವಿಶೇಷ ಏನೆಂದರೆ, ಪರೀಕ್ಷೆ ಮುಗಿದಂತೆಯೇ ಈ ಎಲ್ಲ ಕಾಳಜಿಗಳೂ ಹೊರಟು ಹೋಗುತ್ತವೆ ಎಂಬುದು. ವಿದ್ಯಾರ್ಥಿಗಳು ಹಗುರವಾಗುತ್ತಾರೆ. ಬ್ಯಾಟು, ಬಾಲ್‍ಗಳು ಅಡಗುತಾಣದಿಂದ ಹೊರಬರುತ್ತವೆ. ಆವರೆಗೆ ಮನೆಯಲ್ಲೇ ಇದ್ದ ಮಕ್ಕಳೆಲ್ಲ ಮೈದಾನದಲ್ಲೇ ಠಿಕಾಣಿ ಹೂಡುತ್ತಾರೆ. ಕರೆಂಟ್ ಕೈ ಕೊಡತೊಡಗುತ್ತದೆ. ಸಿನಿಮಾಗಳು ಭರಪೂರ ಬಿಡುಗಡೆಯಾಗುತ್ತವೆ. ಆದರೆ, ಹೆತ್ತವರು ಮಾತ್ರ ಹಗುರವಾಗುವುದಿಲ್ಲ. ಅದರ ಬದಲು ಒಂದಷ್ಟು ಹೆಚ್ಚೇ ಒತ್ತಡಕ್ಕೆ ಒಳಗಾಗುತ್ತಾರೆ.  ಯಾಕೆಂದರೆ, ಪರೀಕ್ಷೆಯ ಜಾಗದಲ್ಲಿ ರಜೆ ಬಂದು ಕೂತಿರುತ್ತದೆ.
 ಪತ್ರಿಕೆಗಳು ಪ್ರಕಟಿಸುವ ದುರಂತ ಸುದ್ದಿಗಳ ಪುಟಗಳಲ್ಲಿ ಈಗಾಗಲೇ ಮಕ್ಕಳು ಕಾಣಿಸಿಕೊಳ್ಳತೊಡಗಿದ್ದಾರೆ. ರಜೆಯ ಮಜವನ್ನು ಅನುಭವಿಸುವ ತುರ್ತಿನಲ್ಲಿ ಮಕ್ಕಳು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇನ್ನು ಕೆಲವು ದಿನಗಳು ಕಳೆದರೆ ವಿದ್ಯಾರ್ಥಿಗಳ ದೊಡ್ಡದೊಂದು ಗುಂಪು ಪರೀಕ್ಷೆ ಮುಗಿಸಿಕೊಂಡು ಹೊರಬರಲಿದೆ. ನಿಜವಾಗಿ, ಹೆತ್ತವರು ಮತ್ತು ಮಕ್ಕಳನ್ನು ಅತ್ಯಂತ ಹೆಚ್ಚು ಪರೀಕ್ಷೆಗೆ ಒಡ್ಡುವ ಸಂದರ್ಭ ಇದು. ಪರೀಕ್ಷಾ ತಯಾರಿಯ ಸಂದರ್ಭದಲ್ಲಾದರೋ ಮಕ್ಕಳು ಹೆಚ್ಚಿನ ಸಮಯವನ್ನು ಮನೆಯ ಒಳಗೆಯೇ ಕಳೆಯುತ್ತಾರೆ. ಮಕ್ಕಳಿಗೆ ಓದುವುದಕ್ಕೆ ಉತ್ತಮ ವಾತಾವರಣ ನಿರ್ಮಿಸಿಕೊಡುವ ಒತ್ತಡವಷ್ಟೇ ಹೆತ್ತವರ ಮೇಲಿರುತ್ತದೆ. ಅಲ್ಲದೇ, ಆ ಸಂದರ್ಭದಲ್ಲಿ ಮಕ್ಕಳ ಒತ್ತಡವನ್ನು ಹೇಗೆ ನಿವಾರಿಸಬೇಕು, ಯಾವ ರೀತಿಯ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಬೇಕು... ಎಂಬಿತ್ಯಾದಿಗಳ ಬಗ್ಗೆ ಪತ್ರಿಕೆಗಳು ಮತ್ತು ಟಿ.ವಿ.ಗಳಲ್ಲಿ ತಜ್ಞರು ಹೇಳುತ್ತಿರುತ್ತಾರೆ. ಆದರೆ, ಪರೀಕ್ಷೆ ಮುಗಿದೊಡನೇ ಮಕ್ಕಳು ಬಂಧನದಿಂದ ಬಿಡುಗಡೆಗೊಂಡಂಥ ಮನಸ್ಥಿತಿಗೆ ತಲುಪುತ್ತಾರೆ. ಆ ಬಳಿಕ ಮಕ್ಕಳು ಹೆಚ್ಚಿನ ವೇಳೆಯನ್ನು ಕಳೆಯುವುದು ಮನೆಯ ಹೊರಗೆಯೇ. ಆದ್ದರಿಂದ ಹೆತ್ತವರಿಗೆ ಅವರ ಮೇಲಿನ ಹಿಡಿತ ಬಹುತೇಕ ತಪ್ಪಿ ಹೋಗುತ್ತದೆ. ಮಕ್ಕಳು ಅಲ್ಲಿ  ಏನು ಮಾಡುತ್ತಾರೆ, ಗೆಳೆಯರೊಂದಿಗೆ ಯಾವ ಯೋಜನೆ ಹಾಕಿರುತ್ತಾರೆ, ಎಲ್ಲೆಲ್ಲಿಗೆ ಹೋಗುತ್ತಾರೆ.. ಎಂಬುದೆಲ್ಲಾ ಹೆತ್ತವರಿಗೆ ಗೊತ್ತಾಗುವುದು ಕಡಿಮೆ. ಒಂದು ರೀತಿಯಲ್ಲಿ, ಪರೀಕ್ಷಾ ತಯಾರಿಯ ಸಂದರ್ಭಕ್ಕಿಂತ ಹೆಚ್ಚಿನ ಆತಂಕವನ್ನು ಹೆತ್ತವರಲ್ಲಿ ಉಂಟು ಮಾಡುವುದು ರಜೆಯ ವೇಳೆಯೇ. ಹೊರಗೆ ಹೋದ ಮಕ್ಕಳು ಮಧ್ಯಾಹ್ನ ಊಟಕ್ಕೆ ಬಂದರೂ ಆಯಿತು, ಇಲ್ಲದಿದ್ದರೂ ಆಯಿತು.. ಅನ್ನುವ ಸಂದರ್ಭವೊಂದು ಸೃಷ್ಟಿಯಾಗುವುದನ್ನು ಯಾವ ಹೆತ್ತವರು ಸಹಿಸುತ್ತಾರೆ ಹೇಳಿ? ಈಜಲು, ಜಾಲಿ ರೈಡ್ ಮಾಡಲು ಮಕ್ಕಳು ಬಳಸುವುದು ರಜೆಯ ದಿನಗಳನ್ನೇ. ‘ಅಪಘಾತ: ವಿದ್ಯಾರ್ಥಿ ಸಾವು', ‘ವಿದ್ಯಾರ್ಥಿ ಮುಳುಗಿ ಸಾವು..' ಮುಂತಾದ ಸುದ್ದಿಗಳು ಹೆಚ್ಚು ಕಾಣಿಸಿಕೊಳ್ಳುವುದೂ ರಜೆಯ ದಿನಗಳಲ್ಲೇ. ಆದ್ದರಿಂದಲೇ ಹೆತ್ತವರು ಪ್ರತಿದಿನಗಳನ್ನೂ ಆತಂಕದಲ್ಲೇ ಕಳೆದು ಬಿಡುವುದಿದೆ. ಮಕ್ಕಳಿಗೆ ಎಷ್ಟೇ ಸಲಹೆ-ಸೂಚನೆಗಳನ್ನು ಕೊಟ್ಟರೂ ಅದನ್ನು ಪಾಲಿಸುತ್ತಾರೋ ಇಲ್ಲವೋ ಎಂಬುದನ್ನು ನೋಡುವುದಕ್ಕೆ ಹೆತ್ತವರಿಗೆ ಸಾಧ್ಯವಿಲ್ಲವಲ್ಲ. ತನ್ನ ಮಗನಿಗೆ ಬೈಕ್ ಚಲಾಯಿಸಲು ಬರುತ್ತದೆ ಎಂದು ಎಷ್ಟೋ ಹೆತ್ತವರಿಗೆ ಗೊತ್ತಾಗುವುದೇ ಆತ ಗೆಳೆಯನ ಬೈಕ್ ಚಲಾಯಿಸಿಕೊಂಡು ಮನೆಗೆ ಬಂದಾಗ. ಮಕ್ಕಳು ಹೆತ್ತವರ ಗಮನಕ್ಕೆ ತಾರದೆಯೇ ಕೆಲವಾರು ಯೋಜನೆಗಳನ್ನು ಹಾಕಿಕೊಳ್ಳುವುದಿದೆ. ಹೆತ್ತವರೊಂದಿಗೆ ಹೇಳಿಕೊಂಡರೆ ಎಲ್ಲಿ ಅನುಮತಿ ಸಿಗುವುದಿಲ್ಲವೋ ಎಂಬ ಭಯ. ಹೀಗೆ ಹೆತ್ತವರಿಗೆ ತಿಳಿಸದೇ ಸಾಹಸಕ್ಕೆ ಧುಮುಕುವ ಮಕ್ಕಳು ಬಳಿಕ ಹೆತ್ತವರ ಕಣ್ಣೀರಿಗೆ ಕಾರಣವಾದ ಘಟನೆಗಳು ಧಾರಾಳ ನಡೆದಿವೆ.
   ರಜೆ ಎಂಬುದು ಮಕ್ಕಳಿಗೆ ಎಷ್ಟು ಖುಷಿಯ ಸಂಗತಿಯೋ ಅಷ್ಟೇ ಹೆತ್ತವರಿಗೂ ಖುಷಿಯ ಸಂಗತಿಯಾಗುವಂಥ ವಾತಾವರಣವೊಂದು ನಿರ್ಮಾಣವಾಗಬೇಕಾದ ತುರ್ತು ಅಗತ್ಯ ಇದೆ. ಕೈ-ಕಾಲು ಮುರಿತಕ್ಕೊಳಗಾಗಿ ರಜೆಯನ್ನು ಸಜೆಯಾಗಿ ಪರಿವರ್ತಿಸಿಕೊಂಡ ಮಕ್ಕಳ ವಿವರಗಳು ಈಗಾಗಲೇ ಬರುತ್ತಿರುವುದರಿಂದ ಈ ಬಗ್ಗೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪರೀಕ್ಷೆಯ ಬಗ್ಗೆ ಮತ್ತು ಒತ್ತಡ ನಿವಾರಿಸಿಕೊಳ್ಳುವ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವಿವರಗಳು ಆಗಾಗ ಬರುತ್ತಿರುತ್ತವೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆಗೊಳಿಸುವ ಪ್ರಯತ್ನಗಳನ್ನೂ ಮಾಧ್ಯಮಗಳು ಮಾಡುತ್ತಿವೆ. ಪರೀಕ್ಷೆಯ ಪ್ರಾರಂಭದ ದಿನದಂದು ಹೆಚ್ಚಿನ ಪತ್ರಿಕೆಗಳು ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಬರಹಗಳನ್ನು ಪ್ರಕಟಿಸುತ್ತವೆ. ಆದರೆ ಪರೀಕ್ಷೆ ಮುಗಿದ ಬಳಿಕ ಈ ವಿದ್ಯಾರ್ಥಿಗಳಿಗೆ ಅದೇ ಮಟ್ಟದ ಮಾರ್ಗದರ್ಶನವನ್ನು ಮಾಧ್ಯಮಗಳು ಮಾಡುವುದು ಕಡಿಮೆ. ಕೋಚಿಂಗ್ ಕ್ಲಾಸ್‍ಗಳು, ಕ್ಯಾಂಪ್‍ಗಳ ಬಗ್ಗೆ ಮಾಹಿತಿ ಇರುತ್ತದೆಯೇ ಹೊರತು ರಜೆಯಲ್ಲಿ ಮಕ್ಕಳು ಮಾಡಿಕೊಳ್ಳಬಹುದಾದ ಅನಾಹುತಗಳ ಕಡೆಗೆ ಬೆಳಕು ಚೆಲ್ಲುವ ಬರಹಗಳು ಪ್ರಕಟವಾಗುತ್ತಿಲ್ಲ. ನಿಜವಾಗಿ, ಪರೀಕ್ಷೆಗೆ ಮಕ್ಕಳನ್ನು ತಯಾರುಗೊಳಿಸುವ ಸಂದರ್ಭ ಎಷ್ಟು ಸೂಕ್ಷ್ಮವಾದದ್ದೋ ಅಷ್ಟೇ ರಜೆಯ ಬಳಿಕ ಮಕ್ಕಳನ್ನು ಕಾಪಾಡಿಕೊಳ್ಳುವುದೂ ಸೂಕ್ಷ್ಮವಾದದ್ದೇ. ಪರೀಕ್ಷೆಯ ಮುಕ್ತಾಯ ಬದುಕಿನ ಮುಕ್ತಾಯ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಫಲಿತಾಂಶಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳು ಒಂದು ಕಡೆಯಾದರೆ ರಜೆಯ ಮಜವನ್ನು ಅನುಭವಿಸುವ ಧಾವಂತದಲ್ಲಿ ಬದುಕನ್ನು ಕಳಕೊಳ್ಳುವ ಮಕ್ಕಳು ಇನ್ನೊಂದು ಕಡೆ. ಇವತ್ತು ವಿದ್ಯಾರ್ಥಿ ಆತ್ಮಹತ್ಯೆಯ ವಿರುದ್ಧ ಜಾಗೃತಿ ಮೂಡಿಸುವಂಥ ಪ್ರಯತ್ನಗಳು ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿವೆ. ‘ಫಲಿತಾಂಶವೇ ಕೊನೆಯಲ್ಲ' ಎಂದು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ, ರಜೆಯಲ್ಲಾಗುವ ಜೀವಹಾನಿಯ ಬಗ್ಗೆ ಈ ಮಟ್ಟದ ಜಾಗೃತಿ ಕಾರ್ಯಕ್ರಮಗಳು ಅಷ್ಟಾಗಿ ನಡೆಯುತ್ತಿಲ್ಲ. ಸಮುದ್ರ ಪಾಲಾಗುವ ಮಕ್ಕಳ ಬಗ್ಗೆ, ವಾಹನಾಪಘಾತದಲ್ಲಿ ಮೃತಪಡುವ ಮಕ್ಕಳು ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿಲ್ಲ. ಆತ್ಮಹತ್ಯೆ ಮಾಡುವ ವಿದ್ಯಾರ್ಥಿಗಳು ಎಷ್ಟು ದುರ್ಬಲರೋ ರಜೆಯಿಂದಾಗಿ ಕಳೆದು ಹೋಗುವ ಮಕ್ಕಳೂ ಅಷ್ಟೇ ದುರ್ಬಲರು. ಆದ್ದರಿಂದಲೇ ಈ ಬಗ್ಗೆ ವಿದ್ಯಾರ್ಥಿಗಳ ಗಮನ ಸೆಳೆಯಬಲ್ಲ ಕಾರ್ಯಕ್ರಮಗಳು ಏರ್ಪಡಬೇಕಾಗಿದೆ. ರಜೆಯು ಹೆತ್ತವರ ಪಾಲಿಗೆ ಸಜೆಯಾಗದಿರಲು ಮಾಧ್ಯಮಗಳೂ ಕೈ ಜೋಡಿಸಬೇಕಾಗಿದೆ. ಆ ಮೂಲಕ ಸಾವಿನ ಪುಟಗಳಲ್ಲಿ ಮಕ್ಕಳ ಹೆಸರು ಕಾಣಿಸಿಕೊಳ್ಳದಂತೆ ತಡೆಯುವುದಕ್ಕೆ ತಮ್ಮ ಕಾಣಿಕೆಯನ್ನು ನೀಡಬೇಕಾಗಿದೆ.