Monday 23 June 2014

ಹಿರಾದ `ಓದ’ನ್ನು ಸಮಾಜಕ್ಕೂ ಕೇಳಿಸೋಣ

   ಹಿರಾ ಗುಹೆಯಲ್ಲಿ ತಂಗಿ ಮಾನವ ಸಂಸ್ಕರಣೆಯ ಮೊಟ್ಟ ಮೊದಲ ಪಾಠವನ್ನು ಕೇಳಿಸಿಕೊಂಡ ನಂತರ ಪ್ರವಾದಿ ಮುಹಮ್ಮದ್(ಸ) ಮತ್ತೆಂದೂ ‘ಹಿರಾ’ದಲ್ಲಿ ತಂಗಲಿಲ್ಲ. ಬಳಿಕ ಅವರು ಸಮಾಜದ ಕಡೆಗೆ ನಡೆದರು. ನಿಜವಾಗಿ, ಅಂದಿನ ಸಮಾಜದಲ್ಲಿದ್ದ ಗದ್ದಲ, ಗೊಂದಲ, ಹಿಂಸೆ, ಅಸಮಾನತೆ, ಅನ್ಯಾಯಗಳನ್ನು ಪರಿಗಣಿಸಿದರೆ, ಹಿರಾ ಗುಹೆಯು ಪ್ರವಾದಿಯವರಿಗೆ(ಸ) ಮತ್ತೆ ಮತ್ತೆ ತಂಗಲೇಬೇಕಾದ ಮತ್ತು ಶಾಶ್ವತ ವಾಸಸ್ಥಳವನ್ನಾಗಿ ಮಾಡಿಕೊಳ್ಳಲೇ ಬೇಕಾದಷ್ಟು ಯೋಗ್ಯ ನೆಲೆಯಾಗಿತ್ತು. ಯಾಕೆಂದರೆ, ಹಿರಾದಲ್ಲಿ ಅಶಾಂತಿ ಇರಲಿಲ್ಲ. ರಕ್ತದಾಹ ಇರಲಿಲ್ಲ. ಮನುಷ್ಯರಲ್ಲಿಯೇ ಕೆಲವರು ಉಚ್ಛರು, ಕೆಲವರು ಮ್ಲೇಚ್ಛರು; ಕೆಲವು ಯಜಮಾನರು, ಅಸಂಖ್ಯ ದಾಸರು; ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ... ಮುಂತಾದ ಪ್ರಕೃತಿ ವಿರೋಧಿ ವಿಭಜನೆಗಳಿರಲಿಲ್ಲ. ಆದರೂ ಪ್ರವಾದಿ(ಸ) ಸಮಾಜವನ್ನೇ ಆಯ್ಕೆ ಮಾಡಿಕೊಂಡರು. ಯಾಕೆಂದರೆ, ಅವರು ಗುಹೆಯಲ್ಲಿ ಯಾವ ಪಾಠಗಳನ್ನು ಕೇಳಿಸಿಕೊಂಡಿದ್ದರೋ ಅದು ಯಾವ ಕಾರಣಕ್ಕೂ ಅಲ್ಲಿಗೆ ಅಗತ್ಯವಿರಲಿಲ್ಲ, ಗಾಢ ಮೌನ, ನೀರವತೆ, ಏಕತಾನತೆಯ ಗುಹೆಯಲ್ಲಿ, ‘ಓದಿರಿ, ನಿಮ್ಮನ್ನು ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ..’ ಎಂದು ಹೇಳುವುದರಿಂದ ಆಗುವ ಪ್ರಯೋಜನವಾದರೂ ಏನು? ಅವರು `ಓದ'ಬೇಕಾದದ್ದು ಸಮಾಜದ ಮುಂದೆ. ಯಾಕೆಂದರೆ, ಆ ಸಮಾಜವು ನಿಜವಾದ `ಓದ'ನ್ನು, ಓದಿನ ಮರ್ಮವನ್ನು ಸಂಪೂರ್ಣ ಮರೆತಿತ್ತು. ಆದ್ದರಿಂದಲೇ, ಪ್ರವಾದಿಯವರು(ಸ) ಓದಲೇಬೇಕಾದ ಜಾಗಕ್ಕೆ ಹಿರಾ ಗುಹೆಯಿಂದ ಮರಳಿದರು. ಹಾಗೆ ಮರಳುವಾಗ ಆ ಮರಳುವ ಜಾಗ ಎಷ್ಟು ಅಪಾಯಕಾರಿ ಎಂಬುದು ಅವರಿಗೆ ಖಂಡಿತ ಗೊತ್ತಿತ್ತು. ಅವರು ಏನನ್ನು ಓದಲು ಹೊರಟಿದ್ದರೋ ಅದನ್ನು ಆ ಸಮಾಜ ಒಕ್ಕೊರಳಿನಿಂದ ಚಪ್ಪಾಳೆ ತಟ್ಟಿ ಸ್ವಾಗತಿಸುತ್ತದೆ ಎಂದು ನಂಬುವಷ್ಟು ಮುಗ್ಧರೂ ಅವರಾಗಿರಲಿಲ್ಲ. ಒಂದು ವೇಳೆ ಹಿರಾದಲ್ಲಿ ಅವರು ಏನನ್ನು ಕೇಳಿಸಿಕೊಂಡಿದ್ದರೋ ಅದನ್ನು ಸಮಾಜದ ಮುಂದೆ ಹೇಳದೇ ಹಿರಾ ಗುಹೆಯಲ್ಲೇ ಬಿಟ್ಟು ಬರುತ್ತಿದ್ದರೆ ಆ ಸಮಾಜ ಪ್ರವಾದಿಯವರ(ಸ) ಮೇಲೆ ಕಲ್ಲೆಸೆಯುತ್ತಲೂ ಇರಲಿಲ್ಲ. ಯುದ್ಧಕ್ಕೆ ನಿಲ್ಲುತ್ತಲೂ ಇರಲಿಲ್ಲ. ಆದರೆ ಪ್ರವಾದಿ ಹಿರಾ ಎಂಬ ಸುರಕ್ಷಿತ ಪ್ರದೇಶಕ್ಕಿಂತ ಸಮಾಜ ಎಂಬ ಅಸುರಕ್ಷಿತ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡರು. ಸವಾಲಿಗೆ ಮುಖಾಮುಖಿಯಾದರು. ಅನ್ಯಾಯ, ಅಕ್ರಮ, ಗೊಂದಲ, ರಕ್ತಪಾತ, ಅಶಾಂತಿಗಳಿಗೆ ಈ `ಓದ'ನ್ನು ಪರಿಹಾರವಾಗಿ ಸೂಚಿಸಿದರು. ಅಂತಿಮವಾಗಿ ಆ `ಓದು' ಆ ಸಮಾಜದ ಮೇಲೆ ಯಾವ ಮಟ್ಟಿನ ಪ್ರಭಾವ ಬೀರಿತೆಂದರೆ, ಹೆಣ್ಣನ್ನು ದ್ವೇಷಿಸುತ್ತಿದ್ದ ಅದೇ ಮಂದಿ ಹೆಣ್ಣು ಮಗುವಿಗಾಗಿ ಪ್ರಾರ್ಥಿಸುವಷ್ಟು. ಶ್ರೇಣೀಕೃತ ವ್ಯವಸ್ಥೆಯನ್ನು ಸಹಜ ಧರ್ಮವಾಗಿ ಪ್ರತಿಪಾದಿಸುತ್ತಿದ್ದವರೇ ಮ್ಲೇಚ್ಛನ ಜೊತೆ ಒಂದೇ ಬಟ್ಟಲಲ್ಲಿ ಊಟ ಮಾಡುವಷ್ಟು.  
   ರಮಝಾನ್ ಎಂಬುದು ಅದೇ `ಓದಿನ' ಪುಟ್ಟದೊಂದು ಬೀಜ. ಈ ಬೀಜ ಪ್ರತಿಯೋರ್ವ ಉಪವಾಸಿಗನ ಅಂತರಂಗದಲ್ಲೂ ಮೊಳಕೆಯೊಡೆಯಬೇಕು. ಅಂದು `ಹಿರಾಗುಹೆ ಮತ್ತು ಆ ಸಮಾಜದ ಮಧ್ಯೆ' ಎಷ್ಟು ವ್ಯತ್ಯಾಸಗಳಿದ್ದುವೋ ಅಷ್ಟೇ ವ್ಯತ್ಯಾಸ ಆ ‘ಓದು’ ಮತ್ತು ಇವತ್ತಿನ ಸಮಾಜದ ಮಧ್ಯೆ ಇವತ್ತೂ ಇದೆ. ಆದ್ದರಿಂದಲೇ, ಆ ‘ಓದ’ನ್ನು ಮಸೀದಿ ಎಂಬ ಗುಹೆಯಿಂದ ಹೊರಗೆ ತರಬೇಕು. ಅದನ್ನು ಸಮಾಜದೊಂದಿಗೆ ಮುಖಾಮುಖಿಯಾಗಿಸಬೇಕು. ಅದು ಸಾಧ್ಯವಾದರೆ ಖಂಡಿತ ಮುಂದೆ ಈ ಸಮಾಜವೇ ಆ ‘ಓದನ್ನು’ ಪ್ರೀತಿಸಬಹುದು. ಬಹುಶಃ, ರಮಝಾನ್ ಇವತ್ತಿನ ದಿನಗಳಲ್ಲಿ ನೀಡುವ ಮತ್ತು ನೀಡಬೇಕಾದ ಪ್ರಬಲ ಸಂದೇಶ ಇದು. ರಮಝಾನ್ ಒಂದು ಭರವಸೆ. ಈ ಭರವಸೆ ಪ್ರತಿ ಉಪವಾಸಿಗರನ್ನೂ ಎಚ್ಚರಗೊಳಿಸಿದರೆ ಆ ಬಳಿಕ ಸಮಾಜದಲ್ಲಿ ‘ಅಸುರಕ್ಷಿತ’ ಪ್ರದೇಶ ಇರುವುದಕ್ಕೆ ಸಾಧ್ಯವೇ ಇಲ್ಲ. ನಾವು ಹಿರಾದ ಕಡೆಗಲ್ಲ, ಸಮಾಜದ ಕಡೆಗೆ ಮುಖ ಮಾಡೋಣ. ಭರವಸೆಯೆಂಬ ರಮಝಾನ್ ಸಸಿಯನ್ನು ಪ್ರತಿಯೋರ್ವರ ಅಂತರಂಗದಲ್ಲೂ ನೆಡೋಣ. ಹಿರಾದ ‘ಓದ’ನ್ನು ಸಮಾಜಕ್ಕೂ ಕೇಳಿಸೋಣ.

Friday 20 June 2014

ಮನೆ ಉರುಳಿಸುವ ಮಳೆಯೂ ಮನೆ ಕಟ್ಟುವ ನಾವೂ..

    ಮರ, ಗಿಡ, ಕಲ್ಲು, ಪ್ರಾಣಿ, ಪಕ್ಷಿ.. ಮುಂತಾದುವುಗಳ ಮೇಲೆ ಆರೋಪ ಹೊರಿಸುವುದು ಯಾಕೆ ಸುಲಭ ಅಂದರೆ, ಅವು ತಿರುಗಿ ಉತ್ತರ ಕೊಡುವುದಿಲ್ಲ. ಮಾನನಷ್ಟ ಮೊಕದ್ದಮೆ ಹೂಡುವುದಿಲ್ಲ. ಆರೋಪಿಸುವವರ ಬಣ್ಣ ಬಯಲು ಮಾಡುವ ಸಾಮರ್ಥ್ಯವೂ ಇರುವುದಿಲ್ಲ. ಆದ್ದರಿಂದಲೇ ಅನೇಕ ಬಾರಿ ಮನುಷ್ಯರಾದ ನಾವು ಮಳೆಯ ಮೇಲೆ, ಅಣೆಕಟ್ಟು, ತಂಬಾಕಿನ ಮೇಲೆ ಆರೋಪ ಹೊರಿಸಿ ಸುಮ್ಮನಾಗುತ್ತೇವೆ. ಕಳೆದ ವಾರ ತಂಬಾಕು ಕಂಪೆನಿಗಳನ್ನು ತರಾಟೆಗೆತ್ತಿಕೊಳ್ಳುವ ವರದಿಯೊಂದು ಬಿಡುಗಡೆಯಾಯಿತು. ತಂಬಾಕು ಕಂಪೆನಿಗಳ ಜಾಣ್ಮೆ, ಪ್ರಚಾರ ವೈಖರಿಯಿಂದಾಗಿ ಈ ದೇಶದ 15ರಿಂದ 24 ವರ್ಷದೊಳಗಿನ 27% ಮಂದಿ ತಂಬಾಕಿನ ಚಟಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಯಿತು. ತಂಬಾಕು ಸಂಬಂಧಿ ಕಾಯಿಲೆಗಾಗಿ 2011ರಲ್ಲಿ ಒಂದು ಲಕ್ಷ  ಕೋಟಿ ರೂಪಾಯಿ ವೆಚ್ಚವಾಗಿದ್ದು, ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ತಂಬಾಕು ಗ್ರಾಹಕರಿರುವ ದೇಶವಾಗಿ ಭಾರತ ಗುರುತಿಗೀಡಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಇನ್ನು, ಮಳೆಗಾಲದಲ್ಲಿ ಆಗುವ ಸಾವು, ಹಾನಿ, ಅನಾಹುತಗಳ ಎಲ್ಲ ಜವಾಬ್ದಾರಿಯನ್ನೂ ಮಳೆ ಎಂಬ ಬಾಯಿ ಬಾರದ ಕೈಗೂ ಸಿಗದ ಆರೋಪಿಯ ಮೇಲೆ ಹೊರಿಸುವ ಪ್ರಯತ್ನಗಳು ಈಗಾಗಲೇ ಆರಂಭವಾಗಿವೆ. ಮುಂದಿನ ದಿನಗಳಲ್ಲಿ, ‘ಮಳೆಯ ಆರ್ಭಟಕ್ಕೆ ಕುಸಿದು ಬಿದ್ದ ಮನೆಗಳು, ಜಲಾವೃತಗೊಂಡ ನಗರ, ಮಳೆ ನೀರಿಗೆ ಕೊಚ್ಚಿ ಹೋದ ರಸ್ತೆಗಳು..’ ಮುಂತಾದ ಬಹುವಿಧ ಶೀರ್ಷಿಕೆಗಳಲ್ಲಿ ಮಾಧ್ಯಮಗಳಲ್ಲಿ ವರದಿಗಳು ಖಂಡಿತ ಪ್ರಕಟವಾಗಲಿವೆ. ಅಧಿಕಾರಿಗಳು ಭೇಟಿ ಕೊಟ್ಟ ಸುದ್ದಿಗಳು ಚಿತ್ರ ಸಮೇತ ಪ್ರಕಟವಾಗಲಿವೆ. ಮಳೆಯಿಂದಾಗಿ ನದಿ-ತೊರೆಗಳನ್ನು ದಾಟಲಾಗದೆ ತೂಗು ಸೇತುವೆಯ ಮೂಲಕವೋ ಕಡಿದಾದ ದಾರಿಗಳ ಮೂಲಕವೋ ತೆರಳಬೇಕಾದ ಶಾಲಾ ಮಕ್ಕಳ ಸಂಕಟಗಳನ್ನು ಮುಂದಿನ ದಿನಗಳಲ್ಲಿ ನಾವು ಓದಲಿದ್ದೇವೆ. ಕೊನೆಗೆ, 'ಈ ವರ್ಷ ಎಷ್ಟು ಸೆಂಟಿವಿೂಟರ್ ಮಳೆಯಾಗಿದೆ ಮತ್ತು ಅದರಿಂದ ಆಗಿರುವ ಹಾನಿಗಳೆಷ್ಟು' ಎಂಬ ಅಂಕಿ-ಅಂಶಗಳನ್ನು ಅಧಿಕಾರಿಗಳು ಬಿಡುಗಡೆಗೊಳಿಸುವ ಮೂಲಕ ಈ ವಿಷಯಕ್ಕೆ ಮುಕ್ತಾಯವನ್ನು ಘೋಷಿಸಲಾಗುತ್ತದೆ.
 ನಿಜವಾಗಿ, ಮಳೆ ಸ್ವಯಂ ಕ್ರೂರಿಯೇನೂ ಅಲ್ಲ. ಒಂದು ವೇಳೆ ಅದು ಕ್ರೂರಿಯೇ ಆಗಿರುತ್ತಿದ್ದರೆ, ಅದರ ಆಗಮನಕ್ಕಾಗಿ ಜನರು ಕಾಯುತ್ತಿರಲಿಲ್ಲ. ಮಳೆಯನ್ನು ಅತ್ಯಂತ ಹೆಚ್ಚು ಪ್ರೀತಿಸುವುದು ಮಕ್ಕಳು. ಮಳೆ ಹನಿಯಲು ಪ್ರಾರಂಭಿಸಿತೆಂದರೆ, ಮಕ್ಕಳು ಅಂಗಳದಲ್ಲಿ ಕುಣಿಯತೊಡಗುತ್ತಾರೆ. ತಮ್ಮಿಷ್ಟದ ಆಟ ಆಡುತ್ತಾರೆ. ಒದ್ದೆ ಮಾಡುವುದು ಮಳೆಯ ಗುಣಲಕ್ಷಣ. ಸಾಮಾನ್ಯವಾಗಿ ನೀರಿನಲ್ಲಿ ಒದ್ದೆಯಾಗುವುದನ್ನು ಮಕ್ಕಳು ಇಷ್ಟಪಡುವುದಿಲ್ಲ. ಆದರೆ, ಮಳೆಯಲ್ಲಿ ಒದ್ದೆಯಾಗುವುದು ಮಕ್ಕಳಿಗೆ ಅತ್ಯಂತ ಇಷ್ಟ. ಮಳೆ ಬಂತೆಂದರೆ ರೈತ ಖುಷಿಯಾಗುತ್ತಾನೆ. ಭೂಮಿ ಹಸಿರಾಗುತ್ತದೆ. ನೀರಿನ ಹಾಹಾಕಾರವೂ ಮಾಯವಾಗುತ್ತದೆ. ಅಷ್ಟಕ್ಕೂ, ಮಳೆಯೇನೂ ಸೂಚನೆ ಕೊಡದೇನೇ ದಿಢೀರ್ ಆಗಿ ಭೂಮಿಗೆ ಅಪ್ಪಳಿಸುವುದಿಲ್ಲವಲ್ಲ. ಮಳೆ ಆಗಮನದ ಬಗ್ಗೆ ಮಾಧ್ಯಮಗಳಲ್ಲಿ ತಿಂಗಳುಗಳ ಮೊದಲೇ ಸೂಚನೆ ಸಿಗುತ್ತದೆ. ಈ ಬಾರಿ ಮಳೆಯ ಪ್ರಮಾಣ ಎಷ್ಟಿರಬಹುದು ಎಂಬ ಬಗ್ಗೆ ಮೊದಲೇ ವರದಿಗಳು ಬರುತ್ತವೆ. ಹೀಗಿದ್ದೂ, ಒಂದು ನಿಶ್ಚಿತ ಅವಧಿಯಲ್ಲಿ ಮತ್ತು ನಿಶ್ಚಿತ ಪ್ರಮಾಣದಲ್ಲಿ ಸುರಿಯುವ ಮಳೆಯನ್ನೇ ಅಂತಿಮವಾಗಿ ನಾವೇಕೆ ಆರೋಪಿ ಸ್ಥಾನದಲ್ಲಿ ಕೂರಿಸಬೇಕು? ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ನಾವೇನು ವ್ಯವಸ್ಥೆ ಮಾಡಿದ್ದೇವೆ? ತೋಡುಗಳನ್ನು ಮುಚ್ಚಿ, ಅದರ ಮೇಲೆ ಕಾಂಕ್ರೀಟು ಕಟ್ಟಡಗಳನ್ನು ಕಟ್ಟಿರುವ ನಮಗೆ ಮಳೆಯನ್ನು ದೂರುವುದಕ್ಕೆ ಎಷ್ಟು ಅರ್ಹತೆಯಿದೆ? ನಗರಗಳು ಜಲಾವೃತವಾಗುವುದು ಮಳೆಯಿಂದಲೋ ಅಥವಾ ನಮ್ಮ ಧನದಾಹಿ ಜೀವನ ರೀತಿಯಿಂದಲೋ ಎಂದೊಮ್ಮೆ ನಾವು ಸ್ವಯಂ ಅವಲೋಕಿಸಿದರೇನು? ಮಳೆ ಹರಿದು ಹೋಗಬೇಕಾದಲ್ಲೆಲ್ಲಾ ಮನೆ, ಕಟ್ಟಡಗಳನ್ನು ಕಟ್ಟಿ ನೀರನ್ನು ತಡೆಗಟ್ಟುವವರು ನಾವೇ. ಆ ಬಳಿಕ ಮಳೆಯಿಂದಾಗಿ ಮನೆ ಕುಸಿತ, ನಗರ ಜಲಾವೃತ ಎಂದು ಆರೋಪಿಸುವವರೂ ನಾವೇ. ಹಾಗಂತ, ತೋಡುಗಳಿಗೆ ಸೇತುವೆ ನಿರ್ಮಿಸಿ ಕೊಡಬೇಕಾದುದು ಮಳೆ ಅಲ್ಲವಲ್ಲ. ವರ್ಷದ ಮೂರು ತಿಂಗಳಲ್ಲಷ್ಟೇ ಸುರಿದು ಹೊರಟು ಹೋಗುವ ಮಳೆ ಉಳಿದ 9 ತಿಂಗಳ ವರೆಗೆ ಮೌನವಾಗುತ್ತದೆ. ಆ ಸಂದರ್ಭದಲ್ಲಿ ಸೇತುವೆ ನಿರ್ಮಿಸಲು ಅಥವಾ ದುರ್ಬಲ ಗುಡಿಸಲುಗಳನ್ನು ದುರಸ್ತಿಗೊಳಿಸಲು ಮುಂದಾಗಬೇಕಾದುದು ಇಲ್ಲಿನ ವ್ಯವಸ್ಥೆ. ಆದರೆ ಅದನ್ನು ಮಾಡದ ವ್ಯವಸ್ಥೆ ತನ್ನ ಈ ವೈಫಲ್ಯವನ್ನು ಮಳೆಯ ಮೇಲೆ ಹೊರಿಸುವುದು ಎಷ್ಟು ಸಮರ್ಥನೀಯ? ಇದು ಕೇವಲ ಮಳೆಗೆ ಮಾತ್ರ ಸೀಮಿತವಲ್ಲ. ತಂಬಾಕು ಮಾರಾಟವು ವ್ಯಾಪಕವಾಗುತ್ತಿರುವುದಕ್ಕೆ ಕಂಪೆನಿಗಳ ಮಾರಾಟ ವಿಧಾನವೇ ಕಾರಣ ಎಂದೂ ಹೇಳಲಾಗುತ್ತಿದೆ. ಅದು ಗ್ರಾಹಕರನ್ನು ಸೆಳೆಯುವುದಕ್ಕೆ ಅಗ್ಗದ ಮತ್ತು ಭ್ರಮೆಯ ವಿಧಾನಗಳನ್ನು ಬಳಸುತ್ತಿದೆಯಂತೆ. ನಯವಾದ ಸುಳ್ಳನ್ನು ತನ್ನ ಮಾರಾಟ ತಂತ್ರವಾಗಿ ಉಪಯೋಗಿಸುತ್ತಿದೆಯಂತೆ. ಅಂದಹಾಗೆ, ಯಾವ ಕಂಪೆನಿಯೂ ಸರ್ವತಂತ್ರ ಸ್ವತಂತ್ರ ಅಲ್ಲವಲ್ಲ. ಅದಕ್ಕೆ  ಸರಕಾರ ಪರವಾನಿಗೆ ಕೊಡಬೇಕು. ಪರವಾನಿಗೆ ಕೊಡುವುದಕ್ಕಿಂತ ಮೊದಲು ಆ ಉತ್ಪನ್ನ ಮಾರಾಟ ಯೋಗ್ಯವೇ ಎಂಬುದು ಖಚಿತಗೊಳ್ಳಬೇಕು. ಗ್ರಾಹಕರನ್ನು ಅನಾರೋಗ್ಯಕ್ಕೆ ದೂಡುವ ಯಾವ ಅಂಶವಿದ್ದರೂ ಅದನ್ನು ತಡೆಯುವ ಎಲ್ಲ ಸ್ವಾತಂತ್ರ್ಯವೂ ವ್ಯವಸ್ಥೆಗಿದೆ. ಇಷ್ಟಿದ್ದೂ ನಾವು ಕಂಪೆನಿಗಳನ್ನು ದೂರುತ್ತೇವಲ್ಲ..
 ಏನೇ ಆಗಲಿ, ಈ ಮಳೆ, ಮರ, ಕಲ್ಲುಗಳನ್ನು ಆರೋಪಿ ಸ್ಥಾನದಲ್ಲಿ ಕೂರಿಸುವ ಮೂಲಕ ಒಂದೊಮ್ಮೆ ನಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಬಹುದಾದರೂ ಅವು ನಮ್ಮನ್ನೆಂದೂ ಕ್ಷಮಿಸದು. ಒಂದು ವೇಳೆ ಅವು ಮಾತನಾಡುವ ಸಾಮರ್ಥ್ಯ 
ಗಳಿಸಿಕೊಂಡಿರುತ್ತಿದ್ದರೆ ಇಷ್ಟರಲ್ಲೇ ಅವು ನಮ್ಮನ್ನು ಕಂಬಿಯೆಣಿಸುವಂತೆ ಮಾಡಿ ಬಿಡುತ್ತಿತ್ತೋ ಏನೋ. ಆದ್ದರಿಂದ, ಮಳೆಯನ್ನು ದೂರದಿರೋಣ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳೋಣ.

Tuesday 10 June 2014

ಮಿರ್ಝಾ ಎತ್ತಿರುವ ಪ್ರಶ್ನೆಗಳು ಮತ್ತು ಅನಾಥ ಗುರುತಚೀಟಿ

ಮಿರ್ಜಾ
   ಇನ್ನೂ ದೃಢಪಟ್ಟಿಲ್ಲದ ಆರೋಪವೊಂದರ ಹೆಸರಿನಲ್ಲಿ ಮಹಾರಾಷ್ಟ್ರದ ಪುಣೆಯ ಶೇಖ್ ಮುಹ್ಸಿನ್ ಸಾದಿಕ್ ಎಂಬ ಟೆಕ್ಕಿಯನ್ನು (ಕಂಪ್ಯೂಟರ್ ಎಂಜಿನಿಯರ್) ಹಿಂದೂ ರಾಷ್ಟ್ರ ಸೇನೆಯ ಕಾರ್ಯಕರ್ತರು ಕೊಲೆಗೈದ ಮರುದಿನವೇ ಇತ್ತ ಬೆಂಗಳೂರಿನಲ್ಲಿ ಎಜಾಝ್ ಅಹ್ಮದ್ ಮಿರ್ಝಾ ಎಂಬ ಯುವಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್.ಐ.ಎ.) ನಿರಪರಾಧಿ ಎಂದು ಘೋಷಿಸಿದೆ. ಹಾಗಂತ, ಈ ಎರಡೂ ಪ್ರಕರಣಗಳು ಪರಸ್ಪರ ಸಂಬಂಧ ಹೊಂದಿವೆ ಎಂದಲ್ಲ. ರಾಜ್ಯದ ಪತ್ರಕರ್ತರು ಮತ್ತು ರಾಜಕಾರಣಿಗಳ ಹತ್ಯೆಗೆ ಸಂಚು ನಡೆಸಿದ್ದಾರೆಂದು ಆರೋಪಿಸಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪತ್ರಕರ್ತ ಮುತೀಉರ್ರಹ್ಮಾನ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿ.ಆರ್.ಡಿ.ಓ.) ಕಿರಿಯ ಸಂಶೋಧಕ ಎಜಾಝ್ ಮಿರ್ಝಾ ಸೇರಿದಂತೆ 15 ಮಂದಿಯನ್ನು 2012 ಆಗಸ್ಟ್ 29ರಂದು ಬೆಂಗಳೂರಿನ ಪೊಲೀಸರು ಬಂಧಿಸಿದ್ದರು. ಆ ಬಳಿಕ ಮಾಧ್ಯಮಗಳಲ್ಲಿ ಭಯೋತ್ಪಾದನೆಯ ಹತ್ತು-ಹಲವು ಚಿತ್ರಕತೆಗಳು ಪ್ರಕಟವಾದುವು. ಪತ್ರಕರ್ತ ಮುತೀಉರ್ರಹ್ಮಾನ್ ಸಿದ್ದೀಕಿಯು ಇಡೀ ಭಯೋತ್ಪಾದಕ ಸಂಚಿನ ರೂವಾರಿ ಎಂದು ಕೆಲವು ಪತ್ರಿಕೆಗಳು ಬರೆದುವು. ಕೃಷ್ಣರಾಜ ಸಾಗರ ಅಣೆಕಟ್ಟನ್ನು ಸ್ಫೋಟಿಸುವ ಸಂಚನ್ನು ಈತ ಹೆಣೆದಿದ್ದ ಅಂದುವು. ಪತ್ರಕರ್ತ, ಸಂಶೋಧಕನ ವೇಷದಲ್ಲಿ ಭಯೋತ್ಪಾದಕರು ಹೇಗೆ ವ್ಯವಸ್ಥೆಯೊಳಗೆ ನುಸುಳಿಕೊಳ್ಳುತ್ತಾರೆ ಎಂಬ ಸಂಶೋಧನಾತ್ಮಕ ವರದಿಯನ್ನು ಭೀತಿಯ ಪದಗಳಲ್ಲಿ ಮಂಡಿಸಿದುವು. ಮಾಧ್ಯಮ ಭಯೋತ್ಪಾದನೆಯ ಪ್ರಭಾವ ಎಷ್ಟಿತ್ತೆಂದರೆ ಸ್ವತಃ ಡೆಕ್ಕನ್ ಹೆರಾಲ್ಡ್ ಪತ್ರಿಕೆಯೇ ಒಂದು ಹಂತದ ವರೆಗೆ ತಬ್ಬಿಬ್ಬಾಯಿತು. ಇದಾಗಿ ಆರು ತಿಂಗಳುಗಳ ಬಳಿಕ ಮುತೀಉರ್ರಹ್ಮಾನ್‍ನನ್ನು ಎನ್.ಐ.ಏ. ನಿರಪರಾಧಿಯೆಂದು ಘೋಷಿಸಿತು. ಇದೀಗ ಮಿರ್ಝಾನನ್ನು ಅದು ನಿರಪರಾಧಿಯೆಂದು ಸಾರಿದೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಸಾದಿಕ್‍ನನ್ನು ಬರ್ಬರವಾಗಿ ಕೊಲೆಗೈಯಲಾಗಿದೆ. ಶಿವಾಜಿ ಮತ್ತು ಬಾಳಾಠಾಕ್ರೆಯ ವಿರುದ್ಧ ಫೇಸ್‍ಬುಕ್‍ನಲ್ಲಿ ಅಸಭ್ಯ ಸ್ಟೇಟಸ್ ಹಾಕಿದ್ದಾನೆ ಎಂಬುದು ಈತನ ಮೇಲಿನ ಆರೋಪ. ಆದರೆ, ಕಿಡಿಗೇಡಿಗಳು ಆತನ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಈ ಸ್ಟೇಟಸ್ ಅನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಏನೇ ಆದರೂ, ಇದರ ಸತ್ಯಾಂಶ ಹೊರಬರುವ ಮೊದಲೇ ಆತನನ್ನು ಕೊಲೆ ಮಾಡಲಾಗಿದೆ.
 ಅಂದ ಹಾಗೆ, ಇಲ್ಲಿರುವ ಎರಡೂ ಘಟನೆಗಳಲ್ಲೂ ಒಂದು ಪ್ರಮುಖ ಸಾಮ್ಯತೆಯಿದೆ. ಅದುವೇ ಶಂಕೆ. ಏಜಾಝ್ ಮಿರ್ಝಾ ಅಥವಾ ಮುತೀಉರ್ರಹ್ಮಾನ್‍ನ ಬಂಧನದಲ್ಲೂ ಈ ಶಂಕೆಯೇ ಪ್ರಧಾನ ಪಾತ್ರ ವಹಿಸಿತ್ತು. ಇವರ ಬಂಧನಕ್ಕೆ ಪೂರಕವಾಗಿ ಪೊಲೀಸರು ಸಮಾಜದ ಮುಂದೆ ಯಾವ ಸಾಕ್ಷ್ಯವನ್ನೂ ಮಂಡಿಸಿರಲಿಲ್ಲ. ಪತ್ರಿಕಾಗೋಷ್ಠಿ ಕರೆದು ಒಂದೆರಡು ಆರೋಪಗಳನ್ನು ಹೊರಿಸಿದ್ದರೇ ಹೊರತು ಆ ಆರೋಪ ಹುಟ್ಟು ಹಾಕುವ ಹತ್ತು-ಹಲವು ಪ್ರಶ್ನೆಗಳಿಗೆ ಆವತ್ತಾಗಲಿ ಆ ಬಳಿಕವಾಗಲಿ ಉತ್ತರಿಸುವ ಪ್ರಯತ್ನವನ್ನೇ ಮಾಡಿಲ್ಲ. ಆ ನಂತರ ಮಾಧ್ಯಮಗಳಲ್ಲಿ ಪ್ರಕಟವಾದದ್ದೆಲ್ಲ ಶಂಕಿತ ಬರಹಗಳೇ. ಇದೀಗ ಪುಣೆಯ ಟೆಕ್ಕಿಯ ಹತ್ಯೆಗೂ ಇಂಥದ್ದೇ ಶಂಕೆ ಕಾರಣವಾಗಿದೆ. ಆತನ ಮೇಲೆ ಶಂಕೆ ವ್ಯಕ್ತಪಡಿಸಲಾಗಿತ್ತೇ ಹೊರತು ಆತನೇ ತಪ್ಪಿತಸ್ಥ ಎಂದು ಖಚಿತವಾಗಿ ಪೊಲೀಸರೂ ಹೇಳಿರಲಿಲ್ಲ. ಆದರೆ ಈ ದೇಶದಲ್ಲಿ ಮುಸ್ಲಿಮ್ ವ್ಯಕ್ತಿಯೋರ್ವ ಶಂಕೆಗೆ ಗುರಿಯಾಗುವುದು ಎಷ್ಟು ಅಪಾಯಕಾರಿ ಎಂಬುದು ಸಾದಿಕ್‍ನ ಮೂಲಕ ಮತ್ತೊಮ್ಮೆ ಸ್ಪಷ್ಟವಾಗಿದೆ. ನಿಜವಾಗಿ, ಸಾದಿಕ್‍ನ ಮೇಲೆ ತಕ್ಷಣಕ್ಕೆ ಶಂಕೆ ವ್ಯಕ್ತಪಡಿಸುವುದಕ್ಕೆ ಸಣ್ಣದೊಂದು ಆಧಾರವಾದರೂ ಇತ್ತು. ಆದರೆ ಹೆಚ್ಚಿನ ಬಾರಿ ಮುಸ್ಲಿಮ್ ಯುವಕರು ಶಂಕಿತಗೊಳ್ಳುವುದಕ್ಕೆ ಇಷ್ಟು ಆಧಾರಗಳೂ ಇರುವುದಿಲ್ಲ. ಈ ದೇಶದ ಉದ್ದಗಲದಿಂದ ಭಯೋತ್ಪಾದನೆ ಮತ್ತು ಶಂಕೆಯ ಹೆಸರಲ್ಲಿ ಅನೇಕ ಮುಸ್ಲಿಮ್ ಯುವಕರನ್ನು ಬಂಧಿಸಲಾಗಿದೆ. ಅನೇಕ ಬಾರಿ ಅವರ ಬಗ್ಗೆ ಅನುಮಾನ ಪಡುವುದಕ್ಕೆ ಇರುವ ಏಕೈಕ ಕಾರಣ ಅವರ ಮುಸ್ಲಿಮ್ ಐಡೆಂಟಿಟಿ. ಮುಸ್ಲಿಮ್ ಹೆಸರು ಮತ್ತು ಚಹರೆಯನ್ನು ಹೊಂದಿರುವ ವ್ಯಕ್ತಿಯ ಮೇಲೆ ಅನುಮಾನ ಬರುವುದು ಸಹಜ ಎಂಬ ವಾತಾವರಣವನ್ನು ಈ ದೇಶದಲ್ಲಿ ವ್ಯವಸ್ಥಿತವಾಗಿ ಹುಟ್ಟು ಹಾಕಲಾಗಿದೆ. ಆದ್ದರಿಂದಲೇ ಮಿರ್ಝಾ, ಮುತೀಅïರನ್ನು ಪೊಲೀಸರು ಭಯೋತ್ಪಾದಕರೆಂದು ಕರೆದಾಗ ಅದನ್ನು ಸಮರ್ಥಿಸುವಂತೆ ಮಾಧ್ಯಮ ಕ್ಷೇತ್ರದ ಕೆಲವರು ವರ್ತಿಸಿದ್ದು. ಈ ಬಂಧಿತರಲ್ಲಿ ಭಯೋತ್ಪಾದನೆಯ ರೋಗಾಣುಗಳು ಇವೆಯೇ ಎಂಬ ಪತ್ತೆದಾರಿಕೆಯಲ್ಲಿ ತೊಡಗಿದ್ದು.
 ಭಯೋತ್ಪಾದಕನೆಂಬ ಗುರುತು ಚೀಟಿಯನ್ನು ಎರಡು ವರ್ಷಗಳ ವರೆಗೆ ಕೊರಳಿಗೆ ತೂಗು ಹಾಕಿಕೊಂಡ ಮಿರ್ಝಾನಿಗೆ ಇದೀಗ ನಿರಪರಾಧಿ ಎಂಬ ಗುರುತು ಚೀಟಿ ಲಭ್ಯವಾಗಿದೆ. ಹಾಗಂತ, ಆತ ಆ ಭಯೋತ್ಪಾದಕ ಗುರುತು ಚೀಟಿಯನ್ನು ಕೇಳಿ ಪಡೆದಿರಲಿಲ್ಲ ಅಥವಾ ಸ್ವಯಂ ಸಂಪಾದಿಸಿಯೂ ಇರಲಿಲ್ಲ. ಅದನ್ನು ಸ್ಥಾಪಿತ ಹಿತಾಸಕ್ತಿಗಳು ಬಲವಂತವಾಗಿ ಆತನ ಕೊರಳಿಗೆ ನೇತು ಹಾಕಿದ್ದುವು. ಆತ ಧರಿಸಲು ಒಪ್ಪದೇ ಇದ್ದಾಗ ಆತನ ಮೇಲೆ ಹಿಂಸೆ ಎಸಗಲಾಯಿತು. ಖಾಲಿ ಪತ್ರಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು. ನ್ಯಾಯಾಧೀಶರ ಮುಂದೆ ಈ ಗುರುತು ಚೀಟಿಯನ್ನು ಸಮರ್ಥಿಸಿಕೊಳ್ಳುವಂತೆ ಬೆದರಿಕೆ ಹಾಕಲಾಯಿತು. ಅದೇ ವೇಳೆ, ನಾಗರಿಕ ಜಗತ್ತು ಮತ್ತು ಆ ಜಗತ್ತಿನಲ್ಲಿ ಪ್ರಾಬಲ್ಯ ಸ್ಥಾಪಿಸಿರುವ ಮಾಧ್ಯಮದ ಮಂದಿಯೂ ಆತನ ಆ ಗುರುತು ಚೀಟಿಯನ್ನು ಅಸಲಿ ಎಂದೇ ಕರೆದರು. ಆ ಗುರುತು ಚೀಟಿ ಇಡೀ ರಾಜ್ಯವನ್ನೇ ಧ್ವಂಸಗೊಳಿಸುವಷ್ಟು ಭೀಕರ ರೂಪದ್ದು ಅಂದರು. ಆತನೊಂದಿಗೆ ಸಲುಗೆಯಿಂದಿದ್ದ ಗೆಳೆಯರೇ ಆ ಗುರುತನ್ನು ಕಂಡು ಭಯಪಟ್ಟರು. ಮನೆ ಸ್ಮಶಾನವಾಯಿತು. ಡಿಆರ್‍ಡಿಓ ಅಂತೂ ಆತನನ್ನು ಕೆಲಸದಿಂದಲೇ ವಜಾಗೊಳಿಸಿತು. ಹೀಗೆ ಪಡಬಾರದ ಸಂಕಟವನ್ನು ಅನುಭವಿಸಿದ ಆತನಿಗೆ ಇದೀಗ 'ನಿರಪರಾಧಿ' ಎಂಬ ಗುರುತು ಚೀಟಿಯನ್ನು ನೀಡಲಾಗಿದೆ. ಆದರೆ, ಇದನ್ನು ಧರಿಸುವ ಮೊದಲು ಈ ಮೊದಲಿನ ಗುರುತು ಚೀಟಿಯ ಇತ್ಯರ್ಥ  ಆಗಬೇಕಾಗಿದೆ. ಅದನ್ನು ಧರಿಸಬೇಕಾದವರು ಯಾರೆಲ್ಲ? ಅವರೇಕೆ ಇದೀಗ ಅದನ್ನು ಧರಿಸಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ? ಎರಡು ವರ್ಷಗಳ ವರೆಗೆ ಧರಿಸಿಕೊಂಡು ಓಡಾಡಿದ ಆತನ ಗುರುತು ಚೀಟಿಯನ್ನು ಕನಿಷ್ಠ ಎರಡು ದಿನಗಳ ಮಟ್ಟಿಗಾದರೂ ಧರಿಸಿಕೊಂಡು ಓಡಾಡಲು ಇವರು ಮುಂದೆ ಬರುತ್ತಿಲ್ಲವೇಕೆ? ಮಿರ್ಝಾ ನಿರಪರಾಧಿ ಎಂದಾದರೆ, ಆತನನ್ನು ಭಯೋತ್ಪಾದಕನೆಂದು ಕರೆದವರು ಏನಾಗಬೇಕು? ಅವರ ಕೊರಳಿಗೆ ಈ ಸಮಾಜ ಯಾವ ಗುರುತನ್ನು ನೇತು ಹಾಕಬೇಕು?
  
ಸಾದಿಕ್

ಏನೇ ಆದರೂ, ಮಿರ್ಝಾ ಆಗಲಿ, ಸಾದಿಕ್ ಆಗಲಿ  ಸಮಾಜವೆಂಬ ನಾವೇ ಹುಟ್ಟು ಹಾಕಿರುವ ಭ್ರಮೆಯೊಂದರ ಬಲಿಪಶುಗಳು. ಅವರು ಶಂಕಿತರಾದದ್ದು ತಮ್ಮ ಕೃತ್ಯಗಳಿಂದಲ್ಲ, ನಮ್ಮ ಭ್ರಮೆಗಳಿಂದ. ಈ ಭ್ರಮೆಯು ಸಾದಿಕ್‍ನ ಜೀವ ತೆಗೆದರೆ, ಮಿರ್ಝಾನ ಅತ್ಯಮೂಲ್ಯ ಸಂತಸವನ್ನೂ ಆಯುಷ್ಯವನ್ನೂ ಕಸಿದುಕೊಂಡಿದೆ. ಮಾತ್ರವಲ್ಲ, ಇಂಥ ಅನೇಕಾರು ಮಿರ್ಝಾರ ಬದುಕನ್ನು ಅದು ಇವತ್ತೂ ಕಸಿದುಕೊಳ್ಳುತ್ತಲೂ ಇವೆ. ಒಂದು ವೇಳೆ ಸಾದಿಕ್‍ನ ಮೇಲಿದ್ದ ಶಂಕೆ ನಿಜವೇ ಆಗಿರುತ್ತಿದ್ದರೂ ಆತನಿಗೆ ಕೆಲವು ತಿಂಗಳುಗಳ ಶಿಕ್ಷೆಯಷ್ಟೇ ಆಗುತ್ತಿತ್ತು. ಆದರೆ ನಾವು ಬಿತ್ತಿರುವ ಭ್ರಮೆಯು ಯಾವ ಪ್ರಮಾಣದಲ್ಲಿದೆಯೆಂದರೆ, ಕೊಲೆಯೇ ನಡೆಸುವಷ್ಟು ಮತ್ತು ಅದನ್ನು ನಿರ್ಲಜ್ಜವಾಗಿ ಸಮರ್ಥಿಸುವಷ್ಟು. ಇವತ್ತು ನಿರಪರಾಧಿ ಮಿರ್ಝಾ ಎತ್ತಿರುವ ಪ್ರಶ್ನೆಯನ್ನು ನಾಳೆ ಸಾದಿಕ್‍ನೂ ಎತ್ತಬಹುದು. ಆದರೆ ಉತ್ತರಿಸುವವರು ಯಾರು?

Saturday 7 June 2014

ಮಹೇಶ್ವರಿ, ಶಿಲ್ಪ, ಶ್ರೀನಿವಾಸ ಮತ್ತು ನಾವು

   ಪ್ರೀತಿ, ಪ್ರೇಮಗಳ ಕಾರಣದಿಂದಾಗಿ ಈ ದೇಶದಲ್ಲಿ ಆಗುತ್ತಿರುವ ಹತ್ಯೆ ಮತ್ತು ಆತ್ಮಹತ್ಯೆಗಳ ಸಂಖ್ಯೆ ಸಣ್ಣದೇನೂ ಅಲ್ಲ. ಪತ್ರಿಕೆಗಳು ಇಂಥ ಸುದ್ದಿಗಳನ್ನು ಪ್ರತಿದಿನ ಹೊತ್ತುಕೊಂಡೇ ಬರುತ್ತವೆ. ಅವು ಇವತ್ತು ಎಷ್ಟು ಮಾಮೂಲಿ ಆಗಿಬಿಟ್ಟಿವೆ ಎಂದರೆ ಹೆಚ್ಚಿನ ಬಾರಿ ಅವು ಓದುಗರ ಗಮನವನ್ನೇ ಸೆಳೆಯುತ್ತಿಲ್ಲ. ಪತ್ರಿಕೆಗಳ ಒಳಪುಟಗಳಲ್ಲಿ ಪ್ರಕಟವಾಗುವಷ್ಟು ಸಹಜ ಅನ್ನಿಸಿಕೊಂಡಿರುವ ಇಂಥ ಪ್ರಕರಣಗಳು ಓದುಗರಲ್ಲಿ ಅಪಾರ ಕುತೂಹಲವನ್ನು ಇವತ್ತು ಉಳಿಸಿಕೊಂಡೂ ಇಲ್ಲ. ಓಡಿಹೋದ ಅಥವಾ ಆತ್ಮಹತ್ಯೆ ಮಾಡಿಕೊಂಡ ಯುವ ಜೋಡಿಯನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಿ, ಅವರ ನಿರ್ಧಾರಕ್ಕೆ ನಾಲ್ಕು ಬೈಗುಳಗಳನ್ನು ಬೈಯ್ದು ನಾವೆಲ್ಲ ಸುಮ್ಮನಾಗುತ್ತೇವೆ. ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಹೆತ್ತವರನ್ನೇ ತೊರೆಯುವ ಹದಿಹರೆಯದ ಆವೇಶವನ್ನು ಖಂಡಿಸುತ್ತೇವೆ. ನಿಜವಾಗಿ, ಪರಸ್ಪರ ಪ್ರೀತಿಸುವ ಯುವ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೋ ಪರಾರಿಯಾಗುವುದಕ್ಕೋ ನಿರ್ಧರಿಸುವುದರಲ್ಲಿ ಆ ಜೋಡಿಯ ಪಾತ್ರ ಮಾತ್ರ ಇರುವುದಲ್ಲ. ಅವರಿಗಿಂತ ದೊಡ್ಡ ಪಾತ್ರವನ್ನು ಈ ಸಮಾಜ ನಿರ್ವಹಿಸುತ್ತದೆ. ಆದರೆ ಅದನ್ನು ಗುರುತಿಸಿ, ಸಮಾಜವನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕೆ ಹದಿಹರೆಯಕ್ಕೆ ಸಾಧ್ಯವಾಗುವುದಿಲ್ಲ. ತಮ್ಮ ಪ್ರೇಮವು ಗಲ್ಲು ಶಿಕ್ಷೆಗೆ ಅರ್ಹವಾದ ಅಪರಾಧ ಎಂಬ ತಪ್ಪಿತಸ್ಥ ಭಾವನೆಯಲ್ಲಿ ಇಂಥ ಜೋಡಿಗಳು ಹೆಚ್ಚಿನ ಬಾರಿ ಕುಗ್ಗಿ ಹೋಗುವುದೇ ಹೆಚ್ಚು. ಹೀಗೆ ಸಮಾಜವನ್ನು ಎದುರಿಸುವ ಸಾಮರ್ಥ್ಯವಿಲ್ಲದೇ ಓಡಿ ಹೋಗುವ ಅಥವಾ ಸಾವಿಗೆ ಶರಣಾಗುವ ಯುವ ಜೋಡಿಗಳ ಪ್ರಕರಣಗಳು ಇವತ್ತಿನ ದಿನಗಳಲ್ಲಿ ಮತ್ತೆ ಮತ್ತೆ ಸುದ್ದಿಯಾಗುತ್ತಿವೆ.
 ಬಳ್ಳಾರಿಯ ಸಿರಗುಪ್ಪ ತಾಲೂಕಿನ ಹನುಮಂತ ಮತ್ತು ಮಹೇಶ್ವರಿ ಎಂಬ ಯುವ ಜೋಡಿಯನ್ನು ಕಳೆದ ವಾರ ಕೊಲೆ ಮಾಡಲಾಗಿದೆ. ಆಕೆ ಹನುಮಂತನನ್ನು ಪ್ರೀತಿಸುತ್ತಿದ್ದಳು. ಆದರೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಮನೆಯವರು ಶ್ರೀನಿವಾಸ ಎಂಬವನಿಗೆ ಮದುವೆ ಮಾಡಿಕೊಟ್ಟರು. ಈ ಮದುವೆಯನ್ನು ಒಪ್ಪಿಕೊಳ್ಳದೇ ಆಕೆ ಹನುಮಂತನೊಂದಿಗೆ ಹೊರಟು ಹೋದಾಗ ಶ್ರೀನಿವಾಸನು ಅವಮಾನ ತಡೆಯಲಾರದೇ ಅವರಿಬ್ಬರನ್ನು ಊರ ಹೊರಗೆಯೇ ಹತ್ಯೆ ಮಾಡಿಸಿದ್ದಾನೆ. ಈ ಪ್ರಕರಣಕ್ಕಿಂತ ಒಂದು ತಿಂಗಳು ಮೊದಲಷ್ಟೇ ಮೈಸೂರಿನ ಶಿಲ್ಪಾ ನಾಯಕ್‍ಳನ್ನು ಕೊಲೆ ಮಾಡಲಾಗಿತ್ತು. ಅಭಿಷೇಕ್ ಎಂಬ ದಲಿತನನ್ನು ಪ್ರೀತಿಸಿ ವಿವಾಹವಾದದ್ದೇ ಈ ಹತ್ಯೆಗೆ ಕಾರಣವಾಗಿತ್ತು. ಸಾಮಾನ್ಯವಾಗಿ, ಇಂಥ ಪ್ರೇಮ ಪ್ರಕರಣಗಳು ಹತ್ಯೆ, ಆತ್ಮಹತ್ಯೆ, ಪರಾರಿಗಳ ಮೂಲಕ ಕೆಲವೊಮ್ಮೆ ಸುದ್ದಿಯಾದರೆ ಇನ್ನೂ ಹಲವು ಸುದ್ದಿಯಾಗದೇ ಸತ್ತು ಹೋಗುತ್ತವೆ. ಇವತ್ತು ಓರ್ವ ಹೆಣ್ಣು ಮಗಳನ್ನು ಕೊಲೆಗೈದ ಕ್ರಿಮಿನಲ್ ಅಪರಾಧದೊಂದಿಗೆ ಶ್ರೀನಿವಾಸ ತನ್ನ ‘ಮಧುಚಂದ್ರ’ದ ಬದುಕನ್ನು ಆರಂಭಿಸಿದ್ದಾನೆ. ಆದರೆ ಅಂಥದ್ದೊಂದು ಭೀಕರ ಕೃತ್ಯ ನಡೆಸುವಲ್ಲಿ ಆತನಿಗೆ ಪ್ರಚೋದನೆ ಕೊಟ್ಟದ್ದಾದರೂ ಯಾವುದು? ಮಹೇಶ್ವರಿಯ ನಿರ್ಧಾರವನ್ನು ಖಂಡಿಸುವಾಗಲೂ, ಅದರ ಜೊತೆಗೆ ಹತ್ತು-ಹಲವು ಪ್ರಶ್ನೆಗಳು ಎದುರಾಗುತ್ತವೆ. ಸಾಕಿ-ಸಲಹಿದ ಹೆತ್ತವರನ್ನೇ ತೊರೆದು ಹೋಗುವಷ್ಟು ಆಕೆಯ ಹೃದಯವನ್ನು ಕಟುವಾಗಿಸಿದ್ದು ಯಾವುದು? ಶ್ರೀನಿವಾಸನಾಗಲಿ, ಮಹೇಶ್ವರಿಯಾಗಲಿ ಈ ಹಿಂದೆ ಕ್ರಿಮಿನಲ್ ಕೃತ್ಯಗಳಲ್ಲೇನೂ ಭಾಗಿಯಾಗಿರಲಿಲ್ಲ. ವಿವಾಹ ಬಂಧನದೊಂದಿಗೆ ಜೀವನದ ಹೊಸ ಮಜಲನ್ನು ತುಳಿಯಬೇಕಾದ ಯುವ ಸಮೂಹವನ್ನು ಅರ್ಥೈಸಿಕೊಳ್ಳುವಲ್ಲಿ ಹೆತ್ತವರು ಎಡವುತ್ತಿದ್ದಾರೆಯೇ? ಈ ಎಡವಿಕೆಗೆ ಕಾರಣವೇನು? ಪ್ರಿಯಕರನ ಮಾತು ಕೇಳಿ ಗಂಡನನ್ನೇ ನಿರ್ಲಕ್ಷಿಸಿದಳು ಅಥವಾ ಹೆತ್ತವರನ್ನೇ ತೊರೆದಳು ಅನ್ನುವ ಒಂದು ವಾಕ್ಯದಲ್ಲಿ ಮುಕ್ತಾಯಗೊಳಿಸುವುದಕ್ಕೆ ಇಂಥ ಪ್ರಕರಣಗಳು ಅರ್ಹವೇ?
 ಯುವಕ ಮತ್ತು ಯುವತಿಯ ಮಧ್ಯೆ ಪ್ರೇಮಾಂಕುರವಾಗುವುದಕ್ಕೆ ಕಾರಣ ಅವರಿಬ್ಬರು ಮಾತ್ರ ಖಂಡಿತ ಅಲ್ಲ. ಅಂಥದ್ದೊಂದು ವಾತಾವರಣವನ್ನು ಹಿರಿಯರಾದ ನಾವೆಲ್ಲ ನಿರ್ಮಿಸಿಕೊಟ್ಟಿದ್ದೇವೆ. ನಮ್ಮ ಸಿನಿಮಾಗಳು ತಯಾರಾಗುವುದೇ ಪ್ರೀತಿ-ಪ್ರೇಮಗಳ ಸುತ್ತ. ತನ್ನ ಪ್ರೇಮವನ್ನು ಗೆಲ್ಲುವುದಕ್ಕಾಗಿ ಹೀರೋ ಯಾರ ಹತ್ಯೆ ಮಾಡುವುದಕ್ಕೂ ಹೇಸುವುದಿಲ್ಲ. ಈ ಪ್ರೇಮ ವ್ಯವಹಾರಕ್ಕೆ ಹೀರೋಯಿನ್‍ಳ ತಂದೆ ವಿರುದ್ಧ ಎಂದಾದರೆ ಆತನನ್ನು ಖಳನಂತೆ ಬಿಂಬಿಸಲಾಗುತ್ತದೆಯೇ ಹೊರತು ಆ ಅಪ್ಪನ ಅನುಮತಿ ಇಲ್ಲದೇ ಪ್ರೀತಿಸಿದ ಹೀರೋ ಹೀರೋಯಿನ್‍ಗಳನ್ನಲ್ಲ. ಆ ಅಪ್ಪನಿಗೆ ಹೀರೋನಿಂದ ಬೀಳುವ ಪ್ರತಿ ಹೊಡೆತಕ್ಕೂ ಸಿನಿಮಾ ಮಂದಿರಗಳಲ್ಲಿ ಶಿಳ್ಳೆ ಬೀಳುತ್ತದೆ. ಹೀರೋ ಎಲ್ಲರನ್ನೂ ಚೆಂಡಾಡುವುದು, ಅಂತಿಮವಾಗಿ ಹೋರೋಯಿನ್‍ಳ ಅಪ್ಪ ಆ ಪ್ರೀತಿಗೆ ಹಸಿರು ನಿಶಾನೆ ತೋರುವುದು ಅಥವಾ ಹೀರೋ-ಹೀರೋಯಿನ್ ಊರು ಬಿಟ್ಟು ಹೋಗುವುದು, ಸಾಯುವುದು.. ಹೀಗೆ ಸಾಗುತ್ತವೆ ಹೆಚ್ಚಿನ ಸಿನಿಮಾಗಳು. ಇನ್ನು, ಟಿ.ವಿ.ಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಸ್ಥಿತಿಯೂ ಭಿನ್ನವಲ್ಲ. ರಿಯಾಲಿಟಿ ಶೋಗಳ ಪಾಡಂತೂ ಇದಕ್ಕಿಂತಲೂ ಕರಾಳ. ಪ್ರೇಮ ಕತೆಯಿಲ್ಲದ ಒಂದೇ ಒಂದು ಧಾರಾವಾಹಿ ಈ ದೇಶದಲ್ಲಿ ಪ್ರಸಾರವಾಗಿರುವ ಸಾಧ್ಯತೆ ಇಲ್ಲ. ಹಾಗಂತ ಇವುಗಳನ್ನು ನಿರ್ಮಿಸುವುದು ಈ ಹದಿಹರೆಯದ ಯುವಕ-ಯುವತಿಯರು ಅಲ್ಲವಲ್ಲ. ಹೀಗಿರುವಾಗ ಅವರು ಕೈಗೊಳ್ಳುವ ತಪ್ಪು ನಿರ್ಧಾರಕ್ಕೆ ಅವರೊಬ್ಬರನ್ನೇ ದೂಷಿಸುವುದು ಎಷ್ಟು ಸರಿ? ತಮಾಷೆ ಏನೆಂದರೆ, ಇಂಥ ಸಿನಿಮಾಗಳನ್ನು ತಯಾರಿಸಿ ಸಮಾಜಕ್ಕೆ ಅರ್ಪಿಸುವವರಿಗೆ ರಾಷ್ಟ್ರಪ್ರಶಸ್ತಿ ಸಿಗುತ್ತದೆ. ಅತ್ಯುತ್ತಮ ಚಿತ್ರಕತೆ ಎಂದು ಕೊಂಡಾಡಲಾಗುತ್ತದೆ. ಸಮಾಜವನ್ನು ತಪ್ಪು ದಾರಿಗೆಳೆಯುವ ಪಾತ್ರ ನಿರ್ವಹಿಸಿದ್ದಕ್ಕಾಗಿ ಅತ್ಯುತ್ತಮ ನಟ, ನಟಿ, ನಿರ್ದೇಶಕ ಪ್ರಶಸ್ತಿಗಳೂ ಒಲಿಯುತ್ತವೆ. ಒಂದು ಕಡೆ ಸಿನಿಮಾಗಳ ಪಾತ್ರವನ್ನೇ ನಿಜ ಜೀವನದಲ್ಲಿ ನಿರ್ವಹಿಸಿದ್ದಕ್ಕಾಗಿ ಸರಕಾರ ಕೇಸು ದಾಖಲಿಸುವಾಗ ಇನ್ನೊಂದು ಕಡೆ ಅದೇ ಸರಕಾರ ಅಂಥ ಸಿನಿಮಾಗಳನ್ನು ನಿರ್ಮಿಸಿದ್ದಕ್ಕಾಗಿ ಬಹುಮಾನ ಕೊಟ್ಟು ಪುರಸ್ಕರಿಸುತ್ತದೆ. ಯಾಕಿಂಥ ದ್ವಂದ್ವಗಳು?
 ಕೇವಲ ಸಿನಿಮಾಗಳು, ಧಾರಾವಾಹಿಗಳು ಎಂದಲ್ಲ. ನಮ್ಮ ಒಟ್ಟು ಬದುಕುವ ವಿಧಾನವೇ ಆಧುನಿಕತೆಯ ಕೈಯಲ್ಲಿ ಹೈಜಾಕ್ ಆಗಿಬಿಟ್ಟಿದೆ. ಶಾಲೆ, ಕಾಲೇಜು, ಮಾರುಕಟ್ಟೆ, ಮದುವೆ, ಕ್ರೀಡೆ.. ಎಲ್ಲದರಲ್ಲೂ ಅತಿ ಅನ್ನುವಷ್ಟು ಮುಕ್ತತೆ ಇದೆ. ಗಂಡು ಮಕ್ಕಳಿಗೆ ಮಾತ್ರವಾಗಿದ್ದ ಕಾಲೇಜುಗಳು ಇವತ್ತಿನ ದಿನಗಳಲ್ಲಿ ಹೆಣ್ಣು ಮಕ್ಕಳನ್ನೂ ಸೇರಿಸಿಕೊಳ್ಳುತ್ತಿವೆ. ಕೇವಲ ಗಂಡು  ಮಕ್ಕಳೇ ಇರುವ ಅಥವಾ ಹೆಣ್ಣು ಮಕ್ಕಳೇ ಇರುವ ಕಾಲೇಜುಗಳಿಗೆ ಸೇರ್ಪಡೆಗೊಳ್ಳಲು ಮಕ್ಕಳು ಹಿಂಜರಿಯುತ್ತಿದ್ದಾರೆ ಎಂಬ ಸಬೂಬನ್ನು ಕಾಲೇಜು ಆಡಳಿತ ಮಂಡಳಿಗೇ ಇವತ್ತು ನೀಡತೊಡಗಿವೆ. ಒಂದು ರೀತಿಯಲ್ಲಿ, ಹೆಣ್ಣು-ಗಂಡು ನಡುವಿನ ಸಹಜ ಅಂತರವು ಕಡಿಮೆಯಾಗುತ್ತಾ ಬರುತ್ತಿದೆ. ಹೀಗಿರುವಾಗ, ಪರಸ್ಪರ ಆಕರ್ಷಣೆಗೆ ಒಳಗಾಗುವ ಯುವಕ ಮತ್ತು ಯುವತಿಯನ್ನು ಮಾತ್ರವೇ ಅಪರಾಧಿಯಾಗಿ ಬಿಂಬಿಸುವುದಕ್ಕೆ ಯಾವ ಅರ್ಥವೂ ಇಲ್ಲ. ಈ ಆಕರ್ಷಣೆಯು ಈ ಮಟ್ಟಕ್ಕೆ ಬೆಳೆಯುವುದರಲ್ಲಿ ನಮ್ಮೆಲ್ಲರ ಪಾತ್ರ ಇದೆ.. ಮಹೇಶ್ವರಿ ಆಗಲಿ, ಶಿಲ್ಪಾ ನಾಯಕ್ ಆಗಲಿ ನಮ್ಮದೇ ಉತ್ಪನ್ನಗಳು. ಈ ಸಮಾಜದ ಆಗು-ಹೋಗುಗಳು, ಅಭಿರುಚಿಗಳು, ಸಿನಿಮಾಗಳು.. ಮುಂತಾದುವುಗಳನ್ನು ನೋಡಿಕೊಂಡೇ ಅವರು ಬೆಳೆದಿದ್ದಾರೆ. ಶ್ರೀನಿವಾಸ ಕೂಡಾ ಈ ಸಮಾಜದ ಮಗುವೇ. ಆತ ಇವತ್ತು ಖಳನಾಯಕನಾಗಿ ಗುರುತಿಸಿಕೊಳ್ಳುತ್ತಿದ್ದರೂ ಆತನೊಳಗೆ ಅಂಥದ್ದೊಂದು ಕ್ರೌರ್ಯವನ್ನು ತುಂಬಿರುವುದು ಈ ಸಮಾಜದ ದ್ವಂದ್ವಗಳೇ. ಇಂಥ ಕಟು ಸತ್ಯಗಳನ್ನು ಒಪ್ಪಿಕೊಳ್ಳದ ಹೊರತು ಬರೇ ಕೇಸು ಜಡಿಯುವುದರಿಂದಲೋ ಶಾಪ ಹಾಕುವುದರಿಂದಲೋ ಸಮಸ್ಯೆಗೆ ಪರಿಹಾರ ಸಿಗಲಾರದು. ಹದಿಹರೆಯ ಎಂಬುದು ಕುತೂಹಲದ ವಯಸ್ಸು. ಈ ಕುತೂಹಲವನ್ನು ನೈತಿಕ ಪಾಠಗಳ ಮೂಲಕ ತಣಿಸುವ, ಅದಕ್ಕೆ ಪೂರಕವಾದ ವಾತಾವರಣವನ್ನು ಬೆಳೆಸುವ ಜವಾಬ್ದಾರಿ ಎಲ್ಲ ಹಿರಿಯರ ಮೇಲಿದೆ. ಹದಿಹರೆಯದವರ ಆಲೋಚನೆಯನ್ನು ಸಮಾಜಮುಖಿಗೊಳಿಸಬೇಕು. ಅದಕ್ಕೆ ಯೋಗ್ಯವಾದ ತಾಣಗಳಾಗಿ ಶಾಲೆ, ಕಾಲೇಜುಗಳನ್ನು ಮಾರ್ಪಡಿಸಬೇಕು. ಯುವ ಸಮೂಹದ ಮನಸ್ಸನ್ನು ಪ್ರಚೋದಿಸುವ ಯಾವುದೂ ಸಿನಿಮಾ, ಧಾರಾವಾಹಿಗಳ ಹೆಸರಲ್ಲಿ ಬಿಡುಗಡೆಗೊಳ್ಳದಂತೆ ನೋಡಿಕೊಳ್ಳಬೇಕು. ಅವರು ತಮ್ಮ ಎಲ್ಲವನ್ನೂ ತಾಯಿಯಲ್ಲೋ ತಂದೆಯಲ್ಲೋ ಅಥವಾ ಹಿರಿಯರಲ್ಲೋ ಹಂಚಿಕೊಳ್ಳುವಂತಹ ಮುಕ್ತ ವಾತಾವರಣವನ್ನು ಮನೆಯಲ್ಲಿ ಬೆಳೆಸಬೇಕು. ಆಗಾಗ ಹಿತ ವಚನಗಳನ್ನು ಹೇಳುತ್ತಾ ಧಾರ್ಮಿಕ ಮೌಲ್ಯಗಳನ್ನು ನೆನಪಿಸುತ್ತಾ ತಿದ್ದುವ ಪ್ರಯತ್ನ ಮಾಡುತ್ತಲಿರಬೇಕು. ನಾವು ನಿಮ್ಮ ಹಿತಾಕಾಂಕ್ಷಿಗಳು ಎಂಬ ಸೂಚನೆಯೊಂದು ಪ್ರತಿ ಸಂದರ್ಭದಲ್ಲೂ ಹೆತ್ತವರಿಂದ ಅವರಿಗೆ ದಾಟುತ್ತಲಿರಬೇಕು.
 ಏನೇ ಆಗಲಿ, ಯುವ ಸಮೂಹಕ್ಕೆ ಮನರಂಜನೆಯ ಹೆಸರಲ್ಲಿ ಹಿರಿಯರಾದ ನಾವು ಕೊಡುತ್ತಿರುವುದು ವಿಷವನ್ನೇ. ಆ ವಿಷದ ಪ್ರಭಾವಕ್ಕೆ ಮಕ್ಕಳು ಒಳಗಾದರೆ ಅದಕ್ಕಾಗಿ ಕೇಸು ಜಡಿಯಬೇಕಾದುದು ಅವರ ಮೇಲಷ್ಟೇ ಅಲ್ಲ. ಅದನ್ನು ಕೊಟ್ಟವರ ಮೇಲೂ ಕೇಸು ಹಾಕಬೇಕು. ಆಗ ಮಾತ್ರ ವಿಷ ತಯಾರಿಸುವವರು ಎಚ್ಚೆತ್ತುಕೊಳ್ಳುತ್ತಾರೆ.