Friday 20 June 2014

ಮನೆ ಉರುಳಿಸುವ ಮಳೆಯೂ ಮನೆ ಕಟ್ಟುವ ನಾವೂ..

    ಮರ, ಗಿಡ, ಕಲ್ಲು, ಪ್ರಾಣಿ, ಪಕ್ಷಿ.. ಮುಂತಾದುವುಗಳ ಮೇಲೆ ಆರೋಪ ಹೊರಿಸುವುದು ಯಾಕೆ ಸುಲಭ ಅಂದರೆ, ಅವು ತಿರುಗಿ ಉತ್ತರ ಕೊಡುವುದಿಲ್ಲ. ಮಾನನಷ್ಟ ಮೊಕದ್ದಮೆ ಹೂಡುವುದಿಲ್ಲ. ಆರೋಪಿಸುವವರ ಬಣ್ಣ ಬಯಲು ಮಾಡುವ ಸಾಮರ್ಥ್ಯವೂ ಇರುವುದಿಲ್ಲ. ಆದ್ದರಿಂದಲೇ ಅನೇಕ ಬಾರಿ ಮನುಷ್ಯರಾದ ನಾವು ಮಳೆಯ ಮೇಲೆ, ಅಣೆಕಟ್ಟು, ತಂಬಾಕಿನ ಮೇಲೆ ಆರೋಪ ಹೊರಿಸಿ ಸುಮ್ಮನಾಗುತ್ತೇವೆ. ಕಳೆದ ವಾರ ತಂಬಾಕು ಕಂಪೆನಿಗಳನ್ನು ತರಾಟೆಗೆತ್ತಿಕೊಳ್ಳುವ ವರದಿಯೊಂದು ಬಿಡುಗಡೆಯಾಯಿತು. ತಂಬಾಕು ಕಂಪೆನಿಗಳ ಜಾಣ್ಮೆ, ಪ್ರಚಾರ ವೈಖರಿಯಿಂದಾಗಿ ಈ ದೇಶದ 15ರಿಂದ 24 ವರ್ಷದೊಳಗಿನ 27% ಮಂದಿ ತಂಬಾಕಿನ ಚಟಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಯಿತು. ತಂಬಾಕು ಸಂಬಂಧಿ ಕಾಯಿಲೆಗಾಗಿ 2011ರಲ್ಲಿ ಒಂದು ಲಕ್ಷ  ಕೋಟಿ ರೂಪಾಯಿ ವೆಚ್ಚವಾಗಿದ್ದು, ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ತಂಬಾಕು ಗ್ರಾಹಕರಿರುವ ದೇಶವಾಗಿ ಭಾರತ ಗುರುತಿಗೀಡಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಇನ್ನು, ಮಳೆಗಾಲದಲ್ಲಿ ಆಗುವ ಸಾವು, ಹಾನಿ, ಅನಾಹುತಗಳ ಎಲ್ಲ ಜವಾಬ್ದಾರಿಯನ್ನೂ ಮಳೆ ಎಂಬ ಬಾಯಿ ಬಾರದ ಕೈಗೂ ಸಿಗದ ಆರೋಪಿಯ ಮೇಲೆ ಹೊರಿಸುವ ಪ್ರಯತ್ನಗಳು ಈಗಾಗಲೇ ಆರಂಭವಾಗಿವೆ. ಮುಂದಿನ ದಿನಗಳಲ್ಲಿ, ‘ಮಳೆಯ ಆರ್ಭಟಕ್ಕೆ ಕುಸಿದು ಬಿದ್ದ ಮನೆಗಳು, ಜಲಾವೃತಗೊಂಡ ನಗರ, ಮಳೆ ನೀರಿಗೆ ಕೊಚ್ಚಿ ಹೋದ ರಸ್ತೆಗಳು..’ ಮುಂತಾದ ಬಹುವಿಧ ಶೀರ್ಷಿಕೆಗಳಲ್ಲಿ ಮಾಧ್ಯಮಗಳಲ್ಲಿ ವರದಿಗಳು ಖಂಡಿತ ಪ್ರಕಟವಾಗಲಿವೆ. ಅಧಿಕಾರಿಗಳು ಭೇಟಿ ಕೊಟ್ಟ ಸುದ್ದಿಗಳು ಚಿತ್ರ ಸಮೇತ ಪ್ರಕಟವಾಗಲಿವೆ. ಮಳೆಯಿಂದಾಗಿ ನದಿ-ತೊರೆಗಳನ್ನು ದಾಟಲಾಗದೆ ತೂಗು ಸೇತುವೆಯ ಮೂಲಕವೋ ಕಡಿದಾದ ದಾರಿಗಳ ಮೂಲಕವೋ ತೆರಳಬೇಕಾದ ಶಾಲಾ ಮಕ್ಕಳ ಸಂಕಟಗಳನ್ನು ಮುಂದಿನ ದಿನಗಳಲ್ಲಿ ನಾವು ಓದಲಿದ್ದೇವೆ. ಕೊನೆಗೆ, 'ಈ ವರ್ಷ ಎಷ್ಟು ಸೆಂಟಿವಿೂಟರ್ ಮಳೆಯಾಗಿದೆ ಮತ್ತು ಅದರಿಂದ ಆಗಿರುವ ಹಾನಿಗಳೆಷ್ಟು' ಎಂಬ ಅಂಕಿ-ಅಂಶಗಳನ್ನು ಅಧಿಕಾರಿಗಳು ಬಿಡುಗಡೆಗೊಳಿಸುವ ಮೂಲಕ ಈ ವಿಷಯಕ್ಕೆ ಮುಕ್ತಾಯವನ್ನು ಘೋಷಿಸಲಾಗುತ್ತದೆ.
 ನಿಜವಾಗಿ, ಮಳೆ ಸ್ವಯಂ ಕ್ರೂರಿಯೇನೂ ಅಲ್ಲ. ಒಂದು ವೇಳೆ ಅದು ಕ್ರೂರಿಯೇ ಆಗಿರುತ್ತಿದ್ದರೆ, ಅದರ ಆಗಮನಕ್ಕಾಗಿ ಜನರು ಕಾಯುತ್ತಿರಲಿಲ್ಲ. ಮಳೆಯನ್ನು ಅತ್ಯಂತ ಹೆಚ್ಚು ಪ್ರೀತಿಸುವುದು ಮಕ್ಕಳು. ಮಳೆ ಹನಿಯಲು ಪ್ರಾರಂಭಿಸಿತೆಂದರೆ, ಮಕ್ಕಳು ಅಂಗಳದಲ್ಲಿ ಕುಣಿಯತೊಡಗುತ್ತಾರೆ. ತಮ್ಮಿಷ್ಟದ ಆಟ ಆಡುತ್ತಾರೆ. ಒದ್ದೆ ಮಾಡುವುದು ಮಳೆಯ ಗುಣಲಕ್ಷಣ. ಸಾಮಾನ್ಯವಾಗಿ ನೀರಿನಲ್ಲಿ ಒದ್ದೆಯಾಗುವುದನ್ನು ಮಕ್ಕಳು ಇಷ್ಟಪಡುವುದಿಲ್ಲ. ಆದರೆ, ಮಳೆಯಲ್ಲಿ ಒದ್ದೆಯಾಗುವುದು ಮಕ್ಕಳಿಗೆ ಅತ್ಯಂತ ಇಷ್ಟ. ಮಳೆ ಬಂತೆಂದರೆ ರೈತ ಖುಷಿಯಾಗುತ್ತಾನೆ. ಭೂಮಿ ಹಸಿರಾಗುತ್ತದೆ. ನೀರಿನ ಹಾಹಾಕಾರವೂ ಮಾಯವಾಗುತ್ತದೆ. ಅಷ್ಟಕ್ಕೂ, ಮಳೆಯೇನೂ ಸೂಚನೆ ಕೊಡದೇನೇ ದಿಢೀರ್ ಆಗಿ ಭೂಮಿಗೆ ಅಪ್ಪಳಿಸುವುದಿಲ್ಲವಲ್ಲ. ಮಳೆ ಆಗಮನದ ಬಗ್ಗೆ ಮಾಧ್ಯಮಗಳಲ್ಲಿ ತಿಂಗಳುಗಳ ಮೊದಲೇ ಸೂಚನೆ ಸಿಗುತ್ತದೆ. ಈ ಬಾರಿ ಮಳೆಯ ಪ್ರಮಾಣ ಎಷ್ಟಿರಬಹುದು ಎಂಬ ಬಗ್ಗೆ ಮೊದಲೇ ವರದಿಗಳು ಬರುತ್ತವೆ. ಹೀಗಿದ್ದೂ, ಒಂದು ನಿಶ್ಚಿತ ಅವಧಿಯಲ್ಲಿ ಮತ್ತು ನಿಶ್ಚಿತ ಪ್ರಮಾಣದಲ್ಲಿ ಸುರಿಯುವ ಮಳೆಯನ್ನೇ ಅಂತಿಮವಾಗಿ ನಾವೇಕೆ ಆರೋಪಿ ಸ್ಥಾನದಲ್ಲಿ ಕೂರಿಸಬೇಕು? ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ನಾವೇನು ವ್ಯವಸ್ಥೆ ಮಾಡಿದ್ದೇವೆ? ತೋಡುಗಳನ್ನು ಮುಚ್ಚಿ, ಅದರ ಮೇಲೆ ಕಾಂಕ್ರೀಟು ಕಟ್ಟಡಗಳನ್ನು ಕಟ್ಟಿರುವ ನಮಗೆ ಮಳೆಯನ್ನು ದೂರುವುದಕ್ಕೆ ಎಷ್ಟು ಅರ್ಹತೆಯಿದೆ? ನಗರಗಳು ಜಲಾವೃತವಾಗುವುದು ಮಳೆಯಿಂದಲೋ ಅಥವಾ ನಮ್ಮ ಧನದಾಹಿ ಜೀವನ ರೀತಿಯಿಂದಲೋ ಎಂದೊಮ್ಮೆ ನಾವು ಸ್ವಯಂ ಅವಲೋಕಿಸಿದರೇನು? ಮಳೆ ಹರಿದು ಹೋಗಬೇಕಾದಲ್ಲೆಲ್ಲಾ ಮನೆ, ಕಟ್ಟಡಗಳನ್ನು ಕಟ್ಟಿ ನೀರನ್ನು ತಡೆಗಟ್ಟುವವರು ನಾವೇ. ಆ ಬಳಿಕ ಮಳೆಯಿಂದಾಗಿ ಮನೆ ಕುಸಿತ, ನಗರ ಜಲಾವೃತ ಎಂದು ಆರೋಪಿಸುವವರೂ ನಾವೇ. ಹಾಗಂತ, ತೋಡುಗಳಿಗೆ ಸೇತುವೆ ನಿರ್ಮಿಸಿ ಕೊಡಬೇಕಾದುದು ಮಳೆ ಅಲ್ಲವಲ್ಲ. ವರ್ಷದ ಮೂರು ತಿಂಗಳಲ್ಲಷ್ಟೇ ಸುರಿದು ಹೊರಟು ಹೋಗುವ ಮಳೆ ಉಳಿದ 9 ತಿಂಗಳ ವರೆಗೆ ಮೌನವಾಗುತ್ತದೆ. ಆ ಸಂದರ್ಭದಲ್ಲಿ ಸೇತುವೆ ನಿರ್ಮಿಸಲು ಅಥವಾ ದುರ್ಬಲ ಗುಡಿಸಲುಗಳನ್ನು ದುರಸ್ತಿಗೊಳಿಸಲು ಮುಂದಾಗಬೇಕಾದುದು ಇಲ್ಲಿನ ವ್ಯವಸ್ಥೆ. ಆದರೆ ಅದನ್ನು ಮಾಡದ ವ್ಯವಸ್ಥೆ ತನ್ನ ಈ ವೈಫಲ್ಯವನ್ನು ಮಳೆಯ ಮೇಲೆ ಹೊರಿಸುವುದು ಎಷ್ಟು ಸಮರ್ಥನೀಯ? ಇದು ಕೇವಲ ಮಳೆಗೆ ಮಾತ್ರ ಸೀಮಿತವಲ್ಲ. ತಂಬಾಕು ಮಾರಾಟವು ವ್ಯಾಪಕವಾಗುತ್ತಿರುವುದಕ್ಕೆ ಕಂಪೆನಿಗಳ ಮಾರಾಟ ವಿಧಾನವೇ ಕಾರಣ ಎಂದೂ ಹೇಳಲಾಗುತ್ತಿದೆ. ಅದು ಗ್ರಾಹಕರನ್ನು ಸೆಳೆಯುವುದಕ್ಕೆ ಅಗ್ಗದ ಮತ್ತು ಭ್ರಮೆಯ ವಿಧಾನಗಳನ್ನು ಬಳಸುತ್ತಿದೆಯಂತೆ. ನಯವಾದ ಸುಳ್ಳನ್ನು ತನ್ನ ಮಾರಾಟ ತಂತ್ರವಾಗಿ ಉಪಯೋಗಿಸುತ್ತಿದೆಯಂತೆ. ಅಂದಹಾಗೆ, ಯಾವ ಕಂಪೆನಿಯೂ ಸರ್ವತಂತ್ರ ಸ್ವತಂತ್ರ ಅಲ್ಲವಲ್ಲ. ಅದಕ್ಕೆ  ಸರಕಾರ ಪರವಾನಿಗೆ ಕೊಡಬೇಕು. ಪರವಾನಿಗೆ ಕೊಡುವುದಕ್ಕಿಂತ ಮೊದಲು ಆ ಉತ್ಪನ್ನ ಮಾರಾಟ ಯೋಗ್ಯವೇ ಎಂಬುದು ಖಚಿತಗೊಳ್ಳಬೇಕು. ಗ್ರಾಹಕರನ್ನು ಅನಾರೋಗ್ಯಕ್ಕೆ ದೂಡುವ ಯಾವ ಅಂಶವಿದ್ದರೂ ಅದನ್ನು ತಡೆಯುವ ಎಲ್ಲ ಸ್ವಾತಂತ್ರ್ಯವೂ ವ್ಯವಸ್ಥೆಗಿದೆ. ಇಷ್ಟಿದ್ದೂ ನಾವು ಕಂಪೆನಿಗಳನ್ನು ದೂರುತ್ತೇವಲ್ಲ..
 ಏನೇ ಆಗಲಿ, ಈ ಮಳೆ, ಮರ, ಕಲ್ಲುಗಳನ್ನು ಆರೋಪಿ ಸ್ಥಾನದಲ್ಲಿ ಕೂರಿಸುವ ಮೂಲಕ ಒಂದೊಮ್ಮೆ ನಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಬಹುದಾದರೂ ಅವು ನಮ್ಮನ್ನೆಂದೂ ಕ್ಷಮಿಸದು. ಒಂದು ವೇಳೆ ಅವು ಮಾತನಾಡುವ ಸಾಮರ್ಥ್ಯ 
ಗಳಿಸಿಕೊಂಡಿರುತ್ತಿದ್ದರೆ ಇಷ್ಟರಲ್ಲೇ ಅವು ನಮ್ಮನ್ನು ಕಂಬಿಯೆಣಿಸುವಂತೆ ಮಾಡಿ ಬಿಡುತ್ತಿತ್ತೋ ಏನೋ. ಆದ್ದರಿಂದ, ಮಳೆಯನ್ನು ದೂರದಿರೋಣ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳೋಣ.

No comments:

Post a Comment