Thursday, 31 July 2014

ಚಪಾತಿ ತಿಂದು ಸಂಸದರ ಬೆಲೆ ಇಳಿಸಿದ ಕಾರ್ಮಿಕ

   14, 13, 10, 8, 5.. ಉಪವಾಸ ನಿರತ ದೆಹಲಿಯ ಹೊಟೇಲ್ ಕಾರ್ಮಿಕ ಅರ್ಶದ್‍ನಿಗೆ ಬಲವಂತದಿಂದ ಚಪಾತಿ ತಿನ್ನಿಸಿದ ಶಿವಸೇನೆಯ ಸಂಸದರ ಗುಂಪಿನ ಮೇಲಿರುವ ಕ್ರಿಮಿನಲ್ ಕೇಸುಗಳಿವು. ಗುಂಪಿನಲ್ಲಿದ್ದ 11 ಸಂಸದರ ಪೈಕಿ ಹತ್ತು ಮಂದಿಯ ಮೇಲೆಯೂ ಕ್ರಿಮಿನಲ್ ಕೇಸುಗಳಿವೆ. ಚಪಾತಿ ತಿನ್ನಿಸಿದ ಸಂಸದ ರಾಜನ್ ವಿಚಾರೆಯ ಮೇಲಂತೂ ದೊಂಬಿ, ಕೋಮುಗಲಭೆಗೆ ಸಂಬಂಧಿಸಿದಂತೆ 13 ಕೇಸುಗಳಿವೆ. ಆದರೆ ಕಾರ್ಮಿಕ ಅರ್ಶದ್‍ನ ಮೇಲೆ ಯಾವ ಕೇಸೂ ಇಲ್ಲ. ಇದಕ್ಕೆ ಏನೆನ್ನಬೇಕು? ಒಂದು ವೇಳೆ ಅಪ್ಪಟ ಸಸ್ಯಾಹಾರಿ ಹಿಂದೂ ಕಾರ್ಮಿಕನಿಗೆ ಮುಸ್ಲಿಮ್ ಸಂಸದರ ಗುಂಪೊಂದು ಗೋಮಾಂಸ ತಿನ್ನಿಸುತ್ತಿದ್ದರೆ ಇದೇ ಶಿವಸೇನೆ, ಬಿಜೆಪಿ ಮತ್ತು ಸಂಘಪರಿವಾರಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು? ಸಂಸದರನ್ನು ಬಂಧಿಸುವಂತೆ ಒತ್ತಾಯಿಸಿ ದೇಶಾದ್ಯಂತ ಅವು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿರಲಿಲ್ಲವೇ? ‘ದೇಹದ್ರೋಹಿ ಸಂಸದರು' ಎಂದು ಕರೆಯುತ್ತಿರಲಿಲ್ಲವೇ? ಇದು ಹಿಂದೂಸ್ತಾನ, ಪಾಕಿಸ್ತಾನವಲ್ಲ..’ ಎಂಬ ಘೋಷಣೆಗಳಿಗೆ ಲೆಕ್ಕಮಿತಿಯಿರುತ್ತಿತ್ತೇ? ಅಲ್ಲಲ್ಲಿ ಗಲಭೆ, ಹಲ್ಲೆಗಳಾದ ಬಗ್ಗೆಯೂ ವರದಿಗಳು ಬರುತ್ತಿತ್ತಲ್ಲವೇ? ಮತ್ತೇಕೆ ಈ ಪ್ರಕರಣದಲ್ಲಿ ಇವೆಲ್ಲ ಮೌನವಾಗಿವೆ? ‘ಪ್ರಕರಣಕ್ಕೆ ಧಾರ್ಮಿಕ ಬಣ್ಣ ಬಳಿಯದಿರಿ, ರಾಜಕೀಯಗೊಳಿಸಬೇಡಿ’ ಎಂದು ಅವು ತೀರಾ ತಗ್ಗಿದ ದನಿಯಲ್ಲಿ ಹೇಳುತ್ತಿರುವುದೇಕೆ? ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಬಲಿಯಾದ ಕಬೀರ್ ಪ್ರಕರಣಕ್ಕೆ ಇವು ಕೊಟ್ಟ ಬಣ್ಣ ಯಾವುದಾಗಿತ್ತು? ಧಾರ್ಮಿಕವಲ್ಲವೇ? ಉತ್ತರ ಪ್ರದೇಶದಲ್ಲಿ ಮಸೀದಿ ಕಾಂಪೌಂಡನ್ನು ಧ್ವಂಸಗೊಳಿಸಲು ಆದೇಶಿಸಿದ ಜಿಲ್ಲಾಧಿಕಾರಿ ದುರ್ಗಾರನ್ನು ಬಿಜೆಪಿ ಹೇಗೆ ಬಿಂಬಿಸಿತ್ತು? ಆ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಂಡಿರಲಿಲ್ಲವೇ? ಅಷ್ಟಕ್ಕೂ, ಜನಪ್ರತಿನಿಧಿಗಳ ವರ್ತನೆ ಹೇಗಿರಬೇಕು? ತಮ್ಮ ಅತೃಪ್ತಿಯನ್ನು ಅವರು ಹೇಗೆ ವ್ಯಕ್ತಪಡಿಸಬೇಕು?
 ಶಿವಸೇನೆ-ಬಿಜೆಪಿ-ಸಂಘಪರಿವಾರಗಳು ಈ ದೇಶದಲ್ಲಿ ಈವರೆಗೆ ನಡೆದುಕೊಂಡ ರೀತಿಯನ್ನು ಎದುರಿಟ್ಟುಕೊಂಡಾಗ ಇಂಥ  ಪ್ರಶ್ನೆಗಳು ಮತ್ತೆ ಮತ್ತೆ ಎದುರಾಗುತ್ತವೆ. ಅರ್ಶದ್ ಬರೇ ಮುಸ್ಲಿಮ್ ಅಷ್ಟೇ ಅಲ್ಲ, ಈ ದೇಶದ ಪ್ರಜೆ. ಈ ದೇಶದಲ್ಲಿ ಗಣೇಶನಿಗೆ ಯಾವೆಲ್ಲ ಹಕ್ಕುಗಳು ಇವೆಯೋ ಆ ಎಲ್ಲ ಹಕ್ಕುಗಳೂ ಅರ್ಶದ್‍ನಿಗೂ ಲಭ್ಯವಾಗಬೇಕು. ಇವುಗಳಲ್ಲಿ ಮಾನವೀಯ ಹಕ್ಕುಗಳು ಪ್ರಮುಖವಾದದ್ದು. ಸಂಸದರೇ ಈ ಹಕ್ಕುಗಳನ್ನು ನಿರಾಕರಿಸುತ್ತಾರೆಂದ ಮೇಲೆ ನಾವು ನಿರೀಕ್ಷೆ ಇಡುವುದಾದರೂ ಯಾರ ಮೇಲೆ? ಭಯೋತ್ಪಾದನೆಯ ಹೆಸರಲ್ಲಿ ಮುಸ್ಲಿಮರನ್ನು ಅಪರಾಧಿಗಳಂತೆ ಬಿಂಬಿಸುವುದು ಈ ಗುಂಪುಗಳೇ. ಮೋದಿಯವರ ವ್ಯಕ್ತಿತ್ವವನ್ನು ಮುಸ್ಲಿಮ್ ವಿರೋಧಿಯೆಂಬಂತೆ ಈ ಗುಂಪುಗಳ ಕಾರ್ಯಕರ್ತರು ಈ ದೇಶದಲ್ಲಿ ಧಾರಾಳ ಬಿಂಬಿಸಿದ್ದಾರೆ. ಅನಂತಮೂರ್ತಿ, ಕಾರ್ನಾಡ್, ಅಮರ್ತ್ಯ ಸೇನ್.. ಮುಂತಾದ ಸಾಹಿತಿಗಳನ್ನೇ ಅವರು ಲೇವಡಿ ಮಾಡಿದ್ದಾರೆ. ಅವರ ಸಾಹಿತ್ಯಿಕ ಅನುಭವ ಮತ್ತು ಹಿರಿಮೆಯನ್ನು ಅತ್ಯಂತ ಕ್ಷುಲ್ಲಕವಾಗಿ ಚಿತ್ರಿಸಿದ್ದಾರೆ. ಇದೀಗ ಆ ಪಟ್ಟಿಯಲ್ಲಿ ಸಾನಿಯಾ ಮಿರ್ಝಾಳನ್ನೂ ಸೇರಿಸಲಾಗಿದೆ. ಒಂದು ರೀತಿಯಲ್ಲಿ, ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಅದರ ಬೆಂಬಲಿಗ ವರ್ಗವು ತನ್ನ ಟೀಕಾಕಾರರನ್ನು ಅತ್ಯಂತ ಅಸಹಿಷ್ಣುತೆಯಿಂದ ಕಂಡಿದೆ. ಮುಂಬೈಯಲ್ಲಿ 1993ರಲ್ಲಿ ನಡೆದ ಮುಸ್ಲಿಮ್ ವಿರೋಧಿ ದಂಗೆಯಲ್ಲಿ ಶಿವಸೇನೆಯು ಎಷ್ಟು ಪ್ರಭಾವಿ ಪಾತ್ರ ವಹಿಸಿತ್ತು ಎಂಬುದಕ್ಕೆ ಶ್ರೀ ಕೃಷ್ಣ ಆಯೋಗದ ವರದಿಯೇ ಪುರಾವೆ. ಇದೀಗ ಅದೇ ಪಕ್ಷದ ಸಂಸದರು ಓರ್ವ ಉಪವಾಸಿಗನಿಗೆ ಬಲವಂತದಿಂದ ಚಪಾತಿ ತಿನ್ನಿಸಿದ್ದಾರೆ. ದುರಂತ ಏನೆಂದರೆ, ಈ ಪ್ರಕರಣ ನಡೆದು ಒಂದು ವಾರದ ಬಳಿಕವಷ್ಟೇ ಮಾಧ್ಯಮಗಳಲ್ಲಿ ಅದು ಸುದ್ದಿಯಾಯಿತು. ಅದರಲ್ಲೂ ಈ ಘಟನೆ ಪತ್ರಿಕೆಗಳಲ್ಲಿ ಪ್ರಕಟವಾದ ಬಳಿಕ ಟಿ.ವಿ. ಚಾನೆಲ್‍ಗಳು ಎಚ್ಚೆತ್ತುಕೊಂಡು ವೀಡಿಯೋ ಪ್ರಸಾರ ಮಾಡಿದುವು. ಯಾಕೆ ಹೀಗಾಯಿತು? ಘಟನೆ ನಡೆದೇ ಇಲ್ಲ ಎಂದು ಆರಂಭದಲ್ಲಿ ಶಿವಸೇನೆ ಹೇಳಿರುವುದಕ್ಕೂ ಮಾಧ್ಯಮಗಳು ವರ್ತಿಸಿರುವುಕ್ಕೂ ಏನಾದರೂ ಸಂಬಂಧವಿದೆಯೇ? ಚಪಾತಿ ತಿನ್ನಿಸಿದ ಸಂಸದರು ಮಾಧ್ಯಮಗಳ ಮೇಲೂ ಪ್ರಭಾವ ಬೀರಿದರೇ? ಬೆದರಿಕೆ ಒಡ್ಡಿದರೇ? ಯಾಕೆ ಪ್ರಧಾನಿ ಮೋದಿಯವರು ಈ ಬಗ್ಗೆ ಏನೂ ಮಾತಾಡಿಲ್ಲ? ಕೇವಲ ಈ ಘಟನೆ ಎಂದಲ್ಲ, ರೈಲ್ವೇ ಬೆಲೆ ಏರಿಕೆ, ಫೆಲೆಸ್ತೀನ್‍ನ ಮೇಲೆ ಇಸ್ರೇಲಿನ ದಾಳಿ, ಪಾಕಿಸ್ತಾನದ ಹಫೀಝ್ ಸಈದ್ ಮತ್ತು ಪತ್ರಕರ್ತ ವೈದಿಕ್ ಭೇಟಿ.. ಯಾವುದರ ಬಗ್ಗೆಯೂ ಅವರು ತುಟಿ ತೆರೆಯುತ್ತಿಲ್ಲ. ಮನ್‍ಮೋಹನ್ ಸಿಂಗ್‍ರನ್ನು ಮೌನ ಮೋಹನ ಎಂದು ಗೇಲಿ ಮಾಡಿದ್ದ ಮೋದಿಯವರು ಮೌನ ಮೋದಿಯಾಗುತ್ತಿರುವುದೇಕೆ?
 ಈ ದೇಶದ ಸಂಸತ್ತು ಕ್ರಿಮಿನಲ್‍ಗಳಿಂದ ತುಂಬಿಕೊಳ್ಳುತ್ತಿದೆ ಅನ್ನುವ ಕಳವಳ ವ್ಯಕ್ತವಾಗುತ್ತಿರುವ ಈ ದಿನಗಳಲ್ಲೇ ಚಪಾತಿ ಪ್ರಕರಣ ನಡೆದಿದೆ. ಗುಣಮಟ್ಟದ ಆಹಾರವನ್ನು ಸಂಸದರು ಬಯಸುವಂತೆಯೇ ಗುಣಮಟ್ಟದ ವರ್ತನೆಯನ್ನು ಸಂಸದರಿಂದ ಜನರೂ ಬಯಸುತ್ತಾರೆ. ಮಾತ್ರವಲ್ಲ, ಸಂಸದರು ಎಂಬ ಕಾರಣಕ್ಕಾಗಿ ಈ ಬಯಕೆಯ ಪಾಲು ಅಧಿಕವಿರುತ್ತದೆ. ಗುಣಮಟ್ಟದ ಆಹಾರ ಒದಗಿಸದೇ ಇರುವುದಕ್ಕೆ ಚಪಾತಿ ತಿನ್ನಿಸುವುದು ಪರಿಹಾರ ಎಂದಾದರೆ ಗುಣಮಟ್ಟದ ವರ್ತನೆ ತೋರದ ಸಂಸದರಿಗೆ ಯಾವ ರೀತಿಯ ಪರಿಹಾರವನ್ನು ನೀಡಬೇಕು? ಸಾರ್ವಜನಿಕವಾಗಿ ಥಳಿಸುವುದೇ? ಮೆರವಣಿಗೆ ನಡೆಸುವುದೇ? ನಿಜವಾಗಿ, ಸಂಸದರೆಂದರೆ ಜನಸಾಮಾನ್ಯರಂಥಲ್ಲ. ಅವರ ಹಿಂದು-ಮುಂದು ಕಣ್ಗಾವಲು ಇರುತ್ತದೆ. ಅವರನ್ನು ಮುತ್ತಿಕೊಂಡು ಜೈಕಾರ ಕೂಗುವುದಕ್ಕೆ ಅಭಿಮಾನಿಗಳಿರುತ್ತಾರೆ. ಅಧಿಕಾರಿ ವರ್ಗವು ಅಪ್ಪಣೆಗಾಗಿ ಕಾಯುತ್ತಿರುತ್ತದೆ. ಒಂದು ಹಂತದ ವರೆಗೆ ವ್ಯವಸ್ಥೆಯನ್ನು ನಿಯಂತ್ರಿಸುವ ಸಾಮರ್ಥ್ಯ  ಅವರಲ್ಲಿರುತ್ತದೆ. ಅಂಥವರೇ ಓರ್ವ ಉಪವಾಸಿಗನ ಧಾರ್ಮಿಕ ಭಾವನೆಯನ್ನು ಗೌರವಿಸುವುದಿಲ್ಲವಾದರೆ ಮಾತ್ರವಲ್ಲ, ಸಾರ್ವಜನಿಕವಾಗಿಯೇ ಅವಮಾನಿಸುವುದಾದರೆ ಇನ್ನು ಅಂಥವರ ಬೆಂಬಲಿಗರು ಹೇಗೆ ನಡೆದುಕೊಂಡಾರು?  
   ಬಿಜೆಪಿಯು ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ಈ ದೇಶದಲ್ಲಿ ಧಾರಾಳ ಚರ್ಚೆಗಳಾಗಿತ್ತು. ಬಹುಶಃ ಬೇರೆ ಯಾವ ಪ್ರಧಾನಿ ಅಭ್ಯರ್ಥಿಯ ಸುತ್ತಲೂ ಆಗದಷ್ಟು ಚರ್ಚೆಗೆ ಮೋದಿ
ಒಳಗಾಗಿದ್ದರು. ಅದಕ್ಕೆ ಕಾರಣ ಮೋದಿಯೆಂಬ ಹೆಸರಾಗಿರಲಿಲ್ಲ, ಆ ಹೆಸರಿನ ವ್ಯಕ್ತಿತ್ವವಾಗಿತ್ತು. ಮೋದಿಯವರಿಗೆ ಅಂಟಿಕೊಂಡಿದ್ದ ಗುಜರಾತ್ ಹತ್ಯಾಕಾಂಡದ ಆರೋಪಗಳು ಅವರ ಪ್ರಾಮಾಣಿಕತೆಯನ್ನು ಸಂಶಯಾಸ್ಪದಗೊಳಿಸಿದ್ದುವು. ಎಲ್ಲಿಯ ವರೆಗೆಂದರೆ ಅಮೇರಿಕ, ಬ್ರಿಟನ್‍ಗಳೇ ನಿಷೇಧ ಹೇರುವಷ್ಟು. ಆದರೆ ಮೋದಿಯವರು ಈ ಎಲ್ಲ ಅನುಮಾನ-ವಿಮರ್ಶೆಗಳನ್ನು ದಾಟಿ ಪ್ರಧಾನಿಯಾದರು. ಮಾತ್ರವಲ್ಲ, ಅವರ ಗೆಲುವನ್ನು ಅವರ ಬೆಂಬಲಿಗರು ಮುಸ್ಲಿಮರ ವಿರುದ್ಧದ ಗೆಲುವೆಂಬಂತೆ ಬಿಂಬಿಸಿದರು. ಟೀಕಾಕಾರರನ್ನು ಅತ್ಯಂತ ತುಚ್ಛವಾಗಿ ನಿಂದಿಸಿದರು. ಮುಝಫ್ಫರ್ ನಗರ್ ಗಲಭೆಯ ಆರೋಪಿಯನ್ನೇ ಮೋದಿಯವರು ಮಂತ್ರಿಮಂಡಲಕ್ಕೆ ಸೇರಿಸಿಕೊಂಡರು. ಅಲ್ಲಲ್ಲಿ ಮುಸ್ಲಿಮ್ ವಿರೋಧಿ ಹಲ್ಲೆಗಳೂ ನಡೆದುವು. ಇದೀಗ ಅವರ ಮಿತ್ರರು ಓರ್ವ ಉಪವಾಸಿಗನಿಗೆ ಚಪಾತಿಯನ್ನು ಬಲವಂತವಾಗಿ ತಿನ್ನಿಸಿದ್ದಾರೆ. ಆ ಮೂಲಕ ಈಗಾಗಲೇ ಇರುವ ಅನುಮಾನಗಳಿಗೆ ಇನ್ನಷ್ಟು ಪುಷ್ಟಿ ಒದಗಿಸಿದ್ದಾರೆ. ನಿಜವಾಗಿ ಚಪಾತಿಯನ್ನು ತಿನ್ನುವುದರಿಂದ ಕಳಕೊಳ್ಳುವುದಕ್ಕೆ ಅರ್ಶದ್‍ನಲ್ಲಿ ಏನೂ ಇರಲಿಲ್ಲ. ಉಪವಾಸ ಭಂಗವೂ ಆಗುವುದಿಲ್ಲ. ಆದರೆ, ಆ ಸಂಸದರು ಆ ಒಂದು ಚಪಾತಿಯ ಮೂಲಕ ಎಲ್ಲವನ್ನೂ ಕಳಕೊಂಡಿದ್ದಾರೆ. ಆ ಚಪಾತಿಯ ಬೆಲೆಗಿಂತಲೂ ಅವರ ಬೆಲೆ ಕುಸಿದಿದೆ. ಈ ಕಾರಣಕ್ಕಾಗಿ ಅರ್ಶದ್‍ನನ್ನು ನಾವು ಅಭಿನಂದಿಸಬೇಕಾಗಿದೆ.

Monday, 21 July 2014

ನಮ್ಮ ಹಬ್ಬದಲ್ಲಿ ಅವರ ನೋವುಗಳಿರಲಿ

   ಧಾರ್ಮಿಕ ಪಾಠಶಾಲೆಯಿಂದ ಹೊರಬರುತ್ತಿದ್ದ ಇಸ್ರೇಲ್‍ನ ವಿದ್ಯಾರ್ಥಿಗಳಾದ ಐಯಲ್ ಇಫ್ರಚ್, ಗಿಲಾದ್ ಶಾರ್, ನಫ್ತಲಿ ಫ್ರಾಂಕೆಲ್ ಮತ್ತು ಗಾಝಾದ ಬೀಚ್‍ನಲ್ಲಿ ಫುಟ್ಬಾಲ್ ಆಡುತ್ತಿದ್ದ 9 -12ರ ಪ್ರಾಯದ ಝಕರಿಯಾ ಬಕರ್, ಅಹ್ಮದ್ ಅತೀಫ್ ಬಕರ್, ಇಸ್ಮಾಈಲ್ ಮುಹಮ್ಮದ್ ಬಕರ್, ಮುಹಮ್ಮದ್ ರವಿೂಝ್ ಬಕರ್.. ಇವರು ಮತ್ತು ಇವರಂಥ ನೂರಾರು ಮಂದಿಯ ಹತ್ಯೆಯನ್ನು ಖಂಡಿಸಿ ಎಂಬಂತೆ ರಮಝಾನ್ ನಿರ್ಗಮಿಸುತ್ತಿದೆ. ಸಾವು ಯಹೂದಿಯದ್ದಾದರೂ ಮುಸ್ಲಿಮರದ್ದಾದರೂ ಶಿಯಾ-ಸುನ್ನಿಯದ್ದಾದರೂ ನೋವು ಒಂದೇ. ತಮ್ಮ ಮೂವರು ಮಕ್ಕಳನ್ನು ಅಪ್ಪಿ ಹಿಡಿದು ಕಣ್ಣೀರಿಳಿಸಿದ ರಾಶೆಲ್ ಫ್ರಾಂಕೆಲ್ ಅಥವಾ ಮುಹಮ್ಮದ್ ಬಕರ್‍ನ ತಂದೆ ರವಿೂಝ್ ಬಕರ್‍ರ ನೋವುಗಳಿಗೆ ಬಣ್ಣ ಹಚ್ಚಿ ನೋಡಲು ಸಾಧ್ಯವಿಲ್ಲ. ಒಂದೆಡೆ, ಗಾಝಾದಿಂದ ರಾಕೆಟ್‍ಗಳು ಹಾರುವಾಗ ಇನ್ನೊಂದೆಡೆ ಮಾರಕ ಬಾಂಬುಗಳ ಸುರಿಮಳೆಯಾಗುತ್ತಿದೆ. ವಿಶೇಷ ಏನೆಂದರೆ, ಗಾಝಾದ ರಾಕೆಟ್‍ಗಳಿಗೆ ಒಬ್ಬನೇ ಒಬ್ಬ ಇಸ್ರೇಲಿ ನಾಗರಿಕ ಬಲಿಯಾಗಿಲ್ಲ. (ಇಫ್ರಚ್, ಗಿಲಾದ್, ನಫ್ತಲಿಯರನ್ನು ಅಪಹರಿಸಿ ಗುಂಡಿಕ್ಕಿ ಕೊಲ್ಲಲಾಗಿತ್ತು.) ಗಾಝಾದಿಂದ ರಾಕೆಟ್ ಹಾರಿದ ತಕ್ಷಣ ಇಸ್ರೇಲಿನಲ್ಲಿ ಸೈರನ್ ಮೊಳಗುತ್ತದೆ. ರಾಕೆಟ್‍ಗಳಿಂದ ರಕ್ಷಣೆ ಪಡೆಯಲೆಂದೇ ನಿರ್ಮಿಸಲಾದ ಕಬ್ಬಿಣದ ಗುಂಬಜಗಳೊಳಗೆ ಇಸ್ರೇಲಿಗರು ಪ್ರವೇಶಿಸುತ್ತಾರೆ. ಅಲ್ಲದೇ ಇದೀಗ ಹೊಸ appನ್ನೂ (ತಂತ್ರಜ್ಞಾನ) ಆವಿಷ್ಕರಿಸಲಾಗಿದ್ದು, ಮೊಬೈಲ್‍ಗಳೂ ಅಪಾಯದ ಸೂಚನೆಯನ್ನು ಹೊರಡಿಸುತ್ತಿವೆ. ಹೀಗೆ, ತಾಂತ್ರಿಕವಾಗಿ ಸರ್ವ ರೀತಿಯಲ್ಲೂ ಪ್ರಬಲವಾಗಿರುವ ರಾಷ್ಟ್ರವೊಂದು ವಿಮೋಚನೆಯ ಬೇಡಿಕೆಯೊಂದಿಗೆ ಹಾರಿಸುವ ಅತಿ ದುರ್ಬಲವಾದ ರಾಕೆಟ್‍ಗಳ ನೆಪದಲ್ಲಿ ಹತ್ಯಾಕಾಂಡ ನಡೆಸುತ್ತಿದೆ. ಆದರೆ, ಇತ್ತೀಚೆಗಷ್ಟೇ ಸುಡಾನನ್ನು ಎರಡು ರಾಷ್ಟ್ರವಾಗಿ ಇಬ್ಭಾಗ ಮಾಡಿದ ವಿಶ್ವಸಂಸ್ಥೆಗೆ, ಯುಗೋಸ್ಲಾವಿಯಾದ ವಿವಾದವನ್ನು ಪರಿಹರಿಸಿದ ಜಗತ್ತಿಗೆ ಅಥವಾ ಪರಸ್ಪರ ಪ್ರತಿಸ್ಪರ್ಧಿಯಂತಾಡುತ್ತಿದ್ದ ವಿಭಜಿತ ಜರ್ಮನಿಯನ್ನು ಸಹೋದರತ್ವದ ಬಂಧದಲ್ಲಿ ಪೋಣಿಸಿದ ‘ದೊಡ್ಡಣ್ಣರಿಗೆ' ಈ ವಿವಾದವನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲವೆಂದರೆ ಏನೆನ್ನಬೇಕು? ಯಾರ ಮೇಲೆಯೂ ದಾಳಿ ಮಾಡದ ಮತ್ತು ಬಾಂಬು ಸುರಿಸದ ಇರಾನ್‍ನ ಮೇಲೆ ನಿರ್ಬಂಧ ಹೇರಿ ಮಣಿಸುವಷ್ಟು ಸಮರ್ಥವಿರುವ ಜಗತ್ತಿಗೆ ಇಸ್ರೇಲನ್ನು ಮಣಿಸಲೇಕೆ ಸಾಧ್ಯವಾಗುತ್ತಿಲ್ಲ? ನಿರ್ಬಂಧ, ದಾಳಿಗಳೆಲ್ಲ ಜಗತ್ತಿನ ದುರ್ಬಲ ರಾಷ್ಟ್ರಗಳ ಮೇಲೆಯೇ ಯಾಕೆ ಅಪ್ಪಳಿಸುತ್ತಿದೆ?
   ಇವತ್ತು, ಫೇಸ್‍ಬುಕ್, ವ್ಯಾಟ್ಸಪ್, ಟ್ವೀಟರ್.. ಮುಂತಾದ ಎಲ್ಲೆಡೆಯೂ ಗಾಝಾ ತುಂಬಿಕೊಂಡಿದೆ. ಇಸ್ರೇಲ್‍ನ ಕ್ರೌರ್ಯ ಮತ್ತು ಗಾಝಾದ ಮಂದಿಯ ಪ್ರತಿರೋಧದ ಹಿನ್ನೆಲೆ, ಇತಿಹಾಸಗಳುಳ್ಳ ಧಾರಾಳ ಬರಹಗಳು ಈ ಜಾಲ ತಾಣಗಳಲ್ಲಿ ಪ್ರಕಟವೂ ಆಗುತ್ತಿವೆ. ಇನ್ನೊಂದೆಡೆ, ರಮಝಾನ್ ವಿದಾಯ ಹೇಳುತ್ತಿದೆ. ಹಬ್ಬದ ಸಂಭ್ರಮದಲ್ಲಿರಬೇಕಾದ ಉಪವಾಸಿಗರ ಮುಖದಲ್ಲಿ ಗಾಢ ವಿಷಾದ, ನೋವು ವ್ಯಕ್ತವಾಗುತ್ತಿದೆ. ದುರ್ಬಲ ಸಮೂಹವೊಂದರ ಮೇಲೆ ಬರ್ಬರ ದಾಳಿಯನ್ನು ಪ್ರಾರ್ಥನೆಯ ವಿನಃ ಖಂಡಿಸಲು ಸಾಧ್ಯವಿಲ್ಲದ ಅಸಹಾಯಕ ಸ್ಥಿತಿಯೊಂದು ನಿರ್ಮಾಣವಾಗಿಬಿಟ್ಟಿದೆ. ಇಂಥ ಸ್ಥಿತಿಯಲ್ಲಿ, ಭಾವುಕತೆಯಿಂದಲ್ಲದೇ ರಮಝಾನ್‍ಗೆ ಖುಷಿಯಿಂದ ವಿದಾಯ ಕೋರಲು ಸಾಧ್ಯವಿಲ್ಲ. ಒಂದು ತಿಂಗಳ ಕಾಲ ರಮಝಾನ್ ಕೊಟ್ಟ ತರಬೇತಿಯನ್ನು ಹೃದಯವೆಂಬ ಚೀಲದಲ್ಲಿ ಭದ್ರವಾಗಿಟ್ಟುಕೊಳ್ಳುವ ಮತ್ತು ಎಂದೆಂದೂ ಆ ಚೀಲದ ಕಟ್ಟು ಸಡಿಲಗೊಳ್ಳದಂತೆ ಹಾಗೂ ಕೆಡುಕುಗಳು ಒಳ ಪ್ರವೇಶಿಸದಂತೆ ನೋಡಿಕೊಳ್ಳುವ ಖಾತರಿಯನ್ನು ನೀಡುವ ಮೂಲಕ ನಾವು ರಮಝಾನ್‍ಗೆ ವಿದಾಯ ಕೋರಬೇಕಾಗಿದೆ. ಆ ‘ಚೀಲ'ದೊಳಗೆ ಐಯಲ್ ಇಫ್ರಚ್‍ಗೂ ಮುಹಮ್ಮದ್ ಬಕರ್‍ಗೂ ಸಮಾನ ಪ್ರೀತಿಯಿದೆ. ರಾಶೆಲ್ ಫ್ರಾಂಕೆಲ್‍ಗೂ ರವಿೂಝ್ ಬಕರ್‍ಗೂ ಸಮಾನ ಸಾಂತ್ವನವಿದೆ. ಜಗತ್ತಿನ ಎಲ್ಲ ಮರ್ದಿತರಿಗೂ ವಿಜಯದ ಸುವಾರ್ತೆಯಿದೆ. ನಮ್ಮ ಈದುಲ್ ಫಿತ್ರ್ ಅನ್ನು ಗಿಲಾದ್ ಶಾರ್, ನಫ್ತಲಿ ಫ್ರಾಂಕೆಲ್, ಝಕರಿಯ ಬಕರ್, ಅಹದ್ ಬಕರ್‍ರಂಥ ಮುದ್ದು ಮಕ್ಕಳಿಗೆ; ನೋವುಂಡ ಮತ್ತು ಸಾವಿಗೀಡಾದ ಜನರಿಗೆ ಪ್ರೀತಿಯಿಂದ ಅರ್ಪಿಸೋಣ. ನಮ್ಮ ಹಬ್ಬದಲ್ಲಿ ಅವರ ನೋವುಗಳಿರಲಿ, ಭಾವುಕ ಪ್ರಾರ್ಥನೆಯಿರಲಿ.

Thursday, 17 July 2014

ಸರೋಜ, ಮುರುಗೇಸನ್, ಸೆಲ್ವಿ ಮತ್ತು ನಾವು

    ಕಳೆದ ಜೂನ್ 28ರಂದು ಚೆನ್ನೈನ ವಡಗಿರಿಯಲ್ಲಿ 11 ಅಂತಸ್ತುಗಳ ನಿರ್ಮಾಣ ಕಟ್ಟಡವೊಂದು ಕುಸಿದು ಬಿದ್ದು 61 ಮಂದಿ ಸಾವಿಗೀಡಾದ ಘಟನೆಯ ಸುತ್ತ ತಮಿಳುನಾಡು ಗಂಭೀರ ಚರ್ಚೆಯಲ್ಲಿ ತೊಡಗಿದ್ದಾಗಲೇ ಬೇಬಿ ಸರೋಜ ಅನ್ನುವ 75 ವರ್ಷದ ಅಜ್ಜಿ ಆ ಚರ್ಚೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದರು. ನಿಜವಾಗಿ, ವಡಗಿರಿಯಲ್ಲಿ ಕಟ್ಟದ ಕುಸಿದ ಅದೇ ಸಂದರ್ಭದಲ್ಲೇ ದೆಹಲಿಯಲ್ಲೂ 4 ಅಂತಸ್ತುಗಳ ಕಟ್ಟಡ ಕುಸಿದಿತ್ತು. 11 ಮಂದಿ ಸಾವಿಗೀಡಾಗಿದ್ದರು. ಆದ್ದರಿಂದಲೇ, ಈ ಎರಡು ದುರಂತಗಳು ಮತ್ತು ಆಯಾ ಸರಕಾರಗಳು ಕೈಗೊಂಡ ಕ್ರಮಗಳನ್ನು ತುಲನೆ ಮಾಡಿ ಮಾಧ್ಯಮಗಳು ಚರ್ಚಿಸಿದುವು. ದೆಹಲಿಯಲ್ಲಿ ಜನರು ಪ್ರತಿಭಟನೆ ನಡೆಸುವವರೆಗೆ ವ್ಯವಸ್ಥೆ ಮೌನವಾಗಿತ್ತು. ಆ ಬಳಿಕ ಮುಖ್ಯ ಇಂಜಿನಿಯರ್‍ನನ್ನು ಅಮಾನತು ಮಾಡಿತು. ಆದರೆ, ತಮಿಳುನಾಡು ಶೀಘ್ರ ಎಚ್ಚೆತ್ತುಕೊಂಡಿತು. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ ತನಿಖೆಗೆ ಆದೇಶಿಸಿತು. ಕಟ್ಟಡದ ಮಾಲಕ, ಇಂಜಿನಿಯರ್, ವಿನ್ಯಾಸಕಾರರೂ ಸೇರಿ 6 ಮಂದಿಯನ್ನು ಬಂಧಿಸಿತು. ಆದರೆ ಅಜ್ಜಿ ಯಾವಾಗ ಚರ್ಚೆಯ ವ್ಯಾಪ್ತಿಯೊಳಗೆ ಪ್ರವೇಶಿಸಿದರೋ ದುರಂತಗಳಿಗಿರುವ ಇನ್ನಷ್ಟು ಮುಖಗಳೂ ಅನಾವರಣಗೊಂಡವು. ಸಾವಿಗೀಡಾದವರಲ್ಲಿ ಅಜ್ಜಿಯ ಮಗ ಮುರುಗೇಸನ್ ಕೂಡ ಒಬ್ಬನಾಗಿದ್ದ. ಸೊಸೆ ಸೆಲ್ವಿಯಂತೂ ಗಂಡನನ್ನೂ ಅತ್ತೆಯನ್ನೂ ತ್ಯಜಿಸಿ 6 ವರ್ಷಗಳ ಹಿಂದೆಯೇ ತವರು ಮನೆ ಸೇರಿದ್ದಳು. ಅಜ್ಜಿಯನ್ನು ನೋಡಿಕೊಳ್ಳುತ್ತಿದ್ದುದು ಮಗನೇ. ಆದರೆ ದುರಂತವು ಅಜ್ಜಿಯನ್ನು ಒಂಟಿಯಾಗಿಸಿತು. ಆದ್ದರಿಂದ ತನ್ನ ಸೊಸೆಗೆ ರಾಜ್ಯ ಸರಕಾರವು ಕೊಟ್ಟಿರುವ 7 ಲಕ್ಷ  ರೂಪಾಯಿ ಪರಿಹಾರ ಧನವನ್ನು ತನಗೆ ನೀಡುವಂತೆ ಆದೇಶಿಸಬೇಕೆಂದು ಆಕೆ ಹೈಕೋರ್ಟ್ ಮೆಟ್ಟಲೇರಿದ್ದರು.
 ನಿಜವಾಗಿ, ಸರೋಜ, ಸೆಲ್ವಿ ಮತ್ತು ಮುರುಗೇಸನ್ ಎಂಬುದು ಮೂರು ವ್ಯಕ್ತಿತ್ವಗಳಷ್ಟೇ ಅಲ್ಲ, ಈ ಸಮಾಜದ ದುರಂತ ಕಥನಗಳ ವಿವಿಧ ಪಾತ್ರಧಾರಿಗಳು ಕೂಡ. ಈ ಸಮಾಜದಲ್ಲಿ ಮುರುಗೇಸನ್‍ರಂತಹ ಮಕ್ಕಳು ಇರುವಂತೆಯೇ ಸೆಲ್ವಿಯಂಥ ಸೊಸೆಯಂದಿರೂ ಇದ್ದಾರೆ. ಇಳಿ ಪ್ರಾಯದಲ್ಲಿ ಆಸರೆಗಾಗಿ ಅಲೆಯುವ ಸರೋಜರಂಥ ತಾಯಂದಿರೂ ಇದ್ದಾರೆ. ಇದಕ್ಕೆ ವ್ಯತಿರಿಕ್ತ ಪಾತ್ರಗಳೂ ಇವೆ. ಒಳ್ಳೆಯ ಸೆಲ್ವಿ, ನೆಮ್ಮದಿಯಿಂದಿರುವ ಸರೋಜ ಮತ್ತು ಪೀಡಿಸುವ ಮುರುಗೇಸನ್‍ರೂ ಸಮಾಜದಲ್ಲಿದ್ದಾರೆ. ಒಂದು ರೀತಿಯಲ್ಲಿ, ಚೆನ್ನೈನಲ್ಲಿ ಕುಸಿದು ಬಿದ್ದದ್ದು ಒಂದು ಕಟ್ಟವಾದರೂ ಅವರ ಅವಶೇಷಗಳಡಿಯಲ್ಲಿ ದೊರಕಿರುವುದು 61 ಶವಗಳಷ್ಟೇ ಅಲ್ಲ, ಅನೇಕಾರು ಮಂದಿಯ ಜೀವನ ಕಥನಗಳೂ ಕೂಡ. ಬಿರುಕು ಬಿಡುತ್ತಿರುವ ಕೌಟುಂಬಿಕ ಸಂಬಂಧಗಳ ದೊಡ್ಡದೊಂದು ಕತೆಯೇ ಆ ಅವಶೇಷಗಳ ಅಡಿಯಲ್ಲಿ ಹೂತು ಹೋಗಿರಬಹುದು. ನೆಮ್ಮದಿಯಿಂದಿದ್ದ ಕುಟುಂಬವೊಂದರ ಸುಂದರ ಕತೆ ಸಮಾಧಿಯಾಗಿರಬಹುದು. ಸಂಜೆ ಚಾಕಲೇಟು ತರುವ ಅಪ್ಪನನ್ನು ಕಾದು ಕುಳಿತ ಮಗಳ ಹೃದಯ ವಿದ್ರಾವಕ ಕಣ್ಣೀರು ಸಮಾಧಿಯಾಗಿರಬಹುದು. ಅಂದಹಾಗೆ, ದುರಂತದ ತೀವ್ರತೆ ಕೇವಲ ಮೃತದೇಹಗಳನ್ನು ಎಣಿಸುವುದರಲ್ಲಷ್ಟೇ ಇರುವುದಲ್ಲ. ಮೃತದೇಹಗಳೆಂಬುದು ಒಂದು ಸಂಕೇತ ಮಾತ್ರ. ಆ ಸಂಕೇತದ ಹಿಂದೆ ಕತೆ, ಉಪಕತೆಗಳಿರುತ್ತವೆ. ಆ  ದುರಂತವನ್ನೂ ವಿೂರಿದ ದುರಂತ ಸಂಗತಿಗಳು ಆ ಸಂಕೇತಗಳ ಜೊತೆಗಿರುತ್ತವೆ. ಆದ್ದರಿಂದಲೇ, ದುರಂತಗಳು ಸಮಾಜವನ್ನು ಭಾವುಕಗೊಳಿಸುವುದು. ಮೃತಪಟ್ಟವರಿಗಾಗಿ ದುಃಖಿಸುತ್ತಲೇ ಅವರನ್ನು ಆಶ್ರಯಿಸಿದವರಿಗಾಗಿ ಕಣ್ಣೀರಾಗುವುದು.  
   ಇವತ್ತಿನ ಆಧುನಿಕ ಸಮಾಜದಲ್ಲಿ  ಸರೋಜ ಒಂಟಿಯಲ್ಲ. ಇಂಥ ಅಸಂಖ್ಯ ಸರೋಜರೂ ಸಮಾಜದ ಭಾಗವಾಗಿ ಬದುಕುತ್ತಿದ್ದಾರೆ. ದುಡಿದೂ ದುಡಿದೂ ತಾಯಿಯನ್ನು ಸಾಕುವ ಮಗ ಮತ್ತು ಮಗನ ಆಶ್ರಯದಲ್ಲಿ ನೆಮ್ಮದಿಯಾಗಿರುವ ತಾಯಿ ಇಂಥ ಸುಂದರ ದೃಶ್ಯಗಳು ಕಡಿಮೆಯಾಗತೊಡಗಿವೆ. ಕೌಟುಂಬಿಕ ಸಂಬಂಧಗಳು ಬಿರುಕು ಬಿಡುತ್ತಿರುವ ಪ್ರಕರಣಗಳು ಸಾಮಾನ್ಯ ಅನ್ನಿಸುವಷ್ಟು ವ್ಯಾಪಕಗೊಳ್ಳುತ್ತಿವೆ. ದಪ್ಪಗಿರುವ ಪತ್ನಿಗೆ ವಿಚ್ಛೇದನ ಕೋರುವ ಪತಿ, ಒಡವೆಗಾಗಿ ಅಜ್ಜಿಯನ್ನೇ ಕೊಲೆಗೈಯುವ ಮೊಮ್ಮಕ್ಕಳು, ಆಸ್ತಿಯ ಜಗಳದಲ್ಲಿ ಹೆತ್ತವರನ್ನೇ ಕಡೆಗಣಿಸುವ ಮಕ್ಕಳು... ಇಂಥವು ನಿತ್ಯ ಎಂಬಂತೆ ವರದಿಯಾಗುತ್ತಿವೆ. ಆಧುನಿಕ ಜೀವನ ಪದ್ಧತಿಗಳು, ಸೌಲಭ್ಯಗಳು ಜನರ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನೂ ಬೀರುತ್ತಿವೆ. ಅವಿಭಕ್ತ ಕುಟುಂಬಗಳು ವಿಭಜನೆಗೊಂಡು ಅಣು ಕುಟುಂಬಗಳು ಆದದ್ದಷ್ಟೇ ಅಲ್ಲ, ಅಣು ಕುಟುಂಬಗಳೂ ನಿದ್ದೆ, ನೆಮ್ಮದಿ, ಸುಖ ಇಲ್ಲದ ತಾಣಗಳಾಗಿ ಬದಲಾಗುತ್ತಿವೆ. ವಿಚ್ಛೇದನವನ್ನು ಪಾಪ ಎಂದು ಬಲವಾಗಿ ನಂಬಿಕೊಂಡಿದ್ದ ಕಾಲ ಬದಲಾಗಿ ದೈಹಿಕ ಆಕಾರವೂ ವಿಚ್ಛೇದನಕ್ಕೆ ಕಾರಣ ಆಗುವಷ್ಟು ಸಹಜ ಅನ್ನಿಸಿಕೊಂಡುಬಿಟ್ಟಿದೆ. ಪತಿ-ಪತ್ನಿ ಸಂಬಂಧ ದೈಹಿಕ ಆಕರ್ಷಣೆಗಿಂತ ಅಚೆ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸಂಬಂಧಗಳಾಗಿ ಮಾರ್ಪಡುತ್ತಿಲ್ಲ. ಆಧುನಿಕ ಜಗತ್ತಿನಲ್ಲಿ ಭ್ರಮೆಗಳ ಹಿಂದೆ ನಾವೆಷ್ಟು ವೇಗವಾಗಿ ಸಾಗುತ್ತಿದ್ದೇವೆ ಎಂದರೆ ಆ ವೇಗಕ್ಕೆ ಹೊಂದಿಕೊಳ್ಳಲು ಹೆತ್ತವರಿಗೆ ಸಾಧ್ಯವಾಗುತ್ತಿಲ್ಲ. ಪತಿ, ಪತ್ನಿ ಮತ್ತು ಮಕ್ಕಳು ಮಾತ್ರ ಹೊಂದಿಕೊಳ್ಳಬಲ್ಲ ವೇಗದೊಂದಿಗೆ ಆಧುನಿಕ ಜಗತ್ತಿನ ಯುವ ಪೀಳಿಗೆಗಳು ಬದುಕುನ್ನು ಸಾಗಿಸುತ್ತಿವೆ. ಈ ವೇಗ ಅಥವಾ ಜೀವನ ಕ್ರಮಗಳು ಹೆತ್ತವರನ್ನು ನಿರಾಶೆಗೆ ತಳ್ಳಬಹುದು  ಅನ್ನುವ ಆಲೋಚನೆಯನ್ನೂ ಅವರು ಮಾಡುತ್ತಿಲ್ಲ. ಅತ್ತ ತಾನು, ಪತ್ನಿ, ಮಕ್ಕಳು ಎಂಬ ಪುಟ್ಟ ದೋಣಿಯಲ್ಲಿ ಜೀವನದ ಖುಷಿಯನ್ನು ಹುಡುಕುತ್ತಾ ಸಾಗುವಾಗ, ಇತ್ತ ಸರೋಜರಂಥ ಹೆತ್ತವರು ಆ ದೋಣಿಯಲ್ಲಿ ಜಾಗ ಸಿಗಬಹುದೇ ಎಂದು ಆತಂಕದಿಂದ ಕಾಯುತ್ತಿರುತ್ತಾರೆ. ಆದ್ದರಿಂದ, ಚೆನ್ನೈನ ದುರಂತವು ಕೇವಲ ಮೃತಪಟ್ಟವರ ಸಂಖ್ಯೆ, ಕಟ್ಟಡ ನಿರ್ಮಾಣದಲ್ಲಾದ ಲೋಪ-ದೋಷಗಳು ಮತ್ತು ಕಾರ್ಮಿಕರ ಜೀವದ ಬಗ್ಗೆ ತೋರಲಾದ ನಿರ್ಲಕ್ಷ್ಯತೆಯ ಸುತ್ತ ಚರ್ಚಿಸುವುದಕ್ಕಷ್ಟೇ ಸೀಮಿತವಾಗಬಾರದು. ಆ ಚರ್ಚೆಯಲ್ಲಿ ಸರೋಜ, ಸೆಲ್ವಿ ಮತ್ತು ಮುರುಗೇಸನ್‍ರೂ ಒಳಗೊಳ್ಳಬೇಕು. ಆ ಮುಖಾಂತರ ಈ ಸಮಾಜದಲ್ಲಿರುವ ಇಂತಹ ಅಸಂಖ್ಯ  ಮಂದಿಯ ಬಗ್ಗೆ ಕಣ್ಣು ತೆರೆಸುವ ಗಂಭೀರ ಸಂವಾದಗಳು ನಡೆಯಬೇಕು. 75ರ ಅಜ್ಜಿ ಪರಿಹಾರದ ಹಣವನ್ನು ಯಾಚಿಸಿ ಕೋರ್ಟಿಗೆ ಅಲೆಯುವುದು ಬರೇ ಸುದ್ದಿಯಷ್ಟೇ ಅಲ್ಲ, ಅದು ದುರಂತ ಪ್ರಕರಣದ ಇನ್ನೊಂದು ದುರಂತ ಮುಖ. ಇಂಥ ಮುಖಗಳು ಮತ್ತು ಅವು ಸಾರುವ ದುಃಖದಾಯಕ ಕತೆಗಳು ಈ ದೇಶದ ಮನೆಗಳಲ್ಲಿ ಧಾರಾಳ ಸಂಖ್ಯೆಯಲ್ಲಿವೆ. ಅವುಗಳಲ್ಲಿ ಸರೋಜಾರಿಗಿಂತ ಕ್ರೂರವಾದ ಕತೆಗಳೂ ಅಸಂಖ್ಯ ಇರಬಹುದು. ಅಂಥ ಕತೆಗಳು ಧಾರಾವಾಹಿಗಳಂತೆ ಇನ್ನಷ್ಟು ಬೆಳೆಯಬಾರದು. ಕೌಟುಂಬಿಕ ಸಂಬಂಧಗಳು ಸುದೃಢಗೊಳ್ಳುವ ಮತ್ತು ಹೆಚ್ಚು ಮಾನವೀಯಗೊಳ್ಳಬೇಕಾದ ತುರ್ತು ಸಂದರ್ಭದಲ್ಲಿ ನಾವಿದ್ದೇವೆ. ದುಡ್ಡು, ಸಂಪತ್ತು, ಸೌಲಭ್ಯಗಳೆಲ್ಲ ನೆಮ್ಮದಿಯ ಸಂಕೇತಗಳೇನೂ ಅಲ್ಲ. ನೆಮ್ಮದಿಯು ಈ ಎಲ್ಲ ಸೌಲಭ್ಯಗಳಾಚೆಗೆ ಮಾನವೀಯ ಸಂಬಂಧಗಳಲ್ಲಿದೆ. ಆ ಸಂಬಂಧಗಳನ್ನು ಬಲಪಡಿಸದ ಹೊರತು ಕಟ್ಟಡಗಳನ್ನು ಬಲಪಡಿಸುವುದರಿಂದ ಸರೋಜರಂಥ ತಾಯಂದಿರ ನೋವುಗಳಿಗೆ ಮುಲಾಮು ಹಚ್ಚಲು ಸಾಧ್ಯವಿಲ್ಲ. ಮಾತ್ರವಲ್ಲ, ಅವರಂಥವರ ಗಾಯ ಒಣಗದ ಹೊರತು ಕಟ್ಟಡಗಳು ಎಷ್ಟೇ ಗಟ್ಟಿಯಾದರೂ ಅವು ನೆಮ್ಮದಿ ನೀಡಲು ಸಾಧ್ಯವಿಲ್ಲ.

Tuesday, 8 July 2014

ಪ್ರತಿ ಮನೆಯಲ್ಲೂ `ಮಾರ್ನಿಂಗ್ ಗ್ಲೋರಿ'ಗಳು ಅರಳಲಿ

   ವೃದ್ಧಾಪ್ಯಕ್ಕೆ ಕಾರಣವಾಗುವ ಜೀನನ್ನು ಪತ್ತೆ ಹಚ್ಚಿರುವುದಾಗಿ ಜಪಾನಿನ ಕೃಷಿ ಮತ್ತು ಆಹಾರ ಸಂಶೋಧನಾ ಸಂಸ್ಥೆಯ ಸಂಶೋಧಕರು ಬಹಿರಂಗಪಡಿಸಿದ ಸುದ್ದಿಯು ಮಾಧ್ಯಮಗಳಲ್ಲಿ ಪ್ರಕಟವಾದ (ಜುಲೈ 6) ಮರುದಿನವೇ, ‘ವಧುಗಳ ಕೊರತೆಯನ್ನು ಎದುರಿಸುತ್ತಿರುವ ಹರ್ಯಾಣಕ್ಕೆ ಬಿಹಾರದಿಂದ ವಧುಗಳನ್ನು ಕರೆ ತರುವ ವ್ಯವಸ್ಥೆ ಮಾಡುವೆನೆಂದು’ ಹರ್ಯಾಣದ ಬಿಜೆಪಿ ನಾಯಕ ಓ.ಪಿ. ಧನ್ಕರ್ ಹೇಳಿರುವ ಮಾತೂ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.ಹರ್ಯಾಣದ ಬಿಜೆಪಿ ನಾಯಕ ಸುಶೀಲ್ ಮೋದಿಯವರೊಂದಿಗೆ ತನಗಿರುವ ಉತ್ತಮ ಭಾಂದವ್ಯವನ್ನು  ಬಳಸಿಕೊಂಡು ಈ ಭರವಸೆಯನ್ನು ನಾನು ಕಾರ್ಯಗತಗೊಳಿಸಬಲ್ಲೆನೆಂದು ಅವರು ಜನರಿಗೆ ಭರವಸೆ ನೀಡಿದ್ದಾರೆ.  ಹೊರನೋಟಕ್ಕೆ ಭಾರತದ ಹರ್ಯಾಣಕ್ಕೂ ಜಪಾನಿನ ಸಂಶೋಧನೆಗೂ ಯಾವ ಸಂಬಂಧವೂ ಇಲ್ಲ. ಮಾರ್ನಿಂಗ್ ಗ್ಲೋರಿ ಎಂಬ ಹೂವಿನ ಮೇಲೆ ಅಲ್ಲಿನ ವಿಜ್ಞಾನಿಗಳು ನಡೆಸಿದ ಪ್ರಯೋಗ ಮತ್ತು ಹೂವಿನ ವೃದ್ಧಾಪ್ಯವನ್ನು ಮುಂದೂಡಲು ಅವರು ಯಶಸ್ವಿಯಾಗಿರುವುದು ಸರ್ವತ್ರ ಶ್ಲಾಘನೆಗೆ ಒಳಗಾಗಿರುವ ಸಂದರ್ಭದಲ್ಲೇ ಹರ್ಯಾಣದಲ್ಲಿ ವಧುಗಳಿಗಿರುವ ಕೊರತೆಯು ಮತ್ತೊಮ್ಮೆ ಸುದ್ದಿಗೆ ಒಳಗಾಗಿದೆ. ನಿಜವಾಗಿ, ಜಪಾನಿನಲ್ಲಿ ಕೈಗೊಳ್ಳಲಾದ ಸಂಶೋಧನೆ ಸಹಜ ವೃದ್ಧಾಪ್ಯಕ್ಕೆ ಸಂಬಂಧಿಸಿದ್ದು. ಮಾರ್ನಿಂಗ್ ಗ್ಲೋರಿ ಎಂಬ ಹೂವಿನ ಮೇಲಿನ ಸಂಶೋಧನೆಯು ಮುಂದೊಂದು ದಿನ ಮನುಷ್ಯರ ಸಹಜ ವೃದ್ಧಾಪ್ಯವನ್ನು ಮುಂದೂಡುವ ಸಂಶೋಧನೆಗೆ ನೆರವಾಗಬಲ್ಲುದು ಎಂಬ ನಿರೀಕ್ಷೆ ವಿಜ್ಞಾನಿಗಳದು. ಆದರೆ ಹರ್ಯಾಣದ ಸಮಸ್ಯೆ ಸಹಜವಾದುದಲ್ಲ. ಹೆಣ್ಣು-ಗಂಡಿನ ನಡುವಿನ ಅನುಪಾತದಲ್ಲಿ ಒಂದು ಹಂತದ ವರೆಗೆ ಪ್ರಕೃತಿಯೇ ಸಮತೋಲನವನ್ನು ಕಾಪಾಡುತ್ತದೆ. ಹರ್ಯಾಣದಲ್ಲಿ ಆ ಸಮತೋಲನ ಕೆಟ್ಟಿದೆ ಎಂದರೆ ಅದಕ್ಕೆ ಕಾರಣ ಪ್ರಕೃತಿಯಲ್ಲ, ಮನುಷ್ಯ. ಹರ್ಯಾಣದಲ್ಲಿ ಹೆಣ್ಣು-ಗಂಡಿನ ಅನುಪಾತ ಇಡೀ ದೇಶದಲ್ಲಿಯೇ ಅತ್ಯಂತ ಕೆಳಮಟ್ಟದಲ್ಲಿದೆ. ಗಂಡನ್ನೇ ಬಯಸುವ ಮತ್ತು ಹೆಣ್ಣನ್ನು ಬಯಸದಿರುವ ವಾತಾವರಣ ಅಲ್ಲಿಯದು. ಇದರಿಂದಾಗಿ ಅಲ್ಲಿನ ಯುವಕರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದು ಅಪಹರಣ, ಲೈಂಗಿಕ ಅಪರಾಧ ಕೃತ್ಯಗಳಿಗೆ ಕಾರಣವಾಗುತ್ತಿದೆ. ಯುವಕರನ್ನು ಅಸಹಿಷ್ಣುತೆಗೆ ದೂಡುತ್ತಿದೆ. ಮಾನಸಿಕ ಒತ್ತಡಗಳ ಪರಿಣಾಮವು ದೇಹದ ಮೇಲೂ ಆಗುತ್ತಿದೆ. ಇದಕ್ಕೆ ಜಪಾನಿನ ಸಂಶೋಧನೆ ಪರಿಹಾರ ಆಗಲಾರದು. ಅಷ್ಟಕ್ಕೂ, ಒಂದು ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಇಂಥ ಪ್ರಾಕೃತಿಕ ಅಸಮತೋಲನಗಳು ಕೇವಲ ಆ ಪ್ರದೇಶದ ಸಮಸ್ಯೆಯಾಗಿಯಷ್ಟೇ ಉಳಿಯುವುದಿಲ್ಲ. ಅದರ ಪರಿಣಾಮವು ಪಕ್ಕದ ಪ್ರದೇಶಗಳ ಮೇಲೂ ಉಂಟಾಗುತ್ತದೆ. ಬಿಹಾರದಿಂದ ಹರ್ಯಾಣಕ್ಕೆ ವಧುಗಳನ್ನು ತರುವುದೆಂದರೆ, ಕಾರನ್ನೋ ಬಸ್ಸನ್ನೋ ತಿರುಗಿಸಿದಂತೆ ಅಲ್ಲವಲ್ಲ. ಯುವತಿಯೊಬ್ಬಳು ಹರ್ಯಾಣದ ಸೊಸೆಯಾಗುವುದು ಕೆಲವಾರು ಹಂತಗಳ ಪ್ರಕ್ರಿಯೆ. ಅಲ್ಲಿ ಮಧ್ಯವರ್ತಿಗಳ ಪ್ರವೇಶವಾಗಬಹುದು. ಮಾರಾಟ-ಚೌಕಾಶಿ, ಅಪಹರಣಗಳು, ಕೊಲೆಗಳೂ ನಡೆಯಬಹುದು. ದುರಂತ ಏನೆಂದರೆ, ಮನುಷ್ಯ ಸಹಜ ವೃದ್ಧಾಪ್ಯವನ್ನು ಮುಂದೂಡುವ ಬಗ್ಗೆ ಜಪಾನಿನ ಮಂದಿ ಆಲೋಚಿಸುತ್ತಿರುವಾಗ ಪ್ರಕೃತಿ ವಿರೋಧಿ ನಡವಳಿಕೆಗಳ ಕಾರಣದಿಂದಾಗಿ ಉದ್ಭವಿಸಿರುವ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಪ್ರಯತ್ನದಲ್ಲಿ ನಾವಿದ್ದೇವೆ. ಮಾರ್ನಿಂಗ್ ಗ್ಲೋರಿ ಎಂಬುದು ಸುಂದರವಾದ ಹೂವಿನ ತಳಿಯ ಹೆಸರು. ಆದರೆ ಹೆಣ್ಣು ಪ್ರಕೃತಿ ಒದಗಿಸಿರುವ ಬರೇ ಹೂವು ಅಷ್ಟೇ ಅಲ್ಲ, ಅದ್ಭುತ ಸಂಪತ್ತು. ಈ ಸಂಪತ್ತಿನ ಮೌಲ್ಯವನ್ನು ತಿಳಿಯಲಾರದ ನಾವು ಕೈಯಾರೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದೇವೆ.
 ಹೆಣ್ಣನ್ನು ವರ್ಣಿಸುವುದಕ್ಕೆ ಅದ್ಭುತ ಪದಗಳನ್ನು ಸಂಶೋಧಿಸಿ ಬಳಸಲಾಗುತ್ತಿರುವ ಈ ದೇಶದಲ್ಲಿಯೇ ಹೆಣ್ಣು ಅತ್ಯಂತ ಅವಮಾನಕರ ರೀತಿಯಲ್ಲಿ ಬದುಕುತ್ತಿದ್ದಾಳೆ.  ಈ ದೇಶದಲ್ಲಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಪಟ್ಟಣಗಳು ಯಾವುವು ಎಂಬ ವಿಷಯದ ಮೇಲೆ ಸವಿೂಕ್ಷೆ ನಡೆಸುವಷ್ಟರ ಮಟ್ಟಿಗೆ ಹೆಣ್ಣಿನ ಪರಿಸ್ಥಿತಿ ಹದಗೆಟ್ಟಿದೆ. ಕಳೆದ ವಾರ ಇಂಥದ್ದೊಂದು ಸವಿೂಕ್ಷಾ ವರದಿ ಬಿಡುಗಡೆಯಾಯಿತು. ಇಂಥ ಅಸುರಕ್ಷಿತ ಪ್ರಮುಖ 58 ಪಟ್ಟಣಗಳನ್ನು ಪಟ್ಟಿ ಮಾಡಲಾಯಿತಲ್ಲದೇ ದೆಹಲಿ ಅದರಲ್ಲಿ ಪ್ರಥಮ ಸ್ಥಾನ ಪಡೆಯಿತು. ಮುಂಬೈಗೆ ದ್ವಿತೀಯ. ಬೆಂಗಳೂರಿಗೆ ತೃತೀಯ. 2013ರಲ್ಲಿ ದೆಹಲಿಯಲ್ಲಿ 11,449 ಮಹಿಳಾ ದೌರ್ಜನ್ಯ ಪ್ರಕರಣಗಳು ಅಧಿಕೃತವಾಗಿ ನಡೆದಿವೆಯಂತೆ. ಬೆಂಗಳೂರಿನಲ್ಲಿ 2608. ಈ ಪಟ್ಟಿ ತುಂಬಾ ಉದ್ದ ಇದೆ. ವಿಷಾದವೇನೆಂದರೆ, ಮಹಿಳೆಯನ್ನು ವಿವಿಧ ಗೌರವಾರ್ಹ ಪದಗಳಿಂದ ಬಣ್ಣಿಸುವ ದೇಶದಲ್ಲೇ ‘ಮಹಿಳಾ ದೌರ್ಜನ್ಯ' ಎಂಬ ವಿಷಯದಲ್ಲಿ ಸವಿೂಕ್ಷೆ ಕೈಗೊಳ್ಳಲಾಗುತ್ತದೆ, ಸೆಮಿನಾರ್‍ಗಳು ನಡೆಯುತ್ತವೆ, ಹೆಣ್ಣು ಮಕ್ಕಳನ್ನು ಉಳಿಸಿ, ಗೌರವಿಸಿ ಎಂಬ ಹೆಸರಲ್ಲಿ ಜಾಗೃತಿ ಕಾರ್ಯಕ್ರಮಗಳು ಏರ್ಪಡುತ್ತವೆ ಎಂಬುದು. ಯಾಕಿಂಥ ವಿರೋಧಾಭಾಸ?
   ನಿಜವಾಗಿ, ಜಪಾನಿನ ವಿಜ್ಞಾನಿಗಳು ‘ಮಾರ್ನಿಂಗ್ ಗ್ಲೋರಿ'ಯ ಮೇಲೆ ನಡೆಸಿದ ಸಂಶೋಧನೆಯು ಇನ್ನೊಂದು ಕಾರಣಕ್ಕಾಗಿ ಈ ದೇಶದಲ್ಲೂ ಚರ್ಚೆಗೊಳಗಾಗಬೇಕಾದ ಅಗತ್ಯವಿದೆ. ಮಾರ್ನಿಂಗ್ ಗ್ಲೋರಿ ಹೂವುಗಳ ಆಯುಷ್ಯ ಹೆಚ್ಚಲಿ ಬಿಡಲಿ, ಆದರೆ ಈ ದೇಶದ ಹೆಣ್ಣು ಎಂಬ ಹೂವುಗಳ ಆಯುಷ್ಯ ಮತ್ತು ಗೌರವ ಹೆಚ್ಚಬೇಕಾಗಿದೆ. ಈ ದೇಶಕ್ಕೆ ವೃದ್ಧಾಪ್ಯ ಸಮಸ್ಯೆಯಾಗಿಲ್ಲ. ಆದರೆ ಹೆಣ್ಣು ಸಮಸ್ಯೆಯಾಗಿ ಬಿಟ್ಟಿದ್ದಾಳೆ. ನದಿ ನೀರನ್ನು ತಿರುಗಿಸುವಂತೆ ಆಕೆಯನ್ನು ಬಿಹಾರದಿಂದ ಹರ್ಯಾಣಕ್ಕೆ ತಿರುಗಿಸುವಷ್ಟು ಆಕೆ ಅಸುರಕ್ಷಿತವಾಗಿದ್ದಾಳೆ. ಆ ಅಸುರಕ್ಷಿತತೆಯನ್ನು ಸುರಕ್ಷಿತತೆಯನ್ನಾಗಿ ಪರಿವರ್ತಿಸುವ ಬಗ್ಗೆ ನಮ್ಮಲ್ಲಿ ಗಂಭೀರ ಚರ್ಚೆಗಳು ನಡೆಯಬೇಕು. ಅವರನ್ನು ಅಸುರಕ್ಷಿತಗೊಳಿಸುವ ಪುರುಷ ಜೀನನ್ನು ಪತ್ತೆ ಹಚ್ಚಿ ಅದರ ನಿರ್ಮೂಲನೆಗೆ ಪ್ರಯತ್ನಗಳು ನಡೆಯಬೇಕು. ಹರ್ಯಾಣದಲ್ಲಿ ಇವತ್ತು ಯಾವ ಹೆತ್ತವರು ತಮ್ಮ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಹುಡುಕಾಟದಲ್ಲಿ ತೊಡಗಿರುವರೋ ಒಂದೊಮ್ಮೆ ಅವರೇ ಹೆಣ್ಣು ಮಕ್ಕಳ ಕೊಲೆಗಾರರೂ ಆಗಿರಬಹುದು. ತಮ್ಮ ಮನೆಯಲ್ಲಿ ಬೆಳಕಾಗಿ ಮಿಂಚಬೇಕಾದ ಹೆಣ್ಣು ಮಗುವನ್ನು ಅವರು ಹತ್ಯೆ ನಡೆಸಿದ ಅಪರಾಧಿಗಳೂ ಆಗಿರಬಹುದು. ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಎಂಬ ಸಿದ್ಧಾಂತವನ್ನು ಬಲವಾಗಿ ನಂಬಿರುವವರೂ ಇವರಲ್ಲಿರಬಹುದು. ಇವೆಲ್ಲಕ್ಕೂ ಬಿಹಾರದ ಹೆಣ್ಣು ಪರಿಹಾರ ಅಲ್ಲ. ಬಿಹಾರವೇನೂ ಹೆಣ್ಣು ಮಕ್ಕಳನ್ನು ಉತ್ಪಾದಿಸುವ ಕಾರ್ಖಾನೆ ಅಲ್ಲವಲ್ಲ. ನಾಳೆ ಈ ಸಮಸ್ಯೆ ಬಿಹಾರವನ್ನೂ ಕಾಡಬಹುದು. ಆಗ ಹೆಣ್ಣು ಅಕ್ಷರಶಃ ಮಾರಾಟದ ಸರಕಾಗಬಹುದು. ಬಡವರು ತಮ್ಮ ಮಕ್ಕಳನ್ನು ಮಾರಾಟ ಮಾಡುವ ಮತ್ತು ಉಳ್ಳವರು ಅವರನ್ನು ಖರೀದಿಸಿ ಗುಲಾಮರಂತೆ ನೋಡಿಕೊಳ್ಳುವ ಸಂದರ್ಭಗಳೂ ನಿರ್ಮಾಣವಾಗಬಹುದು. ಖರೀದಿಸುವ ಸಾಮರ್ಥ್ಯ

ಮಾರ್ನಿಂಗ್ ಗ್ಲೋರಿ ಫ್ಲವರ್
ಇಲ್ಲದವರು ಅತ್ಯಾಚಾರಕ್ಕೆ ಮುಂದಾಗಬಹುದು. ಲೈಂಗಿಕ ದಾಹವನ್ನು ತಣಿಸುವುದಕ್ಕಾಗಿ ಯುವಕರು ಅಸುರಕ್ಷಿತ ಮಾರ್ಗಗಳನ್ನು ಅವಲಂಬಿಸಲೂ ಬಹುದು. ಹೆಣ್ಣನ್ನು ಅಗೌವಿಸುವ ಸಮಾಜದಲ್ಲಿ ಹುಟ್ಟಿಕೊಳ್ಳುವ ಅಪಾಯಕಾರಿ ರೋಗಗಳು ಇವೆಲ್ಲ. ಆದ್ದರಿಂದ, ಈ ರೋಗಗಳಿಗೆ ಮದ್ದನ್ನು ಈ ಸಮಾಜವೇ ಅರೆಯಬೇಕು. ರೋಗ ಮೂಲವನ್ನು ಹುಡುಕಬೇಕು. ಹರ್ಯಾಣದ ಮಂದಿ ಹೆಣ್ಣು ಮಕ್ಕಳನ್ನು ಪ್ರೀತಿಸುವ ಮನಸ್ಥಿತಿಗೆ ಮರಳಬೇಕು. ಹೆಣ್ಣನ್ನು ಪ್ರೀತಿಸುವ ಮತ್ತು ಗೌರವಿಸುವ ಸಮಾಜದಲ್ಲಿ ಮಾತ್ರ ನೈತಿಕ ಶಿಷ್ಟಾಚಾರಗಳು ಕಾಣಿಸಿಕೊಳ್ಳಲು ಸಾಧ್ಯ. ಹೆಣ್ಣು ಪ್ರತಿ ಹೆತ್ತವರ ಹೃದಯದ ಹೂವಾಗಬೇಕು. ಈ ಹೂವಿನ ಅರಳುವಿಕೆಗೆ ಕಾಯುವ, ಸುವಾಸನೆಯಿಂದ ತನ್ಮಯಗೊಳ್ಳುವ ಹೆತ್ತವರು ಹೆಚ್ಚಾಗಬೇಕು. ಇದೇನು ಅಸಾಧ್ಯವಲ್ಲ. ಅಸಾಧ್ಯದಂತೆ ಕಾಣಿಸಿದ್ದ ವೃದ್ಧಾಪ್ಯದ ಜೀನನ್ನೇ ಪತ್ತೆ ಹಚ್ಚಲು ಮತ್ತು ಆ ಮೂಲಕ ಮಾರ್ನಿಂಗ್ ಗ್ಲೋರಿ ಹೂವು ಉದುರದಂತೆ ಕಾಪಾಡಲು ಈ ಜಗತ್ತಿನಲ್ಲಿ ಸಾಧ್ಯ ಎಂದಾದರೆ, ಹೆಣ್ಣನ್ನು ಗೌರವಿಸುವುದು ಯಾಕೆ ಅಸಾಧ್ಯವಾಗಬೇಕು? ಆಕೆಯನ್ನು ಮನೆಯ ಹೂವಾಗಿ ಬೆಳೆಸುವುದು ಯಾಕೆ ದುಸ್ತರ ಅನ್ನಿಸಿಕೊಳ್ಳಬೇಕು? ಆದ್ದರಿಂದ, ಹರ್ಯಾಣದ ವಧು ಪ್ರಕರಣವು ಹೆಣ್ಣಿನ ಕುರಿತಾದ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವುದಕ್ಕೆ ಪ್ರೇರಕವಾಗಲಿ. ಹೆಣ್ಣು ಮಕ್ಕಳು ಪ್ರತಿ ಮನೆ, ಮನದಲ್ಲೂ ಮಾರ್ನಿಂಗ್ ಗ್ಲೋರಿ ಹೂವಿನಂತೆ ಸದಾ ಅರಳುತ್ತಿರಲಿ.

Tuesday, 1 July 2014

ವೈದ್ಯರ ದಿನಕ್ಕೆ ಕತ್ತರಿಯನ್ನು ಉಡುಗೊರೆ ಕೊಟ್ಟ ಹಫ್ಸಾ

   ಇತರೆಲ್ಲ ಕ್ಷೇತ್ರಗಳಿಗೆ ಹೋಲಿಸಿದರೆ ವೈದ್ಯ ಕ್ಷೇತ್ರಕ್ಕೆ ಸಮಾಜದಲ್ಲಿ ವಿಶೇಷವಾದ ಮನ್ನಣೆಯಿದೆ. ಇದಕ್ಕೆ; ವೈದ್ಯರು ಪ್ರಯಾಣಿಸುವ ಕಾರು, ಅವರು ಧರಿಸುವ ಬಿಳಿಕೋಟು, ಸ್ಟೆತೋಸ್ಕೋಪ್‍ಗಳು ಕಾರಣವಲ್ಲ. ದುಬಾರಿ ವಾಹನದಲ್ಲಿ ಪ್ರಯಾಣಿಸುವವರು, ಅದ್ದೂರಿ ಉಡುಪು ಧರಿಸುವವರು, ಲಕ್ಷಾಂತರ ದುಡ್ಡಿರುವವರು ಸಮಾಜದಲ್ಲಿ ಅನೇಕರಿದ್ದಾರೆ. ಆದರೆ ಅವರಾರಿಗೂ ಸಿಗದ ಗೌರವ ಮತ್ತು ಕೃತಜ್ಞತಾಭಾವವೊಂದನ್ನು ವೈದ್ಯಲೋಕ ಈಗಲೂ ಪಡಕೊಳ್ಳುತ್ತಿದೆ. ಈ ಸಮಾಜದ ಪಾಲಿಗೆ ತೀರಾ ಅಪರಿಚಿತವಾಗಿರುವ ವ್ಯಕ್ತಿಯಿಂದ ಹಿಡಿದು ರಿಲಯನ್ಸ್ ನ ಅಂಬಾನಿಯ ವರೆಗೆ, ಎಲ್ಲರ ಮೇಲೂ ವೈದ್ಯರಿಗೆ ಒಂದು ಮಿತಿಯಲ್ಲಿ ಹಿಡಿತವಿದೆ. ಕೂಲಿ ಮಾಡುವ ಅನಕ್ಷರಸ್ಥ ವ್ಯಕ್ತಿ ತನ್ನ ಪತ್ನಿಯನ್ನೋ ಮಗನನ್ನೋ ವೈದ್ಯರ ಕೈಗೆ ಒಪ್ಪಿಸಿದ ಬಳಿಕ ನಿರಾಳವಾಗುತ್ತಾನೆ. ಆ ವರೆಗೆ ಆತನನ್ನು ಆವರಿಸಿದ್ದ ಆತಂಕಗಳನ್ನು ವೈದ್ಯರ ನಾಲ್ಕು ಭರವಸೆಯ ಮಾತುಗಳು ತೊಲಗಿಸಿಬಿಡುತ್ತವೆ. ತನ್ನವರ ಕಾಯಿಲೆಯನ್ನು ಗುಣಪಡಿಸುವಲ್ಲಿ ಈ ವೈದ್ಯ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂಬ ತುಂಬು ಭರವಸೆಯೊಂದಿಗೆ ಆತ ಆಸ್ಪತ್ರೆಯ ಹೊರಗೆ ಕಾಯುತ್ತಿರುತ್ತಾನೆ. ದಿನಸಿ ಅಂಗಡಿಯಲ್ಲಿ ಅಥವಾ ವಾರದ ಸಂತೆಯಲ್ಲಿ ವ್ಯಾಪಾರಿಗಳೊಂದಿಗೆ ಚೌಕಾಸಿ ಮಾಡಿಯೇ ಆಹಾರ ವಸ್ತುಗಳನ್ನು ಖರೀದಿಸುವವನು ಕೂಡ, ಮೆಡಿಕಲ್ ಶಾಪ್‍ಗಳಲ್ಲಿ ಚೌಕಾಸಿಗಿಳಿಯುವುದಿಲ್ಲ. ಸಕ್ಕರೆ ಮುಗಿದಿದೆ ಎಂದೋ ಹೆಸ್ರುಬೇಳೆ ತನ್ನಿ ಎಂದೋ ಪತ್ನಿ ಹೇಳಿದರೆ  ಸಿಡಿಮಿಡಿಗೊಂಡು ಮಾರುಕಟ್ಟೆಗೆ ಹೋಗುವವನೂ ವೈದ್ಯರ ಔಷಧ ಚೀಟಿಗೆ ಸಿಡಿಮಿಡಿಗೊಳ್ಳುವುದಿಲ್ಲ. ಯಾಕೆಂದರೆ, ಸಮಾಜದಿಂದ ವೈದ್ಯ ಕ್ಷೇತ್ರ ಬಹುತೇಕ ಅಪರಿಚಿತವಾಗಿಯೇ ಉಳಿದಿದೆ. ಅಲ್ಲಿನ ಭಾಷೆ, ತುರ್ತು, ಉಡುಪು.. ಎಲ್ಲವುಗಳ ಬಗ್ಗೆಯೂ ಸಮಾಜದಲ್ಲೊಂದು ಕುತೂಹಲವಿದೆ. ಬಹುಶಃ ಸಮಾಜದ ಈ ಅಜ್ಞಾನ ಮತ್ತು ಕುತೂಹಲಗಳು ಅನೇಕ ಬಾರಿ ವೈದ್ಯಕೀಯ ಕ್ಷೇತ್ರವು ನಿರ್ಲಜ್ಜೆಯಿಂದ ವರ್ತಿಸುವುದಕ್ಕೆ ಕಾರಣವೂ ಆಗಿದೆ. ಕಳೆದವಾರ ಮಂಗಳೂರಿನಲ್ಲಿ ನಡೆದ ಪ್ರಕರಣವೊಂದು ಇದನ್ನು ಮತ್ತಷ್ಟು ಖಚಿತಪಡಿಸಿದೆ.
 2010 ಫೆ. 22ರಂದು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಗರ್ಭಕೋಶದ ಗಡ್ಡೆ ಶಸ್ತ್ರಚಿಕಿತ್ಸೆಗೆ ಒಳಗಾದ ಹಫ್ಸಾ ಎಂಬ ಮಹಿಳೆಯೋರ್ವರು ಅದೇ ಮಾರ್ಚ್ 11ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದರು. ಆದರೆ ಆ ಬಳಿಕವೂ ಆಪರೇಶನ್ ನಡೆದ ಜಾಗದಲ್ಲಿ ನೋವು ಕಾಣಿಸುತ್ತಿದ್ದುದರಿಂದ ಹಲವು ಬಾರಿ ಆಸ್ಪತ್ರೆಗೆ ಭೇಟಿಯನ್ನೂ ನೀಡಿದ್ದರು. ಕಳೆದ ವಾರ ಎಕ್ಸ್ ರೇ ಮತ್ತು ಸ್ಕ್ಯಾನ್ ನಡೆಸಿದಾಗ ಹೊಟ್ಟೆಯ ಒಳಗಡೆ ಶಸ್ತ್ರಚಿಕಿತ್ಸೆಗೆ ಉಪಯೋಗಿಸುವ ಕತ್ತರಿ ಪತ್ತೆಯಾಯಿತು ಮಾತ್ರವಲ್ಲ, ಇನ್ನೊಂದು ಶಸ್ತ್ರ ಚಿಕಿತ್ಸೆಯ ಮೂಲಕ ಅದನ್ನು ಹೊರತೆಗೆಯಲಾಯಿತು.
   ಅಷ್ಟಕ್ಕೂ, ಕಳೆದ ನಾಲ್ಕು ವರ್ಷಗಳಿಂದ ಕತ್ತರಿಯನ್ನು ಹೊಟ್ಟೆಯಲ್ಲಿಟ್ಟುಕೊಂಡು ಬದುಕಿದ ಆ ಮಹಿಳೆಯನ್ನೊಮ್ಮೆ ಊಹಿಸಿ. ಆಕೆ ಅನುಭವಿಸಿದ ಸಂಕಟಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಕೊಡಲು ಏನು ಪರಿಹಾರವಿದೆ? ಆಪರೇಶನ್ ಎಂಬ ಪ್ರಕ್ರಿಯೆಯೇ ತೀರಾ ಸೂಕ್ಷ್ಮವಾದದ್ದು. ಮೈಯೆಲ್ಲಾ ಕಣ್ಣಾಗಿ ನಡೆಸುವಂಥದ್ದು. ಆ ಸಂದರ್ಭದಲ್ಲಿ ವೈದ್ಯ ಬರೇ ಬಿಳಿಕೋಟು, ಕೆಲವು ಉಪಕರಣಗಳನ್ನು ಹೊಂದಿರುವ ಮನುಷ್ಯನಷ್ಟೇ ಆಗಿರುವುದಿಲ್ಲ. ಆಗ ರೋಗಿಯು ಆತನ ಮೇಲೆ ಪರಕಾಯ ಪ್ರವೇಶ ಮಾಡಿರುತ್ತಾನೆ/ಳೆ. ರೋಗಿಯ ಸಂಕಟ ವೈದ್ಯನ ಸಂಕಟವೂ ಆಗಿರುತ್ತದೆ. ರೋಗಿಯ ಭಾವನೆ ವೈದ್ಯನ ಭಾವನೆಯೂ ಆಗಿರುತ್ತದೆ. ತನ್ನೆದುರು ಶಸ್ತ್ರಚಿಕಿತ್ಸೆಗಾಗಿ ಮಲಗಿದ ವ್ಯಕ್ತಿಯ ಮಕ್ಕಳು ತನ್ನದೇ ಮಕ್ಕಳಾಗಿ ವೈದ್ಯನ ಮುಂದೆ ಸುಳಿಯುತ್ತಾರೆ. ರೋಗಿ ಧನಿಕನೋ ಬಡವನೋ ಎಂಬ ಆಲೋಚನೆಗಿಂತ ಆಚೆ, ಈತನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಪ್ರಜ್ಞೆ ಆತನನ್ನು ಮತ್ತೆ ಮತ್ತೆ ಕಾಡುತ್ತಿರುತ್ತದೆ. ಶಸ್ತ್ರಚಿಕಿತ್ಸೆ ವಿಫಲವಾದರೂ ಸಫಲವಾದರೂ ಆ ಎರಡೂ ಸಂದರ್ಭಗಳ ಸಂಕಟ ಅಥವಾ ಖುಷಿಯನ್ನು ರೋಗಿಯಂತೆಯೇ ವೈದ್ಯನೂ ಅನುಭವಿಸುತ್ತಾನೆ.. ಇಂಥ ಹತ್ತು-ಹಲವು ಕರುಣಾಮಯಿ ಕಲ್ಪನೆಗಳೊಂದಿಗೆ ಸಮಾಜ ಇವತ್ತೂ ವೈದ್ಯ ಕ್ಷೇತ್ರವನ್ನು ಆರಾಧನಾ ಭಾವದಿಂದ ನೋಡುತ್ತಿದೆ. ಅಷ್ಟಕ್ಕೂ, ಇಂಥವರು ಇಲ್ಲ ಎಂದಲ್ಲ. ಅವರ ಸಂಖ್ಯೆ ಎಷ್ಟಿದೆ ಎಂಬುದಷ್ಟೇ ಮುಖ್ಯ. ದುರಂತ ಏನೆಂದರೆ, ವೈದ್ಯಕೀಯ ಕ್ಷೇತ್ರದ ಈ ಸುಂದರ ಮುಖಕ್ಕೆ ಕೆಲವು ವೈದ್ಯರು ಇವತ್ತು ಕುರೂಪದ ಬಣ್ಣ ಬಳಿಯುತ್ತಿದ್ದಾರೆ. ಸಮಾಜ ಈ ಕ್ಷೇತ್ರದ ಮೇಲೆ ಏನೆಲ್ಲ ಭರವಸೆಗಳನ್ನು ಇಟ್ಟಿದೆಯೋ ಅವೆಲ್ಲಕ್ಕೂ ನಿರ್ದಯೆಯಿಂದ ಕತ್ತರಿ ಪ್ರಯೋಗಿಸುವ ಸಾಹಕ್ಕೆ ಇಳಿದಿದ್ದಾರೆ. ಬರೇ ದುಡ್ಡೊಂದನ್ನೇ ಧ್ಯೇಯವಾಗಿಸಿಕೊಂಡ ಮತ್ತು ಅದರಾಚೆಗೆ ಬಿಳಿ ಕೋಟಿಗೂ ಇನ್ನಿತರ ಕೋಟುಗಳಿಗೂ ಯಾವುದೇ ವ್ಯತ್ಯಾಸ ಇಲ್ಲವೆಂಬಂತೆ ನಡಕೊಳ್ಳುವ ವೈದ್ಯರುಗಳೂ ತಯಾರಾಗುತ್ತಿದ್ದಾರೆ. ಮನುಷ್ಯ ಹಸಿವಿನಿಂದ ಇರಬಲ್ಲ, ಆದರೆ ಕಾಯಿಲೆಯನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲವಲ್ಲ. ಇದು ವೈದ್ಯಕೀಯ ಕ್ಷೇತ್ರಕ್ಕೂ ಗೊತ್ತು. ಹೊಟ್ಟೆಯ ಹಸಿವಿಗೆ ಖರ್ಚು ಮಾಡಲು ಹಿಂದು-ಮುಂದು ನೋಡುವ ಕುಟುಂಬವೂ ಕಾಯಿಲೆಯಿಂದ ಗುಣಮುಖಗೊಳ್ಳುವುದಕ್ಕಾಗಿ ಇರುವುದೆಲ್ಲವನ್ನೂ ಖರ್ಚು ಮಾಡಲು ಮುಂದಾಗುತ್ತದೆ. ಆರೋಗ್ಯಕ್ಕೆ ಸಮಾಜ ಕೊಡುತ್ತಿರುವ ಈ ಪ್ರಾಶಸ್ತ್ಯ ಇತರೆಲ್ಲರಿಗಿಂತ ಹೆಚ್ಚು ಮನದಟ್ಟಾಗಿರುವುದು ವೈದ್ಯಕೀಯ ಕ್ಷೇತ್ರಕ್ಕೇ. ಅಲ್ಲದೇ ಈ ಕ್ಷೇತ್ರವು ‘ಸಾಲ ಕೊಡುವುದಿಲ್ಲ' ಎಂಬ ಬೋರ್ಡನ್ನೂ ನೇತುಹಾಕಿಕೊಂಡಿದೆ. ಸಾಮಾನ್ಯ ಬಡವನೊಬ್ಬ ದಿನಸಿ ಅಂಗಡಿಯಲ್ಲಿ ಸಾಲ ಮಾಡುವಂತೆ ಆಸ್ಪತ್ರೆಗಳಲ್ಲಿ ಸಾಲ ಮಾಡುವಂತಿಲ್ಲ. ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ‘ಮುಂದಿನ ತಿಂಗಳು ದುಡ್ಡು ಪಾವತಿಸುವೆ' ಎಂದು ಹೇಳುವಂತಿಲ್ಲ. ಎಲ್ಲಿಂದಲೋ ಕಾಡಿ-ಬೇಡಿಯೋ ಏನನ್ನಾದರೂ ಅಡವಿಟ್ಟೋ ಆಸ್ಪತ್ರೆಗಳಿಗೆ ದುಡ್ಡು ಪಾವತಿಸಿ ಮರಳುವ ಕಾಯಿಲೆ ಪೀಡಿತರು ಆ ಸಂದರ್ಭದಲ್ಲೂ ಖುಷಿ ವ್ಯಕ್ತಪಡಿಸುವುದಕ್ಕೆ ಕಾರಣ ಏನೆಂದರೆ ತಾವು ಕಾಯಿಲೆಯಿಂದ ಮುಕ್ತವಾಗಿದ್ದೇವೆ ಎಂಬುದು ಮಾತ್ರ. ಸಾಲ ಕೊಡದಿದ್ದರೂ ವೈದ್ಯರಿಗೆ ಅವರು ನಮ್ರತೆಯಿಂದ ಕೃತಜ್ಞತೆ ಅರ್ಪಿಸುತ್ತಾರೆ.  ನಿಜವಾಗಿ, ಇಂಥ ಭಾವುಕ ಕ್ಷಣಗಳನ್ನು ಕಳೆದವಾರ ನಡೆದಂಥ ‘ಕತ್ತರಿ' ಪ್ರಕರಣಗಳು ಮತ್ತೆ ಮತ್ತೆ ಪ್ರಶ್ನೆಗೊಡ್ಡುತ್ತಲೇ ಹೋಗುತ್ತಿವೆ. ವೈದ್ಯಲೋಕದ ಎಡವಟ್ಟಿನಿಂದ ಬದುಕನ್ನೇ ಕಳಕೊಂಡ ಅಥವಾ ಕಾಯಿಲೆ ಉಲ್ಬಣಗೊಂಡ ಘಟನೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಆದ್ದರಿಂದ, ಇಂಥ ಪ್ರಕರಣಗಳನ್ನು ‘ವೈದ್ಯರ ನಿರ್ಲಕ್ಷ್ಯ' ಎಂಬ ಪುಟ್ಟ ಪದದೊಳಗೆ ಅಡಗಿಸಿಟ್ಟು ಸುಮ್ಮನಾಗುವುದಕ್ಕೆ ಬಿಡಬಾರದು. ವೈದ್ಯಕೀಯ ಕ್ಷೇತ್ರದ ಪ್ರಮಾದ ಇತರ ಕ್ಷೇತ್ರಗಳ ಪ್ರಮಾದದಂತೆ ಖಂಡಿತ ಅಲ್ಲ. ವೈದ್ಯನ ತಪ್ಪು ಒಂದಿಡೀ ಕುಟುಂಬವನ್ನೇ ಬೀದಿಪಾಲು ಮಾಡುವುದಕ್ಕೂ ಸಾಧ್ಯವಿದೆ. `ಹಫ್ಸಾ' ಅದಕ್ಕೆ ಇತ್ತೀಚಿನ ಉದಾಹರಣೆ ಅಷ್ಟೇ. ಆಕೆಯ ಹೊಟ್ಟೆಯೊಳಗಿನಿಂದ ಕತ್ತರಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆದ ಸುದ್ದಿಯನ್ನು ಮಾಧ್ಯಮಗಳು '
ವೈದ್ಯರ ದಿನ'ವಾದ ಜುಲೈ 1ರಂದೇ ಪ್ರಕಟಿಸಿವೆ. ಬಹುಶಃ ಬೇಜವಾಬ್ದಾರಿ ವೈದ್ಯ ಲೋಕಕ್ಕೆ ಓರ್ವ ರೋಗಿ ಕೊಡಬಹುದಾದ ಅತ್ಯುತ್ತಮ ಉಡುಗೊರೆ ಇದು. ಆದ್ದರಿಂದ, ಈ ಕತ್ತರಿಯ ನಕಲೊಂದನ್ನು ಎಲ್ಲ ವೈದ್ಯರೂ ತಮ್ಮ ಬಳಿ ಸದಾ ಇಟ್ಟುಕೊಳ್ಳಬೇಕು. ಒತ್ತಡಗಳ ಸಂದರ್ಭಗಳಲ್ಲಿ ಆಗಬಹುದಾದ ಎಡವಟ್ಟುಗಳಿಂದ ಪಾರಾಗಲು ಹಫ್ಸಾಳ ಈ `ಕತ್ತರಿ' ಎಚ್ಚರಿಕೆಯ ಗಂಟೆಯಾಗಬೇಕು. ಇನ್ನಾವ ರೋಗಿಯನ್ನೂ `ಹಫ್ಸಾ' ಮಾಡಲಾರನೆಂಬ ಪ್ರತಿಜ್ಞೆಯನ್ನು ಎಲ್ಲ ವೈದ್ಯರೂ ಕೈಗೊಳ್ಳಬೇಕು.