Tuesday 26 August 2014

ಪ್ರತಿಭಟಿಸುತ್ತಲೇ ಹೊರಟು ಹೋದ ಮೂರ್ತಿ, ನೂರ್

  
    ಸಂಸ್ಕಾರ, ಭಾರತೀಪುರ, ಭವ, ಅವಸ್ಥೆ, ದಿವ್ಯ, ಘಟಾಶ್ರಾದ್ಧ, ಮೌನಿ... ಮುಂತಾದ ಮೇರು ಸಾಹಿತ್ಯ ಕೃತಿಗಳಿಗಿಂತಲೂ ಆಚೆಗೆ; ಸಾಮಾಜಿಕ ಸ್ಥಿತ್ಯಂತರ, ತಲ್ಲಣಗಳಿಗೆ ಸದಾ ಸ್ಪಂದಿಸಿ ತನ್ನ ಇರುವನ್ನು ಮತ್ತು ವಿಚಾರವನ್ನು ದೇಣಿಗೆ ನೀಡುತ್ತಿದ್ದ ಯು.ಆರ್. ಅನಂತಮೂರ್ತಿಯವರು ಆಗಸ್ಟ್ 22 ಹೊರಟು ಹೋಗುವುದಕ್ಕಿಂತ ಎರಡು ದಿನಗಳ
ಮುಂಚಿತವಾಗಿ- ತಫ್ಹೀಮುಲ್ ಕುರ್ ಆನ್ (ಕುರ್‍ಆನ್ ಕನ್ನಡಾನುವಾದ), ‘ಇಸ್ಲಾಮ್ ಸಂಶಯಗಳ ಸುಳಿಯಲ್ಲಿ’, ‘ತಲಾಕ್’, ‘ಮಹಿಳೆ ಇಸ್ಲಾಮಿನಲ್ಲಿ’, ‘ಭಾರತೀಯ ಸಂಸ್ಕ್ರಿತಿಯ ಅಂತರ್ಧಾರೆಗಳು’, ‘ಧಾರ್ಮಿಕ ಸೌಹಾರ್ದ’...  ಮುಂತಾದ 60ಕ್ಕಿಂತಲೂ ಅಧಿಕ ಕೃತಿಗಳನ್ನು ಕನ್ನಡ ಜನತೆಗೆ ನೀಡಿದ ಮತ್ತು ‘ಆದರ್ಶಪ್ರಾಯ’ ಎಂಬ ಪದಕ್ಕೆ ಅನ್ವರ್ಥವಾಗಿ ಬದುಕಿದ್ದ ಸನ್ಮಾರ್ಗ ವಾರ ಪತ್ರಿಕೆಯ ಗೌರವ ಸಂಪಾದಕರಾದ ನೂರ್ ಮುಹಮ್ಮದ್ ರು  ಆಗಸ್ಟ್ 19ರಂದು ಹೊರಟು ಹೋದರು. ಬಹುಶಃ ಹೋಲಿಕೆಗೆ ಹೊಂದಿಬರದ ಎರಡು ವ್ಯಕ್ತಿತ್ವಗಳಿವು. ತಮ್ಮ ಆದರ್ಶ ಜಗತ್ತನ್ನು ಪ್ರತಿಪಾದಿಸಲು ಇವರಿಬ್ಬರು ಆಯ್ಕೆ ಮಾಡಿಕೊಂಡದ್ದು ಭಿನ್ನ ದಾರಿಗಳನ್ನೇ. ಗಾಂಧೀಜಿ-ಲೋಹಿಯಾರ ವಿಚಾರಧಾರೆಗಳಿಂದ ಪ್ರಭಾವಿತರಾಗಿ, ಧರಣಿ ಮಂಡಲದ ಹಸುವನ್ನು ಎದೆಗಿಳಿಸಿಕೊಂಡು ಜಗಳ, ತಿಕ್ಕಾಟ, ಪ್ರತಿಭಟನೆ, ಒದ್ದಾಟಗಳೊಂದಿಗೆ ಬೆಳೆದ ಅನಂತಮೂರ್ತಿಯವರಿಗಿಂತ ಭಿನ್ನವಾಗಿ ಪವಿತ್ರ ಕುರ್‍ಆನನ್ನೇ ಪ್ರಬಲ ಆದರ್ಶವಾಗಿ ಆಯ್ಕೆ ಮಾಡಿಕೊಂಡವರು ನೂರ್ ಮುಹಮ್ಮದ್. ಆದರ್ಶದ ವಿಚಾರದಲ್ಲಿ ನೂರ್‍ರೊಂದಿಗೆ ತಿಕ್ಕಾಟ ಇರಲಿಲ್ಲ. ಆದರೆ, ಈ ಆದರ್ಶವನ್ನು ಒಪ್ಪಿಕೊಂಡ ಮಂದಿಯ ಅನಾದರ್ಶ ಜೀವನದ ಬಗ್ಗೆ ಅವರಲ್ಲಿ ಪ್ರತಿಭಟನೆಯಿತ್ತು. ಅದನ್ನು ಜೀರ್ಣಿಸಿಕೊಳ್ಳಲಾಗದೆ ಬದುಕಿನುದ್ದಕ್ಕೂ ಒದ್ದಾಡಿದರು. ಬರೆದರು. ತನ್ನ ಆದರ್ಶಪ್ರಾಯ ಜಗತ್ತನ್ನು ತನ್ನ ಮನೆ, ಪರಿಸರ, ಸಮಾಜದಲ್ಲಿ ನಿಜಗೊಳಿಸಲು ಅವಿಶ್ರಾಂತ ದುಡಿದರು. ಮೌಲಾನಾ ಮೌದೂದಿಯವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ, ಆ ಆದರ್ಶ ಜಗತ್ತಿನ ಸ್ಥಾಪನೆಗಾಗಿ ಜಮಾಅತೆ ಇಸ್ಲಾವಿೂ ಹಿಂದನ್ನು ನೆಚ್ಚಿಕೊಂಡರು. ಸೈದ್ಧಾಂತಿಕವಾಗಿ ಗೊಂದಲಗಳಿಲ್ಲದ, ವೈಚಾರಿಕವಾಗಿ ನಿಖರತೆಯಿರುವ ಸೀದಾ-ಸಾದಾ ವ್ಯಕ್ತಿತ್ವ ಅವರದು. ಅನಂತಮೂರ್ತಿಯವರೂ ಒಂದು ಕಲ್ಯಾಣ ಸಮಾಜದ ಕನಸು ಕಂಡವರು. ತನ್ನ ಅಗ್ರಹಾರದ ಮಠದಲ್ಲಿ ನಡೆಯುತ್ತಿದ್ದ ದ್ವೈತ-ಅದ್ವೈತದ ನಡುವಿನ ವಾದಗಳನ್ನು ಕೇಳಿಸಿಕೊಂಡು ಪ್ರಶ್ನೆಗಳೊಂದಿಗೆ ಹಿಂದಿರುಗುತ್ತಿದ್ದವರು. ಭೂಮಿ ಗುಂಡಾಗಿದೆಯೇ-ಚಪ್ಪಟೆಯಾಗಿದೆಯೇ ಎಂಬ ಚರ್ಚೆ, ವಾಗ್ವಾದಗಳು ತನ್ನ ಮಠದಲ್ಲಿ ನಡೆಯುತ್ತಿದ್ದುವು ಎಂದು ಅವರು ಜ್ಞಾನಪೀಠ ಪುರಸ್ಕಾರದ ಸಂದರ್ಭದಲ್ಲಿ ನೀಡಿದ ಭಾಷಣದಲ್ಲಿ ಹೇಳಿಕೊಂಡಿದ್ದರು. ತನ್ನ ತಂದೆಯ ಆಲೋಚನೆಗಳು ಎಷ್ಟು ಗೊಂದಲಕಾರಿಯಾಗಿದ್ದುವು ಎಂಬುದನ್ನು ಅವರು ಎಷ್ಟು ಚೆಲುವಾಗಿ ಆ ಭಾಷಣದಲ್ಲಿ ವ್ಯಾಖ್ಯಾನಿಸಿದ್ದರೆಂದರೆ, ತಂದೆಯ ತಲೆಯ ಮೇಲಿನ ಕೂದಲು ಕೆಲವೊಮ್ಮೆ ಮಡಿವಂತರಂತೆಯೂ ಕೆಲವೊಮ್ಮೆ ಆಧುನಿಕರಂತೆಯೂ ಕಾಣುತ್ತಿತ್ತು ಎಂದಿದ್ದರು. ನಿಜವಾಗಿ, ಅನಂತಮೂರ್ತಿಯವರು ಈ ಸಮಾಜವನ್ನು ಸದಾ ಪ್ರಶ್ನಾರ್ಹರಾಗಿ ಮತ್ತು ಚರ್ಚಾರ್ಹರಾಗಿ ಕಾಡಿರುವುದಕ್ಕೆ ಮುಖ್ಯ ಕಾರಣ, ಸಮಾಜದ ಜೀವನ ಕ್ರಮಗಳೇ. ಊರಿನಲ್ಲಿ ಕಾಣಿಸಿಕೊಂಡ ಪ್ಲೇಗ್‍ಗೆ ಚಿಕಿತ್ಸೆ ನೀಡಲು ಅಗ್ರಹಾರಕ್ಕೆ ಬಂದ ವೈದ್ಯರೋರ್ವರು ಅಸ್ಪ್ರಶ್ಯ ಕೇರಿಗೆ ಹೋಗಲು ನಿರಾಕರಿಸಿದುದು ಅವರ ಮೇಲೆ ತೀವ್ರ ಪರಿಣಾಮವನ್ನು ಬೀರಿತ್ತು. ‘ಸಂಸ್ಕಾರ’ ಅವರೊಳಗಿನ ಈ ಎಲ್ಲ ಆಕ್ರೋಶ, ಪ್ರಶ್ನೆ, ಆದರ್ಶ ಕಲ್ಪನೆಯ ಕೂಸು ಎನ್ನಬೇಕು. ಈ ಸಮಕಾಲೀನ ಸಮಾಜದಲ್ಲಂತೂ ಅವರು ಈ ಸಮಾಜಕ್ಕೆ ಇನ್ನಷ್ಟು ಹತ್ತಿರವಾದರು. ಅವರಿಲ್ಲದ ಅಥವಾ ಸ್ಪಂದಿಸದ ಚರ್ಚೆಯೊಂದು ಅಪೂರ್ಣ ಅನ್ನಿಸುವಷ್ಟರ ಮಟ್ಟಿಗೆ ಅವರು ಪ್ರಭಾವ ಬೆಳೆಸಿಕೊಂಡರು. ಅವರು ಮೋದಿಯನ್ನೂ ಬಿಡಲಿಲ್ಲ. ಭೈರಪ್ಪರನ್ನೂ ಬಿಡಲಿಲ್ಲ. ಕನ್ನಡ ಮಾಧ್ಯಮ ಶಾಲೆಗಳೂ ಪಠ್ಯ ಪುಸ್ತಕ ಬದಲಾವಣೆಗಳೂ ಅವರ ಚರ್ಚಾ ವ್ಯಾಪ್ತಿಗೆ ಬಂದುವು. ದುರಂತವೇನೆಂದರೆ, ಅವರ ಆಲೋಚನಾ ಧಾಟಿಗೂ ವಾಸ್ತವಕ್ಕೂ ನಡುವೆ ಇರುವ ಅಪಾರವಾದ ನಂಟನ್ನು ಕಂಡು ಕನಲಿದ ಒಂದು ವರ್ಗವು ಅವರ ವಿಚಾರಧಾರೆಯನ್ನೇ ತಿರುಚುವ ಯತ್ನ ಮಾಡಿದುವು. ವೇದಿಕೆಯ ಮೇಲಿಂದ ಅವರು ಏನನ್ನು ಹೇಳುತ್ತಾರೋ ಅದಕ್ಕೆ ಆ ವೇದಿಕೆಗಿಂತಲೂ ಕಿರಿದಾದ ಅರ್ಥ ಬರುವಂತೆ ವ್ಯಾಖ್ಯಾನಿಸಿದುವು. ಆ ವ್ಯಾಖ್ಯಾನದ ಸುತ್ತಲೇ ಸಾರ್ವಜನಿಕರು ಆಲೋಚಿಸುವಂಥ ಸನ್ನಿವೇಶ ಗಳನ್ನು ಸೃಷ್ಟಿಸಿದುವು. ಆದ್ದರಿಂದಲೇ, ‘ಮೋದಿ ಪ್ರಧಾನಿಯಾದ ಭಾರತದಲ್ಲಿ ಇರಲು ತಾನು ಇಚ್ಛಿಸುವುದಿಲ್ಲ' ಎಂದ ಅವರ ಮಾತು ‘ಅಕಾಲಿಕ ಮತ್ತು ಅಸಂಬದ್ಧ'ವೆಂಬಂತೆ ಚಿತ್ರಿತವಾದದ್ದು ಮತ್ತು ಮೋದಿ ಬೆಂಬಲಿಗರು ಅವರಿಗೆ ‘ಪಾಕ್' ವಿಮಾನ ಯಾನದ ಟಿಕೆಟ್ ಕಳುಹಿಸಿಕೊಡುವಷ್ಟು ವಿಪರೀತ ಮಟ್ಟಕ್ಕೆ ತಲುಪಿದ್ದು. ನಿಜವಾಗಿ ‘ಪದ್ಯ ಬರೆವ ಬಗೆ' ಎಂಬ ಲೇಖನವನ್ನು ಬರೆದವರು ಅನಂತಮೂರ್ತಿ. ಪದ್ಯವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಅದರಲ್ಲಿ ಅವರು ವ್ಯಾಖ್ಯಾನಿಸಿದ್ದರು. ಆದರೆ, ಅವರ ಮಾತಿನ ಆಳ, ವಿಸ್ತಾರ ಮತ್ತು ಗಹನತೆಯನ್ನು ಗ್ರಹಿಸುವಲ್ಲಿ ಆಧುನಿಕ ತಲೆಮಾರು ಸೋತಿದ್ದನ್ನು ನೋಡಿದರೆ, ‘ಮಾತು ಬಗೆವ ಬಗೆ' ಎಂಬ ಲೇಖನವನ್ನು ಬರೆಯ ಬೇಕಿತ್ತೇನೋ ಎಂದನಿಸುತ್ತದೆ.
 ತನ್ನ ಇಷ್ಟದ ಸಮಾಜದ ಸ್ಥಾಪನೆಗಾಗಿ ವಾಗ್ವಾದದ ಶೈಲಿಯನ್ನು ನೆಚ್ಚಿಕೊಂಡವರು ಅನಂತಮೂರ್ತಿ. ಅದಕ್ಕಾಗಿ ಜಗಳಗಂಟರು, ವಿವಾದ ಪುರುಷರು ಆಗಲೂ ಅವರು ಸಿದ್ಧರಾದರು. ನೂರ್ ಮುಹಮ್ಮದ್‍ರ ದಾರಿ ಇದಕ್ಕಿಂತ ಭಿನ್ನ. ಅವರು ನೇರ ಮತ್ತು ನಿಖರ ಭಾಷೆಯನ್ನು ಬಳಸಿಕೊಂಡರು. ವಿವಾದಕ್ಕೆ ಹೇತುವಾಗಬಲ್ಲ ಮತ್ತು ಗ್ರಹಿಕೆಯಲ್ಲಿ ಎಡವಬಲ್ಲ ಭಾಷೆಯನ್ನಾಗಲಿ, ಶೈಲಿಯನ್ನಾಗಲಿ ಅವರು ಆಯ್ಕೆ ಮಾಡಿಕೊಳ್ಳಲಿಲ್ಲ. ಅನಂತಮೂರ್ತಿಯವರಿಗೆ ಮಾತುಗಾರಿಕೆ ರಕ್ತಗತವಾಗಿತ್ತು. ವೇದಿಕೆಯಲ್ಲಿ ಅವರಿದ್ದಾರೆಂದರೆ ಉಳಿದವರ ಮಾತುಗಳೆಲ್ಲವೂ ಸೋಲುತ್ತಿದ್ದುವು. ನೂರ್ ಮುಹಮ್ಮದ್‍ರಿಗೆ ವೇದಿಕೆ ಎಂದರೇನೇ ಅಲರ್ಜಿ. ಅನಂತಮೂರ್ತಿಯವರ ಮಾತುಗಳನ್ನು ಸಭಿಕರಲ್ಲಿ ಒಂದಾಗಿ ಆಲಿಸಿ ಹೋದವರು ಅವರು. ಬರಹ ಶೈಲಿ, ಆಲೋಚನಾ ಧಾಟಿ, ವಿಚಾರಧಾರೆ, ಜೀವನ ಕ್ರಮ.. ಎಲ್ಲರಲ್ಲೂ ಅವರಿಬ್ಬರೂ ಭಿನ್ನ ಆಯ್ಕೆಗಳನ್ನು ಮಾಡಿಕೊಂಡಿದ್ದಾರಾದರೂ ಫ್ಯಾಸಿಝಂನ ವಿಷಯದಲ್ಲಿ ಅವರಿಬ್ಬರ ನಿಲುವುಗಳೂ ಒಂದು ಗೂಡುತ್ತಿದ್ದುವು. ಫ್ಯಾಸಿಝಂ ಎಂಬುದು ಸರ್ವ ಕಲ್ಯಾಣ ಕನಸುಗಳಿಗೂ ವೈರಿ ಎಂದು ಅವರಿಬ್ಬರೂ ಬಲವಾಗಿ ನಂಬಿದ್ದರು. ಮನುಷ್ಯ ಸಮಾನತೆಯ ಕುರಿತಂತೆ ನೂರ್ ಮುಹಮ್ಮದ್ ಮತ್ತು ಅನಂತಮೂರ್ತಿಯರ ಮಧ್ಯೆ ಯಾವ ಭಿನ್ನತೆಯೂ ಇರಲಿಲ್ಲ. ಅಪ್ಪಟ ಬ್ರಾಹ್ಮಣರಾಗಿದ್ದೂ ಬ್ರಾಹ್ಮಣ್ಯದ ತಪ್ಪು ಆಚಾರ-ಅವಿಕಸಿತ ನಿಲುವುಗಳನ್ನು ಪ್ರಶ್ನಿಸುತ್ತಾ ಅನಂತಮೂರ್ತಿ ‘ಸಂಸ್ಕಾರ' ರಚಿಸಿದಂತೆ ಮುಸ್ಲಿಮ್ ಸಮುದಾಯದ ಒಳಗಿದ್ದುಕೊಂಡೇ ಮುಸ್ಲಿಮರ ತಪ್ಪು ಆಚರಣೆಗಳನ್ನು ನೂರ್ ಮುಹಮ್ಮದ್ ಪ್ರಶ್ನಿಸಿದರು. ‘ಆದರ್ಶ ಸಮಾಜ'ವಾಗಬೇಕಿದ್ದ ಸಮೂಹವೊಂದು ಅನಾದರ್ಶ ಕಳೆಗಳೊಂದಿಗೆ ಬದುಕುತ್ತಿರುವುದನ್ನು ವಿವಿಧ ಕೃತಿಗಳ ಮೂಲಕ ಪ್ರತಿಭಟಿಸಿದರು. ಫ್ಯಾಸಿಝಂನ ಬಗ್ಗೆ ನೂರ್ ಮುಹಮ್ಮದ್ ಎಷ್ಟು ಸೂಕ್ಷ್ಮವಾಗಿದ್ದರೆಂದರೆ, ನಿಧನಕ್ಕಿಂತ ಎರಡು ದಿನಗಳ ಮೊದಲಷ್ಟೇ- ಬೈಠಕ್, ಪಥಸಂಚಲನ.. ಮುಂತಾದ ಕೆಲವಾರು ಪದಗಳನ್ನು ಎತ್ತಿ ಹೇಳುತ್ತಾ ಅದರ ಫ್ಯಾಸಿಸ್ಟ್ ಹಿನ್ನೆಲೆಯನ್ನು ಪರಿಚಯಿಸಿದ್ದರು.
    ಒಂದು ರೀತಿಯಲ್ಲಿ, ವ್ಯಕ್ತಿತ್ವ, ಅಭಿರುಚಿ, ಖ್ಯಾತಿ, ವಿವಾದ, ವಿಚಾರಧಾರೆ.. ಮುಂತಾದುವುಗಳಲ್ಲಿ ಅಪಾರ ಅಂತರಗಳಿದ್ದರೂ ಮನುಷ್ಯ ಸಮಾನತೆ ಮತ್ತು ಸರ್ವರಿಗೂ ಸಮಾನ ಸ್ವಾತಂತ್ರ್ಯ ಇರುವ ಕಲ್ಯಾಣ ರಾಷ್ಟ್ರವೊಂದರ ನಿರ್ಮಾಣದ ವಿಷಯದಲ್ಲಿ ನೂರ್ ಮತ್ತು ಮೂರ್ತಿ ಇಬ್ಬರೂ ಒಂದೇ ದನಿಯಾಗಿದ್ದರು. ಒಬ್ಬರು ಅದಕ್ಕಾಗಿ ತಿಕ್ಕಾಟ, ವಾಗ್ವಾದ, ಒದ್ದಾಟಗಳ ದಾರಿ ಕಂಡುಕೊಂಡರೆ ಇನ್ನೊಬ್ಬರು ಇದಕ್ಕೆ ವಿರುದ್ಧ ದಾರಿಯನ್ನು ತುಳಿದರು. ಇಬ್ಬರಲ್ಲೂ ಅಸ್ಪೃಶ್ಯತೆ ಇಲ್ಲದ ಜಗತ್ತಿನ ಕನಸಿತ್ತು. ಮಹಿಳಾ ದೌರ್ಜನ್ಯ, ಅಸಮಾನತೆ, ದಬ್ಬಾಳಿಕೆ, ಭ್ರೂಣಹತ್ಯೆಗಳಿಲ್ಲದ ಆದರ್ಶವಿತ್ತು. ಆ ಆದರ್ಶವನ್ನು ಪ್ರತಿಪಾದಿಸಿಕೊಂಡೇ ಅವರಿಬ್ಬರೂ ಬಾಳಿದರು. ಬರೆದರು. ಪ್ರತಿಭಟಿಸಿದರು. ಹೊರಟು ಹೋದರು.

Wednesday 20 August 2014

‘ಹಿಂದುಸ್ತಾನ’ದ ಭಾಗವತ್‍ರಿಗೆ ಭಾರತೀಯರ ಪ್ರಶ್ನೆಗಳು..

   ಹಿಂದೂರಾಷ್ಟ್ರ, ಹಿಂದೂಗಳು, ಹಿಂದುತ್ವ.. ಮುಂತಾದ ಪದಗಳು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಇದೀಗ ಹೆಚ್ಚೆಚ್ಚು ಕಾಣಿಸಿಕೊಳ್ಳತೊಡಗಿವೆ. ಇವುಗಳ ಸುತ್ತ ಸಣ್ಣ ಮಟ್ಟದಲ್ಲಿ ಚರ್ಚೆಯೂ ಆರಂಭವಾಗಿದೆ. ಆರೆಸ್ಸೆಸ್‍ನ ಸರಸಂಘ ಚಾಲಕ ಮೋಹನ್ ಭಾಗವತ್‍ರು ಹುಟ್ಟು ಹಾಕಿರುವ ಈ ಚರ್ಚೆಯಲ್ಲಿ ಗೋವಾದ ಮುಖ್ಯಮಂತ್ರಿಯಿಂದ ಹಿಡಿದು ಹಲವಾರು ಮಂದಿ ಈಗಾಗಲೇ ಭಾಗವಹಿಸಿದ್ದಾರೆ. ಮೋಹನ್ ಭಾಗವತ್‍ರು ಪ್ರತಿನಿಧಿಸುವ ಸಂಘಟನೆಯ ಅಜೆಂಡಾಗಳೂ ಅದರ ಸಾಂಸ್ಕ್ರಿತಿಕ ರಾಷ್ಟ್ರೀಯವಾದದ ಅಪಾಯಗಳೂ ಈ ಚರ್ಚೆಯ ವ್ಯಾಪ್ತಿಯೊಳಗೆ ಸೇರಿಕೊಳ್ಳುತ್ತಿವೆ. ಸಾವರ್ಕರ್, ಗೋಲ್ವಾಲ್ಕರ್‍ರನ್ನು ಮುಂದಿಟ್ಟುಕೊಂಡು ಈ ಪದಗಳ ವಿಮರ್ಶೆಯನ್ನೂ ನಡೆಸಲಾಗುತ್ತಿದೆ. ‘ಎಲ್ಲ ಭಾರತೀಯರೂ ಹಿಂದೂಗಳು ಮತ್ತು ಈ ದೇಶ ಹಿಂದೂರಾಷ್ಟ್ರ' ಎಂದು ಮೋಹನ್ ಭಾಗವತ್ ವಾದಿಸಿರುವುದರ ಉದ್ದೇಶ ಏನು? ವೇದಗಳಲ್ಲಾಗಲಿ; ರಾಮಾಯಣ, ಮಹಾಭಾರತಗಳಲ್ಲಾಗಲಿ ಉಲ್ಲೇಖವಾಗದ ‘ಹಿಂದೂ' ಪದದ ಮೇಲೆ ಭಾಗವತ್‍ರಿಗೆ ಈ ಮಟ್ಟದ ಅಕ್ಕರೆ ಮೂಡಲು ಕಾರಣ ಏನು? ಇಷ್ಟಕ್ಕೂ ಕೇವಲ ಒಂದು ಪದವಾಗಿ ‘ಹಿಂದೂ' ಎಂಬ ಎರಡು ಅಕ್ಷರಗಳೊಳಗೆ ಯಾವ ಆಕ್ಷೇಪಾರ್ಹ ಅಂಶಗಳೂ ಇಲ್ಲ. ಹಿಂದೂ, ಮುಸ್ಲಿಮ್, ಕ್ರೈಸ್ತ, ಸಿಕ್ಖ್.. ಮುಂತಾದ ಪದಗಳು ಈ ದೇಶದಲ್ಲಿ ಈಗಾಗಲೇ ಧಾರಾಳ ಪ್ರಮಾಣದಲ್ಲಿ ಬಳಕೆಯಲ್ಲಿವೆ. ಆದರೆ ಮೋಹನ್ ಭಾಗವತ್‍ರ ‘ಹಿಂದೂಗಳು’ ಮತ್ತು ‘ಹಿಂದೂಸ್ತಾನ' ಎಂಬ ಪದಗಳು; ನಾವು ಸಾಮಾನ್ಯವಾಗಿ ಬಳಸುವ ‘ಹಿಂದೂಗಳು, ಮುಸ್ಲಿಮರು' ಎಂಬ ಪದಗಳಷ್ಟು ನಿರುಪದ್ರವಿಯೇ?
 ಹಿಂದೂ ಎಂಬ ಪದವು ಸಿಂಧೂ ಎಂಬ ಪರ್ಶಿಯನ್ ಪದದ ವ್ಯತ್ಪತ್ತಿಯಾಗಿದೆ ಎಂದು ಅನೇಕ ಇತಿಹಾಸಕಾರರು ದಾಖಲಿಸಿದ್ದಾರೆ. ಸಿಂಧೂ ನದಿಯ ತೀರದಲ್ಲಿ ವಾಸಿಸುತ್ತಿದ್ದವರಿಗೆ ಮೊದಲು ಪರ್ಶಿಯನ್ನರು ಮತ್ತು ಬಳಿಕ ಗ್ರೀಕರು ಹಿಂದೂ ಎಂಬ ಹೆಸರು ಕೊಟ್ಟರು ಎಂಬ ವಾದಗಳೂ ಇವೆ. ಹಾಗೆ ಅವರು ಹಿಂದೂ ಎಂದು ಸಂಬೋಧಿಸಿದ್ದು ಧರ್ಮಸೂಚಕ ಆಗಿರಲಿಲ್ಲ, ಸ್ಥಳ ಸೂಚಕವಾಗಿತ್ತು. ಒಂದು ಪ್ರದೇಶದ ಜನರನ್ನು ಗುರುತಿಸುವುದಕ್ಕೆ ಅವರು ಈ ಪದವನ್ನು ಪ್ರಯೋಗಿಸಿದ್ದರು. ಆದ್ದರಿಂದಲೇ, ಭಾರತದ ಸಂವಿಧಾನದಲ್ಲಿ ಹಿಂದೂಸ್ತಾನ ಎಂಬ ಪದವೇ ಇಲ್ಲ. ‘ಭಾರತ್' ಮತ್ತು ‘ಇಂಡಿಯಾ' ಎಂಬೆರಡು ಹೆಸರುಗಳಿಂದ ಸಂವಿಧಾನವು ಈ ದೇಶವನ್ನು ಗುರುತಿಸಿದೆ. ಹೀಗಿರುವಾಗ ಮೋಹನ್ ಭಾಗವತ್ ಮತ್ತು ಅವರ ಬೆಂಬಲಿಗರು ಭಾರತದ ಮೇಲೆ ‘ಹಿಂದೂಸ್ತಾನ'ವನ್ನು ಒತ್ತಾಯಪೂರ್ವಕವಾಗಿ ಹೇರುವ ಅನಿವಾರ್ಯತೆಗಳೇನಿವೆ? ಸಂವಿಧಾನವು ಈ ದೇಶದ ಪ್ರಜೆಗಳನ್ನೆಲ್ಲಾ ಭಾರತೀಯರು ಅನ್ನುವಾಗ ಇವರು ‘ಹಿಂದೂಗಳು' ಅನ್ನುತ್ತಿರುವುದೇಕೆ? ಪಾಕಿಸ್ತಾನ, ಅಫಘಾನಿಸ್ತಾನ, ತುರ್ಕ್‍ಮೆನಿಸ್ತಾನಗಳಂತೆ ಭಾರತವೂ ಒಂದು ಸ್ತಾನ್ ಆಗಬೇಕೇ? ಅದರ ಅಗತ್ಯವೇನಿದೆ? ಈಗಿರುವ ಭಾರತದಿಂದ ಆಗಿರುವ ಮತ್ತು ಆಗಲಿರುವ ಹಾನಿಗಳೇನು?
 ನಿಜವಾಗಿ, ಭಾರತೀಯ ಎಂಬ ಪದದಲ್ಲಿ ಒಂದು ಬಗೆಯ ಆಕರ್ಷಣೆಯಿದೆ. ಅದು ಧರ್ಮಸೂಚಕವೋ ಜಾತಿ ಸೂಚಕವೋ ಆಗಿಲ್ಲ. ‘ನಾನು ಭಾರತೀಯ' ಎಂದು ಹೇಳುವುದರಿಂದ ಓರ್ವ ಹಿಂದೂ, ಓರ್ವ ಮುಸ್ಲಿಮ್, ಕ್ರೈಸ್ತ, ದಲಿತ್, ಆದಿವಾಸಿ.. ಯಾರಿಗೂ ಅವಮಾನವೋ ಅಥವಾ ತನ್ನ ಐಡೆಂಟಿಟಿಯನ್ನು ಕಳಕೊಂಡ ಭಾವವೋ ಉಂಟಾಗುವುದಿಲ್ಲ. ಈ ದೇಶದಲ್ಲಿ ವಾಸಿಸುವ ಮತ್ತು ನಾಗರಿಕರೆನಿಸಿಕೊಂಡ ಸರ್ವರನ್ನೂ ಒಳಗೊಳಿಸುವ ಆಪ್ತ ಭಾವವೊಂದು ‘ಭಾರತೀಯ' ಎಂಬ ಪದದೊಳಗೆ ಅಡಗಿಕೊಂಡಿದೆ. ಅಲ್ಲದೇ ಇದು ಸಂವಿಧಾನವೇ ಕೊಟ್ಟ ಹೆಸರು. ಭಾರತೀಯ ಸಂಸ್ಕ್ರಿತಿ, ಭಾರತೀಯ ಉತ್ಪನ್ನ, ಭಾರತೀಯ ಮಾರುಕಟ್ಟೆ, ಭಾರತೀಯ ಮುಸ್ಲಿಮ್, ಹಿಂದೂ, ಕ್ರೈಸ್ತ - ಎಂಬೆಲ್ಲ ಪದಗಳಲ್ಲಿ ಭಾರತವು ಒಂದು ದೇಶವಾಗಿ ಮತ್ತು ಉಳಿದವು ಅಲ್ಲಿನ ನಾಗರಿಕರ ಧರ್ಮವೋ ಉತ್ಪನ್ನವೋ ಸಂಸ್ಕ್ರಿತಿಯೋ ಆಗಿ ಗುರುತಿಸಿಕೊಳ್ಳುತ್ತದೆ. ಇಲ್ಲೆಲ್ಲೂ ಭಾರತ ಎಂಬುದು ಒಂದು ನಿರ್ದಿಷ್ಟ ಧರ್ಮದ ಹೆಸರಾಗಿ ಕಾಣಿಸುವುದೇ ಇಲ್ಲ. ಇಲ್ಲಿ ಹತ್ತು ಹಲವು ಧರ್ಮಗಳು, ಭಾಷೆಗಳು, ಆಚರಣೆಗಳು, ವಿಚಾರ-ನಿಲುವುಗಳೂ ಇರಬಹುದು. ಅವೆಲ್ಲವನ್ನೂ ಪ್ರೀತಿಯಿಂದ ಸಾಕುವ ಮತ್ತು ಸಹಿಸುವ ನಾಗರಿಕ ಭೂಪ್ರದೇಶವೊಂದರ ಹೆಸರಾಗಿಯಷ್ಟೇ ಆ ಸಂಬೋಧನೆ ನಮ್ಮನ್ನು ಸೆಳೆಯುತ್ತದೆ. ಆದರೆ ಹಿಂದೂಸ್ತಾನ ಹಾಗಲ್ಲ. ಈ ಪದವು ಈ ದೇಶವನ್ನು ಒಂದು ನಿರ್ದಿಷ್ಟ ಧರ್ಮದ ಸೊತ್ತಾಗಿಸಿಬಿಡುತ್ತದೆ. ‘ಹಿಂದೂಗಳು' ಅಂದರೆ ಹಿಂದೂ ಧರ್ಮವನ್ನು ಪಾಲಿಸುವವರು ಎಂಬರ್ಥದಲ್ಲಿ ಬಳಸಲಾಗುತ್ತಿದೆ. ಮುಸ್ಲಿಮ್ ಎಂಬ ಪದ ಹೇಗೆ ಧರ್ಮಸೂಚಕವೋ ಹಾಗೆಯೇ ಹಿಂದೂ ಎಂಬ ಪದವೂ ಇವತ್ತಿನ ದಿನಗಳಲ್ಲಿ ಧರ್ಮಸೂಚಕ. ನಿಜವಾಗಿ, ಹಿಂದೂಸ್ತಾನ ಮತ್ತು ಭಾರತ ಎಂಬ ಪದಗಳ ನಡುವಿನ ಅಂತರವಿದು. ನಾವೆಲ್ಲ ಹಿಂದೂಗಳು ಅನ್ನುವಾಗ ಅಲ್ಲಿ ನಿರ್ದಿಷ್ಟ ಧರ್ಮವೊಂದರ ಗುರುತಷ್ಟೇ ಕಾಣಿಸುತ್ತದೆ. ಓರ್ವ ಮುಸ್ಲಿಮ್ ಅಥವಾ ಕ್ರೈಸ್ತ ತನ್ನನ್ನು ಹಿಂದೂ ಎಂದು ಗುರುತಿಸಿಕೊಳ್ಳುವಾಗ ಅವರ ನಿಜ ಧಾರ್ಮಿಕ ಗುರುತು ಹೊರಟು ಹೋಗುತ್ತದೆ. ಆ ಸಂದರ್ಭದಲ್ಲಿ ಹಿಂದೂ ಎಂಬ ಧರ್ಮವೇ ಅವರ ಧರ್ಮವಾಗಿ ಬಿಡುತ್ತದೆ. ಒಂದು ವೇಳೆ ಹಿಂದೂ ಎಂಬ ಪದವು ಧರ್ಮಸೂಚಕ ಆಗದೇ ‘ಭಾರತೀಯ' ಎಂಬಂತೆ ದೇಶಸೂಚಕ ಆಗಿರುತ್ತಿದ್ದರೆ ಇಂಥ ಐಡೆಂಟಿಟಿ ಕ್ರೈಸಿಸ್ ಸಮಸ್ಯೆ ತಲೆದೋರುತ್ತಿರಲಿಲ್ಲ.
   ಇಷ್ಟಕ್ಕೂ, ಈ ದೇಶ ಈಗಿನಂತೆ ಭಾರತ ಆಗಿಯೇ ಮುಂದುವರಿಯುವುದರಿಂದ ಮೋಹನ್ ಭಾಗವತ್‍ರಿಗೆ ಆಗುವ ತೊಂದರೆಗಳೇನು? ಭಾರತವನ್ನು ಹಿಂದೂಸ್ತಾನ ಮಾಡುವುದರಿಂದ ಮತ್ತು ಭಾರತೀಯರನ್ನು ಹಿಂದೂಗಳನ್ನಾಗಿಸುವುದರಿಂದ ರಾಷ್ಟ್ರೀಯವಾಗಿಯೋ ಅಂತಾರಾಷ್ಟ್ರೀಯ ಮಟ್ಟದಲ್ಲೋ ಆಗುವ ಲಾಭಗಳೇನು? ಭಾಗವತ್ ಈ ಬಗ್ಗೆ ಈ ವರೆಗೆ ಏನನ್ನೂ ಹೇಳಿಲ್ಲ. ಒಂದು ಮಹಾ ಬದಲಾವಣೆಗೆ ಒತ್ತಾಯಿಸುವವರು ಮೊತ್ತಮೊದಲು ಅದರ ಅಗತ್ಯತೆಯನ್ನು ಸಮಾಜಕ್ಕೆ ಮನವರಿಕೆ ಮಾಡಿಸಬೇಕಾಗುತ್ತದೆ. ಭಾರತೀಯ ಎಂಬ ಗುರುತಿಗಿಂತ ‘ಹಿಂದೂ' ಎಂಬ ಗುರುತಿನಲ್ಲಿ ಓರ್ವ ಮುಸ್ಲಿಮನಿಗೆ, ಕ್ರೈಸ್ತ, ಸಿಕ್ಖ್, ಜೈನ, ಬೌದ್ಧ..ರಿಗೆ ನಿರೀಕ್ಷೆ ಇಡಲು ಏನೇನಿವೆ? ಹಾಗೆ ಆಗುವುದರಿಂದ ಮುಸ್ಲಿಮರ ಹೆಸರನ್ನು, ಅವರ ಆಚರಣೆಯನ್ನು ಹಿಂದೂಕರಿಸಲಾಗುತ್ತದೆಯೇ? ಕ್ರೈಸ್ತರು, ಸಿಕ್ಖರ ಆರಾಧನಾ ಕ್ರಮಗಳಲ್ಲಿ, ಉಡುಗೆ-ತೊಡುಗೆಯಲ್ಲಿ ‘ಹಿಂದೂಯಿಸಂ’ ಅನ್ನು ಕಡ್ಡಾಯಗೊಳಿಸಲಾಗುತ್ತದೆಯೇ? ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ಐಡೆಂಟಿಟಿಯಿದೆ. ಆಚರಣೆ, ಆರಾಧನಾ ಕ್ರಮಗಳಿವೆ. ಉಡುಗೆ-ತೊಡುಗೆ, ಸಾಂಸ್ಕ್ರಿತಿಕ ವೈಶಿಷ್ಟ್ಯತೆಗಳಿವೆ. ನಮಾಝ್‍ಗಿಂತ ಮೊದಲು ಬಾಂಗ್ ಕೊಡುವುದು ಮುಸ್ಲಿಮರ ಪದ್ಧತಿ. ಹಾಗಂತ ಇತರ ಧರ್ಮೀಯರು ಈ ಕ್ರಮವನ್ನು ಅನುಸರಿಸುವುದಿಲ್ಲ. ಮದುವೆಯ ಸಂದರ್ಭದಲ್ಲಿ ಹಿಂದೂಗಳಲ್ಲಿ ಸಪ್ತಪದಿ ಇರುವಂತೆ ಕ್ರೈಸ್ತರಲ್ಲಿಲ್ಲ. ಜೈನರ ದಿಗಂಬರ ಪದ್ಧತಿ ಸಿಕ್ಖರಲ್ಲಿಲ್ಲ.  ಒಂದು ಧರ್ಮದಲ್ಲಿ ವಿಗ್ರಹವನ್ನು ಆರಾಧಿಸುವ ಪದ್ಧತಿ ಇದ್ದರೆ ಇನ್ನೊಂದರಲ್ಲಿ ನಿರಾಕಾರ ಪದ್ಧತಿ ಇದೆ. ಒಂದರಲ್ಲಿ ತಲೆಗೆ ಟೊಪ್ಪಿ, ಗಡ್ಡದ ಗುರುತಿದ್ದರೆ ಇನ್ನೊಂದರಲ್ಲಿ ನಾಮ, ತಿಲಕಗಳಿವೆ. ಈ ಎಲ್ಲ ವೈವಿಧ್ಯತೆಗಳು ‘ಭಾರತೀಯ’ ವೈಶಿಷ್ಟ್ಯವಾಗಿವೆ. ಭಾಗವತ್‍ರ ‘ಹಿಂದೂಸ್ತಾನ' ಈ ಎಲ್ಲ ವೈವಿಧ್ಯತೆಗಳನ್ನು ಅಳಿಸಿ ಏಕ ಸಂಸ್ಕ್ರಿತಿ, ಏಕ ಆಚರಣೆ, ಏಕ ಆರಾಧನೆಗಳನ್ನು ಪ್ರಸ್ತುತಪಡಿಸುತ್ತದೆಯೇ? ಭಾರತೀಯರು ಹಿಂದೂಗಳಾಗಿ ಬದಲಾಗುವಾಗ ಏನೆಲ್ಲ ಬದಲಾಗುತ್ತವೆ? ಹೇಗೆಲ್ಲ ಬದಲಾಗಬೇಕಾಗುತ್ತದೆ? ಭಾಗವತ್‍ರು ಹೇಳದಿದ್ದರೂ ಅವರು ಪ್ರತಿನಿಧಿಸುವ ಸಂಘಟನೆಯ ಈ ವರೆಗಿನ ನಡವಳಿಕೆಗಳಲ್ಲಿ ಈ ಎಲ್ಲಕ್ಕೂ ಉತ್ತರವಿದೆ. ಆದ್ದರಿಂದಲೇ ಈ ದೇಶ ಭಾರತವಾಗಿಯೇ ಇರಲಿ ಮತ್ತು ಇಲ್ಲಿನ ನಾಗರಿಕರು ಭಾರತೀಯರಾಗಿಯೇ ಗುರುತಿಸಿಕೊಳ್ಳಲಿ ಎಂದೇ ಬಯಸಬೇಕಾಗುತ್ತದೆ.

Wednesday 13 August 2014

ಸ್ವತಂತ್ರ ಭಾರತಕ್ಕೆ ಕನ್ನಡಿ ಹಿಡಿದ ‘ಈದ್ ಶುಭಾಶಯ'

    ಚೌತಿ, ದೀಪಾವಳಿ, ಕ್ರಿಸ್‍ಮಸ್, ಈದ್... ಇವೆಲ್ಲ ಒಂದೊಂದು ಧರ್ಮದೊಂದಿಗೆ ಗುರುತಿಸಿಕೊಂಡಿರುವ ಹಬ್ಬಗಳಾದರೂ ಅವುಗಳ ಆಚರಣೆ ಆಯಾ ಧರ್ಮಗಳ ಅನುಯಾಯಿಗಳಿಗೆ ಮಾತ್ರ ಸೀಮಿತವಾಗಿಯೇನೂ ಉಳಿದಿಲ್ಲ. ದೀಪಾವಳಿಯ ಸಂದರ್ಭದಲ್ಲಿ ಹಿಂದೂಗಳಲ್ಲದವರ ಮನೆಗಳಲ್ಲೂ ಸುರುಸುರು ಕಡ್ಡಿ ಉರಿಯುತ್ತದೆ. ಕ್ರಿಸ್‍ಮಸ್‍ನ ನಕ್ಷತ್ರವು ಕ್ರೈಸ್ತರಲ್ಲದವರನ್ನೂ ಆಕರ್ಷಿಸುತ್ತದೆ. ಈದ್‍ನ ದಿನದಂದು ಧರ್ಮದ ಹಂಗಿಲ್ಲದೇ ಶುಭಾಶಯಗಳ ವಿನಿಮಯಗಳು ನಡೆಯುತ್ತವೆ. ಇಂಥ ಸಂದರ್ಭಗಳಲ್ಲೆಲ್ಲಾ ಈ ದೇಶವನ್ನಾಳುವವರು ಕೂಡ ಹಬ್ಬದ ಖುಷಿಯನ್ನು ದೇಶದ ನಾಗರಿಕರೊಂದಿಗೆ ಹಂಚಿಕೊಳ್ಳುವುದಿದೆ. ಶುಭಾಶಯಗಳನ್ನು ಕೋರಿ ಹಬ್ಬಗಳ ಮೌಲ್ಯಗಳಿಗೆ ಗೌರವ ಸೂಚಿಸುವುದಿದೆ. ಅಟಲ್ ಬಿಹಾರಿ ವಾಜಪೇಯಿಯವರು ಕೂಡಾ ಈ ಸಂಪ್ರದಾಯವನ್ನು ಪಾಲಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಈ ಸಂಪ್ರದಾಯವನ್ನು ಮುರಿದಿದ್ದಾರೆ. ಅವರು ಈ ದೇಶಕ್ಕೆ ಈದ್ ಶುಭಾಶಯವನ್ನೇ ಕೋರಿಲ್ಲ. ಇದು ಪಾರ್ಲಿಮೆಂಟ್‍ನಲ್ಲಿಯೂ ತೀವ್ರ ಚರ್ಚೆಗೆ ಒಳಗಾಗಿದೆ. ನರೇಂದ್ರ ಮೋದಿಯವರ ವರ್ತನೆಯನ್ನು ವಿರೋಧ ಪಕ್ಷಗಳು ಟೀಕಿಸಿವೆ. ನೇಪಾಳದ ಪಶುಪತಿನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವಷ್ಟು ಧರ್ಮಶ್ರದ್ಧೆಯುಳ್ಳ ಪ್ರಧಾನಿಯವರಿಗೆ ಈದ್ ಶುಭಾಶಯ ಕೋರುವಷ್ಟು ಸೌಜನ್ಯ ಇಲ್ಲವಾಯಿತೇಕೆ ಎಂದು ಅವು ಪ್ರಶ್ನಿಸಿವೆ.
 ಪ್ರಧಾನಿ ನರೇಂದ್ರ ಮೋದಿಯವರು ಒಂದು ನಿರ್ದಿಷ್ಟ ಧರ್ಮವನ್ನು ಮಾತ್ರ ಪ್ರತಿನಿಧಿಸುವ ಮತ್ತು ಆ ಧರ್ಮದ ಅನುಯಾಯಿಗಳ ಸುಖ-ದುಃಖಗಳಿಗಾಗಿ ಮಾತ್ರ ಸ್ಪಂದಿಸಬೇಕಾದ ವ್ಯಕ್ತಿಯಲ್ಲ. ಅವರು ಈ ದೇಶದ ಪ್ರಧಾನಿ. ಆದ್ದರಿಂದಲೇ ಈ ದೇಶದ ಎಲ್ಲರ ಸುಖ-ದುಃಖಗಳೊಂದಿಗೂ ಅವರ ಸ್ಪಂದನೆಯಿರಬೇಕು. ಪ್ರಧಾನಿಯವರು ನಮ್ಮವರು ಎಂಬ ಭಾವನೆಯೊಂದು ದೇಶದ ಸರ್ವ ನಾಗರಿಕರಲ್ಲೂ ಮೂಡುವಂತೆ ಅವರು ವರ್ತಿಸಬೇಕು. ನಿಜವಾಗಿ, ಪ್ರಧಾನಿಯವರು ಈದ್ ಶುಭಾಶಯ ಕೋರದೇ ಇರುವುದರಿಂದ ಮುಸ್ಲಿಮರು ಕಳಕೊಳ್ಳುವಂತಹದ್ದೇನೂ ಇಲ್ಲ. ಈದ್ ಶುಭಾಶಯ ಕೋರುವುದರಿಂದಲೋ ಕೋರದೇ ಇರುವುದರಿಂದಲೋ ಈದ್‍ನ ದಿನಾಂಕದಲ್ಲಿ ಮತ್ತು ಹಬ್ಬದ ಖುಷಿಯಲ್ಲಿ ಮಾರ್ಪಾಟುಗಳೂ ಆಗುವುದಿಲ್ಲ. ಆದರೆ, ಶುಭಾಶಯ ಕೋರುವುದರಿಂದ ಪ್ರಧಾನಿಯವರ ಗೌರವ ಹೆಚ್ಚುತ್ತದೆ. ಸರ್ವ ಧರ್ಮೀಯರನ್ನು ಗೌರವಿಸುವ ಮತ್ತು ಅವರ ಖುಷಿಯ ಕ್ಷಣಗಳನ್ನು ನೆನಪಿಟ್ಟು ಸ್ಪಂದಿಸುವ ಗುಣವು ಸಾರ್ವಜನಿಕರ ಮೆಚ್ಚುಗೆ ಗಳಿಸುತ್ತದೆ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಇದರ ಅರಿವಿತ್ತು. ಆದ್ದರಿಂದಲೇ ಅವರು ಈದ್ ಶುಭಾಶಯ ಕೋರುವುದರಿಂದ ತಪ್ಪಿಸಿರಲಿಲ್ಲ. ಆದರೆ ಪ್ರಧಾನಿ ಮೋದಿಯವರು ಈ ಸಂಪ್ರದಾಯವನ್ನು ಮೊದಲ ಬಾರಿಗೆ ಮುರಿದಿದ್ದಾರೆ. ಆ ಮೂಲಕ ಪ್ರಧಾನಿ ಹುದ್ದೆಯ ಸ್ಥಾನಮಾನವನ್ನು ನಿರ್ದಿಷ್ಟ ಧರ್ಮವೊಂದರ ಪ್ರತಿನಿಧಿಯ ಮಟ್ಟಕ್ಕೆ ತಗ್ಗಿಸಿದ್ದಾರೆ. ನೂರು ಕೋಟಿಯಷ್ಟು ಜನಸಂಖ್ಯೆಯಿರುವ ಮತ್ತು ಅನೇಕಾರು ಧರ್ಮಗಳಿರುವ ದೇಶವೊಂದರ ಪ್ರಧಾನಿ ಈ ರೀತಿ ವರ್ತಿಸುವುದು ಎಷ್ಟು ಸಮರ್ಥನೀಯ? ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಮೋದಿಯವರ ನಿಲುವುಗಳು ಅನೇಕ ಬಾರಿ ಪ್ರಶ್ನೆಗೀಡಾಗಿದ್ದುವು. ಗೋಧ್ರೋತ್ತರ ಗಲಭೆಯಲ್ಲಿ ಅವರ ಶಂಕಿತ ಪಾತ್ರದ ಕುರಿತಂತೆ ಈಗಲೂ ಅನುಮಾಗಳಿವೆ. ಬ್ರಿಟನ್ ಮತ್ತು ಅಮೇರಿಕಗಳು ವೀಸಾ ನಿರಾಕರಿಸುವಷ್ಟು ಅವರು ಶಂಕೆಗೆ ಈಡಾಗಿದ್ದರು. ಇಂಥ ವ್ಯಕ್ತಿಯೋರ್ವ ಪ್ರಧಾನಿಯಾದಾಗ ಕುತೂಹಲ ಇರುವುದು ಸಹಜ. ತನ್ನ ಮೇಲಿರುವ ಆರೋಪಗಳನ್ನು ಸುಳ್ಳು ಮಾಡುತ್ತಾರೋ ಅನ್ನುವ ನಿರೀಕ್ಷೆಯೊಂದಿಗೆ ಸಮಾಜ ಅವರಲ್ಲಿಗೆ ಒಂದು ಕಣ್ಣಿಟ್ಟು ಕಾಯುತ್ತಿರುತ್ತದೆ. ಪ್ರಧಾನಿ ಎಂಬುದು ಮುಖ್ಯಮಂತ್ರಿಯಂತೆ ಅಲ್ಲವಲ್ಲ. ಮುಖ್ಯಮಂತ್ರಿಗೆ ಒಂದು ಸೀಮಿತತೆ, ಚೌಕಟ್ಟು ಇದೆ. ಅದರ ಒಳಗೆಯೇ ರಾಜಕೀಯ ಮಾಡಬೇಕಾದ ಅನಿವಾರ್ಯತೆಯೂ ಇದೆ. ಆದರೆ, ಪ್ರಧಾನಿ ಈ ಚೌಕಟ್ಟು ಮತ್ತು ಅನಿವಾರ್ಯತೆಗಳನ್ನು ವಿೂರಿ ಗುರುತಿಸಿಕೊಳ್ಳಬೇಕಾಗುತ್ತದೆ. ಆದರೆ ನರೇಂದ್ರ ಮೋದಿಯವರು ಆ ಪ್ರಬುದ್ಧತೆಯನ್ನು ಈವರೆಗೂ ಪ್ರದರ್ಶಿಸಿಲ್ಲ. ಅವರು ತನ್ನ ಮೇಲಿರುವ ಆರೋಪ ಮತ್ತು ಅನುಮಾನಗಳನ್ನು ಪದೇ ಪದೇ ನಿಜ ಮಾಡುತ್ತಿದ್ದಾರೆ. ತನ್ನ ಮಿತ್ರ ಪಕ್ಷವಾದ ಶಿವಸೇನೆಯ ಸಂಸದರು ಉಪವಾಸಿಗನಾದ ಹೊಟೇಲ್ ಕಾರ್ಮಿಕನಿಗೆ ಬಲವಂತದಿಂದ ಚಪಾತಿ ತಿನ್ನಿಸಿದಾಗಲೂ ಮೌನ ವಹಿಸಿದ್ದ ಅವರು ಇದೀಗ ಈದ್‍ಗೂ ಅದೇ ಮೌನವನ್ನು ಮುಂದುವರಿಸಿದ್ದಾರೆ. ಏನಿದರ ಅರ್ಥ? ಈ ದೇಶದ ಮುಸ್ಲಿಮರಿಗೂ ಪ್ರಧಾನಿಗೂ ಏನೇನೂ ಸಂಬಂಧವಿಲ್ಲವೇ? ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗುವ ಯಾವ ಜವಾಬ್ದಾರಿಯೂ ಇಲ್ಲವೇ? ಅಷ್ಟಕ್ಕೂ ಈದ್ ಶುಭಾಶಯ ಕೋರುವುದೆಂದರೆ ಮುಸ್ಲಿಮರ ಸಾಂಪ್ರದಾಯಿಕ ಟೋಪಿ ಧರಿಸಿದಂತೆಯೋ ನಮಾಝ್ ಮಾಡಿದಂತೆಯೋ ಅಲ್ಲವಲ್ಲ. ಟೋಪಿ ಧರಿಸುವ ಬಗ್ಗೆ ಅವರಲ್ಲಿ ಭಿನ್ನಾಭಿಪ್ರಾಯ ಇರಬಹುದು. ಆದರೆ ಶುಭಾಶಯ ಕೋರುವುದಕ್ಕೇನು? ಅದರಿಂದ ಅವರ ಯಾವ ಧಾರ್ಮಿಕ ನಿಲುವುಗಳಿಗೆ ಚ್ಯುತಿ ಬರುತ್ತದೆ?
 ಅಂದಹಾಗೆ, ಹಬ್ಬಗಳಿಗೂ ಈ ದೇಶಕ್ಕೂ ಅವಿನಾಭಾವ ಸಂಬಂಧವಿದೆ. ಪ್ರಧಾನಿಯವರ ಶುಭಾಶಯವನ್ನು ನಿರೀಕ್ಷಿಸಿಕೊಂಡು ಇಲ್ಲಿ ಹಬ್ಬಗಳ ಆಗಮನ ಮತ್ತು ಆಚರಣೆ ನಡೆಯುತ್ತಲೂ ಇಲ್ಲ. ಹಬ್ಬಗಳಿಗೆಲ್ಲ ಇಂಥ ದೌರ್ಬಲ್ಯಗಳಿಗಿಂತ ಹೊರತಾದ ಪಾವನವಾದ ಮೌಲ್ಯಗಳಿವೆ. ಮೋದಿ ಮತ್ತು ಅವರ ಬೆಂಬಲಿಗರು ಈದನ್ನು ಮುಸ್ಲಿಮರ, ಕ್ರಿಸ್‍ಮಸ್ ಅನ್ನು ಕ್ರೈಸ್ತರ ಮತ್ತು ದೀಪಾವಳಿಯನ್ನು ಹಿಂದೂಗಳ ಹಬ್ಬವಾಗಿ ಮಾತ್ರ ಕಾಣುವುದಾದರೆ ಮತ್ತು ಈ ಧರ್ಮೀಯರೆಲ್ಲ ಪರಸ್ಪರ ಬೆರೆಯದೇ ಪ್ರತ್ಯಪ್ರತ್ಯೇಕವಾಗಿ ಹಬ್ಬ ಆಚರಿಸಬೇಕೆಂದು ಬಯಸುವುದಾದರೆ ಅದು ಅವರ ದೌರ್ಬಲ್ಯ. ಹಬ್ಬಗಳಿಗೆ ಅಂಥದ್ದೊಂದು ಸೀಮಿತತೆ ಇಲ್ಲವೇ ಇಲ್ಲ. ಹಬ್ಬಗಳು ಸರ್ವರ ಹಿತವನ್ನು ಬಯಸುತ್ತವೆ. ಅವು ಮನುಷ್ಯರನ್ನು ಹಿಂದೂ-ಮುಸ್ಲಿಮ್ ಎಂದೋ ಬಿಜೆಪಿ-ಕಾಂಗ್ರೆಸ್ ಎಂದೋ ವಿಭಜಿಸುವುದಿಲ್ಲ. ಧರ್ಮದ ಹೆಸರಲ್ಲಿ ಮನುಷ್ಯರ ಮಧ್ಯೆ ಗೋಡೆಗಳನ್ನೆಬ್ಬಿಸುವವರಿಗೂ ಹಬ್ಬಗಳು ಸಾರುವ ಮೌಲ್ಯಗಳಿಗೂ ಯಾವ ನಂಟೂ ಇಲ್ಲ. ಆದ್ದರಿಂದಲೇ ಹಬ್ಬಗಳು ಬಂತೆಂದರೆ ಸಮಾಜದಲ್ಲಿ ಒಂದು ಬಗೆಯ ಖುಷಿಯ ವಾತಾವರಣ ಪ್ರತ್ಯಕ್ಷಗೊಳ್ಳುತ್ತದೆ. ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬ ಬೇಧವಿಲ್ಲದೇ ಎಲ್ಲರೂ ಪರಸ್ಪರ ಹಬ್ಬದ ಶುಭಾಶಯ ಕೋರುತ್ತಾರೆ. ಹಿಂದೂ ಟೈಲರ್‍ನ ಕೈಯಲ್ಲಿ ಈದ್‍ನ ಹೊಸ ಉಡುಗೆ ಸಿದ್ಧವಾಗುತ್ತದೆ. ಮುಸ್ಲಿಮ್ ವ್ಯಾಪಾರಿಯ ಅಂಗಡಿಯಿಂದ ದೀಪಾವಳಿಯ ಖರೀದಿಗಳು ನಡೆಯುತ್ತವೆ. ಕ್ರಿಸ್‍ಮಸ್‍ನ ನಕ್ಷತ್ರಗಳು ಇನ್ನಾವುದೋ ಅಂಗಡಿಯಲ್ಲಿ ಕಾಯುತ್ತಿರುತ್ತವೆ. ಚೌತಿಯ ದಿನದಂದು ಗಣೇಶನ ಮೊಬೈಲಿಗೆ ಬಶೀರ್‍ನ ಶುಭಾಶಯದ ಸಂದೇಶ ಬರುತ್ತದೆ. ಅತ್ಹರುಲ್ಲಾನ ಇಮೇಲ್ ಇನ್‍ಬಾಕ್ಸ್ ನಲ್ಲಿ ಹಿಂದೂ ಗೆಳೆಯರ ಶುಭಾಶಯಗಳು ತುಂಬಿರುತ್ತವೆ. ಹಬ್ಬಗಳ ಸಿಹಿ ತಿಂಡಿ, ಊಟ, ತಮಾಷೆಗಳು ಪರಸ್ಪರ ವಿನಿಮಯಗೊಳ್ಳುತ್ತವೆ. ಮೋದಿಯವರು ಶುಭಾಶಯ ಕೋರಲಿ, ಬಿಡಲಿ; ಹಬ್ಬಗಳು ಇಂಥದ್ದೊಂದು ಪ್ರೀತಿಯ ವಾತಾವರಣವನ್ನು ಈ ದೇಶದಲ್ಲಿ ಈ ಹಿಂದೆಯೇ ಕಟ್ಟಿ ಬೆಳೆಸಿವೆ. ಇದರ ಅರಿವಿಲ್ಲದವರು ಮಾತ್ರ ಹಬ್ಬಗಳಿಗೆ ಸೀಮಿತತೆಯ ಗಡಿಯನ್ನು ಕಟ್ಟಬಲ್ಲರು.
 ಏನೇ ಆಗಲಿ, ಈದ್‍ನ ಶುಭಾಶಯವನ್ನು ಕೋರಲೂ ಹಿಂಜರಿಯುವ ಓರ್ವ ಪ್ರಧಾನಿಯ ನೇತೃತ್ವದಲ್ಲಿ ಈ ದೇಶ 67ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧವಾಗಿದೆ. ಬಹುಶಃ ಸ್ವಾತಂತ್ರ್ಯಾನಂತರದ ಭಾರತವನ್ನು ಮತ್ತು ಅದು ಸಾಗಿ ಬಂದ ದಾರಿಯನ್ನು ತಿಳಿದುಕೊಳ್ಳುವುದಕ್ಕೆ ಈ ಬೆಳವಣಿಗೆ ಅತ್ಯುತ್ತಮ ಉದಾಹರಣೆಯಾಗಬಹುದು.

Wednesday 6 August 2014

ಮಾಧ್ಯಮ ಜಗತ್ತಿನ ಒಳಮನಸ್ಸನ್ನು ತೆರೆದಿಟ್ಟ ಮೂರೂವರೆ ನಿಮಿಷಗಳ ವೀಡಿಯೋ

   ಮಾಧ್ಯಮ ನೀತಿಸಂಹಿತೆ ಮತ್ತು ನೈತಿಕತೆಯ ಕುರಿತಂತೆ ಬ್ರಿಟನ್ನಿನ ಪ್ರಮುಖ ಟಿ.ವಿ. ಚಾನೆಲ್ ಆದ ‘ಚಾನೆಲ್ 4’ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಅದರ ಪತ್ರಕರ್ತ ಜಾನ್‍ಸ್ಕೋ ಎಂಬವರು ವಾರಗಳ ಹಿಂದೆ ಗಾಝಾಕ್ಕೆ ಭೇಟಿ ಕೊಟ್ಟಿದ್ದರು. ಮರಳುವಾಗ, 'ದಿ ಚಿಲ್ಡ್ರನ್ ಆಫ್ ಗಾಝಾ' ಎಂಬ ಮೂರೂವರೆ ನಿಮಿಷಗಳ ವೀಡಿಯೋ ಚಿತ್ರೀಕರಣವನ್ನು ತಂದಿದ್ದರು. ಎಂತಹವರ ಮನಸ್ಸನ್ನೂ ನಾಟಬಲ್ಲಷ್ಟು ಪ್ರಭಾವಶಾಲಿಯಾಗಿದ್ದ ಆ ಪುಟ್ಟ ವೀಡಿಯೋದಲ್ಲಿ ಗಾಝಾದ ಗಾಯಗೊಂಡ ಪುಟ್ಟ ಪುಟ್ಟ ಮಕ್ಕಳಿದ್ದರು. ಅಲ್ಲಿನ ಆಸ್ಪತ್ರೆಗಳಿಗೆ ಭೇಟಿ ಕೊಟ್ಟಾಗ ಕಂಡುಬಂದ ದೃಶ್ಯಗಳಿಂದ ಪ್ರಭಾವಿತಗೊಂಡು ಅವರು ಆ ವೀಡಿಯೋ ಚಿತ್ರೀಕರಿಸಿದ್ದರು. ಆ ದೃಶ್ಯಗಳನ್ನು ಮರೆತು ತನ್ನಿಂದ ಬದುಕಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದರು. ಆದರೆ ‘ಚಾನೆಲ್ 4’ ಅದನ್ನು ಪ್ರಸಾರ ಮಾಡಲಿಲ್ಲ. ಜಾನ್ ಸ್ನೋ ಆ ವೀಡಿಯೋವನ್ನು ಇಂಟರ್‍ನೆಟ್‍ನಲ್ಲಿ (ಸಾಮಾಜಿಕ ತಾಣಗಳಲ್ಲಿ) ಹಂಚಿಕೊಂಡರು. ಎರಡು ವಾರಗಳೊಳಗೆ ಒಂದು ಮಿಲಿಯನ್‍ಗಿಂತಲೂ ಅಧಿಕ ಮಂದಿ ಅದನ್ನು ವೀಕ್ಷಿಸಿದರು. ಹಂಚಿಕೊಂಡರು. ಮಾತ್ರವಲ್ಲ, ‘ಚಾನೆಲ್ 4’ ನಿಲುವನ್ನು ಬಲವಾಗಿ ಪ್ರಶ್ನಿಸಿದರು. ‘ಮೂರೂವರೆ ನಿಮಿಷಗಳ ಈ ವೀಡಿಯೋವನ್ನು ಪ್ರಸಾರ ಮಾಡದಷ್ಟು ಚಾನೆಲ್ ಬ್ಯುಸಿಯಾಗಿದೆಯೇ ಎಂಬಲ್ಲಿಂದ ಹಿಡಿದು, ಪ್ರಸಾರ ಮಾಡದಂಥ ಯಾವ ಅಂಶಗಳು ವೀಡಿಯೋದಲ್ಲಿವೆ’ ಎಂಬಲ್ಲಿವರೆಗೆ ಹತ್ತು-ಹಲವು ಪ್ರಶ್ನೆಗಳು ಚಾನೆಲ್‍ಗೆ ಎದುರಾದುವು. ಆದರೆ ಚಾನೆಲ್ ತನ್ನನ್ನು ಸಮರ್ಥಿಸಿಕೊಂಡಿತು. ವೀಡಿಯೋವನ್ನು ಪ್ರಸಾರ ಮಾಡುವುದರಿಂದ ಪಕ್ಷಪಾತ ಎಸಗಿದಂತಾಗುತ್ತದೆ ಎಂದು ಅದು ಅಭಿಪ್ರಾಯಪಟ್ಟಿತು. ಆ ಚಿತ್ರೀಕರಣದಲ್ಲಿ ಸ್ಪಷ್ಟತೆಯ ಕೊರತೆಯಿದೆ ಎಂದು ನುಣುಚಿಕೊಂಡಿತು. ಆದರೆ ಚಾನೆಲ್‍ನ ಈ ನಿಲುವನ್ನು ಲಂಡನ್ನಿನ ಪ್ರಸಿದ್ಧ ಗಾರ್ಡಿಯನ್ ಪತ್ರಿಕೆಯಲ್ಲಿ ಜೇಮ್ಸ್ ಬೆಲ್ ಎಂಬ ಪತ್ರಕರ್ತ (Perils of enforcing neutrality in war reporting) ಖಾರವಾಗಿ ಪ್ರಶ್ನಿಸಿದರು. ಚಾನೆಲ್ ಈ ನೈತಿಕ ಗೆರೆಯನ್ನು ಪ್ರತಿದಿನವೂ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು. ‘ಪ್ರಚಲಿತ ವಿದ್ಯಮಾನ’ ಎಂಬ ಕಾರ್ಯಕ್ರಮದಲ್ಲಿ ಅದು ತನ್ನ ವರದಿಗಾರರಿಂದ ನೇರ ಮಾಹಿತಿಯನ್ನು ಕೋರುತ್ತದೆ. ಅವರ ಮಾಹಿತಿಯ ಆಧಾರದಲ್ಲಿ ವಿಶ್ಲೇಷಣೆ ನಡೆಸುತ್ತದೆ. ಆಗ ಎದುರಾಗದ ಸ್ಪಷ್ಟತೆಯ ಸಮಸ್ಯೆಯು ಈ ಮೂರೂವರೆ ನಿಮಿಷಗಳ ವೀಡಿಯೋದಲ್ಲೇಕೆ ಎದುರಾಯಿತು ಎಂದವರು ಪ್ರಶ್ನಿಸಿದರು.
ಜಾನ್ ಸ್ನೋ
    ನಿಜವಾಗಿ, ಮಾಧ್ಯಮಗಳ ನೈತಿಕತೆ ಪ್ರಶ್ನೆಗೀಡಾಗುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. ಪಬ್ಲಿಕ್ ಟಿ.ವಿ.ಯಲ್ಲಿ ಪ್ರಸಾರವಾದ ಕಾರ್ಯಕ್ರಮದ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿರುವ ಹಿರಿಯ ಪತ್ರಕರ್ತ ದಿನೇಶ್ ಅವಿೂನ್ ಮಟ್ಟುರವರು ಕಳೆದ ವಾರ ಫೇಸ್‍ಬುಕ್‍ನಲ್ಲಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಆ ಕಾರ್ಯಕ್ರಮದ ಕುರಿತಂತೆ ಸ್ಪಷ್ಟಪಡಿಸಿಕೊಳ್ಳಲು ಮಟ್ಟು ಅವರು ಚಾನೆಲ್‍ನ ಪ್ರಧಾನ ಸಂಪಾದಕ ರಂಗನಾಥ್‍ರಿಗೆ ದೂರವಾಣಿ ಕರೆ ಮಾಡಿದ್ದು ಮತ್ತು ರಂಗನಾಥ್ ರು, ‘ತಾನು ಶೌಚಾಲಯದಲ್ಲಿದ್ದು 15 ನಿಮಿಷಗಳ ಬಳಿಕ ಕರೆ ಮಾಡುವುದಾಗಿ ಹೇಳಿ’ ಬಳಿಕ ಕರೆಯನ್ನೇ ಮಾಡದಿದ್ದುದನ್ನು ಹಂಚಿಕೊಂಡಿದ್ದರು. ಒಂದು ರೀತಿಯಲ್ಲಿ, ‘ಚಾನೆಲ್ 4’ನಿಂದ ಹಿಡಿದು ಸ್ಥಳೀಯ ಚಾನೆಲ್ ವರೆಗೆ ಅಥವಾ ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆಯಿಂದ ಹಿಡಿದು ಸ್ಥಳೀಯ ಮಟ್ಟದ ಪತ್ರಿಕೆಯ ವರೆಗೆ ಮಾಧ್ಯಮ ಜಗತ್ತು ಮತ್ತೆ ಮತ್ತೆ ವಿಮರ್ಶೆಗೆ ಒಳಗಾಗುತ್ತಲೇ ಇದೆ. ಮಾಧ್ಯಮಗಳ ಮೌಲ್ಯನಿಷ್ಠೆ, ಬದ್ಧತೆ, ನಿಷ್ಪಕ್ಷಪಾತತ್ವವು ಹೆಜ್ಜೆಹೆಜ್ಜೆಗೂ ಪ್ರಶ್ನೆಗೀಡಾಗುತ್ತಿವೆ. ಒಂದು ವೇಳೆ, ಜಾನ್ ಸ್ನೋರು ಗಾಝಾದ ಬದಲು ಇರಾಕಿಗೆ ಹೋಗಿರುತ್ತಿದ್ದರೆ ಮತ್ತು ಐಎಸ್‍ಐಎಸ್ ಗುಂಪಿನ ‘ಅಮಾನವೀಯ' ಕೃತ್ಯಕ್ಕೆ ಸಾಕ್ಷಿಯಾಗಬಲ್ಲ ದೃಶ್ಯಗಳನ್ನು ಸೆರೆ ಹಿಡಿದು ತರುತ್ತಿದ್ದರೆ ‘ಚಾನೆಲ್ 4’ನ ನಿಲುವು ಏನಿರುತ್ತಿತ್ತು? ಅದು ಸ್ಪಷ್ಟತೆಯ ನೆಪ ಒಡ್ಡಿ ವೀಡಿಯೋವನ್ನು ತಿರಸ್ಕರಿಸುತ್ತಿತ್ತೇ? ಸಿರಿಯಾದಲ್ಲಿ ಬಶ್ಶಾರುಲ್ ಅಸದ್‍ರ ಕ್ರೌರ್ಯಕ್ಕೆ ಸಾಕ್ಷಿ ಒದಗಿಸಬಲ್ಲ ಇಂಥದ್ದೇ ವೀಡಿಯೋ ಒಂದು ಚಾನೆಲ್‍ಗೆ ದೊರಕಿರುತ್ತಿದ್ದರೆ ಅದು ಏನು ಮಾಡುತ್ತಿತ್ತು? ಇರಾಕ್‍ನಲ್ಲೋ ಅಫಘಾನ್‍ನಲ್ಲೋ ಕಲ್ಲೆಸೆದು ಕೊಲ್ಲುವುದೆಂದು ಹೇಳಲಾಗುವ ವೀಡಿಯೋಗಳು ಕೆಲವೊಮ್ಮೆ ಚಾನೆಲ್‍ಗಳಲ್ಲಿ ಪ್ರಸಾರವಾಗುವುದಿದೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ದೃಶ್ಯಗಳೂ ಬಿತ್ತರಗೊಳ್ಳುವುದಿದೆ. ಆದರೆ ಆ ಎಲ್ಲ ಸಂದರ್ಭಗಳಲ್ಲಿ ವೀಡಿಯೋಗಳ ಮೂಲವು ಸ್ಪಷ್ಟಗೊಂಡಿರುವುದೇ ಇಲ್ಲ. ಅಮೇರಿಕದ ಅವಳಿ ಕಟ್ಟಡ ಧ್ವಂಸಗೊಂಡ ಸುದ್ದಿಯನ್ನು ಫೆಲೆಸ್ತೀನಿಯರು ಸಂತೋಷ ಆಚರಿಸುವ ದೃಶ್ಯಗಳೊಂದಿಗೆ ಬಿಬಿಸಿಯಂಥ ಪ್ರಮುಖ ಮಾಧ್ಯಮವೇ ಈ ಹಿಂದೆ ಪ್ರಸಾರ ಮಾಡಿತ್ತು. ಅವಳಿ ಕಟ್ಟಡ ಉರುಳಿದುದಕ್ಕಾಗಿ ಫೆಲೆಸ್ತೀನಿಯರು ಸಂಭ್ರಮ ಪಡುತ್ತಿದ್ದಾರೆ ಎಂದೂ ಅದು ಹೇಳಿತ್ತು. ನಿಜವಾಗಿ, ಆ ಸಂತೋಷಾಚರಣೆಗೂ ಅವಳಿ ಕಟ್ಟಡದ ಉರುಳುವಿಕೆಗೂ ಯಾವ ಸಂಬಂಧವೂ ಇರಲಿಲ್ಲ. ಆ ದೃಶ್ಯ ಸೆಪ್ಟೆಂಬರ್ 11ರದ್ದೂ ಆಗಿರಲಿಲ್ಲ. ಯಾವಾಗಿನದ್ದೋ ಒಂದು ದೃಶ್ಯವನ್ನು ಇನ್ನಾವುದೋ ಘಟನೆಗೆ ಜೋಡಿಸಿ ಫೆಲೆಸ್ತೀನಿಯರನ್ನು ಉಗ್ರರು, ಭಯೋತ್ಪಾದಕರು ಎಂದು ಸಾರುವುದಕ್ಕೆ ಮಾಧ್ಯಮದ ಮಂದಿ ಹೆಣೆದ ತಂತ್ರವಾಗಿತ್ತದು. ಸುದ್ದಿಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳದೇ ಮಾಧ್ಯಮ ಕ್ಷೇತ್ರವು ಪ್ರತಿನಿತ್ಯ ಧಾರಾಳ ಸುದ್ದಿ, ದೃಶ್ಯಗಳನ್ನು ಪ್ರಸಾರ ಮಾಡುತ್ತಿರುವಾಗ ಜಾನ್ ಸ್ನೋರ ಮೂರೂವರೆ ನಿಮಿಷಗಳ ಪುಟ್ಟ ವೀಡಿಯೋವೊಂದು ಆ ಮಟ್ಟದ ತಪಾಸಣೆಗೆ ಒಳಗಾಗಲು ಕಾರಣವೇನು?
 ಮಾಧ್ಯಮ ಕ್ಷೇತ್ರವು ಎಷ್ಟು ಪವಿತ್ರ ಮತ್ತು ಅಪವಿತ್ರ ಎಂಬುದು ಅಸಂಖ್ಯ ಬಾರಿ ಈ ನೆಲದಲ್ಲಿ ಚರ್ಚೆಗೊಳಗಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಕಣ್ಮರೆಯಾಗುತ್ತಿರುವ ಪ್ರಾಮಾಣಿಕತೆಯು ಅಸಂಖ್ಯ ವಿಚಾರಗೋಷ್ಠಿ, ಸಭೆ, ಸಂವಾದ ಕಾರ್ಯಕ್ರಮಗಳಿಗೆ ವಸ್ತುವಾಗಿದೆ. ಭಯೋತ್ಪಾದನಾ ಘಟನೆಗಳ ಸಂದರ್ಭದಲ್ಲಿ ಮಾಧ್ಯಮಗಳು ಸುದ್ದಿ ಮೂಲವನ್ನು ಖಚಿತಪಡಿಸಿಕೊಳ್ಳದೇ ಬೇಕಾಬಿಟ್ಟಿ ನಡೆದುಕೊಂಡ ಬಗ್ಗೆ ಹಲವು ಕೃತಿಗಳೇ ಪ್ರಕಟವಾಗಿವೆ. ಮುತೀಉರ್ರಹ್ಮಾನ್ ಎಂಬ ಪತ್ರಕರ್ತ ಅನುಭವಿಸಿದ ನೋವುಗಳು ಓದುಗ ವಲಯದಲ್ಲಿ ಇವತ್ತೂ ಜೀವಂತವಾಗಿವೆ. ಅಷ್ಟಕ್ಕೂ, ಮಾಧ್ಯಮ ಮಂದಿಯೆಂದರೆ ಅಶಿಕ್ಷಿತರಲ್ಲ. ಒಂದು ಸುದ್ದಿ ಸಮಾಜದ ಮೇಲೆ ಬೀರಬಹುದಾದ ಪರಿಣಾಮ ಮತ್ತು ಅಡ್ಡ ಪರಿಣಾಮಗಳ ಬಗ್ಗೆ ತಿಳುವಳಿಕೆಯಿಲ್ಲದ ವ್ಯಕ್ತಿಗಳೂ ಅಲ್ಲ. ಆದರೂ ಪ್ರಮಾದಗಳು ಮತ್ತೆ ಮತ್ತೆ ಸಂಭವಿಸುತ್ತಿರುವುದೇಕೆ? ಪ್ರತಿ ಚಾನೆಲ್‍ಗೂ ಪತ್ರಿಕೆಗೂ ಸಮಾಜಮುಖಿ ಧ್ಯೇಯವಾಕ್ಯವೊಂದು ಇರುತ್ತದೆ. ಆದರೆ ಅನೇಕ ಬಾರಿ ಸುದ್ದಿಗಳು ಆ ಧ್ಯೇಯವಾಕ್ಯವನ್ನೇ ಅವಮಾನಿಸುವಂತಿರುತ್ತವೆ. ಸುದ್ದಿಗೆ ಸ್ಪಷ್ಟತೆ ಇರುವುದಿಲ್ಲ. ಮೂಲವು ಖಚಿತಗೊಂಡಿರುವುದಿಲ್ಲ. ಸುದ್ದಿಯು ತೀವ್ರ ಪಕ್ಷಪಾತದಿಂದಲೂ ಕೂಡಿರುತ್ತವೆ.
 ಗಾಝಾದ ಕುರಿತಂತೆ ಇವತ್ತು ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಏನೆಲ್ಲ ಪ್ರಸಾರವಾಗಿವೆಯೋ ಅದಕ್ಕಿಂತ ಎಷ್ಟೋ ಪಟ್ಟು ಅಧಿಕ ಪ್ರಸಾರವಾಗದ, ಆದರೆ ಪ್ರಸಾರ ಆಗಲೇಬೇಕಾಗಿದ್ದ ಸುದ್ದಿಗಳೂ ಇವೆ. ‘ದಿ ಚಿಲ್ಡ್ರನ್ ಆಫ್ ಗಾಝಾ' ಎಂಬ ಪುಟ್ಟ ವೀಡಿಯೋ ಅದರ ಒಂದು ಅತಿ ಸಣ್ಣ ಸ್ಯಾಂಪಲ್ ಅಷ್ಟೇ. ಒಂದು ವೇಳೆ ಪ್ರಸಿದ್ಧ ಟಿ.ವಿ. ಮತ್ತು ಪತ್ರಿಕೆಗಳ ಸಂಪಾದಕರ ಕೊಠಡಿಯನ್ನು ತಪಾಸಿಸಿದರೆ, ಪ್ರಸಾರವಾಗದ ಇಂಥ ಅನೇಕ ವೀಡಿಯೋ ಮತ್ತು ಸುದ್ದಿಗಳ ರಾಶಿಗಳೇ ಸಿಗಬಹುದು. ಹಾಗಂತ, ಅವು ಪ್ರಕಟವಾಗದೇ ಇರುವುದಕ್ಕೆ ಅವುಗಳ ಮೂಲ ಖಚಿತಗೊಂಡಿಲ್ಲ ಎಂಬುದು ಕಾರಣ ಅಲ್ಲ. ಅವುಗಳು ಪ್ರಸಾರವಾದರೆ ಫೆಲೆಸ್ತೀನಿಯರಿಗೆ ಜಾಗತಿಕವಾಗಿ ಬೆಂಬಲ ವ್ಯಕ್ತವಾಗಬಹುದು ಎಂಬ ಭೀತಿಯೇ ಕಾರಣವಾಗಿದೆ. ಆದ್ದರಿಂದಲೇ ಅವು ಹಮಾಸನ್ನು ಉಗ್ರರ ಪಟ್ಟಿಯಲ್ಲಿಡುತ್ತವೆ ಮತ್ತು ಆ ಮೂಲಕ ಇಸ್ರೇಲಿನ ಕ್ರೌರ್ಯವನ್ನು ಉಗ್ರವಿರೋಧಿ ಹೋರಾಟವಾಗಿ ಬಿಂಬಿಸುವುದಕ್ಕೆ ನೆರವಾಗುತ್ತವೆ. ಇಂಥ ವಾತಾವರಣದಲ್ಲಿ 'ದಿ ಚಿಲ್ಡ್ರನ್ ಆಫ್ ಗಾಝಾ' ಪ್ರಸಾರವಾಗುವುದಾದರೂ ಹೇಗೆ?
   ಏನೇ ಆಗಲಿ, ಜಾನ್ ಸ್ನೋರ ಮೂರೂವರೆ ನಿಮಿಷಗಳ ವೀಡಿಯೋವು ಮಾಧ್ಯಮ ಕ್ಷೇತ್ರದ ಕ್ರೂರ ಒಳ ಮನಸ್ಸನ್ನು ತೆರೆದಿಡುವಲ್ಲಿ ಯಶಸ್ವಿಯಾಗಿದೆ. ಅದಕ್ಕಾಗಿ ಅವರನ್ನು ಅಭಿನಂದಿಸಬೇಕಾಗಿದೆ.