Wednesday 13 August 2014

ಸ್ವತಂತ್ರ ಭಾರತಕ್ಕೆ ಕನ್ನಡಿ ಹಿಡಿದ ‘ಈದ್ ಶುಭಾಶಯ'

    ಚೌತಿ, ದೀಪಾವಳಿ, ಕ್ರಿಸ್‍ಮಸ್, ಈದ್... ಇವೆಲ್ಲ ಒಂದೊಂದು ಧರ್ಮದೊಂದಿಗೆ ಗುರುತಿಸಿಕೊಂಡಿರುವ ಹಬ್ಬಗಳಾದರೂ ಅವುಗಳ ಆಚರಣೆ ಆಯಾ ಧರ್ಮಗಳ ಅನುಯಾಯಿಗಳಿಗೆ ಮಾತ್ರ ಸೀಮಿತವಾಗಿಯೇನೂ ಉಳಿದಿಲ್ಲ. ದೀಪಾವಳಿಯ ಸಂದರ್ಭದಲ್ಲಿ ಹಿಂದೂಗಳಲ್ಲದವರ ಮನೆಗಳಲ್ಲೂ ಸುರುಸುರು ಕಡ್ಡಿ ಉರಿಯುತ್ತದೆ. ಕ್ರಿಸ್‍ಮಸ್‍ನ ನಕ್ಷತ್ರವು ಕ್ರೈಸ್ತರಲ್ಲದವರನ್ನೂ ಆಕರ್ಷಿಸುತ್ತದೆ. ಈದ್‍ನ ದಿನದಂದು ಧರ್ಮದ ಹಂಗಿಲ್ಲದೇ ಶುಭಾಶಯಗಳ ವಿನಿಮಯಗಳು ನಡೆಯುತ್ತವೆ. ಇಂಥ ಸಂದರ್ಭಗಳಲ್ಲೆಲ್ಲಾ ಈ ದೇಶವನ್ನಾಳುವವರು ಕೂಡ ಹಬ್ಬದ ಖುಷಿಯನ್ನು ದೇಶದ ನಾಗರಿಕರೊಂದಿಗೆ ಹಂಚಿಕೊಳ್ಳುವುದಿದೆ. ಶುಭಾಶಯಗಳನ್ನು ಕೋರಿ ಹಬ್ಬಗಳ ಮೌಲ್ಯಗಳಿಗೆ ಗೌರವ ಸೂಚಿಸುವುದಿದೆ. ಅಟಲ್ ಬಿಹಾರಿ ವಾಜಪೇಯಿಯವರು ಕೂಡಾ ಈ ಸಂಪ್ರದಾಯವನ್ನು ಪಾಲಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಈ ಸಂಪ್ರದಾಯವನ್ನು ಮುರಿದಿದ್ದಾರೆ. ಅವರು ಈ ದೇಶಕ್ಕೆ ಈದ್ ಶುಭಾಶಯವನ್ನೇ ಕೋರಿಲ್ಲ. ಇದು ಪಾರ್ಲಿಮೆಂಟ್‍ನಲ್ಲಿಯೂ ತೀವ್ರ ಚರ್ಚೆಗೆ ಒಳಗಾಗಿದೆ. ನರೇಂದ್ರ ಮೋದಿಯವರ ವರ್ತನೆಯನ್ನು ವಿರೋಧ ಪಕ್ಷಗಳು ಟೀಕಿಸಿವೆ. ನೇಪಾಳದ ಪಶುಪತಿನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವಷ್ಟು ಧರ್ಮಶ್ರದ್ಧೆಯುಳ್ಳ ಪ್ರಧಾನಿಯವರಿಗೆ ಈದ್ ಶುಭಾಶಯ ಕೋರುವಷ್ಟು ಸೌಜನ್ಯ ಇಲ್ಲವಾಯಿತೇಕೆ ಎಂದು ಅವು ಪ್ರಶ್ನಿಸಿವೆ.
 ಪ್ರಧಾನಿ ನರೇಂದ್ರ ಮೋದಿಯವರು ಒಂದು ನಿರ್ದಿಷ್ಟ ಧರ್ಮವನ್ನು ಮಾತ್ರ ಪ್ರತಿನಿಧಿಸುವ ಮತ್ತು ಆ ಧರ್ಮದ ಅನುಯಾಯಿಗಳ ಸುಖ-ದುಃಖಗಳಿಗಾಗಿ ಮಾತ್ರ ಸ್ಪಂದಿಸಬೇಕಾದ ವ್ಯಕ್ತಿಯಲ್ಲ. ಅವರು ಈ ದೇಶದ ಪ್ರಧಾನಿ. ಆದ್ದರಿಂದಲೇ ಈ ದೇಶದ ಎಲ್ಲರ ಸುಖ-ದುಃಖಗಳೊಂದಿಗೂ ಅವರ ಸ್ಪಂದನೆಯಿರಬೇಕು. ಪ್ರಧಾನಿಯವರು ನಮ್ಮವರು ಎಂಬ ಭಾವನೆಯೊಂದು ದೇಶದ ಸರ್ವ ನಾಗರಿಕರಲ್ಲೂ ಮೂಡುವಂತೆ ಅವರು ವರ್ತಿಸಬೇಕು. ನಿಜವಾಗಿ, ಪ್ರಧಾನಿಯವರು ಈದ್ ಶುಭಾಶಯ ಕೋರದೇ ಇರುವುದರಿಂದ ಮುಸ್ಲಿಮರು ಕಳಕೊಳ್ಳುವಂತಹದ್ದೇನೂ ಇಲ್ಲ. ಈದ್ ಶುಭಾಶಯ ಕೋರುವುದರಿಂದಲೋ ಕೋರದೇ ಇರುವುದರಿಂದಲೋ ಈದ್‍ನ ದಿನಾಂಕದಲ್ಲಿ ಮತ್ತು ಹಬ್ಬದ ಖುಷಿಯಲ್ಲಿ ಮಾರ್ಪಾಟುಗಳೂ ಆಗುವುದಿಲ್ಲ. ಆದರೆ, ಶುಭಾಶಯ ಕೋರುವುದರಿಂದ ಪ್ರಧಾನಿಯವರ ಗೌರವ ಹೆಚ್ಚುತ್ತದೆ. ಸರ್ವ ಧರ್ಮೀಯರನ್ನು ಗೌರವಿಸುವ ಮತ್ತು ಅವರ ಖುಷಿಯ ಕ್ಷಣಗಳನ್ನು ನೆನಪಿಟ್ಟು ಸ್ಪಂದಿಸುವ ಗುಣವು ಸಾರ್ವಜನಿಕರ ಮೆಚ್ಚುಗೆ ಗಳಿಸುತ್ತದೆ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಇದರ ಅರಿವಿತ್ತು. ಆದ್ದರಿಂದಲೇ ಅವರು ಈದ್ ಶುಭಾಶಯ ಕೋರುವುದರಿಂದ ತಪ್ಪಿಸಿರಲಿಲ್ಲ. ಆದರೆ ಪ್ರಧಾನಿ ಮೋದಿಯವರು ಈ ಸಂಪ್ರದಾಯವನ್ನು ಮೊದಲ ಬಾರಿಗೆ ಮುರಿದಿದ್ದಾರೆ. ಆ ಮೂಲಕ ಪ್ರಧಾನಿ ಹುದ್ದೆಯ ಸ್ಥಾನಮಾನವನ್ನು ನಿರ್ದಿಷ್ಟ ಧರ್ಮವೊಂದರ ಪ್ರತಿನಿಧಿಯ ಮಟ್ಟಕ್ಕೆ ತಗ್ಗಿಸಿದ್ದಾರೆ. ನೂರು ಕೋಟಿಯಷ್ಟು ಜನಸಂಖ್ಯೆಯಿರುವ ಮತ್ತು ಅನೇಕಾರು ಧರ್ಮಗಳಿರುವ ದೇಶವೊಂದರ ಪ್ರಧಾನಿ ಈ ರೀತಿ ವರ್ತಿಸುವುದು ಎಷ್ಟು ಸಮರ್ಥನೀಯ? ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಮೋದಿಯವರ ನಿಲುವುಗಳು ಅನೇಕ ಬಾರಿ ಪ್ರಶ್ನೆಗೀಡಾಗಿದ್ದುವು. ಗೋಧ್ರೋತ್ತರ ಗಲಭೆಯಲ್ಲಿ ಅವರ ಶಂಕಿತ ಪಾತ್ರದ ಕುರಿತಂತೆ ಈಗಲೂ ಅನುಮಾಗಳಿವೆ. ಬ್ರಿಟನ್ ಮತ್ತು ಅಮೇರಿಕಗಳು ವೀಸಾ ನಿರಾಕರಿಸುವಷ್ಟು ಅವರು ಶಂಕೆಗೆ ಈಡಾಗಿದ್ದರು. ಇಂಥ ವ್ಯಕ್ತಿಯೋರ್ವ ಪ್ರಧಾನಿಯಾದಾಗ ಕುತೂಹಲ ಇರುವುದು ಸಹಜ. ತನ್ನ ಮೇಲಿರುವ ಆರೋಪಗಳನ್ನು ಸುಳ್ಳು ಮಾಡುತ್ತಾರೋ ಅನ್ನುವ ನಿರೀಕ್ಷೆಯೊಂದಿಗೆ ಸಮಾಜ ಅವರಲ್ಲಿಗೆ ಒಂದು ಕಣ್ಣಿಟ್ಟು ಕಾಯುತ್ತಿರುತ್ತದೆ. ಪ್ರಧಾನಿ ಎಂಬುದು ಮುಖ್ಯಮಂತ್ರಿಯಂತೆ ಅಲ್ಲವಲ್ಲ. ಮುಖ್ಯಮಂತ್ರಿಗೆ ಒಂದು ಸೀಮಿತತೆ, ಚೌಕಟ್ಟು ಇದೆ. ಅದರ ಒಳಗೆಯೇ ರಾಜಕೀಯ ಮಾಡಬೇಕಾದ ಅನಿವಾರ್ಯತೆಯೂ ಇದೆ. ಆದರೆ, ಪ್ರಧಾನಿ ಈ ಚೌಕಟ್ಟು ಮತ್ತು ಅನಿವಾರ್ಯತೆಗಳನ್ನು ವಿೂರಿ ಗುರುತಿಸಿಕೊಳ್ಳಬೇಕಾಗುತ್ತದೆ. ಆದರೆ ನರೇಂದ್ರ ಮೋದಿಯವರು ಆ ಪ್ರಬುದ್ಧತೆಯನ್ನು ಈವರೆಗೂ ಪ್ರದರ್ಶಿಸಿಲ್ಲ. ಅವರು ತನ್ನ ಮೇಲಿರುವ ಆರೋಪ ಮತ್ತು ಅನುಮಾನಗಳನ್ನು ಪದೇ ಪದೇ ನಿಜ ಮಾಡುತ್ತಿದ್ದಾರೆ. ತನ್ನ ಮಿತ್ರ ಪಕ್ಷವಾದ ಶಿವಸೇನೆಯ ಸಂಸದರು ಉಪವಾಸಿಗನಾದ ಹೊಟೇಲ್ ಕಾರ್ಮಿಕನಿಗೆ ಬಲವಂತದಿಂದ ಚಪಾತಿ ತಿನ್ನಿಸಿದಾಗಲೂ ಮೌನ ವಹಿಸಿದ್ದ ಅವರು ಇದೀಗ ಈದ್‍ಗೂ ಅದೇ ಮೌನವನ್ನು ಮುಂದುವರಿಸಿದ್ದಾರೆ. ಏನಿದರ ಅರ್ಥ? ಈ ದೇಶದ ಮುಸ್ಲಿಮರಿಗೂ ಪ್ರಧಾನಿಗೂ ಏನೇನೂ ಸಂಬಂಧವಿಲ್ಲವೇ? ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗುವ ಯಾವ ಜವಾಬ್ದಾರಿಯೂ ಇಲ್ಲವೇ? ಅಷ್ಟಕ್ಕೂ ಈದ್ ಶುಭಾಶಯ ಕೋರುವುದೆಂದರೆ ಮುಸ್ಲಿಮರ ಸಾಂಪ್ರದಾಯಿಕ ಟೋಪಿ ಧರಿಸಿದಂತೆಯೋ ನಮಾಝ್ ಮಾಡಿದಂತೆಯೋ ಅಲ್ಲವಲ್ಲ. ಟೋಪಿ ಧರಿಸುವ ಬಗ್ಗೆ ಅವರಲ್ಲಿ ಭಿನ್ನಾಭಿಪ್ರಾಯ ಇರಬಹುದು. ಆದರೆ ಶುಭಾಶಯ ಕೋರುವುದಕ್ಕೇನು? ಅದರಿಂದ ಅವರ ಯಾವ ಧಾರ್ಮಿಕ ನಿಲುವುಗಳಿಗೆ ಚ್ಯುತಿ ಬರುತ್ತದೆ?
 ಅಂದಹಾಗೆ, ಹಬ್ಬಗಳಿಗೂ ಈ ದೇಶಕ್ಕೂ ಅವಿನಾಭಾವ ಸಂಬಂಧವಿದೆ. ಪ್ರಧಾನಿಯವರ ಶುಭಾಶಯವನ್ನು ನಿರೀಕ್ಷಿಸಿಕೊಂಡು ಇಲ್ಲಿ ಹಬ್ಬಗಳ ಆಗಮನ ಮತ್ತು ಆಚರಣೆ ನಡೆಯುತ್ತಲೂ ಇಲ್ಲ. ಹಬ್ಬಗಳಿಗೆಲ್ಲ ಇಂಥ ದೌರ್ಬಲ್ಯಗಳಿಗಿಂತ ಹೊರತಾದ ಪಾವನವಾದ ಮೌಲ್ಯಗಳಿವೆ. ಮೋದಿ ಮತ್ತು ಅವರ ಬೆಂಬಲಿಗರು ಈದನ್ನು ಮುಸ್ಲಿಮರ, ಕ್ರಿಸ್‍ಮಸ್ ಅನ್ನು ಕ್ರೈಸ್ತರ ಮತ್ತು ದೀಪಾವಳಿಯನ್ನು ಹಿಂದೂಗಳ ಹಬ್ಬವಾಗಿ ಮಾತ್ರ ಕಾಣುವುದಾದರೆ ಮತ್ತು ಈ ಧರ್ಮೀಯರೆಲ್ಲ ಪರಸ್ಪರ ಬೆರೆಯದೇ ಪ್ರತ್ಯಪ್ರತ್ಯೇಕವಾಗಿ ಹಬ್ಬ ಆಚರಿಸಬೇಕೆಂದು ಬಯಸುವುದಾದರೆ ಅದು ಅವರ ದೌರ್ಬಲ್ಯ. ಹಬ್ಬಗಳಿಗೆ ಅಂಥದ್ದೊಂದು ಸೀಮಿತತೆ ಇಲ್ಲವೇ ಇಲ್ಲ. ಹಬ್ಬಗಳು ಸರ್ವರ ಹಿತವನ್ನು ಬಯಸುತ್ತವೆ. ಅವು ಮನುಷ್ಯರನ್ನು ಹಿಂದೂ-ಮುಸ್ಲಿಮ್ ಎಂದೋ ಬಿಜೆಪಿ-ಕಾಂಗ್ರೆಸ್ ಎಂದೋ ವಿಭಜಿಸುವುದಿಲ್ಲ. ಧರ್ಮದ ಹೆಸರಲ್ಲಿ ಮನುಷ್ಯರ ಮಧ್ಯೆ ಗೋಡೆಗಳನ್ನೆಬ್ಬಿಸುವವರಿಗೂ ಹಬ್ಬಗಳು ಸಾರುವ ಮೌಲ್ಯಗಳಿಗೂ ಯಾವ ನಂಟೂ ಇಲ್ಲ. ಆದ್ದರಿಂದಲೇ ಹಬ್ಬಗಳು ಬಂತೆಂದರೆ ಸಮಾಜದಲ್ಲಿ ಒಂದು ಬಗೆಯ ಖುಷಿಯ ವಾತಾವರಣ ಪ್ರತ್ಯಕ್ಷಗೊಳ್ಳುತ್ತದೆ. ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬ ಬೇಧವಿಲ್ಲದೇ ಎಲ್ಲರೂ ಪರಸ್ಪರ ಹಬ್ಬದ ಶುಭಾಶಯ ಕೋರುತ್ತಾರೆ. ಹಿಂದೂ ಟೈಲರ್‍ನ ಕೈಯಲ್ಲಿ ಈದ್‍ನ ಹೊಸ ಉಡುಗೆ ಸಿದ್ಧವಾಗುತ್ತದೆ. ಮುಸ್ಲಿಮ್ ವ್ಯಾಪಾರಿಯ ಅಂಗಡಿಯಿಂದ ದೀಪಾವಳಿಯ ಖರೀದಿಗಳು ನಡೆಯುತ್ತವೆ. ಕ್ರಿಸ್‍ಮಸ್‍ನ ನಕ್ಷತ್ರಗಳು ಇನ್ನಾವುದೋ ಅಂಗಡಿಯಲ್ಲಿ ಕಾಯುತ್ತಿರುತ್ತವೆ. ಚೌತಿಯ ದಿನದಂದು ಗಣೇಶನ ಮೊಬೈಲಿಗೆ ಬಶೀರ್‍ನ ಶುಭಾಶಯದ ಸಂದೇಶ ಬರುತ್ತದೆ. ಅತ್ಹರುಲ್ಲಾನ ಇಮೇಲ್ ಇನ್‍ಬಾಕ್ಸ್ ನಲ್ಲಿ ಹಿಂದೂ ಗೆಳೆಯರ ಶುಭಾಶಯಗಳು ತುಂಬಿರುತ್ತವೆ. ಹಬ್ಬಗಳ ಸಿಹಿ ತಿಂಡಿ, ಊಟ, ತಮಾಷೆಗಳು ಪರಸ್ಪರ ವಿನಿಮಯಗೊಳ್ಳುತ್ತವೆ. ಮೋದಿಯವರು ಶುಭಾಶಯ ಕೋರಲಿ, ಬಿಡಲಿ; ಹಬ್ಬಗಳು ಇಂಥದ್ದೊಂದು ಪ್ರೀತಿಯ ವಾತಾವರಣವನ್ನು ಈ ದೇಶದಲ್ಲಿ ಈ ಹಿಂದೆಯೇ ಕಟ್ಟಿ ಬೆಳೆಸಿವೆ. ಇದರ ಅರಿವಿಲ್ಲದವರು ಮಾತ್ರ ಹಬ್ಬಗಳಿಗೆ ಸೀಮಿತತೆಯ ಗಡಿಯನ್ನು ಕಟ್ಟಬಲ್ಲರು.
 ಏನೇ ಆಗಲಿ, ಈದ್‍ನ ಶುಭಾಶಯವನ್ನು ಕೋರಲೂ ಹಿಂಜರಿಯುವ ಓರ್ವ ಪ್ರಧಾನಿಯ ನೇತೃತ್ವದಲ್ಲಿ ಈ ದೇಶ 67ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧವಾಗಿದೆ. ಬಹುಶಃ ಸ್ವಾತಂತ್ರ್ಯಾನಂತರದ ಭಾರತವನ್ನು ಮತ್ತು ಅದು ಸಾಗಿ ಬಂದ ದಾರಿಯನ್ನು ತಿಳಿದುಕೊಳ್ಳುವುದಕ್ಕೆ ಈ ಬೆಳವಣಿಗೆ ಅತ್ಯುತ್ತಮ ಉದಾಹರಣೆಯಾಗಬಹುದು.

No comments:

Post a Comment