Monday, 29 September 2014

ಮಕ್ಸೂದ್ ಮತ್ತು ಹುಲಿಯನ್ನು ಈದ್‍ಗೆ ಮುಖಾಮುಖಿಗೊಳಿಸೋಣ

   ಮೃಗ ಎಂಬ ಪದಕ್ಕೆ ಡಿಕ್ಷನರಿಯಲ್ಲಿ ಪ್ರಾಣಿ, ಪಶು, ದುಷ್ಟಜಂತು, ಹಿಂಸ್ರಪ್ರಾಣಿ, ಕಸ್ತೂರಿ ಮೃಗ.. ಮುಂತಾದ ಅರ್ಥಗಳಿವೆ. ನಮ್ಮೆಲ್ಲರೊಳಗೂ ಒಂದು ‘ಮೃಗ’ ಇದೆ. ಸಂದರ್ಭಕ್ಕೆ ತಕ್ಕಂತೆ ಅದು ವರ್ತಿಸುತ್ತಲೂ ಇದೆ. ಕೆಲವೊಮ್ಮೆ ಪಶುವಿನಂತೆ, ಕೆಲವೊಮ್ಮೆ ಕಸ್ತೂರಿ ಮೃಗದಂತೆ, ಕೆಲವೊಮ್ಮೆ ಹಿಂಸಾತ್ಮಕವಾಗಿ, ಕೆಲವೊಮ್ಮೆ ದುಷ್ಟತನದಿಂದ.. ಹೀಗೆ ವಿವಿಧ ಸನ್ನಿವೇಶಗಳಲ್ಲಿ ನಮ್ಮೊಳಗಿನ ಮೃಗ ತನ್ನತನವನ್ನು ಪ್ರದರ್ಶಿಸುತ್ತಿರುತ್ತದೆ. ದೆಹಲಿಯ ಮೃಗಾಲಯದಲ್ಲಿದ್ದ ಹುಲಿಯೊಂದು ಯುವಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಘಟನೆಯು ಕಳೆದವಾರ ಮಾಧ್ಯಮಗಳಲ್ಲಿ ಸುದ್ದಿಗೀಡಾಯಿತು. ವಾಟ್ಸಪ್, ಫೇಸ್‍ಬುಕ್‍ಗಳಲ್ಲಿ ಆ 15 ನಿಮಿಷಗಳ ವೀಡಿಯೋ ಪ್ರಸಾರವಾಯಿತು. ಮಕ್ಸೂದ್ ಎಂಬ ಆ ಯುವಕನು ಹುಲಿಯ ಎದುರು ಅಕ್ಷರಶಃ ಪಶುವಿನಂತಿದ್ದ. ಬಿಟ್ಟುಬಿಡುವಂತೆ ಹುಲಿಯೊಂದಿಗೆ ವಿನಂತಿಸುತ್ತಿದ್ದ. ನಿಜವಾಗಿ, ಇದು ಆತನ ನೈಜ ಸ್ವಭಾವ ಎಂದು ಹೇಳುವಂತಿಲ್ಲ. ಮೃಗಾಲಯದೊಳಗೆ ಪಶುವಾದ ಆತ ಹೊರಗೆ ಈ ಮೊದಲು ಹುಲಿಯಂತೆ ವರ್ತಿಸಿರಲೂ ಬಹುದು. ಹಿಂಸಾತ್ಮಕ ಸ್ವಭಾವವನ್ನು ಪ್ರದರ್ಶಿಸಿರಬಹುದು. ಯಾಕೆಂದರೆ, ಈ ಜಗತ್ತಿನಲ್ಲಿ ಮನುಷ್ಯನಷ್ಟು ಬುದ್ಧಿವಂತ ಪ್ರಾಣಿ ಮತ್ತು ಅಷ್ಟೇ ಹಿಂಸಾತ್ಮಕ ಪ್ರಾಣಿ ಬೇರೊಂದಿಲ್ಲ. ಅಸೂಯೆ, ಅಹಂ, ಮೋಸ, ದಾಷ್ಟ್ರ್ಯತನ, ಹಗೆತನ, ಕೋಮುವಾದ...  ಮುಂತಾದ ಪದಗಳೆಲ್ಲ ಹೆಚ್ಚು ಹೊಂದುವುದು ಮನುಷ್ಯನಿಗೇ. ಹುಲಿಗೆ ತುಂಬಾ ಅಸೂಯೆ ಇದೆ, ಚಿರತೆ ಅಹಂಕಾರಿ, ಆನೆ ಮೋಸಗಾರ, ಪಶುವಿಗೆ ಹಗೆತನವಿದೆ ಎಂದೆಲ್ಲಾ ನಾವು ಹೇಳುವುದೇ ಇಲ್ಲ. ಆದರೂ ಪ್ರಾಣಿ ಜಗತ್ತಿನ ಮೇಲೆ ಧಾರಾಳ ಆರೋಪಗಳನ್ನು ಹೊರಿಸಿ ಮಾನವ ಜಗತ್ತು ಇವತ್ತು ಬದುಕುತ್ತಿದೆ. ಮಕ್ಸೂದ್‍ನು ಹುಲಿಯಿರುವ ಕಂದಕಕ್ಕೆ ಬೀಳುವ ಮೊದಲು ಆತನ ಸಹಿತ ಅಲ್ಲಿದ್ದವರೆಲ್ಲ ಹುಲಿಯನ್ನು ಮನಸಾರೆ ಆನಂದಿಸಿದ್ದರು. ಆದರೆ ಯಾವಾಗ ಮಕ್ಸೂದ್‍ನು ಹುಲಿಯ ಬಳಿಗೆ ಬಿದ್ದನೋ ಆ ಹುಲಿಯ ಸೌಂದರ್ಯ, ಆಕೃತಿ, ಬಿಳಿಪಟ್ಟೆ...  ಎಲ್ಲದರ ಕುರಿತಾದ ಮಾತುಗಳೂ  ಸ್ಥಗಿತಗೊಂಡು ಅದು ಕ್ರೂರವಾಗಿಯೂ ಮಕ್ಸೂದ್ ಪಶುವಾಗಿಯೂ ಕಾಣಿಸಿದ.
   ಒಂದು ರೀತಿಯಲ್ಲಿ, ಮಕ್ಸೂದ್ ಮತ್ತು ಹುಲಿ - ಇವೆರಡೂ ಬೇರೆ ಬೇರೆಯಲ್ಲ. ಓರ್ವನೇ  ಮನುಷ್ಯನ ಎರಡು ಮುಖಗಳು. ಮನುಷ್ಯ ಇವತ್ತು ಇಂಥ ಹತ್ತು-ಹಲವು ಮುಖಗಳೊಂದಿಗೆ ಬದುಕುತ್ತಿದ್ದಾನೆ. ಹಜ್ ನ ಉದ್ದೇಶ ಏನೆಂದರೆ, ಈ ಮುಖಗಳನ್ನು ಕಿತ್ತೆಸೆದು ಪ್ರಕೃತಿ ಸಹಜವಾದ ಮತ್ತು ಎಳ್ಳಷ್ಟೂ ಅಪ್ರಾಮಾಣಿಕತೆಯಿಲ್ಲದ ವ್ಯಕ್ತಿತ್ವಗಳನ್ನು ತಯಾರಿಸುವುದು. ಇಸ್ಮಾಈಲ್‍ರ(ಅ) ನೆನಪಲ್ಲಿ ಪ್ರಾಣಿಬಲಿಯನ್ನು ಕೊಡಲು ಮುಂದಾಗುವ ಸಮಾಜವು ‘ಮಕ್ಸೂದ್ ಮತ್ತು ಹುಲಿ'ಯನ್ನು ಮತ್ತೆ ಮತ್ತೆ ನೆನಪಿಸಿ ಕೊಳ್ಳಬೇಕಾದ ತುರ್ತು ಅಗತ್ಯವಿದೆ. ಪ್ರಾಣಿಯನ್ನು ಬಲಿ ಕೊಡುವಾಗ ಮತ್ತು ಅದರ ಮಾಂಸವನ್ನು ಸೇವಿಸುವಾಗ ಪ್ರತಿಯೋರ್ವರೂ ತಮ್ಮ ‘ಹುಲಿತ್ವ ಮತ್ತು ಮಕ್ಸೂದತ್ವ'ಕ್ಕೆ ಶಾಶ್ವತ ವಿದಾಯ ಹೇಳುವ ಪ್ರತಿಜ್ಞೆ ಮಾಡಬೇಕಾಗಿದೆ. ಅಲ್ಲಾಹನಿಗೆ ಪ್ರಾಣಿಯ ರಕ್ತವಾಗಲಿ ಮಾಂಸವಾಗಲಿ ತಲುಪುವುದಿಲ್ಲ (22:37) ಎಂಬ ಕುರ್‍ಆನ್ ವಚನದ ಉದ್ದೇಶವೂ ಇದುವೇ.
   ನಿಜವಾಗಿ, ಪ್ರತಿವರ್ಷ ಬಕ್ರೀದ್ ಆಗಮಿಸುವುದು ಪ್ರಾಣಿಬಲಿಯನ್ನು ನೀಡುವುದಕ್ಕೋ ಅದರ ಮಾಂಸವನ್ನು ತಿನ್ನುವುದಕ್ಕೋ ಅಲ್ಲ. ಇದು ದೊಡ್ಡದೊಂದು ಗುರಿಯ ಬಿಡಿ ಬಿಡಿ ಭಾಗಗಳಷ್ಟೇ. ನಮ್ಮೊಳಗಿನ ಎಲ್ಲ ಬಗೆಯ ಮಾಲಿನ್ಯಗಳಿಗೆ ಕತ್ತಿ ಇಡುವುದರ ಸಂಕೇತವಾಗಿಯಷ್ಟೇ ನಾವದನ್ನು ಪರಿಗಣಿಸಬೇಕು. ಬಲಿ ನೀಡುವಾಗ ಪ್ರಾಣಿಗಾಗುವ ನೋವು ಮತ್ತು ಒದ್ದಾಟಗಳು ಈದ್ ಆಚರಿಸುವ ಪ್ರತಿಯೋರ್ವರ ಒಳಗೂ ಆಗಬೇಕು. ಹೊಸ ಬಟ್ಟೆ ಧರಿಸುವಾಗ, ಮಾಂಸದೂಟ ಸೇವಿಸುವಾಗ, ಆಲಿಂಗಿಸುವಾಗ, ಲಬ್ಬೈಕ್ ಹೇಳುವಾಗ.. ಎಲ್ಲ ಸಂದರ್ಭಗಳಲ್ಲೂ ಆ ನೋವು ಮನದೊಳಗೆ ಪ್ರತಿಧ್ವನಿಸಬೇಕು. ಮಕ್ಸೂದ್ ಮತ್ತು ಹುಲಿಯ ನಡುವೆ ನಡೆದ 15 ನಿಮಿಷಗಳ ದೇಹಭಾಷೆಯ ಸಂವಾದ ಮತ್ತು ಅಂತಿಮವಾಗಿ ಹುಲಿತ್ವವು ಮೇಲುಗೈ ಪಡೆದುದನ್ನು ನಾವು ಈದ್‍ನ ಸಂದರ್ಭದಲ್ಲಿ ಮುಖಾಮುಖಿಗೊಳಿಸಬೇಕು. ಮನುಷ್ಯ ಪಶುವೂ ಆಗಬಲ್ಲ, ಹುಲಿಯೂ ಆಗಬಲ್ಲ. ಸಂದರ್ಭಕ್ಕೆ ತಕ್ಕಂತೆ ತನ್ನ ಪಶುತ್ವವನ್ನೂ ಹುಲಿತ್ವವನ್ನೂ ಪ್ರದರ್ಶಿಸಬಲ್ಲ. ಮಾತ್ರವಲ್ಲ, ಹುಲಿಯಲ್ಲೂ ಪಶುವಲ್ಲೂ ಇಲ್ಲದ ಅನೇಕಾರು ದುರ್ಗುಣಗಳನ್ನೂ ಅನಾವರಣಗೊಳಿಸಬಲ್ಲ. ಈದ್ ಮುಖ್ಯವಾಗಬೇಕಾದದ್ದು ಈ ಎಲ್ಲ ಹಿನ್ನೆಲೆಗಳಲ್ಲಿ. ಅದು ಮಕ್ಸೂದತ್ವ ಮತ್ತು ಹುಲಿತ್ವದಿಂದ ನಮ್ಮನ್ನು ಮುಕ್ತಗೊಳಿಸಿ ಇಬ್ರಾಹೀಮ್ ಮತ್ತು ಇಸ್ಮಾಈಲತ್ವದ ನೈಜ ಪ್ರತಿನಿಧಿಗಳಾಗಿ ಬದಲಿಸಬೇಕು. ಮಕ್ಸೂದ್ ಮತ್ತು ಹುಲಿಯನ್ನು ಈದ್‍ಗೆ ಮುಖಾಮುಖಿಗೊಳಿಸಿದರೆ ಈದ್ ನಮ್ಮಿಂದೇನು ಬಯಸುತ್ತದೆ ಅನ್ನುವುದು ಸ್ಪಷ್ಟವಾಗುತ್ತದೆ. ಹಾಗಾದಾಗ ಈ ಜಗತ್ತಿಗೆ ಇಬ್ರಾಹೀಮ್, ಇಸ್ಮಾಈಲ್ ಮತ್ತು ಹಾಜಿರಾರ ಕೊರತೆ ಎದುರಾಗುವುದಿಲ್ಲ. ಹಾಗಾಗಲಿ ಎಂದು ಹಾರೈಸೋಣ.

Friday, 26 September 2014

ವ್ಯಾಪಾರಿಗಳ ಜೋಳಿಗೆಯಿಂದ ತಪ್ಪಿಸಿಕೊಂಡ ಸ್ಕಾರ್ಫ್

    “ಮುಸ್ಲಿಮರ ಸ್ಕಾರ್ಫ್ ಮತ್ತು ಸಿಕ್ಖರ ಟರ್ಬನ್‍ಗೆ ಬಾಸ್ಕೆಟ್‍ಬಾಲ್ ಕ್ರೀಡೆಯಲ್ಲಿ ಅನುಮತಿ ನೀಡಲಾಗುವುದಲ್ಲದೇ ಮುಂದಿನ ಎರಡು ವರ್ಷಗಳ ವರೆಗೆ ವಿವಿಧ ಪಂದ್ಯಾವಳಿಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಪರಿಶೀಲನೆಗೊಳಪಡಿಸಿದ ಬಳಿಕ ಅಧಿಕೃತ ಘೋಷಣೆ ಹೊರಡಿಸಲಾಗುವುದು” - ಎಂದು ಕಳೆದವಾರ ವಿಶ್ವ ಬಾಸ್ಕೆಟ್‍ಬಾಲ್ ಸಂಸ್ಥೆಯು (FIBA) ಹೇಳಿಕೊಂಡಿದೆ. ಈ ವರೆಗೆ 5 ಸೆಂಟಿ ವಿೂಟರ್‍ನ ಹೇರ್‍ಬೆಂಡ್‍ಗೆ ಮಾತ್ರ ಅವಕಾಶ ಇತ್ತು. ಮಹಿಳಾ ಆಟಗಾರ್ತಿಯರು ಸ್ಕಾರ್ಫ್ ಧರಿಸುವುದನ್ನಾಗಲಿ, ಟರ್ಬನ್ ತೊಡುವುದನ್ನಾಗಲಿ ಅದು ನಿಷೇಧಿಸಿತ್ತು. ಆದ್ದರಿಂದಲೇ ಈ ಹೇಳಿಕೆಗೆ ವಿವಿಧ ಭಾಗಗಳಿಂದ ಸಂತೋಷದ ಪ್ರತಿಕ್ರಿಯೆಗಳು ವ್ಯಕ್ತವಾದುವು. ಅನೇಕ ಮಂದಿ ಸಂಸ್ಥೆಯ ಈ ಘೋಷಣೆಯನ್ನು ಸ್ವಾಗತಿಸಿದರು. ನಿಜವಾಗಿ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಕುರಿತಂತೆ ಅಪಾರ ಚರ್ಚೆಗಳಾಗುತ್ತಿರುವ ಈ ದಿನಗಳಲ್ಲಿ ಬಾಸ್ಕೆಟ್‍ಬಾಲ್ ಸಂಸ್ಥೆಯೊಂದು ಈ ವರೆಗೂ ಸ್ಕಾರ್ಫ್-ಟರ್ಬನ್ ನಿಷೇಧ ನೀತಿಯನ್ನು ಪಾಲಿಸಿಕೊಂಡು ಬರುತ್ತಿತ್ತು ಎಂಬುದೇ ಅಚ್ಚರಿಯ ಸಂಗತಿ. ಒಂದು ರೀತಿಯಲ್ಲಿ ಸಂತೋಷಕ್ಕಿಂತ ದುಃಖಿಸಬೇಕಾದ, ಸ್ವಾಗತಕ್ಕಿಂತ ಮರುಕಪಡಬೇಕಾದ ಮನಸ್ಥಿತಿಯೊಂದರ ಅನಾವರಣ ಇದು.
 ಯುರೋಪಿಯನ್ ರಾಷ್ಟ್ರಗಳ ಬಗ್ಗೆ ನಮ್ಮಲ್ಲಿ ಕೆಲವು ಭ್ರಮೆಗಳಿವೆ. ವ್ಯಕ್ತಿ, ಅಭಿವ್ಯಕ್ತಿ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಪಾರ ಮನ್ನಣೆ ಕೊಡುವ ರಾಷ್ಟ್ರಗಳವು ಎಂಬೊಂದು ನಂಬುಗೆ ಅಸಂಖ್ಯ ಮಂದಿಯಲ್ಲಿದೆ. ಲಿವಿಂಗ್ ಟುಗೆದರ್, ಸಲಿಂಗ ಸ್ವಾತಂತ್ರ್ಯ, ಮದುವೆ-ವಿಚ್ಛೇದನ.. ಮುಂತಾದ ಹಲವಾರು ವಿಷಯಗಳ ಬಗ್ಗೆ ಅವುಗಳ ಉದಾರ ಧೋರಣೆಗಳು ಶ್ಲಾಘನೆಗೆ ಒಳಗಾಗುವುದೂ ಇದೆ. ಆದರೆ ಇದು ಒಂದು ಮುಖ ಮಾತ್ರ. ಅದರ ಇನ್ನೊಂದು ಮುಖ ಎಷ್ಟು ಕರಾಳ ಮತ್ತು ಪಕ್ಷಪಾತದಿಂದ ಕೂಡಿದೆಯೆಂದರೆ, ತಲೆಗೆ ಸುತ್ತುವ ಒಂದು ಬಟ್ಟೆಯನ್ನೂ ಅದು ಸಹಿಸಿಕೊಳ್ಳುತ್ತಿಲ್ಲ. ಬಾಸ್ಕೆಟ್‍ಬಾಲ್ ಸಂಸ್ಥೆಯ (FIBA) ಕಚೇರಿ ಇರುವುದು ಸ್ವೀಡನ್‍ನಲ್ಲಿ. ಬಾಸ್ಕೆಟ್‍ಬಾಲ್ ಆಟವು ತೃತೀಯ ಜಗತ್ತಿನಲ್ಲಿ ಜನಪ್ರಿಯವೂ ಆಗಿಲ್ಲ. ಬಿಳಿಯರು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೇ ಹೆಚ್ಚು ಜನಪ್ರಿಯತೆ ಗಳಿಸಿಕೊಂಡ ಕ್ರೀಡೆ ಇದು. ಯಾವುದೋ ಆಫ್ರಿಕನ್ ಖಂಡದ ಮತ್ತು ಬಡತನದ ಬೇಗೆಯಲ್ಲಿರುವ ರಾಷ್ಟ್ರಗಳು ಸೇರಿ ಇಂಥ ನಿಯಮ ರೂಪಿಸಿರುತ್ತಿದ್ದರೆ ಅದನ್ನು ಪುರಾತನ ಮನಸ್ಥಿತಿ ಅನ್ನಬಹುದಿತ್ತು. ವ್ಯಕ್ತಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮಹತ್ವವನ್ನು ಗ್ರಹಿಸುವಲ್ಲಿ ಅವು ಇನ್ನೂ ಬೆಳೆದಿಲ್ಲ ಎಂದು ಸಮರ್ಥಿಸಿಕೊಳ್ಳಬಹುದಿತ್ತು. ಆದರೆ ಅಭಿವೃದ್ಧಿ ಹೊಂದಿದವರೇ ಹೆಚ್ಚಿನ ಪ್ರಮಾಣದಲ್ಲಿ ಆಡುವ ಮತ್ತು ಅವರೇ ಸಂಸ್ಥೆಯಲ್ಲಿ ನಿಯಮಗಳನ್ನು ರೂಪಿಸುವ ಅಧಿಕಾರ ಹೊಂದಿದ್ದೂ ಈ 21ನೇ ಶತಮಾನದಲ್ಲೂ ಇಂಥ ನಿಯಮಗಳು ಅಸ್ತಿತ್ವ ಉಳಿಸಿಕೊಂಡದ್ದು ಹೇಗೆ? ಸ್ಕಾರ್ಫ್‍ನಿಂದ ಬಾಸ್ಕೆಟ್ ಬಾಲ್‍ಗೆ ಯಾವ ತೊಂದರೆಯಿದೆ? ಟರ್ಬನ್ ಧರಿಸುವುದರಿಂದ ಏನು ಹಾನಿಯಿದೆ? ಯಾವ ಮಾನದಂಡದಲ್ಲಿ ಇಂಥ ನಿಯಮಗಳನ್ನು ರೂಪಿಸಲಾಗುತ್ತದೆ? ಕಳೆದ ಒಲಿಂಪಿಕ್ಸ್ ನ ವರೆಗೆ ಕುಸ್ತಿಯಲ್ಲಿ ಮಹಿಳೆಯರಿಗೆ ಸಂಪೂರ್ಣ ಮೈಮುಚ್ಚುವ ಬಟ್ಟೆ ಧರಿಸುವುದಕ್ಕೆ ಅನುಮತಿ ಇರಲಿಲ್ಲ. ಈ ಕಾರಣದಿಂದಾಗಿ ಮುಸ್ಲಿಮ್ ಕ್ರೀಡಾಪಟುಗಳು ಅದರಿಂದ ದೂರವಿದ್ದರು. ಕಳೆದ ಬಾರಿ ಈ ನಿಯಮವನ್ನು ಸಡಿಲಿಸಲಾಯಿತು. ಎರಡು ವರ್ಷಗಳ ಹಿಂದೆ ಇರಾನಿ ಆಟಗಾರ್ತಿಯರು ಮೈಮುಚ್ಚುವ ಬಟ್ಟೆ ಧರಿಸಿ ಕಬಡ್ಡಿ ಆಡಿ ವಿಶ್ವದ ಗಮನ ಸೆಳೆದಿದ್ದರು. ಅದೇ ಉಡುಪಿನಲ್ಲಿ ಒಲಿಂಪಿಕ್ಸ್ ಅಥ್ಲೆಟಿಕ್ಸ್ ನಲ್ಲೂ ಭಾಗವಹಿಸಿದ್ದರು. ಹೀಗಿರುವಾಗ ಧಾರ್ಮಿಕ ವಸ್ತ್ರಸಂಹಿತೆ ತೊಡಕಾಗುವುದು ಯಾರಿಗೆ? ಆಟಗಾರರಿಗೆ ಅದು ಸಮಸ್ಯೆ ಆಗುವುದಿಲ್ಲ ಎಂದಾದರೆ ಕ್ರೀಡಾ ಸಂಸ್ಥೆಗಳಿಗೇಕೆ ಸಮಸ್ಯೆಯಾಗುತ್ತಿದೆ? ಅವರು ಕ್ರೀಡೆಯ ಹೆಸರಲ್ಲಿ ಏನನ್ನು ಮತ್ತು ಯಾವುದನ್ನು ಪ್ರಚೋದಿಸುತ್ತಿದ್ದಾರೆ?
 ಎರಡ್ಮೂರು ವರ್ಷಗಳ ಹಿಂದೆ ಬ್ಯಾಡ್ಮಿಂಟನ್ ಸಂಸ್ಥೆ ಚರ್ಚೆಗೊಳಗಾಗಿತ್ತು. ಬ್ಯಾಡ್ಮಿಂಟನ್ ಆಟಗಾರ್ತಿಯರು ಕಡ್ಡಾಯವಾಗಿ ಸ್ಕರ್ಟ್ ಧರಿಸಬೇಕು ಎಂದು ಅದು ಆದೇಶ ಹೊರಡಿಸಿತ್ತು. ವೀಕ್ಷಕರು ಗ್ಯಾಲರಿಯಲ್ಲಿ ಸೇರಬೇಕಾದರೆ ಈ ಉಡುಪು ಸಂಹಿತೆ ಅಗತ್ಯ ಎಂದು ಸಮರ್ಥಿಸಿಯೂ ಇತ್ತು. ಆಗ ಜ್ವಾಲಾ ಗುಟ್ಟಾ, ಸೈನಾ ನೆಹ್ವಾಲ್, ಅಶ್ವಿನಿ ಪೊನ್ನಪ್ಪ.. ಮುಂತಾದವರು ತಂತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಏನಿವೆಲ್ಲ? ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ಬಾಸ್ಕೆಟ್ ಬಾಲ್ ಸಂಸ್ಥೆಯ ಈ ಕ್ರೀಡಾ ನಿಯಮಗಳನ್ನು ಹೋಲಿಸಿ ನೋಡಿಕೊಳ್ಳಿ. ಯಾಕೆ ಮಹಿಳಾ ಆಟಗಾರ್ತಿಯರ ಉಡುಪುಗಳನ್ನು ಅವು ಗಿಡ್ಡವಾಗಿಸುತ್ತಿವೆ? ಕ್ರೀಡೆ ಎಂಬುದು ಸಂಪೂರ್ಣವಾಗಿ ಪ್ರತಿಭೆಯನ್ನೇ ಆಧರಿಸಿರುವಂಥದ್ದು. ಇಂತಿಂಥ ಧರ್ಮದ, ಇಂತಿಂಥ ಉಡುಪಿನ ವ್ಯಕ್ತಿಗಳಲ್ಲಿ ಮಾತ್ರ ಪ್ರತಿಭೆ ಇರುತ್ತದೆ ಎಂಬ ನಿಯಮ ಎಲ್ಲೂ ಇಲ್ಲ. ಅತ್ಯಂತ ಬಲಶಾಲಿ ಮತ್ತು ಶ್ರೀಮಂತ ರಾಷ್ಟ್ರಗಳ ಮುಂದೆ ಕೀನ್ಯ, ಸೊಮಾಲಿಯಾ, ಘಾನಾದಂಥ ಬಡ ರಾಷ್ಟ್ರಗಳ ಪ್ರತಿಭೆಗಳು ಸ್ಪರ್ಧಿಸಿ ಗೆಲ್ಲುತ್ತಿವೆ. ಅಷ್ಟಕ್ಕೂ, ಯಾವ ಕ್ರೀಡೆಯೂ ಬಟ್ಟೆಯನ್ನು ಹೊಂದಿಕೊಂಡಿಲ್ಲವಲ್ಲ. ಬಟ್ಟೆ ಎಂಬುದು ಪ್ರತಿಭೆಯ ಸಂಕೇತವೂ ಅಲ್ಲ. ಅದು ದೇಹವನ್ನೋ ಕೇಶವನ್ನೋ ಮುಚ್ಚುವಂಥದ್ದು. ಕ್ರೀಡೆಯು ಇದರ ವಿರೋಧಿಯಾಗಿರಲು ಸಾಧ್ಯವೇ ಇಲ್ಲ. ಯಾರು ಪ್ರತಿಭಾ ಪ್ರದರ್ಶನಕ್ಕೆ ಉಡುಪು ವೈರಿ ಎಂದು ಭಾವಿಸುತ್ತಾರೋ ನಿಜವಾಗಿ ಅವರೇ ಕ್ರೀಡೆಯ ವೈರಿಗಳು. ಅವರು ಕ್ರೀಡೆಯ ಹೆಸರಲ್ಲಿ ಇನ್ನೇನನ್ನೋ ಬಯಸುತ್ತಿದ್ದಾರೆ. ಆ ಬಯಕೆಗೆ ಪೂರಕವಾಗಿ ಆಟಗಾರರನ್ನು ಆಡಿಸುತ್ತಿದ್ದಾರೆ. ಅದಕ್ಕಾಗಿ ವಿವಿಧ ನಿಯಮಗಳನ್ನು ರೂಪಿಸುತ್ತಿದ್ದಾರೆ. ಆಟಗಾರರ ಆಟಕ್ಕಿಂತ ಅವರ ಬಟ್ಟೆ, ಸ್ಕಾರ್ಫ್, ಟರ್ಬನ್‍ಗಳೇ ಅವರ ಪ್ರತಿಭೆಯನ್ನು ಅಳೆಯುವ ಮಾನದಂಡವಾಗಿರುತ್ತದೆ.
 ಕ್ರೀಡೆಗಳನ್ನೆಲ್ಲ ಸಂಶೋಧಿಸಿದ್ದು ಮನುಷ್ಯನೇ. ಈ ಸಂಶೋಧನೆಗೆ ವಿವಿಧ ಕಾರಣಗಳು ಇರಬಹುದು. ಹೊಟ್ಟೆ ತುಂಬಿದ ಮತ್ತು ಹೊಟ್ಟೆ ಖಾಲಿಯಾದ ಇಬ್ಬರೂ ಕೂಡ ತಂತಮ್ಮ ಮಿತಿಯೊಳಗೆ ಕ್ರೀಡೆಗಳನ್ನು ಹುಟ್ಟು ಹಾಕಿದ್ದಾರೆ. ಪ್ರತಿಯೊಂದಕ್ಕೂ ಅದರದ್ದೇ ಆದ ಸ್ಥಳೀಯತೆ, ಸಾಂಸ್ಕ್ರಿತಿಕತೆ, ಸಾಂಪ್ರದಾಯಿಕ ಅನನ್ಯತೆಯಿದೆ. ಆದರೆ ಬರಬರುತ್ತಾ ಇಂಥ ಕ್ರೀಡೆಗಳೆಲ್ಲ ಸ್ಥಳೀಯತೆಯನ್ನು ಕಳಚಿಕೊಂಡು ಅಪರಿಚಿತ ಪ್ರದೇಶಕ್ಕೂ ನುಗ್ಗಿದುವು. ಸಾಂಪ್ರದಾಯಿಕ ಚೌಕಟ್ಟನ್ನು ವಿೂರಿ ಬೆಳೆಯತೊಡಗಿದುವು. ಸಾಂಸ್ಕøತಿಕ ಅನನ್ಯತೆಯಿಂದ ಬಿಡಿಸಿಕೊಂಡು ಹೊರಚಿಮ್ಮಿದುವು. ಇವಕ್ಕೆಲ್ಲ ಕ್ರೀಡೆಯನ್ನು ಕ್ರೀಡೆಯಾಗಿ ಸ್ವೀಕರಿಸದ ವ್ಯಾವಹಾರಿಕ ಮನಸ್ಥಿತಿಯೇ ಕಾರಣವಾಗಿತ್ತು. ಕ್ರಮೇಣ ಕ್ರೀಡೆಗಳೆಲ್ಲ ತಂತಮ್ಮ ಸ್ಥಳೀಯತೆಯಿಂದ ಕಳಚಿಕೊಂಡು ವ್ಯಾಪಾರಿಗಳ ಜೋಳಿಗೆಯಲ್ಲಿ ಹೊಸ ರೂಪಗಳನ್ನು ಪಡೆಯತೊಡಗಿದುವು. ಯಾವ ಕ್ರೀಡೆಯನ್ನು ಯಾವೆಲ್ಲ ರೀತಿಯಲ್ಲಿ ಆಡಿಸಿದರೆ ಅದು ಕ್ರೀಡಾ ಮಾರುಕಟ್ಟೆಯಲ್ಲಿ ದುಡ್ಡು ತಂದಿಡಬಹುದು ಎಂಬ ಲೆಕ್ಕಾಚಾರಗಳು ನಡೆದುವು. ಅದಕ್ಕೆ ಪೂರಕವಾಗಿ ನಿಯಮಗಳು ರೂಪುಗೊಂಡವು. ಮಹಿಳೆಯರು ಮತ್ತು ಪುರುಷರು ಆಡುವ ಆಟ ಒಂದೇ ಆದರೂ ಇಬ್ಬರಿಗೂ ಬೇರೆ ಬೇರೆ ನಿಯಮಗಳನ್ನು ರೂಪಿಸಲಾಯಿತು. ಟೆನ್ನಿಸ್, ಬ್ಯಾಡ್ಮಿಂಟನ್, ಕಬಡ್ಡಿ, ಬಾಸ್ಕೆಟ್‍ಬಾಲ್, ರಿಲೇ, ವಾಲಿಬಾಲ್, ಸ್ಕೇಟಿಂಗ್.. ಸಹಿತ ಎಲ್ಲದರಲ್ಲೂ ಮಹಿಳಾ ಆಟವನ್ನು ಉಡುಪು ಕೇಂದ್ರಿತವಾಗಿ ರೂಪಿಸಲಾಯಿತು. ಆದ್ದರಿಂದಲೇ ಸ್ಕಾರ್ಫ್, ಟರ್ಬನ್‍ಗಳೆಲ್ಲ ನಿಷೇದಕ್ಕೆ ಒಳಗಾದುವು.
 

ಏನೇ ಆಗಲಿ, ನಿಷೇಧವನ್ನು ಹಿಂತೆಗೆದುಕೊಳ್ಳುವ ಮೂಲಕ ಆಟಕ್ಕೂ ಉಡುಪಿಗೂ ಸಂಬಂಧ ಇಲ್ಲ ಎಂಬುದನ್ನು ಬಾಸ್ಕೆಟ್ ಬಾಲ್ ಸಂಸ್ಥೆಯು ಬಹಿರಂಗವಾಗಿ ಒಪ್ಪಿಕೊಂಡಿದೆ. ಇದು ಕ್ರೀಡೆಯ ಇತರ ಸಂಸ್ಥೆಗಳಿಗೂ ಒಂದು ಮಾದರಿಯಾಗಲಿ. ಕ್ರೀಡೆಯನ್ನು ಮೈಮಾಟದ ಪ್ರದರ್ಶನದಿಂದ ಹೊರತಂದು ಅವು ರಕ್ಷಿಸಲಿ. ಉಡುಪಿನ ಹೊರತಾದ ಕಾರಣಕ್ಕಾಗಿ ಜನರು ಪ್ರತಿ ಆಟವನ್ನೂ ಇಷ್ಟಪಡಲು ಪ್ರೇರಕವಾಗುವಂಥ ನಿಯಮಗಳನ್ನು ಎಲ್ಲ ಕ್ರೀಡಾ ಸಂಸ್ಥೆಗಳೂ ಜಾರಿಗೆ ತರಲಿ.

Wednesday, 17 September 2014

`ಸ್ಫೋಟಿಸುವವರ' ನಡುವೆ ಮಾನ ಕಳಕೊಳ್ಳುವ ಪಿಂಕಿ, ಅಬ್ದುಲ್ ಕಾದರ್


ಅಬ್ದುಲ್ ಕಾದರ್
    ಸೆ. 13 ಮತ್ತು 14ರಂದು ಮಾಧ್ಯಮಗಳಲ್ಲಿ ಎರಡು ಸುದ್ದಿಗಳು ಪ್ರಕಟವಾದುವು. ಸೆ. 13ರ ಸುದ್ದಿ ಪಿಂಕಿ ಪ್ರಮಾಣಿಕ್ ಎಂಬ ಕ್ರೀಡಾಪಟುವಿಗೆ ಸಂಬಂಧಿಸಿದ್ದಾದರೆ, 14ರದ್ದು ಅಬ್ದುಲ್ ಕಾದರ್ ಎಂಬ ಗಲ್ಫ್ ಉದ್ಯೋಗಿಗೆ ಸಂಬಂಧಿಸಿದ್ದು. 2012ರಲ್ಲಿ ಪಿಂಕಿ ಪ್ರಮಾಣಿಕ್ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದ್ದಳು. ಏಶ್ಯನ್ ಗೇಮ್ಸ್, ಸೌತ್ ಏಶ್ಯನ್ ಮತ್ತು ಏಶ್ಯನ್ ಇಂಡೋರ್ ಗೇಮ್ಸ್ ಗಳಲ್ಲಿ 4 ಚಿನ್ನ ಮತ್ತು ಬೆಳ್ಳಿ ಪದಕವನ್ನು ಪಡೆದಿದ್ದ ಪ್ರಮಾಣಿಕ್‍ಳ ಮೇಲೆ ಆಕೆಯ ಪಕ್ಕದ ಕೋಣೆಯಲ್ಲಿ ವಾಸಿಸುವ ಅನಾಮಿಕ ಆಚಾರ್ಯ ಎಂಬವಳು ಅತ್ಯಾಚಾರದ ಆರೋಪ ಹೊರಿಸಿದ್ದಳು. ಪ್ರಮಾಣಿಕ್‍ಳನ್ನು ಗಂಡು ಎಂದು ಕರೆದಿದ್ದಳು. ಈ ದೂರಿನ ಕುರಿತಂತೆ ಕಲ್ಕತ್ತಾದ ಪೊಲೀಸ್ ಎಷ್ಟು ಅಮಾನುಷವಾಗಿ ನಡಕೊಂಡಿತೆಂದರೆ, ಪ್ರಮಾಣಿಕ್‍ಳನ್ನು ಪುರುಷ ಕೈದಿಗಳ ಕೋಣೆಯಲ್ಲಿ ಕೂಡಿಹಾಕಿತು. ಬಂಧಿಸಿದ್ದೂ ಪುರುಷ ಪೊಲೀಸರೇ. 25 ದಿನಗಳ ಕಾಲ ಜೈಲಲ್ಲಿದ್ದು ಹೊರಬರುವಷ್ಟರಲ್ಲಿ ಮೂರು ಬಾರಿ ಲಿಂಗಪತ್ತೆ ಪರೀಕ್ಷೆ ನಡೆಸಲಾಯಿತು. ಮಾಧ್ಯಮಗಳಲ್ಲಿ ಹತ್ತು-ಹಲವು ರಂಜನೀಯ ಕತೆಗಳು ಪ್ರಕಟವಾದುವು. ಎಲ್ಲವೂ ತಣ್ಣಗಾದ ಬಳಿಕ ಆಕೆ ಹೆಣ್ಣಾಗಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತು. ಇದೀಗ ಸೆ. 13ರಂದು ಕೊಲ್ಕತ್ತಾ ಹೈಕೋರ್ಟು ಆಕೆಯ ಮೇಲಿದ್ದ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿದೆ.
 ಸೆ. 14ರ ಸುದ್ದಿಯಂತೂ ಇದಕ್ಕಿಂತಲೂ ಭೀಕರವಾದುದು. ದುಬೈಗೆ ತೆರಳುವುದಕ್ಕಾಗಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದ ಕಾಸರಗೋಡಿನ ಅಬ್ದುಲ್ ಕಾದರ್ ಎಂಬ ಯುವಕ ಗಂಟೆಯೊಳಗೆ ಭಯೋತ್ಪಾದಕನಾಗಿ ಬದಲಾಗಿದ್ದ. ಆತನ ಮೇಲೆ ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಮತ್ತು ಸಿರಿಯನ್ ಉಗ್ರವಾದಿಗಳೊಂದಿಗೆ ಸಂಬಂಧ ಇರುವ ಭಯೋತ್ಪಾದಕನೆಂಬ ಆರೋಪ ಹೊರಿಸಿ ಮಾಧ್ಯಮಗಳು ಹಬ್ಬ ಆಚರಿಸಿದವು. ಅಷ್ಟಕ್ಕೂ, ಭಯೋತ್ಪಾದಕನೆಂದು ಗುರುತಿಸಿಕೊಳ್ಳುವುದಕ್ಕೆ ಓರ್ವ ವ್ಯಕ್ತಿಯಲ್ಲಿ ಇರಬೇಕಾದ ಅರ್ಹತೆಗಳೇನು? ಮುಸ್ಲಿಮ್ ಹೆಸರು, ಉಗುರುಸುತ್ತಿಗೆ ಬಳಸುವ ಔಷಧಿ (ಹೈಡ್ರೋಜನ್ ಪೆರಾಕ್ಸೈಡ್), ಕೆಟ್ಟು ಹೋದ ಬ್ಯಾಟರಿ, ಟ್ಯಾಬ್... ಇವು ಭಯೋತ್ಪಾದಕ ಉಪಕರಣಗಳೇ? ಇವುಗಳ ಆಧಾರದಲ್ಲಿ ಓರ್ವನನ್ನು ಶಂಕಿತ ಭಯೋತ್ಪಾದಕ ಎಂದು ಕರೆಯಬಹುದೇ? ವಿಮಾನ ನಿಲ್ದಾಣದಲ್ಲಿರುವ ಕೇಂದ್ರೀಯ ಸುರಕ್ಷತಾ ಪಡೆ(ಸಿಐಎಸ್‍ಎಫ್)ಯ ಅಧಿಕಾರಿಗಳಿಗೆ ಬಾಂಬ್‍ಗೆ ಬಳಸುವ ಅಮೊನಿಯಂ ನೈಟ್ರೇಟ್ ಯಾವುದು ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಯಾವುದು ಎಂಬ ಸಾಮಾನ್ಯ ತಿಳುವಳಿಕೆಯೂ ಇಲ್ಲವೇ? ಮಂಗಳೂರಿನ ವಿಮಾನ ನಿಲ್ದಾಣದಿಂದ ವಿದೇಶಗಳಿಗೆ ಹಾರುವವರಲ್ಲಿ ಅಬ್ದುಲ್ ಕಾದರ್ ಮೊದಲಿಗನೇನೂ ಅಲ್ಲ. ದಿನನಿತ್ಯ ಅನೇಕರು ಮಂದಿ ಅಲ್ಲಿಂದ ವಿಮಾನವೇರುತ್ತಾರೆ. ವಿವಿಧ ಲಗೇಜುಗಳನ್ನು ತರುತ್ತಾರೆ. ಅಲ್ಲದೆ ಭಯೋತ್ಪಾದಕರ ಕುರಿತಂತೆ ಮಂಗಳೂರು ವಿಮಾನ ನಿಲ್ದಾಣವು ಸಾಕಷ್ಟು ಎಚ್ಚರಿಕೆಯಿಂದಿರುವ ತಾಣವೂ ಹೌದು. ಹೀಗಿರುವಾಗ, ಇಲ್ಲಿರುವ ಅಧಿಕಾರಿಗಳಿಗೆ ಉಗುರುಸುತ್ತಿನ ಔಷಧಿ ಯಾವುದು ಅಮೊನಿಯಂ ನೈಟ್ರೇಟ್ ಯಾವುದು ಎಂಬ ಬಗ್ಗೆಯೂ ತಿಳುವಳಿಕೆ ಇಲ್ಲ ಎಂದರೆ ಏನರ್ಥ? ನಿಜ, ಅಬ್ದುಲ್ ಕಾದರ್‍ನಿಗೆ ತನ್ನಲ್ಲಿರುವ ವಸ್ತುವಿನ ಬಗ್ಗೆ ಗೊತ್ತಿರಲಿಲ್ಲ. ಆತನಿಗೆ ಆ ವಸ್ತುವನ್ನು ಕೊಟ್ಟಿರುವ ನೆರೆಮನೆಯವರು ಅದರ ಬಗ್ಗೆ ಹೇಳಿಯೂ ಇರಲಿಲ್ಲ. ಇಷ್ಟು ಮಾತ್ರಕ್ಕೆ ಅದನ್ನು ಸ್ಫೋಟಕ ಉಪಕರಣ ಎಂದು ಅಧಿಕಾರಿಗಳು ಘೋಷಿಸುವುದು ಸಮರ್ಥನೀಯವೇ? ಅದು ಸ್ಫೋಟಕ ವಸ್ತುವೇ ಯಾಕಾಗಬೇಕಿತ್ತು? ಇನ್ನಿತರ ಸಾಮಾನ್ಯ ಎಲೆಕ್ಟ್ರಾನಿಕ್ ಉಪಕರಣಗಳೂ ಆಗಬಹುದಿತ್ತಲ್ಲವೇ ಅಥವಾ ತಪಾಸಣೆಯವರೆಗೂ ಮಾಧ್ಯಮಗಳಿಗೆ `ಸ್ಫೋಟಕ' ಸುದ್ದಿಯನ್ನು ಅಧಿಕಾರಿಗಳು ಕೊಡದೇ ಇರಬಹುದಿತ್ತಲ್ಲವೇ? ಯಾಕೆ ಈ ಸಂಯಮವನ್ನು ಅಧಿಕಾರಿಗಳು ತೋರ್ಪಡಿಸಲಿಲ್ಲ, ಅಬ್ದುಲ್ ಕಾದರ್ ಎಂಬ ಹೆಸರನ್ನು ನೋಡಿಯೋ ಅಥವಾ ತಮಾಷೆಯೋ?
 ನಿಜವಾಗಿ ಔಷಧಿ, ಟ್ಯಾಬ್, ಬ್ಯಾಟರಿಗಳನ್ನು ಸ್ಫೋಟಕ ವಸ್ತುಗಳೆಂದು ಮೊದಲು ಕರೆದುದು ಪತ್ರಕರ್ತರಲ್ಲ, ಅಧಿಕಾರಿಗಳು. ಅವರು ಅಂಥದ್ದೊಂದು ಸೂಚನೆಯನ್ನು ಪತ್ರಕರ್ತರಿಗೆ ರವಾನಿಸಿದ್ದಾರೆ. ಆ ಸುದ್ದಿಯನ್ನು ಪಡೆದುಕೊಂಡ ಪತ್ರಕರ್ತರು ಅದನ್ನು ಇನ್ನಷ್ಟು ಭೀಕರಗೊಳಿಸಿದ್ದಾರೆ. ಅಬ್ದುಕ್ ಕಾದರ್‍ನಿಗೂ ಸಿರಿಯನ್ ಹೋರಾಟಗಾರರಿಗೂ ನಡುವೆ ಸಂಬಂಧ ಕಲ್ಪಿಸಿದ್ದಾರೆ. ವಿಮಾನ ನಿಲ್ದಾಣವನ್ನೇ ಸ್ಫೋಟಿಸುವ ಸಂಚನ್ನು ಅವರು ಸೃಷ್ಟಿಸಿದ್ದಾರೆ. ಒಂದು ರೀತಿಯಲ್ಲಿ, ಪತ್ರಕರ್ತರ ನಡುವೆ ಎಂಥ ಭೀಕರ ಆತಂಕವಾದಿಗಳಿದ್ದಾರೋ ಅದಕ್ಕಿಂತಲೂ ಭೀಕರ ಭಯೋತ್ಪಾದಕರು ಅಧಿಕಾರಿ ವರ್ಗಗಳ ನಡುವೆಯೂ ಇದ್ದಾರೇನೋ ಅನ್ನುವ ಅನುಮಾನವೊಂದನ್ನು ಈ ಪ್ರಕರಣವು ಹುಟ್ಟು ಹಾಕಿದೆ. ಹಾಗಂತ, ಪತ್ರಕರ್ತರಿಗೆ ಅಧಿಕಾರಿಗಳಿಗಿಂತ ಹೆಚ್ಚಿನ ಸಾಮಾಜಿಕ ಬದ್ಧತೆಯಿದೆ. ಅಧಿಕಾರಿಗಳು ಏನನ್ನೇ ಹೇಳಲಿ, ಅವರು ಅದನ್ನು ವರದಿ ಮಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ತಾನು ಹೆಣೆಯುವ ಸುದ್ಧಿ ಸಮಾಜದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಆಲೋಚಿಸಬೇಕಗುತ್ತದೆ. ಇಷ್ಟಿದ್ದೂ ಮತ್ತೆ ಮತ್ತೆ ಇಂಥ ತಪ್ಪುಗಳು ಸಂಭವಿಸುತ್ತಿರುವುದೇಕೆ? ಸಿರಿಯನ್ ಭಯೋತ್ಪಾದಕರೊಂದಿಗೆ ಅಬ್ದುಲ್ ಕಾದರ್‍ನಿಗೆ ಸಂಬಂಧ ಇದೆ ಎಂಬ ಹೇಯ ಸುಳ್ಳನ್ನು ಓರ್ವ ಪತ್ರಕರ್ತ ಯಾವ ಕಾರಣಕ್ಕಾಗಿ ಹೆಣೆದ? ಅದು ಆತನ ಸ್ವಯಂ ಸೃಷ್ಟಿಯೋ ಅಥವಾ ಅದರ ಹಿಂದೆ ಅಧಿಕಾರಿ ವರ್ಗಗಳ ಪಾತ್ರವಿದೆಯೊ? ಈ ದೇಶದಲ್ಲಿ ಓರ್ವನು ಭಯೋತ್ಪಾದನೆಯ ಆರೋಪ ಹೊತ್ತುಕೊಳ್ಳುವುದು ಕಳ್ಳತನದ್ದೋ ವಂಚನೆಯದ್ದೋ ಆರೋಪ ಹೊತ್ತುಕೊಂಡಂತೆ ಅಲ್ಲವಲ್ಲ. ಅದರಲ್ಲೂ ಹೆಸರು 'ಅಬ್ದುಲ್ ಕಾದರ್' ಎಂದಾದರೆ ಆ ಆರೋಪ ಎಷ್ಟು ಗಂಭೀರ ಸ್ವರೂಪವನ್ನು ಪಡಕೊಳ್ಳುತ್ತದೆ ಎಂಬುದು ಸುದ್ದಿ ತಯಾರಿಸುವ ಪತ್ರಕರ್ತನಿಗೂ ಗೊತ್ತು, ಅದನ್ನು ಪ್ರಕಟಿಸುವ ಸಂಪಾದಕನಿಗೂ ಗೊತ್ತು. ಹೀಗಿರುವಾಗ, ಓರ್ವ ಪತ್ರಕರ್ತ ಮತ್ತು ಪತ್ರಿಕೆಯು ಅಂಥ ಸುದ್ದಿಗಳನ್ನು ಪ್ರಕಟಿಸುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ಸುದ್ದಿಯಲ್ಲಿ ವಸ್ತುನಿಷ್ಠತೆಗೆ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಆದರೂ ಮಾಧ್ಯಮಗಳೇಕೆ ಪದೇ ಪದೇ ಎಡವುತ್ತಿವೆ?
ಪಿಂಕಿ ಪ್ರಮಾಣಿಕ್
ನಿಜವಾಗಿ, ಇಂಥ ಪ್ರಕರಣಗಳಿಗೆ ಎರಡು ಮುಖಗಳಿರುತ್ತವೆ. ಒಂದು ಪತ್ರಕರ್ತರದ್ದಾದರೆ ಇನ್ನೊಂದು ಪೊಲೀಸರದ್ದು. ಈ ಎರಡೂ ಮುಖಗಳು ಒಟ್ಟು ಸೇರಿದಾಗ ಓರ್ವ ಭಯೋತ್ಪಾದಕ ತಯಾರಾಗುತ್ತಾನೆ. ಅಬ್ದುಲ್ ಕಾದರ್ ಪತ್ರಿಕೆಗಳಲ್ಲಿ ಭಯೋತ್ಪಾದಕನಾಗಿ ಗುರುತಿಗೀಡಾಗಿರುವುದಕ್ಕೆ ಕೇವಲ ಪತ್ರಕರ್ತ ಮಾತ್ರ ಕಾರಣ ಎಂದು ಹೇಳುವಂತಿಲ್ಲ. ಆತನಿಗೆ ಸುದ್ದಿಯನ್ನು ಒದಗಿಸುವ ಅಧಿಕಾರಿಗಳಿಗೂ ಅದರಲ್ಲಿ ಪಾತ್ರ ಇದೆ. ಸಿರಿಯನ್ ವೈರಸನ್ನು ಅಂಟಿಸಿಕೊಂಡ ಪತ್ರಕರ್ತರು ಇರುವಂತೆ 'ಸ್ಫೋಟ ಮನಸ್ಥಿತಿಯನ್ನು' ಹೊಂದಿರುವ ಅಧಿಕಾರಿಗಳೂ ಇದ್ದಾರೆ. ಈ ಎರಡರ ಉತ್ಪನ್ನವಾಗಿ ಓರ್ವ ಭಯೋತ್ಪಾದಕ ಹುಟ್ಟುತ್ತಾನೆ. ಈ ದೇಶದಲ್ಲಿ ಇಂಥ ನೂರಾರು ಭಯೋತ್ಪಾದಕರನ್ನು ಈ ಜೋಡಿ ಈಗಾಗಲೇ ಸೃಷ್ಟಿ ಮಾಡಿವೆ. ಅಬ್ದುಲ್ ಕಾದರ್‍ಗೆ ಸಿರಿಯನ್ ಭಯೋತ್ಪಾದನೆಯನ್ನು ಜೋಡಿಸಿದಂತೆ ಈ ಹಿಂದಿನವರಿಗೆ ಹುಜಿ, ಲಷ್ಕರ್, ಇಂಡಿಯನ್ ಮುಜಾಹಿದೀನ್‍ಗಳನ್ನು ಇವರು ಜೋಡಿಸಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಇವರೊಳಗಿನ ವೈರಸ್‍ಗಳು ಕೆಲಸ ಮಾಡುತ್ತಿವೆ. ಸದ್ಯ ಸಿರಿಯ ಮತ್ತು ಇರಾಕ್‍ನಿಂದ ಹತ್ಯೆ, ಶಿರಚ್ಛೇದ ಮತ್ತಿತರ ಸುದ್ದಿಗಳು ಧಾರಾಳವಾಗಿ ಹರಿದುಬರುತ್ತಿವೆ. ಅಲ್ಲಿ ಹೋರಾಡುತ್ತಿರುವವರ ಸಂಖ್ಯೆ, ಅವರ ದೇಶ, ಅವರ ಉದ್ದೇಶ ಮುಂತಾದುವುಗಳ ಬಗ್ಗೆ ಪುಂಖಾನುಪುಂಖ ವರದಿಗಳು ಬರುತ್ತಿವೆ. ಜವಾಹಿರಿಯ ಟೇಪು ಬಿಡುಗಡೆಯಾಗುತ್ತಿವೆ. ಅಮೇರಿಕ ಮತ್ತು ಬ್ರಿಟನ್‍ನ ನೂರಾರು ನಾಗರಿಕರು ಈ ಹೋರಾಟಗಾರರ ಗುಂಪಿನಲ್ಲಿದ್ದಾರೆ ಎಂಬ ಸುದ್ದಿಗಳೂ ಬರುತ್ತಿವೆ. ಇಷ್ಟೆಲ್ಲಾ ಇದ್ದರೂ ಭಾರತೀಯರು ಈ ಗುಂಪಿನಲ್ಲಿಲ್ಲ ಎಂಬ ಮಾಹಿತಿಗಳೂ ಪ್ರಕಟವಾಗುತ್ತಿವೆ. ಈ ದೇಶದ ಪಾಲಿಗೆ ಇದು ಅತ್ಯಂತ ಸ್ವಾಗತಾರ್ಹ ಮತ್ತು ಆಹ್ಲಾದಕರ ಸಂಗತಿಯಾದರೂ ಅದನ್ನೇ ಅತ್ಯಂತ ವಿಷಾದದ ಸುದ್ದಿಯಾಗಿ ಪರಿಗಣಿಸುವವರೂ ಇಲ್ಲಿದ್ದಾರೆ. ಅಬ್ದುಲ್ ಕಾದರ್‍ನನ್ನು 'ಸಿರಿಯನ್ ಭಯೋತ್ಪಾದಕನನ್ನಾಗಿಸಿರುವುದರ ಹಿಂದೆ ಈ ಮನಸ್ಥಿತಿ ಕೆಲಸ ಮಾಡಿರುವಂತಿದೆ. ಲಷ್ಕರ್‍ಗೋ ಇಂಡಿಯನ್ ಮುಜಾಹಿದೀನ್‍ಗೋ ಅಬ್ದುಲ್ ಕಾದರ್‍ನನ್ನು ಜೋಡಿಸಿದರೆ ಅದು ಉಂಟು ಮಾಡುವ ತಲ್ಲಣ ಸಿರಿಯಕ್ಕೆ ಹೋಲಿಸಿದರೆ ತೀರಾ ಕಡಿಮೆ. ಇವತ್ತು ಲಷ್ಕರ್ ತನ್ನ ಮಹತ್ವವನ್ನು ಕಳಕೊಂಡಿದೆ. ಇಂಡಿಯನ್ ಮುಜಾಹಿದೀನ್‍ಗೂ ಹಿಂದಿನ ಆಕರ್ಷಣೆಯಿಲ್ಲ. ಸದ್ಯ ಸಿರಿಯನ್ ಕ್ರೌರ್ಯವೇ ಸುದ್ದಿಗಳ ಮಾರುಕಟ್ಟೆಯಲ್ಲಿ ಬೆಲೆ ಬಾಳುತ್ತಿರುವುದು. ಒಂದು ವೇಳೆ ಇವತ್ತು ಸಿರಿಯದಲ್ಲಿ ಆಂತರಿಕ ಘರ್ಷಣೆಯು ಕೊನೆಗೊಂಡಿದ್ದಿದ್ದರೆ ಮತ್ತು ಲಿಬಿಯದಲ್ಲೋ, ಈಜಿಪ್ಟ್ ನಲ್ಲೋ ಹೋರಾಟ ನಡೆಯುತ್ತಿದ್ದರೆ ಅಬ್ದುಲ್ ಕಾದರ್‍ನ ಬಡಪಾಯಿ ಟ್ಯಾಬ್ ಮತ್ತು ಉಗುರುಸುತ್ತಿನ ಔಷಧಿಯು (ಹೈಡ್ರೋಜನ್ ಪೆರಾಕ್ಸೈಡ್) ಲಿಬಿಯದ ಬಾಂಬ್ ಆಗಿ ಸುದ್ದಿಗೊಳಗಾಗುತ್ತಿತ್ತೋ ಏನೋ.
   ಪಿಂಕಿ ಪ್ರಮಾಣಿಕ್ ಮತ್ತು ಅಬ್ದುಲ್ ಕಾದರ್ ವಿಭಿನ್ನ ಧರ್ಮದ, ವಿಭಿನ್ನ ರಾಜ್ಯದ ಮತ್ತು ವಿಭಿನ್ನ ವೃತ್ತಿಯ ವ್ಯಕ್ತಿತ್ವಗಳಾದರೂ ಅನುಭವಿಸಿದ ಯಾತನೆಗಳು ಬಹುತೇಕ ಒಂದೇ. ಇಬ್ಬರ ಮಾನಹಾನಿಯಲ್ಲೂ ಪತ್ರಕರ್ತರಿಗೆ ಮತ್ತು ಅಧಿಕಾರಿಗಳಿಗೆ ಪಾತ್ರವಿದೆ. ಒಂದು ಪ್ರಕರಣವನ್ನು ಹೇಗೆ ಕೆಟ್ಟದಾಗಿ ನಿಭಾಯಿಸಬಹುದು ಎಂಬುದನ್ನು ಇವು ಸ್ಪಷ್ಟವಾಗಿ ಸೂಚಿಸುತ್ತವೆ. ಆದ್ದರಿಂದ ಇಂಥ ಪ್ರಕರಣಗಳ ಕುರಿತಂತೆ ಸರಕಾರವು ಕೂಲಂಕಷ ಅಧ್ಯಯನಕ್ಕೆ ಮುಂದಾಗಬೇಕು. ಪತ್ರಕರ್ತರು ಮತ್ತು ಅಧಿಕಾರಿಗಳ ನಡುವೆ ಇಂಥ ವೈರಸನ್ನು ಅಂಟಿಸಿಕೊಂಡವರ ಗುರುತು ಪತ್ತೆ ಹಚ್ಚಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯಾ ಸಂಸ್ಥೆಗಳ ಮೇಲೆ ಒತ್ತಡ ಹೇರಬೇಕು. ಓದುಗರ ಪಾತ್ರವೂ ಇದರಲ್ಲಿ ಬಹಳ ಮುಖ್ಯ. ವೈರಸ್ ಪೀಡಿತರಿಂದ ಮಾಧ್ಯಮ ಮತ್ತು ಪೊಲೀಸ್ ವ್ಯವಸ್ಥೆಯನ್ನು ಪ್ರತ್ಯೇಕಿಸಲು ಸಂವಿಧಾನಬದ್ಧ ಸಕಲ ವಿಧಾನಗಳನ್ನೂ ಬಳಸಿಕೊಳ್ಳಬೇಕು. ನಾನು ಓದುವ ಮತ್ತು ನೋಡುವ ಮಾಧ್ಯಮ ವೈರಸ್ ಪೀಡಿತ ಪ್ರಮಾದಗಳಿಂದ ಮುಕ್ತವಾಗಿರಬೇಕು ಎಂಬ ಸೂಚನೆ ಮಾಧ್ಯಮ ಸಂಸ್ಥೆಗಳಿಗೆ ರವಾನೆಯಾಗಬೇಕು. ನಮಗೆ ಅಬ್ದುಲ್ ಕಾದರ್ ಬೇರೆಯಲ್ಲ, ಪಿಂಕಿಯೂ ಬೇರೆಯಲ್ಲ. ಅವರಿಬ್ಬರ ಮಾನವೂ ಗೌರವಾರ್ಹವಾದುದು.

Wednesday, 10 September 2014

ಇಂಥ ಪ್ರತಿಭಟನೆಗಳು ಹೆಚ್ಚೆಚ್ಚು ವ್ಯಕ್ತಗೊಳ್ಳುತ್ತಲೇ ಇರಲಿ

   ಈ ಬಾರಿಯ ಯು.ಎಸ್. ಓಪನ್ ಟೆನ್ನಿಸ್ ಟೂರ್ನಿಯ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿಯನ್ನು ತನ್ನ ದೇಶವಾದ ಭಾರತಕ್ಕೆ ಮತ್ತು ತನ್ನ ತವರು ರಾಜ್ಯವಾದ ತೆಲಂಗಾಣಕ್ಕೆ ಅರ್ಪಿಸುವ ಮೂಲಕ ಟೆನಿಸ್ ತಾರೆ ಸಾನಿಯಾ ಮಿರ್ಝಾ ಬಿಜೆಪಿಯ ‘ದೇಶನಿಷ್ಠೆ'ಗೆ ಸವಾಲೊಡ್ಡಿದ್ದಾರೆ. ಮೂರು ತಿಂಗಳ ಹಿಂದೆ ಸಾನಿಯಾರ ರಾಷ್ಟ್ರೀಯತೆ ಮತ್ತು ದೇಶನಿಷ್ಠೆಯನ್ನು ತೆಲಂಗಾಣದ ವಿಧಾನಸಭೆಯ ವಿರೋಧ ಪಕ್ಷವಾದ ಬಿಜೆಪಿ ನಾಯಕ ಕೆ. ಲಕ್ಷ್ಮಣ್ ಪ್ರಶ್ನಿಸಿದ್ದರು. ಅವರು ಸಾನಿಯಾರನ್ನು ಪಾಕಿಸ್ತಾನದ ಸೊಸೆ ಎಂದಿದ್ದರು. ತೆಲಂಗಾಣದ ‘ಬ್ರಾಂಡ್ ಅಂಬಾಸಡರ್’ (ರಾಯಭಾರಿ) ಆಗುವ ಅರ್ಹತೆ ಸಾನಿಯಾರಿಗಿಲ್ಲ ಎಂದಿದ್ದರು. ಮಹಾರಾಷ್ಟ್ರ ಮೂಲದ ಮತ್ತು ಹೈದರಾಬಾದ್‍ಗೆ ವಲಸೆ ಬಂದಿರುವ ಸಾನಿಯಾರನ್ನು ರಾಯಭಾರಿ ಮಾಡಿರುವುದು ತಪ್ಪು ಎಂದು ವಾದಿಸಿ ಚರ್ಚೆಯೊಂದಕ್ಕೆ ಕಾರಣರಾಗಿದ್ದರು. ಇದರಿಂದ ಸಾನಿಯಾ ತೀವ್ರವಾಗಿ ನೊಂದಿದ್ದರು. ಮಾಧ್ಯಮಗಳೆದುರೇ ಕಣ್ಣೀರಿಳಿಸಿದ್ದರು. ಹೈದರಾಬಾದ್‍ನ ನಿಝಾಮರ ಆಡಳಿತ ಕಾಲದಲ್ಲೇ ತನ್ನ ಮುತ್ತಜ್ಜ ಅಝೀಝ್ ಮಿರ್ಝ ಗೃಹ ಕಾರ್ಯದರ್ಶಿಯಾಗಿದ್ದುದು, ತನ್ನ ಅಜ್ಜ ಮುಹಮ್ಮದ್ ಅಹ್ಮದ್ ಮಿರ್ಝಾ ಹೈದರಾಬಾದ್‍ನ ಖ್ಯಾತ ಗಂಡಿಪೇಟ್ ಅಣೆಕಟ್ಟಿನ ನಿರ್ಮಾಣದಲ್ಲಿ ಇಂಜಿನಿಯರ್ ಕೆಲಸವನ್ನು ನಿರ್ವಹಿಸಿದ್ದು.. ಮುಂತಾದುವುಗಳನ್ನು ವಿವರಿಸುತ್ತಾ ತನ್ನ ಕುಟುಂಬದ ಮೂಲವನ್ನು ಸ್ಪಷ್ಟಪಡಿಸಿದ್ದರು. ಮಾತ್ರವಲ್ಲ, ಉಸಿರಿರುವವರೆಗೆ ತಾನು ಭಾರತೀಯಳಾಗಿರುತ್ತೇನೆ ಎಂಬ ನಿಷ್ಠೆಯನ್ನೂ ವ್ಯಕ್ತಪಡಿಸಿದ್ದರು. ಇದೀಗ ಆ ಚರ್ಚೆಗೆ ಸಾನಿಯಾ ಒಂದೊಳ್ಳೆಯ ತಿರುವನ್ನು ಕೊಟ್ಟಿದ್ದಾರೆ. ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸುವ ಮೂಲಕ ತನ್ನ ದೇಶನಿಷ್ಠೆಯನ್ನು ಅನುಮಾನಿಸಿದವರ ವಿರುದ್ಧ ಪ್ರತಿಭಟನೆ ಸಲ್ಲಿಸಿದ್ದಾರೆ. ಅನಂತಮೂರ್ತಿಯವರಿಗೆ, ಗೋ ಸಾಗಾಟಕ್ಕೆ, ಹೆಣ್ಣು-ಗಂಡು ಮಾತಾಡಿದ್ದಕ್ಕೆಲ್ಲ ಲಕ್ಷ್ಮಣ್‍ರ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಈ ದೇಶದಲ್ಲಿ ವ್ಯಕ್ತಪಡಿಸಿದ ಪ್ರತಿಭಟನೆಗೆ ಹೋಲಿಸಿದರೆ ಸಾನಿಯಾ ಪ್ರತಿಭಟನೆ ಅತ್ಯಂತ ಸ್ವಾಗತಾರ್ಹ ಮತ್ತು ಶ್ಲಾಘನಾರ್ಹವಾದದ್ದು. ಒಂದು ಕಡೆ, ಸಾವನ್ನೂ ಸಂಭ್ರಮಿಸುವ, ಕಾನೂನನ್ನೇ ಉಲ್ಲಂಘಿಸುವ ವಿಕೃತಿ. ಇನ್ನೊಂದು ಕಡೆ, ದೇಶದ ಗೌರವ ಮತ್ತು ಪ್ರತಿಷ್ಠೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುವ ನಡೆ.. ಇವುಗಳಲ್ಲಿ ಯಾವುದು ಮಾದರಿಯಾಗಿ ಗುರುತಿಸಿಕೊಳ್ಳಬೇಕು? ನಿಜವಾಗಿ, ಲಕ್ಷ್ಮಣ್‍ರ ಪಕ್ಷದ ಕಾರ್ಯಕರ್ತರ ಪ್ರತಿಭಟನಾ ಮಾದರಿಯಲ್ಲೇ ಪ್ರತಿಭಟನೆ ಹಮ್ಮಿಕೊಳ್ಳುವುದಕ್ಕೆ ಸಾನಿಯಾರಿಗೂ ಅವಕಾಶ ಇತ್ತು. ಲಕ್ಷ್ಮಣ್‍ರ ಪ್ರತಿಕೃತಿಯನ್ನು ಸುಡಬಹುದಿತ್ತು. ಅವರ ನಿವಾಸದ ಮೇಲೆ ದಾಳಿ ಮಾಡಬಹುದಿತ್ತು. ಅವರ ಮೇಲೆ ಹಲ್ಲೆ ನಡೆಸಬಹುದಿತ್ತು. ಬಿಜೆಪಿಯ ಕಚೇರಿಗೆ ಬೆಂಕಿ ಕೊಡಬಹುದಿತ್ತು. ಕರಾಚಿಯಲ್ಲಿ ಹುಟ್ಟಿದ ಅಡ್ವಾಣಿಯರ ಮೂಲವನ್ನು ಪ್ರಶ್ನಿಸಿ ಮುಜುಗರಕ್ಕೆ ಒಳಪಡಿಸಬಹುದಿತ್ತು. ಆದರೆ, ದೇಶದ ಪ್ರತಿಷ್ಠೆಯನ್ನು ಕುಂದಿಸುವ ಮತ್ತು ಕಾನೂನನ್ನು ಉಲ್ಲಂಘಿಸುವ ಈ ಮಾದರಿಗಿಂತ ದೇಶದ ಗೌರವವನ್ನು ಹೆಚ್ಚಿಸುವ ಭಿನ್ನ ಮಾದರಿಯನ್ನು ಸಾನಿಯಾ ಆಯ್ಕೆ ಮಾಡಿಕೊಂಡರು. ಅದಕ್ಕೆ ಧಾರಾಳ ಬೆವರು ಮತ್ತು ಅಪಾರ ದೇಶನಿಷ್ಠೆಯ ಅಗತ್ಯ ಇತ್ತು. ಇದೀಗ ಆ ಬೆವರು ಮತ್ತು ದೇಶನಿಷ್ಠೆಗೆ ಪಾರಿತೋಷಕ ಲಭಿಸಿದೆ. ಆ ಪಾರಿತೋಷಕವನ್ನು ಅವರು ಈ ದೇಶಕ್ಕೆ ಅರ್ಪಿಸಿದ್ದಾರೆ. ಆ ಮೂಲಕ ಬೆವರು ಮತ್ತು ಶ್ರಮವೇ ಅಂತಿಮವಾಗಿ ಮೇಲುಗೈ ಪಡೆಯುತ್ತದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
 ಈ ದೇಶದಲ್ಲಿ ಮುಸ್ಲಿಮರು ತಮ್ಮ ದೇಶನಿಷ್ಠೆಯನ್ನು ಆಗಾಗ ಸಾಬೀತುಪಡಿಸುತ್ತಾ ಇರಬೇಕಾದ ವಾತಾವರಣವೊಂದನ್ನು ಇಲ್ಲಿನ ಒಂದು ವರ್ಗ ಆಗಾಗ ಸೃಷ್ಟಿಸುತ್ತಾ ಬರುತ್ತಿದೆ. ಬಾಂಬ್ ಸ್ಫೋಟವಾದ ತಕ್ಷಣ ಈ ವರ್ಗ ಮುಸ್ಲಿಮರಿಂದ ದೇಶನಿಷ್ಠೆಯ ಫತ್ವವನ್ನು ಆಗ್ರಹಿಸುತ್ತದೆ. ಈ ದೇಶದ ಯಾವುದೇ ಮೂಲೆಯಲ್ಲಿ ತಲಾಕ್‍ನ ದುರುಪಯೋಗವಾದರೆ, ಮಾವನಿಂದ ಸೊಸೆಯ ಮೇಲೆ ಅತ್ಯಾಚಾರವಾದರೆ, ಶರೀಅತ್‍ನ ಹೆಸರಲ್ಲೋ ಪರ್ದಾದ ಹೆಸರಲ್ಲೋ ಅನ್ಯಾಯ ನಡೆದರೆ.. ಇವೆಲ್ಲಕ್ಕೂ ಇಸ್ಲಾಮ್ ಧರ್ಮವೇ ಕಾರಣ ಎಂಬ ರೀತಿಯಲ್ಲಿ ಈ ವರ್ಗ ವ್ಯಾಖ್ಯಾನಿಸುತ್ತದೆ. ಮುಸ್ಲಿಮರ ಹಿಂದುಳಿಯುವಿಕೆಗೆ ಇವನ್ನು ಪ್ರಮುಖ ಕಾರಣವಾಗಿ ಎತ್ತಿ ತೋರಿಸಲಾಗುತ್ತದೆ. ಮಾತ್ರವಲ್ಲ, ಅಬ್ದುಲ್ ಕಲಾಮ್‍ರನ್ನೋ ಅಝೀಮ್ ಪ್ರೇಮ್‍ಜಿಯನ್ನೋ ಅಥವಾ ನಜ್ಮಾ ಹೆಫ್ತುಲ್ಲಾರನ್ನೋ ತೋರಿಸಿ, ‘ನೀವು ಅವರಂತೆ ಆಗಿ’ ಎಂಬ ಸಲಹೆಯನ್ನೂ ನೀಡುತ್ತದೆ. ಹಾಗಂತ, ಖಾಪ್ ಪಂಚಾಯತ್‍ನ ಆದೇಶಗಳನ್ನು ಇಂಥ ಸಂದರ್ಭಗಳಲ್ಲಿ ಈ ಮಂದಿ ಉಲ್ಲೇಖಿಸುವುದೇ ಇಲ್ಲ. ಅದರ ತಪ್ಪುಗಳನ್ನು ಹಿಂದೂ ಧರ್ಮದ ದೌರ್ಬಲ್ಯಗಳಾಗಿ ಕಾಣುವುದೂ ಇಲ್ಲ. ನಿಜವಾಗಿ, ಖಾಪ್ ಪಂಚಾಯತೋ ಅಥವಾ ಫತ್ವಾಗಳನ್ನು ಹೊರಡಿಸುವ ಹಿರಿಯರ ಸಭೆಗಳೋ ಯಾವುದೇ ಧರ್ಮದ ಪ್ರತಿನಿಧಿಯಾಗಲು ಸಾಧ್ಯವೇ ಇಲ್ಲ. ಸ್ಥಳೀಯ ಸಂಪ್ರದಾಯ, ಆಚರಣೆಗಳನ್ನು ಎದುರಿಟ್ಟುಕೊಂಡು ಅವು ಆದೇಶಗಳನ್ನು ಹೊರಡಿಸುತ್ತವೆಯೇ ಹೊರತು ಇಸ್ಲಾಮ್‍ನದ್ದೋ ಹಿಂದೂ ಧರ್ಮದ್ದೋ ಮೂಲ ಗ್ರಂಥಗಳನ್ನು ನಿಕಷಕ್ಕೆ ಒಡ್ಡಿಯಲ್ಲ. ಅಷ್ಟಕ್ಕೂ, ಇದು ಈ ವರ್ಗಕ್ಕೆ ಖಂಡಿತ ಗೊತ್ತು. ಈ ಹಿಂದೆ ಸಾನಿಯಾಳ ಉಡುಪಿನ ಬಗ್ಗೆ ತಕರಾರೆತ್ತಿದ ವಿದ್ವಾಂಸರೊಬ್ಬರನ್ನು ಹೀನಾಯವಾಗಿ ನಿಂದಿಸಿದ ಮಂದಿಯೇ ಆಕೆಯ ದೇಶನಿಷ್ಠೆಯನ್ನು ಇವತ್ತು ಪ್ರಶ್ನಾರ್ಹಗೊಳಿಸಿದ್ದು. ಹಾಗಂತ, ಅಂದು ಶೋಯೆಬ್ ಮಲಿಕ್‍ನನ್ನು ಸಾನಿಯಾ ಮದುವೆ ಆಗಿರಲಿಲ್ಲ ಎಂದು ಈ ವರ್ಗ ಆ ಘಟನೆಯನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಈ ವರ್ಗದ ಈ ವರೆಗಿನ ನಿಲುವುಗಳನ್ನು ಅವಲೋಕಿಸಿದರೆ ಅಂಥ ಸಮರ್ಥನೆ ಅಪ್ಪಟ ಸುಳ್ಳೆಂಬುದು ಸ್ಪಷ್ಟವಾಗುತ್ತದೆ. ಅವತ್ತು ಮುಸ್ಲಿಮರನ್ನು ನಿಂದಿಸುವುದಕ್ಕೆ ವಿದ್ವಾಂಸರನ್ನು ಬಳಸಿಕೊಂಡಿದ್ದರು. ಈಗ ಶೋಯೆಬ್‍ನನ್ನು ಬಳಸಿಕೊಂಡಿದ್ದಾರೆ. ಎರಡರಲ್ಲೂ ಸಮಯ ಸಾಧಕತನ ಇದೆಯೇ ಹೊರತು ಪ್ರಾಮಾಣಿಕತೆ ಕಾಣಿಸುತ್ತಿಲ್ಲ.
 ಈ ದೇಶದಲ್ಲಿ ಸಚಿನ್ ತೆಂಡುಲ್ಕರ್, ಮಹೇಶ್ ಭೂಪತಿ, ಸೈನಾ ನೆಹ್ವಾಲ್, ಜ್ವಾಲಾ ಗುಟ್ಟಾರಿಗಿರುವ ಸ್ವಾತಂತ್ರ್ಯ ಸಾನಿಯಾ, ಇರ್ಫಾನ್ ಪಠಾಣ್, ಪರ್ವೇಝ್ ರಸೂಲ್‍ಗೆ ಇಲ್ಲ. ಸಚಿನ್ ತೆಂಡುಲ್ಕರ್ ತನ್ನ ಶತಕವನ್ನು ತನ್ನ ತಂದೆಗೋ, ಪತ್ನಿಗೋ ಅರ್ಪಿಸುವಂತೆ ಪರ್ವೇಝ್ ರಸೂಲ್ ಅರ್ಪಿಸುವಂತಿಲ್ಲ. ಆತ ದೇಶಕ್ಕೇ ಅರ್ಪಿಸಬೇಕು. ಡೇವಿಸ್ ಕಪ್‍ನಲ್ಲಿ ಮಹೇಶ್ ಭೂಪತಿ ಆಡದೇ ಇರುವುದನ್ನೂ ಸಾನಿಯಾ ಆಡದಿರುವುದನ್ನೂ ಒಂದೇ ತಟ್ಟೆಯಲ್ಲಿ ಇಟ್ಟು ತೂಗಲಾಗುತ್ತಿಲ್ಲ. ಒಂದನ್ನು ವೈಯಕ್ತಿಕ ಕಾರಣಗಳ ಮೂಲಕ ಸಮರ್ಥಿಸಲಾದರೆ ಇನ್ನೊಂದನ್ನು ದೇಶನಿಷ್ಠೆಯ ನೆಪದಲ್ಲಿ ಟೀಕಿಸಲಾಗುತ್ತದೆ. ಬಹುಶಃ ಈ ಸಮಸ್ಯೆ ಮೊನ್ನೆ ಸಾನಿಯಾಳನ್ನೂ ಕಾಡಿರಬೇಕು. ಮೂರು ತಿಂಗಳ ಹಿಂದೆ ಆಕೆಯ ದೇಶನಿಷ್ಟೆಯನ್ನು ಪ್ರಶ್ನಿಸಲಾದ ಘಟನೆ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ಸ್ಮರಣೆಗೆ ಬಂದಿರಬೇಕು. ಆದ್ದರಿಂದಲೇ, ಬ್ರೂನೋ ಸೋರ್ಸ್‍ರ ಜೊತೆಗೂಡಿ ಡಬಲ್ಸ್ ಪ್ರಶಸ್ತಿ ಗೆದ್ದ ತಕ್ಷಣ ಆಕೆ ಪ್ರಶಸ್ತಿಯನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಒಂದು ವೇಳೆ, ಶತಕಗಳನ್ನು ತಂತಮ್ಮ ಪತ್ನಿಯರಿಗೆ ಅರ್ಪಿಸಿದ ಧೋನಿ, ಸಚಿನ್‍ರಂತೆ ಸಾನಿಯಾ ತನ್ನ ಪ್ರಶಸ್ತಿಯನ್ನು ಶೋಯೆಬ್ ಮಲಿಕ್‍ಗೆ ಅರ್ಪಿಸಿರುತ್ತಿದ್ದರೆ ಏನಾಗುತ್ತಿತ್ತು? ದೇಶನಿಷ್ಠೆಯ ಚರ್ಚೆ ಹೇಗೆಲ್ಲ ನಡೆಯುತ್ತಿತ್ತು?
   ಏನೇ ಆಗಲಿ, ಪ್ರತಿಭಟನೆಯ ಸುಂದರ ಮಾದರಿಯೊಂದನ್ನು ಲಕ್ಷ್ಮಣ್‍ ಮತ್ತು ಅವರ ಬೆಂಬಲಿಗರಿಗೆ ಸಾನಿಯಾ ಮಿರ್ಝಾ ತೋರಿಸಿಕೊಟ್ಟಿದ್ದಾರೆ. ಇಂಥ ಸಕಾರಾತ್ಮಕ ಪ್ರತಿಭಟನೆಗಳು ಈ ದೇಶದಲ್ಲಿ ಹೆಚ್ಚೆಚ್ಚು ವ್ಯಕ್ತವಾಗುತ್ತಿರಲಿ ಮತ್ತು ಮುಸ್ಲಿಮರ ದೇಶನಿಷ್ಠೆಯನ್ನು ಪ್ರಶ್ನಾರ್ಹಗೊಳಿಸುವವರ ಪ್ರಯತ್ನಗಳು ಮತ್ತೆ ಮತ್ತೆ ಸೋಲುತ್ತಲೇ ಇರಲಿ ಎಂದೇ ಹಾರೈಸೋಣ.

Wednesday, 3 September 2014

ಬ್ರೌನ್, ಕಿಂಗ್, ಮಾರ್ಟಿನ್‍ರ ನಡುವೆ ಪ್ರವಾದಿ ಮುಹಮ್ಮದ್

   ಮನುಷ್ಯ ಸಮಾನತೆಯ ಕುರಿತಂತೆ ಈ ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಚರ್ಚೆಗಳು ನಡೆದಿವೆ. ಚರ್ಮ, ಜೀವನ ಕ್ರಮ, ಆಹಾರ ಪದ್ಧತಿ, ಭಾಷೆ, ಉಡುಗೆ-ತೊಡುಗೆ, ಸಂಸ್ಕ್ರಿತಿ.. ಮುಂತಾದುವುಗಳು ಮನುಷ್ಯರನ್ನು ಶ್ರೇಷ್ಠ ಮತ್ತು ಕನಿಷ್ಠಗೊಳಿಸುವುದಕ್ಕಿರುವ ಮಾನದಂಡಗಳಲ್ಲ ಎಂಬ ಖಚಿತ ತೀರ್ಮಾನದೊಂದಿಗೆ ಇಂಥ ಚರ್ಚೆಗಳೆಲ್ಲ ಕೊನೆಗೊಳ್ಳುತ್ತಲೂ ಇವೆ. 7ನೇ ಶತಮಾನದಲ್ಲಿ ಪವಿತ್ರ ಕುರ್‍ಆನ್ ಈ ಸಂದೇಶವನ್ನು ಬಲವಾಗಿ (49:13) ಪ್ರತಿಪಾದಿಸಿತು. ಆ ಬಳಿಕ ಮಾರ್ಟಿನ್ ಲೂಥರ್ ಕಿಂಗ್, ಮಂಡೇಲಾ, ಗಾಂಧೀಜಿ-ಅಂಬೇಡ್ಕರ್ ಮುಂತಾದವರು ಈ ಸಮಾನತೆಯ ಜಾರಿಗಾಗಿ ಆಗ್ರಹಿಸಿದರು, ಪ್ರತಿಭಟಿಸಿದರು. ಆದರೆ ಈ ಪ್ರತಿಭಟನೆಗಳು ಒಂದು ಹಂತದ ವರೆಗೆ ಪರಿಣಾಮಕಾರಿಯಾಗಿದ್ದರೂ ನಿರೀಕ್ಷಿತ ಯಶಸ್ಸು ಪಡೆಯುತ್ತಿಲ್ಲ. ಟಿ.ವಿ. ಚಾನೆಲ್‍ಗಳಲ್ಲಿ ನಡೆಸಲಾಗುವ ಚರ್ಚೆಗಳು ಚಾನೆಲ್‍ಗಳ ಟಿ.ಆರ್.ಪಿ.ಯನ್ನು ಹೆಚ್ಚಿಸುವುದಕ್ಕೆ ನೆರವಾಗುತ್ತಿವೆಯೇ ಹೊರತು ಜನರಲ್ಲಿ ಮಾನಸಿಕ ಬದಲಾವಣೆ ತರುವಲ್ಲಿ ವೈಫಲ್ಯ ಕಾಣುತ್ತಿವೆ. ರಾಜ್ಯದ ಕೋಲಾರದಿಂದ ಹಿಡಿದು ಅಮೇರಿಕದ ಫರ್ಗ್ಯುಸನ್ ನಗರದ ವರೆಗೆ ಈ ವೈಫಲ್ಯಕ್ಕೆ ಪುರಾವೆಗಳು ಮತ್ತೆ ಮತ್ತೆ ದೊರಕುತ್ತಲೂ ಇವೆ.
 ಕಳೆದ ತಿಂಗಳ ಆಗಸ್ಟ್ 9ರಂದು ಅಮೇರಿಕದ ಫರ್ಗ್ಯುಸನ್ ನಗರದಲ್ಲಿ ಮೈಕೆಲ್ ಬ್ರೌನ್ ಎಂಬ ಕರಿಯ ಯುವಕನನ್ನು ಡ್ಯಾರೆನ್ ವಿಲ್ಸನ್ ಅನ್ನುವ ಬಿಳಿಯ ಪೊಲೀಸ್ ಪೇದೆ ಗುಂಡಿಕ್ಕಿ ಕೊಂದ. ತನ್ನ ಗೆಳೆಯನೊಂದಿಗೆ ಬ್ರೌನ್ ನಡೆದು ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ಮದ್ಯವನ್ನು ಕದ್ದ ಅನುಮಾನವೊಂದು ಬ್ರೌನ್‍ನ ಮೇಲೆ ಇತ್ತಾದರೂ ಅದು ಇನ್ನೂ ಖಚಿತಗೊಂಡಿರಲಿಲ್ಲ. ಅಂಗಡಿಯ ಸಿ.ಸಿ. ಕ್ಯಾಮರಾದಲ್ಲಿ ಗೋಚರಿಸುವ ವ್ಯಕ್ತಿ ಬ್ರೌನ್ ಎಂಬುದಾಗಿ ಹೇಳುವುದಕ್ಕೆ ಸೂಕ್ತ ಪುರಾವೆಯೂ ಸಿಕ್ಕಿರಲಿಲ್ಲ. ಅಲ್ಲದೇ ಗುಂಡಿಕ್ಕಿದ ಪೊಲೀಸ್ ಪೇದೆಗೆ ಈ ಕಳ್ಳತನದ ಬಗ್ಗೆ ಅರಿವಿತ್ತೇ ಎಂಬುದು ಇನ್ನೂ ವ್ಯಕ್ತಗೊಂಡಿಲ್ಲ. ಗಂಭೀರ ಮಟ್ಟದ ಮಾತಿನ ಚಕಮಕಿಯೂ ನಡೆಯದೇ ಅಪ್ರಚೋದಿತವಾಗಿ ಪೊಲೀಸ್ ಪೇದೆ ಗುಂಡಿಕ್ಕಿದ್ದಾನೆ ಎಂದು ಆರೋಪಿಸಿ ಫರ್ಗ್ಯುಸನ್ ನಗರದ ಜನರು ಒಂದು ವಾರಗಳ ಕಾಲ ಪ್ರತಿಭಟಿಸಿದರು. ಇಡೀ ನಗರದ ಜನಜೀವನವೇ ಅಸ್ತವ್ಯಸ್ತವಾಗುವಷ್ಟು ಮತ್ತು ಸರಕಾರವು ಉನ್ನತ ನಾಯಕರನ್ನು ಪ್ರದೇಶಕ್ಕೆ ಕಳುಹಿಸಿಕೊಟ್ಟು ತನಿಖೆಗೆ ಆದೇಶಿಸುವಷ್ಟು ಪ್ರಕರಣ ಗಂಭೀರ ರೂಪವನ್ನು ಪಡೆಯಿತು. ನಿಜವಾಗಿ, ಕರಿಯರೇ ಹೆಚ್ಚಿರುವ ಫರ್ಗ್ಯುಸನ್ ನಗರದ ಪಂಚಾಯತ್‍ನಲ್ಲಿರುವ ಹೆಚ್ಚಿನ ಸದಸ್ಯರು ಬಿಳಿಯರೇ. ನಗರದ ಪೊಲೀಸ್ ಇಲಾಖೆಯಲ್ಲಿರುವ 50 ಮಂದಿಯಲ್ಲಿ ಮೂವರು ಮಾತ್ರ ಕರಿಯರು. ಅಷ್ಟಕ್ಕೂ, ಬಿಳಿಯರ ಗುಂಡಿಗೆ ಬಲಿಯಾದವರಲ್ಲಿ ಬ್ರೌನ್ ಒಂಟಿಯೇನೂ ಅಲ್ಲ. 1991ರಲ್ಲಿ ಲಾಸ್ ಏಂಜಲ್ಸ್ ನಲ್ಲಿ ರಾಡ್ನಿ ಕಿಂಗ್ ಎಂಬವರು ಮತ್ತು 2012ರಲ್ಲಿ ಟ್ರೈವನ್ ಮಾರ್ಟಿನ್ ಎಂಬವರು ಬಿಳಿಯ ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಆ ಸಂದರ್ಭದಲ್ಲಿ ವರ್ಣ ತಾರತಮ್ಯದ ಚರ್ಚೆ ತೀವ್ರ ಸ್ವರೂಪವನ್ನು ಪಡೆದಿತ್ತು. ರಾಡ್ನಿ ಕಿಂಗ್‍ರಿಗೆ ಗುಂಡಿಕ್ಕಿದ ನಾಲ್ವರು ಬಿಳಿ ಪೊಲೀಸರನ್ನು ನ್ಯಾಯಾಲಯವು 1992ರಲ್ಲಿ ಬಿಡುಗಡೆಗೊಳಿಸಿದಾಗ ತೀವ್ರ ಪ್ರತಿಭಟನೆಗಳೆದ್ದಿದ್ದುವು ಮತ್ತು ಅದರಲ್ಲಿ 50ರಷ್ಟು ಮಂದಿ ಪ್ರಾಣ ಕಳಕೊಂಡಿದ್ದರು.
 ಬಹುಶಃ ವರ್ಣ ಮತ್ತು ಜನಾಂಗ ತಾರತಮ್ಯದ ಸುತ್ತ ಅವಲೋಕನ ನಡೆಸುತ್ತಾ ಹೋದರೆ ಅಮೇರಿಕ, ಬ್ರಿಟನ್, ಜರ್ಮನಿ, ಇಸ್ರೇಲ್, ಫ್ರಾನ್ಸ್ ಮುಂತಾದ ಮುಂದುವರಿದ ರಾಷ್ಟ್ರಗಳಿಂದ ಪುಟಗಟ್ಟಲೆ ಮಾಹಿತಿಗಳು ಸಿಗುತ್ತಲೇ ಹೋಗುತ್ತವೆ. ಮಾನವ ಹಕ್ಕುಗಳ ಕುರಿತಂತೆ ದೊಡ್ಡ ದನಿಯಲ್ಲಿ ಮಾತಾಡುವ ರಾಷ್ಟ್ರಗಳಿವು. ಉಗ್ರವಾದ, ಜನಾಂಗವಾದ, ಮಹಿಳಾ ದೌರ್ಜನ್ಯಗಳನ್ನು ಎತ್ತಿಕೊಂಡು ಅತ್ಯಂತ ವಿಸ್ತೃತ ನೆಲೆಯಲ್ಲಿ ಇವು ಚರ್ಚಿಸುತ್ತವೆ. ಆದರೆ ತಂತಮ್ಮ ರಾಷ್ಟ್ರಗಳಲ್ಲಿರುವ ವರ್ಣ ಭೇದ ಮಾನಸಿಕತೆಯನ್ನು ತೊಡೆದು ಹಾಕಲು ಇವುಗಳಿಗೆ ಸಾಧ್ಯವಾಗುತ್ತಿಲ್ಲ. ಹಾಗಂತ, ಇದು ಕೇವಲ ಅಮೇರಿಕದ್ದೋ ಫ್ರಾನ್ಸ್‍ನದ್ದೋ ಸಮಸ್ಯೆಯಲ್ಲ. ಭಾರತವೂ ಇದೇ ಸಮಸ್ಯೆಯನ್ನು ಎದುರಿಸುತ್ತಿದೆ. ಅಸ್ಪೃಶ್ಯ ವಿರೋಧಿ ಕಾನೂನನ್ನು ಸಂವಿಧಾನದಲ್ಲಿ ಅಳವಡಿಸಿರುವುದರ ಹೊರತಾಗಿಯೂ ಅಸ್ಪೃಶ್ಯತೆ ಎಷ್ಟು ಪರಿಣಾಮಕಾರಿಯಾಗಿ ಇಲ್ಲಿ ಚಲಾವಣೆಯಲ್ಲಿದೆಯೆಂದರೆ, ದಲಿತರ ಕ್ಷೌರ ಮಾಡಲೇಬೇಕಾದ ಅನಿವಾರ್ಯತೆಯಿಂದ ಪಾರಾಗುವುದಕ್ಕಾಗಿ ಕ್ಷೌರ ವೃತ್ತಿಯನ್ನೇ ಕೈ ಬಿಡುವಷ್ಟು (ಕೋಲಾರದಲ್ಲಿ). ದಲಿತರು ಮತ್ತು ದಲಿತೇತರರ ನಡುವೆ ಮದುವೆ ಅಸಾಧ್ಯ ಅನ್ನುವಷ್ಟು. ಮರ್ಯಾದೆಗೇಡು ಹತ್ಯೆ ನಡೆಯುವಷ್ಟು. ಒಂದು ವೇಳೆ ಮೈಕೆಲ್ ಬ್ರೌನ್‍ನ ಹತ್ಯೆಯನ್ನು ಪ್ರತಿಭಟಿಸಿ ಅಮೇರಿಕದಲ್ಲಿ ಪ್ರತಿಭಟನೆ ನಡೆದಂತೆ ಅಸ್ಪೃಶ್ಯತೆಯನ್ನು ಪ್ರತಿಭಟಿಸಿ ಇಲ್ಲೂ ಪ್ರತಿಭಟನೆ ನಡೆಯುವುದಾದರೆ ಪ್ರತಿಭಟನೆ ಇಲ್ಲದ ದಿನಗಳೇ ಇರುವುದಕ್ಕೆ ಸಾಧ್ಯವಿಲ್ಲವೇನೋ.
   ಸಮಾನತೆ ಎಂಬುದು ಟಿ.ವಿ. ಚಾನೆಲ್‍ಗಳಲ್ಲಿ ಮತ್ತು ಪತ್ರಿಕೆಗಳ ಕಾಲಂಗಳಲ್ಲಿ ಚರ್ಚೆಗೊಳಪಡಿಸಿ ಜಾರಿಗೆ ತರಬಹುದಾದಷ್ಟು ಸಣ್ಣ ಸಂಗತಿಯಲ್ಲ. ಅದೊಂದು ಮಾನಸಿಕತೆ. ಕರಿಯರು ಅಥವಾ ದಲಿತರನ್ನು ಮುಟ್ಟುವುದು ಮತ್ತು ಅವರೊಂದಿಗೆ ಬೆರೆಯುವುದನ್ನು ಅವಮಾನಕರ ಎಂದು ನಂಬುವ ಮನುಷ್ಯರನ್ನು ಬರೇ ಚರ್ಚೆಗಳಿಂದ ಸರಿಪಡಿಸಲು ಸಾಧ್ಯವಿಲ್ಲ. ಈ ಚರ್ಚೆಗಳಾಚೆಗೆ ಒಂದು ವಾಸ್ತವವಿದೆ. ಮನುಷ್ಯರಲ್ಲಿ ಕೆಲವರು ನೀಚರು ಮತ್ತು ಕೆಳದರ್ಜೆಯವರಾಗಿ ವಿಭಜಿಸಲ್ಪಟ್ಟಿರುವುದಕ್ಕೆ ಧಾರ್ಮಿಕವಾದ ಕಾರಣಗಳಿವೆ. ಧರ್ಮ ಇದನ್ನು ಅನುಮೋದಿಸುತ್ತದೆ  ಎಂಬ ಬಲವಾದ ನಂಬಿಕೆಯಿಂದಲೇ ಈ ದೇಶದಲ್ಲಿ ಇದು ಆಚರಣೆಯಲ್ಲಿದೆ. ಇಲ್ಲದೇ ಹೋಗಿದ್ದರೆ, ಸಂವಿಧಾನ ರಚನೆಯಾಗಿ ಸುಮಾರು ಏಳು ದಶಕಗಳು ಕಳೆದಿದ್ದು, ಹಳೆ ತಲೆಮಾರಿನ ಸ್ಥಾನದಲ್ಲಿ ಹೊಸ ತಲೆಮಾರು ಜೀವಿಸುತ್ತಿರುವುದರ ಹೊರತಾಗಿಯೂ ಅಸ್ಪೃಶ್ಯತೆ ಈ ಮಟ್ಟದಲ್ಲಿ ಚಾಲ್ತಿಯಲ್ಲಿರುವುದಕ್ಕೆ ಸಾಧ್ಯವೇ ಇರಲಿಲ್ಲ. ಸಂವಿಧಾನಗಳು ಏನೇ ಹೇಳಲಿ, ಅಸ್ಪೃಶ್ಯತೆಯನ್ನು ಧರ್ಮಬದ್ಧ ಎಂದು ನಂಬುವ ಮನೆ ಮತ್ತು ಮನಗಳು ಈ ಜಗತ್ತಿನಾದ್ಯಂತ ಧಾರಾಳ ಇವೆ. ಈ ನಂಬುಗೆಯನ್ನು ಸಮರ್ಥಿಸುವಂತೆ ಅನೇಕಾರು ಧಾರ್ಮಿಕ ಕೇಂದ್ರಗಳು ನಡಕೊಳ್ಳುತ್ತಲೂ ಇವೆ. ಒಂದು ಕಡೆ ಅಸ್ಪೃಶ್ಯತೆಯನ್ನು ಶಿಕ್ಷಾರ್ಹ ಎಂದು ಸಾರುವ ಸಂವಿಧಾನ, ಇನ್ನೊಂದು ಕಡೆ ಅದನ್ನು ಬೆಂಬಲಿಸುವ ಧರ್ಮಸೂಕ್ತಗಳು ಹಾಗೂ ಆಚರಣೆಗಳು.. ಇವುಗಳ ನಡುವೆ ಸಮಾಜದಲ್ಲಿ ಇವತ್ತು ಗುಪ್ತ ಸಂಘರ್ಷವೊಂದು ನಡೆಯುತ್ತಿದೆ. ಕೆಲವೊಮ್ಮೆ ಇದು ಬಹಿರಂಗಕ್ಕೆ ಬರುತ್ತಿದೆಯಷ್ಟೇ. ಆದ್ದರಿಂದ, ಮೊಟ್ಟಮೊದಲು ಈ ಮನಸ್ಥಿತಿಗೆ ಮದ್ದರೆಯಬೇಕಾಗಿದೆ. ಕರಿಯ, ಬಿಳಿಯ, ಜಾಟ, ದಲಿತ, ಬ್ರಾಹ್ಮಣ, ಕೊರಗ, ರಜಪೂತ, ಆದಿವಾಸಿ... ಎಲ್ಲರೂ ಒಂದೇ ತಂದೆ-ತಾಯಿಯ ಮತ್ತು ಓರ್ವನೇ ದೇವನ ಸೃಷ್ಟಿಗಳು ಎಂಬ ಸತ್ಯವನ್ನು ಧರ್ಮದ ಮೂಲಭೂತ ಸತ್ಯವಾಗಿ ಒಪ್ಪಿಕೊಳ್ಳುವಂತೆ ಮಾಡಬೇಕಾಗಿದೆ. ಧಾರ್ಮಿಕ ಸಂಸ್ಥೆಗಳು ಈ ಕುರಿತಂತೆ ತಮ್ಮ ಮಡಿವಂತಿಕೆಯನ್ನು ಕೈಬಿಡಬೇಕಾಗಿದೆ. ಪ್ರವಾದಿ ಮುಹಮ್ಮದ್‍ರು(ಸ) 7ನೇ ಶತಮಾನದಲ್ಲಿ ಇದೇ ಸಮಸ್ಯೆಯನ್ನು ಎದುರಿಸಿದ್ದರು. ನೀಗ್ರೋಗಳನ್ನು ಮನುಷ್ಯರೆಂದೇ ಮತ್ತು ಮುಟ್ಟಿಸಿಕೊಳ್ಳಲು ಅರ್ಹರೆಂದೇ ಒಪ್ಪಿಕೊಳ್ಳದ ಜನರನ್ನು ಪರಸ್ಪರ ಆಲಿಂಗನದಲ್ಲಿ, ಮದುವೆ ಬಂಧನದಲ್ಲಿ, ಭುಜಕ್ಕೆ ಭುಜ ತಾಗಿಸಿ ಪ್ರಾರ್ಥನೆಗೆ ನಿಲ್ಲುವಲ್ಲಿ ಮತ್ತು ಕರ್ಮಗಳೇ ಶ್ರೇಷ್ಠತೆಗೆ ಮಾನದಂಡ ಎಂಬ ಮೌಲ್ಯಕ್ಕೆ ಅಂಟಿ ಜೀವನ ಸಾಗಿಸುವಲ್ಲಿಯ ವರೆಗೆ ಬದಲಾಯಿಸಿದ್ದು ಪವಿತ್ರ ಕುರ್‍ಆನ್‍ನ ಸಮಾನತೆಯ ಸಂದೇಶವಾಗಿತ್ತು. ಪ್ರವಾದಿಯವರು(ಸ) ಅದನ್ನು ಸ್ವಯಂ ಬದುಕಿನಲ್ಲಿ ಅಳವಡಿಸುವ ಮೂಲಕ ಸಮಾಜಕ್ಕೆ ಮಾದರಿಯಾದರು. ಮಾತ್ರವಲ್ಲ, ಒಂದು ಸಮಾನತೆಯ ಸಮಾಜವು ಈ 21ನೇ ಶತಮಾನದಲ್ಲೂ ಅಸ್ತಿತ್ವದಲ್ಲಿ ಉಳಿಯಬಲ್ಲಷ್ಟು ಆ ಮಾದರಿಯನ್ನು ಧಾರ್ಮಿಕ ಅಗತ್ಯವಾಗಿ ಬಿತ್ತಿ ಹೋದರು. ಆದ್ದರಿಂದ ಬ್ರೌನ್, ಕಿಂಗ್, ಮಾರ್ಟಿನ್ ಮತ್ತು ಈ ದೇಶದ ಇಂಥ ಅಸಂಖ್ಯ ಅಸ್ಪೃಶ್ಯರನ್ನು ಬಲಿ ಪಡೆದ ಸಮಾಜಕ್ಕೆ ಈ ಮಾದರಿಯ ಅನುಭವ ಆಗಬೇಕಾಗಿದೆ. ನಮ್ಮ ನಡುವೆ ನಡೆಯುವ ಚರ್ಚೆಗಳು ಪ್ರವಾದಿ ಮುಹಮ್ಮದ್‍ರ(ಸ) ಮಾದರಿಯನ್ನು ಎತ್ತಿಕೊಳ್ಳುವಷ್ಟು ವಿಶಾಲವಾಗಬೇಕಾಗಿದೆ.