Wednesday 3 September 2014

ಬ್ರೌನ್, ಕಿಂಗ್, ಮಾರ್ಟಿನ್‍ರ ನಡುವೆ ಪ್ರವಾದಿ ಮುಹಮ್ಮದ್

   ಮನುಷ್ಯ ಸಮಾನತೆಯ ಕುರಿತಂತೆ ಈ ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಚರ್ಚೆಗಳು ನಡೆದಿವೆ. ಚರ್ಮ, ಜೀವನ ಕ್ರಮ, ಆಹಾರ ಪದ್ಧತಿ, ಭಾಷೆ, ಉಡುಗೆ-ತೊಡುಗೆ, ಸಂಸ್ಕ್ರಿತಿ.. ಮುಂತಾದುವುಗಳು ಮನುಷ್ಯರನ್ನು ಶ್ರೇಷ್ಠ ಮತ್ತು ಕನಿಷ್ಠಗೊಳಿಸುವುದಕ್ಕಿರುವ ಮಾನದಂಡಗಳಲ್ಲ ಎಂಬ ಖಚಿತ ತೀರ್ಮಾನದೊಂದಿಗೆ ಇಂಥ ಚರ್ಚೆಗಳೆಲ್ಲ ಕೊನೆಗೊಳ್ಳುತ್ತಲೂ ಇವೆ. 7ನೇ ಶತಮಾನದಲ್ಲಿ ಪವಿತ್ರ ಕುರ್‍ಆನ್ ಈ ಸಂದೇಶವನ್ನು ಬಲವಾಗಿ (49:13) ಪ್ರತಿಪಾದಿಸಿತು. ಆ ಬಳಿಕ ಮಾರ್ಟಿನ್ ಲೂಥರ್ ಕಿಂಗ್, ಮಂಡೇಲಾ, ಗಾಂಧೀಜಿ-ಅಂಬೇಡ್ಕರ್ ಮುಂತಾದವರು ಈ ಸಮಾನತೆಯ ಜಾರಿಗಾಗಿ ಆಗ್ರಹಿಸಿದರು, ಪ್ರತಿಭಟಿಸಿದರು. ಆದರೆ ಈ ಪ್ರತಿಭಟನೆಗಳು ಒಂದು ಹಂತದ ವರೆಗೆ ಪರಿಣಾಮಕಾರಿಯಾಗಿದ್ದರೂ ನಿರೀಕ್ಷಿತ ಯಶಸ್ಸು ಪಡೆಯುತ್ತಿಲ್ಲ. ಟಿ.ವಿ. ಚಾನೆಲ್‍ಗಳಲ್ಲಿ ನಡೆಸಲಾಗುವ ಚರ್ಚೆಗಳು ಚಾನೆಲ್‍ಗಳ ಟಿ.ಆರ್.ಪಿ.ಯನ್ನು ಹೆಚ್ಚಿಸುವುದಕ್ಕೆ ನೆರವಾಗುತ್ತಿವೆಯೇ ಹೊರತು ಜನರಲ್ಲಿ ಮಾನಸಿಕ ಬದಲಾವಣೆ ತರುವಲ್ಲಿ ವೈಫಲ್ಯ ಕಾಣುತ್ತಿವೆ. ರಾಜ್ಯದ ಕೋಲಾರದಿಂದ ಹಿಡಿದು ಅಮೇರಿಕದ ಫರ್ಗ್ಯುಸನ್ ನಗರದ ವರೆಗೆ ಈ ವೈಫಲ್ಯಕ್ಕೆ ಪುರಾವೆಗಳು ಮತ್ತೆ ಮತ್ತೆ ದೊರಕುತ್ತಲೂ ಇವೆ.
 ಕಳೆದ ತಿಂಗಳ ಆಗಸ್ಟ್ 9ರಂದು ಅಮೇರಿಕದ ಫರ್ಗ್ಯುಸನ್ ನಗರದಲ್ಲಿ ಮೈಕೆಲ್ ಬ್ರೌನ್ ಎಂಬ ಕರಿಯ ಯುವಕನನ್ನು ಡ್ಯಾರೆನ್ ವಿಲ್ಸನ್ ಅನ್ನುವ ಬಿಳಿಯ ಪೊಲೀಸ್ ಪೇದೆ ಗುಂಡಿಕ್ಕಿ ಕೊಂದ. ತನ್ನ ಗೆಳೆಯನೊಂದಿಗೆ ಬ್ರೌನ್ ನಡೆದು ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ಮದ್ಯವನ್ನು ಕದ್ದ ಅನುಮಾನವೊಂದು ಬ್ರೌನ್‍ನ ಮೇಲೆ ಇತ್ತಾದರೂ ಅದು ಇನ್ನೂ ಖಚಿತಗೊಂಡಿರಲಿಲ್ಲ. ಅಂಗಡಿಯ ಸಿ.ಸಿ. ಕ್ಯಾಮರಾದಲ್ಲಿ ಗೋಚರಿಸುವ ವ್ಯಕ್ತಿ ಬ್ರೌನ್ ಎಂಬುದಾಗಿ ಹೇಳುವುದಕ್ಕೆ ಸೂಕ್ತ ಪುರಾವೆಯೂ ಸಿಕ್ಕಿರಲಿಲ್ಲ. ಅಲ್ಲದೇ ಗುಂಡಿಕ್ಕಿದ ಪೊಲೀಸ್ ಪೇದೆಗೆ ಈ ಕಳ್ಳತನದ ಬಗ್ಗೆ ಅರಿವಿತ್ತೇ ಎಂಬುದು ಇನ್ನೂ ವ್ಯಕ್ತಗೊಂಡಿಲ್ಲ. ಗಂಭೀರ ಮಟ್ಟದ ಮಾತಿನ ಚಕಮಕಿಯೂ ನಡೆಯದೇ ಅಪ್ರಚೋದಿತವಾಗಿ ಪೊಲೀಸ್ ಪೇದೆ ಗುಂಡಿಕ್ಕಿದ್ದಾನೆ ಎಂದು ಆರೋಪಿಸಿ ಫರ್ಗ್ಯುಸನ್ ನಗರದ ಜನರು ಒಂದು ವಾರಗಳ ಕಾಲ ಪ್ರತಿಭಟಿಸಿದರು. ಇಡೀ ನಗರದ ಜನಜೀವನವೇ ಅಸ್ತವ್ಯಸ್ತವಾಗುವಷ್ಟು ಮತ್ತು ಸರಕಾರವು ಉನ್ನತ ನಾಯಕರನ್ನು ಪ್ರದೇಶಕ್ಕೆ ಕಳುಹಿಸಿಕೊಟ್ಟು ತನಿಖೆಗೆ ಆದೇಶಿಸುವಷ್ಟು ಪ್ರಕರಣ ಗಂಭೀರ ರೂಪವನ್ನು ಪಡೆಯಿತು. ನಿಜವಾಗಿ, ಕರಿಯರೇ ಹೆಚ್ಚಿರುವ ಫರ್ಗ್ಯುಸನ್ ನಗರದ ಪಂಚಾಯತ್‍ನಲ್ಲಿರುವ ಹೆಚ್ಚಿನ ಸದಸ್ಯರು ಬಿಳಿಯರೇ. ನಗರದ ಪೊಲೀಸ್ ಇಲಾಖೆಯಲ್ಲಿರುವ 50 ಮಂದಿಯಲ್ಲಿ ಮೂವರು ಮಾತ್ರ ಕರಿಯರು. ಅಷ್ಟಕ್ಕೂ, ಬಿಳಿಯರ ಗುಂಡಿಗೆ ಬಲಿಯಾದವರಲ್ಲಿ ಬ್ರೌನ್ ಒಂಟಿಯೇನೂ ಅಲ್ಲ. 1991ರಲ್ಲಿ ಲಾಸ್ ಏಂಜಲ್ಸ್ ನಲ್ಲಿ ರಾಡ್ನಿ ಕಿಂಗ್ ಎಂಬವರು ಮತ್ತು 2012ರಲ್ಲಿ ಟ್ರೈವನ್ ಮಾರ್ಟಿನ್ ಎಂಬವರು ಬಿಳಿಯ ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಆ ಸಂದರ್ಭದಲ್ಲಿ ವರ್ಣ ತಾರತಮ್ಯದ ಚರ್ಚೆ ತೀವ್ರ ಸ್ವರೂಪವನ್ನು ಪಡೆದಿತ್ತು. ರಾಡ್ನಿ ಕಿಂಗ್‍ರಿಗೆ ಗುಂಡಿಕ್ಕಿದ ನಾಲ್ವರು ಬಿಳಿ ಪೊಲೀಸರನ್ನು ನ್ಯಾಯಾಲಯವು 1992ರಲ್ಲಿ ಬಿಡುಗಡೆಗೊಳಿಸಿದಾಗ ತೀವ್ರ ಪ್ರತಿಭಟನೆಗಳೆದ್ದಿದ್ದುವು ಮತ್ತು ಅದರಲ್ಲಿ 50ರಷ್ಟು ಮಂದಿ ಪ್ರಾಣ ಕಳಕೊಂಡಿದ್ದರು.
 ಬಹುಶಃ ವರ್ಣ ಮತ್ತು ಜನಾಂಗ ತಾರತಮ್ಯದ ಸುತ್ತ ಅವಲೋಕನ ನಡೆಸುತ್ತಾ ಹೋದರೆ ಅಮೇರಿಕ, ಬ್ರಿಟನ್, ಜರ್ಮನಿ, ಇಸ್ರೇಲ್, ಫ್ರಾನ್ಸ್ ಮುಂತಾದ ಮುಂದುವರಿದ ರಾಷ್ಟ್ರಗಳಿಂದ ಪುಟಗಟ್ಟಲೆ ಮಾಹಿತಿಗಳು ಸಿಗುತ್ತಲೇ ಹೋಗುತ್ತವೆ. ಮಾನವ ಹಕ್ಕುಗಳ ಕುರಿತಂತೆ ದೊಡ್ಡ ದನಿಯಲ್ಲಿ ಮಾತಾಡುವ ರಾಷ್ಟ್ರಗಳಿವು. ಉಗ್ರವಾದ, ಜನಾಂಗವಾದ, ಮಹಿಳಾ ದೌರ್ಜನ್ಯಗಳನ್ನು ಎತ್ತಿಕೊಂಡು ಅತ್ಯಂತ ವಿಸ್ತೃತ ನೆಲೆಯಲ್ಲಿ ಇವು ಚರ್ಚಿಸುತ್ತವೆ. ಆದರೆ ತಂತಮ್ಮ ರಾಷ್ಟ್ರಗಳಲ್ಲಿರುವ ವರ್ಣ ಭೇದ ಮಾನಸಿಕತೆಯನ್ನು ತೊಡೆದು ಹಾಕಲು ಇವುಗಳಿಗೆ ಸಾಧ್ಯವಾಗುತ್ತಿಲ್ಲ. ಹಾಗಂತ, ಇದು ಕೇವಲ ಅಮೇರಿಕದ್ದೋ ಫ್ರಾನ್ಸ್‍ನದ್ದೋ ಸಮಸ್ಯೆಯಲ್ಲ. ಭಾರತವೂ ಇದೇ ಸಮಸ್ಯೆಯನ್ನು ಎದುರಿಸುತ್ತಿದೆ. ಅಸ್ಪೃಶ್ಯ ವಿರೋಧಿ ಕಾನೂನನ್ನು ಸಂವಿಧಾನದಲ್ಲಿ ಅಳವಡಿಸಿರುವುದರ ಹೊರತಾಗಿಯೂ ಅಸ್ಪೃಶ್ಯತೆ ಎಷ್ಟು ಪರಿಣಾಮಕಾರಿಯಾಗಿ ಇಲ್ಲಿ ಚಲಾವಣೆಯಲ್ಲಿದೆಯೆಂದರೆ, ದಲಿತರ ಕ್ಷೌರ ಮಾಡಲೇಬೇಕಾದ ಅನಿವಾರ್ಯತೆಯಿಂದ ಪಾರಾಗುವುದಕ್ಕಾಗಿ ಕ್ಷೌರ ವೃತ್ತಿಯನ್ನೇ ಕೈ ಬಿಡುವಷ್ಟು (ಕೋಲಾರದಲ್ಲಿ). ದಲಿತರು ಮತ್ತು ದಲಿತೇತರರ ನಡುವೆ ಮದುವೆ ಅಸಾಧ್ಯ ಅನ್ನುವಷ್ಟು. ಮರ್ಯಾದೆಗೇಡು ಹತ್ಯೆ ನಡೆಯುವಷ್ಟು. ಒಂದು ವೇಳೆ ಮೈಕೆಲ್ ಬ್ರೌನ್‍ನ ಹತ್ಯೆಯನ್ನು ಪ್ರತಿಭಟಿಸಿ ಅಮೇರಿಕದಲ್ಲಿ ಪ್ರತಿಭಟನೆ ನಡೆದಂತೆ ಅಸ್ಪೃಶ್ಯತೆಯನ್ನು ಪ್ರತಿಭಟಿಸಿ ಇಲ್ಲೂ ಪ್ರತಿಭಟನೆ ನಡೆಯುವುದಾದರೆ ಪ್ರತಿಭಟನೆ ಇಲ್ಲದ ದಿನಗಳೇ ಇರುವುದಕ್ಕೆ ಸಾಧ್ಯವಿಲ್ಲವೇನೋ.
   ಸಮಾನತೆ ಎಂಬುದು ಟಿ.ವಿ. ಚಾನೆಲ್‍ಗಳಲ್ಲಿ ಮತ್ತು ಪತ್ರಿಕೆಗಳ ಕಾಲಂಗಳಲ್ಲಿ ಚರ್ಚೆಗೊಳಪಡಿಸಿ ಜಾರಿಗೆ ತರಬಹುದಾದಷ್ಟು ಸಣ್ಣ ಸಂಗತಿಯಲ್ಲ. ಅದೊಂದು ಮಾನಸಿಕತೆ. ಕರಿಯರು ಅಥವಾ ದಲಿತರನ್ನು ಮುಟ್ಟುವುದು ಮತ್ತು ಅವರೊಂದಿಗೆ ಬೆರೆಯುವುದನ್ನು ಅವಮಾನಕರ ಎಂದು ನಂಬುವ ಮನುಷ್ಯರನ್ನು ಬರೇ ಚರ್ಚೆಗಳಿಂದ ಸರಿಪಡಿಸಲು ಸಾಧ್ಯವಿಲ್ಲ. ಈ ಚರ್ಚೆಗಳಾಚೆಗೆ ಒಂದು ವಾಸ್ತವವಿದೆ. ಮನುಷ್ಯರಲ್ಲಿ ಕೆಲವರು ನೀಚರು ಮತ್ತು ಕೆಳದರ್ಜೆಯವರಾಗಿ ವಿಭಜಿಸಲ್ಪಟ್ಟಿರುವುದಕ್ಕೆ ಧಾರ್ಮಿಕವಾದ ಕಾರಣಗಳಿವೆ. ಧರ್ಮ ಇದನ್ನು ಅನುಮೋದಿಸುತ್ತದೆ  ಎಂಬ ಬಲವಾದ ನಂಬಿಕೆಯಿಂದಲೇ ಈ ದೇಶದಲ್ಲಿ ಇದು ಆಚರಣೆಯಲ್ಲಿದೆ. ಇಲ್ಲದೇ ಹೋಗಿದ್ದರೆ, ಸಂವಿಧಾನ ರಚನೆಯಾಗಿ ಸುಮಾರು ಏಳು ದಶಕಗಳು ಕಳೆದಿದ್ದು, ಹಳೆ ತಲೆಮಾರಿನ ಸ್ಥಾನದಲ್ಲಿ ಹೊಸ ತಲೆಮಾರು ಜೀವಿಸುತ್ತಿರುವುದರ ಹೊರತಾಗಿಯೂ ಅಸ್ಪೃಶ್ಯತೆ ಈ ಮಟ್ಟದಲ್ಲಿ ಚಾಲ್ತಿಯಲ್ಲಿರುವುದಕ್ಕೆ ಸಾಧ್ಯವೇ ಇರಲಿಲ್ಲ. ಸಂವಿಧಾನಗಳು ಏನೇ ಹೇಳಲಿ, ಅಸ್ಪೃಶ್ಯತೆಯನ್ನು ಧರ್ಮಬದ್ಧ ಎಂದು ನಂಬುವ ಮನೆ ಮತ್ತು ಮನಗಳು ಈ ಜಗತ್ತಿನಾದ್ಯಂತ ಧಾರಾಳ ಇವೆ. ಈ ನಂಬುಗೆಯನ್ನು ಸಮರ್ಥಿಸುವಂತೆ ಅನೇಕಾರು ಧಾರ್ಮಿಕ ಕೇಂದ್ರಗಳು ನಡಕೊಳ್ಳುತ್ತಲೂ ಇವೆ. ಒಂದು ಕಡೆ ಅಸ್ಪೃಶ್ಯತೆಯನ್ನು ಶಿಕ್ಷಾರ್ಹ ಎಂದು ಸಾರುವ ಸಂವಿಧಾನ, ಇನ್ನೊಂದು ಕಡೆ ಅದನ್ನು ಬೆಂಬಲಿಸುವ ಧರ್ಮಸೂಕ್ತಗಳು ಹಾಗೂ ಆಚರಣೆಗಳು.. ಇವುಗಳ ನಡುವೆ ಸಮಾಜದಲ್ಲಿ ಇವತ್ತು ಗುಪ್ತ ಸಂಘರ್ಷವೊಂದು ನಡೆಯುತ್ತಿದೆ. ಕೆಲವೊಮ್ಮೆ ಇದು ಬಹಿರಂಗಕ್ಕೆ ಬರುತ್ತಿದೆಯಷ್ಟೇ. ಆದ್ದರಿಂದ, ಮೊಟ್ಟಮೊದಲು ಈ ಮನಸ್ಥಿತಿಗೆ ಮದ್ದರೆಯಬೇಕಾಗಿದೆ. ಕರಿಯ, ಬಿಳಿಯ, ಜಾಟ, ದಲಿತ, ಬ್ರಾಹ್ಮಣ, ಕೊರಗ, ರಜಪೂತ, ಆದಿವಾಸಿ... ಎಲ್ಲರೂ ಒಂದೇ ತಂದೆ-ತಾಯಿಯ ಮತ್ತು ಓರ್ವನೇ ದೇವನ ಸೃಷ್ಟಿಗಳು ಎಂಬ ಸತ್ಯವನ್ನು ಧರ್ಮದ ಮೂಲಭೂತ ಸತ್ಯವಾಗಿ ಒಪ್ಪಿಕೊಳ್ಳುವಂತೆ ಮಾಡಬೇಕಾಗಿದೆ. ಧಾರ್ಮಿಕ ಸಂಸ್ಥೆಗಳು ಈ ಕುರಿತಂತೆ ತಮ್ಮ ಮಡಿವಂತಿಕೆಯನ್ನು ಕೈಬಿಡಬೇಕಾಗಿದೆ. ಪ್ರವಾದಿ ಮುಹಮ್ಮದ್‍ರು(ಸ) 7ನೇ ಶತಮಾನದಲ್ಲಿ ಇದೇ ಸಮಸ್ಯೆಯನ್ನು ಎದುರಿಸಿದ್ದರು. ನೀಗ್ರೋಗಳನ್ನು ಮನುಷ್ಯರೆಂದೇ ಮತ್ತು ಮುಟ್ಟಿಸಿಕೊಳ್ಳಲು ಅರ್ಹರೆಂದೇ ಒಪ್ಪಿಕೊಳ್ಳದ ಜನರನ್ನು ಪರಸ್ಪರ ಆಲಿಂಗನದಲ್ಲಿ, ಮದುವೆ ಬಂಧನದಲ್ಲಿ, ಭುಜಕ್ಕೆ ಭುಜ ತಾಗಿಸಿ ಪ್ರಾರ್ಥನೆಗೆ ನಿಲ್ಲುವಲ್ಲಿ ಮತ್ತು ಕರ್ಮಗಳೇ ಶ್ರೇಷ್ಠತೆಗೆ ಮಾನದಂಡ ಎಂಬ ಮೌಲ್ಯಕ್ಕೆ ಅಂಟಿ ಜೀವನ ಸಾಗಿಸುವಲ್ಲಿಯ ವರೆಗೆ ಬದಲಾಯಿಸಿದ್ದು ಪವಿತ್ರ ಕುರ್‍ಆನ್‍ನ ಸಮಾನತೆಯ ಸಂದೇಶವಾಗಿತ್ತು. ಪ್ರವಾದಿಯವರು(ಸ) ಅದನ್ನು ಸ್ವಯಂ ಬದುಕಿನಲ್ಲಿ ಅಳವಡಿಸುವ ಮೂಲಕ ಸಮಾಜಕ್ಕೆ ಮಾದರಿಯಾದರು. ಮಾತ್ರವಲ್ಲ, ಒಂದು ಸಮಾನತೆಯ ಸಮಾಜವು ಈ 21ನೇ ಶತಮಾನದಲ್ಲೂ ಅಸ್ತಿತ್ವದಲ್ಲಿ ಉಳಿಯಬಲ್ಲಷ್ಟು ಆ ಮಾದರಿಯನ್ನು ಧಾರ್ಮಿಕ ಅಗತ್ಯವಾಗಿ ಬಿತ್ತಿ ಹೋದರು. ಆದ್ದರಿಂದ ಬ್ರೌನ್, ಕಿಂಗ್, ಮಾರ್ಟಿನ್ ಮತ್ತು ಈ ದೇಶದ ಇಂಥ ಅಸಂಖ್ಯ ಅಸ್ಪೃಶ್ಯರನ್ನು ಬಲಿ ಪಡೆದ ಸಮಾಜಕ್ಕೆ ಈ ಮಾದರಿಯ ಅನುಭವ ಆಗಬೇಕಾಗಿದೆ. ನಮ್ಮ ನಡುವೆ ನಡೆಯುವ ಚರ್ಚೆಗಳು ಪ್ರವಾದಿ ಮುಹಮ್ಮದ್‍ರ(ಸ) ಮಾದರಿಯನ್ನು ಎತ್ತಿಕೊಳ್ಳುವಷ್ಟು ವಿಶಾಲವಾಗಬೇಕಾಗಿದೆ.

No comments:

Post a Comment