Wednesday, 10 September 2014

ಇಂಥ ಪ್ರತಿಭಟನೆಗಳು ಹೆಚ್ಚೆಚ್ಚು ವ್ಯಕ್ತಗೊಳ್ಳುತ್ತಲೇ ಇರಲಿ

   ಈ ಬಾರಿಯ ಯು.ಎಸ್. ಓಪನ್ ಟೆನ್ನಿಸ್ ಟೂರ್ನಿಯ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿಯನ್ನು ತನ್ನ ದೇಶವಾದ ಭಾರತಕ್ಕೆ ಮತ್ತು ತನ್ನ ತವರು ರಾಜ್ಯವಾದ ತೆಲಂಗಾಣಕ್ಕೆ ಅರ್ಪಿಸುವ ಮೂಲಕ ಟೆನಿಸ್ ತಾರೆ ಸಾನಿಯಾ ಮಿರ್ಝಾ ಬಿಜೆಪಿಯ ‘ದೇಶನಿಷ್ಠೆ'ಗೆ ಸವಾಲೊಡ್ಡಿದ್ದಾರೆ. ಮೂರು ತಿಂಗಳ ಹಿಂದೆ ಸಾನಿಯಾರ ರಾಷ್ಟ್ರೀಯತೆ ಮತ್ತು ದೇಶನಿಷ್ಠೆಯನ್ನು ತೆಲಂಗಾಣದ ವಿಧಾನಸಭೆಯ ವಿರೋಧ ಪಕ್ಷವಾದ ಬಿಜೆಪಿ ನಾಯಕ ಕೆ. ಲಕ್ಷ್ಮಣ್ ಪ್ರಶ್ನಿಸಿದ್ದರು. ಅವರು ಸಾನಿಯಾರನ್ನು ಪಾಕಿಸ್ತಾನದ ಸೊಸೆ ಎಂದಿದ್ದರು. ತೆಲಂಗಾಣದ ‘ಬ್ರಾಂಡ್ ಅಂಬಾಸಡರ್’ (ರಾಯಭಾರಿ) ಆಗುವ ಅರ್ಹತೆ ಸಾನಿಯಾರಿಗಿಲ್ಲ ಎಂದಿದ್ದರು. ಮಹಾರಾಷ್ಟ್ರ ಮೂಲದ ಮತ್ತು ಹೈದರಾಬಾದ್‍ಗೆ ವಲಸೆ ಬಂದಿರುವ ಸಾನಿಯಾರನ್ನು ರಾಯಭಾರಿ ಮಾಡಿರುವುದು ತಪ್ಪು ಎಂದು ವಾದಿಸಿ ಚರ್ಚೆಯೊಂದಕ್ಕೆ ಕಾರಣರಾಗಿದ್ದರು. ಇದರಿಂದ ಸಾನಿಯಾ ತೀವ್ರವಾಗಿ ನೊಂದಿದ್ದರು. ಮಾಧ್ಯಮಗಳೆದುರೇ ಕಣ್ಣೀರಿಳಿಸಿದ್ದರು. ಹೈದರಾಬಾದ್‍ನ ನಿಝಾಮರ ಆಡಳಿತ ಕಾಲದಲ್ಲೇ ತನ್ನ ಮುತ್ತಜ್ಜ ಅಝೀಝ್ ಮಿರ್ಝ ಗೃಹ ಕಾರ್ಯದರ್ಶಿಯಾಗಿದ್ದುದು, ತನ್ನ ಅಜ್ಜ ಮುಹಮ್ಮದ್ ಅಹ್ಮದ್ ಮಿರ್ಝಾ ಹೈದರಾಬಾದ್‍ನ ಖ್ಯಾತ ಗಂಡಿಪೇಟ್ ಅಣೆಕಟ್ಟಿನ ನಿರ್ಮಾಣದಲ್ಲಿ ಇಂಜಿನಿಯರ್ ಕೆಲಸವನ್ನು ನಿರ್ವಹಿಸಿದ್ದು.. ಮುಂತಾದುವುಗಳನ್ನು ವಿವರಿಸುತ್ತಾ ತನ್ನ ಕುಟುಂಬದ ಮೂಲವನ್ನು ಸ್ಪಷ್ಟಪಡಿಸಿದ್ದರು. ಮಾತ್ರವಲ್ಲ, ಉಸಿರಿರುವವರೆಗೆ ತಾನು ಭಾರತೀಯಳಾಗಿರುತ್ತೇನೆ ಎಂಬ ನಿಷ್ಠೆಯನ್ನೂ ವ್ಯಕ್ತಪಡಿಸಿದ್ದರು. ಇದೀಗ ಆ ಚರ್ಚೆಗೆ ಸಾನಿಯಾ ಒಂದೊಳ್ಳೆಯ ತಿರುವನ್ನು ಕೊಟ್ಟಿದ್ದಾರೆ. ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸುವ ಮೂಲಕ ತನ್ನ ದೇಶನಿಷ್ಠೆಯನ್ನು ಅನುಮಾನಿಸಿದವರ ವಿರುದ್ಧ ಪ್ರತಿಭಟನೆ ಸಲ್ಲಿಸಿದ್ದಾರೆ. ಅನಂತಮೂರ್ತಿಯವರಿಗೆ, ಗೋ ಸಾಗಾಟಕ್ಕೆ, ಹೆಣ್ಣು-ಗಂಡು ಮಾತಾಡಿದ್ದಕ್ಕೆಲ್ಲ ಲಕ್ಷ್ಮಣ್‍ರ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಈ ದೇಶದಲ್ಲಿ ವ್ಯಕ್ತಪಡಿಸಿದ ಪ್ರತಿಭಟನೆಗೆ ಹೋಲಿಸಿದರೆ ಸಾನಿಯಾ ಪ್ರತಿಭಟನೆ ಅತ್ಯಂತ ಸ್ವಾಗತಾರ್ಹ ಮತ್ತು ಶ್ಲಾಘನಾರ್ಹವಾದದ್ದು. ಒಂದು ಕಡೆ, ಸಾವನ್ನೂ ಸಂಭ್ರಮಿಸುವ, ಕಾನೂನನ್ನೇ ಉಲ್ಲಂಘಿಸುವ ವಿಕೃತಿ. ಇನ್ನೊಂದು ಕಡೆ, ದೇಶದ ಗೌರವ ಮತ್ತು ಪ್ರತಿಷ್ಠೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುವ ನಡೆ.. ಇವುಗಳಲ್ಲಿ ಯಾವುದು ಮಾದರಿಯಾಗಿ ಗುರುತಿಸಿಕೊಳ್ಳಬೇಕು? ನಿಜವಾಗಿ, ಲಕ್ಷ್ಮಣ್‍ರ ಪಕ್ಷದ ಕಾರ್ಯಕರ್ತರ ಪ್ರತಿಭಟನಾ ಮಾದರಿಯಲ್ಲೇ ಪ್ರತಿಭಟನೆ ಹಮ್ಮಿಕೊಳ್ಳುವುದಕ್ಕೆ ಸಾನಿಯಾರಿಗೂ ಅವಕಾಶ ಇತ್ತು. ಲಕ್ಷ್ಮಣ್‍ರ ಪ್ರತಿಕೃತಿಯನ್ನು ಸುಡಬಹುದಿತ್ತು. ಅವರ ನಿವಾಸದ ಮೇಲೆ ದಾಳಿ ಮಾಡಬಹುದಿತ್ತು. ಅವರ ಮೇಲೆ ಹಲ್ಲೆ ನಡೆಸಬಹುದಿತ್ತು. ಬಿಜೆಪಿಯ ಕಚೇರಿಗೆ ಬೆಂಕಿ ಕೊಡಬಹುದಿತ್ತು. ಕರಾಚಿಯಲ್ಲಿ ಹುಟ್ಟಿದ ಅಡ್ವಾಣಿಯರ ಮೂಲವನ್ನು ಪ್ರಶ್ನಿಸಿ ಮುಜುಗರಕ್ಕೆ ಒಳಪಡಿಸಬಹುದಿತ್ತು. ಆದರೆ, ದೇಶದ ಪ್ರತಿಷ್ಠೆಯನ್ನು ಕುಂದಿಸುವ ಮತ್ತು ಕಾನೂನನ್ನು ಉಲ್ಲಂಘಿಸುವ ಈ ಮಾದರಿಗಿಂತ ದೇಶದ ಗೌರವವನ್ನು ಹೆಚ್ಚಿಸುವ ಭಿನ್ನ ಮಾದರಿಯನ್ನು ಸಾನಿಯಾ ಆಯ್ಕೆ ಮಾಡಿಕೊಂಡರು. ಅದಕ್ಕೆ ಧಾರಾಳ ಬೆವರು ಮತ್ತು ಅಪಾರ ದೇಶನಿಷ್ಠೆಯ ಅಗತ್ಯ ಇತ್ತು. ಇದೀಗ ಆ ಬೆವರು ಮತ್ತು ದೇಶನಿಷ್ಠೆಗೆ ಪಾರಿತೋಷಕ ಲಭಿಸಿದೆ. ಆ ಪಾರಿತೋಷಕವನ್ನು ಅವರು ಈ ದೇಶಕ್ಕೆ ಅರ್ಪಿಸಿದ್ದಾರೆ. ಆ ಮೂಲಕ ಬೆವರು ಮತ್ತು ಶ್ರಮವೇ ಅಂತಿಮವಾಗಿ ಮೇಲುಗೈ ಪಡೆಯುತ್ತದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
 ಈ ದೇಶದಲ್ಲಿ ಮುಸ್ಲಿಮರು ತಮ್ಮ ದೇಶನಿಷ್ಠೆಯನ್ನು ಆಗಾಗ ಸಾಬೀತುಪಡಿಸುತ್ತಾ ಇರಬೇಕಾದ ವಾತಾವರಣವೊಂದನ್ನು ಇಲ್ಲಿನ ಒಂದು ವರ್ಗ ಆಗಾಗ ಸೃಷ್ಟಿಸುತ್ತಾ ಬರುತ್ತಿದೆ. ಬಾಂಬ್ ಸ್ಫೋಟವಾದ ತಕ್ಷಣ ಈ ವರ್ಗ ಮುಸ್ಲಿಮರಿಂದ ದೇಶನಿಷ್ಠೆಯ ಫತ್ವವನ್ನು ಆಗ್ರಹಿಸುತ್ತದೆ. ಈ ದೇಶದ ಯಾವುದೇ ಮೂಲೆಯಲ್ಲಿ ತಲಾಕ್‍ನ ದುರುಪಯೋಗವಾದರೆ, ಮಾವನಿಂದ ಸೊಸೆಯ ಮೇಲೆ ಅತ್ಯಾಚಾರವಾದರೆ, ಶರೀಅತ್‍ನ ಹೆಸರಲ್ಲೋ ಪರ್ದಾದ ಹೆಸರಲ್ಲೋ ಅನ್ಯಾಯ ನಡೆದರೆ.. ಇವೆಲ್ಲಕ್ಕೂ ಇಸ್ಲಾಮ್ ಧರ್ಮವೇ ಕಾರಣ ಎಂಬ ರೀತಿಯಲ್ಲಿ ಈ ವರ್ಗ ವ್ಯಾಖ್ಯಾನಿಸುತ್ತದೆ. ಮುಸ್ಲಿಮರ ಹಿಂದುಳಿಯುವಿಕೆಗೆ ಇವನ್ನು ಪ್ರಮುಖ ಕಾರಣವಾಗಿ ಎತ್ತಿ ತೋರಿಸಲಾಗುತ್ತದೆ. ಮಾತ್ರವಲ್ಲ, ಅಬ್ದುಲ್ ಕಲಾಮ್‍ರನ್ನೋ ಅಝೀಮ್ ಪ್ರೇಮ್‍ಜಿಯನ್ನೋ ಅಥವಾ ನಜ್ಮಾ ಹೆಫ್ತುಲ್ಲಾರನ್ನೋ ತೋರಿಸಿ, ‘ನೀವು ಅವರಂತೆ ಆಗಿ’ ಎಂಬ ಸಲಹೆಯನ್ನೂ ನೀಡುತ್ತದೆ. ಹಾಗಂತ, ಖಾಪ್ ಪಂಚಾಯತ್‍ನ ಆದೇಶಗಳನ್ನು ಇಂಥ ಸಂದರ್ಭಗಳಲ್ಲಿ ಈ ಮಂದಿ ಉಲ್ಲೇಖಿಸುವುದೇ ಇಲ್ಲ. ಅದರ ತಪ್ಪುಗಳನ್ನು ಹಿಂದೂ ಧರ್ಮದ ದೌರ್ಬಲ್ಯಗಳಾಗಿ ಕಾಣುವುದೂ ಇಲ್ಲ. ನಿಜವಾಗಿ, ಖಾಪ್ ಪಂಚಾಯತೋ ಅಥವಾ ಫತ್ವಾಗಳನ್ನು ಹೊರಡಿಸುವ ಹಿರಿಯರ ಸಭೆಗಳೋ ಯಾವುದೇ ಧರ್ಮದ ಪ್ರತಿನಿಧಿಯಾಗಲು ಸಾಧ್ಯವೇ ಇಲ್ಲ. ಸ್ಥಳೀಯ ಸಂಪ್ರದಾಯ, ಆಚರಣೆಗಳನ್ನು ಎದುರಿಟ್ಟುಕೊಂಡು ಅವು ಆದೇಶಗಳನ್ನು ಹೊರಡಿಸುತ್ತವೆಯೇ ಹೊರತು ಇಸ್ಲಾಮ್‍ನದ್ದೋ ಹಿಂದೂ ಧರ್ಮದ್ದೋ ಮೂಲ ಗ್ರಂಥಗಳನ್ನು ನಿಕಷಕ್ಕೆ ಒಡ್ಡಿಯಲ್ಲ. ಅಷ್ಟಕ್ಕೂ, ಇದು ಈ ವರ್ಗಕ್ಕೆ ಖಂಡಿತ ಗೊತ್ತು. ಈ ಹಿಂದೆ ಸಾನಿಯಾಳ ಉಡುಪಿನ ಬಗ್ಗೆ ತಕರಾರೆತ್ತಿದ ವಿದ್ವಾಂಸರೊಬ್ಬರನ್ನು ಹೀನಾಯವಾಗಿ ನಿಂದಿಸಿದ ಮಂದಿಯೇ ಆಕೆಯ ದೇಶನಿಷ್ಠೆಯನ್ನು ಇವತ್ತು ಪ್ರಶ್ನಾರ್ಹಗೊಳಿಸಿದ್ದು. ಹಾಗಂತ, ಅಂದು ಶೋಯೆಬ್ ಮಲಿಕ್‍ನನ್ನು ಸಾನಿಯಾ ಮದುವೆ ಆಗಿರಲಿಲ್ಲ ಎಂದು ಈ ವರ್ಗ ಆ ಘಟನೆಯನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಈ ವರ್ಗದ ಈ ವರೆಗಿನ ನಿಲುವುಗಳನ್ನು ಅವಲೋಕಿಸಿದರೆ ಅಂಥ ಸಮರ್ಥನೆ ಅಪ್ಪಟ ಸುಳ್ಳೆಂಬುದು ಸ್ಪಷ್ಟವಾಗುತ್ತದೆ. ಅವತ್ತು ಮುಸ್ಲಿಮರನ್ನು ನಿಂದಿಸುವುದಕ್ಕೆ ವಿದ್ವಾಂಸರನ್ನು ಬಳಸಿಕೊಂಡಿದ್ದರು. ಈಗ ಶೋಯೆಬ್‍ನನ್ನು ಬಳಸಿಕೊಂಡಿದ್ದಾರೆ. ಎರಡರಲ್ಲೂ ಸಮಯ ಸಾಧಕತನ ಇದೆಯೇ ಹೊರತು ಪ್ರಾಮಾಣಿಕತೆ ಕಾಣಿಸುತ್ತಿಲ್ಲ.
 ಈ ದೇಶದಲ್ಲಿ ಸಚಿನ್ ತೆಂಡುಲ್ಕರ್, ಮಹೇಶ್ ಭೂಪತಿ, ಸೈನಾ ನೆಹ್ವಾಲ್, ಜ್ವಾಲಾ ಗುಟ್ಟಾರಿಗಿರುವ ಸ್ವಾತಂತ್ರ್ಯ ಸಾನಿಯಾ, ಇರ್ಫಾನ್ ಪಠಾಣ್, ಪರ್ವೇಝ್ ರಸೂಲ್‍ಗೆ ಇಲ್ಲ. ಸಚಿನ್ ತೆಂಡುಲ್ಕರ್ ತನ್ನ ಶತಕವನ್ನು ತನ್ನ ತಂದೆಗೋ, ಪತ್ನಿಗೋ ಅರ್ಪಿಸುವಂತೆ ಪರ್ವೇಝ್ ರಸೂಲ್ ಅರ್ಪಿಸುವಂತಿಲ್ಲ. ಆತ ದೇಶಕ್ಕೇ ಅರ್ಪಿಸಬೇಕು. ಡೇವಿಸ್ ಕಪ್‍ನಲ್ಲಿ ಮಹೇಶ್ ಭೂಪತಿ ಆಡದೇ ಇರುವುದನ್ನೂ ಸಾನಿಯಾ ಆಡದಿರುವುದನ್ನೂ ಒಂದೇ ತಟ್ಟೆಯಲ್ಲಿ ಇಟ್ಟು ತೂಗಲಾಗುತ್ತಿಲ್ಲ. ಒಂದನ್ನು ವೈಯಕ್ತಿಕ ಕಾರಣಗಳ ಮೂಲಕ ಸಮರ್ಥಿಸಲಾದರೆ ಇನ್ನೊಂದನ್ನು ದೇಶನಿಷ್ಠೆಯ ನೆಪದಲ್ಲಿ ಟೀಕಿಸಲಾಗುತ್ತದೆ. ಬಹುಶಃ ಈ ಸಮಸ್ಯೆ ಮೊನ್ನೆ ಸಾನಿಯಾಳನ್ನೂ ಕಾಡಿರಬೇಕು. ಮೂರು ತಿಂಗಳ ಹಿಂದೆ ಆಕೆಯ ದೇಶನಿಷ್ಟೆಯನ್ನು ಪ್ರಶ್ನಿಸಲಾದ ಘಟನೆ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ಸ್ಮರಣೆಗೆ ಬಂದಿರಬೇಕು. ಆದ್ದರಿಂದಲೇ, ಬ್ರೂನೋ ಸೋರ್ಸ್‍ರ ಜೊತೆಗೂಡಿ ಡಬಲ್ಸ್ ಪ್ರಶಸ್ತಿ ಗೆದ್ದ ತಕ್ಷಣ ಆಕೆ ಪ್ರಶಸ್ತಿಯನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಒಂದು ವೇಳೆ, ಶತಕಗಳನ್ನು ತಂತಮ್ಮ ಪತ್ನಿಯರಿಗೆ ಅರ್ಪಿಸಿದ ಧೋನಿ, ಸಚಿನ್‍ರಂತೆ ಸಾನಿಯಾ ತನ್ನ ಪ್ರಶಸ್ತಿಯನ್ನು ಶೋಯೆಬ್ ಮಲಿಕ್‍ಗೆ ಅರ್ಪಿಸಿರುತ್ತಿದ್ದರೆ ಏನಾಗುತ್ತಿತ್ತು? ದೇಶನಿಷ್ಠೆಯ ಚರ್ಚೆ ಹೇಗೆಲ್ಲ ನಡೆಯುತ್ತಿತ್ತು?
   ಏನೇ ಆಗಲಿ, ಪ್ರತಿಭಟನೆಯ ಸುಂದರ ಮಾದರಿಯೊಂದನ್ನು ಲಕ್ಷ್ಮಣ್‍ ಮತ್ತು ಅವರ ಬೆಂಬಲಿಗರಿಗೆ ಸಾನಿಯಾ ಮಿರ್ಝಾ ತೋರಿಸಿಕೊಟ್ಟಿದ್ದಾರೆ. ಇಂಥ ಸಕಾರಾತ್ಮಕ ಪ್ರತಿಭಟನೆಗಳು ಈ ದೇಶದಲ್ಲಿ ಹೆಚ್ಚೆಚ್ಚು ವ್ಯಕ್ತವಾಗುತ್ತಿರಲಿ ಮತ್ತು ಮುಸ್ಲಿಮರ ದೇಶನಿಷ್ಠೆಯನ್ನು ಪ್ರಶ್ನಾರ್ಹಗೊಳಿಸುವವರ ಪ್ರಯತ್ನಗಳು ಮತ್ತೆ ಮತ್ತೆ ಸೋಲುತ್ತಲೇ ಇರಲಿ ಎಂದೇ ಹಾರೈಸೋಣ.

1 comment:

  1. Keep it up Sania. Laxman is not a yardstick to measure Sanias wonderful performance.

    ReplyDelete