Friday 26 September 2014

ವ್ಯಾಪಾರಿಗಳ ಜೋಳಿಗೆಯಿಂದ ತಪ್ಪಿಸಿಕೊಂಡ ಸ್ಕಾರ್ಫ್

    “ಮುಸ್ಲಿಮರ ಸ್ಕಾರ್ಫ್ ಮತ್ತು ಸಿಕ್ಖರ ಟರ್ಬನ್‍ಗೆ ಬಾಸ್ಕೆಟ್‍ಬಾಲ್ ಕ್ರೀಡೆಯಲ್ಲಿ ಅನುಮತಿ ನೀಡಲಾಗುವುದಲ್ಲದೇ ಮುಂದಿನ ಎರಡು ವರ್ಷಗಳ ವರೆಗೆ ವಿವಿಧ ಪಂದ್ಯಾವಳಿಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಪರಿಶೀಲನೆಗೊಳಪಡಿಸಿದ ಬಳಿಕ ಅಧಿಕೃತ ಘೋಷಣೆ ಹೊರಡಿಸಲಾಗುವುದು” - ಎಂದು ಕಳೆದವಾರ ವಿಶ್ವ ಬಾಸ್ಕೆಟ್‍ಬಾಲ್ ಸಂಸ್ಥೆಯು (FIBA) ಹೇಳಿಕೊಂಡಿದೆ. ಈ ವರೆಗೆ 5 ಸೆಂಟಿ ವಿೂಟರ್‍ನ ಹೇರ್‍ಬೆಂಡ್‍ಗೆ ಮಾತ್ರ ಅವಕಾಶ ಇತ್ತು. ಮಹಿಳಾ ಆಟಗಾರ್ತಿಯರು ಸ್ಕಾರ್ಫ್ ಧರಿಸುವುದನ್ನಾಗಲಿ, ಟರ್ಬನ್ ತೊಡುವುದನ್ನಾಗಲಿ ಅದು ನಿಷೇಧಿಸಿತ್ತು. ಆದ್ದರಿಂದಲೇ ಈ ಹೇಳಿಕೆಗೆ ವಿವಿಧ ಭಾಗಗಳಿಂದ ಸಂತೋಷದ ಪ್ರತಿಕ್ರಿಯೆಗಳು ವ್ಯಕ್ತವಾದುವು. ಅನೇಕ ಮಂದಿ ಸಂಸ್ಥೆಯ ಈ ಘೋಷಣೆಯನ್ನು ಸ್ವಾಗತಿಸಿದರು. ನಿಜವಾಗಿ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಕುರಿತಂತೆ ಅಪಾರ ಚರ್ಚೆಗಳಾಗುತ್ತಿರುವ ಈ ದಿನಗಳಲ್ಲಿ ಬಾಸ್ಕೆಟ್‍ಬಾಲ್ ಸಂಸ್ಥೆಯೊಂದು ಈ ವರೆಗೂ ಸ್ಕಾರ್ಫ್-ಟರ್ಬನ್ ನಿಷೇಧ ನೀತಿಯನ್ನು ಪಾಲಿಸಿಕೊಂಡು ಬರುತ್ತಿತ್ತು ಎಂಬುದೇ ಅಚ್ಚರಿಯ ಸಂಗತಿ. ಒಂದು ರೀತಿಯಲ್ಲಿ ಸಂತೋಷಕ್ಕಿಂತ ದುಃಖಿಸಬೇಕಾದ, ಸ್ವಾಗತಕ್ಕಿಂತ ಮರುಕಪಡಬೇಕಾದ ಮನಸ್ಥಿತಿಯೊಂದರ ಅನಾವರಣ ಇದು.
 ಯುರೋಪಿಯನ್ ರಾಷ್ಟ್ರಗಳ ಬಗ್ಗೆ ನಮ್ಮಲ್ಲಿ ಕೆಲವು ಭ್ರಮೆಗಳಿವೆ. ವ್ಯಕ್ತಿ, ಅಭಿವ್ಯಕ್ತಿ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಪಾರ ಮನ್ನಣೆ ಕೊಡುವ ರಾಷ್ಟ್ರಗಳವು ಎಂಬೊಂದು ನಂಬುಗೆ ಅಸಂಖ್ಯ ಮಂದಿಯಲ್ಲಿದೆ. ಲಿವಿಂಗ್ ಟುಗೆದರ್, ಸಲಿಂಗ ಸ್ವಾತಂತ್ರ್ಯ, ಮದುವೆ-ವಿಚ್ಛೇದನ.. ಮುಂತಾದ ಹಲವಾರು ವಿಷಯಗಳ ಬಗ್ಗೆ ಅವುಗಳ ಉದಾರ ಧೋರಣೆಗಳು ಶ್ಲಾಘನೆಗೆ ಒಳಗಾಗುವುದೂ ಇದೆ. ಆದರೆ ಇದು ಒಂದು ಮುಖ ಮಾತ್ರ. ಅದರ ಇನ್ನೊಂದು ಮುಖ ಎಷ್ಟು ಕರಾಳ ಮತ್ತು ಪಕ್ಷಪಾತದಿಂದ ಕೂಡಿದೆಯೆಂದರೆ, ತಲೆಗೆ ಸುತ್ತುವ ಒಂದು ಬಟ್ಟೆಯನ್ನೂ ಅದು ಸಹಿಸಿಕೊಳ್ಳುತ್ತಿಲ್ಲ. ಬಾಸ್ಕೆಟ್‍ಬಾಲ್ ಸಂಸ್ಥೆಯ (FIBA) ಕಚೇರಿ ಇರುವುದು ಸ್ವೀಡನ್‍ನಲ್ಲಿ. ಬಾಸ್ಕೆಟ್‍ಬಾಲ್ ಆಟವು ತೃತೀಯ ಜಗತ್ತಿನಲ್ಲಿ ಜನಪ್ರಿಯವೂ ಆಗಿಲ್ಲ. ಬಿಳಿಯರು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೇ ಹೆಚ್ಚು ಜನಪ್ರಿಯತೆ ಗಳಿಸಿಕೊಂಡ ಕ್ರೀಡೆ ಇದು. ಯಾವುದೋ ಆಫ್ರಿಕನ್ ಖಂಡದ ಮತ್ತು ಬಡತನದ ಬೇಗೆಯಲ್ಲಿರುವ ರಾಷ್ಟ್ರಗಳು ಸೇರಿ ಇಂಥ ನಿಯಮ ರೂಪಿಸಿರುತ್ತಿದ್ದರೆ ಅದನ್ನು ಪುರಾತನ ಮನಸ್ಥಿತಿ ಅನ್ನಬಹುದಿತ್ತು. ವ್ಯಕ್ತಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮಹತ್ವವನ್ನು ಗ್ರಹಿಸುವಲ್ಲಿ ಅವು ಇನ್ನೂ ಬೆಳೆದಿಲ್ಲ ಎಂದು ಸಮರ್ಥಿಸಿಕೊಳ್ಳಬಹುದಿತ್ತು. ಆದರೆ ಅಭಿವೃದ್ಧಿ ಹೊಂದಿದವರೇ ಹೆಚ್ಚಿನ ಪ್ರಮಾಣದಲ್ಲಿ ಆಡುವ ಮತ್ತು ಅವರೇ ಸಂಸ್ಥೆಯಲ್ಲಿ ನಿಯಮಗಳನ್ನು ರೂಪಿಸುವ ಅಧಿಕಾರ ಹೊಂದಿದ್ದೂ ಈ 21ನೇ ಶತಮಾನದಲ್ಲೂ ಇಂಥ ನಿಯಮಗಳು ಅಸ್ತಿತ್ವ ಉಳಿಸಿಕೊಂಡದ್ದು ಹೇಗೆ? ಸ್ಕಾರ್ಫ್‍ನಿಂದ ಬಾಸ್ಕೆಟ್ ಬಾಲ್‍ಗೆ ಯಾವ ತೊಂದರೆಯಿದೆ? ಟರ್ಬನ್ ಧರಿಸುವುದರಿಂದ ಏನು ಹಾನಿಯಿದೆ? ಯಾವ ಮಾನದಂಡದಲ್ಲಿ ಇಂಥ ನಿಯಮಗಳನ್ನು ರೂಪಿಸಲಾಗುತ್ತದೆ? ಕಳೆದ ಒಲಿಂಪಿಕ್ಸ್ ನ ವರೆಗೆ ಕುಸ್ತಿಯಲ್ಲಿ ಮಹಿಳೆಯರಿಗೆ ಸಂಪೂರ್ಣ ಮೈಮುಚ್ಚುವ ಬಟ್ಟೆ ಧರಿಸುವುದಕ್ಕೆ ಅನುಮತಿ ಇರಲಿಲ್ಲ. ಈ ಕಾರಣದಿಂದಾಗಿ ಮುಸ್ಲಿಮ್ ಕ್ರೀಡಾಪಟುಗಳು ಅದರಿಂದ ದೂರವಿದ್ದರು. ಕಳೆದ ಬಾರಿ ಈ ನಿಯಮವನ್ನು ಸಡಿಲಿಸಲಾಯಿತು. ಎರಡು ವರ್ಷಗಳ ಹಿಂದೆ ಇರಾನಿ ಆಟಗಾರ್ತಿಯರು ಮೈಮುಚ್ಚುವ ಬಟ್ಟೆ ಧರಿಸಿ ಕಬಡ್ಡಿ ಆಡಿ ವಿಶ್ವದ ಗಮನ ಸೆಳೆದಿದ್ದರು. ಅದೇ ಉಡುಪಿನಲ್ಲಿ ಒಲಿಂಪಿಕ್ಸ್ ಅಥ್ಲೆಟಿಕ್ಸ್ ನಲ್ಲೂ ಭಾಗವಹಿಸಿದ್ದರು. ಹೀಗಿರುವಾಗ ಧಾರ್ಮಿಕ ವಸ್ತ್ರಸಂಹಿತೆ ತೊಡಕಾಗುವುದು ಯಾರಿಗೆ? ಆಟಗಾರರಿಗೆ ಅದು ಸಮಸ್ಯೆ ಆಗುವುದಿಲ್ಲ ಎಂದಾದರೆ ಕ್ರೀಡಾ ಸಂಸ್ಥೆಗಳಿಗೇಕೆ ಸಮಸ್ಯೆಯಾಗುತ್ತಿದೆ? ಅವರು ಕ್ರೀಡೆಯ ಹೆಸರಲ್ಲಿ ಏನನ್ನು ಮತ್ತು ಯಾವುದನ್ನು ಪ್ರಚೋದಿಸುತ್ತಿದ್ದಾರೆ?
 ಎರಡ್ಮೂರು ವರ್ಷಗಳ ಹಿಂದೆ ಬ್ಯಾಡ್ಮಿಂಟನ್ ಸಂಸ್ಥೆ ಚರ್ಚೆಗೊಳಗಾಗಿತ್ತು. ಬ್ಯಾಡ್ಮಿಂಟನ್ ಆಟಗಾರ್ತಿಯರು ಕಡ್ಡಾಯವಾಗಿ ಸ್ಕರ್ಟ್ ಧರಿಸಬೇಕು ಎಂದು ಅದು ಆದೇಶ ಹೊರಡಿಸಿತ್ತು. ವೀಕ್ಷಕರು ಗ್ಯಾಲರಿಯಲ್ಲಿ ಸೇರಬೇಕಾದರೆ ಈ ಉಡುಪು ಸಂಹಿತೆ ಅಗತ್ಯ ಎಂದು ಸಮರ್ಥಿಸಿಯೂ ಇತ್ತು. ಆಗ ಜ್ವಾಲಾ ಗುಟ್ಟಾ, ಸೈನಾ ನೆಹ್ವಾಲ್, ಅಶ್ವಿನಿ ಪೊನ್ನಪ್ಪ.. ಮುಂತಾದವರು ತಂತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಏನಿವೆಲ್ಲ? ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ಬಾಸ್ಕೆಟ್ ಬಾಲ್ ಸಂಸ್ಥೆಯ ಈ ಕ್ರೀಡಾ ನಿಯಮಗಳನ್ನು ಹೋಲಿಸಿ ನೋಡಿಕೊಳ್ಳಿ. ಯಾಕೆ ಮಹಿಳಾ ಆಟಗಾರ್ತಿಯರ ಉಡುಪುಗಳನ್ನು ಅವು ಗಿಡ್ಡವಾಗಿಸುತ್ತಿವೆ? ಕ್ರೀಡೆ ಎಂಬುದು ಸಂಪೂರ್ಣವಾಗಿ ಪ್ರತಿಭೆಯನ್ನೇ ಆಧರಿಸಿರುವಂಥದ್ದು. ಇಂತಿಂಥ ಧರ್ಮದ, ಇಂತಿಂಥ ಉಡುಪಿನ ವ್ಯಕ್ತಿಗಳಲ್ಲಿ ಮಾತ್ರ ಪ್ರತಿಭೆ ಇರುತ್ತದೆ ಎಂಬ ನಿಯಮ ಎಲ್ಲೂ ಇಲ್ಲ. ಅತ್ಯಂತ ಬಲಶಾಲಿ ಮತ್ತು ಶ್ರೀಮಂತ ರಾಷ್ಟ್ರಗಳ ಮುಂದೆ ಕೀನ್ಯ, ಸೊಮಾಲಿಯಾ, ಘಾನಾದಂಥ ಬಡ ರಾಷ್ಟ್ರಗಳ ಪ್ರತಿಭೆಗಳು ಸ್ಪರ್ಧಿಸಿ ಗೆಲ್ಲುತ್ತಿವೆ. ಅಷ್ಟಕ್ಕೂ, ಯಾವ ಕ್ರೀಡೆಯೂ ಬಟ್ಟೆಯನ್ನು ಹೊಂದಿಕೊಂಡಿಲ್ಲವಲ್ಲ. ಬಟ್ಟೆ ಎಂಬುದು ಪ್ರತಿಭೆಯ ಸಂಕೇತವೂ ಅಲ್ಲ. ಅದು ದೇಹವನ್ನೋ ಕೇಶವನ್ನೋ ಮುಚ್ಚುವಂಥದ್ದು. ಕ್ರೀಡೆಯು ಇದರ ವಿರೋಧಿಯಾಗಿರಲು ಸಾಧ್ಯವೇ ಇಲ್ಲ. ಯಾರು ಪ್ರತಿಭಾ ಪ್ರದರ್ಶನಕ್ಕೆ ಉಡುಪು ವೈರಿ ಎಂದು ಭಾವಿಸುತ್ತಾರೋ ನಿಜವಾಗಿ ಅವರೇ ಕ್ರೀಡೆಯ ವೈರಿಗಳು. ಅವರು ಕ್ರೀಡೆಯ ಹೆಸರಲ್ಲಿ ಇನ್ನೇನನ್ನೋ ಬಯಸುತ್ತಿದ್ದಾರೆ. ಆ ಬಯಕೆಗೆ ಪೂರಕವಾಗಿ ಆಟಗಾರರನ್ನು ಆಡಿಸುತ್ತಿದ್ದಾರೆ. ಅದಕ್ಕಾಗಿ ವಿವಿಧ ನಿಯಮಗಳನ್ನು ರೂಪಿಸುತ್ತಿದ್ದಾರೆ. ಆಟಗಾರರ ಆಟಕ್ಕಿಂತ ಅವರ ಬಟ್ಟೆ, ಸ್ಕಾರ್ಫ್, ಟರ್ಬನ್‍ಗಳೇ ಅವರ ಪ್ರತಿಭೆಯನ್ನು ಅಳೆಯುವ ಮಾನದಂಡವಾಗಿರುತ್ತದೆ.
 ಕ್ರೀಡೆಗಳನ್ನೆಲ್ಲ ಸಂಶೋಧಿಸಿದ್ದು ಮನುಷ್ಯನೇ. ಈ ಸಂಶೋಧನೆಗೆ ವಿವಿಧ ಕಾರಣಗಳು ಇರಬಹುದು. ಹೊಟ್ಟೆ ತುಂಬಿದ ಮತ್ತು ಹೊಟ್ಟೆ ಖಾಲಿಯಾದ ಇಬ್ಬರೂ ಕೂಡ ತಂತಮ್ಮ ಮಿತಿಯೊಳಗೆ ಕ್ರೀಡೆಗಳನ್ನು ಹುಟ್ಟು ಹಾಕಿದ್ದಾರೆ. ಪ್ರತಿಯೊಂದಕ್ಕೂ ಅದರದ್ದೇ ಆದ ಸ್ಥಳೀಯತೆ, ಸಾಂಸ್ಕ್ರಿತಿಕತೆ, ಸಾಂಪ್ರದಾಯಿಕ ಅನನ್ಯತೆಯಿದೆ. ಆದರೆ ಬರಬರುತ್ತಾ ಇಂಥ ಕ್ರೀಡೆಗಳೆಲ್ಲ ಸ್ಥಳೀಯತೆಯನ್ನು ಕಳಚಿಕೊಂಡು ಅಪರಿಚಿತ ಪ್ರದೇಶಕ್ಕೂ ನುಗ್ಗಿದುವು. ಸಾಂಪ್ರದಾಯಿಕ ಚೌಕಟ್ಟನ್ನು ವಿೂರಿ ಬೆಳೆಯತೊಡಗಿದುವು. ಸಾಂಸ್ಕøತಿಕ ಅನನ್ಯತೆಯಿಂದ ಬಿಡಿಸಿಕೊಂಡು ಹೊರಚಿಮ್ಮಿದುವು. ಇವಕ್ಕೆಲ್ಲ ಕ್ರೀಡೆಯನ್ನು ಕ್ರೀಡೆಯಾಗಿ ಸ್ವೀಕರಿಸದ ವ್ಯಾವಹಾರಿಕ ಮನಸ್ಥಿತಿಯೇ ಕಾರಣವಾಗಿತ್ತು. ಕ್ರಮೇಣ ಕ್ರೀಡೆಗಳೆಲ್ಲ ತಂತಮ್ಮ ಸ್ಥಳೀಯತೆಯಿಂದ ಕಳಚಿಕೊಂಡು ವ್ಯಾಪಾರಿಗಳ ಜೋಳಿಗೆಯಲ್ಲಿ ಹೊಸ ರೂಪಗಳನ್ನು ಪಡೆಯತೊಡಗಿದುವು. ಯಾವ ಕ್ರೀಡೆಯನ್ನು ಯಾವೆಲ್ಲ ರೀತಿಯಲ್ಲಿ ಆಡಿಸಿದರೆ ಅದು ಕ್ರೀಡಾ ಮಾರುಕಟ್ಟೆಯಲ್ಲಿ ದುಡ್ಡು ತಂದಿಡಬಹುದು ಎಂಬ ಲೆಕ್ಕಾಚಾರಗಳು ನಡೆದುವು. ಅದಕ್ಕೆ ಪೂರಕವಾಗಿ ನಿಯಮಗಳು ರೂಪುಗೊಂಡವು. ಮಹಿಳೆಯರು ಮತ್ತು ಪುರುಷರು ಆಡುವ ಆಟ ಒಂದೇ ಆದರೂ ಇಬ್ಬರಿಗೂ ಬೇರೆ ಬೇರೆ ನಿಯಮಗಳನ್ನು ರೂಪಿಸಲಾಯಿತು. ಟೆನ್ನಿಸ್, ಬ್ಯಾಡ್ಮಿಂಟನ್, ಕಬಡ್ಡಿ, ಬಾಸ್ಕೆಟ್‍ಬಾಲ್, ರಿಲೇ, ವಾಲಿಬಾಲ್, ಸ್ಕೇಟಿಂಗ್.. ಸಹಿತ ಎಲ್ಲದರಲ್ಲೂ ಮಹಿಳಾ ಆಟವನ್ನು ಉಡುಪು ಕೇಂದ್ರಿತವಾಗಿ ರೂಪಿಸಲಾಯಿತು. ಆದ್ದರಿಂದಲೇ ಸ್ಕಾರ್ಫ್, ಟರ್ಬನ್‍ಗಳೆಲ್ಲ ನಿಷೇದಕ್ಕೆ ಒಳಗಾದುವು.
 

ಏನೇ ಆಗಲಿ, ನಿಷೇಧವನ್ನು ಹಿಂತೆಗೆದುಕೊಳ್ಳುವ ಮೂಲಕ ಆಟಕ್ಕೂ ಉಡುಪಿಗೂ ಸಂಬಂಧ ಇಲ್ಲ ಎಂಬುದನ್ನು ಬಾಸ್ಕೆಟ್ ಬಾಲ್ ಸಂಸ್ಥೆಯು ಬಹಿರಂಗವಾಗಿ ಒಪ್ಪಿಕೊಂಡಿದೆ. ಇದು ಕ್ರೀಡೆಯ ಇತರ ಸಂಸ್ಥೆಗಳಿಗೂ ಒಂದು ಮಾದರಿಯಾಗಲಿ. ಕ್ರೀಡೆಯನ್ನು ಮೈಮಾಟದ ಪ್ರದರ್ಶನದಿಂದ ಹೊರತಂದು ಅವು ರಕ್ಷಿಸಲಿ. ಉಡುಪಿನ ಹೊರತಾದ ಕಾರಣಕ್ಕಾಗಿ ಜನರು ಪ್ರತಿ ಆಟವನ್ನೂ ಇಷ್ಟಪಡಲು ಪ್ರೇರಕವಾಗುವಂಥ ನಿಯಮಗಳನ್ನು ಎಲ್ಲ ಕ್ರೀಡಾ ಸಂಸ್ಥೆಗಳೂ ಜಾರಿಗೆ ತರಲಿ.

No comments:

Post a Comment