Monday, 29 September 2014

ಮಕ್ಸೂದ್ ಮತ್ತು ಹುಲಿಯನ್ನು ಈದ್‍ಗೆ ಮುಖಾಮುಖಿಗೊಳಿಸೋಣ

   ಮೃಗ ಎಂಬ ಪದಕ್ಕೆ ಡಿಕ್ಷನರಿಯಲ್ಲಿ ಪ್ರಾಣಿ, ಪಶು, ದುಷ್ಟಜಂತು, ಹಿಂಸ್ರಪ್ರಾಣಿ, ಕಸ್ತೂರಿ ಮೃಗ.. ಮುಂತಾದ ಅರ್ಥಗಳಿವೆ. ನಮ್ಮೆಲ್ಲರೊಳಗೂ ಒಂದು ‘ಮೃಗ’ ಇದೆ. ಸಂದರ್ಭಕ್ಕೆ ತಕ್ಕಂತೆ ಅದು ವರ್ತಿಸುತ್ತಲೂ ಇದೆ. ಕೆಲವೊಮ್ಮೆ ಪಶುವಿನಂತೆ, ಕೆಲವೊಮ್ಮೆ ಕಸ್ತೂರಿ ಮೃಗದಂತೆ, ಕೆಲವೊಮ್ಮೆ ಹಿಂಸಾತ್ಮಕವಾಗಿ, ಕೆಲವೊಮ್ಮೆ ದುಷ್ಟತನದಿಂದ.. ಹೀಗೆ ವಿವಿಧ ಸನ್ನಿವೇಶಗಳಲ್ಲಿ ನಮ್ಮೊಳಗಿನ ಮೃಗ ತನ್ನತನವನ್ನು ಪ್ರದರ್ಶಿಸುತ್ತಿರುತ್ತದೆ. ದೆಹಲಿಯ ಮೃಗಾಲಯದಲ್ಲಿದ್ದ ಹುಲಿಯೊಂದು ಯುವಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಘಟನೆಯು ಕಳೆದವಾರ ಮಾಧ್ಯಮಗಳಲ್ಲಿ ಸುದ್ದಿಗೀಡಾಯಿತು. ವಾಟ್ಸಪ್, ಫೇಸ್‍ಬುಕ್‍ಗಳಲ್ಲಿ ಆ 15 ನಿಮಿಷಗಳ ವೀಡಿಯೋ ಪ್ರಸಾರವಾಯಿತು. ಮಕ್ಸೂದ್ ಎಂಬ ಆ ಯುವಕನು ಹುಲಿಯ ಎದುರು ಅಕ್ಷರಶಃ ಪಶುವಿನಂತಿದ್ದ. ಬಿಟ್ಟುಬಿಡುವಂತೆ ಹುಲಿಯೊಂದಿಗೆ ವಿನಂತಿಸುತ್ತಿದ್ದ. ನಿಜವಾಗಿ, ಇದು ಆತನ ನೈಜ ಸ್ವಭಾವ ಎಂದು ಹೇಳುವಂತಿಲ್ಲ. ಮೃಗಾಲಯದೊಳಗೆ ಪಶುವಾದ ಆತ ಹೊರಗೆ ಈ ಮೊದಲು ಹುಲಿಯಂತೆ ವರ್ತಿಸಿರಲೂ ಬಹುದು. ಹಿಂಸಾತ್ಮಕ ಸ್ವಭಾವವನ್ನು ಪ್ರದರ್ಶಿಸಿರಬಹುದು. ಯಾಕೆಂದರೆ, ಈ ಜಗತ್ತಿನಲ್ಲಿ ಮನುಷ್ಯನಷ್ಟು ಬುದ್ಧಿವಂತ ಪ್ರಾಣಿ ಮತ್ತು ಅಷ್ಟೇ ಹಿಂಸಾತ್ಮಕ ಪ್ರಾಣಿ ಬೇರೊಂದಿಲ್ಲ. ಅಸೂಯೆ, ಅಹಂ, ಮೋಸ, ದಾಷ್ಟ್ರ್ಯತನ, ಹಗೆತನ, ಕೋಮುವಾದ...  ಮುಂತಾದ ಪದಗಳೆಲ್ಲ ಹೆಚ್ಚು ಹೊಂದುವುದು ಮನುಷ್ಯನಿಗೇ. ಹುಲಿಗೆ ತುಂಬಾ ಅಸೂಯೆ ಇದೆ, ಚಿರತೆ ಅಹಂಕಾರಿ, ಆನೆ ಮೋಸಗಾರ, ಪಶುವಿಗೆ ಹಗೆತನವಿದೆ ಎಂದೆಲ್ಲಾ ನಾವು ಹೇಳುವುದೇ ಇಲ್ಲ. ಆದರೂ ಪ್ರಾಣಿ ಜಗತ್ತಿನ ಮೇಲೆ ಧಾರಾಳ ಆರೋಪಗಳನ್ನು ಹೊರಿಸಿ ಮಾನವ ಜಗತ್ತು ಇವತ್ತು ಬದುಕುತ್ತಿದೆ. ಮಕ್ಸೂದ್‍ನು ಹುಲಿಯಿರುವ ಕಂದಕಕ್ಕೆ ಬೀಳುವ ಮೊದಲು ಆತನ ಸಹಿತ ಅಲ್ಲಿದ್ದವರೆಲ್ಲ ಹುಲಿಯನ್ನು ಮನಸಾರೆ ಆನಂದಿಸಿದ್ದರು. ಆದರೆ ಯಾವಾಗ ಮಕ್ಸೂದ್‍ನು ಹುಲಿಯ ಬಳಿಗೆ ಬಿದ್ದನೋ ಆ ಹುಲಿಯ ಸೌಂದರ್ಯ, ಆಕೃತಿ, ಬಿಳಿಪಟ್ಟೆ...  ಎಲ್ಲದರ ಕುರಿತಾದ ಮಾತುಗಳೂ  ಸ್ಥಗಿತಗೊಂಡು ಅದು ಕ್ರೂರವಾಗಿಯೂ ಮಕ್ಸೂದ್ ಪಶುವಾಗಿಯೂ ಕಾಣಿಸಿದ.
   ಒಂದು ರೀತಿಯಲ್ಲಿ, ಮಕ್ಸೂದ್ ಮತ್ತು ಹುಲಿ - ಇವೆರಡೂ ಬೇರೆ ಬೇರೆಯಲ್ಲ. ಓರ್ವನೇ  ಮನುಷ್ಯನ ಎರಡು ಮುಖಗಳು. ಮನುಷ್ಯ ಇವತ್ತು ಇಂಥ ಹತ್ತು-ಹಲವು ಮುಖಗಳೊಂದಿಗೆ ಬದುಕುತ್ತಿದ್ದಾನೆ. ಹಜ್ ನ ಉದ್ದೇಶ ಏನೆಂದರೆ, ಈ ಮುಖಗಳನ್ನು ಕಿತ್ತೆಸೆದು ಪ್ರಕೃತಿ ಸಹಜವಾದ ಮತ್ತು ಎಳ್ಳಷ್ಟೂ ಅಪ್ರಾಮಾಣಿಕತೆಯಿಲ್ಲದ ವ್ಯಕ್ತಿತ್ವಗಳನ್ನು ತಯಾರಿಸುವುದು. ಇಸ್ಮಾಈಲ್‍ರ(ಅ) ನೆನಪಲ್ಲಿ ಪ್ರಾಣಿಬಲಿಯನ್ನು ಕೊಡಲು ಮುಂದಾಗುವ ಸಮಾಜವು ‘ಮಕ್ಸೂದ್ ಮತ್ತು ಹುಲಿ'ಯನ್ನು ಮತ್ತೆ ಮತ್ತೆ ನೆನಪಿಸಿ ಕೊಳ್ಳಬೇಕಾದ ತುರ್ತು ಅಗತ್ಯವಿದೆ. ಪ್ರಾಣಿಯನ್ನು ಬಲಿ ಕೊಡುವಾಗ ಮತ್ತು ಅದರ ಮಾಂಸವನ್ನು ಸೇವಿಸುವಾಗ ಪ್ರತಿಯೋರ್ವರೂ ತಮ್ಮ ‘ಹುಲಿತ್ವ ಮತ್ತು ಮಕ್ಸೂದತ್ವ'ಕ್ಕೆ ಶಾಶ್ವತ ವಿದಾಯ ಹೇಳುವ ಪ್ರತಿಜ್ಞೆ ಮಾಡಬೇಕಾಗಿದೆ. ಅಲ್ಲಾಹನಿಗೆ ಪ್ರಾಣಿಯ ರಕ್ತವಾಗಲಿ ಮಾಂಸವಾಗಲಿ ತಲುಪುವುದಿಲ್ಲ (22:37) ಎಂಬ ಕುರ್‍ಆನ್ ವಚನದ ಉದ್ದೇಶವೂ ಇದುವೇ.
   ನಿಜವಾಗಿ, ಪ್ರತಿವರ್ಷ ಬಕ್ರೀದ್ ಆಗಮಿಸುವುದು ಪ್ರಾಣಿಬಲಿಯನ್ನು ನೀಡುವುದಕ್ಕೋ ಅದರ ಮಾಂಸವನ್ನು ತಿನ್ನುವುದಕ್ಕೋ ಅಲ್ಲ. ಇದು ದೊಡ್ಡದೊಂದು ಗುರಿಯ ಬಿಡಿ ಬಿಡಿ ಭಾಗಗಳಷ್ಟೇ. ನಮ್ಮೊಳಗಿನ ಎಲ್ಲ ಬಗೆಯ ಮಾಲಿನ್ಯಗಳಿಗೆ ಕತ್ತಿ ಇಡುವುದರ ಸಂಕೇತವಾಗಿಯಷ್ಟೇ ನಾವದನ್ನು ಪರಿಗಣಿಸಬೇಕು. ಬಲಿ ನೀಡುವಾಗ ಪ್ರಾಣಿಗಾಗುವ ನೋವು ಮತ್ತು ಒದ್ದಾಟಗಳು ಈದ್ ಆಚರಿಸುವ ಪ್ರತಿಯೋರ್ವರ ಒಳಗೂ ಆಗಬೇಕು. ಹೊಸ ಬಟ್ಟೆ ಧರಿಸುವಾಗ, ಮಾಂಸದೂಟ ಸೇವಿಸುವಾಗ, ಆಲಿಂಗಿಸುವಾಗ, ಲಬ್ಬೈಕ್ ಹೇಳುವಾಗ.. ಎಲ್ಲ ಸಂದರ್ಭಗಳಲ್ಲೂ ಆ ನೋವು ಮನದೊಳಗೆ ಪ್ರತಿಧ್ವನಿಸಬೇಕು. ಮಕ್ಸೂದ್ ಮತ್ತು ಹುಲಿಯ ನಡುವೆ ನಡೆದ 15 ನಿಮಿಷಗಳ ದೇಹಭಾಷೆಯ ಸಂವಾದ ಮತ್ತು ಅಂತಿಮವಾಗಿ ಹುಲಿತ್ವವು ಮೇಲುಗೈ ಪಡೆದುದನ್ನು ನಾವು ಈದ್‍ನ ಸಂದರ್ಭದಲ್ಲಿ ಮುಖಾಮುಖಿಗೊಳಿಸಬೇಕು. ಮನುಷ್ಯ ಪಶುವೂ ಆಗಬಲ್ಲ, ಹುಲಿಯೂ ಆಗಬಲ್ಲ. ಸಂದರ್ಭಕ್ಕೆ ತಕ್ಕಂತೆ ತನ್ನ ಪಶುತ್ವವನ್ನೂ ಹುಲಿತ್ವವನ್ನೂ ಪ್ರದರ್ಶಿಸಬಲ್ಲ. ಮಾತ್ರವಲ್ಲ, ಹುಲಿಯಲ್ಲೂ ಪಶುವಲ್ಲೂ ಇಲ್ಲದ ಅನೇಕಾರು ದುರ್ಗುಣಗಳನ್ನೂ ಅನಾವರಣಗೊಳಿಸಬಲ್ಲ. ಈದ್ ಮುಖ್ಯವಾಗಬೇಕಾದದ್ದು ಈ ಎಲ್ಲ ಹಿನ್ನೆಲೆಗಳಲ್ಲಿ. ಅದು ಮಕ್ಸೂದತ್ವ ಮತ್ತು ಹುಲಿತ್ವದಿಂದ ನಮ್ಮನ್ನು ಮುಕ್ತಗೊಳಿಸಿ ಇಬ್ರಾಹೀಮ್ ಮತ್ತು ಇಸ್ಮಾಈಲತ್ವದ ನೈಜ ಪ್ರತಿನಿಧಿಗಳಾಗಿ ಬದಲಿಸಬೇಕು. ಮಕ್ಸೂದ್ ಮತ್ತು ಹುಲಿಯನ್ನು ಈದ್‍ಗೆ ಮುಖಾಮುಖಿಗೊಳಿಸಿದರೆ ಈದ್ ನಮ್ಮಿಂದೇನು ಬಯಸುತ್ತದೆ ಅನ್ನುವುದು ಸ್ಪಷ್ಟವಾಗುತ್ತದೆ. ಹಾಗಾದಾಗ ಈ ಜಗತ್ತಿಗೆ ಇಬ್ರಾಹೀಮ್, ಇಸ್ಮಾಈಲ್ ಮತ್ತು ಹಾಜಿರಾರ ಕೊರತೆ ಎದುರಾಗುವುದಿಲ್ಲ. ಹಾಗಾಗಲಿ ಎಂದು ಹಾರೈಸೋಣ.

No comments:

Post a Comment