Wednesday, 8 October 2014

ದೇಶಪ್ರೇಮದ ಅಮಲಿನಲ್ಲಿ ದೇಶದ್ರೋಹಿಯಾದ ಸಲ್ಮಾನ್

   ಕೇರಳದ 25 ವರ್ಷ ಪ್ರಾಯದ ಸಲ್ಮಾನ್ ಎಂಬ ಯುವಕನು ನಮ್ಮ ದೇಶಪ್ರೇಮ ಮತ್ತು ದೇಶಾಭಿಮಾನದ ಪರಿಕಲ್ಪನೆಯ ಸುತ್ತ ಚರ್ಚೆಯೊಂದನ್ನು ಹುಟ್ಟು ಹಾಕಿದ್ದಾನೆ. ಆಗಸ್ಟ್ 18ರಂದು ಸಲ್ಮಾನ್ ಮತ್ತು ಇತರ 5 ಮಂದಿ ಗೆಳೆಯರು ತಿರುವನಂತಪುರದ ಸಿನಿಮಾ ಥಿಯೇಟರ್‍ಗೆ ಪ್ರವೇಶಿಸಿದ್ದಾರೆ. ಪ್ರತಿ ಶೋದ (ದೇಖಾವೆ) ಬಳಿಕ ರಾಷ್ಟ್ರಗೀತೆ ನುಡಿಸುವುದು ಕೇರಳದ ಥಿಯೇಟರ್‍ಗಳಲ್ಲಿ ವಾಡಿಕೆ. ಆದರೆ ಸಲ್ಮಾನ್ ಮತ್ತು ಗೆಳೆಯರು ರಾಷ್ಟ್ರಗೀತೆಯ ಸಮಯದಲ್ಲಿ ಎದ್ದು ನಿಲ್ಲಲಿಲ್ಲ. ಇದನ್ನು ಇತರ ಸಭಿಕರು ಆಕ್ಷೇಪಿಸಿದಾಗ ಮಾತಿನ ಚಕಮಕಿಗಳು ನಡೆದುವು. ಬಳಿಕ ಒಂದು ದಿನ ಮಧ್ಯರಾತ್ರಿ ಮನೆಗೆ ನುಗ್ಗಿದ ಪೊಲೀಸರು ಸಲ್ಮಾನ್‍ನನ್ನು ಬಂಧಿಸಿದರು. ಆತನ ಮೇಲೆ ದೇಶದ್ರೋಹದ (Sedition) ಕೇಸು ದಾಖಲಿಸಿದರಲ್ಲದೇ ಫೇಸ್‍ಬುಕ್‍ನಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಅವಮಾನಿಸುವ ಸ್ಟೇಟಸ್ ಹಾಕಿದ್ದಾನೆ ಎಂಬ ಆರೋಪದಲ್ಲಿ ಐಟಿ ಕಾಯ್ದೆಯ ಪ್ರಕಾರ ಇನ್ನೊಂದು ಮೊಕದ್ದಮೆಯನ್ನೂ ಹೂಡಿದರು. ಒಂದು ತಿಂಗಳ ಕಾಲ ಸಲ್ಮಾನ್ ಜೈಲಲ್ಲಿದ್ದ. ಇದೇ ವೇಳೆ ಇತರ ಐದು ಮಂದಿಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಹರಿಹರ ಶರ್ಮಾ ಎಂಬ ಗೆಳೆಯ ನಿರೀಕ್ಷಣಾ ಜಾವಿೂನು ಪಡೆದುಕೊಂಡ. ಪ್ರಕರಣವು ಕೇರಳದಲ್ಲಿ ಪ್ರತಿಭಟನೆ ಮತ್ತು ತೀವ್ರ ವಾಗ್ವಾದಕ್ಕೆ ಕಾರಣವೂ ಆಯಿತು. ಜಾವಿೂನು ಪಡೆದು ಹೊರಬಂದ ಸಲ್ಮಾನ್, ಪೊಲೀಸರು ಮತ್ತು ಜೈಲಧಿಕಾರಿಗಳಿಂದ ತನಗಾದ ಅನುಭವವನ್ನು ಮಾಧ್ಯಮದ ಮುಂದೆ ಹೇಳಿಕೊಂಡ. ತನ್ನನ್ನು ಮುಸ್ಲಿಮ್ ಭಯೋತ್ಪಾದಕ ಮತ್ತು ಪಾಕ್ ಗೂಢಚರ ಎಂದು ಪೊಲೀಸರು ನಿಂದಿಸಿರುವುದಾಗಿಯೂ ಆತ ಆಪಾದಿಸಿದ.
 ಅಂದಹಾಗೆ, ರಾಷ್ಟ್ರಗೀತೆಯನ್ನು ಗೌರವಿಸಬೇಕಾದುದು ಪ್ರತಿಯೋರ್ವ ನಾಗರಿಕನ ಕರ್ತವ್ಯ. ಇದಕ್ಕೆ ಸಲ್ಮಾನ್ ಆಗಲಿ ಹರಿಹರ ಶರ್ಮಾ ಆಗಲಿ ಹೊರತಲ್ಲ. ರಾಷ್ಟ್ರಗೀತೆ ಎಂಬುದು ಮೋಹನ್ ಲಾಲ್‍ನದ್ದೋ ಮಮ್ಮುಟಿಯದ್ದೋ ಸಿನಿಮಾದ ಹಾಡಿನಂತಲ್ಲ. ಅದಕ್ಕೆ ಅದರದ್ದೇ ಆದ ಗೌರವ ಮತ್ತು ಸ್ಥಾನಮಾನವಿದೆ. ಅದು ಒಂದು ದೇಶವನ್ನು ಮತ್ತು ಅದರ ಸಂಸ್ಕ್ರಿತಿಯನ್ನು ಪ್ರತಿನಿಧಿಸುತ್ತದೆ. ಈ ಅರಿವು ಮತ್ತು ಎಚ್ಚರಿಕೆ ಸಲ್ಮಾನ್ ಹಾಗೂ ಗೆಳೆಯರ ಬಳಗದಲ್ಲಿ ಇರಲೇಬೇಕಿತ್ತು. ರಾಷ್ಟ್ರಗೀತೆಯನ್ನು ಥಿಯೇಟರ್ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ನುಡಿಸುವುದು ಕಡ್ಡಾಯವಲ್ಲ ಎಂಬ ಕೇಂದ್ರ ಸರಕಾರದ ಆದೇಶವನ್ನು ಮುಂದುಮಾಡಿ, ಈ ಘಟನೆಯನ್ನು ಸಮರ್ಥಿಸುವುದು ಸರಿಯೂ ಆಗುವುದಿಲ್ಲ. ಆದರೆ ಸಲ್ಮಾನ್‍ನ ಬಂಧನಕ್ಕೆ ಕೇವಲ ‘ಎದ್ದು ನಿಂತಿಲ್ಲ' ಎಂಬುದೊಂದೇ ಕಾರಣವೇ ಅಥವಾ ಆತನ ಧರ್ಮವೂ ಆ ಬಂಧನದ ಹಿಂದಿದೆಯೇ? ಉಳಿದ ಐದು ಮಂದಿಯ ಮನೆಗೆ ಮಧ್ಯರಾತ್ರಿ ದಾಳಿ ಮಾಡದ ಪೊಲೀಸರು, ಈತನನ್ನೇ ಆ ದಾಳಿಗೆ ಆಯ್ಕೆ ಮಾಡಿಕೊಂಡಿದ್ದೇಕೆ? ಮುಸ್ಲಿಮ್ ಭಯೋತ್ಪಾದಕ ಮತ್ತು ಪಾಕ್ ಗೂಢಚರ ಎಂದಿರುವುದರ ಅರ್ಥವೇನು? ಒಂದು ವೇಳೆ ಈ ಬಂಧನಕ್ಕೆ ಧರ್ಮದ ಬಣ್ಣವೇ ಇಲ್ಲ ಎಂದಾದರೆ ಆತನನ್ನು ನಕ್ಸಲೀಯ ಎಂದೋ ಚೀನಾ ಗೂಢಚರ ಎಂದೋ ಕರೆಯಬಹುದಿತ್ತಲ್ಲವೇ? ಅಲ್ಲದೇ, ಆತನ ಮೇಲೆ ಆ ಘಟನೆಯ ಹೊರತು ಇನ್ನಾವ ಆರೋಪಗಳೂ ಇರಲಿಲ್ಲ. ಈ ಹಿಂದೆ ದೇಶವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ ಆರೋಪವೂ ಇಲ್ಲ. ಇಷ್ಟಿದ್ದೂ ಆತನನ್ನು ಭಯೋತ್ಪಾದಕನೆಂದು ಕರೆದಿರುವುದು ಮತ್ತು ದೇಶದ್ರೋಹದ ಮೊಕದ್ದಮೆ ದಾಖಲಿಸಿರುವುದಕ್ಕೆಲ್ಲ ಏನೆನ್ನಬೇಕು?
 ದೇಶಪ್ರೇಮ ಎಂಬುದು ಬರೇ ಒಂದು ಪದವಾಗಿ ಮತ್ತು ಪ್ರಾಯೋಗಿಕತೆಯ ಪ್ರಜ್ಞೆಯಾಗಿ - ಹೀಗೆ ಎರಡು ರೀತಿಯಲ್ಲಿ ಈ ದೇಶದಲ್ಲಿ ಇವತ್ತು ಚಲಾವಣೆಯಲ್ಲಿದೆ. ಒಂದು ಪದವೆಂಬ ನೆಲೆಯಲ್ಲಿ ದೇಶಪ್ರೇಮಕ್ಕೆ ಕರ್ತವ್ಯ ಮತ್ತು ಹೊಣೆಗಾರಿಕೆಗಳೇನೂ ಇಲ್ಲ. ಸಂದರ್ಭಕ್ಕೆ ತಕ್ಕಂತೆ ಈ ‘ದೇಶಪ್ರೇಮ' ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಜಾಗೃತಗೊಳ್ಳಬಹುದು. ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ನಡೆಸುವುದೂ ದೇಶಪ್ರೇಮವಾಗುತ್ತದೆ. ಮದ್ರಸಾಗಳನ್ನು ಭಯೋತ್ಪಾದಕ ಕೇಂದ್ರ ಎನ್ನುವುದು, ಮುಸ್ಲಿಮ್ ಐಡೆಂಟಿಟಿಯನ್ನು ಪ್ರಶ್ನಿಸುವುದು, ಭಯೋತ್ಪಾದಕರೆನ್ನುವುದು.. ಎಲ್ಲವೂ ದೇಶಪ್ರೇಮದ ಭಾಗವಾಗಿ ಗುರುತಿಗೀಡಾಗುತ್ತದೆ. ಈ ದೇಶಪ್ರೇಮ ತೀರಾ ಸುಲಭದ್ದು. ವರ್ಷದಲ್ಲಿ ಎರಡು ಬಾರಿ ಭಾರತದ ತ್ರಿವರ್ಣ ಹಾರಿಸುವುದು ಮತ್ತು  ಮೊಗಲರು ಹಾಗೂ ಇನ್ನಿತರ ಮುಸ್ಲಿಮ್ ದೊರೆಗಳನ್ನು ದೂಷಿಸುವುದರಿಂದ ದೇಶಪ್ರೇಮದ ಬೇಡಿಕೆ ಪೂರ್ತಿಯಾಗುತ್ತದೆ. ಆದರೆ ಒಂದು ಪ್ರಾಯೋಗಿಕ ಪ್ರಜ್ಞೆಯೆಂಬ ನೆಲೆಯಲ್ಲಿ ‘ದೇಶಪ್ರೇಮ'ವು ಇಷ್ಟು ಸರಳ ಮತ್ತು ಸುಲಭವಾಗಿಲ್ಲ. ಅದಕ್ಕೂ ಈ ದೇಶಕ್ಕೂ ಮತ್ತು ಇಲ್ಲಿನ ಜನರಿಗೂ ಬಿಡಿಸಲಾರದ ನಂಟಿದೆ. ಈ ದೇಶದ ಸಂವಿಧಾನವನ್ನು ಮತ್ತು ಅದು ಪ್ರತಿಪಾದಿಸುವ ಸಮಾನತೆಯನ್ನು ಈ ದೇಶಪ್ರೇಮ ಗೌರವಿಸುತ್ತದೆ. ಸಕ್ರಮ ಮತ್ತು ಅಕ್ರಮ ಎರಡೂ ಸಂದರ್ಭದಲ್ಲೂ ಅದು ಕಾನೂನನ್ನು ಗೌರವಿಸುತ್ತದೆ. ಈ ದೇಶದ ಪ್ರತಿಯೋರ್ವ ನಾಗರಿಕನ ಜೀವ, ಸೊತ್ತು, ಮಾನ, ಹಕ್ಕುಗಳನ್ನು ಅದು ಗೌರವಾರ್ಹ ಎಂದು ಪ್ರತಿಪಾದಿಸುತ್ತದೆ. ಪ್ರತಿಭೆಯಲ್ಲಾಗಲಿ, ಅಪರಾಧದಲ್ಲಾಗಲಿ ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬಿತ್ಯಾದಿ ವಿಭಜನೆ ಮಾಡುವುದನ್ನು ಅದು ದೇಶದ್ರೋಹತನ ಎಂದೇ ಕರೆಯುತ್ತದೆ. ನಿಜವಾಗಿ, ಈ ದೇಶಪ್ರೇಮದ ಪ್ರತಿಪಾದಕರಿಗೆ ಮಚ್ಚು, ಲಾಂಗು, ಬಂದೂಕುಗಳ ಅಗತ್ಯವಿಲ್ಲ. ಪ್ರಚೋದಕ ಭಾಷಣಗಳನ್ನು ಮಾಡಬೇಕಾಗಿಯೂ ಇಲ್ಲ. ಆದರೆ ಬರೇ ಪದವಾಗಿರುವ ದೇಶಪ್ರೇಮಕ್ಕೆ ಇವೆಲ್ಲವುಗಳ ಅಗತ್ಯವಿದೆ. ಅದು ಜೀವಂತವಾಗಿರುವುದೇ ಕಾನೂನುಬಾಹಿರ ಚಟುವಟಿಕೆಗಳ ಮೂಲಕ. ನಿಜವಾಗಿ, ಸಲ್ಮಾನ್ ಪ್ರಕರಣ ಚರ್ಚಾರ್ಹವಾಗಬೇಕಾದದ್ದು ಈ ಹಿನ್ನೆಲೆಯಲ್ಲೇ. ಬಲಪಂಥೀಯ ವಿಚಾರಧಾರೆಗೆ ರಾಜಕೀಯ ಅಧಿಕಾರ ಲಭ್ಯವಾಗಿರುವಾಗ ಮತ್ತು ಸರಕಾರಿ ವಾಹಿನಿಯಾದ ದೂರದರ್ಶನದಲ್ಲೇ ಭಾಗವತ್‍ರಂಥವರಿಗೆ ಭಾಷಣದ ಅವಕಾಶ ಸಿಗುತ್ತಿರುವಾಗ ಇಂಥ ಪ್ರಕರಣಗಳನ್ನು ಆಕಸ್ಮಿಕ ಎಂದು ಹೇಳುವಂತಿಲ್ಲ. ಈ ರೀತಿಯ ದೇಶಪ್ರೇಮದಲ್ಲೊಂದು ಅಮಲಿದೆ. ಈ ಅಮಲು ಸರಿ-ತಪ್ಪುಗಳನ್ನು ಕಡೆಗಣಿಸುವಷ್ಟು ಅಪಾಯಕಾರಿಯಾದದ್ದು. ಅದು ವ್ಯವಸ್ಥೆಯನ್ನು ಆವರಿಸಿಕೊಂಡು ಬಿಟ್ಟರೆ, ಗಂಭೀರವಲ್ಲದ ಪ್ರಕರಣವೂ ಗಂಭೀರವಾಗುತ್ತದೆ. ಸಾಮಾನ್ಯ ಕ್ರಿಮಿನಲ್ ಪ್ರಕರಣವೂ ದೇಶದ್ರೋಹವಾಗುತ್ತದೆ. ವ್ಯಕ್ತಿಯ ಚರ್ಮ, ಧರ್ಮ ನೋಡಿಕೊಂಡು ಪ್ರಕರಣವು ಭೀಕರ ಅಥವಾ ಸಾಮಾನ್ಯವಾಗಿ ವಿಭಜನೆಗೊಳ್ಳುತ್ತದೆ.
 ನಿಜವಾಗಿ, ದೇಶಪ್ರೇಮ, ದೇಶಾಭಿಮಾನ, ಸಮಾನ ಸ್ವಾತಂತ್ರ್ಯ.. ಮುಂತಾದುವುಗಳೆಲ್ಲ ವಿಸ್ತೃತ ಅರ್ಥವುಳ್ಳವು. ಆದರೆ ಅದನ್ನು ಈ ದೇಶದ ಒಂದು ವರ್ಗ ಅತ್ಯಂತ ಸೀಮಿತ ಅರ್ಥಕ್ಕೆ ಇಳಿಸಿ ಬಿಟ್ಟಿದೆ. ರಾಷ್ಟ್ರಗೀತೆಗೆ ಎದ್ದು ನಿಲ್ಲುತ್ತಲೇ ಈ ವರ್ಗ ಕಾನೂನುಬಾಹಿರ ಕೃತ್ಯಗಳಲ್ಲೂ ಭಾಗಿಯಾಗುತ್ತವೆ ಮತ್ತು ಬಹಿರಂಗವಾಗಿಯೇ ಈ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತವೆ. ಸಲ್ಮಾನ್ ಪ್ರಕರಣವನ್ನು ವಿಶ್ಲೇಷಿಸುವಾಗ ಈ ದ್ವಂದ್ವವೂ ಚರ್ಚೆಗೊಳಗಾಗಬೇಕಾದುದು ಅತಿ ಅಗತ್ಯ. ಆದ್ದರಿಂದ ರಾಷ್ಟ್ರಗೀತೆಯನ್ನು ಗೌರವಿಸದ ಸಲ್ಮಾನ್‍ನ ವರ್ತನೆಯನ್ನು ಖಂಡಿಸುತ್ತಲೇ, ಆತನೊಂದಿಗೆ ವ್ಯವಸ್ಥೆ ನಡೆದುಕೊಂಡ ರೀತಿಯನ್ನೂ ನಾವು ಪ್ರಶ್ನಿಸಬೇಕಾಗುತ್ತದೆ.

No comments:

Post a Comment