Wednesday, 22 October 2014

‘ಭಾರತ್ ಮಾತಾಕಿ ಜೈ’ಯ ಒತ್ತಡ ಮತ್ತು ಐಸಿಸ್‍ನ ಬಾವುಟ

   ಕಾಶ್ಮೀರದಲ್ಲಿ ಕಳೆದವಾರ ಕಾಣಿಸಿಕೊಂಡ ಬಾವುಟವೊಂದು ಮಾಧ್ಯಮಗಳ ಕುತೂಹಲವನ್ನು ಕೆರಳಿಸಿವೆ. ಕೆಲವು ಪತ್ರಿಕೆಗಳು ಈ ಬಾವುಟವನ್ನು ಮುಂದಿಟ್ಟುಕೊಂಡು ಸಂಪಾದಕೀಯ ಬರೆದಿವೆ. ಇರಾಕ್ ಮತ್ತು ಸಿರಿಯದಲ್ಲಿ ಸುದ್ದಿಯಲ್ಲಿರುವ ಐಸಿಸ್‍ನ (ISIS) ಬಾವುಟವನ್ನು ಕಾಶ್ಮೀರದ ಯುವಕರು ಪ್ರದರ್ಶಿಸಿರುವುದನ್ನು ಅಲ್ ಕಾಯಿದಾ ಮುಖಂಡ ಜವಾಹಿರಿಯ ಇತ್ತೀಚಿನ ಟೇಪಿನೊಂದಿಗೆ ಜೋಡಿಸಿ ಕೆಲವರು ಚರ್ಚಿಸುತ್ತಿದ್ದಾರೆ. ‘ಐಸಿಸ್ ಭಾರತಕ್ಕೂ ಕಾಲಿಟ್ಟಿತೇ' ಅನ್ನುವ ಶೀರ್ಷಿಕೆಯಲ್ಲಿ ಟಿ.ವಿ. ಚಾನೆಲ್‍ಗಳು ಸುದ್ದಿಯನ್ನೂ ಪ್ರಸಾರ ಮಾಡಿವೆ. ಈ ಮೊದಲೂ ತಮಿಳ್ನಾಡಿನಲ್ಲಿ ಮತ್ತು ಕಾಶ್ಮೀರದಲ್ಲಿ ಈ ಬಾವುಟ ಹಾರಾಡಿತ್ತು ಎಂಬ ವಾದಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ ಅನಾಗರಿಕತೆ ಮತ್ತು ಮಾನವ ಹತ್ಯೆಯ ಸುದ್ದಿಗಳನ್ನಷ್ಟೇ ಕೊಡುತ್ತಿರುವ ಐಸಿಸ್ ಎಂಬ ಗುಂಪಿಗೆ ಭಾರತದಲ್ಲೂ ಬೆಂಬಲಿಗರಿರುವರೋ ಎಂಬ ಅನುಮಾನವೊಂದನ್ನು ಹುಟ್ಟುಹಾಕುವ ಸನ್ನಿವೇಶಗಳು ಸೃಷ್ಟಿಯಾಗುತ್ತಿರುವಂತೆ ಕಾಣುತ್ತಿದೆ.
 ಎರಡು ವರ್ಷಗಳ ಹಿಂದಿನವರೆಗೂ ಈ ದೇಶದಲ್ಲಿ ಲಷ್ಕರೆ ತ್ವಯ್ಯಿಬ, ಹರ್ಕತುಲ್ ಮುಜಾಹಿದೀನ್, ಇಂಡಿಯನ್ ಮುಜಾಹಿದೀನ್.. ಮುಂತಾದ ಹೆಸರುಗಳೇ ಸುದ್ದಿಯಲ್ಲಿದ್ದುವು. ಇವುಗಳ ಅಸ್ತಿತ್ವ, ಅನುಯಾಯಿಗಳ ಸಂಖ್ಯೆ, ಅವುಗಳ ಮನುಷ್ಯ ವಿರೋಧಿ ಧೋರಣೆ ಮುಂತಾದುವುಗಳು ಹತ್ತು-ಹಲವು ಬಾರಿ ಇಲ್ಲಿ ಚರ್ಚೆಗೀಡಾದುವು. ಭಾರತೀಯ ಮುಸ್ಲಿಮರನ್ನು ಭಯೋತ್ಪಾದಕರೆಂದೋ ಅದರ ಬೆಂಬಲಿಗರೆಂದೋ ಕರೆಯುವುದಕ್ಕೆ ಆ ಹೆಸರುಗಳು ಬಳಕೆಯಾದುವು. ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲ ಮುಸ್ಲಿಮರೇ.. ಎಂದೂ ವ್ಯಾಖ್ಯಾನಿಸಲಾಯಿತು. ಆದರೆ ಇವತ್ತು ಈ ಲಷ್ಕರ್-ಮುಜಾಹಿದೀನ್‍ಗಳ ಪತ್ತೆಯೇ ಇಲ್ಲ. ಮಾಧ್ಯಮಗಳಲ್ಲಿ ಅಪ್ಪಿ-ತಪ್ಪಿಯೂ ಅವುಗಳ ಹೆಸರು ಕಾಣಿಸಿಕೊಳ್ಳುತ್ತಿಲ್ಲ. ಭಾರತದಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವುದಕ್ಕಾಗಿಯೇ ಅಸ್ತಿತ್ವಕ್ಕೆ ಬಂದ ಈ ಲಷ್ಕರ್‍ಗಳು ಮತ್ತು ಅವುಗಳ ಉಗ್ರವಾದಿ ಕಾರ್ಯಕರ್ತರು ಸದ್ಯ ಏನು ಮಾಡುತ್ತಿದ್ದಾರೆ, ಎಲ್ಲಿದ್ದಾರೆ ಅನ್ನುವುದರ ಸುತ್ತ ಚರ್ಚೆಗಳೂ ನಡೆಯುತ್ತಿಲ್ಲ. ಆದರೆ ಇವುಗಳ ಸ್ಥಾನದಲ್ಲಿ ಇವತ್ತು ಐಸಿಸ್ ಎಂಬ ಹೊಸ ಹೆಸರು ಕಾಣಿಸಿಕೊಳ್ಳತೊಡಗಿದೆ. ಈ ಐಸಿಸ್‍ನ ಮೇಲೆ ಇವತ್ತು ಹೊರಿಸಲಾಗಿರುವ ಆರೋಪಗಳನ್ನು ಪರಿಗಣಿಸಿದರೆ, ಅದು ಮೆದುಳು ಸ್ವಸ್ಥ ಇರುವ ಮನುಷ್ಯರ ಗುಂಪು ಎಂದು ನಂಬುವುದಕ್ಕೇ ಕಷ್ಟವಿದೆ. ಸುನ್ನಿಗಳ ಹೊರತಾದ ಎಲ್ಲರನ್ನೂ ಅದು ಕೊಲ್ಲುತ್ತಿದೆ. ಪತ್ರಕರ್ತರು, ಸೇವಾ ಕಾರ್ಯಕರ್ತರ ಕತ್ತು ಸೀಳಿ ವೀಡಿಯೋ ಬಿಡುಗಡೆಗೊಳಿಸುತ್ತಿದೆ. ಬಹುದೇವಾರಾಧಕರಾದ ಯಜೀದಿಗಳನ್ನು ಸತಾಯಿಸುತ್ತಿದೆ. ಮಹಿಳೆಯರನ್ನು ಗುಲಾಮರನ್ನಾಗಿ ಬಳಸಿಕೊಳ್ಳುತ್ತಿದೆ. ಮಾತ್ರವಲ್ಲ, ಈ ಗುಂಪಿನ ನಾಯಕ ಅಬೂಬಕರ್ ಬಗ್ದಾದಿಯು 2004ರಲ್ಲಿ ಬರೆದ ಮತ್ತು ‘ದಿ ಮ್ಯಾನೇಜ್‍ಮೆಂಟ್ ಆಫ್  ಸೆವೇಜೆರಿ' ಎಂಬ ಹೆಸರಲ್ಲಿ 2006ರಲ್ಲಿ ಇಂಗ್ಲಿಷ್‍ಗೆ ಅನುವಾದಗೊಂಡ ಪುಸ್ತಕದ ವಿವರಗಳೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ವಿಲಿಯಂ ಮೆಕಾಂಟ್ ಎಂಬವರು ಅನುವಾದಿಸಿದ ಆ ಪುಸ್ತಕದಲ್ಲಿ ಇವೆ ಎಂದು ಹೇಳಲಾಗುತ್ತಿರುವ ಅಂಶಗಳನ್ನು ನೋಡಿದರೆ, ಆರೋಗ್ಯವಂತ ಮನುಷ್ಯನೊಬ್ಬ ಹಾಗೆಲ್ಲ ಬರೆಯಬಹುದು ಎಂದು ಊಹಿಸುವುದಕ್ಕೂ ಸಾಧ್ಯವಿಲ್ಲ. ದುರಂತ ಏನೆಂದರೆ, ಅಬೂಬಕರ್ ಬಗ್ದಾದಿಯ ಐಸಿಸ್‍ನ ಬಗ್ಗೆ, ಆತನ ಖಿಲಾಫತ್ ಘೋಷಣೆಯ ಬಗ್ಗೆ ಮತ್ತು ರಕ್ತದಾಹದ ಬಗ್ಗೆ ಧಾರಾಳ ವಿವರಗಳನ್ನೂ ಸಂಶೋಧಿತ ವರದಿಗಳನ್ನೂ ಒದಗಿಸುತ್ತಿರುವ ಮಾಧ್ಯಮ ಜಗತ್ತು ಆತನ ಹಿನ್ನೆಲೆಯ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಎರಡು ವರ್ಷಗಳ ಹಿಂದೆ ದಿಢೀರ್ ಆಗಿ ಚರ್ಚೆಗೆ ಬಂದ ಈ ವ್ಯಕ್ತಿಯು ಮೊದಲು ಎಲ್ಲಿದ್ದ, ಏನಾಗಿದ್ದ ಎಂಬುದನ್ನು ಚರ್ಚೆಗೆ ಒಳಪಡಿಸುತ್ತಿಲ್ಲ. ಗ್ವಾಂಟನಾಮೋ ಜೈಲಲ್ಲಿದ್ದ ಈತನನ್ನು ಅಮೇರಿಕ ಯಾವ ಕಾರಣಕ್ಕಾಗಿ ಬಿಡುಗಡೆಗೊಳಿಸಿತು ಅನ್ನುವುದು ಈ ವರೆಗೂ ಬಹಿರಂಗವಾಗಿಲ್ಲ. ಐಸಿಸ್ ಇವತ್ತು ಬಳಸುತ್ತಿರುವ ಆಯುಧಗಳು ಎಷ್ಟು ಆಧುನಿಕವಾದವು ಎಂದರೆ, ಸಿರಿಯಾ ಅಥವಾ ಇರಾಕ್‍ನ ಸರಕಾರಗಳಿಗೂ ಅದನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಆಯುಧಗಳನ್ನು ಸ್ವಯಂ ಉತ್ಪಾದಿಸುವ ವೈಜ್ಞಾನಿಕ ಬಲವಾಗಲಿ, ಸುಸಜ್ಜಿತ ಕಾರ್ಖಾನೆಯಾಗಲಿ ಇಲ್ಲದ ಗುಂಪೊಂದು  ಆಧುನಿಕ ಆಯುಧಗಳನ್ನು ಪಡೆಯುತ್ತಿರುವುದು ಎಲ್ಲಿಂದ? ಅರಬ್ ರಾಷ್ಟ್ರಗಳ ಹೆಸರಲ್ಲಿ ಮೂರನೆಯ ಶಕ್ತಿಯೊಂದು ಐಸಿಸ್ ಅನ್ನು ನಿಯಂತ್ರಿಸುತ್ತಿದೆಯೇ, ಅದರ ಉದ್ದೇಶ ಏನಿರಬಹುದು?
 ನಿಜವಾಗಿ, ಯಾವುದೇ ಒಂದು ಬಾವುಟವನ್ನು ಹೊಲಿಯುವುದಕ್ಕೋ ಪ್ರದರ್ಶಿಸುವುದಕ್ಕೋ ಕಷ್ಟವೇನೂ ಇಲ್ಲ. ಆದರೆ ಅದನ್ನು ಹೊಲಿಯುವವರಿಗೆ ಮತ್ತು ಪ್ರದರ್ಶಿಸುವವರಿಗೆ ತಾನು ಯಾವುದನ್ನು ಹೊಲಿಯುತ್ತಿದ್ದೇನೆ ಮತ್ತು ಪ್ರದರ್ಶಿಸುತ್ತಿದ್ದೇನೆ ಅನ್ನುವ ಎಚ್ಚರಿಕೆ ಇರಬೇಕು. ಐಸಿಸ್ ಎಂಬುದು ಕಾಶ್ಮೀರ ಎಂದಲ್ಲ, ಈ ಜಗತ್ತಿನ ಯಾವ ಮೂಲೆಯಲ್ಲಿರುವ ಮುಸ್ಲಿಮರ ಸಮಸ್ಯೆಗಳಿಗೂ ಪರಿಹಾರ ಅಲ್ಲ. ಅದರ ಹೆಸರಲ್ಲಿ ವರದಿಯಾಗುತ್ತಿರುವ ಸುದ್ದಿಗಳನ್ನು ಪರಿಗಣಿಸಿದರೆ ಅದು ಈ ಗೋಲದಿಂದ ಅತ್ಯಂತ ಶೀಘ್ರ ನಿರ್ನಾಮವಾಗಬೇಕಾದ ಗುಂಪು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಅಂದಹಾಗೆ, ಈ ದೇಶದಲ್ಲಿ ಮುಸ್ಲಿಮರ ವಿರುದ್ಧ ತಾರತಮ್ಯದ, ಜನಾಂಗ ಭೇದದ ಧೋರಣೆಯನ್ನು ತಳೆಯಲಾಗುತ್ತಿದೆ, ಹತ್ಯಾಕಾಂಡಕ್ಕೆ ಗುರಿಪಡಿಸಲಾಗುತ್ತಿದೆ, ಸದಾ ಭಯದ ವಾತಾವರಣದಲ್ಲಿ ಬದುಕುವಂತೆ ಮತ್ತು ಆರ್ಥಿಕವಾಗಿ ಸಮರ್ಥರಾಗದಂತೆ ಕೋಮುಗಲಭೆಗಳ ಮೂಲಕವೋ ಇನ್ನಿತರ ಷಡ್ಯಂತ್ರಗಳ ಮೂಲಕವೋ ತಡೆಲಾಗುತ್ತಿದೆ ಎಂಬುದೆಲ್ಲ ನಿಜ. ಆದರೆ ಅದಕ್ಕೆ ಐಸಿಸ್ ಅಥವಾ ಇನ್ನಿತರ ಉಗ್ರವಾದಿ ಆಲೋಚನೆಗಳು ಪರಿಹಾರ ಅಲ್ಲ. ಐಸಿಸ್ ಅನ್ನು ಈ ದೇಶದಲ್ಲಿ ನಿಷೇಧಿಸಲಾಗಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಅದರ ಬಾವುಟ ಹಾರಾಡಿಸುವುದನ್ನು ಸಮರ್ಥಿಸಲೂ ಸಾಧ್ಯವಿಲ್ಲ. ಕೋಮುವಾದಿಗಳು ಈ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿದ್ದಾರೋ ಅದರ ಎಷ್ಟೋ ಪಾಲು ಅಧಿಕ ಸಂಖ್ಯೆಯಲ್ಲಿ ಕೋಮುವಾದದ ವಿರೋಧಿಗಳು ಈ ದೇಶದಲ್ಲಿದ್ದಾರೆ. ವಿವಿಧ ಧರ್ಮೀರಿರುವ ಈ ದೇಶದಲ್ಲಿ ಅತ್ಯಂತ ಉತ್ತಮವಾದ ಸಂವಿಧಾನವೂ ಇದೆ. ಇಲ್ಲಿನ ಕೋರ್ಟುಗಳೂ ಅನೇಕ ಬಾರಿ ಕೋಮುವಾದಿ ಆಲೋಚನೆಗಳಿಗೆ, ಹತ್ಯಾಕಾಂಡದ ಆರೋಪಿಗಳಿಗೆ ಶಿಕ್ಷೆ ನೀಡಿವೆ. ಸರ್ವರಿಗೂ ಸಮಾನ ನ್ಯಾಯ, ಸ್ವಾತಂತ್ರ್ಯ, ಹಕ್ಕುಗಳನ್ನು ಒದಗಿಸುವಂತೆ ಆಗ್ರಹಿಸುವುದಕ್ಕೆ ಸಭೆ, ಸೆಮಿನಾರ್, ರಾಲಿಗಳೂ ಇಲ್ಲಿ ನಡೆಯುತ್ತಿವೆ. ಒಂದು ರೀತಿಯಲ್ಲಿ, ದಮನಿತರ ಪರ ಮತ್ತು ದಂಗೆಕೋರರ ವಿರುದ್ಧವಿರುವ ಒಂದು ವಾತಾವರಣ ಇವತ್ತು ಈ ದೇಶದಲ್ಲಿದೆ. ಹೀಗಿರುವಾಗ ಈ ಯಾವ ಗುಣವನ್ನೂ ಹೊಂದಿಲ್ಲದ ಐಸಿಸ್ ಅನ್ನು ಯುವಕರು ಬೆಂಬಲಿಸುತ್ತಾರೆಂದರೆ, ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲ  ಹೇಳುವಂತೆ, ಅವರನ್ನು ಮೂರ್ಖರೆಂದಲ್ಲದೇ ಇನ್ನೇನೆಂದು ಕರೆಯಬೇಕು?
 ಈ ದೇಶದಲ್ಲಿ ಮುಸ್ಲಿಮರಿಗೆ ಎರಡು ಸವಾಲುಗಳು ಸದಾ ಎದುರಾಗುತ್ತಲೇ ಇರುತ್ತವೆ. ಒಂದು ದೇಶಪ್ರೇಮದ್ದಾದರೆ ಇನ್ನೊಂದು ಭಯೋತ್ಪಾದನೆಯದ್ದು. ಈ ಎರಡು ಅಸ್ತ್ರಗಳನ್ನು ಎತ್ತಿಕೊಂಡು ಮುಸ್ಲಿಮರನ್ನು ಇರಿಯುವುದಕ್ಕೆ ಕೋಮುವಾದಿಗಳು ಸಂದರ್ಭಗಳನ್ನು ಹುಡುಕುತ್ತಲೇ ಇರುತ್ತಾರೆ. ಪ್ರತಿದಿನ ಬೆಳಿಗ್ಗೆದ್ದ ಕೂಡಲೇ ಭಾರತ್ ಮಾತಾ ಕಿ ಜೈ ಎಂದು ಘೋಷಿಸಿಯೇ ಮುಸ್ಲಿಮರು ನಿತ್ಯದ ಕರ್ಮಗಳನ್ನು ನಿರ್ವಹಿಸಬೇಕು ಎಂದು ಅವರು ಒತ್ತಡ ಹಾಕುತ್ತ್ತಿದ್ದಾರೆ. ಮದ್ರಸಗಳಲ್ಲಿ ರಾಷ್ಟ್ರಧ್ವಜ ಅರಳುತ್ತದೋ ಇಲ್ಲವೋ ಎಂಬುದನ್ನು ಕ್ಯಾಮರಾ ಹಿಡಿದುಕೊಂಡು ಅವರು ಪತ್ತೆದಾರಿಕೆ ನಡೆಸುತ್ತಿದ್ದಾರೆ. ಬಾಂಬ್ ಸ್ಫೋಟಗಳು ನಡೆದ ತಕ್ಷಣ ಮುಸ್ಲಿಮರಿಂದ ಅವರು ಖಂಡನೆಯನ್ನು ನಿರೀಕ್ಷಿಸುತ್ತಾರೆ.. ಆದರೂ ಇವಾವುವೂ ಐಸಿಸ್‍ನ ಬಾವುಟವನ್ನು ಪ್ರದರ್ಶಿಸುವುದಕ್ಕೆ ಸಮರ್ಥನೆ ಆಗುವುದಿಲ್ಲ. ಮುಸ್ಲಿಮರನ್ನು ಸದಾ ಕಟಕಟೆಯಲ್ಲಿ ನಿಲ್ಲಿಸುವ ವಾತಾವರಣದಿಂದ ನೊಂದು ಅದಕ್ಕೆ ಪ್ರತಿರೋಧವೆಂಬಂತೆ ಈ ಬಾವುಟವನ್ನು ಹಾರಿಸಲಾಗಿದೆ ಎಂದು ಹೇಳುವುದರಲ್ಲಿ ನಿಜ ಇದೆಯಾದರೂ ಅದು ಸಂಪೂರ್ಣ ಒಪ್ಪತಕ್ಕದ್ದಲ್ಲ. ಐಸಿಸ್ ಇಸ್ಲಾಮನ್ನು ಯಾವ ರೀತಿಯಲ್ಲೂ ಪ್ರತಿನಿಧಿಸುತ್ತಿಲ್ಲ. ಆದ್ದರಿಂದಲೇ ಅದರ ಬಾವುಟವನ್ನು ಪ್ರದರ್ಶಿಸುವುದು ತಪ್ಪು, ಆಕ್ಷೇಪಾರ್ಹ ಮತ್ತು ಖಂಡನೀಯ. ಅನ್ಯಾಯವನ್ನು ನ್ಯಾಯಯುತ ವಿಧಾನದ ಮೂಲಕ ಪ್ರಶ್ನಿಸಬೇಕೇ ಹೊರತು ಅನ್ಯಾಯಯುತವಾಗಿ ಅಲ್ಲ.

No comments:

Post a Comment