Tuesday 4 November 2014

ಒಂದು ಸಾವಿನ ಸುತ್ತ..

   ವಾರನ್ ಆ್ಯಂಡರ್ಸನ್ ಎಂಬ ಕಾರ್ಪೋರೇಟ್ ದೊರೆಯ ಸಾವು ಮತ್ತು ಅಂತ್ಯ ಸಂಸ್ಕಾರವು ಜಗತ್ತಿನ ಗಮನಕ್ಕೆ ಬಾರದೆಯೇ ನಡೆದು ಹೋಗಿದೆ. ಅಮೇರಿಕದ ಫ್ಲೋರಿಡಾದಲ್ಲಿರುವ ವೆರೋ ಬೀಚ್ ನರ್ಸಿಂಗ್ ಹೋಮ್‍ನಲ್ಲಿ ಸೆ. 29ರಂದು ಆತ ಮೃತಪಟ್ಟಿದ್ದರೂ ಅದನ್ನು ಆತನ ಕುಟುಂಬಸ್ಥರು ಒಂದು ತಿಂಗಳ ಬಳಿಕ ಮೊನ್ನೆ ಅಕ್ಟೋಬರ್ 31ರಂದು ಜಗತ್ತಿನ ಗಮನಕ್ಕೆ ತಂದಿದ್ದಾರೆ. ಮರುದಿನವೇ ಮಧ್ಯಪ್ರದೇಶದಲ್ಲಿ ರಾಲಿಗಳು ನಡೆದಿವೆ. ಆ ಸಾವನ್ನು ‘ದೇವನು ಕೊಟ್ಟ ಶಿಕ್ಷೆ' ಎಂದು ಆ ರಾಲಿಯಲ್ಲಿ ಬಣ್ಣಿಸಲಾಗಿದೆ. ನಿಜವಾಗಿ, 1984 ಡಿಸೆಂಬರ್ 2ರ ವರೆಗೆ ವಾರನ್ ಆ್ಯಂಡರ್ಸನ್ ಜಗತ್ತಿನ ಬಹುದೊಡ್ಡ ಗೌರವಾರ್ಹ ವ್ಯಕ್ತಿ. ಅತಿ ದೊಡ್ಡ ಕಾರ್ಪೋರೇಟ್ ಕುಳ. ಆತ ಯೂನಿಯನ್ ಕಾರ್ಬೈಡ್ ಕಾರ್ಪೋರೇಶನ್ನಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (CEO) ಬೆಳೆದು ಬಂದ ರೀತಿಯನ್ನು ಮಧ್ಯಪ್ರದೇಶದಲ್ಲಿ ಮಾತ್ರವಲ್ಲ, ಅಮೇರಿಕದಲ್ಲೂ ಅತ್ಯಂತ ಅಚ್ಚರಿಯೊಂದಿಗೆ ವರ್ಣಿಸಲಾಗುತ್ತಿತ್ತು. ಆತ ಸಾಹಸಮಯ ಕತೆಯೊಂದರ ಪಾತ್ರವಾಗಿದ್ದ. ಅಮೇರಿಕಕ್ಕೆ ವಲಸೆ ಬಂದ ಕುಟುಂಬವೊಂದರಲ್ಲಿ 1921ರಲ್ಲಿ ಓರ್ವ ಕಾರ್ಪೆಂಟರ್‍ನ ಮಗನಾಗಿ ಜನಿಸಿದ್ದು, ಯೂನಿಯನ್ ಕಾರ್ಬೈಡ್ ಕಂಪೆನಿಯಲ್ಲಿ ಸೇಲ್ಸ್‍ಮ್ಯಾನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದು ಮತ್ತು ಕ್ರಮೇಣ ಆ ಕಂಪೆನಿಯ ಸಿಇಓ ಆದದ್ದು.. ಎಲ್ಲವೂ ಹಲವಾರು ಭಾಷಣಗಳಿಗೆ ವಸ್ತುವಾಗಿತ್ತು. ಆ ಬಗ್ಗೆ ಬರಹಗಳೂ ಪ್ರಕಟವಾಗಿದ್ದುವು. ಆ್ಯಂಡರ್ಸನ್‍ನ ಆಕೃತಿಯು ಈ ಮಟ್ಟದಲ್ಲಿ ಅಜಾನುಬಾಹು ರೂಪ ಪಡೆದಿದ್ದರಿಂದಲೇ 1984 ಡಿ. 6ರಂದು ಭೋಪಾಲ್ ಅನಿಲ ದುರಂತ ಆರೋಪದಲ್ಲಿ ಆತನ ಬಂಧನವಾದಾಗ ಖ್ಯಾತ ಉದ್ಯಮಿ ಜೆ.ಆರ್.ಡಿ. ಟಾಟಾರವರು ಆಘಾತ ವ್ಯಕ್ತಪಡಿಸಿದ್ದು. ಆ್ಯಂಡರ್ಸನ್‍ನ ಬಂಧನವು ತನ್ನನ್ನು ಗಾಬರಿ ಮತ್ತು ಬೆರಗುಗೊಳಿಸಿದೆ ಎಂದವರು ಹೇಳಿದ್ದರು. ಭಾರತೀಯ ಉದ್ಯಮ ವಲಯವು ಬಂಧನವನ್ನು ಅನ್ಯಾಯದ ಕ್ರಮ ಎಂದು ಖಂಡಿಸಿದ್ದುವು. ಬಹುಶಃ ಬಂಧನದ ಮರುದಿನವೇ ಜಾವಿೂನು ಪಡೆದುಕೊಂಡು ಸರಕಾರ ವ್ಯವಸ್ಥೆ ಮಾಡಿದ ವಿಶೇಷ ವಿಮಾನದಲ್ಲಿ ಆತ ಅಮೇರಿಕಕ್ಕೆ ಹಾರಿರುವುದಕ್ಕೆ ಉದ್ಯಮ ವಲಯದ ಈ ಆಘಾತ, ಖಂಡನೆ, ಅಚ್ಚರಿಗಳು ದೊಡ್ಡ ಪಾತ್ರ ವಹಿಸಿರಬಹುದು. ಹಾಗೆ ತೆರಳಿದ ಆ್ಯಂಡರ್ಸನ್ ಮತ್ತೆಂದೂ ಭಾರತಕ್ಕೆ ಹಿಂದಿರುಗಲಿಲ್ಲ. ಭಾರತವು ಆತನನ್ನು ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತು. ಹಾಗೆ ಘೋಷಿಸುವಾಗ ಘೋಷಿಸಿದ ಭಾರತಕ್ಕೂ ಆತನನ್ನು ಸ್ವಾಗತಿಸಿದ ಅಮೇರಿಕಕ್ಕೂ ಆತ ಎಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂಬುದು ಚೆನ್ನಾಗಿ ಗೊತ್ತಿತ್ತು. ಅಂದಿನಿಂದ ಇಂದಿನ ವರೆಗೆ ಸುಮಾರು 30 ವರ್ಷಗಳು ಕಳೆದುಹೋಗಿವೆ. ಈ ಮಧ್ಯೆ ಅನೇಕ ಬಾರಿ ಭಾರತ ಮತ್ತು ಅಮೇರಿಕದ ಅಧಿಕಾರಿಗಳ ನಡುವೆ ಮಾತುಕತೆ ನಡೆದಿವೆ. ಎರಡೂ ದೇಶಗಳ ಅಧ್ಯಕ್ಷರು ಪರಸ್ಪರ ಭೇಟಿಯಾಗಿದ್ದಾರೆ. ಅಣು ತಂತ್ರಜ್ಞಾನ, ಶಸ್ತ್ರಾಸ್ತ್ರ, ವ್ಯಾಪಾರ ನೀತಿ.. ಸಹಿತ ಹತ್ತಾರು ಒಪ್ಪಂದಗಳು ಏರ್ಪಟ್ಟಿವೆ. ಆದರೂ ತನಿಖೆಗಾಗಿ ಆ್ಯಂಡರ್ಸನ್‍ನನ್ನು ಪಡೆದುಕೊಳ್ಳಲು ಭಾರತಕ್ಕೆ ಸಾಧ್ಯವಾಗಿಲ್ಲ. ಭಾರತದ ಅಧ್ಯಕ್ಷರು  ಅಮೇರಿಕಕ್ಕೆ ಭೇಟಿ ನೀಡುವ ಅಥವಾ ಅಮೇರಿಕದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುವ ಸಂದರ್ಭಗಳಲ್ಲೆಲ್ಲಾ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಪ್ರತಿಭಟನೆ ನಡೆಯುತ್ತದೆ. 1984 ಡಿ. 3ರಂದು ನಡೆದ ಅನಿಲ ದುರಂತದಲ್ಲಿ ಸಾವಿಗೀಡಾದ ಸಾವಿರಾರು ಮಂದಿಯ ಕುಟುಂಬಸ್ಥರು, ಅಂಗವಿಕಲರಾದವರು, ವಿಷಾಂಶಗಳು ತುಂಬಿಕೊಂಡ ಭೂಮಿಯನ್ನು ಬಿಡಲೂ ಆಗದೆ ಇರಲೂ ಆಗದೆ ಸಂಕಟ ಪಡುವವರೆಲ್ಲ ಅಲ್ಲಿ ಆ್ಯಂಡರ್ಸನ್‍ನ ಫೋಟೋ ಹಿಡಿದು ನ್ಯಾಯಕ್ಕಾಗಿ ಆಗ್ರಹಿಸುತ್ತಾರೆ. ವಿಕಾರವಾಗಿ ಬೆಳೆದ ತಲೆ, ಕಣ್ಣು, ಕಿವಿ, ದೇಹಗಳುಳ್ಳ ಮಕ್ಕಳನ್ನು ತಂದು ಮಾಧ್ಯಮಗಳ ಮುಂದೆ ಪ್ರದರ್ಶಿಸುತ್ತಾರೆ. ಆದರೆ ಕಾರ್ಪೋರೇಟ್ ಲಾಬಿಯ ಮುಂದೆ ಅವೆಲ್ಲವೂ ವಿಫಲವಾಗುತ್ತಲೇ ಹೋಗಿವೆ. ಇದೀಗ ಪ್ರಕೃತಿಯೇ ಆತನನ್ನು ಸೆಳೆದುಕೊಂಡಿದೆ. ‘ಭೋಪಾಲ್ ದುರಂತವು ಅವರನ್ನು ಹಲವು ವರ್ಷಗಳಿಂದ ಮಾನಸಿಕವಾಗಿ ಬೇಟೆಯಾಡುತ್ತಿತ್ತು’ ಎಂದು ಪತ್ನಿ ಲಿಯಾನ್‍ರು CBS ನ್ಯೂಸ್‍ಗೆ ಹೇಳಿದ್ದರಲ್ಲಿಯೇ ಆ್ಯಂಡರ್ಸನ್‍ನ ಪಾಪಪ್ರಜ್ಞೆ, ಮಾನಸಿಕ ಸಂಘರ್ಷವನ್ನು ಊಹಿಸಬಹುದು.
 ಭೋಪಾಲ್ ದುರಂತದ ಸಂತ್ರಸ್ತರು ಆ್ಯಂಡರ್ಸನ್‍ನ ಫೋಟೋವನ್ನು ಕೈಬಿಟ್ಟು ಇನ್ನು ಡೌ ಕೆಮಿಕಲ್ ಕಂಪೆನಿಯ ಮುಖ್ಯಸ್ಥ ಆ್ಯಂಡ್ರ್ಯೂ ಲಿವೆರಿಸ್‍ರ  ಫೋಟೋವನ್ನು ಎತ್ತಿಕೊಳ್ಳುವುದಾಗಿ ಘೋಷಿಸಿದ್ದಾರೆ. ಯಾಕೆ ಹೀಗೆ ಎಂದರೆ, ಯೂನಿಯನ್ ಕಾರ್ಬೈಡ್ ಕಂಪೆನಿಯನ್ನು ಇವತ್ತು ಅಮೇರಿಕದ್ದೇ ಆದ ಡೌ ಕಂಪೆನಿ ಖರೀದಿಸಿದೆ. ಮಾತ್ರವಲ್ಲ, ದುರಂತದ ಬಗ್ಗೆ ತನಗಾವ ಹೊಣೆಗಾರಿಕೆಯೂ ಇಲ್ಲ ಎಂದೂ ಅದು ಹೇಳಿಕೊಂಡಿದೆ. ಒಂದು ರೀತಿಯಲ್ಲಿ, ಇದು ಬಹುತೇಕ ಎಲ್ಲ ಕಾರ್ಪೋರೇಟರ್‍ಗಳ ಮನಸ್ಥಿತಿ. ಅವರಿಗೆ ಈ ದೇಶದ ಮಣ್ಣು ಬೇಕು, ನೀರು ಬೇಕು, ಉದ್ಯಮ ಸ್ನೇಹಿ ವಾತಾವರಣ, ತೆರಿಗೆ ರಹಿತ ಸರಕಾರಿ ಸೌಲಭ್ಯಗಳು ಬೇಕು. ಆದರೆ ಜನರ ಆರೋಗ್ಯ, ಅಭಿವೃದ್ಧಿಯನ್ನು ಹೆಚ್ಚಿನ ಬಾರಿ ಅವರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಪಶ್ಚಿಮ ಬಂಗಾಲದ ಸಿಂಗೂರು, ಕೇರಳದ ಪ್ಲಾಚಿಮಾಡ, ತಮಿಳ್ನಾಡಿನ ಕುಡಂಕುಲಂ, ಮಹಾರಾಷ್ಟ್ರದ ಜೈತಾಪುರ, ನಮ್ಮದೇ ರಾಜ್ಯದ ಗದಗ, ದಕ್ಷಿಣ ಕನ್ನಡ.. ಎಲ್ಲೆಡೆಯೂ ಕಾರ್ಪೋರೇಟ್ ಉದ್ಯಮಗಳು ಜನಸಾಮಾನ್ಯರನ್ನು ಪೀಡಿಸಿವೆ. ಅವರ ಭೂಮಿಯನ್ನು ಕಬಳಿಸುವುದಕ್ಕಾಗಿ ರಾತೋರಾತ್ರಿ ಬುಲ್ಡೋಜರ್‍ಗಳನ್ನು ಹರಿಸಿವೆ. ಕೃಷಿ ಭೂಮಿ, ಫಲವತ್ತಾದ ತೋಟ, ಮನೆಗಳನ್ನು ಅವು ಧ್ವಂಸಗೊಳಿಸಿವೆ. ಜನರ ಸುರಕ್ಷಿತತೆಗಿಂತ ತಮ್ಮ ಉದ್ಯಮದ ಸುರಕ್ಷಿತತೆಯನ್ನೇ ಮುಖ್ಯವಾಗಿಸಿಕೊಂಡು ಕಾರ್ಯಾಚರಿಸುವ ಶೈಲಿ ಕಾರ್ಪೋರೇಟ್ ಕಂಪೆನಿಗಳದ್ದು. ಭೋಪಾಲ್ ದುರಂತದ ಹಿಂದೆಯೂ ಇಂಥದ್ದೇ ಒಂದು ಕತೆಯಿದೆ. ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ  ತಾಂತ್ರಿಕ ತೊಂದರೆಗಳಿರುವ ಬಗ್ಗೆ ಆ್ಯಂಡರ್ಸನ್‍ಗೆ ಆ ಮೊದಲೇ ಮಾಹಿತಿಯಿತ್ತು ಎಂದು ಹೇಳಲಾಗುತ್ತಿದೆ. ಸೋರಿಕೆ ಉಂಟಾದರೆ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ವಿಷಯದಲ್ಲೂ ತೀವ್ರ ಅಸಡ್ಡೆ ವಹಿಸಲಾಗಿತ್ತು ಎಂಬ ಆರೋಪವೂ ಇದೆ. ತನ್ನ 65ನೇ ಹುಟ್ಟು ಹಬ್ಬದ ಆಚರಣೆಯ ಮತ್ತಿನಲ್ಲಿ ಆತ ಕಾರ್ಖಾನೆಯ ಲೋಪದೋಷಗಳನ್ನು ಕಡೆಗಣಿಸಿದ್ದ ಎಂಬ ಅಭಿಪ್ರಾಯವೂ ಇದೆ. ಅಂತೂ ಜಾಗತಿಕವಾಗಿಯೇ ಅತಿದೊಡ್ಡ ದುರಂತಕ್ಕೆ ಕಾರಣನಾದ ಆತ ಕೊನೆಯ ವರೆಗೂ ಯಾವ ವಿಚಾರಣೆ, ಶಿಕ್ಷೆಯೂ ಇಲ್ಲದೇ ಬದುಕಿದ್ದಾನೆ. ಒಂದು ವೇಳೆ, ಆ್ಯಂಡರ್ಸನ್ ಭಾರತದವನಾಗಿದ್ದು ಅನಿಲ ದುರಂತವು ಅಮೇರಿಕದ ನ್ಯೂಯಾರ್ಕ್‍ನಲ್ಲೋ ಫ್ಲೋರಿಡಾದಲ್ಲೋ ಸಂಭವಿಸಿರುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಅಮೇರಿಕದಿಂದ ಆತ ತಪ್ಪಿಸಿಕೊಳ್ಳಲು ಸಾಧ್ಯವಿತ್ತೇ? ಒಂದು ವೇಳೆ ತಪ್ಪಿಸಿಕೊಂಡರೂ ಆತನನ್ನು ಮರಳಿಸುವಂತೆ ಭಾರತದ ಮೇಲೆ ಅದು ಒತ್ತಡ ಹಾಕುತ್ತಿರಲಿಲ್ಲವೇ? ಬಗ್ಗದಿದ್ದರೆ ಭಾರತಕ್ಕೆ ಕಾರ್ಪೋರೇಟ್ ಕಂಪೆನಿಗಳು ಕಾಲಿಡದಂತೆ ಅದು ನೋಡಿಕೊಳ್ಳುತ್ತಿರಲಿಲ್ಲವೇ? ದಿಗ್ಬಂಧನ ವಿಧಿಸುತ್ತಿರಲಿಲ್ಲವೇ?
 ಏನೇ ಆಗಲಿ, ಆ್ಯಂಡರ್ಸನ್‍ನ ಸಾವು ಎಲ್ಲ ಕಾರ್ಪೋರೇಟ್ ದೊರೆಗಳಿಗೂ ಪಾಠವಾಗಬೇಕು. ಅವರ ಹಣಬಲ, ಜನಬಲ, ಬುಲ್ಡೋಜರ್‍ಗಳನ್ನು ಎದುರಿಸುವ ಸಾಮರ್ಥ್ಯ ರೈತರ ನೇಗಿಲಿಗೆ, ಎತ್ತಿಗೆ ಅಥವಾ ಜನಸಾಮಾನ್ಯರ ಗುಡಿಸಲುಗಳಿಗೆ ಇಲ್ಲದೇ ಇರಬಹುದು. ಆದರೆ ತೋಳ್ಬಲವೊಂದೇ ಸಾಮರ್ಥ್ಯದ ಮಾನದಂಡವಲ್ಲ. ಕೆಲವೊಮ್ಮೆ ಕಣ್ಣೀರಿಗೂ ಪ್ರಾರ್ಥನೆಗೂ ಅದರ ನೂರು ಪಟ್ಟು ಅಧಿಕ ಸಾಮರ್ಥ್ಯ ಇರುತ್ತದೆ. ಆ್ಯಂಡರ್ಸನ್‍ನ ಕದ್ದು ಮುಚ್ಚಿದ ಬದುಕು ಮತ್ತು ರಹಸ್ಯ ಸಾವು ಇದನ್ನೇ ಹೇಳುತ್ತದೆ.

No comments:

Post a Comment