Tuesday, 30 December 2014

ಸ್ಫೋಟಗೊಳ್ಳುವ ಬಾಂಬುಗಳು ಮತ್ತು ಕಾಡುವ ಅನುಮಾನಗಳು..

    ಸ್ಫೋಟಗಳು, ಸ್ಫೋಟಕಗಳು ಮತ್ತು ತನಿಖೆಗಳು ಈ ದೇಶಕ್ಕೆ ಹೊಸತಲ್ಲ. ಹಾಗೆಯೇ ಅವು ಉಳಿಸಿ ಹೋಗುವ ಅನುಮಾನಗಳೂ ಕಡಿಮೆಯದಲ್ಲ. 2008 ನವೆಂಬರ್ 26ರಂದು ನಡೆದ ಮುಂಬೈ ದಾಳಿ ಮತ್ತು 1995 ಡಿಸೆಂಬರ್ 17ರಂದು ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ವಿಮಾನದ ಮೂಲಕ ಉದುರಿಸಲಾದ ಶಸ್ತ್ರಾಸ್ತ್ರಗಳ ಕುರಿತಂತೆ ಕಳೆದವಾರ ಕೆಲವು ಮಾಹಿತಿಗಳು ಬಿಡುಗಡೆಯಾದುವು. ಈ ಮಾಹಿತಿಗಳು ಎಷ್ಟು ಆಘಾತಕಾರಿಯಾಗಿವೆಯೆಂದರೆ, ಈ ದೇಶದಲ್ಲಿ ಈವರೆಗೆ ನಡೆದಿರುವ ಎಲ್ಲ ವಿಧ್ವಂಸಕ ಪ್ರಕರಣಗಳ ಬಗ್ಗೆಯೂ ಸಂದೇಹ ತಾಳುವಷ್ಟು. ಮುಂಬೈ ದಾಳಿಯ ಕುರಿತಂತೆ ಭಾರತ, ಬ್ರಿಟನ್ ಮತ್ತು ಅಮೇರಿಕದ ಗುಪ್ತಚರ ಸಂಸ್ಥೆಗಳ ಬಳಿ ಮೊದಲೇ ಸಾಕಷ್ಟು ಮಾಹಿತಿಗಳಿದ್ದುವು ಎಂದು ಕಳೆದವಾರ ಅಮೇರಿಕದ ನ್ಯೂಯಾರ್ಕ್ ಟೈಮ್ಸ್ ಬಹಿರಂಗಪಡಿಸಿದೆ. 2008ರ ಜನವರಿಯಲ್ಲಿಯೇ ಅಮೇರಿಕವು ಸಂಭಾವ್ಯ ಈ ದಾಳಿಯ ಬಗ್ಗೆ ಭಾರತವನ್ನು ಎಚ್ಚರಿಸಿದ್ದು, ಹೆಡ್ಲಿಯ ಪತ್ನಿಯ ಮೂಲಕ ಮಾಹಿತಿ ಪಡಕೊಂಡದ್ದು, ದಾಳಿಯ ರೂವಾರಿಗಳು ಕೆಲವು ವಸ್ತುಗಳನ್ನು ಅಮೇರಿಕದಿಂದ ಖರೀದಿಸಿದ್ದು.. ಸೇರಿದಂತೆ ಕೆಲವಾರು ಮಾಹಿತಿಗಳು ಮೊದಲೇ ಸೋರಿಕೆಯಾಗಿದ್ದುವು. ಆದರೂ ಮುಂಬೈ ದಾಳಿಯನ್ನು ತಡೆಗಟ್ಟಲಿಕ್ಕಾಗಲಿ, ಕರ್ಕರೆ, ಸಾಲಸ್ಕರ್‍ರ ಜೀವವನ್ನು ಉಳಿಸಿಕೊಳ್ಳುವುದಕ್ಕಾಗಲಿ ಭಾರತಕ್ಕೆ ಸಾಧ್ಯವಾಗಲಿಲ್ಲ. ಬಹುಶಃ ಅನುಮಾನಗಳು ಗಟ್ಟಿಗೊಳ್ಳುವುದೂ ಇಲ್ಲೇ. ಆ ದಾಳಿಯ ಹಿಂದೆ ವ್ಯವಸ್ಥಿತ ಷಡ್ಯಂತ್ರವೊಂದು ಕೆಲಸ ಮಾಡಿದೆಯೇ? ಆ ದಾಳಿಯ ಅಗತ್ಯ ಯಾರಿಗಿತ್ತು? ಅವರ ಉದ್ದೇಶ ಏನಾಗಿತ್ತು? ‘ಹೂ ಕಿಲ್ಲ್ ಡ್ ಕರ್ಕರೆ’ ಎಂಬ ತನ್ನ ಕೃತಿಯಲ್ಲಿ ಮಹಾರಾಷ್ಟ್ರದ ಮಾಜಿ ಪೊಲೀಸ್ ಮುಖ್ಯಸ್ಥ ಎಸ್.ಎಂ. ಮುಶ್ರಿಫ್ ವ್ಯಕ್ತಪಡಿಸಿದ ಅನುಮಾನಗಳೇ ನಿಜವೇ? ಕರ್ಕರೆ, ಸಾಲಸ್ಕರ್‍ಗಳನ್ನು ಹತ್ಯೆ ಮಾಡುವುದೇ ಆ ದಾಳಿಯ ಮುಖ್ಯ ಗುರಿಯಾಗಿತ್ತೇ.. ಬಹುಶಃ ಸಂದೇಹಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದರಲ್ಲೂ ಪುರುಲಿಯಾ ಪ್ರಕರಣದ ಮುಖ್ಯ ಆರೋಪಿಗಳು ಕಳೆದ ವಾರ ಸಾಕ್ಷ್ಯ ಚಿತ್ರವೊಂದಕ್ಕೆ (ಡಾಕ್ಯುಮೆಂಟರಿ) ನೀಡಿದ ಹೇಳಿಕೆಗಳನ್ನು ಪರಿಗಣಿಸಿದರೆ, ಈ ಸಂದೇಹಗಳು ಇನ್ನಷ್ಟು ಬಲ ಪಡೆಯುತ್ತವೆ. ಪಶ್ಚಿಮ ಬಂಗಾಲದ ಪುರುಲಿಯಾ ಜಿಲ್ಲೆಯ ಜಲ್ದಾ, ಘಟಂಗಾ, ಬೆಲವಲು, ಮರವಲು ಗ್ರಾಮಗಳಲ್ಲಿ 1995 ಡಿ. 17ರ ರಾತ್ರಿ 300ಕ್ಕಿಂತಲೂ ಅಧಿಕ ಏ.ಕೆ. 47 ರೈಫಲ್‍ಗಳು ಮತ್ತು ಮಿಲಿಯನ್ ಸುತ್ತಿಗಾಗುವಷ್ಟು ಮದ್ದು ಗುಂಡುಗಳನ್ನು ವಿಮಾನದ ಮೂಲಕ ಉದುರಿಸಲಾಗಿತ್ತು. ಹಾಗೆ ಶಸ್ತ್ರಾಸ್ತ್ರಗಳನ್ನು ಉದುರಿಸಿದ ಅಂಟನೋವ್ ಎಂಬ ಹೆಸರಿನ ಆ ವಿಮಾನ ಹೊರಟೂ ಹೋಗಿತ್ತು. ಕೆಲವು ದಿನಗಳ ಬಳಿಕ ಅದೇ ವಿಮಾನ ಮರಳಿ ಬಂದಾಗ ಬಲವಂತದಿಂದ ಭೂಮಿಗೆ ಇಳಿಸಲಾಗಿತ್ತು. ಆಗ ಶಸ್ತ್ರಾಸ್ತ್ರ ಉದುರಿಸಿದ ಆರೋಪದಲ್ಲಿ ಇಂಗ್ಲೆಂಡಿನ ಶಸ್ತ್ರಾಸ್ತ್ರ ವ್ಯಾಪಾರಿ ಪೀಟರ್ ಬ್ಲೀಚ್ ಮತ್ತು ಲಾತ್ವಿಯಾ ದೇಶದ 5 ಮಂದಿಯನ್ನು ಬಂಧಿಸಲಾಗಿತ್ತು. ಆದರೆ ಮುಖ್ಯ ಆರೋಪಿ ಡೆನ್ಮಾರ್ಕ್‍ನ ಕಿಮ್ ಡೆವಿ  ವಿಮಾನ ನಿಲ್ದಾಣದಿಂದ ಕಣ್ಮರೆಯಾಗಿದ್ದ. ಪಶ್ಚಿಮ ಬಂಗಾಳದಲ್ಲಿ ಸಕ್ರಿಯರಾಗಿರುವ ಆನಂದ ಮಾರ್ಗಿಗಳ ಉಪಯೋಗಕ್ಕಾಗಿ ಆ ಶಸ್ತ್ರಾಸ್ತ್ರಗಳನ್ನು ಉದುರಿಸಲಾಗಿತ್ತು ಎಂದು 1997ರಲ್ಲಿ ಕೋರ್ಟು ಅಭಿಪ್ರಾಯಪಟ್ಟಿತು. ಮಾತ್ರವಲ್ಲ, ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಲಾಯಿತು. ಆದರೆ ಲಾತ್ವಿಯದ 5 ಮಂದಿಗೆ ರಷ್ಯವು ರಶ್ಯನ್ ಪೌರತ್ವವನ್ನು ನೀಡಿತಲ್ಲದೇ ಅವರ ಬಿಡುಗಡೆಗೆ ಭಾರತದ ಮೇಲೆ ಒತ್ತಡ ಹೇರಿತು. ಹೀಗೆ 2000ದಲ್ಲಿ ಅವರಿಗೆ ಕ್ಷಮಾದಾನ ನೀಡಲಾಯಿತು. 2004ರಲ್ಲಿ ಪೀಟರ್ ಬ್ಲೀಚ್‍ಗೆ ರಾಷ್ಟ್ರಪತಿಯವರು ಕ್ಷಮಾದಾನ ನೀಡಿದರು. ಇದರ ಹಿಂದೆ ಬ್ರಿಟನ್‍ನ ಒತ್ತಡ ಕೆಲಸ ಮಾಡಿತ್ತು. ಈ ನಡುವೆ ಕಿಮ್ ಡೆವಿಯ ಪತ್ತೆಗೆ ಇಂಟರ್‍ಪೋಲ್ ನೋಟೀಸನ್ನು ಜಾರಿಗೊಳಿಸಿದ್ದೂ ಮತ್ತು 2010 ಎಪ್ರಿಲ್ 9ರಂದು ಡೆನ್ಮಾರ್ಕ್ ಸರಕಾರ ಆತನನ್ನು ಪತ್ತೆ ಹಚ್ಚಿದ್ದೂ ನಡೆಯಿತಾದರೂ ಆತನನ್ನು ಭಾರತಕ್ಕೆ ಗಡೀಪಾರುಗೊಳಿಸಲು ಅದು ಒಪ್ಪಲಿಲ್ಲ. ಇದೀಗ ಆತನೇ ಇಡೀ ಪ್ರಕರಣವನ್ನು ಬಿಚ್ಚಿಟ್ಟಿದ್ದಾನೆ. ಪಶ್ಚಿಮ ಬಂಗಾಲದಲ್ಲಿ ದೀರ್ಘಕಾಲದಿಂದ ಆಡಳಿತ ನಡೆಸುತ್ತಿದ್ದ ಕಮ್ಯುನಿಸ್ಟ್ ಸರಕಾರವನ್ನು ಉರುಳಿಸುವುದಕ್ಕಾಗಿ ಭಾರತದ ಸರಕಾರ ಮತ್ತು ಭಾರತದ ಗುಪ್ತಚರ ಸಂಸ್ಥೆ (ರಾ) ಜಂಟಿಯಾಗಿ ಆ ಸಂಚನ್ನು ಹೆಣೆದಿತ್ತು ಎಂದು ಮಾತ್ರವಲ್ಲ, ತನ್ನನ್ನು ಸುರಕ್ಷಿತವಾಗಿ ಡೆನ್ಮಾರ್ಕ್‍ಗೆ ತಲುಪಿಸುವ ಭರವಸೆಯನ್ನೂ ನೀಡಲಾಗಿತ್ತು ಎಂದಾತ ಹೇಳಿದ್ದಾನೆ. ಪಶ್ಚಿಮ ಬಂಗಾಲದೊಂದಿಗೆ ಕಿಮ್ ಡೆವಿಗೆ ಮೊದಲೇ ನಂಟಿತ್ತು. ಅಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಆತ ಭಾಗಿಯಾಗಿದ್ದ. ಆನಂದ ಮಾರ್ಗ ಸಂಘಟನೆಯ ಸದಸ್ಯನೂ ಆಗಿದ್ದ. ಆನಂದ ಮಾರ್ಗಿಗಳನ್ನು ಬಳಸಿ ಬಂಗಾಳದಲ್ಲಿ ಆಂತರಿಕ ಸಂಘರ್ಷಗಳನ್ನು ಹುಟ್ಟು ಹಾಕುವುದು ಮತ್ತು ಅದರ ನೆಪದಲ್ಲಿ ರಾಷ್ಟ್ರಪತಿ ಆಡಳಿತವನ್ನು ರಾಜ್ಯದ ಮೇಲೆ ಹೇರುವುದು ತನ್ನನ್ನು ಬಳಸಿಕೊಂಡವರ ಉದ್ದೇಶವಾಗಿತ್ತು ಎಂದೂ ಆತ ಹೇಳಿಕೊಂಡಿದ್ದಾನೆ. ವಿಶೇಷ ಏನೆಂದರೆ, ಈ ಶಸ್ತ್ರಾಸ್ತ್ರವಿದ್ದ ವಿಮಾನ ಭಾರತಕ್ಕೆ ಬಂದಾಗ ರಾಡರ್ ಸ್ಥಗಿತಗೊಂಡಿತ್ತು. ಒಂದು ರೀತಿಯಲ್ಲಿ, ಆ ಇಡೀ ಪ್ರಕರಣ ಹತ್ತಾರು ಅನುಮಾನಗಳನ್ನು ಉಳಿಸಿಕೊಂಡೇ ಇತಿಹಾಸದ ಪುಟಗಳನ್ನು ಸೇರಿಕೊಂಡಿದೆ. ಇವಷ್ಟೇ ಅಲ್ಲ, 2001 ಡಿ. 13ರಂದು ದೇಶದ ಪಾರ್ಲಿಮೆಂಟಿನ ಮೇಲೆ ನಡೆದ ದಾಳಿಯ ಕುರಿತಂತೆಯೂ ಕೆಲವಾರು ಸಂಶಯಗಳು ಈಗಲೂ ಉಳಿದುಕೊಂಡಿವೆ. ಪಾರ್ಲಿಮೆಂಟಿನಲ್ಲಿ ರಕ್ಷಣಾ ಹಗರಣದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲೇ ಆ ದಾಳಿ ನಡೆದಿತ್ತು. ಅರುಂಧತಿ ರಾಯ್‍ರಂತಹವರು ಇಡೀ ಘಟನೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಎತ್ತಿದ್ದರು. ಕಾಶ್ಮೀರದ ಶರಣಾಗತ ಹೋರಾಟಗಾರನಾಗಿದ್ದ ಅಫ್ಝಲ್ ಗುರುವನ್ನು ಆತನ ಅರಿವಿಗೆ ಬಾರದೆಯೇ ವ್ಯವಸ್ಥಿತವಾಗಿ ಆ ದಾಳಿಯಲ್ಲಿ ಬಳಸಿಕೊಳ್ಳಲಾಗಿತ್ತು ಎಂಬ ಮಾತುಗಳು ಆಗ ವ್ಯಕ್ತವಾಗಿದ್ದುವು. ಆತ ಕೊಟ್ಟ ಹೇಳಿಕೆಗಳು ಇಡೀ ಪ್ರಕರಣಕ್ಕೆ ಇನ್ನೊಂದು ಮುಖ ಇರಬಹುದಾದ ಸಾಧ್ಯತೆಗಳನ್ನು ವ್ಯಕ್ತಪಡಿಸಿತ್ತು.
 ನಿಜವಾಗಿ, ಈ ದೇಶದಲ್ಲಿ ನಡೆಯುವ ಸ್ಫೋಟಗಳು ಮತ್ತು ದಾಳಿಗಳ ಹಿಂದೆ ಹೊರಗೆ ಗೋಚರವಾಗುವುದಕ್ಕಿಂತ ಭಿನ್ನವಾದ ಕೆಲವು ಆಯಾಮಗಳಿರುತ್ತವೆ ಅನ್ನುವುದಕ್ಕೆ ಈ ಮೇಲಿನ ಮಾಹಿತಿಗಳೇ ಅತ್ಯುತ್ತಮ ಪುರಾವೆ. ಮಹಾರಾಷ್ಟ್ರದ ಮಾಲೆಗಾಂವ್‍ನ ಮಸೀದಿಯೊಂದರ ದಫನ ಭೂಮಿಯಲ್ಲಿ ಬಾಂಬ್ ಸ್ಫೋಟಗೊಂಡು 37 ಮಂದಿ ಸಾವಿಗೀಡಾದಾಗಲೂ ಅದನ್ನು ಮುಸ್ಲಿಮ್ ಭಯೋತ್ಪಾದನೆ ಎಂದೇ ಕರೆಯಲಾಗಿತ್ತು. ಸಂಜೋತಾ ಎಕ್ಸ್ ಪ್ರೆಸ್ ರೈಲು ಸಹಿತ ಇನ್ನಿತರ ಕೆಲವಾರು ಬಾಂಬ್ ಸ್ಫೋಟಗಳಿಗೂ ಮುಸ್ಲಿಮ್ ಭಯೋತ್ಪಾದನೆಯನ್ನೇ ಹೊಣೆ ಮಾಡಲಾಗಿತ್ತು. ಆದರೆ ಹೇಮಂತ್ ಕರ್ಕರೆಯವರ ನೇತೃತ್ವದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್, ಪುರೋಹಿತ್, ಅಸೀಮಾನಂದ ಮುಂತಾದವರ ಬಂಧನದೊಂದಿಗೆ ಮುಸ್ಲಿಮ್ ಭಯೋತ್ಪಾದನೆಯ ಸತ್ಯಾಸತ್ಯತೆಗಳು ಸಮಾಜದಲ್ಲಿ ಚರ್ಚೆಗೊಳಗಾದುವು. ಮುಸ್ಲಿಮ್ ಭಯೋತ್ಪಾದನೆ ಎಂಬ ಪರಿಚಿತ ಹೆಸರಿನಲ್ಲಿ ಇನ್ನಾರೋ ಸ್ಫೋಟಗಳನ್ನು ಈ ದೇಶದಲ್ಲಿ ನಡೆಸುತ್ತಿರುವೆಂಬುದನ್ನು ಕರ್ಕರೆ ತಂಡ ಖಚಿತಪಡಿಸಿತ್ತು. ಬಹುಶಃ, ಭಯೋತ್ಪಾದನೆಯ ಕುರಿತಂತೆ ಈ ದೇಶದಲ್ಲಿ ಆವರೆಗೆ ಇದ್ದ ಸಿದ್ಧ ನಂಬಿಕೆಗೆ ಕರ್ಕರೆ ಆ ಬಂಧನದ ಮೂಲಕ ಬಲವಾದ ಏಟನ್ನು ಕೊಟ್ಟಿದ್ದರು. ‘ಬಾಂಬ್ ಸ್ಫೋಟಿಸುವುದಕ್ಕೆ ಮುಸ್ಲಿಮರೇ ಬೇಕಾಗಿಲ್ಲ’ ಎಂಬ ಸಂದೇಶವನ್ನು ಅವರು ಪುರೋಹಿತ್, ಸಾಧ್ವಿಗಳನ್ನು ತೋರಿಸಿ ಸಾಬೀತುಪಡಿಸಿದ್ದರು. ಆದ್ದರಿಂದಲೇ, ಕರ್ಕರೆಯವರನ್ನು ಬಲಿ ಪಡೆದುಕೊಂಡ ಮುಂಬೈ ದಾಳಿಯ ಸುತ್ತ ಅನುಮಾನಗಳು ಮೂಡುವುದು.
 

ಏನೇ ಆಗಲಿ, ಪುರುಲಿಯಾದಿಂದ ಹಿಡಿದು ಮೊನ್ನೆ ನಡೆದ ಬೆಂಗಳೂರು ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ವರೆಗೆ ಎಲ್ಲವನ್ನೂ ಸಂದೇಹದಿಂದ ನೋಡಲೇಬೇಕಾದ ಪರಿಸ್ಥಿತಿ ಇವತ್ತು ನಿರ್ಮಾಣವಾಗಿದೆ. ಪ್ರತಿ ಪ್ರಕರಣಕ್ಕೂ ಹೊರಗೆ ಕಾಣುವ ಮತ್ತು ಕಾಣದ ಎರಡು ಮುಖಗಳಿರುತ್ತವೆ. ನಾವೆಲ್ಲ ಹೊರಗೆ ಕಾಣುವ ಮುಖಗಳನ್ನೇ ನಿಜ ಎಂದು ನಂಬಿ ಬಿಡುತ್ತೇವೆ. ಈ ಮುಖಗಳನ್ನು ‘ನಿಜ’ ಮಾಡುವುದಕ್ಕಾಗಿ ಕಾಣದ ಮುಖಗಳು ಕೃತಕ ಪುರಾವೆಗಳನ್ನೂ ಮಾಹಿತಿಗಳನ್ನೂ ಬಹಿರಂಗಪಡಿಸುತ್ತಿರುತ್ತವೆ. ಅದಕ್ಕಾಗಿ ಅವು ಲಭ್ಯವಿರುವ ಎಲ್ಲ ಮಾಧ್ಯಮಗಳನ್ನೂ ಬಳಸಿಕೊಳ್ಳುತ್ತವೆ. ಪುರುಲಿಯಾ ಮತ್ತು ಮುಂಬೈ ದಾಳಿಯ ಕುರಿತು ಬಹಿರಂಗವಾದ ಮಾಹಿತಿಗಳು ಸ್ಪಷ್ಟಪಡಿಸುವುದೂ ಇವನ್ನೇ.

Tuesday, 23 December 2014

ಪ್ರಶ್ನೆಗೊಳಪಡಿಸುತ್ತಾ ಗುರಿಮುಟ್ಟಿದ ಪ್ರವಾದಿ(ಸ)

    ಓರ್ವ ಸಮಾಜ ಸುಧಾರಕನ ಮುಂದೆ ಸಾಮಾನ್ಯವಾಗಿ ಎರಡು ಆಯ್ಕೆಗಳಿರುತ್ತವೆ. ಒಂದು ಉಗ್ರವಾದವಾದರೆ ಇನ್ನೊಂದು ಸೌಮ್ಯವಾದ. ತಮ್ಮ ಗುರಿಯನ್ನು ಮುಟ್ಟುವುದಕ್ಕಾಗಿ ಈ ಎರಡು ವಿಧಾನಗಳನ್ನು ಆಯ್ದುಕೊಂಡ ಸುಧಾರಕರ ದೊಡ್ಡದೊಂದು ಪಟ್ಟಿ ಈ ಜಗತ್ತಿನಲ್ಲಿದೆ. ಓರ್ವ ಸಮಾಜ ಸುಧಾರಕನೆಂಬ ನೆಲೆಯಲ್ಲಿ ಪ್ರವಾದಿ ಮುಹಮ್ಮದ್‍ರ(ಸ) ಮುಂದೆಯೂ ಈ ಎರಡು ಆಯ್ಕೆಗಳಿದ್ದುವು. ಅವರ ನಿಲುವಿಗೆ ಸಮಾಜದಿಂದ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಪರಿಗಣಿಸಿದರೆ, ಅವರು ಉಗ್ರವಾದವನ್ನು ನೆಚ್ಚಿಕೊಳ್ಳಬೇಕಿತ್ತು. ತಾಯಿಫ್‍ನಲ್ಲಿ ಮಾಡಲಾದ ಹಲ್ಲೆ, ಅವರ ಮೇಲೆ ದಿಗ್ಬಂಧನ ವಿಧಿಸಿ 3 ತಿಂಗಳುಗಳ ಕಾಲ ಹಸಿವೆಯಿಂದಿರಿಸಿದ್ದು, ಸಾರ್ವಜನಿಕವಾಗಿ ವಿವಿಧ ರೀತಿಯಲ್ಲಿ ಅವಮಾನ, ಹಲ್ಲೆ, ನಿಂದನೆಗೆ ಗುರಿಪಡಿಸಿದ್ದು, ತನ್ನ ಬೆಂಬಲಿಗರನ್ನು ಕಟು ಕ್ರೌರ್ಯಕ್ಕೆ ಒಳಪಡಿಸುತ್ತಿದ್ದುದು, ಹುಟ್ಟಿದೂರು ಮಕ್ಕಾದಿಂದಲೇ ವಲಸೆ ಹೋಗುವಂತೆ ನಿರ್ಬಂಧಿಸಿದ್ದು.. ಹೀಗೆ ಓರ್ವ ಸಮಾಜ ಸುಧಾರಕನಾಗಿ ಅವರು ಮಕ್ಕಾದಲ್ಲಿ 13 ವರ್ಷಗಳ ಕಾಲ ಅನುಭವಿಸಿದ ಚಿತ್ರಹಿಂಸೆಯು ‘ಉಗ್ರವಾದವೇ ಪರಿಹಾರ’ ಎಂದು ತೀರ್ಮಾನಿಸುವುದಕ್ಕೆ ಎಲ್ಲ ರೀತಿಯಲ್ಲೂ ತಕ್ಕುದಾಗಿತ್ತು. ಆದರೆ ಮುಹಮ್ಮದ್(ಸ) ಉಗ್ರವಾದವನ್ನು ತನ್ನ ಉದ್ದೇಶ ಸಾಧನೆಗಾಗಿ ಆಯ್ಕೆ ಮಾಡಿಕೊಳ್ಳಲೇ ಇಲ್ಲ. ವ್ಯಭಿಚಾರಕ್ಕೆ ಅನುಮತಿಯನ್ನು ಕೇಳಿದ ಬಂದ ಓರ್ವ ಗ್ರಾವಿೂಣ ವ್ಯಕ್ತಿಯನ್ನು ಅವರು ತಿದ್ದಿದ್ದು - ‘ಆ ವ್ಯಭಿಚಾರ ನಿನ್ನ ಮಗಳೊಂದಿಗಾದರೆ ಹೇಗೆ..’ ಎಂಬ ತೀಕ್ಷ್ಣ ಪ್ರಶ್ನೆಯೊಂದಿಗೆ. ಆ ಪ್ರಶ್ನೆ ಆ ವ್ಯಕ್ತಿಯ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತೆಂದರೆ, ಆತ ತನ್ನ ಆಲೋಚನಾ ವಿಧಾನವನ್ನೇ ಬದಲಿಸಿದ. ಮದ್ಯಪಾನವನ್ನು ಬದುಕಿನ ಅವಿಭಾಜ್ಯ ಅಂಗವೆಂದು ನಂಬಿಕೊಂಡು ಬಂದಿದ್ದ ಸಮಾಜವನ್ನು ಅವರು ಹಲಾಲ್-ಹರಾಮ್ ಎಂದು ಕಡ್ಡಿ ಮುರಿದಂತೆ ವಿಭಜಿಸದೇ ಅದನ್ನು ಸಹನೆಯಿಂದ ಅಧ್ಯಯನಕ್ಕೆ ಒಳಪಡಿಸಿದರು. ‘ಕುಡಿತದ ಅಮಲಿನಲ್ಲಿರುವಾಗ ನಮಾಝ್ ಮಾಡಬಾರದು' ಎಂಬ ಸೌಮ್ಯ ಎಚ್ಚರಿಕೆಯನ್ನು ನೀಡಿ ಅದರ ಒಳಿತು-ಕೆಡುಕುಗಳು ಸಮಾಜದಲ್ಲಿ ಚರ್ಚಿತವಾಗುವಂತೆ ನೋಡಿಕೊಂಡರು. ಅವರು ವಿಗ್ರಹಾರಾಧನೆಯ ಪ್ರಬಲ ವಿರೋಧಿಯಾಗಿದ್ದರೂ ಕಅಬಾಲಯದಲ್ಲಿದ್ದ 300ಕ್ಕಿಂತಲೂ ಅಧಿಕ ವಿಗ್ರಹಗಳಲ್ಲಿ ಒಂದನ್ನೂ ತೆಗಳಲಿಲ್ಲ. ಅದಕ್ಕೆ ಹಾನಿಯೆಸಗುವುದಾಗಲಿ, ಸ್ಥಳಾಂತರ ಮಾಡುವುದಾಗಲಿ ಮಾಡಲಿಲ್ಲ. ಅದರ ಬದಲು ಅವರು ವಿಗ್ರಹಾರಾಧನೆಯ ಸುತ್ತ ಸಮಾಜದಲ್ಲಿ ಚರ್ಚೆಯೊಂದನ್ನು ಹುಟ್ಟುಹಾಕಿದರು. ಮದೀನಾದಿಂದ ಮಕ್ಕಾಕ್ಕೆ ತೀರ್ಥಯಾತ್ರೆಯ ಉದ್ದೇಶದೊಂದಿಗೆ ಬಂದ ಅವರು ಮತ್ತು ಅನುಯಾಯಿಗಳನ್ನು ಅವರ ವಿರೋಧಿಗಳು ಮಾರ್ಗ ಮಧ್ಯದಲ್ಲೇ ತಡೆದಾಗ ಅವರ ಮುಂದೆ ಎರಡು ಆಯ್ಕೆಗಳಿದ್ದುವು. ಒಂದೋ ಉಗ್ರವಾದಿಯಾಗುವುದು ಅಥವಾ ಆ ತಡೆಯನ್ನು ವೈಚಾರಿಕವಾಗಿ ಎದುರಿಸುವುದು. ಅವರು ಎರಡನೆಯದನ್ನು ಆಯ್ದುಕೊಂಡರು. ಬಾಹ್ಯನೋಟಕ್ಕೆ ಹಿನ್ನಡೆಯಂತೆ ಕಾಣುವ ಒಪ್ಪಂದಕ್ಕೂ ಮುಂದಾದರು. ಒಪ್ಪಂದ ಪತ್ರದಲ್ಲಿ ಪ್ರವಾದಿ ಮುಹಮ್ಮದ್ ಎಂದು ನಮೂದಿಸುವುದಕ್ಕೆ ವಿರೋಧಿಗಳು ಆಕ್ಷೇಪ ವ್ಯಕ್ತಪಡಿಸಿದಾಗ ‘ಅಬ್ದುಲ್ಲಾರ ಮಗ ಮುಹಮ್ಮದ್' ಎಂದು ಬರೆಯಿಸಿ ಉಗ್ರ ನಿಲುವಿನಿಂದ ದೂರ ನಿಂತರು. ವಿರೋಧಿಗಳು ಯುದ್ಧವೊಂದನ್ನು ಅನಿವಾರ್ಯಗೊಳಿಸಿದಾಗಲೂ ಸೆರೆಸಿಕ್ಕ ಕೈದಿಗಳನ್ನು ತನ್ನ ಸಮಾಜದ ಅಕ್ಷರ ಗುರುಗಳಾಗಿ ಗೌರವಿಸಿದರು. ಬಹುಶಃ, ಪ್ರವಾದಿ ಮುಹಮ್ಮದ್‍ರ ಬದುಕಿನ ಉದ್ದಕ್ಕೂ ಓರ್ವ ಮಾದರಿ ಸಮಾಜ ಸುಧಾರಕ ಎದ್ದು ಕಾಣುತ್ತಾರೆ. ಸಮಾಜಕ್ಕೆ ಅವರು ವೈಚಾರಿಕತೆಯ ರುಚಿಯನ್ನು ಹತ್ತಿಸಿದರು. ಸ್ವಯಂ ಆಲೋಚಿಸುವಂತೆ ಪ್ರಚೋದನೆ ಕೊಟ್ಟರು. ಪ್ರತಿಯೊಂದನ್ನೂ ವಿಮರ್ಶಿಸುತ್ತಾ ನಡೆದರು. ಮಾತ್ರವಲ್ಲ, ಏನನ್ನು ಬೋಧಿಸುತ್ತಿದ್ದರೋ ಅದಕ್ಕೆ ಅನ್ವರ್ಥವಾಗಿ ಬದುಕಿದರು.
   ಪುಟ್ಟ ಮಕ್ಕಳ ಹತ್ಯಾಕಾಂಡ ನಡೆಸಿ ಪ್ರತೀಕಾರ ತೀರಿಸಿದೆವೆಂದು ಹೇಳಿಕೊಳ್ಳುವ ಕ್ರೂರಿಗಳ ಜಗತ್ತಿನಲ್ಲಿ ಮಗು ಹೃದಯದ ಪ್ರವಾದಿ(ಸ) ಇವತ್ತು ಒಂಟಿಯಾಗುತ್ತಿದ್ದಾರೆ. ಮಕ್ಕಳನ್ನು ದೇವಚರರು ಎಂದು ಕರೆದ ಮತ್ತು ಯುದ್ಧದ ಸಂದರ್ಭದಲ್ಲಿ ಕೂಡ ಮಕ್ಕಳ ಹತ್ಯೆಯನ್ನು ನಿಷೇಧಿಸಿದ ಅವರ ಧೋರಣೆಯನ್ನು ಅವಮಾನಿಸುವಂಥ ಘಟನೆಗಳು ನಮ್ಮ ಸುತ್ತ-ಮುತ್ತ ನಡೆಯುತ್ತಿವೆ. ನಿಜವಾಗಿ, ಸಮಾಜದ ಪಾಲಿಗೆ ಓರ್ವ ಸುಧಾರಕ ಅತಿ ಮುಖ್ಯ ಅನ್ನಿಸುವುದು ಆ ಸಮಾಜದ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ. ಮಕ್ಕಳು, ಮಹಿಳೆಯರು ಅಸ್ತಿತ್ವದ ಭಯವನ್ನು ಎದುರಿಸುವಾಗ. ಆದ್ದರಿಂದ ಪ್ರವಾದಿ ಮುಹಮ್ಮದ್(ಸ) ಇವತ್ತಿನ ಸಮಾಜದ ಅಗತ್ಯವಾಗಿದ್ದಾರೆ. ಅವರು ಏನಾಗಿದ್ದರೋ ಮತ್ತು ಏನನ್ನು ಬೋಧಿಸಿದ್ದರೋ ಅದನ್ನು ಅಷ್ಟೇ ನಿರ್ಮಲವಾಗಿ ಸಮಾಜದ ಮುಂದಿಡಬೇಕಾದ ಅಗತ್ಯವಿದೆ. ಮಕ್ಕಳನ್ನು ಕೊಲೆ ಮಾಡುವ, ಅಪಹರಿಸುವ, ಅತ್ಯಾಚಾರ ನಡೆಸುವವರ ನಿಜಮುಖವನ್ನು ಸಮಾಜ ಅರಿತುಕೊಳ್ಳುವುದಕ್ಕಾದರೂ ಈ ಕೆಲಸ ಆಗಲೇಬೇಕಿದೆ.

Wednesday, 17 December 2014

ಆಗ್ರಾ ಮತಾಂತರದ ಹಿಂದೆ ಮತಾಂತರವನ್ನೇ ನಿಷೇಧಿಸುವ ಉದ್ದೇಶ ಇದೆಯೇ?

    ಸಾಧ್ವಿ ಜ್ಯೋತಿ ನಿರಂಜನ್, ಸಾಕ್ಷಿ ಮಹಾರಾಜ್ ಮತ್ತು ಸುಶ್ಮಾ ಸ್ವರಾಜ್‍ರನ್ನು ವಿವಾದದಿಂದ ರಕ್ಷಿಸಲು ಆಗ್ರಾದ ಮಧುನಗರ ಕೊಳೆಗೇರಿಯು ಯಶಸ್ವಿಯಾಗಿದೆ. ಪಾರ್ಲಿಮೆಂಟ್‍ನಲ್ಲಿ ಕಪ್ಪುಹಣದ ಚರ್ಚೆ ನಡೆಯುತ್ತಿದ್ದಾಗ ದೆಹಲಿಯ ಕಾರ್ಯಕ್ರಮದಲ್ಲಿ ಸಾಧ್ವಿ ವಿವಾದಿತ ಹೇಳಿಕೆಯೊಂದನ್ನು ಕೊಟ್ಟರು. ಪಾರ್ಲಿಮೆಂಟು ಸಾಧ್ವಿಯ ಸುತ್ತ ತಿರುಗತೊಡಗಿತು. ಕಪ್ಪು ಹಣವನ್ನು ಕೈಬಿಟ್ಟು ಪ್ರತಿಪಕ್ಷಗಳು ಸಾಧ್ವಿಯನ್ನು ಎತ್ತಿಕೊಂಡವು. ಕ್ಷಮೆಯಾಚನೆಯನ್ನೂ ಪಡೆದುವು. ಅದೇ ವೇಳೆ ಸಾಕ್ಷಿ ಮಹಾರಾಜ್ ಎಂಬ ಸಂಸದ ಗೋಡ್ಸೆಯನ್ನು ಮಹಾನ್ ದೇಶಭಕ್ತ ಎಂದು ಹೊಗಳಿದರು. ಸಾಧ್ವಿಯ ಸುತ್ತ ನೆರೆದಿದ್ದ ವಿರೋಧ ಪಕ್ಷಗಳು ಮಹಾರಾಜ್‍ರ ಸುತ್ತ ನೆರೆದುವು. ಅವರಿಂದ ಕ್ಷಮಾಯಾಚನೆಯನ್ನು ಪಡಕೊಳ್ಳುವುದಕ್ಕಾಗಿ ಒತ್ತಡವನ್ನು ಹೇರತೊಡಗಿದುವು. ಅವರಿಂದ ಮೂರು ಮೂರು ಬಾರಿ ಕ್ಷಮೆ ಯಾಚನೆಯನ್ನು ಪಡೆಯುವ ಹೊತ್ತಲ್ಲೇ ಭಗವದ್ಗೀತೆ ರಾಷ್ಟ್ರ ಗ್ರಂಥವಾಗಬೇಕು ಎಂದು ಸುಶ್ಮಾ ಸ್ವರಾಜ್ ಹೇಳಿಕೆಯನ್ನು ಕೊಟ್ಟರು. ಸಾಧ್ವಿ ಮತ್ತು ಸಾಕ್ಷಿಯನ್ನು ಕೈಬಿಟ್ಟ ವಿರೋಧ ಪಕ್ಷಗಳು ಸುಶ್ಮಾರನ್ನು ತರಾಟೆಗೆ ತೆಗೆದುಕೊಂಡವು. ಈ ಕುರಿತಂತೆ ಮಾಧ್ಯಮಗಳಲ್ಲಿ ಚರ್ಚೆಗಳೂ ನಡೆದುವು. ಈ ಚರ್ಚೆ ಇನ್ನೂ ಮುಗಿಯುವುದಕ್ಕಿಂತ ಮೊದಲೇ ಆಗ್ರಾದ ಮಧುನಗರ ಕೊಳೆಗೇರಿಯ 56 ಮುಸ್ಲಿಮ್ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಸುದ್ದಿ ಪ್ರಕಟವಾದುವು. ಮಾಧ್ಯಮಗಳಲ್ಲಿ ಮಾತ್ರವಲ್ಲ, ಪಾರ್ಲಿಮೆಂಟಿನಲ್ಲೂ ಇದು ತೀವ್ರ ಚರ್ಚೆ, ವಿವಾದಕ್ಕೆ ಕಾರಣವಾಯಿತು. ಇದೀಗ ಈ ಸುದ್ದಿಯನ್ನು ಮರೆಸುವಂತೆ ಅಲೀಘಡ್‍ನಲ್ಲಿ ಡಿ. 25ರಂದು ಸಂಘಪರಿವಾರ ನಡೆಸಲುದ್ದೇಶಿಸಿರುವ ಮತಾಂತರ ಕಾರ್ಯಕ್ರಮವು ಪ್ರಚಾರ ಪಡೆಯುತ್ತಿದೆ. ಅಂತೂ ಕಪ್ಪು ಹಣದ ಸುತ್ತ ಆರಂಭಗೊಂಡ ಚರ್ಚೆಯು ಬೇಕಾಬಿಟ್ಟಿ ತಿರುವು ಪಡೆದು ಮೋದಿಯನ್ನೂ ಮತ್ತು ಅವರ ಪಕ್ಷವನ್ನೂ ರಕ್ಷಿಸುವಲ್ಲಿ ಸಫಲವಾಗಿದೆ.
 ನಿಜವಾಗಿ, ಆಗ್ರಾ ಮತಾಂತರ ಪ್ರಕರಣಕ್ಕೆ ಬಿಜೆಪಿ ನೀಡುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಆ ಇಡೀ ಪ್ರಕ್ರಿಯೆಯೇ ಸಂಚಿನಂತೆ ಕಾಣುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಪಾರ್ಲಿಮೆಂಟಿನಲ್ಲಿ ಹೇಳಿಕೆ ನೀಡಿದ ವೆಂಕಯ್ಯ ನಾಯ್ಡುರವರು, ‘ದೇಶದಾದ್ಯಂತ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರೋಣ’ ಎಂದರು. ಬಹುಶಃ, ಆಗ್ರಾದ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಹೇಳಿಕೆಗಳನ್ನೂ ಮತ್ತು ವೆಂಕಯ್ಯ ನಾಯ್ಡು ಅವರ ಹೇಳಿಕೆಯನ್ನೂ ಜೊತೆಯಾಗಿಟ್ಟು ನೋಡಿದರೆ ಷಡ್ಯಂತ್ರದ ಅಸ್ಪಷ್ಟ ಚಿತ್ರವೊಂದು ಮೂಡಿಬರುತ್ತದೆ. ಮತಾಂತರ ವಿರೋಧಿ ಕಾನೂನನ್ನು ರಚಿಸುವ ಮತ್ತು ಅದನ್ನು ದೇಶದಾದ್ಯಂತ ಏಕಪ್ರಕಾರ ಹೇರುವ ಉದ್ದೇಶದಿಂದಲೇ ಆಗ್ರ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತೇ? ಆಗ್ರಾದಲ್ಲಿ ಮತಾಂತರ ನಡೆದೇ ಇಲ್ಲ ಎಂದು ಅದರಲ್ಲಿ ಭಾಗವಹಿಸಿದವರು ಹೇಳಿಕೊಳ್ಳುತ್ತಿದ್ದಾರೆ. ರೇಶನ್ ಕಾರ್ಡನ್ನು ಪಡಕೊಳ್ಳುವುದಕ್ಕಾಗಿ ನಾವು ಆ ಕಾರ್ಯಕ್ರಮಕ್ಕೆ ಹೋಗಿರುವುದಾಗಿ ಅನೇಕರು ಹೇಳಿಕೊಂಡಿದ್ದಾರೆ. ಅದರಲ್ಲಿ ಭಾಗವಹಿಸಿದವರು ಆ ಕಾರ್ಯಕ್ರಮದ ಬಳಿಕವೂ ಮಸೀದಿಗೆ ಹೋದದ್ದು ಮತ್ತು ತಾವು ಈಗಲೂ ಮುಸ್ಲಿಮರೇ ಆಗಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿರುವುದೂ ನಡೆದಿದೆ. ಇವೆಲ್ಲ ಸೂಚಿಸುವುದೇನನ್ನು? ಮತಾಂತರ ಎಂಬುದು ಒಂದು ಪೂಜಾ ಕಾರ್ಯಕ್ರಮದ ಸುತ್ತ ನೆರೆಯುವುದರ ಹೆಸರು ಅಲ್ಲವಲ್ಲ. ಅದು ಸೈದ್ಧಾಂತಿಕ ಪರಿವರ್ತನೆ. ಒಂದು ಸಿದ್ಧಾಂತದಿಂದ ವಿಮುಖಗೊಂಡು ಇನ್ನೊಂದರಲ್ಲಿ ನೆಲೆ, ಬೆಲೆ ಹುಡುಕುವ ಪ್ರಕ್ರಿಯೆ. ಆಗ್ರಾ ಮತಾಂತರ ಪ್ರಕರಣದಲ್ಲಿ ಇಂಥ ಯಾವ ಅಂಶಗಳೂ ವ್ಯಕ್ತಗೊಂಡೇ ಇಲ್ಲ. ಬಡ ಮನುಷ್ಯರು ಒಂದು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದುದನ್ನು ಬಿಟ್ಟರೆ ಉಳಿದಂತೆ ಯಾವ ಬದಲಾವಣೆಗಳೂ ನಡೆದಿಲ್ಲ. ಇಂಥದ್ದೊಂದು ನಿರ್ಜೀವ ಕಾರ್ಯಕ್ರಮವನ್ನು ಸಂಘಪರಿವಾರ ಹಮ್ಮಿಕೊಂಡಿರುವುದಕ್ಕೆ ಕಾರಣಗಳೇನು? ಅವು ನಿಜವಾಗಿಯೂ ಮತಾಂತರ ಮಾಡಲು ಬಯಸಿತ್ತೇ ಅಥವಾ ಅಂಥದ್ದೊಂದು ಹುಯಿಲೆಬ್ಬಿಸುವ ಉದ್ದೇಶವನ್ನಷ್ಟೇ ಹೊಂದಿತ್ತೇ? ಮತಾಂತರವು ದೇಶದಾದ್ಯಂತ ಚರ್ಚೆಗೊಳಗಾಗಲಿ ಮತ್ತು ಮತಾಂತರ ವಿರೋಧಿ ಕಾನೂನನ್ನು ರಚಿಸಲು ಕೇಂದ್ರ ಸರಕಾರಕ್ಕೆ ತಕ್ಕ ಸಂದರ್ಭ ಒದಗಿ ಬರಲಿ ಎಂಬ ತಂತ್ರ ಅದರ ಹಿಂದಿತ್ತೇ?
 ಮತಾಂತರ ವೈಯಕ್ತಿಕವಾದುದು. ಕಾಂಗ್ರೆಸಿಗನೋರ್ವ ಬಿಜೆಪಿಗನಾಗುವುದು, ಬಿಜೆಪಿಗನೋರ್ವ ಕಮ್ಯುನಿಸ್ಟನಾಗುವುದು ಅಥವಾ ಕಮ್ಯುನಿಸ್ಟನು ಕಾಂಗ್ರೆಸಿಗನಾಗುವುದು ಹೇಗೆ ಸಹಜ ಮತ್ತು ಸರಾಗವೋ ಹಿಂದೂವೊಬ್ಬ ಮುಸ್ಲಿಮ್ ಆಗುವುದು, ಮುಸ್ಲಿಮನೋರ್ವ ಕ್ರೈಸ್ತ ಆಗುವುದು ಅಥವಾ ಕ್ರೈಸ್ತನೋರ್ವ ಹಿಂದೂ ಆಗುವುದು ಕೂಡ ಅಷ್ಟೇ ಸಹಜ ಮತ್ತು ಸರಾಗ ಆಗಬೇಕು. ಬಿಜೆಪಿ ಸಿದ್ಧಾಂತದಿಂದ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಸಿದ್ಧಾಂತರವಾಗುವುದು ತಲ್ಲಣ ಸೃಷ್ಟಿಸುವುದಿಲ್ಲವಾದರೆ ಇಸ್ಲಾಮ್‍ನಿಂದ ಹಿಂದೂ ಧರ್ಮಕ್ಕೆ ಧರ್ಮಾಂತರವಾಗುವುದು ಯಾಕೆ ತಲ್ಲಣ ಉಂಟು ಮಾಡಬೇಕು? ಧರ್ಮಾಂತರ ಓರ್ವ ವ್ಯಕ್ತಿಯ ಸಹಜ ಸ್ವಾತಂತ್ರ್ಯ. ಸಿದ್ಧಾಂತಗಳನ್ನು ಅಧ್ಯಯನ ನಡೆಸುತ್ತ ಆತ ಒಂದರಿಂದ ಇನ್ನೊಂದಕ್ಕೆ ವಾಲಬಲ್ಲ. ಚೆಗೆವಾರನನ್ನು ಓದುತ್ತಾ ಪುಳಕಿತಗೊಂಡ ವ್ಯಕ್ತಿ ಮುಂದೆ ಪ್ರವಾದಿ ಮುಹಮ್ಮದ್‍ರನ್ನು ಓದುತ್ತಾ ಪ್ರಭಾವಿತನಾಗಬಲ್ಲ. ಅದು ಅಧ್ಯಯನನಿರತ ವ್ಯಕ್ತಿಯ ಸ್ವಾತಂತ್ರ್ಯ. ಈ ಸ್ವಾತಂತ್ರ್ಯಕ್ಕೆ ಅಪಾಯ ಒದಗುವುದು ಯಾವಾಗ ಎಂದರೆ ಆಮಿಷಗಳು ಮತ್ತು ಬೆದರಿಕೆಗಳು ಈ ಪ್ರಕ್ರಿಯೆಯಲ್ಲಿ ಜಾಗ ಪಡಕೊಂಡಾಗ. ಅಧ್ಯಯನದಿಂದಾಗಿ ಓರ್ವ ವ್ಯಕ್ತಿಯಲ್ಲಿ ಉಂಟಾಗುವ ಸೈದ್ಧಾಂತಿಕ ಬದಲಾವಣೆಗೂ ಬೆದರಿಕೆಗಳ ಕಾರಣಕ್ಕಾಗಿ ಓರ್ವ ವ್ಯಕ್ತಿ ಸಿದ್ಧಾಂತವನ್ನು ಬದಲಿಸಿಕೊಳ್ಳುವುದಕ್ಕೂ ವ್ಯತ್ಯಾಸ ಇದೆ. ಯಾವ ಸಿದ್ಧಾಂತವೂ ಆಮಿಷಗಳಿಂದಲೋ ಬೆದರಿಕೆಗಳಿಂದಲೋ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಯಾಕೆಂದರೆ, ಸಿದ್ಧಾಂತವೊಂದು ಅಸ್ತಿತ್ವಕ್ಕೆ ಬರುವುದು ಬೆದರಿಕೆಗಳ ಮೂಲಕ ಕೂಡಿಹಾಕಿದ ಅನುಯಾಯಿಗಳಿಂದಲ್ಲ. ಅಂಥ ಅನುಯಾಯಿಗಳು ಆ ಸಿದ್ಧಾಂತದ ಜಾರಿಯಲ್ಲಿ ಪಾಲುಗೊಳ್ಳಲಾರರು. ಅವರನ್ನು ನೋಡಿ ಇತರರು ಆ ಸಿದ್ಧಾಂತಕ್ಕೆ ಆಕರ್ಷಿತರೂ ಆಗಲಾರರು. ಒಂದು ರೀತಿಯಲ್ಲಿ, ಅಂಥ ಅನುಯಾಯಿಗಳು ಆ ಸಿದ್ಧಾಂತದ ಪರಾಜಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಲ್ಲರೇ ಹೊರತು ವಿಜಯದಲ್ಲಲ್ಲ. ಆದ್ದರಿಂದಲೇ, ಪವಿತ್ರ ಕುರ್‍ಆನ್- ಧರ್ಮದಲ್ಲಿ ಬಲಾತ್ಕಾರವಿಲ್ಲ (2:256) ಎಂದು ಬಲವಾಗಿ ಸಾರಿದೆ. ಇದು ಆಗ್ರದಲ್ಲಿ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡವರಿಗೆ ಗೊತ್ತಿಲ್ಲ ಎಂದಲ್ಲ. ಆಮಿಷಗಳಿಗೆ ಮನಸೋತು ಬರುವವರು ನಿಷ್ಠಾವಂತ ಅನುಯಾಯಿಗಳಾಗಲಾರರು ಎಂಬುದು ತೀರಾ ಸಾಮಾನ್ಯರಿಗೂ ಗೊತ್ತಿರುತ್ತದೆ. ನಾಳೆ ರೇಶನ್ ಕಾರ್ಡ್‍ಗಿಂತಲೂ ಬೆಲೆಬಾಳುವ ಆಮಿಷವನ್ನು ಇನ್ನಾರೋ ಒಡ್ಡಿದರೆ ಇವರು ತಮ್ಮ ನಿಷ್ಠೆಯನ್ನು ಖಂಡಿತ ಬದಲಿಸಬಲ್ಲರು. ಯಾಕೆಂದರೆ, ಹಸಿದವರಿಗೆ ಹೊಟ್ಟೆಯೇ ಮೊದಲ ಧರ್ಮ. ಹಸಿವಿನಿಂದ ಮುಕ್ತವಾಗಬೇಕೋ ಅಥವಾ ಸಿದ್ಧಾಂತ ಬೇಕೋ ಎಂಬೆರಡು ಆಯ್ಕೆಗಳ ಮುಂದೆ ಬಡವರು ಹಸಿವಿನಿಂದ ಮುಕ್ತವಾಗುವುದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆಗ್ರದಲ್ಲಿ ಇಂಥದ್ದೊಂದು ಆಮಿಷದ ಮೂಲಕ ಜನರನ್ನು ಸೇರಿಸಲಾಗಿದೆ. ಬಹುಶಃ ಸೇರಿಸಿದವರಿಗೆ ಒಂದು ಉದ್ದೇಶವಿರುವಂತೆಯೇ ಸೇರಿದವರಿಗೂ ಒಂದು ಉದ್ದೇಶವಿತ್ತು. ಸೇರಿದವರ ಉದ್ದೇಶ ರೇಶನ್ ಕಾರ್ಡ್ ಮತ್ತಿತರ ಸೌಲಭ್ಯ ಪಡಕೊಳ್ಳುವುದು. ಆದರೆ ಸೇರಿಸಿದವರ ಉದ್ದೇಶ? ಹಿಂದೂ ಧರ್ಮಕ್ಕೆ ಮತಾಂತರಿಸುವುದೋ ಅಥವಾ ಮತಾಂತರ ವಿರೋಧಿ ಕಾನೂನು ರಚನೆಗೆ ಮೋದಿ ಸರಕಾರಕ್ಕೆ ಅವಕಾಶ ಸೃಷ್ಟಿಸಿಕೊಡುವುದೋ? ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಆ ಮತಾಂತರದ ಉದ್ದೇಶ ಏನೆಂದು ಸ್ಪಷ್ಟವಾಗುತ್ತದೆ.

Wednesday, 10 December 2014

ಕಲ್ಲು, ಚೂರಿ, ಬೆಂಕಿ ಮತ್ತು ಧರ್ಮರಕ್ಷಣೆ

    ಒಂದು ಸಮಾಜದ ಸ್ವಾಸ್ಥ್ಯಕ್ಕೂ ಆ ಸಮಾಜದಲ್ಲಿರುವ ನಂಬಿಕೆ ಮತ್ತು ನಿರೀಕ್ಷೆಗಳಿಗೂ ಸಂಬಂಧ ಇರುತ್ತದೆ. ಸಾಮಾಜಿಕ ಸ್ವಾಸ್ಥ್ಯ ಎಂಬುದು ಅಲ್ಲಿರುವ ಆಸ್ಪತ್ರೆಗಳನ್ನೋ ಪೊಲೀಸರನ್ನೋ ಹೊಂದಿಕೊಂಡಿಲ್ಲ. ಕೆಲವು ರಮ್ಯ ನಿರೀಕ್ಷೆಗಳು ಆ ಸಮಾಜದ ಸೌಖ್ಯವನ್ನು ನಿರ್ಧರಿಸುತ್ತದೆ. ಮಸೀದಿಯಿಂದ ಹಾನಿಯನ್ನು ನಿರೀಕ್ಷಿಸದ ಸಮಾಜ, ದೇವಾಲಯದಿಂದ ಒಳಿತನ್ನೇ ನಿರೀಕ್ಷಿಸುವ ಸಮಾಜ, ಹಿಂದೂ-ಮುಸ್ಲಿಮ್-ಕ್ರೈಸ್ತರಿಂದ ಭದ್ರತೆಯನ್ನೇ ನಿರೀಕ್ಷಿಸುವ ಸಮಾಜ.. ಹೀಗೆ ಇಂಥ ಒಳ್ಳೆಯ ನಿರೀಕ್ಷೆಗಳು ಒಂದು ಸಮಾಜವನ್ನು ಶಾಂತಿಯಿಂದ ಮತ್ತು ಖುಷಿಯಿಂದ ಇಡಬಲ್ಲುದು. ದುರಂತ ಏನೆಂದರೆ, ಈ ವಾಸ್ತವವನ್ನು ಅತ್ಯಂತ ಚೆನ್ನಾಗಿ ಅರಿತುಕೊಂಡಿರುವುದು ಶಾಂತಿಯ ವಿರೋಧಿಗಳು. ಆದ್ದರಿಂದಲೇ ಅವರ ಮೊದಲ ಗುರಿ ಮಸೀದಿಯೋ ಮಂದಿರವೋ ಆಗಿರುತ್ತದೆ. ಹಂದಿ ಮತ್ತು ಹಸುವಿನ ತಲೆಯನ್ನು ಈ ಎರಡು ಕೇಂದ್ರಗಳಿಗೆ ಎಸೆಯಲಾಗುತ್ತದೆ. ಕಲ್ಲು ತೂರಾಟ ನಡೆಯುತ್ತದೆ. ಮಸೀದಿ-ಮಂದಿರಗಳು ಎಲ್ಲಿಯ ವರೆಗೆ ಸಮಾಜದ ಶಾಂತಿಯ ನಿರೀಕ್ಷೆಗಳಿಗೆ ಪೂರಕವಾಗಿರುತ್ತದೋ ಅಥವಾ ಅಲ್ಲಿಂದ ಹೊರ ಬೀಳುವ ಸುದ್ದಿಗಳು ನೆಮ್ಮದಿದಾಯಕವಾಗಿರುತ್ತದೋ ಅಲ್ಲಿಯ ವರೆಗೆ ಕಲ್ಲುಗಳಿಗೆ, ಹಂದಿ-ಹಸುವಿನ ತಲೆಗಳಿಗೆಲ್ಲ ಜಯ ಸಿಗುವುದು ಕಡಿಮೆ. ಸದ್ಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾಣಿಸಿಕೊಂಡಿರುವ ಅಹಿತಕರ ಘಟನೆಗಳಿಗೆ ಈ ಕೇಂದ್ರಗಳನ್ನೇ ಗುರಿ ಮಾಡಲಾಗಿದೆ. ಗಂಗೊಳ್ಳಿಯಲ್ಲಿ, ಉಳಾಯಿಬೆಟ್ಟು, ಬಜ್ಪೆ ಮತ್ತಿತರ ಪ್ರದೇಶಗಳಲ್ಲಿ ಕೋಮುಗಲಭೆಗೆ ಪೂರಕವಾದ ವಾತಾವರಣಗಳನ್ನು ನಿರ್ಮಿಸಲಾಗುತ್ತಿದೆ. ಕಲ್ಲು ತೂರಾಟ ನಡೆದಿದೆ. ಚೂರಿ ಇರಿತವಾಗಿದೆ. ಒಂದು ಸಮಾಜದ ನೆಮ್ಮದಿಯನ್ನು ಕೆಡಿಸುವುದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ದುಷ್ಕರ್ಮಿಗಳು ಯೋಜಿತವಾಗಿ ಮಾಡುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಸಮಾಜ ಪ್ರಚೋದನೆಗೆ ಒಳಗಾಗಬಾರದು. ಮಸೀದಿಗೋ ಮಂದಿರಕ್ಕೋ  ಕಲ್ಲೆಸೆಯುವವರು, ಗಡ್ಡವನ್ನೋ ನಾಮವನ್ನೋ ನೋಡಿ ಚೂರಿ ಹಾಕುವವರೆಲ್ಲ ಧರ್ಮ ವಿರೋಧಿಗಳೇ ಹೊರತು ಅವರಿಂದ ಧರ್ಮಕ್ಕಾಗಲಿ, ಸಮಾಜಕ್ಕಾಗಲಿ ಯಾವ ಪ್ರಯೋಜನವೂ ಇಲ್ಲ. ಗಡ್ಡಧಾರಿ ಅಥವಾ ನಾಮಧಾರಿ ವ್ಯಕ್ತಿಯನ್ನು ಚೂರಿ ಇರಿತಕ್ಕೆ ಒಳಪಡಿಸುವುದರಿಂದ ಗಾಯಗೊಳ್ಳುವುದು ಆ ವ್ಯಕ್ತಿಗಳಲ್ಲ, ಆಯಾ ಧರ್ಮಗಳು ಸಾರುವ ಮಾನವೀಯ ಮೌಲ್ಯಗಳು. ಚೂರಿಗೆ, ಬೆಂಕಿಗೆ ಅಥವಾ ಕಲ್ಲಿಗೆ ಸ್ವಯಂ ಬುದ್ಧಿಯಿಲ್ಲ. ಚೂರಿಯನ್ನು ತರಕಾರಿ ಕತ್ತರಿಸುವುದಕ್ಕೂ ಬಳಸಬಹುದು. ಓರ್ವನ ಪ್ರಾಣ ತೆಗೆಯುವುದಕ್ಕೂ ಉಪಯೋಗಿಸಬಹುದು. ಬಳಕೆದಾರನ ಉದ್ದೇಶವನ್ನು ಹೊಂದಿಕೊಂಡು ಅದು ಕೆಲಸ ಮಾಡುತ್ತದೆ. ಆದ್ದರಿಂದಲೇ, ಪೊಲೀಸರು ಚೂರಿಗಳ ಮೇಲೋ ಕಲ್ಲುಗಳ ಮೇಲೋ ಕೇಸು ದಾಖಲಿಸುವುದಿಲ್ಲ. ಯಾರು ಅದನ್ನು ಬಳಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಬಯಸಿದರೋ ಅವರ ಮೇಲೆಯೇ ಕೇಸು ದಾಖಲಾಗುತ್ತದೆ. ಧರ್ಮಗಳೂ ಹೀಗೆಯೇ. ಅವು ಯಾರಿಗೂ ಕಲ್ಲೆಸೆಯುವುದಿಲ್ಲ. ಚೂರಿ ಹಾಕುವುದಿಲ್ಲ. ಹಸುವಿನದ್ದೋ ಹಂದಿಯದ್ದೋ ತಲೆಯನ್ನು ಎಸೆಯುವುದಿಲ್ಲ. ಅವು ಸ್ವಯಂ ಪವಿತ್ರ. ಈ ಪವಿತ್ರವನ್ನು ಅಪವಿತ್ರಗೊಳಿಸುವುದು ಅದರ ಅನುಯಾಯಿಗಳೆಂದು ಹೇಳಿಕೊಳ್ಳುವ ದುಷ್ಕರ್ಮಿಗಳು. ದುರಂತ ಏನೆಂದರೆ, ಅನೇಕ ಬಾರಿ ಈ ಅನುಯಾಯಿಗಳನ್ನು ದುಷ್ಕರ್ಮಿಗಳು ಎಂದು ಗುರುತಿಸುವುದಕ್ಕೆ ಸಮಾಜಕ್ಕೆ ಸಾಧ್ಯವಾಗುವುದಿಲ್ಲ. ಅವರು ಹಬ್ಬಿಸುವ ಸುಳ್ಳು ಸುದ್ದಿಗಳನ್ನು ನಿಜವೆಂದೇ ನಂಬಿ ಅವರ ಬೆಂಬಲಕ್ಕೆ ಸಮಾಜ ನಿಲ್ಲುವುದಿದೆ. ಅವರು ಮಾಡುತ್ತಿರುವುದೇ ನಿಜವಾದ ಧರ್ಮ ಸೇವೆ ಎಂದು ಭಾವಿಸುವುದಿದೆ. ಇಂಥ ಮುಗ್ಧ ನಂಬಿಕೆಗಳೇ ಅನೇಕ ಬಾರಿ ಸಮಾಜದ ನೆಮ್ಮದಿಯನ್ನು ಹಾಳು ಮಾಡಿಬಿಡುತ್ತದೆ.
 ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್‍ಬುಕ್‍ಗಳು ಜನರ ದೈನಂದಿನ ಬದುಕಿನ ಅನಿವಾರ್ಯತೆಗಳಾಗಿ ಬದಲಾಗಿರುವ ಇಂದಿನ ದಿನಗಳಲ್ಲಿ ಒಂದು ಸ್ವಸ್ಥ ಸಮಾಜವನ್ನು ಅಸ್ವಸ್ಥಗೊಳಿಸುವುದಕ್ಕೆ ತುಂಬಾ ಕಷ್ಟವೇನೂ ಇಲ್ಲ. ವದಂತಿಗಳನ್ನು ಹೇಗೆ ಬೇಕಾದರೂ ಈ ಮಾಧ್ಯಮಗಳ ಮೂಲಕ ಬಿತ್ತರಿಸಬಹುದು. ವಾಟ್ಸಪ್ ಅಂತೂ ಪ್ರಚೋದನಕಾರಿ ಸಂದೇಶಗಳನ್ನು ರವಾನಿಸುವುದಕ್ಕೆ ಧಾರಾಳ ಬಳಕೆಯಾಗುತ್ತಿದೆ. ಹೆಣ್ಣು ಮಕ್ಕಳ ರಕ್ಷಣೆಯ ಹೆಸರಲ್ಲಿ, ಧರ್ಮರಕ್ಷಣೆಯ ನೆಪದಲ್ಲಿ ವಿವಿಧ ರೀತಿಯ ಗುಂಪುಗಳು ಈ ತಾಣಗಳಲ್ಲಿ ಹುಟ್ಟು ಪಡೆಯುತ್ತಿವೆ. ಕೋಮುವಾದಿ ಪೇಜ್‍ಗಳು ಕಾಣಿಸಿಕೊಳ್ಳುತ್ತಿವೆ. ನಿಜವಾಗಿ, ಇಂಥ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜವನ್ನು ಉದ್ವಿಘ್ನಗೊಳಿಸುವುದು ಸುಲಭ. ಸಾಮಾನ್ಯವಾಗಿ, ಸಮಾಜ ಎರಡು ವಿಷಯಗಳಲ್ಲಿ ತುಂಬಾ ಸೆನ್ಸಿಟಿವ್ ಆಗಿರುತ್ತದೆ. ಅವುಗಳ ಮೇಲೆ ದಾಳಿಯೋ ಘಾಸಿಯೋ ಆದಾಗ ಅದು ಪ್ರಚೋದನೆಗೊಳ್ಳುತ್ತದೆ. ಅವುಗಳಲ್ಲಿ ಒಂದು, ಧಾರ್ಮಿಕ ಕ್ಷೇತ್ರಗಳಾದರೆ ಇನ್ನೊಂದು ಹೆಣ್ಣು ಮಕ್ಕಳು. ಸದ್ಯ ದೇಶದಾದ್ಯಂತ ದುಷ್ಕರ್ಮಿಗಳು ಈ ಎರಡು ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಲವ್ ಜಿಹಾದ್ ಎಂಬ ಹೆಸರಲ್ಲಿ ಈಗಾಗಲೇ ಸಮಾಜದಲ್ಲಿ ಒಂದು ವ್ಯವಸ್ಥಿತ ಅಪಪ್ರಚಾರಕ್ಕೆ ಚಾಲನೆ ಕೊಡಲಾಗಿದೆ. ಕರಾವಳಿ ಪ್ರದೇಶದಲ್ಲಿ ಸದ್ಯ ಕಾಣಿಸಿಕೊಂಡಿರುವ ಕೋಮುಗಲಭೆಯ ವಾತಾವರಣಕ್ಕೂ ಎರಡ್ಮೂರು ತಿಂಗಳುಗಳಲ್ಲಿ ಇಲ್ಲಿ ಕಾಣಿಸಿಕೊಂಡಿರುವ ವಿಭಿನ್ನ ಧರ್ಮಗಳ ಯುವಕ-ಯುವತಿಯರ ಪ್ರೇಮ ಪ್ರಕರಣಕ್ಕೂ ಸಂಬಂಧ ಇದೆ. ಸಮಾಜ ಇಂಥ ಪ್ರಕರಣಗಳ ಸಂದರ್ಭದಲ್ಲಿ ಭಾವುಕವಾಗುತ್ತದೆ. ತನ್ನ ಮನೆಯ ಮಗಳು ಇನ್ನೊಂದು ಧರ್ಮದ ಯುವಕನನ್ನು ಪ್ರೀತಿಸಿ ವಿವಾಹವಾಗುವುದನ್ನು ಸೀದಾ ಸಾದಾ ಒಪ್ಪಿಕೊಳ್ಳುವ ಮನಸ್ಥಿತಿಯಂತೂ ಇವತ್ತಿನ ಸಮಾಜದಲ್ಲಿಲ್ಲ. ಈ ವಾತಾವರಣವು ಧುಷ್ಕರ್ಮಿಗಳ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತದೆ. ವಿವಿಧ ಬಗೆಯ ವದಂತಿಗಳನ್ನು ಹಬ್ಬಿಸುವುದಕ್ಕೆ ಇದು ದಾರಿ ತೆರೆದುಕೊಡುತ್ತದೆ. ಇಂಥ ಪ್ರಕರಣಗಳ ಹಿಂದೆ ಷಡ್ಯಂತ್ರ ಇದೆಯೆಂದೋ ಧರ್ಮದ ನಾಶಕ್ಕೆ ಹೆಣೆದ ತಂತ್ರವೆಂದೋ ಅಥವಾ ಇನ್ನೇನೋ ಆಗಿ ಆ ಪ್ರಕರಣವನ್ನು ಭಾವನಾತ್ಮಕ ಧ್ರುವೀಕರಣಕ್ಕೆ ಬಳಸಿಕೊಳ್ಳಲಾಗುತ್ತದೆ. ಉತ್ತರ ಪ್ರದೇಶದ ವಿೂರತ್‍ನಿಂದ ಹಿಡಿದು ದಕ್ಷಿಣ ಕನ್ನಡದ ವರೆಗೆ ಸಮಾಜವನ್ನು ಉದ್ವಿಘ್ನಗೊಳಿಸುವಲ್ಲಿ ಇಂಥ ಪ್ರಕರಣಗಳೇ ಮುಖ್ಯ ಪಾತ್ರ ವಹಿಸುತ್ತಿವೆ. ಅಷ್ಟಕ್ಕೂ, ಹೆಣ್ಣು-ಗಂಡಿನ ನಡುವೆ ಪ್ರೇಮಾಂಕುರವಾಗುವುದಕ್ಕೂ ಷಡ್ಯಂತ್ರಕ್ಕೂ ಏನು ಸಂಬಂಧವಿದೆ? ಶಾಲೆಯಿಂದ ಹಿಡಿದು ಮಾರುಕಟ್ಟೆ, ಕಚೇರಿ ಸಹಿತ ಎಲ್ಲೆಡೆಯೂ ಹೆಣ್ಣು-ಗಂಡು ಮುಕ್ತವಾಗಿ ಬೆರೆಯುವ ವಾತಾವರಣ ಈ ದೇಶದಲ್ಲಿರುವಾಗ ಪ್ರೇಮಾಂಕುರಕ್ಕೆ ಷಡ್ಯಂತ್ರವಾದರೂ ಯಾಕೆ ಬೇಕು? ಪ್ರೇಮ ಎಂಬುದು ಷಡ್ಯಂತ್ರದ ಮತ್ತು ಬಂದೂಕಿನ ಮೊನೆಯಲ್ಲಿ ಚಿಗುರುವಂಥ ಸಂಗತಿಯೇ? ಎರಡು ಹೃದಯಗಳ ವಿಶ್ವಾಸದ ಆಧಾರದಲ್ಲಿ ಚಿಗುರುವ ಸಂಬಂಧವನ್ನು ಧರ್ಮದ ಷಡ್ಯಂತ್ರವಾಗಿ ಯಾಕೆ ನೋಡಬೇಕು?
 ನೆಮ್ಮದಿ ಎಂಬುದು ಸರ್ವರ ಬಯಕೆ. ನಾಸ್ತಿಕನೂ ಆಸ್ತಿಕನೂ ನೆಮ್ಮದಿಯನ್ನು ಬಯಸುತ್ತಾನೆ. ಧರ್ಮಗಳಂತೂ ಸೌಖ್ಯ ಸಮಾಜದ ನಿರ್ಮಾಣದ ಉದ್ದೇಶದಿಂದಲೇ ಅಸ್ತಿತ್ವದಲ್ಲಿವೆ. ಈ ಹಿನ್ನೆಲೆಯಲ್ಲಿ ಸಮಾಜದ ಪ್ರತಿಯೋರ್ವ ವ್ಯಕ್ತಿ ಆತ್ಮಾವಲೋಕನ ನಡೆಸಿಕೊಳ್ಳಬೇಕು. ಧರ್ಮ ರಕ್ಷಣೆಯ ಹೆಸರಲ್ಲಿ ಎತ್ತಿಕೊಳ್ಳುವ ಪ್ರತಿ ಕಲ್ಲು, ಚೂರಿ, ಬೆಂಕಿಗಳು ಎತ್ತಿಕೊಂಡವರ ಧರ್ಮವನ್ನು ಅವಮಾನಿಸುತ್ತದೆಯೇ ಹೊರತು ಇನ್ನೊಂದು ಧರ್ಮವನ್ನೋ ಅದರ ಅನುಯಾಯಿಗಳನ್ನೋ ಅಲ್ಲ. ಚೂರಿ ಇರಿತದಿಂದ ಉದುರುವ ರಕ್ತ, ಬೆಂಕಿಯಿಂದ ಉರಿಯುವ ಕಟ್ಟಡ ಮತ್ತು ಕಲ್ಲಿನಿಂದ ಹಾನಿಗೀಡಾಗುವ ಗಾಜುಗಳೆಲ್ಲ ಪವಿತ್ರವಾದವುಗಳೇ. ಅವನ್ನು ತನ್ನ ಕಲ್ಲು, ಚೂರಿ, ಬೆಂಕಿ ನಾಶಪಡಿಸಿತೆಂದು ನಂಬಿದವರೇ ನಿಜವಾದ ಧರ್ಮದ್ರೋಹಿಗಳು.

Tuesday, 2 December 2014

ಸಂವೇದನಾರಹಿತ ಪತ್ರಿಕೋದ್ಯಮಕ್ಕೆ ಬಲಿಯಾದ ಲಲಿತ

    ಕ್ಲೆಪ್ಪೋಮೇನಿಯಾ ಎಂಬೊಂದು ರೋಗವಿದೆ. ಕದಿಯುವುದೇ ಈ ರೋಗದ ಲಕ್ಷಣ. ಈ ರೋಗಕ್ಕೆ ತುತ್ತಾದವರು ಸಾಮಾನ್ಯವಾಗಿ ಸಹಜವಾಗಿರುತ್ತಾರೆ. ಕ್ಲೆಪ್ಪೋಮೇನಿಯ ರೋಗಿ ಎಂದು ನೋಡಿದ ಕೂಡಲೇ ಹೇಳಿ ಬಿಡಬಹುದಾದ ಯಾವ ಲಕ್ಷಣಗಳೂ ಬಾಹ್ಯನೋಟಕ್ಕೆ ಗೋಚರಿಸುವುದಿಲ್ಲ. ಆದರೆ ರೋಗಿ ಒಳಗೊಳಗೇ ಒತ್ತಡ ಅನುಭವಿಸುತ್ತಿರುತ್ತಾನೆ/ಳೆ. ಕದಿಯುವಂತೆ ವ್ಯಕ್ತಿಯ ಮೇಲೆ ಆ ರೋಗ ಒತ್ತಾಯವನ್ನು ಹೇರುತ್ತಲೇ ಇರುತ್ತದೆ. ಅಂತಿಮವಾಗಿ ಕಳ್ಳತನ ಮಾಡುವ ಮೂಲಕ ಆ ಒತ್ತಡದಿಂದ ಆತ/ಕೆ ಹೊರಬರುತ್ತಾರೆ. ದುರಂತ ಏನೆಂದರೆ, ಕ್ಲೆಪ್ಪೋಮೇನಿಯ ರೋಗದ ಬಗ್ಗೆ ಸಮಾಜಕ್ಕೆ ಗೊತ್ತಿರುವುದು ತೀರಾ ಕಡಿಮೆ. ಕಳ್ಳತನವನ್ನು ರೋಗವಾಗಿ ನೋಡುವ ಹಂತಕ್ಕೆ ಸಮಾಜ ಇನ್ನೂ ಬೆಳೆದಿಲ್ಲ. ಆದ್ದರಿಂದಲೇ ಕಳ್ಳತನ ಪ್ರಕರಣಗಳ ಬಗ್ಗೆ ನಡೆಯುವ ಹೆಚ್ಚಿನೆಲ್ಲ ಚರ್ಚೆಗಳು ಕ್ಲೆಪ್ಪೋಮೇನಿಯದ ಉಲ್ಲೇಖವಿಲ್ಲದೇ ಅಥವಾ ಅಂಥದ್ದೊಂದು ಸಾಧ್ಯತೆಯನ್ನು ಚರ್ಚೆಗೊಡ್ಡದೆಯೇ ಕೊನೆಗೊಳ್ಳುತ್ತದೆ. ಟೀಕೆ, ನಿಂದನೆ, ಅಪಹಾಸ್ಯದ ಮಾತುಗಳು ಧಾರಾಳ ಕೇಳಿ ಬರುತ್ತವೆ. ಒಂದು ಕಡೆ ರೋಗದ ಒತ್ತಡ, ಇನ್ನೊಂದು ಕಡೆ ರೋಗವನ್ನು ಅರ್ಥೈಸಿಕೊಳ್ಳದ ಸಮಾಜ - ಇವುಗಳ ಮಧ್ಯೆ ರೋಗಿಗಳು ಸಹಜವಾಗಿ ಕುಗ್ಗಿ ಹೋಗುತ್ತಾರೆ. ಅವಮಾನದಿಂದ ಖಿನ್ನತೆಗೆ ಒಳಗಾಗುವುದೂ ಇದೆ. ಕಳೆದ ವಾರ ಸಾವಿಗೀಡಾದ ಎಚ್.ಎಸ್. ಲಲಿತಾರು ಇದಕ್ಕೆ ಅತ್ಯುತ್ತಮ ಉದಾಹರಣೆ.
 ಕಳೆದ ಮಾರ್ಚ್‍ನಲ್ಲಿ ಕನ್ನಡದ ಹೆಚ್ಚಿನೆಲ್ಲ ಟಿ.ವಿ. ಚಾನೆಲ್‍ಗಳು ‘ಕಳ್ಳಿ ಕಾರ್ಪೋರೇಟರ್' ಎಂಬ ಆನೆಗಾತ್ರದ ಶೀರ್ಷಿಕೆಯಲ್ಲಿ ಬ್ರೇಕಿಂಗ್ ನ್ಯೂಸ್ ಪ್ರಕಟಿಸಿದ್ದುವು. ಬೆಂಗಳೂರು ಮಹಾ ನಗರ ಪಾಲಿಕೆಯ ಗಿರಿನಗರ ವಾರ್ಡ್‍ನ ಬಿಜೆಪಿ ಕಾರ್ಪೋರೇಟರ್ ಲಲಿತಾ ಎಂಬವರು ಬಟ್ಟೆ ಅಂಗಡಿಯೊಂದರಲ್ಲಿ ಸೀರೆ ಕದ್ದು ಸಿಕ್ಕಿಬಿದ್ದ ಸುದ್ದಿ ಅದು. ಸಿ.ಸಿ. ಟಿ.ವಿ.ಯಲ್ಲಿ ಸೆರೆಯಾದ ದೃಶ್ಯಗಳನ್ನು ಪದೇಪದೇ ಪ್ರಸಾರ ಮಾಡುತ್ತಾ ಲಲಿತ ಅವರನ್ನು ಮತ್ತು ಅವರ ಕುಟುಂಬವನ್ನು ಟಿ.ವಿ. ಚಾನೆಲ್‍ಗಳು ಮಾನಸಿಕವಾಗಿ ಕೊಂದಿದ್ದುವು. ಪ್ರಕರಣವನ್ನು ವೈಭವೀಕರಿಸಿದಂತೆ ಅವರ ಕುಟುಂಬವು ಆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ವಿನಂತಿಸಿತ್ತು. ಲಲಿತಾ ಅವರು ಕ್ಲೆಪ್ಪೋಮೇನಿಯ ರೋಗಕ್ಕೆ ತುತ್ತಾಗಿರುವುದನ್ನು ದಾಖಲೆಗಳ ಸಮೇತ ಅವರ ಪತಿ ಮಾಧ್ಯಮಗಳ ಎದುರು ಬಿಡಿಸಿಟ್ಟಿದ್ದರು. ಆದರೆ ಆ ಹೊತ್ತಿಗಾಗಲೇ ಲಲಿತಾ ‘ಕಳ್ಳಿ'ಯ ಇಮೇಜನ್ನು ಗಳಿಸಿಕೊಂಡು ಬಿಟ್ಟಿದ್ದರು.
ಘಟನೆಗೆ ಎಷ್ಟು ದೊಡ್ಡ ಮಟ್ಟದ ಪ್ರಚಾರ ಸಿಕ್ಕಿತ್ತೆಂದರೆ, ಬಿಜೆಪಿ ಅವರನ್ನು ವಜಾಗೊಳಿಸಿತು. ಕ್ಲೆಪ್ಪೋಮೇನಿಯ ರೋಗದ ಬಗ್ಗೆ ಮತ್ತು ಲಲಿತಾ ಅವರು ಅದರಿಂದ ಬಳಲುತ್ತಿರುವ ಬಗ್ಗೆ ಮಾಧ್ಯಮಗಳ ಮುಂದೆ ವಿವರಿಸಿ ನೊಂದ ಕುಟುಂಬಕ್ಕೆ ಮಾನಸಿಕ ಧೈರ್ಯ ಕೊಡುವ ಬದಲು ಬಿಜೆಪಿ ಇಡೀ ಪ್ರಕರಣದಿಂದ ಪಲಾಯನ ಮಾಡಿತು. ನಿಜವಾಗಿ, ಲಲಿತ ಅವರನ್ನು ಕಳ್ಳತನದ ಆರೋಪದಿಂದ ಪಾರು ಮಾಡುವ ಸಾಮರ್ಥ್ಯವಿದ್ದುದು ಒಂದು ಬಿಜೆಪಿಗಾದರೆ ಇನ್ನೊಂದು ಮಾಧ್ಯಮಕ್ಕೆ. ಆದರೆ ಅವೆರಡೂ ತೀರಾ ಬೇಜವಾಬ್ದಾರಿಯಿಂದ ವರ್ತಿಸಿದ್ದುವು. ಕಳ್ಳಿ ಕಾರ್ಪೋರೇಟರ್ ಎಂದಿದ್ದ ಮಾಧ್ಯಮಗಳಿಗೆ ಕ್ಲೆಪ್ಪೋಮೇನಿಯ ಕಾರ್ಪೋರೇಟರ್ ಎಂದು ತಿದ್ದಿಕೊಳ್ಳುವ ಅವಕಾಶವೂ ಇತ್ತು. ಆದರೆ ಮಾಧ್ಯಮ ಕ್ಷೇತ್ರದ ಬೇಜವಾಬ್ದಾರಿ ವರ್ತನೆಯು ಲಲಿತ ಮತ್ತು ಅವರ ಕುಟುಂಬವನ್ನು ತೀವ್ರವಾಗಿ ಘಾಸಿಗೊಳಿಸಿತು. ಲಲಿತ ಖಿನ್ನತೆಗೆ ಒಳಗಾದರು. ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದು ಕೊನೆಗೆ ಮೃತಪಟ್ಟರು.  
   ಬಹುಶಃ, ಅವಸರದ ಪತ್ರಿಕೋದ್ಯಮಕ್ಕೆ ಜೀವತೆತ್ತವರ ಪಟ್ಟಿಯಲ್ಲಿ ಲಲಿತಾರ ಹೆಸರು ಎಷ್ಟನೆಯದೋ ಗೊತ್ತಿಲ್ಲ. ಆದರೆ ಬ್ರಿಟನ್ನಿನ ರಾಜಕುಮಾರಿ ಡಯಾನರಂತೆ ಲಲಿತ ಕೂಡ ಮಾಧ್ಯಮ ದಾಹಕ್ಕೆ ಬಲಿಯಾಗಿದ್ದಾರೆ. ಆದರೂ ಮಾಧ್ಯಮಗಳಲ್ಲಿ ಮುಖ್ಯವಾಗಿ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಈ ಬಗ್ಗೆ ಎಳ್ಳಷ್ಟೂ ಪಶ್ಚಾತ್ತಾಪಭಾವ  ಕಾಣಿಸಿಕೊಂಡಿಲ್ಲ. ಕನಿಷ್ಠ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಅವಕಾಶವನ್ನೂ ಅವು ಬಳಸಿಕೊಂಡಿಲ್ಲ. ನಿಜವಾಗಿ, ಕಾರ್ಪೋರೇಟರ್ ಓರ್ವರು ಸೀರೆ ಕದಿಯುತ್ತಾರೆಂಬುದೇ ಅಚ್ಚರಿಯ ಸಂಗತಿ. ಯಾಕೆಂದರೆ, ಕಾರ್ಪೋರೇಟರ್‍ಗೆ ಅವರದ್ದೇ ಆದ ಸಾಮಾಜಿಕ ಸ್ಥಾನಮಾನ, ಗೌರವಾದರಗಳಿವೆ. ಕದ್ದು ಸೀರೆ ಉಡಬೇಕಾದಷ್ಟು ಬಡತನವಿರುವ ಕಾರ್ಪೋರೇಟರ್‍ಗಳು ಬೆಂಗಳೂರಿನಲ್ಲಿದ್ದಾರೆಂಬುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಅಲ್ಲದೇ, ಲಲಿತ ಅವರ ಹಿನ್ನೆಲೆಯೂ ಬಡತನದ್ದಲ್ಲ...  ಸುದ್ದಿ ತಯಾರಿಸುವ ಸಂದರ್ಭದಲ್ಲಿ ಓರ್ವ ಪತ್ರಕರ್ತನ/ಳನ್ನು ವಿವೇಚನೆಗೆ ಒಡ್ಡಬೇಕಾದ ಅಂಶಗಳಿವು. 'ಕಳ್ಳಿ ಕಾರ್ಪೋರೇಟರ್' ಎಂಬ ಶೀರ್ಷಿಕೆಯನ್ನು ರಚಿಸುವುದಕ್ಕಿಂತ ಮೊದಲು ನಿಜವಾಗಿಯೂ ಅದು ಕಳ್ಳತನವೇ ಎಂಬೊಂದು ಅನುಮಾನ ಓರ್ವ ಪತ್ರಕರ್ತನಲ್ಲಿ ಮೂಡಿ ಬರಲೇಬೇಕಿತ್ತು. ಕಾರ್ಪೋರೇಟರ್ ಕದ್ದದ್ದೇಕೆ ಎಂಬ ಶಂಕೆಯ ಹುಳವೊಂದು ಮೆದುಳನ್ನು ಕೆರೆಯುವ ಸಂದರ್ಭ
ಸೃಷ್ಟಿಯಾಗಬೇಕಿತ್ತು. ಅಷ್ಟಕ್ಕೂ, ಬಟ್ಟೆಯ ಅಂಗಡಿಗಳಲ್ಲಿ ಸಿ.ಸಿ. ಕ್ಯಾಮೆರಾ ಇರುತ್ತದೆ, ಏನೇ ಎಡವಟ್ಟು ಮಾಡಿಕೊಂಡರೂ ಗೊತ್ತಾಗುತ್ತದೆ.. ಎಂಬ ಪ್ರಜ್ಞೆ ಲಲಿತ ಅವರನ್ನು ಬಿಡಿ ತೀರಾ ಸಾಮಾನ್ಯರಿಗೂ ಇವತ್ತು ಗೊತ್ತಿರುತ್ತದೆ. ಹೀಗಿರುತ್ತಾ ಕಾರ್ಪೋರೇಟರ್‍ರನ್ನು ಕಳ್ಳಿ ಎಂದು ಒಂದೇ ಏಟಿಗೆ ಕರೆದದ್ದನ್ನು ಏನೆಂದು ಪರಿಗಣಿಸಬೇಕು? ಪತ್ರಿಕೋದ್ಯಮದ ತುರ್ತುಗಳು ಏನೇ ಇರಲಿ, ಅದಕ್ಕಿಂತ ಓರ್ವ ವ್ಯಕ್ತಿಯ ಮಾನ ಮತ್ತು ಘನತೆ ಅಮೂಲ್ಯವಾದುದು. ತುರ್ತುಗಳ ನೆಪದಲ್ಲಿ ಓರ್ವ ವ್ಯಕ್ತಿಯ ಘನತೆಗೆ ಧಕ್ಕೆತರುವ ಸ್ವಾತಂತ್ರ್ಯ ಯಾವ ಪತ್ರಕರ್ತರಿಗೂ ಇಲ್ಲ. ಆದರೂ ಲಲಿತಾರ ಪ್ರಕರಣದಲ್ಲಿ ಮಾಧ್ಯಮಗಳು ಬೇಕಾಬಿಟ್ಟಿಯಾಗಿ ವರ್ತಿಸಿದುವು. ಓರ್ವ ಮಹಿಳೆಯಾಗಿ ಮತ್ತು ಜನಪ್ರತಿನಿಧಿಯಾಗಿ ಅವರಿಗಿರಬಹುದಾದ ಸ್ಥಾನಮಾನವನ್ನು ಪರಿಗಣಿಸದೆಯೇ ಮತ್ತು ಅವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳುವುದಕ್ಕೆ ಇರುವ ಸ್ವಾತಂತ್ರ್ಯವನ್ನು ಮಾನ್ಯ ಮಾಡದೆಯೇ ತಾವೇ ತೀರ್ಪು ಕೊಟ್ಟವು.
 ಅಂದಹಾಗೆ, ಮಾಧ್ಯಮಗಳು ಕಟಕಟೆಯಲ್ಲಿ ನಿಲ್ಲುವುದು ಇದು ಮೊದಲ ಸಲವೇನೂ ಅಲ್ಲ. ಅವುಗಳ ಈಗಿನ ವರ್ತನೆಯನ್ನು ನೋಡಿದರೆ ಇದು ಕೊನೆಯದಾಗುವ ಸಾಧ್ಯತೆಯೂ ಇಲ್ಲ. ಪತ್ರಿಕೆಗಳು ಮತ್ತು ಚಾನೆಲ್‍ಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ಪತ್ರಿಕಾ ರಂಗಕ್ಕೆ ಒಳತಾಗಬಹುದು ಎಂದೇ ಭಾವಿಸಲಾಗಿತ್ತು. ಸಣ್ಣ ಪುಟ್ಟ ಸುದ್ದಿಗಳಿಗೂ ಸ್ಪೇಸ್ ಸಿಗಬಹುದು, ಸುದ್ದಿಗೆ ನ್ಯಾಯ ಒದಗಬಹುದು, ಪಾರದರ್ಶಕತೆ ಉಂಟಾಗಬಹುದು.. ಎಂಬೆಲ್ಲ ನಿರೀಕ್ಷೆಗಳನ್ನು ಹುಟ್ಟಿಸಲಾಗಿತ್ತು. ಸಾಮಾನ್ಯವಾಗಿ, ಗ್ರಾವಿೂಣ ಪ್ರದೇಶಗಳು ಯಾವಾಗಲೂ ಮಾಧ್ಯಮ ಕಣ್ಣಿನಿಂದ ಹೊರಗಿರುತ್ತವೆ. ಅಲ್ಲಿನ ಸಮಸ್ಯೆಗಳಿಗೆ ಕ್ಯಾಮರಾ ಮತ್ತು ಪೆನ್ನು ಹಿಡಿಯುವ ಕೈಗಳು ಸಿಗುವುದು ಕಡಿಮೆ. ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳ ಹೆಚ್ಚಳದಿಂದಾಗಿ ಈ ಕೊರತೆಗಳನ್ನು ತುಂಬಬಹುದು ಎಂದೂ ಹೇಳಲಾಗುತ್ತಿತ್ತು. ಇವತ್ತು ಈ ನಿರೀಕ್ಷೆಗಳಿಗೆ ಸ್ವಲ್ಪ ಮಟ್ಟಿನ ನ್ಯಾಯ ಸಿಕ್ಕಿವೆಯಾದರೂ ಅದಕ್ಕಿಂತಲೂ ಭಯಾನಕ ಅಪಾಯವೊಂದು ಈಗ ಸೃಷ್ಟಿಯಾಗಿಬಿಟ್ಟಿವೆ. ಅದುವೇ ಪೈಪೋಟಿ. ತಾವೇ ಮೊದಲು ಸುದ್ದಿಯನ್ನು ಬಿತ್ತರಿಸಬೇಕು ಎಂಬ ಅವಸರವು ಸರಿ-ತಪ್ಪುಗಳನ್ನು ವಿವೇಚಿಸದ ಹಂತಕ್ಕೆ ಪತ್ರಕರ್ತರನ್ನು ತಲುಪಿಸಿಬಿಟ್ಟಿವೆ. ಯಾವ ಎಚ್ಚರಿಕೆಯನ್ನೂ ಇರಿಸದೇ ಬ್ರೇಕಿಂಗ್ ನ್ಯೂಸ್, ಎಕ್ಸ್ ಕ್ಲೂಸಿವ್ ನ್ಯೂಸ್‍ಗಳನ್ನು ತಯಾರಿಸುವಷ್ಟು ಅದು ಪತ್ರಕರ್ತರನ್ನು ಸಂವೇದನಾರಹಿತಗೊಳಿಸಿವೆ. ಘನತೆ, ಗೌರವ, ಸ್ಥಾನ-ಮಾನ, ಸತ್ಯ, ಗೌಪ್ಯತೆ.. ಮುಂತಾದುವುಗಳೆಲ್ಲ ಪತ್ರಿಕೋದ್ಯಮದ ತುರ್ತುಗಳು ಮತ್ತು ಪೈಪೋಟಿಯ ರಭಸಕ್ಕೆ ಸಿಲುಕಿ ನಿಧನ ಹೊಂದುತ್ತಿವೆ. ಲಲಿತ ಅದರ ಇತ್ತೀಚಿನ ಬಲಿ. ಆದ್ದರಿಂದ ಈ ಬಲಿಗಳ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳ ಉಂಟಾಗದಿರಲಿಕ್ಕಾಗಿ ಮಾಧ್ಯಮ ಕ್ಷೇತ್ರವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಮಾಧ್ಯಮ ಜಗತ್ತು ಯಾಕೆ ಸಂವೇದನಾಶೀಲವಾಗಬೇಕು ಎಂಬ ಪ್ರಶ್ನೆ ಎದ್ದಾಗಲೆಲ್ಲ ಲಲಿತ ನೆನಪಾಗಲಿ. ಅವರ ಸಾವು ಮಾಧ್ಯಮ ಕ್ಷೇತ್ರದ ಒಣ ಮನಸ್ಸುಗಳಿಗೆ ವಿವೇಚನೆಯನ್ನು ತುಂಬಲಿ.