Tuesday 23 December 2014

ಪ್ರಶ್ನೆಗೊಳಪಡಿಸುತ್ತಾ ಗುರಿಮುಟ್ಟಿದ ಪ್ರವಾದಿ(ಸ)

    ಓರ್ವ ಸಮಾಜ ಸುಧಾರಕನ ಮುಂದೆ ಸಾಮಾನ್ಯವಾಗಿ ಎರಡು ಆಯ್ಕೆಗಳಿರುತ್ತವೆ. ಒಂದು ಉಗ್ರವಾದವಾದರೆ ಇನ್ನೊಂದು ಸೌಮ್ಯವಾದ. ತಮ್ಮ ಗುರಿಯನ್ನು ಮುಟ್ಟುವುದಕ್ಕಾಗಿ ಈ ಎರಡು ವಿಧಾನಗಳನ್ನು ಆಯ್ದುಕೊಂಡ ಸುಧಾರಕರ ದೊಡ್ಡದೊಂದು ಪಟ್ಟಿ ಈ ಜಗತ್ತಿನಲ್ಲಿದೆ. ಓರ್ವ ಸಮಾಜ ಸುಧಾರಕನೆಂಬ ನೆಲೆಯಲ್ಲಿ ಪ್ರವಾದಿ ಮುಹಮ್ಮದ್‍ರ(ಸ) ಮುಂದೆಯೂ ಈ ಎರಡು ಆಯ್ಕೆಗಳಿದ್ದುವು. ಅವರ ನಿಲುವಿಗೆ ಸಮಾಜದಿಂದ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಪರಿಗಣಿಸಿದರೆ, ಅವರು ಉಗ್ರವಾದವನ್ನು ನೆಚ್ಚಿಕೊಳ್ಳಬೇಕಿತ್ತು. ತಾಯಿಫ್‍ನಲ್ಲಿ ಮಾಡಲಾದ ಹಲ್ಲೆ, ಅವರ ಮೇಲೆ ದಿಗ್ಬಂಧನ ವಿಧಿಸಿ 3 ತಿಂಗಳುಗಳ ಕಾಲ ಹಸಿವೆಯಿಂದಿರಿಸಿದ್ದು, ಸಾರ್ವಜನಿಕವಾಗಿ ವಿವಿಧ ರೀತಿಯಲ್ಲಿ ಅವಮಾನ, ಹಲ್ಲೆ, ನಿಂದನೆಗೆ ಗುರಿಪಡಿಸಿದ್ದು, ತನ್ನ ಬೆಂಬಲಿಗರನ್ನು ಕಟು ಕ್ರೌರ್ಯಕ್ಕೆ ಒಳಪಡಿಸುತ್ತಿದ್ದುದು, ಹುಟ್ಟಿದೂರು ಮಕ್ಕಾದಿಂದಲೇ ವಲಸೆ ಹೋಗುವಂತೆ ನಿರ್ಬಂಧಿಸಿದ್ದು.. ಹೀಗೆ ಓರ್ವ ಸಮಾಜ ಸುಧಾರಕನಾಗಿ ಅವರು ಮಕ್ಕಾದಲ್ಲಿ 13 ವರ್ಷಗಳ ಕಾಲ ಅನುಭವಿಸಿದ ಚಿತ್ರಹಿಂಸೆಯು ‘ಉಗ್ರವಾದವೇ ಪರಿಹಾರ’ ಎಂದು ತೀರ್ಮಾನಿಸುವುದಕ್ಕೆ ಎಲ್ಲ ರೀತಿಯಲ್ಲೂ ತಕ್ಕುದಾಗಿತ್ತು. ಆದರೆ ಮುಹಮ್ಮದ್(ಸ) ಉಗ್ರವಾದವನ್ನು ತನ್ನ ಉದ್ದೇಶ ಸಾಧನೆಗಾಗಿ ಆಯ್ಕೆ ಮಾಡಿಕೊಳ್ಳಲೇ ಇಲ್ಲ. ವ್ಯಭಿಚಾರಕ್ಕೆ ಅನುಮತಿಯನ್ನು ಕೇಳಿದ ಬಂದ ಓರ್ವ ಗ್ರಾವಿೂಣ ವ್ಯಕ್ತಿಯನ್ನು ಅವರು ತಿದ್ದಿದ್ದು - ‘ಆ ವ್ಯಭಿಚಾರ ನಿನ್ನ ಮಗಳೊಂದಿಗಾದರೆ ಹೇಗೆ..’ ಎಂಬ ತೀಕ್ಷ್ಣ ಪ್ರಶ್ನೆಯೊಂದಿಗೆ. ಆ ಪ್ರಶ್ನೆ ಆ ವ್ಯಕ್ತಿಯ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತೆಂದರೆ, ಆತ ತನ್ನ ಆಲೋಚನಾ ವಿಧಾನವನ್ನೇ ಬದಲಿಸಿದ. ಮದ್ಯಪಾನವನ್ನು ಬದುಕಿನ ಅವಿಭಾಜ್ಯ ಅಂಗವೆಂದು ನಂಬಿಕೊಂಡು ಬಂದಿದ್ದ ಸಮಾಜವನ್ನು ಅವರು ಹಲಾಲ್-ಹರಾಮ್ ಎಂದು ಕಡ್ಡಿ ಮುರಿದಂತೆ ವಿಭಜಿಸದೇ ಅದನ್ನು ಸಹನೆಯಿಂದ ಅಧ್ಯಯನಕ್ಕೆ ಒಳಪಡಿಸಿದರು. ‘ಕುಡಿತದ ಅಮಲಿನಲ್ಲಿರುವಾಗ ನಮಾಝ್ ಮಾಡಬಾರದು' ಎಂಬ ಸೌಮ್ಯ ಎಚ್ಚರಿಕೆಯನ್ನು ನೀಡಿ ಅದರ ಒಳಿತು-ಕೆಡುಕುಗಳು ಸಮಾಜದಲ್ಲಿ ಚರ್ಚಿತವಾಗುವಂತೆ ನೋಡಿಕೊಂಡರು. ಅವರು ವಿಗ್ರಹಾರಾಧನೆಯ ಪ್ರಬಲ ವಿರೋಧಿಯಾಗಿದ್ದರೂ ಕಅಬಾಲಯದಲ್ಲಿದ್ದ 300ಕ್ಕಿಂತಲೂ ಅಧಿಕ ವಿಗ್ರಹಗಳಲ್ಲಿ ಒಂದನ್ನೂ ತೆಗಳಲಿಲ್ಲ. ಅದಕ್ಕೆ ಹಾನಿಯೆಸಗುವುದಾಗಲಿ, ಸ್ಥಳಾಂತರ ಮಾಡುವುದಾಗಲಿ ಮಾಡಲಿಲ್ಲ. ಅದರ ಬದಲು ಅವರು ವಿಗ್ರಹಾರಾಧನೆಯ ಸುತ್ತ ಸಮಾಜದಲ್ಲಿ ಚರ್ಚೆಯೊಂದನ್ನು ಹುಟ್ಟುಹಾಕಿದರು. ಮದೀನಾದಿಂದ ಮಕ್ಕಾಕ್ಕೆ ತೀರ್ಥಯಾತ್ರೆಯ ಉದ್ದೇಶದೊಂದಿಗೆ ಬಂದ ಅವರು ಮತ್ತು ಅನುಯಾಯಿಗಳನ್ನು ಅವರ ವಿರೋಧಿಗಳು ಮಾರ್ಗ ಮಧ್ಯದಲ್ಲೇ ತಡೆದಾಗ ಅವರ ಮುಂದೆ ಎರಡು ಆಯ್ಕೆಗಳಿದ್ದುವು. ಒಂದೋ ಉಗ್ರವಾದಿಯಾಗುವುದು ಅಥವಾ ಆ ತಡೆಯನ್ನು ವೈಚಾರಿಕವಾಗಿ ಎದುರಿಸುವುದು. ಅವರು ಎರಡನೆಯದನ್ನು ಆಯ್ದುಕೊಂಡರು. ಬಾಹ್ಯನೋಟಕ್ಕೆ ಹಿನ್ನಡೆಯಂತೆ ಕಾಣುವ ಒಪ್ಪಂದಕ್ಕೂ ಮುಂದಾದರು. ಒಪ್ಪಂದ ಪತ್ರದಲ್ಲಿ ಪ್ರವಾದಿ ಮುಹಮ್ಮದ್ ಎಂದು ನಮೂದಿಸುವುದಕ್ಕೆ ವಿರೋಧಿಗಳು ಆಕ್ಷೇಪ ವ್ಯಕ್ತಪಡಿಸಿದಾಗ ‘ಅಬ್ದುಲ್ಲಾರ ಮಗ ಮುಹಮ್ಮದ್' ಎಂದು ಬರೆಯಿಸಿ ಉಗ್ರ ನಿಲುವಿನಿಂದ ದೂರ ನಿಂತರು. ವಿರೋಧಿಗಳು ಯುದ್ಧವೊಂದನ್ನು ಅನಿವಾರ್ಯಗೊಳಿಸಿದಾಗಲೂ ಸೆರೆಸಿಕ್ಕ ಕೈದಿಗಳನ್ನು ತನ್ನ ಸಮಾಜದ ಅಕ್ಷರ ಗುರುಗಳಾಗಿ ಗೌರವಿಸಿದರು. ಬಹುಶಃ, ಪ್ರವಾದಿ ಮುಹಮ್ಮದ್‍ರ ಬದುಕಿನ ಉದ್ದಕ್ಕೂ ಓರ್ವ ಮಾದರಿ ಸಮಾಜ ಸುಧಾರಕ ಎದ್ದು ಕಾಣುತ್ತಾರೆ. ಸಮಾಜಕ್ಕೆ ಅವರು ವೈಚಾರಿಕತೆಯ ರುಚಿಯನ್ನು ಹತ್ತಿಸಿದರು. ಸ್ವಯಂ ಆಲೋಚಿಸುವಂತೆ ಪ್ರಚೋದನೆ ಕೊಟ್ಟರು. ಪ್ರತಿಯೊಂದನ್ನೂ ವಿಮರ್ಶಿಸುತ್ತಾ ನಡೆದರು. ಮಾತ್ರವಲ್ಲ, ಏನನ್ನು ಬೋಧಿಸುತ್ತಿದ್ದರೋ ಅದಕ್ಕೆ ಅನ್ವರ್ಥವಾಗಿ ಬದುಕಿದರು.
   ಪುಟ್ಟ ಮಕ್ಕಳ ಹತ್ಯಾಕಾಂಡ ನಡೆಸಿ ಪ್ರತೀಕಾರ ತೀರಿಸಿದೆವೆಂದು ಹೇಳಿಕೊಳ್ಳುವ ಕ್ರೂರಿಗಳ ಜಗತ್ತಿನಲ್ಲಿ ಮಗು ಹೃದಯದ ಪ್ರವಾದಿ(ಸ) ಇವತ್ತು ಒಂಟಿಯಾಗುತ್ತಿದ್ದಾರೆ. ಮಕ್ಕಳನ್ನು ದೇವಚರರು ಎಂದು ಕರೆದ ಮತ್ತು ಯುದ್ಧದ ಸಂದರ್ಭದಲ್ಲಿ ಕೂಡ ಮಕ್ಕಳ ಹತ್ಯೆಯನ್ನು ನಿಷೇಧಿಸಿದ ಅವರ ಧೋರಣೆಯನ್ನು ಅವಮಾನಿಸುವಂಥ ಘಟನೆಗಳು ನಮ್ಮ ಸುತ್ತ-ಮುತ್ತ ನಡೆಯುತ್ತಿವೆ. ನಿಜವಾಗಿ, ಸಮಾಜದ ಪಾಲಿಗೆ ಓರ್ವ ಸುಧಾರಕ ಅತಿ ಮುಖ್ಯ ಅನ್ನಿಸುವುದು ಆ ಸಮಾಜದ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ. ಮಕ್ಕಳು, ಮಹಿಳೆಯರು ಅಸ್ತಿತ್ವದ ಭಯವನ್ನು ಎದುರಿಸುವಾಗ. ಆದ್ದರಿಂದ ಪ್ರವಾದಿ ಮುಹಮ್ಮದ್(ಸ) ಇವತ್ತಿನ ಸಮಾಜದ ಅಗತ್ಯವಾಗಿದ್ದಾರೆ. ಅವರು ಏನಾಗಿದ್ದರೋ ಮತ್ತು ಏನನ್ನು ಬೋಧಿಸಿದ್ದರೋ ಅದನ್ನು ಅಷ್ಟೇ ನಿರ್ಮಲವಾಗಿ ಸಮಾಜದ ಮುಂದಿಡಬೇಕಾದ ಅಗತ್ಯವಿದೆ. ಮಕ್ಕಳನ್ನು ಕೊಲೆ ಮಾಡುವ, ಅಪಹರಿಸುವ, ಅತ್ಯಾಚಾರ ನಡೆಸುವವರ ನಿಜಮುಖವನ್ನು ಸಮಾಜ ಅರಿತುಕೊಳ್ಳುವುದಕ್ಕಾದರೂ ಈ ಕೆಲಸ ಆಗಲೇಬೇಕಿದೆ.

No comments:

Post a Comment