Tuesday 30 December 2014

ಸ್ಫೋಟಗೊಳ್ಳುವ ಬಾಂಬುಗಳು ಮತ್ತು ಕಾಡುವ ಅನುಮಾನಗಳು..

    ಸ್ಫೋಟಗಳು, ಸ್ಫೋಟಕಗಳು ಮತ್ತು ತನಿಖೆಗಳು ಈ ದೇಶಕ್ಕೆ ಹೊಸತಲ್ಲ. ಹಾಗೆಯೇ ಅವು ಉಳಿಸಿ ಹೋಗುವ ಅನುಮಾನಗಳೂ ಕಡಿಮೆಯದಲ್ಲ. 2008 ನವೆಂಬರ್ 26ರಂದು ನಡೆದ ಮುಂಬೈ ದಾಳಿ ಮತ್ತು 1995 ಡಿಸೆಂಬರ್ 17ರಂದು ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ವಿಮಾನದ ಮೂಲಕ ಉದುರಿಸಲಾದ ಶಸ್ತ್ರಾಸ್ತ್ರಗಳ ಕುರಿತಂತೆ ಕಳೆದವಾರ ಕೆಲವು ಮಾಹಿತಿಗಳು ಬಿಡುಗಡೆಯಾದುವು. ಈ ಮಾಹಿತಿಗಳು ಎಷ್ಟು ಆಘಾತಕಾರಿಯಾಗಿವೆಯೆಂದರೆ, ಈ ದೇಶದಲ್ಲಿ ಈವರೆಗೆ ನಡೆದಿರುವ ಎಲ್ಲ ವಿಧ್ವಂಸಕ ಪ್ರಕರಣಗಳ ಬಗ್ಗೆಯೂ ಸಂದೇಹ ತಾಳುವಷ್ಟು. ಮುಂಬೈ ದಾಳಿಯ ಕುರಿತಂತೆ ಭಾರತ, ಬ್ರಿಟನ್ ಮತ್ತು ಅಮೇರಿಕದ ಗುಪ್ತಚರ ಸಂಸ್ಥೆಗಳ ಬಳಿ ಮೊದಲೇ ಸಾಕಷ್ಟು ಮಾಹಿತಿಗಳಿದ್ದುವು ಎಂದು ಕಳೆದವಾರ ಅಮೇರಿಕದ ನ್ಯೂಯಾರ್ಕ್ ಟೈಮ್ಸ್ ಬಹಿರಂಗಪಡಿಸಿದೆ. 2008ರ ಜನವರಿಯಲ್ಲಿಯೇ ಅಮೇರಿಕವು ಸಂಭಾವ್ಯ ಈ ದಾಳಿಯ ಬಗ್ಗೆ ಭಾರತವನ್ನು ಎಚ್ಚರಿಸಿದ್ದು, ಹೆಡ್ಲಿಯ ಪತ್ನಿಯ ಮೂಲಕ ಮಾಹಿತಿ ಪಡಕೊಂಡದ್ದು, ದಾಳಿಯ ರೂವಾರಿಗಳು ಕೆಲವು ವಸ್ತುಗಳನ್ನು ಅಮೇರಿಕದಿಂದ ಖರೀದಿಸಿದ್ದು.. ಸೇರಿದಂತೆ ಕೆಲವಾರು ಮಾಹಿತಿಗಳು ಮೊದಲೇ ಸೋರಿಕೆಯಾಗಿದ್ದುವು. ಆದರೂ ಮುಂಬೈ ದಾಳಿಯನ್ನು ತಡೆಗಟ್ಟಲಿಕ್ಕಾಗಲಿ, ಕರ್ಕರೆ, ಸಾಲಸ್ಕರ್‍ರ ಜೀವವನ್ನು ಉಳಿಸಿಕೊಳ್ಳುವುದಕ್ಕಾಗಲಿ ಭಾರತಕ್ಕೆ ಸಾಧ್ಯವಾಗಲಿಲ್ಲ. ಬಹುಶಃ ಅನುಮಾನಗಳು ಗಟ್ಟಿಗೊಳ್ಳುವುದೂ ಇಲ್ಲೇ. ಆ ದಾಳಿಯ ಹಿಂದೆ ವ್ಯವಸ್ಥಿತ ಷಡ್ಯಂತ್ರವೊಂದು ಕೆಲಸ ಮಾಡಿದೆಯೇ? ಆ ದಾಳಿಯ ಅಗತ್ಯ ಯಾರಿಗಿತ್ತು? ಅವರ ಉದ್ದೇಶ ಏನಾಗಿತ್ತು? ‘ಹೂ ಕಿಲ್ಲ್ ಡ್ ಕರ್ಕರೆ’ ಎಂಬ ತನ್ನ ಕೃತಿಯಲ್ಲಿ ಮಹಾರಾಷ್ಟ್ರದ ಮಾಜಿ ಪೊಲೀಸ್ ಮುಖ್ಯಸ್ಥ ಎಸ್.ಎಂ. ಮುಶ್ರಿಫ್ ವ್ಯಕ್ತಪಡಿಸಿದ ಅನುಮಾನಗಳೇ ನಿಜವೇ? ಕರ್ಕರೆ, ಸಾಲಸ್ಕರ್‍ಗಳನ್ನು ಹತ್ಯೆ ಮಾಡುವುದೇ ಆ ದಾಳಿಯ ಮುಖ್ಯ ಗುರಿಯಾಗಿತ್ತೇ.. ಬಹುಶಃ ಸಂದೇಹಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದರಲ್ಲೂ ಪುರುಲಿಯಾ ಪ್ರಕರಣದ ಮುಖ್ಯ ಆರೋಪಿಗಳು ಕಳೆದ ವಾರ ಸಾಕ್ಷ್ಯ ಚಿತ್ರವೊಂದಕ್ಕೆ (ಡಾಕ್ಯುಮೆಂಟರಿ) ನೀಡಿದ ಹೇಳಿಕೆಗಳನ್ನು ಪರಿಗಣಿಸಿದರೆ, ಈ ಸಂದೇಹಗಳು ಇನ್ನಷ್ಟು ಬಲ ಪಡೆಯುತ್ತವೆ. ಪಶ್ಚಿಮ ಬಂಗಾಲದ ಪುರುಲಿಯಾ ಜಿಲ್ಲೆಯ ಜಲ್ದಾ, ಘಟಂಗಾ, ಬೆಲವಲು, ಮರವಲು ಗ್ರಾಮಗಳಲ್ಲಿ 1995 ಡಿ. 17ರ ರಾತ್ರಿ 300ಕ್ಕಿಂತಲೂ ಅಧಿಕ ಏ.ಕೆ. 47 ರೈಫಲ್‍ಗಳು ಮತ್ತು ಮಿಲಿಯನ್ ಸುತ್ತಿಗಾಗುವಷ್ಟು ಮದ್ದು ಗುಂಡುಗಳನ್ನು ವಿಮಾನದ ಮೂಲಕ ಉದುರಿಸಲಾಗಿತ್ತು. ಹಾಗೆ ಶಸ್ತ್ರಾಸ್ತ್ರಗಳನ್ನು ಉದುರಿಸಿದ ಅಂಟನೋವ್ ಎಂಬ ಹೆಸರಿನ ಆ ವಿಮಾನ ಹೊರಟೂ ಹೋಗಿತ್ತು. ಕೆಲವು ದಿನಗಳ ಬಳಿಕ ಅದೇ ವಿಮಾನ ಮರಳಿ ಬಂದಾಗ ಬಲವಂತದಿಂದ ಭೂಮಿಗೆ ಇಳಿಸಲಾಗಿತ್ತು. ಆಗ ಶಸ್ತ್ರಾಸ್ತ್ರ ಉದುರಿಸಿದ ಆರೋಪದಲ್ಲಿ ಇಂಗ್ಲೆಂಡಿನ ಶಸ್ತ್ರಾಸ್ತ್ರ ವ್ಯಾಪಾರಿ ಪೀಟರ್ ಬ್ಲೀಚ್ ಮತ್ತು ಲಾತ್ವಿಯಾ ದೇಶದ 5 ಮಂದಿಯನ್ನು ಬಂಧಿಸಲಾಗಿತ್ತು. ಆದರೆ ಮುಖ್ಯ ಆರೋಪಿ ಡೆನ್ಮಾರ್ಕ್‍ನ ಕಿಮ್ ಡೆವಿ  ವಿಮಾನ ನಿಲ್ದಾಣದಿಂದ ಕಣ್ಮರೆಯಾಗಿದ್ದ. ಪಶ್ಚಿಮ ಬಂಗಾಳದಲ್ಲಿ ಸಕ್ರಿಯರಾಗಿರುವ ಆನಂದ ಮಾರ್ಗಿಗಳ ಉಪಯೋಗಕ್ಕಾಗಿ ಆ ಶಸ್ತ್ರಾಸ್ತ್ರಗಳನ್ನು ಉದುರಿಸಲಾಗಿತ್ತು ಎಂದು 1997ರಲ್ಲಿ ಕೋರ್ಟು ಅಭಿಪ್ರಾಯಪಟ್ಟಿತು. ಮಾತ್ರವಲ್ಲ, ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಲಾಯಿತು. ಆದರೆ ಲಾತ್ವಿಯದ 5 ಮಂದಿಗೆ ರಷ್ಯವು ರಶ್ಯನ್ ಪೌರತ್ವವನ್ನು ನೀಡಿತಲ್ಲದೇ ಅವರ ಬಿಡುಗಡೆಗೆ ಭಾರತದ ಮೇಲೆ ಒತ್ತಡ ಹೇರಿತು. ಹೀಗೆ 2000ದಲ್ಲಿ ಅವರಿಗೆ ಕ್ಷಮಾದಾನ ನೀಡಲಾಯಿತು. 2004ರಲ್ಲಿ ಪೀಟರ್ ಬ್ಲೀಚ್‍ಗೆ ರಾಷ್ಟ್ರಪತಿಯವರು ಕ್ಷಮಾದಾನ ನೀಡಿದರು. ಇದರ ಹಿಂದೆ ಬ್ರಿಟನ್‍ನ ಒತ್ತಡ ಕೆಲಸ ಮಾಡಿತ್ತು. ಈ ನಡುವೆ ಕಿಮ್ ಡೆವಿಯ ಪತ್ತೆಗೆ ಇಂಟರ್‍ಪೋಲ್ ನೋಟೀಸನ್ನು ಜಾರಿಗೊಳಿಸಿದ್ದೂ ಮತ್ತು 2010 ಎಪ್ರಿಲ್ 9ರಂದು ಡೆನ್ಮಾರ್ಕ್ ಸರಕಾರ ಆತನನ್ನು ಪತ್ತೆ ಹಚ್ಚಿದ್ದೂ ನಡೆಯಿತಾದರೂ ಆತನನ್ನು ಭಾರತಕ್ಕೆ ಗಡೀಪಾರುಗೊಳಿಸಲು ಅದು ಒಪ್ಪಲಿಲ್ಲ. ಇದೀಗ ಆತನೇ ಇಡೀ ಪ್ರಕರಣವನ್ನು ಬಿಚ್ಚಿಟ್ಟಿದ್ದಾನೆ. ಪಶ್ಚಿಮ ಬಂಗಾಲದಲ್ಲಿ ದೀರ್ಘಕಾಲದಿಂದ ಆಡಳಿತ ನಡೆಸುತ್ತಿದ್ದ ಕಮ್ಯುನಿಸ್ಟ್ ಸರಕಾರವನ್ನು ಉರುಳಿಸುವುದಕ್ಕಾಗಿ ಭಾರತದ ಸರಕಾರ ಮತ್ತು ಭಾರತದ ಗುಪ್ತಚರ ಸಂಸ್ಥೆ (ರಾ) ಜಂಟಿಯಾಗಿ ಆ ಸಂಚನ್ನು ಹೆಣೆದಿತ್ತು ಎಂದು ಮಾತ್ರವಲ್ಲ, ತನ್ನನ್ನು ಸುರಕ್ಷಿತವಾಗಿ ಡೆನ್ಮಾರ್ಕ್‍ಗೆ ತಲುಪಿಸುವ ಭರವಸೆಯನ್ನೂ ನೀಡಲಾಗಿತ್ತು ಎಂದಾತ ಹೇಳಿದ್ದಾನೆ. ಪಶ್ಚಿಮ ಬಂಗಾಲದೊಂದಿಗೆ ಕಿಮ್ ಡೆವಿಗೆ ಮೊದಲೇ ನಂಟಿತ್ತು. ಅಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಆತ ಭಾಗಿಯಾಗಿದ್ದ. ಆನಂದ ಮಾರ್ಗ ಸಂಘಟನೆಯ ಸದಸ್ಯನೂ ಆಗಿದ್ದ. ಆನಂದ ಮಾರ್ಗಿಗಳನ್ನು ಬಳಸಿ ಬಂಗಾಳದಲ್ಲಿ ಆಂತರಿಕ ಸಂಘರ್ಷಗಳನ್ನು ಹುಟ್ಟು ಹಾಕುವುದು ಮತ್ತು ಅದರ ನೆಪದಲ್ಲಿ ರಾಷ್ಟ್ರಪತಿ ಆಡಳಿತವನ್ನು ರಾಜ್ಯದ ಮೇಲೆ ಹೇರುವುದು ತನ್ನನ್ನು ಬಳಸಿಕೊಂಡವರ ಉದ್ದೇಶವಾಗಿತ್ತು ಎಂದೂ ಆತ ಹೇಳಿಕೊಂಡಿದ್ದಾನೆ. ವಿಶೇಷ ಏನೆಂದರೆ, ಈ ಶಸ್ತ್ರಾಸ್ತ್ರವಿದ್ದ ವಿಮಾನ ಭಾರತಕ್ಕೆ ಬಂದಾಗ ರಾಡರ್ ಸ್ಥಗಿತಗೊಂಡಿತ್ತು. ಒಂದು ರೀತಿಯಲ್ಲಿ, ಆ ಇಡೀ ಪ್ರಕರಣ ಹತ್ತಾರು ಅನುಮಾನಗಳನ್ನು ಉಳಿಸಿಕೊಂಡೇ ಇತಿಹಾಸದ ಪುಟಗಳನ್ನು ಸೇರಿಕೊಂಡಿದೆ. ಇವಷ್ಟೇ ಅಲ್ಲ, 2001 ಡಿ. 13ರಂದು ದೇಶದ ಪಾರ್ಲಿಮೆಂಟಿನ ಮೇಲೆ ನಡೆದ ದಾಳಿಯ ಕುರಿತಂತೆಯೂ ಕೆಲವಾರು ಸಂಶಯಗಳು ಈಗಲೂ ಉಳಿದುಕೊಂಡಿವೆ. ಪಾರ್ಲಿಮೆಂಟಿನಲ್ಲಿ ರಕ್ಷಣಾ ಹಗರಣದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲೇ ಆ ದಾಳಿ ನಡೆದಿತ್ತು. ಅರುಂಧತಿ ರಾಯ್‍ರಂತಹವರು ಇಡೀ ಘಟನೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಎತ್ತಿದ್ದರು. ಕಾಶ್ಮೀರದ ಶರಣಾಗತ ಹೋರಾಟಗಾರನಾಗಿದ್ದ ಅಫ್ಝಲ್ ಗುರುವನ್ನು ಆತನ ಅರಿವಿಗೆ ಬಾರದೆಯೇ ವ್ಯವಸ್ಥಿತವಾಗಿ ಆ ದಾಳಿಯಲ್ಲಿ ಬಳಸಿಕೊಳ್ಳಲಾಗಿತ್ತು ಎಂಬ ಮಾತುಗಳು ಆಗ ವ್ಯಕ್ತವಾಗಿದ್ದುವು. ಆತ ಕೊಟ್ಟ ಹೇಳಿಕೆಗಳು ಇಡೀ ಪ್ರಕರಣಕ್ಕೆ ಇನ್ನೊಂದು ಮುಖ ಇರಬಹುದಾದ ಸಾಧ್ಯತೆಗಳನ್ನು ವ್ಯಕ್ತಪಡಿಸಿತ್ತು.
 ನಿಜವಾಗಿ, ಈ ದೇಶದಲ್ಲಿ ನಡೆಯುವ ಸ್ಫೋಟಗಳು ಮತ್ತು ದಾಳಿಗಳ ಹಿಂದೆ ಹೊರಗೆ ಗೋಚರವಾಗುವುದಕ್ಕಿಂತ ಭಿನ್ನವಾದ ಕೆಲವು ಆಯಾಮಗಳಿರುತ್ತವೆ ಅನ್ನುವುದಕ್ಕೆ ಈ ಮೇಲಿನ ಮಾಹಿತಿಗಳೇ ಅತ್ಯುತ್ತಮ ಪುರಾವೆ. ಮಹಾರಾಷ್ಟ್ರದ ಮಾಲೆಗಾಂವ್‍ನ ಮಸೀದಿಯೊಂದರ ದಫನ ಭೂಮಿಯಲ್ಲಿ ಬಾಂಬ್ ಸ್ಫೋಟಗೊಂಡು 37 ಮಂದಿ ಸಾವಿಗೀಡಾದಾಗಲೂ ಅದನ್ನು ಮುಸ್ಲಿಮ್ ಭಯೋತ್ಪಾದನೆ ಎಂದೇ ಕರೆಯಲಾಗಿತ್ತು. ಸಂಜೋತಾ ಎಕ್ಸ್ ಪ್ರೆಸ್ ರೈಲು ಸಹಿತ ಇನ್ನಿತರ ಕೆಲವಾರು ಬಾಂಬ್ ಸ್ಫೋಟಗಳಿಗೂ ಮುಸ್ಲಿಮ್ ಭಯೋತ್ಪಾದನೆಯನ್ನೇ ಹೊಣೆ ಮಾಡಲಾಗಿತ್ತು. ಆದರೆ ಹೇಮಂತ್ ಕರ್ಕರೆಯವರ ನೇತೃತ್ವದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್, ಪುರೋಹಿತ್, ಅಸೀಮಾನಂದ ಮುಂತಾದವರ ಬಂಧನದೊಂದಿಗೆ ಮುಸ್ಲಿಮ್ ಭಯೋತ್ಪಾದನೆಯ ಸತ್ಯಾಸತ್ಯತೆಗಳು ಸಮಾಜದಲ್ಲಿ ಚರ್ಚೆಗೊಳಗಾದುವು. ಮುಸ್ಲಿಮ್ ಭಯೋತ್ಪಾದನೆ ಎಂಬ ಪರಿಚಿತ ಹೆಸರಿನಲ್ಲಿ ಇನ್ನಾರೋ ಸ್ಫೋಟಗಳನ್ನು ಈ ದೇಶದಲ್ಲಿ ನಡೆಸುತ್ತಿರುವೆಂಬುದನ್ನು ಕರ್ಕರೆ ತಂಡ ಖಚಿತಪಡಿಸಿತ್ತು. ಬಹುಶಃ, ಭಯೋತ್ಪಾದನೆಯ ಕುರಿತಂತೆ ಈ ದೇಶದಲ್ಲಿ ಆವರೆಗೆ ಇದ್ದ ಸಿದ್ಧ ನಂಬಿಕೆಗೆ ಕರ್ಕರೆ ಆ ಬಂಧನದ ಮೂಲಕ ಬಲವಾದ ಏಟನ್ನು ಕೊಟ್ಟಿದ್ದರು. ‘ಬಾಂಬ್ ಸ್ಫೋಟಿಸುವುದಕ್ಕೆ ಮುಸ್ಲಿಮರೇ ಬೇಕಾಗಿಲ್ಲ’ ಎಂಬ ಸಂದೇಶವನ್ನು ಅವರು ಪುರೋಹಿತ್, ಸಾಧ್ವಿಗಳನ್ನು ತೋರಿಸಿ ಸಾಬೀತುಪಡಿಸಿದ್ದರು. ಆದ್ದರಿಂದಲೇ, ಕರ್ಕರೆಯವರನ್ನು ಬಲಿ ಪಡೆದುಕೊಂಡ ಮುಂಬೈ ದಾಳಿಯ ಸುತ್ತ ಅನುಮಾನಗಳು ಮೂಡುವುದು.
 

ಏನೇ ಆಗಲಿ, ಪುರುಲಿಯಾದಿಂದ ಹಿಡಿದು ಮೊನ್ನೆ ನಡೆದ ಬೆಂಗಳೂರು ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ವರೆಗೆ ಎಲ್ಲವನ್ನೂ ಸಂದೇಹದಿಂದ ನೋಡಲೇಬೇಕಾದ ಪರಿಸ್ಥಿತಿ ಇವತ್ತು ನಿರ್ಮಾಣವಾಗಿದೆ. ಪ್ರತಿ ಪ್ರಕರಣಕ್ಕೂ ಹೊರಗೆ ಕಾಣುವ ಮತ್ತು ಕಾಣದ ಎರಡು ಮುಖಗಳಿರುತ್ತವೆ. ನಾವೆಲ್ಲ ಹೊರಗೆ ಕಾಣುವ ಮುಖಗಳನ್ನೇ ನಿಜ ಎಂದು ನಂಬಿ ಬಿಡುತ್ತೇವೆ. ಈ ಮುಖಗಳನ್ನು ‘ನಿಜ’ ಮಾಡುವುದಕ್ಕಾಗಿ ಕಾಣದ ಮುಖಗಳು ಕೃತಕ ಪುರಾವೆಗಳನ್ನೂ ಮಾಹಿತಿಗಳನ್ನೂ ಬಹಿರಂಗಪಡಿಸುತ್ತಿರುತ್ತವೆ. ಅದಕ್ಕಾಗಿ ಅವು ಲಭ್ಯವಿರುವ ಎಲ್ಲ ಮಾಧ್ಯಮಗಳನ್ನೂ ಬಳಸಿಕೊಳ್ಳುತ್ತವೆ. ಪುರುಲಿಯಾ ಮತ್ತು ಮುಂಬೈ ದಾಳಿಯ ಕುರಿತು ಬಹಿರಂಗವಾದ ಮಾಹಿತಿಗಳು ಸ್ಪಷ್ಟಪಡಿಸುವುದೂ ಇವನ್ನೇ.

No comments:

Post a Comment