Wednesday 18 February 2015

ಮಾಧ್ಯಮ ಪೂರ್ವಾಗ್ರಹವನ್ನು ಮತ್ತೊಮ್ಮೆ ಚರ್ಚಾರ್ಹಗೊಳಿಸಿದ ಆದಿಲ್ ಹುಸೈನ್

    ಕಾಶ್ಮೀರಿಯೊಬ್ಬ ಈ ದೇಶದಲ್ಲಿ ಎದುರಿಸಬೇಕಾದ ಸವಾಲುಗಳ ಪುಟ್ಟ ಪರಿಚಯವೊಂದನ್ನು ಆದಿಲ್ ಹುಸೈನ್ ಎಂಬ ಕಾಶ್ಮೀರಿ ಯುವಕ ನಮ್ಮ ಮುಂದಿಟ್ಟಿದ್ದಾನೆ. ಗುಜರಾತ್‍ನ ಕಛ್ ವಿಶ್ವವಿದ್ಯಾಲಯದಲ್ಲಿ ಭೂಗರ್ಭಶಾಸ್ತ್ರಕ್ಕೆ ಸಂಬಂಧಿಸಿ ಪಿಎಚ್‍ಡಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿ ಈತ. 2014 ಡಿಸೆಂಬರ್ 13ರಂದು ಗುಜರಾತ್‍ನ ‘ಸಂದೇಶ್’ ಎಂಬ ಪ್ರಮುಖ ದಿನಪತ್ರಿಕೆಯು ಈತನ ಬಗ್ಗೆ ಎಕ್ಸ್ ಕ್ಲೂಸಿವ್ ವರದಿಯೊಂದನ್ನು ಪ್ರಕಟಿಸಿತ್ತು. “ಪಿಹೆಚ್‍ಡಿಯ ನೆಪದಲ್ಲಿ ಕಾಶ್ಮೀರಿ ವಿದ್ಯಾರ್ಥಿಯೊಬ್ಬ ಕಛ್ ಗಡಿಯ ಸರ್ವೇ ನಡೆಸಿದನೇ..” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಆ ವರದಿಯಲ್ಲಿ ಆದಿಲ್ ಹುಸೈನ್‍ನ ಮೇಲೆ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಲಾಗಿತ್ತು. ಆತ ಗೂಢಚಾರ (Spy) ಆಗಿರಬಹುದೇ ಎಂಬ ರೀತಿಯಲ್ಲಿ ಪತ್ರಿಕೆ ಸಂದೇಹವನ್ನು ವ್ಯಕ್ತಪಡಿಸಿತ್ತು. ಆತ ಕಾಶ್ಮೀರದ ಶೋಪಿಯಾನ್ ಜಿಲ್ಲೆಯವ ಎಂದು ಹೆಸರಿಸುವುದಕ್ಕೆ ಬದಲು ‘ಭಯೋತ್ಪಾದಕ ಜಿಲ್ಲೆಯವ’ ಎಂದು ಹೆಸರಿಸಿತ್ತು. ಇದರಿಂದಾಗಿ ಗುಜರಾತ್‍ನಲ್ಲಿ ‘ತಲೆಗೊಂದು ಮಾತು’ ಹುಟ್ಟಿಕೊಂಡಿತು. ‘ಆತ ಕಛ್ ಗಡಿಗೆ ಭೇಟಿಕೊಟ್ಟಿದ್ದ ಮತ್ತು ನಿಗೂಢವಾಗಿ ನಾಪತ್ತೆಯಾಗಿದ್ದ’ ಎಂಬ ಪತ್ರಿಕೆಯ ವರದಿಯು ಹಲವಾರು ವಂದತಿಗಳಿಗೂ ಕಾರಣವಾಯಿತು. ಆತ ಭಯೋತ್ಪಾದಕರಿಗಾಗಿ ಕೆಲಸ ಮಾಡುತ್ತಿರಬಹುದೇ ಎಂಬ ಪ್ರಶ್ನೆಗಳೂ ಎದ್ದುವು. ಸಂದೇಶ್ ಪತ್ರಿಕೆಯ ವರದಿಯು ಸಮಾಜದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತೆಂದರೆ ವಿಶ್ವವಿದ್ಯಾಲಯದಲ್ಲಿ ಆದಿಲ್ ಹುಸೈನನಿಗೆ ಒಂಟಿತನದ ಅನುಭವವಾಗ ತೊಡಗಿತು. ಸಹಪಾಠಿಗಳೇ ಆತನಿಂದ ದೂರ ಸರಿಯುವುದಕ್ಕೆ ಪ್ರಯತ್ನಿಸುತ್ತಿರುವಂತೆ ಕಂಡರು. ಇಂಥ ಸಂದರ್ಭದಲ್ಲಿ ಆದಿಲ್ ಹುಸೈನನ ಬೆನ್ನಿಗೆ ನಿಂತವರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಆತನ ಗೈಡ್ ಆಗಿರುವ ಎಂ.ಜಿ. ಥಾಕುರ್ ಅವರು. ಅವರು ಇಡೀ ವರದಿಯನ್ನೇ ಹೊಲಸು (Rubbish) ಅಂದರು. ಆದಿಲ್ ಅತ್ಯಂತ ನಂಬಿಗಸ್ಥ ಮತ್ತು ವಿಧೇಯ ವಿದ್ಯಾರ್ಥಿ ಎಂದರು. ನಿಜವಾಗಿ, 2014 ಸೆಪ್ಟೆಂಬರ್ 17ರಂದು ಗುಜರಾತ್‍ನಿಂದ ಕಾಶ್ಮೀರಕ್ಕೆ ಹೊರಟ ಆತ ಸೆ. 21ರಂದು ಮನೆಗೆ ಮುಟ್ಟಿದ್ದ. ಆ ಬಳಿಕ ತನ್ನ ಪಿಹೆಚ್‍ಡಿ ಕೆಲಸದಲ್ಲಿ ನಿರತನಾದ. ಮಾತ್ರವಲ್ಲ, ಡಿ. 21ರಂದು ಗುಜರಾತ್‍ಗೆ ಹಿಂತಿರುಗಿದ್ದ. ಆತ ಕಾಶ್ಮೀರಕ್ಕೆ ತೆರಳಿರುವುದನ್ನೇ ಪತ್ರಿಕೆಯು ದಿಢೀರ್ ನಾಪತ್ತೆ (Sudden dispperence) ಎಂದು ಉಲ್ಲೇಖಿಸಿತ್ತು. ಈ ಪತ್ರಿಕಾ ವರದಿಗೆ ಆದಿಲ್ ಹುಸೈನ್ ದಿಗ್ಭ್ರಮೆ ವ್ಯಕ್ತಪಡಿಸಿದ. ‘ಪಿಹೆಚ್‍ಡಿ ಅಧ್ಯಯನವನ್ನು ತೊರೆದು ಮನೆಗೆ ಹಿಂತಿರುಗು’ ಎಂದು ತಾಯಿ ಒತ್ತಾಯಿಸುತ್ತಿರುವುದಾಗಿ ಮಾಧ್ಯಮಗಳೊಂದಿಗೆ ಹೇಳಿಕೊಂಡ. ಇದಾದ ಬಳಿಕ ಸಂದೇಶ್ ಪತ್ರಿಕೆಯು ತನ್ನ ವರದಿಗಾಗಿ ಕ್ಷಮೆ ಯಾಚಿಸಿದೆ (Gujarat daily apologises after calling kashmiri student Spy) ಎಂದು ದಿ ಹಿಂದೂ ಪತ್ರಿಕೆ 2014 ಡಿಸೆಂಬರ್ 31ರಂದು ಪ್ರಕಟಿಸಿತ್ತು. ಹೀಗೆ ಒಂದು ಹಂತದವರೆಗೆ ಮುಗಿದು ಹೋಗಿದ್ದ ಈ ಪ್ರಕರಣವನ್ನು ಸಂದೇಶ್ ಪತ್ರಿಕೆಯು ಕಳೆದವಾರ ಮತ್ತೆ ಕೆದಕಿದೆ. ತಾನು ಕ್ಷಮೆ ಕೋರಿಲ್ಲ ಎಂದೂ ಅದು ಹೇಳಿಕೊಂಡಿದೆ. ಕಾಶ್ಮೀರಿ ಯುವಕನೊಬ್ಬ ಭೂಗರ್ಭಶಾಸ್ತ್ರ ಅಧ್ಯಯನ ನಡೆಸಲು ಗುಜರಾತನ್ನು ಆಯ್ಕೆ ಮಾಡಿಕೊಂಡ ಉದ್ದೇಶವನ್ನೇ ಅದು ಈಗ ಪ್ರಶ್ನಿಸಿದೆ. ವಿಷಯವು ಸೂಕ್ಷ್ಮ ಮತ್ತು ಭದ್ರತೆಗೆ ಸಂಬಂಧಿಸಿದ್ದಾಗಿದ್ದು ಕಛ್ ಗಡಿಗೆ ಆತ ಭೇಟಿ ಕೊಟ್ಟದ್ದು ಅನುಮಾನಾಸ್ಪದ ಎಂದು ತನ್ನನ್ನು ಮತ್ತೆ ಸಮರ್ಥಿಸಿಕೊಂಡಿದೆ.
 ಮಾಧ್ಯಮ ವಿಶ್ವಾಸಾರ್ಹತೆಯು ಮತ್ತೆ ಮತ್ತೆ ಪ್ರಶ್ನೆಗೊಳಗಾಗುತ್ತಿರುವ ಇಂದಿನ ದಿನಗಳಲ್ಲಿ ಸಂದೇಶ್ ಪತ್ರಿಕೆಯ ಎಕ್ಸ್ ಕ್ಲೂಸಿವ್ ವರದಿ, ಕ್ಷಮೆಯಾಚನೆ ಮತ್ತು ಅಲ್ಲಗಳೆಯುವಿಕೆಯು ಗಂಭೀರ ಚರ್ಚೆಗೆ ಒಳಗಾಗಬೇಕಾದ ಅಗತ್ಯವಿದೆ. ಅಷ್ಟಕ್ಕೂ, ಕಾಶ್ಮೀರ ಮತ್ತು ಹಿಮಾಲಯನ್ ವಲಯವೂ ಸೇರಿದಂತೆ ಆ ಪ್ರದೇಶದ ವಾತಾವರಣದ ಬದಲಾವಣೆಯನ್ನು ಗುರಿಯಾಗಿಟ್ಟುಕೊಂಡು ಪಿಹೆಚ್‍ಡಿ ಅಧ್ಯಯನಕ್ಕೆ ಹೊರಟಿರುವ ವಿದ್ಯಾರ್ಥಿಯೊಬ್ಬ ಕಛ್ ಗಡಿಗೆ ಭೇಟಿ ಕೊಡುವುದು ಹೊಸತೂ ಅಲ್ಲ, ಅಪರಾಧವೂ ಆಗುವುದಿಲ್ಲ ಎಂಬುದು ಪತ್ರಿಕೆಯೊಂದಕ್ಕೆ ಚೆನ್ನಾಗಿ ಗೊತ್ತು. ಸಂದೇಶ್ ಪತ್ರಿಕೆಯು ಒಂದು ಹಂತದಲ್ಲಿ ಅದನ್ನು ಒಪ್ಪಿಕೊಂಡೂ ಇದೆ. ಹೀಗಿದ್ದೂ ಆತ ಎಕ್ಸ್ ಕ್ಲೂಸಿವ್ ನ್ಯೂಸ್ ಯಾಕಾದ? ಕಾಶ್ಮೀರಿಗನೆಂಬ ಕಾರಣಕ್ಕೋ ಅಥವಾ ಆದಿಲ್ ಹುಸೈನ್ ಆದುದಕ್ಕೋ? ಕಾಶ್ಮೀರವು ಭಾರತದ ಭಾಗವೆಂದ ಮೇಲೆ ಅಲ್ಲಿನ ವಿದ್ಯಾರ್ಥಿಗಳು ಗುಜರಾತ್‍ನಲ್ಲಿ ಅಧ್ಯಯನ ನಡೆಸುವುದನ್ನು ಪತ್ರಿಕೆಯು ಅಪರಾಧದಂತೆ ಬಿಂಬಿಸುವುದರ ಉದ್ದೇಶವೇನು? ಕಾಶ್ಮೀರ ಅಂದರೆ ಆ್ಯಪಲ್, ಮಂಜು, ಸರೋವರಗಳಷ್ಟೇ ಅಲ್ಲವಲ್ಲ. ಅಲ್ಲಿನ ಮನುಷ್ಯರೂ ಭಾರತದವರೇ ಅಲ್ಲವೇ? ಒಂದು ಕಡೆ ಕಾಶ್ಮೀರಿಗಳು ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಬೇಕು ಎಂದು ಒತ್ತಾಯಿಸುವುದು ಮತ್ತು ಇನ್ನೊಂದು ಕಡೆ ಅವರ ಬೆನ್ನಿಗೆ ಸಿಸಿ ಕ್ಯಾಮರಾವನ್ನು ಅಳವಡಿಸುವುದು.. ಇದರ ಅರ್ಥವೇನು?
 ನಿಜವಾಗಿ, ಮಾಧ್ಯಮ ಪೂರ್ವಾಗ್ರಹವೆಂಬುದು ಎಲ್ಲ ಪೂರ್ವಾಗ್ರಹಗಳಿಗಿಂತ ಹೆಚ್ಚು ಅಪಾಯಕಾರಿಯಾದುದು. ಯಾಕೆಂದರೆ, ಅದು ಇಡೀ ಸಮಾಜದ ಮನಸ್ಸನ್ನೇ ಕೆಡಿಸಿಬಿಡುತ್ತದೆ. ಪತ್ರಿಕೆಯೊಂದರ ನಿರ್ಣಾಯಕ ಸ್ಥಾನದಲ್ಲಿರುವವರು ಪೂರ್ವಾಗ್ರಹದಿಂದ ಬಳಲುತ್ತಿದ್ದರೆ ಅಕ್ಷರಗಳು ರೋಗಗ್ರಸ್ಥವಾಗಿ ಬಿಡುತ್ತದೆ. ಆ ಬಳಿಕ ಮುಸ್ಲಿಮನ ಗಡ್ಡವು ಬರೇ ಗಡ್ಡವಾಗಿ ಗುರುತಿಸಿಕೊಳ್ಳುವುದಿಲ್ಲ. ಟೊಪ್ಪಿಯು ಧರ್ಮವೊಂದರ ಆಚರಣೆಯ ಗುರುತಾಗಿ ಉಳಿಯುವುದಿಲ್ಲ ಅಥವಾ ಅಲ್ಲಾಹು ಅಕ್ಬರ್, ಜಿಹಾದ್ ಎಂಬ ಪದಗಳು, ಕುರ್ತಾ-ಪೈಜಾಮದಂಥ ಉಡುಪುಗಳೆಲ್ಲ ಬರೇ ಉಡುಪುಗಳಾಗಿಯೋ ಧಾರ್ಮಿಕ ಪದಗಳಾಗಿಯೋ ಬಿಂಬಿತವಾಗುವುದಿಲ್ಲ. ಅವುಗಳಿಗೆ ಭಿನ್ನ ಭಿನ್ನ ವ್ಯಾಖ್ಯಾನಗಳನ್ನು ಕೊಡಲಾಗುತ್ತದೆ. ಟೊಪ್ಪಿಗೊಂದು ಗಡ್ಡಕ್ಕೊಂದು, ಜಿಹಾದ್‍ಗೊಂದು ಕಲ್ಪಿತ ಅರ್ಥಗಳನ್ನು ಕೊಟ್ಟು ಸುಳ್ಳುಗಳನ್ನು ತೇಲಿ ಬಿಡಲಾಗುತ್ತದೆ. ಸದ್ಯದ ದಿನಗಳಲ್ಲಂತೂ ಈ ರೀತಿಯ ಪತ್ರಿಕೋದ್ಯಮವನ್ನು ವಿವರಿಸಿ ಹೇಳಬೇಕಿಲ್ಲ. ಸಾಕಷ್ಟು ಬಹಿರಂಗವಾಗಿಯೇ ಈ ರೀತಿಯ ಪೂರ್ವಾಗ್ರಹಗಳು ಮಾಧ್ಯಮ ಕ್ಷೇತ್ರವನ್ನು ಇವತ್ತು ಆವರಿಸಿಕೊಂಡು ಬಿಟ್ಟಿದೆ. ಗುಜರಾತ್‍ನ ಸಂದೇಶ್ ಪತ್ರಿಕೆಯಂತೂ ಈ ಬಗೆಯ ಪೂರ್ವಾಗ್ರಹಕ್ಕೆ ಕುಖ್ಯಾತಿಯನ್ನು ಪಡೆದುಕೊಂಡಿದೆ. ಗುಜರಾತ್‍ನಲ್ಲಿ ನಡೆದ ಗೋಧ್ರಾ ಹತ್ಯಾಕಾಂಡ ಮತ್ತು ಆ ಬಳಿಕದ ಗಲಭೆಯ ಸಂದರ್ಭದಲ್ಲಿ ಈ ಪತ್ರಿಕೆಯು ಮಾಧ್ಯಮ ನೀತಿಯನ್ನು (Ethics) ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ‘ಭಾರತೀಯ ಸಂಪಾದಕರ ಮಂಡಳಿ'ಯು (Editors Guild of India) ಅಭಿಪ್ರಾಯಪಟ್ಟಿತ್ತು. ಟೈಮ್ಸ್ ಆಫ್ ಇಂಡಿಯಾದ ಖ್ಯಾತ ಪತ್ರಕರ್ತ ದಿಲೀಪ್ ಪಡ್ಗಾಂವ್‍ಕರ್, ಮಿಡ್‍ಡೇ ಮುಂಬೈ ಪತ್ರಿಕೆಯ ಆಕಾರ್ ಪಟೇಲ್ ಮತ್ತು ಹಿಂದೂಸ್ತಾನ್ ಟೈಮ್ಸ್ ನ ಮಾಜಿ ಸಂಪಾದಕ ಬಿ.ಜಿ. ವರ್ಗೀಸ್‍ರು 2002 ಮಾರ್ಚ್‍ನ ಕೊನೆಯಲ್ಲಿ ಗುಜರಾತ್‍ಗೆ ಭೇಟಿ ಕೊಟ್ಟು 254 ಪುಟಗಳ ಸತ್ಯಶೋಧನಾ ವರದಿಯನ್ನು ತಯಾರಿಸಿದ್ದರು. ಆ ವರದಿಯಲ್ಲಿ ಸಂದೇಶ್ ಪತ್ರಿಕೆಯನ್ನು ತೀವ್ರವಾಗಿ ತರಾಟೆಗೆ ಎತ್ತಿಕೊಂಡಿದ್ದರು. ಗಲಭೆಗೆ ಪ್ರಚೋದನೆ ನೀಡಿದ ಮತ್ತು ಬೇಜವಾಬ್ದಾರಿಯುತವಾಗಿ ವರದಿ ಮಾಡಿದ ಆರೋಪವನ್ನೂ ಹೊರಿಸಿದ್ದರು. ಮಾತ್ರವಲ್ಲ, ಪತ್ರಿಕೆಯ ವಿರುದ್ಧ ನ್ಯಾಯಾಂಗ ತನಿಖೆಯಾಗಬೇಕೆಂದೂ ಆಗ್ರಹಿಸಿದ್ದರು. ಇದೀಗ ಅದೇ ಪತ್ರಿಕೆಯ ವಿಶ್ವಾಸಾರ್ಹತೆ ಮತ್ತೊಮ್ಮೆ ಪ್ರಶ್ನೆಗೀಡಾಗಿದೆ.
 ಏನೇ ಆಗಲಿ, ಪತ್ರಿಕೆಯೊಂದರ ಬೇಜವಾಬ್ದಾರಿಯಿಂದಾಗಿ ಕಾಶ್ಮೀರಿ ವಿದ್ಯಾರ್ಥಿಯೊಬ್ಬ ‘ಗೂಢಚಾರ'ನಾಗಿ ಬಿಂಬಿತಗೊಂಡಿದ್ದಾನೆ. ಮಾತ್ರವಲ್ಲ, ಕ್ಷಮೆ ಕೋರಬೇಕಾದ ಪತ್ರಿಕೆಯು ತನ್ನನ್ನು ಸಮರ್ಥಿಸಿಕೊಳ್ಳುವ ನಿರ್ಲಜ್ಜತನವನ್ನು ಪ್ರದರ್ಶಿಸಿದೆ. ಇಂಥ ಸ್ಥಿತಿಯಲ್ಲಿ ಓದುಗರು ಎಚ್ಚೆತ್ತುಕೊಳ್ಳಬೇಕು. ತಪ್ಪನ್ನು ತಪ್ಪೆಂದು ಒಪ್ಪಿಕೊಳ್ಳುವ ಕನಿಷ್ಠ ಸೌಜನ್ಯವನ್ನೂ ತೋರದ ಮಾಧ್ಯಮ ನೀತಿಯನ್ನು ಪ್ರಶ್ನಿಸಬೇಕು. ಪೂರ್ವಾಗ್ರಹ ಪೀಡಿತ ಸುದ್ದಿ-ವರದಿಗಳ ವಿರುದ್ಧ ಪ್ರತಿಭಟನೆಯ ಅಸ್ತ್ರವನ್ನು ಪ್ರಯೋಗಿಸಬೇಕು. ಮಾಧ್ಯಮ ಕ್ಷೇತ್ರ ಎಂದೂ ಸರ್ವಾಧಿಕಾರಿಯಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಎಲ್ಲ ಓದುಗರು ಮತ್ತು ವೀಕ್ಷಕರ ಮೇಲಿದೆ. ಇಲ್ಲದಿದ್ದರೆ ಆದಿಲ್ ಹುಸೈನ್‍ನಂಥವರು ಮತ್ತೆ ಮತ್ತೆ ಭಯೋತ್ಪಾದಕರಾಗುತ್ತಲೇ ಇರುತ್ತಾರೆ.

Wednesday 11 February 2015

ಭೈರಪ್ಪ, ಸಲ್ಮಾನ್ ರುಶ್ದಿ, ನೇಮಾಡೆ ಮತ್ತು ಗೂಬೆ

    ಲೇಖಕ ಸಲ್ಮಾನ್ ರುಶ್ದಿಯವರು ಮತ್ತೊಮ್ಮೆ ಮಾಧ್ಯಮಗಳ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮರಾಠಿ ಸಾಹಿತಿ ಬಾಲಚಂದ್ರ ನೇಮಾಡೆಯವರನ್ನು ಟೀಕಿಸುವ ಭರದಲ್ಲಿ ಅವರು ಬಳಸಿದ ಅವಾಚ್ಯ ಪದಗಳು ವಿವಾದವನ್ನು ಹುಟ್ಟುಹಾಕಿವೆ. ಇದಕ್ಕಿಂತ ಎರಡ್ಮೂರು ದಿನಗಳ ಮೊದಲು ಸಾಹಿತಿ ಎಸ್.ಎಲ್. ಭೈರಪ್ಪ ಅವರು ಒಂದು ಮಿತಿಯ ವರೆಗೆ ಸಾರ್ವಜನಿಕ ಚರ್ಚೆಯ ಭಾಗವಾಗಿದ್ದರು. ಶ್ರವಣ ಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಹೋರಾಟಗಾರ್ತಿಯರಾದ ಕೆ.ಎಸ್. ವಿಮಲಾ, ಕೆ. ಷರೀಫಾ, ಗೌರಿ ಲಂಕೇಶ್, ವಿನಯಾ, ಆಶಾ ದೇವಿ ಮುಂತಾದವರು ಭೈರಪ್ಪನವರ ಕಾದಂಬರಿಗಳನ್ನು ವಿಮರ್ಶೆಗೊಡ್ಡಿದ್ದರು.  ಅವರ ಕಾದಂಬರಿಗಳು ಹೇಗೆ ಜೀವವಿರೋಧಿ ಮತ್ತು ಮಹಿಳಾ ವಿರೋಧಿ ಎಂಬುದನ್ನು ಬಿಡಿಸಿಟ್ಟಿದ್ದರು. ಭೈರಪ್ಪರ ‘ಯಾನ’, ‘ಅಂಚು’, ‘ಆವರಣ’, ‘ಕವಲು’.. ಮುಂತಾದ ಕಾದಂಬರಿಗಳು ಕಟ್ಟಿಕೊಡುವ ಪೂರ್ವಾಗ್ರಹ ಪೀಡಿತ ಚಿಂತನೆಗಳು, ಆಧುನಿಕ ಮಹಿಳೆಯ ಕುರಿತಾದ ತಿರಸ್ಕøತ ನಿಲುವು, ಅನ್ಯ ಧರ್ಮಗಳ ಬಗೆಗಿನ ಏಕಮುಖ ಅಭಿಪ್ರಾಯಗಳನ್ನು ಅವರು ಪ್ರಶ್ನಿಸಿದ್ದರು. ಈ ಬೆಳವಣಿಗೆಯು ಆ ಬಳಿಕ ಭೈರಪ್ಪ ಪರ ಮತ್ತು ವಿರೋಧ ಚರ್ಚೆಗಳಿಗೆ ಕಾರಣವಾಯಿತು. ಈ ಚರ್ಚೆಯ ಕಾವು ತಣಿಯುವುದಕ್ಕಿಂತ ಮೊದಲೇ ಇದೀಗ ಸಲ್ಮಾನ್ ರುಶ್ದಿ ಈ ರಂಗಕ್ಕೆ ಪ್ರವೇಶಿಸಿದ್ದಾರೆ. ಬಾಲಚಂದ್ರ ನೇಮಾಡೆಯವರನ್ನು, "Grumpy old ... Just take your prize and say thank you nicely. I doubt you're even read the work - ಮುದಿಗೂಬೆ, ನಿನಗೆ ಬಂದಿರುವ ಪ್ರಶಸ್ತಿಯನ್ನು ತೆಪ್ಪಗೆ ಪಡೆದುಕೊಂಡು ಹೋಗು. ನೀನು ಟೀಕೆ ಮಾಡಿರುವ ನನ್ನ ಕೃತಿಯನ್ನು ಓದಿರುವೆಯೋ ಇಲ್ಲವೋ ಎಂಬುದೇ ನನಗೆ ಅನುಮಾನವಿದೆ..” ಎಂದು ಅವರು ಟ್ವೀಟ್ ಮಾಡಿದ್ದಾರೆ.
 ನಿಜವಾಗಿ, ಭೈರಪ್ಪ ಮತ್ತು ರುಶ್ದಿಯ ಮಧ್ಯೆ ಹೋಲಿಕೆಗೆ ಸಲ್ಲದ ಅನೇಕಾರು ಸಂಗತಿಗಳಿದ್ದರೂ ಮತ್ತೆ ಮತ್ತೆ ಚರ್ಚಿಸಲೇಬೇಕಾದ ವ್ಯಕ್ತಿತ್ವಗಳಾಗಿ ಅವರು ನಮ್ಮ ನಡುವೆ ಉಳಿದುಕೊಂಡಿದ್ದಾರೆ. ಅನ್ಯ ಧರ್ಮಗಳ ಮೇಲಿನ ಪೂರ್ವಾಗ್ರಹ ಪೀಡಿತ ಆಲೋಚನೆಗಳನ್ನೇ ಕಾದಂಬರಿಯಲ್ಲಿ ಬಳಸಿಕೊಳ್ಳುವ ಭೈರಪ್ಪರಿಗಿಂತ ಭಿನ್ನವಾಗಿ ಜನಪ್ರಿಯತೆಯನ್ನೇ ಮಾನದಂಡವಾಗಿಟ್ಟುಕೊಂಡು ಬರೆಯುವ ಜಾಯಮಾನ ರುಶ್ದಿಯದು. ಪಾಶ್ಚಾತ್ಯ ಜಗತ್ತು ಮತ್ತು ಅಲ್ಲಿನ ಓದುಗರ ತೃಪ್ತಿಯನ್ನು ಗುರಿಯಾಗಿಟ್ಟು ಅದಕ್ಕೆ ತಕ್ಕಂತೆ ಕತೆ ಹೆಣೆಯುವ ಹಾಗೂ ಬೇಕಾದಲ್ಲೆಲ್ಲ ಇಸ್ಲಾಮ್ ಧರ್ಮದ ಕುರಿತು ನಕಾರಾತ್ಮಕ ಅಭಿಪ್ರಾಯಗಳನ್ನು ಮಂಡಿಸುವ ಜಾಣತನವನ್ನು ಅವರು ತೋರ್ಪಡಿಸುತ್ತಿದ್ದಾರೆ. ಸೆಟಾನಿಕ್ ವರ್ಸಸ್ ಎಂಬ ಕೃತಿ ಜನಪ್ರಿಯಗೊಂಡದ್ದು ಈ ಕಾರಣದಿಂದಲೇ. ಸಾಹಿತ್ಯಿಕ ಮೌಲ್ಯಗಳು ಸೆಟಾನಿಕ್ ವರ್ಸಸ್‍ನಲ್ಲಿ ಎಷ್ಟಿವೆ ಎಂಬ ಬಗ್ಗೆ ಲಂಕೇಶ್ ಸಹಿತ ನಮ್ಮ ನಡುವಿನ ಸಾಕಷ್ಟು ಸಾಹಿತಿಗಳು ಈಗಾಗಲೇ ಚರ್ಚಿಸಿದ್ದಾರೆ. ಬೂಕರ್ ಪ್ರಶಸ್ತಿಗೆ ಅರ್ಹವಾಗುವಷ್ಟು ಉನ್ನತಿಯನ್ನು ಆ ಕೃತಿ ಹೊಂದಿತ್ತೇ ಎಂಬ ಬಗ್ಗೆ ಹಲವರು ತಗಾದೆಯನ್ನೂ ಎತ್ತಿದ್ದಾರೆ. ಪ್ರವಾದಿ ಮುಹಮ್ಮದ್‍ರನ್ನು , ಬಹುಪತ್ನಿತ್ವವನ್ನು ಮತ್ತು ಇಸ್ಲಾಮಿನ ವಿಶ್ವಾಸಾಚಾರಗಳನ್ನು ತಮಾಷೆ ಮಾಡುವುದನ್ನೇ ಸಾಹಿತ್ಯ ಅನ್ನುವುದಾದರೆ ಸೆಟಾನಿಕ್ ವರ್ಸಸ್ ಒಂದು ಸಾಹಿತ್ಯ ಕೃತಿ ಎಂದು ಹೇಳಿದವರೂ ಇದ್ದಾರೆ. ಪಾಶ್ಚಾತ್ಯ ಜಗತ್ತನ್ನು ಮತ್ತು ಅಲ್ಲಿನ ಮುಸ್ಲಿಮ್ ಫೋಬಿಯಾ ಮನಸ್ಥಿತಿಯನ್ನು ತಣಿಸುವಂತೆ ಬರೆದುದಕ್ಕಾಗಿ ಬೂಕರ್‍ನಿಂದ ಸನ್ಮಾನಿಸಲಾಗಿದೆ ಎಂಬ ಅಭಿಪ್ರಾಯವನ್ನು ಸಮರ್ಥಿಸುವಂತೆ ರುಶ್ದಿ ಉದ್ದಕ್ಕೂ ನಡಕೊಂಡು ಬಂದಿದ್ದಾರೆ. ಇದರರ್ಥ 1989ರಲ್ಲಿ ಅವರ ವಿರುದ್ಧ ಇರಾನಿನ ಆಯತುಲ್ಲಾ ಖೊಮೇನಿ ಘೋಷಿಸಿದ ಮರಣ ದಂಡನೆ ಫತ್ವ ಸಮರ್ಥನೀಯ ಎಂದಲ್ಲ. ಒಂದು ರೀತಿಯಲ್ಲಿ, ಆ ಕೃತಿಯನ್ನು ಪ್ರಸಿದ್ಧಗೊಳಿಸಿದ್ದೇ ಖೊಮೇನಿ. ಅವರ ಫತ್ವವು ರುಶ್ದಿಗೆ ಜಾಗತಿಕ ವ್ಯಕ್ತಿತ್ವವನ್ನು ಸಂಪಾದಿಸಿಕೊಟ್ಟಿತು. ಮಾತ್ರವಲ್ಲ, ಒಂದು ಸಾಹಿತ್ಯ ಕೃತಿ ಎಂಬ ನೆಲೆಯಲ್ಲಿ ಸೆಟಾನಿಕ್ ವರ್ಸಸ್‍ನ ಮೇಲೆ ನಡೆಯಬೇಕಾಗಿದ್ದ ನಿಷ್ಠುರ ವಿಮರ್ಶೆಯನ್ನೂ ಆ ಫತ್ವ ತಪ್ಪಿಸಿಬಿಟ್ಟಿತು. ಆ ಬಳಿಕ ಫತ್ವಾದ ಸುತ್ತಲೇ ಚರ್ಚೆಗಳು ನಡೆದುವು. ಸೆಟಾನಿಕ್ ವರ್ಸಸ್‍ನಲ್ಲಿ ಅಡಗಿರಬಹುದಾದ ಸಾಹಿತ್ಯಿಕ ಮೌಲ್ಯಗಳು ಮತ್ತು ಅದರ ಪ್ರಸ್ತುತತೆ, ಪೂರ್ವಾಗ್ರಹ, ಪಾಶ್ಚಾತ್ಯ ಓಲೈಕೆ, ಜನಪ್ರಿಯತೆಯ ಹಪಹಪಿತನ, ದ್ವಂದ್ವ.. ಮುಂತಾದುವುಗಳೆಲ್ಲ ವಿಮರ್ಶೆಗೀಡಾಗುವುದರ ಬದಲು ಖೊಮೇನಿಯ ಮನಸ್ಥಿತಿ ಮತ್ತು ಧಾರ್ಮಿಕ ಕರ್ಮಠತನಗಳು ಮುನ್ನೆಲೆಗೆ ಬಂದುವು. ಹೀಗೆ ಒಂದು ಕೃತಿಗೆ ಮತ್ತು ಅದರ ಕರ್ತೃಗೆ ಖೊಮೇನಿ ಹಾಗೂ ಅವರ ಫತ್ವ ಹುತಾತ್ಮ ಪಟ್ಟವನ್ನು ಒದಗಿಸಿದುವು. ದುರಂತ ಏನೆಂದರೆ, ರುಶ್ದಿಯವರು ಆ ನಕಲಿ ಇಮೇಜಿನ ಭ್ರಮೆಯಿಂದ ಇನ್ನೂ ಹೊರಬಂದಿಲ್ಲ. ಬಹುಪತ್ನಿತ್ವವನ್ನು ತಮಾಷೆ ಮಾಡಿದ ಅವರೇ ನಾಲ್ಕು ಬಾರಿ ಮದುವೆಯಾಗಿದ್ದಾರೆ. ಮಾತ್ರವಲ್ಲ, ನಾಲ್ವರಿಗೂ ಸಾಲು ಸಾಲಾಗಿ ವಿಚ್ಛೇದನವನ್ನೂ ನೀಡಿದ್ದಾರೆ. ಬಹುಶಃ, ನೇಮಾಡೆಯವರು ರುಶ್ದಿಯನ್ನು ‘ಪಾಶ್ಚಾತ್ಯ ಓಲೈಕೆಯ ಸಾಹಿತಿ’ ಎಂದಿರುವುದಕ್ಕೆ ಅಥವಾ ‘ಪಶ್ಚಿಮದ ಕೀಳು ಅಭಿರುಚಿಗೆ ತಕ್ಕಂತೆ ಬರೆಯುವ ಸಾಹಿತಿ’ ಎಂದು ಅಭಿಪ್ರಾಯ ಪಟ್ಟಿರುವುದಕ್ಕೆ ರುಶ್ದಿ ಅವಾಚ್ಯ ಪದವನ್ನು ಬಳಸುವಷ್ಟು ಸಿಟ್ಟಾದುದು ಅವರ ಈ ಎಲ್ಲ ದ್ವಂದ್ವ, ಓಲೈಕೆ, ಹಿಪಾಕ್ರಸಿಯ ಕಾರಣದಿಂದಲೇ ಆಗಿರಬಹುದು.
 ಸಾಹಿತ್ಯ ಕ್ಷೇತ್ರ ಇವತ್ತು ಎಷ್ಟು ಸ್ವಚ್ಛವಾಗಿದೆ ಮತ್ತು ಪೂರ್ವಗ್ರಹ ಎಂಬ ಮಾರಕ ವೈರಸ್‍ನಿಂದ ಎಷ್ಟಂಶ ಮುಕ್ತವಾಗಿದೆ ಎಂಬುದು ಗಂಭೀರ ಚರ್ಚೆಗೆ ಅರ್ಹವಾದದ್ದು. ಹಾಗಂತ ಭೈರಪ್ಪ ಈ ಚರ್ಚೆಯನ್ನು ಆರಂಭಿಸಿದವರಲ್ಲ. ಆದರೆ ಅವರಿಂದಾಗಿ ಈ ಚರ್ಚೆಗೆ ಹೆಚ್ಚು ಶಕ್ತಿ ಒದಗಿದೆ. ಸಾಹಿತ್ಯ ಕೃತಿಯೊಂದು ಯಾವೆಲ್ಲ ಮೌಲಿಕ ಅಂಶಗಳನ್ನು ಒಳಗೊಳ್ಳಬೇಕಿತ್ತೋ ಅಥವಾ ಯಾವೆಲ್ಲ ಕಾರಣಗಳಿಂದಾಗಿ ಒಂದು ಕೃತಿ ಚರ್ಚೆಗೊಳಗಾಗಬೇಕಿತ್ತೋ ಆ ಎಲ್ಲ ಚೌಕಟ್ಟುಗಳನ್ನು ಉಲ್ಲಂಘಿಸಿ ಬರೆಯ ಹೊರಟವರೇ ಭೈರಪ್ಪ. ಅವರ ಈ ಬಂಡಾಯದಿಂದಾಗಿ ಪೂರ್ವಾಗ್ರಹಗಳೇ ಐತಿಹಾಸಿಕ ಸತ್ಯ ಅನಿಸಿಕೊಂಡವು. ಇತಿಹಾಸದ ತಪ್ಪು ಆಚರಣೆಗಳೇ ಪವಿತ್ರ ಆದುವು. ಒರೆಗೆ ಹಚ್ಚದ ಅಭಿಪ್ರಾಯಗಳೇ ಪಾವಿತ್ರ್ಯತೆ ಪಡೆದವು. ಇತಿಹಾಸವನ್ನು ಅವರು ವಾಸ್ತವದ ಕಣ್ಣಿನಿಂದ ಈವರೆಗೂ ನೋಡಿಲ್ಲ. ರುಶ್ದಿಯವರಿಗೆ ಪಾಶ್ಚಾತ್ಯ ಜಗತ್ತಿನ ಅಹಂ ಅನ್ನು ತೃಪ್ತಿಪಡಿಸುವ ಉದ್ದೇಶವಿದ್ದರೆ ಭೈರಪ್ಪರಿಗೆ ಒಂದು ನಿರ್ದಿಷ್ಟವರ್ಗದ ಪ್ರೀತಿಪಾತ್ರ ಅನಿಸಿಕೊಳ್ಳುವ ತುಡಿತವಿದೆ. ಇಬ್ಬರ ಅಭಿರುಚಿಗಳೇ ಬೇರೆ. ಓದುಗ ವಲಯವೂ ಬೇರೆ. ಬಳಸುವ ಭಾಷೆಯೂ ಬೇರೆ. ಆದರೆ ಆಳದಲ್ಲಿ ಎಲ್ಲೋ ಅವರಿಬ್ಬರೂ ಪರಸ್ಪರ ಸಂಧಿಸುತ್ತಾರೆ. ರುಶ್ದಿ ಮತ್ತು ಭೈರಪ್ಪ ಇಬ್ಬರ ಬರಹಗಳಲ್ಲೂ ಯಾರನ್ನೋ ಮೆಚ್ಚಿಸುವ, ಯಾವುದನ್ನೋ ಬಯಸುವ, ಏನೋ ಆಗಬಯಸುವ ಹಪಹಪಿಕೆಯಿದೆ. ಅದಕ್ಕಾಗಿ ಅವರು ಐತಿಹಾಸಿಕ ಸತ್ಯಗಳನ್ನೇ ತಿದ್ದಬಯಸುತ್ತಾರೆ. ವಾಸ್ತವದ ಬೆನ್ನಿಗೆ ಇರಿದು ಅಸತ್ಯಕ್ಕೆ ಮೆರುಗನ್ನು ನೀಡುತ್ತಿದ್ದಾರೆ. ತಮ್ಮ ಕಾದಂಬರಿಗಳಲ್ಲಿ ವಿವಿಧ ಪಾತ್ರಗಳನ್ನು ಸೃಷ್ಟಿಸಿ ತಮ್ಮ ಮೂಗಿನ ನೇರಕ್ಕೆ ಅವುಗಳನ್ನು ಮಾತಾಡಿಸುತ್ತಾರೆ. ಆವರಣದಲ್ಲಿ ಭೈರಪ್ಪ ಮಾಡಿರುವುದೂ ಇದನ್ನೇ.

       ಏನೇ ಆಗಲಿ, ಸಲ್ಮಾನ್ ರುಶ್ದಿಯವರ ಅವಾಚ್ಯ ಮುಖವನ್ನು ಬಾಲಚಂದ್ರ ನೇಮಾಡೆಯವರು
ಜಗತ್ತಿಗೆ ಪರಿಚಯಿಸಿದ್ದಾರೆ. ಶ್ರವಣ ಬೆಳಗೊಳದ ಸಾಹಿತ್ಯ ಸಮ್ಮೇಳನವು ಭೈರಪ್ಪರ ಸಾಹಿತ್ಯಿಕ ದಾರಿದ್ರ್ಯವನ್ನು ಮತ್ತೊಮ್ಮೆ ಚರ್ಚೆಗೊಡ್ಡಿದೆ. ಇಂಥ ಸಂದರ್ಭಗಳು ಮತ್ತೆ ಮತ್ತೆ ಸೃಷ್ಟಿಯಾಗುತ್ತಲೇ ಇರಲಿ. ಪೂರ್ವಾಗ್ರಹ, ಪರಧರ್ಮ ದ್ವೇಷ, ಅಗ್ಗದ ಜನಪ್ರಿಯತೆ, ದ್ವಂದ್ವ, ಹಿಪಾಕ್ರಸಿ ರಹಿತ ಸಮಾಜಮುಖಿ ಸಾಹಿತಿ ಮತ್ತು ಸಾಹಿತ್ಯಗಳು ಸದಾ ಸಮಾಜದ ಆದರಕ್ಕೆ ಪಾತ್ರವಾಗುತ್ತಲಿರಲಿ.

Wednesday 4 February 2015

ಲಕ್ಷ್ಮಣ್‍ರ ರೇಖೆಯಲ್ಲಿ ಮೋದಿ ಮತ್ತು ಪೌಲಿನಾ ಹೇಗೆ ಕಾಣಿಸುತ್ತಿದ್ದರು?

    ಜನವರಿ 27ರ ಪತ್ರಿಕೆಗಳಲ್ಲಿ ಮೂರು ಸುದ್ದಿಗಳು ಜೊತೆ ಜೊತೆಗೇ ಪ್ರಕಟವಾಗಿದ್ದುವು. ಈ ಮೂರೂ ಸುದ್ದಿಗಳು ಎಷ್ಟು ಮಹತ್ವಪೂರ್ಣವಾದವು ಎಂಬುದಕ್ಕೆ ಪತ್ರಿಕೆಗಳು ಇವುಗಳಿಗೆ ಕೊಟ್ಟ ಜಾಗವೇ ಪುರಾವೆಯಾಗಿತ್ತು. ಹೊರನೋಟಕ್ಕೆ, ಈ ಸುದ್ದಿಗಳು ಪರಸ್ಪರ ಯಾವ ಸಂಬಂಧವೂ ಇಲ್ಲದ ಮತ್ತು ಹೋಲಿಕೆಯನ್ನೂ ಮಾಡಲಾಗದ ಬಿಡಿ ಸುದ್ದಿಗಳಾಗಿ ಕಾಣಿಸಬಹುದಾದರೂ ಇದರ ಮೇಲೆ ತುಸು ಹೊತ್ತು ಕಣ್ಣಿರಿಸಿದರೆ, ಇವು ಪರಸ್ಪರ ಹೋಲಿಸಲೇಬೇಕಾದ ಹಾಗೂ ಆಂತರಿಕ ಸಂಬಂಧವುಳ್ಳ ಸುದ್ದಿಗಳಾಗಿ ಗೋಚರಿಸಬಹುದು. ಈ ಮೂರರಲ್ಲಿ ಒಂದು- ‘ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷ್ಮಣ್‍ ನಿಧನರಾದ ಸುದ್ದಿಯಾದರೆ’ ಇನ್ನೊಂದು, ‘ಅಮೇರಿಕದಲ್ಲಿ ನಡೆದ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಕೊಲಂಬಿಯದ ಪೌಲಿನಾ ವೇಗಾ ವಿಜಯಿಯಾದದ್ದು’. ಮತ್ತೊಂದು, ‘10 ಲಕ್ಷ   ರೂಪಾಯಿ ಖರ್ಚು ಮಾಡಿ ‘ನರೇಂದ್ರ ದಾಮೋದರ ದಾಸ್ ಮೋದಿ' ಎಂದು ಛಾಪಿಸಲಾದ ಕುರ್ತಾವನ್ನು ಧರಿಸಿ ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕದ ಅಧ್ಯಕ್ಷ  ಒಬಾಮರನ್ನು ಭೇಟಿಯಾದದ್ದು’. ಒಂದು ವೇಳೆ ಆರ್.ಕೆ. ಲಕ್ಷ್ಮಣ್‍ ಅವರು ವ್ಯಂಗ್ಯ ಚಿತ್ರ ರಚಿಸುವಷ್ಟು ಆರೋಗ್ಯವಂತರಾಗಿರುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಿಸ್ ಯುನಿವರ್ಸ್ ಪೌಲಿನಾ ವೇಗರ ನಡುವೆ ಯಾವ ಬಗೆಯ ಹೋಲಿಕೆಯನ್ನು ಕಾಣುತ್ತಿದ್ದರು? ಅವರ ‘ಕಾಮನ್‍ಮ್ಯಾನ್' ಈ ಇಬ್ಬರನ್ನು ನೋಡಿ ಏನೆಂದು ಉದ್ಗರಿಸುತ್ತಿದ್ದ? ಆತನಲ್ಲಿ ಮೂಡಬಹುದಾದ ಅಚ್ಚರಿಯೋ ಆಘಾತವೋ ಭೀತಿಯೋ ಹೇಗಿರುತ್ತಿತ್ತು? ನಿಜವಾಗಿ, ಮಿಸ್ ಯೂನಿವರ್ಸ್‍ನಂಥಲ್ಲ ಪ್ರಧಾನಿಯ ವ್ಯಕ್ತಿತ್ವ. ಪ್ರಧಾನಿ ಎಂಬ ಪದಕ್ಕೆ ಅದರದ್ದೇ ಆತ ಸ್ಥಾನಮಾನ, ಗೌರವ, ಘನತೆಯಿದೆ. ಅವರು ದೇಶದ ಭಾವನೆಗಳ ಪ್ರತಿನಿಧಿ. ಅವರ ಉಡುಪು, ಅವರ ನಡೆ, ಮಾತು, ಅಂಗಚಲನೆ.. ಎಲ್ಲದರಲ್ಲೂ ದೇಶವನ್ನು ಅಳೆಯಲಾಗುತ್ತದೆ. ಒಂದು ದೇಶದ ಸಂಸ್ಕ್ರತಿಯನ್ನು ಆ ದೇಶದ ಸಾಂಸ್ಕ್ರತಿಕ ಕಾರ್ಯಕ್ರಮಗಳಷ್ಟೇ ಕಟ್ಟಿಕೊಡುವುದಲ್ಲ. ಪ್ರಧಾನಿಯವರು ಒಂದು ದೇಶದ ಎಲ್ಲ ವೈವಿಧ್ಯತೆಗಳನ್ನೂ ಪ್ರತಿನಿಧಿಸುವ ಸಂಕೇತ ಆಗಿರುತ್ತಾರೆ. ಉಡುಪು ಕೂಡ ಅದರ ಒಂದು ಭಾಗವೇ. ಈಜಿಪ್ಟ್ ನ ಸರ್ವಾಧಿಕಾರಿಯಾಗಿದ್ದ ಹುಸ್ನಿ ಮುಬಾರಕ್‍ರು ತನ್ನದೇ ಹೆಸರನ್ನು ಛಾಪಿಸಲಾದ ಬಟ್ಟೆಯನ್ನು ಧರಿಸಿದ್ದುದು ಈ ಹಿಂದೆ ಸುದ್ದಿಯಾಗಿತ್ತು. ಮಾತ್ರವಲ್ಲ, ಜಗತ್ತಿನಲ್ಲಿರುವ ಸರ್ವಾಧಿಕಾರಿಗಳ ವಿವಿಧ ಬಗೆಯ ಆಸಕ್ತಿಗಳ ಕುರಿತಂತೆ ಚರ್ಚಿಸುವುದಕ್ಕೂ ಅದು ಕಾರಣವಾಗಿತ್ತು. ನರೇಂದ್ರ ಮೋದಿಯವರು ಸರ್ವಾಧಿಕಾರಿಯಲ್ಲ. ಜನರ ಪ್ರತಿನಿಧಿ. ಮುಬಾರಕ್‍ರಿಗೂ ನರೇಂದ್ರ ಮೋದಿಯವರಿಗೂ ನಡುವೆ ಇರುವ ಪ್ರಮುಖ ವ್ಯತ್ಯಾಸ ಇದು. ಮುಬಾರಕ್ ಏನನ್ನು ಧರಿಸಿದರೂ ಅದು ಈಜಿಪ್ಟ್ ಜನತೆಯನ್ನು ಪ್ರತಿನಿಧಿಸುವುದಿಲ್ಲ. ಯಾಕೆಂದರೆ, ಅವರನ್ನು ಈಜಿಪ್ಟ್ ಜನತೆ ಚುನಾಯಿಸಿಯೇ ಇಲ್ಲ ಆದ್ದರಿಂದಲೇ, ಅವರ ಆಸಕ್ತಿ ಮತ್ತು ಹವ್ಯಾಸಗಳನ್ನು ಜನರೊಂದಿಗೆ ಹೋಲಿಕೆ ಮಾಡಿ ನೋಡಲೂ ಆಗುವುದಿಲ್ಲ. ಆದರೆ ನರೇಂದ್ರ ಮೋದಿ ಹಾಗಲ್ಲವಲ್ಲ. ಓರ್ವ ಚಾಯ್‍ವಾಲಾ ಆಗಿ ನರೇಂದ್ರ ಮೋದಿಯವರ ಡ್ರೆಸ್‍ಸೆನ್ಸ್ ಹೇಗಿರಬೇಕಿತ್ತು ಮತ್ತು ಯಾರನ್ನು ಪ್ರತಿನಿಧಿಸುವಂತಿರಬೇಕಿತ್ತು? ತನ್ನನ್ನೇ ವೈಭವೀಕರಿಸುವ 10 ಲಕ್ಷ  ರೂಪಾಯಿಯ ಕುರ್ತಾವನ್ನು ಧರಿಸಿ ಓರ್ವರು ಚಾ ಮಾರಾಟ ಮಾಡುವ ಸನ್ನಿವೇಶವನ್ನೊಮ್ಮೆ ಕಲ್ಪಿಸಿಕೊಳ್ಳಿ. ಆ ವ್ಯಕ್ತಿಯ ಚಾ ಎಷ್ಟು ದುಬಾರಿಯಾಗಿರಬಹುದು? ಮೋದಿಯವರು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಓರ್ವ ಬಡ ಚಾಯ್‍ವಾಲಾನಾಗಿ ತನ್ನನ್ನು ಪರಿಚಯಿಸಿಕೊಂಡಿದ್ದರು. ದೇಶದಾದ್ಯಂತ ಚಾಯ್‍ಪೆ ಚರ್ಚಾ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಬೀದಿ ಬೀದಿಗಳಲ್ಲಿ ಅವರ ಅಭಿಮಾನಿಗಳು ಚಾವನ್ನು ವಿತರಿಸುವ ವ್ಯವಸ್ಥೆಯನ್ನೂ ಮಾಡಿದ್ದರು. ಹೀಗೆ, ತಾನೋರ್ವ ಸಾಮಾನ್ಯ ಎಂದೇ ಹೇಳಿಕೊಂಡು ಬಂದ ಮೋದಿ, ಈ ಮಟ್ಟದಲ್ಲಿ ಸ್ವ ವೈಭವೀಕರಣಕ್ಕೆ ಏಕೆ ಮುಂದಾದರು? ಅವರಲ್ಲಿ ಸರ್ವಾಧಿಕಾರಿ ಮನೋಭಾವವಿದೆ ಎಂಬುದು ಈ ಹಿಂದೆಯೇ ಚರ್ಚೆಗೊಳಗಾಗಿತ್ತು. ಪ್ರಧಾನಿಯನ್ನು ಬಿಟ್ಟರೆ ಉಳಿದಂತೆ ಸಚಿವ ಸಂಪುಟದ ಇನ್ನಾರೂ ಮುಖ್ಯಧಾರೆಯಲ್ಲಿ ಕಾಣಿಸಿಕೊಳ್ಳದಂತೆ ಅಥವಾ ಅವರ ಅಸ್ತಿತ್ವ ನಗಣ್ಯವಾಗುವಂತೆ ಅವರು ನಡಕೊಳ್ಳುತ್ತಾರೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಲಾಗಿತ್ತು. ಇದೀಗ ಅದನ್ನು ಸಾಬೀತುಪಡಿಸುವಂತೆ ಮೋದಿ ವರ್ತಿಸಿದ್ದಾರೆ. ಈ ಏಕವ್ಯಕ್ತಿ ವಿಜೃಂಭಣೆ ಪ್ರಜಾತಂತ್ರಕ್ಕೆ ಸಹ್ಯವೇ?
    ಕಾಕತಾಳೀಯವೇನೆಂದರೆ, ಮೋದಿಯವರು ಈ ಸ್ವ ವೈಭವೀಕರಣದ ಕುರ್ತಾವನ್ನು ಧರಿಸಿದ ಅದೇ ದಿನ ಆರ್.ಕೆ. ಲಕ್ಷ್ಮಣ್‍ರು ನಿಧನರಾದರು. ಈ ದೇಶದ ರಾಜಕಾರಣಿಗಳ ಎಲ್ಲ ಬಗೆಯ ಎಡೆಬಿಡಂಗಿತನವನ್ನೂ ತನ್ನ ಮೊನಚು ರೇಖೆಗಳಲ್ಲಿ ಹಿಡಿದಿಡುತ್ತಿದ್ದ ಲಕ್ಷ್ಮಣ್‍ರು ಮೋದಿಯವರ ಈ ಕುರ್ತಾವನ್ನು ಕಂಡು ‘ಇನ್ನು ಬದುಕಿರಲು ಸಾಧ್ಯವಿಲ್ಲ'ವೆಂಬಂತೆ ಹೊರಟು ಹೋದರು. ಒಂದು ರೀತಿಯಲ್ಲಿ, ಲಕ್ಷ್ಮಣ್‍ರ ಸಾವು ಮೋದಿಯವರ ಸ್ವ ವೈಭವೀಕರಣಕ್ಕೆ ಸಲ್ಲಿಸಲಾದ ಸಾತ್ವಿಕ ಪ್ರತಿಭಟನೆ. ಈ ಹಿಂದೆ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದಾಗ ಲಕ್ಷ್ಮಣ್‍ ಅದನ್ನು ಪ್ರಬಲವಾಗಿ ಖಂಡಿಸಿದ್ದರು. ಸರ್ವಾಧಿಕಾರಿ ಧೋರಣೆಯನ್ನು ಎಂದೂ ಒಪ್ಪದ ಅವರು ಮೋದಿಯವರ ಈ ಸ್ವ ವೈಭವೀಕರಣವನ್ನು ಸಮರ್ಥಿಸುವುದಕ್ಕೆ ಸಾಧ್ಯವೇ ಇರಲಿಲ್ಲ.
 ಅಂದಹಾಗೆ, ಈ ದೇಶದ ಪ್ರಧಾನಿಯಾಗಿ ಮೋದಿಯವರ ಮುಂದೆ ಅನೇಕಾರು ಸವಾಲುಗಳಿವೆ. ಇವತ್ತು ಅವರದೇ ಸಂಪುಟದ ಸಹೋದ್ಯೋಗಿಗಳು ಪತ್ರಿಕೆಗಳ ಮುಖಪುಟದಿಂದ ಕೊನೆ ಪುಟಕ್ಕಾಗುವಷ್ಟು ವಿವಾದಾತ್ಮಕವಾಗಿ ನಡಕೊಳ್ಳುತ್ತಿದ್ದಾರೆ. ಅವರನ್ನು ಬೆಳೆಸಿದ ಸಂಘ ಪರಿವಾರವಂತೂ ದಿನಕ್ಕೊಂದು ಯೋಜನೆಗಳೊಂದಿಗೆ ಈ ದೇಶವನ್ನು ಆತಂಕಕ್ಕೆ ತಳ್ಳುತ್ತಿದೆ. ಇಂಥ ಸಂದರ್ಭಗಳಲ್ಲಿ ಮೋದಿಯವರು ಆತ್ಮಸ್ತುತಿಯ ವರ್ತನೆಗಿಂತ ಹೊರತಾದ ಕಾರಣಕ್ಕಾಗಿ ಈ ದೇಶದಲ್ಲಿ ಸುದ್ದಿಯಲ್ಲಿರಬೇಕಾಗುತ್ತದೆ. ಅಷ್ಟಕ್ಕೂ, ದೇಶದ ಬಗ್ಗೆ ಕನಸುಗಳನ್ನು ಬಿತ್ತುವುದಕ್ಕೆ ನರೇಂದ್ರ ಮೋದಿಯವರೇ ಬೇಕಿಲ್ಲ. ಅದನ್ನು ಮಾತುಗಾರರಾದ ಯಾರೂ ಮಾಡಬಹುದು. ಈ ಬಾರಿಯ ಮಿಸ್ ಯುನಿವರ್ಸ್ ಪೌಲಿನಾ ವೇಗಾ ಕೂಡಾ ಮಿಸ್ ಯೂನಿವರ್ಸ್ ಆದ ಖುಷಿಯಲ್ಲಿ ಕೊಲಂಬಿಯಾದ ಬಗ್ಗೆ ಮಾತಾಡಿದ್ದಾರೆ. ನನ್ನ ಗೆಲುವು ಕೊಲಂಬಿಯಾವನ್ನು ವಿಶ್ವದ ನಕಾಶೆಯಲ್ಲಿ ಎತ್ತರಕ್ಕೇರಿಸಬಹುದು ಎಂಬ ಕನಸು ಕಂಡಿದ್ದಾರೆ. ನನ್ನ ಗೆಲುವು 47 ಮಿಲಿಯನ್ ಕೊಲಂಬಿಯನ್ನರ ಗೆಲುವು, ನಾನು ಕೊಲಂಬಿಯನ್ ಎಂಬುದಕ್ಕಾಗಿ ಹೆಮ್ಮೆ ಪಡುತ್ತೇನೆ.. ಎಂದೂ ಹೇಳಿದ್ದಾರೆ. ಆದರೆ, ಆ ಹೇಳಿಕೆ ಮತ್ತು ಉತ್ಸಾಹಗಳು ಪ್ರಾಯೋಗಿಕವಾಗಿ ಯಾವ ಸಾಧನೆಯನ್ನು ಮಾಡಬಲ್ಲುದು ಎಂಬುದು ಎಲ್ಲರಿಗೂ ಗೊತ್ತಿದೆ. ಬ್ಯೂಟಿ ಕಿರೀಟವನ್ನು ಧರಿಸಿ ವೇದಿಕೆಯಿಂದ ಕೆಳಗಿಳಿಯುವುದರೊಂದಿಗೆ ಆ ಮಾತಿನ ಮಹತ್ವವೂ ಕಳೆದುಹೋಗುತ್ತದೆ. ಆ ಬಳಿಕ ಆಕೆ ಧರಿಸಿದ ಡ್ರೆಸ್ಸು, ಅದರ ವೆಚ್ಚ, ಅದರ ವಿನ್ಯಾಸಗಾರ, ಆಕೆಯ ಆಂಗಿಕ ಅಭಿವ್ಯಕ್ತಿ, ನಗು, ಮೈಮಾಟಗಳೆಲ್ಲ ಸುದ್ದಿಯ ಕೇಂದ್ರವಾಗಿ ಉಳಿದುಕೊಳ್ಳುತ್ತದೆ. ಆದ್ದರಿಂದಲೇ ನರೇಂದ್ರ ಮೋದಿಯವರ ಕುರ್ತಾ ಮತ್ತು ಅದರ ಸುತ್ತ ಆಗುತ್ತಿರುವ ಚರ್ಚೆಗಳಿಗೆ ಮಹತ್ವ ಬರುವುದು. ಮೋದಿಯವರು ‘ಪೌಲಿನಾ ವೇಗಾ'ಳ ಮಿತಿಯನ್ನು ದಾಟಿ ಪ್ರಾಯೋಗಿಕ ವ್ಯಕ್ತಿಯಾಗಿ
ಗುರುತಿಸಿಕೊಳ್ಳಬೇಕಾದವರಾಗಿದ್ದಾರೆ. ಅವರ ಕುರ್ತಾ, ಅದರ ವಿನ್ಯಾಸಗಾರ, ಅದಕ್ಕೆ ಮಾಡಲಾದ ಖರ್ಚು, ಎಂಬ್ರಾಯಿಡರಿ ವಿಶೇಷತೆಗಳಾಚೆಗೆ ಅವರು ಓರ್ವ ಪ್ರಧಾನಿಯಾಗಿ ಚರ್ಚೆಗೊಳಗಾಗಬೇಕು. ಅವರ ಎದೆಯ ಉದ್ದ, ಅಗಲ, ಅವರ ಎತ್ತರ, ಗಡ್ಡದ ಶೈಲಿಗಳೆಲ್ಲ ಪದೇ ಪದೇ ಸಾರ್ವಜನಿಕ ಚರ್ಚಾ ಕೇಂದ್ರಗಳಾಗುತ್ತದೆಂದರೆ ಅವರನ್ನು ಬ್ಯೂಟಿ ಸ್ಪರ್ಧೆಯ ಸ್ಪರ್ಧಾಳುವಿನಂತೆ ಜನರು ಪರಿಗಣಿಸತೊಡಗಿದ್ದಾರೆ ಎಂದರ್ಥ. ಪ್ರಧಾನಿಗದು ಭೂಷಣವಲ್ಲ. ಅವರಿದನ್ನು ವಿೂರಲೇಬೇಕಾಗಿದೆ.



.