Tuesday 7 July 2015

ಮೋದಿಯವರೇಕೆ ಮೌನಮೋಹನರ ದಾರಿಯನ್ನು ಆಯ್ಕೆ ಮಾಡಿಕೊಂಡರು?

     ಪ್ರಧಾನಿ ನರೇಂದ್ರ ಮೋದಿಯವರ ದೀರ್ಘ ಮೌನಕ್ಕೆ ಕಾರಣಗಳೇನು? ಮನ್‍ಮೋಹನ್ ಸಿಂಗ್‍ರನ್ನು ಮೌನಮೋಹನ ಎಂದು ಕರೆದಿದ್ದ ಮತ್ತು ಅಪಾರ ವಾಚಾಳಿಯಾಗಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಮನ್‍ಮೋಹನ್ ಸಿಂಗ್‍ರನ್ನೂ ನಾಚಿಸುವಷ್ಟು ಮೌನಕ್ಕೆ ಜಾರುತ್ತಿರುವುದೇಕೆ? ಒಂದು ಕಡೆ, ಮೋದಿಯವರನ್ನು ಸೂಪರ್‍ಮ್ಯಾನ್ ಆಗಿ ಬಿಂಬಿಸಲಾಗುತ್ತಿದೆ. ಅವರು ಆಡಿದ್ದೇ ಆಟ ಎಂಬ ರೀತಿಯಲ್ಲಿ ಪ್ರಚಾರಗಳಿವೆ. ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರ ಸಚಿವ ಸಂಪುಟದ ಸದಸ್ಯರು ಮಾತಾಡುತ್ತಿದ್ದರು. ಅಡ್ವಾಣಿ, ಅರುಣ್ ಶೌರಿ, ಯಶವಂತ್ ಸಿನ್ಹ, ಸುಶ್ಮಾ, ಜಸ್ವಂತ್ ಸಿಂಗ್, ಜೇಟ್ಲಿ.. ಎಲ್ಲರಲ್ಲೂ ಮಾಧ್ಯಮದೊಂದಿಗೆ ಹಂಚಿಕೊಳ್ಳುವುದಕ್ಕೆ ಅಭಿಪ್ರಾಯಗಳಿದ್ದುವು. ವಾಜಪೇಯಿಯವರೂ ಎಂದೂ ಪ್ರಶ್ನೆಗಳಿಂದ ತಪ್ಪಿಸಿಕೊಂಡವರಲ್ಲ. ಪ್ರತಿಕ್ರಿಯೆ, ಸಂವಾದ, ಆತ್ಮಗತ.. ಇವೆಲ್ಲ ಜನಪ್ರತಿನಿಧಿಯ ಬದುಕಿನ ಭಾಗ ಎಂಬುದಕ್ಕೆ ವಾಜಪೇಯಿ ಹೊರತಾಗಿರಲಿಲ್ಲ. ಆದರೆ ಮೋದಿಯವರು ಮಾತ್ರವಲ್ಲ, ಅವರ ಸಚಿವ ಸಂಪುಟವೇ ಇವತ್ತು ಮೌನವನ್ನು ಹೊದ್ದುಕೊಂಡು ಮಲಗಿದಂತೆ ವರ್ತಿಸುತ್ತಿದೆ. ಸುಶ್ಮಾ, ಜೇಟ್ಲಿ, ಗಡ್ಕರಿ, ರಾಜನಾಥ್, ಅನಂತಕುಮಾರ್.. ಎಲ್ಲರನ್ನೂ ಗಾಢ ಮೌನ ಆವರಿಸಿಬಿಟ್ಟಿದೆ. ನಿಜವಾಗಿ, ದಶಕಗಳ ಕಾಲ ವಿರೋಧ ಪಕ್ಷದಲ್ಲಿದ್ದು ರಾಜಕಾರಣವನ್ನು ಹತ್ತಿರದಿಂದ ನೋಡಿದ್ದ ವಾಜಪೇಯಿಯವರು ಅತ್ಯಂತ ಅನುಭವಿ ವ್ಯಕ್ತಿ. ಬಿಜೆಪಿಯಲ್ಲಿ ಅವರಷ್ಟು ಪ್ರಬಲ ನಾಯಕ ಇನ್ನೊಬ್ಬರಿರಲಿಲ್ಲ. ಬಿಜೆಪಿ ಅಧಿಕಾರಕ್ಕೇರುವಷ್ಟು ಸ್ಥಾನಗಳನ್ನು ಗಳಿಸಿಕೊಟ್ಟದ್ದು ಅಡ್ವಾಣಿಯವರ ರಥಯಾತ್ರೆ ಮತ್ತಿತರ ‘ಭೀಕರ’ ರಾಜಕೀಯ ತಂತ್ರಗಳಾದರೂ ನಾಯಕತ್ವದ ಸಂದರ್ಭದಲ್ಲಿ ಮುಂಚೂಣಿಗೆ ಬಂದದ್ದು ವಾಜಪೇಯಿ. ಅಂದಿನ ಕಾಲದಲ್ಲಿ ಬಿಜೆಪಿಯ ಪಾಲಿಗೆ ಅವರು ಸೂಪರ್ ಮ್ಯಾನ್. ಪಕ್ಷದ ಒಳಗೆ ಮತ್ತು ಹೊರಗೆ ಅಂಥದ್ದೊಂದು ವರ್ಚಸ್ಸನ್ನು ಅವರು ಬೆಳೆಸಿಕೊಂಡಿದ್ದರು. ಆದರೂ ಅವರ ಅಧಿಕಾರಾವಧಿಯಲ್ಲಿ ಮೌನ ಪ್ರಾಬಲ್ಯತೆಯನ್ನು ಪಡೆದಿರಲಿಲ್ಲ. ಅವರಿಗೆ ಹೋಲಿಸಿದರೆ ನರೇಂದ್ರ ಮೋದಿಯವರು ಅನನುಭವಿ. ಗುಜರಾತ್‍ನ ಮುಖ್ಯಮಂತ್ರಿಯಾಗಿ ಸೀಮಿತ ರಾಜಕೀಯ ಅನುಭವಗಳು ಅವರಿಗಿದೆಯೇ ಹೊರತು ದೆಹಲಿ ರಾಜಕಾರಣ ಅವರಿಗೆ ಅಪರಿಚಿತ. ಗುಜರಾತ್‍ನ ಬಿಜೆಪಿ ಶಾಸಕರನ್ನು ನಿಭಾಯಿಸುವುದಕ್ಕೂ ದೆಹಲಿಯಲ್ಲಿರುವ ಬಿಜೆಪಿಯ ನಾಯಕರು ಮತ್ತು ಹಿರಿಯ ಸಂಸದರನ್ನು ನಿಭಾಯಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಗುಜರಾತ್‍ಗೆ ಮೋದಿಯವರು ಆಲದ ಮರವೇ ಆಗಿರಬಹುದು. ಆದರೆ ದೆಹಲಿಯಲ್ಲಿ ಅಂಥ ಆಲದ ಮರವಾಗಲು ಆಸೆಪಡುವ ಅನೇಕ ನಾಯಕರಿದ್ದಾರೆ. ಅಲ್ಲಿ ರಾಜಕೀಯ ಮಹತ್ವಾಕಾಂಕ್ಷೆಯಿದೆ. ವೈಯಕ್ತಿಕ ವರ್ಚಸ್ಸಿದೆ. ಹೀಗಿರುವಾಗ, ಗುಜರಾತ್‍ನ ಶಾಸಕರ ನಡುವಿನಿಂದ ನೇರವಾಗಿ ದೆಹಲಿಯ ಸಂಸದರ ನಡುವಿಗೆ ಬಂದ ವ್ಯಕ್ತಿ ಸುಲಭವಾಗಿ ವ್ಯವಹರಿಸುವುದು ಸಾಧ್ಯವಿಲ್ಲ. ಸದ್ಯ ಮೋದಿಯವರ ಮೌನಕ್ಕೂ ಈ ಅನನುಭವಕ್ಕೂ ಸಂಬಂಧ ಇರಬಹುದೇ? ತನ್ನ ಸಂಪುಟದ ಸಚಿವರ ಮೇಲೆ ಕ್ರಮ ಕೈಗೊಳ್ಳುವಷ್ಟು ಅವರು ಪ್ರಬಲರಾಗಿಲ್ಲವೇ? ಅವರ ಸಂಪುಟದ ಸದಸ್ಯರು ಮೌನವಾಗಿರುವುದಕ್ಕೆ ಅವರ ಇಂಗಿತ ಕಾರಣವೋ ಅಥವಾ ಅದರ ಹಿಂದೆ ಬೇರೇನಾದರೂ ಒಳ ಉದ್ದೇಶಗಳಿವೆಯೇ? ಮೋದಿಯವರು ಸುಶ್ಮಾ ಸ್ವರಾಜ್ ಮತ್ತು ವಿಜಯ ರಾಜೇ ಸಿಂಧಿಯರವರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಡಿ, ಬರೇ ಸಂಸದರಷ್ಟೇ ಆಗಿರುವ ಯೋಗಿ ಆದಿತ್ಯನಾಥ್‍ರಂಥವರ ಬಾಯಿಯನ್ನೇ ಮುಚ್ಚಿಸಲಾಗುತ್ತಿಲ್ಲ. ಸಾಧ್ವಿ ಪ್ರಾಚಿಯಂಥ ಬೆಂಬಲಿಗರಂತೂ ಮೋದಿಯವರಿಗೆ ನಿತ್ಯ ಕಸಿವಿಸಿಯನ್ನುಂಟು ಮಾಡುತ್ತಿದ್ದಾರೆ. ಒಂದು ವೇಳೆ, ಮೋದಿಯವರು ಅಂಥ ಮಾತುಗಳನ್ನು ಇಷ್ಟಪಡುತ್ತಾರೆ ಎಂದೇ ವಾದಿಸಿದರೂ ಅದರಿಂದಾಗಿ ಅವರ ಅಂತಾರಾಷ್ಟ್ರೀಯ ವರ್ಚಸ್ಸಿಗೆ ತೀವ್ರ ಧಕ್ಕೆಯಾಗುತ್ತದೆ ಎಂಬುದೂ ಅಷ್ಟೇ ನಿಜ. ಹೊಸ ಹೊಸ ವಿನ್ಯಾಸದ ಮತ್ತು ಲಕ್ಷಾಂತರ ಬೆಲೆಬಾಳುವ ಉಡುಪು ಧರಿಸುವ ಮೋದಿಯವರಿಗೆ ವರ್ಚಸ್ಸಿನ ಬಯಕೆಯಿದೆ. ಪ್ರಬಲ ನಾಯಕನಾಗಿ ಗುರುತಿಗೀಡಾಗುವ ಹಪಹಪಿಕೆಯಿದೆ. ಹೀಗಿರುತ್ತಾ, ತನ್ನ ವರ್ಚಸ್ಸಿಗೆ ಧಕ್ಕೆ ಬರುವಂತೆ ಮಾತಾಡುವವರನ್ನು ಅವರು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹೀಗಿದ್ದೂ, ಅವರು ಏನನ್ನೂ ಮಾಡುತ್ತಿಲ್ಲ. ಏನಿದರ ಅರ್ಥ? ಅವರಿಗಿರುವ ಸೂಪರ್‍ಮ್ಯಾನ್ ಇಮೇಜ್ ಬರೇ ಜಾಹೀರಾತು ಕಂಪೆನಿಗಳ ಕಸರತ್ತೇ? ಅವರು ಪಕ್ಷದೊಳಗೆ ಕೇವಲ ಕಾಮನ್‍ಮ್ಯಾನ್ ಅಷ್ಟೇ ಆಗಿರುವರೇ ಅಥವಾ ಆಗುತ್ತಿರುವರೇ? ಬಿಜೆಪಿಯಲ್ಲಿ ಅವರ ಸಾಮರ್ಥ್ಯ ಸೀಮಿತವಾಗಿದೆಯೇ?
 ಅಷ್ಟಕ್ಕೂ, ಮನ್‍ಮೋಹನ್ ಸಿಂಗ್ ನೇತೃತ್ವದ ಸರಕಾರ ಅಧಿಕಾರ ಕಳೆದುಕೊಂಡದ್ದೇ ಭ್ರಷ್ಟಾಚಾರದ ಕಾರಣಕ್ಕಾಗಿ. ಮನ್‍ಮೋಹನ್‍ರು ದಿನೇ ದಿನೇ ಮೌನಕ್ಕೆ ಜಾರಿದಷ್ಟೂ ಪ್ರತಿಭಟನೆಗಳು ಹೆಚ್ಚಾದುವು. ಅಂದು ಸಿಂಗ್ ಅಸಹಾಯಕರಾಗಿದ್ದರು. ವೈಯಕ್ತಿಕವಾಗಿ ಅವರು ಭ್ರಷ್ಟರಲ್ಲ. ಆದರೆ ದೆಹಲಿ ರಾಜಕೀಯದ ಒಳಸುಳಿಗೆ ಅವರು ಅಪರಿಚಿತರಾಗಿದ್ದರು. ಪ್ರಧಾನಿಯಾಗಿದ್ದರೂ ಸಂಪುಟ ಸದಸ್ಯರ ಮೇಲೆ ಕ್ರಮ ಕೈಗೊಳ್ಳುವ ಸಾಮರ್ಥ್ಯ ಅವರಲ್ಲಿರಲಿಲ್ಲ. ಅವರ ಅಸಹಾಯಕತೆ ಕಾಂಗ್ರೆಸ್ಸಿನ ವರ್ಚಸ್ಸಿಗೆ ದಿನೇ ದಿನೇ ಕಳಂಕವನ್ನು ತಂದೊಡ್ಡತೊಡಗಿತು. ಆ ಕಳಂಕದ ಲಾಭ ಪಡೆದೇ ಇವತ್ತು ಮೋದಿಯವರು ಪ್ರಧಾನಿಯಾಗಿದ್ದಾರೆ. ಆದರೆ, ಇದೀಗ ಅವರ ಸಂಪುಟಕ್ಕೂ ಕಳಂಕ ತಟ್ಟಿದೆ. ಮುಖ್ಯಮಂತ್ರಿಗಳು, ಸಚಿವರು ಶಂಕಿತರ ಪಟ್ಟಿಯಲ್ಲಿದ್ದಾರೆ. ಕಪ್ಪು ಹಣಕ್ಕಾಗಿ ಮನ್‍ಮೋಹನ್ ಸರಕಾರವನ್ನು ಕಟುವಾಗಿ ಟೀಕಿಸಿದ್ದವರು ಮೋದಿ. ಇದೀಗ ಅವರ ಪಕ್ಷೀಯರೇ ಓರ್ವ ಕಪ್ಪು ಹಣದ ವ್ಯಕ್ತಿಗೆ ಗೊತ್ತಿದ್ದೇ ನೆರವಾದ ಗುರುತರ ಆರೋಪವನ್ನು ಎದುರಿಸುತ್ತಿದ್ದಾರೆ. ಹೀಗಿದ್ದೂ, ನರೇಂದ್ರ ಮೋದಿಯವರು ಈ ಬಗ್ಗೆ ಕೈ-ಬಾಯಿ ಎರಡನ್ನೂ ಕಟ್ಟಿ ಮೌನವಾಗಿರುವುದನ್ನು ಬರೇ ರಾಜಕೀಯ ತಂತ್ರ ಎಂದು ಕರೆದು ಸುಮ್ಮನಾಗಬಹುದೇ? ನಿಜವಾಗಿ, ಈ ರಾಜಕೀಯ ತಂತ್ರವೇ ಮನ್‍ಮೋಹನ್‍ರನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಅದೇ ತಂತ್ರವನ್ನು ಮತ್ತೆ ಮೋದಿಯವರು ಆರಿಸಿಕೊಂಡಾರೇ ಅಥವಾ ಹೊರಗೆ ಬಿಂಬಿಸಿಕೊಂಡಿರುವಷ್ಟು ಅವರು ಪ್ರಬಲರಾಗಿಲ್ಲವೇ? ಸುಶ್ಮಾ, ರಾಜೇ ಅಥವಾ ಇನ್ನಿತರ ಕೇಂದ್ರ ನಾಯಕರನ್ನು ಮುಟ್ಟುವುದು ರಾಜಕೀಯವಾಗಿ ಅವರ ಆತ್ಮಹತ್ಯೆಯಾಗಬಹುದೇ? ಮಾಧ್ಯಮಗಳೊಂದಿಗೆ ಅಲ್ಲವಾದರೂ ಕನಿಷ್ಠ ‘ಮನ್ ಕಿ ಬಾತ್'ನಲ್ಲಾದರೂ ಲಲಿತ್ ಗೇಟ್‍ನ (ಲಲಿತ್ ಮೋದಿ ಹಗರಣ) ಬಗ್ಗೆ ಅವರು ಪ್ರಸ್ತಾಪಿಸುತ್ತಾರೆಂದು ನಿರೀಕ್ಷಿಸಲಾಗಿತ್ತು. ಈ ದೇಶದ ಪ್ರಧಾನಿಯಾಗಿ ಈ ಬಗ್ಗೆ ಮಾತಾಡುವ ಹೊಣೆಗಾರಿಕೆಯೂ ಅವರಿಗಿತ್ತು. ನಾಯಕ ತನ್ನ ಸಂಗಡಿಗರ ಬಗ್ಗೆ ಸದಾ ಮೌನವಾಗುವುದು ಒಂದೋ ಅಸಹಾಯಕತೆಯಿಂದ ಅಥವಾ ತೀವ್ರ ನಿರ್ಲಕ್ಷ್ಯತನದಿಂದ. ಇವೆರಡೂ ಕೂಡ ಪಕ್ಷದ ದೃಷ್ಟಿಯಿಂದ ಹಿನ್ನಡೆಯೇ. ಜನರು ಇಂಥ ವರ್ತನೆಯನ್ನು ನಕಾರಾತ್ಮಕವಾಗಿ ಪರಿಗಣಿಸುತ್ತಾರೆ. ಒಂದೋ ಭ್ರಷ್ಟಾಚಾರಕ್ಕೆ ಬೆಂಬಲ ಇಲ್ಲವೇ ದುರ್ಬಲ ನಾಯಕತ್ವ ಎಂದು ಜನರು ಷರಾ ಬರೆದು ಬಿಡುತ್ತಾರೆ. ಮನ್‍ಮೋಹನ್ ಸಿಂಗ್‍ರನ್ನು ಜನರು ತೂಗಿದ್ದು ಇದೇ ತಕ್ಕಡಿಯಲ್ಲಿ. ಆದ್ದರಿಂದಲೇ, ನರೇಂದ್ರ ಮೋದಿಯವರ ಬಗ್ಗೆ ಅನುಮಾನ ಮೂಡುವುದು. ಅವರೇಕೆ ಮನ್‍ಮೋಹನ್ ದಾರಿಯಲ್ಲೇ ಸಾಗುತ್ತಿದ್ದಾರೆ? ಈ ದಾರಿ ಅವರು ಸ್ವತಃ ಬಯಸಿ ಆಯ್ಕೆ ಮಾಡಿಕೊಂಡದ್ದೋ ಅಥವಾ ಅನಿವಾರ್ಯತೆಯೋ? ಮನ್ ಕಿ ಬಾತ್‍ನಲ್ಲಿ ಲಲಿತ್ ಗೇಟ್‍ನ ಬಗ್ಗೆ ಪ್ರಸ್ತಾಪಿಸದಂತೆ ಅವರನ್ನು ನಿರ್ಬಂಧಿಸಿದ್ದು ಯಾರು? ಅವರು ನಿಜಕ್ಕೂ ಬಿಜೆಪಿಯಲ್ಲಿ ಸೂಪರ್‍ಮ್ಯಾನ್ ಹೌದೇ? ಪಕ್ಷೀಯರ ಮೇಲೆ ಅವರ ಸಾಮರ್ಥ್ಯ ಎಷ್ಟಿದೆ? ತನ್ನ ನಿರೀಕ್ಷೆಯಂತೆ ಪಕ್ಷವನ್ನು ಮುಂದಕ್ಕೆ ಕೊಂಡೊಯ್ಯಲಾಗದ ಅಸಹಾಯಕತೆಯೊಂದು ಅವರನ್ನು ಆವರಿಸಿದೆಯೇ? ಅದರ ಸೂಚನೆ ಈ ಮೌನವೇ? ಹೇಳಲಾಗದು.

No comments:

Post a Comment