Wednesday 15 July 2015

ದೂರಿನೊಂದಿಗೆ ನಿರ್ಗಮಿಸದಿರಲಿ..

    ‘ದೂರು' ಸಾರ್ವತ್ರಿಕವಾದುದು. ಹೆತ್ತವರಿಗೆ ಮಕ್ಕಳ ಮೇಲೆ ದೂರುಗಳಿರುತ್ತವೆ. ಮಕ್ಕಳಿಗೆ ಶಿಕ್ಷಕರ ಮೇಲೆ ದೂರುಗಳಿರುತ್ತವೆ. ರೋಗಿಗಳಿಗೆ ವೈದ್ಯರ ಮೇಲೆ ದೂರುಗಳಿರುತ್ತವೆ. ವ್ಯವಸ್ಥೆಯ ಮೇಲೆ ನಾಗರಿಕರಿಗೆ ದೂರುಗಳಿರುತ್ತವೆ. ಪೊಲೀಸರು, ಶ್ರೀಮಂತರು, ರಾಜಕಾರಣಿಗಳು, ಅಧಿಕಾರಿಗಳು, ವಿದ್ವಾಂಸರು, ಪತಿ, ಪತ್ನಿ.. ಹೀಗೆ ದೂರುಗಳ ಸರಣಿ ಬಹಳ ದೀರ್ಘವಾದುದು. ನಿಜವಾಗಿ, ರಮಝಾನ್ ಆಗಮಿಸುವುದೇ ಈ ಎಲ್ಲ ದೂರುಗಳ ಪರಿಹಾರದ ಭರವಸೆಯೊಂದಿಗೆ. ಅದು ‘ದೂರುರಹಿತ’ ಸುಂದರ ಜಗತ್ತೊಂದನ್ನು ಕಟ್ಟಿಕೊಡುತ್ತದೆ. ಹಸಿವಿನ ದೂರಿಗೆ ಅದರಲ್ಲಿ ಉತ್ತರವಿದೆ. ಅಧಿಕಾರಿಗಳ ವಂಚನೆಗೆ ಅದರಲ್ಲಿ ಪರಿಹಾರವಿದೆ. ಹೊಣೆರಹಿತ ರಾಜಕಾರಣಿ, ‘ಪತಿಧರ್ಮ'ವನ್ನು ಪಾಲಿಸದ ಪತಿ, ಪೋಷಕ ಧರ್ಮವನ್ನು ಅನುಸರಿಸದ ಹೆತ್ತವರು, ಸತ್ಯ ಹೇಳದ ವಿದ್ವಾಂಸ, ವಂಚಕ ವ್ಯಾಪಾರಿ.. ಎಲ್ಲದಕ್ಕೂ ಅದು ಪರಿಹಾರದ ಭರವಸೆಯಾಗಿ ಆಗಮಿಸುತ್ತದೆ, ತರಬೇತಿ ಕೊಡುತ್ತದೆ. ಅದರ ಒಂದು ತಿಂಗಳ ತರಬೇತಿ ಎಷ್ಟು ಪ್ರಭಾವಶಾಲಿ ಎಂದರೆ ಬಹುತೇಕ ದೂರುಗಳೇ ಸ್ಥಗಿತಗೊಳ್ಳುತ್ತವೆ. ಉಪವಾಸ ಆಚರಿಸಿದ ಪ್ರತಿಯೊಬ್ಬನೂ/ಳೂ ಈ ‘ದೂರುರಹಿತ’ ಸಮಾಜದ ಭಾಗವಾಗಬಯಸುತ್ತಾನೆ. ಆದರೂ ಪುಟ್ಟದೊಂದು ಅಂಜಿಕೆ, ರಮಝಾನ್‍ನ ನಿರ್ಗಮನದೊಂದಿಗೆ ದೂರುಗಳು ಮರುಕಳಿಸಬಹುದೇ? ರಮಝಾನ್ ಹೇಳಿಕೊಟ್ಟ ಪಾಠವನ್ನು ಉಲ್ಲಂಘಿಸುವ ವಿದ್ಯಾರ್ಥಿಗಳು ಕಾಣಿಸಿಕೊಂಡಾರೇ? ದೂರುಗಳೇ ಪ್ರಾಬಲ್ಯವನ್ನು ಪಡೆಯಬಲ್ಲಂತಹ ವಾತಾವರಣವನ್ನು ಅವರು ಸೃಷ್ಟಿಸುವರೇ? ನಿರ್ಗಮಿಸುತ್ತಿರುವ ರಮಝಾನ್‍ನ ಜೊತೆಜೊತೆಗೇ ಕಾಡುವ ನೋವುಗಳಿವು.
    ಪ್ರತಿವರ್ಷವೂ ರಮಝಾನ್‍ನ ಆಗಮನ ಮತ್ತು ನಿರ್ಗಮನ ನಡೆಯುತ್ತಲೇ ಇರುತ್ತದೆ. ಮಾತ್ರವಲ್ಲ, ಈ ಆಗಮನ ಮತ್ತು ನಿರ್ಗಮನದ ಎರಡೂ ಸಂದರ್ಭಗಳಲ್ಲೂ ಮುಸ್ಲಿಮರಲ್ಲಿ ಸಡಗರ ಇರುತ್ತದೆ. ಆದರೆ, ಈ ಎರಡು ಸಡಗರಗಳ ನಡುವಿನ ವ್ಯತ್ಯಾಸ ಏನೆಂದರೆ, ಆಗಮನದ ಸಡಗರದಲ್ಲಿರದ ಭಾವತೀವ್ರತೆಯೊಂದು ನಿರ್ಗಮನದ ಸಡಗರದಲ್ಲಿರುತ್ತದೆ. ಸಾಮಾನ್ಯವಾಗಿ, ರಮಝಾನ್‍ನ ಆಗಮನದ ಸಮಯದಲ್ಲಿ ಮುಸ್ಲಿಮರು ಹೊಸ ಬಟ್ಟೆ ಧರಿಸುವುದಿಲ್ಲ, ಪರ್ಫ್ಯೂಮ್ ಪೂಸುವುದಿಲ್ಲ. ಬಗೆಬಗೆಯ ಆಹಾರಗಳನ್ನು ತಯಾರಿಸಿ ಖುಷಿ ಪಡುವುದಿಲ್ಲ. ಆದರೆ ನಿರ್ಗಮನದ ಸಮಯದಲ್ಲಿ ಇವೆಲ್ಲವೂ ಇರುತ್ತದೆ. ಆದರೂ ಉಪವಾಸಿಗರು ಭಾವುಕರಾಗುವುದೇಕೆ? ಹೊಸ ಬಟ್ಟೆ, ಪರ್ಫ್ಯೂಮ್, ಆಲಿಂಗನ, ಶುಭಾಶಯ.. ಇವೆಲ್ಲವುಗಳ ಹೊರತಾಗಿಯೂ ಭಾವತೀವ್ರತೆಯೊಂದು ಹರಿದಾಡಲು ಕಾರಣವೇನು? ಬಾಹ್ಯವಾಗಿ ನೋಡುವಾಗ ರಮಝಾನ್‍ನ ಆಗಮನಕ್ಕಿಂತ ಹೆಚ್ಚು ಸಡಗರ ಪಡಬೇಕಾದ ಸಂದರ್ಭ ನಿರ್ಗಮನದ್ದು. ಹೊಸಬಟ್ಟೆ..ಗಳೆಲ್ಲ ಹೇಳುವುದೂ ಅದನ್ನೇ. ಆದರೂ ಇದಕ್ಕೆ ವ್ಯತಿರಿಕ್ತವಾದ ಭಾವುಕ ವಾತಾವರಣವೊಂದು ಉಪವಾಸಿಗರ ನಡುವೆ ಸೃಷ್ಟಿಯಾಗುವುದರ ಒಳಗುಟ್ಟು ಏನಿರಬಹುದು? ಬಹುಶಃ, ರಮಝಾನ್ ಬರೇ ಹಸಿವು, ಬಾಯಾರಿಕೆ, ಸುಸ್ತು, ತೂಕ ಇಳಿತದ ಹೆಸರಷ್ಟೇ ಆಗಿರುತ್ತಿದ್ದರೆ ಅದರ ನಿರ್ಗಮನಕ್ಕೆ ಅತ್ಯಂತ ಸಂತಸಪಡುವವರಲ್ಲಿ ಉಪವಾಸಿಗರು ಮುಂದಿರುತ್ತಿದ್ದರು. ಅಷ್ಟಕ್ಕೂ, ‘ಸಂಕಷ್ಟ' ಕೊಡುವ ಒಂದು ತಿಂಗಳನ್ನು ಇಷ್ಟಪಡುವವರಾದರೂ ಯಾರಿರುತ್ತಾರೆ? ಆದರೆ, ಉಪವಾಸ ಅದರಾಚೆಗಿನ ಕಾರಣಕ್ಕಾಗಿಯೇ ಮುಖ್ಯವಾಗಿರುತ್ತದೆ. ರಮಝಾನ್ ಬರೇ ಒಂದು ತಿಂಗಳಷ್ಟೇ ಅಲ್ಲ, ಅದೊಂದು ಮೌಲ್ಯದ ಹೆಸರು. ಆದ್ದರಿಂದಲೇ ಅದರ ನಿರ್ಗಮನವು ಹೃದಯವನ್ನು ಆರ್ದ್ರಗೊಳಿಸುತ್ತದೆ. ಹೊಸಬಟ್ಟೆ ಧರಿಸಿದ ಉಪವಾಸಿಗನ/ಳ ಕಣ್ಣಂಚನ್ನು ಒದ್ದೆ ಮಾಡುತ್ತದೆ. ನಿಜವಾಗಿ, ಈ ಭಾವುಕತೆ ಈದ್‍ನ ಬಳಿಕವೂ ಉಪವಾಸಿಗರಲ್ಲಿ ವ್ಯಕ್ತಗೊಳ್ಳುತ್ತಿರಬೇಕು. ಸುಳ್ಳು, ಮೋಸ, ಹಿಂಸೆ, ಅಹಂ, ಅನೈತಿಕತೆಯಂತಹ ಸಾಮಾಜಿಕ ವಾತಾವರಣದಲ್ಲಿ ತಾನು ‘ಉಪವಾಸಿ’ ಆಗಬೇಕು. ಅಸಮಾನತೆ ಮತ್ತು ಅಸಹಿಷ್ಣುತೆಯ ಸಮಾಜದಲ್ಲಿ ‘ಉಪವಾಸಿ'ಯು ಪರಿಹಾರ ಆಗಬೇಕು. ‘ರಮಝಾನ್ ಕಲಿಸಿದ ಮೌಲ್ಯದೊಂದಿಗೆ ಎಂದೆಂದೂ ರಾಜಿ ಇಲ್ಲ..' ಎಂಬೊಂದು ಸೂಚನಾ ಫಲಕವನ್ನು ‘ಉಪವಾಸಿ’ ಸದಾ ತನ್ನ ಎದೆಯಲ್ಲಿ ತೂಗು ಹಾಕಿರಬೇಕು. ಇಲ್ಲದಿದ್ದರೆ ಪರಿಹಾರದೊಂದಿಗೆ ಆಗಮಿಸಿದ ರಮಝಾನ್ ದೂರಿನೊಂದಿಗೆ ನಿರ್ಗಮಿಸೀತು. ಹಾಗಾಗದಿರಲಿ.

No comments:

Post a Comment