Wednesday, 22 July 2015

ಇಫ್ತಾರ್ ಪಾರ್ಟಿ ಮತ್ತು ಪ್ರಧಾನಿ ಮೋದಿ

ಪಾರ್ಲಿಮೆಂಟ್ ಭವನದ ಹತ್ತಿರ ಏರ್ಪಡಿಸಲಾದ ಇಫ್ತಾರ್ ಪಾರ್ಟಿಯಲ್ಲಿ ಇಂದ್ರೇಶ್ ಕುಮಾರ್
     ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಆಯೋಜಿಸಿದ ಇಫ್ತಾರ್ ಪಾರ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸದೇ ಇರುವ ಮೂಲಕ ‘ಸೆಕ್ಯುಲರ್' ಚರ್ಚೆಯನ್ನು ಮತ್ತೊಮ್ಮೆ ಚಾಲ್ತಿಗೆ ತಂದಿದ್ದಾರೆ. ಕಳೆದ ವರ್ಷವೂ ಅವರು ರಾಷ್ಟ್ರಪತಿ ಭವನದ ಇಫ್ತಾರ್ ಪಾರ್ಟಿಯಿಂದ ತಪ್ಪಿಸಿಕೊಂಡಿದ್ದರು. ಮೋದಿಯವರ ಈ ನಡೆಯನ್ನು ಆರೆಸ್ಸೆಸ್ ಕೊಂಡಾಡಿದೆ. ತನ್ನ ಮುಖವಾಣಿ ಆರ್ಗನೈಝರ್ ಪತ್ರಿಕೆಯಲ್ಲಿ ‘ದ ಸೆಕ್ಯುಲರ್ ಟೋಕನಿಸಂ' (ಜಾತ್ಯತೀತ ಗುರುತು) ಎಂಬ ಶೀರ್ಷಿಕೆಯಲ್ಲಿ ಈ ಕುರಿತಂತೆ ಅದು ಸಂಪಾದಕೀಯವನ್ನು ಬರೆದಿದೆ. ಆದರೆ, ಇದಾದ ಕೆಲವೇ ದಿನಗಳಲ್ಲಿ ಆರೆಸ್ಸೆಸ್‍ನ ಅಂಗಸಂಸ್ಥೆಯಾದ ಮುಸ್ಲಿಮ್ ರಾಷ್ಟ್ರೀಯ ಮಂಚ್ (ಎಂ.ಆರ್.ಎಂ.) ಒಂದಕ್ಕಿಂತ ಹೆಚ್ಚು ಇಫ್ತಾರ್ ಪಾರ್ಟಿಗಳನ್ನು ಆಯೋಜಿಸಿತು. ದೆಹಲಿಯ ಪಾರ್ಲಿಮೆಂಟ್ ಭವನದ ಹತ್ತಿರ ಏರ್ಪಡಿಸಲಾದ ಇಫ್ತಾರ್ ಪಾರ್ಟಿಯಲ್ಲಿ ಕೇಂದ್ರ ಸಚಿವ ಹರ್ಷವರ್ಧನ್ ಹಾಗೂ ಆರೆಸ್ಸೆಸ್ ಹಿರಿಯ ನಾಯಕ ಮತ್ತು ಎಂ.ಆರ್.ಎಂ.ನ ಸ್ಥಾಪಕ ಇಂದ್ರೇಶ್ ಕುಮಾರ್ ಭಾಗವಹಿಸಿದರು. ಆ ನಂತರ ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ಲಕ್ನೋಗಳಲ್ಲೂ ಎಂ.ಆರ್.ಎಂ. ಇಫ್ತಾರ್ ಪಾರ್ಟಿಯನ್ನು ಏರ್ಪಡಿಸಿತು. ಅದರಲ್ಲಿ ಆರೆಸ್ಸೆಸ್‍ನ ಪ್ರಚಾರಕ್ ಮತ್ತು ಎಂ.ಆರ್.ಎಂ.ನ ರಾಷ್ಟ್ರೀಯ ಸಹಸಂಚಾಲಕ್ ಮಹಿರಾಜ್‍ಧ್ವಜ್ ಸಿಂಗ್ ಭಾಗವಹಿಸಿದರು. ಒಂದು ಕಡೆ, ಇಫ್ತಾರ್ ಪಾರ್ಟಿಯನ್ನು ತಪ್ಪಿಸಿಕೊಂಡ ನರೇಂದ್ರ ಮೋದಿಯವರನ್ನು ಕೊಂಡಾಡುತ್ತಲೇ ಇನ್ನೊಂದು ಕಡೆ, ತನ್ನ ಅಂಗಸಂಸ್ಥೆಯ ಮೂಲಕವೇ ಇಫ್ತಾರ್ ಪಾರ್ಟಿಯನ್ನು ಆಯೋಜಿಸುವುದು ಮತ್ತು ಸ್ವಯಂ ಅದರಲ್ಲಿ ಭಾಗವಹಿಸುವುದು - ಏನಿದರ ಉದ್ದೇಶ? ಇದು ದ್ವಂದ್ವವೋ ತಂತ್ರವೋ? ಎಂ.ಆರ್.ಎಂ. ಆಯೋಜಿಸುವ ಇಫ್ತಾರ್ ಪಾರ್ಟಿಯು ‘ಅಲ್ಪಸಂಖ್ಯಾತೀಕರಣ'ಕ್ಕೆ ಪ್ರೋತ್ಸಾಹ ಅಥವಾ ತುಷ್ಠೀಕರಣ ಆಗುವುದಿಲ್ಲವಾದರೆ ರಾಷ್ಟ್ರಪತಿಯವರ ಇಫ್ತಾರ್ ಕೂಟ ಯಾಕೆ ಹಾಗಾಗಬೇಕು? ಅದರಿಂದ ತಪ್ಪಿಸಿಕೊಂಡ ಪ್ರಧಾನಿಯರನ್ನೇಕೆ ಮೆಚ್ಚಿಕೊಳ್ಳಬೇಕು? ಅಷ್ಟಕ್ಕೂ, ರಾಷ್ಟ್ರಪತಿಯವರು ರಾಜಕಾರಣಿ ಅಲ್ಲವಲ್ಲ. ಅಲ್ಲದೇ, ಇಫ್ತಾರ್‍ನಿಂದ ಅವರು ಪಡಕೊಳ್ಳುವುದಕ್ಕೆ ಏನೇನೂ ಇಲ್ಲ. ನಿಜವಾಗಿ, ಈ ದೇಶದ ಸೆಕ್ಯುಲರ್ ಪರಂಪರೆಯನ್ನು ಎತ್ತಿ ಹಿಡಿಯುವ ತಾಣ ರಾಷ್ಟ್ರಪತಿ ಭವನ. ರಾಜಕಾರಣಿಗಳು ಒಂದೊಮ್ಮೆ ಸಂವಿಧಾನಬಾಹಿರವಾಗಿ ವರ್ತಿಸಬಹುದು. ಅಗ್ಗದ ಜನಪ್ರಿಯತೆಗಾಗಿ ಪರಮ ಸುಳ್ಳನ್ನೂ ಆಡಬಹುದು. ಭ್ರಷ್ಟರು, ಮಾನವ ದ್ವೇಷಿಗಳೂ ಆಗಬಹುದು. ಆದರೆ ರಾಷ್ಟ್ರಪತಿಯವರಿಗೆ ಇಂಥ ದರ್ದು ಇಲ್ಲ. ಅವರು ಜನಪ್ರತಿನಿಧಿ ಅಲ್ಲ, ಜನರ ಓಟಿನ ಹಂಗೂ ಅವರಿಗಿಲ್ಲ. ಆದ್ದರಿಂದಲೇ, ರಾಷ್ಟ್ರಪತಿಯವರು ಆಯೋಜಿಸುವ ಇಫ್ತಾರ್ ಪಾರ್ಟಿಯನ್ನೂ ಮತ್ತು ರಾಜಕೀಯ ಪಕ್ಷವೊಂದು ಆಯೋಜಿಸುವ ಇಫ್ತಾರ್ ಪಾರ್ಟಿಯನ್ನೂ ಬೇರೆ ಬೇರೆಯಾಗಿ ನೋಡಬೇಕಾಗುತ್ತದೆ. ಹಾಗಂತ, ಪ್ರಧಾನಿ ನರೇಂದ್ರ ಮೋದಿಯವರಿಗೆ ಅಥವಾ ಆರೆಸ್ಸೆಸ್‍ಗೆ ಈ ವ್ಯತ್ಯಾಸದ ಅರಿವು ಇಲ್ಲ ಅನ್ನುವುದು ನಮ್ಮ ದಡ್ಡತನವಾಗುತ್ತದೆ. ಬಹುಶಃ, ಅವರು ಇನ್ನಾವುದನ್ನೋ ವಿರೋಧಿಸುತ್ತಿದ್ದಾರೆ. ಎಂ.ಆರ್.ಎಂ. ಆಯೋಜಿಸುತ್ತಿರುವುದು ಇಫ್ತಾರ್ ಪಾರ್ಟಿಗಳನ್ನಲ್ಲ ಎಂದು ನಾವು ಈ ಕಾರಣದಿಂದಲೇ ಹೇಳಬೇಕಾಗುತ್ತದೆ. ಅದು ಇಫ್ತಾರ್ ಪಾರ್ಟಿ ಎಂಬ ಶೀರ್ಷಿಕೆಯಡಿಯಲ್ಲಿ ಆರೆಸ್ಸೆಸ್‍ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮುಸ್ಲಿಮರನ್ನು ಸೆಳೆಯುವುದೇ ಅದರ ಉದ್ದೇಶ. ಆರೆಸ್ಸೆಸ್‍ನ ಬಗ್ಗೆ ಮೃದು ಧೋರಣೆಯನ್ನು ತಳೆಯುವ ಮತ್ತು ಅದರ ಅಜೆಂಡಾಗಳನ್ನು ಸಮರ್ಥಿಸಿ ಮಾತಾಡುವ ಮುಸ್ಲಿಮರನ್ನು ತಯಾರಿಸುವುದಕ್ಕೆ ಅದು ಇಫ್ತಾರ್ ಪಾರ್ಟಿಯನ್ನು ಒಂದು ತಂತ್ರವಾಗಿ ಬಳಸಿಕೊಳ್ಳುತ್ತಿದೆ. ಇದನ್ನು ಅರಿತೇ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ರಾಷ್ಟ್ರಪತಿಯವರ ಇಫ್ತಾರ್‍ನಲ್ಲಿ ಈ ಒಳ ಉದ್ದೇಶಗಳಿಲ್ಲ. ಅದು ನೇರವಾಗಿ ಒಂದು ಧರ್ಮದ ಭಾವನೆಗಳಿಗೆ ಸ್ಪಂದಿಸುವ ಗುಣವನ್ನಷ್ಟೇ ಹೊಂದಿದೆ. ಈ ಸ್ಪಂದನೆ ನರೇಂದ್ರ ಮೋದಿಯವರಿಗೆ ಬೇಕಾಗಿಲ್ಲ. 
    ಸೆಕ್ಯುಲರ್ ಎಂಬ ಪದವನ್ನು ನಿಂದಿಸಿ, ತೆಗಳಿ, ಅಪಹಾಸ್ಯಗೊಳಿಸಿ, ನಜ್ಜುಗುಜ್ಜಾಗಿಸಿದ ಕೀರ್ತಿ ಮೋದಿ ಮತ್ತು ಅವರ ಬೆಂಬಲಿಗರಿಗೆ ಸಲ್ಲಬೇಕು. ಸೆಕ್ಯುಲರ್ ಎಂದು ಗುರುತಿಸಿಕೊಳ್ಳುವುದು ದೇಶದ್ರೋಹವೇನೋ ಎಂದು ಭಯಪಡುವಷ್ಟರ ಮಟ್ಟಿಗೆ ಅವರು ಕಳೆದ ಚುನಾವಣೆಯಲ್ಲೂ ಅದಕ್ಕಿಂತ ಮೊದಲೂ ವರ್ತಿಸಿದರು. ಕಳೆದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ‘ಸೆಕ್ಯುಲರ್' ಪದವಿಲ್ಲದ ಸಂವಿಧಾನದ ಪ್ರತಿಯನ್ನು ಜಾಹೀರಾತಾಗಿ ಪ್ರಕಟಿಸಿದರು. ‘ಸಿಕ್‍ಲರ್, ‘ಲದ್ದಿ'(ಬುದ್ಧಿ)ಜೀವಿಗಳು, ‘ವ್ಯಾಧಿ'ಜೀವಿಗಳು.. ಮುಂತಾದ ವ್ಯಂಗ್ಯಭರಿತ ಪದಗಳ ಮೂಲಕ ಜಾತ್ಯತೀತವಾದಿಗಳನ್ನು ಚುಚ್ಚಿದರು. ವಿಶೇಷ ಏನೆಂದರೆ, ಮುಸ್ಲಿಮರ ಇಫ್ತಾರ್, ಈದ್, ನಮಾಝ್‍ಗಳಲ್ಲಿ ಮುಸ್ಲಿಮೇತರ ರಾಜಕಾರಣಿಗಳು ಭಾಗವಹಿಸಿದರೆ ಅದನ್ನು ಸೋಗಲಾಡಿ ಸೆಕ್ಯುಲರ್‍ತನ ಅನ್ನುವ ಇವರೇ ಮುಸ್ಲಿಮ್ ರಾಜಕಾರಣಿಗಳು ಜಾತ್ರೆ, ಹಬ್ಬ, ಯೋಗಗಳಲ್ಲಿ ಭಾಗವಹಿಸಿದರೆ ಅದನ್ನು ಭಾರತೀಯತೆ ಅನ್ನುತ್ತಾರೆ. ಅದು ‘ಸಿಕ್‍ಲರ್' ಆಗುವುದೂ ಇಲ್ಲ, ಭಾಗವಹಿಸಿದವರು ಸೋಗಲಾಡಿಗಳೂ ಆಗುವುದಿಲ್ಲ. ನಿಜವಾಗಿ, ಭಾರತೀಯರು ಹಿಂದೂ ಮತ್ತು ಮುಸ್ಲಿಮ್ ಆಗಿ ವಿಭಜನೆಗೊಳ್ಳುವ ಸಂದರ್ಭವೊಂದಕ್ಕಾಗಿ ಬಿಜೆಪಿ ಮತ್ತು ಸಂಘಪರಿವಾರವು ವೇದಿಕೆಯನ್ನು ಸಿದ್ಧಪಡಿಸುತ್ತಿದೆ. ಈ ಹಿಂದೆ ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದ ವೇಳೆ ಮೋದಿಯವರು ಮುಸ್ಲಿಮರ ಟೋಪಿಯನ್ನು ಧರಿಸುವುದಕ್ಕೆ ನಿರಾಕರಿಸಿದ್ದರು. ಅಷ್ಟಕ್ಕೂ, ಟೋಪಿ ಧರಿಸುವ ಅಥವಾ ಧರಿಸದೇ ಇರುವ ಸ್ವಾತಂತ್ರ್ಯ ನರೇಂದ್ರ ಮೋದಿಯವರಿಗೆ ಖಂಡಿತ ಇದೆ. ಅವರ ಧಾರ್ಮಿಕ ಭಾವನೆಗೆ ಅದು ಧಕ್ಕೆ ತರುತ್ತದೆ ಎಂದಾದರೆ ಅವರ ನಿರ್ಧಾರವನ್ನು ಗೌರವಿಸಲೇಬೇಕಾಗುತ್ತದೆ. ಆದರೆ ನರೇಂದ್ರ ಮೋದಿಯವರು ಆ ಘಟನೆಯ ಹಿಂದೆ ಮತ್ತು ಆ ಬಳಿಕ ನಡೆದುಕೊಂಡ ರೀತಿಯನ್ನು ಅವಲೋಕಿಸುವಾಗ ಅವರ ಟೋಪಿ ನಿರಾಕರಣೆಯ ಉದ್ದೇಶ ಶುದ್ಧಿಯು ಪ್ರಶ್ನಾರ್ಹಗೊಳ್ಳುತ್ತದೆ. ಅವರು ಆ ಬಳಿಕ ವಿವಿಧ ರಾಜ್ಯಗಳಿಗೆ ಭೇಟಿ ಕೊಟ್ಟಿದ್ದಾರೆ. ಆಗೆಲ್ಲ ಅಲ್ಲಿನ ಟೋಪಿಯನ್ನೋ ಸಾಂಪ್ರದಾಯಿಕ ಬಟ್ಟೆಗಳನ್ನೋ ತೊಟ್ಟಿದ್ದಾರೆ. ಆಗೆಲ್ಲ ಅವರಿಗೆ ಅದು ಸೋಗಲಾಡಿಯಾಗಿ ಕಾಣಿಸಿಲ್ಲ. ಕೇವಲ ಮುಸ್ಲಿಮರಿಗೆ ಸಂಬಂಧಿಸಿದ ಗುರುತುಗಳಲ್ಲಷ್ಟೇ ಅವರು ಸೋಗಲಾಡಿತನವನ್ನು ಕಾಣುತ್ತಿದ್ದಾರೆ. ಒಂದು ರೀತಿಯಲ್ಲಿ, ಮುಸ್ಲಿಮ್ ಐಡೆಂಟಿಟಿಯ ಕುರಿತಂತೆ ಅವರಲ್ಲಿ ತಿರಸ್ಕಾರ ಭಾವವಿದೆ. ಮುಸ್ಲಿಮ್ ಆಚರಣೆಗಳನ್ನು ಅವರು ನೋಡುವ ದೃಷ್ಟಿಕೋನಕ್ಕೂ ಇತರ ಆಚಾರ-ವಿಚಾರಗಳನ್ನು ನೋಡುವ ದೃಷ್ಟಿಕೋನಕ್ಕೂ ಬಹಳ ಅಂತರ ಕಾಣುತ್ತಿದೆ. ಅವರು ಮುಸ್ಲಿಮರೊಂದಿಗೆ ಬೆರೆಯುವುದನ್ನು ಮತ್ತು ಆತ್ಮೀಯತೆ ಪ್ರಕಟಿಸುವುದನ್ನು ಸ್ವಇಚ್ಛೆಯಿಂದಲೇ ತಪ್ಪಿಸಿಕೊಳ್ಳುತ್ತಿದ್ದಾರೆ. ಬಹುಶಃ, ಮುಸ್ಲಿಮರನ್ನು ದೂರ ಇಟ್ಟಷ್ಟೂ ತಾನು ಹಿಂದೂಗಳಿಗೆ ಹತ್ತಿರವಾಗುವೆನೆಂಬ ನಂಬಿಕೆಯೊಂದು ಅವರಲ್ಲಿರಬೇಕು.. ಆದ್ದರಿಂದಲೇ ಅವರು ಯೋಗಿ ಆದಿತ್ಯನಾಥ್, ಸಾಧ್ವಿ ಪ್ರಾಚಿ, ಬಾಲಿಕಾ ಸರಸ್ವತಿ.. ಮುಂತಾದವರನ್ನು ಸಹಿಸಿಕೊಂಡಿರುವುದು. ಇವರೆಲ್ಲ ಮಾತಾಡಿದಷ್ಟೂ ತನ್ನ ವರ್ಚಸ್ಸು ವೃದ್ಧಿಯಾಗುತ್ತದೆಂದು ಅವರು ಭಾವಿಸಿರಬೇಕು. 
     ಏನೇ ಆಗಲಿ, ರಾಷ್ಟ್ರಪತಿಯವರ ಇಫ್ತಾರ್ ಕೂಟಕ್ಕೆ ಹಾಜರಾಗದ ಪ್ರಧಾನಿಯವರನ್ನು ಮೆಚ್ಚಿಕೊಳ್ಳುವ ಆರೆಸ್ಸೆಸ್ ಇನ್ನೊಂದೆಡೆ ತನ್ನದೇ ಅಂಗಸಂಸ್ಥೆಯಾದ ಮುಸ್ಲಿಮ್ ರಾಷ್ಟ್ರೀಯ ಮಂಚ್‍ನ ಮೂಲಕ ಇಫ್ತಾರ್ ಪಾರ್ಟಿಯನ್ನು ಏರ್ಪಡಿಸಿದ್ದು ಮತ್ತು ಅದರಲ್ಲಿ ಸ್ವಯಂ ಭಾಗವಹಿಸಿದ್ದನ್ನು ನಾವು ಬರೇ ದ್ವಂದ್ವವಾಗಿಯಷ್ಟೇ ಕಾಣಬೇಕಿಲ್ಲ. ಒಂದು ವೇಳೆ ಅದು ದ್ವಂದ್ವ ಎಂದಾದರೆ ಅದು ಪೂರ್ಣವಾಗಿ ಅರಿವಿದ್ದೇ ಮಾಡಿದ ದ್ವಂದ್ವ. ಅದರ ಹಿಂದೆ ದುರುದ್ದೇಶವಿದೆ. ನರೇಂದ್ರ ಮೋದಿಯವರು ಆ ದುರುದ್ದೇಶದ ಒಂದು ತುದಿಯಾದರೆ ಇನ್ನೊಂದು ತುದಿ ಮುಸ್ಲಿಮ್ ರಾಷ್ಟ್ರೀಯ ಮಂಚ್. ಆಂತರಿಕವಾಗಿ ಅವರಿಬ್ಬರ ಮಧ್ಯೆ ಯಾವ ದ್ವಂದ್ವವೂ ಇಲ್ಲ. ಅವರಿಬ್ಬರೂ ಒಂದು ಯೋಜಿತ ಅಜೆಂಡಾದ ಪಾತ್ರಧಾರಿಗಳಷ್ಟೇ. 


No comments:

Post a Comment