Friday 28 August 2015

ನಮ್ಮ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸುತ್ತಿರುವ ಕಪ್ಪು ಕತ್ತಿನ ಕೊಕ್ಕರೆ

     ಪರಿಸರ ಸಂರಕ್ಷಣೆ, ಪರಿಸರ ಹೋರಾಟಗಾರರು, ಪರಿಸರ ಇಲಾಖೆ.. ಮುಂತಾದುವುಗಳೆಲ್ಲ ಇವತ್ತು ಈ ದೇಶದಲ್ಲಿ ಯಾವ ಬಗೆಯ ತಿರಸ್ಕಾರಕ್ಕೆ ಈಡಾಗಿದೆಯೆಂಬುದು ಎಲ್ಲರಿಗೂ ಗೊತ್ತು. ಮೇಧಾ ಪಾಟ್ಕರ್, ವಿನಯಕುಮಾರ್, ಪದ್ಮನಾಭನ್, ಗೋಪಾಲ್ ದುಕಾಂಡೆ, ದೇಸರದ.. ಮುಂತಾದವರೆಲ್ಲ ಇವತ್ತು ಈ ದೇಶದಲ್ಲಿ ತಲೆ ತಪ್ಪಿಸಿಕೊಂಡು ಓಡಾಡಬೇಕಾದಂತಹ ಸ್ಥಿತಿಯಿದೆ. ಅವರನ್ನು ದೇಶದ್ರೋಹಿ ಎನ್ನಲಾಗುತ್ತಿದೆ. ಅಭಿವೃದ್ಧಿ ವಿರೋಧಿಗಳೆಂದು ಬಿಂಬಿಸಲಾಗುತ್ತಿದೆ. ‘ಬೃಹತ್ ಯೋಜನೆಗಳ ಹೊರತು ಅಭಿವೃದ್ಧಿ ಸಾಧ್ಯವಿಲ್ಲ..’ ಎಂಬೊಂದು ಪ್ರಚಾರದ ಮಧ್ಯೆ ಸಾಮಾಜಿಕ ಹೋರಾಟಗಾರರು, ಪರಿಸರ ಸ್ನೇಹಿಗಳೆಲ್ಲ ವಿಲನ್‍ಗಳಾಗಿ ಚಿತ್ರಿತರಾಗುತ್ತಿದ್ದಾರೆ. ಇಂಥದ್ದೊಂದು ಸ್ಥಿತಿಯಲ್ಲಿ, ವಿರಳ ಜಾತಿಯ ಹಲ್ಲಿ ಮತ್ತು ಹಾವುಗಳು ವಿಶ್ವದಲ್ಲಿಯೇ ಅತಿ ದೊಡ್ಡದಾದ ಅಭಿವೃದ್ಧಿ ಯೋಜನೆಯೊಂದನ್ನು ತಡೆದ ಸುದ್ದಿಯು ಹೊರಬಿದ್ದಿದೆ. ಇದು ಸಾಧ್ಯವಾದುದು ಆಸ್ಟ್ರೇಲಿಯಾದಲ್ಲಿ. 16.5 ಬಿಲಿಯನ್ ಡಾಲರ್ ಮೊತ್ತದ ಬೃಹತ್ ಕಲ್ಲಿದ್ದಲು ಗಣಿಗಾರಿಕೆಯನ್ನು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‍ನಲ್ಲಿ ಪ್ರಾರಂಭಿಸಲು ಭಾರತದ ಅದಾನಿಯವರು ಮುಂದಾಗಿದ್ದರು. ಎರಡ್ಮೂರು ವರ್ಷಗಳ ಮೊದಲೇ ಅವರು ಈ ಯೋಜನೆಗಾಗಿ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆಸ್ಟ್ರೇಲಿಯಾದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡಕ್ಕೂ ‘ಪಾರ್ಟಿ ಫಂಡ್' ಅನ್ನೂ ನೀಡಿದ್ದರು. ಮಾತ್ರವಲ್ಲ, ಅವರು ನಿರೀಕ್ಷಿಸಿದಂತೆಯೇ ಸರಕಾರ ಅನುಮತಿಯನ್ನೂ ನೀಡಿತ್ತು. ಆದರೆ ಅಲ್ಲಿನ ನ್ಯಾಯಾಲಯ ಇದೀಗ ಸರಕಾರದ ಈ ಅನುಮತಿಯನ್ನು ರದ್ದುಪಡಿಸಿದೆ. ‘ಈ ಯೋಜನೆಯಿಂದಾಗಿ ಕ್ವೀನ್ಸ್ ಲ್ಯಾಂಡ್‍ನಲ್ಲಿರುವ ಅಪರೂಪದ ಹಲ್ಲಿ ಮತ್ತು ಹಾವುಗಳ ಪ್ರಬೇಧಗಳು ನಾಶವಾಗುವ ಸಾಧ್ಯತೆಯಿದ್ದು, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಯೋಜನೆ ಸೂಕ್ತವಲ್ಲ’ ಎಂದು ಅದು ಅಭಿಪ್ರಾಯಪಟ್ಟಿದೆ. ವಿಶೇಷ ಏನೆಂದರೆ, ಹಾವು, ಹಲ್ಲಿ, ಪಾರಿವಾಳ, ಜಿಂಕೆಗಳೆಲ್ಲ ಬರೇ ಆಸ್ಟ್ರೇಲಿಯಾದಲ್ಲಿ ಮಾತ್ರ ಇರುವುದಲ್ಲ. ಜಗತ್ತಿನೆಲ್ಲೆಡೆ ಇದೆ. ಭಾರತದ ಅರುಣಾಚಲ ಪ್ರದೇಶದಲ್ಲೂ ಇಂಥದ್ದೇ ಒಂದು ವಾತಾವರಣ ಇದೆ. ಝೆುಮಿತಾಂಗ್ ಎಂಬಲ್ಲಿ 780 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಯೋಜನೆಯೊಂದನ್ನು ಸರಕಾರ ಹಮ್ಮಿಕೊಂಡಿದೆ. ತ್ಯಾಮ್‍ಜಂಗ್ ಚ್ಚು ಅಣೆಕಟ್ಟಿನ ಮೂಲಕ ಈ ವಿದ್ಯುತ್ ಅನ್ನು ಉತ್ಪಾದಿಸುವ ಗುರಿ ಸರಕಾರದ್ದಾದರೆ, ಪುಟ್ಟ ಕೊಕ್ಕರೆಗಳು ಇದನ್ನು ಪ್ರಶ್ನಿಸುತ್ತಿವೆ. ಚೀನಾ, ಭೂತಾನ್ ಮತ್ತು ಅರುಣಾಚಲ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಕಪ್ಪು ಕತ್ತಿನ ಅಪರೂಪದ ಕೊಕ್ಕರೆಗಳು ಇವು. ಚಳಿಗಾಲದಲ್ಲಿ ಹೆಚ್ಚಾಗಿ ಅವು ಈ ಪ್ರದೇಶದಲ್ಲಿ ಠಿಕಾಣಿ ಹೂಡುತ್ತವೆ. ಒಂದು ವೇಳೆ, ಈ ಅಣೆಕಟ್ಟು ನಿರ್ಮಾಣಗೊಂಡರೆ ಕೊಕ್ಕರೆ ತನ್ನ ಅಸ್ತಿತ್ವವನ್ನು ಕಳಕೊಳ್ಳಬೇಕಾಗುತ್ತದೆ. ಅಷ್ಟಕ್ಕೂ, ಇದು ಕೇವಲ ಕೊಕ್ಕರೆಯ ಪ್ರಶ್ನೆಯಲ್ಲ. ಒಂದು ಜೀವಿಯ ಅಸ್ತಿತ್ವದ ಪ್ರಶ್ನೆ. ಮನುಷ್ಯರಂತೆ ಮಾತಾಡುವ, ಬಂದೂಕು ಎತ್ತುವ ಅಥವಾ ಪ್ರತಿಭಟನೆ ಹಮ್ಮಿಕೊಳ್ಳುವ ಸಾಮರ್ಥ್ಯ ಇಲ್ಲ ಎಂಬ ಏಕೈಕ ಕಾರಣಕ್ಕಾಗಿ ಒಂದು ಪಕ್ಷಿಯ ಜೀವಿಸುವ ಹಕ್ಕನ್ನು ಕಬಳಿಸುವ ಸ್ವಾತಂತ್ರ್ಯ ಮನುಷ್ಯರಿಗಿದೆಯೇ? ಅಣೆಕಟ್ಟು ಮನುಷ್ಯರ ಅಗತ್ಯ. ವಿದ್ಯುತ್ತೂ ಮನುಷ್ಯರದ್ದೇ ಬೇಡಿಕೆ. ಹೀಗೆ ಬರೇ ಮನುಷ್ಯರ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಕಾಲ ಕಾಲಗಳಿಂದ ವಾಸಿಸುತ್ತಿರುವ ಕೊಕ್ಕರೆಯ ಮನೆಯನ್ನು ನಾಶಪಡಿಸುವುದು ನೈತಿಕವೇ? ವಿದ್ಯುತ್ ಅನ್ನು ಕೊಕ್ಕರೆ ಉಪಯೋಗಿಸುವುದಿಲ್ಲ. ಪಕ್ಷಿಗಳು ನೀರಿಗಾಗಿ ಅಣೆಕಟ್ಟನ್ನು ಆಶ್ರಯಿಸುತ್ತಲೂ ಇಲ್ಲ. ಅವು ತಮ್ಮ ಪಾಡಿಗೆ ಮನುಷ್ಯರಿಂದ ದೂರ ಇದ್ದುಕೊಂಡು ಬದುಕುತ್ತವೆ. ಮನುಷ್ಯ ಮಾತ್ರ ತನ್ನ ಬದುಕನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಅವುಗಳ ಬದುಕನ್ನು ನಾಶ ಮಾಡುತ್ತಾನೆ. ಪ್ರತಿಭಟಿಸುವ ಸಾಮರ್ಥ್ಯ ಇಲ್ಲದ ಅವು ಕ್ರಮೇಣ ಕಣ್ಮರೆಯಾಗುತ್ತವೆ. ಅಷ್ಟಕ್ಕೂ, ಅಭಿವೃದ್ಧಿಯ ಬೆನ್ನು ಹತ್ತಿರುವ ವ್ಯವಸ್ಥೆಯು ಈ ಕಣ್ಮರೆಯನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಅಭಿವೃದ್ಧಿಯ ಹೆಸರಲ್ಲಿ ಮನುಷ್ಯರನ್ನೇ ನಿರ್ಗತಿಕರನ್ನಾಗಿಸಲು ಹಿಂಜರಿಯದ ವ್ಯವಸ್ಥೆಯಲ್ಲಿ ಮನುಷ್ಯರೆದುರು ಏನೇನೂ ಅಲ್ಲದ ಪಕ್ಷಿಗಳು ಪ್ರಾಮುಖ್ಯತೆ ಪಡಕೊಳ್ಳುವುದಾದರೂ ಹೇಗೆ? ಅಧಿಕಾರದ ಬದಲಾವಣೆಯಲ್ಲಿ ಕೊಕ್ಕರೆಗಳ ಪಾತ್ರ ಶೂನ್ಯ. ಅವು ಓಟು ಹಾಕಲ್ಲ. ಧರಣಿ ಕೂರಲ್ಲ. ಪ್ರತಿಭಟಿಸಲ್ಲ. ಹೀಗಿರುವಾಗ ತ್ಯಾಮ್‍ಜಂಗ್ ಚ್ಚು ಅಣೆಕಟ್ಟಿನ ಕುರಿತಾದ ಅವುಗಳ ಕಳವಳ ವ್ಯವಸ್ಥೆಗೆ ಅರ್ಥವಾಗುವುದು ಹೇಗೆ?
 ಅಭಿವೃದ್ಧಿಯ ಕುರಿತಂತೆ ನಮ್ಮಲ್ಲೊಂದು ಭ್ರಮೆಯಿದೆ. ಈ ಭ್ರಮೆ ಎಷ್ಟು ಅತಿರೇಕ ಮಟ್ಟದಲ್ಲಿ ಇದೆಯೆಂದರೆ, ಇದರ ಕುರಿತು ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವವರೆಲ್ಲ ದೇಶದ್ರೋಹಿಗಳು ಎಂಬಷ್ಟು. ನರ್ಮದಾ ಯೋಜನೆಯಿಂದಾಗಿ ಮುಳುಗುವ ಪ್ರದೇಶಗಳು, ನಿರ್ಗತಿಕರಾಗುವ ಮನುಷ್ಯರು, ಗದ್ದೆಗಳು, ಅರಣ್ಯಗಳು ಮತ್ತು ಪ್ರಾಣಿ-ಪಕ್ಷಿಗಳ ಕುರಿತಂತೆ ದನಿಯೆತ್ತಿದ ಮೇಧಾ ಪಾಟ್ಕರ್ ಇವತ್ತು ಗೊಂದಲಕಾರಿ ಎಂಬ ಹಣೆಪಟ್ಟಿಯೊಂದಿಗೆ ಓಡಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ನಿರ್ಮಾಣವಾಗುತ್ತಿರುವ ಕುಡಂಕುಲಮ್ ಅಣುಸ್ಥಾವರವು ಪರಿಸರ ಮತ್ತು ನಾಗರಿಕರ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುತ್ತಿದ್ದ ವಿನಯಕುಮಾರ್ ಇವತ್ತು ‘ದೇಶದ್ರೋಹಿ' ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಜೈತಾಪುರ್ ಅಣುಸ್ಥಾವರವನ್ನು ವಿರೋಧಿಸುತ್ತಿರುವ ಪದ್ಮನಾಭನ್, ಗೋಪಾಲ್ ದುಕಾಂಡೆ ಇವತ್ತು ವ್ಯವಸ್ಥೆ ದಾಖಲಿಸಿದ ವಿವಿಧ ಕೇಸುಗಳಿಗಾಗಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಅರುಂಧತಿ ರಾಯ್ ಕೂಡ ಈ ಪಟ್ಟಿಯಿಂದ ಹೊರತಾಗಿಲ್ಲ. ಅಂದಹಾಗೆ, ‘ಬೃಹತ್ ಉದ್ಯಮಗಳಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂಬ ಪ್ರಚಾರವೊಂದು ನಮ್ಮ ನಡುವೆಯಿದೆ. ಈ ಪ್ರಚಾರ ಎಷ್ಟು ಪ್ರಬಲವಾಗಿದೆಯೆಂದರೆ, ಆ ‘ಅಭಿವೃದ್ಧಿ'ಗಾಗಿ ರೈತನಲ್ಲಿ ಕೇಳದೆಯೇ ಆತನ ಭೂಮಿಯನ್ನು ವಶಪಡಿಸಬಹುದು (ಭೂ ಮಸೂದೆ) ಎಂದು 65% ರೈತರೇ ಇರುವ ದೇಶವೊಂದರ ಸರಕಾರವೇ ವಾದಿಸುತ್ತಿದೆ. ಅದಕ್ಕಾಗಿ ಕಾನೂನನ್ನು ರಚಿಸಲೂ ಪ್ರಯತ್ನಿಸುತ್ತಿದೆ. ಉದ್ಯಮಿಗಳಿಗೆ ಜುಜುಬಿ ಮೊತ್ತಕ್ಕೆ ಭೂಮಿಯನ್ನು ಕೊಡುತ್ತಿದೆ. ನೀರು, ವಿದ್ಯುತ್, ಸಾಲ, ತೆರಿಗೆ ಮನ್ನಾ ಮುಂತಾದ ಸೌಲಭ್ಯಗಳನ್ನು ತರಾತುರಿಯಿಂದ ನೀಡುತ್ತಿದೆ. ಹೀಗೆ ಕಾಂಕ್ರೀಟು ನಾಡನ್ನು ಕಟ್ಟುವ ಧಾವಂತ ನಮ್ಮದು. ಕಬ್ಬಿಣ, ಸಿಮೆಂಟು,  ಹೊೈಗೆ, ಜಲ್ಲಿಕಲ್ಲು.. ಮುಂತಾದುವುಗಳೇ ಸದ್ದು ಮಾಡುವ ಜಗತ್ತು. 24 ತಾಸು ವಿದ್ಯುತ್, 24 ತಾಸು ನೀರು, ಗ್ಯಾಸು, ನ್ಯೂಸುಗಳ ಆರಾಮದಾಯಕ ಜಗತ್ತನ್ನು ಕಟ್ಟುವ ಓಟದಲ್ಲಿ ನಾವಿದ್ದೇವೆ. ಈ ಓಟದ ಹಾದಿಯಲ್ಲಿ ನಾವು ಕಾಡು, ನದಿ, ಗದ್ದೆ, ಪ್ರಾಣಿ, ಪಕ್ಷಿ ಮತ್ತು ಕೆಲವೊಮ್ಮೆ ಮನುಷ್ಯರನ್ನೇ ತಡೆಯೆಂದು ಭಾವಿಸುತ್ತೇವೆ. ಈ ತಡೆಯನ್ನು ದಾಟುವುದಕ್ಕಾಗಿ ರೋಮಾಂಚನಕಾರಿ ಕತೆಗಳನ್ನು ಕಟ್ಟುತ್ತೇವೆ. ಆ ಕತೆಗಳ ತುಂಬ ದೇಶಪ್ರೇಮ ಇರುತ್ತದೆ. ಸಂತಸದಿಂದ ತುಂಬಿ ತುಳುಕುತ್ತಿರುವ ಜನಸಮೂಹವಿರುತ್ತದೆ. ಎಲ್ಲ ಸೌಲಭ್ಯಗಳೂ 24 ತಾಸೂ ಲಭ್ಯವಿರುವ ಅಭಿವೃದ್ಧಿಯಿರುತ್ತದೆ. ಇದನ್ನು ತಡೆಯುವ ಪಾತ್ರಧಾರಿಗಳಾಗಿ ಅರುಂಧತಿ, ಮೇಧಾ, ವಿನಯ್, ಗೋಪಾಲ್ ಕಾಣಿಸಿಕೊಳ್ಳುತ್ತಾರೆ. ಇವರನ್ನು ದೇಶದ್ರೋಹಿಗಳು ಎನ್ನಲಾಗುತ್ತದೆ. ಇವರ ವಿರುದ್ಧ ಮೊಕದ್ದಮೆಯನ್ನು ಹೂಡಲಾಗುತ್ತದೆ.
 ನಿಜವಾಗಿ, ಅದಾನಿಯ ವಿರುದ್ಧ ಆಸ್ಟ್ರೇಲಿಯಾದಲ್ಲಿ ಯಕಶ್ಚಿತ್ ಪುಟ್ಟ ಹಲ್ಲಿಗಳು ಸಾಧಿಸಿದ ವಿಜಯವು ನಮ್ಮ ಅಭಿವೃದ್ಧಿ (ಆDevelopment) ಕಲ್ಪನೆಯ ಸುತ್ತ ಮರು ಚರ್ಚೆಯೊಂದನ್ನು ಹುಟ್ಟು ಹಾಕಬೇಕಿದೆ. ‘ಬೃಹತ್ ಯೋಜನೆಗಳು ಎಲ್ಲಿಯ ವರೆಗೆ, ಯಾಕೆ ಮತ್ತು ಹೇಗೆ..’ ಎಂಬ ಗಂಭೀರ ಚಿಂತನೆಗೆ ಸಮಾಜ ತನ್ನನ್ನು ತೆರೆದುಕೊಳ್ಳಲು ಈ ಪ್ರಕರಣವನ್ನು ಕಾರಣವಾಗಿ ಬಳಸಿಕೊಳ್ಳಬೇಕಿದೆ. ಆಸ್ಟ್ರೇಲಿಯಾದ ಹಲ್ಲಿಯಂತೆ ಭಾರತದ ಕೊಕ್ಕರೆಗೂ ಜೀವಿಸುವ ಹಕ್ಕಿದೆ, ಅದು ಸದಾ ಇರಲಿ. ಅದರ 'ಮನೆ' ಯಾರ ಪಾಲೂ ಆಗದಿರಲಿ.

Thursday 20 August 2015

ದೇವಮಾನವರ ನಡುವೆ ರಾಧೆ ಮಾ ಎಂಬ ದೇವ

    ಮನುಷ್ಯ ದೇವನಾಗಲು ಸಾಧ್ಯವಿಲ್ಲ ಎಂಬುದು ರಾಧೆ ಮಾ ಮೂಲಕ ಮತ್ತೊಮ್ಮೆ ಸಾಬೀತುಗೊಂಡಿದೆ. ನಿಜವಾಗಿ, ದೇವರಾಗಲು ಹೊರಟು ವಿಫಲರಾದ ಮನುಷ್ಯರ ಪಟ್ಟಿಯಲ್ಲಿ ರಾಧೆ ಮಾರ ಹೆಸರು ಮೊದಲಿನದ್ದೇನೂ ಅಲ್ಲ. ಕೊನೆಯದ್ದಾಗುವ ಸಾಧ್ಯತೆಯೂ ಇಲ್ಲ. ಈ ಹಿಂದೆ ಪುಟ್ಟಪರ್ತಿಯ ಸಾಯಿಬಾಬ ಅವರು ದೇವನ ಜಿಜ್ಞಾಸೆಯೊಂದನ್ನು ಹುಟ್ಟುಹಾಕಿದ್ದರು. ಅವರು ಜೀವಂತ ಇದ್ದಾಗ ಅನೇಕರ ಪಾಲಿಗೆ ದೇವರಾಗಿದ್ದರು. ಅವರ ವ್ಯಕ್ತಿತ್ವ, ಸಮಾಜ ಸೇವೆ, ಪವಾಡವನ್ನು ನೋಡಿದ ಇಲ್ಲವೇ ಆಲಿಸಿದ ಮಂದಿ ಸಾಯಿಬಾಬ ಮನುಷ್ಯರಲ್ಲ ಎಂದು ತೀರ್ಮಾನಿಸಿದರು. ಅವರ ಫೆÇೀಟೋ ಇಟ್ಟು ಪೂಜಿಸತೊಡಗಿದರು. ಆದರೆ ಅವರು ಯಾವಾಗ ಅನಾರೋಗ್ಯಪೀಡಿತರಾದರೋ ಅದೇ ಜನ ಆಸ್ಪತ್ರೆಯ ಹೊರಗೆ ನಿಂತು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸತೊಡಗಿದರು. ಒಂದು ರೀತಿಯಲ್ಲಿ, ಜೀವಂತವಿದ್ದಾಗ ಅವರ ಸುತ್ತ ಯಾವೆಲ್ಲ ಭ್ರಮೆಗಳು ಹರಡಿಕೊಂಡಿದ್ದುವೋ ಅವೆಲ್ಲವೂ ಆಸ್ಪತ್ರೆಯ ತುರ್ತು ನಿಗಾ ಕೋಣೆಯಲ್ಲಿ ಅವರು ಉಸಿರಾಟಕ್ಕೆ ಸಂಕಟಪಡುತ್ತಿದ್ದಾಗಲೇ ಬಹುತೇಕ ಕಳಚಿ ಬಿದ್ದಿದ್ದುವು. ಹಾಗೆಯೇ ಆಸ್ಪತ್ರೆಯ ಹೊರಗೆ ನಿಂತು ದೇವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದ ಭಕ್ತರ ದೃಶ್ಯವು ‘ಮನುಷ್ಯ ದೇವನಾಗಲು ಸಾಧ್ಯವಿಲ್ಲ' ಎಂದು ನಂಬಿಕೊಂಡವರನ್ನು ಅಪಾರ ಜಿಜ್ಞಾಸೆಗೆ ಒಳಪಡಿಸಿತ್ತು. ಕಾಯಿಲೆಯನ್ನು ಗುಣಪಡಿಸಬೇಕಾದವರೇ ಕಾಯಿಲೆಪೀಡಿತರಾಗಿ ಆಸ್ಪತ್ರೆ ಸೇರುವುದಾದರೆ ಅವರು ದೇವರಾಗುವುದಾದರೂ ಹೇಗೆ? 85 ವರ್ಷದ ಸಾಮಾನ್ಯ ವ್ಯಕ್ತಿಗೆ ಬಾಧಿಸುವ ಸಹಜ ಕಾಯಿಲೆಗಳು ಬಾಬಾರನ್ನೂ ಆಕ್ರಮಿಸಿದ್ದುವು. ಕೊನೆಗೆ ಬಾಬಾ ಸಾವಿಗೀಡಾದಾಗ ಅವರ ಬಗ್ಗೆ ಇದ್ದ ದೇವ ಕಲ್ಪನೆಯ ಪ್ರಭಾವಳಿ ಇನ್ನಷ್ಟು ಚಿಕ್ಕದಾಯಿತು. 2011ರಲ್ಲಿ ಸಾಯಿಬಾಬ ಬಿಟ್ಟು ಹೋದ ಈ ದೇವ ಪ್ರಶ್ನೆಯನ್ನು ರಾಧೆ ಮಾ ಮತ್ತೆ ಜೀವಂತಗೊಳಿಸಿದ್ದಾರೆ. 8 ವರ್ಷದವಳಿದ್ದಾಗಲೇ ತಾಯಿಯನ್ನು ಕಳಕೊಂಡ, 10ನೇ ತರಗತಿ ವರೆಗೆ ಓದಿದ ಮತ್ತು 18 ವರ್ಷದಲ್ಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ ಸುಖ್ವಿಂದರ್ ಕೌರ್ ಆ ಬಳಿಕ ರಾಧೆ ಮಾ ಆದರು. ಸಿನಿಮಾ ನಿರ್ದೇಶಕ ಸುಭಾಷ್ ಘಾಯ್, ಬಿಜೆಪಿ ಸಂಸದ ಮನೋಜ್ ತಿವಾರಿ, ಪ್ರಹ್ಲಾದ್ ಕಕ್ಕರ್ ಸೇರಿದಂತೆ ದೊಡ್ಡದೊಂದು ಭಕ್ತಗಣವನ್ನು ಸಂಪಾದಿಸಿದರು. ಮುಂಬೈಯ ಪ್ರಸಿದ್ಧ ಜಾಹೀರಾತು ನಿರ್ವಾಹಕ ಸಂಜೀವ್ ಗುಪ್ತಾರು ಮುಂಬೈ ಉದ್ದಕ್ಕೂ ರಾಧೆ ಮಾರ ಬೃಹತ್ ಕಟೌಟ್‍ಗಳನ್ನು ನಿಲ್ಲಿಸಿದರು. ಬಂಗಲೆಯನ್ನು ನಿರ್ಮಿಸಿಕೊಟ್ಟರು. ತನ್ನ ಎಡಗೈಗೆ ಮಾರ ಟ್ಯಾಟೂವನ್ನು ಹಾಕಿಸಿಕೊಂಡರು. ಹೀಗೆ ರಾಧೆ ಮಾ ದೇವರಾಗುತ್ತಾ ಬೆಳೆದರು. ಇತ್ತೀಚೆಗೆ ತನ್ನ ಸಂದರ್ಶನ ನಡೆಸುತ್ತಿದ್ದಾಗಲೇ ಸಂದರ್ಶಕನನ್ನು ಅವರು ಚುಂಬಿಸಿದ್ದು ಸುದ್ದಿಯಾಗಿತ್ತು. ಅಷ್ಟಕ್ಕೂ, ರಾಧೆ ಮಾರ ಆಶೀರ್ವಾದದ ವಿಧಾನವೇ ಆಲಿಂಗನ ಮತ್ತು ಚುಂಬನ. ಇದೀಗ ಈ ದೇವರು ವಿವಿಧ ಆರೋಪಗಳನ್ನು ಎದುರಿಸುತ್ತಿದ್ದಾರೆ. ವರದಕ್ಷಿಣೆ ಹಿಂಸೆ, ರೈತರನ್ನು ಆತ್ಮಹತ್ಯೆಗೆ ಪ್ರಚೋದನೆ, ಭಕ್ತರಿಗೆ ವಂಚನೆ ಸಹಿತ ಹಲವಾರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದೀಗ ರಾಧೆ ಮಾರು ತನ್ನ ಭಕ್ತರ ಮುಂದೆ ಕೆಲವು ಪ್ರಶ್ನೆಗಳೊಂದಿಗೆ ಹಾಜರಾಗಿದ್ದಾರೆ. ದೇವ ಮತ್ತು ಮನುಷ್ಯರ ನಡುವಿನ ವ್ಯತ್ಯಾಸಗಳೇನು? ತಿನ್ನುವ, ಕುಡಿಯುವ, ಅನಾರೋಗ್ಯಕ್ಕೆ ಒಳಗಾಗುವ, ನಿದ್ದೆ ಮಾಡುವ, ಪತಿ ಮತ್ತು ಮಕ್ಕಳನ್ನು ಹೊಂದುವ, ಸಾಯುವ.. ಹೀಗೆ ಒಂದು ಮಿತಿಯೊಳಗೆ ಬದುಕುವ ಮನುಷ್ಯನಿಗೂ ದೇವನಿಗೂ ಇರಬೇಕಾದ ಅಂತರಗಳೇನು? ದೇವನು ಈ ಕ್ರಿಯೆಗೆ ಅತೀತನಲ್ಲವೇ? ಮನುಷ್ಯನಿಗಿರುವಂತಹ ದೌರ್ಬಲ್ಯಗಳು ದೇವನಿಗೂ ಇರುವುದಾದರೆ ದೇವ ಯಾಕಿರಬೇಕು? ನಿದ್ದೆಯಿಲ್ಲದ, ಮಕ್ಕಳು, ಕುಟುಂಬ ಇಲ್ಲದ, ತಿನ್ನದ, ಬದುಕಿಸುವ ಮತ್ತು ಸಾಯಿಸುವ ಸಾಮರ್ಥ್ಯ ಇರುವ ಕಾಲಜ್ಞಾನಿಯಾಗಿರಬೇಡವೇ ದೇವ? ರಾಧೆ ಮಾರ ಮೂಲಕ ಈ ಪ್ರಶ್ನೆಯನ್ನು ನಾವು ಗಂಭೀರ ಚರ್ಚೆಗೆ ಎತ್ತಿಕೊಳ್ಳಬೇಕಾಗಿದೆ.
  
 
ನಿಜವಾಗಿ, ಭ್ರಷ್ಟ ರಾಜಕಾರಣಿಗಳು ಈ ಸಮಾಜದ ಪಾಲಿಗೆ ಎಷ್ಟು ಅಪಾಯಕಾರಿಗಳೋ ಅದಕ್ಕಿಂತಲೂ ಮನುಷ್ಯ ದೇವರುಗಳು ಹೆಚ್ಚು ಅಪಾಯಕಾರಿಗಳಾಗಿದ್ದಾರೆ. ರಾಜಕಾರಣಿಗಳನ್ನು ಭ್ರಷ್ಟರು ಎಂದು ಕರೆಯುವುದಕ್ಕೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಒಂದು ಹಂತದವರೆಗೆ ಸ್ವಾತಂತ್ರ್ಯ ಇದೆ. ಭ್ರಷ್ಟರನ್ನು ವೇದಿಕೆಯಲ್ಲಿ ನಿಂತು ಟೀಕಿಸುವುದಕ್ಕೂ ಇಲ್ಲಿ ಅವಕಾಶ ಇದೆ. ಆದರೆ ಮನುಷ್ಯ ದೇವರುಗಳು ಹಾಗಲ್ಲ. ಅವರು ತಮ್ಮ ಸುತ್ತ ಒಂದು ಪ್ರಭಾವಳಿಯನ್ನು ಬೆಳೆಸಿಕೊಂಡಿರುತ್ತಾರೆ. ಪ್ರಶ್ನಿಸದೇ ಒಪ್ಪಿಕೊಳ್ಳುವಂತಹ ಮುಗ್ಧ ಭಕ್ತ ಸಮೂಹವನ್ನು ಸೃಷ್ಟಿಸಿರುತ್ತಾರೆ. ಆದ್ದರಿಂದಲೇ, ಕೆಲವರಿಗೆ ದೇವರಾಗಲು ವಿಪರೀತ ಆಸಕ್ತಿಯಿರುವುದು. ರಾಜಕಾರಣಿಗಳನ್ನೂ ಕಾಲಬುಡಕ್ಕೆ ಬರುವಂತೆ ಮಾಡುವ ಸಾಮಥ್ರ್ಯವಿರುವುದು ಮನುಷ್ಯ ದೇವರುಗಳಿಗೆ ಮಾತ್ರ. ಹಾಗಂತ, ಇವರಿಗೆ ನಿರ್ದಿಷ್ಟ ಧರ್ಮದ ಚೌಕಟ್ಟನ್ನು ನಾವು ಹಾಕಬೇಕಿಲ್ಲ. ಎಲ್ಲ ಧರ್ಮಗಳಲ್ಲೂ ದೇವ ಮಾನವರಾಗಲು ತವಕಿಸುವ ಮಂದಿ ಇದ್ದಾರೆ. ಕಾಯಿಲೆ ಪೀಡಿತ ಭಕ್ತರಿಗೆ ತಾಯಿತ, ನೂಲು, ಕುಂಕುಮಗಳನ್ನು ಕೊಟ್ಟು ಆಶೀರ್ವಾದ ಮಾಡುತ್ತಲೇ ತಮ್ಮ ಕಾಯಿಲೆಗೆ ದುಬಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರಿದ್ದಾರೆ. ಆದ್ದರಿಂದಲೇ, ದೇವನ ನಿಜವಾದ ಪರಿಚಯ ಸಮಾಜಕ್ಕೆ ಆಗಬೇಕಾದ ಅಗತ್ಯ ಇದೆ. ಮನುಷ್ಯನಿಗೂ ದೇವನಂತೆ ಹಸಿವಾಗುತ್ತದೆಂದಾದರೆ, ಅದು ದೇವನಾಗಲು ಸಾಧ್ಯವಿಲ್ಲ. ನಿದ್ದೆ ಮಾಡುವುದು ಮಾನವ ಸ್ವಭಾವ. ದುಡ್ಡು ಮಾಡುವುದೂ ಮನುಷ್ಯ ಗುಣ. ತಪ್ಪುಗಳನ್ನು ಮಾಡುವವನೇ ಮನುಷ್ಯ. ಕಾಯಿಲೆ ಬಾಧಿಸುವುದು, ಸಾಯುವುದು, ಆಸ್ತಿ-ಪಾಸ್ತಿಗಳ ಹಸಿವು ಇರುವುದು, ನಾಳೆ ಏನಾಗುತ್ತದೆಂಬುದರ ಅರಿವು ಇರದಿರುವುದು.. ಎಲ್ಲವೂ ಮನುಷ್ಯ ದೌರ್ಬಲ್ಯಗಳು. ಇವು ದೇವನಿಗೂ ಇದ್ದರೆ ಮತ್ತೆ ದೇವನ ಅಗತ್ಯವಾದರೂ ಏನಿರುತ್ತದೆ? ವಿಶೇಷ ಏನೆಂದರೆ, ರಾಧೆ ಮಾ ಸಹಿತ ಇವತ್ತು ನಮ್ಮ ನಡುವೆ ಯಾರೆಲ್ಲ ದೇವರಾಗಿ ಗುರುತಿಗೀಡಾಗಿದ್ದಾರೋ ಅವರೆಲ್ಲರಿಗೂ ಈ ದೌರ್ಬಲ್ಯಗಳಿವೆ ಎಂಬುದು. ನಿಜವಾಗಿ, ನಮ್ಮ ನಡುವೆ ಮನುಷ್ಯರಾಗಿ ಗುರುತಿಸಿಕೊಂಡು ಆ ಬಳಿಕ ದೇವರಾದವರೆಲ್ಲ ಆ ಪಟ್ಟಕ್ಕೆ ಏರಿದ ಬಳಿಕವೂ ಮೊದಲಿನ ಅಭ್ಯಾಸವನ್ನು ಬಿಟ್ಟಿದ್ದೇನೂ ಇಲ್ಲ. ಅವರು ದೇವರಾದ ಬಳಿಕವೂ ನಿದ್ದೆ ಮಾಡುತ್ತಾರೆ, ತಿನ್ನುತ್ತಾರೆ, ಕುಡಿಯುತ್ತಾರೆ, ಆರೋಪಗಳನ್ನು ಎದುರಿಸುತ್ತಾರೆ.. ಇದುವೇ ಅವರು ದೇವರಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.
      ಅಂದಹಾಗೆ, ದೇವನ ಫೋಸು ಕೊಟ್ಟು ಜನರನ್ನು ವಂಚಿಸುತ್ತಿರುವ ಕಪಟ ದೇವರುಗಳನ್ನೆಲ್ಲ ತಿರಸ್ಕರಿಸಿ, ‘ಮನುಷ್ಯ ದೇವನಾಗಲು ಸಾಧ್ಯವಿಲ್ಲ’ ಎಂದು ಬಲವಾಗಿ ಘೋಷಿಸಬೇಕಾದ ಅಗತ್ಯ ಇವತ್ತು ಸಾಕಷ್ಟಿದೆ. ಯಾಕೆಂದರೆ, ಧರ್ಮ ಇಲ್ಲವೇ ದೇವರ ಹೆಸರಲ್ಲಿ ಜನಸಾಮಾನ್ಯರನ್ನು ವಂಚಿಸುವಷ್ಟು ಸುಲಭದಲ್ಲಿ ಇನ್ನಾವುದರಿಂದಲೂ ವಂಚಿಸಲು ಸಾಧ್ಯವಿಲ್ಲ ಎಂಬುದು ದೇವರಾಗಬಯಸುವ ಎಲ್ಲರಿಗೂ ಗೊತ್ತು. ದೇವರ ಬಗ್ಗೆ ದುರ್ಬಲ ಕಲ್ಪನೆಗಳನ್ನು ಇಟ್ಟುಕೊಂಡಿರುವ ಮಂದಿಯನ್ನು ಇಂಥವರು ಸುಲಭದಲ್ಲಿ ಬಲೆಗೆ ಬೀಳಿಸುತ್ತಲೂ ಇರುತ್ತಾರೆ. ರಾಧೆ ಮಾ ದೇವರಾದುದರ ಹಿಂದೆ ಇಂಥ ದೌರ್ಬಲ್ಯಗಳ ಪಾತ್ರ ಖಂಡಿತಕ್ಕೂ ಇರಬಹುದು. ಇಂಥವರನ್ನು ಸೋಲಿಸಬೇಕಾದರೆ ದೇವನ ಅಸಲಿ ರೂಪದ ಬಗ್ಗೆ ಸಮಾಜಕ್ಕೆ ಗೊತ್ತಿರಬೇಕಾದುದು ಅತೀ ಅಗತ್ಯ. ಈ ಅಸಲಿ ದೇವನನ್ನು ಪತ್ತೆ ಹಚ್ಚುವಲ್ಲಿ ಜನರು ಯಶಸ್ವಿಯಾದರೆ ಆ ಬಳಿಕ ಮಾನವ ದೇವನಾಗಲು ಸಾಧ್ಯವಿಲ್ಲ ಮತ್ತು ಹಾಗೆ ಘೋಷಿಸಿಕೊಂಡವರಿಗೆ ಭಕ್ತ ಸಮೂಹ ಸೃಷ್ಟಿಯಾಗಲೂ ಸಾಧ್ಯವಿಲ್ಲ.


Wednesday 12 August 2015

ಬಿಜೆಪಿಯ ಗೋ ಪ್ರೇಮವನ್ನು ಪ್ರಶ್ನಿಸಿದ ಗೊಡ್ಡು ಹಸು

    ‘ಗೊಡ್ಡು (ಹಾಲು ನೀಡುವುದನ್ನು ನಿಲ್ಲಿಸಿದ) ಹಸುಗಳಿಗೆ ಉಚಿತ ಮೇವು' ಯೋಜನೆಯನ್ನು ರೂಪಿಸುವುದಾಗಿ ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್‍ರು ಭರವಸೆ ನೀಡಿದ ಮರುದಿನವೇ, ‘ಮಾಂಸ ರಫ್ತಿನಲ್ಲಿ ಭಾರತ ಜಗತ್ತಿನಲ್ಲಿಯೇ ಪ್ರಥಮ ಸ್ಥಾನಿಯಾಗಿರುವ ಸುದ್ದಿಯನ್ನು ಮಾಧ್ಯಮಗಳು ಪ್ರಕಟಿಸಿವೆ. ಬಹುಶಃ ಕೇಂದ್ರದ ದ್ವಂದ್ವ ನೀತಿಗೆ ಮತ್ತೊಂದು ಪುರಾವೆ ಇದು. ಕಳೆದೊಂದು ವರ್ಷದಲ್ಲಿ ಭಾರತವು 2.4 ಮಿಲಿಯನ್ ಟನ್ ಮಾಂಸ (ಗೋ ಮತ್ತು ಎಮ್ಮೆ)ವನ್ನು ರಫ್ತು ಮಾಡಿದ್ದು ಇದು ಜಗತ್ತಿನಲ್ಲಿಯೇ ಅತ್ಯಧಿಕ. ಎರಡನೇ ಸ್ಥಾನದಲ್ಲಿರುವ ಬ್ರಝಿಲ್ 2 ಮಿಲಿಯನ್ ಟನ್ ಮಾಂಸವನ್ನು ರಫ್ತು ಮಾಡಿದ್ದರೆ 1.5 ಮಿಲಿಯನ್ ಟನ್ ರಫ್ತು ಮಾಡಿರುವ ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ. ಜಗತ್ತಿನಲ್ಲಿಯೇ ರಪಾs್ತಗುವ ಒಟ್ಟು ಮಾಂಸದ ಪ್ರಮಾಣದಲ್ಲಿ 23.5% ಭಾರತದಿಂದಲೇ ರಫ್ತಾಗುತ್ತಿದೆ. ಅದರಲ್ಲೂ ಈ ಹಿಂದಿನ ವರ್ಷ ಈ ರಫ್ತಿನ ಪ್ರಮಾಣ 20.8% ಇತ್ತು. ಅಂದರೆ, ಸುಮಾರು 3%ದಷ್ಟು ಹೆಚ್ಚುವರಿ ಮಾಂಸವು ಈ ವರ್ಷ ರಫ್ತಾಗಿದೆ. ವಿಶೇಷ ಏನೆಂದರೆ, ಬಾಸುಮತಿ ಅಕ್ಕಿಯ ರಫ್ತಿನಿಂದ ಪಡೆಯುವ ವಿದೇಶಿ ವರಮಾನಕ್ಕಿಂತ ಹೆಚ್ಚಿನ ವರಮಾನವನ್ನು ಭಾರತವು ಮಾಂಸ ರಫ್ತಿನಿಂದ ಪಡೆದಿದೆ ಎಂಬುದು. ಅಮೇರಿಕದ ಕೃಷಿ ಇಲಾಖೆಯು ಬಿಡುಗಡೆ ಮಾಡಿರುವ ಈ ಅಂಕಿ-ಅಂಶಗಳಿಗಿಂತ ಒಂದು ದಿನ ಮೊದಲು ಗೋರಕ್ಷಣೆಯನ್ನು ಕೇಂದ್ರೀಕರಿಸಿ ದೆಹಲಿಯಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಭಾರತದ ಕೃಷಿ ಸಂಶೋಧನಾ ಸಂಸ್ಥೆ (IACR), ರಾಷ್ಟ್ರೀಯ ಗೋಧಾನ್ ಮಹಾಸಂಘ ಮತ್ತು ಪ್ರಾಣಿಗಳ ರಕ್ಷಣೆ ಹಾಗೂ ಕೃಷಿ ಸಂಶೋಧನಾ ಸಂಸ್ಥೆಗಳು ಸೇರಿಕೊಂಡು ಏರ್ಪಡಿಸಿದ್ದ ಈ ಸಭೆಯಲ್ಲಿ ಕೇಂದ್ರ ಮಂತ್ರಿಗಳು, ಸಂಘಪರಿವಾರದ ನಾಯಕರು, ವೈದ್ಯರು, ವಿಜ್ಞಾನಿಗಳೂ ಸೇರಿದಂತೆ ಸುಮಾರು ಸಾವಿರ ಮಂದಿ ಭಾಗವಹಿಸಿದ್ದರು. ಆ ಸಭೆಯ ಉದ್ದೇಶವೇ ಗೋವು. ಅದರ ಸೆಗಣಿ, ಮೂತ್ರ, ದೈಹಿಕ ಸಾಮರ್ಥ್ಯ, ಹಾಲು.. ಸಹಿತ ಎಲ್ಲದರ ಬಗ್ಗೆಯೂ ವಿಸ್ತೃತ ಚರ್ಚೆಯೊಂದನ್ನು ನಡೆಸುವುದು ಮತ್ತು ಗೋರಕ್ಷಣೆಯ ಉದ್ದೇಶದ ಈಡೇರಿಕೆಗಾಗಿ ಅಗತ್ಯ ವಾತಾವರಣವನ್ನು ನಿರ್ಮಿಸುವುದು ಕಾರ್ಯಕ್ರಮದ ಗುರಿಯಾಗಿತ್ತು. ಅಲೋಪತಿಗಿಂತ ‘ಕೌ’(Cow)ಪತಿಯೇ ಹೆಚ್ಚು ಲಾಭಕರ ಎಂದು ಬಿರ್ಲಾ ಗ್ರೂಪ್ ಆಸ್ಪತ್ರೆಗಳ ನಿರ್ದೇಶಕ ಸಂಜಯ್ ಮಹೇಶ್ವರಿ ಹೇಳಿದರು. ಲೈಂಗಿಕ ರೋಗಗಳಿಗೆ ಮತ್ತು ಕ್ಯಾನ್ಸರ್‍ಗೂ ಗೋವಿನಲ್ಲಿ ಮದ್ದಿದೆ ಎಂದೂ ಅವರು ಅಭಿಪ್ರಾಯಪಟ್ಟರು. ಗೊಡ್ಡು ಹಸುಗಳಿಗೆ ಉಚಿತ ಮೇವು ಎಂಬ ಭರವಸೆಯನ್ನು ರಾಜನಾಥ್ ಸಿಂಗ್ ನೀಡಿದ್ದು ಈ ಸಭೆಯಲ್ಲಿಯೇ. ನಿಜವಾಗಿ, ಈ ಹೇಳಿಕೆಯ ಮೂಲಕ ಬಿಜೆಪಿಯು ಇದೇ ಮೊದಲ ಬಾರಿಗೆ ಗೋ ಮಾರಾಟಕ್ಕೂ ಅದರ ಸಾಕುವಿಕೆಗೂ ಸಂಬಂಧ ಇದೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ. ಸಾಮಾನ್ಯವಾಗಿ, ಗೋವು ಮತ್ತು ಎತ್ತನ್ನು ಸಾಕುವುದು ರೈತರು. ಅದವರ ಬದುಕು. ಗದ್ದೆಯ ಉಳುಮೆಗೆ, ಗೊಬ್ಬರಕ್ಕೆ, ಹಾಲು ಮತ್ತಿತರ ಉತ್ಪನ್ನಗಳಿಗೆ ಅವರು ಗೋವನ್ನೇ ಆಶ್ರಯಿಸಿಕೊಂಡಿದ್ದಾರೆ. ಗೋವು ಅವರಿಗೆ ಎಷ್ಟು ಗೌರವಾರ್ಹವೋ ಅಷ್ಟೇ ಆಧಾರಸ್ತಂಭ ಕೂಡ. ಬರೇ ಶ್ರದ್ಧೆಗಾಗಿ ಗೋವು ಸಾಕುವವರು ಈ ದೇಶದಲ್ಲಿ ಎಷ್ಟಿರಬಹುದೆಂದು ಪ್ರಶ್ನಿಸಿದರೆ ರಾಜನಾಥ್ ಆಗಲಿ, ಸಂಘಪರಿವಾರದ ನಾಯಕರಾಗಲಿ ಉತ್ತರಿಸಲಾರರು. ಯಾಕೆಂದರೆ, ಗೋವಿನ ಸುತ್ತ ಅತಿಮಾನುಷ ಪ್ರಭಾವಳಿಯೊಂದನ್ನು ಸೃಷ್ಟಿಸಿದ್ದು ರಾಜಕೀಯವೇ ಹೊರತು ಅದನ್ನು ಸಾಕುವವರಲ್ಲ. ಬಿಜೆಪಿ ಹುಟ್ಟುವುದಕ್ಕಿಂತ ಮೊದಲೇ ಈ ದೇಶದಲ್ಲಿ ಗೋವು ಇತ್ತು. ಅದರ ಸೆಗಣಿ, ಮೂತ್ರ, ಹಾಲು, ಗೊಬ್ಬರ.. ಎಲ್ಲವೂ ಇತ್ತು. ಜೊತೆಗೇ ಶ್ರದ್ಧೆ ಮತ್ತು ಗೌರವವೂ ಇತ್ತು. ಅಲ್ಲದೇ ಆಹಾರ ಕ್ರಮವಾಗಿಯೂ ಅದು ಬಳಕೆಯಲ್ಲಿತ್ತು. ಆದರೆ, ಬಿಜೆಪಿ ಮಾಡಿದ್ದೇನೆಂದರೆ, ಗೋವಿಗೆ ಭಾವನಾತ್ಮಕ ಚೌಕಟ್ಟೊಂದನ್ನು ಕೊಟ್ಟು ಈ ದೇಶದ ಜನರನ್ನು ನಾವು ಮತ್ತು ಅವರು ಎಂದು ವಿಭಜಿಸಿದ್ದು. ಗೋವುಗಳ ಸಾಗಾಟದಲ್ಲಿ ಮತ್ತು ಮಾಂಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಮುಸ್ಲಿಮರನ್ನು ತೋರಿಸಿ, ಮುಸ್ಲಿಮರನ್ನು ಹಿಂದೂ ವಿರೋಧಿಗಳಾಗಿ ಚಿತ್ರಿಸಿದ್ದು. ಗೋಮಾಂಸವನ್ನು ಸೇವಿಸುವುದು ಮತ್ತು ಮಾಂಸೋದ್ಯಮದಲ್ಲಿ ತೊಡಗಿಸಿಕೊಂಡಿರುವುದು ಕೇವಲ ಮುಸ್ಲಿಮರು ಮಾತ್ರ ಎಂಬ ಅಪ್ಪಟ ಸುಳ್ಳನ್ನು ಪ್ರಸಾರ ಮಾಡಿದ್ದು. ಆದರೆ ಈ ಎಲ್ಲ ಸಂದರ್ಭಗಳಲ್ಲಿ ಒಂದು ಬಹುಮುಖ್ಯ ಪ್ರಶ್ನೆಯಿಂದ ಅದು ತಪ್ಪಿಸಿಕೊಳ್ಳುತ್ತಲೇ ಇತ್ತು. ಅದೆಂದರೆ, ಈ ಗೋವುಗಳನ್ನು ಮಾರಾಟ ಮಾಡುವವರು ಯಾರು ಮತ್ತು ಅವರೇಕೆ ಅದನ್ನು ಮಾರಾಟ ಮಾಡುತ್ತಾರೆ ಎಂಬ ಪ್ರಶ್ನೆ. ಬರೇ ಶ್ರದ್ಧೆಯೊಂದೇ ಗೋಸಾಕಾಣಿಕೆಗೆ ಕಾರಣ ಎಂದಾದರೆ ಅದರ ಮಾರಾಟದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬರೇ ಶ್ರದ್ಧೆ ಮತ್ತು ಭಕ್ತಿಯ ಕಾರಣಕ್ಕಾಗಿ ಸಾಕಲಾಗುವ ಪ್ರಾಣಿಯು ಹಾಲು ಕೊಡದಿದ್ದರೂ ಉಳುಮೆಗೆ ಬಾರದಿದ್ದರೂ ಶ್ರದ್ಧಾಭಕ್ತಿ ಕಡಿಮೆಕೊಳ್ಳಲು ಸಾಧ್ಯವೂ ಇಲ್ಲ. ಗೋವನ್ನು ಬರೇ ಭಕ್ತಿ ಮತ್ತು ಶ್ರದ್ಧೆಯ ರೂಪಕವಾಗಿ ಪ್ರಸ್ತುತಪಡಿಸುತ್ತಿರುವ ಬಿಜೆಪಿಯ ಮುಂದೆ ಈ ಮಾರಾಟದ ಪ್ರಶ್ನೆಯನ್ನು ಸದಾ ಎಸೆಯಲಾಗುತ್ತಿತ್ತು. ಗೋವನ್ನು ಸಾಕುವವರು ಹಾಲು ಬತ್ತಿದ ಕೂಡಲೇ ಅದನ್ನೇಕೆ ಮಾರಾಟ ಮಾಡುತ್ತಾರೆ ಎಂದು ಪ್ರಶ್ನಿಸಲಾಗುತ್ತಿತ್ತು. ಬಿಜೆಪಿ ಈ ಬಹುಮುಖ್ಯ ಪ್ರಶ್ನೆಗೆ ಉತ್ತರಿಸುವ ಬದಲು ಆಗೊಮ್ಮೆ ಈಗೊಮ್ಮೆ ನಡೆಯುವ ಗೋಕಳ್ಳತನವನ್ನು ಬೊಟ್ಟು ಮಾಡಿ ವಿಷಯಾಂತರ ಮಾಡುತ್ತಿತ್ತು. ಆದರೆ, ಇದೀಗ ರಾಜನಾಥ್ ಸಿಂಗ್‍ರ ಮೂಲಕ ಬಿಜೆಪಿಯು ನಿಜವನ್ನು ಒಪ್ಪಿಕೊಂಡಿದೆ. ಸಾಕಾಣಿಕೆಗೂ ಮಾರಾಟಕ್ಕೂ ಮತ್ತು ಆರ್ಥಿಕತೆಗೂ ಸಂಬಂಧ ಇದೆ ಎಂಬುದನ್ನು ಅದು ಸಮರ್ಥಿಸಿದೆ.
  ನಿಜವಾಗಿ, ಗೋವನ್ನು ಬರೇ ಶ್ರದ್ಧಾ ದೃಷ್ಟಿಯಿಂದ ಮಾತ್ರ ಯಾರೂ ಸಾಕುತ್ತಿಲ್ಲ. ಬೆಳಿಗ್ಗೆ ಮತ್ತು ಸಂಜೆ ಅದರಿಂದ ಹಾಲು ಪಡೆಯುವುದು ಹಾಗೂ ಒಂದು ದಿನ ಹಾಲು ತುಸು ಕಡಿಮೆಯಾದರೂ ಮಾಲಕನ ಹಣೆಯಲ್ಲಿ ನೆರಿಗೆಗಳು ಮೂಡುವುದೇ ಇದನ್ನು ಸಾಬೀತುಪಡಿಸುತ್ತದೆ. ಹಾಗಂತ, ಗೋವನ್ನು ಸಾಕುವವರು ಅದನ್ನು ಇತರ ಪ್ರಾಣಿಗಳಂತೆ ನೋಡದೇ ಇರಬಹುದು. ಆಡು, ಕುರಿ, ಕೋಳಿಗಳ ಸ್ಥಾನದಲ್ಲಿ ಅದನ್ನು ನಿಲ್ಲಿಸದೇ ಇರಬಹುದು. ಆದರೆ ಗೋವು ಒಂದು ಆರ್ಥಿಕ ಪ್ರಾಣಿ. ಲಾಭ ಮತ್ತು ನಷ್ಟಗಳನ್ನು ಲೆಕ್ಕ ಹಾಕಿಕೊಂಡೇ ಓರ್ವ ಗೋವನ್ನು ಸಾಕುತ್ತಾನೆ/ಳೆ. ಅದರ ಹಾಲು, ಸೆಗಣಿ, ಸಂತಾನ ಸಾಮಥ್ರ್ಯ ಮತ್ತು ಅದರ ದೇಹ.. ಎಲ್ಲದಕ್ಕೂ ಆರ್ಥಿಕ ಲೆಕ್ಕಾಚಾರವೊಂದು ಇದ್ದೇ ಇದೆ. ಗೋವನ್ನು ಗೌರವಿಸುತ್ತಲೇ ಅಗತ್ಯ ಬಂದಾಗ ಅದನ್ನು ಮಾಂಸಕ್ಕಾಗಿ ಮಾರಾಟ ಮಾಡುವುದನ್ನು ಶ್ರದ್ಧಾಭಂಗ ವಿಷಯವಾಗಿ ಆತ ಕಾಣದಿರುವುದು ಈ ಕಾರಣದಿಂದಲೇ. ಹಸು ಗೊಡ್ಡಾದಾಗ ಮಾಲಿಕ ಮಾರುತ್ತಾನೆ ಮತ್ತು ಇನ್ನೊಂದನ್ನು ಖರೀದಿಸುತ್ತಾನೆ ಅಥವಾ ಗೊಡ್ಡು ಹಸುವಿನ ಮರಿಗಳ ಮೇಲೆ ಆಶ್ರಯ ಪಡೆಯುತ್ತಾನೆ. ಸಾಮಾನ್ಯವಾಗಿ, ಗದ್ದೆ ಇಲ್ಲದವರ ಹಟ್ಟಿಯಲ್ಲಿ ಗಂಡು ಕರುಗಳು ಅಥವಾ ಎತ್ತುಗಳು ಇರುವುದೇ ಇಲ್ಲ. ಹಾಗಂತ, ಹಸುಗಳೆಲ್ಲ ಹೆಣ್ಣು ಕರುಗಳನ್ನು ಮಾತ್ರ ಹಡೆಯುತ್ತವೆ ಎಂದಲ್ಲ. ಗಂಡು ಕರು ಗದ್ದೆಯಿಲ್ಲದವರಿಗೆ ಉಪಯೋಗಶೂನ್ಯ. ಅದಕ್ಕೆ ಮೇವು, ಹಿಂಡಿ ನೀಡುವುದರಿಂದ ಯಾವ ಲಾಭವೂ ಇರುವುದಿಲ್ಲ. ಗೊಡ್ಡು ಹಸುವಿನ ಕುರಿತಾದ ಲೆಕ್ಕಾಚಾರವೂ ಇದುವೇ. ಅದನ್ನು ಸಾಕುವುದು ಆರ್ಥಿಕ ಲೆಕ್ಕಾಚಾರದ ದೃಷ್ಟಿಯಿಂದ ಖಂಡಿತವಾಗಿಯೂ ನಷ್ಟ. ರಾಜನಾಥ್ ಸಿಂಗ್‍ರ ‘ಉಚಿತ ಮೇವು’ ಹೇಳಿಕೆಯು ಈ ವಾಸ್ತವವನ್ನು ಒಪ್ಪಿಕೊಂಡಂತಾಗಿದೆ. ಶ್ರದ್ಧೆಗಿಂತ ಹೊರತಾದ ಮುಖವೊಂದು ಗೋವಿಗಿದೆ ಎಂಬುದನ್ನು ಅವರ ಈ ಹೇಳಿಕೆಯು ಸಮರ್ಥಿಸುತ್ತದೆ. ಇದು ಬಿಜೆಪಿಯ ಈ ವರೆಗಿನ ಘೋಷಿತ ನಿಲುವಿಗೆ ವಿರುದ್ಧವಾದುದು. ಅಂದಹಾಗೆ, ಇದು ಅಧಿಕಾರ ಸಿಕ್ಕ ಬಳಿಕದ ಬಿಜೆಪಿ. ಅಧಿಕಾರವಿಲ್ಲದಿದ್ದಾಗ ಅದರ ನಿಲುವು ಬೇರೆಯೇ ಆಗಿತ್ತು. ಅಷ್ಟಕ್ಕೂ, ಈ ಎರಡರಲ್ಲಿ ಅಸಲು ಬಿಜೆಪಿ ಯಾವುದೋ?

Wednesday 5 August 2015

ಯಾಕೂಬ್ ಮೆಮನ್‍ನ ಗಲ್ಲು ಮತ್ತು ನಮ್ಮಲ್ಲಿರಬೇಕಾದ ಎಚ್ಚರಿಕೆ..

    ಯಾಕೂಬ್ ಮೆಮನ್ ಗಲ್ಲಿಗೇರಿದ್ದರೂ ಆ ಗಲ್ಲಿನ ಸುತ್ತ ಹುಟ್ಟಿಕೊಂಡ ಚರ್ಚೆ ಇನ್ನೂ ಮುಕ್ತಾಯವನ್ನು ಕಂಡಿಲ್ಲ. ಸುಪ್ರೀಮ್ ಕೋರ್ಟನ್ನೇ ಕಟಕಟೆಯಲ್ಲಿ ನಿಲ್ಲಿಸುವಷ್ಟರ ಮಟ್ಟಿಗೆ ಈ ಚರ್ಚೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತಿದೆ. ಹಿರಿಯ ನ್ಯಾಯವಾದಿಗಳು ಮತ್ತು ಸಂವಿಧಾನ ತಜ್ಞರೇ ಈ ‘ಗಲ್ಲು' ಪ್ರಕರಣದ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ ಮತ್ತು ಯಾಕೂಬ್ ಗಲ್ಲು ಪ್ರಕರಣಕ್ಕೆ ಆಕ್ಷೇಪ ಎತ್ತಿದ್ದಾರೆ. ಗಲ್ಲನ್ನು ಪ್ರತಿಭಟಿಸಿ ಸುಪ್ರೀಮ್ ಕೋರ್ಟ್‍ನ ಉಪ ರಿಜಿಸ್ಟ್ರಾರ್ ಪ್ರೊ. ಅನೂಪ್ ಸುರೇಂದ್ರನಾಥ್‍ರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರದಲ್ಲಿ ಅವರು ‘ಗಲ್ಲಿ'ನ ಬಗ್ಗೆ ಉಲ್ಲೇಖಿಸದಿದ್ದರೂ ತಮ್ಮ ಫೇಸ್‍ಬುಕ್ ಪುಟದಲ್ಲಿ ರಾಜೀನಾಮೆಗೆ ಗಲ್ಲು ಹೇಗೆ ಕಾರಣ ಎಂಬುದನ್ನು ವಿಸ್ತೃತವಾಗಿ ಬರೆದಿದ್ದಾರೆ. ‘ಆ ತೀರ್ಪು ಪ್ರಭುತ್ವದ ವಿಜಯವಲ್ಲ, ನ್ಯಾಯಾಂಗದ ಪತನ..’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ತೀರ್ಪಿಗಿಂತ ಒಂದು ವಾರದ ಮೊದಲು ಮಹಿಳೆಯರ ಶಿರವಸ್ತ್ರದ ಕುರಿತು ಸುಪ್ರೀಮ್ ಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ಹೆಚ್.ಎಲ್. ದತ್ತು ಅವರು ದಂಗುಬಡಿಸುವ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದರು. ಶಿರವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗುವುದನ್ನು ನಿರ್ಬಂಧಿಸಿ ಸಿಬಿಎಸ್‍ಇ ಪರೀಕ್ಷಾ ಮಂಡಳಿಯು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಮೇಲೆ ಪ್ರತಿಕ್ರಿಯಿಸುತ್ತಾ, ‘ಪರೀಕ್ಷೆಯ ಸಂದರ್ಭದ 2-3 ತಾಸುಗಳವರೆಗೆ ನಿಮ್ಮ ಧರ್ಮವನ್ನು ದೂರವಿಟ್ಟರೆ ಏನೂ ತೊಂದರೆಯಾಗದು..' ಎಂದು ಹೇಳಿದ್ದರು. ಯಾಕೂಬ್ ಮೆಮನ್‍ನ ಗಲ್ಲು ಶಿಕ್ಷೆಯು ಹುಟ್ಟುಹಾಕಿದ ಚರ್ಚೆಯೊಂದಿಗೆ ಸುಪ್ರೀಮ್ ಕೋರ್ಟ್‍ನ ಮುಖ್ಯ ನ್ಯಾಯಾಧೀಶರ ಈ ಹೇಳಿಕೆಯನ್ನು ಸೇರಿಸಿಕೊಂಡರೆ, ಬಲಪಂಥೀಯ ವಿಚಾರಧಾರೆಗಳು ನ್ಯಾಯಾಧೀಶರುಗಳ ಅಭಿಪ್ರಾಯ ಮತ್ತು ತೀರ್ಪುಗಳ ಮೇಲೆ ಪ್ರಭಾವ ಬೀರುತ್ತಿವೆಯೇ ಎಂಬ ಅನುಮಾನವಂತೂ ಕಾಡಿಯೇ ಕಾಡುತ್ತದೆ. ಒಂದು ಕಡೆ, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಬಲಪಂಥೀಯ ವಿಚಾರಧಾರೆಗಳಿಗೆ ಇನ್ನಿಲ್ಲದ ಪ್ರಾಶಸ್ತ್ಯ ಲಭ್ಯವಾಗತೊಡಗಿದೆ. ಸರಕಾರದ ಪ್ರತಿಯೊಂದು ಸಂಸ್ಥೆಗೂ ಬಲಪಂಥೀಯರನ್ನು ತುರುಕುವ ಪ್ರಯತ್ನಗಳು ಬಲವಂತದಿಂದಲೇ ನಡೆಯುತ್ತಿವೆ. ಭಾರತೀಯ ಟಿ.ವಿ. ಮತ್ತು ಸಿನಿಮಾ ಸಂಸ್ಥೆಗೆ (FTII) ಬಲಪಂಥೀಯ ವಿಚಾರಧಾರೆಯ ಗಜೇಂದ್ರ ಚೌಹಾನ್‍ರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಕಳೆದ ಎರಡು ತಿಂಗಳಿನಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೂ ವ್ಯವಸ್ಥೆ ಮೃದುವಾಗುತ್ತಿಲ್ಲ. ದೇಶದ ಸುಮಾರು 680 ಸರಕಾರಿ ಸಂಸ್ಥೆಗಳ ಪ್ರಮುಖ ಸ್ಥಾನಗಳಲ್ಲಿ ಬಲಪಂಥೀಯರನ್ನು ತುಂಬಿಸುವುದಕ್ಕಾಗಿ ಸಂಘಪರಿವಾರ ಪಟ್ಟಿ ಸಿದ್ಧಪಡಿಸಿದೆ ಎಂಬ ಮಾಹಿತಿಯೂ ಹೊರಬೀಳುತ್ತಿದೆ. ಈಗಾಗಲೇ ರಾಷ್ಟ್ರೀಯ ಪಠ್ಯಪುಸ್ತಕ ಪ್ರಾಧಿಕಾರವೂ ಸೇರಿದಂತೆ ಹಲವಾರು ಪ್ರಮುಖ ಸಂಸ್ಥೆಗಳಿಗೆ ಬಲಪಂಥೀಯರನ್ನು ಸೇರಿಸಲಾಗಿದೆ. ಇನ್ನೊಂದು ಕಡೆ, ಮುಸ್ಲಿಮರನ್ನು ಮಾತು ಮಾತಿಗೂ ಪಾಕಿಸ್ತಾನಕ್ಕೆ ಹೋಗಿ ಎಂದು ಕರೆ ಕೊಡುವ ಸಾಕ್ಷಿ ಮಹಾರಾಜ್‍ರ ಸಂಖ್ಯೆ ಹೆಚ್ಚಾಗುತ್ತಿದೆ. ತಥಾಗತ ರಾಯ್‍ರಂಥ ರಾಜ್ಯಪಾಲರೇ ಬಲಪಂಥೀಯರ ಭಾಷೆಯಲ್ಲಿ ಮಾತಾಡತೊಡಗಿದ್ದಾರೆ. ಇಂಥ ಸ್ಥಿತಿಯಲ್ಲಿ, ಶಿರವಸ್ತ್ರ ಮತ್ತು ಯಾಕೂಬ್‍ನ ಗಲ್ಲು ಮುಸ್ಲಿಮರಲ್ಲಿ ಒಂದು ಬಗೆಯ ಅಭದ್ರತಾ ಭಾವನೆಯನ್ನು ಹುಟ್ಟುಹಾಕಿರುವುದನ್ನು ತಿರಸ್ಕರಿಸಲಾಗದು. ಬಲಪಂಥೀಯರು ನ್ಯಾಯಾಂಗ ಸಹಿತ ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೋ ಎಂಬ ಅನುಮಾನವೊಂದನ್ನು ಗಟ್ಟಿಗೊಳಿಸಲು ರೋಹಿಣಿ ಸಾಲ್ಯಾನ್‍ರಂಥವರ ಹೇಳಿಕೆಗಳೂ ಒತ್ತು ನೀಡುತ್ತಿವೆ. 'ಮಾಲೆಗಾಂವ್, ಸಮ್ಜೋತಾ, ಅಜ್ಮೀರ್ ಸ್ಫೋಟಗಳ ಆರೋಪಿಗಳಾದ ಸಾಧ್ವಿ ಪ್ರಜ್ಞಾಸಿಂಗ್, ಶ್ರೀಕಾಂತ್ ಪುರೋಹಿತ್, ಅಸೀಮಾನಂದರ ಕುರಿತಾದ ವಿಚಾರಣೆಯಲ್ಲಿ ಮೃದು ನೀತಿಯನ್ನು ತಾಳುವಂತೆ ವ್ಯವಸ್ಥೆಯು ತನ್ನ ಮೇಲೆ ಒತ್ತಡ ಹೇರಿದೆ' ಎಂದವರು ಹೇಳಿದ್ದಾರೆ. ಹಾಗಿದ್ದರೂ,
  ಇವೆಲ್ಲವೂ ಮುಸ್ಲಿಮರನ್ನು ಸಿನಿಕರನ್ನಾಗಿ ಮಾಡುವುದಕ್ಕೆ ಪ್ರಚೋದಕ ಆಗಬಾರದು. ಈ ದೇಶದ ನ್ಯಾಯ ವ್ಯವಸ್ಥೆ ಇವತ್ತಿಗೂ ನಂಬಿಗಸ್ಥವಾಗಿದೆ. ಅತ್ಯಂತ ಪಾರದರ್ಶಕ ಮತ್ತು ನ್ಯಾಯಪರವಾಗಿದೆ. ಅಲ್ಲೊಂದು ಇಲ್ಲೊಂದು ರಾಜಕೀಯ ಒತ್ತಡಗಳ ಮಾಹಿತಿಗಳು ಹೊರಬೀಳುತ್ತಿದ್ದರೂ ಅವು ಈ ನ್ಯಾಯವ್ಯವಸ್ಥೆಯ ಮೇಲೆ ಅಪನಂಬಿಕೆ ಹೊಂದುವುದಕ್ಕೆ ಖಂಡಿತ ಮಾನದಂಡ ಆಗಲಾರದು, ಆಗಬಾರದು ಕೂಡ. ಆದ್ದರಿಂದಲೇ, ಯಾಕೂಬ್ ಮೆಮನ್‍ನ ಗಲ್ಲು ಶಿಕ್ಷೆಯನ್ನು ಎತ್ತಿಕೊಂಡು ಇಡೀ ನ್ಯಾಯವ್ಯವಸ್ಥೆಯ ಮೇಲೆಯೇ ನಂಬಿಕೆ ಕಳಕೊಂಡವರಂತೆ ವರ್ತಿಸುವುದನ್ನು ಯಾವ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ. ಇವತ್ತು ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿರುವ ಕೆಲವೊಂದು ಅಭಿಪ್ರಾಯಗಳನ್ನು ಓದುವಾಗ ಆಘಾತವಾಗುತ್ತದೆ. ಯಾಕೂಬ್ ಪ್ರಕರಣವನ್ನು ನಾವು ಭಾವನಾತ್ಮಕ ಚೌಕಟ್ಟಿನಿಂದ ಹೊರತಂದು ವಿಶ್ಲೇಷಿಸಬೇಕಾಗಿದೆ. ಆತನನ್ನು ಸಾರಾಸಗಟು ಮುಗ್ಧನೆಂದೋ, ‘ಶಹೀದ್' (ಹುತಾತ್ಮ) ಎಂದೋ, ಜುಲೈ 8ನ್ನು ಕಪ್ಪು ದಿನವೆಂದೋ ಹೇಳುವುದು ಅಸಾಧುವಾದುದು. ಅದರಲ್ಲಿ ಅತಿರೇಕವಿದೆ, ಉತ್ಪ್ರೇಕ್ಷೆ ಇದೆ. ಈ ಬಗೆಯ ಬೀಸು ಹೇಳಿಕೆಗಳನ್ನು ಅತ್ಯಂತ ಇಷ್ಟಪಡುವುದು ಬಲಪಂಥೀಯರು. ಇಂಥ ಅಭಿಪ್ರಾಯಗಳೇ ಅವರ ಬಂಡವಾಳ. ಮುಖ್ಯವಾಹಿನಿಯಿಂದ ಮುಸ್ಲಿಮರನ್ನು ಪ್ರತ್ಯೇಕಗೊಳಿಸಿ

ಒಂಟಿಯಾಗಿಸುವುದಕ್ಕೆ ಇಂಥ ಅಭಿಪ್ರಾಯಗಳನ್ನು ಅವರು ಧಾರಾಳ ಬಳಸಿಕೊಳ್ಳುತ್ತಾರೆ. ಅಷ್ಟಕ್ಕೂ, ಯಾಕೂಬ್ ಮೆಮನ್ ಮುಸ್ಲಿಮರ ನಾಯಕನೋ ಮಾರ್ಗದರ್ಶಕನೋ ಅಲ್ಲ. ಆತನಿಗೆ ತನ್ನದೇ ಆದ ಹಿನ್ನೆಲೆಯಿದೆ. ಆತನಿಗೆ ನೀಡಲಾದ ಗಲ್ಲನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಪ್ರತಿಯೊಬ್ಬರಲ್ಲೂ ಈ ಎಚ್ಚರಿಕೆ ಇರಬೇಕಾಗಿದೆ. ಆತನಿಗೆ ಅನ್ಯಾಯವಾಗಿದೆ ಎಂದು ವಾದಿಸುವ ಭರದಲ್ಲಿ ಯಾವತ್ತೂ ದಾವೂದ್ ಇಬ್ರಾಹೀಮ್, ಟೈಗರ್ ಮೆಮನ್ ಅಥವಾ ಅವರಂಥ ತಲೆ ತಪ್ಪಿಸಿಕೊಂಡವರು ನಮ್ಮ ಮಾತು-ಕೃತಿಗಳಲ್ಲಿ ಅನುಕಂಪ ಗಿಟ್ಟಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕಿದೆ. ಹಾಗಂತ, ಯಾಕೂಬ್‍ನ ‘ಗಲ್ಲ'ನ್ನು ಮುಸ್ಲಿಮರು ಚರ್ಚಿಸಬೇಕಾದರೆ ಆತ ಮುಸ್ಲಿಮರ ನಾಯಕನೋ ಮಾರ್ಗದರ್ಶಕನೋ ಆಗಿರಬೇಕು ಎಂದು ಇದರರ್ಥವಲ್ಲ. ಓರ್ವ ವ್ಯಕ್ತಿಯ ಬಗ್ಗೆ ಚರ್ಚಿಸುವುದಕ್ಕೆ ಆತ/ಕೆ ಹಿಂದುವೋ ಮುಸ್ಲಿಮೋ ಕ್ರೈಸ್ತನೋ ಆಗಿರಬೇಕಿಲ್ಲ. ನಾಯಕನೋ ಕಾರ್ಮಿಕನೋ ಎಂಬ ವ್ಯತ್ಯಾಸವೂ ಬೇಕಿಲ್ಲ. ಮಾನವ ಹಕ್ಕು ಸರ್ವರಿಗೂ ಸಮಾನವಾದುದು. ಅದು ನಿರಾಕರಣೆಯಾಗಿದೆಯೆಂದು ಅನಿಸಿದಲ್ಲಿ ಆ ಬಗ್ಗೆ ಧ್ವನಿಯೆತ್ತುವುದಕ್ಕೆ ಯಾರ ಅಪ್ಪಣೆಯ ಅಗತ್ಯ ಖಂಡಿತಕ್ಕೂ ಇಲ್ಲ. ಈ ಖಚಿತತೆಯೊಂದಿಗೇ ನಾವು ಯಾಕೂಬ್ ಸಹಿತ ಪ್ರತಿ ಪ್ರಕರಣವನ್ನೂ ಚರ್ಚೆಗೆತ್ತಿಕೊಳ್ಳಬೇಕಿದೆ. ಮಾತ್ರವಲ್ಲ, ಅಷ್ಟೇ ವಿವೇಚನೆಯಿಂದಲೂ ವರ್ತಿಸಬೇಕಿದೆ. ಯಾಕೂಬ್ ಪ್ರಕರಣವನ್ನು ನಮ್ಮ ವ್ಯವಸ್ಥೆ ಸರಿಯಾಗಿ ನಿರ್ವಹಿಸಿಲ್ಲ ಎಂಬ ದೂರುಗಳೇನೇ ಇದ್ದರೂ ಈ ದೇಶದಲ್ಲಿ ಅತ್ಯಂತ ಜನಪರವಾದ ಸಂವಿಧಾನ ಇದೆ, ನ್ಯಾಯಾಲಯ ಇದೆ, ರಾಜಕೀಯ ವ್ಯವಸ್ಥೆಯಿದೆ ಎಂಬುದು ನಮಗೆ ಗೊತ್ತಿರಬೇಕು. ಇವುಗಳಲ್ಲಿ ದೌರ್ಬಲ್ಯಗಳಿರಬಹುದು. ಆದರೆ ಈ ದೌರ್ಬಲ್ಯಗಳನ್ನೂ ವಿೂರಿ ಅತ್ಯಂತ ಮಾನವೀಯವಾಗಿ ಮತ್ತು ನ್ಯಾಯಪರವಾಗಿ ನಡೆದುಕೊಳ್ಳುವ ಸಾಮರ್ಥ್ಯಈ ವ್ಯವಸ್ಥೆಗಿರುವುದನ್ನು ನಾವು ಅಲ್ಲಗಳೆಯಲಾಗದು. ಯಾಕೂಬ್ ಮೆಮನ್‍ನ ಗಲ್ಲು ಶಿಕ್ಷೆಯನ್ನು ಪ್ರಸಿದ್ಧ ನ್ಯಾಯವಾದಿಗಳು ಬಿಡಿ, ಸಾಮಾನ್ಯ ನಾಗರಿಕನೊಬ್ಬ ವೇದಿಕೆಯಲ್ಲಿ ನಿಂತು ಪ್ರಶ್ನಿಸುವುದಕ್ಕೂ ಇಲ್ಲಿ ಸ್ವಾತಂತ್ರ್ಯವಿದೆ. ರಾಜಕಾರಣಿಗಳನ್ನು ಬಹಿರಂಗವಾಗಿ ತಗಾದೆಗೆ ಎತ್ತಿಕೊಳ್ಳುವುದಕ್ಕೂ ಇಲ್ಲಿ ಅವಕಾಶವಿದೆ. ಮೈಲುಗಲ್ಲುಗಳೆನ್ನಬಹುದಾದ ಅನೇಕಾರು ತೀರ್ಪುಗಳನ್ನು ಇಲ್ಲಿನ ನ್ಯಾಯಾಲಯಗಳು ನೀಡಿವೆ. ಆದ್ದರಿಂದ ಯಾಕೂಬ್ ಪ್ರಕರಣದ ಮೇಲಿನ ಅಭಿಪ್ರಾಯಗಳು ಇವೆಲ್ಲವನ್ನೂ ಕಡೆಗಣಿಸುವ ರೂಪದಲ್ಲಿ ಇರಬಾರದು. ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಸದಾ ಬಳಸಿಕೊಂಡೇ ಈ ಅಭಿಪ್ರಾಯಗಳಿಂದ ಬಲಪಂಥೀಯರು ಲಾಭ ಎತ್ತಿಕೊಳ್ಳದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಈ ದೇಶ ಎಲ್ಲರದು. ಎಲ್ಲರಿಗೂ ಈ ದೇಶದಲ್ಲಿ ಸಮಾನ ಹಕ್ಕುಗಳಿವೆ. ಈ ದೇಶವನ್ನು ಪ್ರೀತಿಸಲು, ಇದರ ಏಳಿಗೆಗಾಗಿ ದುಡಿಯಲು ಮತ್ತು ದೇಶಕ್ಕೆ ನಿಷ್ಠರಾಗಿರಲು ಯಾರೂ ಯಾರಿಗೂ ಹೇಳಿಕೊಡಬೇಕಿಲ್ಲ. ದೇಶಪ್ರೇಮ ಯಾರ ಖಾಸಗಿ ಸೊತ್ತೂ ಅಲ್ಲ. ಯಾಕೂಬ್ ಪ್ರಕರಣದ ಮೇಲಿನ ಚರ್ಚೆಯು ಈ ಮೂಲಭೂತ ಬೇಡಿಕೆಗಳಿಗೆ ಧಕ್ಕೆ ತರುವಂತೆ ಅಥವಾ ಅದರಲ್ಲಿ ಚಂಚಲತೆ ಉಂಟು ಮಾಡುವಂತೆ ಯಾವತ್ತೂ ಇರಲೇಬಾರದು.

.