Thursday 24 December 2015

ಸಮಸ್ಯೆ ವಯಸ್ಸಿನದ್ದೋ ವಾತಾವರಣದ್ದೋ?

      ಅಪ್ರಾಪ್ತ ವಯಸ್ಸಿನ ಅಪರಾಧಿಗಳನ್ನು ಹೇಗೆ ನಡೆಸಿಕೊಳ್ಳಬೇಕು? ಅತ್ಯಾಚಾರದಲ್ಲಿ ಭಾಗಿಯಾದ ಪ್ರಾಪ್ತ ವಯಸ್ಕರಿಗೆ ಮರಣದಂಡನೆ ವಿಧಿಸುವಾಗ, ಅದೇ ಅತ್ಯಾಚಾರದಲ್ಲಿ ಭಾಗಿಯಾದವನನ್ನು ಅಪ್ರಾಪ್ತನೆಂಬ ನೆಲೆಯಲ್ಲಿ ಬಿಡುಗಡೆಗೊಳಿಸುವುದು ಎಷ್ಟು ಸಮರ್ಥನೀಯ? ಅದು ತಪ್ಪು ಸಂದೇಶವನ್ನು ರವಾನಿಸದೆ? ಅಪ್ರಾಪ್ತರಲ್ಲಿ ಹುಂಬ ಧೈರ್ಯವನ್ನು ತುಂಬದೇ? ಹಾಗಂತ, ಇದಕ್ಕೆ ಪರಿಹಾರ ಏನು? ಅಪ್ರಾಪ್ತ ವಯಸ್ಸಿನ ಮಿತಿಯನ್ನು ಈಗಿನ 18ರಿಂದ 16ಕ್ಕೋ 14ಕ್ಕೊ ಇಳಿಸುವುದು ಸೂಕ್ತವೇ? ಹಾಗೆ ಮಾಡುವುದರಿಂದ ಹಸುಳೆಗಳನ್ನು ಪ್ರೌಢರೊಂದಿಗೆ ಸಮಗೊಳಿಸಿದಂತಾಗದೆ? 16 ವರ್ಷದ ಎಳೆಯನೂ 50 ವರ್ಷದ ಪ್ರೌಢನೂ ಒಂದೇ ರೀತಿಯೇ? ತಿಳುವಳಿಕೆ, ಬುದ್ಧಿಮತ್ತೆ, ಸರಿ-ತಪ್ಪುಗಳ ಪ್ರಜ್ಞೆ ಎಲ್ಲದರಲ್ಲೂ ಇವರ ಮಧ್ಯೆ ಆಳ ವ್ಯತ್ಯಾಸ ಇರುವಾಗ ಇವರನ್ನು ಒಂದೇ ಕ್ರಿಮಿನಲ್ ನ್ಯಾಯ ಪ್ರಕ್ರಿಯೆಯೊಳಗೆ ತರುವುದು, ಒಟ್ಟಿಗೆ ಕಟಕಟೆಯಲ್ಲಿ ನಿಲ್ಲಿಸುವುದು ಮತ್ತು ಸಮಾನ ಜೈಲಿನಲ್ಲಿಡುವುದು ಸಮರ್ಥನೀಯವೇ? ಎಳೆಯನ ಮಟ್ಟಿಗೆ ಇದು ತಿದ್ದಿಕೊಳ್ಳುವುದಕ್ಕೆ ಅವಕಾಶವನ್ನೇ ನೀಡದ ಏಕಮುಖ ಕ್ರೌರ್ಯವಾಗಬಹುದೇ... ಇತ್ಯಾದಿ ಹತ್ತು ಹಲವು ಪ್ರಶ್ನೆಗಳಿಗೆ ದೆಹಲಿಯ ಇಂಡಿಯಾ ಗೇಟ್ ಮತ್ತೊಮ್ಮೆ ವೇದಿಕೆ ಒದಗಿಸಿದೆ. `ನಿರ್ಭಯ' ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ 2012ರಲ್ಲಿ ಇಂಡಿಯಾ ಗೇಟ್‍ನಲ್ಲಿ ಪ್ರತಿಭಟನೆ ಆರಂಭಗೊಂಡಿತ್ತು. ಆ ಪ್ರತಿಭಟನೆ ಆ ಬಳಿಕ ಎಷ್ಟು ತೀವ್ರತೆಯನ್ನು ಪಡಕೊಂಡಿತ್ತೆಂದರೆ, ದೇಶವನ್ನು ಒಂದು ಚಳವಳಿಯಾಗಿ ಆವರಿಸಿಬಿಟ್ಟಿತು. ಸರಕಾರವೇ ಪ್ರತಿಭಟನೆಗೆ ಶರಣಾಗಿ, ಅತ್ಯಾಚಾರ ವಿರೋಧಿ ಕಾನೂನನ್ನು ರೂಪಿಸುವಷ್ಟು ಅದು ಪರಿಣಾಮಕಾರಿಯಾಯಿತು. ಇದೀಗ ಮತ್ತೊಮ್ಮೆ ಇಂಡಿಯಾ ಗೇಟ್ ಸದ್ದು ಮಾಡಿದೆ. ಆ ಪ್ರಕರಣದ ಬಾಲಾಪರಾಧಿ ಜೈಲಿನಿಂದ ಹೊರಬಂದಿರುವುದನ್ನು ಪ್ರತಿಭಟಿಸಿ ಜನರು ಇಂಡಿಯಾ ಗೇಟ್‍ನ ಬಳಿ ನೆರೆದಿದ್ದಾರೆ. ನಿರ್ಭಯಾಳ ತಾಯಿ ಆಶಾದೇವಿ ಮತ್ತು ತಂದೆ ಬದ್ರಿ ಸಿಂಗ್ ಪ್ರತಿಭಟನೆಯಲ್ಲಿ ಪಾಲುಗೊಂಡಿದ್ದಾರೆ. ಆತನನ್ನು ಬಿಡುಗಡೆಗೊಳಿಸಬಾರದೆಂದು ಅವರೆಲ್ಲ ಒತ್ತಾಯಿಸುತ್ತಿದ್ದಾರೆ. ಒಂದು ರೀತಿಯಲ್ಲಿ, ಇದು ಭಾರತೀಯ ನ್ಯಾಯ ಪ್ರಕ್ರಿಯೆ ಮತ್ತು ಜನರ ಭಾವನೆಗಳ ನಡುವಿನ ಸಂಘರ್ಷದಂತೆ ತೋರುತ್ತಿದೆ. ನ್ಯಾಯ ಸಂಹಿತೆಯ ಪ್ರಕಾರ ಬಾಲಾಪರಾಧಿಗೆ 3 ವರ್ಷಗಳಿಗಿಂತ ಹೆಚ್ಚು ಶಿಕ್ಷೆಯಿಲ್ಲ. ನಿರ್ಭಯಾಳ ಮೇಲೆ ಅತ್ಯಾಚಾರ ನಡೆಸುವಾಗ ಆತನಿಗೆ 18 ವರ್ಷ ತುಂಬಿರಲಿಲ್ಲ ಎಂಬುದೇ ಆತನ ಬಿಡುಗಡೆಗಿರುವ ಏಕೈಕ ಸಬೂಬು. ಈ ಸಬೂಬನ್ನು ಹೊರಗಿಟ್ಟು ನೋಡಿದರೆ, ಎಲ್ಲ ರೀತಿಯಲ್ಲೂ ಆತ ಪರಮ ಕ್ರೂರಿಯೇ. ಮರಣದಂಡನೆಗೆ ಒಳಗಾದ ಇತರ ಮೂವರಿಗಿಂತ ಹೆಚ್ಚು ಕ್ರೌರ್ಯವನ್ನು ಮೆರೆದಿದ್ದು ಈತನೇ ಎಂದು ಹೇಳಲಾಗುತ್ತದೆ. ವಯಸ್ಸಿನ ಹೊರತಾಗಿ ಆತನ ಮೇಲೆ ಕರುಣೆ ತೋರುವುದಕ್ಕೆ ಇನ್ನಾವ ಕಾರಣಗಳೂ ಇಲ್ಲ. ಇಂಡಿಯಾ ಗೇಟ್‍ನಲ್ಲಿ ನೆರೆದಿರುವವರ ವಾದವೂ ಇದುವೇ. ಒಂದು ಕಡೆ ಕಾನೂನು ಇನ್ನೊಂದು ಕಡೆ ಜನರ ಭಾವನೆ.. ಇವುಗಳ ನಡುವೆ ಬಾಲಾಪರಾಧಿ ಸಿಲುಕಿಕೊಂಡಿದ್ದಾನೆ.
   ನಿಜವಾಗಿ, ಅಪ್ರಾಪ್ತರನ್ನು ಮತ್ತು ಪ್ರಾಪ್ತ ವಯಸ್ಕರನ್ನು ಸಮಾನ ತಕ್ಕಡಿಯಲ್ಲಿಡುವುದೇ ತಪ್ಪು. ಇಬ್ಬರ ನಡುವೆ ಬೌದ್ಧಿಕ ಬೆಳವಣಿಗೆ, ಕಾನೂನಿನ ಅರಿವು, ತನ್ನ ಕೃತ್ಯದ ಪರಿಣಾಮದ ತಿಳುವಳಿಕೆ ಇತ್ಯಾದಿಗಳ ವಿಷಯದಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಪ್ರಾಪ್ತನ ಅರಿವಿನ ಮಟ್ಟವನ್ನು ಅಪ್ರಾಪ್ತ ಹೊಂದಿರುವುದಿಲ್ಲ. ಮಗುವಿನ ಕೈಗೆ ವಾಚ್ ಕೊಟ್ಟರೆ ಉಪಯೋಗದ ಹೊರತಾದ ಎಲ್ಲವನ್ನೂ ಅದು ಮಾಡುತ್ತದೆ. ಮಗುವಿನ ಮಟ್ಟಿಗೆ ಅದು ಒಂದು ಆಟದ ಸಾಮಾನು. ಅದನ್ನು ಒಡೆದೂ ಬಿಡಬಹುದು. ಎತ್ತಿ ಎಸೆದು ಬಿಡಲೂ ಬಹುದು. ಆದರೆ ಮಗುತನ ದಾಟಿ ಬಂದ ಮಕ್ಕಳು ವಾಚ್ ಅನ್ನು ನೋಡುವ ವಿಧಾನವೇ ಬೇರೆ. ಅದು ಅವರ ಪಾಲಿಗೆ ಫ್ಯಾಶನ್. ಗೆಳೆಯರೆದುರು ಆಗಾಗ ಟೈಮ್ ನೋಡುವ ನೆಪದಲ್ಲಿ ಪ್ರದರ್ಶಿಸುವ ಹೆಚ್ಚುಗಾರಿಕೆ. ಒಂದು ವೇಳೆ, ಮಗುವನ್ನು ಮತ್ತು ಮಕ್ಕಳನ್ನು ಒಂದೇ ತಟ್ಟೆಯಲ್ಲಿ ಇಟ್ಟು ನೋಡಿದರೆ ಏನಾಗಬಹುದು? ಬಹುಶಃ, ಹದಿಹರೆಯದವರು ಮತ್ತು ವಯಸ್ಕರನ್ನು ಈ ಮಾನದಂಡವನ್ನಿಟ್ಟುಕೊಂಡು ತೂಗಿದರೆ ಉತ್ತಮವೇನೋ ಅನಿಸುತ್ತದೆ. ಹಾಗಂತ, ಅತ್ಯಾಚಾರದಲ್ಲಿ ಭಾಗಿಯಾಗುವ ಅಪ್ರಾಪ್ತರು ವಾಚ್ ಪುಡಿ ಮಾಡುವ ಮಗುವಿನಷ್ಟೇ ಮುಗ್ಧರು ಎಂದು ಇದರರ್ಥವಲ್ಲ. ಹದಿಹರೆಯದವರಿಗೆ ಅತ್ಯಾಚಾರವು ತಪ್ಪು ಮತ್ತು ಅದಕ್ಕೆ ಶಿಕ್ಷೆ ಇದೆ ಎಂಬುದು ಗೊತ್ತಿರಲೂ ಬಹುದು. ಆದರೂ, ಅವರನ್ನು ವಯಸ್ಕರಿಗೆ ಸಮಾನವಾಗಿ ನೋಡುವುದು ಅಪ್ರಬುದ್ಧ ಮತ್ತು ದುಡುಕುತನದಂತೆ ತೋರುತ್ತದೆ.
      ನಿಜವಾಗಿ, ಆಧುನಿಕ ತಂತ್ರಜ್ಞಾನಗಳು ತೀರಾ ಬೆಳೆದಿರುವ ಮತ್ತು ಮೊಬೈಲ್‍ನಲ್ಲಿ `ಸರ್ವವೂ' ಲಭ್ಯವಾಗುತ್ತಿರುವ ಇಂದಿನ ದಿನಗಳು ಹದಿಹರೆಯವನ್ನು ಅಪಾಯಕಾರಿಯಾಗುವಂತೆ ತಯಾರುಗೊಳಿಸುತ್ತಿದೆ. 10 ವರ್ಷಗಳ ಹಿಂದಿನ ಹದಿಹರೆಯಕ್ಕೂ ಇವತ್ತಿನ ಹದಿಹರೆಯಕ್ಕೂ ಬೌದ್ಧಿಕವಾಗಿಯೂ ಭೌತಿಕವಾಗಿಯೂ ಧಾರಾಳ ಅಂತರಗಳಿವೆ. ಇವತ್ತು ಅಪ್ರಾಪ್ತನು/ಳು ಪ್ರಾಪ್ತ ವಯಸ್ಕನಷ್ಟು ಪ್ರಬುದ್ಧವಾಗಿ ಮಾತಾಡುತ್ತಾನೆ/ಳೆ. ಯಾವುದೇ ವಿಷಯದ ಮೇಲೆ ಪ್ರಾಪ್ತ ವಯಸ್ಕನಿಗೆ ಸರಿಸಮವಾದ ಮಾಹಿತಿಯನ್ನು ಪಡೆಯುವ ಎಲ್ಲ ಸೌಲಭ್ಯಗಳೂ ಇವತ್ತು ಅಪ್ರಾಪ್ತರಿಗಿವೆ. ಒಂದು ರೀತಿಯಲ್ಲಿ, ಇವತ್ತಿನ ತಂತ್ರಜ್ಞಾನಗಳು ಅಪ್ರಾಪ್ತರನ್ನು ಅಕಾಲಿಕ ಪ್ರಾಪ್ತ ವಯಸ್ಕರನ್ನಾಗಿ ಮಾಡುತ್ತಿವೆ. ಅವರು ಯಾವ ವಿಷಯದ ಮೇಲೆ ಕುತೂಹಲ ವ್ಯಕ್ತಪಡಿಸುತ್ತಾರೋ ಆ ಕುತೂಹಲವನ್ನು ತಣಿಸುವುದಕ್ಕೆ ಬೆರಳ ತುದಿಯಲ್ಲೇ ಅವಕಾಶವನ್ನು ಒದಗಿಸುತ್ತಿದೆ. 20 ವರ್ಷಗಳ ಹಿಂದೆ ಆಗಿದ್ದರೆ ನೀಲಿ ಚಿತ್ರವನ್ನು ವೀಕ್ಷಿಸುವುದಕ್ಕೆ ಚಿತ್ರ ಮಂದಿರಕ್ಕೆ ಹೋಗಬೇಕಿತ್ತು. ಅದೂ ಕದ್ದು ಮುಚ್ಚಿ- ರಾತ್ರಿಯ ವೇಳೆ ಹೋಗುವವರೇ ಹೆಚ್ಚಿದ್ದರು. ಇದೊಂದೇ ಅಲ್ಲ, `ತಪ್ಪು' ಎಂದು ಸಮಾಜ ಯಾವುದರ ಮೇಲೆಲ್ಲ ಮುದ್ರೆ ಹಾಕಿತ್ತೋ ಅವೆಲ್ಲವೂ ಸುಲಭವಾಗಿ ಲಭ್ಯವಾಗದಂಥ ವಾತಾವರಣ ಆಗೆಲ್ಲ ಇತ್ತು. ಆದರೆ ಇವತ್ತು ಆ ಬೇಲಿಯೇ ಕಿತ್ತು ಹೋಗಿದೆ. ಬೇಲಿಯೇ ಇಲ್ಲದ ವಿಶಾಲ ಜಗತ್ತೊಂದು ಇವತ್ತು ಪ್ರಾಪ್ತರು-ಅಪ್ರಾಪ್ತರು ಎಂಬ ಬೇಧವಿಲ್ಲದೇ ಎಲ್ಲರೆದುರೂ ತೆರೆದುಕೊಂಡಿದೆ. ಕೆಟ್ಟದ್ದನ್ನು ಇವತ್ತು ಕದ್ದು-ಮುಚ್ಚಿ-ರಾತ್ರಿ ವೇಳೆ ನೋಡಬೇಕಾದ ಅಗತ್ಯವಿಲ್ಲ. ಎಲ್ಲವನ್ನೂ ಮೊಬೈಲ್ ಒದಗಿಸುತ್ತದೆ. ಅಪ್ರಾಪ್ತರಲ್ಲಿ ಪ್ರೌಢತನವನ್ನು ಹುಟ್ಟಿಸುವುದಕ್ಕೆ ಬೇಕಾದ ಎಲ್ಲವೂ ಇವತ್ತು ಮೊಬೈಲ್‍ನಲ್ಲಿ ಸುಲಭದಲ್ಲೇ ದಕ್ಕುತ್ತಿದೆ. ಇಂಥ ಸ್ಥಿತಿಯಲ್ಲಿ, ಅಪ್ರಾಪ್ತ ವಯಸ್ಸಿನ ಮಿತಿಯನ್ನು ತಗ್ಗಿಸುವುದೋ ಅಥವಾ ಅವರು ಭಾಗಿಯಾದ ಅತ್ಯಾಚಾರದಂಥ ಹೀನ ಕೃತ್ಯಗಳನ್ನು ಪ್ರಾಪ್ತ ವಯಸ್ಕರ

ಪರಿಚ್ಛೇದದಡಿಯಲ್ಲಿ ತಂದು ವಿಚಾರಣೆಗೆ ಒಳಪಡಿಸುವುದೋ ಸಮಸ್ಯೆಗೆ ಉತ್ತರವಾಗುವ ಸಾಧ್ಯತೆಯಿಲ್ಲ. ಇದರ ಬದಲು ಎಳೆ ಮನಸ್ಸನ್ನು ಚಂಚಲಗೊಳಿಸುವವುಗಳ ಅಧ್ಯಯನ ನಡೆಸಬೇಕು. ಆಧುನಿಕ ತಂತ್ರಜ್ಞಾನಗಳನ್ನು ಹೇಗೆ ಮತ್ತು ಯಾಕಾಗಿ ಬಳಸಬೇಕೆಂಬ ಬಗ್ಗೆ ಮನಮುಟ್ಟುವ ರೀತಿಯಲ್ಲಿ ಎಳೆ ಮನಸ್ಸಿಗೆ ತಿಳಿಸಿಕೊಡಬೇಕು. ಇತರರನ್ನು ಹೇಗೆ ಕಾಣಬೇಕು ಮತ್ತು ಗೌರವಿಸಬೇಕು ಎಂಬುದನ್ನು ಆಗಾಗ ಹೇಳಿಕೊಡುತ್ತಲಿರಬೇಕು. ಇವು ಮತ್ತು ಇಂತಹ ಇನ್ನಿತರ ತಿದ್ದುವ ವಿಧಾನಗಳು ‘ಅಪ್ರಾಪ್ತ ಅಪರಾಧ’ವನ್ನು ತಡೆಗಟ್ಟುವುದಕ್ಕೆ ಪರಿಹಾರ ಆಗಬಹುದೇ ಹೊರತು ವಯಸ್ಸಿನ ಮಿತಿಯನ್ನು ಇಳಿಸುವುದಲ್ಲ. ಒಂದು ವೇಳೆ, ಇವತ್ತು ವಯಸ್ಸಿನ ಮಿತಿಯನ್ನು 16ಕ್ಕೆ ಇಳಿಸಿದರೆ ಇನ್ನೈದು ವರ್ಷಗಳಲ್ಲಿ ಅದನ್ನು 14ಕ್ಕೆ ಇಳಿಸಬೇಕಾದ ಅಗತ್ಯವೂ ಕಂಡುಬರಬಹುದು. ಸಮಸ್ಯೆಯಿರುವುದು ವಯಸ್ಸಿನಲ್ಲಲ್ಲ, ಆ ವಯಸ್ಸಿಗೆ ನಾವೇನನ್ನು ತುಂಬಿಸುತ್ತಿದ್ದೇವೆ ಎಂಬುದರಲ್ಲಿ. ನಿರ್ಭಯ ಪ್ರಕರಣದ ಬಾಲಾಪರಾಧಿಯನ್ನು ನಾವು ಈ ಮಾನದಂಡದಿಂದಲೇ ವಿಶ್ಲೇಷಿಸಬೇಕಾಗಿದೆ.

Tuesday 15 December 2015

ಹೆಣ್ಣು-ಗಂಡು ಮತ್ತು ಸಮಾನತೆ

    
ಜಾತ್ಯತೀತತೆ (Secularism) ಮತ್ತು ಲಿಂಗ ಸಮಾನತೆ (Gender Equality) ಎಂಬೆರಡು ಪದಗಳು ದೇಶ, ಕಾಲ, ಸಂಸ್ಕ್ರಿತಿಗಳಿಗೆ ಹೊಂದಿಕೊಂಡು ಭಿನ್ನಭಿನ್ನ ರೀತಿಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗಿವೆ. ಜಾತ್ಯತೀತತೆಗೆ ಯುರೋಪಿಯನ್ ರಾಷ್ಟ್ರಗಳು ಕೊಟ್ಟಿರುವ ಅರ್ಥವನ್ನು ಭಾರತೀಯ ಉಪಭೂಖಂಡದ ರಾಷ್ಟ್ರಗಳು ಒಪ್ಪಿಕೊಂಡಿಲ್ಲ. ಅವು ಈ ಪದವನ್ನು ತನ್ನದೇ ಆದ ಪರಿಭಾಷೆಯಲ್ಲಿ ಓದುತ್ತಿವೆ. ಯುರೋಪಿಯನ್ ಪ್ರಣೀತ ಲಿಂಗ ಸಮಾನತೆಯೂ ಇದಕ್ಕಿಂತ ಭಿನ್ನವಲ್ಲ. ಅದು ಕೂಡ ಪ್ರಶ್ನೆ, ಟೀಕೆ, ವ್ಯಂಗ್ಯಕ್ಕೆ ಈಡಾಗಿದೆ. ಹೆಣ್ಣು-ಗಂಡು ಸಮಾನರೆಂದಾದರೆ ರಿಲೇ, ಟೆನ್ನಿಸ್, ಬಾಕ್ಸಿಂಗ್, ಕ್ರಿಕೆಟ್ ಮುಂತಾದ ಕ್ಷೇತ್ರಗಳೇಕೆ ಇವರನ್ನು ಅಸಮಾನವಾಗಿ ನೋಡುತ್ತಿವೆ ಎಂದು ಪ್ರಶ್ನಿಸುವವರಿದ್ದಾರೆ. ಟೆನ್ನಿಸ್‍ನಲ್ಲಿ ಪುರುಷನು 5 ಸೆಟ್‍ಗಳಲ್ಲಿ 5 ಗಂಟೆಗಳಷ್ಟು ದೀರ್ಘ ಕಾಲ ಆಡಬಲ್ಲ. ಆದರೆ ಮಹಿಳಾ ಟೆನ್ನಿಸ್‍ಗಿರುವುದೇ 3 ಸೆಟ್. ಹೆಚ್ಚೆಂದರೆ ಒಂದೂವರೆ ಎರಡು ಗಂಟೆಗಳ ಒಳಗೆ ಸೋಲು-ಗೆಲುವು ನಿರ್ಣಯವಾಗುತ್ತದೆ. 100 ವಿೂಟರ್ ಓಟದಲ್ಲಿ ಉಸೇನ್ ಬೋಲ್ಟ್ ನ ಸಾಧನೆಯನ್ನು ಯಾವ ಮಹಿಳಾ ಓಟಗಾರ್ತಿಗೂ ಸರಿಗಟ್ಟಲು ಸಾಧ್ಯವಾಗಿಲ್ಲ. ಬೋಲ್ಟ್ ಆ ದೂರವನ್ನು 9.57 ಸೆಕೆಂಡ್‍ಗಳಲ್ಲಿ ಓಡಿ ಮುಗಿಸಿದರೆ ಮಹಿಳಾ ಓಟಗಾರ್ತಿಯು 10 ಸೆಕೆಂಡ್‍ಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಕ್ರಮಿಸಿರುವುದೇ ಈ ವರೆಗಿನ ದಾಖಲೆ. ಕ್ರಿಕೆಟ್ ಆಗಲಿ, ಟೆನಿಸ್, ಫುಟ್ಬಾಲ್, ರೇಸ್ ಸಹಿತ ಹತ್ತಾರು ಕ್ರೀಡಾ ಪ್ರಕಾರಗಳಲ್ಲಿ ಪುರುಷ ಕ್ರೀಡೆಯೇ ಹೆಚ್ಚು ಆಕರ್ಷಕ ಮತ್ತು ಜನಪ್ರಿಯ. ಲಿಂಗ ಸಮಾನತೆಯ ಬಗ್ಗೆ ಧಾರಾಳ ಮಾತಾಡುವ ಸಿನಿಮಾ ಕ್ಷೇತ್ರವಂತೂ ಅಸಮಾನತೆಯನ್ನೇ ಪ್ರತಿದಿನವೂ ಪೋಷಿಸುತ್ತಾ ಬರುತ್ತಿದೆ. ಶಾರುಖ್, ಅವಿೂರ್, ಬಚ್ಚನ್‍ಗಳು ಇಳಿಪ್ರಾಯದಲ್ಲೂ ಹೀರೋಗಳಾಗಿಯೇ ಮೆರೆಯುತ್ತಿದ್ದಾರೆ.  ಡಾ| ರಾಜ್‍ಕುಮಾರ್‍,ವಿಷ್ಣುವರ್ಧನ್ ರು ಕೊನೆವರೆಗೂ ಹೀರೋಗಳಾಗಿಯೇ ಪಾತ್ರ ನಿರ್ವಹಿಸಿದರು. ಆದರೆ ಇವರೆಲ್ಲರ ಯೌವನ ಕಾಲದಲ್ಲಿ ಇವರ ಜೊತೆ ಹೀರೋಯಿನ್‍ಗಳಾದವರು ಕೆಲ ವರ್ಷಗಳಲ್ಲೇ ಆ ಪಾತ್ರದಿಂದ ಕೆಳಗಿಳಿಯಬೇಕಾಯಿತು. ಆ ಬಳಿಕ ಇವರು ಈ ಹೀರೋಗಳ ಅತ್ತೆ, ತಾಯಿ, ಚಿಕ್ಕಮ್ಮ ಮುಂತಾದ ಪಾತ್ರಕ್ಕೆ ಸೀಮಿತಗೊಳ್ಳಬೇಕಾಯಿತು. ಯುರೋಪಿಯನ್ ಪ್ರಣೀತ ಲಿಂಗ ಸಮಾನತೆಯು ಸಂಘರ್ಷಕ್ಕೆ ಒಳಗಾಗುವುದು ಇಲ್ಲಿ ಮತ್ತು ಇಂತಹ ಅನೇಕಾರು ವಿಷಯಗಳಲ್ಲಿ. ನಿಜವಾಗಿ, ಹೆಣ್ಣು-ಗಂಡಿನ ನಡುವೆ ಪ್ರಾಕೃತಿಕವಾಗಿಯೇ ಕೆಲವು ವೈಶಿಷ್ಟ್ಯಗಳಿವೆ. ದುರಂತ ಏನೆಂದರೆ, ಆಧುನಿಕ ಜಗತ್ತಿನ ಲಿಂಗ ಸಮಾನತೆಯ ಕೂಗಿನಲ್ಲಿ ಈ ವೈಶಿಷ್ಟ್ಯತೆಯನ್ನೇ ನಿರ್ಲಕ್ಷಿಸುವ ಮತ್ತು ತಿರಸ್ಕರಿಸುವ ಆವೇಶ ಕಾಣಿಸುತ್ತದೆ. ಪುರುಷರನ್ನು ದ್ವೇಷಿಸುವುದೇ ಫೆಮಿನಿಸಂ ಆಗಿರಬೇಕು ಎಂದು ಅಂದುಕೊಳ್ಳುವಷ್ಟರ ಮಟ್ಟಿಗೆ ಲಿಂಗ ಸಮಾನತೆಯ ಹೋರಾಟವು ವೈರುಧ್ಯಗಳಿಂದ ಕೂಡಿವೆ. ಅಂದಹಾಗೆ, ಇಸ್ಲಾಮ್ ಲಿಂಗ ಸಮಾನತೆಯ ಕುರಿತಂತೆ ಈ ವೈರುಧ್ಯಗಳಾಚೆಗೆ ಸುಧಾರಿತ ವಿಧಾನವನ್ನು ಪ್ರಸ್ತುತಪಡಿಸುತ್ತದೆ. ಪ್ರಾಕೃತಿಕ ವೈಶಿಷ್ಟ್ಯವನ್ನು ಮಾನ್ಯ ಮಾಡುತ್ತಲೇ ಹೆಣ್ಣು-ಗಂಡಿನ ನಡುವೆ ಸಮಾನ ನ್ಯಾಯವನ್ನು ಅದು ಎತ್ತಿ ಹಿಡಿಯುತ್ತದೆ. ಆದ್ದರಿಂದಲೇ, ಹೆಣ್ಣಿಗೆ ಗಂಡಿಗಿಂತ ಹೆಚ್ಚು ಆಸ್ತಿ, ತಾಯಿಗೆ-ತಂದೆಗಿಂತ ಮೂರು ಪಟ್ಟು ಹೆಚ್ಚು ಸ್ಥಾನಮಾನ, ಹೆಣ್ಣಿಗೆ ವಿವಾಹ ಧನ ಇತ್ಯಾದಿ ವಿಶೇಷ ಪರಿಗಣನೆಯನ್ನು ನೀಡಿದೆ. ತಾಯಿ, ತಂಗಿ, ಪತ್ನಿ, ಸಹೋದರಿ, ಮಗಳು.. ಮುಂತಾದುವುಗಳನ್ನು ಇಸ್ಲಾಮ್ ಪ್ರಕೃತಿ ಸಹಜ ಪಾತ್ರಗಳಾಗಿ ಕಾಣುತ್ತದೆಯೇ ಹೊರತು ಅವುಗಳನ್ನು ಬಲಹೀನವಾಗಿಯೋ ಅಬಲೆಯಾಗಿಯೋ ಅಲ್ಲ ಅಥವಾ ಅವುಗಳು ಪತಿ, ತಂದೆ, ಅಣ್ಣ-ತಮ್ಮ ಮುಂತಾದ ಪಾತ್ರಗಳ ಗುಲಾಮವಾಗಿಯೂ ಅಲ್ಲ. ಅವರ ನಡುವಿನ ಸಮಾನತೆಯನ್ನು ಪವಿತ್ರ ಕುರ್‍ಆನ್ ವಿವಿಧ ಕಡೆ (3:195, 4:124, 16:97, 40:40) ಪ್ರಸ್ತಾಪಿಸುತ್ತದೆ. ನಿಜವಾಗಿ,
    ಇವತ್ತು, ಲಿಂಗ ಸಮಾನತೆ (Gender Equality) ಎಂಬ ಪದಕ್ಕೆ ಹೆಚ್ಚು ಸಂತುಲಿತ ಮತ್ತು ಪ್ರಕೃತಿ ಸಹಜವಾದ ಪರ್ಯಾಯ ಪದವನ್ನು ಹುಡುಕಬೇಕಾಗಿದೆ. ಜೊತೆಗೆ, ಪ್ರಕೃತಿ ಸಹಜ ವೈಶಿಷ್ಟ್ಯವನ್ನು ಹೆಣ್ಣಿನ ‘ದ್ವಿತೀಯ ದರ್ಜೆ’ಗೆ ಪುರಾವೆಯಾಗಿ ಮಂಡಿಸುವುದನ್ನು ಖಂಡಿಸಬೇಕಾಗಿದೆ.

Friday 11 December 2015

ಹಾರೆ, ಪಿಕ್ಕಾಸು, ಗುದ್ದಲಿಗಳನ್ನು ಎತ್ತಿಕೊಳ್ಳುವ ಮೊದಲು...

       ಕಳೆದವಾರ ಎರಡು ಮಸೀದಿಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾದುವು. ಒಂದು; ಡಿ. 6ರ ಬಾಬರಿ ಮಸೀದಿಯಾದರೆ ಇನ್ನೊಂದು, ನಿರಾಶ್ರಿತರಿಗೆ ಆಶ್ರಯ ಒದಗಿಸಿದ ಚೆನ್ನೈಯ ಮಸೀದಿ. ಪ್ರವಾಹ ಪೀಡಿತರನ್ನು ತನ್ನೊಳಗೆ ತುಂಬಿಸಿಕೊಂಡು ಭಕ್ತರನ್ನು ಹೊರಗೆ ನಿಲ್ಲಿಸಿದ ಚೆನ್ನೈಯ ಮಸೀದಿಯ ಕುರಿತಂತೆ ಟು ಸರ್ಕಲ್ ಡಾಟ್ ನೆಟ್, ರೆಡಿಫ್ ಡಾಟ್ ಕಾಮ್ ಸಹಿತ ವಿವಿಧ ಇಂಟರ್‍ನೆಟ್ ಪತ್ರಿಕೆಗಳು ಸಚಿತ್ರವಾಗಿ ವರದಿ ಮಾಡಿವೆ. ನೆರೆಪೀಡಿತರು, ಮಸೀದಿಯ ಸಭಾಂಗಣದಲ್ಲಿ ನಿಂತು ಆಹಾರ ಪಡೆಯುತ್ತಿರುವ ದೃಶ್ಯಗಳು ಅತ್ಯಂತ ಭಾವನಾತ್ಮಕ. ಅಲ್ಲಿ ಮನುಷ್ಯರು ಮಾತ್ರ ಇದ್ದರು. ಹಿಂದೂ-ಮುಸ್ಲಿಮ್-ಕ್ರೈಸ್ತ ಇತ್ಯಾದಿಯಾಗಿ ವಿಭಜಿಸಲು ಸಾಧ್ಯವೇ ಆಗದಷ್ಟು ಸಮಾನಾಂಶಗಳು ಅವರೆಲ್ಲರಲ್ಲೂ ಇದ್ದುವು. ಸಾರಿ ಉಟ್ಟ ಮತ್ತು ಶಿರವಸ್ತ್ರ ಧರಿಸದ ಮಹಿಳೆಯರು; ಪಂಚೆ ಉಟ್ಟ ಪುರುಷರು, ಲಂಗ-ಧಾವಣಿಯಲ್ಲಿ ಯುವತಿಯರು.. ಹೀಗೆ ಮನುಷ್ಯರೆಲ್ಲ ಮಸೀದಿಯಲ್ಲಿದ್ದರು. ತಂತಮ್ಮ ಬದುಕನ್ನು ಕಟ್ಟಿಕೊಳ್ಳುವ ತುರ್ತಿನ ಹೊರತಾದ ಇನ್ನಾವುದೂ ಅವರಲ್ಲಿ ಕಂಡುಬರುತ್ತಿರಲಿಲ್ಲ. ಇದೇ ವೇಳೆ, ಚೆನ್ನೈಯ ಮಳೆಯಿಂದ ಯಾವ ತೊಂದರೆಗೂ ಒಳಗಾಗದ ಭಾರತದ ಇತರ ಭಾಗಗಳಲ್ಲಿ ಸಂತೋಷ ಕೂಟಗಳು ಏರ್ಪಾಡಾಗಿದ್ದುವು. ಆ ಸಂತೋಷ ಕೂಟಗಳಿಗೆ ‘ವಿಜಯ ದಿವಸ’ ಎಂಬ ಹೆಸರನ್ನೂ ಕೊಡಲಾಗಿತ್ತು. 1992ರಲ್ಲಿ ಅಯೋಧ್ಯೆಯಲ್ಲಿ ಮಸೀದಿಯೊಂದನ್ನು ಉರುಳಿಸಿದುದೇ ಈ ಸಂತೋಷ ಕೂಟಕ್ಕೆ ಮುಖ್ಯ ಕಾರಣವಾಗಿತ್ತು. ಆ ಧ್ವಂಸ ಕೃತ್ಯವನ್ನು ಈ ಕೂಟಗಳಲ್ಲಿ ಮೆಚ್ಚಿಕೊಳ್ಳಲಾಯಿತು. ಅದಕ್ಕಾಗಿ ಹೆಮ್ಮೆ ಪಡಲಾಯಿತು. ಏನೆನ್ನಬೇಕು ಈ ವೈರುಧ್ಯಕ್ಕೆ? ನಿರಾಶ್ರಿತರಿಗೆ ಮಸೀದಿಯು ಸಮಸ್ಯೆಯಾಗಲಿಲ್ಲ. ಮಸೀದಿಗೂ ಅವರು ಸಮಸ್ಯೆಯಾಗಲಿಲ್ಲ. ನಿರಾಶ್ರಿತರ ಧರ್ಮ, ಜಾತಿ, ವರ್ಣ, ರಾಜಕೀಯ ಒಲವು, ಆಹಾರ ಕ್ರಮ.. ಯಾವುದನ್ನೂ ಪ್ರಶ್ನಿಸದೇ ಮಸೀದಿಯು ಎಲ್ಲರನ್ನೂ ತಬ್ಬಿಕೊಂಡಿತು. ಮನುಷ್ಯರು ಎಂಬ ಏಕ ಹೆಸರಿನ ಹೊರತಾದ ಇನ್ನಾವ ಗುರುತೂ ಅವರಿಗಿರಲಿಲ್ಲ. ಈ ನಿರಾಶ್ರಿತರಿಗೆ ಹಾರೆ, ಪಿಕ್ಕಾಸು, ಗುದ್ದಲಿಯನ್ನು ಕೊಟ್ಟು - ‘ಈ ಮಸೀದಿಯನ್ನು ಉರುಳಿಸಿ’ ಎಂದು ಆಜ್ಞಾಪಿಸಿದರೆ ಅವರ ಉತ್ತರ ಏನಿರಬಹುದು? ಆಜ್ಞಾಪಿಸಿದವರನ್ನು ಧರ್ಮದ್ರೋಹಿಗಳು ಎಂದು ಅವರು ಕರೆಯಲಾರರೇ? ಖಂಡಿಸಲಾರರೇ? ಉರುಳಿಸಬೇಕಾದದ್ದು ಮನದೊಳಗಿನ ದ್ವೇಷದ ಗೋಡೆಯನ್ನೇ ಹೊರತು ಮಸೀದಿಯನ್ನೋ ಮಂದಿರವನ್ನೋ ಅಲ್ಲ ಎಂದು ಸಾರಲಾರರೇ?  ಅಷ್ಟಕ್ಕೂ, ಒಬ್ಬರ ಆರಾಧ್ಯ ಕೇಂದ್ರವನ್ನು ಉರುಳಿಸುವುದು ಸಂತಸಕ್ಕೆ ಕಾರಣವಾಗುವುದಾದರೆ ಆ ಸಂತಸ ಹುಟ್ಟು ಪಡೆದದ್ದು ಎಲ್ಲಿ? ಅದರ ನಿರ್ಮಾತೃಗಳು ಯಾರು? ವಿಷಾದ ಪಡಬೇಕಾದ ಕೃತ್ಯವೊಂದನ್ನು ಸಂತಸ ಪಡುವ ಕೃತ್ಯವಾಗಿ ಮಾರ್ಪಡಿಸಲು ಅವರು ಯಶಸ್ವಿಯಾಗಿದ್ದು ಹೇಗೆ? ಇದಕ್ಕಾಗಿ ಅವರು ಹಂಚಿರಬಹುದಾದ ವಿಷದ ಪ್ರಮಾಣ ಎಷ್ಟು?
  ಅಂದಹಾಗೆ, ಮಂದಿರ, ಮಸೀದಿ, ಚರ್ಚ್ ಸಹಿತ ಧಾರ್ಮಿಕ ಕೇಂದ್ರಗಳು ಪ್ರಕೃತಿ ವಿರೋಧಿ ಬೇಲಿಗಳನ್ನು ಕಟ್ಟಿಕೊಂಡು ಸ್ವಯಂ ಬಂಧನಕ್ಕೆ ಒಳಗಾದಂತೆ ಗೋಚರಿಸುತ್ತಿರುವ ಇಂದಿನ ದಿನಗಳಲ್ಲಿ ಚೆನ್ನೈಯ ಮಳೆ ಮತ್ತು ಮಸೀದಿ ನಮ್ಮೊಳಗನ್ನು ಗಾಢವಾಗಿ ತಟ್ಟಬೇಕಿದೆ. ಮಳೆಯಿಂದಾಗಿ ಚೆನ್ನೈ ನದಿಯಂತೆ ತೇಲುತ್ತಿರುವ ಸಂದರ್ಭದಲ್ಲಿಯೇ ಮಹಾರಾಷ್ಟ್ರದಲ್ಲಿ ಶುದ್ಧೀಕರಣವೊಂದು ನಡೆಯಿತು. ಮಹಿಳೆಯೋರ್ವರು ಶನಿ ದೇಗುಲದೊಳಕ್ಕೆ ತೆರಳಿ ಪೂಜೆಗೈದುದೇ ಈ ಶುದ್ಧೀಕರಣಕ್ಕೆ ಕಾರಣವಾಗಿತ್ತು. ಮಹಿಳೆ ದೇಗುಲ ಪ್ರವೇಶಿಸಿದುದನ್ನು ಅಶುದ್ಧ ಕಾರ್ಯವೆಂದು ಸಾರಲಾಯಿತಲ್ಲದೇ ಅದಕ್ಕೆ ಪ್ರಾಯಶ್ಚಿತ್ತವಾಗಿ ಶುದ್ಧೀಕರಣ ನಡೆಸಲಾಯಿತು. ಈ ಶುದ್ಧೀಕರಣದ ಎರಡು ದಿನಗಳ ಬಳಿಕ ಉತ್ತರ ಪ್ರದೇಶದ ದಾದ್ರಿಯಲ್ಲೂ ಶುದ್ಧೀಕರಣ ನಡೆಯಿತು. ಮುಹಮ್ಮದ್ ಅಖ್ಲಾಕ್‍ನನ್ನು ಥಳಿಸಿ ಕೊಂದ ಬಿಶಾರ ಗ್ರಾಮದಲ್ಲಿ ಗೋಮುತ್ರವನ್ನು ಸಿಂಪಡಿಸಿ ಶುದ್ಧೀಕರಣ ನಡೆಸಲಾಯಿತು. ಅಖ್ಲಾಕ್‍ನು ಗೋವನ್ನು ಕೊಂದುದರಿಂದ ಗ್ರಾಮವು ಅಶುದ್ಧವಾಗಿದೆ ಎಂದು ಶುದ್ಧೀಕರಣ ನಡೆಸಿದವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡರು. ಬಹುಶಃ ಧ್ವಂಸ ಮತ್ತು ಶುದ್ಧೀಕರಣಗಳು ಲಜ್ಜೆಯಿಲ್ಲದೇ ಸಮರ್ಥನೆಗೊಳಗಾಗುತ್ತಿರುವ ಈ ದಿನಗಳಲ್ಲಿ ಧಾರ್ಮಿಕ ಕೇಂದ್ರಗಳು ಹಾಗೂ ಧಾರ್ಮಿಕ ನಿಲುವುಗಳು ಮರು ವ್ಯಾಖ್ಯಾನಕ್ಕೆ ಒಳಗಾಗಬೇಕಾದ ಅಗತ್ಯವಿದೆ. ಈ ಕುರಿತಂತೆ ಚೆನ್ನೈಯ ಮಸೀದಿ ಅತ್ಯಂತ ಪರಿಣಾಮಕಾರಿ ಮಾದರಿಯನ್ನು ದೇಶದ ಮುಂದಿಟ್ಟಿದೆ. ನಿಜವಾಗಿ, ಅನುಮಾನದ ದೊಡ್ಡದೊಂದು ಹುತ್ತವನ್ನು ಬಿಗಿದುಕೊಂಡಿರುವ ಜಾಗಗಳಾಗಿ ಧಾರ್ಮಿಕ ಕೇಂದ್ರಗಳು ಈ ದೇಶದಲ್ಲಿ ಗುರುತಿಸಿಕೊಂಡಿವೆ. ಮಸೀದಿ, ಮದ್ರಸಗಳು; ಚರ್ಚ್-ಮಂದಿರಗಳು ಈ ದೇಶದ ಎಲ್ಲರಿಗೂ ಸರಿಯಾಗಿ ಇನ್ನೂ ತೆರೆದುಕೊಂಡಿಲ್ಲ. ಮಸೀದಿ ಅಥವಾ ಮಂದಿರದ ಅನುಯಾಯಿಗಳಿಗೇ ಅನೇಕ ಬಾರಿ ಅವುಗಳ ಅಗತ್ಯ, ಕಾರ್ಯಕ್ಷೇತ್ರ, ಅವುಗಳ ಹೊಣೆಗಾರಿಕೆಯ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯೂ ಇಲ್ಲ. ಮಸೀದಿಗೋ ಮಂದಿರಕ್ಕೋ ಕಲ್ಲೆಸೆಯುವುದು ಅಥವಾ ಹಂದಿಯದ್ದೋ ದನದ್ದೋ ತಲೆಯನ್ನು ಅವುಗಳ ಎದುರು ಬಿಸಾಡುವುದು ಮತ್ತು ಅದಕ್ಕೆ ಉನ್ಮಾದಗೊಳ್ಳುವುದೆಲ್ಲ ಈ ತಿಳುವಳಿಕೆಯ ಕೊರತೆಯಿಂದಲೇ. ದೇವನನ್ನು ಧ್ಯಾನಿಸುವ ಕೇಂದ್ರವೊಂದು ಹಿಂದೂವನ್ನೋ ಕ್ರೈಸ್ತರನ್ನೋ ದ್ವೇಷಿಸುವುದಕ್ಕೆ ಸಾಧ್ಯವೇ ಇಲ್ಲ. ದೇವನು ನಿರ್ದಿಷ್ಟ ಮನುಷ್ಯರ ಮಧ್ಯೆ ಹಂಚಿಹೋಗಿಲ್ಲ. ಆತ ಎಲ್ಲರ ದೇವ ಎಂದಾದರೆ ಮತ್ತು ನಾಮಗಳು ಮಾತ್ರ ಭಿನ್ನ ಅನ್ನುವುದಾದರೆ, ಮಸೀದಿಯನ್ನು ಧ್ವಂಸಗೊಳಿಸುವುದರಿಂದ ಸಂತಸ ಪಡುವುದಕ್ಕಾದರೂ ಏನಿದೆ? ದೇವಾಲಯಕ್ಕೆ ಕಲ್ಲೆಸೆದು ಜಂಭ ಕೊಚ್ಚಿಕೊಳ್ಳುವುದರಲ್ಲಿ ಏನರ್ಥವಿದೆ? ದುರಂತ ಏನೆಂದರೆ, ಇವತ್ತು ಭಕ್ತರಿಗಿಂತ ಭಕ್ತಿಯ ಕೇಂದ್ರಗಳೇ ಹೆಚ್ಚು ಸುದ್ದಿಗೊಳಗಾಗುತ್ತಿವೆ. ಮನುಷ್ಯರಿಗೆ ನೆಮ್ಮದಿ ನೀಡಬೇಕಾದ ಕೇಂದ್ರಗಳು ನೆಮ್ಮದಿ ರಹಿತವಾದ ಆಘಾತಕಾರಿ ಸುದ್ದಿಗಳನ್ನು ಹೊರತರುತ್ತಿವೆ. ಬಹಿಷ್ಕಾರ, ಹಾದರ, ಶುದ್ಧೀಕರಣ, ಅಸ್ಪೃಶ್ಯತೆಗಳಿಂದಾಗಿ ಧಾರ್ಮಿಕ ಕೇಂದ್ರಗಳೂ ವ್ಯಾವಹಾರಿಕ ಕಟ್ಟಡಗಳೆಂಬಂತೆ ವರ್ತಿಸತೊಡಗಿವೆ. ಇಂಥ ಸ್ಥಿತಿಯಲ್ಲಿ ಚೆನ್ನೈಯ ಮಸೀದಿಯನ್ನು
ಮುಂದಿಟ್ಟುಕೊಂಡು ಮಾಧ್ಯಮಗಳು ಗಂಭೀರ ಚರ್ಚೆಯೊಂದನ್ನು ಹಮ್ಮಿಕೊಳ್ಳಬೇಕಾಗಿದೆ. ಮಸೀದಿಯನ್ನು ಉರುಳಿಸಿ ಸಂತಸಪಡುವ ಮಂದಿಯ ಎದುರು ಜನರಿಗೆ ಆಶ್ರಯ ನೀಡಿದ ಮಸೀದಿಯನ್ನು ತಂದು ನಿಲ್ಲಿಸಬೇಕಾಗಿದೆ.
           ಒಂದು ರೀತಿಯಲ್ಲಿ ದೇವಾಲಯ ಮತ್ತು ಮಸೀದಿಯನ್ನು ಪರಮ ವೈರಿಗಳಂತೆ ಎದುರು-ಬದುರಾಗಿ ನಿಲ್ಲಿಸುವ ಶ್ರಮವು ಸ್ವಾತಂತ್ರ್ಯ ಪೂರ್ವದಿಂದಲೇ ಈ ದೇಶದಲ್ಲಿ ನಡೆಯುತ್ತಿದೆ. 80ರ ದಶಕದ ಬಳಿಕ ಈ ಪ್ರಯತ್ನ ಎಷ್ಟು ಪ್ರಾಬಲ್ಯ ಪಡೆಯಿತೆಂದರೆ, ಮಸೀದಿಯನ್ನು ಭಯಾನಕವಾಗಿ, ಹಿಂದೂ ವಿರೋಧಿಯಾಗಿ, ಷಡ್ಯಂತ್ರದ ತಾಣವಾಗಿ ವ್ಯಾಖ್ಯಾನಿಸುವಷ್ಟು. ಮದರಗಳನ್ನು ಭಯೋತ್ಪಾದಕ ಕೇಂದ್ರವಾಗಿ ಬಿಂಬಿಸಲಾದದ್ದೂ ಆ ಬಳಿಕವೇ. 1992ರಲ್ಲಿ ಬಾಬರಿ ಮಸೀದಿಯನ್ನು ಉರುಳಿಸಲಾಯಿತು. ಈ ಧ್ವಂಸ ಕೃತ್ಯಕ್ಕಿಂತಲೂ ಭೀಕರ ಏನೆಂದರೆ, ಆ ಕೃತ್ಯವನ್ನು ಎಲ್ಲರೆದುರೇ ಧ್ವಂಸಕರು ಸಮರ್ಥಿಸಿಕೊಂಡದ್ದು. ಇದಾಗಿ 23 ವರ್ಷಗಳ ಬಳಿಕ ಚೆನ್ನೈಯ ಮಸೀದಿಯು ಉರುಳಿಸಿದವರನ್ನೂ ಉರುಳಿದವರನ್ನೂ ಸಮಾನವಾಗಿ ತನ್ನೊಳಗೆ ಸೇರಿಸಿಕೊಂಡಿದೆ. ಆ ಮೂಲಕ 23 ವರ್ಷಗಳ ಹಿಂದೆ ಧ್ವಂಸಗೊಳಿಸಿದವರ ಕಾರ್ಯಶುದ್ಧತೆಯನ್ನು ಪ್ರಶ್ನಿಸಿದೆ. ಈಗ ಉತ್ತರಿಸಬೇಕಾದವರು ಬಾಬರಿಯನ್ನು ಉರುಳಿಸಿ ಸಿಹಿ ಹಂಚಿಕೊಂಡವರು. ವಿಜಯೋತ್ಸವ ಆಚರಿಸಿದವರು. ಮಸೀದಿಯನ್ನು ಉರುಳಿಸುವುದಕ್ಕಾಗಿ ಷಡ್ಯಂತ್ರ ರಚಿಸಿದವರು. ಆದರೆ ಅವರು ಈ ಕುರಿತಂತೆ ಮಾತನ್ನೇ ಆಡುತ್ತಿಲ್ಲ. ಚೆನ್ನೈಯ ಮಸೀದಿಯಲ್ಲಿ ನೀವೇಕೆ ತಂಗಿದಿರಿ ಎಂದು ತಂಗಿದವರನ್ನು ಪ್ರಶ್ನಿಸುತ್ತಿಲ್ಲ. ಅಂಥದ್ದೊಂದು ಘಟನೆ ನಡೆದೇ ಇಲ್ಲವೋ ಎಂಬಂತೆ ಅವರೆಲ್ಲ ವಿಜಯ ದಿವಸದಲ್ಲಿ ಮಗ್ನರಾಗಿದ್ದಾರೆ. ನಿಜವಾಗಿ, ಚೆನ್ನೈ ಮಳೆಯಲ್ಲಿ ಸಿಕ್ಕ ಹಲವಾರು ಪಾಠಗಳಲ್ಲಿ ಮನುಷ್ಯ ಪ್ರೇಮದ ಈ ಪಾಠವೂ ಒಂದು. ನಾವು-ಅವರು, ಮ್ಲೇಚ್ಛರು-ಶ್ರೇಷ್ಠರು ಎಂದೆಲ್ಲಾ ವಿಭಜಿಸಿಕೊಂಡು ಬದುಕುತ್ತಿರುವವರಿಗೆ ಮಳೆ ಅನೇಕಾರು ಪಾಠಗಳನ್ನು ಹೇಳಿದೆ. ಎಲ್ಲರೂ ಸಮಾನರು ಮತ್ತು ಪರಸ್ಪರ ಕೊಡು-ಕೊಳ್ಳುವಿಕೆಯೊಂದಿಗೆ ಬದುಕಬೇಕಾದವರು ಎಂಬುದೇ ಮಳೆ ಸಾರಿದ ಪ್ರಮುಖ ಸಂದೇಶ. ಧ್ವಂಸಕೋರರಿಗೆ ಇದು ಅರ್ಥವಾಗಲಿ.


Thursday 3 December 2015

ಅಸಹಿಷ್ಣುತೆಯ ಚರ್ಚೆ ಮತ್ತು ಮದ್ಯ

      ಅಸಹಿಷ್ಣುತೆಯ ಸುತ್ತ ‘ಉಗ್ರರೂಪ'ದ ಚರ್ಚೆಯೊಂದು ನಡೆಯುತ್ತಿರುವ ಹೊತ್ತಿನಲ್ಲಿಯೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‍ರು ಈ ಚರ್ಚೆಯ ವ್ಯಾಪ್ತಿಯನ್ನು ಒಂದಷ್ಟು ಹಿಗ್ಗಿಸಿದ್ದಾರೆ. ನಿಜಕ್ಕೂ ಅಸಹಿಷ್ಣುತೆ ಎಲ್ಲಿದೆ, ಯಾವ ರೂಪದಲ್ಲಿದೆ, ಅಸಹಿಷ್ಣುತೆಯ ನಿಜ ಸಂತ್ರಸ್ತರು ಹೇಗಿದ್ದಾರೆ, ಅವರಿಗೆ ರಾಜಕೀಯ ಪ್ರಾತಿನಿಧ್ಯ ಎಷ್ಟಿದೆ, ಅಸಹಿಷ್ಣುತೆಯಿಂದ ಅವರು ಅನುಭವಿಸಿದ ನೋವು-ಕಣ್ಣೀರುಗಳನ್ನು ಮುಖ್ಯ ವಾಹಿನಿಯ ಮಾಧ್ಯಮ ಮತ್ತು ‘ದೇಶಭಕ್ತಿ'ಯ ಗುಂಪು ಎಷ್ಟಂಶ ಗಂಭೀರವಾಗಿ ಪರಿಗಣಿಸಿವೆ, ಈ ದೇಶದಿಂದ ತೊಲಗಬೇಕಾದವರ ಪಟ್ಟಿಯೊಂದನ್ನು ಈ ಮಂದಿ ತಯಾರಿಸುವುದಾದರೆ ಆ ಪಟ್ಟಿಯ ಮುಂಚೂಣಿಯಲ್ಲಿ ಯಾರ ಹೆಸರಿರಬಹುದು.. ಇವು ಮತ್ತು ಇಂಥ ಅನೇಕಾರು ಪ್ರಶ್ನೆಗಳಿಗೆ ಉತ್ತರವಾಗಬಹುದಾದ ಒಂದು ಗುಂಪಿನ ಬಗ್ಗೆ ನಿತೀಶ್ ಕುಮಾರ್ ದೇಶದ ಗಮನ ಸೆಳೆದಿದ್ದಾರೆ. ಅವರೇ ಮಹಿಳೆಯರು. ಇವರು ‘ಮದ್ಯ' ಎಂಬ ಪರಮ ಅಸಹಿಷ್ಣುತೆಯಿಂದ ಪಡುತ್ತಿರುವ ಪಾಡನ್ನು ನಿತೀಶ್ ಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಮುಂದಿನ ವರ್ಷದ ಎಪ್ರಿಲ್‍ನಿಂದ ಈ ಅಸಹಿಷ್ಣುತೆಗೆ ಸಂಪೂರ್ಣ ನಿಷೇಧ ವಿಧಿಸುವುದಾಗಿ ಘೋಷಿಸಿದ್ದಾರೆ.
  ಸಹಿಷ್ಣು ಮತ್ತು ಅಸಹಿಷ್ಣು ಎಂಬೆರಡು ಪದಗಳನ್ನು ಅವಿೂರ್ ಖಾನ್, ಶಾರುಖ್ ಖಾನ್ ಮತ್ತು ಪ್ರಶಸ್ತಿ ವಾಪಸು ಮಾಡಿದ ಸಾಹಿತಿಗಳಿಗೆ ಸೀಮಿತಗೊಳಿಸಿ ಈ ದೇಶದಲ್ಲಿ ಚರ್ಚೆಯೊಂದು ಆರಂಭವಾಗಿ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಪ್ರಧಾನಿ ಮೋದಿಯವರ ಬೆಂಬಲಿಗರ ‘ದೇಶಭಕ್ತಿ'ಗೆ ಇರುವ ಮಿತಿಗಳಷ್ಟೇ ಈ ಅಸಹಿಷ್ಣುತೆಯ ಚರ್ಚೆಗೂ ನಾವೆಲ್ಲ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಿತಿಗಳನ್ನು ಹೇರಿಕೊಂಡು ಚರ್ಚೆಯಲ್ಲಿ ಭಾಗವಹಿಸುತ್ತಿದ್ದೇವೆ. ಆದರೆ, ಈ ಚರ್ಚೆಯ ಅಂತಿಮ ಹಂತದಲ್ಲಿ ಪ್ರವೇಶಿಸಿದ ನಿತೀಶ್ ಕುಮಾರ್ ಅವರು ಇಡೀ ಚರ್ಚೆಯನ್ನು ಇನ್ನೊಂದು ಮಗ್ಗುಲಿಗೆ ಕೊಂಡೊಯ್ಯಲು ಶ್ರಮಿಸಿದ್ದಾರೆ. ಈ ಮಗ್ಗುಲು ಮಹಿಳೆಯರದ್ದು. ಬಿಹಾರದಲ್ಲಿ ಈ ಬಾರಿ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ಮಹಿಳೆಯರು. ಅದಕ್ಕೆ ನಿತೀಶ್ ಅವರ ‘ಮದ್ಯಪಾನ ನಿಷೇಧ' ಭರವಸೆಯೂ ಒಂದು ಕಾರಣವಾಗಿರಬಹುದು. ಅವಿೂರ್ ಖಾನ್‍ರ ‘ಅಸಹಿಷ್ಣು' ಹೇಳಿಕೆಯನ್ನು ಎತ್ತಿಕೊಂಡು ವಾರಗಟ್ಟಲೆ ಚರ್ಚಿಸಿದ ನಾವೆಲ್ಲ, ನಿತೀಶ್‍ರ ಹೇಳಿಕೆಯನ್ನು ಸ್ಪರ್ಷಿಸಲೇ ಇಲ್ಲ. 4 ಸಾವಿರ ಕೋಟಿ ರೂಪಾಯಿ ಆದಾಯ ತರುತ್ತಿದ್ದ ಮದ್ಯವನ್ನು ಬಿಹಾರದಂಥ ಹಿಂದುಳಿದ ಮತ್ತು ದಲಿತರೇ ಹೆಚ್ಚಿರುವ ರಾಜ್ಯವೊಂದರಲ್ಲಿ ನಿಷೇಧಕ್ಕೆ ಒಳಪಡಿಸುವುದು ತೀರಾ ಸವಾಲಿನದ್ದು. ಹೆಚ್ಚಿನೆಲ್ಲ ಸರಕಾರಗಳ ದೊಡ್ಡ ಆದಾಯ ಮೂಲವೇ ಮದ್ಯ. ಅಸಹಿಷ್ಣು ಹೇಳಿಕೆಯನ್ನು ದೇಶಕ್ಕಾದ ಅವಮಾನ ಎಂದು ವ್ಯಾಖ್ಯಾನಿಸಿದ ಬಿಜೆಪಿ, ನಿಜವಾಗಿ ಈ ಘೋಷಣೆಯನ್ನು ಶ್ಲಾಘಿಸಬೇಕಿತ್ತು. ಮದ್ಯಪಾನವನ್ನು ದೇಶದಾದ್ಯಂತ ಚರ್ಚಾ ವಿಷಯವನ್ನಾಗಿ ಮಾರ್ಪಡಿಸಬೇಕಿತ್ತು. ಯಾಕೆಂದರೆ, ಮದ್ಯವು ಈ ದೇಶದ ಗೌರವವನ್ನು ಅಂತಾರಾಷ್ಟ್ರೀಯವಾಗಿ ಹರಾಜಿಗಿಟ್ಟಿದೆ. ದೆಹಲಿಯಲ್ಲಿ 2012ರಲ್ಲಿ ನಡೆದ ಅತ್ಯಾಚಾರ ಪ್ರಕರಣವು ಭಾರತದ ಗೌರವಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿದಷ್ಟು ಚ್ಯುತಿಯನ್ನು ಬಹುಶಃ ಇತ್ತೀಚಿನ ವರ್ಷಗಳಲ್ಲಿ ಇನ್ನಾವುದೂ ತಂದಿರಲಿಲ್ಲ. ಅವಿೂರ್, ಶಾರುಖ್‍ರ ಹೇಳಿಕೆಗಳು ಅಥವಾ ಸಾಹಿತಿಗಳ ಪ್ರತಿಭಟನೆಗಳು ಆ ಪ್ರಕರಣದ ಎದುರು ತೀರಾ ತೀರಾ ಜುಜುಬಿ. ಭಾರತದಲ್ಲಿ ಹೆಣ್ಣು ಮಕ್ಕಳು ಎಷ್ಟು ಅಸುರಕ್ಷಿತ ಎಂಬುದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವುದಕ್ಕೆ ಆ ಘಟನೆ ಕಾರಣವಾಗಿತ್ತು. ನಿಜವಾಗಿ, ಮದ್ಯಪಾನಿಗಳಿಗೆ ಬಲಿಯಾದವರ ಪಟ್ಟಿಯಲ್ಲಿ ದೆಹಲಿಯ ನಿರ್ಭಯ ಮೊದಲಿಗಳೂ ಅಲ್ಲ, ಕೊನೆಯವಳೂ ಆಗುವುದಿಲ್ಲ. ಆ ಘಟನೆಯಲ್ಲಿ ಅತ್ಯಾಚಾರವೇ ಪ್ರಮುಖ ಚರ್ಚಾ ವಿಷಯ ಆಗಿದ್ದರೂ ಆ ಅತ್ಯಾಚಾರದ ಹಿಂದೆ ಮದ್ಯಪಾನದ ಅಮಲು ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಕೂಡ ಅಷ್ಟೇ ನಿಜ. ಒಂದು ರೀತಿಯಲ್ಲಿ ನಿರ್ಭಯ ಪ್ರಕರಣದ ಚರ್ಚೆಯು ತೆರೆದುಕೊಳ್ಳಬೇಕಾದ ಮತ್ತೊಂದು ಮಗ್ಗುಲು ಇದಾಗಿತ್ತು. ದುರಂತ ಏನೆಂದರೆ, ಇಡೀ ಚರ್ಚೆ ಅತ್ಯಾಚಾರದ ಸುತ್ತ ಗಿರಕಿ ಹೊಡೆಯಿತೇ ಹೊರತು ಮದ್ಯಪಾನವನ್ನು ಬಹುತೇಕ ಸ್ಪರ್ಶಿಸಲೇ ಇಲ್ಲ. ‘ಮದ್ಯಪಾನದ ಹೊರತಾಗಿ ನಿರ್ಭಯಳ ಮೇಲೆ ಅತ್ಯಾಚಾರ ಮಾಡುವ ಧೈರ್ಯವನ್ನು ಆ ಆರೋಪಿಗಳು ತೋರುತ್ತಿದ್ದರೇ’ ಎಂಬ ಅಂಶವೂ ಚರ್ಚೆಗೊಳಗಾಗಲಿಲ್ಲ. ಮದ್ಯಪಾನದ ಬಗ್ಗೆ ಉದ್ದೇಶಪೂರ್ವಕವಾಗಿಯೇ ಅವಗಣನೆ ನಡೆಯುತ್ತಿದೆಯೇ ಎಂದು ಅನುಮಾನಿಸುವಷ್ಟು ಮದ್ಯವನ್ನು ಚರ್ಚಾವ್ಯಾಪ್ತಿಯಿಂದ ಹೊರಗಿಡಲಾಯಿತು. ಒಂದು ವೇಳೆ, ನಿರ್ಭಯ ಅತ್ಯಾಚಾರದ ಜೊತೆಜೊತೆಗೇ ಅದರಲ್ಲಿ ಮದ್ಯಪಾನದ ಪಾತ್ರದ ಬಗ್ಗೆಯೂ ಗಂಭೀರ ಚರ್ಚೆಯಾಗುತ್ತಿದ್ದರೆ, ಅದು ಬೀರಬಹುದಾದ ಪರಿಣಾಮಗಳು ಏನಾಗಿರುತ್ತಿದ್ದುವು? ದೆಹಲಿಯಲ್ಲಿ ನಿರ್ಭಯ ಎದುರಿಸಿದ ಹೃದಯವಿದ್ರಾವಕ ಪರಿಸ್ಥಿತಿಯ ಬೇರೆ ಬೇರೆ ರೂಪಗಳನ್ನು ದೆಹಲಿಯಿಂದ ಹೊರಗಿರುವ ವಿಶಾಲ ಭಾರತದ ನಗರ ಮತ್ತು ಹಳ್ಳಿಗಳ ಅಸಂಖ್ಯಾತ ‘ನಿರ್ಭಯರು' ಆವತ್ತೂ ಇವತ್ತೂ ಎದುರಿಸುತ್ತಲೇ ಇದ್ದಾರೆ. ಗಂಡ, ಮಾವ, ತಂದೆ, ಅಣ್ಣ ಮತ್ತಿತರರ ರೂಪದಲ್ಲಿ ಈ ‘ನಿರ್ಭಯರು' ದಿನಂಪ್ರತಿ ಹಿಂಸೆಯನ್ನು ಅನುಭವಿಸುತ್ತಲೇ ಇದ್ದಾರೆ. ಕೋಟ್ಯಂತರ ಮನೆಗಳು ಇವತ್ತು ಕೇವಲ ಮದ್ಯದಿಂದಾಗಿ ಮಸಣದಂತೆ ಬದುಕುತ್ತಿವೆ. ನಿತ್ಯ ಹಿಂಸೆ-ಜಗಳಗಳಿಗೆ ಅದು ಕಾರಣವಾಗುತ್ತಿದೆ. ಕುಡುಕ ಪತಿಯಿಂದ ಪತ್ನಿಯ ಕೊಲೆ, ಪತ್ನಿ ಆತ್ಮಹತ್ಯೆ, ಕುಡುಕ ತಂದೆಯಿಂದ ಮಗಳ ಮೇಲೆ ಅತ್ಯಾಚಾರ, ಕುಡಿದು ಅತ್ಯಾಚಾರಗೈದ ಯುವಕರು.. ಇಂಥ ಶೀರ್ಷಿಕೆಯಲ್ಲಿ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗದ ದಿನಗಳೇ ಇಲ್ಲವೆಂಬಷ್ಟು ಅದು ಮಾಮೂಲಿಯಾಗಿದೆ. ಒಂದು ವೇಳೆ, ನಿರ್ಭಯ ಪ್ರಕರಣದ ಚರ್ಚೆಯನ್ನು ಮದ್ಯಪಾನದ ಮೇಲೆ ಕೇಂದ್ರೀಕರಿಸಿ ಮಾಡಿರುತ್ತಿದ್ದರೆ ಅದು ಈ ದೇಶದ ಪ್ರಜ್ಞೆಯನ್ನೇ ಕಲಕಿ ಬಿಡುವಷ್ಟು ಪರಿಣಾಮಕಾರಿಯಾಗುತ್ತಿತ್ತು. ಅಸಂಖ್ಯಾತ ನಿರ್ಭಯರ ಕರುಳು ಮಿಡಿಯುವ ಕತೆಗಳನ್ನು ಆ ಚರ್ಚೆ ಮುನ್ನೆಲೆಗೆ ತರುತ್ತಿತ್ತು. ಇನ್ನಷ್ಟು ನಿರ್ಭಯರನ್ನು ಅತ್ಯಾಚಾರದಿಂದ, ನೇಣಿನಿಂದ ಅಥವಾ ದೌರ್ಜನ್ಯದಿಂದ ಮುಕ್ತಗೊಳಿಸಲು ಯಶಸ್ವಿಯಾಗುತ್ತಿತ್ತು. ಆದರೆ, ನಿರ್ಭಯ ಚರ್ಚೆಯು ಅಂತಿಮವಾಗಿ ದುರ್ಬಲ ಕಾನೂನುಗಳನ್ನೇ ಅಪರಾಧಿ ಎಂದು ಸಾರಿಬಿಟ್ಟಿತು. ಅದಕ್ಕಾಗಿ ನಮ್ಮನ್ನಾಳುವವರು ಕೆಲವು ಕಾನೂನುಗಳನ್ನು ರಚಿಸಿ ಸಮಾಜದ ಆಕ್ರೋಶವನ್ನು ತಣಿಸಲೆತ್ನಿಸಿದರು. ನಿರ್ಭಯ ನಿಧಿಯನ್ನು ಸ್ಥಾಪಿಸಿದರು. ಆದರೆ, ಇದರಿಂದ ನಿರ್ಭಯರ ಸಂಖ್ಯೆಯಲ್ಲೇನೂ ಕಡಿಮೆ ಆಗಲಿಲ್ಲ.
  ನಿಜವಾಗಿ, ಕಾನೂನಿನ ಸಕಲ ಭಯವನ್ನೂ ಕಿತ್ತು ಹಾಕುವ ಸಾಮರ್ಥ್ಯವೊಂದು ಮದ್ಯದಲ್ಲಿದೆ. ಆ ಕ್ಷಣದಲ್ಲಿ ಅದು ಎಲ್ಲವನ್ನೂ ಮರೆಸುತ್ತದೆ. ಇಷ್ಟ ಬಂದದ್ದನ್ನು ಮಾಡುವಂತೆ ಪ್ರೇರೇಪಿಸುತ್ತದೆ. ‘ನಿರ್ಭಯ' ಪ್ರಕರಣದ ಬಳಿಕ ಈ ದೇಶದಲ್ಲಿ ನಡೆದ ಅಸಂಖ್ಯ ಅತ್ಯಾಚಾರ-ಹಿಂಸೆಯ ಘಟನೆಗಳೇ ಇದಕ್ಕೆ ಸ್ಪಷ್ಟ ಪುರಾವೆ. ಆದ್ದರಿಂದಲೇ, ನಿತೀಶ್ ಕುಮಾರ್‍ರ ಘೋಷಣೆಯನ್ನು ಅಸಹಿಷ್ಣು ಚರ್ಚೆಗೆ ಹೊಸತೊಂದು ತಿರುವಾಗಿ ಪರಿಗಣಿಸಲು ಮಾಧ್ಯಮಗಳು ಮತ್ತು ಮುಖ್ಯವಾಹಿನಿಯ ಪ್ರಮುಖರಿಗೆ ಸಾಧ್ಯ ಆಗಬೇಕಿತ್ತು. ‘ಅಸಹಿಷ್ಣು' ಹೇಳಿಕೆಯನ್ನು ದೇಶಕ್ಕಾದ ಅವಮಾನ ಎಂದು ವ್ಯಾಖ್ಯಾನಿಸುವವರಿಗೂ ಇದರಲ್ಲಿ ಪಾಲುಗೊಳ್ಳಬಹುದಿತ್ತು. ಅಷ್ಟಕ್ಕೂ, ಮದ್ಯ ಎಂಬ ಅಸಹಿಷ್ಣುವಿನಿಂದ ಪ್ರತಿದಿನ ಈ ದೇಶದ ಅಸಂಖ್ಯ ಮಂದಿ ಕಿರುಕುಳ, ಹಿಂಸೆ, ಅವಮಾನ ಮತ್ತು ಮಾನಭಯವನ್ನು ಎದುರಿಸುತ್ತಿದ್ದರೂ ಅದು ಅಸಹಿಷ್ಣು ಪಟ್ಟಿಯಲ್ಲಿ ಸೇರದಿರುವುದು ಮತ್ತು ದೇಶದ ಗೌರವಕ್ಕೆ ಧಕ್ಕೆ ಎನಿಸದಿರುವುದು ಯಾವ ಕಾರಣದಿಂದ? ಮದ್ಯಪಾನದ ಬಗ್ಗೆ ಈ ಮಟ್ಟಿನ ಸಹಿಷ್ಣುತೆ ಏಕೆ? ಇದರ ಅಸಹಿಷ್ಣುತೆಗೆ ಅತ್ಯಂತ ಹೆಚ್ಚು ಗುರಿಯಾಗುವುದು ಮಹಿಳೆಯರೇ ಎಂಬುದು ಗೊತ್ತಿದ್ದೂ ಈ ಸಹಿಷ್ಣುತೆ ಯಾಕಾಗಿ?
  ನಿತೀಶ್ ಕುಮಾರ್‍ರ ಮದ್ಯಪಾನ ನಿಷೇಧ ಘೋಷಣೆಯು ಸಹಿಷ್ಣು ಭಾರತವನ್ನು ಕಟ್ಟುವಲ್ಲಿ ಮೈಲುಗಲ್ಲಾಗಲಿ.