Thursday 3 December 2015

ಅಸಹಿಷ್ಣುತೆಯ ಚರ್ಚೆ ಮತ್ತು ಮದ್ಯ

      ಅಸಹಿಷ್ಣುತೆಯ ಸುತ್ತ ‘ಉಗ್ರರೂಪ'ದ ಚರ್ಚೆಯೊಂದು ನಡೆಯುತ್ತಿರುವ ಹೊತ್ತಿನಲ್ಲಿಯೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‍ರು ಈ ಚರ್ಚೆಯ ವ್ಯಾಪ್ತಿಯನ್ನು ಒಂದಷ್ಟು ಹಿಗ್ಗಿಸಿದ್ದಾರೆ. ನಿಜಕ್ಕೂ ಅಸಹಿಷ್ಣುತೆ ಎಲ್ಲಿದೆ, ಯಾವ ರೂಪದಲ್ಲಿದೆ, ಅಸಹಿಷ್ಣುತೆಯ ನಿಜ ಸಂತ್ರಸ್ತರು ಹೇಗಿದ್ದಾರೆ, ಅವರಿಗೆ ರಾಜಕೀಯ ಪ್ರಾತಿನಿಧ್ಯ ಎಷ್ಟಿದೆ, ಅಸಹಿಷ್ಣುತೆಯಿಂದ ಅವರು ಅನುಭವಿಸಿದ ನೋವು-ಕಣ್ಣೀರುಗಳನ್ನು ಮುಖ್ಯ ವಾಹಿನಿಯ ಮಾಧ್ಯಮ ಮತ್ತು ‘ದೇಶಭಕ್ತಿ'ಯ ಗುಂಪು ಎಷ್ಟಂಶ ಗಂಭೀರವಾಗಿ ಪರಿಗಣಿಸಿವೆ, ಈ ದೇಶದಿಂದ ತೊಲಗಬೇಕಾದವರ ಪಟ್ಟಿಯೊಂದನ್ನು ಈ ಮಂದಿ ತಯಾರಿಸುವುದಾದರೆ ಆ ಪಟ್ಟಿಯ ಮುಂಚೂಣಿಯಲ್ಲಿ ಯಾರ ಹೆಸರಿರಬಹುದು.. ಇವು ಮತ್ತು ಇಂಥ ಅನೇಕಾರು ಪ್ರಶ್ನೆಗಳಿಗೆ ಉತ್ತರವಾಗಬಹುದಾದ ಒಂದು ಗುಂಪಿನ ಬಗ್ಗೆ ನಿತೀಶ್ ಕುಮಾರ್ ದೇಶದ ಗಮನ ಸೆಳೆದಿದ್ದಾರೆ. ಅವರೇ ಮಹಿಳೆಯರು. ಇವರು ‘ಮದ್ಯ' ಎಂಬ ಪರಮ ಅಸಹಿಷ್ಣುತೆಯಿಂದ ಪಡುತ್ತಿರುವ ಪಾಡನ್ನು ನಿತೀಶ್ ಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಮುಂದಿನ ವರ್ಷದ ಎಪ್ರಿಲ್‍ನಿಂದ ಈ ಅಸಹಿಷ್ಣುತೆಗೆ ಸಂಪೂರ್ಣ ನಿಷೇಧ ವಿಧಿಸುವುದಾಗಿ ಘೋಷಿಸಿದ್ದಾರೆ.
  ಸಹಿಷ್ಣು ಮತ್ತು ಅಸಹಿಷ್ಣು ಎಂಬೆರಡು ಪದಗಳನ್ನು ಅವಿೂರ್ ಖಾನ್, ಶಾರುಖ್ ಖಾನ್ ಮತ್ತು ಪ್ರಶಸ್ತಿ ವಾಪಸು ಮಾಡಿದ ಸಾಹಿತಿಗಳಿಗೆ ಸೀಮಿತಗೊಳಿಸಿ ಈ ದೇಶದಲ್ಲಿ ಚರ್ಚೆಯೊಂದು ಆರಂಭವಾಗಿ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಪ್ರಧಾನಿ ಮೋದಿಯವರ ಬೆಂಬಲಿಗರ ‘ದೇಶಭಕ್ತಿ'ಗೆ ಇರುವ ಮಿತಿಗಳಷ್ಟೇ ಈ ಅಸಹಿಷ್ಣುತೆಯ ಚರ್ಚೆಗೂ ನಾವೆಲ್ಲ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಿತಿಗಳನ್ನು ಹೇರಿಕೊಂಡು ಚರ್ಚೆಯಲ್ಲಿ ಭಾಗವಹಿಸುತ್ತಿದ್ದೇವೆ. ಆದರೆ, ಈ ಚರ್ಚೆಯ ಅಂತಿಮ ಹಂತದಲ್ಲಿ ಪ್ರವೇಶಿಸಿದ ನಿತೀಶ್ ಕುಮಾರ್ ಅವರು ಇಡೀ ಚರ್ಚೆಯನ್ನು ಇನ್ನೊಂದು ಮಗ್ಗುಲಿಗೆ ಕೊಂಡೊಯ್ಯಲು ಶ್ರಮಿಸಿದ್ದಾರೆ. ಈ ಮಗ್ಗುಲು ಮಹಿಳೆಯರದ್ದು. ಬಿಹಾರದಲ್ಲಿ ಈ ಬಾರಿ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ಮಹಿಳೆಯರು. ಅದಕ್ಕೆ ನಿತೀಶ್ ಅವರ ‘ಮದ್ಯಪಾನ ನಿಷೇಧ' ಭರವಸೆಯೂ ಒಂದು ಕಾರಣವಾಗಿರಬಹುದು. ಅವಿೂರ್ ಖಾನ್‍ರ ‘ಅಸಹಿಷ್ಣು' ಹೇಳಿಕೆಯನ್ನು ಎತ್ತಿಕೊಂಡು ವಾರಗಟ್ಟಲೆ ಚರ್ಚಿಸಿದ ನಾವೆಲ್ಲ, ನಿತೀಶ್‍ರ ಹೇಳಿಕೆಯನ್ನು ಸ್ಪರ್ಷಿಸಲೇ ಇಲ್ಲ. 4 ಸಾವಿರ ಕೋಟಿ ರೂಪಾಯಿ ಆದಾಯ ತರುತ್ತಿದ್ದ ಮದ್ಯವನ್ನು ಬಿಹಾರದಂಥ ಹಿಂದುಳಿದ ಮತ್ತು ದಲಿತರೇ ಹೆಚ್ಚಿರುವ ರಾಜ್ಯವೊಂದರಲ್ಲಿ ನಿಷೇಧಕ್ಕೆ ಒಳಪಡಿಸುವುದು ತೀರಾ ಸವಾಲಿನದ್ದು. ಹೆಚ್ಚಿನೆಲ್ಲ ಸರಕಾರಗಳ ದೊಡ್ಡ ಆದಾಯ ಮೂಲವೇ ಮದ್ಯ. ಅಸಹಿಷ್ಣು ಹೇಳಿಕೆಯನ್ನು ದೇಶಕ್ಕಾದ ಅವಮಾನ ಎಂದು ವ್ಯಾಖ್ಯಾನಿಸಿದ ಬಿಜೆಪಿ, ನಿಜವಾಗಿ ಈ ಘೋಷಣೆಯನ್ನು ಶ್ಲಾಘಿಸಬೇಕಿತ್ತು. ಮದ್ಯಪಾನವನ್ನು ದೇಶದಾದ್ಯಂತ ಚರ್ಚಾ ವಿಷಯವನ್ನಾಗಿ ಮಾರ್ಪಡಿಸಬೇಕಿತ್ತು. ಯಾಕೆಂದರೆ, ಮದ್ಯವು ಈ ದೇಶದ ಗೌರವವನ್ನು ಅಂತಾರಾಷ್ಟ್ರೀಯವಾಗಿ ಹರಾಜಿಗಿಟ್ಟಿದೆ. ದೆಹಲಿಯಲ್ಲಿ 2012ರಲ್ಲಿ ನಡೆದ ಅತ್ಯಾಚಾರ ಪ್ರಕರಣವು ಭಾರತದ ಗೌರವಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿದಷ್ಟು ಚ್ಯುತಿಯನ್ನು ಬಹುಶಃ ಇತ್ತೀಚಿನ ವರ್ಷಗಳಲ್ಲಿ ಇನ್ನಾವುದೂ ತಂದಿರಲಿಲ್ಲ. ಅವಿೂರ್, ಶಾರುಖ್‍ರ ಹೇಳಿಕೆಗಳು ಅಥವಾ ಸಾಹಿತಿಗಳ ಪ್ರತಿಭಟನೆಗಳು ಆ ಪ್ರಕರಣದ ಎದುರು ತೀರಾ ತೀರಾ ಜುಜುಬಿ. ಭಾರತದಲ್ಲಿ ಹೆಣ್ಣು ಮಕ್ಕಳು ಎಷ್ಟು ಅಸುರಕ್ಷಿತ ಎಂಬುದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವುದಕ್ಕೆ ಆ ಘಟನೆ ಕಾರಣವಾಗಿತ್ತು. ನಿಜವಾಗಿ, ಮದ್ಯಪಾನಿಗಳಿಗೆ ಬಲಿಯಾದವರ ಪಟ್ಟಿಯಲ್ಲಿ ದೆಹಲಿಯ ನಿರ್ಭಯ ಮೊದಲಿಗಳೂ ಅಲ್ಲ, ಕೊನೆಯವಳೂ ಆಗುವುದಿಲ್ಲ. ಆ ಘಟನೆಯಲ್ಲಿ ಅತ್ಯಾಚಾರವೇ ಪ್ರಮುಖ ಚರ್ಚಾ ವಿಷಯ ಆಗಿದ್ದರೂ ಆ ಅತ್ಯಾಚಾರದ ಹಿಂದೆ ಮದ್ಯಪಾನದ ಅಮಲು ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಕೂಡ ಅಷ್ಟೇ ನಿಜ. ಒಂದು ರೀತಿಯಲ್ಲಿ ನಿರ್ಭಯ ಪ್ರಕರಣದ ಚರ್ಚೆಯು ತೆರೆದುಕೊಳ್ಳಬೇಕಾದ ಮತ್ತೊಂದು ಮಗ್ಗುಲು ಇದಾಗಿತ್ತು. ದುರಂತ ಏನೆಂದರೆ, ಇಡೀ ಚರ್ಚೆ ಅತ್ಯಾಚಾರದ ಸುತ್ತ ಗಿರಕಿ ಹೊಡೆಯಿತೇ ಹೊರತು ಮದ್ಯಪಾನವನ್ನು ಬಹುತೇಕ ಸ್ಪರ್ಶಿಸಲೇ ಇಲ್ಲ. ‘ಮದ್ಯಪಾನದ ಹೊರತಾಗಿ ನಿರ್ಭಯಳ ಮೇಲೆ ಅತ್ಯಾಚಾರ ಮಾಡುವ ಧೈರ್ಯವನ್ನು ಆ ಆರೋಪಿಗಳು ತೋರುತ್ತಿದ್ದರೇ’ ಎಂಬ ಅಂಶವೂ ಚರ್ಚೆಗೊಳಗಾಗಲಿಲ್ಲ. ಮದ್ಯಪಾನದ ಬಗ್ಗೆ ಉದ್ದೇಶಪೂರ್ವಕವಾಗಿಯೇ ಅವಗಣನೆ ನಡೆಯುತ್ತಿದೆಯೇ ಎಂದು ಅನುಮಾನಿಸುವಷ್ಟು ಮದ್ಯವನ್ನು ಚರ್ಚಾವ್ಯಾಪ್ತಿಯಿಂದ ಹೊರಗಿಡಲಾಯಿತು. ಒಂದು ವೇಳೆ, ನಿರ್ಭಯ ಅತ್ಯಾಚಾರದ ಜೊತೆಜೊತೆಗೇ ಅದರಲ್ಲಿ ಮದ್ಯಪಾನದ ಪಾತ್ರದ ಬಗ್ಗೆಯೂ ಗಂಭೀರ ಚರ್ಚೆಯಾಗುತ್ತಿದ್ದರೆ, ಅದು ಬೀರಬಹುದಾದ ಪರಿಣಾಮಗಳು ಏನಾಗಿರುತ್ತಿದ್ದುವು? ದೆಹಲಿಯಲ್ಲಿ ನಿರ್ಭಯ ಎದುರಿಸಿದ ಹೃದಯವಿದ್ರಾವಕ ಪರಿಸ್ಥಿತಿಯ ಬೇರೆ ಬೇರೆ ರೂಪಗಳನ್ನು ದೆಹಲಿಯಿಂದ ಹೊರಗಿರುವ ವಿಶಾಲ ಭಾರತದ ನಗರ ಮತ್ತು ಹಳ್ಳಿಗಳ ಅಸಂಖ್ಯಾತ ‘ನಿರ್ಭಯರು' ಆವತ್ತೂ ಇವತ್ತೂ ಎದುರಿಸುತ್ತಲೇ ಇದ್ದಾರೆ. ಗಂಡ, ಮಾವ, ತಂದೆ, ಅಣ್ಣ ಮತ್ತಿತರರ ರೂಪದಲ್ಲಿ ಈ ‘ನಿರ್ಭಯರು' ದಿನಂಪ್ರತಿ ಹಿಂಸೆಯನ್ನು ಅನುಭವಿಸುತ್ತಲೇ ಇದ್ದಾರೆ. ಕೋಟ್ಯಂತರ ಮನೆಗಳು ಇವತ್ತು ಕೇವಲ ಮದ್ಯದಿಂದಾಗಿ ಮಸಣದಂತೆ ಬದುಕುತ್ತಿವೆ. ನಿತ್ಯ ಹಿಂಸೆ-ಜಗಳಗಳಿಗೆ ಅದು ಕಾರಣವಾಗುತ್ತಿದೆ. ಕುಡುಕ ಪತಿಯಿಂದ ಪತ್ನಿಯ ಕೊಲೆ, ಪತ್ನಿ ಆತ್ಮಹತ್ಯೆ, ಕುಡುಕ ತಂದೆಯಿಂದ ಮಗಳ ಮೇಲೆ ಅತ್ಯಾಚಾರ, ಕುಡಿದು ಅತ್ಯಾಚಾರಗೈದ ಯುವಕರು.. ಇಂಥ ಶೀರ್ಷಿಕೆಯಲ್ಲಿ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗದ ದಿನಗಳೇ ಇಲ್ಲವೆಂಬಷ್ಟು ಅದು ಮಾಮೂಲಿಯಾಗಿದೆ. ಒಂದು ವೇಳೆ, ನಿರ್ಭಯ ಪ್ರಕರಣದ ಚರ್ಚೆಯನ್ನು ಮದ್ಯಪಾನದ ಮೇಲೆ ಕೇಂದ್ರೀಕರಿಸಿ ಮಾಡಿರುತ್ತಿದ್ದರೆ ಅದು ಈ ದೇಶದ ಪ್ರಜ್ಞೆಯನ್ನೇ ಕಲಕಿ ಬಿಡುವಷ್ಟು ಪರಿಣಾಮಕಾರಿಯಾಗುತ್ತಿತ್ತು. ಅಸಂಖ್ಯಾತ ನಿರ್ಭಯರ ಕರುಳು ಮಿಡಿಯುವ ಕತೆಗಳನ್ನು ಆ ಚರ್ಚೆ ಮುನ್ನೆಲೆಗೆ ತರುತ್ತಿತ್ತು. ಇನ್ನಷ್ಟು ನಿರ್ಭಯರನ್ನು ಅತ್ಯಾಚಾರದಿಂದ, ನೇಣಿನಿಂದ ಅಥವಾ ದೌರ್ಜನ್ಯದಿಂದ ಮುಕ್ತಗೊಳಿಸಲು ಯಶಸ್ವಿಯಾಗುತ್ತಿತ್ತು. ಆದರೆ, ನಿರ್ಭಯ ಚರ್ಚೆಯು ಅಂತಿಮವಾಗಿ ದುರ್ಬಲ ಕಾನೂನುಗಳನ್ನೇ ಅಪರಾಧಿ ಎಂದು ಸಾರಿಬಿಟ್ಟಿತು. ಅದಕ್ಕಾಗಿ ನಮ್ಮನ್ನಾಳುವವರು ಕೆಲವು ಕಾನೂನುಗಳನ್ನು ರಚಿಸಿ ಸಮಾಜದ ಆಕ್ರೋಶವನ್ನು ತಣಿಸಲೆತ್ನಿಸಿದರು. ನಿರ್ಭಯ ನಿಧಿಯನ್ನು ಸ್ಥಾಪಿಸಿದರು. ಆದರೆ, ಇದರಿಂದ ನಿರ್ಭಯರ ಸಂಖ್ಯೆಯಲ್ಲೇನೂ ಕಡಿಮೆ ಆಗಲಿಲ್ಲ.
  ನಿಜವಾಗಿ, ಕಾನೂನಿನ ಸಕಲ ಭಯವನ್ನೂ ಕಿತ್ತು ಹಾಕುವ ಸಾಮರ್ಥ್ಯವೊಂದು ಮದ್ಯದಲ್ಲಿದೆ. ಆ ಕ್ಷಣದಲ್ಲಿ ಅದು ಎಲ್ಲವನ್ನೂ ಮರೆಸುತ್ತದೆ. ಇಷ್ಟ ಬಂದದ್ದನ್ನು ಮಾಡುವಂತೆ ಪ್ರೇರೇಪಿಸುತ್ತದೆ. ‘ನಿರ್ಭಯ' ಪ್ರಕರಣದ ಬಳಿಕ ಈ ದೇಶದಲ್ಲಿ ನಡೆದ ಅಸಂಖ್ಯ ಅತ್ಯಾಚಾರ-ಹಿಂಸೆಯ ಘಟನೆಗಳೇ ಇದಕ್ಕೆ ಸ್ಪಷ್ಟ ಪುರಾವೆ. ಆದ್ದರಿಂದಲೇ, ನಿತೀಶ್ ಕುಮಾರ್‍ರ ಘೋಷಣೆಯನ್ನು ಅಸಹಿಷ್ಣು ಚರ್ಚೆಗೆ ಹೊಸತೊಂದು ತಿರುವಾಗಿ ಪರಿಗಣಿಸಲು ಮಾಧ್ಯಮಗಳು ಮತ್ತು ಮುಖ್ಯವಾಹಿನಿಯ ಪ್ರಮುಖರಿಗೆ ಸಾಧ್ಯ ಆಗಬೇಕಿತ್ತು. ‘ಅಸಹಿಷ್ಣು' ಹೇಳಿಕೆಯನ್ನು ದೇಶಕ್ಕಾದ ಅವಮಾನ ಎಂದು ವ್ಯಾಖ್ಯಾನಿಸುವವರಿಗೂ ಇದರಲ್ಲಿ ಪಾಲುಗೊಳ್ಳಬಹುದಿತ್ತು. ಅಷ್ಟಕ್ಕೂ, ಮದ್ಯ ಎಂಬ ಅಸಹಿಷ್ಣುವಿನಿಂದ ಪ್ರತಿದಿನ ಈ ದೇಶದ ಅಸಂಖ್ಯ ಮಂದಿ ಕಿರುಕುಳ, ಹಿಂಸೆ, ಅವಮಾನ ಮತ್ತು ಮಾನಭಯವನ್ನು ಎದುರಿಸುತ್ತಿದ್ದರೂ ಅದು ಅಸಹಿಷ್ಣು ಪಟ್ಟಿಯಲ್ಲಿ ಸೇರದಿರುವುದು ಮತ್ತು ದೇಶದ ಗೌರವಕ್ಕೆ ಧಕ್ಕೆ ಎನಿಸದಿರುವುದು ಯಾವ ಕಾರಣದಿಂದ? ಮದ್ಯಪಾನದ ಬಗ್ಗೆ ಈ ಮಟ್ಟಿನ ಸಹಿಷ್ಣುತೆ ಏಕೆ? ಇದರ ಅಸಹಿಷ್ಣುತೆಗೆ ಅತ್ಯಂತ ಹೆಚ್ಚು ಗುರಿಯಾಗುವುದು ಮಹಿಳೆಯರೇ ಎಂಬುದು ಗೊತ್ತಿದ್ದೂ ಈ ಸಹಿಷ್ಣುತೆ ಯಾಕಾಗಿ?
  ನಿತೀಶ್ ಕುಮಾರ್‍ರ ಮದ್ಯಪಾನ ನಿಷೇಧ ಘೋಷಣೆಯು ಸಹಿಷ್ಣು ಭಾರತವನ್ನು ಕಟ್ಟುವಲ್ಲಿ ಮೈಲುಗಲ್ಲಾಗಲಿ.

No comments:

Post a Comment