Friday, 5 February 2016

ಫ್ರೀಜರ್ ನಲ್ಲಿರುವ ಮಾಂಸದ ಜಾತಿ ಯಾವುದು?

       ದಾದ್ರಿಯ ಮುಹಮ್ಮದ್ ಅಖ್ಲಾಕ್ ಮತ್ತು ಹೈದರಾಬಾದ್ ವಿಶ್ವವಿದ್ಯಾನಿಲಯದ ರೋಹಿತ್ ವೇಮುಲರು ಈ ದೇಶದಲ್ಲಿ ಅಸ್ತಿತ್ವದಲ್ಲಿರುವ ಎರಡು ಬಗೆಯ ವಿಚಾರಧಾರೆಯನ್ನು ಮುಖಾಮುಖಿಗೊಳಿಸಿ ಹೊರಟು ಹೋಗಿದ್ದಾರೆ. ಈ ಮುಖಾಮುಖಿಯನ್ನು ಮನುಷ್ಯಪರ ಮತ್ತು ಮನುಷ್ಯ ವಿರೋಧಿ ವಿಚಾರಧಾರೆಗಳ ಮುಖಾಮುಖಿ ಎಂದೂ ವ್ಯಾಖ್ಯಾನಿಸಬಹುದು. ರೋಹಿತ್ ವೇಮುಲನ ಆತ್ಮಹತ್ಯೆಗಿಂತ ಮೊದಲು ದಾದ್ರಿಯಲ್ಲಿ ಮುಹಮ್ಮದ್ ಅಖ್ಲಾಕ್‍ರನ್ನು ಥಳಿಸಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ದೇಶದ ಒಂದು ವರ್ಗ ವ್ಯಕ್ತಪಡಿಸಿದ ಪ್ರತಿಕ್ರಿಯೆಯನ್ನು ರೋಹಿತ್ ವೇಮುಲನ ಅತ್ಮಹತ್ಯೆಗೆ ಅದೇ ಗುಂಪು ವ್ಯಕ್ತಪಡಿಸಿದ ಪ್ರತಿಕ್ರಿಯೆಯೊಂದಿಗೆ ಹೋಲಿಸಿ ನೋಡಿದರೆ, ಈ ಗುಂಪಿನ ವಿಚಾರಧಾರೆ ಎಷ್ಟು ಅಪಾಯಕಾರಿ ಅನ್ನುವುದು ಸ್ಪಷ್ಟವಾಗುತ್ತದೆ. ಅಖ್ಲಾಕ್ ಹತ್ಯೆಯ ವಿರುದ್ಧ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿರುವಾಗ ಈ ವಿಚಾರಧಾರೆಯ ಮಂದಿ ಆ ಹತ್ಯೆಯನ್ನು ಗೋಹತ್ಯೆಗೆ ಸ್ಥಳೀಯರ ಪ್ರತಿಕ್ರಿಯೆ ಎಂದು ವ್ಯಾಖ್ಯಾನಿಸ ತೊಡಗಿದರು. ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷಿದ್ಧವಾಗಿರುವುದರಿಂದ ಈ ಹತ್ಯೆ ಸಮರ್ಥನೀಯ ಎಂಬ ರೀತಿಯಲ್ಲಿ ಮಾತಾಡತೊಡಗಿದರು. ಇದಕ್ಕೆ ಪೂರಕವಾಗಿ ಕರುವೊಂದು ನಾಪತ್ತೆಯಾಗಿರುವ ಮತ್ತು ರುಂಡ ಪತ್ತೆಯಾಗಿರುವ ವದಂತಿಗಳನ್ನು ಹಬ್ಬಿಸಿದರು. ಅಖ್ಲಾಕ್‍ನನ್ನು ಹತ್ಯೆ ಮಾಡಿದ್ದು ಸರಿ ಎಂದು ವಾದಿಸುವ ವಾತಾವರಣವೊಂದನ್ನು ಅವರು ಹುಟ್ಟು ಹಾಕಿದರು. ಅದಕ್ಕೆ ತಕ್ಕುದಾದ ಸಮರ್ಥನೆಗಳನ್ನು ಉತ್ಪಾದಿಸಿ ಹಂಚತೊಡಗಿದರು. ಇದು ಉತ್ತರ ಪ್ರದೇಶ ಸರಕಾರದ ಮೇಲೆ ಎಷ್ಟರ ಮಟ್ಟಿಗೆ ಒತ್ತಡ ಹೇರಿತೆಂದರೆ, ಅಖ್ಲಾಕ್‍ನ ಮನೆಯ ಫ್ರೀಜರ್‍ನಲ್ಲಿದ್ದ ಮಾಂಸ ದನದ್ದೋ ಅಲ್ಲ ಆಡಿನದ್ದೋ ಎಂಬುದರ ಪರೀಕ್ಷೆಗೆ ಅದು ಮುಂದಾಯಿತು. ಒಂದು ರೀತಿಯಲ್ಲಿ, ಬಲಪಂಥೀಯ ವಿಚಾರಧಾರೆಗೆ ಸಿಕ್ಕ ಗೆಲುವು ಇದು. ಫಾರೆನ್ಸಿಕ್ ಪರೀಕ್ಷೆಯಲ್ಲಿ ಮಾಂಸ ಗೋವಿನದ್ದು ಎಂದು ಸಾಬೀತಾದರೆ, ಇನ್ನಷ್ಟು ತಾರಕ ದನಿಯಲ್ಲಿ ಆ ಹತ್ಯೆಯನ್ನು ಸಮರ್ಥಿಸಿಕೊಳ್ಳಬಹುದು. ಕುಸಿಯುತ್ತಿರುವ ಗೋವುಗಳ ಸಂಖ್ಯೆಯ ಕೃತಕ ಅಂಕಿ-ಅಂಶಗಳನ್ನು ಕೊಟ್ಟು ಇದಕ್ಕೆಲ್ಲಾ ಮುಸ್ಲಿಮರ ಗೋಮಾಂಸ ಪ್ರೇಮವೇ ಕಾರಣ ಎಂದು ಹೇಳಬಹುದು. ಗೋರಕ್ಷಣೆಯ ಹೆಸರಲ್ಲಿ ಉತ್ತರ ಪ್ರದೇಶದಾದ್ಯಂತ ಅಭಿಯಾನ ಕೈಗೊಳ್ಳಬಹುದು. ಗೋಹತ್ಯೆಗೆ ಪ್ರತಿಹತ್ಯೆಯೇ ಪರಿಹಾರ ಎಂದೂ ಘೋಷಿಸಬಹುದು. ಒಂದು ವೇಳೆ, ಆ ಮಾಂಸ ಗೋವಿನದ್ದಲ್ಲ ಎಂದು ಸಾಬೀತಾಯಿತು ಅಂತಿಟ್ಟುಕೊಳ್ಳಿ. ಆಗಲೂ ಹಿಂಜರಿಯಬೇಕಿಲ್ಲ. ಫಾರೆನ್ಸಿಕ್ ಪರೀಕ್ಷೆಯ ವಿಶ್ವಾಸಾರ್ಹತೆಯನ್ನೇ ಆಗ ಪ್ರಶ್ನಿಸಿದರಾಯಿತು. ಪರೀಕ್ಷಾ ವರದಿಯನ್ನು ಸಮಾಜವಾದಿ ಪಕ್ಷವು ತಿರುಚಿದೆ ಎಂದು ಆರೋಪಿಸಿದರಾಯಿತು. ಮುಸ್ಲಿಮರನ್ನು ಓಲೈಸುವುದಕ್ಕಾಗಿ ಸಮಾಜವಾದಿ ಪಕ್ಷವು ಗೋವನ್ನು ಆಡನ್ನಾಗಿ ಪರಿವರ್ತಿಸಿದೆ ಎಂದು  ಹೇಳಿದರಾಯಿತು. ಒಟ್ಟಿನಲ್ಲಿ, ಫಲಿತಾಂಶ ಏನೇ ಬಂದರೂ ಲಾಭ ಮಾತ್ರ ಹತ್ಯೆ ನಡೆಸಿದವರಿಗೇ ಸಿಗುತ್ತದೆ. ಅಂತಿಮವಾಗಿ ನಡೆದದ್ದೂ ಇದುವೇ. ಇಡೀ ಪರೀಕ್ಷಾ ಫಲಿತಾಂಶವನ್ನೇ ಆ ವಿಚಾರಧಾರೆಯ ಮಂದಿ ತಿರಸ್ಕರಿಸಿದರು. ಇದರ ನಡುವೆಯೇ ಘಟನೆಗೆ ಅಖ್ಲಾಕ್‍ರ ಮಗನ ಪ್ರೇಮ ಪ್ರಕರಣವೇ ಕಾರಣ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಪತ್ರಿಕಾಗೋಷ್ಠಿ ಕರೆದು ಹೇಳಿಕೊಂಡಿತು. ಹಿಂದೂ ಹುಡುಗಿಯನ್ನು ಆತ ಪ್ರೀತಿಸುತ್ತಿದ್ದ ಎಂದು ಹೇಳಿ ಅದು ಆ ಹತ್ಯೆಯನ್ನು ಸಮರ್ಥಿಸಿಕೊಂಡಿತು. ಹೀಗೆ ಕ್ರೌರ್ಯವೊಂದರ ಸುತ್ತ ವಿವಿಧ ಬಗೆಯ ಅನುಮಾನಗಳನ್ನು ಸೃಷ್ಟಿಸಿ ಕೊನೆಗೆ ಆ ಕ್ರೌರ್ಯದ ಬದಲು ಅನುಮಾನಗಳ ಸುತ್ತವೇ ಸಮಾಜ ಚರ್ಚಿಸುವಂತೆ ಮಾಡುವ ಕಲೆ ಅದಕ್ಕೆ ಕರಗತವಾಗಿದೆ. ವೇಮುಲನ ವಿಷಯದಲ್ಲೂ ಇದೇ ತಂತ್ರವನ್ನು ಪ್ರಯೋಗಿಸಲಾಗಿದೆ. ಆತನ ಆತ್ಮಹತ್ಯೆಗೆ ಯಾರು ಮತ್ತು ಯಾವುದೆಲ್ಲ ಕಾರಣ ಎಂಬುದು ಚರ್ಚೆಯಾಗಬೇಕಾದ ಈ ಹೊತ್ತಿನಲ್ಲಿ ಆತ ದಲಿತನೋ ಅಲ್ಲ ಹಿಂದುಳಿದ ವರ್ಗದವನೋ ಎಂಬೊಂದು ಚರ್ಚೆಯನ್ನು ಈ ವಿಚಾರಧಾರೆ ಹುಟ್ಟು ಹಾಕಿದೆ. ಮಾತ್ರವಲ್ಲ, ಆತ ದಲಿತನೇ ಅಲ್ಲ ಎಂದೂ ಅದು ಘೋಷಿಸಿದೆ. ಸ್ಮೃತಿ ಇರಾನಿ, ಸುಶ್ಮಾ ಸ್ವರಾಜ್‍ರಿಂದ ಹಿಡಿದು ಹೈದರಾಬಾದ್ ವಿಶ್ವವಿದ್ಯಾನಿಲಯದ ABVPಯ ಅಧ್ಯಕ್ಷನವರೆಗೆ ವೇಮುಲನ ಜಾತಿಯ ಬಗ್ಗೆ ವಿವಿಧ ಬಗೆಯ ಹೇಳಿಕೆಗಳು ಹೊರಬೀಳುತ್ತಿವೆ. ಒಂದು ವೇಳೆ ಈ ತಂತ್ರದಲ್ಲಿ ಈ ಮಂದಿ ಯಶಸ್ವಿಯಾದರೆ ಬಳಿಕ ವೇಮುಲನನ್ನೇ ಅಪರಾಧಿ ಸ್ಥಾನದಲ್ಲಿ ಕೂರಿಸಬಹುದು. ಈ ವರೆಗೆ ನಡೆದ ಎಲ್ಲ ಹೋರಾಟಗಳನ್ನೂ ಅವರು ಗೇಲಿ ಮಾಡಬಹುದು. ಸುಳ್ಳು ದಾಖಲೆ ಸೃಷ್ಟಿಸಿ ದಲಿತ ಸೌಲಭ್ಯಗಳನ್ನು ಕಸಿದ ವಂಚಕನಂತೆ ವೇಮುಲನನ್ನು ಬಿಂಬಿಸಬಹುದು.
  ನಿಜವಾಗಿ, ಈ ರೀತಿ ಸತ್ಯವನ್ನು ತಿರುಚುವುದು ಹತ್ಯೆಗಿಂತಲೂ ಕ್ರೂರವಾದುದು. ಅಷ್ಟಕ್ಕೂ, ಅಖ್ಲಾಕ್‍ನ ಮನೆಯಲ್ಲಿದ್ದುದು ಗೋಮಾಂಸವೆಂದೇ ಇಟ್ಟುಕೊಳ್ಳೋಣ. ಅದಕ್ಕೆ ಹತ್ಯೆ ಉತ್ತರವೇ? ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಬೆಂಬಲ ನೀಡುವ ಈ ಬಗೆಯ ಹೇಳಿಕೆಗಳಿಂದ ಏನನ್ನು ನಿರೀಕ್ಷಿಸಬಹುದು? ವೇಮುಲನಿಗೆ ಸಂಬಂಧಿಸಿಯೂ ನಾವು ಇವೇ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಆತ ದಲಿತನಲ್ಲದೇ ಇರಬಹುದು, ಹಿಂದುಳಿದ ವರ್ಗಕ್ಕೇ ಸೇರಿರಬಹುದು. ಹಾಗಂತ, ಆ ಆತ್ಮಹತ್ಯೆ ಕ್ಷುಲ್ಲಕವೇ? ಹಿಂದುಳಿದ ವರ್ಗದ ಹುಡುಗನನ್ನು ಬಯಲಲ್ಲಿ ಮಲಗಿಸುವುದು ಸಮರ್ಥನೀಯವೇ? ಆತನಿಗೆ ಸಲ್ಲಬೇಕಾದ ವೇತನವನ್ನು ತಡೆಹಿಡಿಯುವುದು ಮತ್ತು ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ಮೃತಿ ಇರಾನಿಯವರ ಇಲಾಖೆಯಿಂದ ಮೇಲಿಂದ ಮೇಲೆ ಪತ್ರ ರವಾನೆಯಾಗುವುದು ಸಮ್ಮತವೇ? ಹಿಂದುಳಿದ ವರ್ಗದ ವಿದ್ಯಾರ್ಥಿಯನ್ನು ದೇಶದ್ರೋಹಿ ಎಂದು ಕರೆದು ಹಿಂಸಿಸಬಹುದೇ? ಅಷ್ಟಕ್ಕೂ, ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ವೇಮುಲನ ಗುರುತು ಹೇಗಿತ್ತು? ಅಲ್ಲಿನ ಕುಲಪತಿಗಳು, ಪ್ರೊಫೆಸರ್‍ಗಳು ಮತ್ತು ಇತರ ವಿದ್ಯಾರ್ಥಿಗಳೆಲ್ಲ ವೇಮುಲನನ್ನು ಏನೆಂದು ಪರಿಗಣಿಸಿದ್ದರು, ದಲಿತ ಎಂದೇ ಅಲ್ಲವೇ? ಆತನು ಪರಿಚಯಿಸಿಕೊಂಡದ್ದೂ ಹಾಗೆಯೇ ತಾನೇ? ಹೀಗಿರುವಾಗ, ಆತ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ದಲಿತ ದೌರ್ಜನ್ಯದ ಪ್ರತಿನಿಧಿಯಾಗಿದ್ದಾನೆ ಎಂದು ಒಪ್ಪಿಕೊಳ್ಳುವುದಕ್ಕೆ ಯಾಕೆ ಈ ಮಂದಿ ಹಿಂದೇಟು ಹಾಕಬೇಕು? ವಿಶ್ವವಿದ್ಯಾನಿಲಯವು ಆತನನ್ನು ಗುರುತಿಸಿರುವುದು ದಲಿತನಾಗಿಯೇ. ಆದ್ದರಿಂದ  ದಲಿತನೋರ್ವ ಎದುರಿಸಬಹುದಾದ ಸಕಲ ಸವಾಲುಗಳನ್ನೂ ಆತ ಎದುರಿಸಬೇಕಾದುದು ಸಹಜ. 2007 ರಿಂದ 13ರ ಮಧ್ಯೆ ಹೈದರಾಬಾದ್‍ನ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ 11 ಮಂದಿ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಏನೆಲ್ಲ ಜಾತಿ ಸಂಬಂಧಿ ಕಾರಣಗಳಿದ್ದುವೋ ಅವೆಲ್ಲವೂ ವೇಮುಲ ಆತ್ಮಹತ್ಯೆಯ ಹಿಂದೆಯೂ ಇರುವುದಕ್ಕೆ ಎಲ್ಲ ಸಾಧ್ಯತೆಯೂ ಇದೆ. 2013ರಲ್ಲಿ ಅಂಧ್ರಪ್ರದೇಶದ ಹೈಕೋರ್ಟ್ ಈ ಆತ್ಮಹತ್ಯೆಗಳ ಬಗ್ಗೆ ಸ್ವಪ್ರೇರಿತ ದೂರನ್ನೂ ದಾಖಲಿಸಿಕೊಂಡಿತ್ತು. ಶಿಕ್ಷಣ ತಜ್ಞ ಅನೂಪ್ ಸಿಂಗ್ ಅವರ ಅಧ್ಯಯನ, ಸ್ಯಾಮ್ಸನ್ ಓವಿಚೇಗನ್ ಅವರು 2013ರಲ್ಲಿ ನಡೆಸಿದ ಅಧ್ಯಯನ ಮತ್ತು 2010ರಲ್ಲಿ ಮೇರಿ ಥಾರ್ನ್‍ಟೋನ್ ಅವರು ನಡೆಸಿದ ಅಧ್ಯಯನಗಳೆಲ್ಲ ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ದಲಿತರ ಮೇಲಾಗುತ್ತಿರುವ ತಾರತಮ್ಯ ನೀತಿಯನ್ನು ವಿವರವಾಗಿ ವಿಶ್ಲೇಷಿಸಿದ್ದುವು. 5-6 ತಿಂಗಳಿನಿಂದ ವೇತನವಿಲ್ಲದೇ, ಲೈಬ್ರರಿ, ಹಾಸ್ಟೆಲ್‍ಗಳಿಗೆ ಪ್ರವೇಶಿಸಲಾಗದೇ ಮತ್ತು ಆ ಕಾರಣಗಳಿಂದಾಗಿ ಅಧ್ಯಯನಕ್ಕೆ ಪುಸ್ತಕಗಳನ್ನು ಪಡೆಯಲಾಗದೇ ಒದ್ದಾಡುತ್ತಿರುವ ವೇಮುಲು ಸಹಿತ ಐವರು ಯುವಕರ ಬಗ್ಗೆ ಒಂದೇ ಒಂದು ಗೆರೆಯ ಕಾಳಜಿಯ ಮಾತನ್ನೂ ಆಡದೇ, `ಅವರ ವಿರುದ್ಧ ಏನು ಕ್ರಮ ಕೈಗೊಂಡಿರಿ' ಎಂದು ವಿಶ್ವವಿದ್ಯಾನಿಲಯದ ಉಪಕುಲಪತಿಯವರನ್ನು ಮಾನವ ಸಂಪನ್ಮೂಲ ಇಲಾಖೆಯು ಪ್ರಶ್ನಿಸಿ ಐದೈದು ಬಾರಿ ಪತ್ರ ಕಳುಹಿಸುತ್ತದಲ್ಲ, ಇದಕ್ಕೆ ಏನೆನ್ನಬೇಕು? ಇದರಲ್ಲಿ ಅಸಹಜವಾದುದು ಏನೂ ಇಲ್ಲವೇ? ಹಾಗಂತ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ಘರ್ಷಣೆ ಹೊಸತೇನೂ ಅಲ್ಲ. ಆದ್ದರಿಂದ, ವೇಮುಲ
ತೊಡಗಿಸಿಕೊಂಡಿರುವ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್ (ASA) ಎಂಬ ವಿದ್ಯಾರ್ಥಿ ಸಂಘಟನೆಯು ABVP ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದೆ ಎಂಬ ಆರೋಪವನ್ನು ಅಭೂತಪೂರ್ವ ಘಟನೆಯಾಗಿ ನೋಡಬೇಕಾಗಿಯೂ ಇಲ್ಲ. ಈ ಘಟನೆಗಿಂತ ಮೊದಲು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ABVP  ವಿದ್ಯಾರ್ಥಿಗಳು `ಮುಝಫ್ಫರ್ ನಗರ್ ಅಭೀ ಬಾಕಿ ಹೆ' ಎಂಬ ಡಾಕ್ಯುಮೆಂಟರಿ ಪ್ರದರ್ಶನವನ್ನು ತಡೆಯುವ ನೆಪದಲ್ಲಿ ದಾಂಧಲೆ ನಡೆಸಿದ್ದರು. ಜಮ್ಮು ಕಾಶ್ಮೀರದಲ್ಲಂತೂ ABVP  ವಿದ್ಯಾರ್ಥಿಗಳು ನಡೆಸಿದ ದಾಂಧಲೆ ಮತ್ತು ಹಲ್ಲೆಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಕಳೆದ ವಾರ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಹೋದ ದಿ ಹಿಂದೂ ಪತ್ರಿಕೆಯ ಮಾಜಿ ಸಂಪಾದಕ ಮತ್ತು ಖ್ಯಾತ ಪತ್ರಕರ್ತ ಸಿದ್ಧಾರ್ಥ್ ವರದರಾಜನ್‍ರನ್ನು ಇದೇ ಸಂಘಟನೆಯ ವಿದ್ಯಾರ್ಥಿಗಳು ಉಪಕುಲಪತಿಯವರ ಕಚೇರಿಯಲ್ಲಿ ಬಂಧನಕ್ಕೆ ಒಳಪಡಿಸಿದ್ದರು. ಹಾಗಂತ, ಸ್ಮೃತಿ ಇರಾನಿಯವರ ಮಾನವ ಸಂಪನ್ಮೂಲ ಇಲಾಖೆಯಿಂದ ಸಂಬಂದಿತ ವಿಶ್ವ ವಿದ್ಯಾನಿಲಯಗಳಿಗೆ ಈ ಬಗ್ಗೆ ಎಷ್ಟು ಪತ್ರಗಳು ಹೋಗಿವೆ? ಈ ವಿದ್ಯಾರ್ಥಿಗಳಲ್ಲಿ ದೇಶದ್ರೋಹವನ್ನು ಶಂಕಿಸಿ ‘ಬಂಡಾರು ದತ್ತಾತ್ರೇಯರು' ಎಷ್ಟು ಪತ್ರಗಳನ್ನು ಸ್ಮೃತಿ ಇರಾನಿಯವರಿಗೆ ಕಳುಹಿಸಿದ್ದಾರೆ?
     ಅಖ್ಲಾಕ್ ಮತ್ತು ವೇಮುಲರಿಬ್ಬರೂ ಸೇರಿ ಬಲಪಂಥೀಯ ವಿಚಾರಧಾರೆಯ ಕ್ರೌರ್ಯ ಮನಃಸ್ಥಿತಿ ಮತ್ತು ಆ ಕ್ರೌರ್ಯವನ್ನು ಸಮರ್ಥಿಸಿಕೊಳ್ಳುವ ಕ್ರೂರ ಸುಳ್ಳುಗಳನ್ನು ದೇಶದ ಮುಂದೆ ಅನಾವರಣಗೊಳಿಸಿದ್ದಾರೆ. ಅವರಿಬ್ಬರ ಪ್ರಾಣತ್ಯಾಗವು ಈ ವಿಚಾರಧಾರೆಯನ್ನು ಶಾಶ್ವತವಾಗಿ ಇಲ್ಲವಾಗಿಸಲು ಯಶಸ್ವಿಯಾಗಲಿ.

No comments:

Post a Comment