Thursday 16 June 2016

ಮನುಷ್ಯರ ಪ್ರಾಮುಖ್ಯತೆಯನ್ನು ಬಿಜೆಪಿಗೆ ಪರಿಚಯಿಸಿದ ಬಿಹಾರದ ದನ

          ಪ್ರಾಣಿಗಳು ಮುಖ್ಯವೋ ಅಥವಾ ಮನುಷ್ಯರೋ ಎಂಬೊಂದು ಚರ್ಚೆಗೆ ಕೇಂದ್ರದ ಸಚಿವರಿಬ್ಬರು ಚಾಲನೆಯನ್ನು ಕೊಟ್ಟಿದ್ದಾರೆ. ಈ ವಿಷಯವಾಗಿ ಕೇಂದ್ರ ಸಚಿವರಾದ ಮೇನಕಾ ಗಾಂಧಿ ಮತ್ತು ಪ್ರಕಾಶ್ ಜಾವಡೇಕರ್ ಪರಸ್ಪರ ಬಹಿರಂಗವಾಗಿಯೇ ಕಿತ್ತಾಡಿಕೊಂಡಿದ್ದಾರೆ. ಮೇನಕಾ ಗಾಂಧಿ ಪ್ರಾಣಿಗಳ ಪರ ನಿಂತರೆ ಜಾವಡೇಕರ್ ಮನುಷ್ಯರ ಪರ ನಿಂತಿದ್ದಾರೆ. ಕೃಷಿ ಬೆಳೆಗಳನ್ನು ತಿಂದು ರೈತರಿಗೆ ನಷ್ಟ ಉಂಟು ಮಾಡುತ್ತಿರುವ ಪ್ರಾಣಿಗಳನ್ನು ಕೊಲ್ಲಬಹುದು ಎಂದು ಜಾವಡೇಕರ್ ವಾದಿಸಿದರೆ ಮೇನಕಾ ಅದನ್ನು ಖಂಡಿಸಿದ್ದಾರೆ. ಬಿಹಾರದಲ್ಲಿ ಕಾಡೆತ್ತು (ನೀಲ್‍ಗಾಯಿ), ಹಿಮಾಚಲ ಪ್ರದೇಶದಲ್ಲಿ ಮಂಗ, ಪಶ್ಚಿಮ ಬಂಗಾಲದಲ್ಲಿ ಆನೆ, ಗೋವಾದಲ್ಲಿ ನವಿಲುಗಳನ್ನು ಈ ಕಾರಣಕ್ಕಾಗಿ ಹತ್ಯೆ ನಡೆಸಲು ಜಾವಡೇಕರ್ ಅವರ ಪರಿಸರ ಮಂತ್ರಾಲಯ ಅನುಮತಿ ನೀಡಿದೆ ಎಂಬುದು ಮೇನಕಾರ ದೂರು. ಈ ಕಿತ್ತಾಟ ನಡೆದ ಮರುದಿನವೇ ಕೇಂದ್ರ ಸರಕಾರದ ಸ್ಯಾಂಪಲ್ ರಿಜಿಸ್ಟ್ರೇಶನ್ ಸರ್ವೆ(ಎಸ್.ಆರ್.ಎಸ್.)ಯು ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ, ದೇಶದಲ್ಲಿ 71% ಮಾಂಸಾಹಾರಿಗಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್‍ನಲ್ಲಿ ಪ್ರತಿ ಐವರಲ್ಲಿ ಇಬ್ಬರು (40%) ಮಾಂಸಾಹಾರಿಗಳು. ತೆಲಂಗಾಣ ಮತ್ತು ಪಶ್ಚಿಮ ಬಂಗಾಲದಲ್ಲಿ ಬಹುತೇಕ 99% ಮಂದಿಯೂ ಮಾಂಸಾಹಾರವನ್ನೇ ಸೇವಿಸುತ್ತಿದ್ದಾರೆ. ಒಡಿಶಾದಲ್ಲಿ ಮಾಂಸಾಹಾರಿಗಳ ಸಂಖ್ಯೆ 98%ವಾದರೆ, ಕೇರಳದಲ್ಲಿ 97% ಮಂದಿ ಮಾಂಸಾಹಾರಿಗಳಿದ್ದಾರೆ.
  ನಿಜವಾಗಿ ಪ್ರಾಣಿಹತ್ಯೆ, ಮಾಂಸಾಹಾರ, ಸಸ್ಯಾಹಾರ.. ಮುಂತಾದುವುಗಳ ಬಗ್ಗೆ ಈ ದೇಶದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಚರ್ಚೆಗಳು ನಡೆದಿವೆ. ಈಗಲೂ ನಡೆಯುತ್ತಲಿದೆ. ದಾದ್ರಿಯಲ್ಲಿ ಮುಹಮ್ಮದ್ ಅಖ್ಲಾಕ್ ಎಂಬ ಪ್ರಾಯಸ್ಥರನ್ನು ಹತ್ಯೆ ನಡೆಸಿದ್ದು ಪ್ರಾಣಿ ಹತ್ಯೆಯ ಹೆಸರಲ್ಲಿ. ಆ ಇಡೀ ಕ್ರೌರ್ಯದ ನಾಯಕತ್ವವನ್ನು ಸ್ಥಳೀಯ ಬಿಜೆಪಿ ಮುಖಂಡನ ಪುತ್ರ ವಹಿಸಿಕೊಂಡಿದ್ದ. ಈ ದೇಶದಲ್ಲಿ ಪ್ರಾಣಿ ಸಾಗಾಟ ಮತ್ತು ಹತ್ಯೆಯ ಹೆಸರಲ್ಲಿ ಮನುಷ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಹತ್ಯೆಗಳಲ್ಲಿ ಬಿಜೆಪಿಗೆ ಯಾವಾಗಲೂ ಒಂದು ಪಾತ್ರ ಇದ್ದೇ ಇರುತ್ತದೆ. ಅದರ ಕಾರ್ಯಕರ್ತರು ಪ್ರಾಣಿಗಳ ಹೆಸರಲ್ಲಿ ಮನುಷ್ಯರನ್ನು ಥಳಿಸುತ್ತಾರೆ, ಹತ್ಯೆ ನಡೆಸುತ್ತಾರೆ. ಮಾತ್ರವಲ್ಲ, ಈ ಎಲ್ಲ ಸಂದರ್ಭಗಳಲ್ಲಿ ಬಿಜೆಪಿ ಈ ಹಲ್ಲೆಕೋರರ ವಕ್ತಾರನಂತೆ ಮಾತಾಡುತ್ತಲೂ ಇರುತ್ತದೆ. ಮನುಷ್ಯರನ್ನು ಕೊಂದಾದರೂ ಸರಿ, ಪ್ರಾಣಿಗಳನ್ನು ಉಳಿಸಿಕೊಳ್ಳಬೇಕು ಅನ್ನುವಷ್ಟು ಉಗ್ರ ಪ್ರಾಣಿ ಪ್ರೇಮವನ್ನು ಅದು ವ್ಯಕ್ತಪಡಿಸುತ್ತಲೂ ಇರುತ್ತದೆ. ಸಸ್ಯಾಹಾರದ ಪ್ರಯೋಜನ ಮತ್ತು ಮಾಂಸಾಹಾರದ ಅನಾಹುತಗಳನ್ನು ವಿವರಿಸುವ ಸಂದರ್ಭ ಎದುರಾದಾಗಲೆಲ್ಲ ಬಿಜೆಪಿ ಸಸ್ಯಾಹಾರದ ಪರ ನಿಲ್ಲುತ್ತದೆ. ಮಾಂಸಾಹಾರವು ಭಯೋತ್ಪಾದನೆಗೆ ಪ್ರೇರಕ ಎಂದು ಅದರ ಬೆಂಬಲಿಗರು ಹೇಳಿದ್ದೂ ಇದೆ. ದುರಂತ ಏನೆಂದರೆ, ಸಮಯ, ಸಂದರ್ಭ ಬಂದಾಗಲೆಲ್ಲ ಬಿಜೆಪಿಯ ಈ ನಿಲುವು ಕಸದ ಬುಟ್ಟಿಯನ್ನು ಸೇರಿಕೊಳ್ಳುತ್ತದೆ ಎಂಬುದು. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ಮಾಂಸಾಹಾರ ಅದರಲ್ಲೂ ಗೋಮಾಂಸವನ್ನು ಅತ್ಯಧಿಕವಾಗಿ ಪ್ರಶ್ನಾರ್ಹಗೊಳಿಸಿದ್ದು ಬಿಜೆಪಿಯೇ. ಗೋವುಗಳ ಸಾಧುತನದ ಬಗ್ಗೆ, ಅದರ ಹಾಲು, ಬೆಣ್ಣೆ, ಮೂತ್ರ, ಸೆಗಣಿ ಸಹಿತ ಸರ್ವಾಂತರ್ಯಾಮಿ ಉಪಯೋಗಗಳ ಬಗ್ಗೆ ಅದರ ನಾಯಕರು ಎಷ್ಟೆಷ್ಟು ಭಾಷಣಗಳನ್ನು ಬಿಗಿದರೆಂದರೆ, ಒಂದು ವೇಳೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಬಿಟ್ಟರೆ, ಕಸಾಯಿಖಾನೆಗಳೆಲ್ಲ ಗೋಶಾಲೆಗಳಾಗಿ ಮಾರ್ಪಾಡಾಗುತ್ತವೋ ಎಂದು ನಿರೀಕ್ಷಿಸುವಷ್ಟು. ಅಲ್ಲದೇ ಬಿಜೆಪಿಯ ಜೊತೆ ಗುರುತಿಸಿಕೊಂಡಿರುವ ಆಧ್ಯಾತ್ಮ ಗುರುಗಳಂತೂ ಸಸ್ಯಾಹಾರವೇ ಶ್ರೇಷ್ಠ ಆಹಾರ ಎಂಬ ರೀತಿಯಲ್ಲಿ ಪ್ರವಚನ ನೀಡತೊಡಗಿದರು. ಪ್ರಾಣಿಯ ರಕ್ತ ಹರಿಯುವುದನ್ನು ಅತ್ಯಾಚಾರಕ್ಕೆ, ಅನಾಹುತಕ್ಕೆ, ದೇಶದ ಸಕಲ ಸಮಸ್ಯೆಗಳಿಗೆ ಕಾರಣವಾಗಿಯೂ ಪ್ರಸ್ತಾಪಿಸಿದರು. ಆದರೆ, ಇದೀಗ ಅಧಿಕಾರ ದೊರೆತ ಬಿಜೆಪಿ ಕಾಂಗ್ರೆಸ್‍ನಂತೆಯೇ ವರ್ತಿಸುತ್ತಿದೆ. ಕಸಾಯಿಖಾನೆಗಳನ್ನು ಅದು ರದ್ದುಪಡಿಸುತ್ತಲೂ ಇಲ್ಲ. ವಿದೇಶಕ್ಕೆ ರಫ್ತಾಗುವ ಗೋಮಾಂಸಗಳ ಮೇಲೆ ನಿಷೇಧವನ್ನೂ ಹೇರುತ್ತಿಲ್ಲ. ಕನಿಷ್ಠ ದೇಶದೊಳಗಡೆಯಾದರೂ ಮಾಂಸಾಹಾರ ಅಲಭ್ಯವಾಗುವಂತೆ ಮತ್ತು ಸಸ್ಯಾಹಾರ ವ್ಯಾಪಕವಾಗುವಂತೆಯೂ ನೋಡಿಕೊಳ್ಳುತ್ತಿಲ್ಲ. ಒಂದು ಕಡೆ, ಅದು ಪ್ರಾಣಿಗಳ ರಕ್ತವನ್ನು ಹರಿಸುತ್ತಲೇ ಇನ್ನೊಂದು ಕಡೆ ಅಚ್ಛೇ ದಿನ್‍ನ ಭರವಸೆಯನ್ನೂ ನೀಡುತ್ತಿದೆ. ಈ ಸೈದ್ಧಾಂತಿಕ ಗೊಂದಲಕ್ಕೆ ಏನೆನ್ನಬೇಕು? ಒಂದು ವೇಳೆ, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕವಾದರೂ ಮಾಂಸ ರಫ್ತಿನಲ್ಲಿ ಇಳಿಕೆಯಾಗಿದ್ದರೆ ಅಥವಾ ಮಾಂಸಾಹಾರಿಗಳ ಸಂಖ್ಯೆಯಲ್ಲಿ ಇಳಿಮುಖ ಕಂಡಿದ್ದರೆ ಅದನ್ನಾದರೂ ದೇಶದ ಮುಂದೆ ಇಡಬೇಕಿತ್ತು. ಯಾಕೆ ಇಂಥದ್ದೊಂದು ಪ್ರಶ್ನೆ ಎದುರಾಗುತ್ತದೆಂದರೆ, ಬಿಜೆಪಿ ಅಭಿವೃದ್ಧಿಯನ್ನು ಆಹಾರದ ಜೊತೆಗೆ ಬೆರೆಸಿಯೇ ಈ ವರೆಗೆ ಮಾತಾಡಿದೆ. ಇಂಥ ಪಕ್ಷ ಇವತ್ತು ಮಾಂಸಾಹಾರವನ್ನು ಒಳಗೊಂಡ ಅಭಿವೃದ್ಧಿಯ ಜೊತೆ ಸಾಗುತ್ತದೆಂದರೆ ಅದು ಸೈದ್ಧಾಂತಿಕವಾಗಿ ಅತಿ ದೊಡ್ಡ ಬದಲಾವಣೆ. ಈ ಬದಲಾವಣೆಯನ್ನು ತನ್ನ ಬೆಂಬಲಿಗರಿಗೆ ತಿಳಿಸಲು ಅದೇಕೆ ಮಡಿವಂತಿಕೆ ತೋರಿಸುತ್ತಿದೆ? ಅಥವಾ ಅಧಿಕಾರದಲ್ಲಿರುವಾಗ ಒಂದು ನೀತಿ ಮತ್ತು ಅಧಿಕಾರ ವಂಚಿತಗೊಂಡಾಗ ಇನ್ನೊಂದು ನೀತಿ ಎಂಬ ದ್ವಿಮುಖ ಸಿದ್ಧಾಂತವನ್ನು ಬಿಜೆಪಿ ಅಳವಡಿಸಿಕೊಂಡಿದೆಯೇ? ರಾಮಮಂದಿರವೂ ಈ ನೀತಿಯ ಭಾಗವೇ
  ನಿಜವಾಗಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷವಾದ ಬಳಿಕ ಮೇನಕ ಮತ್ತು ಜಾವಡೇಕರ್ ಎಂಬ ಎರಡು ಮನುಷ್ಯ ಪ್ರಾಣಿಗಳು ಪರಸ್ಪರ ಮುಖಾಮುಖಿಯಾಗಿವೆ. ಈ ಎರಡೂ ಮನುಷ್ಯ ಪ್ರಾಣಿಗಳು ಪ್ರತಿನಿಧಿಸುವ ಪಕ್ಷದ ಸಿದ್ಧಾಂತ ಅನೇಕ ಬಾರಿ ಮನುಷ್ಯ ವಿರೋಧಿಯಾಗಿ ಗುರುತಿಸಿಕೊಂಡಿರುವುದರಿಂದ ಈ ಮುಖಾಮುಖಿ ಅತ್ಯಂತ ಮಹತ್ವಪೂಣರ್ವಾಗಿತ್ತು. ಈ ಮುಖಾಮುಖಿಯಲ್ಲಿ ಮನುಷ್ಯ ಮುಖ್ಯವಾಗುತ್ತಾನೋ ಅಥವಾ ಪ್ರಾಣಿಯೋ ಎಂಬೊಂದು ಕುತೂಹಲವೂ ಇತ್ತು. ಆದರೆ, ಅಂತಿಮವಾಗಿ ಮನುಷ್ಯನನ್ನೇ ಪರಮ ಪ್ರಧಾನ ಎಂದು ಈ ಮುಖಾಮುಖಿ ಸಾಬೀತುಪಡಿಸಿದೆ. ಶರಫತ್ ಖಾನ್ ಎಂಬ ತಜ್ಞರ ನೇತೃತ್ವದಲ್ಲಿ ಬಿಹಾರದಲ್ಲಿ ನೂರಾರು ಕಾಡೆತ್ತುಗಳ (ನೀಲ್‍ಗಾಯಿ) ಹತ್ಯೆ ನಡೆದಿದೆ. ಸಾಮಾನ್ಯವಾಗಿ ಬಿಹಾರದಲ್ಲಿ ಈ ಕಾಡೆತ್ತುಗಳನ್ನು ಗಾಯಿ (ದನ) ಎಂದು ಕರೆಯಲಾಗುತ್ತದೆ. ಗೋವಿನಷ್ಟೇ ಅವು ತಮಗೆ ಪವಿತ್ರ ಎಂದೂ ಅಲ್ಲಿನ ರೈತರು ಹೇಳುತ್ತಾರೆ. ಆದ್ದರಿಂದಲೇ, ಈ ದನಗಳನ್ನು ಹತ್ಯೆ ನಡೆಸದೆಯೇ ಗದ್ದೆಗಳಿಂದ ತಡೆಯುವ ಹಲವು ಉಪಕ್ರಮಗಳನ್ನು ಅವರು ಕೈಗೊಂಡಿದ್ದರು. ಪೂಜೆ-ಪುನಸ್ಕಾರಗಳನ್ನು ನಡೆಸಿದ್ದರು. ಆದರೆ ಈ ದನಗಳು ಜಗ್ಗಲಿಲ್ಲ. ಲಕ್ಷಾಂತರ ರೂಪಾಯಿಗಳ ವರೆಗಿನ ಬೆಳೆಗಳು ನಾಶವಾದುವು. ಕೊನೆಗೆ ಹತ್ಯೆಗೆ ಅನುಮತಿ ನೀಡಬೇಕೆಂದು ಕೋರಿ ಕೇಂದ್ರ ಪರಿಸರ ಇಲಾಖೆಗೆ ಬಿಹಾರ ಸರಕಾರ ಪತ್ರ ಬರೆಯಿತು. ಒಂದು ರೀತಿಯಲ್ಲಿ, ಅಧಿಕಾರವಿಲ್ಲದೇ ಇದ್ದಾಗ ಬಿಜೆಪಿಗೆ ಅತ್ಯಂತ ಪವಿತ್ರವಾಗಿದ್ದ ಗೋವು ಅಧಿಕಾರಕ್ಕೇರಿದ ಬಳಿಕ ಬೆಳೆನಾಶಕ ಮತ್ತು ಹತ್ಯೆಗೆ ಅರ್ಹ ಪ್ರಾಣಿಯಾಗಿ ಮಾರ್ಪಾಟಾಯಿತು!
  ಏನೇ ಆಗಲಿ, ದೇಶದಲ್ಲಿ ಸಸ್ಯಾಹಾರಿಗಳ ಸಂಖ್ಯೆ ಕೇವಲ 29% ಮಾತ್ರ ಇರುವುದು ಮತ್ತು ಪ್ರಾಣಿ ಹತ್ಯೆಯ ವಿಷಯದಲ್ಲಿ ಬಿಜೆಪಿ ತನ್ನ ಘೋಷಿತ ನಿಲುವಿನಿಂದ ಹಿಂದೆ ಸರಿದಿರುವುದು ನರೇಂದ್ರ ಮೋದಿಯವರ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ನಡೆದ ಪ್ರಮುಖ ಸೈದ್ಧಾಂತಿಕ ಬದಲಾವಣೆ ಎನ್ನಬಹುದು. ಇದು ವಾಸ್ತವ ರಾಜಕಾರಣದ ಪ್ರತಿಬಿಂಬ. ಅಗತ್ಯ ಬಂದಾಗ ಪ್ರಾಣಿಯನ್ನು - ಅದು ಗಾಯಿ ಆಗಿದ್ದರೂ - ಕೊಲ್ಲಬಹುದು ಎಂಬುದನ್ನು ಈ ಸರಕಾರ ಜಾವಡೇಕರ್ ಮೂಲಕ ಸಾರಿಬಿಟ್ಟಿದೆ. ಮಾಂಸಾಹಾರವು ಈ ದೇಶದ 71% ಜನರ ಅಗತ್ಯ. ಆದ್ದರಿಂದ, ಅವರ ಅಗತ್ಯವನ್ನು ನಿರಾಕರಿಸುವ ಅಥವಾ ತುಚ್ಛೀಕರಿಸುವ ಧಾಟಿಯಲ್ಲಿ ಮಾತಾಡುವುದು ಮತ್ತು ಹಲ್ಲೆ-ಹತ್ಯೆಗಳಂತಹ ಉಗ್ರ ಪ್ರಾಣಿಪ್ರೇಮವನ್ನು ತೋರುವುದು ಕೂಡ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ, ಆಹಾರದ ಅಗತ್ಯಕ್ಕಾಗಿ ಪ್ರಾಣಿ ಹತ್ಯೆಯನ್ನು ಕೇಂದ್ರ ಸರಕಾರ ಪರೋಕ್ಷವಾಗಿ ಮಾನ್ಯ ಮಾಡಿದಂತಾಗಿದೆ. ರೈತರ ಅಗತ್ಯಕ್ಕಾಗಿ ಗಾಯಿ ಅನ್ನು ಹತ್ಯೆ ನಡೆಸಬಹುದಾದರೆ, ಆಹಾರದ ಅಗತ್ಯಕ್ಕಾಗಿ ನಿರುಪಯುಕ್ತ ಜಾನುವಾರುಗಳ ಹತ್ಯೆ ಅಪರಾಧವಾಗುವುದಾದರೂ ಹೇಗೆ?
  ಬಿಜೆಪಿಗೆ ಮನುಷ್ಯರ ಅಗತ್ಯವನ್ನು ತಿಳಿಸಿಕೊಟ್ಟ ಬಿಹಾರದ ರೈತರು ಮತ್ತು ನೀಲ್‍ಗಾಯಿಗಳಿಗೆ ಅಭಿನಂದನೆಗಳು.



No comments:

Post a Comment