Thursday 21 July 2016

ನಮ್ಮ ಸಂವೇದನೆ ಮತ್ತು ಒಂದು ಮೃತದೇಹ

      ಚೆನ್ನೈನ ನುಂಗಬಾಕ್ಕಂ ರೈಲ್ವೆ ನಿಲ್ದಾಣದಲ್ಲಿ ನೂರಾರು ಮಂದಿಯ ಎದುರೇ  ವಾರಗಳ  ಸ್ವಾತಿ ಎಂಬ ತರುಣಿಯನ್ನು ಕಡಿದು ಹತ್ಯೆ ನಡೆಸಲಾದ ಘಟನೆ ದೇಶದಾದ್ಯಂತ ಚರ್ಚೆಯಲ್ಲಿರುವ ಈ ಸಂದರ್ಭದಲ್ಲೇ,  ನಮ್ಮ ರಾಜ್ಯದ ತಜ್ಞರ ಸಮಿತಿಯೊಂದು ದಂಗುಬಡಿಸುವ ಕೆಲವು ಮಾಹಿತಿಗಳನ್ನು ಬಿಡುಗಡೆಗೊಳಿಸಿದೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ ವಿಧಾನ ಪರಿಷತ್ ಸದಸ್ಯ ಉಗ್ರಪ್ಪರ ನೇತೃತ್ವದಲ್ಲಿ ರಚಿಸಲಾದ ರಾಜ್ಯ ಸಮಿತಿಯನ್ನು ಹೊರಗೆಡಹಿದೆ. ಅಂದಹಾಗೆ,   ನುಂಗಬಾಕ್ಕಂ ಘಟನೆಗೂ ತಜ್ಞರ  ಮಾಹಿತಿಗೂ ನಡುವೆ ಬಾಹ್ಯನೋಟಕ್ಕೆ ಹೋಲಿಕೆ ಅಸಂಬದ್ಧ ಅನಿಸಬಹುದು. ತಜ್ಞರ ಸಮಿತಿಯ ಮಾಹಿತಿಯೊಂದಿಗೆ ಹತ್ಯೆಯೊಂದನ್ನು ಹೋಲಿಸುವುದು ಅಪ್ರಸ್ತುತ ಎಂದೂ ಹೇಳಬಹುದು. ಆದರೆ, ಆಂತರಿಕವಾಗಿ ಇವೆರಡರ ನಡುವೆ ಎಷ್ಟು ಹತ್ತಿರದ ಹೋಲಿಕೆ ಇದೆಯೆಂದರೆ, ನಮ್ಮ ಸಂವೇದನಾರಹಿತ ಮನಸ್ಥಿತಿಗೆ ಇವು ತಾಜಾ ಉದಾಹರಣೆಯಾಗಿ ಎದುರು ನಿಲ್ಲುತ್ತದೆ. ಅಷ್ಟಕ್ಕೂ, ನುಂಗಬಾಕ್ಕಂ ಘಟನೆ ಓರ್ವ ಯುವತಿಯ ಹತ್ಯೆಯ ಕಾರಣಕ್ಕಾಗಿ ದೇಶದ ಗಮನ ಸೆಳೆದದ್ದಲ್ಲ. ಹತ್ಯೆ, ಅತ್ಯಾಚಾರ, ಲೈಂಗಿಕ ಹಲ್ಲೆ .. ಮುಂತಾದುವುಗಳೆಲ್ಲ ‘ಸಾಮಾನ್ಯ’ ಪಟ್ಟಿಗೆ ಸೇರಿರುವ ಈ ದಿನಗಳಲ್ಲಿ ‘ಸ್ವಾತಿ’ಯ ಹತ್ಯೆ ಅಸಾಮಾನ್ಯವಾದುದೇನೂ ಆಗಿರಲಿಲ್ಲ. ರಾಷ್ಟ್ರಮಟ್ಟದಲ್ಲಿ ಚರ್ಚೆಗೊಳಗಾಗಬೇಕಾದ ಪ್ರಭಾವಿ ವ್ಯಕ್ತಿತ್ವವೂ ಆಕೆಯದ್ದಲ್ಲ. ಇನ್ಫೋಸಿಸ್ ಉದ್ಯೋಗಿ ಎಂಬುದನ್ನು ಬಿಟ್ಟರೆ ಉಳಿದಂತೆ ಆಕೆ ಸಾಮಾನ್ಯ ತರುಣಿ. ಹೀಗಿದ್ದೂ, ಈ ಹತ್ಯೆ ಯಾಕೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೊಳಗಾಯಿತೆಂದರೆ, ನುಂಗಬಾಕ್ಕಂ ರೈಲ್ವೆ ನಿಲ್ದಾಣದಲ್ಲಿ ಸೇರಿದ್ದ ನೂರಕ್ಕಿಂತಲೂ ಅಧಿಕ ಮಂದಿಯ ಸಂವೇದನಾ ರಹಿತ ವರ್ತನೆಯಿಂದ. ಎಲ್ಲರ ಎದುರೇ ಮಾತ್ರವಲ್ಲ, ಎಲ್ಲರ ನಡುವೆಯೇ ಹತ್ಯೆಯೊಂದು ನಡೆದಾಗಲೂ ಜನರು ತಡೆಯುವುದು ಬಿಡಿ, ಕನಿಷ್ಠ ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವ ಯತ್ನವನ್ನೂ ಮಾಡುವುದಿಲ್ಲ ಎಂದರೆ ಏನರ್ಥ? ಎರಡು ಗಂಟೆಗಳ ಕಾಲ ಆ ತರುಣಿಯ ಮೃತದೇಹ ನಿಲ್ದಾಣದಲ್ಲಿ ಅನಾಥವಾಗಿ ಬಿದ್ದುಕೊಂಡಿತ್ತು ಅಂದರೆ ಏನೆನ್ನಬೇಕು? ಏಕವ್ಯಕ್ತಿಯಿಂದ ಇಂಥದ್ದೊಂದು ಹತ್ಯೆ ನಡೆಯುವಾಗಲೂ ನೂರಾರು ಮಂದಿಯ ಗುಂಪು ಮೌನವಾಗಿ ವೀಕ್ಷಿಸಿದ್ದು ಏನನ್ನು ಸೂಚಿಸುತ್ತದೆ? ಇದು ಸ್ವರಕ್ಷಣಾ ತಂತ್ರವೇ, ನಮಗೇಕೆ ಉಸಾಬರಿ ಎಂಬ ಉಡಾಫೆಯೇ ಅಥವಾ ಸಂವೇದನೆಯ ಮಟ್ಟ ಕುಸಿಯುತ್ತಿರುವುದರ ಸೂಚನೆಯೇ? ಅಂದಹಾಗೆ, ರಾಜ್ಯ ತಜ್ಞರ ಸಮಿತಿ ಬಿಡುಗಡೆಗೊಳಿಸಿರುವ ವರದಿಯಲ್ಲೂ ಅತ್ಯಂತ ದಟ್ಟವಾಗಿ ಎದುರಾಗುವುದು ಈ ಸಂವೇದನಾ ರಹಿತ ನಿಷ್ಕರುಣ ನೀತಿಯೇ. ಮಹಿಳೆಯರ ಮೇಲೆ ರಾಜ್ಯದಲ್ಲಿ ನಡೆದಿರುವ ಅತ್ಯಾಚಾರ, ಚುಡಾವಣೆ ಸಹಿತ ಲೈಂಗಿಕ ಹಲ್ಲೆ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಎಷ್ಟು ಕನಿಷ್ಠತಮ ಅಂದರೆ ಬರೇ 3%. ಅದೇ ವೇಳೆ ಸರಕಾರದಿಂದ ಪರಿಹಾರ ಪಡೆದ ಸಂತ್ರಸ್ತ ಸಂಖ್ಯೆ ಬರೇ 5% ಎಂಬುದನ್ನು ಇದರ ಜೊತೆಗಿಟ್ಟು ನೋಡಿದರೆ, ಒಟ್ಟಾರೆ ಪರಿಸ್ಥಿತಿ ಎಷ್ಟು ಕರಾಳವಾದುದು ಎಂಬುದು ಸ್ಪಷ್ಟವಾಗುತ್ತದೆ.  ಮಹಿಳೆಯರ ಕುರಿತಂತೆ ಭಾರತೀಯ ಸಂಸ್ಕ್ರತಿಯಲ್ಲಿ ಏನೆಲ್ಲ ಗೌರವಾರ್ಹ ಪದಗಳಿವೆಯೋ ಅವೆಲ್ಲವನ್ನೂ ತಮಾಷೆ ಮಾಡುವ ರೀತಿಯಲ್ಲಿ ದೇಶದಲ್ಲಿ ಘಟನೆಗಳು ಪ್ರತಿನಿತ್ಯ ನಡೆಯುತ್ತಿವೆ. ನಿರ್ಭಯ ಪ್ರಕರಣದ ಬಳಿಕ ‘ಲೈಂಗಿಕ ಹಲ್ಲೆಗಳು ತೀವ್ರ ಚರ್ಚೆಗೆ ಒಳಗಾದುವು. ನಿರ್ಭಯ ನಿಧಿ ಸ್ಥಾಪನೆಯಾಯಿತು. ಕಾನೂನುಗಳಲ್ಲಿ ಮಾರ್ಪಾಡುಗಳನ್ನು ಮಾಡಲಾಯಿತು. ಅತ್ಯಾಚಾರಕ್ಕೆ, ಹತ್ಯೆಗೆ, ಲೈಂಗಿಕ ಚುಡಾವಣೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಯಿತು. ಹಾಗಂತ, ಇವೆಲ್ಲ ಯಾವ ಪ್ರಯೋಜನಕ್ಕೂ ಬಂದಿಲ್ಲ ಎಂದು ಅರ್ಥವಲ್ಲ. ಆದರೆ, ಹೆಣ್ಣಿಗೆ ಈ ಮಣ್ಣನ್ನು ಸುರಕ್ಷಿತಗೊಳಿಸಲು ಇವುಗಳಿಗೆ ಇನ್ನೂ ಸಾಧ್ಯವಾಗಿಲ್ಲ. ನಿರ್ಭಯಳ ಮೇಲಿನ ಕ್ರೌರ್ಯವನ್ನೂ ಮೀರಿಸುವ ಕ್ರೌರ್ಯಕ್ಕೆ ಇತ್ತೀಚೆಗೆ ಕೇರಳದ ಜಿಶಾ ಎಂಬ ಯುವತಿ ತುತ್ತಾದಳು. ಅಷ್ಟಕ್ಕೂ, ಹೆಣ್ಣನ್ನು ಅಂಜತಾ, ಎಲ್ಲೋರಾ, ಮೊಹಂಜದಾರೋ ಶಿಲ್ಪ ಕಲೆಗಳ ಪಡಿಯಚ್ಚುಗಳಾಗಿ ನೋಡುವ ಮತ್ತು ವಿಕೃತವಾಗಿ ಅನುಭವಿಸುವ ವಾತಾವರಣವೇಕೆ ಬಲ ಪಡೆಯುತ್ತಿದೆ? ಪುರುಷರನ್ನು ಅದಕ್ಕೆ ಪ್ರಚೋದಿಸುವ ಅಂಶ ಯಾವುದು? ಮಾದಕ ದ್ರವ್ಯವೇ, ಮದ್ಯವೇ, ಅಶ್ಲೀಲ ವೆಬ್‍ಸೈಟುಗಳೇ? ಅಂದಹಾಗೆ, ಲೈಂಗಿಕ ಹಲ್ಲೆಯಲ್ಲಿ ಭಾಗಿಯಾಗುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂಬೊಂದು ಆಗ್ರಹ ಆಗಾಗ ಮೊಳಗುತ್ತಿರುತ್ತದೆ. ಅದರಂತೆ, ನಿರ್ಭಯ ಘಟನೆಯ ಬಳಿಕ ಕೆಲವೊಂದು ಪ್ರಕರಣಗಳಲ್ಲಿ ಮರಣದಂಡನೆಯನ್ನು ವಿಧಿಸಿದ್ದೂ ನಡೆಯಿತು. ಹಾಗಿದ್ದೂ, ಲೈಂಗಿಕ ಹಲ್ಲೆಗಳಲ್ಲಿ ಭಾರೀ ಬದಲಾವಣೆಯೇನೂ ಕಾಣಿಸುತ್ತಿಲ್ಲ. ರಾಜ್ಯದ ತಜ್ಞರು ಬಿಡುಗಡೆಗೊಳಿಸಿದ ಮಾಹಿತಿಯನ್ನು ನೋಡುವಾಗಲಂತೂ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಎದುರಾಗುತ್ತವೆ. ನಗರಗಳ ಹೊರಗೆ ನಡೆಯುವ ಲೈಂಗಿಕ ಹಲ್ಲೆಗಳಿಗೂ ನಗರಗಳಲ್ಲಿ ನಡೆಯುವ ಹಲ್ಲೆಗಳಿಗೂ ನಡುವೆ ವ್ಯತ್ಯಾಸಗಳಿವೆಯೇ? ಆರ್ಥಿಕ ಸಾಮಾಜಿಕ ಆಯಾಮಗಳನ್ನು ಅವು ಹೊಂದಿದೆಯೇ? ನಿರ್ಭಯ, ಜಿಶಾ, ಸ್ವಾತಿ... ಮುಂತಾದ ಕೆಲವೇ ಕೆಲವು ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವಾಗ, ನಗರಗಳ ಹೊರಭಾಗದಲ್ಲಿ ನಡೆಯುವ ಲೈಂಗಿಕ ಹಲ್ಲೆಗಳು ಸುದ್ದಿಗೂ ಅನರ್ಹವಾಗುವಷ್ಟು ಅಗ್ಗವಾಗುತ್ತಿರುವುದೇಕೆ? ಒಂದು ವೇಳೆ, ನಗರಗಳಲ್ಲಿ ನಡೆಯುವ ಲೈಂಗಿಕ ಹಲ್ಲೆಗಳ ಬಗ್ಗೆ ಮಾಧ್ಯಮಗಳು ಕೊಡುವ ಗಮನವನ್ನು ಇತರ ಕಡೆಗಳ ಹಲ್ಲೆಗಳಿಗೂ ನೀಡಿದರೆ ಶಿಕ್ಷಾ ಪ್ರಮಾಣದಲ್ಲಿ ಕಳವಳಕಾರಿ ಕುಸಿತ ಕಾಣಿಸುತ್ತಿತ್ತೇ? ಇಡೀ ದೇಶದಲ್ಲಿ ಪ್ರತಿ 100 ಲೈಂಗಿಕ ಹಲ್ಲೆ ಪ್ರಕರಣಗಳಲ್ಲಿ ಕೇವಲ 2.8% ಮಂದಿಗೆ ಮಾತ್ರ ಶಿಕ್ಷೆಯಾಗುತ್ತದೆಂಬುದು ಏನನ್ನು ಸೂಚಿಸುತ್ತದೆ?
  ನಿಜವಾಗಿ, ಹೆಣ್ಣಿನ ಮೇಲಿನ ಗೌರವ ನಾಲಗೆಯಿಂದ ವ್ಯಕ್ತವಾಗಬೇಕಾದದ್ದಲ್ಲ. ಅದು ವರ್ತನೆಯಿಂದ ಮತ್ತು ವ್ಯಕ್ತಿತ್ವದಿಂದ ವ್ಯಕ್ತವಾಗಬೇಕು. ಲೈಂಗಿಕ ಸಂತ್ರಸ್ತೆಯೊಂದಿಗೆ ರಾಜಸ್ತಾನದ ಮಹಿಳಾ ಆಯೋಗದ ಅಧ್ಯಕ್ಷೆ ಸೆಲ್ಫಿ ಕ್ಲಿಕ್ಕಿಸಿದುದೇ ಇಂಥ ಸಂತ್ರಸ್ತರ ಬಗ್ಗೆ ಸಾಮಾಜಿಕವಾಗಿ ಇರುವ ಉಡಾಫೆ ಮನೋಭಾವವನ್ನು ಸ್ಪಷ್ಟಪಡಿಸುತ್ತದೆ. ಈ ದೇಶದಲ್ಲಿ ಹೆಣ್ಣು ದೇವದಾಸಿಯಾಗಿ, ಸತಿ ಹೋಗುವವಳಾಗಿ, ವೈಧವ್ಯದ ಶೋಕತಪ್ತ ಜೀವಿಯಾಗಿ.. ಹೀಗೆ ಬೇರೆ ಬೇರೆ ಶೋಷಿತ ಪಾತ್ರವನ್ನು ನಿಭಾಯಿಸುತ್ತಾ ಬಂದಿದ್ದಾಳೆ.
ಸ್ವಾತಿ
ಶೋಷಣೆಯನ್ನೇ ಗೌರವವೆಂದೂ ಶೋಷಕರನ್ನೇ ಹಿತೈಷಿಗಳೆಂದೂ ನಂಬಿ ಬದುಕಿದ್ದಾಳೆ. ಆದ್ದರಿಂದಲೇ, ಅನೇಕ ಬಾರಿ ಆಕೆ ಅವಮಾನವನ್ನೂ ಸಹಿಸಿಕೊಳ್ಳುತ್ತಾಳೆ. ಲೈಂಗಿಕ ಹಿಂಸಾಚಾರವನ್ನೂ ಅಡಗಿಸಿಡುತ್ತಾಳೆ. ಅಲ್ಲದೇ, ಸಮಾಜದ ನಿಲುವೂ ಅನೇಕ ಬಾರಿ ಉಡಾಫೆತನದ್ದಾಗುವುದಕ್ಕೆ ಪರಂಪರಾಗತ ಜೀವನ ಕ್ರಮದ ಪ್ರಭಾವವೂ ಇರುತ್ತದೆ. ಹೆಣ್ಣನ್ನು ದ್ವಿತೀಯ ದರ್ಜೆಯಲ್ಲಿಟ್ಟು ನೋಡುತ್ತಾ ಬಂದ ಪರಂಪರೆಯು ಸಾಮಾನ್ಯವಾಗಿ ಹೆಣ್ಣಿನ ಮೇಲಿನ ಅನ್ಯಾಯವನ್ನು ಗಂಡಿನ ಮೇಲಾದ ಅನ್ಯಾಯದಷ್ಟು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇರುವುದಿಲ್ಲ. ‘ಹೆಣ್ಣು ಅಂದರೆ ಇಷ್ಟೇ...’ ಎಂಬೊಂದು ಪರಂಪರಾಗತ ಭಾವನೆಯು ಆಕೆಗೆ ಸಿಗಬೇಕಾದ ಅಗತ್ಯ ಗೌರವವನ್ನೂ ಅನೇಕ ಬಾರಿ ತಪ್ಪಿಸಿ ಬಿಡುತ್ತದೆ. ಆಕೆಯ ಕುರಿತಾದ ನಿರ್ಲಕ್ಷ್ಯದ ನಿಲುವು ಹಲ್ಲೆಯ ಸಂದರ್ಭದಲ್ಲೂ ಸಂವೇದನಾ ರಹಿತಗೊಳಿಸುವಂತೆ ಮಾಡುವುದಕ್ಕೆ ಸಾಧ್ಯವಿದೆ. ಬಹುಶಃ, ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷಾ ಪ್ರಮಾಣ ಇಷ್ಟು ಕಡಿಮೆ ಆಗಿರುವುದಕ್ಕೆ ಇದೂ ಒಂದು ಕಾರಣ ಇರಬಹುದು. ಕೇಸು ದಾಖಲಿಸದಂತೆ ಅಥವಾ ದಾಖಲಿಸಿದರೂ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಯ ನುಡಿಯದಂತೆ ಸಂತ್ರಸ್ತೆಯ ಮೇಲೆ ಪುರುಷರ ಒತ್ತಡ ಇದರ ಹಿಂದೆ ಕೆಲಸ ಮಾಡಿರಬಹುದು.
        ಏನೇ ಆಗಲಿ, ಸ್ವಾತಿ ಎಂಬ ತರುಣಿ ಹಾಗೂ ರಾಜ್ಯದ ತಜ್ಞರ ಸಮಿತಿಯು ನಮ್ಮ ಸಂವೇದನಾರಹಿತ ಮನಸ್ಥಿತಿಗೆ ಕನ್ನಡಿ ಹಿಡಿದಿದೆ. ಈ ಕನ್ನಡಿಯಲ್ಲಿ ನಾವೆಲ್ಲ ನಮ್ಮ ಮುಖವನ್ನು ಮತ್ತೆ ಮತ್ತೆ ನೋಡಬೇಕು. ನಮ್ಮೊಳಗೆ ಸತ್ತು ಹೋದ ಸಂವೇದನೆಗೆ ಮತ್ತೆ ಜೀವ ತುಂಬಬೇಕು. ಇಲ್ಲದಿದ್ದರೆ, ಹತ್ಯೆ ಬಿಡಿ, ನೂರಾರು ಮಂದಿಯ ಎದುರೇ ಅತ್ಯಾಚಾರವೂ ನಡೆಯಬಹುದು.


No comments:

Post a Comment